ಪ್ರಿಯ ಅನಿವಾಸಿ ಓದುಗರೇ, ಜನವರಿ ೧೮ ರಂದು YSKB ತಂಡದವರು ಸಂಕ್ರಾಂತಿ ಸಂಜೆ ಮತ್ತು ‘ಅನಿವಾಸಿ’ ಯ ಐದನೇ ವಾರ್ಷಿಕೋತ್ಸವವನ್ನು ವಿದ್ಯುಕ್ತವಾಗಿ ಆಚರಿಸಿ ಸಂಭ್ರಮಿಸಿದರು. YSKB ತಂಡದವರು ಸಂಕ್ರಾಂತಿ ಸಂಜೆಯಲ್ಲಿ ಎಳ್ಳು ಬೆಲ್ಲದ ಜೊತೆಗೆ , ಮೈ ಚಳಿ ಬಿಡಿಸಲು ಬಿಸಿ ಬಿಸಿ ಬಜ್ಜಿ, ಟೀ/ಕಾಫಿ ಹಾಗೂ ರಾತ್ರಿಯೂಟಕ್ಕೆ ಪೊಂಗಲ್ ಬಡಿಸಿದ್ದರಂತೆ. ‘ಅರೆ! ಅದೆಲ್ಲಾ ಇರಲಿ YSKB ಅಂದರೆ ಏನು ಹೇಳು ಮಾರಾಯ’ ಅಂತ ಮನಸ್ಸೊಳಗೆ ಗೊಣಗುತ್ತಿದ್ದೀರಾ?. ಬನ್ನಿ YSKB ಎಂದರೆ ಏನು ಎಂದು ಅದರ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಡಾ||ಶ್ರೀವತ್ಸ ದೇಸಾಯಿ ಅವರ ಬಾಯಿಯಲ್ಲೇ ಕೇಳೋಣ.
ಗೊತ್ತಾಯಿತಲ್ಲವಾ , YSKB ಎಂದರೆ ವಯಸ್ಸಾದವರ ಕನ್ನಡ ಬಳಗ ಅಲ್ಲ ಇದು ಯುವಕರ ಕನ್ನಡ ಬಳಗ !! . ಈ ವಾರ ನಾವು ಅನಿವಾಸಿಯಲ್ಲಿ ಡಾ . ಜಿ. ಎಸ್. ಶಿವಪ್ರಸಾದ್ ರವರು “ಸಂಕ್ರಾಂತಿ ಸಂಜೆ” ಯ ಬಗ್ಗೆ ಬರೆದ ಒಂದು ಸಂಪೂರ್ಣ ವರದಿಯನ್ನು ಪ್ರಕಟಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ಈ ಸಂಕ್ರಾಂತಿ ಸಂಜೆಯಲ್ಲಿ ಅನಿವಾಸಿಯ ಕವಿಗಳಾದ ಕೇಶವ್ ಕುಲ್ಕರ್ಣಿ ರವರು, ಗೌರಿ ಪ್ರಸನ್ನ ರವರು ಮತ್ತು ಶಿವಪ್ರಸಾದ್ ರವರು “ಕವಿ ನೋಡಿ ಕವಿತೆ ಕೇಳಿ” ಕಾರ್ಯಕ್ರಮದಲ್ಲಿ ವಾಚಿಸಿದ ಹಾಸ್ಯ ಕವಿತೆ ಗಳನ್ನೂ ಕೂಡಾ ಪ್ರಕಟಿಸಿದ್ದೇವೆ. ಓದಿ, ನೋಡಿ, ಕೇಳಿ ಜೊತೆಗೆ ನಿಮ್ಮ ಕಾಮೆಂಟುಗಳಿಂದ ಪ್ರೋತ್ಸಾಹಿಸಿ.
-ಶ್ರೀನಿವಾಸ ಮಹೇಂದ್ರಕರ್
ಎಳ್ಳು ಬೆಲ್ಲಗಳ ನಡುವೆ ಹೀಗೊಂದು ಸಂಕ್ರಾಂತಿ ಸಂಜೆ
ಬರೆದವರು: ಡಾ . ಜಿ. ಎಸ್. ಶಿವಪ್ರಸಾದ್

ಯಾರ್ಕ್ ಶೈರ್ ಕನ್ನಡ ಬಳಗ (YSKB) ಯು.ಕೆ ಕನ್ನಡ ಬಳಗದ ಒಂದು ಸ್ಥಳೀಯ ಶಾಖೆ. ಇದು ರೂಪುಗೊಂಡು ಐದು ವರ್ಷಗಳು ತುಂಬಿವೆ. ಕಳೆದ ಐದು ವರುಷಗಳಲ್ಲಿ ನಮ್ಮ ಈ ಶಾಖೆ ತಾನು ಬೆಳೆಯುವುದಲ್ಲದೆ ತನ್ನ ಮೂಲ ಸಂಸ್ಥಾಪನೆಯಾದ ಯು.ಕೆ ಕನ್ನಡ ಬಳಗಕ್ಕೆ ಶೋಭೆ, ಗರಿಮೆ ಮತ್ತು ಗೌರವಗಳನ್ನು ತಂದು ಕೊಟ್ಟಿದೆ.
ಹಾಗೆ ಯಾರ್ಕ್ ಶೈರ್ ಸದಸ್ಯರು ಯು ಕೆ ಕನ್ನಡ ಬಳಗದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಯು ಕೆ ಕನ್ನಡ ಬಳಗದ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ನೃತ್ಯ ಸಂಗೀತ ಕಾರ್ಯಕ್ರಮಗಳನ್ನು ಯುಗಾದಿ ದೀಪಾವಳಿಯಲ್ಲಿ ಒದಗಿಸಿದ್ದಾರೆ. ಚೆಸ್ಟರ್ ಫೀಲ್ಡ್, ಮತ್ತು ಡೋಂಕಾಸ್ಟರ್ ಗಳಲ್ಲಿ ಸ್ಮರಣೀಯವಾದ ಯುಗಾದಿ ದೀಪಾವಳಿಗಳನ್ನು ನಡೆಸಿಕೊಟ್ಟಿದ್ದಾರೆ. ನಾನು ಇದರ ಅಧ್ಯಕ್ಷನಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟ ನಮ್ಮ ಸದಸ್ಯರಿಗೆ ನನ್ನ ಕೃತಜ್ಞತೆಗಳು.
ನಾವು ಪ್ರತಿ ವರುಷ ಸಂಕ್ರಾತಿ ಹಬ್ಬವನ್ನು ಆಚರಿಸುತ್ತ ಬಂದಿದ್ದೇವೆ. ಈ ವರುಷ ಐದನೇ ವಾರ್ಷಿಕ ಉತ್ಸವ ಶೆಫೀಲ್ಡ್ ಬಳಿ ಬಹಳ ಯಶಸ್ವಿಯಾಗಿ ಜರುಗಿತು. ವೈ. ಎಸ್. ಕೆ. ಬಿ. ಹುಟ್ಟಿದ ಸಮಯದಲ್ಲೇ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರವೇದಿಕೆ (ಅನಿವಾಸಿ) ತನ್ನ ಐದನೇ ಮೈಲಿಗಲನ್ನು ದಾಟಿದ್ದು ಮತ್ತು ಈ ‘ಸಂಕ್ರಾಂತಿ ಸಂಜೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾದ ಸಂಗತಿ.
ಯಾವುದೇ ಸಂಘ ಸಂಸ್ಥೆ ಯಶಸ್ಸನ್ನು ಕಾಣಬೇಕಾದರೆ ಅಲ್ಲಿಯ ಸದಸ್ಯರ ಒಮ್ಮತ, ಒಗ್ಗಟ್ಟು, ಸಹಕಾರ ಮತ್ತು ಬೆಂಬಲಗಳು ಅಗತ್ಯ. ಈ ಕಾರ್ಯಕ್ರಮಕ್ಕೆ ನಮ್ಮ ಹಿರಿಯ ಕಿರಿಯ ಸದಸ್ಯರು ಪ್ರೀತಿ ವಿಶ್ವಾಸಗಳಿಂದ ತಮ್ಮ ಪರಿಶ್ರಮ ಮತ್ತು ಸಮಯವನ್ನು ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇಲ್ಲಿ ಕೌಟುಂಬಿಕ ಅನ್ಯೋನತೆ ಮತ್ತು ಸಾಮರಸ್ಯದ ಭಾವನೆಗಳಿವೆ.
ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಆಗಮಿಸಿದ ಅತಿಥಿಗಳು ಕೂಡ ಕಾರಣರಾಗಿರುತ್ತಾರೆ. ನಮ್ಮ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ರೇಡಿಯೋ ಗಿರ್ಮಿಟ್ ಖ್ಯಾತಿಯ ಗೌರಿ ಪ್ರಸನ್ನ ಅವರು ಆಗಮಿಸಿದ್ದು ಎಲ್ಲರು ಅವರ ಸಂಕ್ರಾಂತಿಯ “ಹರಟೆ” ಯನ್ನು ಮೆಚ್ಚಿಕೊಂಡರು. ಸಂಕ್ರಾಂತಿಯ ವಿವಿಧ ಸಾಂಸ್ಕೃತಿಕ ರೂಪಗಳನ್ನು ಹಿನ್ನೆಲೆಗಳನ್ನು ಪರಿಚಯಿಸಿದರು. ಅವರ ಹಾಸ್ಯ ಪ್ರಜ್ಞೆ ಹರಟೆಗೆ ಮೆರುಗನ್ನು ತಂದಿತ್ತು. ಗೌರಿ ಪ್ರಸನ್ನ ರವರು ಈ ಹರಟೆಯನ್ನು, ವಿಡಿಯೋ ಗಿರ್ಮಿಟ್ ನಲ್ಲಿ ಮತ್ತೊಮ್ಮೆ ಮರು ನಿರ್ಮಿಸಿ ಪ್ರಸ್ತುತ ಪಡಿಸಿದ್ದಾರೆ.

ಗೌರಿ ಅವರು ನಿರ್ದೇಶಿಸಿದ ‘ಗಿಳಿವಿಂಡು’ ತಂಡದವರು ಗಿರೀಶ್ ಕಾರ್ನಾಡ್ ಅವರ ತಲೆದಂಡ ನಾಟಕದ ಕೆಲವು ಸನ್ನಿವೇಶಗಳನ್ನು ಪ್ರಸ್ತುತ ಪಡಿಸಿದರು. ಬಸವಣ್ಣ ಮತ್ತು ಬಿಜ್ಜಳರ ನಡುವಿನ ಧಾರ್ಮಿಕ, ಸಾಮಾಜಿಕ ಬಿಕ್ಕಟ್ಟುಗಳು ಪರಿಣಾಮಕಾರಿಯಾಗಿ ರಂಗದ ಮೇಲೆ ಮೂಡಿಬಂದಿತು. ಪ್ರಸನ್ನ ಮತ್ತು ಪ್ರಮೋದ್ ಅವರು ವಿವಿಡ್ ಲಿಪಿಯ ಕೆಲವು ಉತ್ತಮ ಪುಸ್ತಕಗಳನ್ನು ಪುಸ್ತಕ ಪ್ರದರ್ಶನದೊಂದಿಗೆ ಪರಿಚಯಿಸಿದರು

ಅಂದು ಸಂಜೆ ಸಂಗೀತವನ್ನು ಒದಗಿಸಿದ ವಿಜಯೇಂದ್ರ ಮತ್ತು ಅವರ ಪತ್ನಿ ಶ್ರೀದೇವಿ ಅವರು ಮೊದಲಿಗೆ ಸುಮಧುರ ಸಿನಿಮಾ ಹಾಡುಗಳನ್ನು ಹಾಡಿ ಎಲ್ಲರ ಮನತಣಿಸಿ ನಂತರ ಫಾಸ್ಟ್ ನಂಬರ್ ಗಳನ್ನು ಹಾಡಿದಾಗ ಜನ ಹುಚ್ಚೆದ್ದು ಕುಣಿದರು.
ವೈ. ಎಸ್. ಕೆ. ಬಿ. ಯ ಕಿರಿಯ, ಹಿರಿಯ ಸದಸ್ಯರು ಮತ್ತು ಚಿಣ್ಣರು ತಮ್ಮ ವಯಸ್ಸು ಹಾಗೂ ಶಕ್ತಿಗೆ ಅನುಗುಣವಾಗಿ ಉತ್ಕೃಷ್ಟವಾದ ಮನೋರಂಜನಾ ಕಾರ್ಯಕ್ರಮಗಳನ್ನು ಒದಗಿಸಿದರು. ಕಾರ್ಯಕ್ರಮಗಳ ಜವಾಬ್ದಾರಿಯನ್ನು ಹೊತ್ತ ಶ್ರೀಮತಿ ವ್ರತ ಚಿಗಟೇರಿ ಮತ್ತು ಡಾ ಸುಮನಾ ನಾರಾಯಣ್ ಅವರ ಸಾಧನೆಗಳನ್ನು ಸ್ಮರಿಸಲಾಯಿತು

ಅನಿವಾಸಿ ನಡೆದು ಬಂದ ದಾರಿಯನ್ನು ಕೇಶವ್ ಮತ್ತು ರಾಮ್ ಶರಣ್ ಒಂದು ಸುಂದರ ಸ್ವಾರಸ್ಯಕರ ಸಂಭಾಷಣೆಯಲ್ಲಿ ಸಭಿಕರಿಗೆ ಸಂಕ್ಷಿಪ್ತವಾದ ಪರಿಚಯ ಮಾಡಿಕೊಟ್ಟರು. ಅನಿವಾಸಿ ಕಾರ್ಯಕ್ರಮದ ಅಂಗವಾಗಿ “ಕವಿ ನೋಡಿ ಕವಿತೆ ಕೇಳಿ” ಎಂಬ ಕಾರ್ಯಕ್ರಮದಲ್ಲಿ ಕೇಶವ್, ರಾಮಶರಣ್, ಗೌರಿ ಮತ್ತು ನಾನು ನಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದೆವು. ವೈದ್ಯನಾಗಿ ನಾನು NHS ಆಸ್ಪತ್ರೆಗಳ ಕುರಿತಾಗಿ ಬರೆದ ಪದ್ಯವನ್ನು ಹಿಂದೆಯೇ ಗಮನಿಸಿದ ಗೌರಿ ಅವರು ಆಸ್ಪತ್ರೆಗೆ ಬರುವ ರೋಗಿ ಮತ್ತು ಅವರ ಕುಟುಂಬದವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಬಗ್ಗೆ ತಾವು ಬರೆದ ಕವನವನ್ನು ಮಂಡಿಸಿದರು. ನಾವು ಅಂದು ಓದಿದ ಕವಿತೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ಕವನಗಳಿಗೆ ಹಾಸ್ಯ ಮತ್ತು ಲಘು ಹಿನ್ನೆಲೆಗಳಿದ್ದು ಒಮ್ಮೆ ನಕ್ಕು ಮರೆತು ಬಿಡುವ ಪದ್ಯಗಳು ಎಂದು ಭಾವಿಸಬಹುದು.
ಒಟ್ಟಾರೆ ಸಂಕ್ರಾತಿ ಕಾರ್ಯಕ್ರಮ ನಮ್ಮೆಲ್ಲರ ನೆನಪಿನಲ್ಲಿ ಉಳಿಯುವ ಒಂದು ಅಪೂರ್ವ ಸಂಜೆ!
ಕವಿ ನೋಡಿ ಕವಿತೆ ಕೇಳಿ

ನಮ್ಮ ನೆಚ್ಚಿನ NHS

ನಮ್ಮ ನೆಚ್ಚಿನ ಏನ್ ಹೆಚ್ಚ್ ಎಸ್ಸು
ರಾಷ್ಟ್ರದ ಹೆಮ್ಮೆಯ ಸಂಪತ್ತು
ಏನೇ ಇರಲಿ ನಿಮ್ಮ ಅಂತಸ್ತು
ಎಲ್ಲರಿಗು ನಿಲುಕುವ ಸವಲತ್ತು
ವೈದ್ಯರ ಮೇಲೆ ನಿಗಾ ಇಡುವ
ಮ್ಯಾನೇಜರುಗಳದೇ ದೌಲತ್ತು
ಕಾಣಬಹುದಿಲ್ಲಿ ಶ್ರದ್ಧೆ ಶಿಸ್ತು
ಹಣದ ಅಭಾವದಿಂದ ಆಗಾಗ್ಗೆ ಆಪತ್ತು
ಹೀಗಿದ್ದರೂ ನಿರೀಕ್ಷಿಸುತ್ತಾರೆ
ವೈದ್ಯರಿಂದ ನೀಯತ್ತು
ಹಗಲೂ ರಾತ್ರಿ ದುಡಿಯುವ ವೈದ್ಯರಿಗೆ
ಪಾಪ ಇಲ್ಲ ಪುರುಸೊತ್ತು
ತರಾವರಿ ಆಸ್ಪತ್ರೆಗಳಲಿ ಬೆಳಕು ಥಳಕು
ಕೈ ತೊಳೆಯಲು ಮರೆಯದಿರಿ
ವಾರ್ಡ ಗಳಲಿ ತುಂಬಿ ತುಳುಕಿದೆ
ಕ್ರಿಮಿಗಳ ಭಯಂಕರ ಕೊಳಕು
ನರ್ಸಮ್ಮಗಳ “Are you alright”
ಎಂಬ ಪ್ರೀತಿ ಮಾತುಗಳ ಆರೈಕೆ
“Save the NHS”
ಎಂಬುದು ಎಲ್ಲರ ಹಾರೈಕೆ
ಕ್ಯೂ ನಲ್ಲಿ ನಿಂತ ಬಡಜನರು
ಕಾದು ಕೊರಗಿದ್ದಾರೆ ಬೇಸತ್ತು
ಶ್ರೀಮಂತರಿಗೆ ಇವೆ ಪ್ರೈವೇಟ್
ಕ್ಲಿನಿಕ್ ಗಳು ಹತ್ತಿಪತ್ತು
ರೋಗಿ ವೈದ್ಯರುಗಳಿಗಿಲ್ಲ ಭಾವನೆಗಳ ನಂಟು
ಕಾಸು ಕೊಡದ ರೋಗಿಗಳ ಕಂಪ್ಲೇಂಟು, ನೂರೆಂಟು
ಕಾಂಪೆನ್ ಸೇಷನ್ ಕೊಡಲು ಇಂಶೂರೆನ್ಸ್ ಕಂಪನಿಗಳುಂಟು
ಬಿಚ್ಚ ಬೇಕಿಲ್ಲ ನಮ್ಮಪ್ಪನ ಮನೆಯ ಗಂಟು!
ಫೇಸ್ಬುಕ್ ಗೀತೆ

ಜೈ ಇಂಟರ್ ನೆಟ್ಟಿನ ತನುಜಾತೆ
ಜಯ ಹೇ ಫೇಸ್-ಬುಕ್ಕಿನ ಖಾತೆ
ಜಯ ನೂರಾರ್ ಸುಳ್ ಫ್ರೆಂಡ್ಸ್ ಗಳ ನಾಡೆ
ಜಯ ಹೇ ಸ್ಟೇಟಸ್-ಗಳ ಬೀಡೆ
ಸೋಷ್ಯಲ್ ನೆಟ್-ವರ್ಕಿನ ಮಾರಾಣಿಯೇ
ಹೊನ್ನಿನ ಶೂಲ ಕಮೆಂಟಿನ ಖಣಿಯೇ
ಗೂಗಲು ಯಾಹೂsಗಳು ಅವತರಿಸಿದ
ಅಂತರ ಜಾಲದ ತನುಜಾತೆ
ಜಯ ಹೇ ಫೇಸ್-ಬುಕ್ಕಿನ ಖಾತೆ
ಪಾರ್ಟಿಯ ಟ್ರಿಪ್ಪಿನ ಅಲ್ಬಂ ಹಾಕು
ಹೊಸ ಹೇರ್ ಡ್ರೆಸ್ಸಿನ ಸೆಲ್ಫೀ ನಾಕು
ಲೈಕು ಇಮೋಜೀ ನೂರಾ
ಕಮೆಂಟುಗಳು ಭರಪೂರಾ
ಡಿಸ್ಲೈಕ್ ಎಂಬ ಬಟನ್ನೇ ಇಲ್ಲದ
ಹೊಗಳು ಭಟ್ಟರ ನಿಜ ಭ್ರಾತೆ
ಜಯ ಹೇ ಫೇಸ್-ಬುಕ್ಕಿನ ಖಾತೆ
ಯಾರದೋ ನಾಯಿಯ ಬೆಕ್ಕಿನ ವಿಡಿಯೋ
ಯಾರ ಮನೆಯೊಳಗದೇನ್ನಡೆದಿದೆಯೋ
ಸ್ಕ್ರೋಲು ಮಾಡುತ್ತ ಲೈಕು
ಕೆಲವು ಕೊಮೆಂಟನು ಹಾಕು
ವೇಳೆಯನೆಲ್ಲವ ತಿಂದು ತೇಗಿರಲು
ಅಡುಗೆಗೆ ಇಡಲೂ ಮರೆತೆ
ಜಯ ಹೇ ಫೇಸ್-ಬುಕ್ಕಿನ ಖಾತೆ
ಫಾರ್ಮ್-ವಿಲ್ಲಾವನು ಆಡುತ ಕೂತೆ
ಮಕ್ಕಳ ಕೈಗೆ ಐಪ್ಯಾಡ್ ಕೊಟ್ಟೆ
ಪ್ರೊಫೈಲಿಗೆ ನೂರಾರ್ ಹೊಗಳಿಕೆ
ಇರೆ ಗಂಡನ ಹೊಗಳಿಕೆ ಬೇಕೆ?
ಗಾಸಿಪ್ ಮಾಡಲು ಮೆಸೆಂಜರಿರಲು
ನನಗಿನ್ನೇತರ ಕೊರತೆ?
ಜಯ ಹೇ ಫೇಸ್-ಬುಕ್ಕಿನ ಖಾತೆ
ಸರ್ವಜನಾಂಗದ ವರ್ಚುವಲ್ ತೋಟ
ನಿಜ ಜೀವನವ ಮರೆಸುವ ನೋಟ
ಏನನು ಮಾಡುವ ಮೊದಲು
ಬೇಕು ಫೇಸ್ಬುಕ್ಕಿನ ವಾಲು
ಮೀನ್ ಮಾರ್ಕೆಟ್ಟನು ಹೋಲುವ ಧಾಮ
ಸಮಯ ಕೊಲ್ಲು ಬಾ ಆರಾಮ
ಫೇಸ್-ಬುಕ್ ಎನೆ ಕುಣಿದಾಡುವ ಮನಸು
ಸ್ಮಾರ್ಟ್ ಫೋನಿಲ್ಲದ ಬಾಳದು ಹೊಲಸು
ಜೈ ಅಂತರಜಾಲದ ತನುಜಾತೆ
ಜಯಹೇ ಫೇಸ್-ಬುಕ್ಕಿನ ಖಾತೆ
NHS..ನನ್ನ ಅನುಭವ(as a ಪೇಶಂಟ್)

ಬೆಳಬೆಳಗ್ಗೆ ಕೆಲಸಬಿಟ್ಟು
ಕರೆಮಾಡಿದಾಗ ಗಂಟೆಯಷ್ಟು
ಫೋನೆತ್ತಿ ಹೆಸರು ಜನ್ಮದಿನದ
ಪ್ರವರವನಾಲಿಸಿದ ರಿಸೆಪ್ಶನಿಷ್ಟು
ಅಂತೂ ಚೌಕಾಸಿ ಮಾಡಿ
ಕೊಡುವಳೊಂದು ಅಪಾಯಿಂಟಮೆಂಟು
ದಡಪಡಿಸಿ ಓಡಿಹೋದರಲ್ಲಿ
ಪಾಕಿ೯ಂಗ್ ಗಿಲ್ಲ ಜಾಗ ಒಂದೀಟು
ತಾಸಧ೯ದ ಸ್ಲಿಪ್ ಅಂಟಿಸಿ ಚೆಕಿನ್
ಆದ್ರೂ ಪಾಳಿ ಬರುವುದು ಲೇಟು
ಪೋಲೀಸನ ಪೆನಲ್ಟಿ ಚೀಟಿಗೆ ತೆತ್ತಬೇಕು
ದೊಡ್ಡ ದೊಡ್ಡ ನೋಟು
ಮೆಡಿಕಲ್ ಸೆಂಟರ್ ನಲ್ಲೋ ಕಂಡಿದ್ದು
ಬರೀ ಹೆಡ್ ನಸ್೯ ಫಾಮಾ೯ಸಿಸ್ಟು
ಖಾಸಗಿ ಆಸ್ಪತ್ರೆಯ ವೈದ್ಯರೋ ನಮಗೆ
ಕೇವಲ ಕನ್ನಡಿಯ ಗಂಟು
ಹೀಗಾಗಿ ಅನಿವಾಸಿ -ಕನ್ನಡಬಳಗದಲ್ಲಷ್ಟೇ
ಡಾಕ್ಟರ್ ಗಳ ನೆಂಟು
‘ತಿಂದದ್ದೇನು? ಮಲಗಿದ್ದೆಷ್ಟಕ್ಕೆ
ಒಮ್ಮೆ ನೋಡೇಬಿಡೋಣ ವೇಟು’ ..
‘ಯುರೇಕಾ’ದ ಆಕಿ೯ಮಿಡಿಸ್ ನಂತೆ ನಸ೯ಮ್ಮ
ಎನುವಳು…ಎಲ್ಲಕ್ಕೂ ಮೂಲ ಈ 88 ಉ
‘ವಾಕ್ ಮಾಡಿ ,ಜಾಗ್ ಮಾಡಿ ,ಊಟ
ತಿನಿಸಿನಲ್ಲಿರಲಿ ಸ್ವಲ್ಪ ಡಯಟ್ಟು ‘
ಎಂದ್ಹೇಳಿ ದಬ್ಬುವಳು ಬರಿಗೈಲಿ
ಗುಳಿಗೆ-ಔಷಧಿಗಳಿಗಿಲ್ಲಿ ಬಾಯ್ಕಾಟು
ಸುರಿವಮೂಗು-ಸಿಡಿವ ತಲೆಗೂ 88 ರ ವೇಟಿಗೂ
ಏನು ಸಂಬಂಧವೆನುವುದೇ ಡೌಟು
‘ಇನ್ನಾದರೂ ಮೊಬೈಲ್ ಬಿಡು,ಸೋಫಾದಿಂದೆದ್ದು
ಮಾಡುಕೆಲಸ’ಪತಿರಾಯರ ಕಾಮೆಂಟು
ಕ್ಲೀನಿಂಗು ವಾಷಿಂಗು ಕುಕ್ಕಿಂಗು ಮ್ಯಾಜಿಕ್
ನಿಂದಾ-ಗುವುದೇ? ನನ್ನ ಲಾ-ಪಾಯಿಂಟು
ಅದೇನೇ ಇರಲಿ ಒಮ್ಮೆ ನೋಡಿಕೊಳ್ಳಬಾರದೇ
ಸೊಂಟದ ಮೇಜರಮೆಂಟು
ಪಾತ್ರೆಗಳ ಹಾರಾಟ ,ನನ್ನ ಚೀರಾಟದೊಂದಿಗೆ
‘ಪ್ರಸಂಗ’ಕ್ಕೆ ಫುಲ್ ಪಾಯಿಂಟು
ಇನ್ನೊಂದು ಮಾತು ಹೇಳಲೇ ಬೇಕು: ತಾಂತ್ರಿಕ ವಿಷಯಗಳಲ್ಲಿ ನಿಷ್ಣಾತರಾದ ಸಂಪಾದಕರು ಆ ದಿನದ ನಡಾವಳಿಗಳ ವಿಡಿಯೋ ಮತ್ತು ಆಡಿಯೋ ಗಳನ್ನೂ ಅನಿವಾಸಿ ಪುಟದಿಂದೆದ್ದು ಆಡುವಂತೆ ಮಾಡಿದ್ದಕ್ಕೆ ಅವರಿಗೆ ಸ್ಪೇಶಲ್ ಥಾಂಕ್ಸ್!
LikeLiked by 1 person
ಸಂಕ್ರಾಂತಿ ಸಂಜೆ ಸಕತ್ತಾಗಿತ್ತು ಕಾಣುತ್ತದೆ. ಅಥವಾ ಮಸ್ತ ಅನ್ರಿ. ಮಿಸ್ಮಾಡಿದವರಿಗೆ ಗಿರ್ಮಿಟ ಕೊಟ್ಟು ಕವಿತೆಗಳನ್ನು ಇಲ್ಲಿ ಹಾಕಿದ್ದಕ್ಕೆ ಧನ್ಯವಾದಗಳು. ಲೈವ್ ಗೆ ಸರಿಸಾಟಿಯಲ್ಲದಿದ್ದರೂ ರಸಾಸ್ವಾದನೆಗೆ ಚ್ಯುತಿಯಿಲ್ಲ. ಹಾಸ್ಯದ ಹೊನಲೇ ಇದೆ. NHS ಬಗ್ಗೆ ಕೊಡು-ಕೊಂಬುವರೀರ್ವರೂ ವ್ಯಂಗೋಕ್ತಿ ತುಂಬಿ ಬರೆದದ್ದು ದಾಖಲೆಯೇ! ರೋಗಿ ಬರೆದದ್ದೂ ವೈದ್ಯ ‘ಗೀಚಿ’ದ್ದೂ NHS ಹಾಸ್ಯ! ಯುರೇಕಾ ನರ್ಸಮ್ಮನ ಭೇಟಿ ಯಾರಿಗಾಗಿಲ್ಲ! ಕೇಶವ ಕುಲಕರ್ಣಿಯವರ ‘ಫೇಸ್ ಬುಕ್ ಗೀತೆ’ ಅವರ ಫೇಸ್ ಅಲ್ಲ ಪ್ರೊಫೈಲ್ ಲಿಫ್ಟಿಂಗ್ ಅಣಕವಾಡು. ಅಂತೂ very readable and enjoyable. ಯಾರ್ಕ್ ಶೈರಿನ ಜಿಗುಟು ಅಂಟುತ್ತದೆ!
LikeLiked by 2 people
ಸೊಗಸಾಗಿದೆ
On Fri 31 Jan, 2020, 7:32 AM ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ, wrote:
> srinivasamahendrakar posted: ” ಪ್ರಿಯ ಅನಿವಾಸಿ ಓದುಗರೇ, ಜನವರಿ ೧೮ ರಂದು
> YSKB ತಂಡದವರು ಸಂಕ್ರಾಂತಿ ಸಂಜೆ ಮತ್ತು ‘ಅನಿವಾಸಿ’ ಯ ಐದನೇ ವಾರ್ಷಿಕೋತ್ಸವವನ್ನು
> ವಿದ್ಯುಕ್ತವಾಗಿ ಆಚರಿಸಿ ಸಂಭ್ರಮಿಸಿದರು. YSKB ತಂಡದವರು ಸಂಕ್ರಾಂತಿ ಸಂಜೆಯಲ್ಲಿ ಎಳ್ಳು
> ಬೆಲ್ಲದ ಜೊತೆಗೆ , ಮೈ ಚಳಿ ಬಿಡಿಸಲು ಬಿಸಿ ಬಿಸಿ ಬಜ್ಜಿ, ಟೀ/ಕಾಫಿ ಹಾಗೂ ರಾತ್ರಿಯೂಟ”
>
LikeLike