(Photo: Murali Hathwar)
ಫುಲ್ವಾಮದಲ್ಲಿ ಹೋದ ವಾರ ೪೦ ಜವಾನರ ಜೀವ ತೆಗೆದ ಹೇಯ ಘಟನೆ, ಭಾರತದೆಲ್ಲೆಡೆಯಷ್ಟೇ ಅಲ್ಲದೆ ಅನಿವಾಸಿ ಭಾರತೀಯರಲ್ಲೂ ವಿಷಾದ, ಕೋಪ, ಅಸಹನೆ, ಅಸಹಾಯಕತೆ, ಸಾಂತ್ವನ, ಹೋರಾಟ ಹೀಗೆ ಹಲವಾರು ಭಾವನೆಗಳನ್ನ ಸ್ಪೋಟಿಸಿದೆ. ಈ ಭಾವನೆಗಳು ಬೇರೆ ಬೇರೆ ರೂಪದಲ್ಲಿ ಪ್ರಕಟಗೊಂಡಿವೆ. ಲಂಡನ್, ಮ್ಯಾಂಚೆಸ್ಟರ್ ಗಳಲ್ಲಿ ಪ್ರತಿಭಟನೆಯ ಮಾರ್ಚ್ ನಡೆದಿದೆ. ವಾಟ್ಸಪ್ಪ್, ಫೇಸ್ಬುಕ್ ನಂತಹ ತಾಣಗಳಲ್ಲಿ ಕಮೆಂಟುಗಳು, ಮೆಮೇಗಳು, ವಿಡಿಯೋಗಳ ರೂಪದಲ್ಲಿ ಸಂತಾಪ, ಪ್ರತೀಕಾರಗಳ ಮೆಸೇಜುಗಳು ಯಥೇಚ್ಛವಾಗಿ ತಳ್ಳಿಕೊಂಡಿವೆ. ರಾಜಕಾರಣಿಗಳು ಸರಾಗವಾಗಿ ಪಿಟಿ-ಪ್ರೆಯ್ಸ್-ಪ್ರಾಮಿಸ್ (೩ ಪಿ) ಜೋಡಿಸಿಕೊಂಡು ಮಿಡಿಯಾಗಳ ಕಿಟಕಿ ತುಂಬಿಕೊಂಡಿದ್ದಾರೆ. ಚುನಾವಣೆಯ ವರ್ಷವಾದ್ದರಿಂದ ಅಳೆದು-ಬಳೆದು ಮಾತು ಹೊರಡಿಸುತ್ತಿದ್ದಾರೆ. ಹಲವು ದಶಕಗಳಿಂದ ಹೊತ್ತಿ ಉರಿಯುತ್ತಿರುವ ಕಾಶ್ಮೀರದ ಕಣಿವೆಯ ಹಲವು ಜಿಲ್ಲೆಗಳಲ್ಲಿ ಇತ್ತೀಚಿಗೆ ಯುವಕರನೇಕರು ಜಿಹಾದಿನ ಹಾದಿ ತುಳಿಯುತ್ತಿರುವದು ಹೊಸ ಕಗ್ಗಂಟಾಗಿದೆ. ಬಿಡಿಸುವ ಕಾಳಜಿ, ಆತುರ ಯಾರಲ್ಲೂ ಕಾಣುತ್ತಿಲ್ಲ. ಒಂದೋ ಎರಡೋ ಸೈನಿಕರು ಸತ್ತರೆ ಅದು ಸುದ್ದಿಯೇ ಆಗದಷ್ಟು ಆಗಲೇ ಸತ್ತಾಗಿದೆ. ಸುದ್ದಿ ಮಾಡಲು ಉಗ್ರರೂ ಹೊಸ-ಹೊಸ ದಾರಿ ಹುಡುಕುತ್ತಿದ್ದಾರೆ. ಫುಲ್ವಾಮ ಸದ್ಯ ಹಸಿಯಾಗಿದೆ. ಹಿಂದಿನ ಎಷ್ಟೋ ಘಟನೆಗಳಂತೆ ಇದೂ ಮರೆಯಲು ಹೆಚ್ಚು ದಿನ ಬೇಕಾಗುವುದಿಲ್ಲ, ನೆಮ್ಮದಿಯ ನಿದ್ರೆ ಮಾಡುವ ನಮ್ಮಗಳಿಗೆ. ಹಾಗೆ ಮರೆಯುವ ಮುನ್ನ, ಅಗಲಿದ ಯೋಧರಿಗೆ, ಅವರ ಕುಟುಂಬದವರಿಗೆ ಅನಿವಾಸಿಯ ನುಡಿಕಂಬನಿ ಈ ಲೇಖನ.
ನಮ್ಮ ಕರೆಗೆ ಸ್ಪಂದಿಸಿ ತಮ್ಮ ವಿಚಾರಗಳನ್ನ ಹಂಚಿಕೊಂಡ ಅನಿವಾಸಿಗಳಿಗೆ ವಂದನೆಗಳು. ಆದಷ್ಟು ಹೆಚ್ಚು ಜನರಿಗೆ ಅವಕಾಶವಾಗಲಿ ಎನ್ನುವ ಕಾರಣ ೧೫೦ ಅಕ್ಷರಗಳ ಮಿತಿ ಸೂಚಿಸಿದ್ದೆ. ಸ್ಪಂದಿಸಿದವರು ಮೂರು ಜನ – ಭಾವನೆಗಳ ಹರಿವು ಅಕ್ಷರಗಳ ಮಿತಿಯನ್ನ ಮರೆಸಿದೆ. ಉಳಿದವರು ಕಮೆಂಟುಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ನಂಬುತ್ತೇನೆ.
ಎಂದಿನಂತೆ, ವಿಚಾರಗಳ ಹೊಣೆ ಆಯಾ ಲೇಖಕರದ್ದು.
೨. ಫುಲ್ವಾಮ ಹತ್ಯಾಕಾಂಡ
– ರಾಮಶರಣ್ ಲಕ್ಷ್ಮೀನಾರಾಯಣ್
ದಿಗ್ಭ್ರಮೆ, ನೋವು, ಕ್ರೋಧ, ಅಸಹಾಯಕತೆ – ಭಾವನೆಗಳ ಅಲೆಗಳು ಅಪ್ಪಳಿಸಿ ಮನವನ್ನು ಅಲ್ಲೋಲ ಕಲ್ಲೋಲಗೊಳಿಸಿತು ಪುಲ್ವಾಮ ನರಮೇಧದ ಸುದ್ದಿ. ಕಳೆದ ಕೆಲವು ವರ್ಷಗಳಿಂದ ಬೃಹತ್ ಭಯೋತ್ಪಾದಕ ದಾಳಿಯಿಂದ ಸುರಕ್ಷಿತವಾದ ದೇಶದ ನೆಮ್ಮದಿಯ ಜೋಂಪು ಈ ಭೀಕರ ಪ್ರಸಂಗದಿಂದ ನುಚ್ಚುನೂರಾಗಿದೆ.
ದಾಳಿಯಲ್ಲಿ ನೋಂದ, ‘ಬೆಂದ ‘ ಸೈನಿಕರ ಕುಟುಂಬಗಳೆಡೆ ನಮ್ಮ ಸಂತಾಪದ ಹೊಳೆ ಹರಿಯುವುದರ ಜೊತೆಗೇ ಕಾಶ್ಮೀರೀ ಪ್ರತ್ಯೇಕತಾವಾದಿಗಳೆಡೆ ಮೊದಲ ಕೋಪದ ಉರಿ ಹರಿಯುವುದು ಸಹಜ. ಆದರೊಟ್ಟಿಗೆe ಈ ಗುಂಪಿನ ಅವಳಿಗಳಾದ ಪಾಕ್ ನ ISI ಹಾಗೂ ಪಾಕ್ ನೆಲೆಯ ಭಯೋತ್ಪಾದಕ ಗುಂಪುಗಳ ಮೇಲೂ. ಯಾವುದೇ ಕ್ರಿಯೆಗೆ ಕಾರಣ ಹುಡುಕುವುದು ಮನುಷ್ಯನ ಮನೋಧರ್ಮ. ಈ ಕಾರಣ ನಮ್ಮ ತರ್ಕಕ್ಕೆ ಅಪ್ಯಾಯಮಾನವಾದದ್ದಕ್ಕೆ ತಗಲಿ ಹಾಕಿಕೊಳ್ಳುವುದೇ ಸಾಮಾನ್ಯ. ಆದರೆ ದೇಶದ ಸುಭದ್ರತೆಗೆ ಮಾರಕವಾಗುವಂತಹ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಈ ಸಾಮಾನ್ಯತೆಯನ್ನು ಮೀರಿ ಪರಿಹಾರ ಹುಡುಕಬೇಕಾದದ್ದು ಅನಿವಾರ್ಯ.
ಪುಲ್ವಾಮ ಕೃತ್ಯದ ನಂತರ ನಿರಂತರವಾಗಿ ಹರಿಯುತ್ತಿರುವ ಸಾಮಾಜಿಕ ಜಾಲ ತಾಣದ ಸಂದೇಶ ಪ್ರವಾಹದಲ್ಲಿ ಎರಡು ಮುಖ್ಯ ಕವಲುಗಳನ್ನು ಕಾಣುತ್ತಿದ್ದೇವೆ. ಒಂದು ಸಂತೃಸ್ತರ ಕುಟುಂಬಗಳಿಗೆ ಸಹಾಯ ಮಾಡುವ ದಿಕ್ಕಿನಲ್ಲಿ ಹರಿದರೆ, ಇನ್ನೊಂದು ಕೃತ್ಯಕ್ಕೆ ಕಾರಣಿeಭೂತರೆಂಬ ದೋಷಿಗಳತ್ತ ಬೆರಳು ತೋರಿಸುವಂಥದ್ದು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟು, ನಂತರ ತೊಂದರೆಯನ್ನು ವಿಶ್ವಸಂಸ್ಥೆಯ ದ್ವಾರಕ್ಕೆ ಕೊಂಡೊಯ್ದರೆಂಬ ನೆಹರೂರವರಿಂದ, ಇತ್ತೀಚೆಗೆ ವಾಹನ ಪರಿಶೀಲನೆಯ ಆಣತಿಯನ್ನು ರದ್ದುಗೊಳಿಸಿದ ಮೆಹಬೂಬಾ ಮುಫ್ತಿಯವರವರೆಗೆ ರಾಷ್ಟ್ರ – ಅಂತಾರಾಷ್ಟ್ರೀಯ ಗಣ್ಯರು- ನಗಣ್ಯರು ಜನರ ಕ್ರೋಧಾನಲಕ್ಕೆ ಸಿಲುಕಿದ್ದಾರೆ.
ನಮಗಿಂದು ಇತಿಹಾಸ ಬದಲಿಸುವ ಸಾಧ್ಯತೆಗಳಿಲ್ಲ; ಆದರೆ ಇತಿಹಾಸ ನಿರ್ಮಿಸುವ ತಾಕತ್ತಿದೆ. ನಮ್ಮ ಸಾಮರ್ಥ್ಯವನ್ನು ವಾಟ್ಸಾಪ್, ಫೇಸ್ ಬುಕ್ ಗಳ ಸಂದೇಶ ಪಟಾಕಿಯನ್ನು ಸಿಡಿಸಿ ವ್ಯರ್ಥವಾಗಿಸುವ ಬದಲು ಸಧೃಡ ದೇಶ ನಿರ್ಮಾಣಕ್ಕೆ ಬಳಸಬೇಕೆನ್ನುವುದು ನನ್ನ ಅಭಿಪ್ರಾಯ. ಪ್ರಜಾತಂತ್ರಿಗಳಾದ ಭಾರತೀಯ ಪ್ರಜೆಗಳಲ್ಲಿದೆ ಈ ಶಕ್ತಿ. ದುಡ್ಡಿನಾಸೆಗೆ ಮತ ಮಾರಿ, ನಮ್ಮ ಆಶೆ – ಆಕಾಂಕ್ಷೆಗಳನ್ನು ತೂರುವುದನ್ನು ನಾವು ನಿಲ್ಲಿಸಬೇಕು. ನಮ್ಮ ಪ್ರಯತ್ನವನ್ನು ಮೊಸಳೆ ಕಣ್ಣೀರಿನ, ಸ್ವಂತ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ, ಪುಡಾರಿಗಳ ಬಂಡವಾಳವನ್ನು ಬೆತ್ತಲೆ ನಿಲ್ಲಿಸುವ ನಿಟ್ಟಿನಲ್ಲಿ ಕ್ರೋಡೀಕರಿಸಬೇಕು. ದೇಶ ಹಿತವನ್ನು ಕೇಂದ್ರದಲ್ಲಿರಿಸುವ ಸರಕಾರವನ್ನು ಅಧಿಕಾರದಲ್ಲಿರಿಸುವ ಹೊಣೆ ಜನಸಾಮಾನ್ಯರದ್ದು. ದೇಶ ಹಿತದ ಹೊಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಸರಕಾರ ಮಾತ್ರ ದೀರ್ಘಕಾಲದ ಶಾಂತಿ-ಸಮೃದ್ಧಿಯನ್ನು ದೇಶಕ್ಕೆ ತರಲು ಶಕ್ಯ. ಆ ದಿಸೆಯಲ್ಲಿ ಮಾಡೋಣ ನಮ್ಮ ಹೋರಾಟ.
೩. ಫುಲ್ವಾಮಾ ದಾಳಿಯ ಹೊಗೆಯಲ್ಲಿ ಮಸುಕಾದ ಸತ್ಯಗಳು- ಹೊರಬಂದ ಹೆಗ್ಗಣಗಳು
– ಸುದರ್ಶನ ಗುರುರಾಜರಾವ್
ಇತ್ತೀಚಿಗೆ ಗಡಿರಕ್ಷಿಸುತ್ತಾ ನಾಡನ್ನು ಕಾಯುವ ನಮ್ಮ ಯೋಧರ ಮೇಲೆ ನಡೆದ ಇಸ್ಲಾಮಿಕ್ ಉಗ್ರನ ಆತ್ಮಹತ್ಯಾದಾಳಿ ಹಿಂದೆಂದಿಗಿಂತಲೂ ಕ್ರೂರಭೀಕರವಾದದ್ದಷ್ಟೇ ಅಲ್ಲ, ಉಗ್ರರಾಯಿಗೆ ದೇಶದ ಒಳಗೂ ಹೊರಗೂ ಸಿಗುತ್ತಿರುವ Logistical ಬೆಂಬಲದ ವ್ಯಾಪ್ತತೆ ಗಹನತೆಯನ್ನು ತೋರಿಸುತ್ತದೆ. ಪ್ರಾಣತ್ಯಾಗ ಮಾಡಿದ ಎಲ್ಲರಿಗೂ ನಮ್ಮ ನುಡಿನಮನಗಳನ್ನು ತಿಳಿಸುತ್ತಾ, ಭಾವ ಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತಾ ಈ ಸಮಯದಲ್ಲಿ ನಾವು ಮಾಡಿಕೊಳ್ಳಬೇಕಾದ ಆತ್ಮಾವಲೋಕನೆಯ ಒಂದು ಒಳನೋಟ ಇಲ್ಲಿದೆ.
ಈ ಘಟನೆ ನಡೆದಾಕ್ಷಣ ದೇಶವೇ ಶೋಕ-ಆಘಾತ-ಸಾತ್ವಿಕ ರೋಷಗಳಲ್ಲಿ ಮುಳುಗಿ ಮೂಕವಾಗಿದ್ದಾಗ ಬಾಂಬಿನ ಹೊಗೆಯಿಂದ ಹೊರಬಂದ ಇಲಿ ಹೆಗ್ಗಣಗಳಂತೆ ಇರುವ, ಭಯೋತ್ಪಾದಕರ ಬೆಂಬಲಕ್ಕೆಂದೇ ನಿಂತಿರುವ ಮಾಧ್ಯಮವೀರರು, ಬುದ್ಧಿಜೀವಿಗಳು, ನಾನು ಗೌರಿ-ನಾವೆಲ್ಲಾ ಗೌರಿ ಎಂದು ಗೌರೀ ಬೀಜ ಬಿತ್ತಿದ ವಿಚಾರವಾದಿಗಳು, ಇತ್ಯಾದಿಗಳು ಇದು ಮೋದಿಯೇ ಮಾಡಿಸಿದ ಕೆಲಸ, ಉಗ್ರರನ್ನು ಒದೆದುರುಳಿಸುವುದರ ಬದಲು ಮಾತುಕತೆ ಆಡಿ,ಪ್ರತೀಕಾರ ಬೇಡ-ಪರಿಹಾರ ಇರಲಿ, ಬಂದೂಕಿನ ತುದಿಗೆ ಗುಬ್ಬಿ ಗೂಡು ಕಟ್ಟಲಿ, ಭಯೋತ್ಪಾದಕತೆಗೆ ಧರ್ಮವಿಲ್ಲ-ಭಯೋತ್ಪಾದಕರಿಗೆ ದೇಶವಿಲ್ಲ ಎಂಬ Apologetic ಹೇಳಿಕೆ ಕೊಟ್ಟದ್ದು ಒಂದು ಕಡೆಯಾದರೆ “ಹೌ ಐಸ್ ದಿ jaish” ಅನ್ನುವವರೂ, ಪಾಕಿಸ್ತಾನ್ ಜಿಂದಾಬಾದ್ ಎಂದವರೂ ಕಡಿಮೆಯೇನಿರಲಿಲ್ಲ. ಭಾರತದಲ್ಲಿ ಬದುಕುವುದಕ್ಕೆ ಭಯವಾಗಿದೆ ಎಂದು ಗೋಳಿಡುವ ಖಾನ್ಗಳು ,ನಾಸಿರುದ್ದೀನ್ ಷಾ ಉಸಿರೆತ್ತಿ ಖಂಡಿಸಿಲ್ಲ!! ಅವರನಿಷ್ಠೆ ಧರ್ಮಕ್ಕೆ ಹೊರತು ದೇಶಕ್ಕಲ್ಲ !! ಹೊರಗಿನ ವೈರಿಗಳಿಗಿಂತ ಒಳಗಿನ ವೈರಿಗಳು ಹೆಚ್ಚು ಅಪಾಯಕರ. ಇಂತಹ ತೆರೆದ ಸತ್ಯಗಳ ಅನಾವರಣಕ್ಕೂ ಯೋಧರು ಪ್ರಾಣತೆರಬೇಕಾದ ಪರಿಸ್ಥಿತಿ ಇರುವುದು ವಿಪರ್ಯಾಸ.
ಪದಗಳ ಮಿತಿಯಿರುವಲ್ಲಿ ಹೆಚ್ಚು ಬರೆಯಲು ಆಗುವುದಿಲ್ಲ.ಹಾಗೆಂದು ಕೇವಲ ತಿಪ್ಪೆ ಸಾರಿಸಿದಂತೆ ಆಡುವ ಕೆಲವು ಶ್ರದ್ಧಾಂಜಲಿ ಮಾತುಗಳಿಗೂ ಬೆಲೆಯೇನೂ ಇರುವುದಿಲ್ಲ ಕೆಳಗೆ ಕೆಲವು ಸುಭಾಷಿತಗಳಿವೆ. ಓದುಗರ ಪರ್ಯಾವಲೋಕನೆಗೆ.
೧. ಹಾಲಿನಲ್ಲಿ ಒಂದು ತೊಟ್ಟು ವಿಷವಿದ್ದರೂ ಕುಡಿದರೆ ಪ್ರಾಣ ಹೋಗುವುದೇ ಸರಿ. (ಕೇವಲ ಬರವಣಿಗೆ ಮಾಡಿದ ಮಾತ್ರಕ್ಕೆ ಮಹಾತ್ಮರಾದ(?) ದೇಶನಿಷ್ಠೆ ಇಲ್ಲದ, “ಭಾರತ್ ತೆರೆ ತುಕಡಿ ಹೊಂಗೆ’ ಎಂದವರನ್ನು ಬೆಂಬಲಿಸಿದ ಗೌರಿ, ಬರ್ಕಾ, ಯಂಥವರ ಕುರಿತು)
೨. ದೇಶಭಕ್ತಿಯ ಜವಾಬ್ದಾರಿ ಇಲ್ಲದೆ ಹೋದರೆ ದೇಶಭಕ್ತರ ಭಯವಾದರೂ ಇರಬೇಕು ( ರಾಷ್ಟ್ರಭಕ್ತಿಯನ್ನು ಸಾಮೂಹಿಕ ಸ್ತರದಲ್ಲಿ ಅಭಿವ್ಯಕ್ತಿಗೊಳಿಸುವುದರ ಅವಶ್ಯಕತೆ ಕುರಿತಂತೆ)
೩. ಯಥಾ ಚಿತ್ತಂ ತಥಾವಾಚ ಯಥಾ ವಾಚ: ತಥಾಕ್ರಿಯಾ ಚಿತ್ತೇ ವಾಚೀ ಕ್ರಿಯಾಯಾಂಚಾ ಸಾಧೂನಾಮ್ ಏಕ ರೂಪತಾ – ನಡೆ ನುಡಿ ಆಲೋಚನೆಗಳಲ್ಲಿ ಸಾಮ್ಯ ಇರುವವರು ಸಜ್ಜನರು. ತಾದಾತ್ಮ್ಯವಿರದೆ ವೈರುದ್ಧ್ಯವಿದ್ದವರು ಇಂದಿಗೂ ಎಂದಿಗೂ ದ್ರೋಹಿಗಳೇ.
೪.ಯಾ ಉತ್ಪ್ರೇಕ್ಷಿತ ಶತ್ರುಮ್ ಸ್ವಂ ಪ್ರಸರಂತಂ ಯದೃಚ್ಛಯಾ।ರೋಗಂ ಚಾಲಸ್ಯ ಸಂಯುಕ್ತಮ್ ಸ ಶನೈಸ್ತೇ ನಾ ಹನ್ಯತೇ – ಉಪೇಕ್ಷೆ ಮಾಡಿದ ಶತ್ರು, ರೋಗ ಎರಡೂ ಇಂದಲ್ಲಾ ನಾಳೆ ಕೊಲ್ಲುವುದೇ
೫. ಪಿತಾಚಾರ್ಯ: ಸುಹೃನ್ಮಾತಾ ಭಾರ್ಯಾ ಪುತ್ರ: ಪುರೋಹಿತ: ನಾದಂಡಯೋ ನಾಮ ರಾಜ್ನೋಸ್ತಿ ಯಃ ಸ್ವಧರ್ಮೇ ನ ತಿಷ್ಠತಿ (ಮನುಸ್ಮೃತಿ): ತಂದೆ ತಾಯಿ ಆಚಾರ್ಯ, ಮಿತ್ರ ಹೆಂಡತಿ, ಮಕ್ಕಳು ಯಾರೇ ಆಗಲಿ, ಧರ್ಮವನ್ನು ಬಿಟ್ಟಲ್ಲಿ ದಂಡನೆ ತಪ್ಪಿಸಬಾರದು.
ರಾಮಾಯಣ ಮಹಾಭಾರತಗಳೂ ಯುದ್ಧದಲ್ಲಿ ಕೊನೆಯಾದದ್ದೇ ಧರ್ಮ ಸಂಸ್ಥಾಪನೆಗಾಗಿ.ಹೇಡಿತನಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ರಾಮನನ್ನೇ ನಿಂದಿಸುವ, ಕೃಷ್ಣನನ್ನೇ ತೆಗಳುವ, ದುರ್ಯೋಧನನೇ ಆದರ್ಶಪ್ರಾಯವಾಗಿರುವ ಕೆಟ್ಟದೆಲ್ಲವೂ ಸ್ವೀಕೃತವೆನ್ನುವ, ದೇಶದೊಳಗಣ ಅಕ್ಷರ ಭಯೋತ್ಪಾದಕರನ್ನೂ ಹೊರಗಿನವರ ಜೊತೆಗೆ ಇಂದು ನಿಗ್ರಹಿಸುವ ಅನಿವಾರ್ಯತೆಯಿದೆ. ಸಮಾಜದ ಕಲಿತವರು, ಕಲಿಯದವರಿಗೂ ತಮ್ಮ ಆದರ್ಶಗಳು ಯಾರಿರಬೇಕು ಎಂಬುವುದರ ಆತ್ಮಾವಲೋಕನೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ,ಊರು ಬಾರಿ ಸೋತು ಜೀವದಾನ ಪಡೆದ, ಕ್ಷತ್ರಿಯ ಧರ್ಮವೆಂದರೇನೆಂದು ತಿಳಿಯದ ಘೋರಿ ಮಹಮ್ಮದನ ಮೋಸಕ್ಕೆ ಪೃಥಿವೀರಾಜ ಬಲಿಯಾದದ್ದು!!ಅಪಾತ್ರರಿಗೆ ಕೊಟ್ಟ ದಾನ ತೋರಿದ ಕರುಣೆ ಎಂದಿಗೂ ಶ್ರೇಯಸ್ಕರ ಫಲಗಳನ್ನು ಕೊಡಲಾರದು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಕೊಳ್ಳಲು ಖಡ್ಗ ಹಿಡಿದು ನಿಂತವನ ಬಳಿ ಶಾಂತಿ ಮಾತುಕತೆ ನಡೆಸುವುದಾದ್ರೂ ಹೇಗೆ? ಕಾಶ್ಮೀರದ ಈ ಭಯೋತ್ಪಾದನೆ ರಾಜಕೀಯವಲ್ಲ, ಅದು ಮತಿಹೀನ ಮತಾಂಧರ ಆಟ. ತನ್ನನ್ನು ತಾನೇ ಸ್ಫೋಟಿಸಿಕೊಂಡು ಸತ್ತ ಯುವಕ ತಾನು ಜನ್ನತ್ ಗೆ ಹೋಗಿ ಅಲ್ಲಿ ಮಜಾ ಮಾಡುವುದಾಗಿ ಹೇಳಿಯೇ ಈ ಕೆಲಸ ಮಾಡಿದ್ದಾನೆ. ಬಾಹಿರನಾದಾಗ ಕರ್ಣನೂ ,ಭೀಷ್ಮನೂ ಶಲ್ಯನೂ ದುರ್ಯೋಧನನೂ ಎಲ್ಲರೂ ವಧ್ಯರೆ.
“ಇದಂ ಬ್ರಹ್ಮಮ್ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ” ಎಂಬ ಪರಶುರಾಮ ವಾಕ್ಯ ನಮಗೆ ಆದರ್ಶಪ್ರಾಯವಾಗಬೇಕಿದೆ.
ಪುಲ್ವಾಮಾ
ಹೇಗೆಲ್ಲಾ ಪ್ರತೀಕಾರ ತೆಗೆದುಕೊಳ್ಳಬೇಕೆಂದು ಹೇಳುವುದು ಬಹಳ ಸುಲಭ ಆದರೆ ಅದರ ಪರಿಣಾಮ ಉತ್ತಮ ರೀತಿಯಲ್ಲಿ ದೀರ್ಘಾವಧಿ ಕಾಲದಲ್ಲಿ ಭವಿಷ್ಯದಲ್ಲಿ ಲಾಭದಾಯಕವಾಗಿರಬೇಕು. ಯಾಕೆಂದರೆ ನಮ್ಮ ಪಕ್ಕದ ದೇಶದಲ್ಲಿ ಒಂದೇ ಅಧಿಕಾರದ ಕೇಂದ್ರಗಳಿಲ್ಲ ಮತ್ತು ಅವಿವೇಕಿಗಳೇ ತುಂಬಿದ್ದಾರೆ. ಒಳ್ಳೆಯ ಪ್ರಧಾನ ಮಂತ್ರಿ ಇರುವಾಗ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆಂದು ಸುಮ್ಮನಿರುವುದಕ್ಕಿಂತ ಏನು ಮಾಡಲು ಸಾಧ್ಯ?
LikeLike