ಆಕರ್ಷಕ, ಅರ್ಥಪೂರ್ಣ ಮತ್ತು ಕಾವ್ಯಚಿತ್ರವೆನ್ನುವಂತಹ ದೃಶ್ಯಗಳನ್ನು ತಮ್ಮ ಕ್ಯಾಮರಾದಿಂದ ಸೆಳೆದು ಕಳಿಸಿದವರು ಅನಿವಾಸಿಯ ಹವ್ಯಾಸಿ ಛಾಯಾಚಿತ್ರಕಾರ ಡಾ. ರಾಮ್ ಶರಣ್. ಚಿತ್ರ ಚೌಕಟ್ಟಿನಲ್ಲಿ ಮೂಡಿಸಿದ ಅವರ ದೃಶ್ಯಗಳನ್ನು ಪದ ರೂಪದಲ್ಲಿ ಕಾವ್ಯಗಳನ್ನಾಗಿಸಿದವರು ಅನಿವಾಸಿಯ ಐವರು ಪ್ರತಿಭಾವಂತ ಕವಿಗಳಾದ ಶ್ರೀನಿವಾಸ ಮಹೇಂದ್ರಕರ್, ವಿನತೆ ಶರ್ಮಾ. ಅಮಿತಾ ರವಿಕಿರಣ್, ವಿಜಯನರಸಿಂಹ ಮತ್ತು ಕೇಶವ ಕುಲಕರ್ಣಿ ಯವರು.
ಆಸಕ್ತಿಯ ವಿಚಾರ ಎಂದರೆ ಈ ದಿನದವರೆಗೆ ಯಾರು , ಯಾವ ಚಿತ್ರಕ್ಕೆ ಏನು ಬರೆಯಬಹುದೆಂದು ರಾಮಶರಣರಿಗೆ ತಿಳಿದಿರಲಿಲ್ಲ. ಹಾಗೆಯೇ ಕವಿಗಳಿಗೆ ಯಾರ ಚಿತ್ರಕ್ಕೆ ತಾವು ಬರೆಯುತ್ತಿದ್ದೇವೆಂದು ತಿಳಿದಿರಲಿಲ್ಲ. ಒಂದೊಂದು ಚಿತ್ರವನ್ನು ಒಬ್ಬೊಬ್ಬರಿಗೆ ಕಳಿಸಿ 5-6 ಸಾಲುಗಳ ಪುಟ್ಟ ಕವನಗಳನ್ನು ಮಾತ್ರವೇ ನಾನು ಅಪೇಕ್ಷಿಸಿದ್ದು. ಒಂದು ಚೌಕಟ್ಟಿನಲ್ಲಿ ಒಂದು ಚಿತ್ರವನ್ನೇನೋ ಹಿಡಿದಿಡಬಹುದು. ಆದರೆ ಅನಿವಾಸಿಯ ಕವಿಗಳ ಲಹರಿಗೆ ಚೌಕಟ್ಟು ಹಾಕಲಾದೀತೇ? ಎಲ್ಲರೂ ವಿಫುಲವಾಗೇ ಬರೆದು ಕಳಿಸಿ ಆಶ್ಚರ್ಯಗೊಳಿಸಿದ್ದಾರೆ. ಚಿತ್ರದ ಮೂಲ ಮತ್ತು ಮೂಲೆ ಮೂಲೆಯ ಪ್ರತಿ ವಿವರವನ್ನು ಕಾವ್ಯವಾಗಿಸಿದ್ದಾರೆ.
ಹಾಗಂತ ಚಿತ್ರಗಳ ಚಮತ್ಕಾರವೇನೂ ಕಡಿಮೆಯಿಲ್ಲ. ಉದಾಹರಣೆಗೆ ಒಂದು ಕವನದ ಚಿತ್ರ, ಸಂಧ್ಯಾ ಸಂದೇಶವೋ, ಉಷೆಯ ಉಗಮವೋ ಕವಿಯನ್ನು ಚಿಂತಿಸವಂತೆ ಮಾಡಿತು. ಚಿತ್ರಕಾರ ಕಳಿಸಿದ ಚಿತ್ರ -ಶೀರ್ಷಿಕೆಗಳು ಮತ್ತೆ ಕೆಲವು ಕವಿಗಳ ಕಲ್ಪನೆಯ ದಿಕ್ಕನ್ನು ಬದಲಿಸಿತು. ಮತ್ತೆ ಕೆಲವರು ಚಿತ್ರಗಳಿಗೆ ತಮ್ಮದೇ ಹೆಸರಿಟ್ಟು ಕವನ ಬರೆದರು. ಮತ್ತೆ ಇನ್ನೊಬ್ಬರಲ್ಲಿ ನೇರ ಚಿತ್ರದಲ್ಲಿನ ಒಳಚಿತ್ರ ತಲೆಕೆಳಗಾದ ಆಶ್ಚರ್ಯ ಮತ್ತೆಲ್ಲವನ್ನು ಮರೆಸಿ ಹಲವು ತರ್ಕಗಳನ್ನು ಮೂಡಿಸಿದರೆ, ಮಗದೊಬ್ಬರು ಮನಸ್ಸು ಬಂದಷ್ಟು ಕನಸಿಸಿ ’ ಉದ್ದವಾಯ್ತೇ ’ ಎಂದು ಕೇಳಿಕೊಂಡರು! ಏನಾದರಾಗಲಿ ಚಿತ್ರಗಳಲ್ಲಿನ ಬೆಳಕು ಮತ್ತು ಬಣ್ಣಗಳು ಕವಿಗಳ ಮನಸ್ಸಿನ ಅಳತೆಗೋಲು ಮತ್ತು ಕಲ್ಪನೆಗಳನ್ನು ಕದಲಿಸಿ ಚಲಿಸುವಂತೆ ಮಾಡಿರುವುದು ಮಾತ್ರ ಖಂಡಿತ ನಿಜ.
ಪ್ರೀತಿಯಲ್ಲಿ ಮೈ ಮರೆತ ಪ್ರೇಮಿಗಳ ಸುತ್ತಲಲ್ಲಿ ಸ್ತಬ್ದವಾದ ಸಮಯ,ನಿರಂತರ ಹರಿವ ಸಮಯ ಸರಳುಗಳ ಹಿಂದೆ ಬಂಧಿಯಾದ ಭಾವ, ಸಂಧ್ಯೆಯೋ-ಉಷೆಯೋ ಬಣ್ಣಗಳ ಓಕುಳಿ ಭೂಮ್ಯಾಕಾಶಗಳಿಗೆ ರಂಗೆರಚಿ ಬಿಡಿಸಿದ ಚಿತ್ತಾರ, ಸುಂದರ ರಮಣೀಯ ದೃಶ್ಯದಲ್ಲಿ ನಿರಂತರವಾಗುವ ತನುವಿನ ಧ್ಯಾನ, ಮನುಜನ ಬೆರಳ ನಡುವಿನ ಮಾಯಕದ ಗೋಲ- ಸುಂದರವಾದ ದೃಶ್ಯಗಳು ಮತ್ತು ಕಾವ್ಯಗಳು.
ಹಿಂದಿನ ಪ್ರಯತ್ನದಲ್ಲಿ ಒಬ್ಬ ಚಿತ್ರಕಾರ, ಒಬ್ಬ ಕವಿ ಮಾತ್ರ ಭಾಗವಹಿಸಿದ್ದರು. ಈ ವಾರದ ವಿಶೇಷದಲ್ಲಿ ಒಬ್ಬ ಚಿತ್ರಕಾರನ ಚಿತ್ರಗಳಿಗೆ ಬೇರೆ , ಬೇರೆ ಕವಿಗಳ ಭಾವಗಳು,ಕಲ್ಪನೆಗಳು ಸಾಕ್ಷಾತ್ಕಾರವಾಗಿ ಹೊಸ ಚಮತ್ಕಾರವನ್ನು ಮೂಡಿಸಿವೆ. ಪ್ರತಿಯೊಬ್ಬ ಕವಿಯದೂ ಅದೆಷ್ಟು ಭಿನ್ನವಾದ ದಾಟಿ ಎಂಬುದನ್ನು ತೋರಿಸಿದೆ.
ಚಿತ್ರಗಳನ್ನು ನೋಡಿ ನಿಮ್ಮ ಮನಸ್ಸಿನಲ್ಲಿಯೂ ಗುನುಗು ಮೂಡಿದರೆ, ಪ್ರಯತ್ನ ಪಟ್ಟವರ ಬೆನ್ನು ತಟ್ಟಬೇಕೆನ್ನಿಸಿದರೆ ಖಂಡಿತ ಕಮೆಂಟಿಸಿ.–ಡಾ. ಪ್ರೇಮಲತ ಬಿ
ಕಂಬಿಯ ಕಂಪನಗಳು ಬೆಳಕಿನೊಡನೆ ಸೆಣೆಸಿ
ಗೆದ್ದಿವೆ ನನ್ನ ಕರಣದೊಳಿಳಿದು
ನಾ ಗೆಲ್ಲಬಾರದೇಕೆ ನಿನ್ನ ಸ್ಪರ್ಶದ ಕಂಪನದಿ
ಗಂಟೆಯ ಮುಳ್ಳುಗಳ ತಡೆದು
ನಿರ್ಲಿಪ್ತ ಜಗತ್ತೊಂದು ನಮ್ಮ ಸುತ್ತಲೂ
ಹೆಣೆದುಕೊಳ್ಳಬಾರದೇ , ಈ ಕಾಲನ ಓಟವ
ಕಳಚಿಕೊಂಡು , ನಮ್ಮಿಬ್ಬರ ಬೆರಳುಗಳ
ಹೊಸೆದುಕೊಂಡು ,ಎಂದೆಂದಿಗೂ
ಮನಸುಗಳ ಬೆಸೆದುಕೊಂಡು
——–ಶ್ರೀನಿವಾಸ ಮಹೇಂದ್ರಕರ್
ಕಾಲವೆಂಬುದು…
ಬಂಧಿತ ಒಳಗಿನುಸಿರ ತಲ್ಲಣದ ನಿರ್ವಾತ
ಅಂಟಿರುವ ಖಾಲಿ ಗೋಡೆಗಂಜಿ ಗಡಿಯಾರ
ಬೇಡುವ ನಿರ್ಭೀತಿ, ಸಮಯದ ಚಲನದ
ಸ್ವತಂತ್ರ, ಅತಂತ್ರ ನಿರ್ಧಾರ ಕಿಟಕಿ ಸರಳಿನ
ಗೆರೆಗಳು ಬರೆವ ಪಥ ವಿದೃಶ.
ಹೊಸ ಗಾಳಿಯ ಯುಗಾದಿ ಗರಿಮೆ
ರಾತ್ರಿ ಮಿಣುಕು ಹುಳು ಕಾಲದ ಅಣುಕು
ಕತ್ತಲೆಯೇ ಅದರ ಬೆಳಕು ಬೇಕಿಲ್ಲದಕೆ
ನಮ್ಮ ನಿರ್ಧರಿತ ಸಾವು ಸೂಚಿಸುವ ಸಮಯ
ಬಂಧನವ ಬಿಸಾಡಿದ ಗೆರೆಯಿಲ್ಲದ ವಿದೃಶ ಪಥ.
ಮನಸ್ಸುಗಳ ಪಥಸಂಚಲನ ಮನುಜ ಗಣಕ
ಕೀಲಿಕೊಟ್ಟ ಮುಳ್ಳು ಜೀವಸ್ವರವಾದೀತೇ
ಸರಳುಗಳಾಚೀಚಿನ ಒಳಹೊರಗಿನ ಮರೆಮಾಚಿನ
ಪ್ರಪಂಚಗಳ ದೊಡ್ಡ ಕೈ, ಚಿಕ್ಕ ಕೈ ಬಿಚ್ಚಿಕೊಳ್ಳುವುದೇ
ಗೋಡೆ ಮೇಲಿನ ಗಡಿಯಾರ ಹೇಳುವ ವಿದೃಶ ಕಥೆ.
ಕಪ್ಪು ಬಿಳುಪು, ರಾತ್ರಿ ಹಗಲು ಪಾತ್ರಗಳು
ನಿಡುಸುಯ್ದು ಕ್ಯಾಕರಿಸಿದರೂ ಬತ್ತಲೊಲ್ಲದ ದೀಪ
ಜಗ್ಗಿದರೂ ತಲೆ ತಿರುಗುವುದು ಗಡಿಯಾರದೆಡೆಗೆ
ಪಥಸಂಚಲನದ ವಿದೃಶ ಸೈನಿಕನಲ್ಲವಾದರೂ
ದೊಡ್ಡ ಚಿಕ್ಕ ಮುಳ್ಳು ಮಾರ್ಗದರ್ಶಿ.
——— ವಿನತೆ ಶರ್ಮ
ಹೀಗೊಂದು ಕನಸಿದೆ,
ಹಾಂ ಕನಸಷ್ಟೇ,!!
ಕೇಳುವೆಯ??
ಬೆಳಗು ಮೂಡುವ ಮುನ್ನ
ಇಬ್ಬನಿ ದಾರಿ ಇಬ್ಬಾಗಿಸಿ,
ನಾವಿಬ್ಬರು ನಡೆಯೋಣ
ಒಂದಷ್ಟು ದೂರ,
ಅದೋ ಗುಡ್ಡದ ತುದಿಯಲ್ಲಿ
ಸಣ್ಣ ಗುಡಿಸಲ ಕಟ್ಟೋಣ,
ನನಗೊಂದು ಒಲೆ ಒಟ್ಟಿಕೊಡು
ಹೊಳೆನೀರ ಚಹಾ ಮಾಡಿಕೊಡುವೆ,
ಅಲ್ಲೇ,
ಒಟ್ಟಿಗೆ ಕೂತು ಕುಡಿಯೋಣ,
ಎಳೆ ಬಿಸಿಲಿನಲ್ಲಿ ಚಳಿ ಕಾಯಿಸೋಣ,
ತಳಕಾಣುವ ಹೊಳೆ ,
ಅಲ್ಲಿ ತಳಕಾಡುವ ಕೆಂಬಣ್ಣದ ರಾಣಿಮೀನು,
ಬೆಳಕ ಗೆರೆಗೆ ಮಿರುಮಿರುಗಿ ಮಿನುಗಿ
ಅಲ್ಲೇ ಕಣ್ಣಾಮುಚ್ಚಾಲೆ ಆಡುವುದನ್ನ ನೋಡೋಣ,
ಬಾನು ನೀಲಿ ರಂಗಿನಲ್ಲಿ ರಂಗಾಗುವ ನಡುನಡುವೆ
ತಿಳಿನೀರ ಕನ್ನಡಿಯಲ್ಲಿ ಮುಖ ನೋಡಿ
ಮತ್ತೆ ಮತ್ತೆ ನಾಚಿ ಬಿಳುಚುವುದನ್ನ ,
ಹಸಿರುಟ್ಟ ಪೃಥೆಯ ಜೊತೆಗೆ ಕೂತು ನೋಡೋಣ,
ಹಸಿರ ಹುಲ್ಲಿನಲಿ ಪುಟಿಯುವ ಬಿಳಿ ತುಂಬೆಹೂವ ಕಿತ್ತು ಸಿಹಿ ಹೀರುತ್ತಾ,
ಕಾಡ ಹೂಗಳ ಘಮ ಬೆನ್ನಟ್ಟಿ ,ಬರಿಗಾಲಲ್ಲಿ ಕಾಡು ಅಲೆಯೋಣ,
ಗೋಧೂಳಿಯಹೊತ್ತು ಕೆಂಪಾಗಸದ ತಂಪಿನಲಿ
ಕೈ ಕೈ ಹಿಡಿದು ಮನೆಗೆ ಮರಳೋಣ,
ಗೊತ್ತು ನನಗೆ, ಆಗದ ಹೋಗದ ಕನಸುಗಳಿವು
ಎನ್ನುತ್ತಿ ನೀನು..
ದುಡ್ಡು ಕೊಡಬೇಕಿಲ್ಲ, ನನ್ನ ಕಲ್ಪನೆ,
ನನ್ನ ಚಿತ್ರ
ಕನಸೇ ತಾನೇ, ಕಟ್ಟುತ್ತೇನೆ ಬಿಡು, ಸಾವಿರ ಸಾವಿರ ಕನಸ
ನಿನಗೂ ಗೊತ್ತಿಲ್ಲದೆ, ನಿನ್ನ ಸುತ್ತ !!!!!
——–ಅಮಿತಾ ರವಿಕಿರಣ್
ಸಂಧ್ಯಾ ಸಂದೇಶ
ಬೆಳಗೊಂದು ಬೆರಗು ಬೈಗೊಂದು ಬೆರಗು
ಎರಡರಲ್ಲೂ ಬಣ್ಣಗಳ ಮೆರುಗು
ಬಾನಂಗಳದಲ್ಲಿ ರಂಗಿನ ಚಿತ್ರ ಚಿತ್ತಾರ
ಮೂಡಣ- ಪಡುವಣಗಳ ಪುಣ್ಯವದೆಷ್ಟು ವಿಸ್ತಾರ?
ಚಂಚಲ ಚಿತ್ತಗಳನೊಮ್ಮೆಲೆ ಹಿಡಿದಿಡುವ ಚಮತ್ಕಾರ !
ಬಾನಲ್ಲಿ ನಿಜರೂಪ, ನೀರಮೇಲೆ ತದ್ರೂಪ
ಅಲ್ಲಿ ಸಂಧ್ಯೆಯಾಲಾಪ, ಇಲ್ಲಿ ಅಲೆಗಳ ಮೇಲೆ ಸಲ್ಲಾಪ
ವಿಜ್ಞಾನದ ಕನ್ನಡಕವ ತೆಗೆಯುತ್ತ
ಕವಿಯಾಗಿ ನೀ ತಳೆಯೆ ತದೇಕಚಿತ್ತ
ಮತ್ತೆ ಮತ್ತೆ ಸೆಳೆಯುವುದು ಅನಂತ ಕಾವ್ಯದತ್ತ
ಬದುಕಿನಾನಂದ ಇರುವುದು
ನೀ ಕಾಣುವ ಅನುಭವವದು
ತರ್ಕದ ವಿಜ್ಞಾನವದು ಸಲ್ಲದು
ಸಂಧ್ಯಾರಾಗದ ಸಂದೇಶವೇ ಇದು
——–✍ ವಿಜಯನರಸಿಂಹ
ಮೇಲಾವುದು ಕೆಳಗಾವುದು?
ಇದೇ ಮೇಲು ಇದೇ ಕೆಳಗು
ಎನುವ ಹಠವೇಕೆ?
ಮೇಲಾದುದು ಕೆಳಗಾಗದು
ಎನುವ ಅಹಂಕಾರ ಬೇಕೆ?
ಮೇಲಾದುದು ಕೆಳಗಾಗುವುದು
ಎನುವ ವಿನಯ ಸಾಕೆ?
ಮೇಲು ಕೆಳಗಾಗಲೇ ಬೇಕು
ಎನುವ ದ್ಷೇಷ ಬೇಕೆ?
ಕೆಳಗು ಮೇಲಾಗಲೇ ಬೇಕು
ಎನುವ ಗುರಿ ಬೇಕೆ?
ಮೇಲು ಕೆಳಗಾಗದೇ
ಕೆಳಗು ಮೇಲಾಗುವುದು
ಸಾಧ್ಯವೇ ಇಲ್ಲವೇ?
—ಕೇಶವ ಕುಲಕರ್ಣಿ
Gouri Prasanna says,
ತುಂಬ ಚೆನ್ನಾಗಿದೆ ಈ ಸಾಹಿತ್ಯದಾಟ..ಪ್ರೇಮಾ ಅವರೇ ನಿಮ್ಮ ಸಂಪಾದಕೀಯ ಬರಹವೂ ತುಂಬ ಅಥ೯ವತ್ತಾಗಿ ಮೂಡಿಬಂದಿದೆ.ಎಲ್ಲ ಕವನಗಳೂ ಒಂದಕ್ಕಿಂತ ಒಂದು ಅದ್ಭುತ. ಛಾಯಾಚಿತ್ರಗಳೂ ಅಷ್ಟೇ .ಆ ಪೋಸ್ಟಿಗೆ ಬಂದ ಪ್ರತಿಕ್ರಿಯೆಗಳೂ ಕೂಡ ಸತ್ವಯುತವಾಗಿವೆ.ಎಲ್ಲರಿಗೂ ನನ್ನ ಅಭಿನಂದನೆಗಳು..ಅನಿವಾಸಿಯ ಜಗಲಿಯಲ್ಲಿ ‘ಅನಂತತಾನಂತವಾಗಿ ‘ಬೆಳೆದು ನಿಂತ ‘ಎಲ್ಲಿಯೂ ನಿಲ್ಲದಿಹ ,ಮನೆಯನೆಂದೂ ಕಟ್ಟದಿಹ ,ಗುರಿಯನೆಂದೂ ಮುಟ್ಟದಿಹ ಅನಿಕೇತನ ಚೇತನಗಳು ಅನವರತ ಠಿಕಾಣಿ ಹೂಡಲಿ ಎಂಬ ಸದಾಶಯಗಳೊಂದಿಗೆ..
LikeLike
ಎಲ್ಲ ಕವನಗಳು ಛಾಯಾಚಿತ್ರದಷ್ಟೇ ಸೊಗಸಾಗಿವೆ.
ಕ್ಯಾಮರಾ ತೆಗೆದ ಹಾಗು ಕ್ಯಾಮರಾ ಕ್ಲಿಕ್ಕಿಸಿದ ಆ ಚಿತ್ರಕಾರನ ನೈಜ ಚಿತ್ರಕ್ಕೆ
ಭಾವನೆಗಳ ಪರಿಭಾಷೆಯಲ್ಲಿ ಎಷ್ಟೊಂದು ವ್ಯಾಖ್ಯಾನ!
ವಿಜಯ ನರಸಿಂಹ ಅವರ ಪ್ರಾಸ ಬದ್ಧ ಕವನ ಮೆಚ್ಚಿದೆ
ವಿಜ್ಞಾನ ತರ್ಕ ಕಾವ್ಯ ಇವುಗಳ ಮುಖಾ ಮುಖಿ ಚೆನ್ನಾಗಿ ಮೂಡಿಬಂದಿದೆ
ಕೇಶವ ಅವರ ಮೇಲು ಕೆಳಗೆ ಎಂಬ ವ್ಯವಸ್ಥೆ ಬಗೆಗಿನ ಚಿಂತನೆಗಳು ಅರ್ಥಪೂರ್ಣವಾಗಿದೆ
ನಮ್ಮ ಸಮಾಜದಲ್ಲಿನ ಕೆಲವರ ನಿರೀಕ್ಷೆಗೆ ಕನ್ನಡಿ ಹಿಡಿದಂತಿದೆ
ಮೇಲು ಕೆಳಗೆ ಎಂಬ ಸ್ಥಾನಗಳನ್ನು ಕಾಲಚಕ್ರ ನಿರ್ಧರಿಸಬಹದು
ಇದು ನಮಗೆ ತಿಳಿದಿರುವ ಸತ್ಯ
LikeLike
vijaya Narasimha says,
ನಿಮ್ಮ ಛಾಯಾಗ್ರಹಣದ ಗ್ರಹಣ ನಿನ್ನೆಯಿಂದೆ ಅನಿವಾಸಿಗಳನ್ನು ಆವರಿಸಿದೆ 😃😃😃😃
ಚಿತ್ರ ಕವನ ರಚನೆಗೆ ಕಾರಣೀಭೂತರಾದ ಪ್ರೇಮಾ ಅವರಿಗೆ ಧನ್ಯವಾದಗಳು 🙏
LikeLike
ದೈನಂದಿನ ಜೀವನದ, ಪರಿಸರದ ಪ್ರಭಾವಗಳನ್ನು ಛಾಯಾಚಿತ್ರದ ಮೂಲಕ ಸೆರೆ ಹಿಡಿದು ಅದಕ್ಕೆ ಸೊಗಸಾದ ಕವನಗಳ ಉಡುಪಿನಿಂದ ಬಣ್ಣ ತುಂಬಿರುವ ನಿಮ್ಮ ಶೈಲಿಗೆ ನನ್ನದೊಂದು ಸಲಾಂ🙏🏼
ತಿಪ್ಪೇಸ್ವಾಮಿ ಬಿಲ್ಲಹಳ್ಳಿ
LikeLike
Ramya Bhadri says,
ಛಾಯಾಚಿತ್ರಗಳಿಗೆ ಕಾವ್ಯದ ಮೆರಗು ಇದರ ಸಮ್ಮಿಲನವೇ ಈ ಸುಂದರ ಕವನಗಳಿಗೆ ಸ್ಫೂರ್ತಿ ಇದನ್ನು ಅಲೋಚಿಸಿ ಕಾರ್ಯಗತಗೊಳಿಸಿದ ತಂಡದವರಿಗೆ, ಛಾಯಾಗ್ರಾಹಕರಿಗೆ ಹಾಗೂ ಭಾಗವಹಿಸಿದ ಎಲ್ಲಾ ಪ್ರತಿಭಾನ್ವಿತರಿಗೆ ನನ್ನ ಅಭಿನಂದನೆಗಳು. ಇಂತಹ ಆಲೋಚನೆಗಳು ಹೀಗೆ ಹೊರಹೊಮ್ಮಲಿ ಓದುಗರಿಗೆ ಮುದನೀಡುತ್ತಿರಲಿ . ಕವನಗಳನ್ನು ಓದಿ ಮನಸ್ಸಿಗೆ ಬಹಳ ಸಂತಸವುಂಟಾಯಿತು, ಎಲ್ಲೊ ಒಂದು ಕಡೆ ಕಾಲವು ಈ ಕವನಗಳ ಮೂಲಕ ಅಂದಿನ ತನ್ನ ಪಯಣದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಂತೆ ತೋರಿತು
ಚಿಗುರೊಡೆದ ಪ್ರೇಮದ ಪಿಸುಮಾತ ಆಲಿಸುತ ಕಳೆದ ಕಾಲವು
ಬಂಧಿಯಾದಾಗ ಮಿಡಿದ ಭಾವಗಳೊಂದಿಗೆ ಮುಳುಗಿರಲು
ಬೆಳಕಿನ ಪ್ರಕಾಶವು ಕಣ್ತೆರೆಯುತ್ತಿದಂತೆ ಸುತ್ತಲೂ ಕಂಡಿತು ಪ್ರಕೃತಿಯ ರಮ್ಯ ನೋಟ
ಪ್ರೇರೇಪಿಸಿತು ಪ್ರಶಾಂತ ಮನಸ್ಸಾ ಬಿಚ್ಚಿಡಲು ಬಣ್ಣ ಬಣ್ಣದ ಕನಸಾ
ಸದ್ದಿಲ್ಲದೇ ಸಾಗಿತು ಸಮಯವೂ ಸಂಜೆಯತ್ತಾ ಸಿಹಿ ಕಹಿ ನೆನಪುಗಳ ನೆನೆಯುತ್ತ
ಹೀಗೆ ಕಳೆದ ಸಮಯವನ್ನು ಮತ್ತೊಮ್ಮೆ ಮೆಲಕು ಹಾಕಲಿಚ್ಚಿಸಲು
ಕಾಲಕ್ಕೆ ವಾಸ್ತವಿಕತೆಯ ಅರಿವಾಗಿ
ಪ್ರಪಂಚ ತಲೆಕೆಳಗಾದರು ಹಿಂತಿರುಗುವ ಪ್ರಶ್ನೆಯೇ ಇಲ್ಲ
ಎಂದಿನಂತೆ ಮುಂದೆ ಸಾಗುವುದೊಂದೇ ನನ್ನ ಗುರಿಯಂದಿತು
LikeLike
Amitha Ravikiran says
Thank you Prema for the wonderful opportunity.
ನನಗೆ ನನ್ನ ಕವನ ಬಾಲಿಶ ಎನಿಸಿತಾದರು , ಚಿತ್ರ – ಕವಿತೆ ಯ ಅನುಭವ ಮೊದಲ ಸಲ ಅದಕ್ಕೆ ತುಂಬಾ ಖುಷಿ,
ರಾಮ್ ಶರಣ್ ಅವರೇ ನಿಮ್ಮ ಕ್ಯಾಮರಾ ಕಣ್ಣಿನಿಂದ ಕಾಣುವ ಈ ಜಗತ್ತು ತುಂಬಾ ಸುಂದರ ವೈವಿಧ್ಯಮಯ..
ಧನ್ಯವಾದಗಳು
LikeLike
ಚಿತ್ರ ಕವನಗಳು 👌👌👌
ಅವುಗಳ ಸ್ಪೂರ್ತಿಯಲ್ಲಿ:
೧
ಗಡಿಯಾರದ ಮುಳ್ಳು,
ಸೈಕಲ್ಲಿನ ಚಕ್ರಗಳು,
ರೈಲೋಡುವ ಹಳಿ
ಎರಡಲ್ಲ ಒಂದು!
ನಾನೊಂದು, ನೀನೊಂದು
ಪ್ರೀತಿಯ ಉಸಿರೊಂದು!
೨
ಇರುಳಿನ ಕೊರಳಿಗೆ
ಬೆಳಕಿನ ಸರಳು
ಕಾಲನ ಉರುಳಿಗೆ
ಬೆಳಕೂ ಇರುಳು!
೩
ಮುಗಿಲ ನಗೆಯ
ನಭದ ಮೊಗ
ನಾಚಿ ನೀರಾಗಿದೆ
ದರ್ಪಣದೊಳಗ!
೪
ನೇಸರನ ಸೆರಗಿಗೆ
ಎಲ್ಲೆಲ್ಲೂ ಮೆರುಗು
ಸರಿಯುವ ನೆರಳಿಗೆ
ಬಣ್ಣಗಳ ಬೆರಗು!
೫
ಭವದ ಗೋಲವಿದು
ಕಣ್ಕಟ್ಟಿನ ಮಾಯಾಬಂಧ
ಎತ್ತಿ ಹಿಡಿದ ಕೈಗಷ್ಟೇ ಗೊತ್ತು
ಒಂದಕ್ಕೊಂದರ ಸಂಬಂಧ!
ಮುರಳಿ ಹತ್ವಾರ್
LikeLike
Desai says,
👏👏Inspired writings! Beautifully expressed. Particularly liked 5!
LikeLike
ವಿಜಯ ನರಸಿಂಹ ಹೇಳುತ್ತಾರೆ,
ಮುರಳಿ ಅವರ ಸಾಲುಗಳು
ಅದ್ಭುತ
ಕವನಗಳ ವಿಮರ್ಶೆಯನ್ನು ಹೀಗೂ ಮಾಡಬಹುದೆನ್ನುವ ನಿಮ್ಮ ಸೃಜನಶೀಲತೆಗೆ ನಾ ಬೆರಗಾದೆ
LikeLike
ನನ್ನ ಛಾಯಾಚಿತ್ರಗಳಿಗೆ ಮೆರುಗು ಕೊಡುತ್ತ ಹೊಸ ಭಾವಗಳನ್ನು ಪದರು ಪದರಾಗಿ ಸುಲಿದಿಟ್ಟ ಕವಿಗಳಿಗೆ ನನ್ನ ಧನ್ಯವಾದಗಳು. ಅನಿವಾಸಿ ಗುಂಪಿನ ಚಮತ್ಕಾರವನ್ನು ಇಲ್ಲಿ ಅನಾವರಣಗೊಳಿಸಿದ್ದೀರಿ.
ಯಾವ ಕವನದ ಕವಿ ಯಾರೆಂಬ ಆಟ ಆಡಿದಾಗ ಪ್ರತಿಯೊಬ್ಬ ಕವಿಯ ಕವನವನ್ನು ಸರಿಯಾಗಿ ಊಹಿಸಿದಾಗ ನೆಚ್ಚಿನ ಆಟಿಕೆ ಕಂಡ ಮಗುವಿಗೆ ಆಗುವಷ್ಟು್ ಸಂತಸವಾಯ್ತು. ವಿನತೆಯವರ ಗಂಭಿರವಾದ ಪದಪುಂಜಗಳು, ಚಹಾ ಕುಡಿಸುವ ಅಮಿತಾರ ಆಪ್ತತೆ , ಕುವೆಂಪು ಅವರಂತಹ ವಿಜಯನಾರಸಿಂಹರ ವೇದಾಂತೋಕ್ತಿ ಹಾಗೂ ಸಾಮಾನ್ಯತೆಗೆ ಸವಾಲು ಹಾಕುವ ಕೇಶವನ ಸಾಲುಗಳು; ಒಂದಕ್ಕಿಂತ ಒಂದು ಭಿನ್ನ, ಸುಂದರ.
LikeLike
ಕಂಬಿಗಳಿಗಂಜಿ ಬದುಕೆ ನಾನು
ನಿನ್ನ ಕೂಡದೆ ಬಿಡೆ ನಾನು
ಕಂಬಿ ಸಂಬಂಧಗಳದ್ದಾದರೇನು
ಕೂಡದ ರೈಲಿನದ್ದಾದರೇನು
ನಾನೊಂದು ವಿಶಾಲ ವಿಶ್ವ ಮಾನವ
ನನ್ನೆದುರಿಗಿದೊ ಜಗ ಸಣ್ಣ ಗ್ರಾಮ
ನಿನ್ನ ದೇಶದಾಚೆ ದೂಡಿದರೇನು
ನನ್ನ ಅಂದದಂಗಳದಿ ಬಂಧಿಸಿದರೇನು
ದೃಢ ಒಂದಿದ್ದರೆ ಶಕ್ತಿ ಯುಕ್ತಿಯು ತಾನೆ
ನೀ ಸಿಕ್ಕರೆ ಎಲ್ಲ ಮರೆಯುವೆ ನಾನೆ
ರೈಲು ಬಂದು ಹೋದರೇನು
– ವಿರೂಪಾಕ್ಷ ಭಗವತಿ
ಕಛೇರಿಯ ಸಮಯ ಮೀರಿದರೇನು
LikeLike
Beautiful kavanagalu … Sandya sanje kavana tumba ishta aytu 👌👌
LikeLike
ರಾಮಶರಣರ ಚಿತ್ರಗಳ ಹಾಗೂ ಎಲ್ಲ ಕವಿಗಳ ಕವನಗಳ ಜುಗಲ್ ಬಂದಿ ಚೆನ್ನಾಗಿದೆ. ಅಭಿನಂದನೆಗಳು.
LikeLike
ಅದ್ಭುತ ಸಂಚಿಕೆಯಿದು!
ಕಣ್ಣಿಗೂ ಮನಸ್ಸಿಗೂ ಸಂತೃಪ್ತಿ, ಸಂತೋಷ, ಉಲ್ಲಾಸ ಕೊಡುವ ಚಿತ್ರಗಳು ಮತ್ತು ಕವನಗಳು! ಎಂಥ ಮಿಲನ. ಒಂದಕ್ಕಿಂತ ಒಂದು ಮಿಗಿಲಾದ ಫೋಟೋಗಳು ಹೆಸರಾದ ಗ್ಯಾಲರಿಯಲ್ಲಿ ಪ್ರದರ್ಶಿತವಾಗ ಬಲ್ಲವು; ಮುದ್ರಿಸಿ, ಚೌಕಟ್ಟು ಹಾಕಿ ಮನೆಯ ದಿವನಖಾನೆಯಲ್ಲಿ ನೇತುಹಾಕುವಂತ ಕವನಗಳು! ಕ್ಯಾಮರಾದ ಕಣ್ಣು ಕ್ಲಿಕ್ಕಿಸಿದ ಆ ಕ್ಷಣದಲ್ಲಿ ಸೆರೆಹಿಡಿದ ಎಲ್ಲ ಚಿತ್ರಗಳಲ್ಲೂ ಸಮಯ ನಿರಂತರವಾಗಿ ನಿಂತಿದೆ; ಕವನಗಳಲ್ಲಿ ನಿಲ್ಲದ ಚಲನೆಯಿದೆ! ಎಲ್ಲ ಕವಿಗಳ ಕಲ್ಪನೆಯ ಸಮೃದ್ಧಿ, ವೈಚಾರಿಕತೆಯ ಸೂಕ್ಷ್ಮತೆ, ತರ್ಕದ ಬುದ್ಧಿ, ಮನಮುಟ್ಟುವ ಮಾರ್ದವತೆ ಸವಿಯುತ್ತ ಮತ್ತೆ ಮತ್ತೆ ನೋಡಿದೆ, ಬಾಯಿ ಚಪ್ಪರಿಸಿ ಸವಿದೆ, ಅಸೂಯೆ ಪಟ್ಟೆ! ಇದನ್ನು ಯೋಜಿಸಿ, ಚಿತ್ರಕಾರನ್ನು ಹುಡುಕಿ, ಕವಿಗಳನ್ನು ಆಯ್ದು ರೂಪಿಸಿದ ಸಂಪಾದಕರಿಗೂ, ಭಾಗವಹಿಸಿದ ಎಲ್ಲ ಕಲಾಕಾರರಿಗೂ ಅಭಿನಂದನೆಗಳು. ಶ್ರೀವತ್ಸ ದೇಸಾಯಿ
LikeLike
vijaya Narasimha says,
ಧನ್ಯವಾದಗಳು 🙏
LikeLike
ರಾಮ್ ಶರಣ್ ಛಾಯಾಗ್ರಹಣ ಅದ್ಭುತ.
LikeLike
ತುಂಬಾ ಚೆನ್ನಾಗಿದೆ. ಕೆ. ಕುಲಕರ್ಣಿ ಅವರ ಕವನ ಅರ್ಥಗರ್ಭಿತವಾಗಿದೆ.
LikeLike