“ಅವನೇ ಶ್ರೀಮನ್ನಾರಾಯಣ” ವಿಮರ್ಶೆ  ಹಾಗೂ  ಕವಿತೆ  ” ಅನಂತ ಸತ್ಯ”

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ  ಶುಭಾಷಯಗಳು. ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದಂದು ಹೊಳೆದಂಡೆ ಊಟದ ಸಂಭ್ರಮವನ್ನು ನಾವು ಎಲ್ಲೆಲ್ಲೂ ಕಾಣಬಹುದು. ಅದರಲ್ಲೂ ನನ್ನ ಹುಟ್ಟೂರಾದ ಹರಿಹರದ ತುಂಗಭಾದ್ರಾ  ನದಿಯ ದಂಡೆಯಲ್ಲಂತೂ  ಸಂಕ್ರಾಂತಿಯ ದಿನ ಜನಜಾತ್ರೆ. ಕಡಕ್ ಜೋಳದ ರೊಟ್ಟಿ, ಬುತ್ತಿ, ಮತ್ತು ಸುಮಾರು ಹತ್ತರಿಂದ ಹದಿನೈದು ತರಕಾರಿ ಪಲ್ಯಗಳನ್ನು ನೀವು ಎಲ್ಲರ ತಟ್ಟೆಯಲ್ಲೂ ನೋಡಬಹುದು. ಗಮ್ಮತ್ತಿನ ಊಟ ಮಾಡಿ, ನದಿಯಲ್ಲಿ ಈಜಿ, ಕರಗಿಸಿಕೊಂಡು ಮತ್ತೊಂದು ಸುತ್ತು ಬ್ಯಾಟಿಂಗ್ ಮಾಡಲು ಸಜ್ಜಾಗುತ್ತಿದ್ದ ದಿನಗಳವು. ಆ ದಿನಗಳನ್ನು  ಸವಿಸ್ತಾರವಾಗಿ  ಮತ್ತೊಂದು ಕಂತಿನಲ್ಲಿ ನೆನೆಸಿಕೊಳ್ಳೋಣ.

ಈ ವಾರ ಸಂಕ್ರಾಂತಿಯ ಪ್ರಯುಕ್ತ ನಾವು ನಿಮಗೆ ತರಾವರಿಯಾಗಿ  ಸಿನೆಮಾ ವಿಮರ್ಶೆ, ಹಾಡು, ಅನುವಾದ, ಕವಿತೆ ಎಲ್ಲವನ್ನೂ  ಒಂದೇ ಕಂತಿನಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಿದ್ದೇವೆ. ಕೇಶವ ಕುಲ್ಕರ್ಣಿ ರವರು ಮತ್ತು ರಾಮಶರಣ್ ಲಕ್ಷ್ಮೀನಾರಾಯಣ್ ರವರು ಬರೆದಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ವಿಮರ್ಶೆ, ಮುರಳಿ ಹತ್ವಾರ್ ರವರು ಅನುವಾದಿಸಿರುವ ‘ಅನಂತ ಸತ್ಯ’ ಕವಿತೆ ಮತ್ತು ಈ ಕವಿತೆಗೆ ಅಮಿತಾ ರವಿಕಿರಣ್ ರವರ ರಾಗ ಸಂಯೋಜನೆ, ಇವೆಲ್ಲವನ್ನೂ ನಿಮ್ಮ ತಟ್ಟೆಗೆ ಬಡಿಸಲಾಗಿದೆ. ಈ ಪ್ರಯತ್ನವು ನಿಮಗೆ ಸಂಕ್ರಾಂತಿ ಹಬ್ಬದ  ಊಟದಂತೆಯೇ ಖುಷಿತರುತ್ತದೆ ಎಂದು ನಂಬಿದ್ದೇನೆ. – ಶ್ರೀನಿವಾಸ ಮಹೇಂದ್ರಕರ್  

ಬುದ್ಧಿವಂತಿಕೆಗೆ ಮಿತಿ ಇದೆ, ಆದರೆ ದಡ್ಡತನಕ್ಕೆ ಮಿತಿಯೇ ಇಲ್ಲವೇ, ಶ್ರೀಮನ್ನಾರಾಯಣ!

ಕೇಶವ ಕುಲ್ಕರ್ಣಿ

‘Two things are infinite: the universe and human stupidity; and I am not sure about the Universe,’ ಎಂದು ಐನ್‍ಸ್ಟೀನ್ ಹೇಳಿದ್ದಾನೆ. ಮನುಷ್ಯನಲ್ಲಿ ಬುದ್ಧಿವಂತಿಕೆಯ ಜೊತೆ ಈ ಸ್ಟುಪಿಡಿಟಿ ಇಲ್ಲದಿದ್ದರೆ ಅಂಥಾ ಭಾರಿ ಗಾತ್ರದ ವಿಮಾನವನ್ನು ಹಗುರವಾದ ಗಾಳಿಯಲ್ಲಿ ಹಾರಿಸುವ ಸಾಹಸ ಮಾಡುತ್ತಿದ್ದನೇ, ಅಗಾಧ ಸಮುದ್ರದಲ್ಲಿ ತಿಮಿಂಗಿಲಿಗಿಂತಲೂ ದೊಡ್ಡದಾದ ಹಡುಗಿನಲ್ಲಿ ಇನ್ನೊಂದು ಖಂಡಕ್ಕೆ ದಾಟುವ ಧೈರ್ಯ ಮಾಡುತ್ತಿದ್ದನೇ? ಬುದ್ಧಿವಂತ ಜನರ ನಡುವೆ ಇಂಥಹ ಕೆಲವು ಸ್ಟುಪಿಡ್ ಜನರಿರುವುದರಿಂದಲೇ,  ಅವರ ಸ್ಟುಪಿಡಿಟಿಗೆ ಯಾವ ಮೇರೆ ಇಲ್ಲದಿರುವುದರಿಂದಲೇ, ನಾವಿವತ್ತು ಸ್ಮಾರ್ಟ್ ಫೋನುಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಪಂಚವನ್ನೇ ಸ್ಕ್ರೋಲ್ ಮಾಡುತ್ತಿದ್ದೇವೆ, ಹಾಲಿಡೇಗಾಗಿ ಬಾಹ್ಯಾಕಾಶಕ್ಕೆ ಹೋಗಲು ವೇಟಿಂಗ್ ಲಿಸ್ಟಿನಲ್ಲಿ ಸಾಲು ಹಚ್ಚಿದ್ದೇವೆ.

ಹದಿನೆಂಟನೇ ಶತಮಾನದಿಂದ ಇಪ್ಪತ್ತೊಂದನೇ ಶತಮಾನವನ್ನು ಒಂದೇ ಕಾಲದಲ್ಲಿ ತಂದಿಟ್ಟರೆ ಹೇಗಿಬಹುದು? ಬಿಜಾಪುರದಂಥ ಬರಡು ನೆಲದಲ್ಲಿ ಕೌಬಾಯ್‍ಗಳಿದ್ದರೆ ಏನಾಗಬಹುದು? ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಪಾಳಯಗಾರರ ರಾಜ್ಯ ನಡೆಯುತ್ತಿದ್ದರೆ ಜನರ ಗತಿ  ಏನಾಗಬಹುದು? ಇಂಥ ಸ್ಟುಪಿಡ್ ಪ್ರಶ್ನೆಗಳು ಬುದ್ಧಿವಂತರಿಗೆ ಬರಲು ಸಾಧ್ಯವೇ ಇಲ್ಲ, ಮಿತಿಯಿಲ್ಲದ ಸ್ಟುಪಿಡಿಟಿಯಿಂದ ಮಾತ್ರ ಸಾಧ್ಯ. ಇಂಥ ವಾತಾವರಣವನ್ನು ಸೃಷ್ಟಿಸಿಕೊಂಡು, ಪೌರಾಣಿಕ-ಇಂಡೀ-ಬಾಲಿವುಡ್-ಹಾಲಿವುಡ್‍ಗಳನ್ನು ಸೇರಿಸಿ, ಮನರಂಜನೆಯನ್ನೇ ಧ್ಯೇಯವಾಗಿಟ್ಟುಕೊಂಡು ಸಿನೆಮಾ ಮಾಡಿದರೆ ಹೇಗಿರಬಹುದು? ಇದಕ್ಕೆಲ್ಲ ಉತ್ತರ, ‘ಅವನೇ ಶ್ರೀಮನ್ನಾರಾಯಣ‘.

ಅಕಿರಾ ಕುರಸೋವಾ ಅವರ ‘ರೋಶೋಮಾನ್‘ದಿಂದ ಪ್ರೇರಿತರಾಗಿ, ತಮ್ಮ ಮೊದಲ ‘ಉಳಿದವರು ಕಂಡಂತೆ’ ಸಿನೆಮಾದಿಂದಲೇ ಅದಮ್ಯ ಪ್ರತಿಭೆಯನ್ನು ತೋರಿಸಿದ ರಕ್ಷಿತ್, ‘ಲೂಸಿಯಾ’ದ ಪವನ್ ಕುಮಾರ್ ತರಹ ಪ್ರಾಯೋಗಿಕ ಚಪಲತೆಯ ನಿರ್ದೇಶಕನಾಗಿ ಉಳಿದುಬಿಡಲಿಲ್ಲ. ಸಿನೆಮಾಗಳಲ್ಲಿ ನಟಿಸಿದರು. ತಮ್ಮ ಮೊದಲ ಸಿನೆಮಾದ ಪ್ರತಿಭಾವಂತ ಜನರನ್ನು ಸೇರಿಸಿ ಮುಖ್ಯವಾಹಿನಿ ಸಿನೆಮಾಕ್ಕೇ ಕೈಹಾಕಿದರು. ’ಉಳಿದವರು ಕಂಡಂತೆ’ ಬಾಕ್ಸ್ ಆಫೀಸಿನಲ್ಲಿ ಮಖಾಡೆ ಮಲಗಿದರೆ, ’ಕಿರಿಕ್ ಪಾರ್ಟಿ’ ಮನೆ ಮಾತಾಯಿತು. ’ಕಿರಿಕ್ ಪಾರ್ಟಿ’ ಮುಖ್ಯವಾಹಿನಿಯ ಸಿನೆಮಾ ಆದರೂ ಹೊಸತನವಿತ್ತು, ಹೊಸ ಸಂಗೀತವಿತ್ತು, ಹರೆಯದ ಪ್ರೇಮದ ಕತೆಯಾದರೂ, ಹಿಂದೆ ಬಂದ ಮುಖ್ಯವಾಹಿನಿಯ ಸಿನೆಮಾಗಳಿಂದ ಬೇರೆ ತರಹದ ಸಿನೆಮಾ ಮಾಡಿ ಗೆದ್ದಿತ್ತು. ’ಕಿರಿಕ್ ಪಾರ್ಟಿ’ ಮಾಡಿ ಮೂರು ವರ್ಷದ ನಂತರ, ದೊಡ್ಡ ಬಜೆಟ್ಟಿನಲ್ಲಿ ’ಶ್ರೀಮನ್ನಾರಾಯಣ’ ಬಿಡುಗಡೆ ಮಾಡಿದಾಗ ಕುತೂಹಲ ಮೂಡಿದ್ದು ಸಹಜವೇ.

ಈ ಸಿನೆಮಾವನ್ನು ಕಿಡಿಗೇಡಿ ಪೋಲಿಸ್ ಶ್ರೀಮನ್ನಾರಾಯಣನ ಆವಾಂತರಗಳು ಎಂದಾದರೂ ನೋಡಬಹುದು. ಫಜೀತಿಯಲ್ಲಿ ಸಿಕ್ಕಿಬಿದ್ದು ಇನ್ನೇನು ಕತೆ ಮುಗಿಯಿತು ಎನ್ನುವಾಗ ಅದೇನೋ ಉಪಾಯ ಮಾಡಿ ಪಾರಾಗುವ ಶ್ರೀಮನ್ನಾರಾಯಣನ ಸಾಹಸಗಳು ಎಂದಾದರೂ ನೋಡಬಹುದು, ಸಾಮಾನ್ಯ ಮನುಷ್ಯನೊಬ್ಬ ಹೇಗೆ ’ಶ್ರೀಮನ್ನಾರಾಯಣ’ನಾದ ಎಂತಲೂ ನೋಡಬಹುದು.

ಒಂದಾನೊಂದು ಕಾಲ್ಪನಿಕ ಕಾಲದಲ್ಲಿ ’ಅಮರಾವತಿ’ ಎಂಬ ಕಾಲ್ಪನಿಕ ಊರು… ಎಂದು ಶುರುವಾಗುವ ಸಿನೆಮಾ ಚಂದಾಮಾಮಾ ಕತೆಯಂತೆಯೇ ಇದೆ. ಲೂಟಿ ಮಾಡಿದ ನಿಧಿ ಹುಡುಕುವ ಅದೇ ಪುರಾತನ ಕತೆಯನ್ನು ಹೇಳಿರುವ ರೀತಿ ಮಾತ್ರ ಹೊಸದು. ಹೀಗೂ ಸಿನೆಮಾ ಮಾಡಲು ಸಾಧ್ಯವೇ ಎಂದು ಸಿನೆಮಾ ಮಾಡುವ ಮಂದಿಯೂ ಆಶ್ಚರ್ಯ ಪಡುವಂತೆ ಸಿನೆಮಾ ಮಾಡಿದ್ದಾರೆ. ಹಲವಾರು ಉಪಕತೆಗಳನ್ನು ಸೇರಿಸುತ್ತ, ಕೂರ್ಮಾವತಾರದ ಪುರಾಣ ಕತೆಯನ್ನೂ ತೋರಿಸುತ್ತ ನಿಜ ಮನುಷ್ಯರ ಫ್ಯಾಂಟಸಿ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ಲಘುಹಾಸ್ಯವನ್ನು ಚಿತ್ರದುದ್ದಕ್ಕೂ ಲೀಲಾಜಾಲವಾಗಿ ತೋರಿಸಿದ್ದಾರೆ (ಎಲ್ಲಿಯೂ ಹಾಸ್ಯವನ್ನು ತುರುಕಿದಂತೆ ಅನಿಸುವುದೇ ಇಲ್ಲ) ಒಂದೇ ಸಿನೆಮಾದಲ್ಲಿ ಭಕ್ತ ಪ್ರಹ್ಲಾದ, Pirates of the Caribbean, No Country for Old Man, ಕೆಜಿಎಫ್‍ಗಳನ್ನು ಕಲಿಸಿ ಬಡಿಸಿದ್ದಾರೆ. ಕೆಲವರಿಗೆ ಅದು ರುಚಿರುಚಿಯಾದ ಚಿತ್ರಾನ್ನ, ಇನ್ನು ಕೆಲವರಿಗೆ ವಿಚಿತ್ರಾನ್ನ.

ಚಿತ್ರಾನ್ನವೇ ಆಗಲಿ, ವಿಚಿತ್ರಾನ್ನವೇ ಆಗಲಿ, ಅದು ಅವರವರ ಬಾಯ್‍ರುಚಿ. ಒಂದೇ ಸಿನೆಮಾದಲ್ಲಿ ನಾಟಕ, ಕೋಟೆ, ರಾಜವಂಶ, ರೇಬಾನ್ ಕನ್ನಡಕ, ಮೋಟರ್ ಬೈಕು (ರಾತ್ರಿ ಕಗ್ಗತ್ತಿನಲ್ಲಿ ಕಪ್ಪು ಕನ್ನಡಕ ಹಾಕಿಕೊಂಡು ಶ್ರೀಮನ್ನಾರಾಯಣನ ಸವಾರಿ ಹೋಗುತ್ತದೆ!), ಹಳ್ಳಿಯವರ ಬಾಯಿಂದ ಪುಂಖಾನುಪುಂಖವಾಗಿ ಇಂಗ್ಲೀಷ್ ಸೇರಿಸಿದ ಕನ್ನಡ ಮಾತುಗಳು ಜನರಿಗೆ ಗೊಂದಲವಾದರೆ ಅಚ್ಚರಿಯಿಲ್ಲ, ಅಬ್ಸರ್ಡ್ ಅನ್ನಿಸಿ ಸಿನೆಮಾ ಇಷ್ಟವಾಗದಿದ್ದರೆ ಅಚ್ಚರಿಯಿಲ್ಲ. ಸಿನೆಮಾದಲ್ಲೇ ಹೇಳಿರುವಂತೆ, ’ಬುದ್ಧಿವಂತಿಕೆಗೆ ಮಿತಿ ಇದೆ, ಆದರೆ ದಡ್ಡತನಕ್ಕೆ ಮಿತಿಯೇ ಇಲ್ಲ.’ 

ಏನೇ ಆದರೂ ಚಿತ್ರತಂಡದ ಪರಿಶ್ರಮ ಮಾತ್ರ ಶ್ಲಾಘನೀಯ. ಕಮರ್ಶಿಯಲ್ ಸಿನೆಮಾದ ಅಂಶಗಳನ್ನು ಮತ್ತೊಮ್ಮೆ ಧಿಕ್ಕರಿಸಿ ಪ್ರೇಮಕತೆಯಲ್ಲದ ಸಿನೆಮಾ ಮಾಡಿದ್ದಾರೆ, ಅದೂ ಕನ್ನಡದಲ್ಲಿ. ಕನ್ನಡ ಸಿನೆಮಾದಲ್ಲಿ ಒಂದು ಕಲ್ಟ್ ಕ್ಲಾಸಿಕ್ ಆಗುವ ಎಲ್ಲ ಲಕ್ಷಣಗಳೂ ಈ ಚಿತ್ರಕ್ಕಿದೆ. ಸಿನೆಮಾ ಗೆದ್ದಿದೆಯಂತೆ (ಹಾಗಾಗಿ ಕನ್ನಡಿಗರು ಕನ್ನಡ ಸಿನೆಮಾವನ್ನು ನೋಡುವುದಿಲ್ಲ ಎನ್ನುವ ಗಾದೆ ಸ್ವಲ್ಪವಾದರೂ ಸುಳ್ಳಾಗಿದೆ), ಹಾಗಾಗಿ ರಕ್ಶಿತ್ ಶೆಟ್ಟಿ ತಂಡದಿಂದ ಇನ್ನೂ ಚಂದದ ಹೊಸ ಪರಿಭಾಶೆಯ ಸಿನೆಮಾಗಳನ್ನು ನಿರೀಕ್ಷಿಸಬಹುದು. ಅವರೇ ಒಂದು ಸಂದರ್ಶನದಲ್ಲಿ ಹೇಳಿರುವಂತೆ ’ಪುಣ್ಯಕೋಟಿ’ಯ ಕತೆಯನ್ನು ಆಧರಿಸಿ ಸಿನೆಮಾ ಮಾಡುವ ಆಸೆಯಿದೆಯಂತೆ, ಚಿತ್ರಕಥೆಯೂ ಸಿದ್ಧವಾಗಿದೆಯಂತೆ. ’ಪುಣ್ಯಕೋಟಿ’ ಬೇಗ ಬರಲಿ ಎಂದು ಆಶಿಸುತ್ತೇನೆ.

ಮಜಾ ನೋಡೋ ಮನೋಭಾವ

ರಾಮಶರಣ್ ಲಕ್ಷ್ಮೀನಾರಾಯಣ್

‘ಟಗರು’, ‘ಹೆಬ್ಬುಲಿ’, ‘ಪೈಲವಾನ್’ ಹೀಗೆ ನಾಯಕನನ್ನೇ ವೈಭವೀಕರಿಸುವ ಚಿತ್ರಗಳನ್ನು ಹೊರತರುತ್ತಿರುವ ಕನ್ನಡ ಚಿತ್ರರಂಗದಿಂದ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಚಿತ್ರ ‘ಅವನೇ ಶ್ರೀಮನ್ನಾರಾಯಣ(ಅಶ್ರೀಮ/ASM). ಇದೂ ಅದೇ ಕೆಟಗರಿ ಅನ್ನಿಸಿದರೆ ಆಶ್ಚರ್ಯವಿಲ್ಲ; ನನಗನಿಸಿದ್ದು ಹಾಗೇ. ರಕ್ಷಿತ್ ಶೆಟ್ಟಿ ಹೆಸರು ನೋಡದಿದ್ದರೆ ಡೇಲಿ ಹಂಟ್ ನಲ್ಲಿ ಕಂಡ ಚಿತ್ರ ವಿಮರ್ಶೆಯನ್ನೂ ಓದುತ್ತಿರಲಿಲ್ಲ. “ಚೆನ್ನಾಗಿದೆ, ಮಾಮೂಲಿ ದರೋಡೆ ಕಥೆಗೊಂದು ಹೊಸ ರೂಪ ಕೊಟ್ಟಿದ್ದಾರೆ”, ಎಂದು ಬರೆದಿದ್ದರು ವಿಮರ್ಶಕ ಮಹಾಶಯರು. ಓಕೆ; ಎಂತೂಸನ್ನೋ, ಪ್ರೈಮಲ್ಲೋ ಬಂದಾಗ ನೋಡೋದು ಅಂಥ ಲಿಸ್ಟಿಗೆ ಹಾಕಿದ್ದೆ. ಆದರೆ ಎರಡೇ ವಾರದಲ್ಲಿ ಡಾರ್ಬಿಯಲ್ಲೇ ತೋರಿಸ್ತಾರೆ ಎಂದು ವಾಟ್ಸಾಪ್ ಸಂದೇಶ ಬಂತು, ಸಮಾನ ಮನಸಿಗರಾದ ಕೇಶವ್, ಲೋಕೇಶ್, ಹರೀಶ್ ಅವರ ಜೊತೆಯೂ ಸಿಕ್ಕಿದಾಗ ಅದೇ ಮಂಗಳ ಮುಹೂರ್ತವಾಯ್ತು.

ದಾರಿಯಲ್ಲಿ ದಂತಕಥೆ ಕಟ್ಟಿದವರು ಲೋಕೇಶ್. “೧೦೦ ಕೋಟಿ  ಹುಡಿ ಹಾರಿಸಿದ್ದರಂತೆ ಸಿನಿಮಾಕ್ಕೆ, ಎಷ್ಟು ಟ್ವಿಸ್ಟ್ ಇದೆ ಅಂದರೆ ಮೂರೂ ತಾಸಿನ ಚಿತ್ರ ಮುಗಿಯೋವರೆಗೂ ನನ್ನ ಗೆಳೆಯ ಮೂತ್ರ ಕಟ್ಟಿಕೊಂಡು ಕೂತಿದ್ನಂತೆ”, ಹೀಗೆ ಲೊಟ್ಟೆ-ಲೊಸಕು ಹೇಳಿ ಇನ್ನೂ ಕುತೂಹಲ ಜಾಸ್ತಿ ಮಾಡಿಬಿಟ್ರು. ಲೋಕೇಶ್ ಕುಂದಾಪುರದವ್ರು. ಶೆಟ್ರು ಅವರಿಗೆ ಪಕ್ಕದ ಮನೆಯವರಂತೆ. ಜೊತೆಗೇ ಕಳೆದೈದು ವರ್ಷಗಳಲ್ಲಿ ರಕ್ಷಿತ್-ರಿಷಬ್ ಜೋಡಿ ಕೆಲವು ಸದಭಿರುಚಿಯ ಚಿತ್ರಗಳನ್ನು ತಂದಿದ್ದಾರೆ. ದಕ್ಷಿಣ  ಕನ್ನಡ ಅಂದರೆ ತುಳು, “ಮಂಡೆ ಬಿಸಿ…. ಬಿಸಿ ಮಾರಾಯ” ಎಂಬ ಡೈಲಾಗ್ ಅನ್ನುವ ಹಳೇ ಚಿತ್ರಣವನ್ನು ಬದಿಗೆ ಸರಿಸುವಲ್ಲಿ ಸಫಲರಾಗಿದ್ದಾರೆ. ಹಾಗಾಗಿ ಇವರ ಬಗ್ಗೆ ಸ್ವಲ್ಪ ಉತ್ತರಕ್ಕಿದ್ದರೂ ಕರಾವಳಿಯ ನನ್ನಂತವನಿಗೂ ಏನೋ ಮಧುರ ಭಾವನೆ. ಇಂಥ ನಮ್ಮವರ ಚಿತ್ರದಿಂದ ಒಂದು ಪ್ರಮಾಣ ನಿರೀಕ್ಷಿಸಿದರೆ ಅದು ಪ್ರೇಕ್ಷಕರ ತಪ್ಪಲ್ಲ, ಅವರದ್ದೇ.

ಈ ಸಿನಿಮಾ ನೋಡಿದಾಗ, ಅಲ್ಲಿಂದ-ಇಲ್ಲಿಂದ ಕೆಲವು ಕಲ್ಪನೆಗಳನ್ನು ತಂದು, ಕಲಸಿ ಮಾಡಿದ ಗಿರ್ಮಿಟ್ ಅನ್ನಿಸಿದರೂ, ಇದಕ್ಕೆ ತನ್ನದೇ ಆದ ವಿಭಿನ್ನತೆ ಇದೆ. ಎಲ್ಲ ಗಾಡಿ ಅಂಗಡಿ ಗಿರ್ಮಿಟ್ ಒಂದೇ ಥರ ಇರೋದಿಲ್ಲ ನೋಡಿ. ಫೇಮಸ್ ಗಾಡಿ ಗಿರ್ಮಿಟ್ ಗೆ ಇರೋ ರುಚಿ ಸ್ವಲ್ಪ ಭಿನ್ನ, ಅದಕ್ಕೇ ಜನ ಆ ಅಂಗಡಿಗೆ ಮುತ್ತೋದು. ಅಶ್ರೀಮದ ನಟರು ಈ ತಂಡದ ಮಾಮೂಲಿ ಬಂಟರು. ದ.ಕ. ದ ನಾಟಕ ಹಿನ್ನಲೆಯ ನಟರು ಕುಟುಂಬದ ಜನರಂತೆ ಅನಿಸುತ್ತಾರೆ, ಹತ್ತಿರವೆನಿಸುತ್ತಾರೆ. ಪಕ್ಕದಲ್ಲಿದ್ದ ಲೋಕೇಶ್, “ಕೆ.ಜಿ.ಎಫ್ ನ ಹಾಗೆ ಕತ್ತಲು, ಎತ್ತಲೂ” ಎಂದು ಉದ್ಗರಿಸಿದರೂ; ಅದರಲ್ಲಿಲ್ಲದ ಸಂಭಾಷಣೆಯ ಹರಿವು-ತೀಕ್ಷ್ಣತೆ ಇಲ್ಲಿದೆ. ನವಿರು ಹಾಸ್ಯ, ವ್ಯಂಗ್ಯ ಹಾಗೂ ಸ್ವಾಭಾವಿಕತೆ ಮನಸ್ಸಿಗೆ ಮುದಕೊಡುತ್ತದೆ. ಅಲ್ಲಲ್ಲಿ ಆಗಾಗ ಬರುವ ಹಾಸ್ಯ ಪ್ರಸಂಗಗಳು ತುರುಕಿದಂತಿರದೇ ಸುಲಲಿತವಾಗಿ ಕಥಾ ಹಂದರದಲ್ಲಿ ಹಾಸು ಹೊಕ್ಕಾಗಿ ಹರಿಯುತ್ತವೆ.

ಚಿತ್ರಕ್ಕೆ ಮೂರು ತಾಸು ನೋಡಿಸಿಕೊಂಡು ಹೋಗುವ ತಾಕತ್ತಿದೆ. ರಾಮರಾಮನ ಕೊರಗು, ಜಯರಾಮನ ಕ್ರೌರ್ಯ, ತುಕಾರಾಮನ ಕುಹಕತನ, ಲಕ್ಷ್ಮಿಯ ಸೇಡು-ರೊಚ್ಚು. ರಕ್ಷಿತ್ ನ ರಜನಿಕಾಂತ್ ಪರಿಯ ರೇಬಾನ್ ಸ್ಟೈಲ್ಗಾರಿಕೆ ಹೀಗೆ ನವರಸಗಳು ಮೇಳೈಸಿದರೂ, ಹಾಸ್ಯ ರಸದ್ದೇ ಒಂದು ಕೈ ಮೇಲೆ.  ಸಂಗೀತ ಚಿತ್ರದ ವೀಕ್ ಲಿಂಕ್. ಹಣಹರಿಸಿ ಮೆಸಡೋನಿಯಾದ ಮೇಳದಿಂದ ಟೈಟಲ್ ಸಂಗೀತ ಸಂಯೋಜಿಸಿದರೂ ಹೊರಬಂದಾಗ ಒಂದೂ ಹಾಡೂ ನೆನಪಿರದಷ್ಟು ಮಕಾಡೆ ಮಲಗಿಬಿಟ್ಟಿದೆ.

ಅಚ್ಯುತಣ್ಣ ಸೈಡ್ ಕಿಕ್ ಆದ್ರೂ ಸ್ವಾಭಾವಿಕ ನಟನೆಯಿಂದ ಎಂದಿನಂತೆ ಸಿನಿಮಾದ ಆಸ್ತಿಯಾಗಿದ್ದಾರೆ. ಮೀಸೆಯಂಚಿನಿಂದ ಹುಸಿನಗುತ್ತ, ಚಿರೂಟಿನ ಹೊಗೆಯ ಪರದೆಯೆಡೆಯಿಂದ ತನ್ನದೇ ಶೈಲಿಯಲ್ಲಿ ಡೈಲಾಗ್ ಡೆಲಿವರಿ ಮಾಡುವ ರಕ್ಷಿತ್ ಮೋಡಿ ಮಾಡುತ್ತಾರೆ. ಚಿತ್ರಕ್ಕೆ ಬೆನ್ನೆಲುಬಾಗಿ  ತೀಕ್ಷ್ಣವಾದ ಸಂಭಾಷಣೆಗಳಿಂದ ಚತುರ ಸಂಭಾಷಣಾಕಾರ ನಿಲ್ಲುತ್ತಾರೆ. ಇಂಥಾ ಸಿನಿಮಾ ನೋಡಲು ಬೇಕಾದದ್ದು ಬುದ್ಧಿವಂತ ಮೆದುಳಲ್ಲ, ಮಜಾ ಮಾಡುವ ಮನೋಭಾವ.

ಸಿನಿಮಾ ನೋಡಿ ಹೊರ ಬಂದಾಗ ಮುಖದಲ್ಲಿದ್ದದ್ದು ಮುಗುಳ್ನಗೆ, ಕಲಸುಮೇಲೋಗರವಾಗದ ತಲೆ, ಒಳ್ಳೇ ಸಾಥ್ ಕೊಟ್ಟ ಗೆಳೆಯರು ಹಾಗೂ ಮನೆಗೆ ಹೋಗಿ ಮನದನ್ನೆಯೊಂದಿಗೆ ಕಥೆ ಹಂಚಿಕೊಳ್ಳಬೇಕೆಂಬ ತುಡಿತ.

ಕವಿತೆ – “ಅನಂತ ಸತ್ಯ”  

ಅನಂತ ಸತ್ಯ!

ನನ್ನ ಸತ್ಯದ ಬೂದಿ
ಅದೋ ಹರಡಿದೆ ರಾಡಿ
ನನ್ನ ಕಣ್ಕಟ್ಟಿನ ಸಾಕ್ಷಿ
ಮುರುಟಿ ಬಾಡಿದೆ ಕಾಲಡಿ

ಹಗಲುಗನಸಲಿ ಕಟ್ಟಿದ
ಪ್ರೀತಿ, ಬಾಳಿನ ಗೋಪುರ
ನಿಜದೆ ಕಾಣಲು ಬಯಸುತ
ದುಡಿದೆ ದಣಿಯದೆ ನಾನಾತರ

ಹೆಜ್ಜೆ-ಹೆಜ್ಜೆಗೂ ಸುರಿದ ಸೋಲು
ಉತ್ಸಾಹದ ನಡೆಯೂ ನೀರುಪಾಲು
ಕನಸ ನನಸಾಗಿಸುವ ಮಜಲು:
ಕತ್ತಲ ದಾರಿ ಹುಡುಕುವ ಸವಾಲು

ಮತ್ತೆ ನಡೆದೆ ಹುಡುಕುತ ಕನಸ ಬಟ್ಟಲು
ಹೊಸ ಮನೆಯನೊಂದು ಅದರಲಿ ಕಟ್ಟಲು
ನನಸಿನ ಹಗಲಲಿ ಆ ಮನೆ ಹೊಕ್ಕಲು
ಎಂಥಾ ವಿರೋಧಾಭಾಸ; ನನ್ನ ತಿಕ್ಕಲು!

ಇಂದು ನಡೆದ ಕಾಲಡಿ ಅದೇ ಬೂದಿ
ಬಿಸಿಯೇರಿದ ಮನ; ಉರಿವ ಕಣ್ಣೀರು
ಮೂಡಿಸಿ ಉಳಿಸಿದೆ ಪ್ರತಿ ಹಾದಿ
ಉರಿದು ಉದುರಿದ ಕನಸುಗಳ ಚೂರು

ಆ ಸುಟ್ಟ ಗಾಯದ ಕಲೆಗಳು
ಜಗದ ಜಾಣ್ಮೆಯ ಬಲೆಗಳು,
ಒತ್ತಿ ತುರುಕಿದ ನಿಯಮಗಳು,
ಸಮಾಜ ಸಾಕಿದ ಸಲಾಕೆಗಳು!

ಆ ಮಾಯೆಯ ಬಲೆಯಲಿ ನಾ ಬಿದ್ದೆ
ಭ್ರಮೆಯ ಬದುಕನು ನಾ ಹೊದ್ದೆ
ನನ್ನತನವ ನಂಬದಲೆ ನಾ ಒದ್ದೆ
ಆ ಸುಳ್ಳೇ ನನ್ನ ನಿಜವೆಂದುಕೊಂಡಿದ್ದೆ!

ಸತ್ತ ಕಣ್ಕಟ್ಟಿನ ಬೂದಿಯ ಬೆಳಕಲಿ
ಕಂಡೆ ನನ್ನೊಳ ಇಳೆಯ ನಿಜ ನೆಲೆ
ಮಿಂದೆ ಆ ಒಳ ಬೆಳಕಿನ ಪ್ರಭೆಯಲಿ.
ಯಾನವಿದು ಸತ್-ಚಿತ್ತದ ಅನಂತದಲೆ!

Grappling Truth

There lie the ashes
The ashes of my truth
The witness to my illusion
That crumbled to my feet
 
I built a mansion
With illusionary stories
Of life and love
And lugged on to make them come true 
 
I failed every time
At every attempt made with gusto
To turn illusion into reality
Every time going through the darkness 
 
It felt like giving another chance
Chance at building another illusion?
At turning that illusion into reality?
What a paradox!
 
Today I walk on those ashes
Shedding tears
And burning at the remnants
Printing my crumbled illusion 
 
Those are the marks
That came from the world
Injected into the veins by the culture
Nurtured by the society 
 
They separated me from myself
I believed the illusion was me
And overruled my essence
Deceiving myself from me
 
Through the illusion now burnt and lifeless
I see the space for my being
To look within and see my presence
A journey it is with grappling truth

ಕನ್ನಡ ಭಾವಾನುವಾದ : ಮುರಳಿ ಹತ್ವಾರ್

(English version was received as a whats app forward)

ಇಂಗ್ಲೀಷ್ ನಲ್ಲಿ ಬರೆದವರು : ಡಾ|| ಭಾರ್ಗವಿ

ಹಾಡಿರುವವರು : ಅಮಿತಾ ರವಿಕಿರಣ್

9 thoughts on ““ಅವನೇ ಶ್ರೀಮನ್ನಾರಾಯಣ” ವಿಮರ್ಶೆ  ಹಾಗೂ  ಕವಿತೆ  ” ಅನಂತ ಸತ್ಯ”

  1. ಕುಲ್ಕರ್ಣಿ ಮತ್ತು ರಾಮಶರಣ್ ಅವರೇ, ನಿಮ್ಮ ವಿವರವಾದ ವಿಮರ್ಶೆಗಳನ್ನು ಕೇಳಿದಮೇಲೆ ಈ ಚಲನಚಿತ್ರ ನೋಡದೇ ಇರಲು ಸಾಧ್ಯವಿಲ್ಲ 😊 ಕನ್ನಡದಲ್ಲಿ ಒಳ್ಳೊಳ್ಳೆ ಚಲನಚಿತ್ರ ಹಾಗೂ ಸಮರ್ಥ ನಿರ್ದೇಶನಗಳಾಗುತ್ತಿರುವುದು ಖುಷಿ ತರುವ ವಿಷಯ.

    Like

  2. ಸಿನಿಮಾವನ್ನು ನಾನು ನೋಡಲಾಗಲಿಲ್ಲ. ಆದರೇನು, ವಿಮರ್ಶೆಗಳನ್ನು ಹೇಗೆಬರೆಯ ಬಹುದು ಎನ್ನುವ ಎರಡು ಮೊನಚಾದ ಬರಹಗಳನ್ನು ಕೊಟ್ಟ ಮಿತ್ರರಿಗೆ ಅಭಿನಂದನೆ. ಹಾಗೆಸೇ ಅನುವಾದ ಹೇಗೆ ಹೊನ ಸೃಷ್ಟಿಯಾಗಬಹುದೆಂದು ತೋರಿದ ಮುರಳಿಯವರಿಗೂ ಅಮಿತಾ ಅವರಿಗೂ ವಂದನೆಗಳು.
    ಹೊಸ ಸಂಪಾದಕರು ಹೊಸತನ್ನು ತರುವ ಪ್ರಯತ್ನ ಸಫಲವಾಗುತ್ತಿದೆ. ಅದೂ ಮುಂದುವರೆಯಲಿ. ಶ್ರೀವತ್ಸ ದೇಸಾಯಿ

    Like

  3. ಕೇಶವ್ ಅವರೇ ನಿಮ್ಮ ಸಿನಿಮಾ ವಿಮರ್ಶೆ ಅತ್ಯಂತ ಸುಂದರವಾಗಿದೆ. ಓದುತ್ತಲೇ ಜಗ್ಗನೆ ಎಚ್ಚರಗೊಂಡು, ಮುದಗೊಂಡು ನಕ್ಕೂ ನಕ್ಕೂ ಸಾಕಾಯಿತು. ಒಳ್ಳೆಯದನ್ನು ಹೊಗಳುತ್ತಲೇ ತೀಕ್ಷ್ಣ ವಿಮರ್ಶೆಯನ್ನು ಎಷ್ಟು ಚಾಣಾಕ್ಷವಾಗಿ ಬರೆದಿದ್ದೀರಿ. ಸಿನಿಮಾ ಹೇಗಾದರೂ ಇರಲಿ, ವಿಮರ್ಶೆ ಮಾತ್ರ ಸೂಪರ್ ಡ್ಯೂಪರ್.
    ರಾಂ ಹೇಳಿರುವಂತ ಸಮಾನ ಅಭಿರುಚಿಯ ಸ್ಸ್ನೇನೇಹಿತರ ಜೊತೆ, ಶ್ರೀನಿವಾಸ್ ಹೇಳಿರುವ ರೊಟ್ಟಿ ಬುತ್ತಿಯ ಜೊತೆ ಹೋಗಿ ಒಂದು ಬಂಡಲ್ ಸಿನಿಮಾ ನೋಡಿ ಬರಲು ಯಾರಿಗೆ ಖುಷಿಯಾಗುವುದಿಲ್ಲ?
    Thoroughly enjoyed reading 👏👏👏👏

    Like

  4. From Gudur Lakshminarayans in WhatsApp

    ಎಷ್ಟೋ ಸಲ ಅನುವಾದ ಮಾಡುವಾಗ ಮೂಲ ಕವಿಯ ಆಶಯಗಳು ಅಲ್ಲಲ್ಲಿ ಉದುರಿ ಹೋಗಿ, ಹೊಸಕವನ ಸತ್ವಹೀನವಾಗುವ ಸಾಧ್ಯತೆಗಳಿರುತ್ತವೆ. ಇಲ್ಲಿ ಮುರಳಿ ಹತ್ವಾರರು ಭಾವಾನುವಾದ ಮಾಡುವುದಲ್ಲದೆ, ಕವನಕ್ಕೆ ಹೊಸ ತತ್ವಜ್ಞಾನದ ಮೆರುಗನ್ನೂ ಕೊಟ್ಟು ಹೊಳೆಯುವಂತೆ ಮಾಡಿದ್ದಾರೆ.
    ಅಮಿತಾ ಅವರ ಗಾಯನವೂ, ಧ್ವನಿಯೂ ಪೂರ್ತಿ ಕೂತು ಕೇಳುವಂತೆ ಮಾಡುತ್ತದೆ. ಇಲ್ಲಿ ಹಂಚಿಕೊಂಡ ಇಬ್ಬರಿಗೂ, ಮೂಲಕವಯಿತ್ರಿಗೂ ಹೃತ್ಪೂರ್ವಕ ಅಭಿನಂದನೆಗಳು.

    Like

  5. From Keshav Kulkarni in WhatsApp

    The original flows more of a monologue in simple structure without much relying on rhyme or rhythm. But brings out the essence without any pretense.
    ಜಿ‌ ಎಸ್ ಎಸ್ ಅವರೆ ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಮತ್ತು ಅಡಿಗರ ‘ಮೋಹನ‌ ಮುರಲಿ’‌ ಒಟ್ಟೊಟ್ಟಿಗೇ ನೆನಪಾದವು.
    This theme is recurring is most poets, writers and philosophers. The irony is that first we need to build our own ಅರಗಿನ ಮನೆ and then burn to see who we are. Do we find the answer? At least the poet has.
    Murali’s translation is brilliant. End rhymes are the main focus, but not for a line they lose or distort the meaning. It is the toughest job.
    The rhyme of Kannada translation is almost free verse, similar to the original.
    That makes the musician’s job very very very difficult. Kudos to Amita for tuning it and singing it with amazing emotions.
    Singing a poem is very difficult task. Singing lyrics is easier. Can the above poem be smaller and lyrical? I am not sure.

    Like

    • ಕುಲಕರ್ಣಿ ಮತ್ತು ಲಕ್ಷ್ಮೀನಾರಾಯಣರವರೇ , ನಾನು ಈ ಚಲನ ಚಿತ್ರ ನೋಡುವದು ಇನ್ನೂ ಬಾಕಿಇದ್ದರೂ , ನಿಮ್ಮ ಎರಡು ರೀತಿಯ ವಿಮರ್ಶೆಗಳನ್ನು ಓದಿ, ನಿಮ್ಮ ಬರಹ ಖುಷಿ ತಂದಿತು!

      ಮುರಳಿ ಮತ್ತು ಅಮಿತ ನೀವಿಬ್ಬರೂ , ಭಾರ್ಗವಿಯವರು ಇಂಗ್ಲೀಷ್ನಲ್ಲಿ ಬರೆದ ಈ ಕವಿತೆಯನ್ನು(ಅದರ ಅಂತರಾಳ ಮತ್ತು ಆತ್ಮಸವ್ನೆದನೆ)ನಿಮ್ನ ಭಾಷಾಂತರ ಮತ್ತು ಗಾಯನದ ವೈಖರಿಯಿಂದ ನನ್ನಂತ ಸಹೃದಯಿ ಓದುಗನ ಅಂತರಾತ್ಮಕ್ಕೇ ಬಹು ಸುಂದರವಾಗಿ ಸುರಿದುಬಿಟ್ಟೀದ್ದೀರಿ!!

      ಮತ್ತೆ ಸಂಪಾದಕರೇ, ನಿಮ್ಮ ತುಂಗಾ ತೀರದ,ಸಂಕ್ರಾಂತಿ-ಸಡಗರದ -ಸಂಭ್ರಮದ ಮುನ್ನುಡಿ,ಮನದಟ್ಟಾಗಿ ಮೂಡಿ ಬಂದಿದೆ !!!
      ಧನ್ಯವಾದಗಳು.

      Like

Leave a comment

This site uses Akismet to reduce spam. Learn how your comment data is processed.