ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು? -ಡಾ. ರಾಮ ಶರಣ್

ಅನಿವಾಸಿ ಎಂಬ ಬಟ್ಟೆಯನ್ನು (ವಿಶೇಷವನ್ನು)  ಐದು ವರ್ಷಗಳ ಕಾಲ ಎಳೆ ಎಳೆಯಾಗಿ ನೇದು ಅದಕ್ಕೊಂದು ಸ್ವರೂಪವನ್ನು ಕೊಟ್ಟ ರೀತಿಯ ಒಂದು ಸಮಗ್ರ ವರದಿಯನ್ನು ಓದಿ ಆಗಿದೆ.

ಯಾವ ನೇಯ್ಗೆ, ಯಾವ ಗುಣ ಮಟ್ಟ ನಮಗೆ ಒಪ್ಪಿಗೆಯಾಗಬಲ್ಲದು? ಅದಕ್ಕೊಂದು ಮಾನದಂಡವಿದೆಯೇ? ಮೌಲ್ಯವಿದೆಯೇ? ಅದರಿಂದ ನಮಗೇನು ಪ್ರಯೋಜನ? ನಮಗೆ ಆ ಬಟ್ಟಯ ಜತೆಗಿನ ಬಾಂಧವ್ಯದ ಅಗತ್ಯ ಇದೆಯೇ? ನಮಗೆ ಇದು ಸರಿ ಹೊಂದುತ್ತದೆಯೇ?ಎನ್ನುವ ಪ್ರಶ್ನೆಗಳಿಗೆ ಅವರವರಿಗೆ  ದೊರೆಯುವ ಉತ್ತರದ ಮೇಲೆ ಧಾರಕರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಅನಿವಾಸಿಯ ಜೊತೆಗಿನ ಸಂಭಂದಗಳೂ ಹಾಗೆಯೇ.

ಅನಿವಾಸಿ ಎಂಬುದು ಕನ್ನಡಿಗರ ಒಂದು ಪುಟ್ಟ ಗುಂಪು. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಇಲ್ಲಿ ಆದ್ಯತೆ. ಸೃಜನಶೀಲತೆಯ ಮೂಲ ತವರಾದ ಸಾಹಿತ್ಯ ಇದರ ಮುಖ್ಯ ಚಟುವಟಿಕೆ.ಅನಿವಾಸಿಯ ಮೂಲ ಉದ್ದೇಶವಾದ ಸಾಹಿತ್ಯಕ ಮೌಲ್ಯಗಳಲ್ಲಿ  ಆಸಕ್ತಿಯಿದ್ದವರಿಗೆ ಅನಿವಾಸಿಯ ಮೂಲಕ ಹಲವು ದರ್ಶನಗಳಾಗಿವೆ. ಆದರೆ, ಸಾಹಿತ್ಯ ಮತ್ತು ಅದರಿಂದ ಉದಯಿಸುವ ಎಲ್ಲ ಸೃಜನಾತ್ಮಕ  ಚಟುವಟಿಕೆಗಳ ಬಗ್ಗೆ ಆಸಕ್ತಿಯಿಲ್ಲದೆ ಬರಿ ಪ್ರದರ್ಶನ, ಘೋಷಣೆ,ವಯಕ್ತಿಕ ಪ್ರಚಾರ ಮತ್ತಿತರ ಚಟುವಟಿಕೆಗಳನ್ನು ಹುಡುಕಿಕೊಂಡು ಬಂದು ದುಡುಕಿ ಈ ಗುಂಪನ್ನು ಸೇರಿದವರಿಗೆ ನಿರಾಶೆಯೂ ಆಗಿರಬಹುದು. ಅನಿವಾಸಿಯಲ್ಲಿ ಹುಳುಕಿಲ್ಲವೆಂದಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳಿಗೂ ಕೊರತೆಯಿಲ್ಲ. ಆದರೆ ಪರಸ್ಪರರ ವಿಚಾರಗಳ ಬಗೆಗಿನ ಗೌರವ ಬಹಳ ಮುಖ್ಯ. ಹೇಳಿ ಕೇಳಿ ಇದು ಸೃಜನಶೀಲರ ಗುಂಪು. ಹಾಗಾಗಿ ಇಲ್ಲಿ ಆತ್ಮ, ಅಹಂ ಮತ್ತು ನಾನು  (Artists’s Ego) ಎನ್ನುವ ವಿಚಾರಗಳೂ ಉದಿಸುತ್ತವೆ.ಆದರೆ ಪ್ರತಿ ಸದಸ್ಯರೂ ಈ ಬಟ್ಟೆಯ ಬೇರೆ ಬೇರೆ ಎಳೆಗಳು. ಪ್ರತಿಯೊಬ್ಬರೂ ಈ ಗುಂಪಿಗೆ ತಂದಿರುವ ಮೌಲ್ಯಗಳು ಅಮೂಲ್ಯವಾದವುಗಳೇ. ಇಲ್ಲಿ ಸರಿ ಬರುವ ಒಂದೇ ಒಂದು ಸೂತ್ರ ಎಂದರೆ  ಈ ಎಲ್ಲ ಎಳೆಗಳ ನಡುವಿನ ಹೊಂದಾಣಿಕೆ ಮತ್ತು ಪ್ರಾಮಾಣಿಕತೆ. ಪ್ರಯತ್ನವಷ್ಟೇ ಫಲವನ್ನು ನೀಡಬಲ್ಲದು.

ಕನ್ನಡ ಸಾಹಿತ್ಯದಲ್ಲಿ ಆಸಕ್ತಯಿರುವ ನಿರುಪದ್ರವಕಾರಿ ಸದಸ್ಯರು  ಒಂದೆಡೆ ಸೇರಿ ತಮ್ಮ ಸಾಹಿತ್ಯದ ಒಲವನ್ನು ಮುಂದುವರೆಸುವುದು, ಬೆಳೆಸಿಕೊಳ್ಳುವುದು,  ಜೊತೆ ಜೊತೆಯಾಗಿ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳುವುದು, ಒಬ್ಬರನ್ನೊಬ್ಬರು ಉತ್ತೇಜಿಸುವುದು, ಜೊತೆ ಜೊತೆಯಲ್ಲೇ ವಯಕ್ತಿಕ ಬೆಳವಣಿಗೆಗಳು, ಒಂದಷ್ಟು ಸಂತೋಷ,ವಿನೋದ ಮತ್ತು ವಿನಿಮಯ- ಇದರ ಮುಖ್ಯ ಉದ್ದೇಶಗಳು.

ಒಂದೆರೆಡು ವರ್ಷಗಳು ಅನಿವಾಸಿಯ ಜೊತೆ ಕಳೆದ ನಂತರ ಅನಿವಾಸಿಯ ಸಂಪರ್ಕದ ಸವಿಯ ಅರಿವಾಗಲು ಶುರುವಾಗುತ್ತದೆ.  ಮೇರೆ ಮೀರುವ (ಕೆಲವೊಮ್ಮೆ) ಕೆಲವರ ಉತ್ಸಾಹಗಳು, ಹಾರ್ದಿಕ ಆಶಯದ ಹಲವರ ಔದಾರ್ಯಗಳು ಬೆಳಕಿಗೆ ಬರುತ್ತವೆ, ಅರ್ಥವೇ ಆಗದ ಕೆಲವರ ನಿರುತ್ತರಗಳು ಕೂಡ ದಕ್ಕತೊಡಗುತ್ತವೆ.

ಡಾ. ರಾಮ್ ಶರಣ್ ಲಕ್ಷ್ಮೀನಾರಾಯಣ

”ನಾನು ನೀಡಿದ್ದು ಕಡಿಮೆ’ ಎನ್ನುತ್ತಲೇ ಕಳೆದ ಐದು ವರ್ಷಗಳಿಂದಲೂ ಅನಿವಾಸಿಯ ಬಹುತೇಕ ಎಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿರುವ ರಾಮಶರಣ್  ತಮ್ಮ ಕೆಳಗಿನ ಬರಹದ ಮೂಲಕ  ಅನಿವಾಸಿಯ ಜೊತೆಗಿನ ತಮ್ಮ  ವಯಕ್ತಿಕ ಒಡನಾಟವನ್ನು ಇವೇ ಹಿನ್ನೆಲೆಗಳ ಆಧಾರದ ಮೇಲೆ ಈ ಲೇಖನದ ಮೂಲಕ ವಸ್ತುನಿಷ್ಠವಾಗಿ ತೂಕಹಾಕಿದ್ದಾರೆ. ಅನಿವಾಸಿಯ ಒಡನಾಟದಲ್ಲಿ ಕಳೆದ ಮೆಚ್ಚಿನ ಕ್ಷಣಗಳನ್ನು, ಅನಿವಾಸಿಯ ಒಡನಾಟದಲ್ಲಿ ಭೇಟಿಮಾಡಿದ ದಿಗ್ಗಜರನ್ನು ನೆನೆಯುತ್ತ ವ್ಯಾವಹಾರಿಕ ( pragmatic) ಧೋರಣೆಗಳ ಪರಿಧಿಗಳಿಂದ ಹೊರಬಂದು ಭಾವುಕರಾಗಿದ್ದಾರೆ. ಅನಿವಾಸಿಗೆ ಕಾಲ ಕಾಲಕ್ಕೆ ಹೊಸ ನೀರು ಸೇರುತ್ತ ಈ ಅನಿವಾಸಿಯೆಂಬ ನದಿ ನಿರಂತರವಾಗಿ ಹರಿಯಲಿ ಎಂದು ಆಶಿಸುತ್ತಾರೆ.

ರಾಂ ರ ಈ ಲೇಖನದಲ್ಲಿ ಮುಖ್ಯವಾದ ಎರಡು ಪ್ರಶ್ನೆಗಳಿವೆ. ಕೊಟ್ಟದ್ದೇನು? ಪಡೆದದ್ದೇನು?ಇದು ಅತ್ಯಂತ ಮುಖ್ಯವಾದ, ಮೌಲ್ಯಯುತವಾದ ವಿಚಾರ. ಇದನ್ನು ಪ್ರತಿ ಸದಸ್ಯರು  ಕೇಳಿ ಕೊಳ್ಳಬೇಕು ಕೂಡ.ಆಗಷ್ಟೆ  ವಾಮನ ರೂಪಿ ಅನಿವಾಸಿಯ  ವೇದಿಕೆ ನಮ್ಮೆಲ್ಲರಿಗೆ ದೊರಕಿಸಿದ ಅವಕಾಶಗಳ  ವಿರಾಟ್ ದರ್ಶನವಾಗುತ್ತದೆ.

ಈ ಸರಣಿಗೆ ಒಂದು ಬರಹವನ್ನು ಬರೆಯಲು ಕೇಳಿದಾಗ ಉತ್ಸಾಹದಿಂದ ಮೊದಲು ಲೇಖನವನ್ನು ಬರೆದು ಕಳಿಸಿದವರು ರಾಂ ಅವರೇ. ಆದರೆ, ಬೇರೆಲ್ಲರ ಲೇಖನಗಳಿಗಾಗಿ ಕಾಯುತ್ತಿದ್ದ ಕಾರಣ ಇಷ್ಟು ನಿಧಾನವಾದದ್ದಕ್ಕೆ ಕ್ಷ್ಮಮೆಯಿರಲಿ ಎಂದು ಕೋರುತ್ತೇನೆ. ಪುಟ್ಟ ಲೇಖನವಾಗಿರುವ ಕಾರಣ ಉದ್ದನ್ನ ಪ್ರಸ್ತಾವನೆ  ಅಷ್ಟೆ –ಡಾ. ಪ್ರೇಮಲತ ಬಿ.

ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು?

ಅನಿವಾಸಿಗೆ 5 ವರ್ಷ ತುಂಬಿದೆ ಅಂದ್ರೆ ನಂಬೋಕಾಗ್ತಾ ಇಲ್ಲ. ಪ್ರೇಮಲತಾ  2 ತಿಂಗಳ ಕೆಳಗೆ ವಾಟ್ಸಾಪ್ ಸಂದೇಶ ಕಳಿಸಿದಾಗಲೇ ಗೊತ್ತಾಗಿದ್ದು.

ಈ 5 ವರ್ಷಗಳು ಹೇಗೆ ಹೋದವು ಅಂತಲೇ ಗೊತಾಗ್ಲಿಲ್ಲ. ಹಿಮದ ಉಂಡೆಯಂತೆ ಚಿಕ್ಕ ಕಣದಿಂದ ಮಹಾ ಗಾತ್ರದ ಬಂಡೆ ಆಗದಿದ್ದರೂ ಸಾಕಷ್ಟು ಗಾತ್ರದ ಕಲ್ಲಾಗಿ ನಿಂತಿರುವುದು ಹೆಮ್ಮೆಯ ವಿಷಯ. ಈ ಗತಿಸಿದ ದಿನಗಳಲ್ಲಿ, ಬಹಳಷ್ಟು ಜನ ಸೇರ್ಪಡೆಯಾಗಿದ್ದಾರೆ, ಕೆಲವರು ತೊರೆದು; ತೆರೆ ಮರೆಗೆ ಸರಿದಿದ್ದಾರೆ. ಆದರೆ ನಿಲ್ಲದ ನದಿಯಂತೆ ಅನಿವಾಸಿ ಸದಾ ಹರಿಯುತ್ತ ಬೆಳೆಯುತಿರುವುದನ್ನು ನೋಡುವುದೇ ಸೊಗಸು.

                      SMART ಥೆರಪಿ ’ ನಾಟಕದಲ್ಲಿ ಪಾತ್ರದಾರಿಯಾಗಿ

ನಾನು ನೀಡಿದ್ದಕ್ಕಿಂತ ಅನಿವಾಸಿಯಿಂದ ಪಡೆದದ್ದೇ ಜಾಸ್ತಿ. ಹಿರಿಯರ ಸಹವಾಸ, ಸಮವಯಸ್ಕರೊಂದಿಗೆ ಸಮಾನ ವಿಷಯಗಳ ಚರ್ಚೆ ರಸಗವಳ ಮೆದ್ದಂತೆ. ವಾರಕ್ಕೊಮ್ಮೆ ಬರುವ ಲೇಖನಗಳು ಮನಸ್ಸಿಗೆ ಮುದ ನೀಡುವುದಲ್ಲದೇ, ಹಲವಾರು ಚರ್ಚೆಗಳಿಗೆ ಪೀಠಿಕೆ, ಸರಕಾಗಿದೆ. ಸತತವಾಗಿ ಇದನ್ನು ನಡೆಸಿಕೊಂಡು ಬಂದಿರುವ ಭಗೀರಥ ಪ್ರಯತ್ನಕ್ಕೆ ಈಗಿನ ಕಾಲದ ಪುರಾವೆಯೇ ಸರಿ. ದೇಶದ ಹಲವು ಊರುಗಳಲ್ಲಿ ಹರಿದು ಹಂಚಿ ಹೋಗಿರುವ ಸದಸ್ಯರು ಅಂತರ್ಜಾಲದ ಹಂದರದಲ್ಲೇ ಬೆಳಸಿರುವ ಸಾಪ್ತಾಹಿಕವನ್ನಿಂದು ಜಗತಿನ ಹಲವು ದೇಶಗಳ ಓದುಗರು ಪ್ರೋತ್ಸಾಹಿಸುತ್ತಿರುವುದು ನಮಗೆ ಸದಾ ಚೈತನ್ಯ ಕೊಡುವ ಲಹರಿ.

                  ಕವಿ ಡುಂಡಿರಾಜರ ಹನಿಗವನ ಗೋಷ್ಠಿಯಲ್ಲಿ

ವರ್ಷಕ್ಕೆರಡು ಬಾರಿ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ನಡೆಯುವ ಅನಿವಾಸಿ ನಡೆಸಿ ಕೊಡುವ ಸಾಹಿತ್ಯಿಕ ಸಭೆಗಳು ನನ್ನ ಅಚ್ಚುಮೆಚ್ಚಿನ ಕ್ಷಣಗಳು. ಕನಸು – ಮನಸಿನಲ್ಲೂ ಎಣಿಸದ ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜಗಳನ್ನು ಭೇಟಿಯಾಗುವ, ಅವರೆದುರು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ವೇದಿಕೆ ಇದು.

   ರಾಜ್ಯ ಪ್ರಶಸ್ತಿ ವಿಜೇತ ಗುರುರಾಜ ಕರ್ಜಗಿಯವರ ಸಮ್ಮುಖದಲ್ಲಿ 

ಈ ಎಲ್ಲ ಕ್ಷಣಗಳಲ್ಲಿ ನನಗೆ ಅಪ್ಯಾಯಮಾನವಾಗಿರುವುದು ಶ್ರೀಯುತ ಗುರುರಾಜ ಕರಜಗಿಯವರ ಭೇಟಿ. ವಿಜ್ಞಾನಿ, ಶಿಕ್ಷಣ ತಜ್ಞ, ಸಾಹಿತಿ, ದಾರ್ಶನಿಕ ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಕರಜಗಿಯವರು, ಹಿರಿಯರೊಡನೆ ಹಿರಿಯರಾಗಿ; ಕಿರಿಯರೊಡನೆ, ಸಮವಯಸ್ಕನಂತೆ; ಮಕ್ಕಳೊಡನೆ ಮಕ್ಕಳಾಗಿ ಒಡನಾಡುವ ಪರಿ ಹೊಸ ಪಾಠವನ್ನೇ ಕಲಿಸಿತು. “ ವಿದ್ಯಾ ವಿನಯೇನ ಶೋಭತೆ” ಎಂಬ ಮಾತಿಗೆ ಇವರು ಜ್ವಲಂತ ಉದಾಹರಣೆ. ಅನಿವಾಸಿಯ ಸದಸ್ಯನಾಗದಿದ್ದರೆ ಇಂತಹ ಸುವರ್ಣಾವಕಾಶ ನನ್ನದಾಗುತ್ತಿರಲಿಲ್ಲ.

      ಧ್ವನಿ ಸುರುಳಿಯ ಬಿಡುಗಡೆ ಸಮಾರಂಭದಲ್ಲಿ

ಪ್ರೇಮಲತಾರ ಒತ್ತಾಸೆಗೆ, ಬತ್ತದ ಉತ್ಸಾಹಕ್ಕೆ ಮಣಿದು ಭಾಗಿಯಾದ ಧ್ವನಿ ಸುರುಳಿಯ ಯೋಜನೆ; ಗೆಳೆಯರೊಂದಿಗೆ, ಕೇಶವ ಬರೆದು ನಿರ್ದೇಶಿಸಿದ ಏಕಾಂಕದಲ್ಲಿ ನಟನೆ; ‘ಅನಿವಾಸಿ ಅಂಗಳದಿಂದ’ ಹೊತ್ತಿಗೆಯ ಬಿಡುಗಡೆ; ಒಂದೇ – ಎರಡೇ? ಈ  ಐದು ವರ್ಷಗಳಿಂದ ಸತತವಾಗಿ ಸಾಂಸ್ಕೃತಿಕ – ಸಾಹಿತ್ಯಿಕ ಪ್ರವಾಹದಲ್ಲಿ ಅನಿವಾಸಿ, ನನ್ನನ್ನು ಹಿಂದೆಂದೂ ಅನುಭವಿಸದ, ಅನ್ವೇಷಿಸದ ಜಗತ್ತಿಗೆ ತಂದೊಡ್ಡಿದೆ.

                                           ಗಿರೀಶ್ ಕಾಸರವಳ್ಳಿಯರ ಕಮ್ಮಟದಲ್ಲಿ

ಅನಿವಾಸಿ ಬೆಳೆಯುತ್ತಲೇ ಇರಲಿ, ಇಲ್ಲಿನ ಕನ್ನಡಿಗರಿಗೆ ಸಾಹಿತ್ಯಿಕ ನೆಲೆಯಾಗಲಿ ಎಂಬುದೇ ನನ್ನ ಹಾರೈಕೆ. ಈ ಹಾರೈಕೆಯಲ್ಲಿ ನನ್ನ ಸ್ವಾರ್ಥವೂ ಹಾಸು ಹೊಕ್ಕಾಗಿದೆ. ಅನಿವಾಸಿ ಬೆಳೆದರೆ ಅದರ ಆಶ್ರಯದಲ್ಲಿ ನಾನೂ ಬೆಳೆವನೆಂಬ ಆಶಯ. ನಮ್ಮಲ್ಲರ ಆಶಯವೇ ಅನಿವಾಸಿಗೆ ಬೇಕಾದ ಆಮ್ಲಜನಕ ಎಂದೇ ನನ್ನ ಅನಿಸಿಕೆ.-ರಾಂ

 ( ಮುಂದಿನ ವಾರ- ತಾಂತ್ರಿಕತೆಯ ತೋರು ಹಾದಿ)

6 thoughts on “ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು? -ಡಾ. ರಾಮ ಶರಣ್

  1. ಅನಿವಾಸಿ ವೇದಿಕೆಯ ಮತ್ತೊಬ್ಬ ಎಲೆ ಮರೆ ಕಾಯಿ ರಾಮ್ ಶರಣ್ ಅವರು. ಕನ್ನಡ ಸಾಹಿತ್ಯದ ಪ್ರಸಿದ್ಧ ಕಾದಂಬರಿಕಾರ
    ದಿ. ಭಾರತೀಸುತ ಅವರ ಮೊಮ್ಮಗನಾದ ರಾಮ್, ನಮ್ಮ ವೇದಿಕೆಗೆ ಸಾಕಷ್ಟು ನೀಡಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಆದರೆ ಅವರೇ ಹೇಳಿರುವಂತೆ, ವೇದಿಕೆಯಿಂದ ನಾವೆಲ್ಲ ಸಾಕಷ್ಟು ಪಡೆದಿದ್ದೇವೆ ಕೂಡ. ರಾಮ್ ಅವರು ಒಮ್ಮೆ ಅವರ ಅಜ್ಜನವರ ಬಗ್ಗೆ ಬರೆದ ಲೇಖನ ನನ್ನ ನೆನಪಿನಲ್ಲಿದೆ. ನಮ್ಮ ವೇದಿಕೆಯ ಬೆಳವಣಿಗೆಯಲ್ಲಿ ಅವರ ಕೂಡ ಹಿರಿದು. ಅವರ ಸೇವೆಯೂ ಹೀಗೆ ಮುಂದುವರೆಯಲಿ.
    ಉಮಾ ವೆಂಕಟೇಶ್

    Like

  2. ಹೌದು ರಾಮ್ ಅವರು ಹೇಳಿರುವಂತೆ ಅನಿವಾಸಿಗೆ ಕೊಟ್ಟದ್ದಕ್ಕಿಂತ ಹೆಚ್ಚು ಪಡೆಯುತ್ತಲಿದ್ದೇವೆ

    Like

  3. ಕನ್ನಡ ಭಾಷೆಯ ಬಗ್ಗೆ ಮಿಡಿಯುವ ಮನಗಳು ‘KSSVV / ಅನಿವಾಸಿ’ ಯ ಕೈಹಿಡಿದು ನಡೆಸುತ್ತಿವೆ. ಮತ್ತೊಂದು ಬಗೆಯಲ್ಲಿ ‘KSSVV / ಅನಿವಾಸಿ’ ಜಾಲತಾಣ, ಸಾಹಿತ್ಯ ಚಟುವಟಿಕೆಗಳು, ಕಲಾಪಗಳು ಹೊರನಾಡಿನಲ್ಲಿರುವ ಕನ್ನಡಿಗರನ್ನು ಪ್ರೇರೇಪಿಸಿ, ಪ್ರೋತ್ಸಾಹಿಸಿ ತಮ್ಮಲ್ಲಿರುವ ಕನ್ನಡತನವನ್ನು ಮತ್ತಷ್ಟು ಜಾಗೃತಗೊಳಿಸುವತ್ತ ಅವರನ್ನು ಕೈಹಿಡಿದು ನಡೆಸಿದೆ. ಎರಡೂ ಕೈಗಳು ಸೇರಿ ಇಂದು ಐದು ವರ್ಷದ ಚಪ್ಪಾಳೆಯಾಗಿದೆ. ಕೊಟ್ಟದ್ದು-ಪಡೆದದ್ದು ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ದಾಸವಾಣಿಯಂತಾಗಿದೆ. ೨೦೧೨ನೇ ವರ್ಷದಲ್ಲಿ ನಾನು ಇಲ್ಲಿಯ (Queensland) ಕನ್ನಡ ಸಂಘದ ಕಾರ್ಯಸಮಿತಿಯವರಲ್ಲಿ ಪ್ರತಿವರ್ಷವೂ ನಾವು ಸದಸ್ಯರು ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸಬಹುದೆಂಬ ಆಶಯವನ್ನು ವ್ಯಕ್ತಪಡಿಸಿದ್ದೆ. ಆದರೆ ಅದು ಬರೀ ಆಶಯವಾಗೇ ಉಳಿದುಬಿಟ್ಟಿತು. ‘ಅನಿವಾಸಿ’ ಯ ಸಫಲ ಮತ್ತು ಉತ್ತಮ ಉದಾಹರಣೆಯನ್ನು ಕೊಡುತ್ತಾ ಈಗ ಮತ್ತೆ ಪ್ರಯತ್ನಿಸುತ್ತಿದ್ದೀನಿ. ಅದಾಗಲೇ ‘ಅನಿವಾಸಿ’ ಹಣ್ಣುಬಿಡಲು ಆರಂಭಿಸಿದೆ ಎನ್ನೋಣವೇ?!
    ವಿನತೆ ಶರ್ಮ

    Liked by 1 person

    • ನಿಮ್ಮ ಅವಿರತ ಪ್ರಯತ್ನ ಯಶಸ್ವಿಯಾಗಲೆಂದು ಆಶಿಸುವೆ! ನಿಮ್ಮಥವರೇ ಆಶಾವಾದಿ ಮತ್ತು ಉತ್ಸುಕರು ಇನ್ನಿಬ್ಬರಾದರೂ ಸಿಕ್ಕರೆ ಆರಂಭಮಾಡಿ ಜೊತೆಗೂಡಿಸಬಹಪದೇನೋ. ಆ ಮ್ಯಾಜಿಕ್ ಕ್ಷಣ ಬರಬೇಕು. ಬರಲಿ!

      Like

  4. ಪೀಠಿಕೆಯಲ್ಲಿ ಸಂಪಾದಕರು ‘ಅನಿವಾಸಿ’ಯನ್ನು ಎಷ್ಟೋ ಜನರು ನೇಯ್ದ ಒಂದು ಬಟ್ಟೆಗೆ ಹೋಲಿಸಿದ್ದಾರೆ. ಆ ‘multicoloured dreamcoat’ ಗೆ ಒಂದು ಪ್ರಾಮಾಣಿಕ, ವರ್ಣರಂಜಿತ ಮತ್ತು ಗಟ್ಟಿತನದ ಎಳೆಯನ್ನು ಕೊಟ್ಟವರು ರಾಮ್ ಶರಣ್ ! Quantityಗಿಂತ quality ಮತ್ತು ಅದಕ್ಕೆ ಬೆಂದ್ರೆಯವರು ಹೇಳಿದಂತೆ ‘ಒಲವು. ಸ್ನೇಹ, ಪ್ರೇಮವನ್ನು’ ಕೊಟ್ಟವರು. ಅನಿವಾಸಿಯ ಆರಂಭದ ದಿನಗಳಲ್ಲೇ ಆ ನದಿಗೆ ತಮ್ಮ ಸಿಹಿನೀರಿನ ‘ಸೆಲೆ’ಯನ್ನು ತಂದು ಸೇರಿಸಿದ್ದಾರೆ. ರಂಗಮಂಚದಮೇಲೆ ಅಷ್ಟೇ ಅಲ್ಲ, ಏನೇ ಬರೆದರೂ ಸ್ಪಷ್ಟವಾಗಿ ನೇರವಾಗಿ ಬರುವುದು ಅವರ ಧ್ವನಿ. ಸಹಾಯ ಬೇಕಾದಾಗ ಹಿಂಜರಿಯದೆ ಕೈಕೊಟ್ಟುದನ್ನು ಸ್ಮರಿಸುವೆ.
    ಪ್ರಸ್ತುತ ಲೇಖನದ ಶೀರ್ಷಿಕೆಯಲ್ಲಿ ಎರಡು ಪ್ರಶ್ನೆಗಳು ಎಂದಿದ್ದಾರೆ: ಕೊಟ್ಟದ್ದೇನು, ಪಡೆದದ್ದೇನು? ಅನಿವಾಸಿಯ ಬರಹಗಾರರಷ್ಟೇ ಅಲ್ಲ ಓದುಗರೂ ಸಹ ಪಡೆದದ್ದೇ ಹೆಚ್ಚು. ಈ ಸತ್ಯ ಇದು ಎಳೆಯರಿಗೆ, ಹೊಸ ‘ತೊರೆ’ಗಳಿಗೆ ಆಮಂತ್ರಣವಾಗಿರಲಿ, ಹರಿಯುವ ಅನಿವಾಸಿಯೊಡನೆ ಒಟ್ಟುಗೂಡಿ ಈ ಚಲಿಸುವ ನದಿಯ ರಭಸ ಮತ್ತು ಹರಹನ್ನು ಹೆಚ್ಚಿಸಬೇಕೆಂಬ ಆಶಯ ನನ್ನದೂ.

    Like

  5. ಪ್ರೇಮಲತಾ ಬರೆದಿರುವಂತೆ ಅನಿವಾಸಿ‌ ಐದು ವರ್ಷದಿಂದ ಹರಿಯುತ್ತಿದೆ. ಕನ್ನಡ ಎಂಬ ಒಂದೇ ಒಂದು ನಂಬಿಕೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಆಸಕ್ತಿ ಇರುವ ಎಲ್ಲರನ್ನೂ ಸೇರಿಸಿಕೊಂಡು ದೊಡ್ಡದಾಗುತ್ತಿದೆ. ಪ್ರತಿ ತೊರೆಗಳೂ ಹೊಸ ವಿಚಾರ ಸೃಜನಶೀಲತೆಗಳನ್ನು ತಂದಿದೆ.

    ರಾಂ ಬರೆದಿರುವಂತೆ, ನಾನು ಅನಿವಾಸಿಗೆ ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು. ಕನ್ನಡದ ಖ್ಯಾತ ಸಾಹಿತಿಗಳು ಜೊತೆ ನಿಂತು ಭಾಷಣ ಮಾಡುತ್ತೇನೆ ಎಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ.

    ಕೆಬಿಯುಕೆಯಲ್ಲಿ ನಡೆಯುವ ಸಾಹಿತ್ಯ ಕಮ್ಮಟ ಯುಕೆ ಕನ್ನಡಿಗರಿಗೆ ಹೊಸ ವೇದಿಕೆಯನ್ಮು ಕೊಟ್ಟಿದೆ.

    ಕೇಶವ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.