ಸಕ್ಕರೆ ಸವಿಯ ಜಾನಕಿ ಅಮ್ಮಾಳ್ – ಡಾ. ಉಮಾ ವೆಂಕಟೇಶ್

♥ಅನಿವಾಸಿಗೀಗ ಐದು ವರ್ಷಗಳ ಹರ್ಷ♥

(ಉಮಾ ವೆಂಕಟೇಶರ ಪರಿಚಯ ನಮ್ಮಲ್ಲಿ ಹಲವರಿಗಿದೆ. ಉತ್ಸಾಹದ ಬುಗ್ಗೆಯಂತೆ ಮಾತಾಡುವ ಉಮಾರವರು ಹಲವಾರು ಮಹಿಳಾ ಸಂಶೋಧಕರ ಮತ್ತು ಸಾಧಕರ ವಿಚಾರವಾಗಿ ಬಹಳಷ್ಟು ಬರೆದಿದ್ದಾರೆ.  ಕೆಲವು ವರ್ಷಗಳ ಕಾಲ ಯು.ಕೆ. ಯಲ್ಲಿದ್ದ ಇವರು ಈಗ ಅಮೆರಿಕಾ ವಾಸಿ. ಜಗತ್ತಿನ ಹಲವೆಡೆ ಬದುಕಿ ಲೋಕಾನುಭವ ಪಡೆದವರು. ಇವರ ಮಕ್ಕಳು ಇಂದಿಗೂ ಇಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿವಾಸಿಯ ಶುರುವಾತಿನಲ್ಲಿ ಇವರ ಪಾತ್ರವೂ ಇದೆ.  ಇವರ ಪರಿಚಯವನ್ನು ಇವರ ಬರಹದ ಮೂಲಕವೇ ಓದೋಣ- ಸಂ )

ಸ್ವ- ಪರಿಚಯ

ನನಗೆ ಮೊದಲಿಂದಲೂ ಸಸ್ಯಗಳ ಮೇಲೆ ಅಸ್ಥೆ. ಬಾಲ್ಯದಲ್ಲಿ ನಮ್ಮ ಮನೆಯ ತೋಟದಲ್ಲಿ ನನ್ನ ತಾಯಿ ಬೆಳೆಸಿದ್ದ ಅನೇಕ ವಿಧದ ಹೂ, ತರಕಾರಿ ಹಣ್ಣುಗಳ ಗಿಡಗಳ ಪರಿಸರದಲ್ಲಿ, ಮೈಸೂರಿನಂತಹ ಸುಂದರ, ಶಾಂತ ವಾತಾವರಣದಲ್ಲಿ ಬೆಳೆದ ನನಗೆ, ಮುಂದೆಯೂ ಈ ಆಸಕ್ತಿ ವರ್ಧಿಸಿತೇ ಹೊರತು ಕಡಿಮೆಯಾಗಲಿಲ್ಲ. ಮುಂದೆ ನನ್ನ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಡಿಗ್ರಿಗಳನ್ನು ಸಂಪಾದಿಸಿದ ನನಗೆ ಇಂದಿಗೂ ಸಸ್ಯಗಳ ಮೋಹ ತಪ್ಪಿಲ್ಲ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನನಗೆ ಸಸ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಡಿ. ಪದ್ಮಕುಮಾರ್ ಅವರ ತರಗತಿಗಳು ನಿಜಕ್ಕೂ ನನ್ನ ಆಸೆಗೆ ಮತ್ತಷ್ಟು ಉತ್ತೇಜನ ನೀಡಿತೆನ್ನಬಹುದು. ಸಸ್ಯಗಳ ಮನಮೋಹಕ ಜೀವನ ಶೈಲಿಯ ಬಗ್ಗೆ ತಮ್ಮ ವರ್ಣನೆಯನ್ನು ಅತ್ಯಂತ ಆಸಕ್ತಿಪೂರ್ಣ ರೀತಿಯಲ್ಲಿ ನಮ್ಮ ಮನಮುಟ್ಟುವಂತೆ ತಿಳಿಸುತ್ತಿದ್ದ ಪದ್ಮಕುಮಾರ್ ಇಂದಿಗೂ ನನ್ನ ನೆನಪಿನಲ್ಲಿ ಸುಳಿಯುತ್ತಲೇ ಇರುತ್ತಾರೆ.

ಸಸ್ಯಶಾಸ್ತ್ರದಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಮಾನಸ ಗಂಗೋತ್ರಿಯಲ್ಲಿ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿದಾಗ, ಪದ್ಮಕುಮಾರ್ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಮೊರೆಯುತ್ತಲೇ ಇವೆ. “ರೀ ನೀವೆಲ್ಲಾ ಬಾಟನಿ ಕಲಿಯಕ್ಕೆ ತುಂಬಾ ಆಸೆ ಇಟ್ಟುಕೊಂಡು ಗಂಗೋತ್ರಿ ಮೆಟ್ಟಿಲು ಹತ್ತುತ್ತೀರಿ; ಆದರೆ ಅಲ್ಲಿನ ಹೊಲಸು ಜಾತಿಯ ರಾಜಕಿಯಕ್ಕೆ ಬಲಿಯಾದಾಗ ನಿಜಕ್ಕೂ ಭ್ರಮನಿರಸನವಾಗತ್ತೆ.” ಇದು ನೂರಕ್ಕೆ ನೂರು ಸತ್ಯವಾಗಿದ್ದ ಮಾತುಗಳಾಗಿತ್ತು. ಅಲ್ಲಿನ ಎಲ್ಲಾ ರಾಜಕೀಯವನ್ನೂ ಮೆಟ್ಟಿ, ಹಾಗೂಹೀಗೂ ಪದವಿ ಮುಗಿಸಿ, ಮುಂದೆ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಬಹಳ ಕಷ್ಟಪಡುತ್ತಲೇ ಮುಗಿಸಿದೆ. ಎನಾದರೂ ಸರಿ, ಇಂದು ಅಮೆರಿಕೆಯಲ್ಲಿ ಪೆನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಮತ್ತೊಮ್ಮೆ ಇದೇ ಸಸ್ಯಶಾಸ್ತ್ರದಲ್ಲಿ ನನ್ನ ಸಂಶೋಧನೆಯನ್ನು ಮುಂದುವರೆಸುತ್ತಲೇ ಇರುವೆ. ನಾನೂ ಭಂಡಳೇ ಸರಿ. ಸಸ್ಯಗಳ ಬಗ್ಗೆ ನನಗಿರುವ ಮೋಹವೇ ಇದಕ್ಕೆ ಕಾರಣವೇನೋ! ಮೊನ್ನೆ ಯಾರೋ ಫ಼ೇಸ್-ಬುಕ್ಕಿನಲ್ಲಿ ಪ್ರಸಿದ್ಧ ಭಾರತೀಯ ಸಸ್ಯಶಾಸ್ತ್ರಜ್ಞೆ ಡಾ ಜಾನಕಿ ಅಮ್ಮಾಳ್ ಅವರ ಬಗ್ಗೆ ಲೇಖನವೊಂದನ್ನು ಹಂಚಿಕೊಂಡಿದ್ದರು. ಅದನ್ನು ಓದುತ್ತಲೇ ನನ್ನ ಮನ ರೋಮಾಂಚನಗೊಂಡಿತು. ಈಗ ಸುಮಾರು ೬೦ ವರ್ಷಗಳ ಹಿಂದೆ, ಭಾರತದಲ್ಲಿದ್ದ ಎಲ್ಲಾ ವ್ಯತರಿಕ್ತ ಪರಿಸ್ಥಿತಿಗಳಲ್ಲೂ ಛಲ ಬಿಡದೆ ತಮ್ಮ ಸಂಶೋಧನೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದಿದ್ದ ಮಹಾನ್ ಮಹಿಳೆಯ ಬಗ್ಗೆ ನಮಗೆ ಸರಿಯಾಗಿ ಏನೂ ತಿಳಿದಿಲ್ಲವಲ್ಲಾ ಎನ್ನುವುದನ್ನು ನೆನೆಸಿಕೊಂಡು ನಾಚಿಕೆಯಾಯಿತು. ಇದರಲ್ಲಿ ನಮ್ಮ ತಪ್ಪೇನೂ ಇಲ್ಲಾ. ಸಸ್ಯಶಾಸ್ತ್ರವನ್ನು ಅಭ್ಯಸಿಸುವಾಗ, ಯಾವ ಮಟ್ಟದಲ್ಲೂ ಈಕೆಯ ಸಾಧನೆಗಳ ಬಗ್ಗೆ ನಮ್ಮ ಯಾವ ಶಿಕ್ಷಕರೂ ತಿಳಿಸಿರಲಿಲ್ಲ. ಇದು ನಿಜಕ್ಕೂ ಅನ್ಯಾಯವಾದ ಸಂಗತಿಯಲ್ಲವೇ? ಕೇವಲ ಪುರುಷರ ಸಾಧನೆಗಳನ್ನೇ ಎತ್ತಿಹಿಡಿಯುತ್ತಾ, ಮಹಿಳೆಯರನ್ನು ಕಡೆಗಣಿಸುತ್ತಿದ್ದ ಕಾಲವದು. ಹಾಗಾಗಿ ನಮಗೆ ಬಿ.ಜಿ.ಎಲ್. ಸ್ವಾಮಿ, ಪಂಚಾನನ್ ಮಾಹೇಶ್ವರಿ ಹಾಗೂ ಬೀರಬಲ್ ಸಹಾನಿ ಅವರ ಬಗ್ಗೆ ತಿಳಿದಿತ್ತೇ ಹೊರತು, ಜಾನಕಿ ಅಮ್ಮಾಳ್ ಹೆಸರನ್ನು ಕೇಳಿಯೇ ಇರಲಿಲ್ಲ.

೩೦ರ ದಶಕದಲ್ಲೇ, ತನ್ನ ಮಹತ್ವದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದ ಆಕೆಯ ಬಗ್ಗೆ ಲೇಖನ ಓದಿದೊಡನೆ ಅದನ್ನು ಕೂಡಲೇ ಕನ್ನಡಕ್ಕಿಳಿಸುವ ಮನಸ್ಸಾಯಿತು. ಅದರ ಫಲವೇ ಈ ಲೇಖನ!

 

ಸಕ್ಕರೆಯ ಸವಿಯನ್ನು ಇನ್ನಷ್ಟು ಸಿಹಿಗೊಳಿಸಿದ ಜಾನಕಿ ಅಮ್ಮಾಳ್

ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಮಹಿಳೆ!

 

೧೯೭೭ರಲ್ಲಿ ಪದ್ಮಶ್ರಿ ಪ್ರಶಸ್ತಿ ಗಳಿಸಿದ ಮೊದಲ ಮಹಿಳಾ ವಿಜ್ಞಾನಿ, ಎಡವಳೆತ್ ಕಕ್ಕಟ್ ಜಾನಕಿ ಅಮ್ಮಾಳ್ ಬಹಳ ಅಪರೂಪದ ಮಹಿಳೆ. ಆಕೆಯ ಸಮಕಾಲೀನ ಮಹಿಳೆಯರಲ್ಲಿ ಇಂತಹ ಸಾಧನೆಗೈದ ಹಲವರಲ್ಲಿ ಈಕೆಯೂ ಒಬ್ಬಳು. ಆ ಸಮಯದಲ್ಲಿ ಭಾರತೀಯ ಸ್ತ್ರೀಯರು ಹೈಸ್ಕೂಲಿನ ಮೆಟ್ಟಲನ್ನು ಹತ್ತುವುದೂ ದುಸ್ತರವೆನಿಸಿತ್ತು. ಅಂತಹ ಕಾಲದಲ್ಲಿ ಅಮೆರಿಕೆಯ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪಿ.ಎಚ್.ಡಿ ಪದವಿ ಪಡೆಯುವುದೊಂದೇ ಅಲ್ಲಾ, ಮುಂದೆ ಸಸ್ಯಶಾಸ್ತ್ರ ಸಂಶೋಧನೆಯ ಕ್ಷೇತ್ರಕ್ಕೆ ಅತ್ಯಂತ ಪ್ರಭಾವಶಾಲಿ ಹಾಗೂ ಮಹತ್ವದ ಕೊಡುಗೆಯನ್ನಿತ್ತ ಅಸಾಮಾನ್ಯ ಮಹಿಳೆ ಈಕೆ. ಇಂದಿಗೂ ಮಿಚಿಗನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ DSc. honoris causa ಪಡೆದ ಕೆಲವೇ ಏಶಿಯನ್ ಮಹಿಳೆಯರಲ್ಲಿ ಈಕೆಯೂ ಒಬ್ಬರು. ಈ ಅಪರೂಪದ ಸಾಧನೆಯನ್ನು ಆಕೆ ಗಳಿಸಿದ್ದು ೧೯೩೧ರಲ್ಲಿ!

ಒಬ್ಬ ಆದ್ಯ-ಪ್ರವರ್ತಕ ಸಸ್ಯಶಾಸ್ತ್ರಜ್ಞೆ ಹಾಗೂ ಕೋಶ-ತಳಿವಿಜ್ಞಾನಶಾಸ್ತ್ರಜ್ಞೆಯೆನಿಸಿದ್ದ ಜಾನಕಿ ಅಮ್ಮಾಳ್ ಅವರಿಗೆ, ಭಾರತದ ಕಬ್ಬಿನ ತಳಿಗಳಲ್ಲಿ ಸಿಹಿ ಅಂಶವನ್ನು ಹೆಚ್ಚಿಸಿದ ಕೀರ್ತಿ ಸಲ್ಲುತ್ತದೆ. ಇದರ ಜೊತೆಗೆ ಕೇರಳ ರಾಜ್ಯದಲ್ಲಿರುವ ಸೈಲೆಂಟ್ ವ್ಯಾಲಿಯಲ್ಲಿ ತಲೆಯೆತ್ತಿದ್ದ ಹೈಡ್ರೋ-ಎಲೆಕ್ಟ್ರಿಕ್ ಯೋಜನೆಯ ವಿರುದ್ಧವಾಗಿ ಧ್ವನಿ ಎತ್ತಿದ್ದಲ್ಲದೇ, ಹೂಬಿಡುವ ಸಸ್ಯಗಳ ಸಾವಿರಾರು ಪ್ರಭೇಧಗಳಲ್ಲಿ ಕ್ರೋಮೋಸೋಮುಗಳ ಬಗ್ಗೆ ನಡೆಸಿದ ಮಹತ್ವ ಸಂಶೋಧನೆಯೂ ಆಕೆಯ ಸಾಧನೆಗಳ ಪಟ್ಟಿಯಲ್ಲಿದೆ. ಆಕೆಯ ಈ ಅದ್ಭುತ ಕಾರ್ಯಕ್ಕೆ ಮನ್ನಣೆ ನೀಡುತ್ತಾ, ಸಂಪಿಗೆ ಜಾತಿಯ ಗಿಡದ ಒಂದು ಕೋಮಲ ಶ್ವೇತವರ್ಣದ ಪುಷ್ಪ ತಳಿಗೆ Magnolia Kobus Janaki Ammal ಎಂದು ನಾಮಕರಣ ಮಾಡಿದ್ದಾರೆ. ಆದರೂ, ಹೆಣ್ಣು ಮಗುವಿನ ಶಿಕ್ಷಣದ ಮೇಲೆ ಈಗ ಗಮನ ಹರಿಸುತ್ತಿರುವ ಭಾರತ ದೇಶದಲ್ಲಿ, ಇಂದಿಗೂ ಜಾನಕಿ ಅಮ್ಮಾಳ್  ನಡೆಸಿರುವ ಸಸ್ಯಶಾಸ್ತ್ರ ಸಂಶೋಧನೆ ಕಾರ್ಯಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವಿಲ್ಲದಿರುವುದು ದೌರ್ಭಾಗ್ಯವೇ ಸರಿ. ತನ್ನ ಕಾಲದಲ್ಲಿ ಪುರುಷ ಪ್ರಾಧಾನ್ಯ, ಅತಿ-ಸಂಪ್ರದಾಯವಾದಿ ಸಮಾಜದಲ್ಲಿ ಧೈರ್ಯದಿಂದ ಮುನ್ನುಗ್ಗಿ ತನ್ನ ಶೈಕ್ಷಣಿಕ ಕನಸುಗಳನ್ನು ನನಸಾಗಿಸಿದ ಈಕೆಯ ಜೀವನ ಕಥೆ ನಿಜಕ್ಕೂ ಅಸಾಮಾನ್ಯವಾದದ್ದು!

೧೮೯೭ರ ನವೆಂಬರ್ ೪ನೆಯ ತಾರೀಖು, ಕೇರಳ ರಾಜ್ಯದ ಟೆಲಿಚರಿಯಲ್ಲಿ ಜನಿಸಿದ ಜಾನಕಿಯ ತಂದೆ, ದಿವಾನ್ ಬಹಾದೂರ್ ಏಕ್ ಕೃಷ್ಣನ್, ಅಲ್ಲಿನ ಕೋರ್ಟಿನಲ್ಲಿ ಸಬ್-ಜಡ್ಜ್ ಆಗಿದ್ದು, ಜೀವಶಾಸ್ತ್ರದಲ್ಲಿ ಅತೀವ ಆಸಕ್ತಿಯುಳ್ಳವರಾಗಿದ್ದರು. ತನ್ನ ಮನೆಯಲ್ಲಿದ್ದ ಸಸ್ಯತೋಟದ ಬಗ್ಗೆ ವಿವರವಾದ ಟಿಪ್ಪಣಿ ಮಾಡಿದ್ದ ಆತ, ತನ್ನ ಕಾಲದ ಸಸ್ಯಶಾಸ್ತ್ರದ ವಿದ್ವಾಂಸರೊಂದಿಗೆ ನಿಯಮಿತವಾಗಿ ವ್ಯವಹರಿಸುತ್ತಿದ್ದರು. ತಮ್ಮ ೧೯ ಮಕ್ಕಳಲ್ಲಿ ಒಬ್ಬರಿಗೆ, ನಿಸರ್ಗದ ಬಗ್ಗೆ ತಮಗಿದ್ದ ಈ ಕುತೂಹಲ ಮತ್ತು ಕಲಿಕೆಯ ಪ್ರೇಮವನ್ನು ಕೊಡುಗೆಯಾಗಿ ನೀಡಿದ್ದರು. ಅವರ ೧೦ನೆಯ ಮಗುವಾದ ಜಾನಕಿ ಅಮ್ಮಾಳ್ ತಂದೆಯ ಈ ಅಪೂರ್ವ ಗುಣವನ್ನು ಅನುವಂಶೀಯವಾಗಿ ಪಡೆದರು.

ತಲಚೆರಿಯ ಕ್ವೀನ್ ಮೇರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಜಾನಕಿ, ಮುಂದೆ ೧೯೨೧ರಲ್ಲಿ ಮದ್ರಾಸಿನ  ಪೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಆನರ್ಸ್ ಪದವಿ ಗಳಿಸಿದರು. ಅಲ್ಲಿಯೇ ಕ್ರಿಸ್ಟಿಯನ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಕೆಗೆ, ಮುಂದೆ ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತವಾಗಿದ್ದ ಬಾರ್ಬೌರ್ ವಿದ್ವತ್ವೇತನ ದೊರಕಿತು. ತಮ್ಮ ಹತ್ತಿರದ ಸಂಬಂಧಿಯೊಂದಿಗೆ ನಿಷ್ಕರ್ಷೆಯಾಗಿದ್ದ ಮದುವೆಯನ್ನು ನಿರಾಕರಿಸಿ, ಶೈಕ್ಷಣಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಿದ ಜಾನಕಿಯ ಧೈರ್ಯವನ್ನು ಭೇಷ್ ಎನ್ನಲೇಬೇಕು. ೧೯೨೫ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಪದವಿ ಪಡೆದು ಭಾರತಕ್ಕೆ ಮರಳಿದ ಜಾನಕಿ ಮತ್ತೊಮ್ಮೆ ಕ್ರಿಸ್ಟಿಯನ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಮುಂದುವರೆಸಿದ್ದರು. ನಂತರ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಯ ಅಧ್ಯಯನವನ್ನು ಮುಂದುವರೆಸಿದರು. ೧೯೩೨-೩೪ರ ನಡುವೆ, ಭಾರತಕ್ಕೆ ಮರಳಿದ ಆಕೆ, ಟ್ರಿವೆಂಡ್ರಮ್ ನಗರದ ಮಹಾರಾಜ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕಿಯಾದರು.

ಕೋಶ-ತಳಿವಿಜ್ಞಾನದಲ್ಲಿ, ಅದರಲ್ಲೂ ವರ್ಣತಂತುಗಳ ಬಗ್ಗೆ ಮತ್ತು ಅನುವಂಶೀಯತೆಯಲ್ಲಿ ಪರಿಣಿತಿ ಪಡೆದಿದ್ದ ಜಾನಕಿ, ಮುಂದೆ ಕೊಯಮತ್ತೂರಿನಲ್ಲಿದ್ದ ಕಬ್ಬಿನ ತಳಿ ಕೇಂದ್ರಕ್ಕೆ ಸೇರಿ, ಅಲ್ಲಿ ಕಬ್ಬಿನ ಜೀವಶಾಸ್ತ್ರದ ಬಗ್ಗೆ ತಮ್ಮ ಸಂಶೋಧನೆ ಪ್ರಾರಂಭಿಸಿದರು. ಆ ಸಮಯದಲ್ಲಿ ಪ್ರಪಂಚದಲ್ಲೇ ಅತ್ಯಂತ ಸಿಹಿ ಕಬ್ಬಿನ ತಳಿಯೆನಿಸಿದ್ದ Saccharum officinarum ಪ್ರಬೇಧವು ಪಪುವಾ ನ್ಯೂ ಗಿನಿ ದ್ವೀಪಕ್ಕೆ ಸೇರಿದ್ದು, ಅದನ್ನು ಭಾರತ ಅಲ್ಲಿಂದ ಆಮದು ಮಾಡಿಕೊಳ್ಳುತ್ತಿತ್ತು. ಭಾರತದ ಸ್ಥಳೀಯ ಕಬ್ಬಿನ ತಳಿಯ ಪ್ರಬೇಧಗಳನ್ನು ಸುಧಾರಿಸುವ ಒಂದು ಯೋಜನೆಯ ಸಲುವಾಗಿ, ೧೯೨೦ರ ಆದಿ ಭಾಗದಲ್ಲಿ, ಕೊಯಮತ್ತೂರಿನಲ್ಲಿ ಕಬ್ಬಿನ ತಳಿ ಸುಧಾರಿಕೆಯ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಕಬ್ಬಿನ ಹೈಬ್ರಿಡ್ ತಳಿಗಳಲ್ಲಿರುವ ಪಾಲಿಪ್ಲಾಯಿಡ್ ಕೋಶಗಳನ್ನು ಕುಶಲತೆಯಿಂದ ನಿಭಾಯಿಸುತ್ತಾ, ಅವನ್ನು ಮಿಶ್ರ ತಳಿ ಅಭಿವೃದ್ಧಿಯ ಮೂಲಕ ಸುಧಾರಿಸಿ, ಒಂದು ಅತ್ಯಧಿಕ ಇಳುವರಿ ನೀಡುವ ಕಬ್ಬಿನ ತಳಿಯನ್ನು ಸೃಷ್ಟಿಸಿದ ಜಾನಕಿ ಈ ಬೆಳೆಯನ್ನು ಭಾರತದ ಪರಿಸ್ಥಿತಿಗಳಿಗೆ ಅನುಗೊಳಿಸಿದ್ದರು. ಈ ರೀತಿ ಅಭಿವೃದ್ಧಿಪಡಿಸಿದ ಸುಧಾರಿತ ಕಬ್ಬಿನ ತಳಿಯನ್ನು Saccharum spontaneum ಎಂಬ ಹೆಸರಿನಿಂದ ಊರ್ಜಿತಗೊಳಿಸಿದರು.  ಜಾನಕಿ ಅವರ ಈ ಸಂಶೋಧನೆ, ಭಾರತದಲ್ಲಿ ಕಬ್ಬಿನ ಭೌಗೋಳಿಕ ವಿತರಣೆಯನ್ನು ವಿಶ್ಲೇಷಿಸಲು ಸಹಕಾರಿಯಾಯಿತಲ್ಲದೇ, ಈ ನೂತನ ಸ್ಥಳೀಯ ಭಾರತದ ತಳಿಯನ್ನು ಪ್ರತಿಷ್ಠಿಸಲು ಸಾಧ್ಯವಾಯಿತು.

೧೯೩೫ರಲ್ಲಿ ಪ್ರಸಿದ್ಧ ಭೌತಶಾಸ್ತ್ರಜ್ಞ, ನೋಬೆಲ್ ಪಾರಿತೋಷಕ ಪುರಸ್ಕೃತ ಸರ್ ಸಿ.ವಿ. ರಾಮನ್ ಭಾರತೀಯ ವಿಜ್ಞಾನ ಅಕಾಡೆಮಿಯನ್ನು ಪ್ರಾಂಭಿಸಿದಾಗ, ಅದರ ಪ್ರಥಮ ವರ್ಷದ ಫ಼ೆಲೋ ಆಗಿ, ಜಾನಕಿ ಅಮ್ಮಾಳ್ ಅವರನ್ನು ಆಯ್ಕೆಮಾಡಿದರು. ಆದಾಗ್ಯೂ, ಹಿಂದುಳಿದ ಜಾತಿಯವರಾಗಿದ್ದ ಜಾನಕಿಗೆ, ಆಕೆಯ ಅವಿವಾಹಿತ ದರ್ಜೆಯಿಂದಾಗಿ, ಕೊಯಮತ್ತೂರಿನಲ್ಲಿ ಆಕೆಯ ಪುರುಷ ಸಹೋದ್ಯೋಗಿಗಳಿಂದ ಕಿರುಕುಳ ಪ್ರಾರಂಭವಾಯಿತು.  ಜಾತಿ ಮತ್ತು ಲಿಂಗಬೇಧ ತಾರತಮ್ಯಗಳಿಂದ ನೊಂದ ಜಾನಕಿ, ಕೊಯಮತ್ತೂರಿನ ಕೆಲಸಕ್ಕೆ ರಾಜಿನಾಮೆ ನೀಡಿ, ಲಂಡನ್ನಿನಲ್ಲಿ ಪ್ರಸಿದ್ಧ ಜಾನ್ ಇನ್ಸ್ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕಿ ಕೋಶವಿಜ್ಞಾನಿಯಾಗಿ ಕೆಲಸ ಪ್ರಾರಂಭಿಸಿದರು. ೧೯೪೦-೧೯೪೫ರವರೆಗೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ, ಎರಡನೆ ಮಹಾಯುದ್ಧದ ಸಮಯದಲ್ಲಿ, ಜರ್ಮನ್ ಯುದ್ಧ ವಿಮಾನಗಳು ಲಂಡನ್ ನಗರದ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಮುಂದೆ ತಮ್ಮ ಲಂಡನ್ ಅನುಭವಗಳನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಳ್ಳುವಾಗ, ಆ ಧೈರ್ಯವಂತ ಮಹಿಳೆ, ತಾವು ಆ ರಾತ್ರಿ ಬಾಂಬ್ ದಾಳಿಯ ಸಮಯದಲ್ಲಿ ಹೇಗೆ ಹಾಸಿಗೆಯಿಂದ ಕೆಳಕ್ಕೆ ಹಾರಿ ಅಡಗಿ ಕುಳಿತುಕೊಳ್ಳುತ್ತಿದ್ದರು ಎನ್ನುವುದನ್ನು ವಿವರಿಸಿದ್ದರು. ಜೊತೆಗೆ ಬಾಂಬ್ ದಾಳಿಯ ಮಾರನೆಯ ದಿನ ಚೂರಾಗಿ ಬಿದ್ದಿರುತ್ತಿದ್ದ ಗಾಜಿನ ಪದಾರ್ಥಗಳನ್ನು ಸ್ವಚ್ಛಗೊಳಿಸುತ್ತಾ, ತಮ್ಮ ಸಂಶೋಧನೆಯನ್ನು ಮುಂದುವರೆಸುತ್ತಿದ್ದರು ಎನ್ನುವುದನ್ನು ವರ್ಣಿಸುತ್ತಿದ್ದರಂತೆ.

ಆಕೆಯ ಸಂಶೋಧನೆಯಿಂದ ಬಹಳ ಪ್ರಭಾವಿತರಾಗಿ ಸಂತುಷ್ಟರಾದ ರಾಯಲ್ ಹಾರ್ಟಿಕಲ್ಚರಲ್ ಸಂಸ್ಥೆ, ಜಾನಕಿಯನ್ನು ಪ್ರಸಿದ್ಧ ಕ್ಯೂ ಸಸ್ಯ ಉದ್ಯಾನವನದ ಬಳಿಯಲ್ಲಿದ್ದ, ಅವರ ಮತ್ತೊಂದು ಕ್ಯಾಂಪಸ್ಸಿನಲ್ಲಿದ್ದ ಸಸ್ಯ ಸಂಗ್ರಹಣೆಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆಹ್ವಾನಿಸಿತು. ಅಲ್ಲಿ, ಜಾನಕಿ ಪ್ರಪಂಚದ ಹಲವು ಅತ್ಯಂತ ಪ್ರತಿಭಾನ್ವಿತ ಕೋಶ-ವಿಜ್ಞಾನಿಗಳು, ತಳಿ-ಸಂಶೋಧಕರು ಹಾಗೂ ಸಸ್ಯಶಾಸ್ತ್ರಜ್ಞರನ್ನು ಭೇಟಿ ಮಾಡಿದರು. ೧೯೪೫ರಲ್ಲಿ, ತಮ್ಮ ಅತ್ಯಂತ ನಿಕಟ ಸ್ನೇಹಿತ ಹಾಗೂ ಮಾರ್ಗದರ್ಶಿಯಾಗಿದ್ದ ಪ್ರಸಿದ್ಧ ಜೀವವಿಜ್ಞಾನಿ ಸಿ. ಡಿ. ಡಾರ್ಲಿಂಗ್ಟನ್ ಜೊತೆಯಲ್ಲಿ ಸಹ-ಲೇಖಕಿಯಾಗಿ, The Chromosome Atlas of Cultivated Plants ಎನ್ನುವ ಪುಸ್ತಕವನ್ನು ಹೊರತಂದರು. ಈ ಸಂಸ್ಥೆಯಲ್ಲಿ ಆಕೆ ಸಂಶೋಧನೆ ನಡೆಸುತ್ತಿದ್ದ ಹಲವಾರು ಸಸ್ಯಗಳಲ್ಲಿ ಮ್ಯಾಗ್ನೋಲಿಯಾ ಗಿಡವೂ ಒಂದಾಗಿತ್ತು. ಇಂದಿಗೂ ಆ ಕ್ಯಾಂಪಸ್ಸಿನಲ್ಲಿ, ಜಾನಕಿ ಅವರು ನೆಟ್ಟಿದ್ದ ಮ್ಯಾಗ್ನೋಲಿಯಾ ಗಿಡಗಳು ಇನ್ನೂ ನಳನಳಿಸುತ್ತಿವೆ. ಅವುಗಳಲ್ಲಿ ಒಂದು ಪ್ರಬೇಧವು ಸಣ್ಣ ಬಿಳಿಯ ಹೂಗಳನ್ನು ಬಿಡುತ್ತದೆ. ಆ ಗಿಡಕ್ಕೆ ಜಾನಕಿಯ ಗೌರವಾರ್ಥವಾಗಿ Magnolia Kobus janaki Ammal ಎಂದು ಹೆಸರಿಟ್ಟಿದ್ದಾರೆ. ಚೈನ ಮತ್ತು ಜಪಾನ್ ದೇಶಗಳಲ್ಲಿ ಸಂಭ್ರಮಿಸಲ್ಪಡುವ ಈ ಹೂಗಳು ನಿಜಕ್ಕೂ ಸುಂದರ. ಇಂದು, ಈ ಗಿಡಗಳನ್ನು ಯೂರೋಪಿನ ಹಲವೇ ಸಸಿತೋಟಗಳಲ್ಲಿ ಬೆಳಸಲಾಗುತ್ತಿದೆ.

೧೯೫೧ರಲ್ಲಿ, ಅಂದು ಭಾರತದ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರು, ಜಾನಕಿ ಅವರನ್ನು ತಾವೇ ಸ್ವತಃ ಭಾರತಕ್ಕೆ ಮರಳಿ ಬರಲು ಕೇಳಿಕೊಂಡು, ಬೊಟಾನಿಕಲ್ ಸರ್ವೆ ಆಫ಼್ ಇಂಡಿಯಾ ಸಂಸ್ಥೆಯನ್ನು ಪುನರ್ರಚಿಸಲು ಆಹ್ವಾನಿಸಿದರು. ಆ ಆಹ್ವಾನವನ್ನು ಸ್ವೀಕರಿಸಿ ಭಾರತಕ್ಕೆ ಮರಳಿದ ಜಾನಕಿ, ೧೯೫೪ರಲ್ಲಿ ಕಲಕತ್ತೆಯಲ್ಲಿದ್ದ Botanical Survey of India ಕಚೇರಿಯನ್ನು ಪುನರ್ರಚಿಸಿದರು. ಆ ಸಮಯದಲ್ಲಿ ಆಕೆಯ ಜೊತೆಯಿದ್ದ ಸಹೋದ್ಯೋಗಿಗಳು, ಹೇಗೆ ಜಾನಕಿ ತಾವೇ ಸ್ವತಃ ಕೈಯ್ಯಲ್ಲಿ ಪರಕೆ ಹಿಡಿದು, ಪ್ರಸಿದ್ಧ ಚೌರಂಗಿ ಓಣಿಯಲ್ಲಿದ್ದ, ಬೊಟಾನಿಕಲ್ ಸರ್ವೆ ಆಫ಼್ ಇಂಡಿಯಾ ಆಫ಼ೀಸಿನ ಹೊರಭಾಗದ ರಸ್ತೆಯನ್ನು ಗುಡಿಸಿಬಿಡುತ್ತಿದ್ದರು ಎನ್ನುವುದನ್ನು ಜ್ಞಾಪಿಸಿಕೊಳ್ಳುತ್ತಾರೆ.

ಜಾನಕಿ ಭಾರತದ ಮೂಲೆಮೂಲೆಗೂ ಪ್ರಯಾಣಿಸಿ, ಅಲ್ಲಿನ ಸ್ಥಳೀಯ ಪ್ರಬೇಧದ ಸಸ್ಯಗಳನ್ನು ಸಂಗ್ರಹಿಸಿ ಶೇಖರಿಸುತ್ತಿದ್ದರಂತೆ. ಕೇರಳದ ವೈನಾಡ್ ಪ್ರದೇಶದಲ್ಲಿರುವ ಅಪೂರ್ವ ಗಿಡಮೂಲಿಕೆ ಸಸ್ಯಗಳನ್ನು ಹುಡುಕುವುದು ಆಕೆಯ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ಜೊತೆಗೆ ಅತ್ಯುನ್ನತ ಪ್ರದೇಶಗಳಾದ ಲಡಾಕಿನಲ್ಲಿ  ಸಮರ್ಥನೀಯ ಕೃಷಿ ನಡೆಸಬಹುದಾದ ವಿಧಾನಗಳ ಬಗ್ಗೆಯೂ ತಮ್ಮ ಗಮನ ಹರಿಸಿದ್ದರು. ಪರಿಸರ ವಿಜ್ಞಾನ ಮತ್ತು ಜೀವರಾಶಿ ವೈವಿಧ್ಯತೆಯ ಬಗ್ಗೆ ಅಧ್ಯಯನ ನಡೆಸಿದ್ದ ಜಾನಕಿ, ಒಬ್ಬ ಸಕ್ರಿಯ ಪರಿಸರವಾದಿಯಾಗಿದ್ದರು. ಕೇರಳದ ಸೈಲೆಂಟ್ ವ್ಯಾಲಿಯಲ್ಲಿ ಕುನ್ತಿಪುನ್ತ್ಜ಼ ನದಿಗೆ ಕಟ್ಟಬೇಕೆಂದಿದ್ದ ಹೈಡ್ರೊ-ಎಲೆಕ್ಟ್ರಿಕ್ ಅಣೆಕಟ್ಟಿನ ವಿರುದ್ಧವಾಗಿ ನಡೆದ ಚಳುವಳಿಗಳಲ್ಲಿ, ಜಾನಕಿ ಮುಂದಾಳುತ್ವ ವಹಿಸಿದ್ದರು. ೧೯೫೫ರಲ್ಲಿ, ಅಮೆರಿಕೆಯ ಪ್ರಸಿದ್ಧ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ನಡೆದ, ಪರಿಸರ ವಿಜ್ಞಾನದ ಚರಿತ್ರೆಯ ಸಮ್ಮೇಳನದಲ್ಲಿ ಆಹ್ವಾನಿತೆಯಾದ ಏಕೈಕ ಮಹಿಳೆ ಎನ್ನುವ ಗೌರವಕ್ಕೂ ಆಕೆ ಪಾತ್ರರಾದರು. ಸರಳ ಜೀವನವನ್ನು ಬೆಂಬಲಿಸುತ್ತಿದ್ದ ಜಾನಕಿ ಒಬ್ಬ ಕಟ್ಟಾ ಗಾಂಧಿವಾದಿಯಾಗಿದ್ದರು. ಆಕೆಯ ಜೀವನ ಶೈಲಿಯ ಬಗ್ಗೆ ಮುಂದೆ ತನ್ನ ಪುಸ್ತಕವೊಂದರಲ್ಲಿ ಆಕೆಯ ಸೋದರಸೊಸೆ ಗೀತಾ ಡಾಕ್ಟರ್ ಜಾನಕಿಯ ವೇಷಭೂಷಣದ ಬಗ್ಗೆ ಹೀಗೆ ಬರೆದಿದ್ದಾರೆ: “ಜಾನಕಿ ಎತ್ತರವಾದ ಮಹಿಳೆ, ತಮ್ಮ ತಾರುಣ್ಯದಲ್ಲಿ ಎಲ್ಲರ ದೃಷ್ಟಿ ಸೆಳೆಯುವಂತಿದ್ದರು. ತಮ್ಮ ನೀಳವಾದ, ಸಮೃದ್ಧ ಕೇಶವನ್ನು ಸಡಿಲವಾದ ತುರುಬಿನಲ್ಲಿ ಸೇರಿಸಿ ಅದನ್ನು ತಮ್ಮ ಕತ್ತಿನ ಹಿಂಭಾಗದಲ್ಲಿ ಇಳಿಬಿಡುತ್ತಿದ್ದರು. ತಮ್ಮ ನಂತರದ ದಿನಗಳಲ್ಲಿ, ಉಜ್ವಲವಾದ ಹಳದಿ ವರ್ಣದ ರೇಶ್ಮೆ ಸೀರೆ ಉಟ್ಟು, ಅದೇ ಬಣ್ಣದ ಸಡಿಲವಾದ ಕುಪ್ಪುಸ ಅಥವಾ ಜಾಕೆಟ್ ಧರಿಸುತ್ತಿದ್ದರು. ಅವರ ಸುತ್ತಲಿನ ಜನಕ್ಕೆ ಆಕೆ ಒಬ್ಬ ಭೌದ್ಧ ಸನ್ಯಾಸಿನಿಯಂತೆ ಕಂಡುಬರುತ್ತಿದ್ದರು.  ತನ್ನ ಜೀವನದ ಅವಶ್ಯಕತೆಗಳನ್ನು ಕನಿಷ್ಠಮಟ್ಟಕ್ಕೆ ಸೀಮಿತಗೊಳಿಸಿ, ಸಂಯಮ ಮತ್ತು ಕಟ್ಟುನಿಟ್ಟುಗಳನ್ನು ಪಾಲಿಸುತ್ತಾ, ಮೌನವನ್ನು ಅಂಗೀಕರಿಸಿದ್ದರು.”

ತಮ್ಮ ವೃತ್ತಿಯಿಂದ ನಿವೃತ್ತರಾದ ಬಳಿಕ, ಜಾನಕಿ ವಿಜ್ಞಾನದಲ್ಲಿ ಕಾರ್ಯವನ್ನು ಮುಂದುವರೆಸಿದ್ದರು. ಮುಂಬಯಿಯ ಭಾಭಾ ಅಣುಶಕ್ತಿ ಕೇಂದ್ರದಲ್ಲಿರುವ, ಸಸ್ಯಶಾಸ್ತ್ರ ವಿಭಾಗದಲ್ಲಿ, ಸಂದರ್ಶನ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಜೀವನದ ಕಡೆಯ ದಿನಗಳಲ್ಲಿ, ಜಾನಕಿಯ ಹವ್ಯಾಸ ಬೆಕ್ಕುಗಳನ್ನು ಬೆಳೆಸುವತ್ತ ತಿರುಗಿತು. ಒಬ್ಬ ಪರಿಣಿತ ತಳಿಸಂಶೋಧಕಿಯಾಗಿದ್ದ ಆಕೆ, ತಮ್ಮ ಮನೆಯಲ್ಲಿದ್ದ ಬೆಕ್ಕಿನ ಸಂಸಾರದ ಎಲ್ಲಾ ಸದಸ್ಯರ ನಡುವಿದ್ದ ಸೂಕ್ಷ್ಮ ವ್ಯತ್ಯಾಸಗಳನ್ನು ಗುರ್ತಿಸುತ್ತಿದ್ದರಂತೆ. ೧೯೮೪ರಲ್ಲಿ, ತಮ್ಮ ೮೭ನೆಯ ವಯಸ್ಸಿನಲ್ಲಿ, ಫ಼ೆಬ್ರುವರಿ ೭ರಂದು, ಪ್ರಯೋಗಾಲಯದಲ್ಲಿದ್ದಾಗಲೇ ನಿಧನರಾದ ಜಾನಕಿ ಅಮ್ಮಾಳ್, ಕಡೆಯ ಕ್ಷಣದವರೆಗೂ ತಮ್ಮ ಜೀವನವನ್ನು ವಿಜ್ಞಾನಕ್ಕೆ ಮುಡಿಪಾಗಿಟ್ಟಿದ್ದರು.

ಭಾರತೀಯ ವಿಜ್ಞಾನಕ್ಕೆ ಆಕೆ ನೀಡಿದ್ದ ಅಪೂರ್ವವಾದ ಕೊಡುಗೆಯನ್ನು ಸನ್ಮಾನಿಸಿ, ೧೯೭೭ರಲ್ಲಿ ಸರ್ಕಾರ ಆಕೆಗೆ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಿತ್ತು. ೨೦೦೦ ಇಸವಿಯಲ್ಲಿ, ಪರಿಸರ ಮತ್ತು ಅರಣ್ಯ ಇಲಾಖೆ ಆಕೆಯ ಹೆಸರಿನಲ್ಲಿ, ಸಸ್ಯವರ್ಗೀಕರಣ ಶಾಸ್ತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ, ಆಕೆಯ ಹೆಸರಿನಿಂದ ಕರೆಯಲ್ಪಡುವ ಸಸ್ಯ ಸಂಗ್ರಹಣಾಲಯವಿದೆ. ಇತ್ತೀಚೆಗೆ ಇಂಗ್ಲೆಂಡಿನ ಜಾನ್ ಇನ್ಸ್ ಸಂಶೋಧನಾ ಕೇಂದ್ರವು, ಜಾನಕಿ ಅಮ್ಮಾಳ್ ಹೆಸರಿನಲ್ಲಿ, ಅಭಿವೃದ್ಧಿಶೀಲ ದೇಶದ ವಿದ್ಯಾರ್ಥಿಗಳಿಗಾಗಿ, ಸ್ನಾತಕೋತ್ತರ ಪದವಿಯ ವಿದ್ವತ್ವೇತನ ಒಂದನ್ನು ಪ್ರತಿಷ್ಠಾಪಿಸಿದ್ದಾರೆ. ವಿಜ್ಞಾನದ ಅನ್ವೇಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಜಾನಕಿ ಒಬ್ಬ ಅಸಾಮಾನ್ಯ ಮಹಿಳೆ. ತಮ್ಮ ಸಂಶೋಧನೆಯ ಮೂಲಕ ತಮ್ಮ ಹೆಸರು ಪ್ರಪಂಚದಲ್ಲಿ ಚಿರವಾಗಿರಬೇಕು ಎನ್ನುವ ನಂಬಿಕೆ ಇಟ್ಟಿದ್ದ ಆಕೆಯ ಜೀವನ ನಿಜಕ್ಕೂ ಆದರ್ಶಪ್ರಾಯವಾದದ್ದು. ಮುಂದಿನ ಬಾರಿ ನಿಮ್ಮ ಕಾಫ಼ಿಯಲ್ಲಿ ಭಾರತದ ಕಬ್ಬಿನ ಸಕ್ಕರೆಯನ್ನು ಬೆರಸುವಾಗ, ಆ ಸಕ್ಕರೆಯ ಸವಿಗೆ ಕಾರಣ ಜಾನಕಿ ಅಮ್ಮಾಳ್ ಅವರ ಸಂಶೋಧನೆ ಎನ್ನುವುದು ನಿಮ್ಮ ನೆನಪಿನಲ್ಲಿರಲಿ!

(ಈ ಲೇಖನದ ಆಧಾರ:  Meet India’s First Woman PhD in Botany – She is the reason your sugar tastes sweeter! by Sanchari Pal The Better India November 16, 2016)

                    (ಮುಂದಿನ ವಾರ -ಅನಿವಾಸಿ ವಿಶೇಷ ಸರಣಿ ಆರಂಭ)

4 thoughts on “ಸಕ್ಕರೆ ಸವಿಯ ಜಾನಕಿ ಅಮ್ಮಾಳ್ – ಡಾ. ಉಮಾ ವೆಂಕಟೇಶ್

  1. ಮಿಚಿಗನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಕಬ್ಬನ್ನು ಸಿಹಿಯಾಗಿಸಿದ ಅಪುರೂಪದ ಪದ್ಮಶ್ರಿ ಪ್ರಶಸ್ತಿ ಗಳಿಸಿದ ಮೊದಲ ಮಹಿಳಾ ವಿಜ್ಞಾನಿಯ ಬಗ್ಗೆ ತುಂಬ ವಿಷದವಾಗಿ ಬರೆದು ನಮ್ಮ ಅಜ್ಞಾನವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದೀರಿ. ತುಂಬ ಧನ್ಯವಾದಗಳು. – ಕೇಶವ

    Like

  2. ಜಾನಕೀ ಅಮ್ಮಾಳ್ ತಲೆಮಾರಿನ ವಿಜ್ಞಾನಿಗಳು ಈಗ ವಿರಳ ಎನ್ನಬಹುದು. ಆದರೂ ಜಾನಕೀ ಅಮ್ಮಾಳ್ ತರಹದ ಒಬ್ಬ ಅಪರೂಪದ ವಿಜ್ಞಾನಿಯನ್ನು ನಾನು ಮುಖ ಮುಖಿ ಭೇಟಿಯಾಗುವ ಅವಕಾಶ ಕಳೆದ ವರ್ಷ ಒದಗಿಬಂತು; ಅವರು ಮತ್ಯಾರು ಅಲ್ಲ ಭಾರತ ರತ್ನ ಸಿ. ಏನ್. ಆರ್. ರಾವ್. ಅವರನ್ನು ಒಂದು ಖಾಸಗಿ ಸಮಾರಂಭದಲ್ಲಿ ಭೇಟೆ ಮಾಡಿದಾಗ ಯು. ಕೆ. ಕನ್ನಡ ಬಳಗಕ್ಕೆ ಆಹ್ವಾನ ನೀಡಿದ್ದೆ, ಬರುವುದಾಗಿ ತಿಳಿಸಿದ್ದಾರೆ, ಸಮಯ ಇನ್ನೂ ಕೂಡಿ ಬಂದಿಲ್ಲ. ೮೦ ವರ್ಷಗಳು ಮೀರಿದ್ದರೂ ದಿನಕ್ಕೆ ೧೬ ತಾಸು ಪ್ರಯೋಗ ಶಾಲೆಯಲ್ಲಿ ಕೆಲಸ ಮಾಡುವ ಇವರು ಅಪೂರ್ವ ವಿಜ್ಞಾನಿ. ಜಾನಕೀ ಅಮ್ಮಾಳ್ ಸಾಲಿಗೆ ಸೇರಬಹುದಾದ ವ್ಯಕ್ತಿ.

    ಜಾನಕೀ ಅಮ್ಮಾಳ್ ಅವರ ಹೆಸರು ಕಬ್ಬಿನ ಸಿಹಿ ಯೊಡನೆ ಮತ್ತು ಸುಂದರವಾದ ಮ್ಯಾಗ್ ನೊಲಿಯ ಹೂವಿನ ಜೊತೆ ಬೆರತು ಕೊಂಡಿರುವುದು ಒಂದು ರೀತಿಯಲ್ಲಿ ರೋಮ್ಯಾಂಟಿಕ್ ಆಗಿದೆ ಎನ್ನಬಹುದು. ಕೆ ಎಸ್ ಎನ್ ಕವನ ನೆನಪಿಗೆ ತರುವಂತಿದೆ. ಮಹಿಳಾ ವಿಜ್ಞಾನಿಗೆ ದೊರೆತ ಶೃಂಗಾರ ಶ್ರದ್ಧಾಂಜಲಿ!

    ಪ್ರತಿ ಮೇ ತಿಂಗಳಲ್ಲಿ ನಾನು ಹೂವಿನ ಸಸಿ ನೆಡುವಾಗ ಜಾನ್ ಇನ್ಸ್ ಗೊಬ್ಬರವನ್ನು ಸಿಂಪಡಿಸುತ್ತೇನೆ. ಇನ್ನು ಮುಂದೆ ಇಂತಹ ಸಮಯದಲ್ಲಿ ಜಾನಕೀ ಅಮ್ಮಾಳ್ ಅವರನ್ನು ನೆನೆಯುತ್ತೇನೆ. ಅವರ ವ್ಯಕ್ತಿತ್ವದಷ್ಟೇ ಸುಂದರವಾಗಿರಲಿ ನನ್ನ ಹೂಗಳು ಎಂದು ಹಾರೈಸುತ್ತಾ.

    ಸ್ತ್ರೀ ವಾದಿ ಮತ್ತು ಸಸ್ಯಶಾಸ್ತ್ರ ತಜ್ಞೆ ಉಮಾ ಅವರು ಜಾನಕೀ ಅಮ್ಮಾಳ್ ಪರಿಚಯಿಸಿರುವುದು ಸೂಕ್ತವಾಗಿದೆ, ಉಮಾ ಅವರಿಂದ ನಿರೀಕ್ಷಿಸಬಹುದಾದ ಬರವಣಿಗೆ. ಧನ್ಯವಾದ ಉಮಾ

    Like

  3. Uma, thank you very much for this article. Very informative, and an eye opener about a woman botanist’s achievements. Especially proud of her as an Indian.
    Vinathe

    Liked by 1 person

  4. ಬಹಳೇ ಮಾಹಿತಿಪೂರ್ಣ ಲೇಖನ. ಇಂಥ ಪ್ರತಿಭಾವಂತ ಮತ್ತು ಸಸ್ಯವಿಜ್ಞಾನದಲ್ಲಿ ಇಷ್ಟೊಂದು ಸಂಶೋಧನೆ ಮಾಡಿದ ೧೯೩೦ ದಶಕದ ಮಹಿಳೆಯ ಬಗ್ಗೆ ಇನ್ನಷ್ಟು ತಿಳಿದು ಕೊಳ್ಳಲು ಕುತೂಹಲ ಹುಟ್ಟಿಸಿತು. ಜಾನಕಿ ಅಮ್ಮಾಳ್ ಬದನೆಗಿಡವನ್ನು ಕಸಿ ಮಾಡಿದ ಥಳಿಗೆ Janaki Brengel ಎಂದು ಹೆಸರು ಕೊಟ್ಟಿದ್ದು ಓದಿದೆ. ಅವರ ಹೆಸರಿನ ಗುಲಾಬಿ ಹೂ ಸಹ ಇದೆಯಂತೆ. ಉಮಾ ಅವರ ಲೇಖನಗಳಿಗೆ ಯಾವಾಗಲೂ ಸ್ವಾಗತವಿದೆ. ಅಭಿನಂದನೆಗಳು. ಶ್ರೀವತ್ಸ ದೇಸಾಯಿ

    Liked by 1 person

Leave a comment

This site uses Akismet to reduce spam. Learn how your comment data is processed.