’ಅನಿವಾಸಿ’ (KSSVV) ನಡೆದು ಬಂದ ದಾರಿ ಭಾಗ -1 ಡಾ. ಶ್ರೀವತ್ಸ ದೇಸಾಯಿ ಬರೆದ ಲೇಖನ

ವಿನ್ಯಾಸ: ಉಮಾ ವೆಂಕಟೇಶ್

(ಕನ್ನಗಡಿಗರು ಹೊರದೇಶಕ್ಕೆ ಹೋಗುವಾಗ ತಮ್ಮ ಜೊತೆ ಹೊತ್ತೊಯ್ಯಲು ಸಾಧ್ಯವಾಗುವುದು ಕೆಲವೇ ವಸ್ತುಗಳನ್ನು.  ಆದರೆ ವಲಸೆ ಹೋದ ದೇಶಗಳಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳುವಾಗ ಅವರಿಗೆ ಅಂದುಕೊಂಡದ್ದಕ್ಕಿಂತ ಹೆಚ್ಚನ್ನು  ಹೊತ್ತು ತಂದಿರುವುದು ಅರಿವಾಗುತ್ತದೆ. ಅರಿವಿಲ್ಲದಂತೆಯೇ ಅವರೊಡನೆ ಬಂದ  ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ ಎಲ್ಲ ಅವರ ಗುರುತುಗಳಾಗುತ್ತವೆ. ವಿದೇಶಿ ನೆಲದಲ್ಲಿ ಈ ಮೌಲ್ಯಗಳು ಸ್ವದೇಶೀ ತುಣುಕುಗಳನ್ನು ಸೃಷ್ಟಿಸುತ್ತವೆ. ಈ ನೆಲದಲ್ಲಿ ಬೆರೆಯಲು ಸಮಾನ ಆಸಕ್ತಿಯಿರುವ ಮನಗಳು ತುಡಿಯುತ್ತವೆ. ಸಮುದಾಯಗಳು ಕಲೆಯುತ್ತವೆ. ಕನ್ನಡದ ಬದುಕು ಮತ್ತೆ  ಜೊತೆಯಾಗಿ ಮುಂದುವರೆಯುತ್ತದೆ.

 ಆದರೆ ಹಲವು ದಶಕಗಳ ಕಾಲ ಇಲ್ಲಿ ಸಾಹಿತ್ಯಕ್ಕಾಗಿ ಯಾವುದೇ ನಿಗಧಿತ ಗುಂಪಿರಲಿಲ್ಲ. ಆದರೆ ಸಾಹಿತ್ಯದಲ್ಲಿ ಆಸಕ್ತಿಯಿರುವ ಕೆಲವರು ಒತ್ತಟ್ಟಿಗೆ ಬಂದದ್ದು 2014 ರಲ್ಲಿ. ಕೇವಲ ನಾಲ್ಕು ತಿಂಗಳ ನಂತರ ಗುಂಪಿನ ಮೊದಲ ಅಧಿಕೃತ ಸಭೆ ನಡೆಯುವ ಹೊತ್ತಿಗೆ ಈ ಸಂಖ್ಯೆ ದ್ವಿಗುಣಗೊಂಡಿತ್ತು.ಇವರಲ್ಲಿ ಯಾರೂ ಕನ್ನಡವನ್ನೇ ಓದಿದವರಿರಲಿಲ್ಲ. ಪ್ರತಿಯೊಬ್ಬರೂ ಅತ್ಯಂತ ಬ್ಯುಸಿ ಎನ್ನುವ ಜೀವನ ಶೈಲಿಯ ವೃತ್ತಿಗಳಲ್ಲಿ ಇದ್ದವರೇ.

 ಯಾವುದೇ ಸಂಘ-ಸಂಸ್ಥೆಗಳ ಹಣಕಾಸಿನ ಸಹಾಯದ ಹಂಗಿಲ್ಲದಂತೆ ಅನಿವಾಸಿಯ ಕೆಲವರು ಸದಸ್ಯರು  ಸ್ವಯಂ ಪ್ರೇರಿತರಾಗಿ ದೇಣಿಗೆಯ ಮೂಲಕ ಅಂತರ್ಜಾಲದ ಸಾಹಿತ್ಯ ಜಗಲಿಯನ್ನು ನಿಭಾಯಿಸುತ್ತಿದ್ದಾರೆ. ಈ ಜಾಲ ತಾಣ ಐದು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತಿ ಶುಕ್ರವಾರ ಈ ದೇಶದಲ್ಲಿರುವ ಕನ್ನಡ ಬರಹಗಾರರ ಒಂದು ಬರಹವನ್ನು ತಪ್ಪದೆ ಪ್ರಕಟಿಸುತ್ತ ಬಂದಿದೆ.

ಕನ್ನಡ ನಾಡಿನ ಸಮಸ್ತ ಜನಸ್ತೋಮಕ್ಕೆ ತೆರದ ಬಾಗಿಲಿನ ಪಾಲಿಸಿಯನ್ನು ಅನುಸರಿಸುವ ಹಲವು ಅಂತರ್ಜಾಲ ಸಾಹಿತ್ಯಕ ತಾಣಗಳು ಕೂಡ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಲು ಶ್ರಮಪಡುತ್ತವೆ. ಹಲವಾರು ತಾಣಗಳು ಮುಂದುವರೆಯಲಾಗದೆ ಮುಚ್ಚಿಹೋಗಿವೆ.ಅಂಥದ್ದರಲ್ಲಿ ದೂರದ್ದೊಂದು ಪುಟ್ಟ ದ್ವೀಪದ ಬಹಳ ಕಡಿಮೆ ಎನ್ನುವಷ್ಟು ಕನ್ನಡಿಗರಿರುವ ಯುನೈಟೆಡ್ ಕಿಂಗ್ಡಂ ನಲ್ಲಿ ಬೆರಳೆಣಿಕೆಯಷ್ಟು ಕನ್ನಡದಲ್ಲಿ ಸಾಹಿತ್ಯ ಬರೆಯುವ ಮತ್ತು ಓದುವ ಜನರು ನಡೆಸುತ್ತಿರುವ  ಅನಿವಾಸಿ ಸಾಹಿತ್ಯ ಜಗಲಿಯ ಸಾಧನೆ ದೊಡ್ಡದೇ. ಸಾಹಿತ್ಯದಲ್ಲಿ ತೊಡಗಿಕೊಂಡ ಈ ಗುಂಪಿನಲ್ಲಿ ಯಾರೂ ಮುಖಂಡರಲ್ಲ. ಯಾವುದೇ ಪದವಿಗಳಿಲ್ಲ. ಈ ಅನುಕ್ರಮದಲ್ಲಿ ಅನಿವಾಸಿ ಐದು ಮುಗಿಸಿ ಆರು ವರ್ಷಗಳನ್ನು ಸಮೀಪಿಸುತ್ತಿದೆ. ಈ ಸಮಯದಲ್ಲಿ  ಅನಿವಾಸಿ ನಡೆದು ಬಂದ ಹಾದಿಯ ಹಿನ್ನೋಟವೇ ಈ ಸರಣಿ ಮಾಲೆ.

ಮೊದಲಿಗೆ ಈ ಗುಂಪಿನ ಹಿರಿಯರಾದ ಶ್ರೀವತ್ಸ ದೇಸಾಯಿಯವರ ಬರಹ. ಹುಟ್ಟಿನಿಂದ ಈವರೆಗೆ ಅನಿವಾಸಿಯ  ಬಹುತೇಕ ಪ್ರತಿ ಸಭೆಯ ನಿಮಿಷಗಳನ್ನು ದಾಖಲಿಸಿ, ಎಲ್ಲ ಬರಹಗಳ ಕಡತವನ್ನು  ಕಾದಿರಿಸಿ, ಫೋಟೋಗಳ ಸಮೇತ ಜೋಪಾನವಾಗಿಟ್ಟು ಈ ಗುಂಪನ್ನು ಕಾದಿರುವ ದೇಸಾಯಿಯವರು ಅತ್ಯಂತ ಉತ್ಸಾಹದಿಂದ ಅನಿವಾಸಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಪ್ರತಿ ಬರಹಕ್ಕೆ ಸ್ಪಂದಿಸಿ ಉತ್ತೇಜನದ ಮಾತುಗಳನ್ನು ಆಡಿ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಿದವರು. ಈ ಗುಂಪಿನಲ್ಲಿ ಒಂದು ವ್ಯವಸ್ಥೆಗೆ ಮಾರ್ಗದರ್ಶನವನ್ನು ನೀಡಿದವರು. ಹೀಗಾಗಿ ಅನಿವಾಸಿಯ ಇದುವರೆಗಿನ ಪಯಣದ ಬಗ್ಗೆ ಗುರುತರವಾದ ದಾಖಲೆಗಳ ಸಮೇತ  ಲೇಖನವನ್ನು ಬರೆದುಕೊಡಿ ಎಂದು ಕೋರಿದಾಗ ತಮ್ಮೆಲ್ಲ ಕಡತಗಳ ಮೇಲೆ ಕಣ್ಣು ಹಾಯಿಸಿ  ಅನಿವಾಸಿಗಾಗಿ  ಯಾವತ್ತಿಗೂ ಬೆಲೆಯುಳ್ಳ ಲೇಖನವನ್ನು ಬರೆದುಕೊಟ್ಟಿದ್ದಾರೆ. ಅನಿವಾಸಿ ನಡೆದು ಬಂದ  ದಾರಿಯ ಕಡೆ ಒಂದು ಸಮಗ್ರ ನೋಟವನ್ನು ಹರಿಸಿದ್ದಾರೆ.  ಅನಿವಾಸಿಯ ಜೊತೆಗಿನ ತಮ್ಮ ವಯಕ್ತಿಕ ಹಾದಿಯನ್ನೂ ಮೆಲುಕು ಹಾಕಿದ್ದಾರೆ.ಅದರ ಮೊದಲ ಕಂತಿದು.

ಸಮಸ್ತರಿಗೂ ದೀಪಾವಳಿಯ ಶುಭಾಶಗಳೊಂದಿಗೆ ಈ ಸರಣಿಯ ಆರಂಭ –ಡಾ.ಪ್ರೇಮಲತ ಬಿ. )

’ಅನಿವಾಸಿ’ಯ ಹುಟ್ಟು:

ಅದೊಂದು ಅಮೃತ ಘಳಿಗೆ!

(1) 19-10-2013, ಯೂಟೋಕ್ಸಿಟರ್ ಮೋಟರ್ವೇ ಸರ್ವಿಸ್ ಸ್ಟೇಷನ್ (A 50 Uttoxeter)

ಎಲ್ಲಿದೆ ಯೂಟೋಕ್ಸಿಟರ್? ’ಏನ ಕೇನ ಪ್ರಕಾರೇಣ…’ ಕೆಲವು ಊರುಗಳು ಪ್ರಸಿದ್ಧವಾಗುತ್ತವೆಯಲ್ಲವೆ? ಭೌಗೋಳಿಕವಾಗಿ ಇಂಗ್ಲೆಂಡಿನ ಮಧ್ಯವರ್ತಿ ಸ್ಥಳ ಈ ಊರು. ಕೆಲವು ಯು.ಕೆ. ವಾಸಿ ಸಾಹಿತ್ಯಾಸಕ್ತರು ಆ ದಿನ ಅಲ್ಲಿ ಕೂಡಿದಾಗ ಕ ಸಾ ಸಾಂ ವಿ ವೇ(KSSVV) ದ ಹುಟ್ಟು ಆಯಿತೆಂದು ಹೇಳಬಹುದು. ಆಗ ಕಾರ್ಡಿಫ್ ನಲ್ಲಿ ವಾಸಿಸುತ್ತಿದ್ದ ಡಾ.ಉಮಾ ವೆಂಕಟೇಶ್, ಮ್ಯಾಂಚಸ್ಟರ್ ಕಡೆಯಿಂದ ಡಾ ವತ್ಸಲಾ ರಾಮಮೂರ್ತಿ, ಡಾರ್ಬಿಯಿಂದ ಡಾ ಕೇಶವ ಕುಲಕರ್ಣಿ, ಸೌತ್ ಯಾರ್ಕ್ಶೈರ್ ನಿಂದ ಡಾ ಜಿ .ಎಸ್. ಶಿವಪ್ರಸಾದ್ ಮತ್ತು ಡೋಂಕಾಸ್ಟರಿನಿಂದ ಡಾ. ಶ್ರೀವತ್ಸ ದೇಸಾಯಿ ಆ ದಿನ ಬೆಳಿಗ್ಗೆ ಅಲ್ಲಿ ಕೂಡಿದ್ದರು.

ಅದಕ್ಕೂ ಮೊದಲು ಒಬ್ಬೊರಿಗೊಬ್ಬರು ಸಮಕ್ಷಮ ಭೇಟಿಯಾಗಿ ಕೆಲವರಷ್ಟೇ ಸ್ವಲ್ಪ ಪರಿಚಿತರಾಗಿದ್ದರೂ ಎಲ್ಲರೂ ಒಬ್ಬೊರನ್ನೊಬ್ಬರು ನೋಡಿರಲಿಲ್ಲ. ಉಮಾ ಅವರು ಪ್ರತ್ಯೇಕವಾಗಿ ಎಲ್ಲ್ರನ್ನು ಈ-ಮೇಲಿನ ಮುಖಾಂತರ ಈ ಮೊದಲೇ ಸಂಪರ್ಕಿಸಿದ್ದರು. ಕೆಲವರೊಡನೆ ಫೋನಿನಲ್ಲಿ ಮಾತಾಡಿದ್ದರು. ಯು ಕೆ ಕನ್ನಡಿಗರಲ್ಲಿ ಕನ್ನಡದ ”ವಿಚಾರ ವೇದಿಕೆ”ಯನ್ನು ಶುರು ಮಾಡಬೇಕೆಂಬ ಅದಮ್ಯ ಆಸೆ ಉಮಾ ಅವರಲ್ಲಿ ಬಹುದಿನಗಳಿಂದಲೂ ಜ್ವಲಂತವಾಗಿತ್ತು. ಹೇಗೆ ಪ್ರಾರಂಭ ಮಾಡಬೇಕು? ಯಾರನ್ನೆಲ್ಲ ಕೂಡಿಸಬೇಕು? ಯಾವ ಸ್ಥಳದಲ್ಲಿ? ಈ ಪ್ರಶ್ನೆಗಳು ಈಗ ಬಹು ಸುಲಭ ಅನಿಸಿದರೂ, ಆಗ ಅದೊಂದು ಕಠಿಣ ಸಮಸ್ಯೆಯೇ ಆಗಿತ್ತು.

1987 ರ ಸಂದೇಶ ’ಕೈಬರಹ’ ಸಂಚಿಕೆಗಳು

ಹಾಗೆ ನೋಡಿದರೆ ಯು.ಕೆ. ದಲ್ಲಿಯ ಕನ್ನಡಿಗರಲ್ಲಿ ಒಂದು ಕನ್ನಡದ ’ಪತ್ರಿಕೆ-ವೇದಿಕೆ’ ಪ್ರಾರಂಭ ಮಾಡುವ ವಿಚಾರ ಹೊಸದೇನೂ ಆಗಿರಲಿಲ್ಲ. ಕನ್ನಡವನ್ನು ಹೊರದೇಶದಲ್ಲಿ ವಾಸಿಸುವ ಕನ್ನಡಿಗರಲ್ಲಿ ಮತ್ತು ಅವರ ಮುಂದಿನ ಪೀಳಿಗೆಯಲ್ಲಿ

ಸಂದೇಶದ ಆಗಿನ ಸಂಪಾದಕರು

ಜೀವಂತ ಉಳಿಸಿ ಕೊಳ್ಳಬೇಕಾದರೆ ಇಂಥದೊಂದು ಮಾಧ್ಯಮದ ಅವಶ್ಯಕತೆಯಿದೆಯೆಂದಲೇ ಯು .ಕೆ. ಕನ್ನಡ ಬಳಗ ಆರಂಭದ ವರ್ಷಗಳಲ್ಲಿ ’ಸಂದೇಶ” ಎನ್ನುವ ’ಕೈಬರಹ”ದ ಪತ್ರಿಕೆಯನ್ನು 1984ರಲ್ಲಿ ಆರಂಭ ಮಾಡಿತ್ತು. ವತ್ಸಲಾ ಅವರಿಗೆ ಅದರ ಪ್ರತ್ಯಕ್ಷ ವೈಯಕ್ತಿಕ ಅನುಭವವಿತ್ತು ಸಹ.

ಆ ಮಾತಿಗೆ ಈಗ ಮೂವತ್ತೈದು ವರ್ಷಗಳು ಸಂದಿವೆ. ಎಲ್ಲರಿಗೂ ’ಬರಹ’ ಎಂಬ ಕನ್ನಡದ ಗಣಕಯಂತ್ರ ತಂತ್ರಾಂಶವಾದ ಪರಿಚಯವಾಗಲು ಪ್ರಾರಂಭವಾಗಿತ್ತು. ಆಗ ತಾನೆ ಇಂಟರ್ನೆಟ್ ತುಂಬ ’ಬ್ಲಾಗ್’ ಗಳು ದಿನೇ ದಿನೇ ಹುಟ್ಟುತ್ತಿದ್ದವು. ಇತ್ತಿತ್ತಲಾಗಿ ಕೆಲವು ತಿಂಗಳುಗಳಿಂದಲೇ ಇಂಟರ್ನೆಟ್ಟಿನಲ್ಲಿ ಕನ್ನಡ ಬ್ಲಾಗ್ ಅಥವಾ ಮ್ಯಾಗಝಿನ್ ತೆಗೆಯ ಬೇಕು, ಯು .ಕೆ. ಕನ್ನಡಿಗರು ಅದರಲ್ಲಿ ಬರೆಯಲು ಅವಕಾಶವಿರಬೇಕೆಂದು ಉಮಾ ವೆಂಕಟೇಶ್ ಮತ್ತು ಡಾ ಜಿ ಎಸ್ ಎಸ್ ಪ್ರಸಾದರು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಮಾತಾಡುತ್ತಿದ್ದರೆಂದು ತಿಳಿದು ಬಂದಿತ್ತು. ಅವರಿಬ್ಬರು ಕನ್ನಡ ಬಳಗದಲ್ಲಿ ಕಮಿಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದಲ್ಲದೆ ಅವರು ಕನ್ನಡ ಬಳಗದಿಂದ ಹೊರಡುತ್ತಿದ್ದ ’ಸಂದೇಶ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲೂ ಇದ್ದರು.(ಈಗಲೂ ಅದರ ಹಳೆಯ ಸಂಚಿಕೆಗಳು KBUK ವೆಬ್ ಸೈಟಿನಲ್ಲಿ ಓದಲು ಸಿಗುತ್ತವೆ). 1980ರ ದಶಕದಲ್ಲಿ ಈ ದೇಶದಲ್ಲಿ ವಾಸಿಸುತ್ತಿದ್ದ ಕನ್ನಡಿಗರೆಲ್ಲರೂ ಕನ್ನಡ ಬಳಗದ ಸದಸ್ಯರಾಗಿದ್ದಿಲ್ಲ, ಯು ಕೆ ದಲ್ಲಿ ದೂರದೂರದ ಊರುಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರಿಗೆ ಬಳಗದ ಎಲ್ಲ ಕಾರ್ಯಕ್ರಮಗಳಲ್ಲಿ ಸೇರುವ ಅವಕಾಶ ಕಾರಣಂತರಗಳಿಂದ ಒದಗಿ ಬರುತ್ತಿರಲಿಲ್ಲ. ಅಂದ ಮೇಲೆ ಕಥೆ, ಕವಿತೆ, ಬರೆಯುವದರಲ್ಲಿ ಪಳಗಿದ, ಬರೆಯುವ ಉತ್ಸಾಹವಿದ್ದವರನ್ನು ಹೇಗೆ ಪತ್ತೆ ಹಚ್ಚಿ ಅವರಿಂದ ಇಂಥ ಒಂದು ದಿಜಿಟಲ್ ಮೀಡಿಯಾದ ಮುಖಾಂತರ ಇದನ್ನು ಮುಂದುವರೆಸಬೇಕು ಅಂತ ತಮ್ಮತಮ್ಮೊಳಗೆ ಚರ್ಚೆ ನಡೆಸುತ್ತಿದ್ದರೇ ಹೊರತು ಅದು ಕನಸಾಗಿಯೇ ಉಳಿದಿತ್ತು. ಒಂದು ದಿನ ಹೇಗೋ ಯಾರೋ ಹೇಳಿದಂತೆ ಟೆಕ್ನಿಕಲ್ ವಿಷಯಗಳಲ್ಲಿ ಉಳಿದವರಿಗಿಂತ ಹೆಚ್ಚು ಪರಿಣಿತಿಯಿದ್ದ ಕೇಶವ ಕುಲಕರ್ಣಿಯವರನ್ನು ಸಂಪರ್ಕಿಸಿ ಆಸಕ್ತರೆಲ್ಲ ಕೂಡಿ ಚರ್ಚೆ ಮಾಡೋಣವೇ ಅಂತ ಕೇಳಿದಾಗ ಕೇಶವ ಅವರ ಪ್ರವಾದಿಯ ನ್ಯೂನೋಕ್ತಿಯಂಥ ಉತ್ತರ: ”ಯಾಕೆ ಕಣಿ ಕೇಳುತ್ತೀರಿ? ಶುರು ಮಾಡಿಬಿಡಿ!” ಹಾಗಾದರೆ ಕೂಡುವಾ ಅಂತ ನಿರ್ಧರಿಸಿದಾಗ ದೇಶದ ಮಧ್ಯದಲ್ಲಿಯ ಕೇಶವ ಅವರೇ ಹುಡುಕಿದ ’ವೆನ್ಯೂ’ ಆ ಯುಟೋಕ್ಸಿಟರ್! ನಮ್ಮವರಲ್ಲಿ ಯಾರೂ ಹೆಸರೇ ಕೇಳಿರದ ಆ ಊರು ಈಗ ಅನಿವಾಸಿಯ ಐತಿಹಾಸಿಕ ದಾಖಲೆಯಲ್ಲಿ ಚಿರಸ್ಮರಣೀಯ ಸ್ಥಾನ ಪಡೆದಿದೆ!

ಅಂದು ಕೂಡಿದ ಐವರು:

ಕೇಶವ ಕುಲಕರ್ಣಿ, ಉಮಾ ವೆಂಕಟೇಶ್, (ಜಿ ಎಸ್ ಎಸ್) ಗುಗ್ಗರಿ ಪ್ರಸಾದ, ವತ್ಸಲಾ ರಾಮಮೂರ್ತಿ, ಶ್ರೀವತ್ಸ ದೇಸಾಯಿ.

ಸಭೆಯ ಪೂರ್ವದಲ್ಲಿ ನಾನು ಮಾಡಿಟ್ಟುಕೊಂಡು ಒಯ್ದ ಟಿಪ್ಪಣಿಗಳು ಹೀಗಿವೆ:

ಪಪ್ರಥಮ ಮೀಟಿಂಗ್, ಯುಟೋಕ್ಸಿಟರ್: (L-R)ಉಮಾ, ವತ್ಸಲಾ, ಕೇಶವ, ಪ್ರಸಾದ್, ಶ್ರೀವತ್ಸ ಫೋಟೋ ಕೃಪೆ: ಕೇಶವ-ಶ್ರೀವತ್ಸ

To discuss;

 1. Mission statement
 2. Constitution:

Who will be members? How to admit? What is our commitment?

3, Communication; How, where to meet?

4, E- magazine? Blog (ಆಗ ತಾನೆ ನಮಗೆ ಬ್ಲಾಗ್ ದ ಕಲ್ಪನೆ ಬರುತ್ತಲಿತ್ತು) How to publish? ನಮಗಾರಿಗೂ ಅನುಭವವಿರಲಿಲ್ಲ. ಬಹುತೇಕ ಎಲ್ಲರಿಗೂ Baraha software ಉಪಯೋಗಿಸಿ ಗೊತ್ತಿತ್ತು. ಆದರೆ ಹೇಗೆ ಪ್ರಕಟಿಸುವದು, ಯಾರಿಗೂ ಗೊತ್ತಿರಲಿಲ್ಲ. (ಶಿಶುವಿನ ಅಂಬೆಗಾಲಿನ ಕ್ಷಣಗಳಿವು. ಈಗ ಇದೆಲ್ಲ ಅತಿ ಸುಲಭ ಅಥವಾ ಹಾಸ್ಯಾಸ್ಪದ ಅನಿಸಿದರೂ ಆಗ ಪ್ರತಿಯೊಂದು ಸಣ್ಣ mole hill ಸಹ ಮೇರುಪರ್ವತವಾಗಿ ಕಾಣುತ್ತಿತ್ತು!)

 1. Money?
 2. Membership: Who all can join? Resignation/termination (this was a very far sighted thought, or premonition because it was to haunt us 5 years later!) ಯಾಕಂದರೆ ನಾನು 20 ವರ್ಷಗಳಿಂದಲೂ ನಮ್ಮೂರಿನ ಒಂದು ವಿಡಿಯೋ ಕ್ಲಬ್ಬಿನ ಸದಸ್ಯನಾಗಿದ್ದೆ. ಅದರ Constitution ದಲ್ಲಿಯೂ ಆ ವಿಷಯದ ಪ್ರಸ್ತಾಪವಿತ್ತು!).

ಚೊಚ್ಚಲು ’ಸಭೆ’

ನಾವು ಕೂಡಿದ ಸ್ಥಳ ಒಂದು ಸಾಮಾನ್ಯ ಮೋಟರ್ವೇ ಸರ್ವಿಸಸ್ ಆಗಿತ್ತು. ನಿಗದಿತ ಸಮಯದಲ್ಲಿ ನಾವೆಲ್ಲ ಬಂದು ಕೂಡಿದೆವು. ಅದು ನಮ್ಮ ಮೊದಲ ಭೇಟಿ. ನಾವು ಒಂದು ರೂಮು ಸಹ ತೆಗೆದುಕೊಡಿರಲಿಲ್ಲ. ಲಭ್ಯವಿತ್ತೋ ಇಲ್ಲವೋ ಗೊತ್ತಿಲ್ಲ. ಒಂದು ಮೂಲೆಯ ಟೇಬಲ್ ಸುತ್ತ ಕುಳಿತು ಶುರುಮಾಡಿದೆವು. ಉಮಾ ಅವರು ತಮ್ಮ ಪೀಠಿಕೆಯಲ್ಲಿ ಮೇಲಿನ ವಿಚಾರಗಳ ಹಿನ್ನೆಲೆ ಕೊಟ್ಟಂತೆ ನೆನಪು.

ನಾಮಕರಣ: ನಮ್ಮ ವಿಚಾರ ವೇದಿಕೆಯನ್ನು ಏನೆಂದು ಕರೆಯುವದು? ಅದರಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಎರಡೂ ಪ್ರಮುಖವಾಗಿರಬೇಕು. ಉದ್ದವಾದರೂ, ಬಾಯಿ ತುಂಬಿದರೂ, ದೀರ್ಘ ಚರ್ಚೆಯಾದ ನಂತರ ಕೊನೆಗೆ ಎಲ್ಲರೂ ಒಪ್ಪಿದ್ದು: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ! ನಂತರ Mission statement ಮತ್ತು ಉದ್ದೇಶಗಳ ಬಗ್ಗೆ ಚರ್ಚೆಯಾಗಿತು. (ಅವನ್ನು ಕನ್ನಡದ ”ಅನಿವಾಸಿ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇವೆ).

ಪ್ರಕಟಣೆ:

ತಾಂತ್ರಿಕ ಪಟು ಕೇಶವ ಅವರ ಸಲಹೆ ಇಲ್ಲಿ ಅಮೂಲ್ಯವಾಗಿತ್ತು. ಅವರಿಗೆ ತಮ್ಮದೇ ಒಂದು ಬ್ಲಾಗ್ ಕೆಲಕಾಲದಿಂದಲೂ ಸಂಭಾಳಿಸಿದ ಅನುಭವವಿತ್ತು. ನಮ್ಮ ಕಿಸೆಯಲ್ಲಿ ಮುಂಗಡ ಹಣ ಇಲ್ಲ. ಇಂಟರ್ನೆಟ್ ನಲ್ಲಿ ಫ್ರೀ ಪೋರ್ಟಲ್ ಗಳು ಬಹಳ ಇವೆ, ಉದಾ: ವರ್ಡ್ ಪ್ರೆಸ್. ಎಂದರು ಕೇಶವ. ಅವಧಿ ಇತ್ಯಾದಿ ಟೈಟಲ್ ಗಳ ಪರಿಚಯ ಮಾಡಿಸಿದರು. ಬರಹಗಳನ್ನು ಮೊದಲು ತಿಂಗಳಿಗೊಮ್ಮೆ ಪ್ರಕಟಿಸುವ ವಿಚಾರವಿತ್ತು. ಮ್ಯಾಗಝಿನ್ ”ಕಸಾಸಾಂವಿವೇ” KSSVV ಎನ್ನುವ ಹೆಸರಿನಲ್ಲೇ ಪ್ರಾರಂಭವಾಯಿತು.. ಮುಂದಿನ ಘಟ್ಟದಲ್ಲಿ ಬುಕ್ ಕ್ಲಬ್ ಸ್ಥಾಪಿಸುವ ವಿಚಾರ ಅಂದೇ ಸುಳಿದಿದ್ದರೂ ಆ ಯೋಜನೆ ಬಹುಸಮಯದ ವರೆಗೆ ಕೈಗೂಡಲಿಲ್ಲ.

ಸುಮಾರು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಚರ್ಚಿಸಿದ್ದಾಯಿತು. ಎಲ್ಲರಲ್ಲಿ ಒಂದು ಹೊಸ ಉತ್ಸಾಹ ತುಂಬಿ ತುಳುಕುತ್ತಿತ್ತು. ಏನೋ ಹೊಸ ದಾರಿಯ ನಾಂದಿ ಹಾಕಿದಂಥ ಅನುಭವ! ಎಲ್ಲರೂ ತಮ್ಮ ತಮ್ಮ ಈ-ಮೇಲ್ ವಿಳಾಸ, ಟೆಲಿಫೋನ್ ನಂಬರು ವಿನಿಮಯ ಮಾಡಿಕೊಂಡು ಆ ಭೇಟಿಯ ನೆನಪಿನಗಾಗಿ ಒಂದು ಗ್ರುಪ್ ಫೋಟೊ (Photo1)ತೆಗೆಸಿಕೊಂಡು ತಿಂಡಿ ತಿಂದು ಒಬ್ಬರನ್ನೊಬ್ಬರು ಬೀಳ್ಕೊಟ್ಟೆವು.

PS: ಆಗ ತಾನೇ ಈ ದೇಶದಲ್ಲಿ ಪಾರ್ಕಿಂಗ್ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮರಾಗಳ ಸ್ಥಾಪನೆಯಾಗಿತ್ತು. ನಮ್ಮ ಕೂಟ ಎರಡು ಗಂಟೆಯ ಗಡವು ದಾಟಿದ್ದರಿಂದ ಒಂದು ವಾರದ ನಂತರ ನನ್ನ ಮನೆಯ ಟಪಾಲಿನಲ್ಲಿ ತೊಂಬತ್ತು ಪೌಂಡಿಗಳ ಫೈನ್ ನೋಟಿಸ್ ಬಂದು ಬಿದ್ದಿತ್ತು. ಜಾಲಜಗುಲಿ ವರ್ರ್ಡ್ ಪ್ರೆಸ್ಸಿನ ಮೂರು ವರ್ಷಗಳ ಚಂದಾ ನಾನೇ ತೆತ್ತ ಲೆಕ್ಕ. ಆದರೂ ಮನಸ್ಸಿಗೆ ಏನೂ ಬೇಜಾರಾಗಲಿಲ್ಲ. ಇಂಥ ಶುಭಾರಂಭವಾದಮೇಲೆ ಅದೊಂದು ಬರೀ ದೃಷ್ಟಿ ಬೊಟ್ಟು ಅಂತ ಸಮಾಧಾನ ಪಟ್ಟುಕೊಂಡೆ!

ಲೇಖನ ಮತ್ತು ಚಿತ್ರಗಳು: ಶ್ರೀವತ್ಸ ದೇಸಾಯಿ

 (ಮುಂದಿನ ವಾರ -ಅನಿವಾಸಿ ನದೆದುಬಂದ ಹಾದಿ… ಭಾಗ ೨)

 

15 thoughts on “’ಅನಿವಾಸಿ’ (KSSVV) ನಡೆದು ಬಂದ ದಾರಿ ಭಾಗ -1 ಡಾ. ಶ್ರೀವತ್ಸ ದೇಸಾಯಿ ಬರೆದ ಲೇಖನ

 1. ಕ.ಸಾ.ಸಂ.ವಿ.ವೇ.ಹುಟ್ಟಿ, ಬೆಳೆದು ಬಂದ, ಅನಿವಾಸಿ ಜಾಲ ಜಗುಲಿಯ ಬೆಳವಣಿಗೆ ಓದಿ ಅಖಂಡ ಆನಂದ , ಹೇಳಲಾಗದ ಅಭಿಮಾನದ ಭಾವನೆಗಳ ಹೊಳೆಯಲ್ಲಿ ಮುಳುಗಿ ತೇಲಾಡಿದೆ ನಾ.ಯಾವುದೇ ವೇದಿಕೆ ಹುಟ್ಟು ಹಾಕಿದರೂ ಅದರ ಪಾಲನೆ, ಪೋಷಣೆ ,ಅದನ್ನು ಅಭಿವೃದ್ಧಿ ಗೊಳಿಸುವ ಪ್ರಕ್ರಿಯೆ ಅಷ್ಟು ಸುಲಭವಲ್ಲ.ಅದನ್ನು ಇಷ್ಟು ಫಲವತ್ತಾಗಿ ಬೆಳೆಸಿರುವುದನ್ನು ನೋಡಿ ಸಂತೋಷ ಮುಮ್ಮಡಿ, ನೂರ್ಮಡಿ.ಈ ಅನಂತ ಆಸಕ್ತಿ, ಅಭಿಮಾನ ಅನಿವಾಸಿಗಳ ಮೌಲ್ಯಗಳ ಪೋಷಣೆ ಗೆ ಏನು ಹೇಳಲಿ ಗೊತ್ತಿಲ್ಲ ನನಗೆ.ಮಾತು ಮರೆತ ಮೂಕ ಮನ ನಂದು.ಶ್ರೀವತ್ಸ ದೇಸಾಯಿ ಯವರ ಬರಹ, ಪ್ರೇಮ ಲತಾ ಅವರ ಪ್ರಸ್ತಾವನೆ ಒಂದು ಹೊಸ ಲೋಕ ತೆರೆದ ಅನುಭವ.ಮೂರು ವರುಷಗಳಿಂದ ಅನಿವಾಸಿ ಓದುಗಳಾಗಿ, ಒಂದೆರಡು ಲೇಖನ ಬರೆದದ್ದು ನನಗೆ ಅಮಿತಾನಂದ. ಅನಿವಾಸಿ ಜಾಲ ಜಗುಲಿಗೆ ಸಂಸ್ಥಾಪಕ ಬಳಗಕ್ಕೆ, ಅದರ ಅಭಿವೃದ್ಧಿ ಗೆ ,ಶ್ರೀಮಂತಗೊಳಿಸಲು ಶ್ರಮಿಸುತ್ತಿರುವ ಸಮಸ್ತ ಅನಿವಾಸಿ ಬಳಗಕ್ಕೆ ನನ್ನ ಅನಂತಾನಂತ ವಂದನೆಗಳು, ಧನ್ಯವಾದಗಳು.ಶುಭ ಹಾರೈಕೆಗಳು ಈ ಶುಭ ಗಳಿಗೆಯಲ್ಲಿ.ಮುಂದಿನ ಕಂತುಗಳಿಗೆ ಕಾಯುತ್ತಿರುವೆ ಕಾತುರಳಾಗಿ.
  ಸರೋಜಿನಿ ಪಡಸಲಗಿ

  Liked by 1 person

  • ಧನ್ಯವಾದಗಳು, ಸರೋಜಿನಿಯವರೇ! ನಿಮ್ಮ ಸತತ ಪ್ರತಿಕ್ರಿಯೆಗಳಿಂದ ನೀವು ಪ್ರತಿ ವಾರವೂ ಅನಿವಾಸಿಯನ್ನು ತಪ್ಪದೆ ಓದುವ ಅಭಿಮಾನಿಗಳೆಂದು ಗೊತ್ತಾಗಿದೆ. ನಿಮ್ಮ ಆಸ್ಥೆಯನ್ನು ಮೆಚ್ಚಿದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಯಾವುದೇ ಸಂಘಟನೆಯೂ ಒಬ್ಬಿಬ್ಬರಿಬ್ಬರಿಂದ ಆಗುವ ಕೆಲಸವಲ್ಲ. ಈ ಹಿನ್ನೋಟದೊಂದಿಗೆ ನಮಗೆ ಸಾಥ್ ಕೊಟ್ಟವರೆಲ್ಲರನ್ನೂ ನೆನೆಯುವದೇ ಇದರ ಉದ್ದೇಶ. ಸ್ಥಳಾನುಭಾವದಿಂದ ಕೆಲ ವಿಷಯಗಳು, ಮತ್ತು ಹೆಸರುಗಳು ಪ್ರಾಮುಖ್ಯತೆ ಪಡೆಯದೆ ಹೋಗುವದು ಅನಿವಾರ್ಯ. ಅವರೆಲ್ಲರೂ ಸಹಿಸಿಕೊಳ್ಳುತ್ತಾರೆಂದು ತಿಳಿದುಕೊಂಡಿದ್ದೇನೆ್ ಮತ್ತು ಅವರ ನಿಸ್ಪೃಹತೆಯನ್ನು ನೆನೆಯುತ್ತೇನೆ.

   Like

 2. Vinathe says,

  Wow, ದೇಸಾಯಿಯವರೇ, the article is full of such wonderful memory mile stones! I was so happy to come across newly launched ಅನಿವಾಸಿ ಜಾಲಜಗುಲಿ back in 2014 when I myself had arrived in England to live. I wrote enthusiastically, and ಅನಿವಾಸಿ appreciated it. I only had phone-conversed with Uma, had met you once in Doncaster, and didn’t know anyone else before I took up editing of ಅನಿವಾಸಿ in September 2016. Memories to cherish!
  Recollection of ಅನಿವಾಸಿ growth is testimony to its solid team work. Hats off to you for keeping it going, and growing it with much effort and commitment. Cheers from sunny Brisbane!
  Vinathe

  Like

  • Thank you, Vinathe avare.
   Anivaasi brand is no one man band but a team of talented players, who all are making it possible and we count on their support and encourage those wanting to give hand and welcome them. Many editors, including you, have brought breath of fresh air and we nee that oxygen even more! Greetings to sunny Brisbane from crisp S Yorks!

   Like

 3. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ನಡೆದು ಬಂದ ದಾರಿ ನನಗೆ ನೆನಪಿನಲ್ಲಿದ್ದರೂ ಅದು ಹುಟ್ಟಿಕೊಂಡ ಹಿನ್ನೆಲೆ ಮತ್ತು ರೂಪ ತಳೆದ ವಿವರಗಳು ಮರೆತು ಹೋಗಿತ್ತು. ಶ್ರೀವತ್ಸ ಅವರು ಇದನ್ನು ನೆನ್ನೆ ನಡೆದಂತೆ ನೆನಪಿನಲ್ಲಿಟ್ಟುಕೊಂಡು ಎರಡು ಕಂತಿನಲ್ಲಿ ಬರೆದಿದ್ದಾರೆ . ಈ ವೇದಿಕೆಯ ಬಗ್ಗೆ ಅವರಿಗಿರುವ ಒಲವು ಮತ್ತು ಕಾಳಜಿಗಳನ್ನು ಗುರುತಿಸಬಹುದು. ಎಲ್ಲರನ್ನು ಒಂದುಗೂಡಿಸಿ ಬರೆಯಲು ಉತ್ತೇಜಿಸಿ ಹೊಸ ಪ್ರತಿಭೆಗಳನ್ನು ವೇದಿಕೆಗೆ ತಂದ ಕೀರ್ತಿ ಅವರಿಗೆ ಸಲ್ಲಬೇಕು.

  Like

  • ನಾನು ವರದಿಗಾರ ಅಷ್ಟೇ. ನಿಮ್ಮನ್ನೂ ಕೂಡಿಸಿ ಬೆಂಬಲ ಕೊಟ್ಟವರು, ಪೋಷಿಸಿದವರು, ದುಡಿದವರು ಅನೇಕ ಅಭಿಮಾನಿಗಳು, ಕನ್ನಡವೇ ಜೀವ ಎಂದು ಬೆಳೆದವರು, ಪ್ರತಿಭಾವಂತರು, ನಿಸ್ವಾರ್ಥಿಗಳು ಇವರೆಲ್ಲ ಇರುವಾಗ ಚೆನ್ನಾಗಿದೆ ಎನಿಸುತ್ತದೆ. We all are in it together. ಶ್ರೀವತ್ಸ ದೇಸಾಯಿ

   Like

 4. ಅನಿವಾಸಿ ವೇದಿಕೆಯ ಹುಟ್ಟು, ಬೆಳವಣಿಗೆ ಮತ್ತು ಪಾಲನೆ ಪೋಷಣೆಗಳ ವೃತ್ತಾಂತ ನಿಜಕ್ಕೂ ಆಸಕ್ತಿಪೂರ್ಣವೆನ್ನಬಹುದು. ಒಂದು ವೇದಿಕೆಯನ್ನು ಹುಟ್ಟು-ಹಾಕುವುದು ಎಷ್ಟು ಪ್ರಯಾಸಕರವೋ, ಅದನ್ನು ಪಾಲಿಸಿ ಪೋಷಿಸಿ ನಡೆಸುವುದು ಸಹ ಅಷ್ಟೇ ಸವಾಲಿನ ಕಾರ್ಯ. ಇದರ ಹುಟ್ಟಿನಲ್ಲಿ ನಾವು ಕೆಲವೇ ಮಂದಿ ಇದ್ದರೂ, ಅದನ್ನು ಪಾಲಿಸಿ ಪೋಷಿಸಲು ಅನೇಕರು ಕಾರಣರು ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ವೇದಿಕೆಯ ಬೆಳವಣಿಗೆಯಲ್ಲಿ ಈಗ ಅನೇಕರಿದ್ದಾರೆ ಎನ್ನುವ ಸಂಗತಿ, ಇದರ ಯಶಸ್ಸಿನ ಕಥೆಯನ್ನು ಹೇಳುತ್ತಿದೆ. ಈ ವೇದಿಕೆಯನ್ನು ಸ್ಥಾಪಿಸುವಾಗ ನಮ್ಮ ಮನದಲ್ಲಿ ಯಾವ ಉದ್ದೇಶಗಳಿದ್ದವೋ, ಅದರಲ್ಲಿ ಬಹಳಷ್ಟು ಅಂಶಗಳನ್ನು ನಾವೀಗ ಸಾಧಿಸಿದ್ದೇವೆ ಅನ್ನಿಸುತ್ತಿದೆ. ವೇದಿಕೆಯ ಮುಂದಿನ ಪೀಳಿಗೆ ಈಗಾಗಲೇ ಇದರ ಪೋಷಣೆಯಲ್ಲಿ ಬಹಳ ತುಂಬು ಮನಸ್ಸಿನಿಂದ ಪಾಲ್ಗೊಂಡಿದ್ದಾರೆ ಅನ್ನುವ ವಿಷಯ ನಿಜಕ್ಕೂ ಸಂತಷದ ಸಂಗತಿ. ಹಲವು ಸಮರ್ಥ ಭುಜಗಳ ಮೇಲೆ ಸವಾರಿ ನಡೆಸುತ್ತಿರುವ ಈ ವೇದಿಕೆಯಲ್ಲಿ ಹೀಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಸೇವೆ ಮುಂದುವರೆಯಲಿ ಎಂದು ಹಾರೈಸುವೆ.
  ಉಮಾ ವೆಂಕಟೇಶ್

  Liked by 1 person

 5. Gopala Krishna Hegade says,
  Good morning Premalata avare.. being new and newie to this group I felt bit like a second generation Anivaasi..being not sure of many things here..
  this and and the next article probably has something for me that I have been looking and think to ask in the last few weeks.. will read with interest 🙏

  Liked by 1 person

  • Dear GKHegde,
   Anivaasi welcomes you and all newbies with open arms! As stated by many here younger and able shoulders are to carry it further. Do not hesitate to ask any of us by writing or phone to get involved. Shrivatsa

   Like

 6. Gouri prasanna says,
  ಬಹಳ ಚೆನ್ನಾಗಿ ಮೂಡಿಬಂದಿದೆ ಲೇಖನ..ಯಾವುದೇ ಒಂದು ಸಂಘ ಸಂಸ್ಥೆಯನ್ನು ಯಾವುದೇ ಲಾಭವಿಲ್ಲದೇ ಕೇವಲ ಸಾಹಿತ್ಯ – ಸಂಸ್ಕೃತಿಗಳಿಗಾಗಿ ಅದೂ ಈ ನೆಲದಲ್ಲಿ ಹುಟ್ಟು ಹಾಕಿ ಇಷ್ಟರಮಟ್ಟಿಗೆ ಬೆಳೆಸುವುದೆಂದರೆ ಕಡಿಮೆ ಸಾಹಸದ ಮಾತಲ್ಲ…ಯುಟೋಕ್ಸಿಟರ್ ನ ಮೋಟರ್ ಸವೀ೯ಸ್ ಸ್ಟೇಶನ ನಲ್ಲಿ ಜನ್ಮತಳೆದ ಇದಕ್ಕೀಗ ಐದು ತುಂಬುತ್ತಿದೆ..ತುಂಬ ಸಂತೋಷ.ಅಭಿನಂದನೆಗಳು.ಕ್ರಮಿಸಿದ ದಾರಿಯ ಪಕ್ಷಿನೋಟ ಆಸಕ್ತಿದಾಯಕವಾಗಿದೆ.ಮುಂದಿನ ಭಾಗಗಳಿಗಾಗಿ ಕಾಯುವಂತಿದೆ.

  Like

  • ಗೌರಿ ಪ್ರಸನ್ನ ಅವರೆ, ನಿಮ್ಮ ನಲ್ವಾತುಗಳಿಗೆ ಋಣಿ. ಆಶ್ಚರ್ಯವೆಂದರೆ ನಿಮ್ಮ ‘ಗುರ್ಮಿಟ್ ದನಿ’ಯಿಂದ ನಮಗೆಲ್ಲ ಈಗಾಗಲೆ ಪರಿಚಯವಾದಂತೆ ಭಾಸವಾಗುತ್ತಿದೆ! ನೀವು ಮತ್ತೆಲ್ಲ ಹೊಸಪರಿಚಿತರು ಸಕ್ರಿಯವಾಗಿ ಪಾಲ್ಗೊಂಡು ಅನಿವಾಸಿ ಬಳಗವನ್ನು ಬೆಳೆಸಬೇಕೆಂಬ ಆಶಯ ನಮ್ಮದು!

   Like

 7. ನಾವೆಲ್ಲರೂ ಈ ಸಮಯದಲ್ಲಿ ನಮ್ಮ ಆತ್ಮೀಯ ಗೆಳಯ ಕನ್ನಡ ಪ್ರೇಮಿ ದಿವಂಗತ ರಾಜಾರಾಮ್ ಕವಳೆ

  ಅವರನ್ನು ಸ್ಮರಿಸಬೇಕು. ಅವರು ಸಂದೇಶದ ಸಂಪಾದಕರಾಗಿದ್ದರು ಮತ್ತು ಕನ್ನಡ ಟೈಪ್ ರೈಟರ್ ಮೊದಲು ಉಪಯೋಗಿಸಿದ್ದು

  Liked by 1 person

  • ನಿಜ, ರಾಮಮೂರ್ತಿಯವರೇ. ಅವರ ಕೊಡುಗೆಯನ್ನು ಈ ಸಮಯದಲ್ಲಿ ಹೇಗೆ ಮರೆಯಲು ಸಾಧ್ಯ? ಉಮಾ ವೆಂಕಟೇಶ್ ಅವರು ಮೇಲೆ ಬರೆದಂತೆ ಅವರೂ ಮಹಾ ಪೋಷಕರಾಗಿದ್ದರು. ನಮ್ಮ ‘ಅನಿವಾಸಿ ಅಂಗಳದಿಂದ’ ಪುಸ್ತಕವನ್ನು ಅವರಿಗೆ ಅರ್ಪಿಸಿದ ವಿಷಯ ಮುಂದಿನ ಕಂತಿನಲ್ಲಿ ಬರಲಿದೆ. ಈಗಾಗಲೆ ನಿಮ್ಮ ಮತ್ತು ಉಳಿದ ಅನಿವಾಸಿ ಸದಸ್ಯರೊಡನೆ ಅವರ ಮೊದಲ ‘ಟೈಪ್ಪಿಸಿದ’ ಪತ್ರವನ್ನು ವಾಟ್ಸಪ್ಪಿನಲ್ಲಿ ಹಂಚಿಕೊಂಡುದೂ ಅವರಿಗೊಂದು ಟ್ರಿಬ್ಯೂಟ!

   Like

 8. ಪ್ರೇಮಲತಾ ಅವರ ಪರಿಚಯ ಮತ್ತು ದೇಸಾಯಿ ಅವರ ಸೂಕ್ಷ್ಮತೆ ಮತ್ತು ವಿವರಣೆ… ‘ಅನಿವಾಸಿ’ಗೆ ನೀವಿಬ್ಬರೂ ಅತ್ಯಂತ ಪ್ರಮುಖ ಆಧಾರಸ್ತಂಭರು.

  ಪ್ರೇಮಲತಾ ಅವರ ಪರಿಚಯ ಲೇಖನದಲ್ಲಿ‌ ಬರೆದಿರುವಂತರ ದೇಸಾಯಿಯವರು ಅನಿವಾಸಿಯ ಆರಂಭದಿಂದ ಪುಟ್ಟ ಮಗುವನ್ನು ನೋಡಿಕೊಂಡಂತೆ ‘ಅನಿವಾಸಿ’ಯನ್ನು ನೋಡಿಕೊಳ್ಳುತ್ತಿದ್ದಾರೆ, ಅದರ ನೆನಪುಗಳನ್ನು ಅಷ್ಟೇ ಜತನದಿಂದ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಅವರ ಉತ್ಸಾಹ ನಮಗೂ ತಾಗಲಿ ಎಂದು ಆಶಿಸುತ್ತೇನೆ.

  ‘KSSVVಯ ಆರಂಭದ ದಿನಗಳ ನೆನಪುಗಳನ್ನು ಸ್ಫುಟವಾಗಿ ತೆರೆದಿಟ್ಟಿದ್ದಾರೆ.

  ಧನ್ಯವಾದಗಳು.

  ಕೇಶವ

  Like

 9. Enjoyed reading the story of “Anivasi Huttu”- Thanks to all the efforts of the gifted creative persons behind, we now have thoughtful and interesting Kannada articles to read every Friday mornings . Look forward to reading more !

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.