ರಾಣಿಯ ಗಾರ್ಡನ್ ಪಾರ್ಟಿಗೆ ಹೋದ ಇಬ್ಬರು ಕನ್ನಡಿಗರ ಸ್ವಾನುಭವಗಳು

ಒಂದು ಬಹು ಹಳೆಯ ಜನಪ್ರಿಯ ಇಂಗ್ಲಿಷ್ ನರ್ಸರಿ ರೈಮ್ ಇದೆ:

“Pussycat pussycat, where have you been?”
“I’ve been up to London to visit the Queen.”

ಈ ವಾರದ ಲೇಖನದಲ್ಲಿ ಇಬ್ಬರು ಕನ್ನಡಿಗರು ಲಂಡನ್ನಿಗೆ ಹೋಗಿ ರಾಣಿಯ ತೋಟದಲ್ಲಿ ಬ್ರಿಟನ್ನಿನ ಎರಡನೆಯ ಎಲಿಝಬೆತ್ ರಾಣಿಯನ್ನು ಕಂಡು ಬಂದು ಬರೆದ ಎರಡು ಅನುಭವಗಳಿವೆ. ನೀವು the great British Institution ಗಳಲ್ಲೊಂದಾದ ರಾಣಿಯ ಗಾರ್ಡನ್ ಪಾರ್ಟಿಯ ಬಗ್ಗೆ ಕೇಳಿರ ಬಹುದು; ಕೆಲವು ಭಾಗ್ಯಶಾಲಿಗಳಿಗೆ ಆಮಂತ್ರಣ ಬಂದಿರಲೂಬಹುದು ಮತ್ತು ಹೋಗಿ ಆ ದಿನದ 27,000 ಕಪ್ಪುಗಳಲ್ಲಿ ಒಂದೆರಡು ಕಪ್ ಟೀ ಹೀರಿರಲೂ ಬಹುದು. ಇನ್ನು ಕೆಲವರು ಅದಕ್ಕೆ ಟಿಕೀಟು ಬೇಕೋ, ಅಥವಾ ಹೇಗೆ ಪ್ರವೇಶ ಸಿಗುತ್ತದೆ, ಡ್ರೆಸ್ಸ್ ಕೋಡ್ ಏನು ಎಂದು ಕೇಳ ಬಹುದು. ಅವುಗಳ ಉತ್ತರಕ್ಕಾಗಿ ಈ ಲೇಖನವನ್ನು ಓದಿರಿ. ಬರೆದವರಿಬ್ಬರೂ ವೆಸ್ಟ್ ಯಾರ್ಕ್ಶೈರಿನವರು.

ಮೊದಲನೆಯ ಅನುಭವ ಬರೆದ ’’ಯಾರ್ಕೀ”(Yorkie) ನರಹರಿ ಜೋಶಿಯವರು ಯಾರ್ಕ್ಶೈರಿನ ಲೀಡ್ಸ್ ವಾಸಿ. ಅವರು ’ಹೆಡಿಂಗ್ಲಿ’ಯ ಕ್ರಿಕೆಟ್ ಸ್ವಯಂ ಸೇವಕರಲ್ಲೊಬ್ಬರು. ಅವರು ಎರಡು ರೀತಿಯಿಂದ ಲಕ್ಕಿ ಎನ್ನಬಹುದು. ಗಾರ್ಡನ್ ಪಾರ್ಟಿಗೆ ಹೋದದ್ದಲ್ಲದೆ  ಇದೇ ಮೇ ತಿಂಗಳಿನಲ್ಲಿ ವಿಶ್ವಕಪ್ ಆಡಲು ಬಂದ ಭಾರತೀಯ ತಂಡದ ಕ್ರಿಕೆಟ್ ಕ್ಯಾಪ್ಟನ್ ಜೊತೆಗೆ ಸೆಲ್ಫಿ ಸಹ ತೆಗೆಸಿಕೊಂಡಿದ್ದಾರೆ – ಪ್ಯಾಲಸ್ಸಿನಲ್ಲಲ್ಲ, ಅಲ್ಲಿಗೆ ದಾರಿಯಲ್ಲಿ ಸ್ಫರ್ಧೆಗೆ ಬಂದ ಎಲ್ಲ ಕ್ರಿಕೆಟ್ ಕ್ಯಾಪ್ಟನ್ನುಗಳನ್ನು ಒಯ್ದ ಕೋಚಿನಲ್ಲಿ,! ಎರಡನೆಯ ಅನುಭವನ್ನು ಬರೆದವರು ’’ಜನ ಸೇವೆಯೇ ಜನಾರ್ಧನನ ಸೇವೆ’”ಅಂತ ದೀರ್ಘ ಕಾಲ ಸಮಾಜ ಸೇವೆ ಸಲ್ಲಿಸಿದ, ಯಾರ್ಕ್ ಶೈರಿನ ವೈದ್ಯ -ಡಾ ಶ್ರಿರಾಮುಲು ಅವರು. ಆ ನರ್ಸರಿ ರೈಮಿನ”ಪುಸ್ಸಿ ಕ್ಯಾಟ್’ ಅರಮನೆಗೆ ಹೋದಾಗ ಏನು ಮಾಡಿತು? ಮೊದಲನೆಯ ಎಲಿಝಬೆತ್ ರಾಣಿಯ ಸಿಂಹಾಸನದಡಿಯಲ್ಲಿ ಕುಳಿತಿದ್ದ ಇಲಿಯನ್ನು ಹೆದರಿಸಿತ್ತಂತೆ. ಈ ಕನ್ನಡದ ’ಗಂಡುಗಲಿ’ಗಳು ಹೆದರದೆ ಠೀವಿಯಿಂದ ಹೋಗಿ ಟೀ ಕುಡಿದು ಸ್ಯಾಂಡ್ವಿಚ್ ಸೇವಿಸಿ ಇನ್ನೇನೆಲ್ಲ ಮಾಡಿದರೆಂದು ಈಗ ನೀವೇ ಓದಿ ನೋಡಿ ತಿಳಿದುಕೊಳ್ಳಿ. East is East; West is West ಅಂತ ಬರೆದ ರಡ್ಯಾರ್ಡ್ ಕಿಪ್ಲಿಂಗ ಅಂದಂತೆ ಈ ಇಬ್ಬರು the twain never met in the garden!   –(ಅತಿಥಿ ಸಂ -ಶ್ರೀ. ದೇ )

1.ಕೋಹ್ಲಿ ಕ್ಲಿಕ್ ಮಾಡಿದ ಸೆಲ್ಫಿ!

ನರಹರಿ ಜೋಶಿ

(ನಾನು ನರಹರಿ ಜೋಶಿ. ಕಳೆದ ಮೂರು ದಶಕಗಳಿಂದ ಲೀಡ್ಸ್‌ನಲ್ಲಿ ವಾಸಿಸುತ್ತಿದ್ದೇನೆ. ಐಟಿ ಕ್ಷೇತ್ರದಲ್ಲಿ ಮ್ಯಾನೇಜ್‍‌ಮೆಂಟ್ ವಿಭಾಗದಲ್ಲಿ ವೃತ್ತಿ. ಜೊತೆಗೊಂದಿಷ್ಟು ಸೇವಾ ಪ್ರವೃತ್ತಿಗಳು: ಲೀಡ್ಸ್‌ನ ಹಿಂದೂ ದೇವಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವುದರಲ್ಲಿ ಸಕ್ರಿಯ ಕಾರ್ಯಕರ್ತ. ಕಳೆದೊಂದು ವರ್ಷದಿಂದ ಲೀಡ್ಸ್‌ನ ‘Radio Asian Fever 107.3 FM’ ರೇಡಿಯೊ ಸ್ಟೇಷನ್‌ನಲ್ಲಿ ವಾರದಲ್ಲೊಂದು ದಿನ ಎರಡು ಗಂಟೆಗಳ ‘ಮಾಹಿತಿ ಮನೋರಂಜನ್’ ಕಾರ್ಯಕ್ರಮದ ನಿರ್ವಹಣೆ. ಹಾಗೆಯೇ, ಲೀಡ್ಸ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆಯೋಜನೆಯಲ್ಲಿ ಸ್ವಯಂಸೇವಕ.)

ಐಸಿಸಿ ವರ್ಲ್ಡ್ ಕಪ್ 2019 ಟೂರ್ನಮೆಂಟ್‌ನಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡಿದ ನನಗೆ ಮೇ 29ರಂದು ಒಂದು ವಿಶೇಷ ಅವಕಾಶ, ರೋಮಾಂಚನದ ಅನುಭವ. ಆ ದಿನ ಬ್ರಿಟನ್‌ನ ಮಹಾರಾಣಿಯವರನ್ನು ಭೇಟಿಯಾಗಲು ಬಕ್ಕಿಂಗ್‍ಹ್ಯಾಮ್ ಅರಮನೆಗೆ ಟೂರ್ನಮೆಂಟ್‌ನ ಎಲ್ಲ ತಂಡಗಳ ನಾಯಕರನ್ನು ಕರೆದುಕೊಂಡು ಹೋಗುವಾಗ, ಸ್ವಯಂಸೇವಕರ ಪ್ರತಿನಿಧಿಯಾಗಿ ನಾನು ಹೋಗಬೇಕೆಂದು ಅಧಿಕಾರಿಗಳು ಕೇಳಿಕೊಂಡಿದ್ದರು. ICC, ECB, ಮತ್ತು CWC ಸಂಸ್ಥೆಗಳ ಬೇರೆ ಕೆಲವು ಅಧಿಕಾರಿಗಳೂ ಇದ್ದರು.

ಇದು ನಿಜವಾಗಿಯೂ ನನ್ನ ಜೀವನದಲ್ಲಿ ಬಂದ ಒಂದು ಅತ್ಯಮೂಲ್ಯ ಕ್ಷಣ ಎಂದು ನನಗನಿಸುತ್ತದೆ. ಅರಮನೆಯ ತೋಟಕ್ಕೆ ಹೋಗುವ ಮೊದಲು, ಎಲ್ಲ ತಂಡಗಳ ಆಟಗಾರರು ಮತ್ತು ನಾಯಕರು ಉಳಿದುಕೊಂಡಿದ್ದ ಲಕ್ಷುರಿ ಹೊಟೇಲ್‌ಗೆ ಹೋಗಿ, ಅಲ್ಲಿಂದ ಎಲ್ಲ ಹತ್ತು ಕ್ಯಾಪ್ಟನ್‌ಗಳನ್ನು ಅದಕ್ಕೆಂದೇ ವ್ಯವಸ್ಥೆ ಮಾಡಿದ್ದ ವಿಶೇಷ ಬಸ್ಸಿನಲ್ಲಿ ಕರೆದುಕೊಂಡು ಹೋಗುವುದೆಂದು ಮೊದಲೇ ನಿಗದಿಯಾಗಿತ್ತು. ಡಿಗ್ನಿಟರಿಗಳ ಜತೆಯಲ್ಲಿರುವಾಗ ಸ್ವಯಂಸೇವಕರು ಪಾಲಿಸಬೇಕಿದ್ದ ನಿರ್ಬಂಧಗಳನ್ನು ನಾನೂ ಪಾಲಿಸಬೇಕಾಗಿತ್ತಾದ್ದರಿಂದ ಫೋಟೊ ಕ್ಲಿಕ್ ಮಾಡುವುದು ಅಥವಾ ವಿಡಿಯೋ ರೆಕಾರ್ಡ್ ಮಾಡುವುದಕ್ಕೆಲ್ಲ ಅವಕಾಶವಿರಲಿಲ್ಲ. ಸ್ವಯಂಸೇವಕನಾಗಿ ನಾನು ಮಾಡಬೇಕಿದ್ದ ಕೆಲಸಗಳನ್ನು ಮಾತ್ರ ಅಚ್ಚುಕಟ್ಟಾಗಿ ಮಾಡಿದೆ. ಮಹಾರಾಣಿಯವರಿಗೆ ಮತ್ತು ರಾಜಕುಮಾರ ಸಸ್ಸೆಕ್ಸ್‌ನ ಡ್ಯೂಕ್ ಪ್ರಿನ್ಸ್ ಹ್ಯಾರಿ ಅವರಿಗೆ ನಾನು, ವರ್ಲ್ಡ್ ಕಪ್ ಕ್ರಿಕೆಟ್‌ನ ಮ್ಯಾಚ್‌ಗಳು ಲೀಡ್ಸ್‌ನಲ್ಲಿ ಹೆಡಿಂಗ್ಲೇ ಸ್ಟೇಡಿಯಂ‌ನಲ್ಲಿ ನಡೆದಾಗ ಅಲ್ಲಿ ಸ್ವಯಂಸೇವೆ ಕೆಲಸವನ್ನು ಮಾಡುವ ವಿಚಾರವನ್ನು ತಿಳಿಸಿದೆ. ಕ್ರಿಕೆಟ್ ಸ್ಟೇಡಿಯಂ‌ನಲ್ಲಿ ಯಾವ ರೀತಿಯ ಸ್ವಯಂಸೇವೆ ಕೆಲಸಗಳು ಇರುತ್ತವೆ ಎಂದು ತಿಳಿದುಕೊಳ್ಳಲು ಅವರಿಬ್ಬರೂ ತೋರಿಸಿದ ಆಸಕ್ತಿ ನನಗೆ ಇಷ್ಟವಾಯ್ತು. ನಾನು ಖುಷಿಯಿಂದ ಎಲ್ಲವನ್ನೂ ವಿವರಿಸಿದೆ.

 

ಅರಮನೆಯಲ್ಲಿ ಮಹಾರಾಣಿಯ ಮತ್ತು ರಾಜಕುಮಾರರ ಭೇಟಿ ಆದ ಬಳಿಕ ಅಲ್ಲಿಂದ ಸೀದಾ ವರ್ಲ್ಡ್ ಕಪ್ ಪಂದ್ಯಾಟಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿಕ್ಕೆ ಹೋಗುವುದು ನಮ್ಮ ಕಾರ್ಯಕ್ರಮವಾಗಿತ್ತು. 16 ಸೀಟುಗಳ ಬಸ್ಸಿನಲ್ಲಿ ಹೋಗುವಾಗ ನಾನು ಕುಳಿತುಕೊಂಡಿದ್ದು ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ ಮತ್ತು ನಮ್ಮ ಭಾರತ ತಂಡದ ನಾಯಕ ವಿರಾಟ್ ಕೋಹ್ಲಿ ಅವರ ಪಕ್ಕದಲ್ಲಿ! ನನ್ನ ಕೈಯಲ್ಲಿ ಮೊಬೈಲ್ ಫೋನ್ ಇರುವುದನ್ನು ಕೊಹ್ಲಿ ಗಮನಿಸಿದರು. “ಅಪರೂಪದ ಈ ಸಂದರ್ಭದಲ್ಲಿ ಒಂದು ಸೆಲ್ಫಿ ತೆಗೆದುಕೊಂಡರೆ ಬಂಧುಮಿತ್ರರೊಂದಿಗೆ ಹಂಚಿಕೊಳ್ಳಬಹುದು” ಎಂದು ನನ್ನ ತಲೆಯಲ್ಲಿ ಓಡುತ್ತಿದ್ದ ಆಲೋಚನೆಯನ್ನು ಅವರಾಗಿಯೇ ಗ್ರಹಿಸಿದರೋ ಎಂಬಂತೆ ಕೊಹ್ಲಿ ನನ್ನ ಮೊಬೈಲ್ ಫೋನ್ ತಗೊಂಡು “ಇಲ್ಲಿ ಕೊಡಿ, ನಾನೇ ಸೆಲ್ಫಿ ಕ್ಲಿಕ್ ಮಾಡುತ್ತೇನೆ!” ಎಂದರು. ಅದ್ಭುತವಾದೊಂದು ಸೆಲ್ಫಿ ಕ್ಲಿಕ್ ಮಾಡಿ ಫೋನ್ ನನ್ನ ಕೈಗಿತ್ತರು. ನನ್ನ ಪಾಲಿಗೆ ಅದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಕ್ಷಣ! ಕೋಹ್ಲಿಗೆ ಧನ್ಯವಾದ ಸಲ್ಲಿಸುತ್ತ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಬೆಸ್ಟ್ ಆಫ್ ಲಕ್ ಹೇಳಿದೆ. ಅದಕ್ಕಿಂತ ಹೆಚ್ಚಾಗಿ ನನ್ನದು ಎಂಥ ಲಕ್ ಎಂದು ಸಂಭ್ರಮಪಟ್ಟುಕೊಂಡೆ.

ವಿರಾಟ್ ತೆಗೆದ ಸೆಲ್ಫಿ! (ಎಡದಿಂದ ಬಲಕ್ಕೆ): ಆಸ್ಟ್ರೇಲಿಯಾದ ಕಪ್ತಾನ ಆರನ್ ಫಿಂಚ್, ನರಹರಿ ಜೋಶಿ, ವಿರಾಟ್ ಕೊಹ್ಲಿ

ಕ್ರಿಕೆಟ್ ಪಂದ್ಯಗಳ ಆಯೋಜನೆಯಲ್ಲಿ ಸ್ವಯಂಸೇವಕನಾಗಿ ದುಡಿಯುವುದು ಕೂಡ ಸಾರ್ಥಕವೆನಿಸುವುದು ಇಂತಹ ಕ್ಷಣಗಳಿಂದಲೇ. ನನಗಂತೂ ಇದು ಜೀವಮಾನವಿಡೀ ನೆನಪಿಟ್ಟುಕೊಳ್ಳಬಹುದಾದ ಘಟನೆ. ಕೋಹ್ಲಿ ಕ್ಲಿಕ್ ಮಾಡಿದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಕ್ಕೂ ಮೊದಲು ನನ್ನ ಮಗ ಸುಪ್ರೀತ್‌ಗೆ ಕಳಿಸಿದೆ, ಅವನ ಉವಾಚ: “ಯಾವುದೇ ಕಾರಣಕ್ಕೆ ಆ ಮೊಬೈಲ್ ಫೋನ್‌ಅನ್ನು ಇನ್ನು ಗುಜರಿ ಎಂದು ಬಿಸಾಡಲಿಕ್ಕಿಲ್ಲ. ಕ್ರಿಕೆಟ್‌ನಲ್ಲಿ ಸಹಸ್ರಾರು ರನ್ ಸಿಡಿಸಿದ ಬ್ಯಾಟ್ ಹಿಡಿದಂಥ ಕೋಹ್ಲಿಯು ಸ್ವತಃ ತನ್ನ ಕೈಯಿಂದ ಹಿಡಿದ ಫೋನ್ ಅದು ಅಂದ್ರೆ ಎಂಥ ಮಹಿಮೆ!”

ಲೇಖಕ:   ನರಹರಿ ಜೋಶಿ

2. ಬ್ರಿಟನ್ನಿನ ಮಹಾರಾಣಿಯವರ ಭವ್ಯ ತೋಟದ ಮಡಿಲಲ್ಲಿ ಒಂದುಸಂಜೆ!

ಲೇಖಕ: ಡಾ ವಿ. ಶ್ರೀರಾಮುಲು

ಇದೇ ವರ್ಷದ ಮೇ ತಿಂಗಳಿನಲ್ಲಿ ಒಂದು ದಿನ ಟಪಾಲಿನಲ್ಲಿ ಬಂದ ಲಕೋಟೆಯನ್ನು ಬಿಚ್ಚಿ ನೋಡಿದಾಗ ನಂಬಲಿಕ್ಕೇ ಆಗಲಿಲ್ಲ. ಬ್ರಿಟನ್ನಿನ ರಾಣಿಯ ಗಾರ್ಡನ್ ಪಾರ್ಟಿಗೆ ಅಹ್ವಾನ ಪತ್ರ! ಇದು ಕನಸೇ, ನನಸೇ? ಬುಧವಾರ ಮೇ 29ನೆಯ ತಾರೀಕು ನಾನು ಮತ್ತು ನನ್ನ ಮಡದಿ ಬಕಿಂಗ್ಯಾಂ ಅರಮನೆಯ ತೋಟದಲ್ಲಿ ಹಾಜರಿರಬೇಕಂತೆ, ರಾಜ ಮನೆತದವರನ್ನು ಭೇಟಿಮಾಡುವ ಈ ಸದವಕಾಶ ನನ್ನ ಪಾಲಿಗೆ ಬಂದದ್ದು ಸುದೈವ ಅಂದುಕೊಂಡೆ..

ಒಂದು ರೀತಿಯಿಂದ ನೋಡಿದರೆ ಅದು ಅಷ್ಟು ಆಶ್ಚರ್ಯಕರವಲ್ಲ ಎನ್ನ ಬಹುದು. ತನ್ನದೇ ತುತ್ತೂರಿ ಊದುತ್ತಿದ್ದಾನೆಯೇ (blowing his own trumpet) ಅಂದುಕೊಳ್ಳ ಬೇಡಿ. ಪ್ರತಿವರ್ಷ ನಾಲ್ಕು ಸಲವಾದರೂ ಬೇಸಿಗೆಯಲ್ಲಿ ತಾನು ಕೊಡುವ ಗಾರ್ಡನ್ ಪಾರ್ಟಿಗಳಿಗೆ (ಮೂರು ಲಂಡನ್ನಿನಲ್ಲಿ, ಒಂದು ಸ್ಕಾಟ್ಲಂಡಿನಲ್ಲಿ) ಆಳುವ ಮಹಾರಾಣಿ ಒಟ್ಟಿಗೆ 30,000 ಜನರನ್ನು ಆಮಂತ್ರಿಸುತ್ತಾಳೆ. ಅತಿಥಿಗಳನ್ನು ಹೇಗೆ ಆರಿಸಲಾಗುತ್ತದೆಯೆಂದರೆ, ದೇಶದಾದ್ಯಂತದ ಸಂಘ ಸಂಸ್ಥೆಗಳು ಸರಕಾರದ ಮತ್ತು ಸ್ಥಳೀಯ ಸರಕಾರದ ಅಂಗಗಳು, ಕ್ರಿಶ್ಚಿಯನ್ ಚರ್ಚ್ ಮತ್ತು ಉಳಿದ ಮತಗಳ ಪ್ರಾಧಿಕಾರಗಳು, ಇವಲ್ಲದೆ ಲಾರ್ಡ್ ಲೆಫ್ಟನಂಟ್ ಗಳು ಇವರು ಸಮಾಜ ಸೇವೆಗೈದವರು ಅಥವಾ ಧರ್ಮಾರ್ಥ ಸಂಸ್ಥೆಗಳಲ್ಲಿ ಕೆಲಸಮಾಡಿದವರುಗಳ(charity work) ಹೆಸರುಗಳನ್ನು ಆಯಾ ವರ್ಷದಲ್ಲಿ ಆಗಾಗ ಸೂಚಿಸುತ್ತಿರುತ್ತಾರೆ. ಇದು ವಿಕ್ಟೋರಿಯಾ ಮಹಾರಾಣಿಯ ಕಾಲದಿಂದಲೂ ನಡೆದುಬರುತ್ತಿರುವ ಪ್ರಣಾಲಿ.

ಡಾ. ವಿ. ಶ್ರೀರಾಮುಲು

ನಾನು ವೃತ್ತಿಯಿಂದ ವೈದ್ಯ. ನನ್ನ ಪ್ರಾಕ್ಟಿಸ್ ಇದ್ದುದು ಯಾರ್ಕ್ ಶೈರಿನ ಬಾರ್ನ್ಸ್ಸ್ಲಿ (Barnsley) ಪಕ್ಕದ ಗ್ರೈಂ ಥೋರ್ಪ್ ಎನ್ನುವ ಸಣ್ಣ ಹಳ್ಳಿಯಲ್ಲಿ. ನಮ್ಮ ಬ್ರಾಂಚ್ ಸರ್ಜರಿ ಇದ್ದ ಹಳ್ಳಿ ಕಡತ್ ಎಂದು ಉಚ್ಚರಿಸಲ್ಪಡುವ Cudworth. ಇಂಗ್ಲೆಂಡಿನಲ್ಲಿ ಮೂವತ್ತೆಂಟು ವರ್ಷಗಳ ಕಾಲ ಸತತವಾಗಿ ಫ್ಯಾಮಿಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಿವೃತ್ತನಾದಾಗ

’ಕಡರ್ತ್’ದ Chewin T Cud ಪತ್ರಿಕೆಯ ಮುಖ ಪುಟ(To chew the cud=ಮೆಲುಕು ಹಾಕು)

ಬಹುಜನರು ತೋರಿದ ವಿಶ್ವಾಸ, ಕೃತಜ್ಞತೆಗಳಿಂದ ನನ್ನ ಹೃದಯ ತುಂಬಿ ಬಂದಿತ್ತು. ನನಗೆ ಬಂದ ಅಭಿನಂದನಾ ಪತ್ರಗಳು ಹಲವು. ಸ್ಥಳೀಯ ಪತ್ರಿಕೆ ‘Chewin T Cud’ ಸಹ ಒಂದು ಲೇಖನ ಬರೆದು ದಾಖಲಿಸಿತು. ಫ್ಯಾಮಿಲಿ ಪ್ರಾಕ್ಟಿಸ್

ನಿಯಂತ್ರಣಾಧಿಕಾರಿಯಿಂದಷ್ಟೇ ಅಲ್ಲ, ಓರ್ವ ಮಾಜಿ ಎಂ ಪಿ ಸಹ ನನ್ನ ಸುದೀರ್ಘ ಸೇವೆಯನ್ನು ಶ್ಲಾಘಿಸಿ ಈ-ಮೇಲ್ ಕಳಿಸುವ ತೊಂದರೆ ತೊಗೊಂಡಿದ್ದರು. ಚಿಕ್ಕದಾದರೂ ಚೊಕ್ಕವಾಗಿ ಬರೆದ ಅ ಒಕ್ಕಣೆಯಲ್ಲಿ ಸರಳತೆ ಮತ್ತು ಪ್ರಾಮಾಣಿಕತೆಯಿತ್ತು. ಈಗಿನ ಸ್ಥಳೀಯ ಎಂಪಿಗೆ ಅದು ತಲುಪಿತು. ಅವರೇ ನನ್ನ ಹೆಸರನ್ನು ಅರಮನೆಗೆ ಸೂಚಿಸಿದರು. ಅದರಿಂದಲೇ ಬಂದದ್ದು ಈ ಆಮಂತ್ರಣ. ಲಾರ್ಡ್ ಚೇಂಬರ್ಲೈನಿನಿಂದ ಬಂದ ಪತ್ರದಲ್ಲಿ ಅರಮನೆಯ ತೋಟಕ್ಕೆ ಹೋಗುವಾಗ ಎಲ್ಲ ಅತಿಥಿಗಳೂ ಆಚರಿಸಬೇಕಾದ ನಿಯಮ-ಶಿಷ್ಟಾಚಾರಗಳ ವಿವರ ಇತ್ತು. ಅತಿಥಿಗಳು ತೊಡಬಹುದಾದ ಉಡುಪು, ಹ್ಯಾಟು, ಇದ್ದರೆ ತಮ್ಮ ಯೂನಿಫಾರ್ಮ್, ಅಥವಾ ರಾಷ್ಟ್ರೀಯ ಪೋಷಾಕು ತೊಟ್ಟು ಬರಲು ಸಮ್ಮತಿಯಿದೆ ಇತ್ಯಾದಿ. ಆದರೆ ಯಾವ ಮೆಡಲ್ಲುಗಳನ್ನೂ ಧರಿಸುವಂತಿಲ್ಲ!

ನಿಗದಿತ ದಿನದ ಹಿಂದಿನ ದಿವಸವೇ ಲಂಡನ್ನಿನಲ್ಲಿದ್ದ ನಮ್ಮ ಮಗಳ ಮನೆಯಲ್ಲಿ ತಂಗಿದ್ದು ಮರುದಿನ ನಾನು ಸೂಟು, ನನ್ನ ಮಡದಿ ವನಜಾ ಸೀರೆ ಉಟ್ಟು ಹೊರಟೆವು. ನಮ್ಮ

ಮಕ್ಕಳು ಹೆಮ್ಮೆಯಿಂದ ಹೇಳಿ ಕರೆಸಿದ್ದ ಲಿಮೋ (limosine)ದಲ್ಲಿ ಕುಳಿತು ಮೇ, 29ರಂದು ಮಧ್ಯಾಹ್ನದ 3 ಗಂಟೆಗೂ ಮೊದಲೇ ಬಕ್ಕಿಂಗಮ್ ಪ್ಯಾಲಸ್ಸಿನ ಮಹಾದ್ವಾರದ ಕಬ್ಬಿಣ್ದದ ಗೇಟಿನ ಮುಂದೆ ಬಂದಿಳಿದಾಗ ಆಗಲೇ ಅನೇಕ ಆಹ್ವಾನಿತರು ಸಾಲಿನಲ್ಲಿ ನಿಂತಿದ್ದರು. ಡ್ಯೂಟಿಯಲ್ಲಿದ್ದ ಕೆಂಪು ವಸ್ತ್ರ ಧರಿಸಿದ ರಾಣಿಯ ರಕ್ಷಕರಾದ ಯೋಮನ್ ವಾರ್ಡನ್ ಗಳು ಓಡಾಡುತ್ತಿದ್ದರು. ಸರಿಯಾಗಿ 3 ಗಂಟೆಗೆ ನಮ್ಮ ಪಾಸ್ಪೋರ್ಟ್ ತಪಾಸು ಮಾಡಿ, ಆಮಂತ್ರಣ ಪತ್ರ ಪರಿಶೀಲಿಸಿ (ಗಾರ್ಡನ್ ಪಾರ್ಟಿಗೆ ಒಬ್ಬರಿಗೆ ಒಮ್ಮೆಯೇ ಆಹ್ವಾನ, ಅವರು ಬ್ರಿಟಿಷ್ ಪ್ರಜೆಯಾಗಿರಬೇಕು, ಮತ್ತು ಆಮಂತ್ರಣ ಪತ್ರವನ್ನು ಕಡ ಕೊಡವಹಂಗಿಲ್ಲ!) ಒಬ್ಬೊಬ್ಬರನ್ನಾಗಿ ಒಳಗೆ ಬಿಡುತ್ತಿದ್ದರು. ದಾರಿಯೂದ್ದಕ್ಕೂ  ಅರಮನೆಯ ಪ್ರಾಂಗಣದಲ್ಲಿ ನಿಂತ ಕಾವಲುಪಡೆ ನಂತರ ಅರಮನೆಯ ಮೂಲಕ ತೋಟಕ್ಕೆ ದಾರಿ ತೋರಿಸಿದರು. ಎಷ್ಟು ವಿನತೆ, ಎಂಥ ಘನತೆ, ಸೌಜನ್ಯ!

ಆ ಅಮೋಘ, ಭವ್ಯವಾದ ತೋಟದೊಳಗೆ ನಮ್ಮ ಪ್ರವೇಶ! ನಿಜಕ್ಕೂ ಮನಸೆಳುವ  ರೋಮಾಂಚಕ ಸನ್ನಿವೇಶ! ಅಲ್ಲಿ ಜನಸಾಗರವೇ ಇತ್ತು. ಸಮಾಜದ ಎಲ್ಲ ಕ್ಷೇತ್ರಗಳಿಂದ ಬಂದಿದ್ದ ಪ್ರತಿನಿಧಿಗಳಿದ್ದರು ಅಂದರೆ ಅತಿಶೋಯಿಕ್ತಿ ಅಲ್ಲ. ಒಂದೊಂದು ಪಾರ್ಟಿಯಲ್ಲೂ 8,000ದಷ್ಟು ಜನ ಸೇರುತ್ತಾರಂತೆ ಆಗಲೇ ಕೇಳಿದ್ದೆ. ಎಲ್ಲೆಲ್ಲೂ ಹಚ್ಚ ಹಸಿರಿನ ಹಿನ್ನಲೆಯಲ್ಲಿ ಅಲಂಕರಿಸಿಟ್ಟ ಪುಷ್ಪಗಳು ಕಣ್ಣಿಗೆ ಹಬ್ಬವಾಗಿತ್ತು.ಕ ಣ್ಣು ಹಾಯಿಸಿದಷ್ಟು ದೂರ ಕಾಣುವ ಮರ ಗಿಡಗಳು ರಾರಾಜಿಸಿತಿದ್ದವು. ಇದೇನಾ ಅಶೋಕ ವನದ ಪ್ರತಿರೂಪ ಎಂಬ ಭ್ರಮೆಯಲ್ಲಿ ಮನಸು ತೋಲಾಡಿತು.
ಆ ಉದ್ಯಾನದ ಅಂಚಿನಲ್ಲಿದ್ದ ವಿಶಾಲವಾದ ಚೊಕ್ಕ ಶ್ವೇತ ಡೇರಾಗಳು ಎದ್ದು ಕಾಣುತ್ತಿದ್ದವು.

ಶ್ರೀಮತಿ ವನಜಾ ಮತ್ತು ಡಾ ಶ್ರಿರಾಮುಲು

ಅದರೊಳಗಿಂದ ಬಂದ ಘಮ್ಮನ ವಾಸನೆ ಅತಿಥಿಗಳನ್ನು ಕೈಬೀಸಿ ಕರೆಯುತ್ತಿತ್ತು. ಮತ್ತು ವಿಧವಿಧವಾದ (salmon) ಸಾಲ್ಮನ್ ಸ್ಯಾಂಡ್ವಿಚ್ಗಳು, ಹಣ್ಣಿನ ರಸಗಳು ಮತ್ತು ಕಾಫಿಯ ಅರೋಮಾ ತನು ಮನ ತಣಿಸಿತು! ಆ ಗಾರ್ಡನ್ ಪಾರ್ಟಿ ನಮ್ಮ ಪಾಲಿಗಂತೂ ’ನ ಭೂತೋ ನ ಭವಿಷ್ಯತಿ” ಅನ್ನುವ ರೋಮಾಂಚಕಾರಿ ಅನುಭವ!
ಗಡಿಯಾರದಲ್ಲಿ ಸರಿಯಾಗಿ ನಾಲ್ಕು ಗಂಟೆಯಾಗುತ್ತಿದ್ದಂತೆ ಬ್ರಿಟನ್ನಿನ ರಾಷ್ಟ್ರ ಗೀತೆ God save the Queen ಆರಂಭವಾಯಿತು. ಅದೇ ವೇಳೆಯಲ್ಲಿ Her Majesty ರಾಣಿ ಎಲಿಝಬೆತ್ ಹಾಗು ರಾಜಕುಮಾರ ಹ್ಯಾರಿ, ರಾಜಕುಮಾರಿಯರು ಯೂಜೀನ್ ಮತ್ತು ಬಿಯಟ್ರಿಸ್ ಆಗಮಿಸಿದರು. ಅಚ್ಚರಿಯ ವಿಷಯವೆಂದರೆ ನಾನು ವನಜಾಳ ಸೀರೆಯ ಬಣ್ಣಕ್ಕೆ ’ಮ್ಯಾಚಿಂಗ್’ ಮಾಡಿ ಗುಲಾಬಿ ಬಣ್ಣದ ಟೈಕಟ್ಟಿದ್ದೆ. ರಾಣಿಯ ಆ ದಿನದ ಡ್ರೆಸ್ಸ್ ಸಹ ಗುಲಾಬಿ ವರ್ಣದ್ದೇ ಆಗಿತ್ತು! ರಾಯಲ್ ಫ್ಯಾಮಿಲಿಯವರು ಅತಿಥಿಗಳೊಡನೆ ಕಲೆತು ಅತ್ಯಂತ ಸರಳ ರೀತಿಯಿಂದ ವರ್ತಿಸಿದರು. ಅವರೆಲ್ಲ ರಾಜರೆಂಬ ಬಿಗುಮಾನವೇ ಇಲ್ಲದೆ ಅತಿಥಿಗಳೊಡನೆ ಬೆರೆತು ಮಾತಾಡುತ್ತಿದ್ದರು. ಎಲ್ಲಕ್ಕೂ ಮೇಲಾಗಿ, ವಿಶೇಷವಾಗಿ ಗಾಲಿಕುರ್ಚಿಯಲ್ಲಿ(wheelchair bound) ಮತ್ತು ಪ್ರತಿಕೂಲಾವಸ್ಥೆಯಲ್ಲಿ ಇದ್ದವರನ್ನು ಉಲ್ಲಾಸದಿಂದ ಮಾತನಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು ಹಾಗು ಆಕರ್ಷವಾಗಿತ್ತು. ಇವರೇನು ರಾಜಕುಟುಂಬದವರೋ ಅಥವಾ ಸಾಮಾನ್ಯ ಪ್ರಜೆಗಳೂ ಎನ್ನುಬ ಭಾವನೆ ಮನಿಸ್ಸಿಗೆ ಬಂತು. ಘನತೆ, ಗಾಂಭೀರ್ಯ ತುಂಬಿ ತುಳುಕುತ್ತಿತ್ತು ಅಂದರೆ ತಪ್ಪಲ್ಲ. ಅಷ್ಟರಲ್ಲಿ ಮೋಡ ಕವಿದು ಮಳೆಹನಿ ಬೀಳಲಾರಂಭಿಸಿತು. ರಾಣಿ ಮತ್ತು ಕುಟುಂಬದವರು ಲಘುವಾಗಿ ತುಂತುರು ಮಳೆ ಬೀಳುತ್ತಿದ್ದರೂ ಕೊಡೆಯ ಆಶ್ರಯವಿಲ್ಲದೆ ಪೂರ್ತಿ ಎರಡು ಗಂಟೆಗಳ ಕಾಲ ತಮ್ಮ ಅಮೂಲ್ಯ ಸಮಯವನ್ನು ನಾಡಿನ ಪ್ರಜೆಗಳೊಂದಿಗೆ ಕಳೆದರು.
ಇಷ್ಟರಲ್ಲಿ ಅಡಿಗೆ ಸಿಬ್ಬಂದಿ ಐಸ್ ಕ್ರೀಮನ್ನು ವಿತರಣೆ ಮಾಡಿದರು, ಬಲವಂತ ಮಾಘಸ್ನಾನ ಅಂತ ಹೇಳಬಹುದು!
ಆರು ಗಂಟೆಗೆ ಸರಿಯಾಗಿ ಮತ್ತೊಮ್ಮೆ ರಾಷ್ಟ್ರಗೀತೆಯಾದ ಮೇಲೆ ರಾಜಪರಿವಾರವನ್ನು ಬೀಳ್ಕೊಡಲಾಯಿತು.
ಇಡೀ ಕಾರ್ಯಕ್ರಮ ನಮಗೆಲ್ಲ ಅವರ್ಣನೀಯ ಉಲ್ಲಾಸ ತಂದಿತ್ತು. ಇದು ಮರೆ ಯಲಾರದಂಥ, ಜೀವನದಲ್ಲಿ ಒಂದೇ ಬಾರಿ ಘಟಿಸುವಂಥ ಪ್ರಸಂಗ ಎನಿಸಿತು.
ಈ ಲೇಖನ ತುಂಬ ವಿವರವಾಗಿರಬಹುದು ಆದರೆ ನನ್ನ ‘Queen’s Garden party’ ಅನುಭವಕ್ಕೆ ನ್ಯಾಯ ಒದಗಿಸ ಬೇಕಾದರೆ ಇದು ಸಮಂಜಸ ಅಂತ ನನ್ನ ಭಾವನೆ!

God save the Queen                                                    ಜೈ ಕರ್ನಾಟಕ ಮಾತೆ!

ಡಾ ವಿ. ಶ್ರೀರಾಮುಲು

(Photos: by the individual authors)

 

15 thoughts on “ರಾಣಿಯ ಗಾರ್ಡನ್ ಪಾರ್ಟಿಗೆ ಹೋದ ಇಬ್ಬರು ಕನ್ನಡಿಗರ ಸ್ವಾನುಭವಗಳು

 1. Thank you Mr Venkatesh. I hope and wish this will open up flood gates to get invites for Garden Party for all deserving anivaasis.NRI.

  Like

 2. OK, ಪ್ರೇಮಲತಾ ಹಾಗು ಪ್ರಸಾದ ಅವರಿಗೆ ಮತ್ತೆಲ್ಲರಿಗೂ ಅವರ ಕಮೇಂಟುಗಳಿಗೆ ಧನ್ಯವಾದಗಳು. ಅದನ್ನು ರಾಯಲ್ ಟೆಂಟಿನಲ್ಲಿ ಹೆಮ್ಮೆಯಿಂದ ಹೀರಿದ ಟೀಯಂತೆ ತೃಪ್ತಿಯಿಂದ ಸ್ವೀಕರಿಸಿದ ಅವರಿಬ್ಬರೂ ಆಭಾರಿ ಅಂದು ಹೇಳ ಬಲ್ಲೆ. ಹೂವಿನಿಂದ ನಾರು ಸ್ವರ್ಗಕ್ಕೆ ಅನ್ನುವಂತೆ ನನ್ನ ಹೆಸರನ್ನೂ ಎಳೆದುದಕ್ಕೂ ನನ್ನ ಕೃತಜ್ಜತೆಗಳು. ನಾನು ನಿಮಿತ್ತ ಮಾತ್ರ!

  Like

 3. ಭಾರೀ ಹೆಮ್ಮೆಯ ಮಾತು! ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಣಿಯ ಮನೆಗೆ ಆಮಂತ್ರಣ ದೊರಕುವುದು ಸಾಮಾನ್ಯದ ಮಾತಲ್ಲ. ಹಾಗೆ ಆಗಬಹುದು ಎಂದು ಗೊತ್ತೇ ಇರದಾಗ ಆಮಂತ್ರಣ ಬಂದರೆ ಆಗುವ ಸಡಗರ, ಹೆಮ್ಮೆ, ತಯಾರಿ, ಅನುಭವ ಎಲ್ಲವೂ ಸಾರ್ಥಕವಾದವುಗಳೇ.
  ನಿಮ್ಮ ಅನುಭವಗಳನ್ನು ಕಲೆಹಾಕಿ, ಅಷ್ಟೇ ಸಡಗರದಿಂದ ತಯಾರಿ ನಡೇಸಿ ನಮ್ಮ ಮುಂದಿಟ್ಟ ಶ್ರೀವತ್ಸ ದೇಸಾಯಿ ಅವರಿಗೂ, ಅದನ್ನು ನಮ್ಮೊಂದಿಗೆ ಹಂಚಿಕೊಂಡ ನರಹರಿ ಜೋಶಿ ಮತ್ತು ಶ್ರೀರಾಮುಲು ಅವರಿಗೂ
  ಧನ್ಯವಾದಗಳು.
  ಬರಹದ ತಾಜಾತನ ಬಹಳ ಮುದವಾಗಿದೆ ಕೂಡ.

  Like

  • ಪ್ರಸಾದವರೇ ಪ್ರೋತ್ಸಹಕರ ಪ್ರತಿಕ್ರಿಯೆಯನ್ನು ಬರಹರೂಪದಲ್ಲಿ ಪ್ರಕಟಿಸಿದ ತಮಗೆ ನನ್ನ ಧನ್ಯವಾದಗಳು.
   ನನ್ನ ಅಂತರಾಳದಲ್ಲಿ ಅಡಗಿದ್ದ ಈ ಕಿರು ಪ್ರತಿಭೆಯನ್ನು ಲೇಖನ ರೂಪದಲ್ಲಿ ಹೊರತರಲು ವಿಶ್ವ ಪ್ರಯತ್ನ ಪಟ್ಟ ದೇಸಾಯಿಯವರಿಗೆ ಈ ಗೌರವ ಸಲ್ಲಬೇಕು.
   ನಿಮ್ಮ ಬರಹದ ಆರಂಭದ ಪೀಠಿಕೆ ಬಹು ಮಾಹಿತಿಕರವಾಗಿದೆ.
   ನಿಜ ಈ ಗಾರ್ಡನ್ ಪಾರ್ಟಿ ಭೇಟಿ ಒಂದು ಚಿರಸ್ಮರಣೀಯ ಅನುಭವ.
   ಮತ್ತುಹೊಮ್ಮೆ ಧನ್ಯವಾದಗಳು.

   Like

  • ಪ್ರೇಮಲತಾಅವರೇ, ನಿಮ್ಮ ಪ್ರಶಂಶನೀಯ ಪ್ರತಿಕ್ರಿಯೆಗೆ ಧನ್ಯವಾದಗಳ. ಅಹ್ವಾನ ಪತ್ರಿಕೆ ಸ್ವೀಕರಿಸಿದಾಗ ಆದ ಆನಂದ ಆವರ್ಣನೀಯ. ಅದು ಒಂದ ಬಗ್ಗೆ ತಾಜಾ ಕಬರು.ಅದರಲ್ಲಿ ದೇಸಾಯಿಅವರ ಕೈವಾಡವೂ ಇದೆ . ನಿಮ್ಮಬರವಣಿಗೆಯ ಶ್ಯಲಿ ನಿಮ್ಮ ಲೇಖನದಲ್ಲಿ ಎತ್ತಿ ಕಾಣುತ್ತದೆ. ಮತೊಮ್ಮೆ ಧನ್ಯವಾದಗಳು.

   Like

 4. ಪ್ರಪಂಚದ ಬಹುಭಾಗದಲ್ಲಿ ಉಳಿದ ಕೆಲವೇ ರಾಯಲ್ ಫ್ಯಾಮಲಿಗಳಲ್ಲಿ ಒಂದಾದ ಬ್ರಿಟಿಷ್ ರಾಣಿ ಎಲಿಜಬೆತ್ ಮತ್ತು ಅವಳ ಕುಟುಂಬ ಆಧುನಿಕ ಪ್ರಜಾಪ್ರಭುತ್ವದಲ್ಲಿ ತನ್ನ ಪ್ರಸ್ತುತೆಯನ್ನು ಉಳಿಸಿಕೊಂಡು ಅಸ್ತಿತ್ವದಲ್ಲಿರುವುದು ವಿಶೇಷವಾದ ಸಂಗತಿ. ಇಂತಹ ಒಂದು ಪ್ರತಿಷ್ಠಿತ ಕುಟುಂಬ/ಸಂಸ್ಥೆ ತನ್ನ ಪ್ರಜೆಗಳ ಬಗ್ಗೆ ಕಾಳಜಿ ಇಟ್ಟು ಕೊಂಡು ಸಮಾಜದಲ್ಲಿ ಗಣ್ಯರಾಗಿರುವವರನ್ನು, ವಿಶೇಷ ಸೇವೆ ಸಲ್ಲಿಸಿದವರನ್ನು ಮತ್ತು ಸಾಧನೆ ಗಳಿಸಿರುವವರನ್ನು ವರ್ಷದಲ್ಲಿ ಕೆಲವೊಮ್ಮೆಯಾದರು ಆಮಂತ್ರಿಸಿ ಸತ್ಕರಿಸುವ ಪದ್ದತಿ ಇಟ್ಟುಕೊಂಡಿರುವುದು ಸಮಾಧಾನಕರವಾದ ವಿಷಯ. ಆಳುವ ವರ್ಗ ಜನಸಾಮಾನ್ಯರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಕ್ರಮ ಬಹಳ ಹಿಂದಿನಿಂದ ಜಾರಿಯಲ್ಲಿದೆ.

  ಇಂತಹ ಒಂದು ಅಪೂರ್ವ ಅವಕಾಶ ಹಾಗೂ ಆಮಂತ್ರಣ ನಮ್ಮ ಕನ್ನಡಿಗರೂ ಮತ್ತು ಯಾರ್ಕ್ ಶೈರ್ ನಿವಾಸಿಗಳಾದ ನರಹರಿ ಜೋಶಿ ಮತ್ತು ಡಾ. ಶ್ರೀರಾಮುಲು ಅವರಿಗೆ ದೊರಕಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಹಾಗೆ ಕ್ರಿಕೆಟ್ ಪಂದ್ಯದ ಕ್ಯಾಪ್ಟನ್ ಗಳೊಂದಿಗೆ ಕೆಲವು ಕ್ಷಣಗಳನ್ನು ಕಳೆದ ನರಹರಿ ಜೋಶಿ ಭಾಗ್ಯಶಾಲಿ. ಅವರಿಬ್ಬರು ತಮ್ಮ ಅನುಭವವನ್ನು ಸಂತೋಷವನ್ನು ತಮ್ಮ ಚೊಚ್ಚಲ ಬರವಣಿಗೆಯ ಮೂಲಕ ಹಂಚಿಕೊಂಡಿದ್ದಾರೆ. ಅವರು ಮುಂದೆ ಅನಿವಾಸಿ ಜಾಲದಲ್ಲಿ ಸಕ್ರಿಯವಾಗಿ ಭಾಗವಹಿಸುವರೆಂದು ನಂಬಿರುತ್ತೇನೆ.

  ಭವ್ಯವಾದ ಬಕಿಂಗ್ ಹ್ಯಾಮ್ ಅರಮನೆ ಮತ್ತು ಅದರ ಆವರಣದಲ್ಲಿ ರಾಯಲ್ ಫ್ಯಾಮಲಿ ಭೇಟಿಗೆ ಪ್ರಪಂಚದ ನಾಯಕರೆಲ್ಲಾ ಹಾತೊರೆಯುವ ಸಂಗತಿ ನಮಗೆ ತಿಳಿದದ್ದೇ . ರಾಣಿಯ ಆಥಿತ್ಯ ವನ್ನು ಸವಿದು ಅದರ ಬಗ್ಗೆ ಆದರದ ಮಾತುಗಳನ್ನು ಪ್ರೆಸಿಡೆಂಟ್ ಟ್ರಂಪ್ ಕೂಡಾ ಆಡಿದ್ದಾರೆ. ಹೀಗಿರುವಾಗ ನರಹರಿ ಜೋಶಿ ಮತ್ತು ಶ್ರೀ ರಾಮುಲು ತಮ್ಮ ಅನುಭವದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಸರಿಯೇ. ಈ ಬರಹಕ್ಕೆ ಒಂದು ಪೀಠಿಕೆಯನ್ನು ಮತ್ತು ಛಾಯಾಚಿತ್ರಗಳನ್ನು ಕೊಟ್ಟ ಶ್ರೀವತ್ಸ ಅವರು ನಮ್ಮ ಕುತೂಹಲವನ್ನು ಕೆರಳಿಸಿದ್ದು ಓಕೇ ಎಂಬ ಥಳುಕಿನ ಗಾಸ್ಸಿಪಿ ಮಾಸ ಪತ್ರಿಕೆ ಓದಿದ ಅನುಭವವಾಯಿತು!!

  Like

 5. Great Post! Proud of the two Kannadigas from Yorkshire who attended the queens garden party at Buckingham Palace. It was very enjoyable to read their personal experiences. Thoughtfully written and gives readers a chance to appreciate their hard work and contribution to the community.

  Like

 6. I liked the way these two experiences are collated and presented, in a most lively tone and style. That means, Kudos to the authors and editors!

  Like

 7. Article shows pride of our people. Dr. Srivathsa Desai narrated it in a very simple & effective manner.
  We are all happy and proud to know that two kannadigas got invited through their services !
  May God bless them. The invitation from Queens office is also an encouragement to others to continue in their good services.

  ….. Ricegrain Venkatesh,
  Chikmagalur, India

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.