ಕನ್ನಡ ಬಳಗದ ಹುಟ್ಟು ಮತ್ತು ಬೆಳವಣಿಗೆ-ರಾಮಮೂರ್ತಿ

       ಶ್ರೀಯುತ  ರಾಮಮೂರ್ತಿ

ಒಂದು ಸಂಸ್ಥೆಯನ್ನು ಕಟ್ಟಿ  ಬೆಳೆಸುವುದು ಹಲವರ ಜೀವನ ಪೂರ್ತಿಯ ಸಾಧನೆ . ಅದನ್ನು ಬೆಳೆಸಿಕೊಂಡು ಹೋಗುವುದು ಮುಂದಿನ ತಲೆಮಾರಿನವರ ಹೊಣೆ. ಯುನೈಟೆಡ್ ಕಿಂಗ್ಡಮ್ ನ  ಮೊಟ್ಟ ಮೊದಲ ಕನ್ನಡ ಸಮುದಾಯದ ಸಂಸ್ಥೆ ಕನ್ನಡ ಬಳಗ, ಯು.ಕೆ . ( KBUK )

ಇದರ  ಹುಟ್ಟು ಮತ್ತು ಬೆಳವಣಿಗೆಯನ್ನು ಅತ್ಯಂತ ಹತ್ತಿರದಿಂದ ನೋಡುತ್ತ ಅದಕ್ಕಾಗಿ ಶ್ರಮದಾನವನ್ನು ಮಾಡುತ್ತ ಬಂದವರಲ್ಲಿ ರಾಮಮೂರ್ತಿಯವರು ಕೂಡ ಒಬ್ಬರು. ಈ ವಾರ ಅದೆಲ್ಲದರ ನೆನಪಿನ ಸುರಳಿಯನ್ನು ನಮ್ಮ ಮುಂದೆ ಬಿಚ್ಚಿಡುವ ಮೂಲಕ ಅವರು ಬರಿಯ  ಒಂದು ಲೇಖನವನ್ನು ಮಾತ್ರ  ಬರೆದಿಲ್ಲ. ಬದಲಿಗೆ ಕೆ.ಬಿ.ಯು.ಕೆ ಗಾಗಿ ಒಂದು ಉತ್ತಮ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇಂದಿನ ತಲೆಮಾರಿನವರಿಗೆ ಒಂದು ಸಂಸ್ಥೆಯ ಆಸ್ಥೆಯನ್ನು ಕಾಪಾಡಿಕೊಳ್ಳುವ ಅಗತ್ಯದ ಬಗ್ಗೆ ತಿಳಿಸಿದ್ದಾರೆ. ಬಳಗದ ಶ್ರೀಮಂತ ಚರಿತ್ರೆಯ ನೆನಪುಗಳನ್ನು ನಮ್ಮ ಮುಂದಿಟ್ಟು ಸಂಸ್ಥೆಯ ಮಹತ್ವವನ್ನು ಸಾರಿದ್ದಾರೆ.

ಕಳೆದ ವಾರ  ಇಂಗ್ಲೆಂಡಿಗೆ ಬಂದ ಕನ್ನಡ ಜನರ ಬದುಕು ೬೦-೭೦ ರ ದಶಕದಲ್ಲಿ ಹೇಗಿತ್ತು ಎನ್ನುವ ಬಗ್ಗೆ ಬರೆದಿದ್ದರು. ಅದನ್ನು ಓದಿದ ನಂತರ, ಅಲ್ಲಿಂದ ಇಲ್ಲಿಗೆ ಆಗಿರುವ ಎಲ್ಲ ಬದಲಾವಣೆಗಳನ್ನು ನಾವು ಗ್ರಹಿಸಬಹುದು. ಆ ಲೇಖನದ ಲಿಂಕ್ ಇಲ್ಲಿದೆ. https://wp.me/p4jn5J-2o6.

ಇವತ್ತು ಹಲವು ಕನ್ನಡ ಸಂಸ್ಥೆಗಳು ಈ ಆಂಗ್ಲನಾಡಿನಲ್ಲಿ ಹುಟ್ಟಿವೆ. ಆದರೆ ಅವೆಲ್ಲದರ ತಾಯ್ಬೇರು ಕೆ.ಬಿ.ಯು.ಕೆ ಎನ್ನುವುದರಲ್ಲಿ ಸಂಶಯವೇ ಇಲ್ಲ.ಈ ಲೇಖನ ಅದಕ್ಕೆ ಪೂರ್ಣ ಸಾಕ್ಷಿಯಾಗಿ ನಿಲ್ಲುತ್ತದೆ- ಡಾ. ಪ್ರೇಮಲತ ಬಿ.


 ಕನ್ನಡ ಬಳಗದ ಆರಂಭ

೩೦ ಅಕ್ಟೊಬರ್ ೧೯೮೨ ದಿನ ದೀಪಾವಳಿ ಹಬ್ಬ ಆಚರಿಸಲು ಡಾನ್ಕ್ಯಾಸ್ಟರ್ ನಲ್ಲಿದ್ದ  ಗೋಪಾಲ್ ಕುಲ್ಕರ್ಣಿ ಅವರ ಮನೆಯಲ್ಲಿ ಕೆಲವು ಕನ್ನಡಿಗರು ಸೇರಿದ್ದರು. ಅರವಿಂದ್ ಮತ್ತು ಸ್ನೇಹ ಕುಲ್ಕರ್ಣಿ, ಶ್ರೀವತ್ಸ ದೇಸಾಯಿ, ಪಾಂಡುರಂಗಿ ಮತ್ತು ಅಗಳಗಟ್ಟಿ ದಂಪತಿಗಳು ಮುಂತಾದವರು.  ಈ ದೇಶದಲ್ಲಿ  ನೆಲಸಿರುವ ಕನ್ನಡ ಕುಟುಂಬಗಳನ್ನು ಸೇರಿಸುವ ಉದ್ದೇಶದಿಂದ  ಇಲ್ಲಿ ಒಂದು ಸಂಸ್ಥೆ ಬೇಕು ಅನ್ನಿಸಿ ಕೊನೆಗೆ ಕನ್ನಡ ಬಳಗ (extended family ) ಅಂತ ನಾಮಕರಣ ಮಾಡಿದರು . ಇದಕ್ಕೆ ಬೇಕಾದ ಖರ್ಚಿಗೆ ತಲಾ £೫ ಹಾಕಿ ನಮ್ಮ ಬಳಗ ಪ್ರಾರಂಭ ವಾಯಿತು.  ಅವಾಗ internet ಅಥವಾ ಮೊಬೈಲ್ ಫೋನ್ ಇರಲಿಲ್ಲ. ಸಂಪರ್ಕ ’word of mouth’ ಮಾತ್ರ. ಹಲವಾರು ವೈದ್ಯರು ಇದ್ದದ್ದರಿಂದ Pulse ಎನ್ನುವ ವಾರ ಪತ್ರಿಕೆಯಲ್ಲೂ ಕನ್ನಡ ಬಳಗದ  ಬಗ್ಗೆ ಪ್ರಚಾರ ಮಾಡಿದರು.

ಮೊಟ್ಟ ಮೊದಲಿನ ಕನ್ನಡ ಬಳಗದ ಆರಂಭ ನಾಟಿಂಗ್ಹ್ಯಾಮ್ ಹಿಂದೂ ದೇವಸ್ಥಾನದಲ್ಲಿ. ಇದು ೧-೫-೧೯೮೩. ಭಾರತೀಯ ವಿದ್ಯಾ ಭವನದ ಶ್ರೀ ಮತ್ತೂರ್ ಕೃಷ್ಣಮೂರ್ತಿ ಅವರು ಅಧ್ಯಕ್ಯತೆ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ “ ಕನ್ನಡಿಗರು ಆರಂಭ ಶೂರರು ಎಂಬ ಶಂಕೆ ಇದೆ ಆದರೆ ನೀವೆಲ್ಲ ಸೇರಿ ಇದನ್ನು ಅಳಿಸಬೇಕು “ ಅಂತ ಮನವಿ ಮಾಡಿದರು. ಸುಮಾರು ೧೫೦ ಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದರು.ಬಹಳ ವರ್ಷದ ನಂತರ  ಮನೋರಂಜನಾ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಒದಗಿ ಬಂದಿತ್ತು. ಎಲ್ಲರಿಗೂ ಒಂದು ಸಂಭ್ರಮ ಮತ್ತು ಉತ್ಸಾಹ ಎದ್ದು ಕಾಣಿಸುತ್ತಿತ್ತು. ಊಟದ ವ್ಯವಸ್ಥೆ ಈಗಿನ ತರ ಹೊರಗಿನಿಂದ ಅಡಿಗೆಯವರದಲ್ಲ. ಬಂದಿದ್ದ ಅನೇಕ ಸ್ವಯಂಸೇವಕರು ಸೇರಿ ಅಷ್ಟು ಜನಕ್ಕೂ ಅಡಿಗೆ ಮಾಡಿದ್ದರು.

ಈ ಪ್ರಥಮ ಸಮ್ಮಿಲನದಲ್ಲಿ ಬಳಗದ ಮೊದಲನೆಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಡಾ. ಸ್ನೇಹ ಕುಲ್ಕರ್ಣಿ –   ಅಧ್ಯಕ್ಯರು
ಡಾ. ವಿಭೂತಿ           –   ಕಾರ್ಯದರ್ಶಿ
ಡಾ. ಕುರುವತ್ತಿ        –    ಕೋಶಾಧಿಕಾರಿ
ಶ್ರೀಮತಿ ವಿಜಯಾ ಆನಿಖಿಂಡಿ   – ಸಾಂಸ್ಕತಿಕ  ಕಾರ್ಯದರ್ಶಿ

ಮ್ಯಾನ್ಸ್ ಫೀಲ್ಡ್ ನಲ್ಲಿ ವಕೀಲ ರಾಗಿದ್ದ ಶ್ರೀ ಎಡ್ವರ್ಡ್ಸನ್ ಅವರಿಂದ ಸಲಹೆ ಪಡೆದು  ಪ್ರಥಮ ಸಂವಿಧಾನವನ್ನು (Constitution) ನ್ನು ರಚಿಸಲಾಯಿತು

ಇದರ ಮುಖ್ಯ ಅಂಶ , ಆಂಗ್ಲದೇಶದಲ್ಲಿ ನೆಲಸಿರುವ ಕನ್ನಡ ಅಭಿಮಾನಿಗಳ ಒಕ್ಕೂಟದ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಪಾಲನೆ ಮಾಡುವುದು, ರಾಜಕೀಯ, ಜಾತಿ ಮತ್ತು ಮತಗಳ ಬೇಧಭಾವನೆಗಳಿಂದ ದೂರವಾಗಿರುವುದು ಇತ್ಯಾದಿ. ಸಮಿತಿಯ ಅವಧಿ ಎರಡು ವರ್ಷ( ಈಗ ಮೂರು ವರ್ಷಕ್ಕೆ ಬದಲಾವಣೆ ಆಗಿದೆ) ಯುಗಾದಿ ಮತ್ತು ದೀಪಾವಳಿ ಆಚರಣೆ ಮತ್ತು  ಯುಗಾದಿ ಸಮಯದಲ್ಲಿ ಸದ್ಯಸರ ಸಭೆ, ಧರ್ಮ ಕಾರ್ಯಗಳನ್ನು  ಬೆಂಬಲಿಸುವುದು  ಮತ್ತು ನೂತನ ಸಮಿತಿಯ ಆಯ್ಕೆ ಇತ್ಯಾದಿ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದೆವು.

ಲಂಡನ್ನಿನಲ್ಲಿ ಆಗಸ್ಟ್  ೧೯೮೩ ನಲ್ಲಿ  ಭಾರತೀಯ ವಿದ್ಯಾ ಭವನಲ್ಲಿ ನಡೆದ ಸಮಾರಂಭಕ್ಕೆ  ಸುಮಾರು ೨೦೦ ಕ್ಕೂ ಹೆಚ್ಚು ಕನ್ನಡಿಗರು ಸೇರಿ  ಅನೇಕ ಸಾಂಸ್ಕೃತಿಕ  ಕಾರ್ಯಕ್ರಗಳಲ್ಲಿ ಭಾಗವಹಿಸಿ ಆನಂದಿಸಿದರು ಮತ್ತು  ಇತರೆ ಕನ್ನಡದವರನ್ನು ಪರಿಚವನ್ನು ಮಾಡಿಕೊಂಡರು.

ಮೊಟ್ಟಮೊದಲನೆಯ ಎ.ಜಿ.ಎಮ್. ಸ್ಟಾಕ್ಪೋರ್ಟ್ ನಲ್ಲಿ ೧೯೮೪ ನಲ್ಲಿ ನಡೆದು ಮುಂದಿನ ಕಾರ್ಯಕಾರಿ ಸಮಿತಿ ಚುನಾವಣೆಯಿಂದ ಆರಿಸಬೇಕೆಂದು ನಿರ್ಧಾರವಾಗಿ   ೧೯೮೫ ನಲ್ಲಿ  ೧೫ ಜನರ ಸಮಿತಿಯನ್ನು ಆರಿಸಲಾಯಿತು. ಬಳಗದ ಹಿರಿಯ ಸದಸ್ಯೆ  ಡಾ.ಅಭಯಾಂಬ ಈ ಸಮಿತಿಯ ಕಾರ್ಯದರ್ಶಿಗಳಾಗಿ ಬಹಳ ಶ್ರದ್ಧೆ ಇಂದ ಕೆಲಸ ಮಾಡಿ ಅನೇಕರನ್ನು ಸದಸ್ಯರನ್ನಾಗಿ ಮಾಡಿದರು.

೧೯೮೭ ನಲ್ಲಿ (೨೬-೦೯-೧೯೮೭ )  ಉತ್ತರ ಲಂಡನ್ Enfield ನಲ್ಲಿ ನವರಾತ್ರಿ ಸಂಭ್ರಮಕ್ಕೆ ಕರೆಯೋಲೆಯನ್ನು ಕನ್ನಡ ಟೈಪ್ ರೈಟರ್ ನಲ್ಲಿ ರಾಜಾರಾಮ್ ಕಾವಳೆ ಅವರು ತಯಾರಿಸಿದರು.ಸುಮಾರು ೩೦೦ ಕನ್ನಡದ ಕುಟುಂಬದವರಿಗೆ ಕಳಿಸಲಾಯಿತು. ಇಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಆಟಗಳನ್ನು ಏರ್ಪಡಿಸಿ ಮಧ್ಯಾನ್ಹ ೧೮೯೮ ರಲ್ಲಿ ನಡೆಯುತ್ತಿರುವ ವಿಶ್ವ ಕನ್ನಡಿಗರ ಸಮ್ಮೇಳನ ಬಗ್ಗೆ ಚರ್ಚೆ ನಡೆಯಿತು. ಈ ಕಾರ್ಯಕ್ರಮಕ್ಕೆ ಹಣ ಕೂಡಿಸಲು ನಾನು ಮತ್ತು ಕಾವಳೆ ಅವರು Ealing road ನಲ್ಲಿರುವ ಅಂಗಡಿಗಳಿಗೆ ಭೇಟಿ ಕೊಟ್ಟು ಜಾಹಿರಾತುಗಳನ್ನು ಕೊಡಿ ಅಂತ ಮನವಿ ಮಾಡಿ ಸ್ವಲ್ಪ ಸಂಪಾದಿಸಿದೆವು.

೧೯೮೮ ವಿಶ್ವ ಕನ್ನಡ ಸಮ್ಮೇಳನ 

೧೯೮೭ರಲ್ಲಿ  ಇಲ್ಲಿ ಮತ್ತು ಇತರ ದೇಶದಲ್ಲಿ ನೆಲಸಿರುವ ಕನ್ನಡಿಗರನ್ನು ಸೇರಿಸಿ ವಿಶ್ವ ಕನ್ನಡ ಸಮ್ಮೇಳವನ್ನು ನಡೆಸುವ  ಉದ್ದೇಶದಿಂದ  ಡಾ. ಭಾನುಮತಿ ಈ ವರ್ಷದ ಚುನಾವಣೆಯಲ್ಲಿ ಭಾಗವಹಿಸಿ ಅಧ್ಯಕ್ಷರಾದರು.  ಅದೇ ಸಮಯದಲ್ಲಿ ಅಂದಿನ ಕರ್ನಾಟಕದ ಮಖ್ಯ  ಮಂತ್ರಿಗಳಾಗಿದ್ದ ಶ್ರೀ ರಾಮಕೃಷ್ಣ  ಹೆಗ್ಗಡೆ ಲಂಡನ್ ಭೇಟಿಮಾಡಿದಾಗ (ಮೇ ೧೯೮೭) ಕನ್ನಡ ಬಳಗದವರು ಅವರಿಗೆ ಸನ್ಮಾನ ಮಾಡಿ ವಿಶ್ವ ಕನ್ನಡಿಗರ ಸಮ್ಮೇಳನ ನಡೆಸುವ ಉದ್ದೇಶವನ್ನು ಭಾನುಮತಿ  ಹೆಗ್ಗಡೆ ಅವರ ಮುಂದೆ ಇಟ್ಟು  ಅವರ ಸರಕಾರದಿಂದ ಸಹಾಯ ಕೋರಿದರು, ಮುಖ್ಯ ಮಂತ್ರಿಗಳು ಈ ಸಲಹೆ ಅತ್ಯಂತ ಒಳ್ಳೆಯದು ಮತ್ತು ತಮ್ಮ ಸರಕಾರದ ಸಂಪೂರ್ಣ ಬೆಂಬಲ ಇದೆ ಅಂತ ಭರವಸೆ ಕೊಟ್ಟರು.  ಆದರೆ,ಕೆಲವು ತಿಂಗಳ ನಂತರ ಕರ್ನಾಟಕದ ರಾಜಕೀಯದ ಪರಿಸ್ಥಿತಿ ಬದಲಾಗಿತ್ತು. ಹೆಗ್ಗಡೆ ಮುಖ್ಯಮಂತ್ರಿ ಸ್ಥಾನದಿಂದ ಹೊರಗೆ ಬಂದಿದ್ದರು, ನಮ್ಮ ಸಮ್ಮೇಳನದ ಬಗ್ಗೆ ಹೊಸದಾಗಿ ಅವರ ಜಾಗಕ್ಕೆ ಬಂದಿದ್ದ ಶ್ರೀ ಬೊಮ್ಮಾಯಿಯವರಿಗೆ ಗೊತ್ತಿರಲಿಲ್ಲ, ಆದ್ದರಿಂದ ಈ  ಸಮ್ಮೇಳನ ನಡೆಯುವುದೇ ಅನ್ನುವ ಸಂಶಯ  ಇತ್ತು.  ಆದರೆ  ಡಾ.ಭಾನುಮತಿ  ಕರ್ನಾಟಕ್ಕೆ ಭೇಟಿ ಕೊಟ್ಟು ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ಭೇಟಿಮಾಡಿ ಅವರಿಂದ ಬೆಂಬಲ ಪಡೆದರು. ಇಬ್ಬರ ಅಧಿಕಾರಿಗಳ ಸಹಾಯ ಇಲ್ಲಿ ಮರೆಯಬಾರದು.  ವಾರ್ತಾ  ಇಲಾಖೆಯಲ್ಲಿದ್ದ ಡಾ.ಕೃಷ್ಣಮೂರ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿಯ ನಿರ್ದೇಶಕ ಶ್ರೀ ವಿಠ್ಠಲಮೂರ್ತಿ. ಈ ಮಹನೀಯರು ಇಂದಿಗೂ ನಮ್ಮ ಸಂಪರ್ಕದಲ್ಲಿದಾರೆ.

ಆಗಸ್ಟ್ ೧೯೮೮ ಮ್ಯಾಂಚೆಸ್ಟರ್ ನ UMIST ಆವರಣದಲ್ಲಿ ನಲ್ಲಿ ಮೂರು ದಿನ ಈ ಸಮ್ಮೇಳವನ್ನು ನಡೆಸಬೇಕೆಂದು ನಿರ್ಧಾರ ಮಾಡಿ  ಅನೇಕ ಸದಸ್ಯರ ಸಮಿತಿ ಯನ್ನು ಮಾಡಿ ಕೆಲಸ ಎಲ್ಲರೂ ಉತ್ಸಾಹದಿಂದ ದುಡಿದರು. ನನ್ನ ಅಭಿಪ್ರಾಯದಲ್ಲಿ  ಕನ್ನಡ ಬಳಗದಲ್ಲಿ ಅನೇಕ ಕುಟುಂಬಗಳು ಮೊಟ್ಟ  ಮೊದಲು  ಭೇಟಿಯಾಗಿ  ಮೂರು ದಿನ ಒಟ್ಟಿಗೆ ಇದ್ದು  ಭಾಂದವ್ಯ ಬೆಳಸಿದ್ದು  ಈ ಸಮಯದಲ್ಲೇ .  ಇಲ್ಲಿಬೆಳೆದ ಸಂಪರ್ಕಗಳು  ೩೨ ವರ್ಷದ ನಂತರವೂ ಸ್ಥಿರವಾಗಿದೆ.  ಅನೇಕ ಮಕ್ಕಳು ಇಲ್ಲಿ ಭಾಗವಹಿಸಿ, ಪರಸ್ಪರ ಸ್ನೇಹವನ್ನು ಇನ್ನೂ ಇಟ್ಟು್ಕೊಂಡು  ಈಗ ಅವರ ಮಕ್ಕಳ ಜೊತೆ ಕನ್ನಡ ಬಳಗಕ್ಕೆ ಬರುವುದನ್ನು ನೋಡಿದರೆ  ಈ ನಮ್ಮ ಸಂಸ್ಥೆ ಮುಂದೆವರಿಯುವುದರಲ್ಲಿ ಸಂದೇಹವೇ ಇಲ್ಲ ಎನಿಸುತ್ತದೆ.

ಇಲ್ಲಿ ಹಣಕಾಸು ಹೊಂದಿಸುವ ಕೊರತೆ ಇಂದ ಈ ಸಮ್ಮೇಳನ ನಡೆಯುತ್ತಾ ಅನ್ನುವ ಸಂಶಯ ಬಂದಿತ್ತು, ಹೆಸರಿಗೆ ಹಣಕಾಸಿನ ಸಮಿತಿ ಇತ್ತು ಆದರೆ  ಯಾರಿಂದಲೂ ಆರ್ಥಿಕ ಸಹಾಯ ಬರಲಿಲ್ಲ. ಯಾರನ್ನು ಕೇಳಬೇಕು ಅನ್ನುವುದು  ಸಹ ಸರಿಯಾಗಿ ಗೊತ್ತಿರಲಿಲ್ಲ. ಈ ಸಂದರ್ಭದಲ್ಲಿ ಕನ್ನಡ ಬಳಗದ ಸದಸ್ಯ ದಿವಂಗತ ಶ್ರೀ ವಿಶ್ವೇಶ್ವರಯ್ಯ ಮಾಡಿದ ಸಹಾಯ ಮರೆಯುಬಾರದು. ಇವರು V.W. Car ಕಂಪನಿ ಮಿಲ್ಟನ್ ಕಿನ್ಸ್  ನಲ್ಲಿ ಕೆಲಸದಲ್ಲಿದ್ದರು, ನಮ್ಮ ಪರಿಸ್ಥಿತಿ ಕೇಳಿ ಅವರ ಕಂಪನಿ ಇಂದ ಸಹಾಯ ಸಿಗಬಹುದು ಎಂದು ಭರವಸೆ ಕೊಟ್ಟು ಸಮ್ಮೇಳನದ ಬಗ್ಗೆ  Presentation ಮಾಡಿ ಅಂತ ಸಲಹೆ ಕೊಟ್ಟರು. ಈಗಿನ ಹಾಗೆ Power Point ಇರಲಿಲ್ಲ. ಮುಖ್ಯವಾದ ಅಂಶಗಳನ್ನು ಆ ಕಂಪನಿಯ ಮುಖ್ಯಸ್ಥರ ಮುಂದೆ ಭಾನುಮತಿ ಅವರು ಮತ್ತು ನಾನು  ಇಟ್ಟು  ೩೦೦೦ ಪೌಂಡ್ ಗಳಸ್ಟು ಸಹಾಯ ಬೇಕು ಅಂತ ಮನವಿ ಮಾಡಿಕೊಂಡವಿ. ನಾವು ಕೈಗೊಂಡ ಕಾರ್ಯ ಯಶಸ್ವಿ ಆಗಲಿ ಅಂತ ಹಾರೈಸಿ ೨೦೦೦ ಪೌಂಡುಗಳ ಸಹಾಯ ಮಾಡುತ್ತೇವೆ ಅಂತ  ಆ ಕಂಪನಿಯ ಮುಖ್ಯಸ್ಥರು ಭರವಸೆ ಕೊಟ್ಟರು. ಇದು ನಮ್ಮ ಬಳಗದ ಮೊದಲೆಯ Commercial Sponsorship ! ಮುಂದೆ NW Arts ಮತ್ತು ಬಿಸಿಸಿಐ ಇಂತಹ ಸಂಸ್ಥೆಗಳಿಂದ ಸ್ವಲ್ಪ ಸಹಾಯ ಬಂತು.

ಕರ್ನಾಟಕ ಸರ್ಕಾರದಿಂದ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಡಾ. ಕೃಷ್ಣಮೂರ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಯ ನಿರ್ದೇಶಕರಾಗಿದ್ದ ಶ್ರೀ ವಿಠ್ಠಲಮೂರ್ತಿ  ತಂದಿದ್ದರು. ಆದರೆ ಇದು ಕಸ್ಟಮ್ ನಲ್ಲಿ ಹಿಡಿದು ಸುಮಾರು ೨೦೦೦೦ ಪೌಂಡ್ ಮೇಲೆ VAT ಕೊಡದಿದ್ದರೆ ಈ ವಸ್ತುಗಳನ್ನು ಬಿಡುವುದಿಲ್ಲ ಎಂದು ಬೆದರಿಸಿದರು, ಆಗ ಡಾ. ಅಪ್ಪಾಜಿ ಗೌಡರು  ಅಧಿಕಾರಿಗಳನ್ನು ಕಂಡು ತಮ್ಮ ವೈಯಕ್ತಿಕ  ಗ್ಯಾರಂಟಿ ಕೊಟ್ಟು ಈ ಸಾಮಾನುಗಳನ್ನು ಬಿಡಿಸಿ UMIST ಗೆ ತಂದರು. ಈ ತರಹ ಸನ್ನಿವೇಶಗಳು ಬಹಳ ನಡೆಯಿತು. ನಮಗ್ಯಾರಿಗೂ ಇಷ್ಟು ದೊಡ್ಡ ಸಮಾರಂಭ ನಡೆಸಿದ್ದ ಅನುಭವ ಇರಲಿಲ್ಲ. ಆದರೆ ಇದು ನಮಗೆಲ್ಲ ಒಂದು unique experience ಅಂತ ಹೇಳಿದರೆ ಏನೂ ತಪ್ಪಿಲ್ಲ.

UMIST ನ ವಿದ್ಯಾರ್ಥಿ ಕೊಠಡಿಗಳು ಮತ್ತು ಹತ್ತಿರದ ಹೋಟೆಲ್ ಗಳಲ್ಲಿ ಹೊರನಾಡಿನಿಂದ ಬಂದವರಿಗೆ ಮತ್ತು ನಮ್ಮ ಸದಸ್ಯರಿಗೆ ಉಳಿಯುವುದಕ್ಕೆ ಏರ್ಪಾಡಾಗಿತ್ತು,   ಕೆಲವು ರಾಜಕಾರಣಿಗಳು ವಿದೇಶಕ್ಕೆ ಬರುವುದು ಅವರ ವೈಯಕ್ತಿಕ ಕಾರಣಗೋಸ್ಕರ  ಅಂತ ಕಾಣಿಸುತ್ತೆ. ಮುಖ್ಯ ಮಂತ್ರಿಗಳು ಸಮ್ಮೇಳನವನ್ನು ಉದ್ಘಾಟಿಸಿ ಅವತ್ತೇ ಲೇಕ್ ಡಿಸ್ಟ್ರಿಕ್ಟ್ ಗೆ ಹೊರಟರು !! ಅವತ್ತು ಸಾಯಂಕಾಲ ಅವರಿಂದ ಭಾಷಣವು ಇರಬೇಕಿತ್ತು  ಆದರೆ ಅವರ ಅಜೆಂಡಾ ಬೇರೆ ಇತ್ತು ಅಂತ ಕಾಣತ್ತೆ,

ಅಮೇರಿಕ, ಯೂರೋಪ್ ಮತ್ತು ಭಾರತದಿಂದ ಅನೇಕರು ಭಾಗವಿಸಿದ್ದರು . ಕರ್ನಾಟಕದಿಂದ ಶ್ರೀ ಶಿವರಾಮ ಕಾರಂತರು . ಜಸ್ಟಿಸ್ ನಿಟ್ಟೂರು ಶ್ರೀನಿವಾಸ ರಾಯರು, ಮುಖ್ಯಮಂತ್ರಿ ಚಂದ್ರು, ಸಿ ಅಶ್ವಥ್, ಜಿ ಆರ್ ವಿಶ್ವನಾಥ್,

ಬಿ ಕೆ ಯಸ್  ಅಯಂಗಾರ್, ಶಂಕರ್ ನಾಗ್, ನಟ ಶ್ರೀನಾಥ್ ಮುಂತಾದವರು ೬೦ ಮಂದಿ, ೩೦ ಜನ ಅಮೆರಿಕದಿಂದ ಮತ್ತು ಮೂವರು  ಯೂರೋಪ್ ನಿಂದ ಮತ್ತು ನಮ್ಮ ಬಳಗದ ಸದ್ಯಸ್ಯರು ಸೇರಿ  ಸುಮಾರು ೫೦೦ ಜನರು ಭಾಗವಹಿಸಿದ್ದರು

ಕಾರಂತರ ಮತ್ತು ಎಂ. ಪಿ .ಪ್ರಕಾಶ್ ಅವರ ಭಾಷಣಗಳು  ಶಂಕರ್ ನಾಗ್  ಮತ್ತು ಶ್ರೀನಾಥ್ ತಂಡದವರಿಂದ ನಗೆ ನಾಟಕ, ಬೆಂಗಳೂರಿನ ಸರಳಯ್ಯ ಸಹೋದರಿಯರ ಸಂಗೀತ ಮತ್ತು ಕನ್ನಡ ಬಳಗದ ಸದಸ್ಯರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಮನೋರಂಜಿಸಿತು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಶಿವರಾಂ ಕಾರಂತರು ಬಿಡುಗಡೆ ಮಾಡಿದರು.ಈ ಸಮ್ಮೇಳನ ನಮ್ಮ ಕನ್ನಡ ಬಳಗದ ಮುಂದಿನ ಬೆಳವಣಿಗೆಗೆ ಅಡಿಪಾಯ ಹಾಕಿ ಇಲ್ಲಿನ ಕನ್ನಡದವರನ್ನು ಒಂದುಗೂಡಿದ್ದು ಮಾತ್ರ ಅಲ್ಲ, ಬೇರೆ ದೇಶದಲ್ಲೂ ಕನ್ನಡ ಸಂಸ್ಕೃತಿ ಬೆಳೆಯಲು ಸಹಕಾರಿಯಾಯ್ತು.

ಈ ಸಮ್ಮೇಳನದ ಬಗ್ಗೆ ಕರ್ನಾಟಕದಲ್ಲಿ ರೇಡಿಯೋ, ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಚಾರವಾಗಿ ಕನ್ನಡ ಬಳಗ ಯು.ಕೆ. ಹೆಸರು ಪ್ರಸಿದ್ಧವಾಯಿತು ಇಂತಹ ಸಮ್ಮೇಳನ ಹೊರದೇಶದಲ್ಲಿ ನಡದಿದ್ದು ಇಲ್ಲೇ ನಮ್ಮ ಕನ್ನಡ ಬಳಗದ ಆಶ್ರದಲ್ಲಿ ಎಂದು ಇಂದು ಹೆಮ್ಮೆಯಿಂದ ಹೇಳಬಹುದು. ಆದರೆ ಈಗ ಅಮೇರಿಕಾದ ಅಕ್ಕ ಸಂಸ್ಥೆ  ಹೆಚ್ಚಿನ ಹೆಸರನ್ನು ಪಡೆ್ದಿದೆ..

೧೯೯೭ರಲ್ಲಿ  ಐಲ್ ಆಫ್ ವೈಟ್ ನಲ್ಲಿ ೨ ದಿನದ ವಿಶೇಷ ಸಮ್ಮೇಳನ  ನಮ್ಮ ಸದ್ಯಸರಿಂದ  ಬಹಳ ಮನ್ನಣೆ ಪಡೆಯಿತು. ಬಳಗದ ಅಜೀವ ಸದಸ್ಯ  ಡಾ. ಪ್ರಬಾಕರ ರೆಡ್ಡಿ ಆಗ ಅಲ್ಲಿ ನೆಲಸಿದ್ದರು ಅವರ ಸಹಾಯದಿಂದ  ಈ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕನ್ನಡ ನಗೆ ನಾಟಕ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳು ಮತ್ತು ಆ ವರ್ಷದ ವಾರ್ಶಿಕ ಸಭೆ ಅಲ್ಲಿ ನಡೆಯಿತು

ಕನ್ನಡ ಬಳಗದ ಮೈಲು ಗಲ್ಲುಗಳು

೨೦೦೦ ಸಹಸ್ರಾಬ್ದಿ ಸಮ್ಮೇಳನ – ಆಗಸ್ಟ್ ೨೫/೨೬/೨೭

ಈ ಸಮ್ಮೇಳನ ಉದ್ದೇಶ, “Working to bring together two generations and two cultures “ಅಕ್ಷರ, ಅರೋಗ್ಯ ಮತ್ತು ಆಚರಣೆ.

ಮೊದಲನೆಯದು, ಎರಡು ತಲೆಮಾರು ಮತ್ತು ಎರಡು ಸಂಸ್ಕ್ರತಿಗಳ ಸಮನ್ವಯ ವನ್ನು ರೂಪುಗೊಳಿಸುವುದು.

ಎರಡೆನೆಯದು, ಕರ್ನಾಟಕದ ಸ್ತ್ರೀ ಸಮಾಜಕ್ಕೆ ವಿದ್ಯಾಭ್ಯಾಸ ಸಹಾಯ, ಪಾವಗಡದ ಸ್ವಾಮಿ ವಿವೇಕಾನಂದ ಅರೋಗ್ಯ ಕೇಂದ್ರಕ್ಕೆ Ambulance ಯೋಜನೆಗೆ ಹಣ ಸಹಾಯ ಮತ್ತು ಸಹಸ್ರಾಬ್ಡಿ ಆಚರಣೆ.

೨೦೦೦ ನಲ್ಲಿ ಚೆಶೈರನ ವಾರ್ನರ್ ಸಂಸ್ಥೆಯ  ಅಲ್ವಿಸ್ಟನ್ ಹಾಲ್ ನಲ್ಲಿ ಸಹಸ್ರಾಬ್ಡಿ ಸಮ್ಮೇಳನ ಆಗಸ್ಟ್ ೨೫-೨೮ ಭಾನುಮತಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿಸಿತು . ಕರ್ನಾಟಕ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಶ್ರೀ ಕೆ ಸಿ ರಾಮಮೂರ್ತಿ ಅನೇಕ ಕಲಾವಿದರ ಜೊತೆಯಲ್ಲಿ ಬಂದು ನಮ್ಮ ಕಾರ್ಯಕ್ರವವನ್ನು ನಡೆಸಿಕೊಟ್ಟರು.

ಕರ್ನಾಟಕ ಸರ್ಕಾರದ ಸಚಿವೆ ಶೀಮತಿ ರಾಣಿ ಸತೀಶ್ , ಶ್ರೀ ಯು ಆರ್ ಅನಂತಮೂರ್ತಿ, ಪ್ರೊ ಆ ರಾ ಮಿತ್ರ, ಸಂಗೀತ ಕುಲ್ಕರ್ಣಿ, ರಮೇಶ್ ಅರವಿಂದ್, ಹಾಸ್ಯಗಾರ ಎಂ ಯಸ್ ನರಸಿಂಹಮೂರ್ತಿ, ಸರಕಾರದ ಹಿರಿಯ ಅಧಿಕಾರಿ ಐಮ್ ವಿಠ್ಠಲಮೂರ್ತಿ, ಶತಾವಧಾನಿ ಡಾ ಗಣೇಶ್ ಮತ್ತು ಬಿ ಕೆ ಯಸ್ ವರ್ಮಾ, ಯಕ್ಷಗಾನ ಕಲಾವಿದರು , ಪದ್ಮಶ್ರೀ ಚಿಂದೋಡಿ ಲೀಲ ಮತ್ತು ಡೊಳ್ಳು ಕುಣಿತದ ತಂಡ, ಈ ೪೦ ಗಣ್ಯರು ನಮ್ಮ ಅತಿಥಿಗಳಾಗಿ ಮೂರು ದಿನಗಳು ಕಳೆದಿದ್ದು ಮರೆಯುವ ಹಾಗೆ ಇಲ್ಲ.ಅನೇಕ ವಿವಿಧ ಕಾರ್ಯಕ್ರಮಗಳು ಮತ್ತು ನಮ್ಮ ಯುವ ಸದಸ್ಯರಿಂದ ಅದ್ಭುತವಾದ Fashion Show ಎಲ್ಲರ ಮನ ಸೂರೆಗೊಂಡಿತು.

೨೦೦೩ ರಲ್ಲಿ ಕನ್ನಡ ಬಳಗದ ೨೦ನೇ ವಾರ್ಷಿಕೋತ್ಸವ ಅಲ್ಟ್ರಿಚಾಮ್ ಚೆಶೈರ್ ನಲ್ಲಿ ನವಂಬರ್ ೧ -೨ ವಿಜೃಂಭಣೆಯಿಂದ  ಎರಡು ದಿನಗಳು ನಡೆದವು  ಕರ್ನಾಟಕದಿಂದ ಪ್ರೊ ಆ. ರಾ . ಮಿತ್ರ,  . ಪ್ರೊ ಕೃಷ್ಣೇಗೌಡ ಮತ್ತು ಪ್ರೊ. ಅರಳುಮಲ್ಲಿಗೆ ಪಾರ್ಥಸಾರಥಿ ಮುಖ್ಯ ಅಥಿತಿಗಳಾಗಿ ಬಂದಿದ್ದರು.

ಬಳಗದ ರಜತ ಮಹೋತ್ಸವ

ಆದರೆ ೨೦೦೮ ಆಗಸ್ಟ್ ೨೨-೨೫ ಕನ್ನಡ ಬಳಗದ ರಜತ ಮಹೋತ್ಸವ ಅಲ್ವಿಸ್ಟನ್ ಹಾಲ್ ನಲ್ಲಿ ನಡೆದಿದ್ದು ಮರೆಯುವಹಾಗೆ ಇಲ್ಲ. ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಹುಮ್ಮಸ್ಸು ಮತ್ತೆ ನಮ್ಮ ಸದಸ್ಯರಿಗೆ ಬಂದು ಬಹಳ ಅದ್ದೂರಿಯಿಂದ ಆಚರಿಸಲು ಮುಂದೆಬಂದು ದುಡಿದರು.

ಕರ್ನಾಟಕದಿಂದ, ಶ್ರೀ ವಿಠ್ಠಲಮೂರ್ತಿ ಅವರ ನೇತೃತ್ವದಲ್ಲಿ  ಪ್ರೊ ನಿಸಾರ್ ಅಹ್ಮದ್, ಜಯಂತ್ ಕಾಯ್ಕಿಣಿ, ಪ್ರೊ. ಕೃಷೆಗೌಡ, “ರವಿ”(ಕೆ .ಎಲ್. ಎಲ್. ಸ್ವಾಮಿ ) ಸಂಗೀತ ಕುಲ್ಕರ್ಣಿ ಶಂಕರ್ ಶಾನಭೋಗ್ ಮತ್ತು ಅಮೇರಿಕ ದಿಂದ ಕೆಲವು ಕಲಾವಿದರು ಸಹ ಈ ಸಮಾರಂಭದಲ್ಲಿ ಭಾಗವಹಿದ್ದರು್.ಅಧ್ಯಕ್ಷೆ   ಡಾ  ಭಾನುಮತಿ ಬಂದಿದ್ದ ಗಣ್ಯರನ್ನು ಸ್ವಾಗತಿಸಿ  ಕನ್ನಡ ಬಳಗದ ೨೫ ವರ್ಷದ ಬೆಳವಣಿಗೆಯನ್ನು ತಿಳಿಸಿದರು.

ನಮ್ಮ ನಾಡಿನ ಪ್ರಸಿದ್ಧ ಕವಿ ಪ್ರೊ. ನಿಸಾರ್ ಅಹ್ಮದ್ ಅವರಿಗೆ ಕನ್ನಡ ಬಳಗದಿಂದ ಭಿನ್ನವತ್ತಳೆ ಅರ್ಪಿಸಲಾಯಿತು.  ಈ ಸಮಾರಂಭದಲ್ಲಿ ರಜತ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

 

೨೦೧೦ ಮೊದಲನೆಯ ಯುವ ಕನ್ನಡಿಗರ ಮೇಳ ಕಿಂಗ್ಸ್ ಹಾಲ್ ಸ್ಟೋಕ್ ಆನ್ ಟ್ರೆಂಟ್ ನಲ್ಲಿ ಎರಡು ದಿನಗಳ ನಡೆದ ವಿಶೇಷ ಕಾರ್ಯಕ್ರಮಕ್ಕೆ ಅನೇಕ ಎರಡನೇ ಪೀಳಿಗೆಯ ಜನಾಂಗದವರು ಭಾಗವಹಿದ್ದರು.

 ಬಳಗದ ೩೦ ನೇ ವಾರ್ಷಿಕೋತ್ಸವ 

೨೦೧೩ ಕನ್ನಡ ಬಳಗದ ೩೦ ನೇ ಹುಟ್ಟಿದ ಹಬ್ಬವನ್ನು ಆಚರಿಸಲು ಸ್ಟೋಕ್ ಆನ್ ಟ್ರೆಂಟ್ ನಲ್ಲಿರುವ ಕಿಂಗ್ಸ್ ಹಾಲ್ ನಲ್ಲಿ ಮೇ ೨೫-೨೬ ಎರಡು ದಿನಗಳ ಆಚರಣೆ. ನಮ್ಮ ಮುಖ್ಯ ಅಥಿತಿಗಳು ಶ್ರೀಮಾನ್  ಎಸ್ ಎಲ್ ಭೈರಪ್ಪ ನವರು, ಮುಖ್ಯಮಂತ್ರಿ ಚಂದ್ರು  ಮತ್ತು ಪ್ರೊ ಕೃಷ್ಣೆ ಗೌಡರು.  ಇವರಲ್ಲದೆ ಪ್ರಸಿದ್ಧ ಗಾಯನ ಪಟುಗಳಾದ ಅರ್ಚನಾ ಉಡುಪ ಮತ್ತು ಸಂಗೀತ ಸಂಯೋಜಕ  ಪ್ರವೀಣ್ ಡಿ ರಾವ್. ರಂಗ ಭೂಮಿಯ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್. ಜಾನಪದ ಗೀತೆ ಹಾಡುವ ಬಸವಲಿಂಗಯ್ಯ ಮುಂತಾದ ಕಲಾವಿದರು ನಮ್ಮೊಡನೆ ಎರಡು ದಿನಗಳು ಕಳೆದಿದ್ದು ಮರೆಯುಲು ಸಾಧ್ಯವಿಲ್ಲ

ಚೆಸ್ಟರ್ ಫೀಲ್ಡ್ ನಲ್ಲಿ ೧೮/೧೦/೨೦೧೪ ನಲ್ಲಿ ನಡೆದ ದೀಪಾವಳಿ ಹಬ್ಬ ಮಾತ್ರ ಅಲ್ಲ KSSVV (ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ವಿಚಾರ ವೇದಿಕೆ )  ಪ್ರಾರಂಭ. ನಮ್ಮ ಮುಖ್ಯ ಅಥಿತಿಗಳಾಗಿ ಬಂದಿದ್ದ ಶ್ರೀ ವೆಂಕಟೇಶಮೂರ್ತಿ ಅವರಿಂದ “ಅನಿವಾಸಿ “ಉದ್ಘಾಟನೆ  ಆಯಿತು.  ಪ್ರತಿ ಶುಕ್ರವಾರ ಪ್ರಕಟ ವಾಗುವ ಅನಿವಾಸಿಯನ್ನು ಪ್ರತಿವಾರ  ಓದಬಹುದು. (www.anivaasi.com )

ನಮ್ಮ ಬಳಗದ ಯುಗಾದಿ ಮತ್ತು ದೀಪಾವಳಿ ಹಬ್ಬಗಳನ್ನು ದೇಶದ ನಾನಾ ಕಡೆ ಆಚರಿಸಿದೆ, ಸ್ಕ್ಯಾಟ್ಲ್ಯಾಂಡ್ , ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಯೂ ಸೇರಿದಂತೆ.

೩೬ ವರ್ಷದ ನಂತರವೋ ನಮ್ಮ ಸದಸ್ಯರು ಉತ್ಸಾಹದಿಂದ ಎಲ್ಲೇ ಈ ಆಚರಣೆಗಳಾದರೂ ಉತ್ಸಾಹದಿಂದ ಬಂದು ಭಾಗವಹಿಸುತ್ತಾರೆ ಅನ್ನುವುದು ತುಂಬಾ ಹೆಮ್ಮೆಯ ವಿಚಾರ. ಆದರೆ ಈ ದೇಶದಲ್ಲೆ ಹುಟ್ಟಿ ಬೆಳದ ಎರಡನೇ ಪೀಳೆಗೆಯ ಯವರು ಮುಂದೆ ಬಂದು ಪ್ರೋತ್ಸಾಹ ಮಾಡುವುದು ಅಪರೂಪ ಅನ್ನುವುದು ಒಂದು ವಿಷಾದವಾದ ಸಂಗತಿ. ಕರ್ನಾಟಕದಿಂದ ಇತ್ತೀಚಿಗೆ ಬಂದವರು ಹೆಚ್ಚಾದ ಸಂಖ್ಯೆಯಲ್ಲಿ ಬರುತ್ತಾರೆ ನಮ್ಮ ಬಳಗದ ಮುಂದಿನ ಬೆಳವಣಿಗೆ ಇವರ ಮೇಲಿದೆ .

ಈ ದೇಶದಲ್ಲಿ ಈಗ ಸುಮಾರು ೨೦,೦೦೦ಕ್ಕೂ ಹೆಚ್ಚು ಕನ್ನಡ ಮಾತನಾಡುವವರು ನೆಲಸಿದ್ದಾರೆ ಮತ್ತು ಅನೇಕ ಕನ್ನಡ ಸಂಸ್ಥೆಗಳು ಇಲ್ಲಿ ಪ್ರಾರಂಭವಾಗಿದೆ, ಅನೇಕ ಸಂಸ್ಥೆಗಳು ಕನ್ನಡ ಕಲಿ ಯೋಜನೆಯನ್ನು ನಡೆಸುತ್ತಿರುವುದು ಹೆಮ್ಮಯ ಸಂಗತಿ

ಕನ್ನಡ ಬಳಗ ಹಿರಿಯ ಸಂಸ್ಥೆ ಆಗಿರುವುದಿಂದ ಕನ್ನಡ  ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹೊಣೆ ನಮ್ಮದು.

ಅಮೆರಿಕದಲ್ಲಿರುವ ಹಾಗೆ (ಅಕ್ಕ ಸಂಸ್ಥೆ ) ಇಲ್ಲೀಯೂ ಸಹ ಅದೇ ರೀತಿ ಒಂದು ಸಂಸ್ಥೆ ಯನ್ನು ಮಾಡುವುದಕ್ಕೆ ಕನ್ನಡಬಳಗದ  ನಾಯಕತ್ವ ಮತ್ತು ಬೆಂಬಲದ ಅಗತ್ಯವಿದೆ.

                                                                        _ ರಾಮಮೂರ್ತಿ, ಬೇಸಿಂಗ್ ಸ್ಟೋಕ್

19 thoughts on “ಕನ್ನಡ ಬಳಗದ ಹುಟ್ಟು ಮತ್ತು ಬೆಳವಣಿಗೆ-ರಾಮಮೂರ್ತಿ

  1. ಇನ್ನೊಂದು ಸಣ್ಣ ವಿವರಣೆ; ಪ್ರೊ ಕೃಷ್ಣೆ ಗೌಡ ಮತ್ತು ಡುಂಡಿರಾಜ್ ಮೂಲತಃ ಸಾಹಿತಿಗಳು ಅದರಜೊತೆಗೆ ಹಾಸ್ಯ ಪಟುಗಳು ಕೂಡ. ಅವರು ಕನ್ನಡ ಬಳಗಕ್ಕೆ ಅತಿಥಿಗಳಾಗಿ ಬಂದದ್ದು ನಮಗೆ ಬೋನಸ್ ಎನ್ನಬಹುದು. ಜನರನ್ನು ರಂಜಿಸುವುದಲ್ಲದೆ ಸಾಹಿತ್ಯದ ಬಗ್ಗೆ ಮಾತನಾಡುವ ಸಾಮರ್ಥ್ಯ ಉಳ್ಳವರು ಎನ್ನಬಹುದು

    Like

  2. ‘ಅನಿವಾಸಿ’ ನಡೆದು ಬಂದ ದಾರಿಯನ್ನು ನಮ್ಮಲ್ಲಿನ ಕೆಲವರು ಇತ್ತೀಚಿಗಷ್ಟೇ ದಾಖಲಿಸಿದ್ದು ಈಗ ಕನ್ನಡ ಬಳಗದ ಮಾಜಿ ಅಧ್ಯಕ್ಷರೂ, ಹಿರಿಯ ಸದಸ್ಯ ಹಾಗೂ ಹಿತೈಷಿಗಳಾದ ರಾಮಮೂರ್ತಿಯವರು ಕನ್ನಡ ಬಳಗ ನಡೆದು ಬಂದ ದಾರಿಯನ್ನು ತಮ್ಮ ನೆನಪಿನಾಳದಿಂದ ತೆಗೆದು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನನ್ನನ್ನೂ ಒಳಗೊಂಡ ಕೆಲವು ಕಿರಿಯ ಸದಸ್ಯರಿಗೆ ಒಂದು ವಿಹಂಗಮ ನೋಟವನ್ನು ಒದಗಿಸಿದ್ದಾರೆ. ನಾನು ಕನ್ನಡ ಬಳಗದಲ್ಲಿ ಸಕ್ರಿಯವಾಗಿ ಭಾಗವಹಿಸುವುದಕ್ಕೆ ಮೊದಲುಗೊಂಡಿರುವುದು ಕಳೆದ ಹತ್ತು ವರ್ಷಗಳಿಂದಷ್ಟೆ. ನಾನು ಗಮನಿಸಿದಂತೆ ಅವರು ಬಹುಪಾಲು ಕನ್ನಡ ಬಳಗದ ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದಾರೆ. ಹಾಗೆ ಸರ್ವಸದಸ್ಯರ ಸಭೆಯಲ್ಲಿ ಬಳಗದ ಸಂವಿಧಾನ ಕಾರ್ಯಾಚರಣೆ, ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಸಲಹೆ ಸೂಚನೆ (ಕೆಲವೊಮ್ಮೆ ಟೀಕೆ ) ಗಳೊಂದಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಮೂರ್ತಿಯವರು ಈ ಲೇಖನ ಬರೆದಿರುವುದು ಸೂಕ್ತವಾಗಿದೆ.
    ಕನ್ನಡ ಬಳಗದಲ್ಲಿ ಸಾಹಿತ್ಯದ ಕಾರ್ಯಕ್ರಮವನ್ನು ಒದಗಿಸಬೇಕೆಂಬ ಅವರ ವಿಶೇಷ ಹಂಬಲವನ್ನು ನಾನು ಮತ್ತು ಇತರ ಸಾಹಿತ್ಯಾಸಕ್ತರು ಮೆಚ್ಚಿದ್ದೇವೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಲು ರಾಮಮೂರ್ತಿ, ಮಾಜಿ ಅಧ್ಯಕ್ಷೆ ಭಾನುಮತಿ ಮತ್ತು ಇತರ ಹಿರಿಯ ಸದಸ್ಯರು ತೋರಿರುವ ಆಸಕ್ತಿ ಕಾಳಜಿಗಳನ್ನೂ ಈ ಬರವಣಿಗೆಯಲ್ಲಿ ಕಾಣಬಹುದು.
    ಇಂಗ್ಲೆಂಡಿನಲ್ಲಿ ಹಲವಾರು ಕನ್ನಡ ಸಂಘಗಳು ಹುಟ್ಟಿಕೊಂಡು ಕನ್ನಡ ಬಳಗದ ಹೊರಗೆ ಉಳಿದುಕೊಂಡು ಪ್ರಾದೇಶಿಕ ಸಂಘಗಳಾಗಿ ಉಳಿದಿವೆ. ಇದರ ಪರಿಣಾಮವಾಗಿ ಕನ್ನಡ ಬಳಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಬೇಕಾಗಿದೆ. ಈ ಸಂಘಗಳು ಆಂತರಿಕ ಪೈಪೋಟಿ ಮತ್ತು ಸವಾಲುಗಳನ್ನು ತಂದಿದೆ. ಕಾರ್ಯಕ್ರಮದ ಯಶಸ್ಸನ್ನು ಹಾಜರಿರುವ ಜನಬಲದಿಂದ ಅಳೆಯುವ ಈ ಕಾಲದಲ್ಲಿ ಹೆಚ್ಚು ಜನರನ್ನು ಆಕರ್ಷಿಸುವ ಉದ್ದೇಶದಿಂದ ಸಿನಿಮಾ ಕಲಾವಿದರಿಗೆ ಮತ್ತು ಹಾಸ್ಯಪಟುಗಳಿಗೆ ಹೆಚ್ಚಿನ ಆದ್ಯತೆ ಮತ್ತು ಆಹ್ವಾನ ನೀಡಲಾಗುತ್ತಿದೆ. ಹರಿದು ಹಂಚಿಹೋಗಿರುವ ಕನ್ನಡಿಗರಿಂದಾಗಿ ನಮ್ಮ ಆರ್ಥಿಕ ಬಲವು ಕುಗ್ಗಿದೆ ಎನ್ನಬಹುದು. ಹೀಗಾಗಿ ಬಳಗದ ಹಿಂದಿನ ಎರಡು ಮೂರುದಿನಗಳ ವೈಭವದ ಆಚರಣೆ ಈಗ ನಮ್ಮ ಸ್ಮರಣ ಸಂಚಿಕೆಯೆಲ್ಲಷ್ಟೇ ಕಾಣಬಹುದು.
    ಸಾಮಾನ್ಯರಿಗೆ ಮನೋರಂಜನೆ ಒದಗಿಸಲು ಸಿನಿಮಾ ಕಲಾವಿದರ ಮತ್ತು ಹಾಸ್ಯದ ಅಗತ್ಯವಿರಬಹುದು. ಅದರ ಜೊತೆಗೆ ಕನ್ನಡ ಬಳಗ ನಮ್ಮ ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಒದಗಿಸಿ ಹಾಗೆ ಸಾಹಿತ್ಯದಲ್ಲಿ ಸಾಮಾನ್ಯರಿಗೆ ಆಸಕ್ತಿಯನ್ನು ಬೆಳೆಸುವ ಪ್ರಯತ್ನ ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಯು ಕೆ ಕನ್ನಡ ಸಂಘವು ಇತರ ಸಂಘಗಳಿಗಿಂತ ಭಿನ್ನವಾಗಿದೆ ಎನ್ನಬಹುದು . ಬಳಗದ ಸಾಹಿತ್ಯ ಅಂಗ ‘ಅನಿವಾಸಿ’ ಇದಕ್ಕ ಪೂರಕವಾಗಿ ಸಾಕಷ್ಟು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
    ಈ ಒಂದು ಶೈಕ್ಷಣಿಕ ಉದ್ದೇಶವನ್ನು ಇತರ ಆರ್ಥಿಕ ಮತ್ತು ಮೇಲೆ ಪ್ರಸ್ತಾಪ ಮಾಡಿದ ಕಾರಣಗಳಿಂದ ಕೈ ಬಿಡಬಾರದೆಂದು ನಾನು ಸದರಿ ಕಾರ್ಯಕಾರಿ ಸಮಿತಿಗೆ ವಿನಂತಿಸಿಕೊಳ್ಳುತ್ತೇನೆ. ‘ಅನಿವಾಸಿ’ ಸದ್ಸ್ಯರು ಈ ನನ್ನ ಆಶಯವನ್ನು ಬೆಂಬಲಿಸುತ್ತಾರೆಂಬ ವಿಶ್ವಾಸ ನನಗಿದೆ.
    ಕನ್ನಡ ಬಳಗ ಯುಕೆಯಾ ಎಲ್ಲ ಮೂಲೆಗಳನ್ನು ತಲುಪಬೇಕಾಗಿದೆ. ಇದಕ್ಕೆ ನಮ್ಮ ಕರ್ನಾಟಕದ ಸಾಹಿತ್ಯಪರಿಷತ್ತಿನ ಮಾದರಿಯನ್ನು ಗಮನಿಸಬಹುದು. ಕನ್ನಡ ಬಳಗ ಸ್ಕಾಟ್ ಲ್ಯಾಂಡ್ ಮತ್ತು ಐರ್ಲೆಂಡ್ ಗಳಲ್ಲಿ ಸಾಮಾರಂಭ ನಡೆಸಬೇಕು. ಲಾಭ ನಷ್ಟಗಳ ಪರಿಮಿತಿ ಕಾರಣಗಳಿಂದ ಅಲ್ಲಿಯ ಕನ್ನಡಿಗರನ್ನು ಕೈಬಿಡಬಾರದು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ.

    Liked by 1 person

  3. Dear Ramamurthy,
    We congratulate you wholeheartedly for your wonderful, explicit heart touching article about KBUK. You have touched each and every aspect of all functions right from the inception. Hats off to you.
    Just one additional landmark that needs to be included in our humble opinion, please. We had a very successful music concert by Bharat Ratna Late PT. Bhimsen Joshi under the banner of KBUK at Nottingham on 14 October 1990. We felicitated him and gladly he honored KBUK by becoming a Life Member and he said he was very proud to be a Life Member of KBUK.
    Please correct Mrs.Vijaya Anikhindi in the first EC members list.
    These are our few observations. We hope you won’t mind about this.

    Your article will help to bring many more Kannadigas to join KBUK. We are optimistic to see KBUK grow from strength to strength to lead all Kannada Organisations in the entire world as the only, largest, trusted, Charitable Kannada Organisation.
    Thanks

    Sneha Kulkarni
    Aravind Kulkarni

    Like

    • Ramamurthy replies as below,
      Arvind
      many thanks
      i had not thought of this music programme. Gadadhar wants Scotland and Ireland events to be included l can update my article after receiving some input. it will go online and also in Sandesha.
      Ramamurthy

      Like

  4. ಕನ್ನಡ ಬಳಗವನ್ನು ಕಟ್ಟಿದ ಬಗೆ ಮತ್ತು ಬೆಳೆದ ರೀತಿಯನ್ನು ಸುಂದರವಾಗಿ ಕಟ್ಟಿ ಹಾಕಿ ಇತಿಹಾಸವನ್ನು ದಾಖಲಿಸಿದ್ದಾರೆ. ರಾಮಮೂರ್ತಿಯವರಿಗೆ ಮತ್ತು ಪ್ರೇಮಲತಾ ಅವರಿಗೆ ಧನ್ಯವಾದಗಳು.

    ಕೇಶವ

    Like

  5. A good chronicle of the organisation started by a few which has grown in stature over the years. Among the various events, I wish to add two events , which in a way, could be considered as milestones in the history of KB.
    1. The Befast event organised by Dr Jayaprakash in 2005.The host team led by Dr Jayaprakash did a humongous amount of work for this two day event with cultural programmes on day one and a sight seeing tour on day two. As far as I know this was the first and only KB event in Ireland.
    2. The Scottish event in 2006. Again this was a two day event with cultural programmes on day one and a brief tour of Scotland on day two. It was a matter of acute embarrassment to us that in 24 years of KB no event was held in Scotland and so, every effort was made for the success of this event. We were able to get a grant of £5000 from Awards For All which enabled us to make a healthy surplus which we donated to charity. I cannot see another KB event ever being held in Scotland.

    Liked by 1 person

    • Gadadhar, Unfortunately I do not have any photos or reports of these two events. Whilst I have a copy of printed invitation of most events of KB, for some reason these two are not with me. In fact I phoned Dr Desai to confirm the date and venue for your event, hence only a passing reference in my article. As this report is to be published in Sandesha and also KB website, please send me your input to be included. Have you any photos?

      Like

  6. ಆತ್ಶ್ರೀಯರಾದ ಶ್ರೀ ರಾಮಮೂರ್ತಿ ಅವರು ‘ಅನಿವಾಸಿ’ಯಲ್ಲಿ ಬರೆದ ‘ಅರವತ್ತರ ದಶಕದಲ್ಲಿ ಇಂಗ್ಲೆಂಡ್ ಕನ್ನಡಿಗನ ಬದುಕು’ ಮತ್ತು ‘ಕನ್ನಡ ಬಳಗದ ಹುಟ್ಟು ಮತ್ತು ಬೆಳವಣಿಗೆ’ ಎರಡು ಲೇಖನಗಳನ್ನೂ ಆಸಕ್ತಿ, ಕುತೂಹಲ ಮತ್ತು ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುತ್ತಿದ್ದೇನೆ.

    ಕನ್ನಡ ಬಳಗದ ಇಪ್ಪತ್ತು, ಇಪ್ಪತ್ತೈದು ಮತ್ತು ಮೂವತ್ತನೇ ವಾರ್ಷಿಕ ಸಮ್ಮೇಳನಗಳಲ್ಲಿ ಭಾಗವಹಿಸಿದ ಸುಯೋಗ ನನ್ನದು. ಆ ಮೂರೂ ಸಂದರ್ಭಗಳಲ್ಲಿ ಕನ್ನಡ ಬಳಗದ ಬಂಧುಗಳು ತೋರಿಸಿದ ಪ್ರೀತಿ, ವಿಶ್ವಾಸ, ಸೌಜನ್ಯಗಳನ್ನು ನೆನೆದಾಗ ಈಗಲೂ ನನ್ನ ಮನಸ್ಸು ತೇವವಾಗುತ್ತದೆ. ಸಂತೋಷ, ಕೃತಜ್ಞತೆಗಳಿಂದ ಹೃದಯ ತುಳುಕಾಡುತ್ತದೆ. ಇದೀಗ ನಾನು ಐವತ್ತು ಬಾರಿ ವಿದೇಶ ಪ್ರವಾಸ ಮಾಡಿ ವಿವಿಧ ವಿದೇಶಿ ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ, ಸಮ್ಮೇಳನಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಈ ವಿದೇಶಗಳ ಉಡ್ಡಯನಗಳ ಪರಂಪರೆಗೆ ನಾಂದಿಯಾದುದೇ ೨೦೦೩ ರಲ್ಲಿ ಕನ್ನಡ ಬಳಗದ ಆಲ್ಟ್ರಿಂಕ್ಯಾಮ್ ಸಮ್ಮೇಳನ. ಕನ್ನಡ ಬಳಗಕ್ಕೆ ನನ್ನನ್ನು ಪರಿಚಯಿಸಿದವರು, ತಮ್ಮೊಂದಿಗೆ ನನ್ನನ್ನು ಕರೆದೊಯ್ದವರು ನಮ್ಮ ನಾಡಿನ ಬಹು ದೊಡ್ಡ ವಿದ್ವಾಂಸರೂ, ಅಸಾಧಾರಣ ವಾಗ್ಮಿಗಳೂ ಆದ ಪ್ರೊ. ಅ. ರಾ. ಮಿತ್ರ ಅವರು.

    ಅಲ್ಲಿಂದ ಇಲ್ಲಿಯವರೆಗೂ ಕನ್ನಡ ಬಳಗದ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿದ್ದೇನೆ. ಬಳಗದ ಇತಿಹಾಸ, ಬೆಳವಣಿಗೆಯ ಬಗ್ಗೆ ನನಗೊಂದು ಅಂದಾಜಿತ್ತಾದರೂ ರಾಮಮೂರ್ತಿ ಅವರ ಲೇಖನವನ್ನು ಓದಿದ ಮೇಲೆ ಅದರ ಸಮಗ್ರ ವಿವರಗಳು ತಿಳಿದವು. ಶ್ರೀ ರಾಮಮೂರ್ತಿ ಅವರ ಸ್ಮರಣ ಶಕ್ತಿಗೆ ಮತ್ತು ಅವರ ಆಪ್ತ ಬರವಣಿಗೆಯ ಧಾಟಿಗೆ ಒಂದು’ Hats Off’ ಹೇಳಲೇಬೇಕೆನ್ನಿಸುತ್ತಿದೆ. ರಾಮಮೂರ್ತಿ ಅವರು ಅವರ ಸಹಜ ವಿನಯದಿಂದ ಕನ್ನಡ ಬಳಗದ ಹುಟ್ಟು, ಬೆಳವಣಿಗೆಯಲ್ಲಿ ತಮ್ಮ ಪಾತ್ರವನ್ನು ಅಷ್ಟಾಗಿ ಹೇಳಿಕೊಳ್ಳದಿದ್ದರೂ ಅದಕ್ಕಾಗಿ ಅವರು ಪಟ್ಟಿರುವ ಕಷ್ಟ, ತೋರಿಸಿದ ಶ್ರದ್ಧೆ ಬಹಳ ಮಂದಿಗೆ ಗೊತ್ತು.

    ಇಲ್ಲಿ ರಾಮಮೂರ್ತಿ ಅವರೇ ಒಮ್ಮೆ ಹೇಳಿದ ಒಂದು ತಮಾಷೆಯ ಪ್ರಸಂಗವೊಂದನ್ನು ದಾಖಲಿಸಬೇಕು. ಇತ್ತೀಚೆಗೆ ಅವರು ಒಂದು ಕನ್ನಡ ಬಳಗದ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿಯ ಸ್ವಾಗತಕಾರಿಣಿ ಹುಡುಗಿಯೊಬ್ಬಳು ರಾಮಮೂರ್ತಿ ಅವರನ್ನು ನಿಮ್ಮ ಹೆಸರೇನು? ಎಲ್ಲಿಂದ ಬರುತ್ತಿದ್ದೀರಿ? ಎಂದು ಕೇಳಿದಳಂತೆ. ರಾಮಮೂರ್ತಿ ಅವರು ಕನ್ನಡ ಬಳಗದ ರಿಜಿಸ್ಟ್ರೇಷನ್ ಕೌಂಟರ್ ನ ಮುಂದೆ ತಮ್ಮ ಹೆಸರು,ಊರು ಹೇಳಿಕೊಳ್ಳಬೇಕಾದ್ದಕ್ಕೆ ಅವರಿಗೆ ಒಂದಿಷ್ಟು ಕಸಿವಿಸಿಯಾಗಿರಬಹುದು. ಆದರೂ ಅವರು ತಪ್ಪು ಭಾವಿಸದೆ ಆ ಹುಡುಗಿಯ ಮುಂದೆ ಅವರ ಹೆಸರು, ವಿಳಾಸ ಹೇಳಿಕೊಂಡು ರಿಜಿಸ್ಟರ್ ಮಾಡಿಕಂಡರಂತೆ. ಈ ಪ್ರಸಂಗವನ್ನು ಹೇಳಿ ರಾಮಮೂರ್ತಿ ಅವರು ನನಗೂ ಹೇಳಿದ್ದು- ” ಇದಕ್ಕೆ ನಾನು ಬೇಸರಪಡಲಿಲ್ಲ. ಯಾಕೆಂದರೆ ಈಗ ನಮ್ಮ ಕನ್ನಡ ಬಳಗ ಅಷ್ಟು ದೊಡ್ಡದಾಗಿ ಬೆಳೆದಿದೆ.” ಅದು ಅವರ ಹೃದಯ ವೈಶಾಲ್ಯ. ನಾನು ಈ ಪ್ರಸಂಗವನ್ನು ಡಾ. ಭಾನುಮತಿ ಅವರಿಗೂ ಹೇಳಿ ‘ ಹುಷಾರಾಗಿರಿ, ನಾಳೆ ನಿಮಗೂ ಇಂಥ ಸಂದರ್ಭ ಬರಬಹುದು’ ಅಂದೆ. ಅದಕ್ಕೆ ಭಾನುಮತಿ ‘ ಹಾಗಾಗಲಾರದು, ಯಾಕೆಂದರೆ ನನ್ನ ಗಂಟಲು ರಾಮಮೂರ್ತಿ ಗಂಟಲಿಗಿಂತ ದೊಡ್ಡದು’ ಎಂದು ಹೇಳಿ ನಕ್ಕರು.

    ಇನ್ನು ಅರವತ್ತರ ದಶಕದ ಇಂಗ್ಲೆಂಡ್ ಕನ್ನಡಿಗನ ಬದುಕು ಬವಣೆಗಳ ಬಗ್ಗೆ ಬರೆಯುತ್ತಾ ಆನುಷಂಗಿಕವಾಗಿ ಆ ಕಾಲದ ಇಂಗ್ಲೆಂಡ್ ನ ಒಟ್ಟು ಸಾಮಾಜಿಕ ಪರಿಸ್ಥಿತಿಯ ಅನಾವರಣ ಮಾಡಿದ್ದಾರೆ. ಆ ದೃಷ್ಟಿಯಿಂದ ಎರಡೂ ಸಂಗ್ರಹಯೋಗ್ಯವಾದ ಸುಂದರ ಬರಹಗಳು.

    ರಾಮಮೂರ್ತಿ ಅವರಿಗೆ, ಅನಿವಾಸಿಗೆ ಅಭಿನಂದನೆಗಳು.
    ಇನ್ನೊಂದು ಮಾತು, ರಾಮಮೂರ್ತಿ ಅವರ ಕನ್ನಡ ಬರವಣಿಗೆ ಬರುಬರುತ್ತಾ ತುಂಬಾ ಸುಧಾರಿಸಿದೆ, ಸರಾಗವಾಗುತ್ತಿದೆ. ಅವರ ಲೇಖನ ವ್ಯವಸಾಯ ಮುಂದುವರಿಯಲಿ. ಅವರ ಲೇಖನಿಯ ಮಸಿ ಆರದಿರಲಿ ಎಂದು ಮನಸಾ ಹಾರೈಸುತ್ತೇನೆ.

    ಗೌರವಪೂರ್ವಕ
    ಪ್ರೊ.ಎಂ.ಕೃಷ್ಣೇಗೌಡ.
    ಮೈಸೂರು.

    Liked by 1 person

    • ಕನ್ನಡ ಬಳಗ ಯು ಕೆ ದ ಇತಿಹಾಸವನ್ನು ಸುಂದರವಾಗಿ ಮತ್ತು ಅಧಿಕೃತವಾಗಿ ದಾಖಲಿಸಲು ತಮ್ಮದೇ ಶೈಲಿಯಲ್ಲಿ ರಾಮಮೂರ್ತಿಯವರಂತೆ ಇನ್ನಾರೂ ಮಾಡಿರಲಾರರು. ಅವರು ಬಳಗದ ಆರಂಭಕಾಲದಿಂದಲೂ ಅದನ್ನು ಬಲ್ಲ ಮತ್ತು ಇಂದಿಗೂ ಪ್ರೋತ್ಸಾಹಿಸುವ ಉಳಿದಿರುವ ಕೆಲವೇ ಜನರಲ್ಲಿ ಅವರೊಬ್ಬರು. ಅದರ ಬೆಳವಣಿಗೆಗೆ ಮತ್ತು ಏಳಿಗೆಗೆ ಸತತ ಪರಿಶ್ರಮಪಟ್ಟ ಕೆಲವರಲ್ಲಿ ಅವರೂ ಒಬ್ಬರು. ಅದಲ್ಲದೆ ಎಲ್ಲ ದಾಖಲೆಗಳನ್ನು ಮುತವರ್ಜಿಯಿಂದ ಕಾಯ್ದಿಟ್ಟ ಒಬ್ಬರೋ ಇಬ್ಬರಲ್ಲಿ ಅವರೊಬ್ಬರು. (ತಮ್ಮ ಮನೆಯಲ್ಲೇ ಆ ಕಳೆದ ಹೋದ ಗಂಟು ಇತ್ತೀಚೆಗೆ ಸಿಕ್ಕಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ, ಎಂದು ನನಗೆ ಹೇಳಿದ ನೆನಪು!) ಎಷ್ಟು ಆಸ್ಥೆಯಿಂದ ತಮ್ಮ ಸಂಗ್ರಹದಲ್ಲಿಯ ಆಯ್ದ ವಿಷಯಗಳನ್ನು ಈ ಲೇಖನದಲ್ಲಿ ಮೂಡಿಸಿದ್ದಾರೆ! ಈ ಎರಡು ಸಂಗ್ರಹಣೀಯ ಲೇಖನಗಳಿಗಾಗಿ ಅವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಸಂಪಾದಕಿಗೆ ಸಹ. ಈ ಲೇಖನದಲ್ಲಿ ಅಚಾತುರ್ಯದಿಂದ ಬಿಟ್ಟು ಹೋಗಿದ್ದ ಸ್ಕಾಟ್ಲಂಡ್ ಮತ್ತು ಉತ್ತರ ಅಯರ್ಲಂಡ್ ಕನ್ನಡ ಬಳಗದ ಕೂಟಗಳ ಪೂರ್ತಿ ವಿವರಗಳನ್ನು ಬೆಳ್ಳೂರು ಗದಾಧರ ಅವರು ಈಗಾಗಲೇ ಬರೆದು ಪೂರ್ಣಗೊಳಿಸಿದ್ದಾರೆ. ಅವರಿಗೂ ಕೃತಜ್ಞತೆಗಳು. ಬಳಗದ ಹುಟ್ಟಿನಿಂದಲೂ ನಾನು ಸದಸ್ಯನಾಗಿದ್ದುದರಿಂದ ಈ ಲೇಖನ ತಂದುಕೊಟ್ಟ ನೆನಪುಗಳಿಗೆ ಲೆಕ್ಕವಿಲ್ಲ. ವೈಯಕ್ತಿಕವಾಗಿ ನನ್ನ ಮನದಲ್ಲಿ ಉಳಿದ ಸುವರ್ಣ ಗಳಿಗೆಗಳೆಂದರೆ 1988ರ ವಿಶ್ವ ಕನ್ನಡ ಸಮ್ಮೇಳನ. ಆ ಮೂರು ದಿನಗಳು ಸ್ವರ್ಗದಲ್ಲಿದ್ದಂತೆ! ಅದಕ್ಕೆ ಇವರೆಲ್ಲ ಪಟ್ಟ ಪರಿಶ್ರಮದ ಬಗ್ಗೆ ಸುಂದರವಾಗಿ, ಆಪ್ತವಾಗಿ ಬರೆದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಆ ಸರಕುಗಳನ್ನು impound ಮಾಡಿದ ಸುದ್ದಿ ಕೇಳಿದ ನನಗೆ ಆಗ ಎದೆ ಧಸಕ್ಕೆಂದಿತ್ತು. ನಂತರ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.ಎಷ್ಟೊಂದು ಸವಿ ನೆನಪುಗಳು. ಕಾರಂತರ ಕಿವಿಮಾತು, ಶಂಕರ ನಾಗ್ ಅವರ ದನಿ ಈಗಲೂ ಅನುರಣಿಸುತ್ತಿವೆ ನನ್ನ ಕಿವಿಯಲ್ಲಿ!
      ಕೆಲ ವರ್ಷಗಳ ನಂತರ ಅಲ್ವೆಸ್ಟನ್ ಹಾಲಿನಲ್ಲಿ KBUK ಕೂಡಿದಾಗ ಒಂದು ಪ್ರಶ್ನೋತ್ತರ ಕಾರ್ಯಕ್ರಮ: ಅತಿಥಿಯಾಗಿ ಬಂದ ಮಂತ್ರಿ ಕೆ ಹೆಚ್ ಪಾಟೀಲ್ ಅವರು ಅಂದ ನಿಷ್ಠುರ ಕಟುಸತ್ಯದ ಮಾತು (ಬಳಗದ ’ಚಿಕ್ಕ ಸಸಿ” ಬೆಳವಣಿಗೆಯ ಬಗ್ಗೆ) ನೆನಪಿನಲ್ಲಿದೆ: ’ಸಸಿಯನ್ನೇನೋ ನಟ್ಟ ಮೇಲೆ ಸತ್ವವಿದ್ದಲ್ಲಿ ಅದು ಹತ್ತಿಕೊಂಡು ಬೆಳೆದೀತು, ಇಲ್ಲವಾದರೆ ಸತ್ತು ಹೋಗುತ್ತದೆ!” 1980ರ ದಶಕದಲ್ಲಿ ನೆಟ್ಟ ’ಬಳಗ’ದ ಸತ್ವವುಳ್ಳ ಈ ಸಸಿಗೆ ನೀರೆರೆದು, ಗೊಬ್ಬರ ಹಾಕಿ ಪೋಷಿಸಿ ರಕ್ಷಿಸಿದ, ತಮ್ಮ ಸಮಯ, ಶ್ರಮ, ಅಲ್ಲದೆ ವಿತ್ತ ದಾನಮಾಡಿದ ನಿಸ್ವಾರ್ಥ ಜೀವಿಗಳನ್ನು ( ಗತಿಸಿದವರ ಆತ್ಮಗಳನ್ನು ಸಹ) ಇಲ್ಲಿ ನೆನೆಸುವೆ.
      ಮೇಲೆ ತಮ್ಮ ಪ್ರತಿಕ್ರಿಯೆಯಲ್ಲಿ ಪ್ರೊ ಕೃಷ್ಣೇಗೌಡರು ಬರೆದುದ್ದು ನೂರಕ್ಕೆ ನೂರರಷ್ಟು ಸತ್ಯ. ಮೊದಲ ಸಲ ಅವರು ಅ ರಾ ಮಿತ್ರರೊಂದಿಗೆ ಬಂದಾಗ ಅವರಿಬ್ಬರ ಮಾತಿನ ಓಘದಲ್ಲಿ ನಾವೆಲ್ಲ ಕೊಚ್ಚಿಕೊಂಡು ಹೋದ ನಂತರದ ಅದರ ಗುಂಗಿನಲ್ಲಿ ಅವರಿಗೆ ’ಮಿತ್ರದ್ವಯರೇ’ ಅಂತ ಸಂಬೋಧಿಸಿ ನಾನು ಬರೆದ ಪತ್ರವನ್ನು ತಮ್ಮ ‘ಡೆಸ್ಕ್ ಟಾಪ್ಪಿನಲ್ಲಿ ಸರ್ಟಿಫಿಕೇಟಿನಂತೆ ಇಟ್ಟುಕೊಂಡಿದ್ದೇನೆಂದು’ ಮುಂದಿನ ಸಲ ಬಂದಾಗ ಹೇಳಿ ನನ್ನನ್ನು ಚಕಿತಗೊಳಿಸಿದ್ದರು. ಅವರ ಜ್ಞಾಪಕಶಕ್ತಿ ಸುಪ್ರಸಿದ್ಧ. ಮರೆತು ಹೋಗಿದ್ದ ನನ್ನ ವಾಕ್ಯಗಳನ್ನು ನನ್ನ ಮುಂದೆ verbatim recite ಮಾಡಬೇಕೇ? ( ”I have to settle a score with Goddess Saraswati for choosing to dance on their tongue and not on mine!”) ಇನ್ನೂ ಎಷ್ಟೋ ನೆನಪುಗಳು.
      ಸಿರಿಗನ್ನಡಂ ಗೆಲ್ಗೆ; ಕನ್ನಡ ಬಳಗ ಬಾಳ್ಗೆ!

      Liked by 1 person

        • May I thank you all for your encouraging comments. It has been my privilege to have served Kannada Balaga. It is no exaggeration if I say it is my spiritual home also. Unlike many of you I started writing in Kannada only recently and a long way to go to reach standards set by some of you. I am also encouraged by our dear friend Prof K.G’s comments, so there is hope!!

          Like

    • Keshav kulakarni says,
      ಕೃಷ್ಣೇಗೌಡರ ಅನಿಸಿಕೆ ‘ಅನಿವಾಸಿ’ಯ ಕಿರೀಟಕ್ಕೆ ಗರಿ ಇದ್ದಂತೆ. 🙏🏼🙏🏼

      Like

  7. ಅತ್ಯುತ್ತಮ ಲೇಖನ. ನಮಗೆ ಕನ್ನಡ ಬಳಗದ ಉದಯ ಮತ್ತು ಬೆಳವಣಿಗೆ ಬಗ್ಗೆ ಮಾಹಿತಿ ಬಹಳ ಅಂದವಾಗಿ ಮೂಡಿಬಂದಿದೆ. ಆಗಿನ ಪರಶ್ರಮ/ರೋಮಾಂಚನ ಅನುಭವ ಮುಂದಿನ ಪೀಳಿಗೆಗೆ ಬಳಗವನ್ನು ಬೆಳಸಲು ಉತ್ತೇಜನ ನೀಡಲಿ.

    Like

Leave a comment

This site uses Akismet to reduce spam. Learn how your comment data is processed.