’ಅನಿವಾಸಿ’ ನಡೆದು ಬಂದ ದಾರಿ ಭಾಗ -2 ಶ್ರೀವತ್ಸ ದೇಸಾಯಿ

 ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಕಳೆದ ವಾರದ ಲೇಖನದ ಲಿಂಕ್ ಇಲ್ಲಿದೆ-https://wp.me/p4jn5J-2ju   -ಸಂ

KSSVV-Anivaasi -ಭಾಗ 2

ಕಳೆದ ವಾರದ ಲೇಖನಕ್ಕೆ ಬಂದ ನಿಮ್ಮ ಕಮೆಂಟುಗಳು ಆಶ್ಚರ್ಯ ಮತ್ತು ಆನಂದ ಉಂಟು ಮಾಡಿವೆ. ಬರೆದವರೆಲ್ಲರಿಗೂ ಧನ್ಯವಾದಗಳು. ಇದು ಅನಿವಾಸಿ ಇಲ್ಲಿಯವರೆಗೆ ನಡೆದ ಹಾದಿಯ ಸಂಕ್ಷಿಪ್ತ ವರದಿಯಾದ್ದರಿಂದ ಅನಿವಾರ್ಯವಾಗಿ ಕೆಲವರ ಹೆಸರುಗಳಾಗಲಿ ಘಟನೆಗಳಾಗಲಿ ಬಿಟ್ಟು ಹೋಗಿದ್ದರೆ ಅದು ಉದ್ದೇಶಪೂರ್ವಕವಲ್ಲ. ಇಲ್ಲಿಯವರೆಗೆ ’ಅನಿವಾಸಿ’ಗಾಗಿ ದುಡಿದವರೆಲ್ಲರನ್ನೂ ನೆನೆಯುತ್ತೇನೆ.

ನಡೆದು ಬಂದ ದಾರಿಮೈಲಿಗಲ್ಲುಗಳು ಮತ್ತು ಬಿದ್ದ ಗುಂಡಿಗಳು!

ಕಸಾಸಾಂವಿವೇ (KSSVV) ಬೆಳವಣಿಗೆ

2013 ರ ಮೊದಲ ಭೇಟಿಯ ನಂತರ ನಮ್ಮ ಮಧ್ಯೆ ಭರದಿಂದ ಮಿಂಚಂಚೆ ವಿನಿಮಯ ನಡೆಯಿತು. ಎಲ್ಲರೂ ಉತ್ಸುಕರಾಗಿದ್ದರು ಮತ್ತು ಜಾಲಜಗುಲಿಯ ಮೊದಲ ಲೇಖನಕ್ಕೆ ಕಾದಿದ್ದರು. ಕೇಶವ ಅವರು ಮುಂದೆರಡು ತಿಂಗಳಲ್ಲಿ ಒಂದು ವೆಬ್ ಸೈಟ್ (KSSVV.com) ತಯಾರಿಸಿಯೇ ಬಿಟ್ಟರು. KSSVV ಬ್ಯಾನ್ನರ್ ಗೆ ಒಂದು ಲಾಂಛನ ಬೇಕಿತ್ತು. ಉಮಾ ಅವರು ತಯಾರಿಸಿದ ಲಾಂಚನವನ್ನು ನಾವೆಲ್ಲ ಒಪ್ಪಿದೆವು. ಅದು ಈಗಲೂ ಇದೆ. 2014ರ ಫೆಬ್ರುವರಿ 3ನೆಯ ತಾರೀಕು ”ಚಹಾ ಚಟ ಭಯಂಕರರೇ, ಈ ಆಂಗ್ಲರು?” ಎನ್ನುವ ಶೀರ್ಷಿಕೆಯ ಮೊದಲ ಲೇಖನ ಉಮಾ ಅವರೇ ಬರೆದದ್ದು ಪ್ರಕಟವಾಯಿತು. ಅದೊಂದು ಲ್ಯಾಂಡ್ ಮಾರ್ಕ್! ಅದಕ್ಕೆ ಮೊದಲ ಕಮೆಂಟ್ ಬರೆದವರು ಕೇಶವ ಕುಲಕರ್ಣಿಯವರು, ಅದೂ ಉಚಿತವೇ! ಮೊದಲ ಕೆಲ ತಿಂಗಳುಗಳು KSSVV ಶಿರೋಫಲಕದ ಅಡಿಯಲ್ಲೆ ಕಥೆ, ಕವಿತೆ, ವೈಚಾರಿಕ ಲೇಖನಗಳು ಪ್ರಕಟವಾದವು. ಸರದಿಯ ಪ್ರಕಾರ ಆನಂತರ ಬಂದ ಸಂಪಾದಕರಿಂದ ಆ ವಾರದ ಪ್ರಕಟನೆ ಹೊಸ ಬ್ಯಾನರ್ ’ಅನಿವಾಸಿ’ ಎಂಬ ಹೆಸರನ್ನು ಧರಿಸಿ ಹೊರಬರಲಾರಂಭಿಸಿತು. ಆದರೂ ಹಿಂದಿನ ಲೇಖನಗಳೆಲ್ಲವೂ ಸ್ಥಳಾಂತರಗೊಂಡು ಹಳೆಯ ಎಲ್ಲ ಲೇಖನಗಳು ಇಂದೂ ’ಅನಿವಾಸಿ’ಯಲ್ಲಿ ಓದಲು ಸಿಗುತ್ತವೆ.

ಮಾರ್ಚ್ 8, 2014,

ಅ ದಿನ ’ಡೋರ್” (Dore )ಹಳ್ಳಿಯಲ್ಲಿ ವಾಸಿಸುತ್ತಿದ್ದ ಡಾ ಪ್ರಸಾದರ ಮನೆಯಲ್ಲಿ ಮತ್ತೆ ನಾವಿಷ್ಟು ಜನ ಕೂಡಿದೆವು. ನಮಗಾಗಿ ಯಾವಾಗಲೂ ಅವರ ಮನೆಯ ಬಾಗಿಲು ತೆರೆದಿರುತ್ತಿತ್ತು! ನಮಗೆಲ್ಲ ಬ್ಲಾಗ್ ’ಎಡಿಟಿಂಗ’ ಬಗ್ಗೆ ಮೊದಲ ಹೆಜ್ಜೆಗಳನ್ನು ಕಲಿಸಿದವರು ಕೇಶವ ಕುಲಕರ್ಣಿ. ನಮಗೆ ಎಲ್ಲದೂ ಹೊಸತು. ಪ್ರಾರಂಭದಲ್ಲಿ ಕೆಲವರಗಷ್ಟೇ ವೆಬ್ ಸೈಟ್ ಎಡಿಟಿಂಗ್ ಹಕ್ಕುಗಳನ್ನು ಕೊಟ್ಟಿದ್ದರು. ಪ್ರಸಾದರ ಕಂಪ್ಯೂಟರ್ ತರಿಸಿ WordPress ಜಾಲತಾಣಕ್ಕೆ ಹೇಗೆ ಹೋಗುವದು, ಡ್ಯಾಶ್ ಬೋರ್ಡ್ ಹೋಗಿ ಹೊಸ ಪೋಸ್ಟಿಂಗ ಮಾಡುವದು, ಹೇಗೆ ಚಿತ್ರಗಳನ್ನು ಗ್ಯಾಲರಿಗೆ ತರುವದು ಇವೆಲ್ಲದರ ಪ್ರಾತ್ಯಕ್ಷಿಕೆ (demo) ಆಯಿತು. ಆ ದಿನ ನಮಗೆ ಎಷ್ಟು ತಿಳಿಯಿತೋ, ಎಷ್ಟು ಮನಸ್ಸಿನಲ್ಲಿ ಉಳಿಯಿತೊ. ಕ್ರಮೇಣ ’ಪ್ರ್ಯಾಕ್ಟಿಸ್ ಮೇಕ್ಸ್ ಇಟ್ ಪರ್ಫೆಕ್ಟ್’ ಅನ್ನೋ ಭರವಸೆಯಲ್ಲಿ ತಲೆಯಾಡಿಸಿ ಮನೆಗೆ ಮರಳಿದವರಲ್ಲಿ ನಾನೂ ಒಬ್ಬನು!

YSKBಯ ಜನನ

ಈ ಮಧ್ಯೆ 1983 ರಲ್ಲಿ ಪ್ರಾರಂಭವಾದ ’ಯು ಕೆ ಕನ್ನಡ ಬಳಗ’ದ ಒಂದು ಅಂಗವಾಗಿ ಯಾರ್ಕ್ ಶೈರ್ ಚ್ಯಾಪ್ಟರ್ ಹುಟ್ಟಿದ್ದು 2013ರ ಕೊನೆಯಲ್ಲಿ. ಅದಕ್ಕೆ YSKB(ಯಾರ್ಕ್ ಶೈರ್ ಕನ್ನಡ ಬಳಗದ ಚಾಪ್ಟರ್) ಎಂದು ನಾಮಕರಣ ಮಾಡಿ ಶೆಪ್ಫೀಲ್ಡಿನ ಸುತ್ತ ಮುತ್ತಲಿನ ಕನ್ನಡಿಗರು ಕೂಡಿಕೊಂಡು ಅದರ ಉದ್ಘಾಟನೆ ಮಾಡಿದರು. ಅದು ಅಂದಿಗೂ ಇಂದಿಗೂ ಕನ್ನಡಬಳಗದ ಶಾಖೆಯೇ ಹೊರತು, ಪ್ರತ್ಯೇಕ ಸಂಘವಲ್ಲ. ತಮ್ಮ ಪ್ರಥಮ ಕಾರ್ಯಕ್ರಮವನ್ನು ಎಪ್ರಿಲ್ 8, 2014ರಂದು ಆಚರಿಸಿದರು. ಶೆಫೀಲ್ಡಿನಲ್ಲಿ ಆ ದಿನ ಉಪಸ್ಥಿತರಾಗಿದ್ದ ಡಾ ದಾಕ್ಷಾಯಿನಿ ಬಸವರಾಜ್ ಗೌಡ ಮತ್ತು ಡಾ ಪ್ರೇಮಲತ ಬಿ. ಅವರು ’ಅನಿವಾಸಿ’ಗೆ ಸೇರಿಕೊಂಡರು, ತದನಂತರ ಅನ್ನಪೂರ್ಣ ಆನಂದ ಮತ್ತು ಆನಂದ ಕೇಶವಮೂರ್ತಿ, ಡಾ ಗಿರಿಧರ್ ಹಂಪಾಪುರ, ರಾಜಾರಾಂ ಕಾವಳೆ (ಈಗ ಅವರಿಲ್ಲ), ಡಾ ರಾಮಶರಣ್ ಲಕ್ಷ್ಮೀನಾರಾಯಣ, ಡಾ ಸುದರ್ಶನ ಗುರುರಾಜರಾವ್ ಸೇರಿದರು. ಅನಿವಾಸಿಯ ಹಲವಾರು ಸದಸ್ಯರು ಯಾರ್ಕ್ ಶೈರಿಗೆ ಸಮೀಪ ಇದ್ದುದರಿಂದ ಭೇಟಿಯಾಗಲು ಮತ್ತು ಅನಿವಾಸಿ ಕಾರ್ಯಕಲಾಪಗಳನ್ನು ಸಮಕ್ಷಮ ಚರ್ಚಿಸಲು ಅನುಕೂಲವಾಗಿ ಅದರ ಬೆಳವಣಿಗೆಗೆ ಸ್ವಲ್ಪವಾದರೂ ಸಹಾಯವಾಯಿತು. ಇದು ಆಕಸ್ಮಿಕ.

ಮೊದಲ ಜನರಲ್ ಮೀಟಿಂಗ್, ಬರ್ಮಿಂಗಮ್, ಜೂನ್ 8, 2014

ಮೊದಲ ಸಭೆ, ಬರ್ಮಿಂಗಮ್, 8 ಜೂನ್ 2014. ಫೋಟೋ: B S ಸತ್ಯಪ್ರಕಾಶ್

ಬರ್ಮಿಂಗ್ಯಾಮಿನಲ್ಲಿ ಮೊದಲ ಅಧಿಕೃತ ಸಭೆ ಸೇರಿದ ಐತಿಹಾಸಿಕ ದಿನ, ಜೂನ್ 8, 2014 ರಂದು (ಫೊಟೋ). ಎಲ್ಲರೂ ವಂತಿಗೆ ಕೊಟ್ಟು ಒಂದು ಹಾಲ್ ಬಾಡಿಗೆ ತೆಗೆದುಕೊಂಡು ಮೇಲೆ ಹೇಳಿದ ಎಲ್ಲ ಸದಸ್ಯರು ಮೊದಲ ಬಾರಿ ಕೂಡಿದೆವು. ಎಷ್ಟೋ ಹೊಸ ಮುಖಗಳು. ಎಲ್ಲರಿಗೂ ಹಬ್ಬದ ಉತ್ಸಾಹ. ತಲೆತುಂಬ ಯೋಜನೆಗಳು, ಎಲ್ಲರಿಗೂ ಬರೆಯುವ ಉತ್ಸಾಹ, ಮೊದಲ ಸಲ ಹೊಸತೊಂದನ್ನು ಪ್ರಾರಂಭಿಸುತ್ತೇವೆಂಬ ಭಾವನೆ! ಮೊದಲ ಬಾರಿ ಮೀಟಿಂಗಿಗೊಂದು ಅಜೆಂಡಾ! ಕೆಲವು ತಿಂಗಳ ನಂತರ (ಅಕ್ಟೋಬರ್ 2014) ಚೆಸ್ಟರ್ಫೀಲ್ಡಿನಲ್ಲಿ ನಡೆಯಲಿರುವ ಕನ್ನಡ ಬಳಗ ಯು.ಕೆ. ದ ಎರಡು ದಿನಗಳ ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬರಲಿದ್ದ ಹಿರಿಯ ಸಾಹಿತಿ ಹೆಚ್. ಎಸ್. ವೆಂಕಟೇಶಮೂರ್ತಿಯವರಿಂದ ನಮ್ಮ’ಕಸಂಸಾವಿವಿ’ ಜಾಲಜಗುಲಿ ಲೋಕಾರ್ಪಣವಾಗಲಿದೆಯಾದ್ದರಿಂದ ನಮ್ಮ ವತಿಯಿಂದ ಕೆಲ ಕಾರ್ಯಕ್ರಮಗಳನ್ನಿಟ್ಟುಕೊಳ್ಳಬೇಕೆಂದು ಚರ್ಚಿಸಿದೆವು. ಸುದರ್ಶನ ಅವರು ಕನ್ನಡದ ಉಳಿವು ಅಳಿವಿನ ಬಗ್ಗೆ ತಾವು ಸಿದ್ಧ ಪಡಿಸಿದ ಬರಹ ”ನುಡಿ-ಮರಣ” ವನ್ನು ಚರ್ಚಿಸಿದರು. ಅದನ್ನು ಚೆಸ್ಟರ್ಫೀಲ್ಡ್ ಕಾರ್ಯಕ್ರಮದಲ್ಲಿಯೂ ಮಂಡಿಸುವುದೆಂದು ನಿರ್ಧಾರವಾಯಿತು.

ಎರಡನೆಯ ಮೀಟಿಂಗ್ ಸೆಪ್ಟೆಂಬರ್ 27, 2014ರಂದು ಕೇಶವ ಕುಲಕರ್ಣಿಯವರ ಸಟನ್ ಕೋಲ್ದ್ ಫೀಲ್ಡ್ (ಬರ್ಮಿಂಗಮ್ ಹತ್ತಿರ) ಮನೆಯಲ್ಲಿ ಕೂಡಿತ್ತು. ಯು ಕೆ ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಡಿಜಿಟಲ್ ತಂತ್ರಾಂಶ (ಬರಹ, ಕನ್ನಡ ಎಡಿಟರ್) ಉಪಯೋಗಿಸಿ ಕನ್ನಡದಲ್ಲಿ ಬರೆಯುವದರ ಬಗ್ಗೆ ಜನರಿಗೆ ತಿಳಿಸಿಕೊಡುವ ಕಮ್ಮಟಗಳನ್ನು ಏರ್ಪಡಿಸಬೇಕೆಂದು ನಿರ್ಧರಿಸಿದೆವು. (ಅದು ಸಫಲವಾಯಿತು ಸಹ.). ನಾವು ತಾಂತ್ರಿಕ ವಿಷಯಗಳನ್ನೆದುರಿಸಿದರ ಬಗ್ಗೆ ಮುಂದಿನ ವಾರಗಳಲ್ಲಿ ಬರಲಿರುವ ಕೇಶವ ಅವರ ಲೇಖನವನ್ನು ನೋಡಿರಿ.

ಭಿನ್ನಾಭಿಪ್ರಾಯ, ವೈಮನಸ್ಸು! ‘What’s in a name?’

ಶಿಶು ಎದ್ದು ನಡೆಯಲು ಪ್ರಾರಂಭಿಸಿದಂತೆ KSSVV ಹುಟ್ಟಿ ಒಂದು ವರ್ಷವಾಗುವದರೊಳಗೆ ನವೆಂಬರಿನಲ್ಲಿ ಮುಗ್ಗರಿಸಿ ಬೀಳುವ ಪ್ರಸಂಗ ಬಂತು! ಅದರ ಹಿನ್ನೆಲೆ ಹೀಗಿದೆ: ನಮ್ಮ ಬ್ಲಾಗ್ ಆಗತಾನೆ ಬೇರೂರಿತ್ತು. ಅದರ ಸಂಪಾದಕತ್ವ ಸರದಿಯ ಪ್ರಕಾರ ಮೂರು ನಾಲ್ಕು ತಿಂಗಳಿಗೊಬ್ಬರು ಮಾಡುವ ಯೋಜನೆಯಾಗಿತ್ತು. ಎಲ್ಲರೂ ವೃತ್ತಿಯಿಂದ ಫುಲ್ ಟೈಮ್ ಡಾಕ್ಟರುಗಳೇ ಆಗಿದ್ದಾರು. (ಒಬ್ಬರು ಮಾತ್ರ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಡಾಕ್ಟರ್!). KSSVV ಅಂತ ಶುರುವಾದ ಜಾಲಜಗಲಿ ಒಂದು ದಿನ ಒಬ್ಬರ ಸಂಪಾದಕತ್ವದಲ್ಲಿ ಒಮ್ಮೆಲೆ ’ಅನಿವಾಸಿ’ ಎಂದು ಹೊಸ ರೂಪದಲ್ಲಿ ಪ್ರಕಟವಾಗಿತು. ಅದು ಬದಲಾದ ರೀತಿ ಕೆಲವರಿಗೆ ಏಕೋ ಸರಿ ಅನಿಸಲಿಲ್ಲ. ಸಂಪಾದಕರು ಅದನ್ನು ಎಲ್ಲರೂ ಒಪ್ಪಿದ್ದರು ಎಂಬ ವಿಶ್ವಾಸದಲ್ಲೇ ಕಾರ್ಯರೂಪಕ್ಕೆ ತಂದಿದ್ದರು. ಕೆಲವರು ಇನ್ನೂ ಹೊಸಬರು, ಒಬ್ಬರಿಗೊಬ್ಬರು ಅಷ್ಟು ಪರಿಚಯವಿರಲಿಲ್ಲ. ಆದರೂ, ಅಥವಾ ಅದಕ್ಕೋ, ಅಂತೂ ಭಿನ್ನಾಭಿಪ್ರಾಯಗಳು! ಇದು ವೇದಿಕೆಗೆ ಹೊಸ ಆಯಾಮ ಆಗಿತ್ತು. ಮನಸ್ಸುಗಳು ನೊಂದಿದ್ದವು, ಸೌಹಾರ್ದತೆ ಮಾಯವಾಗಿತ್ತು, ಎದೆ ಸುಟ್ಟಿತ್ತು. ಇದನ್ನು ಬಗೆಹರಿಸಲು ಪ್ರಜಾಪ್ರಭುತ್ವದ ರೀತಿಯಲ್ಲಿ ನಿಮಗೆ ಯಾವ ಹೆಸರು ಬೇಕು ಎಂದು ಗುಪ್ತ ಮತದಾನ ಮಾಡ ಬೇಕಾಯಿತು. ಆಗಿನ ಕಾಗದ ಪತ್ರಗಳು ಇನ್ನೂ ನನ್ನ ಹತ್ತಿರ ಇವೆ! ಭಾಗವಹಿಸಿದ 14 ಜನರಲ್ಲಿ 11 ಜನ “ಅನಿವಾಸಿ’ ಹೆಸರಿಗೇ ವೋಟು ಹಾಕಿದ್ದರು. ಒಬ್ಬರು ಮಾತ್ರ ಒಪ್ಪದೆ ಇನ್ನೆರಡು ಮೂರು ಬೇರೆ ಹೆಸರುಗಳನ್ನು ಸೂಚಿಸಿದ್ದರು. ಇನ್ನಿಬ್ಬರು ತಟಸ್ಥರಾಗಿದ್ದರು. ’ಅನಿಧಿಕೃತ- ಅಚುನಾಯಿತ’ ರೆಫರಿಯಾಗಿದ್ದ ನಾನು ನಿಟ್ಟುಸಿರು ಬಿಟ್ಟೆ. ಇಷ್ಟು ಬಹುಮತವಿದ್ದರೆ ಯಾಕೆ ಬೇಕಿತ್ತು ಇಷ್ಟು ರಂಪ ಅಂತ ಅನಿಸದಿರಲಿಲ್ಲ. ಕೊನೆಗೆ ಎಲ್ಲರೂ ‘What’s in a name?’ ಅನ್ನುತ್ತ ’ಅನಿವಾಸಿ’ ಯನ್ನೇ ಒಪ್ಪಿದ್ದರು. ಒಮ್ಮೆ ನಮ್ಮ ಅಸ್ತಿತ್ವಕ್ಕೇ ಮಾರಕವಾಗಿ ಬಂದದ್ದು ಕೊನೆಗೆ ಆಂಗ್ಲರು ಹೇಳುವಂತೆ ’ಚಹಾ ಕಪ್ಪಿನಲ್ಲಿ ಬಂದ ಬಿರುಗಾಳಿ’ಯಂತೆ ಮಾಯವಾಗಿತ್ತು. ಸ್ವಾಭಿಮಾನಕ್ಕೆ ಧಕ್ಕೆ ಮತ್ತು ತಪ್ಪು ತಿಳುವಳಿಕೆಗಳು ಕೂಡಿದರೆ ಆಗುವದು ಸ್ಫೋಟಕ ಮಿಶ್ರಣ! ಆಗಬಾರದಾಗಿದ್ದ ಈ ಘಟನೆಯ ವಿವರಗಳನ್ನು ಬರೆದಿಟ್ಟ ಹಳೆಯ ಪತ್ರಗಳನ್ನು ಇಂದು ಮತ್ತೆ ನೋಡಿದಾಗ ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ!

ಮುಂದಿನ ವರ್ಷಗಳಲ್ಲಿ ’ಅನಿವಾಸಿ’ ಯ ಹೆಸರನ್ನು KSSVV ಗೆ ಪರ್ಯಾಯವಾಗಿ ಬಳಸುವ ಸಂಪ್ರದಾಯ ಬೆಳೆದು ಬಂದಿದೆ. ಇನ್ನು ಮುಂದಿನ ಭಾಗದಲ್ಲಿ ಕೆಲವೆಡೆ ಅವೆರಡನ್ನೂ ಅದಲು ಬದಲು ಮಾಡಿ ಉಪಯೋಗಿಸಿದಲ್ಲಿ ಸಂದರ್ಭಕ್ಕನುಗುಣವಾಗಿ ಅರ್ಥ ಮಾಡಿಕೊಳ್ಳಬೇಕಾಗಿ ವಿನಂತಿ.

H S ವೆಂಕಟೇಶಮೂರ್ತಿಯವರಿಂದ ’ಅನಿವಾಸಿ’ಯ ಉದ್ಘಾಟನೆ. ಬಲಗಡೆ: ಕೇಶವ ಕುಲಕರ್ಣಿ 18-10-2014

ಅಂತರ್ಜಾಲ ಪ್ರವೇಶಿಸಿದ ’ಅನಿವಾಸಿ’

ಕೆಲವು ತಿಂಗಳು ಮೊದಲೇ ಜಾಲಜಗುಲಿಯಲ್ಲಿ ಲೇಖನಗಳು ಸತತವಾಗಿ ಪ್ರತಿ ಶುಕ್ರವಾರ ಪ್ರಕಟವಾಗಲು ಆರಂಭಿಸಿದ್ದರೂ ಅನಿವಾಸಿಯ ಅಧಿಕೃತ ಉದ್ಘಾಟನೆ 2014 ರ ದೀಪಾವಳಿ (18-10-2014) ಕಾರ್ಯಕ್ರಮದಲ್ಲಿ ಚೆಸ್ಟರ್ಫೀಲ್ಡ್ ನಲ್ಲಿ ಅತಿಥಿಯಾಗಿ ಬಂದಿದ್ದ ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಅಮೃತ ಹಸ್ತದಿಂದ ಆಯಿತು. ವೇದಿಕೆಯ ಮೇಲೆ ಗುಂಡಿ ಒತ್ತಿದಾಗ ನಮ್ಮ ಜಾಲಜಗುಲಿ ಅಧಿಕೃತವಾಗಿ ಅಂತರ್ಜಾಲ ಸೇರಿದಂತಾಯಿ(ಫೊಟೋ)

ನಂತರದ ಮೀಟಿಂಗ್ ಗಳು

ವರ್ಷಕ್ಕೆರಡು ಬಾರಿಯಾದರೂ ’ವೇದಿಕೆ’ಯ ಸದಸ್ಯರು ಬಂದು ಒಂದೆಡೆ ಕೂಡಿ ಸಭೆಯಲ್ಲಿ ಭೇಟಿಯಾಗುವ ನಿಯಮವಿತ್ತಾದರೂ ಇತ್ತೀಚಿನ ದಿನಗಳಲ್ಲಿ ಅದು ಟೆಲಿಫೋನ್ ಕಾನ್ಫರನ್ಸ್ ನಲ್ಲೆ ನಡೆದಿದೆ. ಇದು ಅಷ್ಟು ತೃಪ್ತಿಕೊಡದಿದ್ದರೂ, ಸದಸ್ಯರು ಇರುವ ದೂರದ ಊರುಗಳು, ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳನ್ನು ಎಣಿಸಿದರೆ, ಅದು ಅನಿವಾರ್ಯವೆ ಎಂದು ಒಪ್ಪಬೇಕಾಗಿದೆ. ಪ್ರತ್ಯಕ್ಷ ಕೂಡಿದಾಗ ವೈಯಕ್ತಿಕ ಸಂಬಂಧ, ಮೈತ್ರಿಗಳು ಬೆಳೆಯಲು ಸಹಾಯವಾದೀತು. ಜಾಲಜಗುಲಿಯ ಸಂಪಾದಕತ್ವದ ಹೊಣೆ, ಅದರ ಚಂದಾ ಹಣದ ಶೇಖರಣೆ, ಸುದ್ದಿ-ಸಮಾಚಾರಗಳ ವಿನಿಮಯ ಎಲ್ಲದಕ್ಕೂ ಲಾಭದಾಯಕವಾಗಿರುತ್ತಿತ್ತು. ಈ ನಾಡಿನಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ವಾಸಿಸುತ್ತಿದ್ದ ಹಲವರು ತಮ್ಮ ಮನೆಗಳಲ್ಲಿ ಅಥವಾ ಮನೆಯ ಪಕ್ಕದ ಸ್ಥಳದಲ್ಲಿ ಪ್ರೀತಿಯಿಂದ, ಮನೆಯವರ ಸಹಕಾರದಿಂದ, ಮೀಟಿಂಗ್ ಕೂಡಲು ಅನುವು ಮಾಡಿಕೊಟ್ಟರು–

 

ಸಟನ್ ಕೋಲ್ಡ್ ಫೀಲ್ಡ್, ಬರ್ಮಿಂಗಮ್(ಕೇಶವ) 27-9-2014

.

ಡಾರ್ಬಿ 7-3-2015 (ರಾಂ)

ರಾಡ್ಲೆಟ್, ಲಂಡನ್ 19-9-2015 (ಅರವಿಂದ)

ಶೆಫೀಲ್ಡ್, 8-3-2014, 27-2-2016, 20-1-2018 (ಪ್ರಸಾದ್)

ವಿನ್ಯಾರ್ಡ್,ಟೀಸೈಡ್ 18-9-2016 (ದಾಕ್ಷಾಯಿನಿ).

ದೇಶದ ನಾನಾಕಡೆಯಲ್ಲಿ ವಾಸಿಸುತ್ತಿದ್ದ ಸಾಹಿತ್ಯಾಸಕರು ಅರವಿಂದ ಮತ್ತು ಸ್ನೇಹ ಕುಲಕರ್ಣಿ, ಬೆಳ್ಳೂರು ಗದಾಧರ, ಬೇಸಿಂಗಸ್ಟೋಕ್ ರಾಮಮೂರ್ತಿ, ಡಾ. ಲಕ್ಷ್ಮೀ ನಾರಾಯಣ  ಗುಡೂರ್ ಇವರೆಲ್ಲರೂ ನಮ್ಮೊಡನೆ KSSVV ಗೆ ಸೇರಿಕೊಂಡರು. ಹೀಗೆ ನಮ್ಮ ಸದಸ್ಯತ್ವ ಬೆಳೆಯಿತು. ಮುಂದಿನ ವರ್ಷಗಳಲ್ಲಿ ಕ್ರಮೇಣ ಇನ್ನು ಕೆಲವರು ಸೇರಿದರು: ಆಸ್ಟ್ರೇಲಿಯಾದಿಂದ ಆಗ ತಾನೆ ವಲಸೆ ಬಂದಿದ್ದ ವಿನತೆ ಶರ್ಮಾ, ಸುಹಾಸ ಕರ್ವೆ, ಅಮಿತಾ ಕಿರಣ್, ಗಣಪತಿ ಭಟ್, ವೈಶಾಲಿ ದಾಮ್ಲೆ, ವಿಜಯನರಸಿಂಹ,  ಮುರಳಿ ಹತ್ವಾರ್, ಶ್ರೀನಿವಾಸ ಮಹೀಂದ್ರಕರ್, ಯೋಗೀಂದ್ರ ಮರವಂತೆ, ಗುರುಪ್ರಸಾದ ಪಟವಾಲ್, ತಿಪ್ಪೇಸ್ವಾಮಿ    ಬಿಲ್ಲಹಳ್ಳಿ, ರಾಮಚಂದ್ರ ಮುಂತಾದವರು ಸೇರಿದರು.

ಸದಸ್ಯರು ದೂರ ದೂರ ಪ್ರವಾಸ ಮಾಡಿ ಭೇಟಿಯಾಗುವದು ಕಷ್ಟವಾದಾಗ ಸ್ಕೈಪ್(Skype) ಯಾ ಟೆಲಿಫೋನ್ ಕಾನ್ಫರನ್ಸ್ ಮುಖಾಂತರ ’ಭೇಟಿ’ಯಾಗುತ್ತಿದ್ದೆವು. (13-10-2016, 12-2-2017, 10-9-2017,9-9-2018 ಮತ್ತು 24-2-2019).

ನನ್ನ ಅಭಿಪ್ರಾಯದಂತೆ ಇದರಲ್ಲಿ ಮುಖಾಮುಖಿ ಭೇಟಿಯಲ್ಲಾದಂತೆ ವಿಚಾರ ವಿನಿಮಯ,ಚರ್ಚೆ, (ಹರಟೆ ಸಹ) ಆಗುತ್ತಿರಲಿಲ್ಲವಾದ್ದರಿಂದ ಅಷ್ಟು ಫಲಕಾರಿಯಾಗುತ್ತಿರಲಿಲ್ಲ. ಆದರೆ ’ಬಿಸಿನೆಸ್’ ಆದರೂ ಆಗುತ್ತಿತ್ತು.

ಮುಂದಿನ ದಿನಗಳಲ್ಲಿ ನಮ್ಮ ಬರಹಗಾರರು ಕೆಲವು ಅಂತಾರಾಷ್ಟ್ರೀಯ ಲೇಖನ ಸ್ಪರ್ಧೆಗಳಲ್ಲಿ ಯಶಸ್ವಿಯಾದರು (ಕೇಶವ, ಉಮಾ, ಪ್ರೇಮಲತ ಬಿ). ಆ ಬಹುಮಾನಿತ ಲೇಖನಗಳು ಕೆಲವಾದರೂ ’ಅನಿವಾಸಿ’ಯಲ್ಲಿ ಬೆಳಕು ಕಂಡವು. ಸಭೆಗಳು ಕೂಡಿದಾಗ ದೀಪಾವಳಿ ಮತ್ತು ಯುಗಾದಿ ಕನ್ನಡ ಬಳಗದ ಕಾರ್ಯಕ್ರಮದಲ್ಲಿ ನಮ್ಮ ವಿಚಾರ ವೇದಿಕೆಯ ಪರವಾಗಿ ನಾವು ಮಾಡಲಿರುವ ಪರ್ಯಾಯ ಸಾಂಸ್ಕೃತಿಕ-ಸಾಹಿತ್ಯಿಕ ಕಾರ್ಯಕ್ರಮಗಳ ಯೋಜನೆ ಮಾಡಿಕ್ಕೊಳ್ಳುತ್ತಿದ್ದೆವು. ಆ ಕಾರ್ಯಕ್ರಮಗಳಬಗ್ಗೆ ಸವಿಸ್ತಾರವಾಗಿ ಡಾ. ಪ್ರಸಾದರು ಮುಂದೆ ಬರಲಿರುವ ಲೇಖನದಲ್ಲಿ ಬರೆಯಲಿದ್ದಾರೆ.

ಪ್ರಕಟನೆಗಳಲ್ಲಿ ವೈವಿಧ್ಯತೆ

ಅನಿವಾಸಿ’ ಇಲ್ಲಿಯವರೆಗೆ ಪ್ರಕಟಿಸಿದ ಎಲ್ಲ ಲೇಖನ, ಕತೆ, ಕವಿತೆ, ವಿಮರ್ಶೆ, ಪ್ರವಾಸ ಕಥನ, ವರದಿಗಳನೆಲ್ಲವೂ ಇಂದಿಗೂ ಓದ ಬಹುದು. ಸರದಿಯ ಪ್ರಕಾರ ಸಂಪಾದಕರು ಹೊಣೆ ಹೊತ್ತಂತೆ ಹೊಸ ಹೊಸ ಐಡಿಯಾ, ವಿಚಾರಗಳು, ನವೀನ ಪ್ರಯೋಗಗಳು ಆಗಿವೆ. ಚಿತ್ರಗಳು, ಚಿತ್ರ ಕವನಗಳು,’ಸ್ಟಾಫ್’ ಚಿತ್ರಕಾರ ಗುಡೂರ್ ಅವರ ವ್ಯಂಗವಲ್ಲದ ಮತ್ತು ವ್ಯಂಗ ಚಿತ್ರಗಳು ಬಂದಿವೆ! ವೈಜ್ಞಾನಿಕ, ವೈಚಾರಿಕ ಲೇಖನಗಳು, ಚರ್ಚೆ, ವಿಮರ್ಶೆ ಎಲ್ಲವನ್ನು ಒಳಗೊಂಡ ಮಾಡರ್ನ್ ಬ್ಲಾಗ್ ಆಗಿದೆ. ಓದುಗರಿಗೆ ಪ್ರತಿವಾರವೂ ಲೇಖನ-ಕವಿತೆಗಳ ಬಗ್ಗೆ ’ಕಮೆಂಟ್’ ಮಾಡುವ ಅವಕಾಶವಿತ್ತು. ಇನ್ನೂ ಇದೆ. ಕೆಲವೊಂದು ಸರಣಿಗಳ ಪ್ರಯೋಗವೂ ಆಗಿದೆ. ’ನಮ್ಮೂರು’ ಎಂಬ ಸರಣಿಯಲ್ಲಿ ತವರಿನಲ್ಲಿಯ ತಮ್ಮ ಊರಿನ ನೆನಪುಗಳ ಬಗ್ಗೆ ಅನಿವಾಸಿ ಲೇಖಕರು ಸ್ವಾರಸ್ಯಕರವಾಗಿ ಬರೆದರು. ಸಾಕಷ್ಟು ಕಮೆಂಟುಗಳೂ ಬಂದವು. ಹಿಂದೆಲ್ಲ ಅವು ಅನಿವಾಸಿಯಲ್ಲೇ ಪ್ರಕಟವಾದವು. ಆದರೆ ಇತ್ತೀಚಿನ ದಿನಗಳಲ್ಲಿ ’ವಾಟ್ಸಪ್ಪ’ನ ಜನಪ್ರಿಯತೆಯಿಂದಾಗಿ ಮೆಚ್ಚುಗೆ-ವಿಮರ್ಶೆಗಳು ’ಅನಿವಾಸಿ’ ಜಾಲ ಜಗುಲಿಗೆ ತಲುಪದಿರುವದು ವಿಷಾದನೀಯ. ಅವೇ ನಿಮ್ಮ ಅನಿಸಿಕೆಗಳನ್ನು ಸಾಮಾಜಿಕ ತಾಣದಿಂದ ಕಾಪಿ ಮಾಡಿ ನಮ್ಮ ಜಾಲಜಗುಲಿಯಲ್ಲಿಯೂ ಹಾಕಿರಿ ಎಂದು ಎಲ್ಲ ಸಂಪಾದಕರ ಪ್ರಾರ್ಥನೆ! ಕಾಲಕಾಲಕ್ಕೆ ಆಯಾ ಸಂಪಾದಕರ ವೈಯಕ್ತಿಕ ಆಮಂತ್ರಣಕ್ಕೆ ಓಗೊಟ್ಟು ’ಅನಿವಾಸಿ’ಯಲ್ಲಿ ಕೆಲವು ಅತಿಥಿ ಲೇಖಕ-ಲೇಖಕಿಯರು ಸಹ ಬರೆದಿದ್ದಾರೆ, ಬರೆಯಿಸಲ್ಪಟ್ಟಿದ್ದಾರೆ! ಕೆಲವೊಂದು ಸಂಪಾದಕರು ಅಚ್ಚಳಿಯದ ತಮ್ಮದೇ ಛಾಪನ್ನು ಬಿಟ್ಟು ಹೋಗಿದ್ದಾರೆ. ಮೂವರು ’ಅನಿವಾಸಿ’ಯ ಹಳೆಯ ಲೇಖಕರು ಉದ್ಯೋಗ ಬದಲಿಸಿ ಈ ದೇಶವನ್ನೇ ಬಿಟ್ಟು ವಿದೇಶಗಳಲ್ಲಿ ನೆಲಸಿದರೂ ಸಂಪರ್ಕ ಕಳೆದುಕೊಂಡಿಲ್ಲ, ಬರೆದೂ ಕಳಿಸುತ್ತಿರುತ್ತಾರೆ! ಇದು ಹೆಮ್ಮೆಯ ಸಂಗತಿ. ಅವರಿಗೆ ನಾವು ಋಣಿ ಮತ್ತು ಅವರ ಋಣಾತ್ಮಕ ಕೊಡುಗೆಗೆ ಯಾವಾಗಲೂ ಸ್ವಾಗತ.

’ಅನಿವಾಸಿ ಅಂಗಳದಿಂದ’ ಹೊರಬಿದ್ದ ನಮ್ಮ ಚೊಚ್ಚಲ ಕೃತಿ!

‘ಅನಿವಾಸಿಗಳ ಅಂಗಳದಿಂದ’ ಪುಸ್ತಕ ಬಿಡುಗಡೆ

2014ರ ವರ್ಷದ ಕೊನೆಯಲ್ಲಿ ಎಣಿಸಿದಾಗ ’ಅನಿವಾಸಿ’ಯಲ್ಲಿ ಒಟ್ಟು ಎಂಬತ್ತಕ್ಕೂ ಮೇಲ್ಪಟ್ಟು ಬರಹಗಳು ಪ್ರಕಟವಾಗಿದ್ದವು. ಆ ವರ್ಷದ ಕೊನೆಯಲ್ಲಿ ಇವುಗಳಿಂದ ಆಯ್ದ ಕೆಲವನ್ನು ಪುಸ್ತಕ ರೂಪದಲ್ಲಿ ಯಾಕೆ ಪ್ರಕಟಿಸಬಾರದು ಎಂಬ ಯೋಚನೆ ಕೆಲವರ ತಲೆಯಲ್ಲಿ ಸುಳಿಯಿತು. ಉಮಾ ಅವರು ಅದನ್ನು ವಹಿಸಿಕೊಂಡು ಅದನ್ನುಪ್ರತಿಪಾದಿಸಿದಾಗ ಎಲ್ಲರೂ ಅನುಮೋದಿಸಿ ಮುಂದಿನ ಉಗಾದಿಯ ಸಮಾರಂಭದ ಸಮಯಕ್ಕೆ ಹೊರತರುವ ನಿರ್ಧಾರ ಮಾಡಿದೆವು. ಅದರ ಪ್ರಕಾರ ಪ್ರತಿಯೊಬ್ಬರು ತಮ್ಮ ಎರಡು ಬರಹಗಳನ್ನು- ಕವಿತೆ, ಕಥೆ ಯಾವುದಾದರೂ ಅಡ್ಡಿಯಿಲ್ಲ – ಆಯ್ದು ಕೊಡಬೇಕೆಂದು ಕೇಳಿಕೊಂಡೆವು. ಪುಟಗಳಿಗೆ ಮಿತಿಯಿರಲಿಲ್ಲ. ಎಂಟು ಜನ ಆಯ್ದು ಕೊಟ್ಟರು. ತಮ್ಮ ಕವಿತೆಯಲ್ಲಿ ಮುದ್ರಾರಾಕ್ಷಸ ಅವಿತುಕೊಂಡದ್ದನ್ನು ಒಂದಿಬ್ಬರು ಗಮನಿಸದಿದ್ದುದು ದುರ್ದೈವ! ಕೇಶವ ಮತ್ತು ಉಮಾ ಪ್ರೂಫ್ ರೀಡಿಂಗ್ ಹೊಣೆ ಹೊತ್ತರು. ಕೂಲಂಕಷವಾಗಿ ವಿಚಾರಮಾಡಿ, ಎಲ್ಲ ಕಡೆ ವಿಚಾರಿಸಿ, ಕಡಿಮೆ ವೆಚ್ಚ ಮತ್ತು ಶೀಘ್ರ ಸಮಯದಲ್ಲಿ ಆಗಬೇಕಾದ ಕೆಲಸ ಎಂದು  ಭಾರತದಲ್ಲೇ ಅಚ್ಚುಹಾಕಿಸುವ ನಿರ್ಧಾರ ಕೈಕೊಂಡೆವು. ಆ ಸಮಯದಲ್ಲಿ ಭಾರತಕ್ಕೆ ಹೋಗಿದ್ದ ಉಮಾ ಅವರು ಕರ್ನಾಟಕದಲ್ಲಿ ಓಡಾಡಿ ವಿಚಾರಿಸಿ ಕೊನೆಗೆ ಬೆಂಗಳೂರಿನ ಗಾಯತ್ರಿ ಪ್ರಿಂಟರ್ಸ್ ದ ಮಾಲಿಕ ರಜನೀಷ್ ಕಾಶ್ಯಪ್ ಅವರಿಗೆ ಪುಸ್ತಕದ ಪ್ರಿಂಟಿಂಗ್ ಮತ್ತು ಪೋಸ್ಟೇಜ್ ದ ವ್ಯವಸ್ಥೆ ಒಪ್ಪಿಸಿ ಬಂದರು.  ಆ ಕೆಲಸವನ್ನು ಚೊಕ್ಕವಾಗಿ ನಿರ್ವಹಿಸಿ, ಮುಖಪುಟದ ವಿನ್ಯಾಸ ಮತ್ತು ಕರಡು ತಿದ್ದುವದರಲ್ಲೂ ಸಹಾಯ ಮಾಡಿ ವೇಳೆಗೆ ಸರಿಯಾಗಿ ಅಚ್ಚುಕಟ್ಟಾಗಿ ಮುದ್ರಿಸಿ ಕೊಟ್ಟ ರಜನೀಷ್ ಅವರಿಗೆ ನಾವು ಋಣಿಯಾಗಿದ್ದೇವೆ. ಎಂಟು ಜನರ 16 ಬರಹಗಳನ್ನು ಓದಿ ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಮುನ್ನುಡಿ, ಶ್ರೀವತ್ಸ ಜೋಶಿಯವರ ಹಿನ್ನುಡಿ, ಇವೆಲ್ಲ ಕೂಡಿದ ಪುಸ್ತಕ ಅಚ್ಚಾಗಿ ಮುಂಗಡ 100 ಪ್ರತಿಗಳು ಯುಕೆ ಗೆ ಬಂದು ಸೇರಿದವು. ಉಳಿದವು ಆನಂತರ ಬಂದವು. ಅದಕ್ಕಾದ ವೆಚ್ಚ 640 ಪೌಂಡುಗಳನ್ನು ನಾವು ಎಂಟು ಜನ ಹಂಚಿಕೊಂಡೆವು. ರಾಜಾರಾಮ್ ಕಾವಳೆಯವರು ಕನ್ನಡ ಬಳಗದಲ್ಲಷ್ಟೇ ಅಲ್ಲ, ’ಅನಿವಾಸಿ’ಯಲ್ಲೂ ಸಾಕಷ್ಟೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಕವಿತೆ-ಲೇಖನಗಳೂ ಆ ಪುಸ್ತಕದಲ್ಲಿವೆ. ಆದರೆ ಅವರು ಪುಸ್ತಕ ಬಿಡುಗಡೆಯಾಗುವಷ್ಟರಲ್ಲೇ ನಮ್ಮನ್ನಗಲಿ ಹೋದರು. ಅವರ ಶ್ರೀಮತಿ ಪದ್ಮಾ ಅದರ ಬಿಡುಗಡೆ ಮಾಡಲು ಒಪ್ಪಿಕೊಂಡರು. ಯುಗಾದಿ 16 ಎಪ್ರಿಲ್ 2016ರ ಕಾರ್ಯಕ್ರಮದಲ್ಲಿ ನಮ್ಮ ಚೊಚ್ಚಲ ಕೃತಿ ’ಅನಿವಾಸಿ ಅಂಗಳದಿಂದ’ ಸಂಭ್ರಮದಿಂದ ಲೋಕಾರ್ಪಣೆಯಾಯಿತು. (ಫೊಟೋ).

’ಅನಿವಾಸಿ’ ಪರವಾಗಿ ಸಂದರ್ಶನಗಳು

ಕಳೆದ ಐದಾರು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿಯ ಹೊಸ ಆಯಾಮವೆಂದರೆ ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿ ಪ್ರದರ್ಶನಗೊಂಡ ಅನತಿ ಕಾಲದಲ್ಲಿ ಅಥವಾ ಏಕಕಾಲಕ್ಕೆ ಪರದೇಶಗಳಲ್ಲಿ ರಿಲೀಸ್ ಆಗತ್ತಲಿವೆ. ಇತ್ತೀಚೆಗೆ ಹೊರನಾಡಿನಲ್ಲಿ ವಾಸಿಸುವ ಕನ್ನಡಿಗರ ಸಂಖ್ಯೆ ಹೆಚ್ಚಾದಂತೆ ಸಿನಿಮಾಗಳಿಗೆ ಬೇಡಿಕೆ ಇರುವದೂ ಸಹಜವೇ. ತಮ್ಮ ಚಿತ್ರ ’ಇಷ್ಟಕಾಮ್ಯ’ ದೊಂದಿಗೆ 2016 ರಲ್ಲಿ ಯು ಕೆ ಪ್ರವಾಸಗೊಂಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರು ಡೋಂಕಾಸ್ಟರಿಗೆ ಬಂದಾಗ ಅವರೊಡನೆ ’ಅನಿವಾಸಿ’ಯ ಪರವಾಗಿ ಪ್ರೇಮಲತಾ ಬಿ. ಅವರು 2016ರಲ್ಲಿ ಸಂದರ್ಶನ ಮಾಡಿದ ಯೂ ಟ್ಯೂಬ್ ವಿಡಿಯೊವನ್ನು (https://www.youtube.com/watch?v=TSGa8sLV61A)

ನಾಗತಿಹಳ್ಳಿ ಚಂದ್ರಶೇಖರ ಅವರ ಸಂದರ್ಶನ ಮಾಡುತ್ತಿರುವ ಡಾ ಪ್ರೇಮಲತ ಬಿ. 25-10 2016

ಪ್ರಕಟಿಸಲಾಗಿದೆ. ಆನಂತರ ಎಪ್ರಿಲ್ 2018 ರಲ್ಲಿ ಪ್ರದರ್ಶನಗೊಂಡ ’ಜೀರಜಿಂಬೆ’ ಚಿತ್ರದ ನಿರ್ಮಾಪಕ ಗುರುದೇವ ಮತ್ತು ಅದಲ್ಲಿ ನಟಿಸಿದ ಸುಮನ್ ನಗರ್ಕರ್ ಅವರ ಸಂದರ್ಶನ (ಯೂಟ್ಯೂಬ್ ವಿಡಿಯೋ:https://www.youtube.com/watch?v=xkp_uKZwqcQ) ಮತ್ತು ವಿಮರ್ಶೆಯನ್ನೂ ’ಅನಿವಾಸಿ’ಯಲ್ಲಿ ಪ್ರಕಟಿಸಿದ್ದು ಹೊಸ ಆಯಾಮ ಎನ್ನ ಬಹುದು. ಅದೇ ತರಹ ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆ (https://www.youtube.com/watch?v=oWnchNks3Co) ಹಾಗು ಗಿರೀಶ್ ಕಾಸರವಳ್ಳಿಯವರ ಸಂದರ್ಶನಗಳೂ (ಪ್ರಸಾದ ಅವರಿಂದ) ಆದವು. https://www.youtube.com/watch?v=UYnlMmiziCE ; https://www.youtube.com/watch?v=HVO2iE8cIKI). ಇದಲ್ಲದೆ ಬೇರೆ ಕೆಲ ಸಂದರ್ಶನಗಳೂ, ನಮ್ಮ ಜಾಲ ಜಗುಲಿಯಲ್ಲಿ

ಪದ್ಮಶ್ರೀ ಸುಧಾ ಮೂರ್ತಿಯವರೊಡನೆ ಡಾ ದಾಕ್ಷಾಯಿನಿ

ಪ್ರಕಟವಾಗಿವೆ: ಸುಧಾ ಮೂರ್ತಿ (https://wp.me/p4jn5J-144), ಸಿನಿಮಾ ನಟ ನಿರ್ಮಾಪಕ ಶಿವರಾಂ (https://wp.me/p4jn5J-eS), ಬಿ ಆರ್ ಛಾಯಾ (https://wp.me/p4jn5J-1cM).

’ಪ್ರೀತಿಯೆಂಬ ಚುಂಬಕ’ದ ಅಡಕ (CD)

2016ರ ಕೊನೆಯಲ್ಲಿ ನಾವು ’ಅನಿವಾಸಿ’ ತಂಡದವರು ಪ್ರೇಮ ಗೀತೆಗಳ CD ಹೊರಡಿಸುವ ಯೋಜನೆಯನ್ನು ಕೈಕೊಂಡೆವು. ಅದು ಪ್ರೇಮಲತ ಅವರ ಕನಸಿನ ಕೂಸು ಆಗಿತ್ತು. ಅಷ್ಟೇ ಅಲ್ಲ, ಅದರ ಮುಂದಾಳತ್ವ ವಹಿಸಿ, ಹತ್ತಾರು ಜನರನ್ನು ಸಂಪರ್ಕಿಸಿ, ಅನಿವಾಸಿಯ ತಂಡದಿಂದ ಮುಂದೆ ಬಂದ ಕೆಲವರಿಂದ ಹಾಡುಗಳನ್ನು ಪಡೆದು, ಸಿ ಡಿಯ ಹೊದಿಕೆಗೊಂದು ಚಿತ್ರ (ಗುಡೂರ್ ಅವರಿಂದ) ಮಾಡಿಸಿ, ಎಲ್ಲರ ಸಲಹೆ, ಒಪ್ಪಿಗೆ ಪಡೆದು ಭಾರತದಲ್ಲಿ ಅವುಗಳ ರೆಕಾರ್ಡಿಂಗ್, ಮುದ್ರಣ, ರವಾನಿ, ಮತ್ತು ಕೊನೆಗೆ 2017 ರಲ್ಲಿ ಬಿಡುಗಡೆಯ ವರೆಕೆ ಸತತವಾಗಿ ಪರಿಶ್ರಮ ಪಟ್ಟು ಯಶಸ್ಸಿಗಾಗಿ ಶ್ರಮಿಸಿದವರು ಪ್ರೇಮಲತಾ ಅವರು. ಎಂಟು ’ಅನಿವಾಸಿ’ ಸದಸ್ಯರ ಹತ್ತು ಹಾಡುಗಳೂ ಒಂದಕ್ಕಿಂತ ಒಂದು ಭಾವಪೂರಿತವಾಗಿ, ಮಧುರವಾಗಿ ಧ್ವನಿಸಿವೆಯೆಂದರೆ ಅತಿಶಯೋಕ್ತಿಯಲ್ಲ. ಅದರಲ್ಲಿಯ ಪ್ರೇಮಗೀತೆಗಳಲ್ಲಿ ಪ್ರೀತಿ, ಶೃಂಗಾರ, ವಿರಹ, ಉಲ್ಲಾಸ, ಹಾಸ್ಯ ಎಲ್ಲ ಭಾವಗಳಿವೆ. ಸಂಗೀತ ಸಂಯೋಜನೆ ಬೆಂಗಳೂರಿನ ಪ್ರವೀಣ್ ಡಿ ರಾವ್, ವಾದ್ಯವೃಂದದ ಸಂಯೋಜನೆ ಮತ್ತೆ ರೆಕಾರ್ಡಿಂಗ್ ಅಲ್ಲಿಯೇ ಇರುವ ಮಾರುತಿ ಮಿರಜ್ಕರ್ ಅವರಿಂದ ಉತ್ಕೃಷ್ಟ ರೀತಿಯಲ್ಲಿ ಆಗಿ ಯು ಕೆ ವಾಸಿ ಪ್ರೇಮಲತಾ ಅವರ ಮುನ್ನುಡಿಯೊಂದಿಗೆ ಹೈದರಾಬಾದಿನಲ್ಲಿ ಧ್ವನಿ ಮುದ್ರಣಗೊಂಡು, ಲಕ್ಷ್ಮಿನಾರಾಯಣ ಗುಡೂರ್ ಅವರ ಕವರ್ ದಿಸೈನ್ ಹೊತ್ತ ಹೊದಿಕೆಯಲ್ಲಿ ನಮ್ಮೆಲ್ಲರ ಕೈಗೆ

’ಪ್ರೀತಿಯೆಂಬ ಚುಂಬಕ’ ಸಿ ಡಿ ಬಿಡುಗಡೆ 21-4-2018

ತಲುಪಿದಾಗ ರೋಮಾಂಚನ! ಹಾಡುಗಳನ್ನು ರಚಿಸಿದ ಕವಿಗಳೆಂದರೆ: ಬೆಳ್ಳೂರು ಗದಾಧರ, ರಾಮಶರಣ ಲಕ್ಷ್ಮೀನಾರಾಯಣ, ಶಿವಪ್ರಸಾದ, ಪ್ರೇಮಲತಾ B, ಕೇಶವ ಕುಲಕರ್ಣಿ, ಶ್ರೀವತ್ಸ ದೇಸಾಯಿ, ದಾಕ್ಷಾಯಿನಿ ಗೌಡ, ಮತ್ತು ವತ್ಸಲಾ ರಾರ್ಮಮೂರ್ತಿ. ’ಅನಿವಾಸಿಗಳ ಅಂಗಳದಿಂದ’  ಪುಸ್ತಕ ಲೋಕಾರ್ಪಣೆಯಾದ ಎರಡು ವರ್ಷಗಳ ನಂತರವೇ 21-4-2018 ರಂದು ಯುಗಾದಿಯ ಕಾರ್ಯಕ್ರಮಕ್ಕೆ ಕಾವೆಂಟ್ರಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಡಾ ಗುರುರಾಜ ಕರಜಗಿಯವರಿಂದ CD ಗಳ ಬಿಡುಗಡೆಯಾಯಿತು. ಅದರಲ್ಲಿಯ ಹಾಡುಗಳನ್ನೆಲ್ಲ ಇಬ್ಬರು, ಅರುಣ್ ಕುಕ್ಕೆ ಮತ್ತು ಅಮಿತಾ ರವಿಕಿರಣ್ ಹಾಡಿದ್ದಾರೆ. ಇದು ’ಅನಿವಾಸಿ’ ತಂಡದ ಯಶಸ್ವೀ ಟೀಮ್ ಪ್ರಯೋಗ ಆಗಿತ್ತು. ಶುರುವಾತಿನಲ್ಲಿ ಸ್ವಲ್ಪ ಅಳುಕು ಇದ್ದವರಲ್ಲಿ ನಾನೂ ಒಬ್ಬ. ಆದರೆ ಕೊನೆಯಲ್ಲಿ ’Kudos, she pulled it off!’ ಅಂದೆ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

’ಸ್ಮಾರ್ಟ್ ಥೆರಪಿ’

ಅದೇ ದಿನದ (21-4-2018) ಯುಗಾದಿ ಕಾರ್ಯಕ್ರಮದಲ್ಲಿ ಮಧ್ಯಾಹ್ನ ’ಅನಿವಾಸಿ’ ತಂಡದ ಪರವಾಗಿ ಒಂದು ಕಿರುನಾಟಕ (topical skit) ಪ್ರಸ್ತುತ ಪಡಿಸಿದರು. ಅದನ್ನು ಬರೆದು ದಿಗ್ದರ್ಶಿಸಿದವರು ಕೇಶವ ಕುಲಕರ್ಣಿಯವರು. ಅದರ ಬಗ್ಗೆ ಅವರೇ ಬರೆಯುತ್ತಾರೆ:

‘Smart Therapy’ ನಾಟಕದ ಪಾತ್ರಗಳು ಮತ್ತು ಡಾ ಪ್ರಸಾದ್, 21-4-2018

“’ಅನಿವಾಸಿ’ಯ ಗುಂಪು, ಕನ್ನಡ ಬಳಗ ಯು.ಕೆ ಗೆ ಯಾವುದಾದರೂ ಪ್ರಹಸನ ಅಥವಾ ನಾಟಕ ಮಾಡಬೇಕು ಎಂದುಕೊಂಡಾಗ, ಅಲ್ಲಲ್ಲಿ ಕೈಗೆ ಸಿಕ್ಕ ಏಕಾಂಕಗಳನ್ನು ಓದಿದ್ದಾಯಿತು. ಓದಿದವುಗಳೆಲ್ಲ ಗಂಭೀರವಾಗಿದ್ದವು, ಇಲ್ಲ ದೊಡ್ಡದಾಗಿದ್ದವು, ಇಲ್ಲ ತುಂಬಾ ಪಾತ್ರಗಳನ್ನು ಬೇಡುತ್ತಿದ್ದವು, ಇಲ್ಲವೇ ತಾಂತ್ರಿಕವಾಗಿ ತುಂಬಾ ಸವಾಲುಗಳನ್ನು ಬೇಡುತ್ತಿದ್ದವು. ಒಂದು ಸರಿ ಹೊಂದಿದರೆ ಇನ್ನೊಂದು ಸರಿ ಹೊಂದುತ್ತಿರಲಿಲ್ಲ.

ಹೀಗಾಗಿ ನಾನೇ ಒಂದು ಚಿಕ್ಕ ಏಕಾಂಕವನ್ನು ಬರೆಯಲು ನಿರ್ಧರಿಸಿದೆ, ೧೫ ನಿಮಿಷದ ಅವಧಿಯದು, ಕಡಿಮೆ ಪಾತ್ರಗಳಿರುವುದು, ಯು.ಕೆ ಕನ್ನಡಿಗರಿಗೆ ಸಂಗತವಾಗಿರಬೇಕು, ಸ್ವಲ್ಪವಾದರೂ ಹಾಸ್ಯವಿರಬೇಕು, ಎಂದು ನನಗೆ ನಾನೇ ನಿಬಂಧನೆಗಳನ್ನು ಹಾಕಿಕೊಂಡು ಬರೆದೆ. ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ ಫೋನುಗಳ ವಿಷಯವನ್ನು ಹಿಡಿದು “ಸ್ಮಾರ್ಟ್ ಥೆರಪಿ” ಎನ್ನುವ ಏಕಾಂಕವನ್ನು ಬರೆದೆ. ನಾಕಾರು ಜನ ಓದಿ, ನಾಕಾರು ಆವೃತ್ತಿಗಳದವು.

ಇರುವ ನಾಕೇ ಪಾತ್ರಗಳು. (ಕೇಶವ, ರಾಂಶರಣ್ ಮತ್ತು ಪ್ರೇಮಲತಾ ಬಿ. ಮತ್ತು ಶ್ರೀವತ್ಸ ದೇಸಾಯಿಯವರಿಗೆ ಒಂದು ಚಿಕ್ಕ ಪಾತ್ರ.). ನಾಕು ನಟರು ನಾಕು ಬೇರೆ ಬೇರೆ ಊರುಗಳಲ್ಲಿ ವಾಸ. ಗೂಗಲ್ ಹ್ಯಾಂಗ್‍ಔಟ್‍ನಲ್ಲಿ ವಾರಕ್ಕೆರೆಡು ಸಲ ತಾಲೀಮು. ಹಾಗೂ ಹೀಗೂ ಯಶಸ್ವಿಯಾಗಿ ಮಾಡಿದೆವು. ನೋಡಿದವರು ನಕ್ಕರು, ಮುಗಿದ ಮೇಲೆ ಚಪ್ಪಾಳೆ ತಟ್ಟಿದರು. ಕೆಲವರು ಇನ್ನೂ ನೆನೆಸಿಕೊಳ್ಳುತ್ತಾರೆ.” (ಕೇಶವ ಕುಲಕರ್ಣಿ)

ಉಪಸಂಹಾರ:

1) ಈಗ ’ಅನಿವಾಸಿ’ ತನ್ನ ಆರನೆಯ ವರ್ಷದಲ್ಲಿ ಕಾಲಿಟ್ಟಿದೆ. ಜಾಲಜಗುಲಿಯಿಂದ ತಪ್ಪದೆ ವಾರಕ್ಕೊಂದು ಪ್ರಕಟನೆ ಹೊರಬೀಳುತ್ತಲೇ ಇದೆ. ಕೆಲ ಸಲ ವಾರಕ್ಕೆರಡು; ಆದರೂ ಒಂದೆರಡು ಮೂರು ಸಲ ಮಾತ್ರ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಲ್ಲದೆ ನಾವಿರುವ ವಾತಾವರಣಕ್ಕೆ ಸ್ಪಂದಿಸಿ ಲೇಖನ ಮತ್ತು ಚರ್ಚೆಗಳನ್ನೂ ಪ್ರಕಟಿಸಿದೆ. ಧರ್ಮ ಮತ್ತು ರಾಜಕೀಯ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಪ್ರತಿವಾರ ಅನಿವಾಸಿಯನ್ನು ಸಾಕಷ್ಟು ಜನ ಓದುತ್ತಾರೆಯಾದರೂ ಬರಹ ಸ್ವೀಕಾರ ಯು ಕೆ ಬರಹಗಾರರಿಗಷ್ಟೇ ಸದ್ಯ ಸೀಮಿತವಾಗಿದೆ (ಕೆಲ ಅತಿಥಿಗಳನ್ನು ಬಿಟ್ಟರೆ). ನಮ್ಮಲ್ಲಿ ಸ್ಥಾಯಿ ಸಂಪಾದಕ ಮಂಡಳಿಯಿಲ್ಲ, ಪದಾಧಿಕಾರಿಗಳಿಲ್ಲ, ಸರದಿ ಪ್ರಕಾರ 4 ತಿಂಗಳಿಗೊಮ್ಮೆ ಸಂಪಾದಕರು ಬದಲಾಗುತ್ತಾರೆ. ಯಾಕಂದರೆ ಎಲ್ಲರಿಗೂ ಬೇರೆಯೊಂದು ವೃತ್ತಿಯಿದೆ. (ಕೆಲವರಿಗೆ ನಿವೃತ್ತಿ ಬಂದಿದೆ/ಬರುತ್ತಲಿದೆ!) ಅದಕ್ಕಿಂತ ಹೆಚ್ಚು ಕಾಲ ಮಾಡಿದರೆ ಹೊರೆಯಾಗುವ ಸಾಧ್ಯತೆಯಿದೆ, ಅದು ಕೆಲವರ ಅನುಭವವೂ ಸಹ. ಸಂಪಾದನೆ ಅಷ್ಟು ಕಷ್ಟದ ಕೆಲಸವಲ್ಲ, ಬರಹಗಳನ್ನು ತಪ್ಪದೆ ಶುಕ್ರವಾರಕ್ಕೊಮ್ಮೆ ’ಹುಟ್ಟಿಸಿವದು’ ಸುಲಭವಲ್ಲ. ಒಮ್ಮೊಮ್ಮೆ ಇನ್ನೇನು ಅಸಂಭವ ಅನ್ನಿಸುವಷ್ಟರಲ್ಲಿ ಹೇಗೋ ಸ್ವಯಂಭವ ಆದ (ಕೊನೆಯ ಗಳಿಗೆಯಲ್ಲಿ ಯಾರೋ ಕಳಿಸಿದ)  ಅನುಭವವೂಇದೆ! ಒಂದು ಮಾತನ್ನು ಸ್ಪಷ್ಟವಾಗೆ ಹೇಳಬೇಕಾಗಿದೆ: ’ಅನಿವಾಸಿ’ ಯುಕೆ ಕನ್ನಡ ಬಳಗದ ಅವಿಭಾಜ್ಯ ಅಂಗವೂ ಅಲ್ಲ, ಅದರ ಆಧೀನವಾಗಿಯೂ ಇಲ್ಲ. ಇದು ಕೆಲವರ ತಪ್ಪು ತಿಳುವಳಿಕೆಯಾಗಿರ ಬಹುದು. ಆದರೆ ಅದರ ಆಶ್ರಯದಲ್ಲಿ KSSVV ವತಿಯಿಂದ ಪರ್ಯಾಯ ಕಾರ್ಯಕ್ರಮಗಳನ್ನು ವರ್ಷಕ್ಕೆರಡು ಸಲ ಯುಗಾದಿ ಮತ್ತು ದೀಪಾವಳಿ ಸಮಯದಲ್ಲಿ ಕೂಡಿ ಮಾಡುತ್ತೇವೆ. ಅದು ಈ ನಾಡಿನ ಕನ್ನಡಿಗರು ಒಂದೆಡೆ ಕೂಡುವ ಅನುಕೂಲಕ್ಕಾಗಿ ಮತ್ತು ಕನ್ನಡ ನಾಡಿನಿಂದ ಬರುವ ಯು ಕೆ ಕನ್ನಡ ಬಳಗದ ಅತಿಥಿಗಳು ಸಾಮಾನ್ಯವಾಗಿ ಸಾಹಿತ್ಯ, ಕಲೆ ಅಥವಾ ಸಾಂಸ್ಕೃತಿಕ ರಾಯಭಾರಿಗಳಾಗಿರುವದರ ಲಾಭ ಪಡೆದು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಮಾಡುವ ಪರಿಪಾಠ ಇಲ್ಲಿಯವರೆಗೆ ನಡೆದು ಬಂದಿದೆ ಮತ್ತು ಮುಂದುವರಿಸುವ ಅಪೇಕ್ಷೆಯಿದೆ. ಈ ಸಂಘಟನೆಯಲ್ಲಿ ಕೆಲಸ ಮಾಡುವವರೆಲ್ಲರೂ ಸ್ವಯಂ ಸೇವಕರು. ನಮ್ಮಲ್ಲಿ ದುಡ್ಡಿನ ’ಭಂಡವಲು’ ಇಲ್ಲ, ಆಫೀಸು, ಸಿಬ್ಬಂದಿ, ಆಸ್ತಿ ಯಾವುದೂ ಇಲ್ಲ, ಯು ಕೆ ಕನ್ನಡ ಬಳಗದ ಸಂವಿಧಾನಕ್ಕನುಗುಣವಾಗಿ ತನ್ನ ಕಾರ್ಯಕ್ರಮದಂದು ಉಚಿತವಾಗಿ ನಮಗೆ ಸಭೆ ನಡೆಸಿಕೊಳ್ಳಲು ರೂಮು ಮತ್ತು ಸವಲತ್ತುಗಳನ್ನು ಕೊಡಲು ತಯಾರಿರುವದರಿಂದ ಅದರ ಲಾಭ ಪಡೆಯುತ್ತೇವೆ. ನಮ್ಮ ’ಅನಿವಾಸಿ’ ವೆಬ್ ಸೈಟಿನ್ ಚಂದಾ ಹಣಕ್ಕೆ ಸದಸ್ಯರಿಂದ ವಂತಿಕೆ, ದೇಣಿಗೆ ಬರುತ್ತಿದೆ.

ಅದಕ್ಕೆಂದೇ ಅನಿವಾಸಿಗೆ ಬರೆಯುವವರು KBUKಗಷ್ಟೇ ಸೀಮಿತವಾಗಿಲ್ಲ. ಎಲ್ಲರಗೂ ಇಲ್ಲಿ ಸ್ವಾಗತವಿದೆ. ಇದನ್ನು ಈ ಲೇಖನದ ಮೂಲಕ ಸ್ಪಷ್ಟ ಪಡಿಸಬೇಕಾಗಿದೆ.

2) ಈ ಐದು ವರ್ಷದಲ್ಲಿ ನಾವು ಬೆಳೆದಿದ್ದೇವೆ. ಕೆಲ ಲೇಖಕರು ವೈಯಕ್ತಿಕವಾಗಿ ಉತ್ತಮ ಕವಿ-ಬರಹಗಾರರೆಂದು ಹೆಸರು ಮಾಡಿ ಅವಧಿ, ಕನೆಕ್ಟ್ ಕನ್ನಡ, ಕೆಂಡ ಸಂಪಿಗೆ ಅಂತರ್ಜಾಲ ತಾಣಗಳಲ್ಲದೆ ಕರ್ನಾಟಕದಲ್ಲಿ ಬೇರೆ ಬೇರೆ ನಿಯತಕಾಲಿಕ, ಮ್ಯಾಗಝಿನ್ ಗಳಲ್ಲಿ ಪ್ರಕಟಿಸುತ್ತಿರುತ್ತಾರ (ಪ್ರೇಮಲತ B, ಯೋಗೀಂದ್ರ ಮರವಂತೆ, ವಿನತೆ ಶರ್ಮ). ಪ್ರಕಾಶಕರಿಂದ ಅವರ ಬರಹಗಳಿಗೆ ಬೇಡಿಕೆ ಬರುತ್ತಲೂ ಇರುತ್ತದೆ. ಮತ್ತೆ ಕೆಲವರಿಗೆ  ‘ಅನಿವಾಸಿ‘   ಹಾರು ಹಲಗೆ ಯಾಗಿದೆ ಅಂದರೆ ಉತ್ಪ್ರೇಕ್ಷೆಯಲ್ಲ.

3) ಹಾಗೆ ನೋಡಿದರೆ ಯುಕೆ ದಲ್ಲಿ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ. ಅದರಲ್ಲಿ ಬರೆಯುವವರೂ ಅಷ್ಟಿಲ್ಲ. ಇರಬಹುದಾದ ಅನೇಕರನ್ನು ಅನಿವಾಸಿ ಕಂಡುಕೊಂಡಿಲ್ಲದಿರಬಹುದು. ಅದಕ್ಕಾಗಿ ಸತತ ಪ್ರಚಾರ, ಆಮಂತ್ರಣ ಅನ್ವೇಷಣೆ, ಆಹ್ವಾನ ಪ್ರಕ್ರಿಯೆ ನಡೆದೇ ಇರುತ್ತದೆ. ಈ ಐದು ವರ್ಷಗಳಲ್ಲಿ ನಾವು ’ಸಾಧಿಸಿದ್ದು‘  ಹೆಚ್ಚೇನೂ ಇರಲಿಕ್ಕಿಲ್ಲ. ಅದರಿಂದ ನಾವು ಬೀಗಿಯೂ ಇಲ್ಲ. ಈ ಲೇಖನ ಸರಣಿ ಒಂದು ರೀತಿಯ ‘stock taking’ ಎನ್ನ ಬಹುದು.

ವೈಯಕ್ತಿಕವಾಗಿ ಹೇಳುವದೆಂದರೆ, ಈ ಮೊದಲು ನಾನು ಕನ್ನಡದಲ್ಲಿ ಎಂದೂ ಬರೆದೇ ಇರಲಿಲ್ಲ, ಪ್ರಕಟಿಸಿಯೂ ಇರಲಿಲ್ಲ. ತಳವೂರಿದ ಈ ನಾಡಿನಲ್ಲಿ ನಾಲ್ಕು ದಶಕದ ನಂತರ ನಾಲ್ಕಾರು ಲೇಖನಗಳನ್ನು ಮಿತ್ರರ ಮತ್ತು ಸಹೃದಯರ ಉತ್ತೇಜನದಿಂದ ಬರೆದದ್ದಷ್ಟೇ. ಈ ಮಾಧ್ಯಮ ’ಯುಕೆ ಕನ್ನಡಿಗರ ತಂಗುದಾಣ’ವಾಗಿರುವುದರಿಂದ ಅವು ’ಬೆಳಕು’ ಕಂಡವು. ಆಕಸ್ಮಿಕವಾಗಿ ನಾನು ಈ ಪ್ರತಿಭಾವಂತರ ಕೂಟದ ಸದಸ್ಯನಾಗಿ ಸೇರಿಸಿಕೊಂಡದ್ದು (ಅಲ್ಲ, ಅವರು ನನ್ನನ್ನು ಸೇರಿಸಿಕೊಡದ್ದು!) ನನ್ನ ಸುದೈವ ಅಂದುಕೊಳ್ಳುತ್ತೇನೆ. ಆ ಹೂವಿನ ಮಾಲೆಯ ನಾರು ಮಾತ್ರ ನಾನು! ಒಂದು ರೀತಿಯಿಂದ ಸೂತ್ರಧಾರ!

’ಅನಿವಾಸಿ’ ಇನ್ನೂ ಬೆಳೆಯ ಬೇಕು. ಅದಕ್ಕೆ ನಿಮ್ಮೆಲ್ಲರ ಸಹಾಯ, ಸಹಕಾರ ಅಗತ್ಯ. ಕಳೆದ ವಾರ ಬರೆಯುವಾಗ ಆ ಅಮೃತ ಗಳಿಗೆಯಿಂದ ಶುರುಮಾಡಿದೆ. ‘ಅನಿವಾಸಿ‘ ಹುಟ್ಟಿದ ನಂತರ ಆ ಗಡಿಗೆಯಲ್ಲಿ ಹುಳಿಬೆರೆತ ಘಟನೆಗಳಾಗಿವೆ. ಆದರೆ ಹಾಗೂ ಹೀಗೂ detox ಮಾಡಿಕೊಂಡು ಅನಿವಾಸಿ ಸದ್ಯ ಆರೋಗ್ಯವಂತವಾಗಿದೆ. ಅಂದು ಬೀಜ ಬಿತ್ತಿ ಹುಟ್ಟಿದ ಸಸಿ ಬೆಳೆದು ಗಟ್ಟಿಮರವಾಗಬೇಕಾಗಿದೆ. ’ದತ್ತ’ನ ಹಕ್ಕಿಯಂತೆ,  ಗಾವುದ, ಗಾವುದ, ಗಾವುದ ಕ್ರಮಿಸಬೇಕಾಗಿದೆ. ರಾಬರ್ಟ್ ಫ್ರಾಸ್ಟ್ ನ ಅಶ್ವಾರೋಹಿಯಂತೆ ಮೈಲು ಮೈಲುಗಳನ್ನು ದಾಟುವದಿದೆ. ಚಿಕ್ಕಂದಿನಲ್ಲಿ ಓದಿದ ಆತನ ಕವನದ ಸಾಲುಗಳು ನೆನಪಾಗುತ್ತವೆ:

The woods are lovely, dark and deep,

But I have promises to keep,

And miles to go before I sleep,

And miles to go before I sleep.

 

ಶ್ರೀವತ್ಸ ದೇಸಾಯಿ

( ಮುಂದಿನ ವಾರ- ಕೊಟ್ಟಿದ್ದೇನು, ಪಡೆದದ್ದೇನು?)

ಅನಿವಾಸಿಗಳ ಅಂಗಳದಲ್ಲಿ – ಸುಧಾ ಮೂರ್ತಿ, ಪ್ರೇಮಲತಾ ಬಿ, ಶ್ರೀವತ್ಸ ದೇಸಾಯಿ 25-10-2016
”ಕನ್ನಡದಲ್ಲಿ ಬರಿ’ ಕಮ್ಮಟ, ಚೆಸ್ಟರ್ಫೀಲ್ಡ್, 19-10-2014
ಗುರುರಾಜ್ ಕರಜಗಿಯವರೊಡನೆ ಕೆಲ YSKB ಸದಸ್ಯರು 22-4-2018

13 thoughts on “’ಅನಿವಾಸಿ’ ನಡೆದು ಬಂದ ದಾರಿ ಭಾಗ -2 ಶ್ರೀವತ್ಸ ದೇಸಾಯಿ

  1. ಅನಿವಾಸಿಯ ಹುಟ್ಟು ಮತ್ತು ಅದು ಬೇಳೆದು ಬಂದ ಹಾದಿ, ಇಷ್ಟ- ಕಷ್ಟಗಳು,
    ಹೆಮ್ಮೆಯ ವಿಷಯಗಳು, ಉತ್ತಮ ಬರಹಗಳು, ಸಂಪಾದಕರು ಪಟ್ಟ ಶ್ರಮ, ಆರಂಭದಿಂದ ಇಂದಿಗೂ ಇರುವ ಉತ್ಸಾಹ
    ಕೆಲವು ವಿಚಾರ ಮಂಥನಗಳು ಹೀಗೆ ಎಲ್ಲ ವಿಸ್ತೃತ ಮಾಹಿತಿಯನ್ನು ಕೊಟ್ಟ ದೇಸಾಯಿ ಅವರಿಗೆ ವಂದನೆಗಳು
    ನಾನು ಎರಡು ವರ್ಷಗಳ ಕೆಳಗಷ್ಟೇ ಇದರ ಸದಸ್ಯನಾಗಿದ್ದು ಅನಿವಾಸಿಯ ಒಡನಾಟ ನನಗೆ ಸಾಕಷ್ಟು ಸಂತಸ ಮತ್ತು ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿದೆ

    Like

  2. ಉತ್ಸುಕಳಾಗಿ ಕಾಯುತ್ತಿದ್ದ ಎರಡನೇ ಕಂತು ಶ್ರೀವತ್ಸ ದೇಸಾಯಿ ಅವರ ಲೇಖನಿಯಿಂದ ಅನೇಕ ಆಸಕ್ತಿಪೂರ್ಣ ಮಾಹಿತಿಗಳನ್ನು ಹೊತ್ತು ತಂದಿದೆ.’ಅನಿವಾಸಿ’ ಯ ಹೆಜ್ಜೆ ಹೆಜ್ಜೆಯ ಬೆಳವಣಿಗೆಯನ್ನು ತುಂಬ ಚೆಂದದ ಶೈಲಿಯಲ್ಲಿ ನಿಖರವಾಗಿ, ಮನದಲ್ಲಿ ಅಚ್ಚೊತ್ತುವಂತೆ ಬರೆದಿದಾರೆ ಅನ್ನೋದರಲ್ಲಿ ಎರಡು ಮಾತಿಲ್ಲ.ಯಾವುದೇ ಒಂದು ಸಂಘಟನೆಯ ಉಳಿವು, ಬೆಳವಣಿಗೆ, ಸಾಫಲ್ಯತೆ ಸುಲಭ ಸಾಧ್ಯವಲ್ಲ.ದೂರದೇಶದಲ್ಲಿ, ಕನ್ನಡ ನಾಡಿನಿಂದ ದೂರ ಇದ್ದೂ ಅನಿವಾಸಿಯ ಸಾಧನೆ ಶ್ಲಾಘನೀಯ.ದೂರ ನಿಂತು ನೋಡುವ ಒಬ್ಬ ಓದುಗಳಾದರೂ ಈ ಎಲ್ಲ ಬರಹಗಳನ್ನು ಓದುವಾಗ ಏನೋ ಒಂದು ನಮ್ಮತನದ ಭಾವನೆ ತಾನೇ ತಾನಾಗಿ ಮೂಡಿ ಬರತದೆ ಅಂದರೆ ಅತಿಶಯೋಕ್ತಿ ಅಲ್ಲ.ಹೀಗೇ ಅನಿವಾಸಿ ತನ್ನ ಯಶದ ದಾರಿಯಲ್ಲಿ ಸಾಗಲಿ ಎಂಬುದು ನನ್ನ ಹಾರೈಕೆ.ಇಂಥ ಅರ್ಥಪೂರ್ಣ ಲೇಖನ ನೀಡಿದ್ದಕ್ಕೆ ಶ್ರೀವತ್ಸ ದೇಸಾಯಿ ಅವರಿಗೆ ಧನ್ಯವಾದಗಳು.ಅನಿವಾಸಿ ಬಳಗಕ್ಕೆ ಶುಭೇಚ್ಛೆಗಳು.ಅನಿವಾಸಿ ಬೆಳೆದು ಬಂದ ದಾರಿಯ ಬಗ್ಗೆ ಇನ್ನಷ್ಟು, ಮತ್ತಷ್ಟು ಲೇಖನಗಳನ್ನು ಎದುರು ನೋಡುತ್ತಿದೀನಿ.
    ಸರೋಜಿನಿ ಪಡಸಲಗಿ

    Like

  3. ದೇಸಾಯಿಯವರ ಈ ಲೇಖನಗಳು ಅನಿವಾಸಿಯ ದಾಖಲೆಗಳು. ನಿಮ್ಮಷ್ಟು ನಿಖರವಾಗಿ ಸುಂದರವಾಗಿ ಇದನ್ನ್ಯ್ ಬರೆಯುವುದು ನಿಮ್ಮೊಬ್ಬರಿಂದಲೇ ಸಾಧ್ಯ. – ಕೇಶವ

    Like

  4. “ಸವಿ ನೆನಪುಗಳು ಬೇಕು ಸವಿಯಲಿ ಬದುಕು” ….. ಐದು ವರ್ಷಗಳ ಸಾಧನೆ ನನಗೆ ಮುಖ್ಯವಾದದ್ದು, ಭಿನ್ನಾಭಿಪ್ರಾಯಗಳು ಯಾವ ಸಂಘ ಸಂಸ್ಥೆಗಳಲ್ಲಿಲ್ಲ? , ಸಾವಿರಾರು ಮೈಲಿ ದೂರದಿಂದ ಬಂದು ಕನ್ನಡ ಬರೆಯುವದಕ್ಕೆ ಯಾವ ಪ್ರೇರಣೆ ಹಾಗೂ ಅನುಕೂಲಕರ ಪರಿಸ್ಥಿತಿ ಇಲ್ಲದಿರುವ ಸಮಯದಲ್ಲಿ ನಾವು ಇಷ್ಟು ಸಾಧಿಸಿರುವುದರ ಬಗ್ಗೆ ನಮ್ಮ ಬೆನ್ನು ನಾವೇ ತಟ್ಟಿಕೊಂಡರೆ ಅದು ಸ್ವಯಂ ಪ್ರಶಂಸೆ ಎಂದು ಭಾವಿಸಲಾರೆ, ಏಕೆಂದರೆ ಅದು ನನಗೆ ಹೆಮ್ಮೆಯ ವಿಷಯ . ನಮ್ಮ ಭಿನ್ನಾಭಿಪ್ರಾಯಗಳನ್ನು ಹಿಂದಕ್ಕಿಟ್ಟು ಮುಂದೆ ನಡೆಯುವಷ್ಟು ಪರಿಪಕ್ವವಾದ ಹಂತವನ್ನು ನಾವೆಲ್ಲಾ ತಲುಪಿದ್ದೇವೆ ಎಂಬುದು ನನ್ನ ಅನಿಸಿಕೆ.
    In hind sight I believe it’s true.

    ಶಿವಪ್ರಸಾದ್

    Like

  5. ದೇಸಾಯಿ ಅವರ ಅನಿವಾಸಿ ನಡೆದು ಬಂದ ದಾರಿ ಸರಣಿಯ ಎರಡನೆಯ ಲೇಖನ ಬಹಳ ಸ್ವಾರಸ್ಯಪೂರ್ಣವಾಗಿದೆ. ಈ ಐದು ವರ್ಷಗಳಲ್ಲಿ ನಮ್ಮ ವೇದಿಕೆ ಕಂಡ ಏಳು-ಬೀಳುಗಳ ಪ್ರತಿಯೊಂದು ಘಟನೆಗಳನ್ನು ಸಹ ಅವರು ಬಹಳ ನಿಖರವಾಗಿ ದಾಖಲಿಸಿದ್ದಾರೆ. ಯಾವುದೇ ಒಂದು ಸಂಘ ಸಂಸ್ಥೆ ಒಂದು ಪರಿವಾರವಿದ್ದಂತೆ. ಅಲ್ಲಿ ಕಲಹಗಳು ಮತ್ತು ಕಲರವಗಳು ನಡೆಯುತ್ತಲೇ ಇರುತ್ತವೆ. ನಮ್ಮ ವೇದಿಕೆಯ ಪರಿವಾರದಲ್ಲೂ ಕೂಡಾ ಇದೆ ರೀತಿ ನಡೆಯುತ್ತಿದೆ. ಆದರೆ ನಮ್ಮ ಪರಿವಾರದಲ್ಲಿ ಕಲಹಗಳಿಗಿಂತ ಕಲರವದ ಸಂಖ್ಯೆ ಹೆಚ್ಚಿರುವುದರಿಂದ ಇನ್ನು ಆರೋಗ್ಯವಾಗೇ ಇದೆ. ಅದೇನೇ ಇರಲಿ, ಅನಿವಾಸಿ ವೇದಿಕೆಯ ಪ್ರಾರಂಭಕ್ಕೆ ನಿಜವಾಗಿ ಬುನಾದಿ ಬಿದ್ದದ್ದು ಸುಮಾರು ೨೦೦೮ರಲ್ಲಿ. ಈ ಹಿನ್ನೆಲೆ ಬಹಳಷ್ಟು ಮಂದಿಗೆ ತಿಳಿದಿಲ್ಲ. ಈ ಹಿನ್ನೆಲೆ ಕುರಿತು ಬರೆಯುವ ಅಸೆ ನನ್ನದು. ಇದನ್ನು ನಾನು ಈಗಾಗಲೇ ಬರೆಯಬೇಕಿತ್ತು. ಆದರೆ ಸಮಯದ ಅಭಾವ ಮತ್ತು ಹಲವಾರು ಅನಿರೀಕ್ಷಿತ ಸನ್ನಿವೇಶಗಳ ಕಾರಣದಿಂದಾಗಿ ನನಗೆ ಈ ಲೇಖನ ಬರೆಯಲಾಗಲಿಲ್ಲ. ಬಹುಶಃ ಸ್ವಲ್ಪದರಲ್ಲೇ ಈ ಕಾರ್ಯ ನಡೆಸುವ ಇಚ್ಛೆ ಇದೆ. ಅದೇನೇ ಇರಲಿ ಅನಿವಾಸಿ ವೇದಿಕೆಯ ಬೆಳವಣಿಗೆ ಬಹಳ ಆರೋಗ್ಯಕರವಾಗಿದೆ. ಇದೀಗ ಐದನೆಯ ವಾರ್ಷಿಕೋತ್ಸವವನ್ನು ನಡೆಸುತ್ತಿದೆ. ಇದು ಬಹಳ ಸಂತೋಷ ಮತ್ತು ಹೆಮ್ಮೆಯ ವಿಷಯ. ವೇದಿಕೆಯ ಸದಸ್ಯರಿಗೆಲ್ಲರಿಗೂ ನನ್ನ ಹಾರ್ದಿಕ ಅಭಿನಂದನೆಗಳು.
    ಉಮಾ ವೆಂಕಟೇಶ್

    Like

    • ಉಮಾ ಅವರೆ, ನಿಮ್ಮ ಈ ಕಮೆಂಟು ಒಂದು ಮಹತ್ವಪೂರ್ಣ ಮಾಹಿತಿಯನ್ನೆ ಕೊಡುತ್ತಿದೆ. ನಾನು ಈ ಎರಡು ಲೇಖನಗಳಲ್ಲಿ ನನಗೆ ಗೊತ್ತಿದ್ದಂತೆ ಮತ್ತು ನಾನು ಕಾಯ್ದಿಟ್ಟ ದಾಖಲೆಗಳನ್ನು ಪರಾಮರ್ಶಿಸಿ ಬರೆದೇನೇ ಹೊರತು ಅದಕ್ಕೂ ಮೊದಲು, ಇದರಲ್ಲಿ ನಾನು ತೊಡಗಿಸಿಕೊಳ್ಳುವ ಮೊದಲಿನ, ಅಂದರೆ ನಿಮ್ಮ ಮತ್ತು ಇನ್ನಾರಾದರೂ ಆದ್ಯ ಪ್ರವರ್ತಕರು ಅದನ್ನು ಕಲ್ಪಿಸಿದ್ದರ (conceive) ಬಗ್ಗೆ ನಿಮ್ಮಿಂದ ಒಂದು ಲೇಖನದ ಅವಶ್ಯಕತೆ ಇದೆ. ನಾನು ಹುಟ್ಟು, ನಾಮಕರಣಗಳ ಬಗ್ಗೆ ಬರೆದೆ. ಆದರೆ ಆ ಐಡಿಯಾ ಬಿತ್ತಿದ್ದು ನಿಮಗೇ ಗೊತ್ತು!
      ಇತಿಹಾಸ ಮುಖ್ಯ ಅನ್ನುತ್ತಾರೆ, ಅದರಿಂದ ಕಲಿಯುವುದಿದೆ ಎಂದು ಸಾಮಾನ್ಯ ಗ್ರಹಿಕೆ. ’ಕಲಿಯುವುದೆಂದರೆ ಮನುಷ್ಯ ಇತಿಹಾಸ್ಯದಿಂದ ಏನೂ ಕಲಿಯುವದಿಲ್ಲ,’ ಎಂದು ಹಗುರಾಗು ಮಾತಾಡುವವರೂ ಇದ್ದಾರೆ. ಆದರೆ ಈ ಇತಿಹಾಸ ಬರೆಯಲು ಕುಳಿತಾಗಿನಿಂದ ನಾನು ಮಾತ್ರ ಸಾಕಷ್ಟು ಕಲಿತಿದ್ದೇನೆ. ಇತಿಹಾಸದಿಂದ (ಉಳಿದವರನ್ನು ಬಿಟ್ಟರೂ) ಇತಿಹಾಸಕಾರನಾದರೂ ಕಲಿಯುತ್ತಾನೆಯೇ ಸರಿ, ಎಂದ ಹಾಗಾಯಿತು!

      Like

  6. ವಿನತೆಯವರೇ, ನಿಮ್ಮ ಅನಿಸಿಕೆ ಮತ್ತು ಪ್ರೋತ್ಸಾಹಕರ ಮಾತುಗಳಿಗೆ ಧನ್ಯವಾದಗಳು. ನಿಮ್ಮ ‘ಅನಿವಾಸಿ”ಯಾ ಸಂಪಾದಕತ್ವದ ಫಲದ ಬಗ್ಗೆ ಉಲ್ಲೇಖಿಸಿದ್ದೇನೆ ಅಂದುಕೊಂಡಿದ್ದೇನೆ. KSSVV ಪ್ರಸ್ತುತುಪಡಿಸಿದ ಕಾರ್ಯಕ್ರಮಗಳ ಬಗ್ಗೆ ಪ್ರಸಾದ್ ಅವರು ಬರೆಯಲಿದ್ದಾರೆಂದು ಮತ್ತು ಸ್ಥಳಾಭಾವದಿಂದ ಅವುಗಳ ವಿವರಣೆ (ಈಗಾಗಲೇ ಉದ್ದವಾದ) ನನ್ನ ಲೇಖನದಲ್ಲಿ ಇಲ್ನ.. ಅನಿವಾಸಿ ಬಗ್ಗೆ ನಿಮ್ಮ ಆಸ್ಥೆ ಮತ್ತು ಕಾಳಜಿ ನಿಮ್ಮಮೇಲಿನ ಮಾತುಗಳಲ್ಲಿ ಅಲ್ಲದೆ ನಿಮ್ಮ ಬರಹಗಳಲ್ಲಿ ಸ್ಫುಟವಾಗಿ ಕಾಣುತ್ತದೆ. ಅವುಗಳಿಗೆ ಯಾವಾಗಲೂ ಸ್ವಾಗತವಿದೆ. ಬರೆಯುತ್ತಾ ಬನ್ನಿ. ನೀವು ವಾಸಿಸುತ್ತಿರುವಲ್ಲಿ ಬೇರೆಯೇ ತರಹದ ಜೀವನ, ಘರ್ಷಣೆ, ಕಲಾಪ್ರತಿಭೆಯನ್ನು ಈಗಾಗಲೇ ಅನಿವಾಸಿಯಲ್ಲಿ ಬರೆದಿದ್ದೀರಿ.

    Like

  7. Yet another beautiful story of enthusiastic and enterprising pioneer Kannadigas getting united and the challenges they encountered in establishing “ANIVASI” …all painstakingly narrated with great detail by Dr Desai . Well Done to the team.

    Like

  8. ಅನಿವಾಸಿ ಬೆಳದ ದಾರಿ ಬಗ್ಗೆ ಬಹಳ ಸೊಗಸಾಗಿ ವರ್ಣನೆ ಮಾಡಿದ್ದೀರ.
    As far as I am concerned Anivaasi is part of KB UK and I intend to put a resolution at the next AGM. I had suggested that the articles which appear here to be circulated to KB members, it hasn’t happened so far. we get a wider readership and also may encourage some to contribute.
    No time is allocated to KSSVV on 16th but can we not meet on the sidelines for an hour?

    Like

    • ರಾಮಮೂರ್ತಿಯವರೇ, ಧನ್ಯವಾದಗಳು. ನಿಜ, ‘ಅನಿವಾಸಿ’ ಕನ್ನಡ ಬಳಗದ ಸದಸ್ಯರೆಲ್ಲರಿಗೂ ತಲುಪಬೇಕಾಗಿದೆ. I have personally made requests to KB powers that be in the past without success. They put forward their own reasons. I have spoken to the new management too, recently on 29th September, and hopefully they will act on this long-standing plea. We might hope for more writers only if we reach to more Kannadigas not only among the Balaga members but Kannada diaspora beyond.

      Like

    • As for meeting in ‘sidelines’ certainly there is scope for it. Can I request all those interested express your willingness to meet in Anivaasi WhatsApp under that heading. And show preferred time. Shrivatsa Desai

      Like

  9. ದೇಸಾಯಿಯವರೇ,
    What a wonderful narration of KSSVV – ಅನಿವಾಸಿ journey. ಈ ಎರಡನೇ ಭಾಗವನ್ನ ಓದುವುದಕ್ಕೆ ಕಾಯುತ್ತಿದ್ದೆ ಎಂದರೆ ಅತಿಶಯೋಕ್ತಿಯಲ್ಲ. ನಿಮ್ಮಿಂದ ಮುಖತಃ ಕೇಳಿದ್ದರೂ ಅನಿವಾಸಿಯ ಅಂಬೆಗಾಲಿನ ಪುಟ್ಟ ಹೆಜ್ಜೆಗಳನ್ನ ಓದಿದ್ದು ಬಲು ಖುಷಿಯಾಯ್ತು. ಹಲವು ಹೊಸವಿಷಯಗಳು ಈಗ ಗೊತ್ತಾಗಿ ಅನಿವಾಸಿಯ ಬೆಳವಣಿಗೆಯ ಚಿತ್ರ ಸ್ಪಷ್ಟವಾಯಿತು. ಹೌದು, ತನ್ನ ನಡಿಗೆಯಲ್ಲಿ ಅನಿವಾಸಿ ಗುಂಡಿಗೆ ಬಿದ್ದ ಕೆಲ ಸಂದರ್ಭಗಳಿದ್ದವು. ೨೦೧೬ರಲ್ಲಿ ಆಗ ತಾನೇ ನಾನು ಜಾಲತಾಣದ ಸಂಪಾದಕತ್ವವನ್ನು ಕೈಗೆತ್ತಿಕೊಂಡಿದ್ದೆ. ಅದೇ ವರ್ಷ ದೀಪಾವಳಿ ಆಚರಣೆಯ ಸಂದರ್ಭದಲ್ಲಿ KSSVV-ಅನಿವಾಸಿ ಯೋಜಿಸಿದ್ದ ಕಾರ್ಯಕ್ರಮವನ್ನು ಹಲವಾರು ಸದಸ್ಯರು ಬಹಿಷ್ಕರಿಸಿದ್ದರು. ಕಾರಣ, ಮುಖ್ಯ ಅತಿಥಿಯಾಗಿ ಸ್ಥಳೀಯ ಆಂಗ್ಲ poet laureate ರನ್ನು ಆಹ್ವಾನಿಸಿದ್ದು. ಎಲ್ಲವನ್ನೂ, ಎಲ್ಲರನ್ನೂ ಹೊಸದಾಗಿ ಪರಿಚಯ ಮಾಡಿಕೊಳ್ಳುತ್ತಿದ್ದ ನನಗೆ ಆ ಕೆಲ ಸದಸ್ಯರ ಧೋರಣೆ ಮತ್ತು ವರ್ತನೆಯಿಂದ ಕಸಿವಿಸಿಯಾಗಿತ್ತು, ಬೇಸರವಾಗಿತ್ತು. ನಿಮ್ಮ ಮತ್ತು ಉಮಾರವರಿಂದ ಸಿಕ್ಕ ಸತತ ಬೆಂಬಲ ನನ್ನನ್ನು ಹಿಡಿದು ನಿಲ್ಲಿಸಿತು. ಅದೆಲ್ಲವನ್ನೂ ಹಿಂದಕ್ಕೆ ಬಿಟ್ಟು ಈಗ ‘ಅನಿವಾಸಿ’ ಗುಂಪು ಒಗ್ಗಟ್ಟಿನಿಂದ ಮುಂದುವರೆಯುತ್ತಿರುವುದು ತುಂಬಾ ಸಂತೋಷ ತಂದಿದೆ. ೨೦೧೩ರಲ್ಲಿ ಆರಂಭವಾದ ಜಾಲತಾಣ ಕೂಸು ಈಗ ಐದು ವರ್ಷ ಪೂರೈಸಿ ಆರೋಗ್ಯವಾಗಿದೆ ಅನ್ನುವುದು ತುಂಬಾ ಸಮಾಧಾನ ತಂದಿದೆ. ಕೂಸು ಇನ್ನಷ್ಟು ಚೆನ್ನಾಗಿ ಬೆಳೆಯಲಿ, ಮತ್ತಷ್ಟು ಶಕ್ತಿಯುತವಾಗಲಿ!
    ವಿನತೆ ಶರ್ಮ

    Like

Leave a comment

This site uses Akismet to reduce spam. Learn how your comment data is processed.