’ಕಾಫಿ ವಿತ್ ಕಾಸರವಳ್ಳಿ ’ ಭಾಗ ೨- ’ಹಸೀನಾ ’ ಬಗ್ಗೆ ಡಾ. ಶಿವಪ್ರಸಾದ್

(ಇದೇ ವರ್ಷ ಏಪ್ರಿಲ್ ನಲ್ಲಿ ಡಾಂಕಾಸ್ಟರಿನಲ್ಲಿ ನಡೆದ ಕನ್ನಡ ಬಳಗದ ಯುಗಾದಿ ಸಮಾರಂಭದಲ್ಲಿ   ’ ಅನಿವಾಸಿ ’ ತಂಡ ಡಾ.ಪ್ರಸಾದ್ ರ ನೇತೃತ್ವದಲ್ಲಿ  ’ ’ಕಾಫಿ ವಿತ್ ಕಾಸರವಳ್ಳಿ ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲರ ಸಮಕ್ಷಮದಲ್ಲಿ ನಡೆದ ಈ ಕಮ್ಮಟದಲ್ಲಿ  ಡಾ.ಗಿರೀಶ್ ಕಾಸರವಳ್ಳಿಯವರ ಆಯ್ದ ಸಿನಿಮಾಗಳ ಬಗ್ಗೆ ಹಲವರು ಮಾತನಾಡಿದರು. ಆಯಾ ಸಿನಿಮಾಗಳ  ಕೆಲವು ದೃಶ್ಯಾವಳಿಗಳನ್ನು ನೆರೆದ ಜನರಿಗೆ ತೋರಿಸಿದರು.ವಿಶೇಷ ಎಂದರೆ ಈ ಸಿನಿಮಾಗಳ ರೂವಾರಿ, ನಿರ್ದೇಶಕ, ಹಲವು ಚಿತ್ರಗಳ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದ ಖ್ಯಾತಿಯ, ಕಲಾತ್ಮಕ ಚಿತ್ರಗಳ ಗಾರುಡಿಗ, ಪ್ರಪಂಚದ ಒಬ್ಬ ಶ್ರೇಷ್ಠ ಸಿನಿಮಾ ನಿರ್ದೇಶಕರಾದ ಪದ್ಮಶ್ರೀ ವಿಜೇತ ಡಾ. ಗಿರೀಶ್ ಕಾಸರವಳ್ಳಿಯವರೂ ನಮ್ಮೊಡನಿದ್ದುದು ! ಅವರ ಸಮ್ಮುಖದಲ್ಲೇ ಅವರ ಚಿತ್ರಗಳ ಬಗ್ಗೆ ಮಾತನಾಡುವ ನಮ್ಮ ಪ್ರಯತ್ನದ ನಂತರ ಅವರೊಂದಿಗೆ ಆ ಚಿತ್ರದ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಕೇಳುವ ಅವಕಾಶವೂ ಇತ್ತು.  ಈ ಕಾರ್ಯಕ್ರಮದಲ್ಲಿ ಅತ್ಯಂತ ಸಮಾಧಾನ  ಚಿತ್ತದೊಡನೆ ಕಾಸರವಳ್ಳಿಯವರು ಭಾಗವಹಿಸಿದ್ದಲ್ಲದೆ ಕೇಳಿದ ಪ್ರಶ್ನೆಗಳಿಗೆ ಪ್ರತಿಶತಃ ನೈಜ, ಸರಳ ಮತ್ತು ಪ್ರಬುದ್ಧ ಉತ್ತರಗಳನ್ನು ನೀಡಿ ಎಲ್ಲರ ಮನಗೆದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟ ಡಾ. ಶಿವಪ್ರಸಾದ್   ಜಿ.ಕೆ. ಯವರ ಹಸೀನ ಚಿತ್ರದ ಬಗ್ಗೆ ಮಾತನಾಡಿದರು. ಈ ಚಿತ್ರದ ಬಗ್ಗೆಗಿನ ಅವರ ಲೇಖನ ಈ ವಾರ ನಿಮಗಾಗಿ- ಸಂ )

 

ಹಸೀನಾ ಚಿತ್ರದ ಬಗ್ಗೆ ಕೆಲವು ಅನಿಸಿಕೆಗಳು

 

ಹಸೀನಾ ಚಿತ್ರವನ್ನು ಗಿರೀಶ್ ಕಾಸರವಳ್ಳಿಯವರು  ೨೦೦೪ ರಲ್ಲಿ ನಿರ್ದೇಶಿಸಿದರು .  ಈ ಚಿತ್ರದ ನಿರ್ಮಾಪಕರು ಮಾಜಿ ಐಎಎಸ್ ಅಧಿಕಾರಿಗಳಾದ ಐ. ಎಂ. ವಿಠಲಮೂರ್ತಿಯವರು. ಈ ಚಿತ್ರಕ್ಕೆ ಮೂರು ಬೆಳ್ಳಿ ಕಮಲ ಪ್ರಶಸ್ತಿಯಲ್ಲದೆ ಎರಡು ರಾಜ್ಯ ಪ್ರಶಸ್ತಿ ದೊರಕಿದೆ. ಲೇಖಕಿ ಬಾನು ಮುಷ್ತಾಕ್ ಅವರ ‘ಕರಿನಾಗರಗಳು’ ಎಂಬ ಕಥೆಯ ಮೇಲೆ ಆಧರಿಸಿದ ಚಿತ್ರ ಹಸೀನಾ.

ಒಂದು ಚಿತ್ರವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಅದರ ಅಂತರಾಳವಾದ ಕಥೆ ಕಾದಂಬರಿಯ ವಿಶ್ಲೇಷಣೆ ಕೂಡಾ  ಅನಿವಾರ್ಯವಾಗುತ್ತದೆ. ಈ ಚಿತ್ರಕಥೆ ಬಹಳ ಸರಳವಾಗಿದ್ದು ಇಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನೆಗಳಿವೆ.  ಒಂದು ಮುಸ್ಲಿಂ ಕುಟುಂಬದಲ್ಲಿ ಹೆಣ್ಣು ಮಕ್ಕಳನ್ನು ಹಡೆಯುತ್ತಿದ್ದ ಹಸೀನಾ  ತನ್ನ ನಾಲ್ಕನೇ ಬಸುರಿನಲ್ಲಿ ವೈದ್ಯರ ಸ್ಕ್ಯಾನಿಂಗ್ ಮೂಲಕ ಮತ್ತೊಂದು ಹೆಣ್ಣು ಮಗುವನ್ನು ಹೆರೆಯುವ  ಪರಿಸ್ಥಿತಿ ಗೊತ್ತಾದಾಗ  ಆಕೆ ತನ್ನ ಗಂಡನ ಆಕ್ರೋಶಕ್ಕೆ ತುತ್ತಾಗುತ್ತಾಳೆ.  ಈ ಒಂದು ಕಾರಣಕ್ಕೆ ಅವಳ ಗಂಡ ಹಸೀನಾಳನ್ನು ವಿಚ್ಛೇದಿಸಿ ಬೇರೊಂದು ಮದುವೆಯಲ್ಲಿ ತೊಡಗುತ್ತಾನೆ.  ಈ ಮಧ್ಯದಲ್ಲಿ ತನ್ನ ಹುಟ್ಟು ಕುರುಡಿ ಮಗುವೊಂದಕ್ಕೆ ಆಪರೇಷನ್ ಮೂಲಕ ದೃಷ್ಟಿ ತರಿಸುವ ಭರವಸೆಯನ್ನು ವೈದ್ಯರು ಕೊಟ್ಟು ಅದಕ್ಕೆ ಬೇಕಾದ ಹಣ ಕೂಡಿಸಲು ಹಸೀನಾ ಹೆಣಗುತ್ತಾಳೆ.

ತನ್ನನ್ನು ವಿಚ್ಛೇದಿಸುತ್ತಿರುವ ಗಂಡನಿಂದ ಧನ ಸಹಾಯ ಬೇಡಿ ಅವನಿಂದ ಮತ್ತಷ್ಟು ಆಕ್ರೋಶಕ್ಕೆ ಒಳಗಾಗುತ್ತಾಳೆ. ಹಸೀನಾ ಅನಕ್ಷರಸ್ಥೆ, ಒಂಟಿ ಹೆಣ್ಣು,  ಮೂರು ಮಕ್ಕಳ ತಾಯಿ, ತುಂಬು  ಗರ್ಭಿಣಿಯಾಗಿದ್ದರೂ ತನ್ನ ಸ್ವಾಭಿಮಾನ ಮತ್ತು ಛಲಗಳಿಂದ ತನಗೆ ನ್ಯಾಯವಾಗಿ ದಕ್ಕಬೇಕಾದ ಸಂಭಾವನೆಗೆ ನಿರಂತರ ಹೋರಾಟ ನಡೆಸುತ್ತಾಳೆ.  ಈ ಜಂಜಾಟದಲ್ಲಿ ಮಸೀದಿಯ ಮುಖ್ಯಸ್ಥ ಮೌಲ್ವಿಯ ಸಹಾಯ ಮತ್ತು ಸಹಕಾರ ಬೇಡುತ್ತಾಳೆ. ಪುರುಷ ಪ್ರಧಾನವಾದ ಸಮಾಜದಲ್ಲಿ ಮತ್ತು ಮಸೀದಿಯ ಒಳ ರಾಜಕೀಯದಲ್ಲಿ ಹಸೀನಾಳ  ಬೇಡಿಕೆ ನಿರ್ಲಕ್ಷಗೊಳ್ಳುತ್ತದೆ.

ಹಸಿನಾಳ ಹೋರಾಟ ಒಂದು ಕಡೆಯಾದರೆ ಮುಸ್ಲಿಂ ಸಮುದಾಯದ ಅನೇಕ ಮಹಿಳೆಯರು ಒಂದಲ್ಲ ಒಂದು ರೀತಿಯ ವೈಯುಕ್ತಿಕ  ಶೋಷಣೆಗೆ ಒಳಪಟ್ಟು ನಿಸ್ಸಹಾಯಕರಾಗಿ ಪರಿತಪಿಸುವುದನ್ನು ಚಿತ್ರದಲ್ಲಿ ಕಾಣಬಹುದು. ಕೊನೆಗೆ ಹಸೀನಾ ರೋಸತ್ತು ಮಸೀದಿಯ ಆವರಣದಲ್ಲಿ ಅನ್ನ ನೀರು ಬಿಟ್ಟು ಮಕ್ಕಳ ಜೊತೆ ಧರಣಿಗೆ ಕೂರುತ್ತಾಳೆ. ಇದರಿಂದ ಸಿಟ್ಟಿಗೆದ್ದ ಗಂಡ  ಯಾಕೂಬ್ ಅವಳ ಮೇಲೆ ಹಲ್ಲೆ ಮಾಡುತ್ತಾನೆ. ಈ ಚಕಮಕಿಯಲ್ಲಿ ಅವರ ಕುರುಡು ಮಗು ಮುನ್ನಿ ಮಧ್ಯದಲ್ಲಿ ಸಿಲುಕಿ ಸಾವನ್ನಪ್ಪುತ್ತಾಳೆ.  ಈ ಘಟನೆಯ ನಂತರ ಹಸೀನಾಗೆ  ಒದಗಿದ  ಅನ್ಯಾಯದ ಬಗ್ಗೆ ಮೌಲ್ವಿಗೆ ಮರುಕ ಹುಟ್ಟಿ ಅವಳಿಗೆ ಸಂಭಾವನೆ ಕೊಡಿಸಲು ಮುಂದಾಗುತ್ತಾನೆ. ತಾನು ಯಾವ ಕಾರಣಕ್ಕೆ ಹೋರಾಟ ನಡೆಸಿದ್ದಳೋ ಆ ಮುನ್ನಿಯೇ ಇಲ್ಲದ ಮೇಲೆ ಸಂಭಾವನೆ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂಬ  ಹಸೀನಾಳ ಭಾವನೆಯಲ್ಲಿ ಚಿತ್ರ ಕೊನೆಗೊಳ್ಳುತ್ತದೆ. Justice delayed is justice denied ಎಂಬ ಇಂಗ್ಲಿಷ್ ಉಕ್ತಿಯನ್ನು ಚಿತ್ರ ಇಲ್ಲಿ ನೆನಪಿಗೆ ತರುತ್ತದೆ.

ಈ ಚಿತ್ರದಲ್ಲಿನ ಸಾಮಾಜಿಕ ಸಮಸ್ಯೆಗಳಾದ ಹೆಣ್ಣು ಭ್ರೂಣಹತ್ಯೆ, ಸ್ತ್ರೀ ಸ್ವಾತಂತ್ರ,  ಸ್ತ್ರೀಯರ ಮೇಲೆ ದಬ್ಬಾಳಿಕೆ,  ತಾರತಮ್ಯ, Child Labour, Domestic violence ಇವು ಬಹಳ ಪ್ರಸ್ತುತವಾಗಿದೆ.  ಅನಕ್ಷರತೆ ಮತ್ತು ಬಡತನ ಹೇಗೆ ಈ ಮೇಲಿನ ಸಮಸ್ಯೆಗಳಿಗೆ ಹಿನ್ನಲೆ ಕಾರಣಗಳಾಗಿವೆ ಎಂಬುದನ್ನು ಗಮನಿಸಬಹುದು. ಈ ರೀತಿಯ ಸಮಸ್ಯೆಗಳು ಎಲ್ಲ ಧರ್ಮಗಳಲ್ಲೂ ಕಾಣಬಹುದು ಈ ಚಿತ್ರದ ಮುಸ್ಲಿಂ ಕುಟುಂಬ ಒಂದು ಉದಾಹರಣೆಯಷ್ಟೆ.

ಇಷ್ಟು ಸೂಕ್ಷ್ಮವಾದ ಸಮಸ್ಯೆಯನ್ನು ತೆಗೆದುಕೊಂಡು ಅದರಲ್ಲೂ ಸಮಕಾಲೀನ ಪರಿಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಪ್ರಧಾನವಾಗಿಟ್ಟುಕೊಂಡು ಒಂದು ಪ್ರಾದೇಶಿಕತೆ ಕಟ್ಟಿರುವುದು ಶ್ಲಾಘನೀಯ.  ಚಿತ್ರದಲ್ಲಿ  ಮುಸ್ಲಿಂ ಕನ್ನಡ ಭಾಷೆ, ನಡೆ ನುಡಿ ಮತ್ತು  ಸಂಸ್ಕೃತಿಯನ್ನು ಸಂಪೂರ್ಣವಾಗಿ ಪರಿಚಯಿಸಿ ಅಲ್ಲಿನ ಸಮಸ್ಯೆಗಳನ್ನು ವಿಶ್ಲೇಷಿಸಿರುವುದು ವಿಶೇಷ.  ಹಿಂದೂ ಮುಸ್ಲಿಂ ಘರ್ಷಣೆ ಗಳನ್ನಷ್ಟೇ ಬಂಡವಾಳವಾಗಿಸಿ ತೆಗೆದ ಇತರ ಚಿತ್ರಗಳಿಗಿಂತ ಹಸೀನಾ ಭಿನ್ನವಾಗಿದೆ.  ಇಲ್ಲಿ ಅಡಗಿರುವ ಸಾಮಾಜಿಕ ಸಮಸ್ಯೆಗಳಿಂದಾಗಿ ಎಲ್ಲ ವರ್ಗದ ಎಲ್ಲ ಧರ್ಮದ ಜನರ ಕಲ್ಪನೆಗೆ ನಿಲುಕುವ ಸಿನೆಮಾ ಆಗಿದೆ.  ಸಾಮಾಜಿಕ ಕಾಳಜಿಯ ಬಗ್ಗೆ ತೆಗೆದ ಅತ್ಯುತ್ತಮ ಚಿತ್ರವೆಂಬ ಪುರಸ್ಕಾರ ಗಿಟ್ಟಿದೆ.  ಹಸೀನಾ ಪಾತ್ರದಲ್ಲಿ ಖ್ಯಾತ ನಟಿ ತಾರಾ ಅವರ ಅಭಿನಯ ತುಂಬಾ ಉತ್ಕೃಷ್ಟವಾಗಿದೆ. ಇಲ್ಲಿ ಮಕ್ಕಳ ಪಾತ್ರ ಮತ್ತು ಅವರ ಮುಗ್ಧತೆ ಈ ಗಂಭೀರ ಸಮಸ್ಯೆಗಳ ಮಧ್ಯೆ ಕಳಕಳಿ ತಂದಿದೆ.

ಹಸೀನಾ ಮೂಲ ಕಥೆಯನ್ನು ಓದಿದವರು  ನಿರ್ದೇಶಕರು  ತಂದಿರುವ ಸಾಕಷ್ಟು ಬದಲಾವಣೆಗಳನ್ನು ಗುರುತಿಸಬಹುದು.  ಒಂದು ಸಾಹಿತ್ಯ ಮಾಧ್ಯಮವನ್ನು ದೃಶ್ಯ ಮಾಧ್ಯಮವಾಗಿ ಮಾರ್ಪಾಟು ಮಾಡಿದಾಗ ಈ ರೀತಿಯ ಬದಲಾವಣೆಗಳು ಅನಿವಾರ್ಯ ಎಂಬುದು ಕಾಸರವಳ್ಳಿಯವರ ಅಭಿಪ್ರಾಯ.  ಒಬ್ಬ ನಿರ್ದೇಶಕನಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶವಿದ್ದಲ್ಲಿ ಆ ಉದ್ದೇಶ ಈ ಚಿತ್ರದಲ್ಲಿ ಸಫಲವಾಗಿದೆ. ನಿರ್ದೇಶಕ ತನ್ನ ಅಭಿಪ್ರಾಯವನ್ನು ಇತರರ ಮೇಲೆ ಹೇರದೆ ಪ್ರೇಕ್ಷಕರ ಒಳ ಸಂವಾದವನ್ನು ಹುಟ್ಟು  ಹಾಕಿ ಆಲೋಚನಾ ಕ್ರಮಗಳನ್ನು ಕೆರಳಿಸದೆ ಅರಳಿಸಬೇಕು ಎಂದು ಕಾಸರವಳ್ಳಿಯವರು ಸಂದರ್ಶನದಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯುತ್ತೇನೆ.

ಡಾ.  ಜಿ. ಎಸ್. ಶಿವಪ್ರಸಾದ್

2 thoughts on “’ಕಾಫಿ ವಿತ್ ಕಾಸರವಳ್ಳಿ ’ ಭಾಗ ೨- ’ಹಸೀನಾ ’ ಬಗ್ಗೆ ಡಾ. ಶಿವಪ್ರಸಾದ್

  1. ಡಾ ಶಿವಪ್ರಸಾದ ಅವರು ’ಹಸೀನಾ’ ಚಿತ್ರದ ಕಥಾವಸ್ತುವಿನ ಸಂಕ್ಷಿಪ್ತ ಪರಿಚಯದೊಂದಿಗೆ ಅದು ವಿಶ್ಲೇಷಿಸುವ ಸಾಮಾಜದ ಅನ್ಯಾಯದ ವರ್ತನೆ, ಸಮಾಜದ ವಿವಿಧ ಸಮಸ್ಯೆಗಳು ಇದೊಂದೇ ಮತಕ್ಕೆ ಸೀಮಿತವಾಗಿರದೆ ಎಲ್ಲರನ್ನೂ ಯೋಚನೆಗೀಡು ಮಾಡುವಂತೆ ಕಾಸರವಳ್ಳಿಯವರು ಚಿತ್ರಿಸಿದ್ದನ್ನು ನೆನಪಿಸಿಕೊಡುತ್ತಾರೆ. ಕಾಸರವಳ್ಳಿ ಅವರು ಸಿನಿಮಾ ಮಾಡುವ ರೀತಿಯನ್ನು ಅವರ ಈ ಸಲದ ಯು ಕೆ ಭೇಟಿಯಲ್ಲಿ ಅವರೊಡನೆ ಕಳೆದ ಸ್ವಲ್ಪೇ ಸಮಯದಲ್ಲಿ ಸ್ವಲ್ಪವಾದರೂ ತಿಳಿದುಕೊಂಡೆ. ಹಸೀನಾ ಚಿತ್ರದಲ್ಲಿ ಮುಸ್ಲಿಮರು ದಿನಕ್ಕೈದು ಸಲ ನಮಾಜು ಮಾಡುವ ಸನ್ನಿವೇಶಗಳಹಳಲ್ಲಿ ಅವುಗಳ ಹೆಸರನ್ನು ಸಬ್ ಟೈಟಲ್ ಗಳಲ್ಲಿ ತೋರಿಸುವ ಸೂಕ್ಷ್ಮತೆಯ ಬಗ್ಗೆ ಇನ್ನೊಂದು ಕಡೆ ಓದಿದ ನೆನಪಾಗುತ್ತದೆ. ಅವರ ಚಿತ್ರಗಳನ್ನು ಚರ್ಚೆ ಮಾಡುವ ಅವಕಾಶ ಸಿಕ್ಕದ್ದು ನಮ್ಮ ಸುದೈವ ಎಂಬುದನ್ನೂ ಇಲ್ಲಿ ನೆನೆಯುತ್ತೇನೆ

    Like

  2. ಶಿವಪ್ರಸಾದ್ ಅವರೇ, ಹಸಿನಾಳಂತಹ ಇನ್ನೆಷ್ಟು ಮಹಿಳೆಯರು ಕೇವಲ ಮುಸ್ಲಿಂ ಸಮುದಾಯದಲ್ಲಷ್ಟೇ ಅಲ್ಲ, ಇತರ ಸಮುದಾಯಗಳಲ್ಲೂ ಇಂತಹ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಬಾನು ಮುಷ್ಟಾಕ್ ತಮ್ಮ ಸಮುದಾಯದಲ್ಲಿ ಮಹಿಳೆಯರು ಎದುರಿಸುವ ಅಮಾನುಷ ಕೃತ್ಯಗಳನ್ನು ನೋಡುತ್ತಾ ಇದ್ದು, ಇಂತಹ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಲೇಖನಿಗಿಳಿಸಿದ್ದಾರೆ. ಹುಟ್ಟುವ ಮಗು ಗಂಡು ಅಥವಾ ಹೆಣ್ಣು ಎನ್ನುವ ಅಂಶವನ್ನು ನಿರ್ಧರಿಸುವುದು ಗಂಡು ಎನ್ನುವ ವೈಜ್ಞಾನಿಕ ವಿಷಯದ ಅರಿವಿಲ್ಲದ ಜನ, ತಮ್ಮ ಹೆಂಡತಿಯರನ್ನು ಇಂತಹ ಶೋಷಣೆಗೆ ಒಳಪಡಿಸುವುದು ನಿಜಕ್ಕೂ ದಾರುಣ ಸಂಗತಿಯೇ ಸರಿ. ನಾನು ಈ ಚಿತ್ರವನ್ನು ನೋಡಿಲ್ಲ. ಇದು ಯುಟ್ಯೂಬಿನಲ್ಲಿದೆ. ಖಂಡಿತ ನೋಡುವೆ. ತಾರಾ ಕನ್ನಡ ಚಲನಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಕಳೆದ ವಾರ ಆಕೆಯ ಅಭಿನಯದ ಕಾನೂರು ಹೆಗ್ಗಡತಿಯನ್ನು ಮತ್ತೊಮ್ಮೆ ನೋಡಿದೆ. ಇನ್ನು ಗಿರೀಶ್ ಕಾರ್ನಾಡರ ಮರಣದ ಬಗ್ಗೆ ನನ್ನ ಮನದಲ್ಲಿ ಅವರ ನಟನೆಯ ಮತ್ತು ನಿರ್ದೇಶನದ ಚಿತ್ರಗಳು ನೆನಪಿನಲ್ಲಿ ಸುಳಿಯುತ್ತಿರುವುದರಿಂದ ಮತ್ತೊಮ್ಮೆ ಆ ಚಿತ್ರವನ್ನು ನೋಡಿದೆ. ಈ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಾಗಿರುವುದರಿಂದ, ಹಸೀನಾ ಚಿತ್ರ ಉತ್ಕೃಷ್ಟ ಮಟ್ಟದ್ದಾಗಿರಲೇ ಬೇಕು. ನಿಮ್ಮ ವಿಮರ್ಶಣೆ ನನ್ನನ್ನು ತಕ್ಷಣವೇ ಈ ಚಿತ್ರವನ್ನು ನೋಡಬೇಕೆಂದು ತಿಳಿಸುತ್ತಿದೆ. ಧನ್ಯವಾದಗಳು.
    ಉಮಾ ವೆಂಕಟೇಶ್.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.