ಸದ್ದಿಲ್ಲದೇ ಸ್ತ್ರೀ ಶಿಕ್ಷಣಕ್ಕೆ ನಾಂದಿ ಹಾಡಿದ ಹರಿಕಾರ..

ಅಖಂಡ ಮಂಡಲಾಕಾರಾಂ ವ್ಯಾಪ್ತಮ್ ಯೇನ ಚರಾಚರಂ                                            image.png
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರುಭ್ಯೋ ನಮಃ!
ಧರ್ಮ, ಧಾರ್ಮಿಕತೆಗಳ ಸರಿ ಅರ್ಥಕ್ಕೊಂದು ಸುಧೀರ್ಘ ಉದಾಹರಣೆ, ವ್ಯಾಖ್ಯಾನ ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ೧೧೧ ವರ್ಷದ ಜೀವನ. ಅವರ ಸಾಧನೆ, ದೂರ ದೃಷ್ಟಿಯ ಒಂದು ಉದಾಹರಣೆ ಅನಿವಾಸಿಯೊಂದಿಗೆ ಹಂಚಿಕೊಂಡಿದ್ದಕ್ಕೆ ಕೆನಡ ವಾಸಿ, ಅರಿವಳಿಕೆ ವೈದ್ಯ ಸುದರ್ಶನರಿಗೆ ಧನ್ಯವಾದ. ಹಾಗೆಯೇ, ಅವರ ಈ ನುಡಿನಮನಕ್ಕೆ ಸ್ಪೂರ್ತಿಯಾದ ಅವರ ತಾಯಿಗೂ, ಗುರುಗಳಿಗೂ ಭಕ್ತಿಪೂರ್ಣ ಸಾಷ್ಟಾಂಗ ನಮಸ್ಕಾರಗಳು.
image.png

ಸರಿ ಸುಮಾರು ನೂರಾಹನ್ನೊಂದು ವರ್ಷಗಳ ಕಾಲ ದೇಶಸೇವೆಯೇ   ಈಶಸೇವೆ ಎಂದೆನ್ನುತ್ತಾ , ಜನತೆಯಲ್ಲಿಯೇ ಜನಾರ್ದನನನ್ನು ಕಂಡು ನಮ್ಮನ್ನಗಲಿದ ಯುಗಪುರುಷ, ನಡೆದಾಡುವ ದೇವರೆಂದೇ ಜನಮಾನಸಗಳಲ್ಲಿ ನೆಲೆಯಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳು ನಮ್ಮನ್ನು ತೊರೆದು ನೈತಿಕವಾಗಿ ದಿನೇ ದಿನೇ  ಅಧೋಗತಿಗಿಳಿಯುತ್ತಿರುವ ನಮ್ಮ ಸಮಾಜವನ್ನು ಆ ಮೂಲಕವಾಗಿ ಸಾತ್ವಿಕ ಸಮುದಾಯವನ್ನು ಅನಾಥರನ್ನಾಗಿ ಮಾಡಿ ಹೋದದ್ದು ದುಃಖಕರವಾದ ಸಂಗತಿಯೇ ಸರಿ. ಕಾಲನ ಕರೆಗೆ ಓಗೊಡದವರಾರು?

ಸ್ವಾಮೀಜಿಗಳ ಬಗ್ಗೆ ಅವರು ಹಗಲಿರುಳು ದುಡಿದು ಕಾಯಾ ವಾಚಾ ಮನಸಾ ದೀನರ ಕರೆಗೆ ಓಗೊಟ್ಟದ್ದು, ಏನೂ ಇದ್ದಿಲ್ಲದ ಒಂದು ಬಿಡಿ ಮಠವನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಿದ್ದು, ಆ ಮೂಲಕವಾಗಿ ಲಕ್ಷಾಂತರ ಜೀವಗಳ ಅಭಿವೃದ್ಧಿಗೆ ಕಾರಣರಾದದ್ದು , ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ಸರಕಾರಗಳ ಅನೀತಿಯ ಕಾಕದೃಷ್ಟಿಗೆ ಬಿದ್ದು ಕಷ್ಟ ಅನುಭವಿಸಿದರೂ ಒಂದೇ ಒಂದು ಮಾತನಾಡದೆ ಮಠದ ಮಕ್ಕಳಿಗೆ ಅನ್ನಪೋಷಣೆ ವಿದ್ಯಾದಾನಗಳನ್ನು ಅವಿರತವಾಗಿ ಮುಂದುವರಿಸಿದ್ದು ಎಲ್ಲವನ್ನು ಕೇಳಿ, ಓದಿ ತಿಳಿದಿದ್ದೇವೆ. ಇವೆಲ್ಲದರ ನಡುವೆ ತುಮಕೂರಿನ ಆಸುಪಾಸಿನಲ್ಲಿ ನಾನಾ ಕಾರಣಗಳಿಗೆ ವಿದ್ಯಾಭ್ಯಾಸಕ್ಕ್ಕೆ  ಅವಕಾಶವಿಲ್ಲದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಸಮಾನತೆಯ ಹರಿಕಾರ ಶ್ರೀ ಸ್ವಾಮೀಜಿಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲದ ವಿಚಾರ.

ಸಿದ್ಧಗಂಗಾ ಮಠದ ಶಾಲೆಯ ಮೊತ್ತ ಮೊದಲ ವಿದ್ಯಾರ್ಥಿನಿಯಾದ ನನ್ನ ತಾಯಿಯ ಅನುಭವದ  ಪರಿಚಯ ಈ ಲೇಖನದ ಉದ್ದೇಶ. ಇದನ್ನು ಹೇಳುವಾಗ, ಬರೆಯುವಾಗ ಭಕ್ತಿ, ಕೃತಜ್ಞತೆಗಳು ಎದೆತುಂಬಿ ನಿಂತಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ .

೧೯೫೪ ನೇ ಇಸವಿ. ತಂದೆ ಕಾಲವಾದ ನಂತರ, ಬೇರೆ ಆಧಾರವೇನೂ ಇಲ್ಲದೆ  ಆಂಧ್ರಪ್ರದೇಶದ ,ಕನ್ನಡ ತೆಲುಗು ಸಂಸ್ಕೃತಿ ಭಾಷೆಗಳ ಬೀಡಾದ ಕೌತಾಳಂ ಎಂಬ ಕುಗ್ರಾಮದಿಂದ ಹೋರಾಡಬೇಕಾದ ಅನಿವಾರ್ಯತೆ ತಾಯಿ ಹಾಗು ಆರನೇ ತರಗತಿ ಓದಿದ ಹುಡುಗಿಗೆ ಧುತ್ತೆಂದು ಎದುರಾಗುತ್ತದೆ. ಅಣ್ಣನಾದರೋ ಯಾವುದೋ ದೂರದ ಊರಿನಲ್ಲಿ ಚಿಕ್ಕದೊಂದು ಕೆಲಸಕ್ಕಿದ್ದ. ಯಾವ ಸೌಕರ್ಯಗಳಿಲ್ಲದ ಊರಿನಲ್ಲಿ ಒಬ್ಬೊನ್ಟಿಯಾಗಿದ್ದ ಆತನ ಜೊತೆ ಇರುವ ಸಾಧ್ಯತೆಗಳಿಲ್ಲದ  ಕಾರಣ ಈಗಾಗಲೇ ಮದುವೆಯಾಗಿದ್ದ ತನ್ನ ಅಕ್ಕನ ಮನೆಯಲ್ಲಿ ಇರುವ ತಾತ್ಕಾಲಿಕ ವ್ಯವಸ್ಥೆಗೆ ನಿರ್ಧಾರ ಮಾಡಲಾಗುತ್ತದೆ. ತುಮಕೂರು ಜಿಲ್ಲೆಯ ಕುಗ್ರಾಮವಾದ ಮೈದಾಳ ಎಂಬಲ್ಲಿ ಬಂದು ಸೇರಿದ ನಮ್ಮ ತಾಯಿ ಮನೆತುಂಬ ಮಕ್ಕಳಿದ್ದ ತನ್ನ ಅಕ್ಕನಿಗೆ ಸಹಾಯಕಳಾಗಿ ಸ್ವಲ್ಪ ದಿನ ನಿಂತಳು. ಅಕ್ಕನ ಮೊದಲ ಮಗ ನನ್ನ ತಾಯಿಗಿಂತ ಕೇವಲ ಮೂರೂ ವರ್ಷ ಚಿಕ್ಕವ. ಹಾಗಾಗಿ ನನ್ನ ತಾಯಿಯು ತನ್ನ ಅಕ್ಕನ ಮಕ್ಕಳಲ್ಲಿ ಒಬ್ಬಳಾಗಿಯೇ ಉಳಿದಳು. ಆಗ ತುಮಕೂರು ಜಿಲ್ಲೆಗೆ ಖ್ಯಾತವಾದ, ವಿಶಾಲವಾದ, ವರ್ಷ ಪೂರ್ತಿ ಮೈದುಂಬಿ ನಳನಳಿಸಿ ತುಮಕೂರು ನಗರಕ್ಕೆ ನೀರು ಪೂರೈಸುತ್ತಿದ್ದ ಮೈದಾಳದ ಕೆರೆಯ ನೀರಿನ ನಿರ್ವಹಣೆ ನನ್ನ ತಾಯಿಯ ಭಾವನ ಕೆಲಸ.ನನಗೆ ದೊಡ್ಡಪ್ಪನಾಗಬೇಕು. ಸಣ್ಣ ಕೆಲಸ, ಕಡಿಮೆ ಸಂಬಳ, ಮನೆತುಂಬ ಜನ , ಬಡತನ ಎಂದು ಬೇರೆ ಹೇಳ ಬೇಕಿಲ್ಲವಷ್ಟೆ. ಇಷ್ಟಾಗಿಯೂ ಪ್ರೀತಿ ವಿಶ್ವಾಸಗಳಿಗೆ ಕಡಿಮೆಯಿರದಂತೆ, ಜವಾಬ್ದಾರಿಗಳಿಗೆ ಹೆಗಲು ಕೊಡುವ ಸಂಸ್ಕೃತಿ, ಮನಸ್ಥಿತಿ ಅಂದಿನ ದಿನಗಳಲ್ಲಿ ಶ್ರೀಮಂತವಾಗಿಯೇ ಇತ್ತು. ಯಾವುದೇ ಶಾಲೆಗೆ ಆಗ  ತುಮಕೂರಿಗೆ ಹೋಗಬೇಕಿತ್ತು . ಅದು ೧೪-೧೫ ಕಿಲೋಮೀಟರುಗಳು. ಬಸ್ಸು ಇತ್ಯಾದಿ ವ್ಯವಸ್ಥೆಯಿರಲಿಲ್ಲ. ಸೈಕಲ್ಲಿಗೆ ದುಡ್ಡಿಲ್ಲ. ಅಷ್ಟಕ್ಕೂ ಆ ದಿನಗಳಲ್ಲಿ ಹೆಣ್ಣುಮಕ್ಕಳಿನ್ನೂ ಸೈಕಲ್ ತುಳಿಯುವ ಸಾಹಸ ಮಾಡುತ್ತಿರಲೂ ಇಲ್ಲ. ಅಕ್ಕನ ದೊಡ್ಡ ಮಗ ಆ ಹಳ್ಳಿಯ ನಾಲ್ಕನೇ ಕ್ಲಾಸು ಪಾಸು ಮಾಡಿ ಐದನೇ ತರಗತಿಗೆ ಸಿದ್ಧಗಂಗೆಯ ಶಾಲೆಗೇ ಹೋಗಲು ತನ್ನ ಸ್ನೇಹಿತರೊಂದಿಗೆ ತಯಾರಾದ.. ಏಳನೇ ತರಗತಿಗೆ ತಯಾರಾದ ಹೆಣ್ಣುಮಗುವೊಂದು ಮನೆಯಲ್ಲಿಯೇ ಇದೆ. ಓದುವ ಆಸೆಯೂ ಇದೆ. ಅಕ್ಕ ಭಾವನಿಗೆ ಯೋಚನೆ, ಹೇಗೆ ಮಾಡುವುದು. ಊರಿನ ನಾಲ್ಕೈದು ಮಕ್ಕಳು ಹೇಗೂ ಸಿದ್ಧಗಂಗೆ ಶಾಲೆಗೇ ಹೋಗಿ ಬರುವಾಗ ಅವರ ಜೊತೆಗೆ ನನ್ನ ತಾಯಿಯನ್ನೂ ಕಳಿಸಿದರೆ ಹೇಗೆ ಎಂಬ ಸಲಹೆ ನನ್ನ ದೊಡ್ಡಮ್ಮನಿಂದ.

ಆದರೆ ಮಠದಲ್ಲಿ ಆಗ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿರಲಿಲ್ಲ. ನನ್ನ ದೊಡ್ಡಪ್ಪ ಧೈರ್ಯ ಮಾಡಿ ನನ್ನ ತಾಯಿಯನ್ನು ಕರೆದುಕೊಂಡು ದೇವರ ಮೇಲೆ ಭಾರ ಹಾಕಿ ಒಂದು ಅಳುಕಿನಿಂದಲೇ ಹೊರಟುಬಿಟ್ಟರು. ಸಿಧ್ಧಗಂಗೆಯಲ್ಲಿ ಒಂದು ಕಲ್ಯಾಣಿಯಿದೆ. ಪ್ರತಿವರ್ಷವೂ ಜಾತ್ರ್ಯಾ ಸಮಯದಲ್ಲಿ ಮೈದಾಳದ ಕೆರೆಯ ನೀರನ್ನು ಆ ಕಲ್ಯಾಣಿಗೆ ಬಿಡುವ ವ್ಯವಸ್ಥೆಯಿದೆ. ನನ್ನ ದೊಡ್ಡಪ್ಪ ಆ ಕೆಲಸವನ್ನು ಅಲ್ಲಿ ಕೆಲವು ವರ್ಷಗಳಿಂದ ಮಾಡುತ್ತಿದ್ದು, ಸ್ವಾಮಿಗಳು ಪ್ರತಿ ವರ್ಷವೂ ಜಾತ್ರ್ಯಾ ಸಮಾರೋಪ ಸಮಾರಂಭದಲ್ಲಿ ಒಂದು ಶಾಲು ಹೊದಿಸಿ ಸನ್ಮಾನ ಮಾಡುತಿದ್ದ ಪರಿಚಯವಷ್ಟೇ ನನ್ನ  ದೊಡ್ಡಪ್ಪನಿಗಿದ್ದದ್ದು. ಸ್ವಾಮಿಗಳ ಭೇಟಿಗೆ ಅವಕಾಶವನ್ನು ಕೇಳಿ ಅವರನ್ನು ಕಂಡದ್ದಾಯಿತು. ಹೆಣ್ಣು ಮಗಳ ಪರಿಸ್ಥಿತಿಯನ್ನು ವಿವರಿಸಿದ್ದಾಯಿತು. ಸುಮಾರು ೫೦೦ ಜನರಿದ್ದ ಮಠದ ವಾತಾವರಣದಲ್ಲಿ ಒಬ್ಬ್ಒಂಟಿ ಹೆಣ್ಣುಮಗಳು, ನಿಭಾವಣೆ ಕಷ್ಟ. ನಿರಾಕರಿಸಿದರೆ ಒಂದು ಹೆಣ್ಣು ಮಗುವಿನ ವಿಕಾಸಕ್ಕೆ ಕಲ್ಲು ಹಾಕಿದಂತೆ; ಒಪ್ಪಿಕೊಂಡರೆ ಗುರುತರ ಜವಾಬ್ದಾರಿ. ಮಠದ ಗೌರವಕ್ಕೆ ಕುಂದು ಬರುವ ಘಟನೆಯೇನಾದರೂ ನಡೆದರೆ ಹೇಗೆ ಎಂಬ ಚಿಂತೆ. ಆ ತೊಳಲಾಟವನ್ನು ನನ್ನ ತಾಯಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಮನೆ, ಊರು, ಮೈದಾಳದಿಂದ ಬರುವ ಹುಡುಗರು, ಅವರ ಮನೆತನ, ನಡವಳಿಕೆ, ಕ್ರಮಿಸುವ ದಾರಿ, ಹೊರಡುವ , ಮನೆಗೆ ಮರಳುವ ಸಮಯ, ಇತ್ಯಾದಿಗಳನ್ನು ವಿವರವಾಗಿ ವಿಚಾರಿಸಿ, ಪ್ರಶ್ನಿಸಿ ವಿಷಯ ಸಂಗ್ರಹಣೆ ಮಾಡಿದ ಸ್ವಾಮಿಗಳು ಯೋಚಿಸಿ ತಿಳಿಸುವುದಾಗಿ ಹೇಳಿ ಕಳಿಸಿದರು. ಇತ್ತ ಊರಿಂದ ಬರುವ ಒಬ್ಬೊಬ್ಬ ಹುಡುಗನನ್ನೂ ಅವನ ಮನೋಭಾವವನ್ನೂ ತಾವೇ ಖುದ್ದಾಗಿ ಅವರಿಗೆ ತಿಳಿಯದಂತೆ ಪರೀಕ್ಷಿಸಿದರು. ಅನಂತರದಳ್ಳಿ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ಕರೆದು ಅವರ ಜವಾಬ್ದಾರಿಗಳನ್ನು ತಿಳಿಸಿ ಹೇಳಿದರು. ಆನಂತರದಲ್ಲಿ ನನ್ನ ದೊಡ್ಡಪ್ಪನಿಗೆ ಕರೆ ಹೋಯಿತು, ಅವರ ಮಗನ ಮೂಲಕ!                                                                                 image.png

ಆತಂಕದಿಂದಲೇ ಬಂದ  ಕೃಷ್ಣಪ್ಪನವರನ್ನು ಕೂಡಿಸಿ ಸ್ವಾಮೀಜಿ ತಾವು ನಾಗರತ್ನಳನ್ನು ಶಾಲೆಗೆ  ತೆಗೆದುಕೊಳ್ಳಲು ಒಪ್ಪಿರುವುದಾಗಿಯೂ ಒಳ್ಳೆಯ ದಿನ ನೋಡಿಕೊಂಡು ಆಕೆಯನ್ನು ಕರೆತಂದು ಶಾಲೆಗೆ  ದಾಖಲು ಮಾಡಬೇಕಾಗಿಯೂ ತಿಳಿಸಿದರು. ಎಲ್ಲರ ಆನಂದಕ್ಕೆ ಪಾರವಿಲ್ಲದಂತಾಯಿತು.

ಸ್ವಾಮೀಜಿಯವರ ದೊಡ್ಡತನ ಅಷ್ಟಕ್ಕೇ ನಿಲ್ಲುವುದಿಲ್ಲ. ಅವರ ದೂರದೃಷ್ಟಿ, ಕಾಳಜಿ ಜವಾಬ್ದಾರಿಗಳು ಇಂದಿಗೂ ಎಲ್ಲರಿಗೂ ಮಾರ್ಗದರ್ಶನಕಾರಿಯಾಗುವಂತಹವು.

ಮಠದ ಶಾಲೆಯ ಶಿಕ್ಷಕರಿಗೂ ಕರೆ ಹೋಯಿತು. ವಿಷಯವನ್ನು ವಿವರಿಸಿ ಏಕೈಕ ವಿದ್ಯಾರ್ಥಿನಿಯ ಘನತೆ ,ಗೌರವ ಸುರಕ್ಷೆ, ಕಲಿಕೆಗಳಿಗೆ ಮಾರ್ಗಸೂಚಿಯನ್ನು ಅಳವಡಿಸಲಾಯಿತು. ಅದರಂತೆ, ಮೈದಾಳ ಎಂಬ ಹಳ್ಳಿಯಿಂದ ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ಅಕ್ಕನ ಮಗ ಹಾಗು ಅವನ ಸಹಪಾಠಿಗಳದ್ದಾಯಿತು. ಮಠದ ಆವರಣ ಪ್ರವೇಶಿಸಿದ ನಂತರ ಶ್ರೀ ಶಿವಕುಮಾರಸ್ವಾಮಿಗಳ  ಅಥವಾ ಮುಖ್ಯ ಉಪಾಧ್ಯಾಯರ ಕಚೇರಿಯಲ್ಲಿ ಒಂದು ಕುರ್ಚಿ ನನ್ನ ತಾಯಿಗೆ ಮೀಸಲು. ಪ್ರಾರ್ಥನೆ ಮುಗಿದು ಮೊದಲ ಪಿರಿಯಡ್ ಪ್ರಾರಂಭಕ್ಕೆ ಮುನ್ನ ಆಯಾ ತರಗತಿಯ ಉಪಾಧ್ಯಾಯರು ಬಂದು ನಮ್ಮ ತಾಯಿಯವರನ್ನು ಕರೆದೊಯ್ಯಬೇಕಿತ್ತು. ದಿನ ಮುಗಿಯುವವರೆಗೆ ಆ ತರಗತಿಯಲಿದ್ದು ಸಂಜೆ ಕಡೇ ಅವಧಿಯ ಉಪಾಧ್ಯಾಯರು ಕರೆದು ತಂದು ಪುನಃ ಮುಖ್ಯಉಪಾಧ್ಯಾಯರು ಅಥವಾ ಅವರಿಲ್ಲದಿದ್ದರೆ ಸ್ವಾಮೀಜಿಯವರ ಕಚೇರಿಯಲ್ಲಿ ಬಿಟ್ಟು ಹೋಗಬೇಕಿತ್ತು. ಊರಿನ ಹುಡುಗರು ಪುನಃ ಒಟ್ಟಾಗಿ ಬಂದು ನಮ್ಮ ತಾಯಿಯವರನ್ನು ಜೊತೆಗೆ ಕರೆದುಕೊಂಡು ಹೋಗಬೇಕಿತ್ತು. ಈ ರೀತಿಯಲ್ಲಿ ಮೂರೂ ವರ್ಷಗಳನ್ನು ಮುಗಿಸಿ ಹತ್ತನೇ ತರಗತಿಯ ನಂತರ ಆಶೀರ್ವದಿಸಿ ಕಳಿಸಿಕೊಟ್ಟ ಗುರು ಬ್ರಹ್ಮ-ಗುರು ವಿಷ್ಣು ಗುರುದೇವೋ ಮಹೇಶ್ವರರಾದ ಶಿವಕುಮಾರ ಸ್ವಾಮಿಗಳು ಭಾರತೀಯ ಗುರು  ಪರಂಪರೆಯಲ್ಲಿ ಒಂದು ಅಚ್ಚಳಿಯದ ಧೃವತಾರೆ. ನಮ್ಮ ತಾಯಿಯವರು ಸೇರಿದ ಮರುವರ್ಷದಿಂದ ಒಬ್ಬಬ್ಬರಾಗಿ ಕೆಲವಾರು ಹುಡುಗಿಯರು ಸೇರಿ, ನಮ್ಮ ತಾಯಿಯವರ ಶಾಲೆ ಮುಗಿಸುವ ವೇಳೆಗೆ ಏಳೆಂಟು ಹುಡುಗಿಯರು ಮಠದ ಶಾಲೆಯಲ್ಲಿ ಓದುತ್ತಿದ್ದರಂತೆ. ಪ್ರಾದೇಶಿಕವಾಗಿ ಪ್ರಾರಂಭಿಸಿ ಇಡೀ ರಾಜ್ಯಕ್ಕೆ ಗದ್ದಲವಿಲ್ಲದೆ ಶಿಕ್ಷಣ ಕ್ರಾಂತಿಯನ್ನು ತಂದು ಹೆಣ್ಣೊಂದು ಕಲಿತರೆ ಊರೊಂದು ಕಲಿತಂತೆ ಎಂಬ ನಾಣ್ಣುಡಿಗೆ ಜೀವತುಂಬಿದ ಸಂತ ಶ್ರೀ ಶಿವಕುಮಾರ ಸ್ವಾಮೀಜಿ.

ಅಂದು ಅವರು ಕೊಟ್ಟ ಶಿಕ್ಷಣದ ಕಾರಣ ಜೀವನದಲ್ಲಿ ಹಲವಾರು ಕಠಿಣ ಸವಾಲುಗಳನ್ನೆದುರಿಸುವ ಅನಿವಾರ್ಯತೆಗೆ ಸಿಲುಕಿದ ನಮ್ಮ ತಾಯಿ, ಒಂದು ಕೆಲಸಕ್ಕೆ  ಸೇರಿ ಮಕ್ಕಳನ್ನು ಓದಿಸಿ ಸಂಸಾರವನ್ನು ಸುಭದ್ರವಾಗಿ ನೆಲೆ ನಿಲ್ಲಿಸಲು ಇಂಬು ಕೊಟ್ಟಿತು. ಅಂದು ನನ್ನ ತಾಯಿಗೆ ಶಿಕ್ಷಕರಾಗಿದ್ದ ಸಿದ್ದಲಿಂಗಯ್ಯನವರು  ನಾನು ಪದವಿಪೂರ್ವ ತರಗತಿಗೆ ಸೇರಿದಾಗ ಶ್ರೀ ಸಿದ್ದಗಂಗಾ ಕಿರಿಯ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರ ಪತ್ನಿ ನನ್ನ ತಾಯಿಯ ನಂತರ ಮಠದ ಶಾಲೆಗೇ ಸೇರಿದ ಎರಡನೇ ವಿದ್ಯಾರ್ಥಿನಿ. ಅವರಿಬ್ಬರ ಮಗ ನನ್ನ ಸಹಪಾಠಿ ಹಾಗೂ  ಗೆಳೆಯ!! ಇಂದು ನಾನು ವೈದ್ಯ, ನನ್ನ ತಂಗಿ ಕಾಲೇಜಿನಲ್ಲಿ ಉಪನ್ಯಾಸಕಿ, ನನ್ನ ಅಣ್ಣ ಕೃಷಿಯ ಜೊತೆಗೆ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕ. ನಾವು ಮೂವರು ನಮ್ಮ ಕೈಲಾದಷ್ಟು ಸಮಾಜಕ್ಕೆ ನಮ್ಮ ಋಣ ತೀರಿಸುತ್ತಿದ್ದೇವೆ ಎಂದರೆ ಅದರ ಪುಣ್ಯಫಲವು ಸ್ವಾಮೀಜಿಗಳಿಗಲ್ಲದೆ ಇನ್ಯಾರಿಗೆ ತಾನೇ ಸಂದೀತು?

ಯೋಜನೆಗಳ ಹೆಸರಿನಲ್ಲಿ ಪ್ರಜೆಗಳ ಹಣವನ್ನು ಲೂಟಿ ಹೊಡೆಯುತ್ತಾ ಮಠಕ್ಕೆ ಬಿಡಿಗಾಸಿನ ದೇಣಿಗೆ ಕೊಡದೆ ನನ್ನ ಆಯುಷ್ಯ ದೇವರು ಸ್ವಾಮೀಜಿಗೆ ಕೊಡಲಿ ಎಂಬ ಭ್ರಷ್ಟರು, ನಾಲಾಯಕ್ ಮಗನ ಚಲನ ಚಿತ್ರಕ್ಕೆ ಕೋಟ್ಯಂತರ ಸುರಿದು ಬಡ ರೈತರ ಬಾಳಿಗೆ ವಿಷ ಉಣಿಸುವ ದುಷ್ಟರು, ಸ್ವಾಮಿಗಳ ಮರಣ ಸಮಯದಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಆಲೋಚನೆ ಬಿಟ್ಟು ಯಾವುದೋ ಪ್ರಶಸ್ತಿಯ ಹೆಸರಲ್ಲಿ ಬೇಳೆಬೇಯಿಸಿಕೊಳ್ಳುವ  ಆಷಾಢಭೂತಿಗಳು, ಜಾತ್ಯಾತೀತ ಎನ್ನುತ್ತಾ ಜಾತಿಗಳನ್ನು ಒಡೆಯುವ ಊಸರವಳ್ಳಿಗಳು, ಸಮಾನತೆ ಎಂದು ಬೊಬ್ಬಿರಿಯುತ್ತಲೇ ಓಲೈಕೆ ರಾಜಕಾರಣ ಮಾಡುವ ಕುತಂತ್ರಿಗಳು ಇವರೆಲ್ಲರ ನಡುವೆ ಕಾಯಾ ವಾಚಾ ಮಾನಸಾ ಜನತೆಯ ಏಳಿಗೆಗೆ ದುಡಿದು ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದ ಮಹಾಪುರುಷ ತನ್ನ ಆದರ್ಶಗಳನ್ನು ಸಹೃದಯರಿಗೆ ಬಿಟ್ಟಿಕೊಟ್ಟು ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ವ್ಯವಸ್ಥೆಯನ್ನು ಸದಾ ಟೀಕಿಸುತ್ತಾ, ದೇಶದ್ರೋಹಿಗಳನ್ನು ಬೆಂಬಲಿಸುತ್ತಾ, ಭಾರತವನ್ನು ಒಡೆಯುತ್ತೇನೆ ಎಂಬುವರಿಗಿಂಬು ಕೊಡುತ್ತಾ, ಮಹಿಲಾವಾದ ಎಂಬ ಹೆಸರಲ್ಲಿ ತಾವೇ ಮಹಿಳೆಯ ಶೋಷಣೆಗೆ ಇಳಿಯುವ ಹಲವಾರು ಆತ್ಮವಂಚಕರಿಗೆ ಪ್ರಶಸ್ತಿಗಳು ಕೊಡಲ್ಪಟ್ಟು ಅವು ತಮ್ಮ ಬೆಳೆಯನ್ನು ಎಂದೋ ಕಳೆದ್ಕೊಂಡಿವೆ. ಅಂತಹ ಪ್ರಶಸ್ತಿ ಫಲಾಫಲಗಳ ಅಪೇಕ್ಷೆಯಿಲ್ಲದೆ ಪೂಜೆಯೆಯೆಂಬ ಭಾವದಲ್ಲಿ ತ್ರಿವಿಧ ದಾಸೋಹ ನಡೆಸಿದ ಸ್ವಾಮೀಜಿಗಳಿಗೇಕೆ ಪ್ರಶಸ್ತಿ ಪುರಸ್ಕಾರದ ಹಂಗು?  

ತನ್ನ ಸಾಂಪರ್ಕಕ್ಕೆ  ಬಂದ ಭಾರತದ ಪ್ರತಿಯೊಬ್ಬ ಸತ್ಪ್ರಜೆಯ ಎದೆಯಲ್ಲಿ ರತ್ನವಾಗಿ ಸ್ವಯಂ ಪ್ರಕಾಶಿಯಾಗಿ  ಬೆಳಗುವ ಈ ಸಂತನಿಗೇಕೆ ಭಾರತ ರತ್ನ?

 

ಲೇಖಕರ ಚಿತ್ರಕೃಪೆ: ಲೇಖಕರು, ಉಳಿದ ಚಿತ್ರಗಳು: ಗೂಗಲ್ ಇಮೇಜ್ಸ್ 

 

 

9 thoughts on “ಸದ್ದಿಲ್ಲದೇ ಸ್ತ್ರೀ ಶಿಕ್ಷಣಕ್ಕೆ ನಾಂದಿ ಹಾಡಿದ ಹರಿಕಾರ..

 1. ಸುದರ್ಶನ್ ಅವರೇ
  ಒಬ್ಬ ವ್ಯಕ್ತಿಯ ಯಶಸ್ಸಿಗೆ ಮುಖ್ಯವಾದ ಕಾರಣಗಳು; ಪ್ರತಿಭೆ, ಪ್ರಯತ್ನ ಮತ್ತು ಅವಕಾಶ. ಇದರಲ್ಲಿ ಅವಕಾಶ ಅನ್ನುವುದು ವ್ಯಕ್ತಿಯ ಕೈ ಮೀರಿದ್ದು ಮತ್ತು ಅನಿರೀಕ್ಷಿತವಾಗಿ ಎದುರುಗೊಳ್ಳುವಂತಹುದು. ನನ್ನ ತಂದೆ ಡಾ ಜಿ ಎಸ್ ಎಸ್ ಬಡ ಕುಟುಂಬ ದಿಂದ ಮೇಲೆ ಬಂದವರು ಪ್ರತಿಭೆ ಪ್ರಯತ್ನಗಳು ಸುಪ್ತವಾಗಿದ್ದು ಅವರಿಗೆ ಅವಕಾಶ ಒದಗಿ ಬಂದದ್ದು ಸಿದ್ಧಗಂಗೆ ಮಠದಿಂದ ಎಂಬುದನ್ನು ಅವರು ಆಗ್ಗಾಗ್ಗೆ ಪ್ರಸ್ತಾಪ ಮಾಡುತ್ತಿದ್ದರು. ಮುಂದೆ ಅವರು ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ಸುತ್ತೂರು ಮಠದ ಆಶ್ರಯ ಪಡೆದರು. ಸಿದ್ದಗಂಗಾ ಮಠ ಅವರಿಗೆ ಸುಭದ್ರ ಅಡಿಪಾಯವನ್ನು ತಂದುಕೊಟ್ಟಿತು ಎಂಬ ವಿಚಾರವನ್ನು ನಾನು ನಿಮ್ಮಂತೆ ಹಂಚಿಕೊಳ್ಳಲು ಇಚ್ಛಿಸುತ್ತಾನೆ. ಸ್ತ್ರೀ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಸ್ವಾಮಿಗಳ ದೂರ ದೃಷ್ಟಿ ಮೆಚ್ಚ ಬೇಕಾದ ವಿಚಾರ. ನಿಮ್ಮ ಲೇಖನ ಹೃದಯದ ಆಳದಿಂದ ಬಂದ ಪ್ರಾಮಾಣಿಕ ಶ್ರದ್ಧಾಂಜಲಿ.
  ಸ್ವಾಮಿಗಳಿಗೆ ಅವರ ಶಿಷ್ಯ ರಿಂದ ಬಂದ ಧನ್ಯ ಭಾವ ಮತ್ತು ಅಭಿಮಾನಕ್ಕಿಂತ ದೊಡ್ಡ ಪ್ರಶಸ್ತಿ ಇರಲಾರದು

  ಡಾ ಜಿ ಎಸ್ ಎಸ್ ಅವರು ಗುರುಗಳಿಗೆ ಕೊಟ್ಟ ಕಾವ್ಯ ನಮನದ ತುಣುಕು ಹೀಗಿದೆ:
  “ಸದ್ದು ಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ
  ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
  ಕಾವಿಯುಡುಗೆಯನುಟ್ಟ ನಭವೇ ಕಿರಣ ಹಸ್ತವ ಚಾಚಿದೆ
  ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ”

  Like

  • ನಿಜ,ಪ್ರಸಾದ್ ಅವರೇ. ಪೂಜ್ಯರಾದ ನಿಮ್ಮ ತಂದೆಯವರು ಊಟವಿಲ್ಲದೇ ಕೃಶರಾಗಿ ತರಗತಿಯಲ್ಲಿ ನಿಃಶಕ್ತರಾಗಿದ್ದ ಘಟನೆ,ಅದನ್ನು ಅವರ ಪೂಜ್ಯ ಗುರುಗಳಾದ ತ.ಸು. ಶಾಮರಾಯರು ಕಂಡು ವಿಚಾರಿಸಿ ಸುತ್ತೂರು ಮಠದ ಸ್ವಾಮೀಜಿ ಗಳ ಬಳಿ ಕರೆದುಕೊಂಡು ಹೋದ ಪ್ರಸಂಗ ,ಅಲ್ಲಿ ನಡೆದ ಸಂಭಾಷಣೆ ಅವುಗಳನ್ನು ಗುರು ಶಿಷ್ಯರಿಬ್ಬರ ಕಡೆಯಿಂದಲೂ ಓದಿದ್ದೇನೆ.ಕಣ್ಣು ತುಂಬುವ ಘಟನೆ.
   ಎಂದು ನಾ ಹಾಡಿದರೆ ಎಂಬ ಹಾಡನ್ನು ತಮ್ಮ ಗುರುಗಳಿಗೆ ಸಮರ್ಪಿಸಿ ಸಾರ್ಥಕತೆ ಮೆರೆದ ಜಿಎಸ್ಸೆಸ್, ಅವರನ್ನು ಆಲಿಸಿ ತಿದ್ದಿ ಪ್ರೋತ್ಸಾಹಿಸಿ ಬೆಳೆಸಿದ ಗುರು ಇಬ್ಬರೂ , ವಿಶ್ವ ವಿಶಿಷ್ಟವಾದ ಗುರು ಶಿಷ್ಯ ಎಂಬ ಭಾರತೀಯ ಪರಂಪರೆಯ ಮಿನುಗು ನಕ್ಷತ್ರಗಳು.

   Like

 2. ಲಕ್ಷಾಂತರ ಮಕ್ಕಳಿಗೆ ತಿನ್ನಲು ಅನ್ನ, ಉಡಲು ಬಟ್ಟೆ ಎಂಬ ಜೀವನದ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೇ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಓದುಬರಹ ಶಿಕ್ಷಣವನ್ನು ಉಚಿತವಾಗಿ ನೀಡಿದ ಸ್ವಾಮಿಗಳು ಮತ್ತು ಅವರ ಮಠ ಮಾನವ ಸಮಾಜಕ್ಕೆ ಉತ್ತಮ ಮಾರ್ಗದರ್ಶಿಗಳು. ಯಾರೇ ಆಗಲಿ ಪಾಲಿಸಬಹುದಾದಂತಹ ಅವರ ಸೇವೆ ನಮ್ಮೆಲ್ಲರ ಮುಂದೆ ಇರುವ ಉದಾಹರಣೆ. ಅಂತಹ ನಿಸ್ವಾರ್ಥ ಸೇವೆ ಹೇಗೆ ತಮ್ಮ ತಾಯಿಯ ಜೀವನದಲ್ಲಿ (ಅದರ ಮೂಲಕ ಲೇಖಕರ ಜೀವನದಲ್ಲಿ ಕೂಡ) ಕೈ ಹಿಡಿದು ನಡೆಸುವ ದಾರಿದೀಪವಾಯ್ತು ಎನ್ನುವುದನ್ನು ಓದುಗರೊಡನೆ ಭಾವನಾತ್ಮಕವಾಗಿ ಹಂಚಿಕೊಂಡ ಲೇಖಕರಿಗೆ ಅಭಿನಂದನೆಗಳು.
  ವಿನತೆ ಶರ್ಮ

  Like

 3. ನಿಮ್ಮ ತಾಯಿ ಸಿದ್ಧಗಂಗಾ ಮಠದ ಮೊಟ್ಟಮೊದಲ ವಿದ್ಯಾರ್ಥಿನಿ ಎನ್ನುವ ಇತಿಹಾಸವನ್ನು ಸ್ವತಃ ಮಗನಾಗಿ ಬರೆದು ನಮಗೆ ಉಣಿಸಿದ್ದೀರಿ. `If you educate a man, you educate one person. If you educate a woman, you educate a nation` ಎನ್ನುವ ನುಡಿ ನೆನಪಾಯಿತು. ನಮೋನ್ನಮಃ. – ಕೇಶವ

  Liked by 1 person

 4. ಸಿದ್ಧಗಂಗೆಯ ಸ್ವಾಮಿಗಳು ನಡೆದಾಡುವ ದೇವರು, ಅವರು ಮಾಡುತ್ತಿದ್ದ ಸತ್ಕಾರ್ಯಗಳ ಬಗ್ಗೆ ಈಗ ಹಲವಾರು ವರ್ಷಗಳಿಂದ ಅನೇಕ ಬಾರಿ ಓದಿದ್ದೇನೆ. ಇತ್ತೀಚಿಗೆ ತಮ್ಮ ಇಹಲೋಕಯಾತ್ರೆ ಮುಗಿಸಿದ ಆತನ ಮಹಾಕಾರ್ಯಗಳನ್ನು ಗುರ್ತಿಸಲು ಯಾವ ಪ್ರಶಸ್ತಿಯ ಅಗತ್ಯವಿಲ್ಲ. ಸುದರ್ಶನ್ ಅವರೇ ಹೇಳಿರುವಂತೆ, ಸದ್ದಿಲ್ಲದೇ ತಮ್ಮ ಕೆಲಸವನ್ನು ನಿರ್ವಹಿಸಿ ಸಮಾಜಕ್ಕೆ ಒಳಿತು ಮಾಡಿದಂತಹ ಅವರ ಹೆಸರಿಗೆ ಪ್ರಶಸ್ತಿಯ ಹೆಸರು ಸೇರಿದ್ದರೆ, ಪ್ರಶಸ್ತಿಯ ಘನತೆಗಳು ಮತ್ತಷ್ಟು ಹೆಚ್ಚುತ್ತಿದ್ದವೇನೋ? ಸ್ತ್ರೀ ಶಿಕ್ಷಣ ಮತ್ತು ಅವರ ಏಳಿಗೆಗೆ ಶ್ರಮಿಸಿದ ಆತನ ಜೀವನ ನಿಜಕ್ಕೂ ಅನೇಕರಿಗೆ ಆದರ್ಶಪ್ರಾಯ.
  ಉಮಾ ವೆಂಕಟೇಶ್

  Liked by 1 person

 5. ಸ್ವಾಮೀಜಿಯವರು ಹೆಣ್ಣುಮಕ್ಕಳ ವಿಧ್ಯಾಭ್ಯಾಸಕ್ಕೆ ಕೊಟ್ಟ ಪೋತ್ಸಾಹದ ಬಗ್ಗೆ ನನಗೆ ತಿಳಿದಿರಲಿಲ್ಲ.
  ತಿಳಿಸಿಕೊಟ್ಟ ಲೇಖಕರಿಗೆ ವoದನೆಗಳು.
  ವಿದ್ಯೆಗಿoತ ದೊಡ್ಡ ಕೊಡುಗೆ ಇನ್ನೊoದಿಲ್ಲ. ಜಾತಿ ಮತ ನೋಡದೆ, ನಮ್ಮ ರಾಜ್ಯದ ಬಡ ಮಕ್ಕಳಿಗೆ, ಅನ್ನದಾನ, ವಿದ್ಯಾದಾನ ಮಾಡಿದ ಇವರನ್ನು ಜನ ” ನೆಡೆದಾಡುವ ದೇವರು” ಎoದು ಕರೆದರೆ, ಅದು ಸರಿಯಾದ ಹೋಲಿಕೆಯೆನ್ನಬಹುದು.

  ದಾಕ್ಷಾಯಿನಿ

  Like

 6. ಸದ್ದಿಲ್ಲದೇ ಸಮಾಜ ಸುಧಾರಿಸಿದ ಸದ್ಗುರುವಿಗೆ ಸಾದರ ಸಾಷ್ಟಾಂಗ. ಲೇಖರರು ಕೊನೆಯಲ್ಲಿ ಸೂಚಿಸುವಂತೆ, ಎಡ- ಬಲಗಳಿಗೆ ಬಲಿಯಾಗದೇ ದೇವಾ ಕೈಂಕರ್ಯವನ್ನು ಕಾರ್ಯದಲ್ಲಿ ಮಾಡುವ ಮಹಾ ಮಹಿಮರಿಗೆ ಜನಸಾಮಾನ್ಯರು ತೋರುವ ಪ್ರೀತಿ ಆದರಗಳೇ ಪ್ರಶಸ್ತಿ-ಪುರಸ್ಕಾರ.
  ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಉತ್ತಮ ಲೇಖನ, ವಿಚಾರ ಧಾರೆ.

  Liked by 1 person

 7. ಹೃದಯಸ್ಪರ್ಶಿ ವೈಯಕ್ತಿಕ ಅನುಭವ ಮತ್ತು ಸೂಕ್ತ ನಮನ. ಕಟ್ಟ ಕೊನೆಯ ಸಾಲು ಸತ್ಯ; ಚೆನ್ನಾಗಿದೆ ಲೇಖನ. Topical and revealing!

  Like

  • ಇಂದಿನ ಈ ಆಧುನಿಕರು ನಾವು ಅಂತ ಹೇಳಿಕೊಳ್ಳುವ ಈ ಯುಗದಲ್ಲಿಯೂ ಕೆಲವೊಂದು ಮಠಾಧೀಶರು, ಸ್ವಾಮಿಜೀಗಳ ಇದಿರಿಗೆ ಹೆಣ್ಣು ಮಕ್ಕಳು ಮಾತನಾಡಬೇಡಿ ಅನ್ನೋದನ್ನ ಕೇಳಿ ಮನ ರೊಚ್ಚಿಗೆದ್ದು, ಅಸಹಾಯಕತೆಯಿಂದ ಮೌನವಾದದ್ದಿದೆ.ಅಂಥದರಲ್ಲಿ , ಆ ಕಾಲದಲ್ಲಿಯೇ , ಸದ್ದಿಲ್ಲದೇ ಒಂದು ಹೆಣ್ಣು ಮಗುವಿನ ಶಿಕ್ಷಣ ಜವಾಬ್ದಾರಿ ಹೊತ್ತ ಸಿದ್ಧಗಂಗಾ ಶ್ರೀಗಳಿಗೆ ನತಮಸ್ತಕಳು ನಾನು.ತಮ್ಮ ಬಡತನದಲ್ಲಿಯೂ , ಮುತುವರ್ಜಿಯಿಂದ ತನ್ನ ತಂಗಿಯ ಕಲಿಕೆಯ ಬಗ್ಗೆ ಯೋಚಿಸಿ , ಸಾಧಿಸಿದ ಎಲೆ ಮರೆಯ ಕಾಯಿಯಂತಿರುವ ನಿಮ್ಮ ದೊಡ್ಡಮ್ಮ , ದೊಡ್ಡಪ್ಪರಿಗೂ ನಮನಗಳು ಸುದರ್ಶನ ಅವರೇ.ತುಂಬ ಮನ ಕಲಕುವ ಲೇಖನ.ಅಭಿನಂದನೆಗಳು.
   ಸರೋಜಿನಿ ಪಡಸಲಗಿ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.