‘ಹಸಿವಿಲ್ಲದವರ ಹಸಿರು ದೇಶದಲ್ಲಿ ನಿಂತು… ’- ಕಾವ್ಯ ಕಡಮೆ ನಾಗರಕಟ್ಟೆ

* ಅನಿವಾಸಿಗೆ ಐದು ವರ್ಷದ ಹರ್ಷ *

(ಅನಿವಾಸಿ ಸಾಹಿತ್ಯ ಜಾಲ ಜಗಲಿ ಯು.ಕೆ.ಯ ಕನ್ನಡಿಗರಿಗಾಗಿ ಮಾತ್ರ ಇರುವ ತಾಣ.ಆದರೆ ಅನಿವಾಸಿಯಲ್ಲಿ ಅತಿವಿರಳವಾಗಿ  ಅತಿಥಿ ಮಿತ್ರರಿಂದ ಆಹ್ವಾನಿತ ಲೇಖನ-ಕವನಗಳನ್ನು ಪ್ರಕಟಿಸಿದ್ದೂ ಉಂಟು.

ಐದು ವರ್ಷಗಳ ಸಂಭ್ರಮದಲ್ಲಿ ನಿರತವಾಗಿರುವ ಈ ದಿನಗಳಲ್ಲಿ ಅನಿವಾಸಿಗೆ  ಬರೆಯಲು ಆಹ್ವಾನ ಹೋದದ್ದು ನ್ಯೂಜರ್ಸಿಯ  ಅಚ್ಚ ಕನ್ನಡತಿ, ಪ್ರತಿಭಾನ್ವಿತ ಲೇಖಕಿ-ಕವಿ ಶ್ರೀಮತಿ ಕಾವ್ಯ ಕಡಮೆ ನಾಗರಕಟ್ಟೆಯವರಿಗೆ. ನಮ್ಮಂತೆಯೇ ಅನಿವಾಸಿಯ ಹೃದಯವನ್ನು ಹೊತ್ತವರು. ಅಗಾಧ ಸಾಹಿತ್ಯ ಪ್ರತಿಭೆಯ, ಕಿರಿಯ ವಯಸ್ಸಿನ, ಕಾವ್ಯ ಕಡಮೆ ಇತ್ತೀಚೆಗೆ ತಾಯಿಯಾದ ದಿನಗಳಿವು. ನಾಲ್ಕು ತಿಂಗಳ ಮಗುವಿದೆ.ಆದರೆ, ಆಹ್ವಾನವನ್ನು ಸ್ವೀಕರಿಸಿ ತಾಯ್ನೆಲದ ಸೊಗಡಿನ ಲೇಖನವನ್ನು  ಅವರು ಬರೆದು ಕಳಿಸಿದಾಗ ಗಣೇಶನ ಹಬ್ಬ ಹತ್ತಿರ ಬಂದಿತ್ತು! ನಮ್ಮ ಮನಸ್ಸುಗಳಲ್ಲಿ ತಾಯ್ನೆಲ ಮತ್ತು ವಿದೇಶೀ ನೆಲಗಳ ನಡುವಿನ ಮಂಥನ ಶುರುವಾಗಲು ಇಷ್ಟು ಸಾಕಲ್ಲವೇ? ಕನ್ನಡ ಮನಸ್ಸುಗಳು ಎಲ್ಲಿಯೇ ಇದ್ದರೂ ಅವರು ಯೋಚಿಸುವ ಬಗೆ ಒಂದೇ. ಮಿಡಿಯುವ ಹೃದಯ, ಹಾಡುವ ಮನಸ್ಸು ನೆನೆಯುವುದು ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲವನ್ನೇ ಎನ್ನುವುದನ್ನು ಧೃಡಪಡಿಸುವ ಲೇಖನವಿದು. ಈ ಬಗ್ಗ ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಬಹುದು -ಸಂ )

ಪರಿಚಯ

ಕಾವ್ಯ ಕಡಮೆ

ಕಾವ್ಯ ಕಡಮೆಯವರು ಉತ್ತರಕನ್ನಡ ಜಿಲ್ಲೆಯವರು. ಕಡಮೆ ಇವರ ಊರು. ಕೇವಲ 31 ವರ್ಷ ವಯಸ್ಸಿನ ಕಾವ್ಯ ಬಿಎಸ್ಸಿ ಯ ನಂತರ ಕರ್ನಾಟಕ ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ಎಂ.ಎ. ನಲ್ಲಿ 6 ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿ ಮಿನುಗಿದವರು. 2013 ಯಿಂದ ಇವರು  ಅಮೆರಿಕಾದ ನ್ಯೂಜರ್ಸಿಯಲ್ಲಿ ವಾಸವಾಗಿದ್ದಾರೆ.  ಈಗಾಗಲೇ ಯಶಸ್ವಿಯಾಗಿ ಕನ್ನಡ  ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡ ಅಲ್ಲಿನ ಕನ್ನಡ ಸಮುದಾಯಕ್ಕೆ  ಕಾವ್ಯ ಭಾರೀ ಕೊಡುಗೆಯಾಗಿ ಸಂದಿದ್ದಾರೆ. ತಮ್ಮ ಸಾಹಿತ್ಯಕ ಚಟುವಟಿಕೆಗಳನ್ನು ಅಲ್ಲಿಂದಲೇ ನಡೆಸುತ್ತ ಅಮೆರಿಕಾದ ಅನಿವಾಸೀ ಕನ್ನಡ ಸಮುದಾಯದ ಹೆಸರನ್ನು ಎತ್ತಿ ಹಿಡಿವಲ್ಲಿ ನೆರವಾಗಿದ್ದಾರೆ. ’ಧ್ಯಾನಕೆ ತಾರೀಖಿನ ಹಂಗಿಲ್ಲ ’,  ’ಜೀನ್ಸು ತೊಟ್ಟ ದೇವರು ’- ಎನ್ನುವ ಪುಸ್ತಕಗಳು ಇವರ ಪ್ರಕಟಿತ ಕವನ ಸಂಕಲನಗಳು.

’ಪುನರಪಿ ’ ಎನ್ನುವುದು ಕಾದಂಬರಿ.

‘ಆಟದೊಳಗಾಟ ‘ ಮತ್ತು ‘ಡೋರ್ ನಂಬರ್ ಎಂಟು ‘- ಇವರ ಇತ್ತೀಚೆಗಿನ ನಾಟಕಗಳ ಸಂಕಲನವಾಗಿದೆ.

ಇದಲ್ಲದೆ ನಿಯತಕಾಲಿಕಗಳಿಗೆ, ಪತ್ರಿಕೆಗಳಿಗೆ ಬರೆಯುತ್ತಲೇ ಇರುತ್ತಾರೆ.

ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಬರೆಯಬಲ್ಲ ಇವರ ಪ್ರತಿಭೆಯನ್ನು ಮನ್ನಿಸಿ ಇವರ ಕೃತಿಗಳಿಗೆ  ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ದೊರೆತಿದೆ. ಯುವ ಬರಹಗಾರರಿಗೆ ದೊರಕುವ ಟೋಟೋ ಪುರಸ್ಕಾರ ಸಂದಿದೆ. ಗುಲ್ಬರ್ಗ ಜಿಲ್ಲೆ ನೀಡುವ ಸೇಡಂನ ಅಮ್ಮ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಕಡೆಂ ಗೋಡ್ಲು ಕಾವ್ಯ ಪುರಸ್ಕಾರ, ದಿನಕರ ಕಾವ್ಯ ಪ್ರಶಸ್ತಿ ಮತ್ತು ನಾಟಕ ಅಕಾಡೆಮಿಯ  ನಾಟಕ ಬಹುಮಾನಗಳು ದೊರೆತಿವೆ.

ತುಷಾರದಲ್ಲಿ ಕಾವ್ಯಾ ಕಾಲಂ

ಕಾವ್ಯ ಹುಟ್ಟಿ ಬೆಳೆದ ಮನೆಯಲ್ಲಿ ಸಾಹಿತ್ಯಕ ವಾತಾವರಣಕ್ಕೆ ಕೊರತೆಯಿರಲಿಲ್ಲ, ತಾಯಿ ಸುನಂದ ಕಡಮೆ ಪ್ರಸಿದ್ದ ಕಥೆಗಾರ್ತಿ ಮತ್ತು ಕಾದಂಬರಿಗಾರ್ತಿ. ತಂದೆ ಪ್ರಕಾಶ ಕಡಮೆ ಕವಿಗಳು ಮತ್ತು ನಾಗಸುಧೆ ಎನ್ನುವ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಮನೆಯ ರೂವಾರಿಗಳು. ಪತಿ ಸಂತೋಷ ನಾಗರಕಟ್ಟೆ, ಭಾಷೆಯ ಹಂಗಿಲ್ಲದೆ ಸಾಹಿತ್ಯವನ್ನು ಆರಾಧಿಸುವ ಬರೆಯುವ ಮತ್ತು ಓದುವ ವ್ಯಕ್ತಿ. ಈ ವಾತಾವರಣದಲ್ಲಿ ಬೆಳೆದು ವಯಕ್ತಿಕ ಸಾಹಿತ್ಯಾಸಕ್ತಿ, ಸಾಧನೆ ಮತ್ತು ಬರಹಗಳನ್ನು ವಿದೇಶಿ ನೆಲದಿಂದ ಮುಂದುವರೆಸಿರುವ ಕಾವ್ಯ ನಮ್ಮೆಲ್ಲರಿಗೂ ಪ್ರೇರಣೆಯಾಗಬಲ್ಲರು. ಅನಿವಾಸಿ ಜಾಲ ಜಗಲಿಯ  ಚಟುವಟಿಕೆಗಳನ್ನು ಗಮನಿಸಿ ಮೆಚ್ಚಿರುವ ಕಾವ್ಯ ಕಡಮೆ ನಮ್ಮೊಡನೆ ಈ ವಾರ ಅತ್ಯಂತ ಸರಳ ಮನಸ್ಸಿನ, ಆತ್ಮೀಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ಅನಿವಾಸಿಯ ಧನ್ಯವಾದಗಳು ಮತ್ತು ಶುಭಾಶಯಗಳು- ಸಂ

ಹಸಿವಿಲ್ಲದವರ ಹಸಿರು ದೇಶದಲ್ಲಿ ನಿಂತು………..

ನ್ಯೂಜರ್ಸಿಯ ಯಾರಿಟನ್ ನದಿಯ ದಂಡೆಗುಂಟ ಹರಡಿರುವ ಜಾನ್ಸನ್ ಉದ್ಯಾನವನ

ಹೊರರಾಜ್ಯಗಳಲ್ಲಿ ಸುತ್ತಾಡುವಾಗ ಕನ್ನಡ ಭಾಷೆ ಕೇಳಿದರೆ ಮತ್ತು ಪರದೇಶದಲ್ಲಿ ಪ್ರಯಾಣಿಸುವಾಗ ಸೀರೆಯುಟ್ಟವರು ಕಣ್ಣಿಗೆ ಬಿದ್ದರೆ ಎಂಥದೋ ಆತ್ಮೀಯತೆ ಅದೇ ಕ್ಷಣ ಬೆಳೆದುಬಿಡುವುದು. ನೆವಾರ್ಕ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಇಮಿಗ್ರೇಶನ್ ಸರತಿಯಲ್ಲಿ ನಿಂತಾಗ “ಬಂದ್ ಮುಟ್ಟೀದೆ ಆಯಿ. ಇಲ್ಲಾ, ಮಳೀ ಏನ್ ಇಲ್ಲಿಲ್ಲೆ. ಅಲ್ ಹ್ಯಾಂಗ?” ಎಂದು ಫೋನಿನಲ್ಲಿ ಪಿಸುಗುಟ್ಟಿದ್ದ ತಿಳಿಹಸಿರು ಕುರ್ತಾ ತೊಟ್ಟ ಹುಡುಗಿ ನನಗೆ ಸಾಕ್ಷಾತ್ ಕನ್ನಡಮ್ಮನಂತೆ ಕಂಡಿದ್ದು ಸುಳ್ಳಲ್ಲ.

ಸಹಜ ಉಸಿರಿನಷ್ಟೇ ಸರಾಗವಾಗಿ ಕನ್ನಡದಲ್ಲಿ ಯೋಚಿಸುವುದನ್ನು ಕನಸು ಕಾಣುವುದನ್ನೂ ಸುತ್ತಲ ಪರಿಸರದಿಂದಲೇ ಕಲಿತ ನನಗೆ ಕನ್ನಡ ಭಾಷೆ ಖಾಸಗೀ ದೋಸ್ತನೊಟ್ಟಿಗಿನ ಆಪ್ತ ಸಂವಾದದ ಹಾಗೆ. ‘ನನಗೆ ಹೊಟ್ಟೆನೋವು ’ ಎಂದು ನಾನು ಕನ್ನಡದಲ್ಲಲ್ಲದೇ ಬೇರಾವ ಭಾಷೆಯಲ್ಲೂ ಹೇಳಲಾರೆ.

ಕುವೆಂಪು- ಅನಂತಮೂರ್ತಿ- ಬೈರಪ್ಪ- ಮಾಸ್ತಿ- ತೇಜಸ್ವಿ ಅಂತ ಭೇದ ಮಾಡದೇ ಓದಿಕೊಂಡ ಸಂತೋಷನನ್ನು ಮದುವೆಯಾಗಿ ನ್ಯೂಜೆರ್ಸಿಯ ಹೈಲ್ಯಾಂಡ್‍ಪಾರ್ಕಿಗೆ ಬಂದಾಗ ಕನ್ನಡವೆನ್ನುವುದು ಇವನ ಜತೆ ಸಂಭಾಷಣೆಗೆ ಬಿಟ್ಟರೆ ಅಮ್ಮನ ಒಂದು ದೂರವಾಣಿ ಕರೆಯ ಅನತಿ ದೂರದಲ್ಲಿದೆ ಅಂತನ್ನಿಸಿತ್ತು. ಕನ್ನಡ ಯತೇಚ್ಛವಾಗಿ ದೊರೆಯುವ ಜಾಲತಾಣಗಳು, ಕನ್ನಡ ಪತ್ರಿಕೆಗಳ ಅಂತರ್ಜಾಲ ಆವೃತ್ತಿಗಳು, ಅವಧಿ- ಕೆಂಡಸಂಪಿಗೆ- ಚುಕ್ಕುಬುಕ್ಕು ಮುಂತಾದ ಪೋರ್ಟಲ್‍ಗಳು, ಮನೆಯಿಂದ ಹೊತ್ತುತಂದ ಹತ್ತಾರು ಪುಸ್ತಕಗಳು ನನ್ನ ಉಸಿರುಳಿಸಿದವು. ಹೀಗೆ ಜಗದ ಇನ್ನೊಂದು ಮೂಲೆಯಲ್ಲಿ ಕುಳಿತು ಆರಿಫ್‍ರ ‘ಬೆಂಕಿಗೆ ತೊಡಿಸಿದ ಬಟ್ಟೆ’, ತೇಜಶ್ರೀ ಅವರ ‘ಉಸ್ರುಬುಂಡೆ’ ಸಂಕಲನಗಳನ್ನು ಓದುವಾಗ, ಚುಕ್ಕುಬುಕ್ಕು ಪೋರ್ಟಲ್ಲಿನಲ್ಲಿ  ವೆಂಕಟೇಶಮೂರ್ತಿಯವರು ವಿವರಿಸುವ ಕುಮಾರವ್ಯಾಸ ಭಾರತದ ಒಂದೊಂದೇ ಬಿಡಿಪದ್ಯಗಳ ಕುರಿತು ಗ್ರಹಿಸುವಾಗ ನನಗೆ ಕನ್ನಡವೆನ್ನುವುದು ನನ್ನೊಳಗಿನ ಖಾಸಗಿಯಾದುದೊಂದು ವೈಯಕ್ತಿಕ ನೆಲೆ ಎನ್ನುವ ಭಾವ ಮೂಡುತ್ತದೆ.

ನಾನು ಅಮೆರಿಕಕ್ಕೆ ಬಂದ ವರ್ಷ ನಮ್ಮ ಮನೆಯ ಹತ್ತಿರವೇ ಇರುವ ರ್ಯಾರಿಟನ್ ನದಿಯ ದಂಡೆಗುಂಟ ಹರಡಿರುವ ಜಾನ್ಸನ್ ಉದ್ಯಾನವನದಲ್ಲಿ ಸಂಜೆಯ ವಾಕ್ ಮಾಡುತ್ತಿದ್ದಾಗ ಒಂದು ಆಪ್ತ ಸನ್ನಿವೇಶವನ್ನು ಎದುರಿಸಿದ್ದೆ. ಆಗಷ್ಟೇ ಭಾರತದಲ್ಲಿ ಗಣೇಶನ ಹಬ್ಬ ಮುಗಿದಿತ್ತು. ಜಾನ್ಸನ್ ಪಾರ್ಕಿನ ರ್ಯಾರಿಟನ್ ನದಿಯ ದಂಡೆಯ ಮೇಲೆ ಉರುಟುರುಟಾದ ಬಣ್ಣ ಮಾಸಿದ ಮಣ್ಣಿನ ಮುದ್ದೆಯೊಂದು ಬಿದ್ದಿತ್ತು. ಅದು ಏನೆಂದು ಕಣ್ಣಿಗೆ ಗೊತ್ತಾಗುವ ಮೊದಲೇ ಹೃದಯಕ್ಕೆ ಗೊತ್ತಾಗಿತ್ತು.

ಅದೊಂದು ಗಣೇಶನ ಮೂರ್ತಿ. ಈಗ ಇಂಡಿಯನ್ ದವಸ ಧಾನ್ಯ ಸಿಗುವ ಎಲ್ಲ ಅಂಗಡಿಗಳಲ್ಲೂ ಚೌತಿಗೆ ಗೌರಿ-ಗಣೇಶ, ದಸರಾ ಹಬ್ಬಕ್ಕೆ ಬೊಂಬೆಗಳು, ದಾಂಡಿಯಾ ಕೋಲಾಟದ ಕೋಲುಗಳು, ದೀಪಾವಳಿಗೆ ಹಣತೆಗಳು ಎಲ್ಲವೂ ಸಿಗುತ್ತವೆ. ಅಂಥದೇ ಅಂಗಡಿಯಿಂದ ಭಾರತೀಯ ಕುಟುಂಬದವರ್ಯಾರೋ ತಂದು, ಪೂಜೆ ಮಾಡಿ, ನದಿಯಲ್ಲಿ ಬಿಟ್ಟು ಹೋದ ಗಣೇಶನ ಮೂರ್ತಿಯಾಗಿತ್ತದು. ಅದ್ಯಾವುದೋ ಕಾರಣಕ್ಕೆ ನೀರಿನಲ್ಲಿ ಮುಳುಗದೇ ದಡದಲ್ಲಿ ಬಂದು ಬಿದ್ದಿತ್ತು. ಅದೇಕೋ ಆ ಮೂರ್ತಿಯ ಜೊತೆ ಉತ್ತರ ಕನ್ನಡ ಜಿಲ್ಲೆಯ ನಮ್ಮೂರು ಕಡಮೆಯಲ್ಲಿ ಮನೆಯವರೆಲ್ಲ ಸೇರಿ ಆಚರಿಸುವ ಹಬ್ಬದ ಸಂಭ್ರಮ ನೆನಪಾಗಿ ಮನಸ್ಸು ತುಂಬಿ ಬಂದಿತ್ತು. ಅದೂ ನನ್ನೊಳಗಿನ ಕನ್ನಡತನದ ಇನ್ನೊಂದು ಶಬ್ದದಂತೆ ಕೇಳಿಸಿತು.

ಇಂಥದೇ ಸನ್ನಿವೇಶ ಎಡಿಸನ್ ಪಟ್ಟಣದ ‘ಅಪನಾ ಬಜಾರ್’ ಎಂಬ ಭಾರತೀಯ ಸ್ಟೋರ್‍ನಲ್ಲಿ ಸುತ್ತಾಡುವಾಗಲೂ ಎದುರಾಗಿತ್ತು. ಆ ವಾರದ ದಿನಸಿ ತರಲು ಪ್ರತೀ ರ್ಯಾಕ್ ತಡಕಾಡುವಾಗ ಉಡುಪಿಯವರ ಅಪ್ಪೆಮಿಡಿ ಉಪ್ಪಿನಕಾಯಿ ಬಾಟಲ್ ನೋಡಿ ಕುಣಿದಾಡಿಬಿಡ್ಡಿದ್ದೆ. ನಿಜಹೇಳಬೇಕೆಂದರೆ ಹುಬ್ಬಳ್ಳಿಯಲ್ಲಿರುವಾಗಲೂ ನನಗೆ ಮಿಡಿಉಪ್ಪಿನಕಾಯಿ ಹೀಗೆ ಅಂಗಡಿಯಲ್ಲಿ ದೊರೆಯುವುದರ ಕಲ್ಪನೆಯೂ ಇರಲಿಲ್ಲ. ಅದು ಕೇವಲ ಊರಿನಲ್ಲಿ ಅಜ್ಜಿ ವರ್ಷಾನುಗಟ್ಟಲೆ ಕಾಯ್ದಿರಿಸುವ ಭರಣಿಯಲ್ಲಷ್ಟೇ ತುಂಬಿರುವುದು ಅಂದುಕೊಂಡಿದ್ದೆ.

ಹೀಗೆಯೇ ಕನ್ನಡತನವನ್ನು ನನಗೆ ದೈನಿಕದಿಂದ ಬೇರ್ಪಡಿಸಿ ನೋಡಲು ಸಾಧ್ಯವೇ ಇಲ್ಲ. ನನಗನಿಸಿದಂತೆ ಪ್ರತಿಯೊಬ್ಬರೊಳಗೂ ನಮಗರಿವಿಲ್ಲದೇ ಹರಿಯುತ್ತಿರುವ ಒಂದು ಭಾಷೆಯ ನೇಟಿವಿಟಿ ಇರುತ್ತದೆ, ಸಂಸ್ಕೃತಿ ಇರುತ್ತದೆ. ಅದು ಸಾರ್ವತ್ರಿಕವಾಗಿರದೇ ನಮ್ಮ ಸ್ವಂಥದ್ದೇ ಆಗಿರುತ್ತದೆ.

ಇಲ್ಲಿಗೆ ಬಂದ ಮೇಲೆ ಮನೆಯಲ್ಲಿ ಕುಳಿತಿರಲಾಗದೇ ನನ್ನ ಗಂಡ ಪಾಠ ಮಾಡುವ ರಡ್ಗರ್ಸ್ ವಿಶ್ವವಿದ್ಯಾಲಯದ ‘ಇಂಟರ್‍ನ್ಯಾಷನಲ್ ವಿಮೆನ್ಸ್ ಗ್ರೂಪ್’ ಎಂಬ ಪುಟ್ಟ ಗುಂಪು ಸೇರಿಕೊಂಡೆ. ಹೊಸ ಸಂಗತಿಗಳ ಬಗ್ಗೆ ಆಸಕ್ತಿಯಿರುವ ಒಂದಿಷ್ಟು ಜನ ಮಹಿಳೆಯರು ಸೇರಿಕೊಂಡು ಪ್ರತೀ ದಿನ ಒಂದೆರಡು ಘಂಟೆ ಅವರವರ ದೇಶದ ಬಗ್ಗೆ ಹರಟುವ, ಬೇರೆ ಬೇರೆ ದೇಶಗಳ ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಅಡುಗೆಯ ಕುರಿತು ತಿಳಿದುಕೊಳ್ಳುವುದು ಈ ಗುಂಪಿನ ಉದ್ದೇಶ. ಮೊದಲದಿನವೇ ಪರಿಚಯವಾದ ವೆನಝುವೆಲಾದ ಗೆಳತಿ ಮರಿಯಲ್, ನಾನು ನಿನಗೆ ಸ್ಪಾನಿಷ್ ಕಲಿಸುತ್ತೇನೆ ಅಂದಳು. “ಅದಕ್ಕೆ ಪ್ರತಿಯಾಗಿ ನಾನು ನಿನಗೆ ಕನ್ನಡ ಮಾತನಾಡಲು ಕಲಿಸಬಲ್ಲೆ” ಅಂತ ಹೇಳಿದೆ. ಹಾರ್ದಿಕವಾಗಿ ನಕ್ಕು “ಶೂರ್” ಅಂದಳು. ಆ ಬುಧವಾರ ಹಂಗೇರಿಯ ಗೆಳತಿ ಅಲಿಜ್ ‘ಫಲಚಿಂಥಾ’ ಅನ್ನುವ ತಿನಿಸು ತಯಾರಿಸುವುದನ್ನು ಹೇಳಿಕೊಡುತ್ತಿದ್ದಳು. ಒಂದಿಷ್ಟು ಬೆಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಹಿಟ್ಟಿನಲ್ಲೇ ಜಾಸ್ತಿ ಸುರಿಯುತ್ತಾರೆಂಬುದನ್ನು ಬಿಟ್ಟರೆ ’ಫಲಚಿಂಥಾ ’ ಥೇಟು ನಮ್ಮ ದೋಸೆಯಂತೆಯೇ ಕಂಡಿತು. “ನಮ್ಮ ಮನೆಯಲ್ಲಿ ಇದನ್ನು ವಾರದಲ್ಲಿ ಎರಡು ದಿವಸ ಮಾಡುತ್ತೇವೆ” ಅಂದೆ. ಅಲಿಜ್ ‘ನಿಜವೇ?’ ಎಂದು ಹುಬ್ಬೇರಿಸಿದಳು. ಅಂದು ಮರಿಯಲ್ ‘ದೋಸೆ’ ಎಂಬ ಮೊದಲ ಕನ್ನಡ ಪದ ಕಲಿತ ಸಂತಸದಲ್ಲಿದ್ದಳು.

ಗಣೇಶನ ಚವತಿಗಾಗಿ ಕಡಮೆಯ ಮನೆಯಲ್ಲಿ ಉಂಡಿಗಳ ಫ್ಯಾಕ್ಟರಿ !

ಇಲ್ಲಿಗೆ ಬಂದ ಹೊಸತರಲ್ಲಿ ಪರಿಚಯವಾದ ತುಂಬ ಜನ ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದರು. “ಡೂ ಯೂ ಮಿಸ್ ಯುವರ್ ಹೋಮ್?” ಅಂತ. ಆ ಹೋಮ್ ಶಬ್ದ ಕೇಳಿದಾಗಲೆಲ್ಲ ನನಗೆ ವಿಚಿತ್ರ ಕಳವಳವಾಗುವುದು. ನಿಜಕ್ಕೂ ಆ ಹೋಮ್ ಎನ್ನುವುದು ಹುಬ್ಬಳ್ಳಿಯಲ್ಲಿ ಅಪ್ಪ- ಅಮ್ಮ- ತಂಗಿ ವಾಸವಾಗಿರುವ ‘ನಾಗಸುಧೆ’ ಎನ್ನುವ ಮನೆ ಅಷ್ಟೆಯೇ? ಸದ್ದೇ ಇಲ್ಲದೇ ಸಾವಿರಾರು ಮೈಲಿ ಕಾರಿನಲ್ಲೇ ಚಲಿಸುವ ಹಸಿವಿಲ್ಲದವರ ಈ ಹಸಿರು ದೇಶದಲ್ಲಿ ನಿಂತಾಗ ಹುಬ್ಬಳ್ಳಿಯ ದುರ್ಗದಬೈಲಿನ ಶೇವುಪುರಿ, ನನ್ನ ತಂಗಿ ನವ್ಯಾ “ಏನ್‍ಲೇ ಅಕ್ಕಾ” ಅಂತನ್ನುವಾಗಿನ ತುಂಟ ದನಿ, ಕಡಮೆಯ ಮನೆಯ ಬಾವಿಯಲ್ಲಿ ಮೋರೆಯಾ ಮೋರೆಯಾ ಎಂದು ಗಣಪತಿ ವಿಸರ್ಜಿಸಿದ ತಕ್ಷಣವೇ ಮುಖಕ್ಕೆ ಸಿಡಿಯುತ್ತಿದ್ದ ತುಂಬಿದ ಬಾವಿಯ ನೀರಿನ ಸಿಹಿ, ಕೆಲಸಕ್ಕೆ ಸೇರಿದ ಮೊದಲದಿನವೇ ಬೆಚ್ಚಿಸಿದ್ದ ಬೆಂಗಳೂರಿನ ಚಾಮರಾಜಪೇಟೆಯ ಜನಜಂಗುಳಿ- ಎಲ್ಲಕ್ಕೂ ಈ ‘ಮನೆ’ ಶಬ್ದದ ಜೊತೆಗೆ ನಂಟಿದೆ ಅಂತಲೇ ಅನ್ನಿಸುವುದು. ಜೊತೆಗೆ ಅಪನಾ ಬಜಾರ್‍ನಲ್ಲಿ ಸಿಕ್ಕ ಅಪ್ಪೆಮಿಡಿ ಉಪ್ಪಿನಕಾಯಿ, ಹಂಗೇರಿಯ ಫಲಚಿಂಥಾ ಮತ್ತು ಯಾರಿಟನ್ ನದಿ ದಂಡೆಯಲ್ಲಿ ಮುಗುಳ್ನಗುತ್ತ ತನ್ನ ಮೋಟುಗೈಯಲ್ಲಿ ಅಭಯ ನೀಡುತ್ತಿದ್ದ ಬಣ್ಣದ ಮಣ್ಣಿನ ಮುದ್ದೆ ಕೂಡ ಈ ಹೊತ್ತು ನನ್ನೊಳಗಿನ ‘ಮನೆ’ಯ, ಕನ್ನಡತನದ ಜೀವದಾಯಿನಿ ಮಿಂಚುಗಳಂತೆಯೇ ಕಾಣುವವು.   

(ಮುಂದಿನ ವಾರ- ಮಲ್ಲಿಗೆಯ ಕಂಪು)

5 thoughts on “‘ಹಸಿವಿಲ್ಲದವರ ಹಸಿರು ದೇಶದಲ್ಲಿ ನಿಂತು… ’- ಕಾವ್ಯ ಕಡಮೆ ನಾಗರಕಟ್ಟೆ

  1. ಅಮೇರಿಕನ್ನಡತಿ ಕಾವ್ಯ ಕಡಮೆ ಅವರಿಗೆ ಸುಸ್ವಾಗತ
    ನಮ್ಮ ಅನಿವಾಸಿ ಬಳಗದಲ್ಲಿ ಇಂಗ್ಲೆಂಡಿಗೆ ವಲಸೆ ಬಂದ ಕೆಲವರು ಕಳೆದ ನಾಲ್ಕು ದಶಕಗಳಿಂದ ಇಲ್ಲಿ ನೆಲೆಸಿದ್ದಾರೆ . ನಾನು ಇಲ್ಲಿ ಎರಡು ದಶಕಗಳನ್ನು ಮೀರಿ ವಾಸವಾಗಿದ್ದೇನೆ. ಹಿರಿಯ – ಕಿರಿಯ ಅನಿವಾಸಿಗಳಾದ ನಮ್ಮೆಲ್ಲರ ತುಡಿತ Mind-set ಒಂದೇ ಆಗಿರುತ್ತದೆ ಎಂಬುದನ್ನು ಗಮನಿಸಬಹುದು . “ಇಲ್ಲಿ ಇರಲಾರೆ – ಅಲ್ಲಿಗೆ ಹೋಗಲಾರೆ” ಎಂಬ ಒಂದು ಸಂಧಿಗ್ಧ ಸನ್ನಿವೇಶಕ್ಕೆ ಒಳಗಾಗಿದ್ದೇವೆ.

    ‘ಕನ್ನಡತನ – ಮನೆ’ ಇತ್ಯಾದಿ ವಿಚಾರಗಳ ಬಗ್ಗೆ ನಿಮ್ಮ ಅನಿಸಿಕೆಗಳು ಸರಳವಾಗಿ ಮತ್ತು ಸುಂದರವಾಗಿದೆ
    “Home is where the heart is”
    ಹೊಸದಾಗಿ ಬಂದಾಗ ಇರುವ ತುಡಿತ ತೀಕ್ಷ್ಣತೆ ಕೆಲವು ಸಮಯದನಂತರ ಕಡಿಮೆಯಾಗ ಬಹುದು
    There can be a change of heart! ( after all)
    ಹೀಗಾಗಿ ಜೀವನ ದೃಷ್ಟಿಗಳು ಕೂಡ relative ಎಂದು ಹೇಳಬಹುದು

    ತಮಗೆ ಆಶ್ರಯ ನೀಡಿದ ನೆಲೆವೇ ತಮ್ಮ ನಿಜವಾದ ನೆಲೆ ಎಂದು ಪರಿಗಣಿಸಿದವರೂ ಇರುತ್ತಾರೆ . OCI ದಾಖಲೆಗಳನ್ನು ಸ್ವೀಕರಿಸದೆ ವೀಸಾ ಪಡೆದು ಪ್ರವಾಸಿಗಳಂತೆ ಬಂದು ಬೆಂಗಳೂರಿನಲ್ಲಿ ನೆಲೆಯಿಲ್ಲದ ಹೋಟೆಲ್ ಗಳಲ್ಲಿ ತಂಗಿದ್ದುಕೊಂಡು ಓಡಾಡುವ “ಕನ್ನಡಿಗರನ್ನೂ” ಕಂಡಿದ್ದೇವೆ !! ನಮ್ಮ ಸಾಂಸ್ಕೃತಿಕ ಮೌಲ್ಯಗಳು ಭಾಷೆಯ ಬಗ್ಗೆ ಪ್ರೇಮ ಮತ್ತು ಭಾರತದಲ್ಲಿ ಉಳಿದ ಸಂಬಂಧಗಳು ಬಹುಶಃ ನಮ್ಮನ್ನು ನಿರ್ದೇಶಿಸುತ್ತವೆ.

    ಅನಿವಾಸಿ ಜಾಲಜಗುಲಿಗೆ ಐದು ವರ್ಷತುಂಬಿದೆ . ಈ ಒಂದು ನಮ್ಮ ಹೊಸ ಪ್ರಯತ್ನದಲ್ಲಿ ಪ್ರೇಮಲತಾ ಅವರು ನಮ್ಮಂತೆಯೇ ಅನಿವಾಸಿಯಾದ ನಿಮ್ಮನ್ನು ಬರೆಯಲು ಆಹ್ವಾನಿಸಿರುವುದು ಶುಭ ಆರಂಭ.
    ಅನಿವಾಸಿ ಬಳಗಕ್ಕೆ ಮತ್ತೊಮ್ಮೆ ಸ್ವಾಗತ

    Like

  2. ಕಾವ್ಯಾ ಕಡಮೆಯವರ ಲೇಖನ ಮನದ ಒಳಗಿನ ಸಂದಿಯಲ್ಲೆಲ್ಲೋ ಹುದುಗಿಸಿಟ್ಟ ನೆನಪುಗಳನ್ನು ಕೆದಕಿ ಕೆದಕಿ ತೆಗೆಯಿತು ಅಂದರೆ ಖಂಡಿತಾ ತಪ್ಪಲ್ಲ.ನನ್ನ ಮಗ ಸೊಸೆ ಮೊಮ್ಮಗಳು ಇರೋದು ಅದೇ ನ್ಯೂಜೆರ್ಸಿಯ ಎಡಿಸನ್ ಪಟ್ಟಣದಲ್ಲೇ.ಅಲ್ಲಿ ಎಲ್ಲವೂ ನಮ್ಮದೇ, ನಮ್ಮವರದೇ ಸಿಗ್ತದೆ ಏನೋ ಒಂದು ಕೊರತೆಯ ಒರತೆಯೊಂದಿಗೆ.ನಾವೂ ಒಂದು ಬಾರಿ ನಮ್ಮ ಶ್ರಾವಣಗೌರಿ, ಗಣೇಶನ ಹಬ್ಬ ಅಲ್ಲೇ ಮಾಡಿದ್ದು
    ಫಕ್ಕನೇ ನೆನಪಿಗೆ ಬಂತು.ಹೂ ಬೇಕು ಪೂಜೆಗೆ ಅಂತ ಮಗ ಬುಕೆ ತಗೊಂಡು ಬರತಿದ್ದ.ಅದರ ಹೂ ಬಿಡಿಸಿ, ಅದರಲ್ಲಿಯ ಎಲೆನೇ ಪತ್ರಿ, ಇದ್ದ ಹುಲ್ಲಿನ ಎಸಳನ್ನೇ ಗರಿಕೆ ಅಂತ ಉಪಯೋಗಿಸಿ ಯಾವುದೇ ವ್ಯತ್ಯಯ ಇಲ್ಲದೇ ಅನೂಚಾನವಾಗಿ ನಡೆದುಕೊಂಡು ಪದ್ಧತಿಯಲ್ಲೇ ಪೂಜೆ ಮಾಡಿ ಸಂಭ್ರಮ ಪಟ್ಟಿದ್ದೆ ಪಟ್ಟಿದ್ದು.ಮುದ್ದಾದ ಜೋಡಿ ಗಣಪ ಸಿಕ್ಕೂ ಬಿಟ್ಟಿದ್ದವು.ನನ್ನ ,ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.ಗಣೇಶನ ವಿಸರ್ಜನೆ ಮಾತ್ರ ಸ್ವಲ್ಪ ಕಷ್ಟ ಆಯ್ತು.ಕತ್ತಲಲ್ಲಿ ಹೋಗಿ ಬಹುಶಃ ಜಾನ್ಸನ್ ಲೇಕ್ ನಲ್ಲೇ ದೂರದಿಂದ ಗಣೇಶ ನ್ನ , ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ವಿಸರ್ಜಿಸಿ ದ್ವಿ.ಕಾವ್ಯಾ ಅವರಿಗೆ ತೊಡರಿದ ಗಣಪ ನಮ್ಮ ಜೋಡಿ ಗಣಪ ನಲ್ಲಿ ಒಬ್ಬನೇ ಅಂತ ಒಂದು ಕ್ಷಣ ಯೋಚಿಸಿದೆ ನಾ.
    ನಮ್ಮವರು ಅನ್ನೋ ಪದಕ್ಕೆ ಅಲ್ಲಿ ತುಂಬಾ ವಿಸ್ತೃತ ಅರ್ಥ ಅನಿಸ್ತದೆ.ನಾನು ,ನನ್ನವರೊಂದಿಗೆ ವಾಕ್ ಹೋದಾಗ ಒಬ್ರು ಬಂದು ಮಾತಾಡಿಸಿ” ನೀವೂ ನಮ್ಮವರೇ ಅನಿಸ್ತು ನಿಮ್ಮ ಬೇಸರಿ(ಮೂಗುಬೊಟ್ಟು) ನೋಡಿ “ಅಂದಾಗ ನಾ ನಿಜಕ್ಕೂ ದಂಗಾದೆ.ಪ್ರತಿಯೊಂದರಲ್ಲಿಯೂ ತಮ್ಮತನವನ್ನು ಹುಡುಕುವ ತಹತಹ ಅಲ್ಲಿ.ಅದೂ ಒಂದು ಥರದ ಸುಂದರ ಅನುಭವನೇ ಅನಿಸ್ತು ನನಗೆ.ಯಾವುದೇ ಸಂಗತಿ, ವಸ್ತು, ಪರಿಸರ, ದೂರ ವಾದಾಗಲೇ ಅಂದರೆ ಬಗ್ಗೆ ಹಪಾಹಪಿ ಬಹಳ.ಇಲ್ಲಿಯ ತನ್ನತನವನ್ನು ಅಲ್ಲಿ ಅರಸುತ್ತಾ ಸಂಭ್ರಮಿಸುವ ಮಕ್ಕಳನ್ನು ಕಂಡು ಖುಷಿ ಪಟ್ಟದ್ದೂ ಇದೆ, ಸಣ್ಣಗೆ ಕಣ್ಣ ಹನಿ ಜಿನುಗಿದ್ದೂ ಇದೆ.ಕಾವ್ಯಾ ಅವರೇ ನಿಮ್ಮ ಲೇಖನ ನನ್ನ ಎಲ್ಲೆಲ್ಲೋ ಅಲೆದಾಡಿಸಿ, ಎಲ್ಲೆಲ್ಲಿಗೋ ಕೊಂಡೊಯ್ದು ನೆನಪುಗಳಲ್ಲಿ ತೇಲಿಸಿಬಿಟ್ತು.ನಿಮಗೆ ಅನಂತ ಧನ್ಯವಾದಗಳು ಹಾಗೇ ಅಭಿನಂದನೆಗಳು.ಬಹಳ ಬರೆದೆ ಅನಿಸ್ತದೆ.ಕ್ಷಮೆ ಇರಲಿ ಅನಿವಾಸಿ ಬಳಗವೇ.ಹಾಗೇ ಈ ಅವಕಾಶ ಒದಗಿಸಿದ್ದಕ್ಕೆ ಧನ್ಯವಾದಗಳು
    ಸರೋಜಿನಿ ಪಡಸಲಗಿ

    Like

  3. ಕಾವ್ಯರ ಪರಿಚಯ ಈಗ ೩ ವರ್ಷಗಳ ಹಿಂದೆ ಬಾಸ್ಟನ್ನಿನ ಕನ್ನಡ ಸಾಹಿತ್ಯರಂಗದ ಸಮಾರಂಭದಲ್ಲಾಯಿತು. ಆಕೆಯ ಪ್ರತಿಭೆಯ ಪರಿಚಯವೂ ಆಯಿತೆನ್ನಿ. ಇಷ್ಟು ಸಣ್ಣ ವಯಸ್ಸಿನಲ್ಲೇ ಕನ್ನಡ ಬಗ್ಗೆ ಇಷ್ಟೊಂದು ಆಸ್ಥೆಯಿಂದ ಬರೆಯುವ ಕಾವ್ಯಾಳಂತಹ ತರುಣ ಜನಾಂಗವೇ ನಮ್ಮ ಕನ್ನಡದ ಅಸ್ತಿ! ಜನ್ಮ ಭೂಮಿಯಿಂದ ಕರ್ಮಭೂಮಿಯತ್ತ ನಡೆಯುವ ಅನಿವಾಸಿಗಳೆಲ್ಲರ ಅನುಭವವೂ ಒಂದೇ! ಅದನ್ನೇ ಕಾವ್ಯಾರ ಸೊಗಸಾದ ಕನ್ನಡದಲ್ಲಿ ಓದುವುದು ಒಂದು ಅನನ್ಯ ಅನುಭವ. ಆಕೆಯ ಕನ್ನಡ ಸೇವೆ ಹೀಗೆ ಮುಂದುವರೆಯಲಿ. ಲೇಖನದ ಶೀರ್ಷಿಕೆಯೇ ಬಹಳ ಚೆಂದ ಅನಿಸಿತು!
    ಉಮಾ ವೆಂಕಟೇಶ್

    Like

  4. ‘ಅಲ್ಲಿಯ’ ಅನಿವಾಸಿ ಕಾವ್ಯ ಅವರಿಗೆ ಸುಸ್ವಾಗತ. ‘ಏನ್ ಲೇ, ಎಷ್ಟು ಛಂದ ಬರೀತಾಳ’ ಅಂತ ಹು-ಧಾ ಭಾಷೆಯಲ್ಲೇ ಹೇಳಿ ಏಕ ವಚನಕ್ಕೆ ಕ್ಷಮೆ ಕೋರುವೆ. (ನಮ್ಮ ಭಾಷೆಯೇ ಹಾಗೆ.) ‘ಜನನೀ ಜನ್ಮಭೂಮಿಶ್ಚ’ ಜೊತೆಗೆ ‘ಮಾತೃಭಾಷಾಚ ಸ್ವರ್ಗಾದಪಿ ಗರೀಯಸಿ’ ಎಂದು ಎಲ್ಲ ಅನಿವಾಸಿಗಳೂ ಘೋಷಿಸುವದು ನಿಮ್ಮ ಇಂದಿನ ಬರಹದಲ್ಲೂ ಧ್ವನಿಸುತ್ತದೆ. ಬಂದ ಹೊಸತರಲ್ಲಿ ಅಕಸ್ಮಾತ ಅನಿರೀಕ್ಷಿತವಾಗಿ ಮೊದಲ ಸಲ ಕಿವಿಗೆ ಬಿದ್ದ ಕನ್ನಡ ಪದಗಳ ರೋಮಾಂಚನ ಯಾರು ಮರೆತಾರು? ನಿಮ್ಮ ಪಳಗಿದ ಲೇಖನಿಯಿಂದ ಸ್ರವಿಸಿದ ಲೇಖನ ಮುದಕೊಟ್ಟಿತು. ಅಭಿನಂದನೆಗಳು!

    Like

Leave a comment

This site uses Akismet to reduce spam. Learn how your comment data is processed.