ಮಲ್ಲಿಗೆಯ ಮಾತುಗಳು…..- ವಿಜಯ ನರಸಿಂಹ

♥ ಅನಿವಾಸಿಗೆ ಐದು ವರ್ಷದ ಹರ್ಷ ♥

(ಅನಿವಾಸಿಗೆ ಕೆಲವು ಮಧುರವಾದ ಕವನಗಳನ್ನು ಬರೆದು ಅನಿವಾಸಿಯ ಅನಧಿಕೃತ ಕೆ.ಎಸ್.ಎನ್ ಎಂತಲೇ ಹೆಸರು ಪಡೆದವರು ವಿಜಯ ನರಸಿಂಹ. ಇತ್ತೀಚೆಗೆ ತಾನೇ ಬೆಂಗಳೂರಿನಲ್ಲಿ ಚಂದದ ಹೊಸ ಮನೆಯನ್ನು ಕಟ್ಟಿಸಿ ವಿನೂತನ ಎಂದು ನಾಮಕರಣ ಮಾಡಿದ್ದಾರೆ. ಇಲ್ಲಿ  ಹಳೇ ಮನೆಗಳ ಮಾರಾಟ- ಕೊಳ್ಳುವಿಕೆ ಮತ್ತು ಕಟ್ಟಿಸಿದ ಮನೆಗಳೇ ಜಾಸ್ತಿಯಾದ್ದರಿಂದ  ನಮ್ಮಿಷ್ಟದಂತೆ  ಮನೆ ಕಟ್ಟಿಸಿ ನೋಡುವ ಭಾಗ್ಯವನ್ನು ಪಡೆಯಲು  ಬಹಳಷ್ಟು ಜನ ಭಾರತಕ್ಕೇ ಹೋಗಬೇಕೇನೋ. ಆದರೆ ಕವನಗಳನ್ನು ಕಟ್ಟಲು ಯಾವ ನೆಲವಾದರೇನು?   ಮಲ್ಲಿಗೆಗಳಂತೆ ಅರಳಿ ಘಮ ಘಮಿಸಲು ಯಾರ ಹಂಗೇನು? ಅನಿವಾಸಿಯ ಕವಿಗಳ ನಿಲುವೇ ಅದು.

ಇದೀಗ ತಾನೇ “ಮನೆ ಕಟ್ಟಿಸಿ ನೋಡಿ…”  ಮರಳಿ ಬಂದಿರುವ ಕವಿ ಮನ ಮಾತ್ರ ಆ ಇಟ್ಟಿಗೆ, ಸಿಮೆಂಟುಗಳ ನಡುವೆಯೂ ನವಿರಾದ ಪದಗಳ ಮೋಡಿಯಲ್ಲೇ ಸುತ್ತುತ್ತಿತ್ತೇನೋ? ಅಲ್ಲಿಂದಲೇ ಅನಿವಾಸಿಗೆ ಕಳಿಸಿದ  ಅವರ ಈ ಕವನಗಳಲ್ಲಿ  ಮಲ್ಲಿಗೆಯ ನವಿರು ಮತ್ತು ಘಮಲಿದೆ. ಸೂಕ್ಷ್ಮವಾದ್ದೊಂದು  ಆಶಯ ಮತ್ತು ಅರಳಿ ಬಾಡುವ ನಿರಾಶೆಯೂ ಇದೆ. ಹಾಸ್ಯವೂ ಸೇರಿದೆ. ಅನಿವಾಸಿಗಾಗಿಯೇ ಕಟ್ಟಿಕೊಟ್ಟ  ಅಳತೆಯ ಮಿತಿಯಿರದ ಎರಡು ಮೊಳ ಮಲ್ಲಿಗೆಯಂತ ಕವನಗಳು ಈ ವಾರದ ಅನಿವಾಸಿ ಓದುಗರಿಗಾಗಿ-ಸಂ )

ಪರಿಚಯ

ವಿಜಯ ನರಸಿಂಹ ಅವರು ಮೂಲತಃ ತುಮಕೂರಿನವರು.B.E Mechanical Engineering ನಲ್ಲಿ ಪದವಿ ಪಡೆದಿರುವ ಇವರು QUEST ಸಂಸ್ಥೆಯಲ್ಲಿ Technical Manager ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಗಳಲ್ಲಿ ಸಾಹಿತ್ಯ ರಚನೆಯೂ ಒಂದು. ಸಾಹಿತ್ಯದಲ್ಲಿ  ಕಾವ್ಯ ಪ್ರಾಕಾರ ತುಂಬಾ ಇಷ್ಟ  ಎನ್ನುವ ಇವರು ಹಲವು ಕವನಗಳನ್ನು ಬರೆದ್ದಿದ್ದಾರೆ.

ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಸಂಘದ ಅನಿವಾಸಿ ವಿಭಾಗದಲ್ಲಿ ಎರಡು ಬಾರಿ  ಇವರ ಆಯ್ದ ಕವನಗಳಿಗೆ ಮನ್ನಣೆ ದೊರೆತಿದೆ.  ರಾಷ್ತ್ರಕವಿ ಕುವೆಂಪು ಮತ್ತು ಮೈಸೂರು ಅನಂತ ಸ್ವಾಮಿ ಪ್ರಶಸ್ತಿಗಳು ದೊರೆತಿವೆ. ಕಾವ್ಯದ ಒರೆಯ ಸೆಲೆತ ಜೋರಾಗಿದ್ದರೆ ಅದನ್ನು ತಡೆಯಲು ಸಮಯಾಭಾವದ ಸೋಗು ಸಾಲದು ಎನ್ನುವ ಇವರು ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಡಾರ್ಬಿಯಲ್ಲಿ ಸನ್ಮಿತ್ರರೊಡನೆ ಸೇರಿ 2014 ರಲ್ಲಿ ಶುರುಮಾಡಿದ ಜೈ ಕರ್ನಾಟಕ ಬಳಗದ ಸ್ಥಾಪನೆಯಲ್ಲಿ ಇವರ ಪಾತ್ರವಿದೆ. ಯು.ಕೆ.ಯ ಮ್ಯಾಂಚೆಸ್ಟರಿನ ಬಳಿ ಇವರ  ಪ್ರಸ್ತುತ ನಿವಾಸ .◊

ನಗೆ ಮಲ್ಲಿಗೆ

                                                                   ಸುಮಾರು ದಿನಗಳಾಗಿದ್ದವು

ಹೂ ಮಾರುವವಳ ಕಂಡು

ನಾನೂ ಹೋಗಿರಲಿಲ್ಲ

ಅವಳೂ ಈ ಕಡೆ ಸುಳಿದಿರಲಿಲ್ಲ

ಮಾರುಕಟ್ಟೆಯಲ್ಲಿ ಮಲ್ಲಿಗೆ ಸರಬರಾಜು ಕಡಿಮೆ ಎಂಬ ಸುದ್ದಿ

ಏನಾಯಿತೋ ಕಾಣೆ,

 ಅತಿಯಾದ ಮಳೆಯೊ?

ಇಳುವರಿ ಕಡಿಮೆಯೊ?

ಮಧ್ಯವರ್ತಿಗಳ ಕುತಂತ್ರವೊ?

ಸಾಲು ಸಾಲು ಹಬ್ಬಗಳು

ಬೆಲೆ ಏರೋದು ಸಹಜ

ಆದರೆ ಅವಳು ಗಟ್ಟಿಗಿತ್ತಿ

ತನ್ನ ಮನೆಗೆ ಊರುಗೋಲು

ಆ ಕಸುಬು ಬಿಟ್ಟರೆ ಬೇರೆ ಯಾವುದೂ ಗೊತ್ತಿಲ್ಲ

ಯಾವಾಗಲೂ ಮಲ್ಲಿಗೆಯನ್ನೇ ಕೊಂಡರೆ

ಅದು ಎಷ್ಟು ಸಮಂಜಸ ?

ದೇವರ ಪೂಜೆಯ ಹೆಸರಿನಲ್ಲಿ

ಅವಳಿಗೊಂದು ವ್ಯಾಪಾರ

ಕೊಟ್ಟರೆ ಅವಳಿಗೂ ಒಂದು ಖುಷಿಯಲ್ಲವೇ,

ಬೆಲೆಯ ಮಾತು ಇದ್ದದ್ದೇ ಸ್ವಲ್ಪ ಹೆಚ್ಚಾದರಾಗಲಿ ಎಂದು

ಮಾರುಕಟ್ಟೆಯಲ್ಲಿ ಅವಳ ಕಂಡೆ

‘ಸೇವಂತಿ ಎರಡು ಮೊಳ

ಬಟ್ಟಾನ್ಸು ಎರಡು ಮೊಳ

ಬಿಡಿ ಪತ್ರೆ ತಾರವ್ವ, ಬೆಲೆ ಎಷ್ಟು ಹೇಳು’ ಎಂದೆ

ಅದಕ್ಕವಳು ‘ಮನೆಯಲ್ಲಿ

ಜಗಳವೊ ಸ್ವಾಮಿ? ಇತ್ತೀಚೆಗೆ

ಇಲ್ಲಿ ಸುಳಿವಿಲ್ಲ, ಇಂದು ಮಲ್ಲಿಗೆಯ ಕೊಳ್ಳಲಿಲ್ಲ’ ಎಂದಳು

‘ಅಯ್ಯೊ ಹಾಗೇನೂ ಇಲ್ಲವ್ವ

ಸರಬರಾಜು ಕಡಿಮೆ ಮಲ್ಲಿಗೆ ಸಿಗುವುದು ಕಷ್ಟವೆಂದು

ಜನರ ಮಾತು ಹಾಗಾಗಿ ಬರಲಿಲ್ಲ’ ಎಂದೆ

‘ಅದು ಸರಿ ಸ್ವಾಮಿ ಹಾಗಂತ

ನಾನೇನು ಸುಮ್ಮನಿರೋ ಆಕಿ ಅಲ್ಲ ನಮ್ಮ ಮನೇಲ್ಲೆ ಎರಡು ಬಳ್ಳಿ

ಅಂದಿನಿಂದಲೂ ಬೆಳದೀನಿ ಅದರ ಹೂ ನಿಮಗಂತಲೇ ಇಟ್ಟೀನಿ’

ಅಂದಳು

‘ಓ ಹಾಗಾದರೆ ಎರಡು ಮೊಳ ಕಟ್ಟಿಬಿಡು ‘ ಎಂದಾಗ ಅವಳ ಬದುಕು

ಕಟ್ಟುವಂತೆ ಕಟ್ಟಿದ್ದ ಮಲ್ಲಿಗೆಯ ದಿಂಡು ನನ್ನ ಕೈಸೇರಿತ್ತು

ನನ್ನ ಹೆಂಡತಿ ರಜೆಯೆಂದು ಗೊತ್ತಿದ್ದರೂ ಮಲ್ಲಿಗೆ ಕೊಂಡದ್ದು

ಗಟ್ಟಿಗಿತ್ತಿಯ ಬಾಳ ಮಲ್ಲಿಗೆ  ನಗಲೆಂದು…

                                                                                                                  ✍ವಿಜಯನರಸಿಂಹ

 

 ಮಲ್ಲಿಗೆಯ ಮಾತುಗಳು..

 

                        ವಿಜಯ ನರಸಿಂಹ ದಂಪತಿಗಳು

 

‘ಸ್ನಾನವಾಯಿತು ತಿಂಡಿ ಆಯಿತಾ?’ ಎಂದು ನಾನು 

‘ಕುಕ್ಕರ್ ಕೂಗಿದೆ, ನೀವೂ ಮತ್ತು ಅದು ಎರಡೂ ತಣ್ಣಗಾಗಬೇಕು’ ಎಂದು ಅವಳು 

‘ಪಾಪೂ, ಸ್ಕೂಲ್ ಡೈರಿ ಇಟ್ಟುಕೊಂಡೆಯಾ?’ ಎಂದು ಮಗಳಿಗೆ ಅವಳು 

‘ಹೂಂ’ ಎಂದುದು ಪುಟ್ಟ ಬಾಯಿ 

‘ಮಗೂ ಟಾಟಾ’, 

‘ನಾನು ಬರ್ತೀನಿ ಕಣೇ ಆಫೀಸಿಗೆ ಟೈಮ್ ಆಯ್ತು

ಏನಾದರೂ ತರುವುದಿದ್ದರೆ 

ಫೋನಾಯಿಸು’ ಎಂದು ನಾನು 

ಸಂಜೆ ವೇಳೆಗೆ ಚಲನವಾಣಿ

‘ಬರ್ತಾ ಮಕ್ಕಳಿಗೆ ಹಣ್ಣು ತನ್ನಿ,

ಸಕ್ಕರೆ ಖಾಲಿಯಾಗಿದೆ ಅದನ್ನೂ ತನ್ನಿ’ ಎಂದುದು ಆಜ್ಞಾವಾಣಿ 

‘ಪುಟಾಣಿಗಳ ಊಟ ಆಯ್ತಾ?’

ಎನ್ನುವುದು ನನ್ನ ರೂಢಿವಾಣಿ

‘ಆಗಲೇ ಹೋಂವರ್ಕ್ ಕೂಡ ಆಯ್ತು’ ಎಂದುದು  ದೊಡ್ಡ ಮಗಳ  ಜವಾಬ್ದಾರಿ ವಾಣಿ

‘ಊಟ  ಆಯ್ತಲ್ಲ ಮಕ್ಕಳನ್ನು  ವಾಕಿಂಗ್  ಕರೆದುಕೊಂಡು ಹೋಗಿ’ ಎಂದುದು ಧಾರಾವಾಹಿಯತ್ತ ನೆಟ್ಟ ಕಣ್ಣುಗಳ, ಬುರುಡೆಗೆ ಹುಳ ಬಿಟ್ಕೊಂಡ ಖಾಲಿ ವಾಣಿ

ಸಣ್ಣ ವಾಕಿಂಗ್ ಮುಗಿಸಿ ಬಂದ ಮೇಲೆ

‘ಪಪ್ಪಾ ಇವತ್ತು two ಕತೆ ಹೇಳು’  ಎಂದು ದೊಡ್ಡವಳು,

‘ಹೂಂ ಹೂಂ’ ಎಂದು ಚಿಕ್ಕವಳು 

ಕತೆಗಳೆಲ್ಲಾ ಮುಗಿದಮೇಲೆ 

‘ಮಕ್ಕಳು ಮಲಗಿದ್ವು ಕಣೇ’ ಎಂದು ನನ್ನ  ಮೆಲು-ವಾಣಿ 

‘ಇನ್ನು ಮೂರ್-ನಾಲ್ಕು ದಿನ ರಜಾ’ ಎಂದುದು

ನನ್ನ ಕಿವಿ ಮೇಲೆ ಬಿದ್ದ ಘೋರವಾಣಿ…….

                                            ✍ವಿಜಯನರಸಿಂಹ

(ಮುಂದಿನ ವಾರ- ಸ್ಥಿತ್ಯಂತರ )

7 thoughts on “ಮಲ್ಲಿಗೆಯ ಮಾತುಗಳು…..- ವಿಜಯ ನರಸಿಂಹ

  1. ಕುಕ್ಕರ್ ಕೂಗಿದೆ, ನೀವೂ ಮತ್ತು ಅದು ಎರಡೂ ತಣ್ಣಗಾಗಬೇಕು’ ಎಂದು ಅವಳು …👌👌beautiful ..

    Like

  2. Dr Shrivatsa Desai says,

    👏👏ಮಲ್ಲಿಗೆಯ ಕಂಪು ಭರಿತ ಪುಳಕ ಕೊಡುವ ಪದಗಳು! ಅನಿವಾಸಿ ಕೆ ಎಸ್ ಎನ್ ಸೈ!
    ‘ರಜೆಯ’ ದಿನವೂ
    ಗಟ್ಟಿಗಿತ್ತಿಯ ಬಾಳ ಮಲ್ಲಿಗೆ ನಗಲೆಂದು…ಕೊಳ್ಳುವ ಹೀರೋ! ಬಹಳ ಚಂದವಾಗಿದೆ.

    Like

  3. Ramsharan says,

    ಓದಲು ಹಗುರ
    ಅರ್ಥ ಗಂಭೀರ
    ‘ವಾಣಿ’ ಮೊಗ್ಗೆಗಳ ಹಾರ
    ಧನ್ಯವಾಗಿದೆ ಅನಿವಾಸಿ ಶುಕ್ರವಾರ….

    Like

    • ಕವನಗಳು ಚಂದವಿವೆ. ಒಂದು ಹೂ ಮಾರುವ ಕೊಳ್ಳುವ ಪ್ರಕ್ರಿಯೆಯಲ್ಲಿ ಭಾವಗಳು ಬೆಸೆಯುವುದರ ಜತೆಗೆ ಜೀವನದ ಪಾಡೂ ಅಡಗಿರುವುದನ್ನು ನವಿರಾದರೂ ನಿಷ್ಠುರ ಸತ್ಯವಾಗಿ ಕಾಣಿಸಿರುವ ಕವಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು.

      Like

  4. ವಿಜಯ್ ನಿಮ್ಮ ಪದ್ಯಗಳೆಲ್ಲ ಸೊಗಸಾಗಿವೆ, ಮನಮುಟ್ಟುವಂತಿದೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.