ಅವ್ವನ ನೆನಪುಗಳು

ಮಾರ್ಚ್ ತಿಂಗಳ ಕೊನೆಯ ಭಾನುವಾರ ಆಚರಿಸುವ, ಹೇಗೋ ಶುರುವಾಗಿ ಇನ್ನಾವುದೂ ಅರ್ಥದಲ್ಲಿ ಬೆಳೆದು ಉಳಿದಿರುವ, ತಾಯಂದಿರ ದಿನವನ್ನು ಅಕ್ಷರಗಳಲ್ಲಿ ಮೆರೆಸುವ ಅನಿವಾಸಿಯ ಆಶಯದ ಎರಡನೇ ಲೇಖನ ಈ ವಾರ. ಹೋದ ವಾರ, ಮಾತೃ ಭಾಷೆಯ ಅಕ್ಷರ, ವ್ಯಂಜನಗಳನ್ನ ಪದ್ಯ ರೂಪದಲ್ಲಿ ಮೆರೆಸಿದ ಲೇಖನವನ್ನ ನೀವೆಲ್ಲ ಓದಿರಬೇಕು. ಹಿರಿಯ ವೈದ್ಯ, ಅನಿವಾಸಿಯ ಮೂಲ ಚೇತನ, ಶ್ರೀಯುತ ಶ್ರೀವತ್ಸ ದೇಸಾಯಿಯವರು ತಮ್ಮ ಜೀವನದ ಅಮೂಲ್ಯ ಹಿನ್ನೋಟವೊಂದನ್ನು ಈ ವಾರ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ, ಕೇಶವ ಕುಲಕರ್ಣಿಯವರು ಕನ್ನಡದಲ್ಲಿ ಕೇಳಿಸಿಕೊಂಡಿರುವ ಹಿಂದಿಯ ಅಮ್ಮ-ಮಗನ ಹಾಡು. ನಿಮಗಾಗಿ.

image.png

ಈ ವರ್ಷದ ’ಮದರ್ಸ್ ಡೇ’ ದಿನ ಜಗತ್ತಿನ ಎಲ್ಲ ತಾಯಂದಿರಿಗೆ ನನ್ನ ತಾಯಿಯನ್ನು ನೆನೆಸುತ್ತ ಕೃತಜ್ಞತೆಗಳನ್ನು
ಅರ್ಪಿಸುತ್ತಿದ್ದೇನೆ.
ದೊಡ್ಡವರ ಚಿಕ್ ಚಿಕ್ ಸಂಗತಿಗಳು
ನನ್ನ ಪಾಲಿಗೆ ಅವ್ವ-ನಾವು ಉತ್ತರ ಕರ್ನಾಟಕದಲ್ಲಿ ಅಮ್ಮನನ್ನು ಹಾಗೇ ಕರೆಯುತ್ತಿದ್ದೆವು- ದೊಡ್ಡವಳೇ! ಐದನ್ನು ಹೆತ್ತು ದೊಡ್ಡವರನ್ನಾಗಿ ಮಾಡಿ ಕೊನೆಯ ವರೆಗೆ ಪ್ರೀತಿಯನ್ನಲ್ಲದೆ ಬೇರೇನೂ ಎರೆದವಳು ದೊಡ್ಡವಳೇ ಅಲ್ಲವೆ? ಎಲ್ಲರೂ ಮಹಾ ’ಸಾಧಕ’ರೇ ಆಗಿರಬೇಕೆ? ಆಕೆಗೆ ನಾನೇನು ಪ್ರತಿಫಲ ಕೊಟ್ಟೆ? ಉಪಕಾರ ಮಾಡಿದೆ? ಅದು ನನ್ನನ್ನು ಕಾಡದ ದಿನವಿಲ್ಲ. ”ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”– ನಿಜ. ತಾಯಿ ಮತ್ತು ತಾಯಿನಾಡು ಎರಡೂ ಸ್ವರ್ಗಕ್ಕೆ ಸಮಾನ ಅಂತೆ. ಒಂದು ಸ್ವರ್ಗಕ್ಕಾಗಿ ಇನ್ನಾವ ಸ್ವರ್ಗವನ್ನು ಮಾರಿಕೊಂಡೆವು? ಅವ್ವ ಬದುಕಿರುವಾಗ ಈ ‘ಮದರ್ಸ್ ಡೇ’ದ ಕಲ್ಪನೆಯೇ ಇರಲಿಲ್ಲ. 1970ರ ದಶಕದಲ್ಲಿ ಈ ದೇಶಕ್ಕೆ ಬಂದ ಮೇಲೆಯೇ ನಾನು ಮೊದಲು ಬಾರಿ Mothers Day ಆಚರಣೆಯ ಬಗ್ಗೆ ಕೇಳಿದ್ದು. ಆಗ ಇಂಗ್ಲೆಂಡ್, ಅಮೇರಿಕಾ ಹೋಗುವದೆಂದರೆ ಸ್ವರ್ಗ ಸಿಕ್ಕಂತೆ. ನಾನು ಇಲ್ಲಿ ಬಂದು ಅನಿವಾಸಿಯಾಗಿ ನೆಲೆಸಿದ ನಂತರ ’ಊರಿಗೆ’ ಆಗಾಗ ಹೋಗಿ ಬರುವದುಂಟು. ಹೋದಾಗೆಲ್ಲ, ಮಿತ್ರರು, ಸಂಬಂಧಿಕರು “ಇಂಗ್ಲೆಂಡಿನಿಂದ ಏನೇನು ತಂದ್ರೆಪ್ಪ?“ ಎಂದು ಕೇಳುವವರೇ ಎಲ್ಲ. ಭಾರತದಲ್ಲಿ ಬಹಳಷ್ಟು ಐಷಾರಾಮಿ ವಸ್ತುಗಳು ಸಿಗುತ್ತಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಳಿದು ಕಸ್ಟಮ್ಸ್ ದಾಟಿಸಿ, ಡ್ಯೂಟಿ ಕೊಟ್ಟು ಏನೇನೋ ತೊಗೊಂಡು ಹೋಗುತ್ತಿದ್ದೆ. ಆಗ ಕ್ಯಾಮರಾ, ರೇಡಿಯೋ-ಟೇಪ್ ಕೆಸೆಟ್ ಪ್ಲೇಯರ್ ಭಾರತದಲ್ಲಿ ದುರ್ಲಭ. ತಾಯಿಗೆ ಅಂತ ಶಾಲು, ವಸ್ತ್ರ ಒಮ್ಮೊಮ್ಮೆ ಸೀರೆ ಒಯ್ಯುವೆ. ‘ನೀನು ಇಲ್ಲಿಗೆ ಬಂದಿದ್ದೇ ಸಾಕು‘ ಅನ್ನುತ್ತಿದ್ದಳು ಅವ್ವ. ವಯಸ್ಸಾದಂತೆ ಮುದುಕರಿಗೆ ಏನೆಲ್ಲ ಅಪೇಕ್ಷೆ ಕಡಿಮೆಯಾಗುತ್ತ ಹೋಗುತ್ತದೆ. ನನ್ನ ಮದುವೆಯಲ್ಲೇ ತನ್ನ ಪತಿ (ನನ್ನ ತಂದೆ)ಯನ್ನು ಕಳೆದುಕೊಂಡ ಆಕೆ ಮುಪ್ಪಿನ ದಿನಗಳನ್ನು ಧಾರವಾಡದಲ್ಲಿ ನನ್ನ ಒಬ್ಬ ಅಣ್ಣನ ಮನೆಯಲ್ಲಿ ಕಳೆದಳು. ವಯಸ್ಸಾದವರಿಗೆ ಚಿಕ್ಕದರಲ್ಲೇ ಸಂತೋಷ ಅಂತ ನನಗೆ ಅನುಭವವಾದದ್ದು ಆಗಲೇ.

ಚಿಕ್ ಚಿಕ್ ಸಂಗತಿಗಳು:

ಯು ಕೆ ದಿಂದ ರಜೆಯಲ್ಲಿ ಧಾರವಾಡಕ್ಕೆ ಹೋದಾಗ ಅವ್ವ ನನ್ನನ್ನು ಕರೆದು ”ಮಗು, ನನ್ನ ಕಾಲು ಉಗುರು ಸ್ವಲ್ಪ ಕತ್ತರಿಸಪ್ಪ, ಹಿಡಕೊಂಡ್ಬಿಟ್ಟಾವಽ” ಅನ್ನುವವಳು. ಮಗು! ಐದು ಮಕ್ಕಳಲ್ಲಿ ಕೊನೆಯವನಾದ ನನಗೆ ಬಂದ ’ಅಚ್ಚಾದ’ ಹೆಸರು.(Nickname) ಮಗು. ಆಗ ಅರವತ್ತರ ಹೊಸ್ತಿಲಲ್ಲಿದ್ದರೂ ನಾನು ಅವಳ ಪಾಲಿಗೆ ಮಗೂನೇ. ಹಗುರಾಗಿ ಅವಳ ಕಾಲನ್ನು ನನ್ನ ತೊಡೆಯ ಮೇಲಿಟ್ಟುಕೊಂಡು – ನಾನು ಮಗುವಾಗಿದ್ದಾಗ ಅವಳ ತೊಡೆಯ ಮೇಲೆ ನನ್ನಕಾಲುಗಳಿದ್ದಂತೆ!- ನನ್ನ ಸರ್ಜನ್ನನ ಕೌಶಲ್ಯವನ್ನೆಲ್ಲ ಉಪಯೋಗಿಸಿ ಮೆಲ್ಲಗೆ ಒಂದೊಂದಾಗಿ ಪಂಜಿನಂತೆ ಕಚ್ಚಿಕೊಂಡ ನಖಗಳನ್ನು ಕ್ಲಿಪ್ ಮಾಡಿ ಕಾಲ್ಬೆರಳುಗಳ ಚರ್ಮವನ್ನು ಬಿಡಿಸಿದಾಗ ಆಕೆಗಾಗುವ ಆನಂದದ ಪಾರವೇ ಇಲ್ಲ. ”ಎಷ್ಟು ಹಗುರಾತು ನೋಡು, ಮಗು!” ಎಂದು ಲಟಿಗೆ ಮುರಿಯುವವಳು ಪ್ರತಿ ಸಲ! ನಾನೊಬ್ಬ ಕಣ್ಣಿನ ವೈದ್ಯನಿಂದ ಪಾದವೈದ್ಯ(chiropodist) ಆದದ್ದಕ್ಕೆ ನನಗೇನೂ ಅವಮಾನವಿಲ್ಲ. ತಾನು ಬರೀ ಅಮ್ಮನಾದಂತೆ ನಾನು ಬರೀ ಮಗನಲ್ಲವೆ? ಅವಳೋ ಪುತ್ರವಾತ್ಸಲ್ಯದಿಂದ ಅಪ್ಪಿಕೊಂಡರೆ, ನಾನು ಮತ್ತೆ ಮಗುವಾಗಿ ಕರಗಿ ಹೋಗುತ್ತಿದ್ದೆ. ಧಾರವಾಡಕ್ಕೆ ಬರುವ ಮೊದಲು 18 ವರ್ಷಗಳ ಕಾಲ ನಮ್ಮ ದೊಡ್ಡ ಕುಟುಂಬ ಊಟಿಯಲ್ಲಿ ವಾಸಿಸುತ್ತಿತ್ತು. ಬ್ರಿಟಿಶರು ಉಟಕಮಂಡ್ ಎಂದು ಕರೆಯುತ್ತಿದ್ದ ಆ ಊರನ್ನು ಆದಿವಾಸಿಗಳು ಕರೆಯುತ್ತಿದ್ದುದು ”ಒತ್ತಕಲ್ ಮಂದು” ಎಂದು. ಅಂದರೆ ”ಒಂದು ಕಲ್ಲಿನ ವಸಾಹತು’ ಎನ್ನುವ ಬುಡಕಟ್ಟು ಜನಾಂಗ ತೊದವರ ಶಬ್ದದ ಅಪಭ್ರಂಶ ಎಂದು ನನ್ನ ತಂದೆ ಬರೆದ ಸಂಶೋಧನಾ ಗ್ರಂಥದ ನೆನಪು ಹಸಿರಾಗಿದೆ. ಎಲ್ಲೆಲ್ಲೂ ಹಸಿರು. ಮನ್ಸೂನ ಮಳೆಯನ್ನು ಅಲ್ಲೇ ನೋಡಬೇಕು. ಮಳೆ ಸುರಿದರೆ ಪಟಪಟನೆ ಕಿಡಕಿಯ ಕಾಜಿನ ಮೇಲೆ ಕೋಲಿನಿಂದ ಬಡಿದಂತೆ. ಹೊರಗಡೆ ನಿಂತಿದ್ದರೆ ಕ್ಷಣದಲ್ಲಿ ಪೂರ್ತಿ
ತೋಯಿಸಿಕೊಳ್ಳುವದೇ. ಒಂದು ಸಲ ಒಂದೂವರೆ ಮೈಲು ದೂರದಲ್ಲಿದ್ದ ಪೇಟೆಯಿಂದ ಮನೆಗೆ ನಡೆದುಕೊಂಡು ಮರಳಿ ಬರುತ್ತಿದ್ದೆವು ನಾನು ಮತ್ತು ನನ್ನ ಅವ್ವ. ಒತ್ತ ಕಲ್ (ಒಂಟಿಕಲ್) ಚಿಕ್ಕ ಗವಿಯಂತಿದ್ದ ಗುಡಿಯ ಹತ್ತಿರ ಬರುವಷ್ಟರಲ್ಲಿ ಗುಡುಗು- ಮಿಂಚಿನೊಂದಿಗೆ ಮನ್ಸೂನ್ ಮಳೆ. ಕೈಯಲ್ಲಿ ಛತ್ರಿ (ಕೊಡೆ)ಯಿಲ್ಲ. ಇದ್ದರೂ ರಕ್ಷಣೆಯಿರುತ್ತಿರಲ್ಲ. ಐದು ವರ್ಷದ ಹುಡುಗ ನಾನು. ತನ್ನ ಸೀರೆಯ ಸೆರಗನ್ನೇ ಹೊದಿಸಿ ಮಳೆಯಿಂದ ನನ್ನನ್ನು ರಕ್ಷಿಸಿ, ಕೊನೆಗೆ ಅದು ನಿಂತ ಮೇಲೆ ಮನೆಗೆ ಕರೆದುಕೊಂಡು ಬಂದಳು. ಮನೆಗೆ ಬರುವ ವರೆಗೆ ಆಕೆಯ ಹೊಟ್ಟೆಗೆ ತೋಯ್ದು ತೊಪ್ಪೆಯಾದ ನನ್ನ ತಲೆಯನ್ನುಅಂಟಿಸಿ ಕೊಂಡಿದ್ದ ಆ ಚಿತ್ರ ಇಂದಿಗೂ ನನ್ನ ಮನಃಪಟದಲ್ಲಿ ಅಚ್ಚಳಿಯದೆ ನಿಂತಿದೆ! ಆಕೆಗೆ ಮದುವೆಯಾದಾಗ ಹೈಸ್ಕೂಲು ವಿದ್ಯಾಭ್ಯಾಸ ಸಹ ಪೂರ್ತಿಯಾಗಿದ್ದಿಲ್ಲ. ಆಗಿನ ಕಾಲದಲ್ಲಿ ಅದು ಸಾಮಾನ್ಯ. ಮೈನೆರೆತ ಮೇಲೆಯೇ ಅತ್ತೆಮನೆಗೆ ಬಂದು ಐವರು ಗಂಡು ಮಕ್ಕಳನ್ನು ಹೆತ್ತಳು. ನಾನು ಕೊನೆಯವ. ಎಲ್ಲರ ವಿದ್ಯಾಭ್ಯಾಸಕ್ಕಾಗಿ ತಂದೆ ತಾಯಿಯರ ತ್ಯಾಗ ಮರೆಯಲಾರೆ. ಮೊದಲು ಗತಿಸಿದ್ದು ತಂದೆ. ನಾನು ಮೆಡಿಕಲ್ ಮುಗಿಸಿ ವಿದೇಶಕ್ಕೆ ಹೊರಟೆ. ನನ್ನನ್ನು ಹರಸಿ ಬೀಳ್ಕೊಟ್ಟ ಅವ್ವ ಪ್ರತಿವರ್ಷ ತಪ್ಪದೆ ನನ್ನ ಹುಟ್ಟಿದ ಹಬ್ಬದ ದಿವಸ ನನ್ನನ್ನು ಆಶೀರ್ವದಿಸಿ ಹರಸಿ ಪತ್ರ ಬರೆಯಲು ಮರೆಯಲಿಲ್ಲ. ಪ್ರತಿ ಕಾಗದದಲ್ಲೂ ”ಮಗು”ವಿಗೆ, ಎಂತಲೇ ಸಂಬೋಧನೆ. ಅಗ STD, ಮೋಬೈಲ್, ಇಂಟರ್ನೆಟ್ ಇರಲಿಲ್ಲ. ಆ ವರ್ಷ ಅವ್ವನ ಪತ್ರ ಬರಲೇ ಇಲ್ಲ. ಅಂದು ನನ್ನ ಜಂಘಾಬಲವೇ ಉಡುಗಿ ಹೋಗಿತ್ತು. ನನಗಿಂತ ಹಿರಿಯರಾದ ನಾಲ್ವರು ಅಣ್ಣಂದಿರು ಭಾರತದಲ್ಲೇ ಇದ್ದುದರಿಂದ ನನಗೆ ಆಕೆಯ ಕೊನೆಯ ದಿನಗಳಲ್ಲಿ ಸಹ ಆರೈಕೆ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. ಅವ್ವ ತೀರಿಕೊಂಡ ಸುದ್ದಿ ಗೊತ್ತಾದ ದಿನ ನಾನು ತಬ್ಬಲಿಯಾದ ಅನುಭವ. ಆಸ್ಕರ್ ವೈಲ್ಡನ ನಾಟಕ ’ದ ಇಂಪಾರ್ಟನ್ಸ್ ಆಫ್ ಬೀಯಿಂಗ್ ಅರ್ನೆಸ್ಟ್’ ದ ಲೇಡಿ ಬ್ರಾಕ್ನೆಲ್ ಹೇಳಿದಂತೆ “To lose one parent may be regarded as a misfortune; to lose both looks like carelessness” ಮಾತು ನೆನಪಾಯಿತು. ಕೇರ್ಲೆಸ್ ಅಲ್ಲದಿದ್ದರೂ, ಕಳೆದುಕೊಂಡದ್ದು ಸ್ವರ್ಗವೇ ಏನೋ? Paradise lost? ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ, ಅದರ ಸತ್ಯ ಮನದಟ್ಟವಾಯಿತು. ಜಗತ್ತಿನ ಎಲ್ಲ ತ್ಯಾಗಮಯಿ, ವಾತ್ಸಲ್ಯದ ಮೂರ್ತಿ ತಾಯಂದಿರಿಗೂ ನಮನಗಳು.

ಶ್ರೀವತ್ಸ ದೇಸಾಯಿ

image.png
ದೂರ ಗಗನದೆಡೆ
ದೂರ್ ಗಗನ್ ಕಿ ಛಾಂವ್ ಮೆ ಚಿತ್ರದ ಹಾಡು. ಆ ಚಲ್ ಕೆ ತುಝೆ… ಹಾಡು ಬರೆದು ಸಂಗೀತ ಕೊಟ್ಟು ಹಾಡು ಹಾಡಿದ್ದು ಕಿಶೋರ್ ಕುಮಾರ್
ಬಾ ನನ್ನ ಜೊತೆ
ನಾ ಕರೆದೊಯ್ಯುವೆ
ಆ ದೂರ ಗಗನದೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //ಪ//

ಸೂರ್ಯನ ಮೊದಲನೆ ಕಿರಣ
ಆಸೆಯ ಬೆಳಕಿನ ಸ್ಫುರಣ
ಚಂದ್ರನ ತಿಂಗಳ ಬೆಳಕು
ಅಂಧಕಾರ ಹೋಯಿತು ಹೊರಕು

ಬಿಸಿಲೇ ಇರಲಿ
ನೆರಳೇ ಬರಲಿ
ನಮ್ಮ ದಾರಿ ಗಮ್ಯದೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //೧//

ಕಣ್ಣನು ಚಾಚಿದಷ್ಟೂ
ಮುಕ್ತ ಗಗನವೇ ಇರಲಿ
ಅಲ್ಲಿ ರಂಗು ರಂಗಿನ ಹಕ್ಕಿ
ಆಸೆ ಸಂದೇಶವ ತರಲಿ

ಕನಸಿನ ಚಿಗುರು
ನಳನಳಿಸಿರಲು
ಸಂಜೆಯ ತಳಿರಿನೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //೨//

– ಕೇಶವ ಕುಲಕರ್ಣಿ

16 thoughts on “ಅವ್ವನ ನೆನಪುಗಳು

  1. ಅವ್ವನ ನೆನಪುಗಳ ಜಾಡು ಹಿಡಿದು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗಿ ಬಿಟ್ಟಿರಿ. ತುಂಬ ಆಪ್ತ ಸುಂದರ ಬರಹ. – ಕೇಶವ

    Like

  2. ದೇಸಾಯಿಯವರ ಚಿಕ್ ಚಿಕ್ ನೆನಪುಗಳು ಮನತೋಯಿಸದವು ಓದಿದವರಿಗೆಲ್ಲರಿಗೂ ತಮ್ಮ ತಾಯಂದಿರನ್ನು ನೆನಪು ತರಿಸುವಷ್ಟು ಶಕ್ತಿ ನಿಮ್ಮ ಬರಹದಲ್ಲಿದೆ

    ವಿಜಯನರಸಿಂಹ

    Liked by 1 person

    • ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
      ನನ್ನ ಬರಹಕ್ಕಿಂತ ಅದು ಇರುವದು ಶಕ್ತಿಯ ಪ್ರತೀಕವಾದಸ್ತ್ರೀಯೆಂಬ ತಾಯಿಯಲ್ಲಿ ತಾನೆ?

      Like

  3. ಮನ್ಸೂನಿನ ಮಳೆಯಲ್ಲಿ ಅಂದು ನೆಂದ ನಿಮ್ಮ ನೆನಪು ಇಂದೂ ಹಸಿಯಾಗಿ ನಮ್ಮ ಮನದಲ್ಲೂ ಹಸಿರು ಮೂಡಿಸುವಂತಿದೆ.

    Like

  4. Dear Shrivatsa,
    As usual your article is wonderful. We in India were not familiar to Mother’s Day. In 2000, we took stop over in England on our way to USA. I remember we visited Gudi (not temple) in Birmingham and it was Mother’s Day. Gudi’s mother was very happy to receive us. All mothers are same.

    Liked by 1 person

  5. ಶ್ರೀವತ್ಸ ದೇಸಾಯಿ ಅವರ ಅವ್ವನ ನೆನಪುಗಳಲ್ಲಿ ಎಲ್ಲರ ಅವ್ವನ ನೆನಪುಗಳು ಅಡಗಿವೆ ಎಂದರೆ ತಪ್ಪಾಗಲಾರದು.ಅಮ್ಮ,ಅವ್ವ, ತಾಯಿ ಈ ಶಬ್ದವೇ ಆಪ್ಯಾಯಮಾನ.ವಯಸ್ಸಾದಂತೆ ಅಪೇಕ್ಷೆ ಕಡಿಮೆ ಯಾಗ್ತವೆಯೋ ಏನೋ ಗೊತ್ತಿಲ್ಲಾ.ಆದರೆ ಮಮತೆ ತುಂಬಿದ ತಾಯಿ ಹೃದಯ ದಲ್ಲಿ ಅಪೇಕ್ಷೆ ಗೆಲ್ಲಿ ಜಾಗ? ಮಗುವಿನ ಒಂದು ನಗು, ಮಾತು ಸಾಕು ಅವಳಿಗೆ.ಇಲ್ಲಿ ಮಗುವಿನ ವಯಸ್ಸು ಏನೂ ವ್ಯತ್ಯಾಸ ಮಾಡೋದಿಲ್ಲ.
    “ಅಲ್ಲೊಂದು ಮಮತೆಯ ಕುರುಹು
    ಇಲ್ಲೊಂದು ಒಲವಿನ ಎಳೆಯು
    ವಾತ್ಸಲ್ಯ ದೊಂದು ಸುಳಿವು
    ಅದುವೇ ತಾಯಿ ಬಲ್ಲಿರಾ
    ತಾಯಿ ದೇವರೆಂಬರು
    ಅವಳ ಮಾತು ವೇದವೆಂಬರು
    ಕಂಡರಾರು ದೇವರಾ ಬಲ್ಲವರಾರು ವೇದವ
    ಈ ಹಿರಿಮೆ ಗರಿಮೆ ಒಲ್ಲಳವಳು
    ಬೇಡಿಯಾಳು ಮಮತೆ ನೀಡಿಯಾಳು ಪ್ರೀತಿ
    ಅದುವೇ ತಾಯಿ ಬಲ್ಲಿರಾ”
    ಒದ್ದೆ ಗಣ್ಣುಗಳಿಂದ, ನನ್ನವ್ವನ ನೆನೆಯುತ್ತಾ ಶ್ರೀವತ್ಸ ದೇಸಾಯಿ ಅವರಿಗೆ ಧನ್ಯವಾದ ಹೇಳುತ್ತಾ ಈ ಸಾಲುಗಳನ್ನು ಬರೀತೀದೀನಿ.ಅವರ ಅವ್ವನ ನೆನಪುಗಳಲ್ಲಿ ಅವರು ಕಳಕಳಿ,ತಳಮಳ ಎದೆ ತಟ್ಟುವಂಥದು.ಇನ್ನೊಮ್ಮೆ ಧನ್ಯವಾದಗಳು ಇಂತಹ ಬರಹಕ್ಕೆ
    ಸರೋಜಿನಿ ಪಡಸಲಗಿ

    Liked by 1 person

  6. ದೇಸಾಯಿಯವರ ಬರಹ ಓದಿ ಕಣ್ಣು ತೇವವಾಯಿತು.
    ತಾಯಿಯರಲ್ಲೂ ವಿವಿಧ ಬಗೆ. ಮಾನಸಿಕ, ದೈಹಿಕ ಕಾಯಿಲೆಯಿರುವ ಮಕ್ಕಳನ್ನು ಕಣ್ಣಲ್ಲಿ, ಕಣ್ಣಿಟ್ಟು ಕಾಯುವ ಸುಪೆರ್ ಮಮ್ ಗಳಿದ್ದಾರೆ. ಎoತಹ ಮಕ್ಕಳಾದರೂ, ಅಕ್ಕರೆಯಿoದ, ಆರೈಕೆಮಾಡಿ ಸಾಕದ ಅಮ್ಮಗಳು ವಿರಳ. ಸಣ್ಣಪುಟ್ಟ ಸೇವೆ, ಅಕ್ಕರೆಯ ಮಾತು, ಇದಿಷ್ಟೇ ತಾಯಿ ಬಯಸುವ ಪ್ರತಿಫಲ.
    ಮದರ್ಸ್ ಡೇ ಗೆ ಸೂಕ್ತವಾದ ಬರಹ.

    Liked by 1 person

    • ಒಬ್ಬ ಸುಪರ್ ಮಮ್ ನ ಭಾವನೆಗಳನ್ನು ಕಂಡೆ ಇದರಲ್ಲಿ. ನನ್ನ ಪ್ರಶ್ನೆಗೂ ಉತ್ತರಕೊಟ್ಟಿದ್ದೀರಿ. ಹ್ಯಾಪ್ಪಿ ಮದರ್ಸ್ಡೇ ಸೂಪರಾಗಿರಲಿ! ಧನ್ಯವಾದಗಳು.

      Like

  7. ದೇಸಾಯಿ ಅವರೇ ನಿಮ್ಮ ಲೇಖನ ಬಹಳ ಸೊಗಸಾಗಿದೆ. ನಾವು ೭ ಜನ ಮಕ್ಕಳು ಆದರೆ ನನಗೆ ನಮ್ಮಮನೆಯಲ್ಲಿ ನಮ್ಮಅಜ್ಜಿ ವಾಡಿಕೆ ಹೆಚ್ಹಾಗಿತ್ತು. ಏನಾದರೂ ಬೇಕಿದ್ದರೆ ನಮ್ಮತಂದೆ ಅಥವಾ ಅಜ್ಜಿ ಮಾತ್ರ. ನಮ್ಮತಾಯಿ, ಪದ್ದು ಅಂತ ನಾವು ಕರೆಯುತ್ತಾ ಇದ್ದೆವು. ನನಗೆ ಹತ್ತು ವರ್ಷದ ಆದಾಗಿಂದ ನಾನು ಮಮನೆಯಲ್ಲಿ ಇರಲಿಲ್ಲ ಹೈ ಸ್ಕೂಲ್ ಬೇರೆ ಊರಿನಲ್ಲಿ ಮುಂದೆ ವಿದ್ಯಾಭ್ಯಾಸ ಸಹ ಆದ್ದರಿಂದ ಅಮ್ಮನ ಪರಿಚಯ ಅಷ್ಟು ಇರಲಿಲ್ಲ. ನಮ್ಮಮಗಳ ಮದುವೆಗೆ ೨೦೦೦ ರಲ್ಲಿ ಇಲ್ಲಿ ೨ ತಿಂಗಳು ನಮ್ಮಜೊತೆ ಯಲ್ಲಿ ಕಳೆದಾಗಲೇ ನನಗೆ ಅವಳ ಸರಿಯಾದ ಪರಿಚಯ ವಾಗಿದ್ದು. ಇದು ನಿಮಗೆ ಸ್ವಲ್ಪ
    strange ಅನ್ನಿಸಬಹುದು ಆದರೆ ನಿಜ. ಸುಮಾರು ಹತ್ತು ವರ್ಷದ ಹಿಂದೆ ದೀಪಾವಳಿ ದಿನ ನೆರಳದೇ ತೀರಿದಳು. ಆ ಎರಡು ತಿಂಗಳು ಇಲ್ಲಿ ಕಳೆದಿದ್ದು ನನಗೆ ಎಂದಿಗೂ ಮರೆಯುವುದಿಲ್ಲ. ಆದರೆ ಬರುವ Mothers Day ದಿನ ಮಾತ್ರ ಅಲ್ಲ ನಮ್ಮ ಪದ್ದು ನನ್ನ ಹೃದಯದಲ್ಲಿ ಇರುತ್ತಾಳೆ .

    Liked by 1 person

  8. Thank you for sharing these touching and precious memories of your mother. It made such an interesting reading. Must admit you reallly are a very fortunate son for being commisioned by her to do her nails !

    Liked by 1 person

    • ರಾಮಮೂರ್ತಿಯವರಿಗೆ ಧನ್ಯವಾದಗಳು. ನಿಜ, ಅಮ್ಮ ಹೃದಯದಲ್ಲೇ ವಾಸಿಸುತ್ತಾರೆ. ಹಿಂದಕ್ಕೊಮ್ಮೆ ಈ ಪುಟಗಳಲ್ಲಿ ನಿಮ್ಮಅಜ್ಜಿಯ ಪರಿಚಯ ಮಾಡಿಕೊಟ್ಟಿದ್ದೀರಿ- ಎಷ್ಟು ಎತ್ತು ಕಟ್ಟಿದ ಬಸ್ಸು ಎಂದು ಕೇಳಿದವರನ್ನು ಹೇಗೆ ಮರೆಯಲಿ? ದೊಡ್ಡ ಸಂಸಾರದ ಕುಟುಂಬಗಳಲ್ಲಿ ‘ಹತ್ತಿರದವರ’ ಪರಿಚಯವಾಗುವದು ಸಹ ನೀವಂದಂತೆ ದೂರ ಹೋದಮೇಲೆಯೇ. ನನಗೂ ನನ್ನಒಬ್ಬ ಅಣ್ಣ -ಗುಜರಾತ ವಾಸಿ- ಹತ್ತಿರವಾದುದು ಇತ್ತಿಚಿನ ವರ್ಷಗಳಲ್ಲಿಯೇ. ಆ ಸ್ಪರ್ಶಾನುಭವದ( we should be more tactile) ನೆನಪೇ ಬೇರೆ. ನಾವು ಇಂದಿನ ತಲೆಮಾರಲ್ಲಿ ಅದನ್ನು ರಕ್ತ ಸಂಬಂಧಿಕರಲ್ಲಿ ಕಾಣುವದಿಲ್ಲ, ಅದೂ ಪರದೇಶದಲ್ಲಿ ವರ್ಜ್ಯ PC ಅಲ್ಲ ಅಂತ. ಅದು ದುರ್ದೈವದ ಸಣಗತಿ ಒಂದು ತರದಲ್ಲಿ. ನಿಮ್ಮಂತೆ ನನ್ನಾಕೆ ತನ್ನ ಅಜ್ಜಿಯನ್ನು ಸ್ಮರಿಸುವಾಗ ಹೇಳಿದ್ದು ಆಕೆಯ ಹೊಟ್ಟೆಯ ‘ಸ್ನಾಯು’ಗಳು ಆರಿಂಚು ಎಳೆಯುವಷ್ಟು elastic ಅಂತ. ಆ ಅನ್ಯೋನ್ನತೆ ಆ ಸಂಬಂಧ ನೆನಸುವ ವಾರವಿದು!

      Like

      • ದೇಸಾಯಿ ಅವರೇ, ಎತ್ತಿನ ಸಂಶಯ ಬಂದಿದ್ದು ನಮ್ಮ ಅಜ್ಜಿಯ ಅಜ್ಜಿ ಗೆ !!

        Like

    • You nailed it! Thank you very much for your response and appreciation. As a woman, a daughter and a mother you could connect to it, I could see. As a cousin of mine said on losing his “a mother is always special.”. ಕುಪುತ್ರೋ ಜಾಯತೆ ಕ್ವಚಿದಪಿ, ಕುಮಾತಾ ನ ಭವತಿ!

      Like

  9. ಮದರ್ಸ್ ಡೇ ದಿನದಂದು ತಾಯಿಯರ ನೆನಪಿನಲ್ಲಿ ಬರೆಯುತ್ತಿರುವ ಈ ಸರಣಿ ಲೇಖನಗಳು ಬಹಳ ಸುಂದರವಾಗಿ ಮೂಡಿ ಬರುತ್ತಿವೆ. ತಾಯಿಯ ನೆನಪು ಜೀವನ ಮುಗಿಯುವವರೆಗೂ ಮಾಸದ ನೆನಪು. ದಿನವೂ ನಮ್ಮ ಮನದಲ್ಲಿ ಮೂಡುವ ಒಂದು ಚಿತ್ರ ಎಂದರೆ ತಾಯಿಯದೆ. ನಮ್ಮ ಜೀವನವನ್ನು ರೂಪಿಸುವ ಒಂದು ಶಕ್ತಿಯಲ್ಲವೇ! ಆಕೆಯನ್ನು ಕಳೆದುಕೊಂಡಾಗಲೇ ಅರಿವಾಗುವುದು ತಬ್ಬಲಿತನದ ಅನುಭವ. ಆದರೆ ಇದು ಅನಿವಾರ್ಯವೂ ಹೌದು. ಅವರು ಜೀವಂತವಾಗಿದ್ದಾಗ ಜೊತೆಯಲ್ಲಿ ಕಳೆದ ಸುಂದರ ಕ್ಷಣಗಳೇ ಕಡೆಗೆ ನಮ್ಮ ಮನದಲ್ಲಿ ಉಳಿಯುವ ನೆನಪುಗಳು. ತಾಯಿಯ ಋಣ ತೀರಿಸಲಾಗದು ಎನ್ನುವ ಮಾತುಗಳು ಪೂರ್ಣ ಸತ್ಯ.
    ಉಮಾ ವೆಂಕಟೇಶ್

    Liked by 1 person

    • ಧನ್ಯವಾದಗಳು ಉಮಾ ಅವರೆ. ತಾಯಿ ಮಕ್ಕಳ ಕೆಮಿಸ್ಟ್ರಗೂ ಕೊನೆಬಲ್ಲವರಾರು, ಹೇಳಿ? ನನ್ನ ಚಿಕ್ಕ ಲೇಖನಕ್ಕೆ ಓದುಗರೆಲ್ಲ ಪ್ರತಿಕ್ರಿಯಿಸಿ ಲೇಖನ ಸರಣಿಯನ್ನು ಸಮೃದ್ಧಗೊಳಿಸುತ್ತಿದ್ದೀರಿ. ನೀವೆಲ್ಲ ಸಂಪಾದಕರ ಉದ್ದೇಶವನ್ನು ಸಫಲಗೊಳಿಸುತ್ತಿದ್ದೀರಿ.

      Like

Leave a comment

This site uses Akismet to reduce spam. Learn how your comment data is processed.