ನಮ್ಮ ಚೀನದ ಪ್ರವಾಸ -ಭಾಗ 2 ಶ್ರೀವತ್ಸ ದೇಸಾಯಿ ಬರೆದ ಪ್ರವಾಸಕಥನದ ಎರಡನೆಯ ಭಾಗ

ಕಳೆದ ವಾರ ಮೊದಲುಗೊಂಡ ಶ್ರೀ ವತ್ಸ ದೇಸಾಯಿ ಅವರ ಚೈನಾ ಪ್ರವಾಸ ಕಥನದ ಎರಡನೇ ಭಾಗ ಪ್ರಕಟವಾಗುತ್ತಿದೆ. ಕಳೆದ ವಾರ ಚೈನಾ ಪ್ರವಾಸಕ್ಕೆ ಬೇಕಾದ ಸಿದ್ಧತೆ, ಹಾಗೂ ರಾಜಧಾನಿ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಪರಿಚಯಿಸಿದ ಶೀವತ್ಸ ಅವರು ಈ ಬಾರಿ ಓದುಗರಿಗೆ ಚೈನಾ ದೇಶದ ಪೂರ್ವ ಮತ್ತು ಒಳನಾಡನ್ನು ಪರಿಚಯಿಸಿದ್ದಾರೆ.

“ವಿಶ್ವ ವಿಖ್ಯಾತ ಟೆರಾಕೋಟ ಯೋಧರ ಬೃಹತ್ ಸಮಾಧಿಯನ್ನು ಯೋಜಿಸಿದ ’ಸಾಧಕ’ ಮಾಡಿಟ್ಟಿದ್ದ ಭೂಗರ್ಭ ರಹಸ್ಯಗಳನ್ನು ಬಯಲು ಮಾಡಲಾಗಿದೆ. ಆದರೆ ಮಾನವನ ಮನಸ್ಸಿನಲ್ಲಿ ಅದರ ಜೊತೆಗೆ ಹುದುಗಿರಬಹುದಾದ ಅಹಂಕಾರ, ಆಮಿಷ ಕ್ರೌರ್ಯಇವುಗಳ ರಹಸ್ಯವನ್ನು ಹೊರತರಲಾದೀತೇ” ಎಂದು ಹೇಳುವ ದೇಸಾಯಿ ಅವರ ಮಾತುಗಳು ಅರ್ಥಪೂರ್ಣವಾಗಿದೆ. ಪ್ರವಾಸ ಕಥನದಲ್ಲಿ ಅಲ್ಲಿ ಇಲ್ಲಿ ಹೋಗಿದ್ದ ವಿಷಯಗಳನ್ನು ವರದಿಯಂತೆ ಒಪ್ಪಿಸುವುದಕ್ಕಿಂತ ನಾಡಿನ ಸಂಸ್ಕೃತಿಯನ್ನು ಇತಿಹಾಸವನ್ನು ವಿಮರ್ಶೆ ಮಾಡುವುದು ಮತ್ತು ತಮ್ಮ ವೈಯುಕ್ತಿಕ ಅನುಭವಗಳನ್ನು ಪೂರಕವಾಗಿ ಉಪಯೋಗ ಪಡಿಸುವುದು ಉತ್ತಮ ಪ್ರವಾಸ ಕಥನದ ಲಕ್ಷಣಗಳು ಎನ್ನಬಹುದು. “ಹೋದ ಪುಟ್ಟ ಬಂದ ಪುಟ್ಟ” ರೀತಿಯ ಪ್ರವಾಸಿಗಳು ಸಾಮಾನ್ಯವಾಗಿದ್ದರೆ, ತಮ್ಮ ಪ್ರವಾಸವನ್ನು ಸೂಕ್ಷ್ಮ ಮತಿಯಿಂದ ಗಮನಿಸಿ, ಅದರಿಂದ ತಮ್ಮ ಅರಿವನ್ನು ವಿಸ್ತರಿಸಿಕೊಂಡು ಇತರರೊಡನೆ ಹಂಚಿ ಕೊಳ್ಳುವ ದೇಸಾಯಿ ರೀತಿಯ ಪ್ರವಾಸಿಗಳು ವಿರಳ.
ಇಗೋ ಚೈನಾ ಪ್ರವಾಸದ ಎರಡನೇ ಭಾಗ!

(ಸಂ)

***

ನಮ್ಮ ಚೀನದ ಪ್ರವಾಸ -ಭಾಗ 2

ನನ್ನ ಚೀನಾ ಪ್ರವಾಸದ ಕಳೆದ ವಾರದ ಲೇಖನಕ್ಕೆ(https://wp.me/p4jn5J-2ci) ಪ್ರತಿಕ್ರಿಯಿಸಿದ ಎಲ್ಲ ಓದುಗರಿಗೆ ನಾನು ಋಣಿ. ನನ್ನ ಪ್ರವಾಸದ ನೆನಪನ್ನು ಮೆಲುಕು ಹಾಕುವಾಗ ಬಂದ ಇನ್ನು ಕೆಲವು ಝಲಕ್ ಗಳನ್ನು ಈ ವಾರ ಹಂಚಿಕೊಳ್ಳುವೆ.

ಬಾವಿ ತೋಡಿದಾಗ ಸಿಕ್ಕ ಗಡ್ಡ-ಮೀಸೆಯ ಟೆರಾಕೋಟಾ ಯೋಧರು!

ಟೆರಾಕೋಟಾ ಯೋಧರನ್ನು ನೋಡುತ್ತಿರುವ ಲೇಖಕ

‘Silk Road’  ಚೀನದ ಪೂರ್ವಕ್ಕೆ ಹೋಗಿ ನಿಲ್ಲುವ ಸ್ಥಳ ಶಿಯಾನ್ (Xi’an). ಚೀನಾಕ್ಕೆ ಹೋದವರು ತಪ್ಪದೇ ವೀಕ್ಷಿಸಬೇಕಾದ ಅದ್ಭುತ ಸ್ಥಳವೆಂದರೆ ಶಿಯಾನ್ ದ ಹತ್ತಿರದ ಭವ್ಯ ’ಸಮಾಧಿ” ಮತ್ತು ಅದರಲ್ಲಿ ಯುದ್ಧ ಸನ್ನದ್ಧರಾಗಿ ನಿಂತ ಮೃತ್ತಿಕಾ ಸೈನ್ಯ ಅನ್ನ ಬಹುದು. Terra ಅಂದರೆ ಮಣ್ಣು; cotta ಅಂದರೆ ಆವಿಗೆಯಲ್ಲಿ (kiln) ಬೆಂಕಿಯಿಂದ ಸುಟ್ಟದ್ದು. 1974ರಲ್ಲಿ ಕೆಲ ರೈತರೊಡನೆ ತನ್ನ ತೋಟದಲ್ಲಿ ಬಾವಿತೋಡಲು ಹೊರಟಾಗ (ಕೆಳಗಿನ ವಿಡಿಯೋ 1 ನೋಡಿ) ಆಕಸ್ಮಿಕವಾಗಿ ದೊರೆತ ಈ ಮಣ್ಣಿನ ಮೂರ್ತಿಗಳನ್ನು ಇಪ್ಪತ್ತನೆಯ ಶತಮಾನದ ಬಹುಮುಖ್ಯ ಶೋಧ ಎಂದು ಪರಿಗಣಿಸಲಾಗುತ್ತದೆ.

ಯೋಧರ ಮುಂದಿನ ಸಾಲಿನ ಬಲತುದಿಯಲ್ಲರುವ ಫಲಕ ಬಾವಿಯ ಜಾಗವನ್ನು ತೋರಿಸುತ್ತದೆ

ವಿಶಾಲವಾದ ಮೂರು ನೆಲಮಾಳಿಗೆಗಳಲ್ಲಿ ಏರೋಪ್ಲೇನಿನ ಹ್ಯಾಂಗರ ತರದ ಚಾವಣಿಯ ಕೆಳಗೆ ಪೂರ್ವಾಭಿಮುಖವಾಗಿ ನಿಂತ ಸೈನಿಕರ ಮುಖಗಳೆಲ್ಲ ಭಿನ್ನ, ಶಿಲ್ಪಗಳು ಒಬ್ಬರಂತಿನ್ನೊಬ್ಬರಿಲ್ಲ. ಸಾಮಾನ್ಯವಾಗಿ 5’ 10” ನಷ್ಟು ಎತ್ತರ, ವಿವಿಧ ಆಯುಧ ಸಹಿತ ನಿಂತ ಯೋಧರು ತನ್ನ ಮರಣದ ನಂತರ ಭೂತ ಪ್ರೇತಗಳಿಂದ ರಕ್ಷಿಸಲೆಂದು ಈ ಸಮಾಧಿಯನ್ನು ಕಟ್ಟಿದವ ಚಿನ್ (Qin) ವಂಶದ ಅರಸ. 8,000 ಸೈನಿಕರನ್ನಲ್ಲದೆ ಎರಡು ಮರದ ರಥಗಳ ಅವಶೇಷಗಳನ್ನು ಸಹ ಪತ್ತೆ ಹಚ್ಚಲಾಗಿದೆ. ಆದರೆ ನೈಜ ಅಳತೆಯ ಅರ್ಧದಷ್ಟು ಪ್ರಮಾಣದಲ್ಲಿ ನಿರ್ಮಿಸಿದ ಎರಡು ಕಂಚಿನ ರಥಗಳ ಅಂದ ಚಂದ ವರ್ಣಿಸಲಾಗದ್ದು. ಅವುಗಳನ್ನುಸಹ ಚಾವಣಿಗಳ ಪಕ್ಕದಲ್ಲಿಯ ಬೇರೆಯೇ ಒಂದು ಮ್ಯೂಸಿಯಂ ನಲ್ಲಿಟ್ಟಿದ್ದಾರೆ. ಅವುಗಳನ್ನುನೋಡಲು ಬರುವವರು ನೂರಾರು ಜನರ ನೂಕು ನುಗ್ಗಲಿನಲ್ಲೇ ಮುಂದೆ ಸಾಗುತ್ತ ನೋಡಬೇಕು. ಅತ್ಯಂತ ಕಾಳಜಿಯಿಂದ ರಥಗಳನ್ನು ರಚಿಸಿದ ಶಿಲ್ಪಿಗಳ ಕೈ ಕುಶಲತೆಯನ್ನು ಮೆಚ್ಚಲೇ ಬೇಕು. ಅದೇ ತರ ಮಣ್ಣಿನ ಮೂರ್ತಿಗಳಲ್ಲಿ ಸಹ ಇವರ ಕೈಕುಸುರಿನ ಕೆಲಸವನ್ನು ನೋಡ ಬೇಕು- ಸೆಟೆದು ನಿಂತ ಯೋಧರ ಕೇಶಾಲಂಕಾರದಿಂದ ಹಿಡಿದು ರಥದ ಕುದುರೆಯ ಲಗಾಮಿನ ವರೆಗೆ ಕೆತ್ತಿದ ಸೂಕ್ಷ್ಮತೆ ನೋಡಲು ದುರ್ಬಿನ್ನೇ ಬೇಕು. ಹತ್ತಿರದಿಂದ ನೋಡಲು ಸಹಾಯವಾಗಲೆಂದುಅವುಗಳ ಕಾಪಿಗಳನ್ನು ಬೇರೆಡೆಗೆ ಇಟ್ಟಿದ್ದಾರೆ. (ಬಲಗಡೆಯ ಫೋಟೋ ನೋಡಿರಿ). ಈ ಸೈನ್ಯದ ಸೃಷ್ಟಿಕರ್ತ ಚೀನಾದ ಮೊದಲ ಚಕ್ರವರ್ತಿ -ಹಾಗೆಂದುತಾನೇ ತನಗೆ ಕೊಟ್ಟ ಹೆಸರು ಮತ್ತು ಬಿರುದು – ಚಿನ್ ಶಿ ಹುಆಂಗಡಿ (Qin Shi Huangadi). ಚೀನ ಭಾಷೆಯಲ್ಲಿ ’Q’ ದ ಉಚ್ಚಾರ ’ಚ’’ಕಾರದಲ್ಲಾಗುತ್ತದೆ. ಆತ ಮಹತ್ವಾಕಾಂಕ್ಷಿ, ದಕ್ಷ ಆಡಳಿತಗಾರನಾಗಿದ್ದ. (ಕೆಲವರ ಪ್ರಕಾರ, ತಲೆತಿರುಕ, ಕ್ರೂರ). ತನ್ನ 13ನೆಯ ವಯಸ್ಸಿಗೇ ಪಟ್ಟಕ್ಕೆ ಬಂದು 36 ವರ್ಷದ ಆಳಿಕೆಯಲ್ಲಿ (ಕ್ರಿ.ಪೂ. 247 -210) ಚೀನದ ವಿವಿಧ ಸ್ವತಂತ್ರ ಪ್ರದೇಶಗಳನ್ನು ಒಂದುಗೂಡಿಸಿದ. ಅಲ್ಲಿ ಹರಿಯುವ ನಾಲ್ಕೈದು ಮಹಾನದಿಗಳನ್ನು ಉತ್ತರಿಂದ ದಕ್ಶಿಣದ ವರೆಗೆ ತೋಡಿಸಿದ ಕಾಲುವೆಗಳಿಂದ ಜೋಡಿಸಿದ. ನಾಡಿನ ತುಂಬೆಲ್ಲ ಒಂದೇ ನಾಣ್ಯ, ಅಳತೆ ಮಾಪನೆ, ಚೀನೀ ಭಾಷಾ ಲಿಪಿಗಳ ಏಕೀಕರಣ, ಇವೆಲ್ಲ ಮಾಡಿದ. ತನ್ನ ಸಾವಿನ ನಂತರದ ’ಜೀವ’ನ’’ದಲ್ಲಿ ಜೊತೆಗಿರಲೆಂದು 7 ಲಕ್ಷ ಜನರ ಪರಿಶ್ರಮದಿಂದ ಕಟ್ಟಿಸಿದ ಜಾಗದಲ್ಲೇ ಎಂಟು ಸಾವಿರದ ಟೆರಾಕೊಟಾ ಮೂರ್ತಿಗಳ ಜೊತೆಗೆ ಕೆಲವೊಂದು ಕೆಲಸಗಾರರನ್ನಷ್ಟೆ ಅಲ್ಲದೆ ತನಗಾಗದ ಪಂಡಿತರನ್ನು ಸಹ ಸಜೀವ ಸಮಾಧಿಗೈದ ಕುಖ್ಯಾತಿ ಈತನದು! ಇಲ್ಲಿಯವರೆಗೆ ಉತ್ಖನನ ಮಾಡಿ, ಅವಶ್ಯವಿದ್ದಲ್ಲಿ ರಿಪೇರಿ ಮಾಡಿ ಜೋಡಿಸಿದ ವಸ್ತುಗಳನ್ನು Pit 1ರಿಂದ Pit 3ರಲ್ಲಿ ಸಂರಕ್ಶಿಸಿ ಪ್ರದರ್ಶನಕ್ಕಿಟ್ಟಿದೆ. ಪಕ್ಕದಲ್ಲೇ ಇರುವ ಇನ್ನೂ ಕೈ ಹಾಕದ ದಿನ್ನೆಯೊಳಗೆ ಅದೇನು ರಹಸ್ಯ ಅಡಗಿದೆಯೋ. ಅದರೊಳಗೆ ಆತ ಪಾದರಸದ ಕಾಲುವೆಯನ್ನೇ ಹರಿಸಿದ್ದ ಎನ್ನುವ ನಿರ್ಧಾರಕ್ಕೆ ಬರಲು ಕೆಲವು ಪುರಾವೆಗಳಿವೆಯಂತೆ. ಇದು ಯುನೆಸ್ಕೋ ಪರಂಪರೆಯ ತಾಣ (Unesco World Heritage Site). ಈ ’ಸಾಧಕ’ ಮಾಡಿಟ್ಟಿದ್ದ ಭೂಗರ್ಭದಲ್ಲಿ ಅಡಗಿದ್ದ ರಹಸ್ಯಗಳನ್ನು ಬಯಲು ಮಾಡಲಾಗಿದೆ. ಆದರೆ ಮಾನವನ ಮನಸ್ಸಿನಲ್ಲಿ ಅದರ ಜೊತೆಗೆ ಹುದುಗಿರಬಹುದಾದ ಅಹಂಕಾರ, ಆಮಿಷ ಕ್ರೌರ್ಯಇವುಗಳ ರಹಸ್ಯವನ್ನು ಹೊರತರಲಾದೀತೇ? ಚೀನಕ್ಕೆ ಹೋದರೆ ನೋಡಲೇ ಬೇಕಾದ ಜಾಗ ಇದು. ನನ್ನ ಯೂ ಟ್ಯೂಬ್ ವಿಡಿಯೋ್ದಲ್ಲಿ (Video 1.) ಇದರ ಟ್ರೇಲರ್ ನೋಡಿರಿ:

ಗಿಲ್ಲಿನಿನ ಒನಕೆ-ಒರಳು ಮತ್ತು ಸೂರ್ಯ-ಚಂದ್ರರು

ಗಿಲಿನ್ ನಲ್ಲಿ ಸೂರ್ಯ-ಚಂದ್ರ ಪಗೋಡಾಗಳು

ಚೀನದ ಅತ್ಯಂತ ದಕ್ಶಿಣ ಪ್ರಾಂತವಾದ ಗ್ವಾಂಗ್ಶಿ ಯ ಒಂದು ಮುಖ್ಯ ಪಟ್ಟಣ ಗಿಲ್ಲಿನ್. ಇದನ್ನು ಕಿಲ್ಲಿನ್ ಎಂತಲೂ ಉಚ್ಚರಿಸುತ್ತಾರೆ. ಅದರ ಅರ್ಥ ಸುವಾಸಿತ Osmanthus ಹೂಗಳ ವನ. ಈ ಹೂಗಳು ನಮ್ಮ ದೇಶದಲ್ಲಿ ಕಾಣ ಸಿಗುವ ಬಕುಳ ಪುಷ್ಪವನ್ನು ಹೋಲುತ್ತದೆ ಎಂದು ತಿಳಿಯಿತು. ಕವಿಗಳು ವರ್ಣಿಸಿದ ರೋಮಾಂಟಿಕ್ ’ಬಕುಳ ವನದ’ ಮಧ್ಯದಲ್ಲಿ ಶಾನ್ ಹೂ ಎಂಬ ಒಂದು ಪುಟ್ಟ ಸರೋವರ. ಸರೋವರದ ಮಧ್ಯದಲ್ಲೇ ನಿಂತ ಎರಡು ಸುಂದರವಾದ ಪಗೋಡಾಗಳು. ಅವುಗಳಿಗೆ ಸೂರ್ಯ ಮತ್ತು ಚಂದ್ರ ಎಂದು ಹೆಸರಿಟ್ಟಿದ್ದಾರೆ..-ಒಂದು ಕಂದು, ಇನ್ನೊಂದು ಬೆಳ್ಳಿ- ರಾತ್ರಿಯ ಬೆಳಕಿನಲ್ಲಿ ನೀರಲ್ಲಿ ಅವುಗಳ ಪ್ರತಿಬಿಂಬಗಳು, ಸರೋವರದ ಸುತ್ತಲಿನ ದೀಪಸ್ಠಂಬಗಳು, ನೀರಲ್ಲಿ ಅವುಗಳ ಪ್ರತಿಬಿಂಬಗಳು—ಅದೊಂದು ರಮಣೀಯ ದೃಶ್ಯ. ಕಂಚಿನಿಂದ ಮಾಡಿದ 41 ಮೀಟರ್ ಎತ್ತರದ ಸೂರ್ಯ ಪಗೋಡಾ ಕಂದು ಬಣ್ಣದ್ದು. ಪಕ್ಕದಲ್ಲೇ ಬೆಳ್ಳಿಯ ಬೆಳಕಿನ, ಸೂರ್ಯನಿಕ್ಕಿಂದ ಒಂಬತ್ತು ಮಜಲುಗಳು ಕಡಿಮೆಯ ಚಂದ್ರ ಪಗೋಡಾ,. ಇವೆರಡನ್ನೂ ನೀರೊಳಗೆ ಜೋಡಿಸಿರುವದು 10 ಮೀಟರುಗಳ ಗಾಜಿನ ಟನೆಲ್.  ತಲೆಯ ಮೇಲೆ ಮೀನುಗಳು ಈಜುವದನ್ನು ಹಗಲಿನಲ್ಲಿ ನೋಡ ಬಹುದಂತೆ. ನಾನು ಹೋದದ್ದು ರಾತ್ರಿಯ ಸಮಯದಲ್ಲಿ. ಆ ರಮಣೀಯ ದೃಶ್ಯವನ್ನು ನೋಡಲು ಸೂರ್ಯ ಪಗೋಡಾಗೆ ಒಂದಕ್ಕೆ ಮಾತ್ರ ಇರುವ ಲಿಫ್ಟ್ ಹತ್ತಿ ಕೊನೆಯ ಹಂತದ ವರೆಗೆ ಹೋದರೆ ಮೇಲಿಂದ ಕೆರೆಯ ದಂಡೆ, ನೀರಲ್ಲಿ ಸುತ್ತಾಡುವ ದೀಪಗಳಿಂದ ಅಲಂಕೃತ pleasure boats ಅವುಗಳನ್ನು ನೋಡುತ್ತಾ ಒಂದರ್ಧಗಂಟೆಯಾದರೂ ಸಮಯ ಕಳೆಯ ಬಹುದು. (ವಿಡಿಯೋ ಲಿಂಕ್ ನೋಡಿ: ವಿಡಿಯೋ 2)

ಕೆರೆಯ ಪಕ್ಕದಲ್ಲೇ ಮಾರ್ಕೆಟ್. ಅದರ ಜನ ನಿಬಿಡವಾದ ರಸ್ತೆ ಗುಂಟ ಅಂಗಡಿಗಳು. ಅವುಗಳಲ್ಲಿ ಮಿಠಾಯಿ, ತಿಂಡಿಗಳ ಮಾರಾಟ.ಅವುಗಳನ್ನು ತಯಾರಿ ಮಾಡುವ ಹಿಟ್ಟಿಗಾಗಿ ಕಾಳನ್ನು ಕುಟ್ಟಲು ಹಿಂದಿನ ಕಾಲದಲ್ಲಿ ಒನಕೆ-ಒರಳು ತಾನೆ ವಾಪರಿಸುತ್ತಿದ್ದುದು? ಈಗಲೂ ಜನರನ್ನು ಆಕರ್ಷಿಸಲೋ, ಅಥವಾ ಅವರ ಪುಕ್ಕಟೆ ಶ್ರಮದಿಂದ ಕೆಲಸವೂ ಆಯಿತು ಎಂತಲೋ ದಾರಿಯಲ್ಲಿ ಒನಕೆ-ಒರಳುಗಳನ್ನು ಅಲ್ಲಲ್ಲಿ ಇಟ್ಟಿದ್ದಾರೆ. ಅಂಗಡಿಗಳಿಂದ ಬರುವ ಸಂಗೀತದ ಮನರಂಜನೆ ದಾರಿಹೋಕರಿಗೆ ಮತ್ತು ಕುಟ್ಟುವವರಿಗೆ! ರಸ್ತೆಯಲ್ಲಿ ಓಡಾಡುತ್ತಿರುವ ಗ್ರಾಹಕರೂ ಸರತಿ ಪ್ರಕಾರ ಒನಕೆ ಹಿಡಿದು ನಗುತ್ತ, ಕುಣಿಯುತ್ತ ಒರಳನ್ನು ಕುಟ್ಟಿ ಇನ್ಸ್ಟಾಗ್ರಾಮ್, ಫೇಸ್ ಬುಕ್ ಗಳಿಗೆ ರವಾನಿಸುವ ಸಲುವಾಗಿ ಸೆಲ್ಫಿ ಅಥವಾ ಫೋಟೋ ತೆಗೆಸಿಕೊಳ್ಳುವ ದೃಶ್ಯವೇ ಮನರಂಜನೆ ನೀಡುತ್ತಿತ್ತು. (ವಿಡಿಯೋ 2)

ರಾತ್ರಿಯ ಇನ್ನೊಂದು ಚಿಕ್ಕ ಆಕರ್ಷಣೆಯೆಂದರೆ ’ಲಿಜಿಯಾಂಗ್ ವಾಟರ್ಫಾಲ್ ಹೋಟೆಲ”ನ ಅಟ್ಟದ ತುದಿಯಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ಗೋಡೆಗುಂಟ ಇಳಿಬರುವ ಜಲರಾಶಿ! ಸುತ್ತಲಿನ ರಸ್ತೆಗಳ ಮೇಲೆ ನಿಂತು ಅರ್ಧ ಗಂಟೆಯ ಪುಕ್ಕಟೆ ಮನರಂಜನೆಗಾಗಿ (free show!) ಜನರು ಕಾಯುತ್ತಿರುತ್ತಾರೆ. (ವಿಡಿಯೋ 2 ನೋಡಿ). ಹೋಟೆಲಿನಲ್ಲಿ ಆ ಬದಿಯ ರೂಮಿನಲ್ಲಿರುವ ಅತಿಥಿಗಳಿಗೆ ಕಿಡಕಿ ತೆಗೆಯಲು ಆಗುತ್ತದೆಯೋ, ಅನುಮತಿ ಇದೆಯೋ ಎಂದು ನನ್ನ ತಲೆಯಲ್ಲಿ ಪ್ರಶ್ನೆ. ಅದಕ್ಕಿಂತ ಹೆಚ್ಚಿನ ವಿಷಾದ ಅಂದರೆ ಎಷ್ಟೊಂದು ನೀರಿನ ಅಕ್ಷಮ್ಯ ದುಂದು ವೆಚ್ಚ ಅನಿಸಿತು. ಆದರೆ ಈ ಭಾಗದಲ್ಲಿ ಕಾಲುವೆ, ಕೆರೆ, ನದಿಗಳು ಬಾಹುಲ್ಯ ಎಷ್ಟಿದೆಯೆಂದರೆ ಈ ಊರು ತನ್ನನ್ನು ವರ್ಣಿಸಿಕೊಳ್ಳುವದು: “By water, by mountains, most lovely, Guilin” ಎಂದು. ಅವರವರ ಅದೃಷ್ಟ ಅನ್ನಿ. ಅಥವಾ ರಿಸೈಕಲ್ ಮಾಡುತ್ತಿರಬೇಕು.

20 Y (ಚೀನೀ ಯುಆನ್) ಬೆಲೆ ಬಾಳುವ ಚಿತ್ರ

20 Y photo!

ಗಿಲಿನ್ ಊರನ್ನು ಸೀಳಿ ಶಾಂತವಾಗಿ ಹರಿಯುವದು ಲೀ ನದಿ. ಅದು ಮುಂದೆ ಹರಿದು ಇನ್ನೊಂದು ನದಿಯನ್ನು ಸೇರುವವರೆಗೆ ಇಕ್ಕೆಲಗಳಲಿ ಅಷ್ಟು ಎತ್ತರವಲ್ಲದ, ಕಾರ್ಸ್ಟ್ (Karst) ಅನಿಸಿಕೊಳ್ಳುವ ಗುಡ್ಡಗಳು. ಇಲ್ಲಿ ನೀರಿಗೆ

Red Flute Cave, Guilin, with stalactites and stalagmites

ಕೊರತೆಯಿಲ್ಲ. ನದಿಯ ದಂಡೆಯುದ್ದಕ್ಕೂ ನಿಂತಿದೆ ಗುಡ್ಡಗಳ ಸಾಲು. ಅವುಗಳ ಮೇಲೆ ಬೆಳೆಯುವ ಗಿಡ, ಮರ ಪೊದರುಗಳಿಂದಾಗಿ ಹಚ್ಚ ಹಸಿರಾಗಿ ಕಾಣುತ್ತವೆ. ಒಬ್ಬ ಕವಿಗೆ ಅವು Jade ಹೇರ್ ಪಿನ್ನಿನಂತೆ ಕಂಡವಂತೆ! ಅವುಗಳ ಮೈಮೇಲಿಂದ ಸಾವಿರಾರು ವರ್ಷಗಳಿಂದ ಇಳಿದು ಬಂದ ನೀರಿನ ಝರಿಗಳು ಅವನ್ನು ಕೊರೆದು ಒಳಗೆ ತೊಟಕಿದ stalactite-stalagmite ತುಂಬಿದ ಗವಿಗಳನ್ನು ತನ್ನ ಹೊಟ್ಟೆಯಲ್ಲಿ ಗುಟ್ಟಾಗಿ ಬಚ್ಚಿಟ್ಟು ಗಂಭೀರವಾಗಿ ”ಜೇಡ್ ಹೇರ್ ಪಿನ್ನಿನಂತೆ ನಿಂತ ಲೈಮ್ ಸ್ಟೋನ್ ಗುಡ್ಡಗಳ ಮಧ್ಯೆ ಹಸಿರು ರೇಶಿಮೆ ರಿಬ್ಬನ್ನಿನಂತೆ ಬಳುಕುತ್ತ ಲೀ ನದಿ ಹರಿಯುತ್ತದೆ”. ಇದು ಎಂಟನೆಯ ಶತಮಾನದ Tang Dynasty ಕಾಲದ ಕವಿ ಹಾನ್-ಯು ಬರೆದ ವರ್ಣನೆ. ಮುಂಜಾನೆಯಿಂದ ಸಂಜೆಯ ವರೆಗೆ ಅವುಗಳ ಮೇಲೆ ಸಾವಿರಾರು ಪ್ರವಾಸಿಕರನ್ನು ಹೊತ್ತ ಚಿಕ್ಕ ದೊಡ್ಡ ದೋಣಿಗಳ ’ಓಡಾಟ’. ಆದರೂ ಆ ನದಿಯ ನೀರು ಅಷ್ಟು ಸ್ವಚ್ಚ ಮತ್ತು ತಳ ಕಾಣುವಷ್ಟು ಪಾರದರ್ಶಕ, ಮಳೆಗಾಲದಲ್ಲಿ ಬಿಟ್ಟು!

CC

ನಾವು ’ಲೀ ರಿವರ್ ಕ್ರೂಸ್’ ಪ್ರವಾಸ ಹೊರಟ ಅರ್ಧ ಗಂಟೆಯ ನಂತರ ಎಲ್ಲರ ಕಿಸೆಯಿಂದ ಹೊರಬಂತು — 20 ಯುಆನ್ (ಚೀನೀ ಹಣ) ನೋಟು. ಅದರ ಮೇಲೆ ಲೀ ನದಿಯ ಸುಂದರ ಚಿತ್ರವಿದೆ. ಆ ನಿರ್ದಿಷ್ಟ ಸ್ಥಳಕ್ಕೆ ಬಂದೊಡನೆ ಅಲ್ಲಿ ಕಾಣುವ ನದಿ- ಗುಡ್ಡಗಳ ರಮಣೀಯ ದೃಶ್ಯಕ್ಕೆ ಹೋಲಿಸಿ ಆ ನೋಟನ್ನು ಅದರೆದುರು ಕೈಯಲ್ಲಿ ಹಿಡಿದು ಫೋಟೊ ತೆಗೆದದ್ದೇ ಎಲ್ಲರೂ. ಆಂಗ್ಲ ಭಾಷೆಯಲ್ಲಿ ”A picture is worth a thousand words” ಅನ್ನುವ ಮಾತು ಒಂದಿದೆ. ಅದನ್ನು ಮೊದಲು (1921 ರಲ್ಲಿ) ಹೇಳಿದವ ಫ್ರೆಡೆರಿಕ್ ಬರ್ನಾರ್ಡ್ ಅನ್ನುವ ಅಮೆರಿಕನ್ ಅಂತ ಪ್ರತೀತಿ. ಅದರ ಚೀನೀ ತದ್ಭವ ”’It’s worth ten thousand words,” ಅಂತೆ. ಇಲ್ಲಿ ಈಗ ನೋಡಿದರೆ ಅ ಚಿತ್ರಕ್ಕೆ ಬೆಲೆ ಬರೀ 20 ಯುಆನ್ ಆಯಿತೇ? (ಸುಮಾರು ಎರಡೂವರೆ ಪೌಂಡುಗಳು!) ಆದರೆ ನಮ್ಮ ದುರ್ದೈವವೆಂದರೆ ಆ ದಿನ ಜೋರಾಗಿ ಮಳೆ ಸುರಿದು ಅದು ಸುಂದರವಾಗಿ ಕಾಣುತ್ತಿರಲೂ ಇಲ್ಲ! ಆದರೂ ಕ್ಲಿಕ್ಕಿಸಿದ ಫೋಟೋ ಮೇಲೆ ಇದೆ. ರಮಣೀಯ ಲೀ ನದಿ ಕ್ರೂಸ್ a must, ಅಂತ ಬಹಳ ಜನರ ಅಭಿಪ್ರಾಯ.

ಚೀನದಲ್ಲೂ ಕಂಡ ಪಾಂಡಾಗಳು: “Eyes like Panda’s”

Eyes like Panda’s (google photo edited by author)

ಗಿಲ್ಲಿನ್ ನಂತರ ಸೂಪರ್ಫಾಸ್ಟ್ ರೈಲು ಹಿಡಿದು ಚೋಂಗ್ ಚಿಂಗ್ ಹೋದೆವು.  ಇತ್ತೀಚೆಗೆ ಚೀನದ ಮುಖ್ಯ ಪಟ್ಟಣಗಳನ್ನೆಲ್ಲ ಈ 250 ಕಿ.ಮೀ ವೇಗದ ರೈಲುಗಾಡಿಗಳು ಓಡುವಂತೆ ಜೋಡಿಸಲಾಗಿದೆ. ಅದುವೇ ವಾಣಿಜ್ಯ-ಉದ್ಯಮದ ಬೆಳವಣಿಗೆಗೆ ಮತ್ತು ಆರ್ಥಿಕ ಪರಿಸ್ಥಿತಿಯ ಉನ್ನತಿಗೆ ಒಂದು ಕಾರಣವಿರಬೇಕು. ಇಲ್ಲಿ ನಾವು ನೋಡಿದ ಹೊಸ ರೈಲು ಸ್ಟೇಶನ್ನುಗಳೆಲ್ಲ ವಿಶಾಲವಾಗಿದ್ದವು. ವಿಮಾನ ನಿಲ್ದಾಣದಲ್ಲಿಳಿದಂತೆ ಅನಿಸುತ್ತಿತ್ತು. ನಾವು ಇಳಿದ ಕೋಡಲೇ ಅಲ್ಲಿಯ ಪ್ರಾಣಿಸಂಗ್ರಹಾಲಯದ ಮುಖ್ಯ ಆಕರ್ಷಣೆಯಾದ ಜೈಯಂಟ್ ಪಾಂಡಾ ಕರಡಿಗಳನ್ನು ನೋಡಲು ಹೋದೆವು. ಅದರ ಮಹಾ ಕಾಯದ ಮೇಲೆಲ್ಲ ಕಪ್ಪು-ಬಿಳುಪು ಬಣ್ಣದ ಗುರುತುಗಳು. ಅದಲ್ಲದೆ ಅವುಗಳ ಕಣ್ಣುಗಳ ಸುತ್ತ ಕರಿದಾದ ವಲಯಗಳು ಯಿನ್-ಯಾಂಗ್ ತರ. ಇದಕ್ಕೂ ಮೊದಲು ನಾನು ಕಂಡ ಪಾಂಡಾ ಕಣ್ಣುಗಳು ನಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ! (ನಾನು ಕಣ್ಣಿನ ಡಾಕ್ಟರ್ ಅಂದ ಮೇಲೆ ಶನಿವಾರ ರಾತ್ರಿಯ ಪಬ್ಬಿನಲ್ಲಾದ ಕುಸ್ತಿಯ ಅನಾಹುತದ ಕುರುಹನ್ನು ಹೊತ್ತ – “Eyes like Panda” – ಎಷ್ಟೋ ಗಿರಾಕಿಗಳನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡುವ ಅವಕಾಶ ನನಗೆ ಒದಗುತ್ತಿತ್ತು!)

ಇವುಗಳ ಮೂಲ ವಸತಿಯಾದ ಚೀನದ ಸಿಚ್ವಾನ್ ಪ್ರಾಂತ ಬಿಟ್ಟರೆ ಉಳಿದ ಕಡೆ ಅವುಗಳನ್ನು ನೋಡಲು ಸಿಗುವದು ಅಪರೂಪವೆ. ಈ ಪ್ರಾಣಿಗಳು ಇತ್ತೀಚೆಗಷ್ಟೇ ಜಗತ್ತಿನ ಎಲ್ಲ ಭಾಗಗಳಲ್ಲಿ ಬಹಳೆ ಜನಪ್ರಿಯವಾಗಿವೆ. ಅದಕ್ಕೆ ಚೀನದ Panda Diplomacy* ಯೂ ಕಾರಣ. ಆದರೆ ಚೀನದ ಹೊರದೇಶಗಳಲ್ಲಿ ಇವುಗಳ ಪುನರುತ್ಪತ್ತಿ ಯೋಜನೆ ಅಷ್ಟು ಸಫಲವಾಗಿಲ್ಲ. ಅದಕ್ಕೇ ಐದಾರು Giant Pandaಗಳನ್ನು ಒಟ್ಟಿಗೇ ನೋಡುವ ಸದವಕಾಶ ಸಿಕ್ಕಿದ್ದಕ್ಕೆ ನಮ್ಮ ಭೇಟಿ ಸಫಲವಾಯಿತು ಎಂದು ನಮ್ಮ ಪಂಗಡದವರು ಸಂತೋಷ ಪಟ್ಟರು. ಚೀನದ ಕುಟುಂಬ ನಿಯಂತ್ರಣ ಯೋಜನೆಯ ಪರಿಣಾಮವಾಗಿ (ಮನೆಗೆ ಒಂದೇ ಮಗು, ಇಲ್ಲಿಯ ವರೆಗೆ) ಚಿಕ್ಕ ಮಕ್ಕಳನ್ನು ಪಬ್ಲಿಕ್ ಜಾಗಗಳಲ್ಲಿ ಕಾಣುವದೇ ಅಪರೂಪ. ಆ ದಿನ ನಮ್ಮ ಜೊತೆಗೆ ಬಂದು ಪಾಂಡಾಗಳನ್ನು ನೋಡಿ ಕೇಕೆ ಹೊಡೆದು ಕುಣಿದ ಎರಡು ಚೀನೀ ಮಕ್ಕಳೂ ಮುದ್ದಾಗಿ ಕಾಣುತ್ತಿದ್ದರು! ನೆರೆದ ಟೂರಿಸ್ಟರ ಪರಿವೆಯಿಲ್ಲದೆ, ತಾನಾಯಿತು, ತನ್ನ ಬಾಂಬೂ ಸೇವನೆಯಾಯಿತು ಅಂತ ತನ್ನ ಮಂಚದ ಮೇಲೆ ಒರಗಿ ನಾವು ಆಸೆಯಿಂದ ಕಬ್ಬು ಬಿಡಿಸಿ ತಿನ್ನುವಂತೆ ಕೈಯಲ್ಲಿ ಬಿದಿರಿನ ಕಡ್ಡಿಗಳನ್ನು ಹಿಡಿದು ಸೊಪ್ಪನ್ನು ಆಸ್ವಾದಿಸುವ ಪಾಂಡಾದ ಫೋಟೋ, ವಿಡಿಯೋ ಎಲ್ಲ ತೆಗೆದದ್ದಾಯಿತು. (Video3) ನನ್ನ ವಿಡಿಯೋದಲ್ಲಿ ಒಂದು ಕೆಂಪು ಪಾಂಡಾವನ್ನೂ ನೋಡ ಬಹುದು. ಅವು ರಕ್ಕೂನ್ (Raccoon) ಹತ್ತಿರದ ಬೇರೆ ಜಾತಿಯ ಪ್ರಾಣಿಗಳಾದರೂ ಅವಕ್ಕೂ ’ಪಾಂಡಾ” ಅಂತಲೇ ಕರೆಯುತ್ತಾರೆ. ಅವುಗಳಿಗೂ ಸಹ ಮುಂಗೈ ಎಲುಬು ದೊಡ್ಡದಾಗಿದ್ದು ಹೆಬ್ಬೆರಳಿನಂತೆ ಕೆಲಸ ಮಾಡುತ್ತದೆ.  ಬಾಂಬೂ ಕೈಯಲ್ಲಿ ಹಿಡಿದುಕೊಳ್ಳಲು ಸುಲಭವಾಗುತ್ತದೆ. ಅವುಗಳು ಹಿಮಾಲಯದಡಿಯಲ್ಲಿ ನೇಪಾಳ-ಸಿಕ್ಕಿಮದಂಥ ದೇಶಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತವೆ. ನೇಪಾಳಿ ಭಾಷೆಯಲ್ಲಿಯ ಅವುಗಳ ಹೆಸರು ’ನಿಗಲ್ಯಾ(=ಬಿದಿರು ತಿನ್ನುವ) ಪೋನ್ಯಾ’ . ಆ ಎರಡನೆಯ ಶಬ್ದ ’ಪೋನ್ಯ”ದಿಂದ ಪಾಂಡಾ ಶಬ್ದದ ವ್ಯುತ್ಪತ್ತಿ ಎಂದು ಪ್ರಕಾಂಡ ಪಾಂಡಾ ಪಂಡಿತರ ವಾದ!

ಎಡಗಡೆಯಿಂದ ಎರಡನೆಯ ಫುವಾ (Fuwa) ಜಿಂಗ್ ಲಿಂಗ್ (official logo)

ಹಿಂದಕ್ಕೆ ಲಂಡನ್ ಝೂದಲ್ಲಿರುತ್ತಿದ್ದ ’ಚಿನ್ ಚಿನ” ಹೆಸರಿನ ಪಾಂಡಾ (ಈಗ ಮೃತ) ಬಹಳೇ ಜನಪ್ರಿಯವಾಗಿತ್ತು. ಪರಿಸರ ಪ್ರೇಮಿ, ornithologist ಸರ್ ಪೀಟರ್ ಸ್ಕಾಟ್ ಚಿತ್ರಕಾರ ಸಹ ಆಗಿದ್ದ. ಆತ ಬರೆದ ಪಾಂಡಾದ ಚಿತ್ರವನ್ನೇ 1961 ನಲ್ಲಿ ಹುಟ್ಟಿದ WWF (WorldWildLife Fund) ತನ್ನ ಲೋಗೋ ಮಾಡಿಕೊಂಡಿತು. 2008ರ ಬೇಜಿಂಗ್ ಓಲಿಂಪಿಕ್ ದ Fuwa mascot ಸಾಲಿನಲ್ಲಿ (ಅದೃಷ್ಟ ಸಂಕೇತ)ಗಳಲ್ಲಿ ಎರಡನೆಯದಾದ ಜಿಂಗ್ಲಿಂಗ್ ಒಂದು ಪಾಂಡಾ. ನೀವು ಚೀನಕ್ಕೆ ಹೋಗಲಾಗದಿದ್ದರೆ, ಈ ದೇಶದಲ್ಲಿ ಪಾಂಡಾ ನೋಡಬೇಕೆಂದರೆ ಸ್ಕಾಟ್ಲಂಡಿನ ಎಡಿನ್ಬರೋದ ಟಿಯಾನ್ ಟಿಯಾನ್ ಅನ್ನು ಪ್ರತ್ಯಕ್ಷವಾಗಿ ನೋಡ ಬಹುದು. ಅದೂ ಆಗದಿದ್ದರೆ ಅಲ್ಲಿಂದ ಸತತವಾಗಿ ಪ್ರದರ್ಶಿಸಲಾಗುತ್ತಿರುವ ಪಾಂಡಾಕ್ಯಾಮ್ (PandaCam) ದಲ್ಲಾದರೂ ನೋಡಿ. ಅವುಗಳ ರಕ್ಷಣೆಗೆ ನಿಮ್ಮ ದೇಣಿಗೆ ಸಹಾಯವಾಗಲಿ. ಯಾಕಂದರೆ ಈಗ ನಿಸರ್ಗದಲ್ಲಿ ಉಳಿದಿರುವ ಪಾಂಡಾಗಳು 1870 ಮಾತ್ರ. ಇತ್ತೀಚೆಗೆ ಅವುಗಳ ಸಂಖ್ಯೆ ಬೆಳೆದಿದ್ದರೂ ಅವುಗಳನ್ನು endangered species ದಿಂದ ಇಳಿಸಿದರೂ ಅವು ಇನ್ನೂ vulnerable ಸ್ಥಾನದಲ್ಲಿವೆ.

ಜೇಡ (Jade)-ರೇಶಿಮೆಯ ಬಲೆಗೆ ಬೀಳುವ ಪ್ರವಾಸಿಕರು!

A typical China itinerary

ಹದಿನೆಂಟು ದಿನಗಳ ಪ್ರವಾಸದಲ್ಲಿ ಕಂಡ ಊರುಗಳೆಷ್ಟೋ, ಆದ ಅವಿಸ್ಮರಣೀಯ ಅನುಭವಗಳೆಷ್ಟೋ! ಬ್ರಿಟಿಶ್ ಮತ್ತುಳಿದ ಯೂರೋಪಿಯನ್ನರ ನಿಕಟ ಸಂಬಂಧದ ಶಾಂಘಾಯ್, ಯಾಂಗತ್ಸೇ ನದಿಯ ಮೇಲೆ ಕಳೆದ ಮೂರು ದಿನಗಳ ಯಾನ ಇತ್ಯಾದಿ, ಅವುಗಳನ್ನು ಇಲ್ಲಿ ಬರೆದಿಲ್ಲ.. ಆದರೆ ಚೀನದಲ್ಲೂ ಸಹ ಜಗತ್ತಿನ ಎಲ್ಲ ಮಹಾನಗರಗಳಲ್ಲಿ ಇದ್ದಂತೆ ‘ಟೂರಿಸ್ಟ್ ಟ್ರಾಪ“ ಗಳಿಗೆ ಕಡಿಮೆಯಿಲ್ಲ. ಮೈಸೂರಿನ ರೇಶಿಮೆಯ ಪರಿಚಯವಿರುವ ಭಾರತೀಯರಿಗೆ silk madness ಇರಲಿಕ್ಕಿಲ್ಲ. ಆದರೆ ಜಗತ್ತಿನ ಹೆಚ್ಚು ಕಡಿಮೆ ಮುಕ್ಕಾಲು ಪಾಲು ರೇಶಿಮೆ ಉತ್ಪಾದನೆಯಾಗುವದು ಚೀನದಲ್ಲೇ. ಬಹಳಷ್ಟು ಜನ ಪ್ರವಾಸಿಕರು ರೇಶಿಮೆಯ ಅಂಗಡಿಗಳ ಒತ್ತಾಯಕ್ಕೆ ಮಣಿಯುವದು ಅಪರೂಪವಲ್ಲ. ಹಾಗೆಯೇ Jade (ಪಚ್ಛ) ಆಭರಣಗಳ ಅಂಗಡಿಗಳ ಆಕರ್ಷಣೆ, ಮುತ್ತಿನ (ಪರ್ಲ್ ಫ್ಯಾಕ್ಟರಿ), ಚೈನೀಸ್ ಗ್ರೀನ್ ಟೀ, ಇತ್ಯಾದಿ, ಇತ್ಯಾದಿ.  ಎಲ್ಲ ಟೂರ್ ಕಂಪನಿಗಳು ಬಸ್ ಯಾ ಪ್ರೈವೇಟ್ ಗಾಡಿಗಳಲ್ಲಿ ತಂದು ಅವುಗಳ ಬಾಗಿಲಲ್ಲಿ ಟೂರಿಸ್ಟರನ್ನು ತಂದು ಇಳಿಸಿ, ಫ್ಯಾಕ್ಟರಿ ಟೂರ್ ಮಾಡಿಸಿ ಹೋದರೆ ಗಂಡ ಹೆಂಡಿರಲ್ಲಿ ಒಬ್ಬರದಾದರೂ ಮನಸ್ಸು ಗಟ್ಟಿಯಿರದಿದ್ದರೆ ಅವುಗಳನ್ನು ಚೀಲದಲ್ಲಿ ತುಂಬಿಸಿ ಹೊತ್ತುಕೊಂಡು ಹೋಗುವದೇ . ರೇಶಿಮೆಯ ಬಟ್ಟೆ, ಬೆಡ್ ಶೀಟ್ ಇತ್ಯಾದಿಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಪುಸಲಾಯಿಸಲಾಗುತ್ತದೆ. ನಮ್ಮ ಗುಂಪಿನಲ್ಲಿ ಒಬ್ಬರಿಬ್ಬರಾದರೂ ಅದರ ಲಾಭ ಪಡೆದಿದ್ದರೆಂದರೆ ಆಶ್ಚರ್ಯವಿಲ್ಲ! Caveat emptor! (Video 4 & 5)

ಅದೇನೇ ಇರಲಿ, ಇತ್ತೀಚಿನ 30 ವರ್ಷಗಳಲ್ಲಿ ಚೀನ ಸಾಧಿಸಿದ ಪ್ರಗತಿಯನ್ನು ಕಣ್ಣಾರೆ ನೋಡಲಾದರೂ ಒಮ್ಮೆ ಚೀನಕ್ಕೆ ಹೋಗಿಬರಬಹುದು!

ಶ್ರೀವತ್ಸ ದೇಸಾಯಿ

(All photos and videos by the author except where credited.)

 

* Panda Diplomacy ಇಂಟರ್ನೆಟ್ನಲ್ಲಿ ಓದಿ ನೋಡಿ.

Video 1 Terracotta Warriors

 

Video 2 Guilin by night”

 

Video 3 Giant panda

Video 4 Jade Trap!

Video 5

 

 

 

16 thoughts on “ನಮ್ಮ ಚೀನದ ಪ್ರವಾಸ -ಭಾಗ 2 ಶ್ರೀವತ್ಸ ದೇಸಾಯಿ ಬರೆದ ಪ್ರವಾಸಕಥನದ ಎರಡನೆಯ ಭಾಗ

 1. ಚೀನಾ ದೇಶವನ್ನು ಅನಿವಾಸಿಯ ಅಂಗಳಕ್ಕೆ ಇಳಿಸಿದ ದೇಸಾಯಿಯವರಿಗೆ ಧನ್ಯವಾದಗಳು. ಚೀನಾ ದೇಶಕ್ಕೆ ಭೇಟಿ ಕೊಡುವುದು ಖಂಡಿತ. ಆದ್ದರಿಂದ ನಿಮ್ಮ ಪ್ರವಾಸ ಕಥನ ನಮ್ಮ ಪ್ರವಾಸಗಳಿಗೆ ಮಾರ್ಗದರ್ಶಕವಾಗಬಲ್ಲವು. ನಿಮ್ಮ ಬರವಲ್ಲದೆ ಇತರರ ಬರಹದಲ್ಲಿ ಇಂತಹ ಅಚ್ಚುಕಟ್ಟಾದ ವಿಡಿಯೋಗಳು ಸೇರುವುದು ಅಪರೂಪ.
  ಇವತ್ತಿನ ದಿನಗಳಲ್ಲಿ ಚೀನೀಯರನ್ನು ನೋಡಲು ಚೈನಾಕ್ಕೆ ಹೋಗುವುದಿರಲಿ, ಪ್ರಪಂಚದ ಎಲ್ಲಿಗೆ ಹೋದರೂ ಚೀನೀಯರೇ ಕಾಣುತ್ತಾರೆ ! ಯಾವ ಮೃಗಾಲಯಗಳಿಗೆ ಭೇಟಿ ನೀಡಿದರೂ ಪಾಂಡಾಗಳ ದರ್ಶನಕ್ಕೇ ಮಕ್ಕಳು, ಹಿರಿಯರು ಕಾಯುವುದು ಕಾಣುತ್ತದೆ( ಎಡಿನ್ಬರೋ, ಕ್ಯಾಲಿಫೋರ್ನಿಯಾ ಮತ್ತು ಇತ್ತೀಚೆಗೆ ವಿಯೆನ್ನಾದ ಪ್ರಾಣಿ ಸಂಗ್ರಹಾಲಯಗಳಲ್ಲಿ ಇವೇ ಸ್ಟಾರ್ ಅಟ್ರಾಕ್ಷನ್ ಆಗಿರೋದನ್ನು ನೋಡಿದ್ದೇನೆ ) ಹಿಂದಿನ ಕಾಲದಲ್ಲೂ ಚೀನಾದ ಪಿಂಗಾಣಿ, ರೇಶಿಮೆ, ಕಲೆ ಇವುಗಳು ಪ್ರಪಂಚವನ್ನು ಅಚ್ಚರಿಯಲ್ಲಿ ಹಿಡಿದಿಟ್ಟಿದ್ದನ್ನು ನೋಡಬಹುದು.
  ಇದೆಲ್ಲಕ್ಕಿಂತಲೂ ವಯಕ್ತಿಕವಾಗಿ ಚೀನಾದ ಬಗ್ಗೆ ನನಗೆ ಬಹಳ ಕುತೂಹಲವಿದೆ. ಪ್ರವಾಸಿಯಾಗಿ ನಿಗದಿನ ದಿನಗಳಲ್ಲಿ ಏನನ್ನು ನೋಡಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಆಸರೆ ನಿಮ್ಮ ಬರಹವನ್ನು ಓದಿ ಹಾರ್ದಿಕವಾಗಿ ಖುಷಿಪಟ್ಟೆ.

  Like

  • ಸುದೀರ್ಘ ಕಮೆಂಟಿಗೆ ಧನ್ಯವಾದಗಳು. ನೀವಂದಂತೆ ಈಗಿನ ಕಾಲದಲ್ಲಿ ಪ್ರವಾಸಕ್ಕೆ ಹೊರಟಾಗ ಎಲ್ಲೆಲ್ಲೂ ಕಾಣುವದು ‘ಸರ್ವಂ ಚೀನೀ ಮಯಂ!“ ಭಾರತಕ್ಕೂ ಎಷ್ಟೋಪಟ್ಟು ದೊಡ್ಡ,ದೇಶ ಚೀನ. ನೋಡುವಂಥದೇ. ನೋಡಿದವರೆಲ್ಲರ ಅನುಭವವೂ ವಿಭಿನ್ನವಾಗಿರುತ್ತದೆ. ನೋಡಿಯಾದಮೇಲೆ ನಿಮ್ಮ ಬರಹವನ್ನೂ ಎದುರುನೋಡುತ್ತೇನೆ.

   Like

 2. ತುಂಬಾ ಆಸ್ಥೆ ಯಿಂದ ದಾರಿ ಕಾಯುತ್ತಿದ್ದ ಎರಡನೇ ಭಾಗದಲ್ಲಿ ನೀಡಿದ ಮಾಹಿತಿ ಬಹಳ ಆಸಕ್ತಿಪೂರ್ಣ, ಮಾಹಿತಿ ಪೂರ್ಣ.ಶ್ರೀವತ್ಸ ದೇಸಾಯಿ ಯವರು ತಾವು ಆಳವಾಗಿ ಅಭ್ಯಸಿಸಿ ಬರೆವ ಬರಹಗಳ ಮೂಲಕ ಓದುಗರನ್ನೂ ಅತ್ತ ಸೆಳೆಯುತ್ತಾರೆ ಎಂದರೆ ತಪ್ಪಾಗಲಾರದು.ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ಚೀನಾ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳು ಅಚ್ಚರಿಯುಂಟು ಮಾಡುವುದು ಖಂಡಿತ.ಲೀ ನದಿಯ ಸೌಂದರ್ಯ ಸವಿಯುವ ಹಂಬಲ .ಟೆರ್ರಾಕೊಟ್ಟಾ ಯೋಧರು ಬಗ್ಗೆ ಕಂಡು ತಿಳಿಯುವ ಆಸೆ, ಪಗೋಡಾಗಳ ಅಂಚಿನಲ್ಲಿ ನಿಂತು ದೂರ ದೂರ ದಿಟ್ಟಿ ನೆಡುವ ಇಚ್ಛೆ . ಒಟ್ಟಿನಲ್ಲಿ ತಮ್ಮ ಸುಂದರ ಬರಹದ ಮೂಲಕ ಚೀನಾ ಪ್ರವಾಸ ಮಾಡಲೇಬೇಕು ಅನ್ನೋ ಭಾವ ಮೂಡಿಸಿದ್ದಾರೆ ಎಂಬನಿಸಿಕೆ.ಇಂಥ ಮಾಹಿತಿ ಪೂರ್ಣ ಲೇಖನ ನೀಡಿದ ಶ್ರೀ ವತ್ಸ ದೇಸಾಯಿ ಅವರಿಗೆ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Like

 3. Desai avare,
  This second episode of your China travels is even more interesting! Your own video clips are guiding for others planning similar trip. Good tips and insights into the ‘very Chinese’ tourism.
  Thanks, Vinathe Sharma

  Like

 4. ಟ್ರಿಪ್ ಟು ಮೆಮೊರಿ ಲೇನ್. ನಾನು
  ಮತ್ತು ನನ್ನ ಪತ್ನಿ ವನಜ ದೇಸಾಯಿಯವರು ಹೇಳಿದ ‘ ಸಾತ್ ಹಿಂದೂಸ್ತಾನಿ’ ಪಂಗಡದ ಇಬ್ಬರು ಪ್ರವಾಸಿಗಳು . ಅವರೊಂದಿಗೆ ಚೀನಾಗೆ ಹೋಗಲು ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ ಅಂತ ಹೇಳಬೇಕು.
  ಅವರ ಪ್ರವಾಸದ ಪ್ರಥಮ ಭಾಗ ಓದಿದನಂತರ ಸ್ಟಾರ್ಟರ್ ಇಷ್ಟು ಚಲೋ ಇದ್ರೆ ಮೇನ್ ಕೋರ್ಸ್ ಹೇಗಿರಬಹುದು? ಅಂತ ಕಾದಿದ್ದೆ. ದ್ವಿತೀಯ ಭಾಗ ಓದಿದಮೇಲೆ ನನ್ನ ಅನಿಸಿಕೆ ನಿಜವಾಯಿತು, ದೇಸಾಯಿಯವರು ದೇಸೇರ್ಟ್ಅನ್ನು ಒದಗಿಸಿದ್ದಾರೆ.
  ಈ ಲೇಖನದಿಂದ ನನ್ನ ಚೀನಾ ಬಗ್ಗೆ ತಿಳುವಳಿಕೆ ದ್ವಿಗುಣವಾಯಿತು ಅಂದ್ರೆ ಅತಿಶಯವಗಾಲರದು .
  ಚೀನಾ ಪ್ರವಾಸ ಮಾಡುವ ಉದ್ದೇಶ ಇರುವವರಿಗೆ ಈ ಲೇಖನ ನಿಜಕ್ಕೂ ಮಾರ್ಗದರ್ಶಕ.
  ಅವರು ಉಪಯೋಗಿಸಿರುವ ಫೋಟೋ ಮತ್ತುವಿಡಿಯೋಗಳು ಸಂದರ್ಭನುಸಾರವಾಗಿದೆ ಮತ್ತು
  ಮಾಹಿತಿಯುಳ್ಳದಾಗಿದೆ .
  ದೇಸಾಯಿಅವರ ಈ ಪ್ರವಾಸದ ಲೇಖನ ಸತ್ಯ ಸಂಗತಿ ಮತ್ತು ಚಿರಸ್ಮರಣೀಯ .

  Like

  • ಶ್ರೀರಾಮುಲು ಅವರಿಗೆ ಧನ್ಯವಾದಗಳು. ಊಟದ ಉಪಮೆ ಕೊಟ್ಟು ಲೈಕ್ ಮಾಡಿದ್ದು ನಿಮ್ಮ ಸೌಜನ್ಯ. ಆದರೆ ನಾನು ನಳನಲ್ಲ. ನಾವೆಲ್ಲರೂ ಯಾವಾಗಲೂ ತಿಳುವಳಿಕೆ ಹೆಚ್ಚಿಸಲು ಯಾವಾಗಲೂ ಕಾತುರರಾಗಿರಬೇಕಲ್ಲವೆ, ಆಟ-ಪಾಠ-ಓಡಾಟ ಯಾವುದೇ ಇರಲಿ! ನನಗೂ ’ಸಾತ್’ ಸಜ್ಜನರ ಸಾಥ್ ಮರೆಯುವಂತಿಲ್ಲ!

   Like

 5. You have tempted me.May be after the centenary of k e board , next year we may plan. What about jades. Did you buy any. They are tempting.

  Arun Nadgir

  Like

 6. ದೇಸಾಯಿ ಅವರೇ ಕಳೆದ ವಾರ ಮತ್ತು ಈ ವಾರ ಪ್ರಕಟವಾಗಿರುವ ನಿಮ್ಮ ಚೀನಾ ಪ್ರವಾಸದ ಲೇಖನಗಳನ್ನು ಓದಿದ ಮೇಲೆ ನಾನೇ ಚೀನಾ ನೋಡಿ ಬಂದಂತೆ ಭಾಸವಾಯಿತು. ಕಳೆದ ೩ ದಶಕಗಳಲ್ಲಿ ಪ್ರವಾಸೋದ್ಯಮವನ್ನು ಅತ್ಯುತ್ತಮವಾಗಿ ಬಳಸಿಕೊಂಡಿರುವ ಚೀನಿಯರ ಜಾಣ್ಮೆಯನ್ನು ಮೆಚ್ಚಲೇ ಬೇಕು. ಕಮ್ಯುನಿಸ್ಟ್ ಆಳ್ವಿಕೆಯಲ್ಲಿ ಪ್ರಪಂಚದಿಂದ ದೂರವಿದ್ದೂ , ಎಲ್ಲರನ್ನು ತಮ್ಮ ವ್ಯಾಪಾರದ ಬಲೆಯಲ್ಲಿ ಸಿಕ್ಕಿಸಿ ಆಟವಾಡಿಸುತ್ತಿರುವ ಇವರ ವ್ಯವಹಾರ ಜ್ಞಾನವನ್ನು ಕಂಡು ತಲೆತೂಗುವಂತಾಗಿದೆ. ಚೀನಿಯರ ಇತಿಹಾಸದ ಬಗ್ಗೆ ತಕ್ಕ ಮಟ್ಟಿಗೆ ತಿಳಿದಿದ್ದರೂ, ಆ ದೇಶವನ್ನು ನೋಡಿ ಬಂದಾಗ ಸಿಗುವಷ್ಟು ತೃಪ್ತಿ ಸಿಕ್ಕದು. ಅವರ ಕರಕುಶಲಕಲೆಗಳು ಬಹಳ ಸೊಗಸಾಗಿರುತ್ತವೆ ಎಂದು ನನ್ನ ಮಗಳು ಅವಳು ಚೀನಾ ಪ್ರವಾಸಕ್ಕೆ ಹೋದಾಗ ತಿಳಿಸಿದ್ದಳು. ಟೆರ್ರಾಕೋಟಾ ಸೈನಿಕರ ಬಗ್ಗೆಯೂ ಇದೆ ಮಾತನ್ನಾಡಿದ್ದಳು. ಒನಕೆ ಕುಟ್ಟುವುದನ್ನು ನಮ್ಮ ಮನೆಗಳಲ್ಲಿ ಕಂಡಿದ್ದರೂ, ಆ ಸಮಯದಲ್ಲಿ ಯೂಟ್ಯೂಬ್ ಇರಲಿಲ್ಲ. ವಿಡಿಯೋ ಮಾಡಿ ನೋಡುವ ಸೌಲಭ್ಯವಿದ್ದಿದ್ದರೆ, ನಮ್ಮ ಅಜ್ಜಿ-ತಾಯಿಯರು ಒನಕೆ ಕುಟ್ಟಿ ಸಾರಿನ ಪುಡಿ ಮಾಡುತ್ತಿದ್ದನ್ನು ಸಂಗ್ರಹಿಸಬಹುದಾಗಿತ್ತು! ಏನೇ ಆಗಲಿ, ಇಂದು ಚೀನಿಯರು ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪರಿಶ್ರಮಿಗಳು. ಜಾಸ್ತಿ ಮಾತನಾಡದೆ ಕೆಲಸ ಮಾಡುತ್ತಾರೆ. ವಾಕ್ ಸ್ವಾತಂತ್ರ್ಯ, ಮಾನವ ಹಕ್ಕುಗಳು ಆ ದೇಶದಲ್ಲಿ ಕಾಣಸಿಗದ ಅಂಶಗಳು. ಟೈನಾ ಮ್ಯಾನ್ ಚೌಕದಲ್ಲಿ ವಿದ್ಯಾರ್ಥಿಗಳನ್ನು ಸದೆಬಡಿದ ಪ್ರಸಂಗ ನಿಜಕ್ಕೂ ತಲೆತಗ್ಗಿಸುವಂತಹದೇ! ಎಲ್ಲರು ನೋಡಿಕೊಂಡೆ ಸುಮ್ಮನಿರಬೇಕಾಯಿತು! ಒಟ್ಟಿನಲ್ಲಿ ನಿಮ್ಮ ಲೇಖನದ ಎರಡು ಭಾಗಗಳು ನಮ್ಮನ್ನೂ ಚೀನಾ ದೇಶಕ್ಕೆ ಕರೆದೊಯ್ದಂತಾಯ್ತು. ಧನ್ಯವಾದಗಳು.
  ಉಮಾ ವೆಂಕಟೇಶ್

  Like

 7. Thank you., ‘ಅನಾಮಿಕಾ’ ಅವರೇ, ನಿಮ್ಮ ಕಮೆಂಟಿಗೆ. ಹೆಸರು ಬರೆದು ತೆರೆಯಮರೆಯಿಂದ ಹೊರಬರಬಹುದಲ್ಲವೆ? ನಿಮ್ಮ ಆಸ್ಥೆಗೆ ಋಣಿ.

  Like

 8. I will save and use this as a reference for my future visit to China (when it happens)…and follow ‘desayiyavara daari’!

  Murali

  Like

  • Thank you, Murali. You will see even more progress, perhaps when you go there! . Hope you enjoy your trip. ‘My way’ is not the only way, as even Frank Sinatra. would’ve admitted!

   Like

 9. .ಸುಮಾರು ೧೦ ವರ್ಷದ ಹಿಂದೆ ನಾವು ನಾಲಕ್ಕು ಕುಟುಂಬಗಳು ಈ ಪ್ರವಾಸ ಮಾಡಿದ್ದು ಜ್ಞಾಪಕ್ಕೆ ಬರುತ್ತೆ. ಸಸ್ಯಾಹಾರದ ಊಟ ಸಿಗುವುದು ಸ್ವಲ್ಪ ಕಷ್ಟವಾಯಿತು. ಎಲ್ಲಿ ಹೋದರು ಅನ್ನ ಮತ್ತು ಬದನೇಕಾಯಿ ಪಲ್ಯ!
  ಆದುನಿಕ shanghai , ಬೀಜಿಂಗ್ ಮತ್ತು Shaanxi ನೋಡುವುದು ಒಂದು ದೊಡ್ಡ ಅನುಭವ. Terracotta Army Mesuem ಪಕ್ಕದಲ್ಲಿ Terracotta Army Counterfeit ಫ್ಯಾಕ್ಟರಿ ಅನ್ನುವ ಸೈನ್ ಪೋಸ್ಟ್ ನೋಡಿ ನಗು ಬಂತು,
  Shaghai ಸಿಟಿ ಏರ್ಪೋರ್ಟ್ ನಿಂದ ೨೦ ಮೈಲಿ ದೂರದಲ್ಲಿದೆ. ಆದರೆ ಪ್ರಯಾಣ ಕೇವಲ ೮ ನಿಮಿಷ ಮಾತ್ರ Mag Lev ರೈಲ್. ಘಂಟೆ ಗೆ ೪೩೦ ಕಿಲೋ ಮೀಟರ್ ವೇಗದಲ್ಲಿ
  ದೇಸಾಯಿ ನವರೇ ನಿಮ್ಮ ವಿವರಣೆ ಚೆನ್ನಾಗಿದೆ

  Like

  • ರಾಮಮೂರ್ತಿಯವರೆ, ಲೇಖನ ಹಿಡಿಸಿದ್ದಕ್ಕೆ ಮತ್ತಿ ನಿಮ್ಮ ಹಳೆಯ ನೆನಪುಗಳನ್ನು ಕೆದಕಿದ್ದು ಸಂತೋಷ. ನೀವು ಹೇಳಿದಂತೆ Counterfeit ವಸ್ತುಗಳು ವಿಪುಲವಾಗಿ ಸಿಗುವ fake market ನಲ್ಲಿ ಎಂಥ ”ಒಳ್ಳೊಳ್ಳೆಯ’’ ನಕಲಿ ಮಾಲುಗಳು ಸಿಗುತ್ತವೆ. ವ್ಯತ್ಯಾಸ ಕಂಡುಹಿಡಿಯುವದು ಸುಲಭ ಸಾಧ್ಯವಲ್ಲ. ನಮ್ಮ ಗುಂಪಿನಲ್ಲೊಬ್ಬರು ಅಲ್ಲಿಂದ ತೆಗೆದುಕೊಂಡು ಬಂದ ಒಂದು ’ಗುಚ್ಚಿ’ ಲೇಡೀಸ್ ಹ್ಯಾಂಡ್ ಬ್ಯಾಗಿನ ಗುಟ್ಟು ಇನ್ನೂ ರಟ್ಟಾಗದೆ ನಗುತ್ತ ಆ ನಕಲಿಯನ್ನೇ ನಗುತ್ತ ಠೀವಿಯಿಂದ ಇನ್ನೂ ’ಮೆರೆಯುತ್ತಿದ್ದಾರೆ. Limited budget ಇಟ್ಟುಕೊಂಡವರಿಗೆ ಆ ಮಾರ್ಕೆಟ್ ಗಳು ಹೇಳಿ ಮಾಡಿಸಿದಂತೆ ಇವೆ. ಇಷ್ಟೇ ಚೌಕಾಶಿ ಪ್ರವೀಣರಿದ್ದ್ರೇನೆ. ಲಾಭ, ಅದು ಅನುಭವದ ಮಾತು.

   Like

 10. China visit is a must now! Dr Desai’s beautiul and detailed documentation is tempting us to book our tickets for a China tour. The lovingly filmed and edited videos are very informative, Thank you !

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.