ಸ್ಥಿತ್ಯಂತರ ತುಮುಲ-ತರಂಗ…. by ತಿಪ್ಪೇಸ್ವಾಮಿ ಬಿಲ್ಲಹಳ್ಳಿ

♥ ∗ ಅನಿವಾಸಿಗೆ  ಐದು ವರ್ಷದ ಹರ್ಷ ∗ ♥

(ಕನ್ನಡಿಗರಾದ ನಾವೆಲ್ಲ ತಪ್ಪದೆ ವರ್ಷಾನು ವರ್ಷ ತಾಯ್ನಾಡಿಗೆ ಭೇಟಿ ಕೊಡುತ್ತೇವೆ. ಇಂತಹ ದಿನ ಭಾರತಕ್ಕೆ ಹೋಗುತ್ತೇವೆ ಎಂದು ತಿಳಿದಕೂಡಲೇ ನಮ್ಮಲ್ಲಿ ಯಾವುದೋ ಒಂದು ವಿಶೇಷ ಅನುಭೂತಿ ಮೂಡತೊಡಗುತ್ತದೆ. ತಾವರೆಯ ಎಲೆಯ ಮೇಲಿನ ನೀರ ಹನಿಯಂತೆ ಇಲ್ಲಿ ಬದುಕಿಕೊಂಡಿರುವ ನಾವು ಭಾರತದ ನೆಲದ ಮೇಲೆ ಕಾಲಿಡುತ್ತಿದ್ದಂತೆ ತಟ್ಟಕ್ಕನೆ ಜಾರಿ ಮೂಲ ನೀರನ್ನು ಸೇರುತ್ತೇವೆ. ಆಗಷ್ಟೆ ದಶಕಗಳ ಕಾಲ ನಮ್ಮ ಬದುಕನ್ನು ಹಂಚಿಕೊಂಡ ಹೊರನಾಡು ನಮ್ಮ ಬದುಕಿನ ಮೇಲೆ ಬೀರಿರುವ ಪ್ರಭಾವದ ಅರಿವಾಗಲು ತೊಡಗುತ್ತದೆ. ಈ ಕಾಲ ಬಿಂದುವಿನೊಡನೆ ನಾವು ಪ್ರತಿ ಬಾರಿ ಸಂಧಿಸುತ್ತೇವೆ. ಇಂತಹ ಹನಿ ಮತ್ತೆ ತವರನ್ನು ಸಂದಿಸುವ ಘಳಿಗೆಯ ಸ್ಥಿತ್ಯಂತರ, ಹಲವು ತುಮುಲ ತರಂಗಗಳನ್ನು ಸೃಷ್ಟಿಸುತ್ತದೆ.ನಮ್ಮ ನಾಡಿನ ಮೇಲಿನ ಪ್ರೀತಿಯಿಂದಾಗಿ, ಬೇರೆಡೆ ಕಂಡ ಎಲ್ಲ ಒಳಿತುಗಳು ಇಲ್ಲಿಗೂ ಬರಬಾರದೇಕೆ ಎನ್ನುವ ಒಂದು ಸವಿಯಾದ ಆಶಯ ನಮ್ಮನ್ನು ಆಳವಾಗಿ ಬಾಧಿಸತೊಡಗುತ್ತದೆ.ಜೊತೆಗೆ ಲೌಕಿಕ ಜಗತ್ತಿನ ಸಮಸ್ತವೂ ಇರುವ ನಮ್ಮ ವೃತ್ತಿ ಸ್ಥಳದಲ್ಲಿ ಸಿಗದ ಬಂಧು ಬಾಂಧವರ ಓಡನಾಟ ನಮ್ಮ ಕರುಳನ್ನು ತಿರುಚುತ್ತವೆ. ಇಲ್ಲಿನವರಂತೆ ನಾಟಕದ ನುಡಿಗಳನ್ನು ಆಡಲು ಬಾರದೆ ಇದ್ದರೂ ಯಾವುದೋ ಸಬೂಬಿನಲ್ಲಿ ದೂರದಿಂದ ಬರುವ ಕರುಳ ಕುಡಿಗಳನ್ನು ಬರಿ ನೋಡಿಯೇ ಆನಂದಿಸುವ, ನೀನು ದೂರವಿದ್ದರೂ ನಮಗೇನು ಆಗಿಲ್ಲ ಎನ್ನುವ ಸೋಗಿನ ಮಸುಕಲ್ಲೇ ಪ್ರೀತಿಯ ಹೊಳೆಯನ್ನು ಹರಿಸುವ ನಮ್ಮ ಹೆತ್ತವರ ಸಂದಿಗ್ದಗಳು, ಮುಚ್ಚಿಟ್ಟುಕೊಂಡರೂ ಇಣುಕಿ ನಮ್ಮನ್ನು ಅಣಕಿಸುತ್ತವೆ.

ನಮ್ಮ ಆಶಯಕ್ಕೆ ಒದಗುವ ವೇಗದಲ್ಲೇ  ಬೇಕಾದ ಎಲ್ಲ ಬದಲಾವಣೆಗಳು  ಆಗುವುದಿಲ್ಲ.ಈ  ಕಾರಣ ಸ್ಥಿತ್ಯಂತರದ ಅನುಭವ ಬಹುಶಃ ನಿರಂತರ. “ನಾವಿಷ್ಟೇ ಬಿಡಿ ಆದರೆ ಮಿಕ್ಕವರು ಮಾತ್ರ ಅತಿ ವಿಶೇಷ “ ಎಂದು ಪೂರ್ವ ನಿರ್ಧಾರಗಳನ್ನು ಮಾಡಿ  ಮೈ-ಕೈ ಕೊಡವಿಕೊಂಡವರಿಗೆ ಈ ಬಾಧೆ ಕಾಡುವುದಿಲ್ಲ. ಮಾಡಿರದ ಹಲವರಲ್ಲಿ  “ ನಾವೂ ಅವರಂತಾಗಬೇಕು, ನಮ್ಮದನ್ನು ಉಳಿಸಿಕೊಳ್ಳಬೇಕು “ ಎನ್ನುವ ಪ್ರಬಲ  ಅನಿಸಿಕೆಗಳು  ಅವರನ್ನು ಮುನ್ನೆಡೆಯಲು ಪ್ರೇರೇಪಿಸುತ್ತದೆ.

ಭಾರತದ ಭೇಟಿ ತರುವ ತುಮುಲಗಳ ತರಂಗಗಳನ್ನು ಸ್ವಾಮಿಯವರು ಈ ವಾರದ ಅನಿವಾಸಿಯ ದಡಕ್ಕೆ ಬಹಳ ಸಹಜವಾಗಿ ಆದರೆ ಮನಮುಟ್ಟುವಂತೆ ಹರಿಸಿದ್ದಾರೆ-ಸಂ )


ಪರಿಚಯ

ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರು ನಮ್ಮಲ್ಲಿ ಹಲವರಿಗೆ ಪರಿಚಿತರು. ಹೆಸರಿನಲ್ಲಿರುವಂತೆಯೇ ದಾವಣಗೆರೆ ಜಿಲ್ಲೆಯ ಬಿಲ್ಲಹಳ್ಳಿ ಇವರ ಸ್ವಂತದ ಊರು. ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಸಂತೆ ಬೆನ್ನೂರಿನಲ್ಲಿ ಇವರ ಜನನ. ಪ್ರಾಥಮಿಕ ಶಿಕ್ಷಣವನ್ನು ತಾವರೆಕೆರೆ ಗ್ರಾಮದಲ್ಲಿ , ಪ್ರೌಢ ಶಿಕ್ಷಣವನ್ನು ಭದ್ರಾವತಿಯಲ್ಲಿ ಮಾಡಿದ್ದಾರೆ.ಮುಂದೆ ದಾವಣಗೆರೆಯ ಬಾಪೂಜಿ ನರ್ಸಿಂಗ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಇವರು ಇಂಗ್ಲೆಂಡಿನಲ್ಲಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದಾರೆ. ಈಗ ಸೌಥೆಂಡ್ ಆನ್ ಸೀ, ಎಸ್ಸೆಕ್ಸ್ ನಲ್ಲಿ ಅಲರ್ಜಿ ಸರ್ವೀಸ್ ವಿಭಾಗದಲ್ಲಿ ಲೀಡ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.

ಭಾರತದಲ್ಲಿ ನರ್ಸಿಂಗ್ ಬೆಳವಣಿಗೆಗಾಗಿ ವಿಶೇಷ ಪ್ರಯತ್ನಗಳನ್ನು ಅವಿರತ ಮಾಡುತ್ತಿರುವ ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರ ಪ್ರಯತ್ನ ಅತ್ಯಂತ ಶ್ಲಾಘನೀಯ.

ಕನ್ನಡ ಬರಹ, ಪರ್ವಾತಾರೋಹಣ, ನಾಯಕತ್ವದ ಚಟುವಟಿಕೆಗಳಲ್ಲಿ ಇವರಿಗೆ ವಿಶೇಷ ಆಸಕ್ತಿಯಿದೆ.ಕನ್ನಡ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2016-2019 ರವರೆಗೆ ಸೇವೆ ಸಲ್ಲಿಸಿರುವ ಇವರು ಕೇಂಬ್ರಿಡ್ಜ್ ಕನ್ನಡ ಬಳಗದ ಕಾರ್ಯಕ್ರಮದ ಆಯೋಜನೆಯ ಮುಂದಾಳತ್ವವನ್ನು ವಹಿಸಿದ್ದನ್ನು ನಾವಿಲ್ಲಿ ನೆನೆಯಬಹುದು.

ಸ್ಥಿತ್ಯಂತರ ತುಮುಲ-ತರಂಗ…

ಆಗಸ್ಟ್ 8 ರಂದು ಲಂಡನ್ ನಿಂದ ಬೆಂಗಳೂರಿಗೆ 3 ವಾರದ ರಜೆಗೆಂದು ಪ್ರಯಾಣಿಸಿದೆ.  ಸ್ವಂತ ಊರಿನ ಪ್ರಯಾಣದ ಒಂದು ಭಾಗ.

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ, ಉಕ್ಕಿ ಹರಿಯುತ್ತಿದ್ದ ಕೆರೆ- ಕಟ್ಟೆ- ಹೊಳೆ. ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿದ ಹೊಲ, ಮರ, ಗಿಡಗಳು, ಜಲ ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಹೆದ್ದಾರಿಗಳು, ಮುರಿದ ಸೇತುವೆಗಳು, ಮನೆ, ವಾಹನ, ಜನ- ಜಾನುವಾರುಗಳು, ಅಳಿದುಳಿದ ಕಾಡಿನಿಂದ ಬೃಹದಾಕಾರವಾಗಿ ಬೆಳೆದು ನಿಂತಿರುವ ನಾಡಿಗೆ ವಲಸೆ ಬಂದ ಪ್ರಾಣಿಗಳು ಹಾದು ಹೋಗುತ್ತಿದ್ದವು. ಗಿಡ ಮರಗಳಿಲ್ಲದ ಬೆಟ್ಟ-ಗುಡ್ಡಗಳು  ಕೆಲ ವಾರಗಳ ಹಿಂದೆ ಬಿಸಿಲಿಗೆ ಬೆಂದು ಬೆಂಗಾವಲಾಗಿ ಈಗ ಮಳೆಯ ಆರ್ಭಟಕ್ಕೆ  ತನ್ನ ಒಡಲು ಮೀರುವಷ್ಟು ಜಲವನ್ನು ಕುಡಿದು ತನ್ನ ಒಡಲೊಡೆದು ಎಲ್ಲೆಂದರಲ್ಲಿ ಕುಸಿದು ಮಾನವ ನಿರ್ಮಿತ ದಾರಿಗೆ ಅಡ್ಡಗಾಲಾಗಿ ನಿಂತು ಮಾನವ ಕುಲದ ದುರಾಸೆಯಿಂದ ತನಗಾದ ಅನ್ಯಾಯಕ್ಕೆ ರೊಚ್ಚಿಗೆದ್ದು ಮುಷ್ಕರ ಹೂಡಿದಂತೆ ಭಾಸವಾಗುತ್ತಿತ್ತು.

ಬರಿದಾದ  ಕೆರೆ-ಕಟ್ಟೆ-ನದಿಗಳನ್ನೇ ಕಸದ ಬುತ್ತಿಯೆಂದು ಭಾವಿಸಿ ಎಸೆದ ಪ್ಲಾಸ್ಟಿಕ್ ಕಪ್, ಬ್ಯಾಗ್, ಪ್ಯಾಕೆಟ್, ಕ್ಯಾನ್, ಮೆಡಿಸಿನ್ ಪ್ಯಾಕ್,  ಹೀಗೇ ಸಾವಿರಾರು ರೀತಿಯ  ತ್ಯಾಜ್ಯ ವಸ್ತುಗಳನ್ನು  ಕೆರೆ-ಕಟ್ಟೆ- ನದಿಗಳು ಹೊರಗೆಸೆದು ನಾಡಿಗೆ ಮುತ್ತು ರತ್ನ ಹವಳಗಳ ರೀತಿಯಲ್ಲಿ ಹಿಂದಿರುಗಿಸಿ ತನ್ನ ಸೇಡು ತೀರಿಸಿಕೊಂಡಂತೆನಿಸುತಿತ್ತು.

ದೇವನಹಳ್ಳಿಯಿಂದ ಬೆಂಗಳೂರು ರೈಲ್ವೆ  ನಿಲ್ದಾಣಕ್ಕೆ ಮುಂಜಾನೆ 4 ರ ಸಮಯದಲ್ಲಿ ಪ್ರಯಾಣಿಸುವಾಗ ನಗರದ ಕಳೆದ 20 ವರ್ಷದ ಬೆಳವಣಿಗಗಳು ಉದ್ಯಾನ ನಗರಿಯ ಖ್ಯಾತಿಯನ್ನು ಹುಸಿರು ಹಿಚುಕಿ ಕೊಂದು ಹಸಿರಿನ್ನೇ ಬೇರು ಸಮೇತ ಕಿತ್ತು ಒಗೆದು ಕಾಂಕ್ರೀಟ್ ಕಟ್ಟಡಗಳನ್ನು ಎಬ್ಬಿಸಿ ನಿಲ್ಲಿಸಿದಂತಿತ್ತು. ಈಗಿನ ಬೆಂಗಳೂರು ಗಾರ್ಡನ್ ಸಿಟಿಯಲ್ಲ ಅದು ಗೋ(ಡೌನ್) ಸಿಟಿಯಾಗಿ ಬದಲಾಗಿ ಬಿಟ್ಟಿದೆ. ಭೌಗೋಳಿಕ ವಿಸ್ತೀರ್ಣದ ಪ್ರಕಾರ ಬೆಂಗಳೂರು ನಗರ ಲಂಡನ್ಗಿಂತಲೂ ತುಂಬಾ ಚಿಕ್ಕದಾದರೂ ಜನಸಂಖ್ಯೆಯಲ್ಲಿ ಈಗ ಅದು ಲಂಡನ್ ಮಾದರಿಯಲ್ಲಿಯೇ ವಲಸಿಗರ ತಾಣವಾಗಿ ಪರಿವರ್ತಿತವಾಗಿದೆ. ವಿಪರ್ಯಾಸವೆಂದರೆ ಲಂಡನ್ನಲ್ಲಿ  ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಬೆಂಗಳೂರಲ್ಲಿ ಕಾಲು ಚಾಚಿದಲ್ಲಿ ಹಾಸಿಗೆ ಹಾಸಿದಂತಿದೆ😰

ಶತಾಬ್ದಿ ರೈಲಿನಲ್ಲಿ ದಾವಣಗೆರೆಗೆ ಪಯಣ ಮುಂದುವರೆಸಿದೆ. ಯಥಾ ಪ್ರಕಾರ ರೈಲಿನಲ್ಲಿ ಟೀ, ಕಾಫಿ, ತುಮಕೂರ್ ತಟ್ಟೆ ಇಡ್ಲಿ, ದೋಸೆ, ಉದ್ದಿನ ವಡೆ, ಮಸಾಲ ದೋಸೆ ಇವೆಲ್ಲವನ್ನೂ ರೈಲ್ವೆ ಕ್ಯಾಂಟೀನ್ ಸಿಬ್ಬಂದಿ ಎಂಬ ಹೆಸರಿನಲ್ಲಿ ಮಾರಾಟ ಮಾಡುವವರು ಕನಿಷ್ಠ 5 ನಿಮಿಷಕ್ಕೆ ಒಬ್ಬೊಬ್ಬರೆಂಬಂತೆ ಬಂದೇ ಬರುತ್ತಿದ್ದರು. ಸವಿಯುವ ಆಸೆ ಮನದಲ್ಲಿದ್ದರೂ ಅದನ್ನು ಮಾರಾಟ ಮಾಡುವವರ ನಡವಳಿಕೆ, ಸ್ವಚ್ಛೆತೆಯ ಬಗೆಗಿನ ಕಾಳಜಿ, ಅವೈಜ್ಞಾನಿಕ ಶೈಲಿಯ ( ಶೌಚಾಲಯದ ಪಕ್ಕದಲ್ಲಿಯೇ ಉಗ್ರಾಣ) ಬಹಿರ್ದೆಸೆಗೆ ಹೋಗಿ ಸೋಪಿಲ್ಲದೆ ಕೈ ತೊಳೆದ ಮಾರಾಟಗಾರರನ್ನು ಕಂಡು ನನ್ನ ಹಸಿವನ್ನು ನೀರಿನಿಂದಲೇ ಹಿಂಗಿಸಿ ಕೊಂಡು ಕಿಟಕಿಯ ಕಡೆ ಗಮನ ಹರಿಸಿದೆ. ಕಳೆದ 20 ವರ್ಷಗಳಲ್ಲಿ ಬೆಂಗಳೂರೇ ಏಕೆ ಇಡೀ ರಾಜ್ಯವೇ ಸಾಕಷ್ಟು ಬದಲಾವಣೆಯಾದರೂ ರೈಲ್ವೆ ಬೋಗಿಯಲ್ಲಿ ಕಸದ ಡಬ್ಬವನ್ನು ಇಡಬೇಕೆಂಬ ಐಡಿಯಾ ಇದುವರೆಗೂ ಯಾರಿಗೂ ಅನ್ನಿಸಿಲ್ಲವೇ?? ಇಂದಿಗೂ ಕೂಡ ರೈಲಿನಲ್ಲಿ ತ್ಯಾಜ್ಯ ವಸ್ತುಗಳನ್ನು ಕಿಟಕಿಯ ಮೂಲಕ ಟ್ರ್ಯಾಕ್ ಮೇಲೆ ಎಸೆಯುವ ಹವ್ಯಾಸ ಬದಲಾಗಲಿಲ್ಲ. ಒಂದೆರಡು ಜೋಂಪು ನಿದ್ರಿಸುವಷ್ಟರಲ್ಲಿ ದಾವಣಗೆರೆ ತಲುಪಿದೆ. ಸ್ಟೇಷನ್ಗೆ ಅಪ್ಪಾಜಿ ಬಂದಿದ್ದರು. ಮಗನನ್ನು ಕಾಣುವ ತವಕವಿದ್ದರೂ ಅದನ್ನು ಅಮ್ಮನಿಗೆ ತೋರದೆ “ ಅವನಿಗೆ ಆಟೋದವರ ವ್ಯವಹಾರ ತಿಳಿಯುವುದಿಲ್ಲ, 60 ರೂಪಾಯಿ ಕೇಳಿದರೆ ಸುಮ್ಮನೆ ಕೊಟ್ಟು ಬರುತ್ತಾನೆ” ಎಂದು ಹೇಳಿ ತಾವೇ 50 ರುಪಾಯಿಗೆ ಒಪ್ಪಿಸಿ ಒಬ್ಬ ಆಟೋ ಚಾಲಕನೊಂದಿಗೆ ಬಂದಿದ್ದರು. ಆತ ನಮ್ಮ ಎದುರು ಮನೆಯವನಾದ್ದರಿಂದ ಅಪ್ಪಾಜಿಗೆ 10 ರೂಪಾಯಿ ಡಿಸ್ಕೌಂಟ್ ದೊರಕಿತ್ತು. ಮಗನ ಕಂಡ ಖುಷಿ ಅವರಿಗೆ ಇದ್ದರೂ ಅದನ್ನು ತೋರ್ಪಡಿಸದೆ ಬ್ಯಾಗನ್ನು ನನ್ನಿಂದ ಸ್ವೀಕರಿಸಿ ಬರಬರನೇ ಆಟೋ ಕಡೆ ನಡೆದರು.

ಮನೆಗೆ ಬಂದಾಕ್ಷಣ ಎಂದಿನಂತೆ ಅಮ್ಮ ಸ್ವಾಗತಿಸಿದರು. ಸಮಯ 11 ಘಂಟೆಯಾಗಿತ್ತು. ತಿಂಡಿಗೆ ದೋಸೆಯ ಜೊತೆಗೆ ಹೋಳಿಗೆ ತಿನ್ನಿಸುವ ಅಮ್ಮನ ಆಸೆಗೆ ತಣ್ಣೀರೆರಚಿ ರಾಗಿ ಮುದ್ದೆ, ಹುಣಸೆ ಹುಳಿ ಸಾರು, ಅನ್ನ ಊಟ ಬೇಕೆಂದು ಹೇಳಿದೆ. ಸ್ನಾನ ಮುಗಿಸುವಲ್ಲಿ ಎಲ್ಲಾ ರೆಡಿ ಆಯಿತು. ಬೃಂಚ್ (ಬ್ರೇಕ್ಫಾಸ್ಟ್ + ಲಂಚ್) ಮುಗಿಸಿ ಅಮ್ಮ ಅಪ್ಪಂದಿರೊಂದಿಗೆ ಹಾಗೂ ಅಲ್ಲಿಯೇ ನೆಲೆಸಿರುವ ನನ್ನ ತಂಗಿಯೊಂದಿಗೆ ಬಹು ದಿನಗಳ ಹರಟೆ ಮುಂದುವರೆಸಿ ಹಾಗೆಯೇ ದಿವಾನ್ ಮೇಲೆ ನಿದ್ದೆಹೋದೆ.

2 ದಿನಗಳ ಬಳಿಕ ನನಗೂ ಮುನ್ನವೇ ಇಂಡಿಯಾ ತಲುಪಿದ್ದ ಹೆಂಡತಿ ಹಾಗೂ ಮಗಳು ಧಾರವಾಡದ ಮಾವನ ಮನೆಯಿಂದ ದಾವಣಗೆರೆ ತಲುಪಿದರು. ನನ್ನ ತಮ್ಮ ಅವನ ಕುಟುಂಬ ಸಮೇತ ತರೀಕೆರೆಯಿಂದ ದಾವಣಗೆರೆ ತಲುಪಿದರು. ತಂಗಿ ಭಾವ ಹಾಗೂ ಅವರಿಬ್ಬರ ಮಕ್ಕಳು ಸೇರಿದರು. ಎಲ್ಲರೂ ಕೂಡಿದಾಗ ಹಬ್ಬದ ವಾತಾವರಣ ಮನೆಯಲ್ಲಿ…..

ತಮ್ಮನ ಮಗ ನಕ್ಷನ ತುಂಟಾಟ ಎಲ್ಲರಿಗೂ ನಗೆಯ ಹಬ್ಬವಾಗಿತ್ತು. ಇತ್ತೀಚೆಗಷ್ಟೇ ಅವನ ನರ್ಸರಿ ಎಂಟ್ರಿ ಆದ್ದರಿಂದ ಅವನ ಎ, ಬಿ, ಸಿ, ಡಿ ಹಾಗೂ 1,2,3 ಹೇಳುವ ತೊದಲಿನ ಶೈಲಿ ಮತ್ತೆ ಮತ್ತೆ ಕೇಳಬೇಕೆಂಬ ಬಯಕೆಯಾಗಿ ಅದನ್ನು ವಿಡಿಯೋ ಮಾಡಿಕೊಂಡೆ.

ನಂತರದ ದಿನಗಳಲ್ಲಿ ಕುಟುಂಬ ಸಮೇತ ಆದಷ್ಟು ಸಂಬಂಧಿಗಳ ಮನೆಗಳಿಗೆ ಭೇಟಿ ನೀಡಿ ಹಿಂದಿರುಗೆದೆವು. ಇರುವ ಸಮಯದಲ್ಲಿ ಎಲ್ಲರನ್ನೂ ಭೇಟಿಯಾಗುವುದು ಅಸಾಧ್ಯವಾದರೂ ಆದಷ್ಟು ಸಮಯವನ್ನು ಸಂಬಂಧಿಗಳೊಂದಿಗೆ ಕಳೆಯುವುದೇ ಒಂದು ಸಂತೋಷ ಹಾಗೂ ಮರೆಲಾಗದ ನೆನಪುಗಳು.

ನಂತರ ಅತ್ತೆ ಮಾವಂದಿರ ಭೇಟಿಗೆ ಧಾರವಾಡ ತಲುಪಿ ಒಂದು ದಿನದ ಪ್ರವಾಸವೆಂದು ನವಿಲು ತೀರ್ಥಕ್ಕೆ ಹೋಗಿ ಬಂದೆವು. ದಾವಣಗೆರೆಗೆ ಹಿಂದಿರುಗುವ ಸಮಯದಲ್ಲಿ ರಾಣೇಬೆನ್ನೂರಿನಲ್ಲಿ ನೆಲೆಸಿರುವ ದೇವಕುಮಾರ್ ಮಾಮನ ಯುನಿಸೆಮ್ ಕಂಪನಿಗೆ ಭೇಟಿ ನೀಡಿ ಅವರ ಕಳೆದ 15 ವರ್ಷಗಳಲ್ಲಿ ಬೆಳೆಸಿರುವ ಸೀಡ್ಸ್ ಕಂಪನಿಯ ವಹಿವಾಟಿಕೆಯ ಬಗ್ಗೆ ಅರಿತೆ. ಅವರ ಸರಳ ಸ್ವಭಾವ, ಸ್ವಂತ ಹಾಗೂ ಕಂಪನಿಯ ಸಾಧನೆಗಳ ಬಗ್ಗೆ ತಿಳಿದು ತುಂಬಾ ಸಂತೋಷದ ಜೊತೆಗೆ ಅವರ ಬಗ್ಗೆ ಅಪಾರ ಗೌರವ ಇನ್ನೂ ಹೆಚ್ಚಿತು. ಅವರಿಂದ  ಸ್ಪೂರ್ತಿಗೊಂಡು ಮುಂದೆ ಅವಕಾಶಗಳು ಸಿಕ್ಕಿದಲ್ಲಿ ನಾವು ಆ ರೀತಿಯ ಸಾಧನೆಗಳನ್ನು ಮಾಡಬೇಕೆಂಬ ಆಸೆಯಿಂದನ್ನು ಕಂಡು ದಾವಣಗೆರೆಗೆ ಹಿಂದಿರುಗಿದೆ.

ರಜೆಯ ಕೊನೆಯ ವಾರವನ್ನು  ದಾವಣಗೆರೆ, ತರೀಕೆರೆಯಲ್ಲಿ ಕಳೆದೆ. ಒಂದು ದಿನ ಅಮ್ಮ, ಅಪ್ಪ ಹಾಗೂ ತಮ್ಮನ ಕುಟುಂಬ ಸಮೇತ ಕೆಮ್ಮಣ್ಣುಗುಂಡಿ ಮತ್ತು ಕಲ್ಲತ್ತಿಗಿರಿಗೆ ಪ್ರವಾಸ ಕೈಗೊಂಡೆವು. ಆ ಐತಿಹಾಸಿಕ ಸ್ಥಳಗಳು ನನ್ನ ಕಾಲೇಜು ದಿನಗಳಲ್ಲಿ ಗೆಳೆಯರ ಕೂಡ ಕಳೆದ ಸಮಯಗಳನ್ನು ನೆನಪಿಸಿದವು.

ನಂತರ ದಾವಣಗೆರೆಯಿಂದ ತಮ್ಮನ ಕುಟುಂಬದೊಂದಿಗೆ ಬೆಂಗಳೂರು ತಲುಪಿದೆವು. ಅಲ್ಲಿ ನನ್ನ ಹೆಂಡತಿ, ಮಗಳ ಜೊತೆಗೆ ಅತ್ತೆ, ಮಾವ, ಕೋಗಲೂರಿನ ಅಳಿಯ (ಮದುವೆ ಗಂಡು) ಹಾಗೂ ಪರಮೇಶ್ ಎಲ್ಲರೂ ಸೇರಿ ಮಂಜುವಿನ 39ನೆ ಹುಟ್ಟು ಹಬ್ಬ ಆಚರಿಸಿ ಮಾರನೇ ದಿನ ಬೆಳಿಗಿನ ಜಾವ ಲಂಡನ್ ಫ್ಲೈಟ್ ಹತ್ತಿದೆವು. ವಿಮಾನದಲ್ಲಿ ಕುಳಿತಾಗ ರಜೆಯ ನೆನಪುಗಳನ್ನು ಒಂಟೆಯ ರೀತಿಯಲ್ಲಿ ಮೆಲುಕು ಹಾಕುತ್ತ ಯೋಚಿಸುತ್ತ ನಿದ್ರೆಗೆ ಹೋದೆ.

ವಿದೇಶದಲ್ಲಿ ನೆಲೆಸಿರುವ ಪ್ರತಿ ಭಾರತೀಯನಂತೆ ನನಗೂ ಹಾಗೂ ಕುಟುಂಬಕ್ಕೂ ಭಾರತದ ಬಗ್ಗೆ ಎಲ್ಲಿಲ್ಲದ ಅಭಿಮಾನ, ಪ್ರೀತಿ ಹಾಗೂ ಗೌರವ. ತಾಯ್ನಾಡ ಮೇಲಿನ ಪ್ರೀತಿಯ ಜೊತೆಗೆ ಅಲ್ಲಿನ ರಾಜಕೀಯ ಅವ್ಯವಸ್ಥೆ, ಭ್ರಷ್ಟಾಚಾರ, ಪರಿಸರ ಮಾಲಿನ್ಯತೆ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಅಸಮಾನತೆ ಮತ್ತು ಒತ್ತಡಗಳ ಬಗ್ಗೆ ಯೋಚಿಸುತ್ತಿದ್ದೆ.

   ಇವುಗಳು ತೀವ್ರ ದುಃಖಕರ ಸಂಗತಿಯಾದರೂ ಮುಂದೊಮ್ಮೆ ನಮ್ಮ ಪ್ರಾಮಾಣಿಕ ಪ್ರಯತ್ನಗಳಿಂದ ಬದಲಾವಣೆಗಳನ್ನು ತರುವ ಯತ್ನವನ್ನು ಮುಂದುವರೆಸುವಂತೆ ನಿರ್ಧರಿಸಿ ಸೌಥೆನ್ಡ್ ಮನೆಗೆ ಹಿಂದಿರುಗಿದೆ.

“ಅಲ್ಲಿದೆ ನಮ್ಮ ಮನೆ ಇಲ್ಲಿರುವೆ ಸುಮ್ಮನೆ” ಎನ್ನುವ ಮಾತು ನಿಜವಾದರೂ ನಾನೆಂದೂ ಇಲ್ಲಿ ಸುಮ್ಮನೆ ಇಲ್ಲ ಏಕೆಂದರೆ ನನಗೆ ನನ್ನ ಮನೆಯನ್ನು ಮರೆಯುವ ಸಂದರ್ಭವೇ ಇದುವರೆಗೂ ಬಂದಿಲ್ಲ ಎನ್ನುವ ನೆಮ್ಮದಿ ನನಗಿದೆ🙏🏼

                                                                                                 ——–ತಿಪ್ಪೇಸ್ವಾಮಿ ಬಿಲ್ಲಹಳ್ಳಿ

 

                                         (ಮುಂದಿನ ವಾರ -ನರಿಗಳ ಮೀನಿಂಗುಗಳು)

4 thoughts on “ಸ್ಥಿತ್ಯಂತರ ತುಮುಲ-ತರಂಗ…. by ತಿಪ್ಪೇಸ್ವಾಮಿ ಬಿಲ್ಲಹಳ್ಳಿ

 1. Sorry for this late response in English, you have opened up your feelings well, one can see your love for your family and the land you have left behind. Whatever the short coming I agree still it’s our home! It’s frustrating when we start comparing there and here, but let’s hope things would get better. very simplistic and sincere thoughts. Good use of language.

  Like

  • ಬಿಲ್ಲಹಳ್ಳಿತಿಪ್ಪೇಸ್ವಾಮಿಯವರು ತಮ್ಮ ಪ್ರಾಮಾಣಿಕ ಭಾವನೆಗಳನ್ನು ಈ ಲೇಖನದಲ್ಲಿ ತೆರೆದಿಟ್ಟಿದ್ದಾರೆ; ತಮ್ಮ ‘ಮನೆ’ಯ ಬಗೆಯ ಪ್ರೀತಿಯ ಆಳವನ್ನು ತೋರಿಸಿಕೊಟ್ಟಿದ್ದಾರೆ. “ನನ್ನ ಮನೆಯನ್ನು ಮರೆಯುವ ಸಂದರ್ಭವೇ ಇದುವರೆಗೂ ಬಂದಿಲ್ಲ ಎನ್ನುವ ನೆಮ್ಮದಿ ನನಗಿದೆ“ ಎಂದು ಸಮಾಧಾನ ಪಟ್ಟಿದ್ದಾರೆ. ಆ ನೆಮ್ಮದಿಯೇ ಪರದೇಶದಲ್ಲಿಯ ನಮ್ಮನ್ನು ಈ ತುಮುಲದಲ್ಲಿಯೂ ಕಾಯುತ್ತದೆ. ನಾನೂ ಅದನ್ನೆಷ್ಟು ಸಲ ಅನುಭವಿಸಿಲ್ಲ! ಮಗ ಪರದೇಶದಲ್ಲಿ ಏನೆಲ್ಲ ಸಾಧಿಸಿರಲಿ, ಮೇಧಾವಿಯಾಗಿರಲಿ, ತಂದೆಯ ಎಣಿಕೆಯೇ ಬೇರೆ ಅನ್ನುವದನ್ನು ಆ ಆಟೋ ಬಾಡಿಗೆಯ ಘಟನೆ ನೆನಪಿಸುತ್ತದೆ! ಐಸಾಕ್ ನ್ಯೂಟನ್ನನ ಹಿತ್ತಲ ಬಾಗಲದಲ್ಲಿ ಆತ ಬಡಗಿಯಿಂದ ಕೊರೆಸಿದನೆಂದು ಹೇಳುವ ಕಥೆಯಿದೆ: ಬೆಕ್ಕು ಮತ್ತು ಮರಿಗಳು ಹೊರಗೆ ಹೋಗಿಬರಲು ಎರಡು ರಂಧ್ರಗಳಿದ್ದವಂತೆ, ಒಂದು- ದೊಡ್ಡದು, ಮತ್ತೊಂದು ಚಿಕ್ಕದು, ತಾಯಿಗೊಂದು, ಮರಿಗಳಿಗೊಂದು! ಆತನ ಬುದ್ಧಿಶಕ್ತಿಯ ಮೇಲೆ ಸಂಶಯ ಬಂದಂತೆ! ನಿಮ್ಮ ಲೇಖನದಲ್ಲಿ ಭಾವನೆಗಳ ಭರವಲ್ಲದೆ ಭಾಷೆಯ ಬೆಡಗೂ ಇದೆ. ನಾನಿದ್ದ ಧಾರವಾಡ, ಡಾವಣಗೆರೆಯ ನೆನಪು ಮರುಕಳಿಸಿತು. ಅಭಿನಂದನೆಗಳು. ಸಂಪಾದಕರ ಮುನ್ನುಡಿಯಲ್ಲಿಯ ‘ಅನಿವಾಸಿ’ಗಳ ಮರಳಿ ಮನೆಗೆ ಬರುವ ರೂಪಕವೂ ಅಂದವಾಗಿದೆ. ಅದೂ ಅನುಭವದ ಮಾತಲ್ಲವೆ? ನಿಮ್ಮ ಸರಕನ್ನು ಹೊರತಂದ ಅವರಿಗೂ ಧನ್ಯವಾದಗಳು. ಬರೆಯುತ್ತಾ ಇರಿ, ಸ್ವಾಮಿಯವರೇ, ಇದು ಬರೀ ನೈವೇದ್ಯ!

   Like

 2. Beautifully narrated. Reality written with dignity and pride. Personal Feelings have been expressed marvellously. Enjoyed reading it.

  Like

 3. ಮೊದಲ ಳಭಾಖದ ಲೇಖನಗಳಲ್ಲಿ ಬಳಸಿರುವ ಉಪಮೆಗಳು ಸಂದರ್ಭೋಚಿತವಾಗಿ ಓದಿನ ಮೆರುಗನ್ನು ಹೆಚ್ಚಿಸುತ್ತವೆ. ಉಳಿದ ಭಾಗ ನೇರ ಪ್ರಾಮಾಣಿಕ ನಿರೂಪಣೆಯಿಂದ ಆಪ್ತವಾಗುತ್ತದೆ. ಒಟ್ಟಿನಲ್ಲಿ ಚಂದದ ಬರಹ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.