ಅಮಿತ ರವಿಕಿರಣ್ ಮತ್ತು ಅನಿತಾ ಹೆಗಡೆ ಅವರ ಕವನಗಳು 

ಪಯಣ

ಚಿತ್ರ -ಮೀರಾ ವಿನಯ್
ಲೇಖಕರು:ಅಮಿತಾ ರವಿಕಿರಣ್

ಅಮಿತಾ ರವಿಕಿರಣ್ ಅವರು ಉತ್ತರ ಐರ್ಲಂಡಿನಲ್ಲಿ ವಾಸವಾಗಿದ್ದಾರೆ. ಇವರ ಆಸಕ್ತಿಗಳು ಒಂದೆರಡಲ್ಲ. ಅದ್ಭುತ ಹಾಡುಗಾರ್ತಿ, ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ನಮ್ಮ `ಅನಿವಾಸಿ` ಹಾಡಿನ ಸಿಡಿಗೆ ಧ್ವನಿಯಾಗಿದ್ದಾರೆ. ಫೋಟೋಗ್ರಾಫಿ ಇವರ ಇನ್ನೊಂದು ಹುಚ್ಚು. ಅದಲ್ಲದೇ ಚಂದದ ಕವನಗಳನ್ನು ಪೋಣಿಸುತ್ತಾರೆ. ಆಗಾಗ ಪ್ರಬಂಧ ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. 

ಕಾಯುವುದಿಲ್ಲ ಸಮಯ
ಕಾಯುತ್ತೇನೆ ನಾನು,

ಬಿಳ್ಕೊಡುವ ಮುನ್ನವೇ
ಮತ್ತೆ ಸಿಗುವ ಕಾತರ , ಆತುರ

ನಾಲ್ಕು ಗಾಲಿಗಳು ಇನ್ನೊಂದೂ ಸುತ್ತು
ತಿರುಗಿಲ್ಲ,
ನಾಲ್ಕು ಯುಗಕ್ಕಿಂತ ದೀರ್ಘ
ಈ ಚಣಗಳು

ನಿನ್ನ ಕಣ್ಣನ್ನು ನೋಡಬೇಕೆಂದೇ ಹಣಕಿದೆ
ಹಿಂದಿನ ಗಾಜಿಗೆಲ್ಲ ಮಂಜು
ನಿನ್ನ ಕಣ್ಣೀರ ಊಗಿಯೇ ಇರಬೇಕು,

ಸರಿ ಹೊರಟು ಬಿಡು,
ಮತ್ತೆ ನಿಲ್ಲಬೇಡ,
ಈಗ ನೀ ಹೋದರೆ ತಾನೇ ಮತ್ತೆ ನಾವು ಸಿಗುವ
ಲೆಕ್ಕ ಶುರುವಾಗುವುದು,

ಮತ್ತೆ ಹಾಗೆ ಸಿಗೋಣ ,
ಅಪರಿಚಿತರಂತೆ,
ಅದ್ಯಾವುದೋ ಗೊತ್ತಿರದ ಓಣಿಯ ತಿರುವಿನಲ್ಲಿ.

ಮತ್ತೆ ನಗೋಣ , ಕೈ ಕೈ ಹಿಡಿದು
ಕಳೆದು ಹೋಗೋಣ,
ಮತ್ತೊಮ್ಮೆ ನೀ ಹೊರಟು ನಿಲ್ಲುವ ಮುನ್ನ,
ಈ ಬಾರಿ ಉಳಿದು ಹೋದ ಮಾತು, ಕಸಿವಿಸಿ ಕನವರಿಗೆ
ಹಳದಿ ಹಾಳೆಯಲ್ಲಿ ಬರೆದು , ಒಣಗಿದ ಗುಲ್ಮೊಹರ್ ಅಂಟಿಸಿ
ಸಂಚಿಯಲ್ಲಿ ತುಂಬಿ ಕೊಡುವೆ,

ಈಗ ಹೊರಟು ಬಿಡು,
ಮತ್ತೆ ಸಿಗುವ.

ಪರಿವರ್ತನೆ

ಲೇಖಕರು:ಅನಿತಾ ಹೆಗಡೆ

ಅನಿತಾ ಹೆಗಡೆ , ಮೂಲತಹ  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರು. ಕಳೆದ ೧೨ ವರ್ಷಗಳಿಂದ ಹ್ಯಾರೊದಲ್ಲಿ ವಾಸವಾಗಿದ್ದಾರೆ. ಅವರಿಗೆ ಚಿಕ್ಕಂದಿನಿಂದಲೂ  ಸಾಹಿತ್ಯವನ್ನು ಓದುವದು ಹಾಗೂ ಸಾಧ್ಯವಾದಾಗ ಚಿಕ್ಕ ಪುಟ್ಟ ಕವನ ಬರೆಯುವ ಹವ್ಯಾಸ ಇದೆ. ಇವರು ಮೊದಲ ಬಾರಿಗೆ  ಅನಿವಾಸಿಯಲ್ಲಿ ಬರೆಯುತ್ತಿದ್ದಾರೆ. ಇವರ ಕವನವನ್ನು ಓದಿ  ಮತ್ತು ಪ್ರೋತ್ಸಾಹಿಸಿ. 

ಬಿಸಿಲು ಕಿಚ್ಚೆದ್ದು ಬೆಂದು ಉಬ್ಬೆ ಬೊಬ್ಬೆ
ಬಯಸಿದರೆಲ್ಲಿ ಉದಕವ, ಸ್ವಯಂ ಮಾಡಿದ ಮರುಭೂಮಿಯಲಿ
ಕುರುಡು ಕಾಂಚಾಣ, ನೋಟು ಎಣೆಸೆಣೆಸಿ ಬಿಸಾಕಿ
ಬಂದಿದ್ದು ಫ್ಯಾಷನ್ ಸೂಟು ಬೂಟು
ಕೋಟು ಗೂಟಕೆ, ಹ್ಯಾಂಗರಿಗೆಲ್ಲಿ ಜಾಗ?!
ನೆನಪಾಗಿದ್ದು ಕಾಟನ್ ಕುರ್ತಾ ಸ್ವಾಮೀ!

ಇಳಿದಿತ್ತು ಬಣ್ಣದ ಲಿಪ್ಸ್ಟಿಕು, ನೆತ್ತಿಯ ಮೇಲೆ ಸೂರ್ಯ
ಚಪ್ಪಲಿಗೆ ಹೈ ಹೀಲ್ಸು, ಎಳೆಯುತ್ತ ಅಳೆಯುತ್ತ ದಾರಿಯ
ನಡುಬೀದಿಯಲ್ಲೆಲ್ಲಿ ಸಿಗಲಿ ಎಸಿ, ಗಿರಿಗಿಟಿ ಪಂಖ?
ಆಶಿಸಿದೆ ನೆರಳ, ಸ್ವಯಂ ಮಾಡಿದ ಮರುಭೂಮಿಯಲಿ
ನೆನಪಾಗಿದ್ದು ಕಾಟನ್ ಸೀರೆ ಸ್ವಾಮೀ!

ಕಾರು ಕಂಪೂಟರ್, ಬಗಲಲ್ಲಿ ಲ್ಯಾಪ್ಟೊಪ್
ಉಟ್ಟಿದ್ದು ಟೆರಿಕಾಟು, ಕೈಯಲ್ಲಿ ವಾಟ್ಸಾಪ್
ಊರು ತುಂಬಾ ಪ್ಲಾಸ್ಟೀಕು, ಸಿಮೆಂಟಿನ ಪ್ಯಾಕು
ತುಂಬಿದ ಟ್ರಾಪಿಕ್, ಆಶಿಸಿದರೆಲ್ಲಿ ಹಸಿರು, ಆಕ್ಸಿಜನ್ ಪ್ಯಾಕು?
ಸಾಕಾಗದೆ ನೆವ ಜನರೇಶನ್ ಗ್ಯಾಪು! ಇದು ಎಂಥಾ ಲೈಪು?
ನೆನಪಾಗಿದ್ದು ಕಾಟನ್ ಸೀರೆ, ಕಾಟನ್ ಕುರ್ತಾ ಸ್ವಾಮೀ!

ಕಿಚ್ಚೆದ್ದು ಕೊಚ್ಚೆದ್ದು ರಚ್ಚೆದ್ದು ಮನತುಂಬಾ ರಣಹದ್ದು
ತುಂಬಿದ್ದು ಜೇಬು, ಮನೆತುಂಬಾ ಮದ್ದು!!
ಬಿತ್ತು ಏಟು ಭೂತಾಯಿಗೆ, ಕೊರತೆಯಿಲ್ಲ ಮಾತ್ರ ಕೊಡಲಿಗೆ
ಎಲೇ ಮನುಜಾ, ಸಾಕೀ ಘರ್ಷಣೆ ಸಂಘರ್ಷಣೆ
ಆಗಲಿ ಆತ್ಮ ಪರಿವರ್ತನೆ, ಭೂತಾಯಿಗೆ ಸಮರ್ಪಣೆ
ಕಾಯುವದೇತಕೆ? ಅನಿವಾರ್ಯ ಜೀವನ ಶೈಲಿಯ ಬದಲಾವಣೆ

12 thoughts on “ಅಮಿತ ರವಿಕಿರಣ್ ಮತ್ತು ಅನಿತಾ ಹೆಗಡೆ ಅವರ ಕವನಗಳು 

  1. ಈಗ ಹೊರಟು ಬಿಡು.. ಮತ್ತೆ ಸಿಗುವ… ಅಮಿತಾ ಅವರ ಕವನ ಮತ್ತು ಜೀವನ ಶೈಲಿಯ ಬದಲಾವಣೆ ಅನಿವಾರ್ಯ ಎಂದು ಹೇಳುವ ಅನಿತಾ ಅವರ ಕವನ ಮನ ಮುಟ್ಟುತ್ತವೆ

    Like

  2. ಅಮಿತಾ ಅವರೇ ತುಂಬ ಸುಂದರ ಕವನ.ಇನ್ನೂ ಅಗಲುವ ಮುನ್ನವೇ ಮುಂದಿನ ಭೇಟಿಯ ತಯಾರಿ ಮನಸ್ಸು ತನ್ನನ್ನೇ ತಾನು ಸಂತೈಸುವ ಸುಂದರ ರೀತಿಯೋ ಏನೋ! ಮೊದಲ ಭೇಟಿಯ ನೆನಪ ನೆರಳಲ್ಲಿ ಕಳೆದು ಹೋಗುವ ಮಿಡಿತ ಪ್ರತಿ ಹೃದಯಕ್ಕೂ.ಹಿಂದಿನ ಗಾಜು ಮಂಜಾಯ್ತೋ ಕಣ್ಣೋಟವೇ ಮಬ್ಬಾಯ್ತೋ ನೆನಪಿನೆಳೆಯೊಂದು ಎವೆಯಂಚಿನಲಿ ಸಿಲುಕಿ!
    ಎದೆ ತುಂಬಿ ತುಳುಕುವ ಭಾವನೆಗಳ ಮೃದು ಗೊಂಚಲು ಅಮಿತಾ.ಅಭಿನಂದನೆಗಳು!
    ಅನಿತಾ ಅವರೇ,
    ಬದಲಾವಣೆಯ ನಡುವೆಯೂ ತನ್ನತನವನ್ನು ಉಳಿಸಿಕೊಳ್ಳುವ ,ಅರಸುವ ತಹ ತಹ ಅಪರೂಪದ್ದು.ಕಾಟನ್ನ ಕುರ್ತಾ, ಕಾಟನ್ನ ಸೀರೆ ಮೆತ್ತಗೆ ಮುತ್ತಿ ಮುದ ಕೊಡುವಂತೆ ಮುದ ನೀಡುವ , ಹಸಿರಿನ ವನಸಿರಿಯ ಕಾಳಜಿ ತುಂಬಿದ ಚೆಂದದ ಕವನ.ಅಭಿನಂದನೆಗಳು ಅನಿತಾ.
    ಎರಡು ಚೆಲುವಾದ ಕವನ ನೀಡಿದ್ದಕ್ಕೆ ಅನಿವಾಸಿಗೆ ಧನ್ಯವಾದಗಳು.

    Like

  3. ಅನಿತಾ ಅವರೆ , ನಿಮ್ಮ ಬರವಣಿಗೆಯ ಶೈಲಿ -ಸಹ್ಯಾದ್ರಿ ಪರ್ವತಗಳ ಮೇಲೆ ನಿಂತು, ಇಂದಿನ ಅಂಧ ಮನುಕುಲಕೆ, ಸಂತ – ತಂದ -ಸಂದೇಶ, ಡಂಗುರದಂತಹ ಶಕ್ತಿಯಿಂದ ಮೊಳಗುತ್ತಿದೆಯೋ ಎಂಬಂತೆ ಭಾಸವಾಯಿತು; ನಾಟಕೀಯತೆಯ ಶೈಲಿಯಲ್ಲಿ ಚುಚ್ಚಿ – ಚುಚ್ಚಿ,ಬಿಚ್ಚಿ -ಬಿಚ್ಚಿ, ಉರುಳುರುಳಿ ಬರುವ ನಿಮ್ನ ಕವನದುದ್ದದ ಸಾಲುಗಳು, ಮಲಗಿರುವ ಮನಸ್ಸನ್ನು ನೀವು ಆಶಿಸಿದಂತೆ,ಎಚ್ಚರಿಸಲು ಸೂಕ್ತ -ಶಕ್ತವಾಗಿ ಕಂಡುಬಂದವು.🙏

    Like

  4. ಅಮಿತ ಅವರೆ , ನೋವೊಂದನ್ನು ನಲುವಾಗಿ ಬಣ್ಣಿಸದ ನಿಮ್ಮ ಈ ಕವನ, ಬದಲಾಗಿ ನಲುವಿನಂತರಗದ ಭಾವವನ್ನು ಧ್ವನಿಸುತ್ತ ಮುಂದುವರಿಯುವ ನಿಮ್ಮ ಜಾಗರೂಕತೆಯ ಪ್ರಯತ್ನ -ಕೊನೆಯ ಶಬ್ಧದ ತನಕವೂ , ಪೂರ್ಣವಿರಾಮದಲ್ಲಯೂ ಹೃದಯ ಸ್ಪಂದಿಸಿ ಬಂತು ನನಗೆ . ವಿದಾಯದ ನೋವು,ಕಾಣುತ್ತಿರುವ ಕನಸಾಗಿ, ಕವನದ ಬದುಕಾಗಿ, ಗಟ್ಟಿಯಾಗಿ ಮೂಡಿಬಂದಿದೆ – ಹೃದಯಸ್ಪರ್ಶಿ. 🙏

    Like

  5. ತುಂಬಾ ಸುಂದರವಾಗಿ ಬರೆದಿದ್ದೀರಿ ಅಮಿತಾ ಅವರೇ 😊 ಕವಿತೆಯಲ್ಲಿ ವಿರಹದ‌ ಸಂಭ್ರಮ ಪ್ರೀತಿಗೆ ಹೊಸತತೆ ಮತ್ತು ಯವ್ವನವನ್ನು ತಂದಿದೆ..

    Like

  6. ಅಮಿತ ನಿಮ್ಮ ಕವನ ಓದಿದ ಕೂಡಲೇ ನನಗೆ ಖ್ಯಾತ ಕವಿ ಖಲೀಲ್ ಗಿಬ್ರಾನ್ ಬರೆದ ಕವನದ ಸಾಲುಗಳು ನೆನಪಿಗೆ ಬಂದಿತು
    “Let there be space in your togetherness
    And let the winds of heaven dance between you”
    ಮಿಲನದ ಸವಿಯನ್ನು ಅನುಭವಿಸಲು ಒಂದಿಷ್ಟು ಅಗಲಿಕೆ ಅಗತ್ಯ
    ಬೆಳಕಿನ ಬೆಲೆಯನ್ನರಿಯಲು ಕತ್ತಲೆ ಅಗತ್ಯ

    ಅನಿತಾ
    ಪರಿಸರದ ಬಗ್ಗೆ ನಿಮಗಿರುವ ಕಾಳಜಿ ನಿಮ್ಮ ಕವನದಲ್ಲಿ ಎದ್ದು ತೋರಿದೆ. ಹಸಿರು ನೆಲ ಮರುಭೂಮಿಯಾಗುವುದನ್ನು ತಡೆಯುವುದಕ್ಕೆ ಆತ್ಮ ಪರಿವರ್ತನೆ ಮತ್ತು ಜೀವನ ಶೈಲಿ ಬದಲಾಗಬೇಕೆಂಬ ಸಂದೇಶ ಚನ್ನಾಗಿ ಮೂಡಿಬಂದಿದೆ. ಪರಿಸರಕ್ಕೆ ಪೂರಕವಾದ ಕಾಟನ್ ಬಟ್ಟೆಗಳ ಅಗತ್ಯವನ್ನು ಸೂಚಿಸಿದ್ದೀರಿ. ಪರಿಸರವಾದಿಗಳಿಗೆ ಪ್ರಿಯವಾಗುವ ಕವನ

    Like

    • ಅವರಿಗಷ್ಟೇ ಅಲ್ಲ, ಬಿಸಿಲಿನ ಕಾಟ ಏರುತ್ತಿರುವ ಈಗ ನಾನಿರುವ ಭಾರತದಲ್ಲಿ, ನನ್ನಂಥವರಿಗೂ ಪ್ರಿಯವಾಗುವ ಕಾಟನ ಬಗ್ಗೆ ಅನಿತಾ ಅವರ ಕವನ! ಚೆನ್ನಾಗಿದೆ, ಅನಿತಾ ಮತ್ತು ನೆಮ್ಮ ಕಮೆಂಟು!

      Like

  7. ಪ್ರೀತಿಯ ಅರ್ಧಭಾಗ ಸುಖ ವಿರಹದಲ್ಲಿಯೇ ಇದೆ ಎನ್ನುವಂತ ಚೆಲುವ ಕವನ.ಎಲ್ಲವೂ ಜೀವನದಲ್ಲಿ ಹಾಗೆಯೇ ಇರಬಹುದು. ತಯಾರಿಯಲ್ಲಿಯೇ ಪಾರ್ಟಿಯ ಅರ್ಧ ಸುಖ!- ಸೊಗಸಾದ ಕವನ.
    ಅನಿತ ನಿಮ್ಮ ಕವನ ಇಡೀ ಜೀವನವನ್ನು ಸರಳೀಕರಿಸಿಬಿಡುತ್ತದೆ. ಓದಿ ಖುಷಿಯಾಯಿತು.
    ಹತ್ತಿಯ ಬಟ್ಟೆಯ ಸುಖ , ಸರಳತೆಯ ನೆಮ್ಮದಿ ನಮ್ಮೆಲ್ಲರ ಮರೆವಿನಲ್ಲಿ ಕಾಣೆಯಾಗದಿರಲಿ ಎಂಬ ಆಶಯ ಮೆಚ್ಚುವಂತದ್ದು.

    Like

  8. “ಈಗ ನೀ ಹೋದರೆ ತಾನೇ ಮತ್ತೆ ನಾವು ಸಿಗುವ
    ಲೆಕ್ಕ ಶುರುವಾಗುವುದು,”
    “ ಬಿಳ್ಕೊಡುವ ಮುನ್ನವೇ
    ಮತ್ತೆ ಸಿಗುವ ಕಾತರ ,” ಹೀಗೆ ಒಂದರಮೇಲೊಂದು ಸುಂದರ ಸಾಲುಗಳು, ಅನುಭವದ ಮಾತುಗಳು, ನಿತ್ಯಸತ್ಯ ತಂಬಿದ ಕವಿತೆ, ಮನತಟ್ಟಿತು!

    Like

  9. ‘ನೆನಪಾಗಿದ್ದು ಕಾಟನ್ ಸೀರೆ, ಕಾಟನ್ ಕುರ್ತಾ ಸ್ವಾಮೀ!’

    ಈ ಕೊನೆಯ ಸಾಲುಗಳು ಕವನವನ್ನು ಆಪ್ತಗೊಳಿಸಿವೆ

    – ಕೇಶವ

    Like

  10. ‘ನಿನ್ನ ಕಣ್ಣನ್ನು ನೋಡಬೇಕೆಂದೇ ಹಣಕಿದೆ
    ಹಿಂದಿನ ಗಾಜಿಗೆಲ್ಲ ಮಂಜು’

    ಅದ್ಭುತ ಪ್ರತಿಮೆ!

    – ಕೇಶವ

    Like

Leave a comment

This site uses Akismet to reduce spam. Learn how your comment data is processed.