ಋತುಗೀತೆಗಳು- ಅನಿವಾಸಿಯ ಮೂವರು ಕವಿಗಳಿಂದ..

ಚಿತ್ರ -ಅಮಿತ ರವಿಕಿರಣ

( ಋತುಚಕ್ರ ಬದಲಾದಂತೆ ನಮ್ಮ ಭಾವನಾ ಜಗತ್ತಿನ ಬಣ್ಣವೇ ಬದಲಾಗುವುದು ಕೂಡ ನಿಸರ್ಗದತ್ತವಾದ ಕ್ರಿಯೆಯಿರಬಹುದು.  ಚೈತ್ರದಲ್ಲಿ ಚಿಗುರುವ ಎಲೆಗಳು ಹೊಸತನ್ನು, ಭರವಸೆಯನ್ನು ಹೊತ್ತುತಂದರೆ, ಹನಿಯುವ ಮಳೆ, ಸೂರ್ಯನ ಕಿರಣ, ಕಮಾನು ಬಿಲ್ಲು  ವಸಂತಮಾಸದಲ್ಲಿ ಕನಸಿನ ಸಾಮ್ರಾಜ್ಯವನ್ನೇ ಸೃಷ್ಟಿಸಿಬಿಡುತ್ತವೆ. ತೀಡಿ ಬೀಸುವ ಗಾಳಿಯಲ್ಲಿ ಉದುರುವ ಶರತ್ಕಾಲದ ಚಿನ್ನದ ಬಣ್ಣದ ಎಲೆಗಳು ಇಡೀ ಜೀವನದ  ಕ್ಷಣಿಕತೆಯನ್ನೂ, ಅಗಾಧತೆಯನ್ನೂ, ಕಾಲಚಕ್ರದ ಪುನಾರಾವರ್ತನೆಯನ್ನೂ ಬಿಂಬಿಸಿ ಬದುಕಿನ ಎಲ್ಲ ಘಟ್ಟಗಳ, ಸಾವು-ಮರುಹುಟ್ಟುಗಳ ಆಧ್ಯಾತ್ಮಿಕ ದರ್ಶನಗಳನ್ನು ಭಾವುಕ ಜನರಲ್ಲಿ ಮೂಡಿಸುತ್ತವೆ.

ಇವೇ ವಿಚಾರಗಳು ಮತ್ತೆ ಕೆಲವರಲ್ಲಿ ಪರಿಸರದ ಬಗೆಗಿನ ಕಾಳಜಿಗಳನ್ನು ಮತ್ತು ಮನುಷ್ಯ ನಡೆದ ದಾರಿಯ ಮೌಲ್ಯಾವಲೋಕನವನ್ನು ಮಾಡಲು ಪ್ರಚೋದಿಸಬಹುದು.

ಇನ್ನು ಕೆಲವರಲ್ಲಿ ಶರತ್ಕಾಲದಲ್ಲಿ ಜಾರುತ್ತ ಹೋಗುವ ಹಗಲಿನ ಬೆಳಕು, ಬೆಳೆಯುತ್ತ ಹೋಗುವ ಕತ್ತಲಿನ ಕಪ್ಪು  ಮತ್ತು ಈ ಕತ್ತಲನ್ನು ಸೆಣೆಸಿ ಮತ್ತ ಬೆಳಕಿನೆಡೆ ತುಡಿವ ಮನುಷ್ಯನ ಮನಸ್ಸಿನ ಸಂಕಲ್ಪವಾಗಿ ಬರುವ ದೀಪಾವಳಿ-ಬೆರಗಿನ ಬಣ್ಣಗಳನ್ನು ಹರಡುತ್ತದೆ.

 ಈ ಋತುಮಾನಕ್ಕೆ ಹೊಂದುವಂತೆ ವಿಜಯ್ ನರಸಿಂಹ, ನಾನು ಮತ್ತು ಅರ್ಪಿತ ರಾವ್-ನಿಮಗಾಗಿ  ಅತಿ ಭಿನ್ನ ವಿಚಾರಗಳ ಮೂರು ಋತುಗೀತೆಗಳನ್ನು ಬರೆದು ನೀಡುತ್ತಿದ್ದೇವೆ.  ಮೊದಲ ಕವನಕ್ಕೆ ಶರತ್ಕಾಲದ ಸುಂದರ ಫೋಟೋಗಳನ್ನು ಒದಗಿಸದವರು ಶ್ರೀಮತಿ ಅಮಿತಾ ರವಿಕಿರಣ್. ಮಿಕ್ಕ ಚಿತ್ರಗಳು ಗೂಗಲ್ ಕೃಪೆ. ಓದಿ  ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ-ಸಂ)

 

  ಪುನರಪಿ ಜನನಂ ಪುನರಪಿ ಮರಣಂ…

ಶರತ್ಕಾಲದ ಷರತ್ತಿಗೆ ಬದ್ಧರಾಗಿ

ನಿನ್ನ ತೊರೆದು ಹಾರುತಿರುವ ಎಲೆಗಳು ನಾವು

ನಮ್ಮನು ಹೆತ್ತ ಗಿಡ, ಮರಗಳೇ

ನಿಮಗಿದೋ ಋತು ನಿಮಿತ್ತ ವಿದಾಯ

 

                          ಚಿತ್ರ -ಅಮಿತ ರವಿಕಿರಣ

ಚಿಗುರಾಗಿ, ಕಿರಿದಾಗಿ ಮುದುಡಿ

ದಿನಂಪ್ರತಿ ಹಿಗ್ಗಿ ಹಿರಿದಾಗಿ,

ತಿಳಿ ಹಸಿರು, ಪಚ್ಚೆ ಹಸಿರು

ಬಹುಕಾಲ ಮೈತಳೆದು

ಗಾಳಿಗೆ ಬಾಗುತ, ಮಳೆಯಲಿ

ತೋಯ್ದು ನಲಿಯುತ

ಬಿಸಿಲಿಗೆ ಮೈಯೊಡ್ಡಿ ನಿಲ್ಲುತ

ನಿನ್ನ ಮೈ ಹೊದಿಕೆಯಂತೆ

ಅಂಟಿಕೊಂಡು ನೀ ಹೆತ್ತ

ಫಲ ಪುಷ್ಪಗಳೊಡನೆ ಆಡಿ

ಕಳೆದೆವು ಒಂದು ಸಂವತ್ಸರ

ಇದೀಗ ಮುಗಿಯುತಿದೆ ಸಡಗರ

ಹಳದಿ, ನಸುಗೆಂಪು ರಕ್ತಚಂದನ

ಓಕುಳಿಯಾಡಿ ಹಣ್ಣೆಲೆಯೆಂಬ ಹೆಸರು ಹೊತ್ತು

ಕೊನೆಗೆ ತೊಟ್ಟು ಮುರಿದು

                              ಚಿತ್ರ -ಅಮಿತ ರವಿಕಿರಣ

ಒಂದೇ ಒಂದು ಸಂವತ್ಸರದ

ಅಲ್ಪಾಯುಷಿಗಳು ನಾವು

ನಿನ್ನ ತೊರೆಯುವ ಕಾಲ

ಇನ್ನು ಯಾವ ದಿಕ್ಕಿಗೊ?

ಯಾವ ಜಾಗಕೊ ?

ಗಾಳಿಯ ನಿರ್ಧಾರ

ಪುಣ್ಯವಿದ್ದರೆ ಮಣ್ಣೊಳಗೆ ಬೆರೆತು

ನಿನ್ನದೇ ಬೇರಿಗೆ ನೆರವಾಗಿ ವಸಂತದಲ್ಲಿ

ಪುನರ್ಜನ್ಮ ತಳೆಯುವೆವು 

‘ಪುನರಪಿ ಜನನಂ ಪುನರಪಿ ಮರಣಂ’

ಇಲ್ಲವಾದಲ್ಲಿ ಮತ್ತಾವುದೋ

ಮರ ಗಿಡಗಳಿಗೆ ನೆರವಾಗುವೆವು

ಕಾಲನ ಕರೆಗೆ ಓಗೊಡದವರು

ಯಾರಿಹರು ಹೇಳು?

ಋತುಚಕ್ರಕೆ ನಮಿಸುತ

ನಿಮಗಿದೋ ಪ್ರಕೃತಿ ನಿಮಿತ್ತ ವಿದಾಯ

                                                                                                     ✍ವಿಜಯನರಸಿಂಹ

(ಇದೀಗ  ಮತ್ತೆ ಭೂಗೋಲದ ಅರ್ಧಕ್ಕಿಂತಲೂ ಹೆಚ್ಚಿನ ಪ್ರಪಂಚಕ್ಕೆ ಶರತ್ಕಾಲ ಮತ್ತು ಚಳಿಗಾಲ ಕಾಲಿಕ್ಕಿದೆ.ಅದರ ಜೊತೆಯಲ್ಲೆ ಕೆಲವು ವಿಶ್ಲೇಷಣೆ ಮತ್ತು ವಿಶಾದಗಳು ಕೂಡ ಇಣುಕಿವೆ.

ಪರ್ ಫ್ಲೋರೋ ಕಾರ್ಬನ್ನುಗಳು ಇಂದು ನೀರು ನಿರೋಧಕ (water resistant) , ನೀರು ಪ್ರತಿರೋಧಕ (water repellent) ಮತ್ತು ಚಳಿಯನ್ನು ತಡೆಯಬಲ್ಲ ಹಲವು ಬಟ್ಟೆಗಳಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ. ಆದರೆ ಇದು ಪ್ರಕೃತಿಗೆ ಮಾರಕ  ಮತ್ತು ಕ್ಯಾನ್ಸರ್ ಕೊಡಬಲ್ಲ ಭೂತ ಎನ್ನುವ  ಹಲವು ಕಾಳಜಿಗಳು ಕೇಳಿಬರುತ್ತಿವೆ. ಮತ್ತೆ ಕೆಲವು ಮೂಲಗಳು, ಉತ್ಪಾದಕ ಘಟಕಗಳು ಮತ್ತು ಕೆಲವು ವೈಜ್ಞಾನಿಕ ಮೂಲಗಳು ಇದನ್ನು ಅಲ್ಲೆಗೆಳೆದರೂ ಈ ಬಗ್ಗೆ ಬಹಳಷ್ಟು ವಿವಾದಗಳಿವೆ. ಅದನ್ನು ಧರಿಸಿದಾಗ ಯಾವುದೇ ಹಾನಿಗಳಿಲ್ಲದಿದ್ದರೂ ತಯಾರಿಕೆಯ ವೇಳೆಯಲ್ಲಿ ಅದು ನಿಸರ್ಗಕ್ಕೆ ಮಾರಕವಾಗಬಲ್ಲದು ಎಂಬ ನಂಬಿಕೆಗಳಿವೆ. ಈ ಬಗ್ಗೆ ಓದುವಾಗ ಬರೆದ ಕವನ)

ಪರ್ ಫ್ಲೋರೋ ಕಾರ್ಬನ್ನುಗಳು…

ಇಲ್ಲೀಗ ಆಶಾಡ

ಸುಯ್ಯೆಂಬ ಗಾಳಿಯೊಡಗೂಡಿ ಎಲೆಗಳಿಗೆ

ನೆಲ ಸೇರುವ ಹುನ್ನಾರ…

ದೂರವಿಲ್ಲವಿನ್ನು ಚಳಿಗಾಲ….

ಕೋಟು, ಹ್ಯಾಟು, ಕೈ ಗ್ಲೋವು, ಬೂಟುಗಳು

ಹೊರಬರುವ ವರ್ಷದ ಪರಿಪಾಟ…

ಗೂಡಿನ ತುಂಬ ನೇತಾಡುವ ಬಟ್ಟೆಗಳು

ಗಾಳಿಯ ಹೊಡೆತಕ್ಕೆ ರಕ್ಷಣೆ

ಮಳೆಯ ಜಡಿತಕ್ಕೆ ಪ್ರತಿರೋಧ

ನೀರಹನಿಗಳನು ಹರಳುಗಟ್ಟಿಸಿ ಜಾರಿಸುವ

ಫ್ಲೋರೋಕಾರ್ಬನ್ನುಗಳ ಹೊರಕವಚಗಳು

ಯಾವುದುಡಲೆಂದು ಕಣ್ಣಾಡಿಸುತ್ತ

ಚರಿತ್ರೆಯ ತುಂತುರಲ್ಲಿ ಮೀಯುತ್ತ ನೆನೆದೆ

ಮನುಷ್ಯ ಮಾಡಿದನೆಂತ ಅಪರಾಧ… !

ಒಂದೊಮ್ಮೆ  ಆಫ್ರಿಕಾದಿಂದ ಉತ್ತರಕ್ಕೆ

ಶೀತಲಯುಗ ಕೊರೆದ ಬಿಳಿ ಹಿಮದ ಪಶ್ಚಿಮಕ್ಕೆ

ಸ್ಪರ್ಧೆಗಳಿಗೆ ಸ್ಪರ್ಧೆಯಾಗಿ ಹೋದ

ಬಯಸುತ್ತ ಬದಲಾವಣೆ ನಿರ್ದಯಿ ಅನ್ವೇಷಕ

ಸೀಲು-ತಿಮಿಂಗಲಗಳ  ಕೊಂದು

ತೊಗಲು -ಕೊಬ್ಬನ್ನು ಹೊದ್ದು

ದಾರಿಯುದ್ದಕ್ಕೂ ಬರೆಯುತ್ತ ತನ್ನದೇ ವಿಕಾರ

 

ಆಧುನಿಕತೆಯ ನೆಪದಲ್ಲಿ ಐವತ್ತರ ದಶಕದಲಿ

ಪರ್ ಫ್ಲೋರೋಕಾರ್ಬನ್ನುಗಳ ಉರುಳಲ್ಲಿ ಹೊರಳಿ..

 

ಇದೀಗ ಪರಿಸರ ಕೆಟ್ಟಾಗ ನರಳಿ

ನೀರು ನಿರೋಧಕ, ಪ್ರಕೃತಿಗೆ ಮಾರಕ

ಸಾವಿರ ಬಗೆಯ ಕ್ಯಾನ್ಸರ್ಗಳಿಗೆ ಪೂರಕ

ಬಿಡಿಸಿಕೊಳ್ಳಲಾಗದೆ, ತೊಟ್ಟದ್ದ ಕಳೆದುಕೊಳ್ಳಲಾಗದೆ

ಚುಚ್ಚುವ ಅಪರಾಧಿ ಪ್ರಗ್ನೆಗಳು

ಪರ್ ಫ್ಲೋರೋ ಆಕ್ಟಾನಿಕ್ ಆಸಿಡ್ ಗಳು

ಒಂದೊಂದು ಧಿರಿಸಿನಲು ಸಾವಿರ ಕ್ಯಾನ್ಸರ್ ಕಣಗಳು

ಸಾಗರದ ನೀರು, ಉಣ್ಣುವನ್ನದಿ ಸೇರಿ

ಒಮ್ಮೆ ಉಸಿರೆಳೆದರೂ ಒಳ ಸೇರುವ ವಿಷಕ್ಕೆ

ಪರಿಹಾರ ಹುಡುಕುತ್ತ….

ದಕ್ಕದ ಉತ್ತರ, ಬಿಕ್ಕುವ ಎಚ್ಚರ

ಹೊರಬರಲಾಗದ ಕಂದಕಗಳಲಿ

ಮಳೆ, ಗಾಳಿ, ಚಳಿಗೆ ಮೈ ಮುಚ್ಚದೆ  ಇಂದು ವಿಧಿಯಿಲ್ಲ… !

                                                                                                       ————ಡಾ.ಪ್ರೇಮಲತ ಬಿ

ಹಣತೆ

ದೀಪ ಹಚ್ಚಬೇಕು
ಕೇವಲ ಬೆಳಕು ಹರಡಲಲ್ಲ
ಕತ್ತಲ ಮೂಲೆಯಲ್ಲಿ ಕುಳಿತು ಅವಿತಿರುವ ನಿನ್ನ
ಮನದ ಭಯವ ಹೊಡೆದೋಡಿಸಲು

ದೀಪ ಹಚ್ಚಬೇಕು
ಕೇವಲ ಅಜ್ಞಾನ ಹೋಗಲಾಡಿಸಲಲ್ಲ
ಜ್ಞಾನದ ದಾಹವನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಲು

 

ದೀಪ ಹಚ್ಚಬೇಕು
ಕೇವಲ ಹಬ್ಬ ಆಚರಿಸಲಲ್ಲ
ಮನಸ್ಸಿನ ಖೇದವನ್ನು ತೊರೆದು ಹೊಸತನವನ್ನು ಪಡೆಯಲು

ದೀಪ ಹಚ್ಚಿ ಬೆಳಕು ಹರಿಸಿ
ಮನದ ಆಸೆ ನೀಗಿಸಲು , ಹೊಸತನವ ಪಡೆಯಲು .
ಹಣತೆಗೊಂದು ಹಣತೆ ತಾಗಿ ಸಣ್ಣ ಬೆಳಕು ದೊಡ್ಡದಾಗಿ
ಮನೆಯ ಮಿನುಗಿ  ಮನವ ಬೆಳಗಿ ಹರಿದು ಹರಿದು ಹೊಮ್ಮಿ ಚೆಲ್ಲಿ
ನವೋಲ್ಲಾಸ ನೀಡಲು , ದೀಪ ಬೆಳಗಬೇಕು ಜ್ಯೋತಿ  ಹರಡಬೇಕು 

                                                                                         ——————-  – ಅರ್ಪಿತ ರಾವ್, ಬ್ಯಾನ್ಬರಿ

( ಮುಂದಿನ ವಾರ- ಪಾರಿವಾಳದ ಕಣಿವೆ )

 

3 thoughts on “ಋತುಗೀತೆಗಳು- ಅನಿವಾಸಿಯ ಮೂವರು ಕವಿಗಳಿಂದ..

  1. ಮೂರು ಸುಂದರವಾದ ಕವನಗಳು ಮತ್ತು ಅಂದದ ಚಿತ್ರಗಳು. ಶರತ್ಕಾಲದ ಬಗ್ಗೆ ಎಷ್ಟು ಕವಿತೆಗಳನ್ನು ಓದಿದರೂ ಎಷ್ಟು ಚಿತ್ರಗಳನ್ನು ನೋಡಿದರೂ ನನಗೆ ಬೇಸರವಾಗುವದಿಲ್ಲ. CxFy(PFC) ಬಗ್ಗೆ ಬರೆದ ನವೀನ ಕವಿತಾಪ್ರಯೋಗಕ್ಕೆ ನೀರು ನಿರೋಧಕ ಗ್ಲವ್ಸ್ ತೆಗೆದು ಚಪ್ಪಾಳೆ ಹೊಡೆಯಲೇ ಬೇಕು. ನನಗೂ ಕೊನೆಯ ಕವಿತೆ ಹಿರಿಯ ಕವಿಯನ್ನು ನೆನಪಿಸಿ ಹೊಸಬೆಳಕು ‘ಅರ್ಪಿಸಿ’ ಬೆಳಗಿತು. ಚಳಿ ಶುರುವಾದ ಕಾಲದಲ್ಲಿ ಮೂರನ್ನೂ ಓದಿ ಹಾಯೆನಿಸಿತು, ಮನಸ್ಸು ಬೆಚ್ಚಗಾಯಿತು!, ಶ್ರೀವತ್ಸ ದೇಸಾಯಿ

    Like

  2. ಮೂರೂ ಕವಿತೆಗಳ ಆಶಯಗಳು, ನಿರೂಪಿಸಿದ ರೀತಿ ವಿಭಿನ್ನ. ಮೂರೂ ಕವನಗಳು ಖುಷಿ ಕೊಟ್ಟವು.

    ವಿಜಯ ನರಸಿಂಹ ಅವರು, ಶರದ್ರುತುವಿನ ಎಲೆಗಳ ಮೇಲೆ ಸುಂದರ ಕವನ ಹೆಣೆದಿದ್ದಾರೆ.

    ಫ್ಲೋರೊ ಕಾರ್ಬನ್ನುಗಳ ಬಗ್ಗೆ ಕನ್ನಡದಲ್ಲಿ ವೈಜ್ಞಾನಿಕ ಲೇಖನ ಬರೆಯುವುದೇ ಕಷ್ಟ. ಅಂಥಹುದರಲ್ಲಿ ಕನ್ನಡಕ್ಕೆ ಅನನ್ಯವಾದ ಕವಿತೆಯನ್ನು ಬರೆದಿದ್ದಾರೆ, ಪ್ರೇಮಲತಾ‌

    ಅರ್ಪಿತಾ ಅವರ ಕವನ, ಜಿ ಎಸ್ ಎಸ್ ಅವರ ದೀಪಾವಳಿ ಕವನವನ್ನು ನೆನಪಿಸುತ್ತದೆ. ಸುಂದರ ಕವನ. ಇನ್ನೂ ಹೆಚ್ಚು ಬರೆಯಿರಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.