ಎರಡು ಲಘು ಕವಿತೆಗಳು; ವಿ(ಚಾರ)ವಾದಿಗಳ ಮಂತ್ಲಿ ಮೀಟಿಂಗ್ ! ಮತ್ತು ದೊ೦ಬರಾಟವಯ್ಯಾ

ಇಂಗ್ಲೆಂಡಿನ ಬೇಸಿಗೆ ವಿರಾಮದಲ್ಲಿ ನಿಮ್ಮ ಮನಸ್ಸುಗಳನ್ನು ಹಗುರಗೊಳಿಸಲು ಎರಡು ಲಘು ಕವನಗಳನ್ನು ಪ್ರಕಟಪಡಿಸಲಾಗಿದೆ. ಮೊದಲನೆ ಕವಿತೆ ಡಾ. ಪ್ರೇಮಲತಾ ಅವರಿಂದ. ೭೦ ರ ದಶಕದಲ್ಲಿ ನವೋದಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ರಾಂತಿ ಎಲ್ಲರಲ್ಲಿ ಹೊಸ ಲವಲವಿಕೆ ಮತ್ತು ಸ್ಪೂರ್ತಿಯನ್ನು ಮೂಡಿಸಿದ ಕಾಲವಾಗಿತ್ತು. ಕನ್ನಡ ಸಾಹಿತ್ಯ ಅನೇಕ ಪ್ರತಿಭೆಗಳನ್ನು ಕಾಣ ತೊಡಗಿತು. ಬರಹಗಾರರು ಮತ್ತು ಉದಯೋನ್ಮುಖ ಕವಿಗಳು ತಮ್ಮ ಪಾಶ್ಚಿಮಾತ್ಯ ಉಡುಪಗಳ ಜೊತೆ ದೇಶೀ ಉಡುಪು ಗಳನ್ನೂ ಹೊಂದಿಸಿ, ಗಡ್ಡ ಬಿಟ್ಟುಕೊಂಡು ಬಗಲಿಗೆ ಒಂದು ಚೀಲವನ್ನೇರಿಸಿ , ವಿಶ್ವವಿದ್ಯಾಲಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ವಿಜೃಂಭಿಸುತ್ತಿದ್ದ ಕಾಲ. ಈ ವೇಷಧಾರಿಗಳು ಸಾಮಾನ್ಯ ವಾಗಿ ಸಾಹಿತ್ಯ ವಿದ್ಯಾರ್ಥಿಗಳಾಗಿ ಅಥವಾ ಇನ್ನಿತರ ಕ್ಷೇತ್ರದಲ್ಲಿದ್ದು ಸಾಹಿತ್ಯಾಸಕ್ತರಾಗಿರುತ್ತಿದ್ದರು. ಈ ರೀತಿ ಪೋಷಾಕು ಧರಿಸಿ ಸಾಹಿತ್ಯ ರಾಜಕೀಯ ಮತ್ತು ಪತ್ರಿಕೋದ್ಯಮ ವಿಚಾರಗಳ ಬಗ್ಗೆ ಹರಟುತ್ತಿದ್ದ ವ್ಯಕ್ತಿಗಳನ್ನು ಬುದ್ಧಿಜೀವಿ ಅಥವಾ ವಿಚಾರ ವಾದಿಗಳೆಂದು ಗುರುತಿಸಬಹುದಾಗಿತ್ತು. ಈ ಒಂದು ವ್ಯಕ್ತಿಚಿತ್ರ ನಮ್ಮಕಲ್ಪನೆಗಳಲ್ಲಿ ಚಿರವಾಗಿದೆ. ತಮ್ಮ ಪ್ರಗತಿಪರ ವೈಚಾರಿಕ ಚಿಂತನೆಗಳನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸುವ ಪ್ರವೃತಿ ಈ ವಿಚಾರವಾದಿಗಳಲ್ಲಿಸಾಮಾನ್ಯ ವಾಗಿ ಕಾಣಬಹುದು. ಇಂತಹ ನಾಲ್ಕಾರು ವಿಚಾರ ವಾದಿಗಳು ಸೇರಿದಾಗ ಆ ಮೀಟಿಂಗ್ ಹೇಗಿರಬಹುದು ಎಂಬುದರ ಬಗ್ಗೆ ಪ್ರೇಮಲತಾ ಅವರು ತಮ್ಮ ಕವನದಲ್ಲಿ ತಿಳಿಸಿದ್ದಾರೆ.

ದೊಂಬರಾಟವಯ್ಯ ಎಂಬ ಇನ್ನೊಂದು ಕವಿತೆಯಲ್ಲಿ ಸುಶೀಲೇಂದ್ರ ರಾವ್ ಅವರು ರಾಜಕಾರಣಿಗಳು ಮತಗಳನ್ನುಗಳಿಸಲು ಮಾಡುವ ತಂತ್ರ, ಮೋಡಿ ಮತ್ತು ಮಾತಿನಜಾಲವನ್ನು ವಿಡಂಬನೆಗೆ ಒಳಪಡಿಸಿ, ಡೊಂಬರಾಟಕ್ಕೆ ಹೋಲಿಸಿ ಬರೆದಿರುವ ಅಣಕ .

“ಬೋಂಬೆಯಾಟವಯ್ಯಾ ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯ
ಅಂಬುಜನಾಥನ ಅಂತ್ಯವಿಲ್ಲದಾತನ ತುಂಬು ಮಾಯೆಯಯ್ಯ” !!

ಎಂಬ ಚಿರಪರಿಚಿತವಾದ ಡಾ. ರಾಜ್ ಕುಮಾರ್ ನಟಿಸಿರುವ ಶ್ರೀ ಕೃಷ್ಣಗಾರುಡಿಯಲ್ಲಿನ ಸಿನಿಮಾ ಹಾಡನ್ನು ಕೌಶಲ್ಯದಿಂದ ಬಳೆಸಿಕೊಂಡಿರುವುದನ್ನು ಗಮನಿಸಬಹುದು.

ಈ ಕವನಗಳಲ್ಲಿ ವಿಚಾರವಾದಿಗಳನ್ನು ಅಥವಾ ರಾಜಕಾರಣಿಗಳನ್ನು ಅವಹೇಳನ ಮಾಡುವ ಉದ್ದೇಶವಿಲ್ಲ , ದಯವಿಟ್ಟು ಇದನ್ನು ಕೇವಲ ಲಘು ವಿಡಂಬನಾತ್ಮಕ ಬರಹವೆಂದು ಪರಿಗಣಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಹಾಸ್ಯ ಪ್ರಜ್ಞೆಗೆ ಕಚಗುಳಿ ಇಡುವ ಪ್ರಯತ್ನವಷ್ಟೇ. ರಚನೆಯ ಹಿನ್ನೆಲೆ ಕೇವಲ ಕಾಲ್ಪನಿಕ.

ಶಿವಪ್ರಸಾದ್ (ಸಂ )

 

ವಿ(ಚಾರ)ವಾದಿಗಳ ಮಂತ್ಲಿ ಮೀಟಿಂಗ್ !

ಡಾ. ಪ್ರೇಮಲತ ಬಿ.

 

Cartoon by Dr G S Prasad

 

ವಿ (ಚಾರ)ವಾದಿಗಳ ಮಂತ್ಲಿ ಮೀಟಿಂಗ್ !
ಎಡದವನು, ಬಲದವನು, ಮಧ್ಯದವನು
ಸತ್ತ ಕಣ್ಣವನು, ದಪ್ಪ ತಲೆಯವನು
ಹೋತದ ಗಡ್ಡ ಹೊತ್ತವನು,
ಜೊತೆಗೆ ಡೊಳ್ಳು ಹೊಟ್ಟೆಯ ನಾನು.. !

ತಪ್ಪದೆ ಕಲೆಯುತ್ತೇವೆ ತಿಂಗಳ
ಕೊನೆ ಶನಿವಾರದ ಮಧು ರಾತ್ರಿ

ಬುದ್ಧಿ ಜೀವಿಗಳು, ಬರಹಗಾರರು
ಕೂಡಿ ಮಾಡಿಕೊಂಡ ವಿಚಾರವಾದಿಗಳ
ಸಂಘದಲಿ ಮೊದಲು ಕಾಫಿ, ಟೀ, ಬಿಸ್ಕತ್ತು
ನಂತರ ಎಣ್ಣೆ, ಖಾರ, ಬುರುಗಿನ ಶರಬತ್ತು !

ಉಭಯಕುಶಲೋಪರಿ ಒಬ್ಬರಿಗೊಬ್ಬರು
ನಂತರ ತೆಗೆಯುತ್ತೇವೆ ಸರಕುಗಳನು
ಜುಬ್ಬಾದ ಜೇಬಿಂದ, ಬಗಲಿನ ಬ್ಯಾಗಿಂದ
ಮಡಚಿಟ್ಟ ಹಾಳೆಗಳ ಬಿಚ್ಚಿ ಹರಡಿ
ಸಿಗರೇಟು ಹಚ್ಚುತ್ತಾನೆ ಕವಿತೆಯೆಂದರೆ
ಅವನೋ… ಬಲು ಮೂಡಿ !

ದಪ್ಪಗಾಜಿನ ತೇಲುಗಣ್ಣುಗಳನು
ಹಾಳೆಗಳಲಿ ನೆಟ್ಟು
ಬಳೆ ಬಿಟ್ಟ ಹಲ್ಲುಗಳು ,ಹಾರುವ
ಪುಕ್ಕದಂತ ಕೂದಲು, ಓದುವನು
ಅರ್ಥ ವ್ಯಾಕರಣ ಎಲ್ಲ ಎಡವಟ್ಟು..!

ನಂತರದ ಸರದಿ ದನಿಯಿಲ್ಲದವನದ್ದು
ಅವನು ಓದುತ್ತಾನೆ, ನಾವು ನಟಿಸುತ್ತೇವೆ
ಭಲೇ ಕೇಳಿದಂತೆ ತಲೆದೂಗಿ
ತಟ್ಟನೆ ಕಾವೇರುತ್ತದೆ,ದನಿಗಳು ಮೊಳಗುತ್ತವೆ
ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್
ಕಳ್ಳ ರಾಜಕಾರಣಿಗಳು,ಪುಂಡು ಪೋಕರಿಗಳು
ಧರ್ಮ ಮತ ರಾಜಕೀಯಗಳು..

ಸಮಯ ಸರಿದಂತೆ, ಅಮಲು ಹರಿದಂತೆ
ಸಿನಿಮಾ, ಸಂಗೀತ ಮತ್ತು ಸಾಹಿತ್ಯ
ಜೊತೆಗೊಂದಿಷ್ಟು ಇಸ್ಪೀಟು ಎಲೆಯ ಆಟ
ಊಟದ ಸಮಯವಾದಂತೆ ಹೊರಡಲನುವಾಗುತ್ತೇವೆ
ಮರು ಭೇಟಿಯ ಮರುಕಳಿಗೆಗಳಿಗೆ
ಯಾರದೆಂದು ಸರದಿ ಗುರುತಿಸಿಕೊಂಡು
ಅಂದುಕೊಂಡು ದೇಶ ಉದ್ದರಿಸಿದೆವೆಂದು…
ಇದೋ ನನ್ನ ಕವನ ತಯಾರು… !

***

ದೊ೦ಬರಾಟವಯ್ಯಾ

ಸುಶೀಲೇಂದ್ರ ರಾವ್

 

 

ನಮ್ಮ ರಾಜಕೀಯ ಪಟುಗಳು ಆಡುವ ಆಟಗಳೆಲ್ಲಾ
ದೊ೦ಬರಾಟವಯ್ಯಾ

ಸುಳ್ಳು ಜೊಳ್ಳು ಪೊಳ್ಳು ಕತೆಗಳ ಕಟ್ಟಿ
ಇಲ್ಲ ಸಲ್ಲದ ವಿಷಯಗಳ ಮಾತನಾಡಿ
ಮೋಸದಿ೦ ಬಹು ಜನರ ಮನ ಒಲಿಸಿ
ಬಹುಮತ ಪಡೆಯಲು ಆಡುವ ಆಟಗಳೆಲ್ಲಾ
ದೊ೦ಬರಾಟವಯ್ಯಾ……………

ಜಾತಿ ಮತ ಭೇದ ಭಾವನೆಗಳ ಉದ್ರೇಕಿಸಿ
ಕೋತಿಗಳ೦ತೆ ಜನರ ಅತ್ತಲಿ೦ದಿತ್ತ ಎಗರಾಡಿಸಿ
ಷ್ಕುಲ್ಲಕ ವಿಷಯಗಳ ಉಲ್ಬಣಗೊಳಿಸಿ
ಪ್ರೇಷ್ಕಣೀಯ ಘನ ಆಟಗಳ ಆಡಿ ಮೆಚ್ಚಿಗೆ ಪಡೆವ
ದೊ೦ಬರಾಟವಯ್ಯಾ………….

ಅಣಕು ಬಣಕು ಕೆಣಕು ಮಾತುಗಳಿ೦ ಬಣ್ಣಿಸಿ
ಆಣೆ ಪ್ರಮಾಣಗಳಿ೦ದ ನ೦ಬಿಕೆ ಉಲ್ಲೇಕಿಸಿ
ಆಕಾಶಕೆ ಏಣಿ ಹಾಕುವ ಯೋಜನೆಗಳ ಆಸೆ
ತೋರಿಸಿ ಚುನಾವಣೆಯಲಿ ಜಯಗಳಿಸುವ ಆಟಗಳೆಲ್ಲಾ
ದೊ೦ಬರಾಟವಯ್ಯಾ………..

ಜಾತಿ ಕಕಲಾತಿ ನೀತಿ ಮೀಸಲಾತಿಗಳ ಕೆದಕಿ
ಅನಾಹುತಿ ಭೀತಿಗಳ ಉದ್ರೇಕ ಕೆರಳಿಸಿ
ಹೊಸ ಹೊಸ ನೀತಿ ನಿಯಮಗಳ ಭೋದಿಸಿ
ಮಾನವತಿ ಸ೦ಪನ್ನತಿಗಳ ಉಲ್ಲ೦ಗಿಸಿ ಆಡುವ ಆಟಗಳೆಲ್ಲಾ
ದೊ೦ಬರಾಟವಯ್ಯಾ …………

ನ೦ಬದಿರಿ ಈ ದೊ೦ಬರನು ಎ೦ದೆದೂ
ಮತ್ತು ಅವರಾಡುವ ಕಪಟ ಆಟಗಳನು
“ದೊ೦ಬರವ ಬಿದ್ದರೆ ಅದೂ ಒ೦ದು ಲಾಗ”
ಎ೦ಬುದು ನಮ್ಮ ಕನ್ನಡ ಗಾದೆಯು
ಅನುಭವದಮಾತುಗಳಯ್ಯಾ…………

***

5 thoughts on “ಎರಡು ಲಘು ಕವಿತೆಗಳು; ವಿ(ಚಾರ)ವಾದಿಗಳ ಮಂತ್ಲಿ ಮೀಟಿಂಗ್ ! ಮತ್ತು ದೊ೦ಬರಾಟವಯ್ಯಾ

 1. ಮಂತ್ಲಿ ಮೀಟಿಂಗ್ ನ ಬುದ್ಧಿ ಜೀವಿಗಳ ವೇಷಭೂಷಣ, ಇರಿಸರಿಕೆ, ಅವರ ರೂಪ ಆಕಾರಗಳ ಯಥಾವತ್ ವರ್ಣನೆ ಕಣ್ಣಿಗೆ ಕಟ್ಟುವಂತೆ.ಅಂತೆಯೇ ಟೀ , ಕಾಫಿಯೊಂದಿಗೆ ರಂಗೇರಿದ ಚರ್ಚೆ ಬಹುಶಃ ಬುರುಗಿನ ಶರಬತ್ ನೊಂದಿಗೆ ಕಾವೇರಿ ಬಗಲಚೀಲದಲ್ಲಿ ಮಡಚಿಟ್ಟು ಹಾಳೆಯೊಂದಿಗೆ ಘನ ಕಾರ್ಯ ನಿರ್ವಹಣೆ ವೈಖರಿನೂ ತೃಪ್ತಿ ತಂದಂತೆ ಭಾವಿಸುವ ಆ ಬುದ್ಧಿ ಜೀವಿಗಳ ಬಳಗ ದಿನವೂ ನಮ್ಮ ಆಸುಪಾಸಿನಲ್ಲಿ
  ಕಾಣ್ತಿವೇನೋ ಎಂಬ ಅನಿಸಿಕೆ.ತಮ್ಮ ವಿಶಿಷ್ಟ ಶೈಲಿಯಲ್ಲಿ ಬರೆದ ಸುಂದರ ಕವನ ಪ್ರೇಮ ಲತಾ ಅವರದು.
  ಸುಶೀಲೇಂದ್ರರಾವ ಅವರು ಬರೆದ ರಾಜಕೀಯ ದೊಂಬರಾಟ ದಿನ ನಿತ್ಯದ ನೋಟ.ಒಂದು ಹಂತದಲ್ಲಿ ಬೇಜಾರು ಮೂಡಿಸಿ ಅಸಹ್ಯ ಭಾವ ಹುಟ್ಟಿಸುವ ದೊಂಬರಾಟದ ನೈಜ ಚಿತ್ರಣದ ಕವನ.
  ಅರಿಯದ ಮುದ ನೀಡುವ, ತೆಳು ನಗು ತುಟಿ ಮೇಲೆ ತೇಲಿಸುವ ಕವನ ನೀಡಿದ ಪ್ರೇಮ ಲತಾ ಹಾಗೂ ಸುಶೀಲೇಂದ್ರರಾವ ಅವರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 1 person

 2. ಸುದರ್ಶನ್ ಅವರ ಅನಿಸಿಕೆಗಳನ್ನು ಇದೀಗ ಗಮನಿಸಿದ್ದೇನೆ
  ನವೋದಯ ಸಾಹಿತ್ಯ ೧೯೦೦ ರ ಮೊದಲ ದಶಕದಲ್ಲಿ ಪ್ರಾರಂಭವಾದ ಕಾವ್ಯ ಪರಂಪರೆ ಎಂಬ ವಿಚಾರಕ್ಕೆ ನನ್ನ ಒಪ್ಪಿಗೆ ಇದೆ. ೭೦ ರ ದಶಕದಲ್ಲಿ ನವೋದಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ರಾಂತಿ ಎಲ್ಲರಲ್ಲಿ ಹೊಸ ಲವಲವಿಕೆ ಮತ್ತು ಸ್ಪೂರ್ತಿಯನ್ನು ಮೂಡಿಸಿತ್ತು ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಹೀಗೆ ಹೇಳಿದಾಗ ನವೋದಯ ೭೦ ರ ದಶಕದಲ್ಲಿ ಶುರುವಾಯಿತು ಎಂದು ಅರ್ಥೈಸುವುದು ಉಚಿತವಲ್ಲ.
  ಒಂದು ಕಾಲ ಘಟ್ಟದಲ್ಲಿ ನಾನು ಕಂಡ ಉದಯೋನ್ಮುಖ ಯುವ ಕವಿ ಮತ್ತು ಬರಹಗಾರರ ಒಂದು ಚಿತ್ರಣವನ್ನು ನಾನು ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. ಇದು ಒಂದು Generic description ಅನ್ನುವುದು ನನ್ನ ಅಭಿಪ್ರಾಯ.
  ನಾನು ಹಿರಿಯ ಮತ್ತು ಕಿರಿಯ ಕವಿಗಳನ್ನು ಹೋಲಿಸುವ ಪ್ರಯತ್ನ ಇಲ್ಲಿ ಮಾಡುತ್ತಿಲ್ಲ ಎಂಬುದನ್ನು ಓದುಗರು ಗಮನಿಸಿರಬಹುದು. ಅಂದ ಹಾಗೆ ಪುತಿನ, ಅಡಿಗ, ಕಣವಿ, ಕೆ ಎಸ ಏನ್ ಇವರುಗಳನ್ನು ಹತ್ತಿರದಿಂದ ಕಂಡ ನಾನು ಅವರನ್ನು ಬುದ್ಧಿ ಜೀವಿ ಉಡುಗೆಯಲ್ಲಿ / ಕವಚದಲ್ಲಿ ಕಂಡಿಲ್ಲ!!
  ***
  ಅನಿವಾಸಿ ಜಾಲ ಜಗುಲಿಯಲ್ಲಿ ಸಕಾರಾತ್ಮಕವಾದ ಅನಿಸಿಕೆ ಅಭಿಪ್ರಾಯಗಳನ್ನು ಕೊಟ್ಟು ಅನಿವಾಸಿ ನೆಲದಲ್ಲಿ ಕನ್ನಡವನ್ನು ಬರೆಯುವವರಿಗೆ ಸದಾ ಉತ್ತೇಜಿಸುವ ದೇಸಾಯಿ ಅವರ ಪ್ರತಿಕ್ರಿಯೆಗೆ ಧನ್ಯವಾದಗಳು.
  ನನ್ನ ಕಾರ್ಟೊನ್ ಬರೆಯುವ ಸಾಮರ್ಥ್ಯವನ್ನು ಮೆಚ್ಚಿಕೊಂಡ ಪ್ರೇಮಲತಾ ಅವರಿಗೂ ಧನ್ಯವಾದಗಳು

  Liked by 1 person

 3. ಸುಮಾರಾದ ವಾಚ್ಯ ಕವನಕ್ಕೆ ಅಚ್ಚುಕಟ್ಟಾದ ಚಿತ್ರ ಬರೆದು ಪ್ರಕಟಿಸಿದ ಡಾ. ಪ್ರಸಾದರಿಗೆ ಧನ್ಯವಾದಗಳು. ಚಿತ್ರ ಬರೆಯುವ ಹವ್ಯಾಸ ಸಂಪಾದಕರಿಗಿರುವುದು ಈ ವಾರವಷ್ಟೇ ತಿಳಿಯಿತು. ಡಾ. ಪ್ರಸಾದ್ ರವರು ಸಮಯ ಸಿಕ್ಕಾಗಲೆಲ್ಲ ತಮ್ಮ ಚಿತ್ರಗಳನ್ನು ಅನಿವಾಸಿಗಾಗಿ ಬರೆಯುವಂತಾಗಲಿ !
  ಗೂಡೂರರ ಜೊತೆ ಮತ್ತೊಬ್ಬರು ಸಿಕ್ಕ ಸಂತಸ ನಮಗೆಲ್ಲ.

  Liked by 1 person

 4. ಮಾನ್ಯರೇ,
  ಮೇಲೆ ಪ್ರಕಟವಾಗಿರುವ ಕವನಗಳ ಪರಿಚಯ ಪೀಠಿಕೆಯಲ್ಲಿ ಸಂಪಾದಕರು ನವೋದಯ ಕವಿಗಳ ಲಕ್ಷಣಗಳನ್ನು ವಿವರಿಸುತ್ತಾ ಗಡ್ಡ, ಜೋಳಿಗೆಯಂಥ ಚೀಲ, ಇತ್ಯಾದಿಗಳಿಂದ ಶೋಭಿತರಾಗಿದ್ದರು ಎಂದು ಹೇಳಿರುವುದನ್ನು ಓದಬಹುದು. ಇದು ೭೦ ರ ದಶಕದ ಮಾತು ಎಂಬುದನ್ನೂ ಹೇಳಿದ್ದಾರೆ..
  ನನಗೆ ತಿಳಿದಂತೆ ನವೋದಯ ಸಾಹಿತ್ಯ ೧೯೦೦ ರ ಮೊದಲ ದಶಕದಲ್ಲಿ ಪ್ರಾರಂಭವಾದ ಕಾವ್ಯ ಪರಂಪರೆ. ಪಾಶ್ಚಾತ್ಯ ಸಾಹಿತ್ಯದ ಸೆಲೆಗಳನ್ನು ಭಾರತೀಯಗೊಳಿಸುತ್ತಲೇ, ಭಾಷೆಯನ್ನೂ ಭಾವಗಳ ಜತೆಗೆ ಬೆಸೆದ ಅಪರೂಪದ ಬೆಳವಣಿಗೆ ಇದಾಗಿತ್ತು. ಬಿ.ಎಂ.ಶ್ರೀಕಂಠಯ್ಯ ಇದರ ಆದ್ಯ ಪ್ರವರ್ತಕರೆನಿಸಿಕೊಂಡರೂ ಅವರಾಗಲೀ ಅವರ ನಂತರ ಬಂದ ಪು.ತಿ .ನ,.ಕುವೆಂಪು. ಬೇಂದ್ರೆ, ಕಣವಿ, ಸು.ರಮ್.ಎಕ್ಕುಂಡಿ ,ಬೆಟಗೇರಿ ಕೃಷ್ಣ ಶರ್ಮ, ರಾಜರತ್ನಂ ಇವರೆಲ್ಲರೂ ಈ ಪರಂಪರೆಯಲ್ಲಿಯೇ ಬಂದವರು. ಇವರಿಗಿಂತ ಕೆಲವು ದಶಕಗಳ ನಂತರ ಹಾಗೂ ಈ ಪರಂಪರೆಯ ಬಹುಶಃ ಕೊನೆಯ ಮಹತ್ವದ ಕವಿ ಎನ್ನಬಹುದಾದ ಶ್ರೀ ಜಿ.ಎಸ. ಶಿವರುದ್ರಪ್ಪನವರ ವರೆಗೂ ತನ್ನ ಕಂಪನ್ನು ಹರಡಿದ್ದು ನವೋದಯ ಕಾವ್ಯ ಸಾಹಿತ್ಯ ಪರಂಪರೆ. ಇವರುಗಳೆಲ್ಲಾ ತಮ್ಮನ್ನು ತಾವು ನವೋದಯರಂತ ಕರೆದುಕೊಳ್ಳಲಿಲ್ಲ;, ಕನ್ನಡವನ್ನು ಕಾಪಾಡುವ ಯೋಧರಂತಾಗಲೀ ಬಿಂಬಿಸಿಕೊಳ್ಳಲಿಲ್ಲ , ಕೊಚ್ಚಿಕೊಳ್ಳಲಿಲ್ಲ, ಅದರ ನೆಪ ಹಿಡಿದು ಪ್ರಶಸ್ತಿ ಇತ್ಯಾದಿಗಳನ್ನು ಗಿಟ್ಟಸಿಕೊಳ್ಳಲೂ ಇಲ್ಲ. ತಣ್ಣಗೆ ,ಆದರೆ ಕಾಯಾ ವಾಚಾ ಮಾನಸಾ ಭಾಷೆಯ ಉಳಿವಿಗಾಗಿ ಮಿಡಿದರು, ದುಡಿದರು. ಭಾವಗೀತೆಗಳನ್ನು ಕನ್ನಡಕ್ಕೆ ಕೊಟ್ಟ ವಿಶಿಷ್ಟ ಪರಂಪರೆಯೂ ಇವರದ್ದೇ.( ಅಂದಹಾಗೆ ಭಾವಗೀತೆಗಳು ಕನ್ನಡ ಭಾಷೆಯಲ್ಲಿ ಕಾಣಬರುವ ಹಾಗೆ ವ್ಯಾಪ್ತವಾಗಿ ಉಳಿದ ಭಾಷೆಗಳಲ್ಲಿ ಕಾಣಬರುವುದಿಲ್ಲ.) “ನವ್ಯ”ರು, ತಮ್ಮನ್ನು ತಾವು “ನವ್ಯ”ರು ಎಂದು ಕರೆದುಕೊಂಡ ನಂತರ ಅದರ ಹಿಂದಿನ ಪ್ರಾಕಾರವನ್ನು ನವೋದಯ ಎಂದು ಕರೆಯಲಾಯಿತಷ್ಟೆ. ಈ ಕಾಲದ, ಪರಂಪರೆಯ ಕವಿಗಳ ಮತ್ತೊಂದು ವಿಶಿಷ್ಟ ಗುಣವೆಂದರೆ ಇವರ ಆಧ್ಯಾತ್ಮಿಕತೆ-ವಾಸ್ತವತೆಗಳ ಸಮ್ಮಿಲನ, ಅದೇ ರೀಇತಿಯಾಗಿ ನಡೆ ನುಡಿ ಬದ್ಧತೆಗಳಲ್ಲಿ ಕಂಡುಬರುವ ತಾದಾತ್ಮ್ಯ; ವೈಯಕ್ತಿಕ ಜೀವನದಲ್ಲಿ ಕಂಡುಬರುವ ಶ್ರದ್ಧೆ ಶಿಸ್ತುಗಳು ಇವರ ಕಾವ್ಯದಲ್ಲೂ ಕಾಣುವುದು ಕಾಕತಾಳೀಯವಲ್ಲ. ಇಲ್ಲಿ ವಿರೋಧಾಭಾಸವಿಲ್ಲ. ಕಾವ್ಯಾಭಿವ್ಯಕ್ತಿ, ನಿಸ್ವಾರ್ಥ ಸಾಹಿತ್ಯ ಸೇವೆ ಅಷ್ಟೇ ಇವರ ಪ್ರಮುಖ ಉದ್ದೇಶಗಳಾಗಿ ಕಂಡುಬರುತ್ತವೆ. ಹಾಗೆಂದು ಇವರು ಬದಲಾವಣೆ ಬಯಸದ ನಿರ್ವೀರ್ಯರೇನಾಗಿರಲಿಲ್ಲ. ಇಂದಿಗೂ ನಮ್ಮ ಮನೆ ಮನಗಳಲ್ಲಿ ನಳನಳಿಸುವುದು ಇವರ ಕಾವ್ಯಗಳೇ.
  ಇದಕ್ಕೆ ವ್ಯತಿರಿಕ್ತವಾದ “ಗುಂಪು” ನವ್ಯರ ಮತ್ತು ಅನಂತರ ಬಂದ ಬಂಡಾಯ, ದಲಿತ, ಬಲಿತ, ಪ್ರಗತಿಶೀಲ ಇತ್ಯಾದಿಗಳದ್ದು. ಗದ್ಯ ಪ್ರಕಾರಗಳಲ್ಲಿ ಕೆಲವು ಎದ್ದು ನಿಲ್ಲುವ ಕೃತಿಗಳು ಬಂದಿವೆಯಾದರೂ ಪದ್ಯಪ್ರಕಾರಗಳಲ್ಲಿ ಸೋತುಹೋದ ಸಾಹಿತ್ಯವೇ. ೨೦-೩೦ ವರ್ಷಗಳ ಕಾಲ ತೆವಳಿ ಕೊನೆಯುಸಿರೆಳೆದ ಈ ನವ್ಯ ಸಾಹಿತ್ಯ ಅದೇ ಕಾಲದಲ್ಲಿ ಹಳ್ಳ ಹಿಡಿದ ರಾಜಕೀಯ -ರಾಜಕಾರಿಣಿಗಳ ಪರಿಸ್ಥಿತಿಯನ್ನೇ ಬಿಂಬಿಸುತ್ತದೆ. ಅಡಿಗ ,ಗೋಕಾಕ್ ಅವರಂತಹ ಕೆಲವು ಪ್ರಾಮಾಣಿಕರನ್ನು ಬಿಟ್ಟರೆ ಉಳಿದವರೆಲ್ಲಾ ಆಷಾಢಭೂತಿ ಸಾಹಿತಿಗಳೇ. ಸಮಾಜವಾದ, ಸಮಾಜಮುಖಿ, ತಲಸ್ಪರ್ಶಿ, ವ್ಯವಸ್ಥಾ ವಿರೋಧಿ, ಬದಲಾವಣೆ ಎನ್ನುತ್ತಲೇ ತಮ್ಮ ತಮ್ಮ ಜೋಳಿಗೆ ತುಂಬಿಸಿಕೊಳ್ಳುವ, ಆಯಕಟ್ಟಿನ ಹುದ್ದೆಗಳನ್ನು ಹಿಡಿಯುವ, ಪ್ರಶಸ್ತೀ ಪುರಸ್ಕಾರಗಳಿಗೆ ಟವಲ್ ಹಾಸುವ, ತಮ್ಮ ತಮ್ಮವರನ್ನು ಹೊಗಳುತ್ತಲೇ ಲಾಬಿ ಮಾಡುವ ಹೀನ ಪ್ರವೃತ್ತಿ ಶುರುವಾದದ್ದು ಇಲ್ಲಿಂದಲೇ. ಕನ್ನಡದ್ ಎಂಬುದನ್ನು ಹಾಲು ಹಿಂಡುವ ಹಸುವಾಗಿ ಕೊಳೆತ ಮೇವು ಹಾಕಿ ಚೆನ್ನಾಗಿ ಬಳಸಿಕೊಂಡವರಿವರು. ಅನಂತಮೂರ್ತಿ, ಕಾರ್ನಾಡು , ರಾಮಚಂದ್ರನ್, ರಾಮಚಂದ್ರ ಶರ್ಮ, ಇತ್ಯಾದಿ ಇತ್ಯಾದಿ. ಜೀವನದಲ್ಲಿ ಅಳವಡಿಸಿಕೊಳ್ಳದ ಶಿಸ್ತು ಇವರ ಕಾವ್ಯಗಳಲ್ಲಿ ಬಂದೀತಾದರೂ ಹೇಗೆ. ಅದು ನಾಸ್ತಿ. ಸಿಗರೇಟು, ಹೆಂಡ , ಲಾಬಿ ಇತ್ಯಾದಿಗಳ ಮಧ್ಯೆ ಗೀಚಿದ್ದು ಸಾಹಿತ್ಯ ಎಂದು ಬಿಂಬಿಸಿ ಬೊಂಬಡಾ ಹೊಡೆಯುವ ಪಡೆ ಕಟ್ಟಿಕೊಂಡು ಹೆಸರಾದವರಿವರು. ಇವರ ಮುಂದುವರಿದ ಪಡೆಯೇ ಇಂದಿನ ಚಂಪಾ, ನಂದಕುಮಾರ್,ಗೌರಿ ಲಂಕೇಶ್ ಇತ್ಯಾದಿಗಳು.
  ಅಡಿಗರನ್ನು ನವ್ಯರ ಆದ್ಯ ಪ್ರವರ್ತಕ್ರೆಂದೂ, ಗೋಕಾಕರನ್ನು ಭೀಷ್ಮರೆಂದೂ ಗುರುತಿಸಲಾಗುತ್ತದೆ. ನವೋದಯದ ಜಾಡಿನಲ್ಲಿ ಬರೆಯುತ್ತಿದ್ದ “ಯಾವ ಮೋಹನ ಮುರಳಿ ಕರೆಯಿತೋ “ ಖ್ಯಾತಿಯ ಅಡಿಗರು ನವ್ಯದ ಕಡೆಗೆ ಹೊರಳಿದರು.ಲಾಭ ಕಂಡ ಉಳಿದವರು ಲಾಬಿ ಮಾಡುತ್ತಾ ನಡೆದರು . ಯಾವ ಕರ್ಕಶ ಕಹಳೆ ಕೂಗಿತೋ ಅಡಿಗ ನಿಮ್ಮನು ನವ್ಯಕೆ ?
  ಪರಿಚಯದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ನೌಟಂಕಿ ನವ್ಯರನ್ನು ನವರತ್ನಗಳಂಥ ನವೋದಯದೊಂದಿಗೆ ಸಮೀಕರಿಸಿದರೆ ಅದೊಂದು ದೊಡ್ಡ ಪ್ರಮಾದವಾದೀತು. ಓದುಗರಿಗೆ ಈ ಗೊಂದಲ ಬರಬಾರದೆಂದು ಈ ಟಿಪ್ಪಣಿಯನ್ನು ಬರೆಯಬೇಕಾಗಿದೆ.

  Like

 5. ಬೇಸಿಗೆಯ ಸಮಯದ ಈ ಎರಡು ಕವಿತೆಗಳ ವಸ್ತು ಒಂದು ರೀತಿಯಿಂದ timeless ಎನ್ನ ಬಹುದು. ಒಂದು ಇಂಗ್ಲಿಷ್ ಮಾತು ಇದೆ: Many a true word is spoken in jest ಅನ್ನುವಂತೆ ಈ ’ಲಘು ಕವಿತೆಗಳಲ್ಲಿ’ ನಿತ್ಯ ಸತ್ಯವನ್ನು ಕಾಣುತ್ತೇವೆ. ಪ್ರೇಮಲತಾ ಅವರ ಕವಿತೆಯಲ್ಲಿ ಕಂಡು ಬರುವ ವಿಚಾರವಾದಿಗಳು ಹಿಂದಿನಕಾಲದ ಹಳ್ಳಿಯ ಚಾವಡಿ ಜಗುಲಿಯಿಂದ, ನಮ್ಮೂರಿನ ಕಾಫಿ-ಟೀ ಶಾಪುಗಳಲ್ಲಿಂದ ಹಿಡಿದು, ಈ ದೇಶದ ಪಬ್ಬುಗಳಲ್ಲಿಯೂ Putting (setting) the world to order ’ವಾದ’ ಮಾಡುವದು ಸಹಜ ದೃಶ್ಯ ಅನ್ನಿ! ಆ ಕವನದಲ್ಲಿಯ ಅವರ ವರ್ಣನೆಯ ಸಾಲುಗಳೂ ಇಷ್ಟವಾಯಿತು:
  ”…ತೇಲುಗಣ್ಣುಗಳನು
  ಹಾಳೆಗಳಲಿ ನೆಟ್ಟು
  ಬಳೆ ಬಿಟ್ಟ ಹಲ್ಲುಗಳು ,ಹಾರುವ
  ಪುಕ್ಕದಂತ ಕೂದಲು, ಓದುವನು
  ಅರ್ಥ ವ್ಯಾಕರಣ ಎಲ್ಲ ಎಡವಟ್ಟು”
  ಮಂತ್ಲಿ ಮೀಟಿಂಗಿನ ಫಟಿಂಗರು ಒಂದಿಷ್ಟು ವಯಸ್ಸಾದ ಮೇಲೆ ತಮ್ಮ ಅನುಭವಗಳು, ಅಲ್ಲಲ್ಲಿ ಓದಿದ್ದು, ಅವರಿವರ ಅಭಿಪ್ರಾಯಗಳನ್ನು ಕಡತೆಗೆದುಕೊಂಡೂ ತಮ್ಮದೆನ್ನುವಂತೆ ಸಾಧಿಸುವ ಆ ಮಾತುಕತೆಯನ್ನು ಆಚೆ ಕುಳಿತು ಕೇಳಿದಂತೆ ಅದರ ಸ್ವಾರಸ್ಯವನ್ನು ತಮ್ಮ ಬುರುಗು ತುಂಬಿದ ಒಂದು ಉತ್ತಮ ಕವನದಲ್ಲಿ ಭಟ್ಟಿ ಇಳಿಸಿದ ಪ್ರೇಮಲತಾ ಅವರಿಗೆ ಅಭಿನಂದನೆಗಳು.
  ಇನ್ನು ಸುಶೀಲೇಂದ್ರರಾವ್ ಅವರ ಕವನದಲ್ಲಿ ಬರುವ ರಾಜಕಾರಣಿಗಳನ್ನು ಅಂದೂ ಇಂದೂ, ಅಲ್ಲಿಯೂ ಇಲ್ಲಿಯೂ ಕಾಣುತ್ತಿರುತ್ತೇವೆ. ಪ್ರಸ್ತುತ ’ಬ್ರೆಕ್ಸಿಟ್’ ವಾತಾವರಣಕ್ಕೂ ಅದನ್ನು ಅನ್ವಯಿಸಬಹುದಾದಂಥ ಸಮಯಾತೀತ ವಿಡಂಬನೆ ಅದು. ಅಲ್ಲಲ್ಲಿ ನುಸುಳಿದ (ಪ್ರಾಣಾಂತಿಕವಲ್ಲದಿದ್ದರೂ) ಅಲ್ಪ-ಮಹಾಪ್ರಾಣಾತ್ಮಕ typo ದೋಷಗಳಿಲ್ಲದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.
  ನೀವೇ ಬರೆದಂತೆ ಮಾತು ಕೊಡಿ, ಇನ್ನಷ್ಟು ಸರಕು ಬರಲಿ, ನಿಮ್ಮ ಮೂಟೆಗಳಿಂದ;
  ”ತೆಗೆಯುತ್ತೇವೆ ಸರಕುಗಳನು
  ಜುಬ್ಬಾದ ಜೇಬಿಂದ, ಬಗಲಿನ ಬ್ಯಾಗಿಂದ
  ಮಡಚಿಟ್ಟ ಹಾಳೆಗಳ ಬಿಚ್ಚಿ ಹರಡಿ”
  ಶ್ರೀವತ್ಸ ದೇಸಾಯಿ

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.