ಕಾಫಿಯ ಜೊತೆಗಿಷ್ಟು ಹುರಿಗಾಳು

“ತತ್ ತೇರಿ ಸೂಳೆಮಗಂದು”

 

ಕಾಫಿಯ ಜೊತೆಗಿಷ್ಟು ಹುರಿಗಾಳು; ಲಘು ಬರಹವೆನ್ನಿರಿ ಅಥವಾ ಸಣ್ಣ ಕಥೆ ಎನ್ನಿರಿ ಇದನ್ನು ಹೇಗೆ ಗುರುತಿಸಿದರೂ ಕೊನೆಗೆ ಓದುಗರ ಮನಸ್ಸಿನಲ್ಲಿ ಉಳಿಯುವುದು ಅನುಕಂಪೆಯಿಂದ ಕೂಡಿದ ಒಬ್ಬ ಮುಗ್ಧ ಯುವಕನ ಚಿತ್ರಣ. ಲೇಖಕ ವಿಶ್ವನಾಥ್ ವೈದ್ಯರಾಗಿ ತಮಗೆ ತಿಳಿದ ಒಂದು ಮನೋ ದೌರ್ಬಲ್ಯ ದ ಪರಿಸ್ಥಿಯನ್ನು ಕಾಲ್ಪನಿಕ ಕಥೆಯಾಗಿ ಹೆಣೆದಿದ್ದಾರೆ. ಇದು ಪ್ರಪಂಚದ ಯಾವುದೋ ದೇಶದಲ್ಲಿ ನಿಜವಾಗಿ ನಡೆದಿರಬಹುದಾದ ಅಥವಾ ಮುಂದೆ ನಡೆಯಬಹುದಾದ ಒಂದು ಘಟನೆಯಾಗುವ  ಸಾಧ್ಯತೆ ಇದೆ. ಹಿಂದೆ ಅಮೇರಿಕಾ ಸಂಸ್ಥಾನದ ಪೆಂಟಗಾನ್ ರಕ್ಷಣಾ ವ್ಯವಸ್ಥೆಯನ್ನು ಮನೋದೌರ್ಬಲ್ಯ ಇರುವ ಒಬ್ಬ ಬ್ರಿಟಿಷ್ ಯುವಕ ಕುತೂಹಲಕ್ಕಾಗಿ ಕಂಪ್ಯೂಟರ್ ನಲ್ಲಿ ಬೇಧಿಸಿ ತೊಂದರೆಗೊಳಗಾಗಿದ್ದು ಅದು ಬಿ.ಬಿ.ಸಿ ವಾರ್ತೆಯಲ್ಲಿ ಪ್ರಚಾರಗೊಂಡ ವಿಚಾರವನ್ನು ಇಲ್ಲಿ ನೆನೆಯಬಹುದು. ವೈದ್ಯರಾಗಿ ನಮ್ಮ ದಿನ ನಿತ್ಯ ವೃತ್ತಿಯಲ್ಲಿ ಹಲವಾರು ಸ್ವಾರಸ್ಯಕರ ಸಂಗತಿಗಳು ನಮನ್ನು ಎದುರುಗೊಳ್ಳುತ್ತವೆ ಅದನ್ನು ನೆನೆಪಿನಲ್ಲಿ ಹುದುಗಿಸಿ ಒಂದು ಸಣ್ಣ ಕಥೆಯಾಗಿ ಹೆಣೆಯುವ ಸಾಮರ್ಥ್ಯ ಕೆಲವರಿಗೆ ಮಾತ್ರ ಸಾಧ್ಯ, ಈ ವಿಚಾರದಲ್ಲಿ ನಮ್ಮ ಚಿರಪರಿಚಿತರಾದ ಡಾ. ಮಂದ ಗೆರೆ ವಿಶ್ವನಾಥ್ ಅವರೂ ಸೇರಿದ್ದಾರೆ. ಅವರು ಯು.ಕೆ. ಕನ್ನಡ ಬಳಗದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಅವರು ಮ್ಯಾಂಚೆಸ್ಟರ್ ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞರು.

ಈ ಕಥೆಯಲ್ಲಿ ಕೆಲವು ಹೊಲಸು ಪದಗಳು ಸೇರಿರುವುದು ಅನಿವಾರ್ಯ. ಅದರ ಬಳಕೆ ಒಂದು ಮನೋದೌರ್ಬಲ್ಯದ ವ್ಯಕ್ತಿ ಚಿತ್ರಣದ ಅಂಗವಾಗಿರುವುದರಿಂದ ಅದು ಸಮಂಜಸವಾಗಿದೆ ಎಂಬುದನ್ನು ಓದುಗರು ಕಥೆಯ ಕೊನೆಯಲ್ಲಿ ಗ್ರಹಿಸಬಹುದು. ಈ ವಿಚಾರ ಕಥೆಯಲ್ಲೇ ಪ್ರಸ್ತಾಪಗೊಂಡಿದೆ.

ಡಾ ವಿಶ್ವನಾಥ್ ಅವರು ಅನಿವಾಸಿ ಜಾಲಜಗುಲಿಗೆ ಬರೆಯುತ್ತಿರುವುದು ಇದೇ ಮೊದಲು. ಅವರಿಂದ ಇನ್ನೂ ಹೆಚ್ಚಿನ ಬರವಣಿಗೆಯನ್ನು ನಿರೀಕ್ಷಿಸುತ್ತಾ ಅವರನ್ನು ಸ್ವಾಗತಿಸುತ್ತೇನೆ   (ಸಂ)

 

“ತತ್ ತೇರಿ ಸೂಳೆಮಗಂದು”
“ರೀ! ಆ ಹೆಂಗ್ಸು ಆಗಲಿಂದಾನೂ ನಮ್ಮ ಮನೆ ಕಾಂಪೌಂಡ್ ಹತ್ರಾನೆ ಓಡಾಡ್ತಿದ್ದಾಳೆ! ನೋಡಿ ಸ್ವಲ್ಪ!” ಗಿಡಗಳಿಗೆ ನೀರು ಹಾಕುತಿದ್ದ ನನಗೆ ಹೇಳಿದಳು ಪತ್ನಿ. ತಿರುಗಿ ಗೇಟ್ ಹತ್ರ ಹೋದಾಗ ಕಂಡದ್ದು ಒಂದು ಮಧ್ಯ ವಯಸ್ಸಿನ ಹೆಂಗಸು. ದೊಡ್ಡ ಕುಂಕುಮ, ಸಾಧಾರಣ ಸೀರೆ, ಗಾಜಿನ ಬಳೆಯಲ್ಲದೆ ಬೇರೆ ಏನು ಕಾಣಲಿಲ್ಲ. ನೋಡಕ್ಕೆ ಮಧ್ಯಮ ವರ್ಗದವಳ ಹಂಗೆ ಕಂಡರು. “ಯಾರಮ್ಮ? ಏನ್ಬೇಕು?” ಸ್ವಲ್ಪ ಗದರಿಸುವ ದನಿಯಲ್ಲೇ ಕೇಳಿದೆ. ” ಸಾರ್, ಸ್ವಲ್ಪ ಸಹಾಯ ಆಗ್ಬೇಕಿತ್ತು”. ಮನೆ ಮುಂದೆ ಬಂದು ಬೇಡುವವರಿಗೆ ನಾನು ಸಾಧಾರಣವಾಗಿ ಏನೂ ಕೊಡುವುದಿಲ್ಲ. ಯಾರೋ? ಏನೋ? ಮೋಸದ ಜನಗಳೇ ಜಾಸ್ತಿ ಅಂತ ಕೇಳಿರುವುದರಿಂದ. ಆಕೆಯ ಮೇಲೇಕೋ, ಅಂದು ಕನಿಕರವಾಯ್ತು.” “ಲಕ್ಷ್ಮಿ! ನನ್ನ ಪರ್ಸ್ ಕೊಡು”. ಪತ್ನಿ ತಂದು ಕೊಟ್ಟ ಪರ್ಸಿನಿಂದ ಹತ್ತು ರೂಪಾಯಿ ತೆಗೆದು ಕೊಡ ಹೋದಾಗ, ” ದುಡ್ಡು ಬೇಡ ಸಾರ್, ಮಗನಿಗೆ ಸಹಾಯ ಬೇಕಿತ್ತು” ಅಂದರು ಆಕೆ. “ಓ! ಹಾಗೋ! ವಿರೂಪಾಕ್ಷ ಅವರು ಬೇಕಿದ್ರೆ ಅದು ಪಕ್ಕದ ಮನೆ”.

ನಾವಿರುವುದು ಕಾಲೇಜು ಅಧ್ಯಾಪಕರ ಕಾಲೋನಿಯಲ್ಲಿ. ಅಧ್ಯಾಪಕರ ಸಹಕಾರ ಸಂಘದಿಂದ ಸೈಟುಗಳು ಸಿಕ್ಕಿದ್ದು ಅಲ್ಲಲ್ಲೇ ಮನೆ ಕಟ್ಟಿ ಕೊಂಡಿದ್ದೀವಿ. ನಮ್ಮ ಪಕ್ಕದವರು ವಿರೂಪಾಕ್ಷ. ಪಿರಿಯಾಪಟ್ಟಣದ ಫಸ್ಟ್ ಗ್ರೇಡ್ ಕಾಲೇಜ್ನ ಪ್ರಾಂಶುಪಾಲ. ಜೂನ್ ತಿಂಗಳಲ್ಲಿ ಕೆಲವರು ಮಕ್ಕಳಿಗೆ ಕಾಲೇಜ್ನಲ್ಲಿ ಸೀಟ್ ಕೊಡಿ ಅಂತ ಕೇಳ್ಕೊಂಡು ಅವರ ಮನೆಗೆ ಬರುತ್ತಾರೆಂದು ಪತ್ನಿ ಹೇಳಿದ್ದಳು. “ಅವರಲ್ಲ ಸಾರ್, ನಿಮ್ಮ ಸಹಾಯಾನೇ ಬೇಕಿತ್ತು.” ನಾನು ನಿವೃತ್ತನಾಗಿ ೬ ತಿಂಗಳಾಗಿತ್ತು. ನನ್ನಿಂದ ಇನ್ಯಾವ ತರಹದ ಸಹಾಯ? ಅಷ್ಟರಲ್ಲಿ ಪತ್ನಿಯೂ ಬಂದು ಸೇರಿದಳು. ಸಹಾಯ ಕೇಳಲು ಬಂದಾಕೆ ರಾಮ ದೇವರ ಗುಡಿಯ ಅರ್ಚಕರ ಪತ್ನಿಯಂತೆ. ಬೆಂಗಳೂರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತಿದ್ದ ಮಗನನ್ನ ಪೊಲೀಸರು ದರೋಡೆ ಪ್ರಕರಣದಲ್ಲಿ ಬಂಧಿಸಿ ಜೈಲಿನಲ್ಲಿ ಇಟ್ಟಿದ್ದಾರಂತೆ. ಅವನ ಪರವಾಗಿ ವಾದ ಮಾಡಲು ಯಾವ ಲಾಯರೂ ಮುಂಬರುತ್ತಿಲ್ಲವೆಂದೂ ಕಣ್ಣಲ್ಲಿ ನೀರಿಟ್ಟರು.” ಅಮ್ಮಾ ನೀವು ತಪ್ಪು ಮನುಷ್ಯನ ಹತ್ರ ಬಂದಿದ್ದೀರ,” ನಾನು ಕಾಲೇಜಿನಲ್ಲಿ ಲಾ ಪಾಠ ಮಾಡುತ್ತಿದ್ದನಷ್ಟೆ, ಲಾಯರು ಅಲ್ಲವೆಂದು ತಿಳಿ ಹೇಳಿ ಕಳಿಸಿದೆ. ಹಳೆ ಅರ್ಚಕರು ಎರಡು ವರ್ಷದ ಹಿಂದೆ ಪಾರ್ಶ್ವವಾಯುವಿಗೆ ತುತ್ತಾದ ನಂತರ ಬೇರೆ ಯುವಕ ಅರ್ಚಕರು ಬಂದಿದ್ದಾರೆ ಅಂದಳು ಪತ್ನಿ. “ದುಡ್ಡು ಮುಂದೆ ಇಡದಿದ್ರೆ ಯಾವ ಲಾಯರು ಮುಂದೆ ಬರ್ತಾನೆ ಅಲ್ವ, ಲಕ್ಷ್ಮಿ!” ನಾನು ಲಾಯರ್ಗಿರಿ ಪ್ರಾಕ್ಟೀಸ್ ಮಾಡದಿದ್ದರೂ ಲಾಯರುಗಳ ಸ್ವಭಾವ ಗೊತ್ತಿತ್ತು.

ಸ್ನೇಹಿತನ ಮಗನ ಮದುವೆಗೆಂದು ಬೆಂಗಳೂರಿಗೆ ಹೋದಾಗ ಅಲ್ಲಿ ಸಿಕ್ಕ, ಶಾಲೆಯ ಗೆಳೆಯ ರತ್ನಾಕರ. ರತ್ನಾಕರ ವೃತ್ತಿಯಿಂದ ವೈದ್ಯ. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯನಾಗಿಇನ್ನೂ ಕೆಲಸ ಮಾಡುತಿದ್ದ ಈ ವೈದ್ಯರಿಗೆ ನಿವೃತ್ತಿಯ ವಯಸ್ಸು ಎಷ್ಟೋ? ಲೋಕಾಭಿರೂಢಿ ಮಾತುಗಳ ನಂತರ, ” ಹೇಗಿದೆ ನಿವೃತ್ತ ಜೀವನ?” ಪ್ರಶ್ನಿಸಿದ. ನನ್ನನ್ನು ಲಾಯರು ಅನ್ಕೊಂಡು ಹುಡ್ಕೊಂಡು ಬಂದ ಹೆಂಗಸಿನ ಪ್ರಸಂಗ ಹೇಳಿದೆ. “ಮದುವೆ ರಿಸೆಪ್ಶನ್ ನಲ್ಲಿ ಬಿಟ್ಟು ಬೇರೆ ಯಾವ ದಿನವೂ ಕೋಟ್ ಹಾಕದ ನಿನಗೂ ಲಾಯರ್ ಪಟ್ಟ ಕೊಟ್ಟರಲ್ಲ ಒಬ್ರು.” ಅಂತ ಹೇಳ್ದಾಗ ಇಬ್ಬರೂ ಚೆನ್ನಾಗಿ ನಕ್ಕೆವು. ಧಾರೆಯಾದ ನಂತರ ನಾನು ಊರಿಗೆ ಮರಳಿದೆ. ಪಿರಿಯಾಪಟ್ಟಣಕ್ಕೆ ವಾಪಸು ಬಂದು ವಾರವಾದ್ರೂ ಆಕೆಯ ಮುಖವೇ ಯಾಕೋ ಆಗಾಗ್ಗೆ ನೆನಪಿಗೆ ಬರುತಿತ್ತು. ” ಲಕ್ಷ್ಮಿ! ಆ ರಾಮ ದೇವರ ಗುಡಿಗೆ ಹೋಗಿ ಆ ಹುಡುಗನ ಕಥೆ ಏನಾಯ್ತೋ ಕೇಳೋಣ ಬಾ.” ಹಳೆ ಅರ್ಚಕರು ಗುಡಿಯ ಪಕ್ಕದ ಸಂದುನಲ್ಲಿ ಹೋದರೆ ಸಿಗುವ ಹತ್ತನೇ ಮನೆಯ ಔಟ್ ಹೌಸಿನಲ್ಲಿ ಇರುವರೆಂದು ತಿಳಿಯಿತು.

ಹಜಾರದ ಒಂದು ಮೂಲೆಯಲ್ಲಿ ಮಂಚದ ಮೇಲೆ ಮಲಗಿದ್ದರು ಅರ್ಚಕರು. ಪಾರ್ಶ್ವವಾಯುವಿನಿಂದಾಗಿ ಅವರು ಮಾತಾಡಿದ್ದು ಅರ್ಥವಾಗುವುದು ಕಷ್ಟವಾಗಿತ್ತು. ಅರ್ಚಕರ ಪತ್ನಿಯ ಅಣ್ಣ ಅವರೊಟ್ಟಿಗೆ ಇದ್ದು ಮನೆಯ ಸಂಸಾರ ನಡೆಯಲು ಸಹಾಯ ಮಾಡುತ್ತಿದ್ದಾರೆಂದು ತಿಳಿಯಿತು. ಆತನೇ ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟರು. ರಂಗ ಒಬ್ಬನೇ ಮಗನಂತೆ. ಓದಿನ ಮೇಲೆ ಎಂದೂ ಗಮನ ಕೊಡಲಿಲ್ಲವಂತೆ. ಶಾಲೆಯಲ್ಲಿ ಕೆಟ್ಟ ಸಂಗದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಹೊಲಸು ಮಾತಾಡುವುದನ್ನು ಕಲಿತಿದ್ದನಂತೆ. ಓದೆಂದರೆ ಅಷ್ಟಕಷ್ಟೇ. ಮಾಸ್ತರೊಡನೆ ಜಗಳ. ಯಾರೊಡನೆಯೂ ಅಷ್ಟು ಸ್ನೇಹವಿಲ್ಲ.ಹಾಗಾಗಿ SSLCಯೂ ಮಾಡದೇ ಶಾಲೆ ಬಿಟ್ಟನಂತೆ. ಯಾವ ಕೆಲಸದಲ್ಲೂ ಹೆಚ್ಚು ಕಾಲ ನಿಲ್ಲದ ಮನುಷ್ಯನಂತೆ. ಅರ್ಚಕರು ಅವನ ಮೇಲಿನ ಆಸೆಯನ್ನೇ ಬಿಟ್ಟಿದ್ದರಂತೆ. ಇತ್ತೀಚಿಗೆ ಯಾವುದೊ ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತ ಅಲ್ಲೇ ಕಂಪ್ಯೂಟರ್ ಕಲಿಯುತಿದ್ದನಂತೆ. ಸೇರಿ ಇನ್ನೂ ೬ ತಿಂಗಳಾಗಿರಲಿಲ್ಲ,ಒಂದು ದಿನ ದಿಢೀರನೆ ಬಂದ ಪೊಲೀಸರು ಅವನನ್ನು ಬಂಧಿಸಿ ಯಾವುದೊ ಬ್ಯಾಂಕಿನ ದರೋಡೆ ಮಾಡಲು ಹೊಂಚು ಹಾಕಿದ್ದಾನೆಂದು ಆಪಾದನೆ ಮಾಡಿದ್ದರು. ಬ್ಯಾಂಕಿನ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡಿದ್ದು ನಿಜವೆಂದು ಅವನೇ ತಪ್ಪೊಪ್ಪಿಕೊಂಡಿದ್ದನಂತೆ., ಜೈಲಿನ ವಾತಾವರಣ ತಡೆಯಲು ಸಾಧ್ಯವಿಲ್ಲದೆ ಒಂದೆರಡು ಸಲ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಿದ್ದನೆಂದು ಹೇಳಿದರು. ಇದು ಬ್ಯಾಂಕ್ ದರೋಡೆಯ ಪ್ರಕರಣವಾದ್ದರಿಂದ ಯಾವ ಲಾಯರೂ ಈ ಕೇಸನ್ನು ಮುಟ್ಟಲು ಮುಂಬರಲಿಲ್ಲವೆಂದೂ, ಯಾರಾದರು ಬಂದಿದ್ದರೆ, ಅರ್ಚಕರ ಪತ್ನಿ ಸರ,ಮಾಂಗಲ್ಯವನ್ನು ಮಾರಿ ಹಣ ಒದಗಿಸಲು ಸಿದ್ಧವಾಗಿದ್ದರೆಂದೂ ತಿಳಿಸಿದರು. ಅಣ್ಣನವರ ಆರ್ಥಿಕ ಪರಿಸ್ಥಿತಿಯೂ ಅಷ್ಟಕಷ್ಟೇ. ಅರ್ಚಕರು ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ನಮಗೆ ಅರ್ಥವಾಗದೆ, “ಏನು ಹೇಳ್ತ ಇದಾರೆ?” ಕೇಳಿದೆ. “ಆ ಮನೆಹಾಳನ ವಿಚಾರ ಯಾಕೆ” ಅಂತಿದ್ದಾರೆ. ಅರ್ಚಕರು ಮಗನ ನಡವಳಿಕೆ ಮತ್ತು ವಿದ್ಯಮಾನಗಳಿಂದ ರೋಸಿ ಹೋಗಿದ್ದರು. ” ನನ್ನನ್ನು ಹೇಗೆ ಹುಡಿಕಿದೆಯಮ್ಮ?” ಪ್ರಶ್ನಿಸಿದೆ. ಇದೇ ಮೊದಲ ಬಾರಿಗೆ ಕಕ್ಷಿದಾರರೊಬ್ಬರು ನನ್ನನ್ನು ಹುಡುಕಿಕೊಂಡು ಬಂದಿದ್ದದ್ದು. “ಇತ್ತೀಚಿಗೆ ಮಕ್ಕಳ ಬೇಸಗೆ ಶಿಬಿರದ ಬಗ್ಗೆ ಕರಪತ್ರ ಮನೆಗೆ ಬಂದು ಬಿದ್ದಿತ್ತು. ಅದರಲ್ಲಿ ಶಿಬಿರದ ಉದ್ಘಾಟನೆಯನ್ನು ನಿವೃತ್ತ ಕಾನೂನು ತಜ್ಞರು ಮಾಡುತ್ತಿದ್ದಾರೆಂದು ನಿಮ್ಮ ಹೆಸರನ್ನುನೋಡಿದೆ. ನಾನು ದಿನವೂ ಹಾಲು ತರಲು ಹೋಗುವುದು ನಿಮ್ಮ ಮನೆಯ ಹಾದಿಯಾಗಿಯೆ. ಇವರೇ ಇರಬಹುದೇ ಎಂದು ಅವತ್ತು ನಿಮ್ಮ ಮನೆಯ ಬೋರ್ಡ್ ಅನ್ನು ನೋಡುತ್ತಿದ್ದಾಗ ನೀವು ಬಂದು ವಿಚಾರಿಸಿದಿರಿ” ಅಂದರು ಅರ್ಚಕರ ಪತ್ನಿ. ಮನೆಗೆ ವಾಪಸು ಬರುವಾಗ ನಾನು ಮತ್ತು ಪತ್ನಿ ಯಾವ ಮಾತನ್ನೂ ಆಡಲಿಲ್ಲ. ಯಾಕೆಂದರೆ ನಮ್ಮ ಮನಸ್ಸು ಅವರ ಪರಿಸ್ಥಿತಿಯನ್ನು ನೋಡಿ ವಿಷಾದದಿಂದ ಭಾರವಾಗಿತ್ತು. ಆ ಹುಡುಗನನ್ನು ಭೇಟಿ ಮಾಡಿ ನಿಜ ಸಂಗತಿ ಏನೆಂದು ತಿಳಿಯಬೇಕೆಂದು ನಿರ್ಧರಿಸಿದೆ.

“ರತ್ನಾಕರ್, ಅವತ್ತು ನನ್ನನ್ನು ಲಾಯರ್ ಮಾಡಿದ ಒಬ್ಬ ಹೆಂಗಸಿನ ಬಗ್ಗೆ ಹೇಳಿದ್ದೆ, ಜ್ಞಾಪಕವಿದೆಯಾ? ಇಂದು ಆ ಹುಡುಗನನ್ನು ಭೇಟಿ ಮಾಡ್ತಾ ಇದ್ದೀನಿ. ಬರ್ತೀಯ ಜೊತೆಗೆ?” ಕೇಳಿದೆ. ಬೆಂಗಳೂರಿನಲ್ಲಿ ನನಗೆ ಬೇಕಾದವನೆಂದರೆ ರತ್ನಾಕರನೊಬ್ಬನೆ. ಹಾಗೆಯೆ ಈ ಕೇಸಿನ ಬಗ್ಗೆಇದುವರೆಗೂ ತಿಳಿದ ವಿಷಯವನ್ನೆಲ್ಲ ಹೇಳಿದೆ. “ಅಂತೂ ರಿಟೈರ್ ಆದ ಮೇಲೆ ಲಾಯರ್ಗಿರಿ ಶುರು ಮಾಡಿದ್ದೀಯಾ. ಇವತ್ತು ಭಾನುವಾರವಾದ್ದರಿಂದ ನನಗೂ ವಿರಾಮ, ನಡಿ, ಹೋಗೋಣ” ಅಂದ. ” ಬ್ಯಾಂಕನ್ನು ಹಗಲೇ ದರೋಡೆ ಮಾಡಿದ ದೊಡ್ಡ ತಿಮಿಂಗಲಗಳು ದೇಶ ಬಿಟ್ಟು ಹಾರಿ ಹೋಗ್ತಾವೆ. ಇಂತಹ ಸಣ್ಣ ಮೀನುಗಳೇ ಸಿಕ್ಕಿಹಾಕಿಕೊಳ್ಳೋದು.” ಅಂದ ರತ್ನಾಕರ.

ಬೆಂಗಳೂರಿನ ಸೆಂಟ್ರಲ್ ಜೈಲ್ ಹೀಗಿರುತ್ತದೆ ಅಂತ ನನಗೆ ತಿಳಿದೇ ಇರಲಿಲ್ಲ. ಎದುರಿನ ಆವರಣದಲ್ಲಿ ಸುಂದರವಾದ ಕೈದೋಟ, ಜೈಲಿನ ಅಧಿಕಾರಿಗಳ ಕಚೇರಿ, ಖೈದಿಗಳೇ ಮಾಡಿದ ಕರಕುಶಲ ವಸ್ತುಗಳನ್ನು ಮಾಡುವ ಅಂಗಡಿ, ಖೈದಿ ಮತ್ತು ಮನೆಯವರು ಭೇಟಿ ಮಾಡಲು ಮನೆಯ ಹಜಾರದಷ್ಟೇ ದೊಡ್ಡದಾದ ಕೊಠಡಿ. ಒಟ್ಟಿನಲ್ಲಿ ಸಿನಿಮಾದಲ್ಲಿ ತೋರಿಸುವದಕ್ಕಿಂತ ಭಿನ್ನವಾಗಿತ್ತು. ಬೇರೆ ಖೈದಿಗಳಂತೆ ಹಜಾರದಲ್ಲಿ ನಮ್ಮನ್ನು ರಂಗನ ಭೇಟಿ ಮಾಡಿಸದೇ ಅವನ ಕೋಣೆಗೆ ಒಯ್ದರು. ಸಣ್ಣ ಕೊಠಡಿ, ಕಿಟಕಿಯೇನೂ ಇರಲಿಲ್ಲ. ನಿದ್ದೆಯಿಲ್ಲದೆ ಕೆಂಪಗಾದ, ಗುಳಿಬಿದ್ದ ಕಣ್ಣುಗಳು, ಕತ್ತರಿಸದೆ ಬೇಕಾಬಿಟ್ಟಿ ಬೆಳೆದಿದ್ದ ತಲೆಕೂದಲು, ಪೋಲೀಸರ ಒದೆತದಿಂದಾಗಿ ಮೈಯೆಲ್ಲ ಬಾಸುಂಡೆಗಳು, ಮೊಣಕೈ ಮೇಲೆ ರಕ್ತದ ಗೆರೆಗಳು ಕಂಡವು. ಸ್ವಂತ ಹಾನಿ ಮಾಡಿಕೊಂಡ ಕುರುಹು. ಹುಚ್ಚು ನಾಯಿ ಅಲೆದಂತೆ ಕೋಣೆಯೊಳಗೆ ಇತ್ತಲಿಂದ ಅಲ್ಲಿಗೆ, ಅತ್ತಲಿಂದ ಇತ್ತಲಿಗೆ ನೆಡೆದಾಡುತಿದ್ದ ರಂಗ. “ನೋಡೋ, ನಿನ್ನ ನೋಡೋಕೆ ಪಿರಿಯಾಪಟ್ಟಣದಿಂದ ಯಾರೋ ಬಂದಿದ್ದಾರೆ!” ನಮ್ಮನ್ನು ನೋಡಿದ ಕೂಡಲೇ ” ತತ್ ಥೇರಿ ಬೋಳಿಮಕ್ಕಳ. ಸಾರ್, ನಾನು ಅಂತ ತಪ್ಪೇನೂ ಮಾಡಿಲ್ಲ ಸಾರ್. ಬ್ಯಾಂಕನೋರು ದೊಡ್ಡ ಸಾಲ ತೊಗಂಡೋರನ್ನು ಬಿಟ್ಟು ಸಣ್ಣ ರೈತರನ್ನು ಪೀಡಿಸ್ತಿದ್ರಲ್ಲ. ಅವರನ್ನು ನಾಲ್ಕು ದಿನ ಆಡಿಸಿದ್ರೆ ಹೇಗೆ ಅಂತ ಚಿಕ್ಕ ಚೇಷ್ಟೆ ಮಾಡಿದೆ ಅಷ್ಟೇ. ಸೂಳೆ ಮಕ್ಳ, ತೂತ್ತೆರಿಕೆ. ಅದಾಗದೇ ಎಲ್ಲ ಸರಿ ಹೋಗ್ತಿತ್ತು. ಸಾರ್, ನನ್ನ ಇಲ್ಲಿಂದ ಕರ್ಕೊಂಡು ಹೋಗಿ ಸಾರ್. ಬೇವಾರ್ಸಿ ಮಕ್ಳ!” ಅವನ ಬಾಯಿಯಿಂದ ಸುರಿಯುತ್ತಿದ್ದ ಹೊಲಸು ನಿಂದನೆಗಳನ್ನು ಕೇಳಿ, ಪೊಲೀಸರು ಇವನನ್ನು ತದಕಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಅಂತ ಒಮ್ಮೆ ಅನ್ನಿಸಿದರೂ, ರಂಗನ ನಡುವಳಿಕೆಯು ಕಟುಕನ ಅಂಗಡಿಯಲ್ಲಿ ಕಟ್ಟಿ ಹಾಕಿದ ಮೇಕೆಯ ಹತಾಶ ಕೂಗಿನಂತೆ ಕಂಡಿತು. ಬ್ಯಾಂಕಿನ ಖಾತೆಗಳು ಸ್ಥಗಿತಗೊಂಡಾಗ, ಹಾಹಾಕಾರ ಉಂಟಾಗಿ, ಪೊಲೀಸ್ ವಿಚಾರಣೆ ನಡೆಸಿದಾಗ, ಇದರ ಮೂಲ ರಂಗ ಕೆಲಸ ಮಾಡುತಿದ್ದ ಅಂಗಡಿಯ ಕಂಪ್ಯೂಟರ್ ಎಂದು ಗೊತ್ತಾಗಿ ಅವನನ್ನು ಬಂಧಿಸಿದ್ದರಂತೆ. ಹಣಕಾಸಿನ ವ್ಯವಸ್ಥೆಯನ್ನೇ ಸಂಪೂರ್ಣ ಹಾಳುಗೆಡಸುವ ಸಂಭವವಿದ್ದರಿಂದ ಇದು ಘೋರ ಅಪರಾಧವೆಂದು ಪರಿಗಣಿಸಿ ದೀರ್ಘ ಕಾಲದ ಶಿಕ್ಷೆ ಖಚಿತವೆಂದು ಕಾಣುತ್ತಿತ್ತು. “ರತ್ನಾಕರ, ನಿನ್ನ ಸಮಯ ವ್ಯರ್ಥ ಮಾಡಿದ್ದಕ್ಕೆ ಸಾರಿ,” ಜೈಲಿನಿಂದ ವಾಪಸು ಬರುವಾಗ ಅಂದೆ. “ಛೆ, ಹಾಗೇಕೆ ಅಂತೀ, ಎಲ್ಲ ಒಳ್ಳೇದಕ್ಕೆ!”

ಅಕ್ಟೋಬರ್ ೨, ಗಾಂಧಿ ಜಯಂತಿ. ಸರಕಾರಿ ರಜೆಯಾದರೂ, ಕೆಲ ತುರ್ತಿನ ಮತ್ತು ದೇಶದ ರಕ್ಷಣೆಗೆ ಸಂಬಂಧ ಪಟ್ಟ ಮೊಕ್ಕದ್ದೊಮ್ಮೆಗಳನ್ನು ವಿಶಿಷ್ಟ ನ್ಯಾಯಾಲಯದ ಮುಂದೆ ತಂದಿದ್ದರು. ರಂಗನದೂ ಒಂದು. “ಮಿಲಾರ್ಡ್, ರಂಗನ ಅಪರಾಧ ಉದ್ದೇಶಪೂರ್ವಕವಲ್ಲ. ರಂಗ ಅನಾರೋಗ್ಯದ ಕಾರಣವಾಗಿ ಬಲಿಪಶುವಾದ ಒಬ್ಬ ನತದೃಷ್ಟ. ನಿಮ್ಮ ಮುಂದೆ ನಾನು ಡಾಕ್ಟರ್ ರತ್ನಾಕರ್ ಅವರ ವರದಿ ಪ್ರಸ್ತುತ ಪಡಿಸುತ್ತೇನೆ .” ರಂಗನಿಗೆ Asperger’s ಅನ್ನೋ ಖಾಯಿಲೆಯಿದೆ. ಅದರಿಂದಾಗಿ ಸಮಾಜದ ಬೇರೆಯವರ ಜೊತೆ ಬೆರೆಯುವುದು ಅವನಿಗೆ ಕಷ್ಟ. ಕೆಲ ವಿಷಯಗಳಲ್ಲಿ ಮಾತ್ರ ಅತಿ ಹೆಚ್ಚಿನ ಆಸಕ್ತಿಯೂ ಮತ್ತು ನಿಪುಣತೆಯೂ ಬೆಳೆಯುವುದು. ಕೆಲವೊಮ್ಮೆ ಕುತೂಹಲದಿಂದ ಏನೋ ಮಾಡಲು ಹೋಗಿ ತಪ್ಪಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ದುಷ್ಟ ಬುದ್ಧಿಯೇನೂ ಇರುವುದಿಲ್ಲ. ಇವರಿಂದಾಗಿ ಸಮಾಜಕ್ಕೆ ಅಪಾಯವೇನೂ ಇಲ್ಲ. ರಂಗನಿಗೆ tourett’ಸ್ ವ್ಯಾಧಿ ಕೂಡ ಇದೇ. ಇದರಿಂದಾಗಿ ಸಮಾಜ ಒಪ್ಪದ ಅಶ್ಲೀಲ ಅಥವಾ ಹೊಲಸು ಮಾತುಗಳು ಅವನ ನಿಯಂತ್ರಣವಿಲ್ಲದೆ ಬಾಯಿಂದ ಹೊರಬರುತ್ತದೆ. ಇದರಲ್ಲಿ ಅವನ ದುಷ್ಟ ಭಾವನೆಯೇನೂ ಇಲ್ಲ. ಈ ಖಾಯಿಲೆಗೆ ಔಷಧವಿಲ್ಲ. ಆದರೆ ಮಾನಸಿಕ ಚಿಕಿತ್ಸೆ ಮತ್ತು ಸರಿಯಾದ ವರ್ತನೆಯ ತರಬೇತಿ ಕೊಟ್ಟು, ಸಾಮಾನ್ಯ ಜೀವನ ನಡೆಸುವಂತೆ ಮಾಡಬಹುದು. ಹೀಗೆಂದು ಇದ್ದ ವಿವರವಾದ ವರದಿಯನ್ನು ನ್ಯಾಯಾಧೀಶರ ಮುಂದಿಟ್ಟೆ. “ಮಿಲಾರ್ಡ್, ಈ ಕಾರಣಕ್ಕಾಗಿ ಈ ಅಪರಾಧದಲ್ಲಿ ರಂಗನದು diminished responsibility. ಮಾನವೀಯತೆಯ ದೃಷ್ಟಿಯಿಂದ ಅವನ ಮೇಲೆ ಕರುಣೆ ತೋರಿಸಿ ಎಂದು ಕೇಳಿ ಕೊಳ್ಳುತ್ತೇನೆ”. ಪರಿಣಿತ ವೈದ್ಯರ ವರದಿ ನೋಡಿ ನ್ಯಾಯಾಧೀಶರು ನನ್ನ ವಾದವನ್ನು ಒಪ್ಪಿ, ಅವನ ಶಿಕ್ಷೆಯನ್ನು ಒಂದು ವರ್ಷಕ್ಕೆ ಕಡಿತ ಮಾಡಿದರು.

“ಹೇಗಿದ್ದಾನೆ ರಂಗ? ನಿನ್ನ ಏಕೈಕ client.” ೬ ತಿಂಗಳ ನಂತರ ಮತ್ತೊಂದು ಮದುವೆಯಲ್ಲಿ ಸಿಕ್ಕಾಗ ಕೇಳಿದ ರತ್ನಾಕರ. “ಒಳ್ಳೆ ತಿರುವು ಅವನ ಜೀವನದಲ್ಲಿ, ಯಾರೋ ಸರಕಾರಿ ಇಲಾಖೆಯವರು ಖಾರಾಗೃಹಕ್ಕೆ ರಂಗನನ್ನೇ ಹುಡುಕಿಕೊಂಡು ಬಂದಿದ್ದರಂತೆ. ಅವನಿಗೆ ಒಳ್ಳೆ ಕೋಣೆ ಕೊಡಿಸಿ, ಕಂಪ್ಯೂಟರ್ ತೆಗೆಸಿ ಕೊಟ್ಟುಈಗ ದೇಶದ್ರೋಹಿ ಉಗ್ರರ ಜಾಲಗಳನ್ನು ಬೇಧಮಾಡಲು ಅವನ ಸಹಾಯ ಪಡೀತಿದ್ದಾರಂತೆ. ಬಿಡುಗಡೆಯಾದ ಮೇಲೆ ಅದೇ ಕೆಲಸ ಮುಂದುವರಿಸಬಹುದಂತೆ. ಯಾರಿಗೂ ಹೇಳ ಬೇಡ ಅಂತ ಮಾತು ತೊಗೊಂಡಿದ್ದರೂ ನಿನಗೆ ಹೇಳಿದ. ಒಳ್ಳೆ ಹುಡುಗ. ನಿನ್ನ ತರಬೇತಿನಲ್ಲಿ ಈಗ ಹೊಲಸು ಮಾತಾಡುವುದನ್ನು ನಿಲ್ಲಿಸಿದ್ದಾನೆ. ಮಾತು ಮಾತಿಗೂ ಹರೇ ಕೃಷ್ಣ ಅಂತಿರ್ತಾನೆ. ” ” ಪರವಾಗಿಲ್ಲವೇ, ಬೋಣಿ ಕೇಸಲ್ಲೆ ಲಾಟರಿ ಹೊಡದಂತೆ! ” ಅಂದ ರತ್ನಾಕರ. “ರತ್ನಾಕರ, ಅದಕ್ಕಿಂತ ಹೆಚ್ಚಾಗಿ, ಅವನ ಮೊಕ್ಕದ್ದೊಮ್ಮೆಯಾದ ಮೇಲೆ ಅವರ ಮನೆಗೆ ಹೋಗಿದ್ದೆ. ಅರ್ಚಕರು ನನ್ನನ್ನು ಕರೆದು ಕೈ ಹಿಡಿದು “ಕಳೆದು ಹೋದ ಮಗನನ್ನು ನಂಗೆ ವಾಪಸು ತಂದು ಕೊಟ್ರಿ” ಅಂತ ಹೇಳಿ ಕಣ್ಣೀರಿಟ್ಟರು. ಅದುವೇ ನನ್ನ ದೊಡ್ಡ ಬಹುಮಾನ ಅನ್ನಿಸುತ್ತೆ.”

ಪ್ರಿಯ ಓದುಗರೇ, ಇತ್ತೀಚಿಗೆ ಕಣ್ಣುಪೊರೆಯ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ ರೋಗಿಗೆ tourett ಖಾಯಿಲೆ ಇರುವ ಸಂಗತಿ ತಿಳಿದಾಗ, ಈ ಕಥೆ ಬರೆಯುವ ಸ್ಪೂರ್ತಿ ಬಂತು.  ನಿಧಾನವಾಗಿ ಕಾಫಿ ಹೀರುತ್ತಾ ಈ ಹರಟೆಯ ಹುರುಗಾಳನ್ನು ಸವಿಯಿರಿ. ಅಪರೂಪದ ಅನುಭವಗಳನ್ನು ಹಂಚಿಕೊಳ್ಳಬೇಕೆನಿಸಿತು. ಈ ವಿಷಯದ ಬಗ್ಗೆ ನಿಮ್ಮದೇನಾದರೂ ಅಭಿಪ್ರಾಯವಿದ್ದರೆ ಬರೆಯಿರಿ. ಬಿಡುವು ಮಾಡಿಕೊಂಡು ಓದಿದ್ದಕ್ಕೆ ನನ್ನ ಧನ್ಯವಾದಗಳು.
ಮಂದಗೆರೆ ವಿಶ್ವನಾಥ್

6 thoughts on “ಕಾಫಿಯ ಜೊತೆಗಿಷ್ಟು ಹುರಿಗಾಳು

  1. ‘ಅನಿವಾಸಿ’ಯಲ್ಲಿ ಕತೆ ಓದಿ ತುಂಬಾ ತಿಂಗಳುಗಳಾಗಿತ್ತು. ಹೊಸ ಬರಹಗಾರರ ಕೊರತೆಯೂ ಇತ್ತು. ಎರಡನ್ನೂ ನೀವು ಪೂರ್ಣಗೊಳಿಸಿದ್ದೀರಿ.

    ನಿಮ್ಮ ಕತೆ ತುಂಬ ಸ್ವಾರಸ್ಯಕರವಾಗಿದೆ.

    ನಿಮ್ಮ ಕತೆಯನ್ನು ಓದಿ ನನಗೆ ಗೊತ್ತಿರುವ ಇಬ್ಬರು ನೆನಪಾದರು. ಒಬ್ಬರು, ನಮ್ಮ ಊರಿನವರು, ಬಾಯ್ಬಿಟ್ಟರೆ ಎಡೆಯಿಲ್ಲದ ಬಯ್ಗಳುಗಳು. ಇನ್ನೊಬ್ಬರು ನಮ್ಮ ಪ್ರೊಫೇಸರು! ಬಾಯ್ಬಿಟ್ಟರೆ ಸೊಂಟದ ಕೆಳಗಿನ ಮಾತುಗಳು!

    ಸರಾಗವಾಗಿ‌ ಓದಿಸಿಕೊಂಡು ಹೋಯಿತು.

    ಇನ್ನೂ ಬರೆಯುತ್ತಿರಿ.

    -ಕೇಶವ

    Like

  2. ನಿಮಗೆ ಕಥೆ ಬರೆಯುವ ಕಲೆ ದಕ್ಕಿದೆ. ಹಸನಮಾಡಿರಿ! ಅನುಭವನೂ ಇರಬೇಕಲ್ಲ. ಬರೆಯುತ್ತಿರಿ. ಆದರೆ ಎತ್ತಣ ಪೊರೆ, ಎತ್ತಣ ಟುರೆಟ್ಟು! ಆಪರೇಶನ್ ಸಮಯದಲ್ಲಿ ತಲೆ- ಮುಖದ tic ತೊಂದರೆ ಕೆಡಲಿಲ್ಲವೆ? GA!

    Like

  3. ಬಹಳ ಸ್ವಾರಸ್ಯಕರವಾಗಿದೆ. ಬರೆಯುವ ಆಸಕ್ತಿ ಹೀಗೆ ಮುಂದುವರೆಯಲಿ

    Like

Leave a comment

This site uses Akismet to reduce spam. Learn how your comment data is processed.