ಬೆಡಗಿನ ಕನ್ನಡ ವರ್ಣಮಾಲೆ

ದೂರದ ಕೆನಡಾದಲ್ಲಿ ನೆಲೆಸಿದರೂ, ಮಾತೃಭಾಷೆ ಕನ್ನಡದ ಮೇಲಿನ ಮಮಕಾರ ಕಳೆದುಕೊಳ್ಳದ ವೈದ್ಯ ಸುದರ್ಶನ ಗುರುರಾಜರಾವ್, ಕನ್ನಡ ಭಾಷೆಯ ಬೆರಗನ್ನು ಗದ್ಯ-ಪದ್ಯಗಳಲ್ಲಿ ಅನಿವಾಸಿಯೊಂದಿಗೆ ಹಂಚಿಕೊಂಡಿದ್ದಾರೆ. ಕನ್ನಡ ತುಂಬಾ ಹಳೆಯ ಭಾಷೆ. ಅದರ ಇತಿಹಾಸದ ಬಗ್ಗೆ ಗೊತ್ತಾಗಬೇಕಾದದ್ದು ಇನ್ನೂ ಇದೆ. ಕಾಲ-ಕಾಲಕ್ಕೆ ಸಂಸ್ಕೃತ, ಪರ್ಷಿಯನ್, ಇಂಗ್ಲಿಷ್ ಭಾಷೆಗಳ ಪ್ರಭಾವ, ಒತ್ತಡ, ಹೇರಿಕೆಗಳಿಂದ ಹಿಗ್ಗುತ್ತ-ಕುಗ್ಗುತ್ತ ಇಂದಿನವರೆಗೆ ಬೆಳೆದಿರುವ ಕನ್ನಡ, ಇಂಗ್ಲಿಷಿನ ದಾಳಿಯಲ್ಲಿ ಕೊಚ್ಚಿಹೋಗದಂತೆ ತಡೆಯುವ ಜವಾಬ್ದಾರಿ ಜಗತ್ತಿನ ಎಲ್ಲೆಡೆಯ ಕನ್ನಡಿಗರಲ್ಲಿ ಬೆಳೆಯಲಿ ಎನ್ನುವ ಆಶಯದೊಂದಿಗೆ ಈ ಲೇಖನವನ್ನ ಪ್ರಕಟಿಸುತ್ತಿದ್ದೇವೆ. 

image.png

ಬೆಡಗಿನ ಕನ್ನಡ ವರ್ಣಮಾಲೆ

”ಅ,ಆ ಇ,ಈ ಕನ್ನಡದಾ ಅಕ್ಷರಮಾಲೆ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ” ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಈ ಸುಂದರ ಗೀತೆ ಸ್ವರಗಳ ಸ್ತರದಲ್ಲಿ ಯೋಗವಾಹಗಳಾದ ಅಂ ಅಃ ಗಳೊಂದಿಗೆ ಮುಗಿಯುತ್ತದೆ. ಕರುಳಿನ ಕರೆ ಚಿತ್ರಕ್ಕಾಗಿ ಶ್ರಿ ಆರ್.ಎನ್. ಜಯಗೋಪಾಲ್ ಅವರು ರಚಿಸಿದ ಕನ್ನಡದ ಈ ಅನನ್ಯ ಗೀತೆ ಪ್ರತಿಯೊಂದು ಸ್ವರಕ್ಕೂ ಜೀವನದ ವಿವಿಧ ಹಂತ (ಸ್ತರ) ಗಳಲ್ಲಿ ಇರಬಹುದಾದ ಪ್ರಾಮುಖ್ಯತೆ ಯನ್ನು ತೊರುತ್ತದೆ. ’ಅ’ ಇಂದ ಅಮ್ಮಾ ಎನ್ನುವ ಮೊದಲ ಮಾತು ಶಿಶುವಾಗಿದ್ದಾಗ, ಆಟ ಊಟ ಓಟ ಗಳು ಬಾಲಕನಾಗಿದ್ದಾಗ,ಇನ್ನೂ ಬೆಳೆದ ನಂತರ ಮಾನವೀಯ ಮೌಲ್ಯಗಳ ಕಲಿಕೆ- ಇದ್ದವರು ಇಲ್ಲದವರಿಗೆ ನೀಡುವುದು, ಈಶ್ವರನಲ್ಲಿ ಭಕ್ತಿ ಇಡುವುದು ಮುಖ್ಯವಾಗುತ್ತದೆ;ಅಂದರೆ, “ನಾನು” ಎನ್ನುವ ಭಾವ ತೊಡೆಯುವುದು. ತರುಣರಾಗಿದ್ದಾಗ ಕಲಿಯುವ ಬಹು ಮುಖ್ಯ ನೀತಿ ಉಪ್ಪು ತಿಂದ ಮನೆಗೆ ಎರ್ಡ ಬಗೆಯದಿರುವ ಮನೋಭಾವ, ಸ್ವಾರ್ಥ ಸಾಧನೆಗಾಗಿ ಊರಿಗೆ ದ್ರೋಹ ಮಾಡದಿರುವ ( ವ್ಯಕ್ತಿಗತ ಹಿತಕ್ಕಿಂತ ಸಾಮಾಜಿಕ ಹಿತವನ್ನು ಪರಿಗಣಿಸುವ ಮನೋಭಾವನೆ) ವ್ಯಕ್ತಿತ್ವದ ಬೆಳವಣಿಗೆ, ಆನಂತರದಲ್ಲಿ ಓದು ಮುಗಿದು ಮಾಗಿದ ತಾರುಣ್ಯದ ವಯಸ್ಸಿನಲ್ಲಿ ದೇಶಸೇವೆ ಈಶ ಸೇವೆ ಎಂದು ಮಾಡಿದಾಗ ಜೀವನ ಆಹಾ ಆಃ ಆಃ ಎನ್ನುವಂತಿರುತ್ತದೆ ಎಂದು ಸುಂದರವಾಗಿ ಹೆಣೆದಿದ್ದಾರೆ.  ಕನ್ನಡದ ಮುಂದಿನ ವರ್ಣಮಾಲೆಯಲ್ಲಿ ಬರುವ ವ್ಯಂಜನಗಳಿಗೂ ಅವುಗಳದ್ದೆ ಆದ ವೈಶಿಷ್ಟ್ಯ ಇದ್ದು ಇದು ಬಹಳ ಜನಕ್ಕೆ ತಿಳಿಯದು. ವ್ಯಂಜನಗಳಲ್ಲಿ ವರ್ಗೀಯ,ಅವರ್ಗೀಯ, ಅಲ್ಪಪ್ರಾಣ,ಮಹಪ್ರಾಣ ಹಾಗು ಅನುನಾಸಿಕಗಳೆಂಬ ಬಗೆಗಳಿವೆ ಇದು ಎಲ್ಲರಿಗೂ ತಿಳಿದ ವಿಚಾರ. ವರ್ಣಮಾಲೆಯ ಪ್ರತಿಯೊಂದು ಗುಂಪಿನ ಎಲ್ಲ ಸದಸ್ಯರು ನಮ್ಮ ಶ್ವಾಸ ಪ್ರಕ್ರಿಯೆಯ ವಿವಿಧ ಹಂತಗಳಿಂದ ಕ್ರಮವಾಗಿ ಮೂಡಿಬರುತ್ತವೆ. ಸ್ವರಗಳಿಂದ ಆರಂಭವಾಗುವ ಧ್ವನಿಗಳು ಹಂತ ಹಂತವಾಗಿ ಗಂಟಲಿನಿಂದ ಮೇಲೇರಿ ತುಟಿಯ ವರೆಗೂ ಬರುತ್ತವೆ. ಉದಾಹರಣೆಗೆ, ಅ,ಆ ಅಂದು ನೋಡಿ, ನಾಲಿಗೆಯ ಹಿಂದಿನ ಗಂಟಲ ಭಾಗದಿಂದ ಶಬ್ದ ಹೊರಡುತ್ತದೆ. ಕ,ಖ,ಗ ಗಳು ಅಲ್ಲಿಂದ ಮುಂದಕ್ಕೆ ಸರಿದು ನಾಲಿಗೆ ಮತ್ತು ಕಿರಿನಾಲಿಗೆಯ ಚಲನೆಯಿಂದ ಬರುತ್ತವೆ. ಹೀಗೆ ಪ.ಫ ಬ ದಲ್ಲಿ ಎರಡು ತುಟಿಗಳು ತಗುಲಿದಾಗ ಮಾತ್ರವೆ ಶಬ್ದ ಹೊರಡುವುದು. ಇಷ್ಟು ಸುಂದರವಾಗಿ, ವ್ಯವಸ್ಥಿತವಾಗಿ ಸಂಸ್ಕೃತದಿಂದ ಪ್ರೇರಿತವಾದ ಭಾರತದ ಭಾಷೆಗಳಲ್ಲದೆ ಬೇರೆ ಭಾಷೆಯಲ್ಲಿದೆಯೆಂದು ನನಗನಿಸದು. ಅದರಲ್ಲೂ, ಎಲ್ಲಾ ವರ್ಣಗಳಿಂದ ಸಮೃದ್ಧವಾದ ಕನ್ನಡ ಭಾಷೆಯಲ್ಲಿ ಈ ಬೆಡಗನ್ನು ಕಾಣಬಹುದು. ಈ ಭಾಷಾ ಸೌಂದರ್ಯವನ್ನು ಕವಿತೆಯಲ್ಲಿ ಹಿಡಿದಿಡುವ,ಅಭಿವ್ಯಕ್ತಗೊಳಿಸುವ ಅಭಿಲಾಷೆ ನನ್ನದು. ಕೇಶೀರಾಜನು ತನ್ನ ಶಬ್ದಮಣಿದರ್ಪಣದ ಕಂದ ಪದ್ಯಗಳಲ್ಲಿ  ಸ್ವರ ವ್ಯಂಜನಗಳ ಉಗಮ ಸ್ಥಾನಗಳನ್ನು ಕಂಠವ್ಯ, ತಾಲವ್ಯ ಇತ್ಯಾದಿಗಳಾಗಿ ವಿಭಾಗಿಸಿ ಹೇಳಿದ್ದಾನೆ. ಅದಕ್ಕೆ ಸ್ವಲ್ಪ ವಿಸ್ತೃತ ರೂಪ ಹಾಗು ಕಲ್ಪನೆಗಳನ್ನು ಕೊಟ್ಟು ಹೊಸಗನ್ನಡದಲ್ಲಿ ರಚಿಸಿದುದು ಈ ಕವಿತೆ

 

ಆಅ,ಇ,ಈ ಉ,ಊ ಕನ್ನಡ ಅಕ್ಷರಮಾಲೆ

ಕಲಿಯಲು ಸುಲಭ ನಡೆಸುವ ನಾವು

ಮನೆಯಲಿ ಕನ್ನಡ ಶಾಲೆ

 

ಅ,ಆ,ಇ,ಈ,ಉ,ಊ ಜೊತೆಯಲಿ

ಋ ೠ ಎ ಏ ಐ

ಒ,ಓ ಔ ಸ್ವರಗಳು ಅಂ ಅಃ

ಯೋಗವಾಹಕವೆ ಸೈ

 

ಹ್ರಸ್ವವೆ ಮೊದಲು ದೀರ್ಘ್ಹ ಅನಂತರ

ಸ್ವರಗಳು ಕ್ರಮವಾಗಿ

ಸ್ವರಗಳು ಮುಗಿದಿರೆ ವ್ಯಂಜನ

ವರ್ಣವು ಬರುವವು ಮೊದಲಾಗಿ

 

ವ್ಯಂಜನ ವರ್ಣದಿ ಅಣ್ಣ ತಮ್ಮರು

ಅಲ್ಪ- ಮಹಾಪ್ರಾಣ

ಅನುನಾಸಿಕಗಳು ನಿನಗೊಲಿದರೆ

ಮಗು ನೀನೆ ಬಲು ಜಾಣ

 

ಕನ್ನಡ ಭಾಷೆಯ ಅಕ್ಷರ ಮಾಲೆ

ಸುಂದರ ಬಲು ಸರಳ

ಕಲಿತರೆ ಭಾಷೆಯ ಬೆಳಕದು

ಕಳೆವುದು ಬಾಳಿನ ಕಾರಿರುಳ

 

ಬರೆಯಲು ಕನ್ನಡ ಲಿಪಿಯದು

ಸುಂದರ ನುಡಿಯಲು ಅತಿ ಮಧುರ

ಅಕ್ಷರ ಮಾಲೆಯ ವರ್ಗೀಕರಣ

ಜಾಣ್ಮೆಯ ಕೆನೆಪದರ

 

ಸ್ವರಗಳು ಹರಿದಿವೆ ನಾಲಿಗೆ ಹಿಂದಿನ

ಗಂಟಲ ಒಳಗಿಂದ

ವ್ಯಂಜನಗಳ ಕೊನೆ ಸಾಲಿದು

ಸಿಡಿಯಿತು ತುಟಿಗಳ ಮುತ್ತಿಂದ

 

’ಅ’ ಎನ್ನುವ ಎದೆಯಾಳದ ಸ್ವರವಿದೆ

ಅಕ್ಷರಮಾಲೆಯ ಮೊದಲಿನಲಿ

’ಮ’ ಎಂಬುವ ಅನುನಾಸಿಕವಿರುವುದು

ವರ್ಗೀಯ ವ್ಯಂಜನದೆಣೆಯಲ್ಲಿ

 

’ಅ’ಜೊತೆಯಲಿ  ’ಮ’ ಸೇರಿಸಿ ಒತ್ತಲು

’ಅಮ್ಮಾ’ ಎನ್ನುವ ಪದವಿಹುದು

ಅಂತರಾಳದ ಒಳಗಡೆಯಿಂದ ಪ್ರೀತಿಯ

ಒಸರಿಸಿ  ಮೂಡುವುದು

 

’ಅಮ್ಮಾ’ ಎನ್ನುವ ಪದದೊಳಗಡಗಿದೆ

ಅಕ್ಷರಮಾಲೆಯ ಹಿರಿವ್ಯಾಪ್ತಿ

ತಾಯಿನುಡಿ ನಮ್ಮ ಕನ್ನಡ ಕಲಿತರೆ

ಬಾಳಿಗೆ ಜೇನಿನ ಸಿಹಿ ಪ್ರಾಪ್ತಿ

 

ಅ,ಆ ಎಂದು ಹಾಡುತ ಶಬ್ದವ ನೀವೇ

ಮಾಡುತ ನೋಡಿ

ಗಂಟಲ ಗಾಳಿಯ ಕಂಪನದಿಂದ

ಮೂಡುವ ಸುಂದರ ಮೋಡಿ

 

ನಾಲಿಗೆ ಹಿಂದಿನ ಜಾಗದೊಳಿಂದ

ಬರುವವು ಸ್ವರಗಳು ಮೂಡಿ

ಕಲಿಯುತ ನಲಿಯುತ ಕುಣಿಯುತ

ಹಾಡಿರಿ ನೀವುಗಳೆಲ್ಲರು ಕೂಡಿ

 

ಅಕ್ಷರ ಮಾಲೆಯ ಮುಂದಿನ ಸಾಲಿನ

ವರ್ಣಗಳೆಲ್ಲವು ವ್ಯಂಜನವು

ಕ,ಖ ಗ,ಘ, ನಂತರ ಕಡೆಯಲಿ

ಙ ಎನ್ನುವ ಅನುನಾಸಿಕವು

 

ಕಿರುನಾಲಿಗೆಯದು ಬಂದರೆ ಜಿಹ್ವೆಗೆ

ಮುತ್ತನು ತಾ ಕೊಡಲು

ಕ ಖ ಗ ಘ  ವ್ಯಂಜನ ಮಾಲೆಯು

ಸೇರ್ವುದು ನಿನ್ನಯ ಮಡಿಲು

 

ಮುಂದಿನ ಅಕ್ಷರ ಮಾಲೆಯ ಸಾಲು

ಚ,ಛ ಜ ಝ ಎಂದು

ನುಡಿಯದು ಮೂಡಲು ಅಂಗುಳ

ಮುಟ್ಟಿಸು ನೀ ನಾಲಿಗೆಯನು ತಂದು

 

ಕ ಖ ಸಾಲಿನ ಮುಂದಕೆ ಸರಿದಿದೆ

ಚ,ಛ ಅಕ್ಷರ ಮಾಲೆ

ಕಲಿಯುತ ನಲಿಯಿರಿ ಮಕ್ಕಳೆ

ವರ್ಣಗಳೀ ಚಂದದ ಲೀಲೆ

 

ಚ ಛ ಜ ಝ ಆಯಿತು ಮುಂದಿನ

ವ್ಯಂಜನ ಯಾವುದೋ ಜಾಣ

ಟ ಠ ಡ ಢ ಎನ್ನುತ ಸೇರಿಸು ಣ

ಅನುನಾಸಿಕ ವರ್ಣ

 

ದಂತದ ಹಿಂದಿನ ಭಾಗವು ಜಿಹ್ವೆಗೆ

ತಗುಲಿರೆ ಕೇಳುತಿದೆ

ಟ,ಠ ಡ ಢ ವರ್ಣದ ಬಣ್ಣನೆಯಲ್ಲಿಯೆ

ಸೊಗಸು ಇದೆ

 

ಮುಂದಿನ ಸಾಲಿಗೆ ಸರಿಯಿರಿ ಎಲ್ಲರು

ನಾಲಿಗೆ ಆಡಿಸುತ

ಇಕ್ಕಳದಂತಿಹ ಹಲ್ಲಿನ ಮಧ್ಯಕೆ

ನಾಲಿಗೆ ತೂರಿಸುತ

 

ತ ಥ ದ ಧ ಹೇಳುತ ಕುಣಿಯಿರಿ

ಎಲ್ಲರು ಕೈಹಿಡಿದು

ಹಾಡಿನ ಜೊತೆಯಲಿ ತಾಳವ

ಹಾಕುತ ತನನನನ ಎಂದು

 

ದಂತದ ಮುಂದಿನ ಭಾಗವೆ ಬಾಯಿಯ

ಚಂದದ ಅಧರಗಳು

ಪ ಫ ಬ ಭ ಮ ಗಳೆ ಇಲ್ಲಿನ

ವ್ಯಂಜನ ಪದರುಗಳು

 

ಮೇಲ್ದುಟಿ ಕೆಳಗಿನ ತುಟಿಗಿಡುತಿರೆ ತಾ

ಸುಂದರ ಮುತ್ತೊಂದು

ಪ ಫ ಬ ಭ ಮುಗಿಯಲು  ಉಳಿವುದು

ಕೊನೆಗಿಹ ಸಾಲೊಂದು

 

ಕಟ್ಟಿರಿ ಮಕ್ಕಳೆ ಗುಂಪಿಗೆ ಸೇರದ ಈ

ವ್ಯಂಜನಗಳ ಕಂತೆ

ವೈವಿಧ್ಯತೆಯಲಿ ಏಕತೆ ತೋರುವ

ಭಾರತ ಜನಪದದಂತೆ

 

ಯ ರ ಲ ವ ಶ ಷ ಜೊತೆಯಲಿ

ಸ ಹ ಳ ಕ್ಷ ತ್ರ ಜ್ಞ

ದಿಕ್ಷೆಯ ತೊಡುತಲಿ ನಡೆಸುವ

ನಾವು ಕನ್ನಡ ಉಳಿಸುವ ಯಜ್ಞ

 

2 thoughts on “ಬೆಡಗಿನ ಕನ್ನಡ ವರ್ಣಮಾಲೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.