
ಪರಿಚಯ
ಅರ್ಪಿತ ರಾವ್ ಹುಟ್ಟಿ ಬೆಳೆದಿದ್ದು ಸೊರಬ ತಾಲೂಕಿನ ಬರಿಗೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೊದಲಿನಿಂದ ಹಸಿರು ತುಂಬಿದ ಕಾಡು , ಧೋ ಎಂದು ಸುರಿಯುವ ಮಳೆ ನೋಡಿ ಅದೇನೋ ಕವನ ಗೀಚುವ , ಕಥೆ ಬರೆಯುವ ಹುಮ್ಮಸ್ಸು ಇದಕ್ಕೆ ಸಾಥ್ ನೀಡಿದ್ದು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿದ್ದು ಪತ್ರಕರ್ತರಾದ ಇವರ ಅಪ್ಪ . ಕನಸನ್ನು ನನಸಾಗಿಸಿದ್ದು ಉಜಿರೆಯ ಪತ್ರಿಕೋದ್ಯಮ ವಿಭಾಗ. ಸಂಯುಕ್ತ ಕರ್ನಾಟಕದಲ್ಲಿ ಇಂಟರ್ನ್ಶಿಪ್ , ದೂರದರ್ಶನದಲ್ಲಿ ಸ್ವಲ್ಪ ದಿನಗಳ ವೃತ್ತಿ.
ಮದುವೆಯಾಗಿ ಬಂದಿದ್ದು ಲಂಡನ್ ಗೆ್. ಕಳೆದ ೮ ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ವಾಸ. ಆಕ್ಸಫರ್ಡ್ ನ ಬ್ಯಾನ್ಬರಿಯಲ್ಲಿ ಪ್ರಸ್ತುತ ವಾಸ. ವಿಜಯ ನೆಕ್ಸ್ಟ್ , ವಿಜಯಕರ್ನಾಟಕ , ಸಖಿ ಪಾಕ್ಷಿಕ ,ಉದಯವಾಣಿ, ಹೊಸದಿಗಂತ ಮುಂತಾದ ಪತ್ರಿಕೆಗಳಲ್ಲಿ ಸಾಕಷ್ಟು ಲೇಖನಗಳು ಪ್ರಕಟಗೊಂಡಿವೆ. ಬೇಸರ ಕಳೆಯಲು ಗೀಚುವ,ಕೆಲವೊಮ್ಮೆ ಪ್ರಕಟಗೊಂಡ ಲೇಖನಗಳನ್ನು ಇವರದೇ ಸ್ವಂತ ಬ್ಲಾಗ್ http://ibbani-ibbani.blogspot.co.uk/ ಇಲ್ಲಿ ಓದಬಹುದು . ಜಾನಪದ ಗೀತೆಗಳನ್ನು ಹಾಡುವುದು , ಹೊಸ ರುಚಿ ಮಾಡುವುದು ಹವ್ಯಾಸ . ಪ್ರಸ್ತುತ ರಿಟೇಲ್ ವಿಭಾಗದಲ್ಲಿ ಉದ್ಯಮದಲ್ಲಿರುವ ಅರ್ಪಿತ ಅನಿವಾಸಿಯಲ್ಲಿ ಹಲವು ನೆನಪುಗಳನ್ನು ಈ ಹಿಂದೆ ಹಂಚಿಕೊಂಡಿದ್ದಾರೆ. ಕಳೆದವಾರ ಹಣತೆ ಎನ್ನುವ ಅರ್ಥಪೂರ್ಣ ಕವನವನ್ನು ಬರೆದಿದ್ದರು. ಈ ವಾರ ಡೊವ್ ಡೇಲ್ ಎನ್ನುವ ಸ್ಥಳಕ್ಕೆ ಕೊಟ್ಟ ಭೇಟಿಯನ್ನೂ ಜೊತೆಗೆ ತಾವು ನೋಡಿದ ಗಂಟು-ಮೂಟೆ ಎನ್ನುವ ಬಹು ಚರ್ಚಿತ ಸಿನಿಮಾ ಬಗ್ಗೆ ವಯಕ್ತಿಕ ಅನಿಸಿಕೆ್ಗಳನ್ನು ಹಂಚಿಕೊಂಡಿದ್ದಾರೆ- –ಸಂ
ಇಂಗ್ಲೆಂಡಿನ ಬಹುತೇಕ ಭಾಗಗಳು ವರ್ಷದ ಬೇರೆಬೇರೆ ಕಾಲಮಾನಗಳಲ್ಲಿ ವಿಭಿನ್ನ ರೀತಿಯಲ್ಲಿ ಕಾಣುತ್ತವೆ ಮತ್ತು ಅದಕ್ಕೆ ತನ್ನದೇ ಆದ ವೈಶಿಷ್ಟತೆಯನ್ನು ಕೂಡ ಹೊಂದಿರುವುದು ಕಂಡುಬರುತ್ತದೆ. ಉದಾಹರಣೆಗೆ ಬೇಸಿಗೆಯಲ್ಲಿ ಒಂದು ರೀತಿಯ ಹಸಿರಾದರೆ ಚಳಿಗಾಲದಲ್ಲಿ ಬೋಳು ಮರಗಳು ಕೆಲವೊಮ್ಮೆ ಹಿಮ ತುಂಬಿದ ಶ್ವೇತವರ್ಣವನ್ನು ಮೈತುಂಬಿಸಿಕೊಂಡಿರುವ ಪ್ರಕೃತಿಯ ಅಂದವನ್ನು ನೋಡುವುದೇ ಇನ್ನೊಂದು ಸೊಬಗು. ಹಾಗೆಯೇ ಶಿಶಿರ ಋತುವಿನಲ್ಲಿ ಹೂವಿನಿಂದ ಹಾಸಿ ಹೊದ್ದಿರುವ ಪ್ರಕೃತಿಯನ್ನು ಕಣ್ಣು ತುಂಬಿಸಿಕೊಳ್ಳುವುದು ಎಲ್ಲಕ್ಕಿಂತ ಚೆಂದ.
ಹಾಗೆಯೇ ಇನ್ನೇನು ಇಲ್ಲಿನ ವಸಂತ ಕಾಲ ಮುಗಿದು ಚಳಿಗಾಲ ಪ್ರಾರಂಭವಾಗಬೇಕು ಎನ್ನುವಾಗ ನಾವು ಈ ಭಾರಿ ಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ . ಹೆಸರಿಗೆ ತಕ್ಕ ಹಾಗೆ ಇಲ್ಲಿ ಎಲ್ಲಿ ನೋಡಿದರೂ ಹಸಿರು ಬೆಟ್ಟಗಳು. ಮಲೆನಾಡಿನಲ್ಲಿ ಬೆಳೆದ ನನಗೆ ಹಸಿರು ಬೆಟ್ಟಗುಡ್ಡಗಳು ಹೊಸದಲ್ಲ ಅವುಗಳ ತಪ್ಪಲಿನಲ್ಲೇ ಬೆಳೆದು ಬಂದಿದ್ದರಿಂದ ಅದೊಂದು ರೀತಿಯಲ್ಲಿ ಎಷ್ಟು ಸೋಜಿಗವೋ ಅಷ್ಟೇ ರೂಢಿ ಕೂಡ ಎನ್ನಬಹುದು. ಆದರೆ ಇಲ್ಲಿನ ಬೆಟ್ಟಗಳ ಸೊಗಸೇ ಬೇರೆ. ಎತ್ತರದ ದಟ್ಟ ಅರಣ್ಯಗಳ ನಡುವಿನ ಬೆಟ್ಟಗಾಡುಗಳು ಇದಲ್ಲ. ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ತಾನೇ ಮಾಡಿಕೊಂಡಿದ್ದಾನೇನೋ ಎಂಬಂತಿರುತ್ತದೆ ಇಲ್ಲಿನ ಬೆಟ್ಟಗಳು.ಪೀಕ್ ಡಿಸ್ಟ್ರಿಕ್ಟ್ ನ ಯಾವುದೇ ಭಾಗಗಳಿಗೆ ಹೋದರೂ ಕೂಡ ಸಾಕಷ್ಟು ನಡೆಯುವುದು ಅಥವಾ ಬೆಟ್ಟ ಹತ್ತುವುದು ಇದ್ದೇ ಇರುತ್ತದೆ ಆದ್ದರಿಂದ ರಣ ಬಿಸಿಲಿನಲ್ಲಿ ಹೋದರೆ ಬೆಟ್ಟ ಹತ್ತುವುದು ಕಷ್ಟವಾಗಬಹುದು ಆದ್ದರಿಂದ ಸ್ಪ್ರಿಂಗ್ ಕಾಲದಲ್ಲಿ ಹೋದರೆ ಇಲ್ಲಿನ ಪ್ರವಾಸಿ ಸ್ಥಳಗಳನ್ನು ಸಾಕಷ್ಟು ಮಜಾ ಮಾಡಬಹುದು .
ಹಾಗೆ ಈ ಬಾರಿ ನಾವು ನೋಡಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ ನ ಡೋವ್ ಡೇಲ್
ಡೋವ್ ಡೇಲ್ :
ಡರ್ಬಿಶೇರ್ ನಲ್ಲಿರುವ ಡೋವ್ ಡೇಲ್ ಗೆ ವರ್ಷಪೂರ್ತಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ನಾವು ಹೋಗಿದ್ದು ಸೆಪ್ಟೆಂಬರ್ ನ ಮಧ್ಯ ಭಾಗವಾದ್ದರಿಂದ ಹದವಾದ ಚಳಿ ಜೊತೆಗೆ ಸೂರ್ಯನ ಎಳೆ ಬಿಸಿಲು ಎರಡೂ ಬೆರೆತು ಮನಸ್ಸಿಗೆ ಮುದ ನೀಡುವ ವಾತಾವರಣವಾಗಿತ್ತು . ಡೋವ್ ಡೇಲ್ ಸ್ಟೆಪ್ಪಿಂಗ್ ಸ್ಟೋನ್ ಎಂದೇ ಕರೆಯಲಾಗುವ ಈ ಪ್ರವಾಸಿ ಸ್ಥಳವನ್ನು ಡೋವ್ ಡೇಲ್ ವಾಕ್ ಎಂದು ಕೂಡ ಹೇಳುತ್ತಾರೆ. ಇದಕ್ಕೆ ಕಾರಣ ಇಲ್ಲಿ ಹರಿಯುತ್ತಿರುವ ನದಿಯ ಮದ್ಯೆ ಕಲ್ಲನ್ನು ಇಡಲಾಗಿದ್ದು ಇಲ್ಲಿನ ಬೆಟ್ಟವನ್ನು ಹತ್ತಲು ಒಂದೊಂದೇ ಕಲ್ಲುಗಳನ್ನು ದಾಟಿ ಹೋಗಬೇಕು.
ಇಲ್ಲಿ ಹದಿನೆಂಟನೇ ಶತಮಾನದಲ್ಲಿ ಪ್ರಾರಂಭವಾದ ಪ್ರವಾಸೋದ್ಯಮ ಇಂದು ಯುನೈಟೆಡ್ ಕಿಂಗ್ಡಮ್ ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲಾಮ್ ಎಂಬ ಹಳ್ಳಿಯಲ್ಲಿ ಸುಮಾರು ೪೫ ಮೈಲಿಯವರೆಗೆ ಹರಿಯುವ ಡೋವ್ ಎಂಬ ನದಿಯ ತಟದಲ್ಲಿ ಸುಣ್ಣದ ಕಲ್ಲಿನ ಕೊರೆತಗಳಿಂದ ನಿರ್ಮಾಣವಾದ ಬೆಟ್ಟವನ್ನು ಡೋವ್ ಡೆಲ್ ವ್ಯಾಲಿ ಎಂದೇ ಕರೆಯುತ್ತಾರೆ.
ಅದೆಲ್ಲಕ್ಕಿಂತ ಇಲ್ಲಿ ಮನಸೂರೆಗೊಳ್ಳುವುದು ಡೋವ್ ನದಿಯ ಜುಳುಜುಳು ನಾದದ ಮಧ್ಯೆ ಸ್ಟೆಪ್ಪಿಂಗ್ ಸ್ಟೋನ್ ಗಳಲ್ಲಿ ಅತ್ತ ದಾಟಿ ಹೋದರೆ ಸುತ್ತಲೂ ಹಸಿರು ಹಾಸಿದ ಬೆಟ್ಟಗಳು ಮತ್ತು ಅದನ್ನು ನೋಡಲೆಂದೇ ಪ್ರವಾಸಿಗರೊಂದಿಗೆ ಬಂದಂತಿರುವ ಚಿನ್ನದ ಗೆರೆ ಎಳೆದಂತೆ ಕಾಣುವ ಸೂರ್ಯನ ಹದವಾದ ಕಿರಣಗಳು . ಬೆಟ್ಟದ ತುದಿಯನ್ನು ಹತ್ತಿ ನೋಡಿದರೆ ಅಲ್ಲಿನ ಚಿತ್ರಣ ಮನಸ್ಸನ್ನು ಮುದಗೊಳಿಸುವುದು ಖಂಡಿತ.
ಡರ್ವೆಂಟ್ :
ಡೋವ್ ಡೇಲ್ ನಿಂದ ಸುಮಾರು ಒಂದು ತಾಸು ಕಾರಿನ ಪ್ರಾಯಾಣ ಡರ್ವೆಂಟ್ ಗೆ. ಡರ್ವೆಂಟ್ ಕೂಡ ಪೀಕ್ ಡಿಸ್ಟ್ರಿಕ್ಟ್ ನ ಒಂದು ಮುಖ್ಯ ಪ್ರವಾಸಿ ತಾಣಗಲ್ಲಿ ಒಂದು . ಡೋವ್ ಡೇಲ್ ನಿಂದ ಡರ್ವೆಂಟ್ ಪ್ರಯಾಣವೇ ಸುಂದರ. ಇಕ್ಕೆಲಗಳಲ್ಲಿ ಇರುವ ಬೆಟ್ಟಗಳ ನಡುವೆ ಕಾರಿನಲ್ಲಿ ಹೋಗುವ ಅನುಭವ ಒಂದುರೀತಿಯ ಮುದ ನೀಡುತ್ತದೆ. ಹಸಿರು ಮತ್ತು ಹಳದಿ ಬಣ್ಣಗಳಿಂದ ಕುಡಿದ ಬೆಟ್ಟಗಳು ಮತ್ತು ಅಲ್ಲಲ್ಲಿ ಕುದುರೆ , ಮೇಕೆ , ಕುರಿಗಳು ಮೇಯುತ್ತಿರುವುದನ್ನು ಕಾಣಬಹುದು. ಕೆಲವು ಭಾಗಗಳಲ್ಲಿ ಇಲ್ಲಿನ ಟ್ರೆಕಿಂಗ್ ಎಂದೇ ಬರುವ ಜನರು ನಡೆದು ಹೋಗುವುದು ಅಥವಾ ಸೈಕ್ಲಿಂಗ್ ಮಾಡಿಕೊಂಡು ಪ್ರವಾಸಿ ಸ್ಥಳಕ್ಕೆ ಹೋಗುತ್ತಿರುವುದು ಕಂಡುಬರುತ್ತದೆ.
ಡೋವ್ ಡೇಲ್ ಗೆ ಹೋಲಿಸಿದರೆ ಡರ್ವೆಂಟ್ ಸಂಪೂರ್ಣ ವಿಭಿನ್ನ ಎನಿಸುತ್ತದೆ. ಇದೊಂದು ನಿಸರ್ಗಧಾಮ . ಡಾರ್ವೆಂಟ್ ನಲ್ಲಿ ಹಸಿರು ಹಾಸಿ ಹೊದ್ದಂತಿರುವ ಸ್ಥಳದಲ್ಲಿ ಪ್ರವಾಸಿಗರಿಗೋಸ್ಕರವೇ ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲಿನ ಬೆಂಚು. ಅಲ್ಲಿ ಕುಳಿತು ಎದುರುಗಿರುವ ಪ್ರಕೃತಿಯನ್ನು ನೋಡುತ್ತಿದ್ದರೆ ಸುತ್ತಲಿನ ಪ್ರಪಂಚವೇ ಮರೆತಂತ ಅನುಭವ. ಇಲ್ಲಿ ಡರ್ವೆಂಟ್ ನದಿಗೆ ಬ್ರಿಜ್ ಕಟ್ಟಲಾಗಿದೆ . ಜೊತೆಗೆ ಇದನ್ನು ಡರ್ಬಿಶೈರ್ ನ ಲೇಕ್ ಡಿಸ್ಟ್ರಿಕ್ಟ್ ಎಂದು ಕರೆಯಲಾಗುತ್ತದೆ. ಜೊತೆಗೆ ಇಲ್ಲಿ ಕಾಡುಗಳ ಮಧ್ಯೆ ನಡೆದುಕೊಂಡು ಹೋಗಿ ಪ್ರವಾಸಿ ಸ್ಥಳವನ್ನು ತಲುಪಬೇಕಾಗಿದ್ದು ಇದು ದಿನನಿತ್ಯದ ಜೀವನ ಜಂಜಾಟದಲ್ಲಿರುವವರಿಗೆ ಒಂದು ರೀತಿಯ ಪ್ರಶಾಂತ ವಾತಾವರಣವನ್ನು ನೀಡುತ್ತದೆ.
ಇಷ್ಟೇ ಅಲ್ಲದೆ ಪೀಕ್ ಡಿಸ್ಟ್ರಿಕ್ಟ್ ಗೆ ಹೋಗುವಾಗ ಆಗಾಗ ಬರುವ ಮಳೆ ಎದುರಿಸಲು ರೈನ್ ಕೋಟ್ ಅಥವಾ ಕೊಡೆ ಮತ್ತು ಬೆಟ್ಟವನ್ನು ಹತ್ತಲು ಟ್ರೆಕಿಂಗ್ ಗೆ ಸೂಕ್ತವಾದ ಶೂ ಅನಿವಾರ್ಯ.
———————ಅರ್ಪಿತ ರಾವ್, ಬ್ಯಾನ್ಬರಿ
ಚಿತ್ರ ವಿಮರ್ಶೆ- ’ಗಂಟು-ಮೂಟೆ ’
ಆ ಚಿತ್ರ ಪ್ರಾರಂಭವಾಗುವುದೇ ಹಾಗೆ ಚಲನಚಿತ್ರದ ಮೇಲೆ ಅತೀವ ಹುಚ್ಚನ್ನು ಹಚ್ಚಿಕೊಂಡಿರುವ ಹೆಣ್ಣು ಮಗಳು ಒಂಟಿಯಾಗಿ ಮೂವಿ ನೋಡಲು ಹೋದಾಗ ಅನಿವಾರ್ಯವಾಗಿ ಶೋಷಣೆಗೆ ಒಳಗಾಗಿ ತತ್ತರಿಸಬೇಕಾಗುತ್ತದೆ . ಹಾಗಂತ ಇದು ಹೆಣ್ಣಿನ ಶೋಷಣೆಗೆ ಸಂಬಂಧ ಪಟ್ಟ ಕಥೆಯಲ್ಲ. ಜೀವನದ ಪಯಣದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಗಂಟು ಮೂಟೆ ಕಟ್ಟಿಕೊಂಡು ಓಡಾಡುತ್ತಿರುವವರೇ .
ನಾವು ಇರುವಷ್ಟು ದಿನ ನಮ್ಮ ಜೊತೆ ಕೆಲವು ಮರೆಯಲಾರದ ನೆನಪುಗಳನ್ನು ಹೊತ್ತು ಸಾಗುವುದು ಅನಿವಾರ್ಯ ಕೂಡ. ಅಂತಹ ಒಂದು ಪ್ರಯಾಣವನ್ನು ತಿಳಿಸುವ ಚಿತ್ರವೇ ರೂಪ ರಾವ್ ನಿರ್ದೇಶನದ ಗಂಟು ಮೂಟೆ . ಒಂದು ಮುಗ್ದ ವಯಸ್ಸಿನ ಹೆಣ್ಣು ಮಗಳು ವಯಸ್ಸಿಗೆ ಮೀರಿ ಪ್ರೀತಿಯಲ್ಲಿ ಮುಳುಗಿ ತನ್ನ ಬದುಕನ್ನೇ ಹೇಗೆ ತಿರುಗಿಸಿಕೊಳ್ಳಬಲ್ಲಳು ಎಂಬುದನ್ನು ಈ ಚಿತ್ರ ಮನದಟ್ಟು ಮಾಡುತ್ತದೆ. ಹದಿಹರೆಯದಲ್ಲಿ ಕಾಡುವ ಪ್ರೀತಿ ಹೇಗೆ ಜೀವನ ಪರ್ಯಂತ ಮರೆಯಲಾರದೆ ಬೆನ್ನತ್ತ್ತಿ ಬಂದುಬಿಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿದೆ .ಚಿತ್ರದಲ್ಲಿ ಕಂಡು ಬರುವ ಕೆಲವು ಘಟನೆಗಳು ಬಹುತೇಕ ಜನರು ಶಾಲಾ ಕಾಲೇಜುಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸಿರುವುದು ನಿಜವಾದ್ದರಿಂದ ನೋಡುಗರನ್ನು ನೆನಪಿನ ಲೋಕಕ್ಕೆ ಕರೆದುಕೊಂಡು ಹೋಗಬಹುದಾದ ಚಿತ್ರವಿದು.
ಚಲನಚಿತ್ರ ನೋಡಿ , ಪ್ರೀತಿಯ ಬರಹಗಳನ್ನು ಬರೆದು , ಚಲನಚಿತ್ರದ ಹೀರೋ ಗಳ ಮೇಲೆ ಬೆಳೆಯುವ ಪ್ರೀತಿ ಕೊನೆಗೆ ತನಗೂ ಅಂತಹದೇ ಒಂದು ಹುಡುಗನನ್ನು ಹುಡುಕುವಲ್ಲಿ ತಲ್ಲಣಿಸುತ್ತದೆ ಎಂದು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರಬುದ್ಧವಾಗಿ ಬೆಳೆಯುವ ಮೊದಲೇ ಇಂತಹ ಆಸೆಗಳಿಗೆ ಒಳಗಾಗುವ ಹೆಣ್ಣು ಮುಂದೇನೆ್ಲ್ಲ ಅನುಭವಿಸಬೇಕಾಗಬಹುದು ಎಂಬುದನ್ನು ತೋರಿಸುವ ಪ್ರಯತ್ನ ರೂಪ ರಾವ್ ಮಾಡಿದ್ದಾರೆ . ಚಲನ ಚಿತ್ರ ಸಂಪೂರ್ಣವಾಗಿ ೯೦ ರ ದಶಕದಲ್ಲಿ ನಡೆದಿರಬಹುದಾದ ಘಟನೆಗಳಂತೆ ಪತ್ರ ಮತ್ತು ಲ್ಯಾಂಡ್ಲೈನ್ ಫೋನ್ ಇಂತವನ್ನೆಲ್ಲ ತೋರಿಸಿದರೂ ಕೂಡ ಹೆಚ್ಚಿನ ಕಡೆ ಇದು ಇಂದಿಗೂ ಕೂಡ ಅನ್ವಯಿಸುತ್ತದೆ ಎಂದು ನನ್ನ ಅಭಿಪ್ರಾಯ. ಇಂದು ಕೂಡ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಇಂತಹ ಆಸೆ ಆಕಾಂಕ್ಷೆಗಳು ಸಹಜ ಮತ್ತು ಅದು ಕೂಡ ಇಂತಹದೇ ಪರಿಣಾಮವನ್ನು ಬೀರಿದ ಉದಾಹರಣೆಗಳನ್ನು ನಮ್ಮ ಸುತ್ತಮುತ್ತಲೇ ಕಾಣಬಹುದು.
ಈಗಿನ ಹೈಸ್ಕೂಲ್ ಮತ್ತು ಕಾಲೇಜಿನ ಮಕ್ಕಳು ಈ ಚಿತ್ರವನ್ನು ನೋಡಿ ತಾವೂ ಹೀಗಾಗಬಾರದು ಎಂಬುದನ್ನು ಮನಗೊಳ್ಳಬೇಕು ಎಂಬ ಸಂದೇಶವನ್ನು ಸಾರ ಹೊರಟಿರುವ ಚಿತ್ರವಿದು . ಆದರೆ ಅಲ್ಲಲ್ಲಿ ಕಂಡು ಬರುವ ಅಗತ್ಯಕ್ಕಿಂತ ಹೆಚ್ಚೆನಿಸುವ ಪ್ರೇಮಕ್ಕಿಂತ ಆ ಸಮಯದಲ್ಲಿ ಕಂಡುಬರುವ ಬಯಕೆಯನ್ನು ತೋರಿಸುವ ಕಿಸ್ಸಿಂಗ್ ಸೀನ್ ಗಳು ಮುಜುಗರ ಉಂಟು ಮಾಡುವಂತೆಯೂ ಅದರ ಅವಶ್ಯಕತೆ ಇರಲಿಲ್ಲ ಎಂದು ಕೂಡ ಅನ್ನಿಸುತ್ತದೆ. ಹದಿಹರೆಯದ ಪ್ರೀತಿ ಹೇಗೆ ಮಕ್ಕಳ ಜೀವನವನ್ನೇ ಹಾಳುಮಾಡಿಬಿಡಬಲ್ಲದು ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಹದಿಹರೆಯದ ಸಮಯದಲ್ಲಿ ಹುಟ್ಟುವ ಮೊದಲ ಪ್ರೀತಿ ಕೊನೆಯವರೆಗೂ ಇರುತ್ತದೆಯೋ ಇಲ್ಲವೋ ಆದರೆ ಅದರ ನೆನಪು ಮಾತ್ರ ಕಾಡುವುದು ಖಂಡಿತ ಎಂಬುದು ಈ ಚಲನಚಿತ್ರದ ಪೂರ್ಣ ಸಂದೇಶ. ಅಂತಹ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರ ಇಡೀ ಇಬ್ಬರ ಜೀವನವನ್ನೇ ಹಾಳುಮಾಡಿಬಿಡಬಹುದು ಅಥವಾ ಒಂದು ವ್ಯಕ್ತಿತ್ವವನ್ನು ರೂಪಿಸಲು ಬುನಾದಿ ಆಗಿಬಿಡಬಹುದು ಎಂಬುದನ್ನು ತೋರಿಸಿರುವ ಚಿತ್ರವಿದು. ಕಥಾನಾಯಕಿಯನ್ನೇ ಮುಖ್ಯವಾಗಿ ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ತೇಜು ಬೆಳವಾಡಿಯವರ ಪಾತ್ರ ಸಹಜ ಸುಂದರವಾಗಿ ಮೂಡಿ ಬಂದಿದೆ.

ಚಿತ್ರದಲ್ಲಿ ಬರುವ ಹಾಡುಗಳು ಒಳ್ಳೆಯ ಸಾಹಿತ್ಯವನ್ನು ಹೊಂದಿದ್ದು , ಕಾಲೇಜಿನ ಮಕ್ಕಳ ಮನಸ್ಥಿತಿ ಸಾರುತ್ತದೆ. ಕಥೆಗೆ ತಕ್ಕ ಪಾತ್ರವನ್ನು ಮಾಡುವಲ್ಲಿ ನಿಶ್ಚಿತ್ ಮತ್ತು ತೇಜು ಬೆಳವಾಡಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಕಥಾ ನಾಯಕನಾದ ನಿಶ್ಚಿತ್ ಕೂಡ ಚಲನಚಿತ್ರ ಮುಗಿದ ನಂತರವೂ ಮನಸ್ಸಿನಲ್ಲಿ ಉಳಿಯುತ್ತಾರೆ . ನೀವೂ ಒಮ್ಮೆ ಈ ಚಲನಚಿತ್ರ ವೀಕ್ಷಿಸಿ ಮತ್ತು ಹಳೆಯ ದಿನಗಳ ಮೆಲುಕುಹಾಕಿ.-ಅರ್ಪಿತ ರಾವ್, ಬ್ಯಾನ್ಬರಿ
Now I am really tempted to visit Dovedale !
LikeLike
If you are passionate about trekking ,then dovedale is the best place .there are different level of hills in one place which is moderate to high we can choose which one we want to climb .
Thanks
Arpitha Rao
LikeLike
ನಿಮ್ಮ ಲೇಖನ ಡವ್ ಡೇಲ್ ನ ವರ್ಣನೆಯನ್ನು ಸುಂದರವಾಗಿ ಮಾಡಿದೆ. ಅಲ್ಲೇ ಇರುವ Thorpe’s cloud ಎಂಬ ಗುಡ್ಡ ಚಿಕ್ಕದಾಗಿ ಕಂಡರೂ ಹೃದಯಕ್ಕೆ ಸರಿಯಾದ ಕಸರತ್ತು ಕೊಡುವ ಚಾರಣ. ಇನ್ನೂ ನಿಮ್ಮ ಲೇಖನಗಳನ್ನು ಓದುವ ಸದವಕಾಶ ನಮಗೆ ಸಿಗಲಿ.
LikeLike
Thank you 😊
LikeLike
ಅರ್ಪಿತಾ ಅವರಿಗೆ ಗುಡ್ಡ, ಹಚ್ಚ ಹಸಿರ ಹುಲ್ಲು, ಗಿಡಮರಗಳ ಪ್ರಕೃತಿ ಬಹಳ ಹಿಡಿಸುವಂತೆ ಕಾಣುತ್ತದೆ. ಆ ಸೌನ್ದರ್ಯವನ್ನು ಸವಿಯುತ್ತ ಕುಣಿದುಬಿಡುತ್ತಾರೆ, ಅವುಗಳನ್ನರಸುತ್ತ ಹೋಗುತ್ತಾರೆ ಅಂತ ಕಾಣುತ್ತದೆ. ಅವರ ಬ್ಲಾಗ್ ಸ್ಪಾಟ್ ನಲ್ಲೂ ಆ ರಮ್ಯಾ ಸ್ಥಳಗಳ ವರ್ಣನೆ ನೋಡಿದೆ. ಎಷ್ಟು ಬೇಕೋ ಅಷ್ಟೂ ಬರೆದು ಮುಂದೆ ಹೋಗುತ್ತಾರೆ. ಅನವಶ್ಯಕ ‘ಎಲೆ’ಯುವದಿಲ್ಲ. ಹೋಗಬೇಕೆನ್ನುವವರಿಗೆ ‘ಪ್ರಾಕ್ಟಿಕಲ್ ಟಿಪ್ಸ್”ಸಹ ಕೊಡುತ್ತಾರೆ. ಪೀಕ್ ಡಿಸ್ಟ್ರಿಕ್ಟ್ ನನಗೂ ಹಿಡಿಸಿದ ಸ್ಥಳ. ಚಂದ ಚಂದನ್ನ ಜಾಗಗಳು, ಫೋಟ್ಗ್ರಾಫರ್ಸ್ ಪ್ಯಾರಡೈಸ್ . ಆ ಕೊನೆಯ ದೃಶ್ಯ ಹಿಡಿಸಿತು. ವದಂತ ಮತ್ತು ಶರದೃತುಗಳಲ್ಲಿ ಆಹ್ಲಾದಕರ ಹವೆಯಲ್ಲದೆ
ಸೂರ್ಯನ ಕಿರಣಗಳು ಅತಿ ತೀಕ್ಷ ಅಥವಾ ಅತಿ ಮಂದವಿರದೆ ಒಳ್ಳೊಳ್ಳೆಯ ಚಿತ್ರಗಳಿಗೆ ಅವಕಾಶ ಕೊಡುತ್ತದೆ. ಅರ್ಪಿತಾ ಅವರೇ ಇನ್ನೂ ಹೀಗೆಯೇ ಬರೆಯುತ್ತಿರಿ. ಅನಿವಾಸಿಗೇ ಮೊದಲು ಕಳಿಸಿಕೊಡಿ!😀
ಆ ಸಿನಿಮಾ ನಾನಿನ್ನೂ ನೋಡಿಲ್ಲ. ಶ್ರೀವತ್ಸ ದೇಸಾಯಿ
LikeLiked by 1 person
Sir thanks a lot for reading and encouraging 🙏🙏.. .. Yes weekend trips andre baala ishta Nange 🤗
LikeLike
ಅರ್ಪಿತಾ ರಾವ್ ಅವರ ಬರಹ ತುಂಬ ಚೆನ್ನಾಗಿದೆ.
ಡವ್ ಡೇಲ್ ಗೆ ನಾಕಾರು ಸಲ ಹೋಗಿದ್ದೇನೆ. ಇಷ್ಟು ಸುಂದರವಾಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ!
‘ಗಂಟು ಮೂಟೆ’ ಚಿತ್ರದ ಬಗ್ಗೆ ವಿಮರ್ಶೆಗಳನ್ನು ಓದಿದ್ದೇನೆ. ಅರ್ಪಿತಾ ಅದನ್ನು ಬರೆದಿರುವ ರೀತಿ ವಿಭಿನ್ನವಾಗಿದೆ ಮತ್ತು ಚಿತ್ರವನ್ನು ನೋಡಲು ಪ್ರೇರೇಪಿಸುತ್ತದೆ. ಅಮೇಜಾನ್ ಪ್ರೈಮ್ ನಲ್ಲಿ ಈ ಸಿನೆಮಾ ಬಂದಿದೆಯಂತೆ.
‘ಅನಿವಾಸಿ’ಗೆ ಇನ್ನೂ ಬರೆಯುತ್ತಿರಿ. ನಿಮ್ಮ ಬ್ಲಾಗನ್ನೂ ಓದುತ್ತೇನೆ.
ಕೇಶವ
LikeLike
Thanks a lot for your encouraging words sir 🙏🙏
Arpitha Rao
LikeLike