ಅಪೂರ್ವ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ

ಅಪೂರ್ವ ರಂಗಕರ್ಮಿ  ಮಾಸ್ಟರ್ ಹಿರಣ್ಣಯ್ಯ

15/02/1934 – 02/05/2019

ಕಳೆದ ೬ ದಶಕಗಳಿಂದ ಮಾಸ್ಟರ್ ಹಿರಣ್ಣಯ್ಯನವರು ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಕನ್ನಡ ರಂಗ ಭೂಮಿಯ ಸೇವೆ  ಸಲ್ಲಿಸಿದ್ದಾರೆ . ರಾಜಕೀಯ ವಿಡಂಬನೆ ಅವರ ನಾಟಕಗಳಲ್ಲಿ ಎದ್ದು ತೋರುತ್ತಿತ್ತು. ಅವರ ಲಂಚಾವತಾರ ಹನ್ನೊಂದು ಸಾವಿರ ಪ್ರದರ್ಶನಗಳನ್ನು ಕಂಡಿರುವುದು ಅದ್ವಿತೀಯ ಸಾಧನೆ. ಯಾವುದೇ ನಿರ್ದಿಷ್ಟವಾದ ಸ್ಕ್ರಿಪ್ಟ್ ಗೆ ಬದ್ಧರಾಗದೆ ಅಂದಿನ ರಾಜಕೀಯದ ಆಗು-ಹೋಗುಗಳನ್ನು ಗ್ರಹಿಸಿ ಅದಕ್ಕೆ ಲಘು ಹಾಸ್ಯವನ್ನು ಲೇಪಿಸಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಮಾಸ್ಟರ್ ಹಿರಣ್ಣಯ್ಯ ಅವರಿಗಿತ್ತು. ರಾಜಕಾರಣಿಗಳಿಗೆ ಅವರು ಅರ್ಥಾತ್ ‘ಮಾಸ್ಟರ್ ‘ ಎಂದರೆ ತಪ್ಪಾಗಲಾರದು. ಇಂತಹ ಅಪೂರ್ವ ಕಲಾವಿದ ಕಳೆದವಾರ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ‘ಅನಿವಾಸಿ’ ಬಳಗ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದೆ.

ಅವರ ಅಭಿಮಾನಿ ಸುಶಿಲೇಂದ್ರರಾವ್ ಹಿರಣ್ಣಯ್ಯ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು, ನಾನು ಹಿರಣ್ಣಯ್ಯ ಅವರ ಪರಿವಾರದ ಹಿತೈಷಿಯಾಗಿ ಮತ್ತು ಹಿಂದೆ ಅವರ ಫ್ಯಾಮಿಲಿ ವೈದ್ಯನಾಗಿ ಪಡೆದ ಕೆಲವು ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ವಾರದ ಕಣ್ಣೋಟದಲ್ಲಿ ಕೆಲವು ಮನೋಹರ ದೃಶ್ಯಗಳನ್ನು ಪತ್ತಾರ್ ಅವರು ಒದಗಿಸಿದ್ದಾರೆ

ಡಾ. ಶಿವಪ್ರಸಾದ್ (ಸಂ )

 

ನನ್ನ ನೆನಪಿನಲ್ಲಿ ಮಾಸ್ಟರ್ ಹಿರಣ್ಣಯ್ಯ 1

ಸುಶೀಲೇ೦ದ್ರ ರಾವ್.

ಮಾಸ್ಟರ್ ಹಿರಣ್ಣಯ್ಯನವರು ಕನ್ನಡ ರ೦ಗ ಭೂಮಿಯಲ್ಲಿ ಬಹುಕಾಲ ಜಯಭೇರಿ ಹೊಡೆದ ಕನ್ನಡ ನಾಡಿನ ನಾಟಕಕಾರರಾಗಿದ್ದರು. ಅವರ ಅಗಲಿಕೆ ಕನ್ನಡ ರ೦ಗಭೂಮಿಗೆ ಅಪಾರ ವಿಷಾದವನ್ನು ತ೦ದಿದೆ. ನಾನು ಅನೇಕ ಬಾರಿ ಅವರ ನಾಟಕ ಗಳನ್ನು ನೋಡಿ ಆನ೦ದಿಸಿದ್ದೇನೆ. ಅವರ ನಿಧನ
ನಾಟಕಾಭಿಮಾನಿಗಳಿಗೆ ಅಸಾಧ್ಯ ದುಃಖವನ್ನು ತ೦ದಿದೆ. ಅವರ ವಾಚಾಳಿತನ ನಟನೆ, ಕ್ಷಣಮಾತ್ರದಲ್ಲಿ ಮಾಡುವ ಸ೦ಭಾಷಣೆಗಳು ಹಾಸ್ಯ ಚಟಾಕಿಗಳು ಚಿರವಾಗಿ ಕನ್ನಡಿಗರಲ್ಲಿಉಳಿದಿವೆ. ಅವರ ಅಗಲಿಕೆ ಅವರ ಕುಟು೦ಬದವರಿಗೆ ಅಸದಳ ದುಃಖವನ್ನು ತ೦ದಿದೆ. ದಯಾಮಯನಾದ ಭಗವ೦ತನು ಅವರ ಕುಟು೦ಬದವರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಡುವುದಲ್ಲದೆ ಶ್ರೀಯುತರ ಆತ್ಮಕ್ಕೆ ಶಾ೦ತಿಯನ್ನು ಕೊಡಲೆ೦ದು ಆ೦ಗ್ಲ ನಾಡಿನ ಎಲ್ಲಾ
ಕನ್ನಡಿಗರ ಪರವಾಗಿ ಪ್ರಾಥಿ೯ಸುತ್ತೇನೆ.

ಮಾಸ್ಟರ್ ಹಿರಣ್ಣಯ್ಯ ಕನ್ನಡ ರ೦ಗ ಭೂಮಿಯಲ್ಲಿ ಬಹುಕಾಲ ಸಾಮಾಜಿಕ ನಾಟಕಗಳಲ್ಲಿ ಹೆಸರಾ೦ತ ನಟರು ಮತ್ತು ಹಿರಣ್ಣಯ್ಯ ಮಿತ್ರ ಮ೦ಡಳಿ ನಾಟಕ ಕ೦ಪನಿಯ ಮಾಲೀಕರಾಗಿ ಅನೇಕ ಚಿತ್ರ ರ೦ಗದಲ್ಲಿ ಸಹ ನಟಿಸಿ ಪ್ರಖ್ಯಾತಿ ಪಡೆದಿದ್ದರು. ಅವರ ನಾಟಕಗಳಲ್ಲಿ ಸಮಾಜದ ಹುಳುಕು ತೊಳಕುಗಳನ್ನು ಯಾರಿಗೂ ಹೆದರದೆ ಎತ್ತಿ ಹೇಳುತ್ತಿದ್ದರು. ಜಗವೇ ಒ೦ದು ರ೦ಗ ಭೂಮಿ, ನಾವೆಲ್ಲಾ ಪಾತ್ರಧಾರಿಗಳು ಎ೦ಬುದು ಅವರ ಮಾತು. “ರ೦ಗ ರತ್ನ” ಎನಿಸಿಕೊ೦ಡ ಅವರು ನೂರಾರು ಪ್ರಶಸ್ತಿ ಪಡೆದವರಾಗಿದ್ದರು. ಮಾತು ಮಾತಿನಲ್ಲೇ ಮರುಳು ಮಾಡಿ ನಗಿಸಿ ಸಮಾಜ ಹಾಗೂ ಸಕಾ೯ರದ ಲ೦ಚಕೋರತನ ಇವುಗಳನ್ನು ತಿದ್ದಲು ಪ್ರಯತ್ನಿಸಿದರು. ಹೀಗೆ ಅವರು ಸಮಾಜದ ಕನ್ನಡಿ ಹಾಗೂ ಸಮಾಜದ ಕಾವಲುಗಾರರಾಗಿದ್ದರು.

ರ೦ಗಭೂಮಿಯ ಮೇರು ಪವ೯ತವೆಂದು ಪರಿಗಣಿಸಲ್ಪಟ್ಟ  ಮಾಸ್ಟರ್ ಹಿರಣಯ್ಯ ಅಭಿನಯ ಚತುರರಾಗಿದ್ದರು. ಅವರು ಕರುನಾಡಿಗೆ ಸಲ್ಲಿಸಿದ ಸೇವೆ ಅಜರಾಮರ. ಅವರಅಗಲಿಕೆ, ಅವರ ಪತ್ನಿ ಹಾಗೂ ದೊಡ್ಡ ಕುಟು೦ಬದವರಿಗೆ ತು೦ಬಲಾರದ ದುಃಖವಾಗಿದೆ. ಅವರ ಬದುಕು ಆದಶ೯ ಎಲ್ಲವೂ ಅಮರ. ಮಾಸ್ಟರ್ ಹಿರಣ್ಣಯ್ಯನವರ ಅಗಲಿಕೆಯಿ೦ದ ರ೦ಗಭೂಮಿ ಅನಾಥವಾಗಿದೆ…….ಮತ್ತೆಹುಟ್ಟಿ….ಬಾ…. ಮಾಸ್ಟರ್ ಹಿರಣ್ಣಯ್ಯ!!

‘ದೇವದಾಸಿ’ ನಾಟಕದಿಂದ ನನ್ನ ನೆನಪಿನಲ್ಲಿ ಉಳಿದ ಸುರಾ ಪಾನದ ಪದ್ಯದ ಸಾಲು ಹೀಗಿದೆ;

ಸುಖವೀವ ಸುರಾ ಪಾನವಿದು ಸ್ವಗ೯ಸಮಾನ೦
ತೆಗೆದಾಡಿಸಿ ತಲೆ ತೂಗಿಸಿ ತಲಕಾಡಿಪ ಪಾನ೦
ತನು ತ೦ಪಿನ ಪಾನ೦ ಇದು ಇ೦ಪಿನ ಧ್ಯಾನ೦
ಸುರ ನಾರಿಯರ ತಲೆ ಹಾರಿಸಿ ಪರಿದೋಡಿಪ ಪಾನ೦,
ನರಲೋಕದೋಳೈತ೦ದಿರುವೀ ಅ೦ಮೃತ ಪಾನ೦
ಘನ ಸಕಾ೯ರದ ವರಮಾನದೊಳ್ ಇದಕುತ್ತಮ ಸ್ತಾನ೦
ನಮ್ಮಿ೦ಡಿಯದೋಳೆಲ್ಲರಿಗಿದು ದೈವ ಸಮಾನ೦

ತನು ತ೦ಪಿನ ಪಾನ೦
ನಶ್ವರ ಸ೦ಸಾರ ವ್ಯಾಮೋಹವ ಮರೆಸಿ
ವೇಶ್ಯಯ ಸುಖಜಾಲದ ಬರಿ ಮಾಳ್ಯೆಯೋಳಿರಿಸಿ
ಮನೆ ಮಠಗಳ ಮಾರಿಸಿ ಮನದಾಸೆಯ ಸಲಿಸಿ
ಕಡೆಗುಳಿದಾ ಕಾಲಕೆ ಸನ್ಯಾಸವ ಕೊಡಿಸಿ
ಬಹು ರೋಗದ ಋಣ ಭಾದೆಯೋಳ್ ಪ್ರಾಣವ ಬಿಡಿಸಿ
ನರಲೋಕಕೆ ಕರೆದೊಯ್ಯವ ಸುಲಭ ವಿಧಾನ೦

ತನುತ೦ಪಿನ ಪಾನ೦
ಗೌನ೯ಮೆ೦ಟ್ ಈಸ್ ವೆಲ್ಕಮಿ೦ಗ್ ಇಟ್ಸ ಇನಕ್ರೀಸಿ೦ಗ್ ಇನ್ಕಮ್
ಬೆಸ್ಟ ಪಾಸಿಬಲ್ ಬ್ಯಾಲೆನ್ಸಿ೦ಗ್ ಬ್ರೈನ್ ಸ್ಟಿಮ್ಯುಲೇಷನ್
ಇಫ್ ಎನಿಬಡಿ ವಾ೦ಟ್ ಎನಿ ತಿ೦ಗ್ ಎಲ್ಸ ಲೆಟ್ ದೆಮ್ ಕೊಶ್ಚನ್
ಮೈ ನೋಟಿಫಿಕೇಷನ್.

***

ನನ್ನ ನೆನಪಿನಲ್ಲಿ ಮಾಸ್ಟರ್ ಹಿರಣ್ಣಯ್ಯ 2

ಡಾ ಜಿ. ಎಸ್. ಶಿವಪ್ರಸಾದ್

ಸುಮಾರು ಎಂಬತ್ತರ ದಶಕದಲ್ಲಿ ನಾನು ಬನಶಂಕರಿ ಎರಡನೇ ಹಂತದಲ್ಲಿ ಖಾಸಗಿ ಪ್ರಾಕ್ಟೀಸ್ ನಲ್ಲಿದ್ದಾಗ ಒಂದು ದಿನ ಇನ್ನೇನು ಕ್ಲಿನಿಕ್ ಮುಚ್ಚುವ ವೇಳೆ ಆಗ ಒಬ್ಬ ಹಿರಿಯ ವ್ಯಕ್ತಿ ಕ್ಲಿನಿಕ್ ಹೊರ ಆವರಣದಲ್ಲಿ ಬಂದು ಕೂತರು. ಅವರು ಒಂದು ಸಿಲ್ಕ್ ಜುಬ್ಬ ಮತ್ತು ಕಾಟನ್ ಪಂಚೆ ಧರಿಸಿ ಎರಡೂ ಕೈ ಬೆರಳುಗಳಿಗೂ ಒಂದೊಂದೂ ಉಂಗುರ ಏರಿಸಿದ್ದರು. ಕುತ್ತಿಗೆಗೆ ೨ ಎಳೆಯ ಚಿನ್ನದ ಸರವನ್ನು ಹಾಕಿಕೊಂಡ ಅವರ ಹಣೆಯಲ್ಲಿ ದೊಡ್ಡದಾದ ಕುಂಕುಮ ಮತ್ತು ಅದರ ಮೇಲೆ ಒಂದೆರಡು ಬಿಳಿ ಅಡ್ಡಪಟ್ಟಿ ಇತ್ತು. ಬಹಳ ನಮ್ರವಾಗಿ ನನಗೆ ನಮಸ್ಕರಿಸಿದ ಆ ವ್ಯಕ್ತಿ ಖ್ಯಾತ ಮಾಸ್ಟರ್ ಹಿರಣ್ಣಯ್ಯ ಆಗಿದ್ದರು!

ಆಗತಾನೇ ಎಂ.ಬಿ.ಬಿ.ಎಸ್ ಮುಗಿಸಿದ ನಾನು ಕಿರಿಯ ವೈದ್ಯ,  ಹೀಗಾಗಿ ಶುರುವಿನಲ್ಲಿ ಹಿರಣ್ಣಯ್ಯ ಅವರಿಗೆ ಹಿರಿಯ ವೈದ್ಯರು ನೀಡಿದ್ದ ಸಲಹೆ ಅಂದರೆ ಬಿ. ಪಿ. ಚೆಕ್ ಮಾಡುವುದು, ಬಿ ಕಾಂಪ್ಲೆಕ್ಸ್ ಇಂಜೆಕ್ಷನ್ ಕೊಡುವುದಷ್ಟೇ ನನ್ನ ಕೆಲಸವಾಗಿತ್ತು. ಸಾಮಾನ್ಯವಾಗಿ ಅವರು ಕ್ಲಿನಿಕ್ ಮುಚ್ಚುವ ಹೊತ್ತಿಗೆ ಬಂದು ನನ್ನನ್ನು ಕಾಣುತ್ತಿದ್ದರು. ಕಾಲಕ್ರಮೇಣ ನಾನು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸ್ವಲ್ಪ ಅನುಭವ ಪಡೆದ ಮೇಲೆ ಅವರ ಮತ್ತು ಅವರ ಪರಿವಾರದವರ ಖಾಸಗಿ ವೈದ್ಯನಾಗಿಬಿಟ್ಟೆ. ನನ್ನ ವೈದ್ಯಕೀಯ ಪರಿಣತಿಯ ಮೇಲೆ ಅವರಿಗೆ ವಿಶ್ವಾಸ ಮೂಡಿತ್ತು. ಹೆಚ್ಚಿನ ಪರಿಚಯದ ನಂತರ ನಾವು ಆಪ್ತರಾದೆವು

ನನ್ನ ತಂದೆ ಜಿ. ಎಸ್ . ಎಸ್ ಮತ್ತು ಹಿರಣಯ್ಯ ನವರು ಹಲವಾರು ವೇದಿಕೆಗಳಲ್ಲಿ ಅತಿಥಿಗಳಾಗಿ ಅವರ ಪರಸ್ಪರ ಸ್ನೇಹ ವೃದ್ಧಿಯಾಗಿತ್ತು. ಅವರ ಪತ್ನಿ ಶಾಂತ ಮತ್ತು ನನ್ನ ತಾಯಿ ರುದ್ರಾಣಿಯವರು ಆಗ್ಗಾಗ್ಗೆ ಭೇಟಿ ಮಾಡುತ್ತಿದ್ದು ನಮ್ಮ ಪರಿವಾರದ ಮಿತ್ರರಾಗಿದ್ದರು. ನಮ್ಮ ಪಕ್ಕದ ರಸ್ತೆಯಲ್ಲಿ ಹಿರಣ್ಣಯ್ಯ ಮನೆಕಟ್ಟಿಕೊಂಡಿದ್ದರು.

ಹಿರಣ್ಣಯ್ಯನವರು ಅದೆಷ್ಟು ದೊಡ್ಡ ಕಲಾವಿದರಾಗಿದ್ದರೂ ಅವರಲ್ಲಿ ನಮ್ರತೆಯ ಸ್ವಭಾವ ಎದ್ದು ತೋರುತ್ತಿತ್ತು. ಸ್ಟೇಜಿನ ಮೇಲೆ ರಾಜಕಾರಣಿಗಳನ್ನು ಭಾವೋದ್ವೇಗದಿಂದ ತೀಕ್ಷ್ಣವಾಗಿ ಟೀಕಿಸುತ್ತಿದ್ದ ಹಿರಣ್ಣಯ್ಯ ಸ್ಟೇಜಿನ ಆಚೆ ನಯ ನಾಜೂಕಿನ ವ್ಯಕ್ತಿ. ಅವರ ವ್ಯಕ್ತಿತ್ವದಲ್ಲಿ ಒಂದು ಸರಳತೆ ಇತ್ತು. ನಾನು ಅವರ ಮನೆಗೆ ಹೋಮ್ ವಿಸಿಟ್ ಮಾಡಿದಾಗ ಹುಷಾರಿಲ್ಲದಿದ್ದರೂ ಬಾಗಿಲಿನವರೆಗೆ ಬಂದು ನಾನು ಬೇಡವೆಂದರೂ ಒತ್ತಾಯದಿಂದ ನನ್ನ ವಿಸಿಟಿಂಗ್ ಫೀಸ್ ಕೊಟ್ಟು ಬೀಳ್ಕೊಡುತ್ತಿದ್ದರು. ಗಣೇಶ ಗೌರಿ ಹಬ್ಬದ ಸಮಯದಲ್ಲಿ ಸಂಜೆ ನನಗೆ ಮತ್ತು ಪೂರ್ಣಿಮಾಗೆ ಅವರ ಮನೆಗೆ  ಆಹ್ವಾನವಿರುತ್ತಿತ್ತು. ಆಗ ಆರಾಮವಾಗಿ ಹರಟೆಯಲ್ಲಿ ತೊಡಗುತ್ತಿದ್ದವು. ಅದು ಒಂದು ಉಲ್ಲಾಸಕರ ಅನುಭವವಾಗಿದ್ದು, ನಾನು ಅವರ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದೆ.

ನಾನು ಗಮನಿಸಿದ ಇನ್ನೊಂದು ವಿಚಾರವೆಂದರೆ ಅವರು ವೃತ್ತಿಗೆ ಬಹಳ ನಿಷ್ಠರಾಗಿದ್ದರು. ಎಷ್ಟೋ ಬಾರಿ ತುರ್ತಾಗಿ ನನಗೆ ಕರೆ ಕಳುಹಿಸುತ್ತಿದ್ದರು. ಅವರಿಗೆ ವಿಪರೀತ ಜ್ವರ ಇರುತ್ತಿದ್ದು ನಾನು ಬೇಡವೆಂದರೂ ತಾವು ನಾಳೆ ಹಾಸನದಲ್ಲೋ ದಾವಣಗೆರೆಯಲ್ಲೋ ನಾಟಕಕ್ಕೆ ಒಪ್ಪಿಕೊಂಡಿರುವುದಾಗಿ ಹೋಗುವುದು ಅನಿವಾರ್ಯವೆಂದು ಹೇಳುತ್ತಿದ್ದರು. ಅವರು ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಕೊಂಡು ಪ್ರಯಾಣದಲ್ಲಿ ಅಲ್ಪ ಸ್ವಲ್ಪ ವಿಶ್ರಾಂತಿ ಪಡೆದು ‘ಶೋ ಮಸ್ಟ್ ಗೋ ಆನ್’ ಎಂದು ಛಲ ಹಿಡಿದು ನಾಟಕ ಮುಗಿಸಿ ಬರುತ್ತಿದ್ದರು!  ಅವರು ಅನ್ನದಾತರೆಂದು ಪರಿಗಣಿಸುತ್ತಿದ್ದ ಅವರ ಪ್ರೇಕ್ಷಕ ಅಭಿಮಾನಿಗಳನ್ನು ಎಂದು ನಿರಾಶೆ ಗೊಳಿಸಿದವರಲ್ಲ.

೨೦೦೭ ರಲ್ಲಿ ಯು. ಕೆ. ಕನ್ನಡ ಬಳಗದ ಮುಖ್ಯ ಅತಿಥಿ ಗಳಾಗಿ ಹಿರಣ್ಣಯ್ಯನವರು ಆಗಮಿಸಬೇಕಿತ್ತು. ನಾನು ಬೆಂಗಳೂರಿನಲ್ಲಿ ಭೇಟಿಯಾದಾಗ ಖಂಡಿತ ಬರುವುದಾಗಿ ತಿಳಿಸಿದ್ದರು. ವೀಸಾ ತೊಂದರೆಗಳಿಂದ ಅವರು ಬರಲಿಲ್ಲ. ಆಗ ನಮ್ಮ ಬಳಗಕ್ಕೆ ಒಂದು ದೀರ್ಘ ಸಂದೇಶವನ್ನು ಕಳುಹಿಸಿದ್ದರು. ಅವರು ಹಿಂದೊಮ್ಮೆ ಇಂಗ್ಲೆಂಡಿಗೆ ಬಂದು ನಾಟಕವಾಡಿದ್ದರು ಎಂಬ ವಿಚಾರವನ್ನು ನಾನು ಡಾ ಭಾನುಮತಿಯವರಿಂದ ತಿಳಿದುಕೊಂಡೆ.

ನನ್ನ ತಂದೆ ಜಿ. ಎಸ್. ಎಸ್. ತಮ್ಮ ಕೊನೆ ಘಳಿಗೆಯಲ್ಲಿ ಹಾಸಿಗೆ ಹಿಡಿದು ಅನಾರೋಗ್ಯ ಉಲ್ಪಣಗೊಂಡು ಅರೆಬರೆ ಪ್ರಜ್ಞೆಯಲ್ಲಿದ್ದು ಅವರಿಗೆ ಮನೆಯಲ್ಲೇ ಶುಶ್ರೂಷೆ ನಡೆದಿತ್ತು. ಆಗ ಹಿರಣ್ಣಯ್ಯನವರು ಅವರನ್ನು ನೋಡಲು ಬಂದಿದ್ದರು, ನಾನು ಆಗ ತಂದೆಯವರ ಬಳಿಯಲ್ಲಿದ್ದೆ, ‘ಅಣ್ಣಾ ನೋಡಿ ಹಿರಣ್ಣಯ್ಯ ಬಂದಿದ್ದಾರೆ’ ಎಂದೆ, ಯಾವ ಪ್ರತಿಕ್ರಿಯೆ ಕಾಣಲಿಲ್ಲ. ಹಿರಣಯ್ಯನವರು ನಮಸ್ಕಾರ ಎಂದು ಜಿ. ಎಸ್. ಎಸ್. ಅವರ ಕೈ ಮುಟ್ಟಿದರು ಅದಕ್ಕೂ ಯಾವ ಪ್ರತಿಕ್ರಿಯೆ ಇಲ್ಲ !! ಡಾಕ್ಟರೇ ನಾನು ನಿಮ್ಮ ತಂದೆಯ ಕಣ್ಣು ಬಿಡಿಸುತ್ತೇನೆ ನೋಡಿ ಎಂದು  ಹಿರಣ್ಣಯ್ಯನವರು ಜಿ. ಎಸ್. ಎಸ್. ಅವರ ‘ಉಡುಗಣ ವೇಷ್ಟಿತ ಚಂದ್ರಸುಶೋಭಿತ’ ಕವನವನ್ನು ಜೋರಾಗಿ ಹಾಡತೊಡಗಿದರು. ಜಿ. ಎಸ್. ಎಸ್ ಒಂದೆರಡು ಬಾರಿ ದೊಡ್ಡದಾಗಿ ಕಣ್ಣರಳಿಸಿದರು! ಪ್ರತಿಯಾಗಿ ಹಿರಣ್ಣಯ್ಯನವರು ಕೈ ಮುಗಿದರು. ತುಂಬಾ ಕ್ಷೀಣವಾಗಿದ್ದ  ಜಿ. ಎಸ್. ಎಸ್ ಒಂದೆರಡು ಕಣ್ಣು ಮಿಟುಕಿಸಿ ಬಹುಶಃ ತಮ್ಮ ಧನ್ಯತೆಯನ್ನು ತೋರಿಸಿದ್ದಿರಬಹುದು. ಕ್ಷಣದಲ್ಲೇ ಮತ್ತೆ ಅವರು  ನಿದ್ದೆಗೆ ತೊಡಗಿದರು. ಬಹಶಃ ಆ ಘಳಿಗೆ ಬನಶಂಕರಿ ಬಡಾವಣೆಯ ಖ್ಯಾತ ನಿವಾಸಿಗಳು ಹಾಗೂ ಮಿತ್ರರು ಒಬ್ಬರನ್ನೊಬ್ಬರಿಗೆ ವಿದಾಯ ಹೇಳಿದ ಕ್ಷಣವಾಗಿರಬಹುದು. ಈಗ ಹಿರಣ್ಣಯ್ಯನವರು ಮತ್ತು ಜಿ. ಎಸ್. ಎಸ್. ಇಬ್ಬರೂ ಇಲ್ಲ !
ಇರುವುದು ಜಿ. ಎಸ್. ಎಸ್. ಅವರ ಕವಿತೆ, ಹಿರಣ್ಣಯ್ಯನವರ ನಾಟಕಗಳ ಮತ್ತು ವ್ಯಕ್ತಿತ್ವದ ನೆನಪುಗಳಷ್ಟೇ.

ಬನಶಂಕರಿ ಬಡಾವಣೆಯಲ್ಲಿನ ಒಂದು ಪ್ರಮುಖ ಪಾರ್ಕಿನಲ್ಲಿ ಜಿ. ಎಸ್. ಎಸ್ ಅವರ ಪುತ್ಥಳಿಯ ಅನಾವರಣವಾಗಿದೆ ಅದರ ಪಕ್ಕಕ್ಕೆ ಹಿರಣ್ಣಯ್ಯನವರ ಪುತ್ಥಳಿ ಪ್ರತಿಷ್ಠಾಪನೆಗೊಳ್ಳಲ್ಲಿ ಎಂದು ಆಶಿಸೋಣ.

“ತುಳಿದು ಬಾಳುವುದಕ್ಕಿಂತ ತಿಳಿದು ಬಾಳುವುದು ಒಳ್ಳೆಯದು
ತುಳಿದು ಬಾಳುವವನು ಅಳಿದು ಹೋಗುತ್ತಾನೆ
ತಿಳಿದು ಬಾಳುವವನು ಅಳಿದಮೇಲೂ ಉಳಿಯುತ್ತಾನೆ”
– ಮಾಸ್ಟರ್ ಹಿರಣ್ಣಯ್ಯ

***

 

__________________________________________________________________________________

ಕಣ್ಣೋಟ 

ಜಯಪ್ರಕಾಶ ಪತ್ತಾರರು ಸೆರೆಹಿಡಿದ ಅರೋರಾ ಬೋರಿಯಾಲಿಸ್ (ನಾರ್ತರ್ನ್ ಲೈಟ್ಸ್). ಅರೋರಾ, ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಕತ್ತಲ ಆಗಸವನ್ನು ಹೊಳಪಿಸುವ ವಿಸ್ಮಯ ಬೆಳಕು. ಐಸ್ಲ್ಯಾಂಡ್ ದೇಶದ ತಮ್ಮ ಪ್ರವಾಸದಲ್ಲಿ ಆಸಕ್ತಿಯಿಂದ ಇದನ್ನು ಸೆರೆಹಿಡಿಡಿರುವ ಪತ್ತಾರರು, ಅನಿವಾಸಿಯೊಂದಿಗೆ ಈ ಆಕರ್ಷಕ ಚಿತ್ರಗಳ ಜೊತೆಗೆ, ಅವನ್ನು ಸೆರೆಹಿಡಿಯುವ ತಂತ್ರವನ್ನು ಸಹ ಹಂಚಿಕೊಂಡಿದ್ದಾರೆ. ಮಂದ ಬೆಳಕಿನಲ್ಲಿ ಫೋಟೋ ತೆಗೆಯುವ ಆಸಕ್ತರಿಗೆ ಇದೊಂದು ಉತ್ತಮ ಉದಾಹರಣೆ ಮತ್ತು ಉಪಯುಕ್ತ ಮಾಹಿತಿ. 

ಪತ್ತಾರರ ಮಾತುಗಳಲ್ಲಿ:

image.pngಅರೋರಾ ಬೆಳಕು ಕಾಣಿಸುವದಕ್ಕೆ ಸೌರಮಾರುತದ ಕಣಗಳ ಉತ್ತೇಜನವೆಂದು ವಿಜ್ಞಾನ ತಿಳಿಸಿದ್ದರೂ ಮನಸ್ಸೇಕೋ ನಾರ್ಡಿಕ್ ಸಮುದಾಯದ ದಂತಕಥೆಗಳನ್ನೇ ನಂಬಬಯಸುತ್ತದೆ. ತೀರಿ ಹೋದ ಪೂರ್ವಜರ ಮತ್ತು ಮಿತ್ರರ ಆತ್ಮಗಳು ಪುನಃ ಭೇಟಿ ಮಾಡಲು ಭೂಮಿಗೆ ಬರುವದರ ಚಿನ್ಹೆ ಎಂದು ಅವರ ನಂಬಿಕೆ. ಕೊರೆವ ಚಳಿ, ಬೀಸುವ ಗಾಳಿಯ ದಟ್ಟ ಕಪ್ಪು ರಾತ್ರಿಯಲ್ಲಿ ಮೋಡ ಸರಿದಾಕ್ಷಣ ಮಂದ ಹಸಿರಿನ ಬಣ್ಣದ ಬೆಳಕು ಘಾಡವಾಗುತ್ತ ಬಾನಂಗಳದಲ್ಲಿ ಕುಣಿದಾಡಿ ನೇರಳೆ, ಕೆಂಪು ಬೆಳಕಿನ ಸೆರಗು ತೋರಿಸಿ ವಿಸ್ಮಯಗೊಳಿಸುವ ಪರಿ ವರ್ಣಿಸಲು ಕಷ್ಟಕರ.

 

ಚಿತ್ರ ತೆಗೆಯಲು ಸಹಾಯಕ ಅಂಶಗಳು.
೧. ಟ್ರೈಪೋಡ್ ಅತ್ಯವಶ್ಯ.
೨. ಸಾಧ್ಯವಿದ್ದಷ್ಟು ಕಡಿಮೆ f ನಂಬರ್
೩. ಮಾನ್ಯುಯಲ್ ಫೋಕಸ್  Infinityಗೆ
೪. ೧೦ ರಿಂದ ೨೦ ಸೆಕೆಂಡ್ಸ್ exposure
೫. ರಿಮೋಟ್ ರಿಲೀಸ್ ಅಥವಾ ಟೈಮರ್

image.png 18mm f/3.5, 20 sec, ISO 800

 

image.png

35mm, f/4, 25 Sec ISO 1600: ಕೆಪ್ಲಾವಿಕ್ ಊರಿನ ಸಮುದ್ರ ತೀರದಲ್ಲಿ ಹಳೆಯ ಕಾಲದ ಮಾದರಿಯ ನೌಕಾಯಾನದ ದೋಣಿಯ ಮುನ್ನೆಲೆಯೊಂದಿಗೆ ಮೋಡಗಳ ಪಟ್ಟಿಯ ಹಿಂದಿನಿಂದ ತೂರಿ ಬರುತ್ತಿರುವ ಅರೋರಾ ಬೆಳಕು.

6 thoughts on “ಅಪೂರ್ವ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ

  1. ಹಿರಣ್ಣಯ್ಯನವರ ನೆನಪುಗಳನ್ನು ಹಂಚಿಕೊಂಡ ಇಬ್ಬರಿಗೂ ಧನ್ಯವಾದಗಳು.

    ನಾನು ಅವರ ಯಾವ ನಾಟಕವನ್ನೂ ನೋಡಿಲ್ಲ, ಆದರೆ ಅವರ `ಲಂಚಾವತಾರ`, `ಫೋನಾವತಾರ` ಮತ್ತು `ನಡುಬೀದಿ ನಾರಾಯಣ` ನಾಟಕಗಳನ್ನು ನೂರಾರು ಬಾರಿ ಕೇಳಿದ್ದೇನೆ.

    ಅವರ ಅಸ್ಖಲಿತ ವಾಗ್ಝರಿ ಮತ್ತು ವ್ಯಂಗ್ಯ… ಅಚ್ಚಳಿಯದ ನೆನಪುಗಳು.

    – ಕೇಶವ

    Like

  2. ಹಿರಿಣ್ಣಯ್ಯನವರ ಕೊನೆಯ ಭಾಷಣ ಮೈಸೂರಿನಲ್ಲಿ ಐದು ವರ್ಷದ ಹಿಂದೆ. ಆಗಿನ ಮುಖ್ಯ ಮಂತ್ರಿ ಆಗಿದ್ದ ಸಿದ್ಧರಾಮಯ್ಯ ನವರ ಬಗ್ಗೆ ಟೀಕೆ ಮಾಡಿದಾಗ ಮಂತ್ರಿಗಳ ಕೆಲವು “ಹಿತೈಶಿಗಳು” ಇವರ ಮೇಲೆ
    ಕೈವಾಡ ಮಾಡಿ ಮಂತ್ರಿಗಳ ಕ್ಷೇಮೆ ಬೇಡುವಂತ ಪರಿಸ್ಥಿತಿ ಬಂತು. ಅವತ್ತಿನಿಂದ ಇವರ ಈ ನಿರ್ಧಾರ.
    ರಾಜಕಾರಿಣಿಗಳ ಮೇಲೆ ಆರೋಪ ಅಥವಾ ಟೀಕೆ ಮಾಡುವುದು ಇವರಿಗೆ ಏನೊ ಹೊಸದಿಲ್ಲ. ಉದಾಹರಣೆಗೆ, ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ದೇವೆ ಗೌಡರು ಬರಿ ಮಣ್ಣಿನ ಮಗ ಅಲ್ಲ ಜೇಡಿ ಮಣ್ಣಿನ ಮಗ ಅಂದಾಗ ಅವರಮೇಲೆ ಯಾರೂ ಹಲ್ಲೆ ನಡಸಲಿಲ್ಲ. ಇದೆ ರೀತಿ ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಹಿರಣ್ಣಯ್ಯ ಒಂದು ಸಭೆಯಲ್ಲಿ ಅವರ ಮೇಲೆ ಅಪವಾದ ಮಾಡಿದರು. ಇದನ್ನು ಕೇಳಿ ಮುಖ್ಯ ಮಂತ್ರಿಗಳಿಗೆ ಬೇಜಾರಾಗಿ ಇವರನ್ನ ವಿಧಾನಸೌದ ಕ್ಕೆ ಕರೆಸಿ “ಏನೊ ನರಸಿಂಹಮೂರ್ತಿ ( ಹಿರಣ್ಣಯ್ಯ. ನವರ ನಿಜವಾದ ಹೆಸರು ) ನನ್ನ ಮೇಲೆ ಈ ಸುಳ್ಳು ಅಪವಾದ
    ಮಾಡಿದ್ದೀಯಾ ” ಅಂದರಂತೆ.

    ಭಾನುಮತಿ ಅವರು ಹೇಳಿದಂತೆ ಮನೆಯವರ ಜೊತೆ ೧೯೯೬;ರಲ್ಲಿ ಇಲ್ಲಿಗೆ ಅಮೇರಿಕ ಪ್ರವಾಸ ಮುಗಿಸಿ ಬಂದರು.
    ದುರಾದ್ರಷ್ಟ ದಿಂದ ಲಂಡನ್ಅನುಭಾವ ಇವರಿಗೆ ಸಮಾಧಾನ ವಾಗಲಿಲ್ಲ . ಉಳಿಯುದಕ್ಕೆ ಸರಿಯಾದ ಜಾಗ ಇಲ್ಲದೆ ಸ್ವಲ್ಪ ಕಷ್ಟ ಪಟ್ಟರು.

    ರಂಗಭೂಮಿಗೆ ಹಿರಣ್ಣಯ್ಯನವರು ಮಾಡಿದ ಸೇವೆ ಯಾರಿಂದಲೂ ಮರೆಯಲು ಸಾಧ್ಯವಿಲ್ಲ RIP
    Ramamurthy, Basingstoke

    Like

  3. ಜಯಪ್ರಕಾಶ್ ಪತ್ತಾರರ ಅರೋರಾ ಬೋರಿಯಾಲಿಸ್ ಫೋಟೋಗಳು ಅತಿ ಸುಂದರವಾಗಿವೆ. ಇದನ್ನು ನಮ್ಮೊಡನೆ ಹಂಚಿಕೊಂಡದ್ದಕ್ಕೆ ಅವರಿಗೆ ಧನ್ಯವಾದಗಳು.
    Uma Venkatesh

    Liked by 1 person

  4. ೭೦ರ ದಶಕದಲ್ಲಿ ನನ್ನ ಶಾಲಾ ದಿನಗಳಲ್ಲಿ ಮಾಸ್ತರ ಹಿರಣ್ಣಯ್ಯನವರ ನಡುಬೀದಿ ನಾರಾಯಣ ನಾಟಕ ಪ್ರದರ್ಶನ ನಡೆಯುತ್ತಿತ್ತು. ಆ ಸಮಯದಲ್ಲಿ ಕರ್ನಾಟಕದಲ್ಲಿ ದಿ. ದೇವರಾಜ ಅರಸ್ ಅವರ ಆಡಳಿತ ನಡೆದಿತ್ತು. ಅವರ ಮಂತ್ರಿಮಂಡಲದ ಸದಸ್ಯರನ್ನು ಹೀನಾಮಾನವಾಗಿ ಟೀಕಿಸುತ್ತಿದ್ದ ಹಿರಣ್ಣಯ್ಯ ಅವರ ಭಾಷಣದ ವೈಖರಿಯನ್ನು ನನ್ನ ತಂದೆ ಮತ್ತು ಚಿಕ್ಕಪ್ಪ ಸದಾ ಚರ್ಚಿಸುತ್ತಿದ್ದ ದಿನಗಳು ನನ್ನ ಮನದಲ್ಲಿ ಹಸಿರಾಗಿವೆ. ನಮ್ಮನ್ನು ಅವರ ನಾಟಕಗಳಿಗೆ ಕರೆದೊಯ್ಯುತ್ತಿರಲಿಲ್ಲ. ಹಾಗಾಗಿ ನಾನು ಅವರ ನಾಟಕವನ್ನು ಎಂದು ನೋಡಲೇ ಇಲ್ಲ! ೭೦ರ ದಶಕದ ಕೊನೆಯಲ್ಲಿ ಬಿಡುಗಡೆಯಾಗಿದ್ದ ಅವರ ದೇವದಾಸಿ ಸಿನಿಮಾ ನೋಡಿದ್ದೇ. ಅದರಲ್ಲಿ ಅವರ ನಾಜೂಕಯ್ಯನ ಪಾತ್ರ ನಿರ್ವಹಣೆ ನೋಡಿದಾಗ ಅವರ ಪ್ರತಿಭೆಯ ಪ್ರಖರತೆ ಅರಿವಾಗಿತ್ತು. ೮೦ರ ದಶಕದಲ್ಲಿ ಬಂದ “ಆನಂದಸಾಗರ” ಸಿನಿಮಾದಲ್ಲಿ ಕೆಲಸ ಮಾಡದೇ ಮನೆಯಲ್ಲಿ ಕುಳಿತು ತಿನ್ನುವ ಉಂಡಾಡಿ ಗುಂಡನ ಪಾತ್ರದಲ್ಲಿ ಅವರು ನಿಜಕ್ಕೂ ಮಿಂಚಿದ್ದರು. ಅವರ ಸಂಭಾಷಣೆಯನ್ನು ಕೇಳಿದೊಡನೆ ತಿಳಿಯುತ್ತಿತ್ತು, ಅವರೊಂದು ಆಶುಭಾಷಣ ಕಲೆಯ ಮಹದ್ ಪ್ರತಿಭೆ ಎಂದು. ಅವರ ನಿರರ್ಗಳ ಮಾತಿನ ವೈಖರಿಯನ್ನು ಒಮ್ಮೆ ಕೇಳಿದವರಿಗೆ ಅದನ್ನು ಮರೆಯುವ ಸಾಧ್ಯತೆಯೇ ಇಲ್ಲ. ಅಂದು ಆಕಾಶವಾಣಿಯಲ್ಲಿ ರಾತ್ರಿ ೯ ಗಂಟೆಗೆ ರಾಷ್ಟೀಯ ನಾಟಕ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದ್ದ ಅವರ ಲಂಚಾವತಾರ, ಭ್ರಷ್ಟಾಚಾರ ಮತ್ತು ನಡುಬೀದಿ ನಾರಾಯಣ ನಾಟಕವನ್ನು ಕೇಳಿದ್ದ ನನಗೆ ಹಿರಣಯ್ಯನವರ ಬಗ್ಗೆ ಯಾವತ್ತೂ ಬಹಳ ಹೆಮ್ಮೆಯೆನಿಸುತ್ತಿತ್ತು. ಎಲ್ಲ ನಾಟಕದ ವ್ಯಕ್ತಿಗಳಿಗೂ ಇರುವ ಹಲವಾರು ಚಟಗಳಂತೆ, ಹಿರಣಯ್ಯನವರೂ ಮದಿರಾಪಾನಕ್ಕೆ ಹೆಸರಾದವರು. ಅದನ್ನು ಮಾಡಿಯೇ ಸ್ಟೇಜಿನ ಮೇಲೆ ಬರುತ್ತಿದ್ದರೆಂದು ಇಂದಿಗೂ ಜನ ಹೇಳುತ್ತಾರೆ. ಅದೇನೇ ಆಗಲಿ, ಕನ್ನಡ ಸಂಸ್ಕೃತಿ ಪ್ರಪಂಚಕ್ಕೆ ಅವರ ನಿಧನ ದೊಡ್ಡ ನಷ್ಟ. ಆದರೆ ತುಂಬು ಜೀವನ ನಡೆಸಿ ಗಳಿದರು ಎನ್ನುವುದು ಸಮಾಧಾನಕರ ಸಂಗತಿ. ಮತ್ತೊಬ್ಬ ಹಿರಣ್ಣಯ್ಯನವರನ್ನು ಕಾಣಲು ಇನ್ನೊಂದು ಶತಮಾನವೇ ಬೇಕೇನೋ!
    ಕನ್ನಡ ನಾಡಿನ ಆಶು ಕವಿ ಸರ್ವಜ್ಞನಂತೆ, ಮಾಸ್ಟರ್ ಹಿರಣ್ಣಯ್ಯನವರನ್ನು ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಕರೆಯೋಣವೇ!
    ಉಮಾ ವೆಂಕಟೇಶ್

    Liked by 1 person

  5. Master Hirannaiah and Baabu Hirannaiah performed 2 plays in Durham organaised by Drs Nath under Kannada Balaga banner in 1996 and they spent a whole week at our place in Glossop after. Our group from Kannada Balaga organized their play in Manchester too. We have sweet memories of the family from then and Appaji and I have regularly visited them in Bangalore every year except in 2019 and we have become good friends. Master H regularly sent us cards with excellent messages during Deepavali for some years but unfortunately not retained any

    Unfortunately they both were refused Visa the previous day of travel for KB’s Deepavali event in Birmingham in 2007. It was very disappointing for all of us and we had to do with reading out the special letter from Master H instead. He always mentioned about getting a visa for an European tour and coming to UK to perform.

    We have lost a great and talented person

    Liked by 1 person

Leave a comment

This site uses Akismet to reduce spam. Learn how your comment data is processed.