‘ಅನಿವಾಸಿ’ ಎಂಬ ಜಾಲಜಗುಲಿಯ ಹಾಡು-ಪಾಡು: ಕೇಶವ ಕುಲಕರ್ಣಿ

ಯೋಜನೆಗಳನ್ನು ಹಾಕುವುದು, ಒಬ್ಬರೆಡೆ ಬೆರಳು ತೋರಿಸಿ ಅವರಿಗೆ ಅದನ್ನು ಅನುಷ್ಠಾನಕ್ಕೆ ತರಲು ಹೇಳುವುದು ಅತ್ಯಂತ ಸುಲಭ.ಆದರೆ, ಹಲವರ ಪ್ರಯೋಜನಕ್ಕಾಗಿ ಸಮಯವನ್ನು ವ್ಯಯಿಸಿ, ಇತರರಿಗೆ ಹೇಳಿಕೊಡುವುದು ಅತ್ಯಂತ ಕಷ್ಟವಾದ ವಿಚಾರ.ಅನಿವಾಸಿಗಾಗಿ ಅಂತಹ ತಾಂತ್ರಿಕ ನಿಭಾವಣೆ ಡಾ. ಕೇಶವ ಕುಲಕರ್ಣಿಗಳ ಹೆಗಲ ಮೇಲೇರಿದ್ದು ಮೊದಲ ಭೇಟಿಯಿಂದಲೆ ಎಂಬುದನ್ನು ನಾವೆಲ್ಲ ಓದಿ ತಿಳಿದಿದ್ದೇವೆ. ಎರಡನೆಯ ಭೇಟಿಯ ವೇಳೆಗೆ, ಬರೆಯವ ಬಗ್ಗೆ ತಿಳಿದಿದ್ದರೂ ಬ್ಲಾಗ್ ನಡೆಸುವ ಬಗ್ಗೆ ಏನೂ ಅರಿಯದಿದ್ದ ನಾವೆಲ್ಲ ಅವರ ಹೆಗಲು ಹತ್ತಿದ್ದಾಗಿತ್ತು!

ಎಲ್ಲರದೂ ಒಂದೇ ಪ್ರಶ್ನೆ.”ತಂತ್ರನವಜ್ಞಾನ್ನು ಬಳಸಿ ಕನ್ನಡವನ್ನು ಕಂಪ್ಯೂಟರಿನಲ್ಲಿ ಮತ್ತು ಫೋನಿನಲ್ಲಿ ಟೈಪ್ ಮಾಡುವುದು ಹೇಗೆ?”ಎನ್ನುವುದು.

ಸಾಹಿತ್ಯ ಜಾಲತಾಣದ ’ಅನಿವಾಸಿ’ ಎಂಬ ಹೆಸರಿನ ಆಯ್ಕೆ ಕೂಡ ಇವರದ್ದೆ. ಮುಂದಕ್ಕೂ ಅನಿವಾಸಿಯ ತಂತ್ರ ಜ್ಞಾನದ ತೋರುಹಾದಿಯಾಗಿ ನಮಗೆಲ್ಲ ಕಂಡದ್ದು ಕೇಶವರೇ.ಇವರ ಹಿನ್ನೆಲೆಯಿಲ್ಲದಿದ್ದರೆ ಅನಿವಾಸಿ ಆರಂಭವಾಗಿ ಮುನ್ನೆಡೆಯುತ್ತಿರಲಿಲ್ಲ ಎಂಬ ಬೆಳಕಿನಲ್ಲಿ ಕೇಶವರಿಗೆ ನಾವೆಲ್ಲ ಆಭಾರಿಗಳು.ಆಗಾಗ ತಂತ್ರಜ್ಞಾನ ಕೈ ಕೊಟ್ಟಾಗ ಸಹಾಯಕ್ಕಾಗಿ ನಾವು ಮೊರೆಹೋಗುತ್ತಿರುವುದೂ ಇದೇ  ಬರಹಗಾರ ತಂತ್ರಜ್ಞನಲ್ಲಿ.

keshav-kulkarni 2
ಡಾ.ಕೇಶವ ಕುಲಕರ್ಣಿ

ಐದೂ ವರ್ಷಗಳ ಕಾಲ ಅನಿವಾಸಿಯ ಅತ್ಯಂತ ಮುಖ್ಯ ಅಂಗವಾಗಿ ತೊಡಗಿಕೊಂಡಿರುವ ಕೇಶವರ ಯುಗಾದಿಯ ಹಾಡು ಈಗಲೂ ಎಲ್ಲರ ನೆನಪಿನಲ್ಲಿದೆ.ನೀಲುಗಳು ಕೂಡ. ಹೊರತಂದ ’ಪ್ರೀತಿಯೆಂಬ ಚುಂಬಕ ’ಎನ್ನುವ ಧ್ವನಿ ಮುದ್ರಿಕೆಯ ಮುಖ ಶೀರ್ಷಿಕೆ ಕೂಡ ಇವರದ್ದೆ. ಸಿಂಗಾಪುರದ  ಸಿಂಗರ ಕನ್ನಡ ಕೂಟ ನಡಸಿದ ಕಥಾ ಸ್ಪರ್ಧೆಯಲ್ಲಿ ಇವರಿಗೆ ಬಹುಮಾನ ಬಂದಿದೆ. ತರಂಗ ವಾರಪತ್ರಿಕೆಯಲ್ಲಿ ಇವರ ಕಥೆಗಳು ಪ್ರಕಟವಾಗಿವೆ.

ಏಕಾಂಕ ನಾಟಕ SMART ಥೆರಪಿ/ಫೋನಾಯಣ ವನ್ನು ಬರೆದು ಅದನ್ನು  ಇರತೆ ಪಾತ್ರದಾರಿಗಳಿಗೆ ಕಲಿಸಿದ ಗುರುಗಳು ಕೂಡ.ಅನಿವಾಸಿಯನ್ನ ಪ್ರತಿನಿಧಿಸಿ ಈ ನಾಟಕ  ಕೇಂಬ್ರಿಡ್ಜ್  ನ ಕನ್ನಡ ಬಳಗ ಕಾರ್ಯಕ್ರಮದಲ್ಲಿ  ಯಶಸ್ವಿಯಾಗಿ ಪ್ರದರ್ಶಿತವಾಯಿತು. ಈ ಹಿಂದೆ ಶಾಲಾ ಕಾಲೇಜಿನ ನಾಟಕಗಳಲ್ಲಿ ಮುಖ್ಯ ಪಾತ್ರವನ್ನು ವಹಸಿದ ಅನುಭವವೂ ಇವರಿಗಿದೆ. ಹಲವು ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟಗಳಲ್ಲಿನ ಆಸಕ್ತಿ ಇತ್ಯಾದಿ ಹವ್ಯಾಸಗಳಲ್ಲಿ ಆಗಾಗ ಅನಿವಾಸಿಯನ್ನ ಮರೆತರೂ ಅನಿವಾಸಿ ಇವರ ಹೆಗಲಿನಿಂದ ಇಳಿಯುವದಿಲ್ಲ ಎನ್ನುವುದು ಈಗ ಸಂಶಯವಿಲ್ಲದ ಮಾತಾಗಿದೆ.ನಾಳಿನ  ಅನಿವಾಸಿಯ ಐದು ವರ್ಷಗಳ ಹುಟ್ಟುಹಬ್ಬದ ಆಚರನೆ ಮತ್ತು ಸಂಭ್ರಮ ಕೂಡ ಕೇಶವರ ಆಯೋಜನೆಯಲ್ಲೇ ನಡೆಯುತ್ತಿದೆ.

ಅನಿವಾಸಿಯ ಕೈ ಹಿಡಿದು ನಡೆದ ಐದು ವರ್ಷಗಳ ತಮ್ಮ ಅನುಭವವನ್ನು ಸರಳವಾಗಿ ಈ ವಾರ ನಿಮ್ಮ ಮುಂದಿಟ್ಟಿರುವ ಇವರಲ್ಲಿ ಅನಿವಾಸಿಗಾಗಿ   ಇನ್ನೂ ಹಲವು ಯೋಜನೆಗಳಿರುವುದು ಅವರ ಬರಹದಿಂದ ಸ್ಪಷ್ಟವಾಗುತ್ತದೆ.ಎಲ್ಲವೂ ಹೊಸವರ್ಷದಲ್ಲಿ ಈಡೇರಲಿ ಎನ್ನುವ ಶುಭಹಾರೈಕೆಗಳೊಂದಿಗೆ- ಸಂ

 

ಅನಿವಾಸಿ’ ಎಂಬ ಜಾಲಜಗುಲಿಯ ಹಾಡು-ಪಾಡು

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (ಕೆ‍ಎಸ್‍ಎಸ್‍ವಿವಿ)ಗೆ ಐದು ವರುಷ ತುಂಬಿದ ಹರುಷದ ಸಂದರ್ಭದಲ್ಲಿ, ಜಾಲಜಗುಲಿಯಾಗಿ ನಾವು ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ನೋಡಿಕೊಳ್ಳುವುದು ಕೇವಲ ಔಪಚಾರಿಕ ನೆಪವಲ್ಲ, ಆಗಾಗ ಹಿಂತಿರುಗಿ ನೋಡಿ ಮುಂದೆ ನಡೆಯುವುದು ಒಳ್ಳೆಯದು ನಾವು ಹೊಸ ವರುಷಕ್ಕೆ ಕಾಲಿಟ್ಟಾಗ ಶಾಲೆಯಲ್ಲಿ ನಮ್ಮ ಗುರುಗಳೊಬ್ಬರು ಹೇಳಿದ್ದು ನೆನಪಾಗುತ್ತದೆ.

anivaasi logo 2

ಕೆ‍ಎಸ್‍ಎಸ್‍ವಿವಿಯ ಮುಖವಾಣಿಯಾಗಿ ನಾವೆಲ್ಲ ಸೇರಿ ಒಂದು ಬ್ಲಾಗ್ಅನ್ನು(ಜಾಲಜಗುಲಿ) ಆರಂಭಿಸಲು ಯೋಚಿಸಿದೆವು. ಆದರೆ ಕೆ‍ಎಸ್‍ಎಸ್‍ವಿವಿ ಶುರುಮಾಡಿದವರಲ್ಲಿ ಯಾರೂ ಐಟಿಯವರಿರಲಿಲ್ಲ, ತಂತ್ರಜ್ಞರಿರಲಿಲ್ಲ. ಕುರುಡರಲ್ಲಿ ಮೆಳ್ಳ ಶ್ರೇಷ್ಟ ಎನ್ನುವಂತೆ ಅಷ್ಟಿಷ್ಟು ಗೊತ್ತಿದ್ದ ನಾನೇ ಜಾಲಜಗಲಿಯ ಉಸ್ತುವಾರಿಯನ್ನು ವಹಿಸಿಕೊಂಡೆ. ಸ್ವಂತದ ಒಂದು ಹರುಕಲು ಮುರುಕಲು ಬ್ಲಾಗನ್ನು ಮಾಡಿದ ಬೃಹತ್ ಅನುಭವ ಹೇಗೂ ಇತ್ತಲ್ಲ! ಈಸಲು ಬರದಿದ್ದರೇನಂತೆ , ನೀರಿಗಿಳಿದರೆ ಅದು ಹೇಗೋ ಈಸಲು ಕಲಿಯಬಹುದು, ಅದೇನು ಬ್ರಹ್ಮ ವಿದ್ಯೆಯೇ ಎನ್ನುವ ಹುಂಬ ಧೈರ್ಯದಿಂದ, WordPressಗೆ ಹೋಗಿ kssvv.org ಅನ್ನು ನೊಂದಾಯಿಸಿಯೇ ಬಟ್ಟೆ (ಮುಂದೆ ಅದನ್ನು anivaasi.com ಗೆ ಬದಲಾಯಿಸಿದೆವು).

ನೊಂದಾಯಿಸಿದ್ದೇನೋ ಆಯಿತು. ಆದರೆ ಸ್ವಂತದ ಬ್ಲಾಗ್ ಮಾಡುವುದಕ್ಕೂ ಕೆ‍ಎಸ್‍ಎಸ್‍ವಿವಿಗೂ ಜಾಲಜಗುಲಿಯನ್ನು ಮಾಡುದಕ್ಕೂ ವ್ಯತ್ಯಾಸವಿಲ್ಲವೇ? ಗೂಗಲಿಸಿ, ಯುಟ್ಯೂಬಿಸಿ ವರ್ಡ್‍ಪ್ರೆಸ್‍ನ ಸರಳ ವಿಷಯಗಳನ್ನು ಹತ್ತಾರು ಗಂಟೆ ವ್ಯಯಿಸಿದ ಮೇಲೆ, ಒಂದಿಷ್ಟು ಧೈರ್ಯ ಬಂದಿತು.

ಕೆ‍ಎಸ್‍ಎಸ್‍ವಿವಿ ಗುಂಪಿನ ಸದಸ್ಯರು ಪ್ರತಿ ಶುಕ್ರವಾರ ಏನನ್ನಾದರೂ ಜಾಲದಲ್ಲಿ ಪ್ರಕಟಿಸಬೇಕು ಎಂದು ನಿರ್ಧರಿಸಿದ್ದೆವು.  ಗುಣಮಟ್ಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ, ಯು.ಕೆ ಯಲ್ಲಿ ನೆಲೆಸಿರುವ ಕನ್ನಡದ ಓದಿನಲ್ಲಿ ಬರವಣಿಗೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಬರೆಯಲು ಹುರಿದುಂಬಿಸುವ ಗುರಿ ಇಟ್ಟುಕೊಳ್ಳಲಾಯಿತು. ಏನಾದರೂ ಬರೆಯಲಿ, ಹೇಗಾದರೂ ಬರೆಯಲಿ, ಕನ್ನಡದದ ಲಿಪಿಯಲ್ಲಿ ಬರೆಯಿರಿ ಎನ್ನುವ ಧ್ಯೇಯ ಎಂದೇ ಹೇಳಬಹುದು.

1

ಉಮಾ ವೆಂಕಟೇಶ್ ಅವರಿಗೆ ಅದಾಗಲೇ ’ಬರಹ’ ತಂತ್ರಜ್ಞಾನ ಉಪಯೋಗಿಸಿ ಬಹಳಷ್ಟು ಲೇಖನಗಳನ್ನು ಬರೆದಿದ್ದರು. ಸಡಗರದಿಂದ ಜಾಲಕ್ಕೆ ಮೊಟ್ಟಮೊದಲ ಲೇಖನವನ್ನು ಬರೆದರು, ’ಚಹಾ ಚಟ ಭಯಂಕರರೇ ಈ ಆಂಗ್ಲರು?’ ಎಂದು. ೨೦೦೪ರಲ್ಲಿ ಮೊಟ್ಟಮೊದಲ ಲೇಖನ ಪ್ರಕಟವಾಯಿತು. ಅಲ್ಲಿಂದ ಆರಂಭವಾದ ಪಯಣ ಒಂದೇ ಒಂದು ಶುಕ್ರವಾರವನ್ನೂ ಒದಗಿರುವ ಆಪತ್ತುಗಳನ್ನು ಧೈರ್ಯದಿಂದ ಎದುರಿಸಿ ತಪ್ಪಿಸದೇ ಸತತ ಐದು ವರ್ಷದಿಂದ ನಡೆದುಕೊಂಡು ಬಂದಿರುವುದು ಒಂದು ಅಚ್ಚರಿಯೇ!

ಏಕೆಂದರೆ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರು ವೃತ್ತಿಯಿಂದ ಬರಹಗಾರರಲ್ಲ. ವೈದ್ಯರೋ, ಇಂಜಿನಿಯರುಗಳೋ ಇಲ್ಲ ಮನೆ ಸಂಭಾಳಿಸುವ ೨೪x೭ ಕೆಲಸದಲ್ಲಿ ಇರುವವರೇ ಎಲ್ಲ. ಅಂಥವರಲ್ಲಿ ಮೊಟ್ಟಮೊದಲನೇಯದಾಗಿ ಬರೆಯುವ ಹವ್ಯಾಸ ಇರಬೇಕು, ಇಲ್ಲದಿದ್ದರೂ ಬರೆಯುವ ಮನಸ್ಸಾದರೂ ಇರಬೇಕು, ಅಂಥವರ ಪರಿಚಯ ಕೆ‍ಎಸ್‍ಎಸ್‍ವಿವಿಗೆ ಆಗಬೇಕು, ಅವರಿಗೆ ನಮ್ಮ ಉದ್ದೇಶಗಳನ್ನು ಹೇಳಬೇಕು, ಅವರಿಗೆ ಒಪ್ಪಿಗೆಯಾಗಬೇಕು, ನಂತರ ಅವರು ಅದನ್ನು ಬರೆಯಬೇಕು, ಅದೂ ಕಂಪ್ಯೂಟರಿನಲ್ಲಿ!

ಬಹುಮುಖ್ಯ ಕಷ್ಟ ಬಂದಿದ್ದು ಇಲ್ಲಿಯೇ! ಬರೆಯುವ ಮನಸ್ಸಿರುವ ಬಹಳಷ್ಟು ಜನರಿಗೆ ಕಂಪ್ಯೂಟರಿನಲ್ಲಿ ಕನ್ನಡದ ಲಿಪಿಯನ್ನು ಹೇಗೆ ಮೂಡಿಸುವುದು ಎಂದು ಗೊತ್ತಿರಲಿಲ್ಲ. ಫೋನಿನಲ್ಲಿ ಭೇಟಿ ಮಾಡಿದಾಗ ಹೇಳಿಕೊಡುವುದು,  ಅದಕ್ಕೆಂದೇ ಒಂದು ಲೇಖನವನ್ನು ಜಾಲದಲ್ಲಿ ಪ್ರಕಟಿಸಿದ್ದೂ ಆಯಿತು. ಬರಹ, ನುಡಿ, ಗೂಗಲ್ ಟ್ರಾನ್ಸ್‍ಲಿಟರೇಶನ್ ಇತ್ಯಾದಿಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಒದಗಿಸಲಾಯಿತು.

3

ಜಾಲಜಗುಲಿಯನ್ನು ನಿಭಾಯಿಸುವುದು ಒಬ್ಬರಿಂದಲೇ ಆಗುವ ಕೆಲಸವಲ್ಲವಲ್ಲ! ಬಂದ ಬರಹಗಳ ಕಾಗುಣಿತವನ್ನು ತಿದ್ದಬೇಕು, ಅದನ್ನು ವಾರವಾರವೂ ತಪ್ಪದೇ ಪ್ರತಿವಾರ ಒಂದು ಬರಹದಂತೆ ಪೂರ್ವನಿರ್ಧಾರ ಮಾಡಿ ನಿಗದಿ ಮಾಡಬೇಕು, ಬರಹಕ್ಕೆ ತಕ್ಕ ಚಿತ್ರಗಳನ್ನು ಹೊಂದಿಸಬೇಕು, ಬರುವ ಅನಿಸಿಕೆಗಳನ್ನು ಓದಿ ಅದರಲ್ಲಿ ಬರೆದವರಿಗೆ ಸಾರ್ವಜನಿಕರಿಗೆ ತೊಂದರೆಯಾಗುವಂಥದ ಅನಿಸಿಕೆಗಳನ್ನು ಅಳಿಸಿ ಹಾಕಬೇಕು.

ಆರಂಭದಲ್ಲಿ ಅಂಬೆಗಾಲಿಡುತ್ತ, ನಿಧನಿಧಾನವಾಗಿ, ಹೊಸ ಬರಹಗಾರರನ್ನು, ಹೊಸ ಓದುಗರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಪ್ರತಿ ಮೂರು ಅಥವಾ ನಾಕು ತಿಂಗಳಿಗೆ ಹೊಸ ಸಂಪಾದಕರನ್ನು ನೇಮಿಸಿ ಜಾಲಕ್ಕೆ ಹೊಸ ಕಳೆ ಬಂದಿತು. ಪ್ರತಿ ಸಂಪಾದಕರೂ ಹೊಸ ಯೋಜನೆಗಳೊಂದಿಗೆ, ವಿಚಾರಗಳೊಂದಿಗೆ ಜಾಲಕ್ಕೆ ಹೊಸ ತರಹದ ಆಯಾಮಗಳನ್ನು ತಂದರು.

‘Comments are free, but facts are sacred’ ಎನ್ನುವ ಮಾತಿನಂತೆ, ಓದುಗರ ಅನಿಸಿಕೆಗಳನ್ನು ಯಾವುದೇ ಸೆನ್ಸಾರಿಗೆ ಒಳಪಡಿಸದೇ ಹತೋಟಿಯಲ್ಲಿ ಇಟ್ಟುಕೊಳ್ಳದೇ ಪ್ರಕಟಿಸುವ ನಿರ್ಧಾರ ’ಅನಿವಾಸಿ’ಗೆ ಮುಳುವಾಗುವ ಪರಿಸ್ಥಿತಿಯವರೆಗೂ ಬಂದಿತ್ತು. ಅದನ್ನೂ ಹಾಗೂ ಹೀಗೂ ಸಂಭಾಳಿಸಿ ಅನಿವಾಸಿ ಮುಂದುವರೆದಿದೆ, ಹಿತೈಷಿಗಳ ಬೆಂಬಲದಿಂದಾಗಿ.

kek 1

ಇದುವರೆಗೆ ಮುನ್ನೂರಕ್ಕೂ ಹೆಚ್ಚು ಬರಹಗಳನ್ನು, ಒಂದೇ ಒಂದು ವಾರವೂ ತಪ್ಪಿಸದೇ ಪ್ರಕಟಿಸಿದ ಹೆಮ್ಮೆ ’ಅನಿವಾಸಿ’ಯದು. ಆರಂಭದಲ್ಲಿ ಬೆರಳೆಣಿಕೆಯಷ್ಟು ಓದುಗರಿದ್ದ ಈ ಜಾಲ ಈಗ ಹದಿನೆಂಟು ಸಾವಿರ ಓದುಗರನ್ನು ತಲುಪಿದೆ. ಇನ್ನೂರಕ್ಕೂ ಹೆಚ್ಚು ಇಮೇಲ್ ಚಂದಾದಾರರಿದ್ದಾರೆ. ತಿಂಗಳಿಗೆ ೫೦೦೦ ಸಲ ಜಾಲವನ್ನು ಜಾಲಾಡಿಸುತ್ತಾರೆ, ಅಷ್ಟೇ ಅಲ್ಲ, ಜಾಲವನ್ನು ಜಾಲಾಡಿಸಲು ಬಂದವರು ಒಂದೇ ಲೇಖನ ಓದಿ ಹೋಗುವುದಿಲ್ಲ, ಕಡಿಮೆಯೆಂದರೂ ಎರಡು ಲೇಖನಗಳನ್ನು ಓದಿಯೇ ಹೋಗುತ್ತಾರೆ. ’ಅನಿವಾಸಿ’ ಎಂಬ ಯು.ಕೆ ಕನ್ನಡಿಗರ ತಂಗುದಾಣ, ಜಗತ್ತಿನ ಮೂಲೆ ಮೂಲೆಯಿಂದ ಓದುಗರನ್ನು ಕಲೆ ಹಾಕಿದೆ. ’ಅನಿವಾಸಿ’ಗೆ ಅತ್ಯಂತೆ ಹೆಚ್ಚಿನ ಕ್ಲಿಕ್ಕುಗಳು ಬರುವುದು ಭಾರತದಿಂದ, ಅದು ಬಿಟ್ಟರೆ ಅಮೇರಿಕದ ಕನ್ನಡಿಗರಿಂದ. ಯು.ಕೆ ಕನ್ನಡಿಗರೂ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಾರೆ. ಆಸ್ಟ್ರೇಲಿಯ, ಕೆನಡಾ, ಯುಎಈ, ಜರ್ಮನಿ, ಸಿಂಗಾಪುರ, ಸೌದಿ ಅರೇಬಿಯ ದೇಶಗಳಿಂದಲೂ ಕನ್ನಡಿಗರು ಪ್ರತಿಸ್ಪಂದಿಸಿದ್ದಾರೆ.

anivaais 2
                                   ಡುಂಡಿರಾಜರ ಕವಿಗೋಷ್ಠಿಯ ಮುಖ್ಯಸ್ಥಿಕೆ ವಹಿಸಿ..

ಕತೆ, ಕವನ, ಪ್ರಬಂಧ, ಹರಟೆ, ಪ್ರವಾಸ ಕಥನ, ಸಿನೆಮಾ-ನಾಟಕ-ಪುಸ್ತಕ-ಕವನಗಳ ಅನಿಸಿಕೆಗಳು, ಕನ್ನಡ ಬಳಗದ ಕಾರ್ಯಕ್ರಮಗಳ ವರದಿಗಳು, ವ್ಯಕ್ತಿಚಿತ್ರ ಇತ್ಯಾದಿ ಪ್ರಕಾರಗಳನ್ನು ಪ್ರಕಟಿಸಿದೆ. ‘ವಿಜ್ಞಾನ ಮತ್ತು ಮಹಿಳೆಯರು’ ಮತ್ತು ‘ನೋಡು ಬಾ ನಮ್ಮೂರ’ ಎನ್ನುವ ಎರಡು ಲೇಖನಮಾಲೆಗಳನ್ನು ಪ್ರಕಟಿಸಿದೆ.

ಸಂಪಾದಕರಾಗಿ ಸಲಹೆಗಾರರಾಗಿ ಶ್ರೀವತ್ಸ ದೇಸಾಯಿ, ಶಿವಪ್ರಸಾದ್ ಮತ್ತು ಪ್ರೇಮಲತಾ ಅವರ  ಸಹಕಾರ, ನಿರ್ವ್ಯಾಜ್ಯ ಕನ್ನಡ ಪ್ರೀತಿ, ಸಂಯಮ ಮತ್ತು ಪರಿಶ್ರಮಗಳಿಲ್ಲದೇ ಇದ್ದರೆ ‘ಕೆ‍ಎಸ್‍ಎಸ್‍ವಿವಿ’ಯ ‘ಅನಿವಾಸಿ’ಎಂಬ ಜಾಲ ಐದು ವರ್ಷವೇನು, ಐದು ತಿಂಗಳೂ ಬದುಕಿ ಉಳಿಯುತ್ತಿರಲಿಲ್ಲ.

skit 11
                          ಫೋನಾಯಣ ನಾಟಕ ಬರೆದು, ನಿರ್ದೇಶಿಸಿ, ನಟಿಸಿದ ಸಂದರ್ಭ

‘ಅನಿವಾಸಿ’ ಇನ್ನೂ ಬೆಳೆಯಲಿ, ನೂರ್ಕಾಲ ಬಾಳಲಿ. ಯು.ಕೆ ಯಲ್ಲಿ ನೆಲೆಸಿರುವ ಎಲ್ಲೆ ಕನ್ನಡಿಗರ ಮುಖವಾಣಿಯಾಗಲಿ. ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆಗೂಡಲಿ, ’ಅನಿವಾಸಿ’ಎಂಬ ಜಾಲವಲ್ಲದೇ, ನಿಯಮಿತವಾಗಿ ಪುಸ್ತಕ (ಒಂದು ಪುಸ್ತಕ ಆಗಲೇ ಪ್ರಕಟವಾಗಿದೆ), ಕನ್ನಡ ಸಂಗೀತ (ಒಂದು ಧ್ವನಿಸುರಳಿ ಆಗಲೇ ಬಿಡುಗಡೆಯಾಗಿದೆ), ನಾಟಕ (ಒಂದು ಏಕಾಂಕ ಮಾಡಿದ್ದಿದೆ), ವಿಡಿಯೋ, ಕಿರುಚಿತ್ರ ಬರಲಿ ಎಂದು ಹಾರೈಸುತ್ತೇನೆ.

(ನಾನು ನನ್ನ ’ಸಮಯದ ಅಭಾವದ’ ಕಾರಣದ ನೆಪ ಹೇಳಿ, ಈಗ ಹತ್ತಿರ ಒಂದು ವರ್ಷದಿಂದ ಸಕ್ರಿಯನಾಗಿಲ್ಲ ಎಂಬ ಅಪರಾಧಿ ಭಾವನೆಯಲ್ಲಿದ್ದೇನೆ. ಈ ಲೇಖನದ ಮೂಲಕ ಕ್ಷಮಾಪಣೆಯನ್ನು ಕೇಳಿಕೊಳ್ಳುತ್ತೇನೆ ಮತ್ತು ’ಕೆ‍ಎಸ್‍ಎಸ್‍ವಿವಿಗೆ’ ಸಮಯವನ್ನು ಮೀಸಲಿಡುತ್ತೇನೆ ಎಂದು ನನಗೆ ನಾನೇ ಕರಾರು ಹಾಕಿಕೊಳ್ಳುತ್ತಿದ್ದೇನೆ).

            (ಮುಂದಿನವಾರ – ಸಾಂಸ್ಕೃತಿಕತೆಯ 4 D  ರೂಪ )

5 thoughts on “‘ಅನಿವಾಸಿ’ ಎಂಬ ಜಾಲಜಗುಲಿಯ ಹಾಡು-ಪಾಡು: ಕೇಶವ ಕುಲಕರ್ಣಿ

 1. ಕೇಶವ್ ಅವರನ್ನು ಅನಿವಾಸಿ ಜಾಲಜಗುಲಿಯ ವಿಶ್ವಕರ್ಮರೆನ್ನಬಹುದು. ಬರೆಯುವ ಹವ್ಯಾಸ ಮತ್ತು ಪ್ರತಿಭೆಯಿದ್ದರೂ, ನಮ್ಮ ಅನೇಕ ಲೇಖಕರಿಗೆ ಬರಹ ಅಥವಾ ನುಡಿ ತಂತ್ರಜ್ಞಾನದ ಅರಿವಿಲ್ಲದಿದ್ದರಿಂದ, ಅವರನ್ನೆಲ್ಲ ತಯಾರು ಮಾಡಿದವರಲ್ಲಿ ಕೇಶವ್ ಅವರೇ ಮುಖ್ಯಸ್ಥರು. ನನಗೆ ನೆನಪಿರುವಂತೆ, ಶಿವಪ್ರಸಾದ್ ಅವರ ಮನೆಯಲ್ಲಿ ನಮ್ಮ ಜಾಲ ಜಗುಲಿಯ ಹಿರಿಯ ಸದಸ್ಯರಿಗೆ ಲೇಖನಗಳನ್ನು ಹೇಗೆ ವೇದಿಕೆಯ ಜಗುಲಿಗೆ ಅಪ್-ಲೋಡ್ ಮಾಡುವುದು ಎನ್ನುವುದರ ಬಗ್ಗೆ ಅರ್ಧದಿನದ ಕಮ್ಮಟ ನಡೆಸಿದ್ದು ನೆನಪಿದೆ. ಎಲ್ಲರಲ್ಲೂ ಆತ್ಮವಿಶ್ವಾಸ ತುಂಬಿದ್ದು ಅವರೇ! ಜೊತೆಗೆ ಸಂಪಾದಕೀಯದ ಜವಾಬ್ದಾರಿ ಹೊತ್ತವರನ್ನು ತಯಾರು ಮಾಡಲು ಸಹಾಯ ಹಸ್ತ ನೀಡುತ್ತಿದ್ದದ್ದು ಅವರೇ. ಜೊತೆಗೆ ಚೆಸ್ಟರ್-ಫೀಲ್ಡಿನ ದೀಪಾವಳಿ ಸಮಾರಂಭದಲ್ಲಿ ನಾವೆಲ್ಲ ಕುಳಿತು ಕನ್ನಡ ಟೈಪ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಆಸಕ್ತಿ ಇದ್ದ ನಮ್ಮ ಬಳಗದ ಸದಸ್ಯರನ್ನು ಹುರಿದುಂಬಿಸಿದ್ದೆವು. ಆ ಕಮ್ಮಟವೂ ಕೇಶವ್ ಅವರ ನೇತೃತ್ವದಲ್ಲಿ ನಡೆದಿತ್ತು. ಹಾಗಾಗಿ ಅನಿವಾಸಿ ವೇದಿಕೆಯ ನಾಮಕರಣದ ಜೊತೆಗೆ, ತಂತ್ರಜ್ಞಾನ ವಿಭಾಗದ ಜವಾಬ್ದಾರಿ ಹೊತ್ತು, ನಮ್ಮನ್ನು ಇಲ್ಲಿಯವರೆಗೆ ತಲುಪಿಸಿರುವ ಕೇಶವ ಅವರು ವೇದಿಕೆಯ ಬೆನ್ನಲಬು!
  ಉಮಾ ವೆಂಕಟೇಶ್

  Liked by 1 person

 2. ಒಂದೊಂದೇ ಬರಹಗಳು ಅನಿವಾಸಿ ಯ ಒಂದೊಂದು ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತ ಹೊಸ ಹೊಸ ಅರಿವು ಮೂಡಿಸುತ್ತಿವೆ.ಪ್ರತಿಯೊಬ್ಬರದೂ ಅಪರೂಪದ ದೇಣಿಗೆ ಅನಿಸುತ್ತಿದೆ.ಕೇಶವ ಕುಲಕರ್ಣಿ ಯವರ
  ತಾಂತ್ರಿಕ ಜ್ಞಾನ ಅನಿವಾಸಿ ಗೆ ಒಂದು ಹೊಸ ಬಾಗಿಲು ತೆರೆದು ಹೊಸ ದಾರಿ ತೋರಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಒಗ್ಗಟ್ಟಿನ ದಾರಿಯಲ್ಲಿ , ಸಾಂಘಿಕ ಪ್ರಯತ್ನ ದಲ್ಲಿ ಅನಿವಾಸಿ ಇನ್ನಷ್ಟು ಬೆಳಗಲಿ, ಬೆಳೆಯಲಿ ಎಂಬುದು ನನ್ನ ಹಾರೈಕೆ.ಕೇಶವ ಕುಲಕರ್ಣಿ ಯವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.ಹಾಗೇಯೇ ಅನಿವಾಸಿ ಬಳಗಕ್ಕೆ ಶುಭ ಹಾರೈಕೆಗಳು
  ಸರೋಜಿನಿ ಪಡಸಲಗಿ

  Liked by 1 person

 3. It is easy for us readers to take “Anivasi” and its Friday articles for granted. This article helps us to appreciate the efforts made by individual members, their passion and commitment and all the hard work and efforts that goes behind the project

  Liked by 2 people

 4. ಅನಿವಾಸಿಯು 5 ವಷ೯ ಪೂರೈಸಿದ್ದಕ್ಕೆ ” ನಿವಾಸಿ’ ತಂತ್ರಜ್ಞ ಕೇಶವ್ ಮುಖ್ಯ ಕಾರಣ. ಕೇಶವ್ ಮಾರ್ಗ ದರ್ಶನವಿಲ್ಲದಿದ್ದರೆ ಈ ಜಾಲ ಜಗುಲಿ ಅಸ್ತಿತ್ವವಕ್ಕೆ ಬರುವುದೇ ಕಷ್ಟವಾಗುತ್ತಿತ್ತು. ಹುಟ್ಟು ಹಬ್ಬದ ಸಡಗರದಲ್ಲಿ ನೆನಪುಗಳು ಮುಂದಿನ ಹೆಜ್ಜೆಗೆ ಪೂರಕವಾಗಲೆಂಬುದು ನನ್ನ ಹಾರೈಕೆ.

  Like

 5. ಕಸಾಸಾಂವಿವೇ (kssvv)/’ಅನಿವಾಸಿ’ಗೆ ವಿಚಾರಗಳು, ಭಾವನೆಗಳು, ಐಡಿಯಾಗಳು ಇದ್ದ ಆರಂಭದ ದಿನಗಳಲ್ಲಿ ಅವುಗಳು ಹೊರಹೊಮ್ಮಲು ಒಂದು ಮುಖವಾಣಿ ಬೇಕಿತ್ತು, ಧ್ವನಿಪೆಟ್ಟಿಗೆಯನ್ನು ಕಟ್ಟುವ ಹೊಣೆಯನ್ನು ಹೊತ್ತ ಶಿಲ್ಪಿ ಬಹುಮುಖ ಪ್ರತಿಭೆಯ ಕೇಶವರು ಎಂದು ಈಗಾಗಲೇ ಸ್ಪಷ್ಟವಾಗಿದೆ. ‘blind leading the blind’ಗಿಂತ ನಮಗೆ ಸಿಕ್ಕ (ತಾವೇ ಹೇಳಿಕೊಂಡ)’ಈ ‘ಮೆಳ್ಳಗಣ್ಣಿ’ನಲ್ಲಿ ತೀಕ್ಷ್ಣದೃಷ್ಟಿ ಇತ್ತು! ಐಟಿ ಪರಿಣಿತಿಯಿತ್ತು. ಡ್ಯಾಶ್ ಬೋರ್ಡ್, wpadmin, post, gallery, ಗುಂಟ ನಮ್ಮ ಕಿಹಿಡಿದು ನಡೆಸಿದರು. ‘ಸ್ಟಿಚ್ ಹಾಕಿ ಬಿಟ್ಟರೆ ಸಾಕು, ಹೀಲಾಗುತ್ತದೆ’ ಅನ್ನುವ ಡಾಕ್ಟರರೇ ಹೆಚ್ಚಿಗಿದ್ದ ಗುಂಪಿಗೆ ಬೇರೆಯೇ ನಿಯಮಗಳ ತಂತ್ರಜ್ಞಾನಕ್ಕೆ ತೋರುದಾರಿಯಾದರು. ಇವರ ಲಾಭಪಡೆದವರೇ ನಾವೆಲ್ಲಾ. ಧನ್ಯವಾದಗಳು ಕೇಶವ. ಮುಂದೆ ಬಂದವರಿಂದ ಹೈಪರ್ಲಿಂಕ್, embed ಕಲಿತೆ. ಅವು ವಿಡಿಯೋಗಳಿಗೆ ಅನುಕೂಲವಾಯಿತು. ಇನ್ನು ಮುಂದಿನ ಯೋಜನೆಗಳನ್ನು ಎದುರು ನೋಡುವಾ . ಶ್ರೀವತ್ಸ ದೇಸಾಯಿ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.