ಹಳೆ ಬೇರು ಹೊಸ ಚಿಗುರು….

ಹಳೆಯದನ್ನೆಲ್ಲ ಹೊಸದಾಗಿಸುವ ಬದಲಾವಣೆಯ ಗಾಳಿ ಮತ್ತೆ ಬೀಸುತ್ತಿದೆ. ಯಾವತ್ತಿನಂತೆ ಮಾರ್ಚ್ ತಿಂಗಳು ತನ್ನ ೩೧ ದಿನಗಳು ಕಳೆದ ನಂತರ ಹೊಸ ಏಪ್ರಿಲ್ ತಿಂಗಳಿಗೆ ಜವಾಬ್ದಾರಿ ದಾಟಿಸಿ ಮರೆಯಾಗಿದೆ. ಹೊಸ ಆರ್ಥಿಕ ವರ್ಷ ಆರಂಭವಾಗಿದೆ; ವಿಕಾರಿ ಸಂವತ್ಸರದ ಯಾನ, ಚಾಂದ್ರಮಾನ ಯುಗಾದಿಯೊಂದಿಗೆ, ಏಪ್ರಿಲ್ ೬ಕ್ಕೆ ಆರಂಭವಾಗಲಿದೆ; ಹಗಲನು ಹೆಚ್ಚಿಸುತ್ತ ಬೆಳೆಯುವ ಚೈತ್ರ, ಚಳಿಯಲ್ಲಿ ಮುರುಟಿದ್ದ ಮರಗಳಿಗೆ ಹೊಸ ಚಿಗುರನ್ನು ಮುಟ್ಟಿಸಿ ಹೂವರಳಿಸಲಿದೆ. ಇವೆಲ್ಲದರ ನಡುವೆ,  ಬ್ರೆಕ್ಸಿಟ್ಟಿನ ರಾಜಕೀಯ ಬೆಳೆಯುತ್ತಲೇ ಇದೆ – ಹನುಮಂತನ ಬಾಲದಂತೆ. ಬಾಲಕ್ಕೆ ಬೆಂಕಿ ಹಚ್ಚಿದರೆ ಆಗುವ ರಾಮಾಯಣ ತಿಳಿದಿರುವ ಕೆಲವರಾದರೂ ಪಾರ್ಲಿಮೆಂಟಿನಲ್ಲಿ ಇದ್ದಾರೆ ಅನ್ನುವದೆ ಸಮಾಧಾನ.

 

ಯುಗಾದಿ ಹಬ್ಬ UKಯ ಕನ್ನಡಿಗರ ಗುಂಪುಗಳಲ್ಲಿ ಲವಲವಿಕೆಯ ಚೇತನವನ್ನ ಚಿಗುರಿಸುತ್ತದೆ. ೧೯೮೩ರಲ್ಲಿ ಶುರುವಾದ ಕನ್ನಡ ಬಳಗ, ೨೦೦೪ರ ಸುಮಾರಿಗೆ ಹುಟ್ಟಿದ ಕನ್ನಡಿಗರು ಯುಕೆ ಹಾಗೂ ಇತ್ತೀಚಿಗೆ ಬೆಳೆಯುತ್ತಿರುವ ಲೆಸ್ಟರ್ ಕನ್ನಡ ಸಂಘಗಳು ಬೇರೆ ಬೇರೆ ದಿನಗಳಲ್ಲಿ ಯುಗಾದಿಯ ಆಚರಣೆ ಮಾಡುತ್ತಿವೆ: ಕನ್ನಡಿಗರು ಯುಕೆ (ಏಪ್ರಿಲ್ ೭, ಲಂಡನ್); ಕನ್ನಡ ಬಳಗ (ಏಪ್ರಿಲ್ ೧೩, ಡೋಂಕಾಸ್ಟರ್); ಲೆಸ್ಟರ್ ಕನ್ನಡ ಸಂಘ (ಏಪ್ರಿಲ್ ೨೭, ಲೆಸ್ಟರ್). ಕರ್ನಾಟಕದಿಂದ ಬರಲಿರುವ ಹಲವು ಪ್ರಸಿದ್ಧ ಹಾಡುಗಾರರರಿಂದ ಮನರಂಜನೆಯ ಊಟ, ಇಲ್ಲಿನ ಕನ್ನಡಿಗರಿಗೆ. ಇಂಗ್ಲೆಂಡಿನ ಹಳೆಯ ಹಾಗು ಹೊಸ ಕನ್ನಡ ಸಂಸ್ಥೆಗಳು ಹೆಚ್ಚು ಹೆಚ್ಚು ಬೆಳೆಯಲಿ; ಒಡೆಯದೆ, ಹರಿಯದೆ ಮೆರೆಯುತ್ತ ಕನ್ನಡವನ್ನು ಕಲಿಸುತ್ತ ಎಚ್ಚರದಿಂದ ಬೆಳೆಯುತ್ತಿರಲಿ ಎಂದು ಹಾರೈಸೋಣ.

 

ಕನ್ನಡ ಬಳಗದ ಮೊದಮೊದಲಿನ ಚೇತನಗಳಲ್ಲಿ ಒಬ್ಬರಾದ, ಸಿ ಹೆಚ್ ಸುಶೀಲೇಂದ್ರ ರಾವ್ ಬರೆದ ಒಂದು ಪದ್ಯ, ಮತ್ತು ಇತ್ತೀಚಿಗೆ ಇಂಗ್ಲೆಂಡಿನ ವಾಸಿಯಾದ ರಮ್ಯ ಭಾದ್ರಿ ಬರೆದ ಒಂದು ಪದ್ಯ ನಿಮಗಾಗಿ ಈ ವಾರದ ಅನಿವಾಸಿಯಲ್ಲಿ. ಒಬ್ಬರದ್ದು ಹಿರಿಯರೊಬ್ಬರಿಗೆ ಹಾರೈಕೆಯಾದರೆ, ಇನ್ನೊಬ್ಬರದ್ದು ಹೊಸದಾಗುತ್ತಲೇ ಇರುವ ಇಂಗ್ಲೆಂಡಿನ ಹವಾಮಾನದ ಕಾವ್ಯ ಚಿತ್ರಣ. .

 

ಸುಶಿಲೇಂದ್ರರು ಬರೆದ ಪದ್ಯವನ್ನ ನನಗೆ ತಲುಪಿಸಿದ್ದು ಅರವಿಂದ ಕುಲಕರ್ಣಿಯವರು. ಅಂಚೆಯಲ್ಲಿ ಬಂದ ಲಕೋಟೆಯಲ್ಲಿ , ಕೈ ಬರಹದ ಕನ್ನಡದ ಪತ್ರ ಸುಮಾರು ವರ್ಷಗಳ ಹಿಂದಿನ ಜೀವನವನ್ನ ನೆನಪಿಸಿ, ಖುಷಿ ಕೊಟ್ಟಿತು. ಕುಲಕರ್ಣಿಯವರರಿಗೆ  ವಂದನೆಗಳು.

 

ರಮ್ಯ ಭಾದ್ರಿ, ಮೈಸೂರಿನವರು. ಈಗ ಲಂಡನ್ನಿನ ದಕ್ಷಿಣದಲ್ಲಿರುವ ಆರ್ಪಿನ್ಗ್ಟನ್ ಎನ್ನುವಲ್ಲಿ ಮನೆ. ಚಿತ್ರ ರಚನೆ, ಆಗಾಗ ಬರೆಯುವದು ಇವರ ಹವ್ಯಾಸ. 

 

image.png
ಆಂಗ್ಲ ಹವಾಮಾನ 

 

ಆಂಗ್ಲರ ನಾಡಿನ ಹವಾಗುಣ
ಬದಲಾಗುವುದು ಕ್ಷಣ ಕ್ಷಣ
ಸುಡುವ ಬಿಸಿಲಿರಲು ಕೊರೆಯುವ ಚಳಿಯಿರಲಿ
ನಿಲ್ಲದು ವರುಣನ ಕಣ್ಣಾಮುಚ್ಚಾಲೆಯಾಟ
ನಡುಗುವ ಚಳಿಯಲಿ ನವ ವರ್ಷದ ಆಗಮನ
ಎಲ್ಲೆಲ್ಲೂ ಹಿಮರಾಶಿಯ ಮನಮೋಹಕ ದೃಶ್ಯ
ಮಂಜಿನ ಮುಸುಕಿನ ಮಡಿಲಲ್ಲಿ ಮೂಡುವುದು
ಚೈತ್ರದ ಚಿಗುರಿನ ಸುಮರಾಶಿಯ ಸೌಂದರ್ಯ
ಸುತ್ತಲೂ ಹಸಿರು ವನದ ಸೂಬಗ ಸವಿಯುತ್ತಿರಲು
ಶುರುವಾಗುವುದು ಸುಡುವ ಬೇಸಿಗೆ ಕಾಲ
ಸೂರ್ಯನ ಕಿರಣಗಳು ನಾಡೆಲ್ಲಾ ಬೆಳಗುತಿರಲು
ಇಣುಕುವುದು ಮರೆಯಲ್ಲಿ ಮಾಗಿಯ ಕಾಲ
ಚಿಗುರೆಲೆಗಳೆಲ್ಲ ಹಣ್ಣಾಗಿ ವರ್ಣರಂಜಿತವಾಗಿ
ಭೂ ರಮೆಯು ಕಂಗೊಳಿಸುತ್ತಿರಲು
ಸುಯ್ಯಂದು ತೇಲಿ ಬರುವ ಶೀತ ಗಾಳಿಗೆ
ಹಣ್ಣೆಲೆಗಳೆಲ್ಲ ಸಿಲುಕಿ ನಲುಗಿ ಮಣ್ಣಾಗುವುದು
ಬರಿದಾದ ಬನವು ಹಿಮ ಮಣಿಗಳ ಗೂಡಾಗಿರಲು
ನಿರಾಶೆಯಿಂದ ಬಳಲದೆ ಮತ್ತೊಮ್ಮೆ ಚಿಗುರುವ ಆಸೆ ಹೊತ್ತು
ಋತುಮಾನಕ್ಕೆ ಸಜ್ಜಾಗುವ ಪ್ರಕೃತಿಯ ಅದ್ಬುತ ವೈಖರಿ
ಜೀವ ಸಂಕುಲಕ್ಕೆ ಸ್ಪೂರ್ತಿಯ ಲಹರಿ.
__________________________________________________________________________________

 

ಸುಶಿಲೇಂದ್ರರ ಪದ್ಯ, ಅವರಿಗೆ ಆತ್ಮೀಯರಾದ, ಇಂಗ್ಲೆಂಡಿನ ಹಿರಿಯ ಕನ್ನಡತಿಯೊಬ್ಬರ ೯೦ರ ಹುಟ್ಟು ಹಬ್ಬದಲ್ಲಿ ಅವರಿಗರ್ಪಿಸಿದ ಕವನ. ಈ ಹಿರಿಯ ಚೇತನಗಳ ಆಶಯ, ಪರಿಶ್ರಮಗಳ ಫಲ ಇಂದು ಬೆಳೆದು ನಿಂತಿರುವ ಕನ್ನಡದ ಸಂಘಗಳು. ಅವರಿಗೆ ನಮ್ಮ ನಮನ.

 

ಅಭಯಾಂಬ ಅಕ್ಕ 

 

ಅನಂತ ಶುಭಾಶಯಗಳು ಅಭಯಾಂಬ ಅಕ್ಕ
ತೊಂಬತ್ತು ತುಂಬಿ ನೂರರತ್ತ ಸಾಗಿಹ ನಿನ್ನ ಪಯಣಕ್ಕೆ.

 

ಪುಣ್ಯವಂತರು ನಿನ್ನ ತಂದೆ ತಾಯಿಗಳು ಪಡೆಯಲು
ನಿನ್ನಂತ ಒಳ್ಳೆಯ ಸಾಟಿವಕ ಹಾಗು ಧೈರ್ಯದ ಮಗಳ.

 

ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ
ಅಭಯ ಎಂದು ನಾಮಕರಣ ಮಾಡುವದು ಸಂಪ್ರದಾಯ.

 

ಅಭಯ ಎಂದರೆ ಧೈರ್ಯಶಾಲಿ Brave Girl.
ವೀರ ವನಿತೆ ಆಗಲೆಂದು ಹಾರೈಸಿ ಇಡುವ ಹೆಸರು.

 

ಹಿರಿಯರ ಆಶೀರ್ವಾದದಂತೆ ಚಿಕ್ಕಂದಿನಿಂದಲೇ
ಜಾಣತನ ಬುದ್ಧಿ ಕುಶಲತೆಯಿಂದ ಪ್ರಕಾಶಳಾದೆ.

 

ವಿದ್ಯೆ ಜಾಣತನ ಗಂಭೀರತೆಗಳ ಪ್ರಭಾವ ನಿನ್ನನ್ನು
ಮೈಸೂರು ಮೆಡಿಕಲ್ ಕಾಲೇಜಿಗೆ ಆಹ್ವಾನಿಸಿತು.

 

ತೇರ್ಗಡೆಯಾಗಿ ಡಾಕ್ಟರ ಕೆಲಸದಲ್ಲಿ ನಿಪುಣತೆ
ತೋರಿ ಇನ್ನೂ ಹೆಚ್ಚಿನ ಅವಕಾಶಕ್ಕೆ ಕಾಯುತ್ತಿದ್ದೆ.

 

ಆಗ ನಿನ್ನ ಅನುಭವದ ಮತ್ತು ವಿದ್ಯಾಬಲದ ಆಧಾರ
ಆಂಗ್ಲನಾಡಿಗೆ ಬರಲು ಅವಕಾಶ ದೊರಕಿತು.

 

ಅಂದಿನಿಂದ ಇಂದಿನ ತನಕ ನಿನ್ನ ಮನೆಯಾಯ್ತು
ಆಂಗ್ಲ ನಾಡು, ಆದೆ ನೀ ಕನ್ನಡದ ಸತತ ರಾಯಭಾರಿ.

 

ಆಡು ಮುಟ್ಟದ ಸೊಪ್ಪಿಲ್ಲವೆಂದು ಹೇಳುವದು ವಾಡಿಕೆ.
ಅಂತೇ ನೀನು ಮಾತನಾಡಿಸದ ಕನ್ನಡಿಗರಿಲ್ಲ ಇಂಗ್ಲೆಂಡಿನಲ್ಲಿ.

 

ನಿನ್ನ ಜೀವನ ಬಹು ಸರಳ ಅಂತೇ ನಿನ್ನೆಲ್ಲ ಭಾವನೆಗಳು
ಸಾತ್ವಿಕ ಆಹಾರ, ಸದಾ ಇರಬೇಕು ಕುಡಿಯಲು ಬಿಸಿನೀರು.

 

ಆಂಗ್ಲ ಕನ್ನಡಿಗರಿಗೆ ಬೆಲ್ಲ ಸಕ್ಕರೆಯಾದೆ, ಬಂಧು-ಬಳಗಕೆ
ಘಮ ಘಮಿಪ ಮಲ್ಲಿಗೆಯಾದೆ, ಎಲ್ಲರೊಳಗೊಂದಾದೆ ಅಕ್ಕ.

 

ಬೇಡುವ ನಾವೆಲ್ಲಾ ಭಗವಂತನ ಆಶೀರ್ವಾದ ನಿನಗೆ
ನೂರು ವರ್ಷ ಆಯುರಾರೋಗ್ಯ ದಯಪಾಲಿಸೆಂದು.

 

ಅದರಾನಂದ ಭಾಗ್ಯ ನಮಗೂ ಸಿಕ್ಕಲೆಂದು
ಹೂವಿಂದ ನಾರು ಸ್ವರ್ಗ ಸೇರಿದಂತೆ.

4 thoughts on “ಹಳೆ ಬೇರು ಹೊಸ ಚಿಗುರು….

  1. ರಮ್ಯಾ ಭದ್ರಿ ಅವರ ಕ್ಷಣಕ್ಷಣಕ್ಕೆ ಬದಲಾಗುವ ಆಂಗ್ಲ ನಾಡಿನ ಹವಾಮಾನದ ಪದ್ಯ ಬಹಳ ಸೊಗಸಾಗಿದೆ. ಬಿಸಿಲು ಬಂದಿದೆ ಎನ್ನುವಷ್ಟರಲ್ಲಿಯೇ ಮಾಗಿಯ ಚಳಿ ಹಿಂದೆಯೇ ಅಡಗಿರುತ್ತದೆ ಎನ್ನುವ ಅವರ ಕವನದ ಸಾಲುಗಳು ನಿಜಕ್ಕೂ ಸತ್ಯವಾದ ಮಾತುಗಳು. ಎಲ್ಲವು ಕ್ಷಣಿಕ!
    ಸುಶೀಲೇಂದ್ರ ಅವರು ಬರೆದ ಅಭಯಾಂಬ ಅಕ್ಕ ಪದ್ಯದಲ್ಲಿ, ಅಭಯಾಂಬಾ ಅವರ ವ್ಯಕ್ತಿತ್ವವನ್ನು ಸುಂದರವಾಗಿ ವರ್ಣಿಸಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಕನ್ನಡ ಬಳಗದ ಸಮಾರಂಭಗಳಲ್ಲಿ ಆಕೆಯ ಉತ್ಸಾಹ ಚಟುವಟಿಕೆಗಳನ್ನು ಕಂಡಿದ್ದೇನೆ. ನಿಜಕ್ಕೂ ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾದ ಮಹಿಳೆ. ಧೀಮಂತ ವ್ಯಕ್ತಿತ್ವ.
    Uma Venkatesh

    Like

  2. Welcome both, Sushilendra and Ramya.

    Lovely simple poems.

    Please do write more and be part of KSSVV (Anivaasi).

    – Keshav

    Like

  3. ನಮ್ಮೆಲ್ಲರ ಅಕ್ಕ, ಹಿರಿಯ ಕನ್ನಡತಿ, ಯುಕೆ ಕನ್ನಡಬಳಗದ ಸುದೀರ್ಘ ನಿಸ್ವಾರ್ಥ ಸೇವಕಿ ಅಭಯಾಂಬ ಅವರಿಗೆ ನಮ್ಮೆಲ್ಲರ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು. ಬಳಗದ ಹುಟ್ಟಿನ ಸಮಯದಿಂದಲೂ ಅವರ ವೈಯಕ್ತಿಕ ಪರಿಶ್ರಮ, ಪ್ರತಿಯೊಂದು ಕೂಟದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡು ಎಲ್ಲ ಕಾರ್ಯಕರ್ತರಿಗೆ ಮಾಡಿದ ಸಹಾಯವನ್ನು ಕಣ್ಣಾರೆ ಕಂಡವನು ಈ ಸಂಚಿಕೆಯಲ್ಲಿ ಅನಿವಾಸಿ ಅವರಿಗರ್ಪಿಸುವ ನಮನಗಳಲ್ಲಿ ನಾನೂ ಸಂತೋಷದಿಂದ ಭಾಗಿಯಾಗುವೆ. ಎಲೆಯ ಮರೆಯಲ್ಲಿ ಬಾಳಿದ ಯಾವಾಗಲೂ ಮೃದುಭಾಷಿಯಾದ ಸರಳಜೀವಿ ಅವರು. ಜೀವಸ್ಯ ಶರದಂ ಶತಂ!
    ಹೊಸಚಿಗುರಿನ ರಮ್ಯ ಅವರ ಕವನ ರಮ್ಯವಾಗಿದೆ. ಋತುಗಳ ರಿಂಗಣ ಯಾವ ಕವಿಯನ್ನೂ ಕುಣಿಸದೆ ಇರಲಾರದು. ಇನ್ನೂ ಬರೆಯುತ್ತಿರಿ ರಮ್ಯ ಎಂದು ಆಶಿಸುವೆ.
    ಶ್ರೀವತ್ಸ

    Like

  4. ರಮ್ಯಾ ಅವರು ಬರೆದಿರುವ ಆಂಗ್ಲ ಹವಾಮಾನ ಕವನ ತುಂಬಾ ಚೆನ್ನಾಗಿದೆ. ಈ ದೇಶದಲ್ಲಿ ಋತುಮಾನ ಕ್ಕಿಂತ ಹವಾಮಾನಕ್ಕೆ ಜಾಸ್ತಿ ಮಹತ್ವ. ಅದಕ್ಕೆ ಇಲ್ಲಿ If you don’t like the weather, wwait for 10 minutes ಅಂತ ಹೇಳುತ್ತಾರೆ.
    ಕವನ ಓದಿ ತುಂಬಾ ಖುಷಿಯಾಯಿತು. ಮುಂದೆಯೂ ನಿಮ್ಮಿಂದ ಹೆಚ್ಚಿನ ಬರಹಗಳನ್ನು ನಿರೀಕ್ಷಿಸುತ್ತಿದ್ದೇವೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.