ರಾಷ್ಟ್ರ ಪ್ರಜ್ಞೆ ಮತ್ತು ಧರ್ಮಪ್ರಜ್ಞೆ

ಬ್ರೆಕ್ಸಿಟ್ಟಿನ ಬಿಸಿಯ ಇಂಗ್ಲೆಂಡಿನ ಶೆಫಿಲ್ಡ್ ವಾಸಿ ಹಿರಿಯ ವೈದ್ಯ ಶಿವಪ್ರಸಾದರು, ವಾಟ್ಸಾಪಿನ ಸಂದೇಶವೊಂದರ ಕೊನೆಯಲ್ಲಿ ಕಂಡ  ‘ಜೈ ಹಿಂದ್’ ಅವರ ಮನಸ್ಸಿನಲ್ಲಿ ಮೂಡಿಸಿದ ವಿಷಾದದ ಅಲೆಗಳಲ್ಲಿ ಮಂಥಿಸಿದ ರಾಷ್ಟ್ರವಾದ ಮತ್ತು ಧರ್ಮವಾದಗಳ ಪ್ರಸ್ತುತತೆ, ಲಾಭ ಮತ್ತು ಅಪಾಯಗಳನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅಮೇರಿಕಾದ ಟ್ರಂಪ್ ಉತ್ತೇಜಿಸುತ್ತಿರುವ ತೀವ್ರ-ರಾಷ್ಟ್ರವಾದ ಒಂದು ರೀತಿಯಲ್ಲಿ ರಾಷ್ಟ್ರಾಂಧ ಬಿಳಿಯರ ಅಟ್ಟಹಾಸಕ್ಕೆ ಗಾಳಿ ಹಾಕಿದ, ಹಾದಿ ತಪ್ಪಿದ ರಾಷ್ಟ್ರವಾದದಲ್ಲಿ ಹಳ್ಳ ಹಿಡಿದ ಬ್ರೆಕ್ಷಿಟ್ಟಿನಂತ ಉದಾಹರಣೆಗಳ ಇಂದಿನಲ್ಲಿ, ಬಸವಣ್ಣ, ವಿವೇಕಾನಂದರನ್ನ ಸ್ಮರಿಸುತ್ತ ಧರ್ಮ ಮತ್ತು ದೇಶಪ್ರೇಮ ಭಾರತದಲ್ಲಿ ಒಂದು ಕಾಲದಲ್ಲಿ ಒಂದೇ ಆಗಿತ್ತು ಎಂದು ಸೂಕ್ಷ್ಮವಾಗಿ ಉದಾಹರಿಸಿದ್ದಾರೆ. ಮತಾಂತರ, ಮತಾಂಧತೆಗಳ ಕಚ್ಚಾಟವನ್ನ ಮತಗಳ ಲೆಕ್ಕದ ಲಾಭದಲ್ಲಿ ಮುಚ್ಚಿಟ್ಟೋ, ಹೆಚ್ಚಿಟ್ಟೋ ಸಮಾಜವನ್ನ ಸಾಯಿಸುತ್ತಿರುವ ರಾಜಕಾರಣಿಗಳ ಇಂದಿನ ಭಾರತದ ಸಮನ್ವಯತೆಯ ಬಗ್ಗೆ, ಧಾರ್ಮಿಕತೆಯಿಂದ ದೂರ ಸರಿಯುತ್ತಿರುವ ಪಶ್ಚಿಮ ಸಮಾಜವೊಂದರ ಸದಸ್ಯನ ದೃಷ್ಟಿಯ, ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪ್ರಕಟವಾದ, ಈ ಲೇಖನ  ಅನಿವಾಸಿಯ ಓದುಗರಲ್ಲಿ ಅರ್ಥಪೂರ್ಣ ಹಾಗು ಆರೋಗ್ಯಕರ ಚರ್ಚೆಗೆ ಅನುವು ಮಾಡಿಕೊಡುವುದೆನ್ನುವ ಸದಾಶಯದೊಂದಿಗೆ ಪ್ರಕಟಿಸುತ್ತಿದ್ದೇವೆ. ಎಂದಿನಂತೆ, ಲೇಖನದ ವಿಚಾರಗಳ ಸಂಪೂರ್ಣ ಹೊಣೆ ಲೇಖಕರದ್ದೆ. ನಿಮ್ಮ ಬಳಿಗೆ  ಒಪ್ಪವಾಗಿ ತಂದಿಡುವದಷ್ಟೇ ನಮ್ಮ ಕಾರ್ಯ. 

Emblem of the Supreme Court of India.svg

(Emblem of Supreme Court of India. Source: Google Images)

 

“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ!”

                                                                             – ಡಾ. ಜಿ. ಎಸ್. ಎಸ್

ಪ್ರಪಂಚದಲ್ಲಿ ಸಾಕಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಮುನ್ನಡೆಗಳು ಸಾಗಿದ್ದು ಗ್ಲೋಬಲೈಸೇಷನ್ ಅಥವಾ ಜಾಗತೀಕರಣದ ಪರಿಣಾಮದಿಂದ “ಪ್ರಪಂಚ ಎಂಬುದು ಈಗ ಒಂದು ಸಣ್ಣ ಜಾಗ” (World is a small place) ಎಂಬ ಉದ್ಗಾರ ಆಗಾಗ್ಗೆ ಕೇಳಿ ಬರುತ್ತದೆ. ಅಂತರ್ಜಾಲದಿಂದ ಲಭ್ಯವಾಗಿರುವ ಸಂಪರ್ಕದಿಂದಾಗಿ ಮನುಷ್ಯ ಮನುಷ್ಯರ ಸಂಬಂಧ ವೃದ್ಧಿಸಿ ನಾವೆಲ್ಲ ಹಿಂದಿಗಿಂತ ಈಗ ನಿಕಟವಾಗಿ ಬೆಸೆದುಕೊಂಡು ಇದ್ದೇವೆ ಎಂಬ ಭಾವನೆ ಸಾಮಾನ್ಯವಾಗಿದೆ. ಪ್ರಪಂಚದಲ್ಲಿ ಭೂಗೋಳಿಕವಾಗಿ ಸಾವಿರಾರು ಮೈಲಿಗಳಾಚೆ ಇದ್ದರು ಒಂದು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಟನ್ ಕ್ಲಿಕ್ ಮಾಡಿ ಒಬ್ಬರನ್ನೊಬ್ಬರು ಸಂಪರ್ಕಿಸಿ ಮುಖಾಮುಖಿ ಮಾತಾಡುವ ಅವಕಾಶ ಈಗ ನಮಗಿದೆ. ಈ ಒಂದು ಹಿನ್ನೆಲೆಯಲ್ಲಿ ಪ್ರಪಂಚದ ಇತ್ತೀಚಿನ ಆಗು-ಹೋಗುಗಳನ್ನು ಗಮನಿಸಿದಾಗ ಎಲ್ಲೆಡೆ ಧರ್ಮದ ಹೆಸರಲ್ಲಿ ದ್ವೇಷ , ಜಿಹಾದ್ ಹಾಗೂ ಕ್ರುಸೇಡ್ ಗಳು ಮತ್ತೆ ಪ್ರಾರಂಭವಾಗಿ ವಿಶ್ವ ಶಾಂತಿಗೆ ಧಕ್ಕೆ ಒದಗಿ ಬಂದಿದೆ. ಜಾಗತೀಕರಣದಿಂದ ಎಲ್ಲರೂ ಹತ್ತಿರವಿದ್ದರೂ ದೂರ ನಿಲ್ಲುವ ಪರಿಸ್ಥಿತಿ ಬಂದಿದೆ.

ಈ ವೈಜ್ಞಾನಿಕ ಯುಗದ ಸರ್ವತೋಮುಖ ಪ್ರಗತಿ ಮತ್ತು ವೈಚಾರಿಕ ಚಿಂತನೆಗಳ ನಡುವೆ ಧರ್ಮವು ವ್ಯಕ್ತಿ ಮಧ್ಯ ಮತ್ತು
ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗೋಡೆಗಳಂತೆ ಎದ್ದಿವೆ. ಧರ್ಮವನ್ನು ನೆಪವಾಗಿಟ್ಟುಕೊಂಡು ಹಲವಾರು
ಉಗ್ರಗಾಮಿ ಶಕ್ತಿಗಳು ತಲೆಯೆತ್ತಿ ಹೊಡೆದಾಡಿದ ಪರಿಣಾಮವಾಗಿ ಹಲವು ಮಧ್ಯಪೂರ್ವ ರಾಷ್ಟ್ರಗಳು ತಮ್ಮ ಅಸ್ತಿತ್ವವನ್ನು
ಕಳೆದುಕೊಂಡು ಅಲ್ಲಿನ ಜನಸ್ತೋಮ ಭಾರಿ ಪ್ರಮಾಣದಲ್ಲಿ ಸ್ಥಳಾಂತರಗೊಂಡು ನಿರಾಶ್ರಿತರಾಗಿ ಸ್ಥಿರ ಮತ್ತು ಸುರಕ್ಷಿತವಾಗಿರುವ ಅಕ್ಕಪಕ್ಕದ ಮತ್ತು ದೂರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಒಂದು ಮಹಾ ವಲಸೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿಗೊಳ್ಳದೆ ಸ್ಥಗಿತವಾಗಿರುವ ದೇಶಗಳಿಂದ ಕೆಲವರು “ನಿರಾಶ್ರಿತರು” ಎಂಬ ಸುಳ್ಳು ಹಣೆಪಟ್ಟಿಯನ್ನು ಹಿಡಿದು ಸೇರಿಕೊಂಡಿದ್ದಾರೆ. ಹೀಗೆ ಭಾರಿ ಪ್ರಮಾಣದಲ್ಲಿ ವಲಸೆ ಬಂದ ನಿರಾಶ್ರಿತರಿಗೆ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳು ಸಹಾನುಭೂತಿಯಿಂದ ಬಾಗಿಲು ತೆರದು ಆಶ್ರಯ ಕೊಟ್ಟಿದೆ. ಈ ರಾಷ್ತ್ರಗಳಲ್ಲಿ ಆರ್ಥಿಕ ಏಳಿಗೆಗಾಗಿ ಪರವಾನಗಿ ಪಡೆದುಬಂದ ಜನರೂ ಸೇರಿದ್ದಾರೆ. ಹೀಗೆ ವಲಸೆ ಬಂದ ಜನ ಒಂದು ರಾಷ್ಟ್ರವನ್ನು ತಮ್ಮದಾಗಿಸಿಕೊಂಡು ಅಲ್ಲಿ ತಮ್ಮ ಧಾರ್ಮಿಕ ಅಸ್ತಿತ್ವವನ್ನು ಉಳಿಸಿಕೊಂಡು ರಾಷ್ಟ್ರದ ಸಿಟಿಜನ್ ಶಿಪ್ ಮತ್ತು ಪಾಸ್ಪೋರ್ಟ್ ಗಳನ್ನು ಪಡೆದು ಅಲ್ಲಿನ ಭಾಷೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ತಮ್ಮದಾಗಿಸಿಕೊಂಡು ಒಂದು ನೂತನ ರಾಷ್ಟ್ರ ಪ್ರಜ್ಞೆ ಅಥವಾ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ. ಈ ಅನಿವಾಸಿ ಪ್ರಜೆಗಳಿಗೆ ತಮ್ಮ ಮೂಲ ದೇಶದ ರಾಷ್ಟ್ರ ಪ್ರಜ್ಞೆ ಮತ್ತು ತಾವು ನೆಲೆಸಿರುವ ನಾಡಿನ ರಾಷ್ಟ್ರ ಪ್ರಜ್ಞೆ ಎರಡೂ ಪ್ರಸ್ತುತವಾಗುತ್ತದೆ. ಇಂಗ್ಲೆಂಡಿನಲ್ಲಿ ವಾಸ ಮಾಡುವ ನನಗೆ ನನ್ನ ಬ್ರಿಟಿಷ್ ರಾಷ್ಟ್ರ ಪ್ರಜ್ಞೆಯನ್ನು ಮತ್ತು ನಿಷ್ಠಾವಂತಿಕೆಯನ್ನು ಬಹಿರಂಗವಾಗಿ ಸಾಬೀತುಗೊಳಿಸುವ ನಿರೀಕ್ಷೆಯಾಗಲಿ ಅಥವಾ ಅಗತ್ಯ ಇಲ್ಲ. ಇದನ್ನು ಪ್ರಸ್ತಾಪಿಸುವ ಉದ್ದೇಶವೆಂದರೆ ನನ್ನ ಹಳೆ ಕಾಲೇಜಿನ ವಾಟ್ಸ್ ಆಪ್ ಗುಂಪಿನಲ್ಲಿರುವ ಕ್ರಿಶ್ಚಿಯನ್ ಸ್ನೇಹಿತರೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ಮೆಸೇಜ್ ಕೊನೆಯಲ್ಲಿ “ಜೈ ಹಿಂದ್” ಎಂಬ ಸಂದೇಶ ಮತ್ತು ತ್ರಿವರ್ಣ
ಧ್ವಜವನ್ನು ಸೇರಿಸುತ್ತಿದ್ದಾರೆ. ನನಗೆ ಈ ವಿಚಾರ ವಿಷಾದವಾಗಿದೆ. ಪಾಶಿಮಾತ್ಯ ದೇಶಗಳಲ್ಲಿ ಸ್ಥಳೀಯರು ತಮ್ಮ ರಾಷ್ಟ್ರಪ್ರಜ್ಞೆ ಯನ್ನು ವಿಶ್ವ ಕಪ್ ಫುಟ್ ಬಾಲ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ ಹಾಗೆ ತಮ್ಮ ಧಾರ್ಮಿಕ ಪ್ರಜ್ಞೆಯನ್ನು ಆಚರಣೆಯನ್ನು ತಮ್ಮ ಮನೆಗಳಲ್ಲಿ ಅಥವ ವೈಯುಕ್ತಿಕ ಪರಿಸರದಲ್ಲಿಮಾಡಿಕೊಳ್ಳುತ್ತಾರೆ. ನನ್ನ ಹಲವಾರು ಇಂಗ್ಲಿಷ್ ಸಹೊದ್ಯೋಗಿಗಳು ಮತ್ತು ಸುಶೀಕ್ಷಿತ ಸಾಮನ್ಯರು ತಮಗೆ ಧರ್ಮ ಪ್ರಸ್ತುತವಲ್ಲವೆಂದು ಹೇಳುವುದನ್ನು ಕೇಳಿದ್ದೇನೆ ಹಾಗೆಯೇ ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬದ ಸಂಧರ್ಭದಲ್ಲಿ ನಾನು ಈ ವಿಚಾರವನ್ನು ಗಮನಿಸಿದ್ದೇನೆ.

ಹಲವಾರು ಧರ್ಮಗಳನ್ನು ಒಳಗೊಂಡ ಜ್ಯಾತ್ಯಾತೀತ ಸಮಾಜದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮ ಪ್ರಜ್ಞೆ ಒಂದು ಸಮತೋಲನದ ಪರಿಸ್ಥಿತಿಯಲ್ಲಿ ಇರುವಾಗ ಅದನ್ನು ಕದಡಿದರೆ ಘರ್ಷಣೆ ಮತ್ತು ಅಶಾಂತಿ ಉಂಟಾಗುವುದು ಅನಿವಾರ್ಯ. ಸೋಷಿಯಲ್ ಮೀಡಿಯಾ ಮತ್ತು ವಾಟ್ಸಪ್ ಗಳಲ್ಲಿ ಚರ್ಚೆಯ ಮೂಲಕ ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚಿನ ಅರಿವನ್ನು ಜಾಗೃತಗೊಳಿಸಿ ಧರ್ಮದ ವಿಚಾರಗಳನ್ನು ಕೈಗೆತ್ತಿಕೊಂಡು ಪ್ರಚಾರ ಕಾರ್ಯವನ್ನು ಹೂಡಿದ್ದೇವೆ. ಭಾರತದಲ್ಲಿ ಇದ್ದಕ್ಕಿದ್ದಂತೆ ಕಳೆದ ಹಲವು ವರ್ಷಗಳಿಂದ ಧರ್ಮ ನಮಗೆ ಬಹಳ ಪ್ರಸ್ತುತ ವಾದಂತೆ ಕಾಣುತ್ತದೆ. ಮೇಲೆ ಪ್ರಸ್ತಾಪಿಸಿದ ಜಾಗತೀಕರಣ ಮತ್ತು ಪ್ರಗತಿಯ ಹಿನ್ನೆಲೆಯಲ್ಲಿ ಜನಸಾಮಾನ್ಯನಿಗೆ ನಿಲುಕದ ವಿಚಾರವೆಂದರೆ ಈ ಇಪ್ಪತ್ತೊಂದನೇ ಶತಮಾನದಲ್ಲಿ ಧರ್ಮ ಏಕೆ ಎಷ್ಟು ಪ್ರಸ್ತುತವಾಗಿದೆ?

ಧರ್ಮ ಎಂಬ ಪದವನ್ನು ಅರ್ಥೈಸುವುದು ಸುಲಭವಲ್ಲ. ಪಾಶ್ಚಿಮಾತ್ಯ ಧರ್ಮ ಶಾಸ್ತ್ರಜ್ಞರ ಪ್ರಕಾರ ಧರ್ಮವೆಂಬುದು ಮನುಷ್ಯನನ್ನು ಮೀರಿದ ದೇವರು ಅಥವಾ ದೇವತಾ ಮನುಷ್ಯ ಒಂದು ಜನಸಮುದಾಯಕ್ಕೆ ಕೊಡಬಹುದಾದ ಜೀವನ ನೀತಿ ರೀತಿ ಮತ್ತು ಆಧ್ಯಾತ್ಮ ಪರಿಕಲ್ಪನೆ. ಈ ಸಂದೇಶ ಒಂದು ಲಿಖಿತ ದಾಖಲೆಯಲ್ಲಿ ರೂಪುಗೊಂಡಿರುತ್ತದೆ. ಕ್ರೈಸ್ತ ಮತದಲ್ಲಿನ ಬೈಬಲ್ ಇದಕ್ಕೆ ಉದಾಹರಣೆ. ಹಲವು ದೇವ ದೇವತೆಯರನ್ನು ಹಲವಾರು ಪುರಾಣ, ಶಾಸ್ತ್ರ ,ವೇದ ಮತ್ತು ಗೀತೆಗಳನ್ನು ಒಳಗೊಂಡ ಹಿಂದೂ ಧರ್ಮವನ್ನು ಈ ವ್ಯಾಖ್ಯಾನಕ್ಕೆ ಒಳಪಡಿಸುವುದು ಕಷ್ಟವಾದರೂ ಸಾರ್ವತ್ರಿಕ ಅಥವಾ ವಿಶ್ವವ್ಯಾಪಿ ವ್ಯಾಖ್ಯಾನದಲ್ಲಿ (Universal definition) ಹಿಂದೂ ಧರ್ಮ ಪ್ರಪಂಚದ ಇತರ ಮುಖ್ಯ ಧರ್ಮಗಳ ಪಟ್ಟಿಯಲ್ಲಿ ಒಂದು ಎಂಬ ವಿಚಾರ ಒಪ್ಪಿಗೆ ಪಡೆದಿದೆ. ಧರ್ಮವನ್ನು ಒಪ್ಪಿಕೊಂಡ ಮತ್ತು ಅಪ್ಪಿಕೊಂಡ ವ್ಯಕ್ತಿ ಧರ್ಮ ಪ್ರಜ್ಞಾವಂತನಾಗುತ್ತಾನೆ. ಸಾವಿರಾರು ವರ್ಷಗಳಿಂದ ಧರ್ಮ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಬದುಕನ್ನು ನಿಯಂತ್ರಿಸುತ್ತಾ ಬಂದಿದೆ. ಧರ್ಮ ಸಾಮಾಜಿಕ ನೆಲೆಯಲ್ಲಿ ಜೀವನಕ್ಕೆ ಬೇಕಾದ ರೀತಿ ನೀತಿ ಮತ್ತು ಉತ್ತಮ ಮೌಲ್ಯಗಳನ್ನು ಒದಗಿಸುವುದರ ಜೊತೆಗೆ ವೈಯುಕ್ತಿಕ ನೆಲೆಯಲ್ಲಿ ಅಧ್ಯಾತ್ಮ ಚಿಂತನೆ ಮತ್ತು ಆಚರಣೆ ಇವುಗಳ ಬಗ್ಗೆ ಮಾರ್ಗದರ್ಶನ ನೀಡಿದೆ. ಕೆಲವು ಧರ್ಮಗಳು ಕಾಲಕಾಲಕ್ಕೆ ಸಮಾಜ ಸುಧಾರಕರಿಂದ ವಿಮರ್ಶೆಗೆ ಒಳಗಾಗಿ ಪ್ರವೃತ್ತಿಯ ದೆಸೆಯಿಂದ ಕೆಲವು ಬದಲಾವಣೆಗಳನ್ನು ಒಪ್ಪಿಕೊಂಡು ಸಾಗಿದೆ. ವೈಯುಕ್ತಿಕ ನೆಲೆಯಲ್ಲಿ ಧರ್ಮಾಚರಣೆಯು ಪ್ರಸ್ತುತವೇ ಎಂಬ ವಿಚಾರ ಪ್ರಶ್ನಾತೀತವಾದದ್ದು. ಒಬ್ಬ ವ್ಯಕ್ತಿಯ ನಂಬಿಕೆ ಮತ್ತು ಶ್ರದ್ಧೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. “ಅವರವರ ಭಾವಕ್ಕೆ ಅವರವರ ದರುಶನಕೆ” ಎಂಬ ವಚನದ ಸಾಲುಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದು ಸೂಕ್ತ.

ಸಮಾಜದಲ್ಲಿ ಹಿಂದೆ ಧರ್ಮ ಒದಗಿಸಿದ್ದ ಸಾಮಾಜಿಕ ಜವಾಬ್ದಾರಿ, ಸ್ವಾತಂತ್ರೋತ್ತರ ಭಾರತದಲ್ಲಿ ಸಂವಿಧಾನ ನ್ಯಾಯ ಮತ್ತು ಆಡಳಿತ ವ್ಯವಸ್ಥೆಗೆ ಹಸ್ತಾಂತರಗೊಂಡಿದೆ. ಹಲವು ಧರ್ಮಗಳನ್ನು ಒಳಗೊಂಡ ಭಾರತ ಗಣರಾಜ್ಯವಾಗಿ ಹಿಂದೂಸ್ಥಾನವೆಂಬ ಪರಿಕಲ್ಪನೆ ಪಕ್ಕಕ್ಕೆ ಸರಿದು ಸರ್ವಧರ್ಮ ಸಮನ್ವಯದ ಭಾರತವಾಗಿ ರೂಪುಗೊಂಡಿದ್ದು, ಬ್ರಿಟಿಷ್ ಆಳ್ವಿಕೆಯಲ್ಲಿ ಉದ್ಭವಿಸಿದ ರಾಷ್ಟ್ರಪ್ರಜ್ಞೆ ಸ್ವಾತಂತ್ರ್ಯ ದೊರಕಿದ ನಂತರ ಸ್ವಲ್ಪ ತಣ್ಣಗಾದರೂ ಪಾಕಿಸ್ತಾನ ಮತ್ತು ಚೀನಾ ಜೊತೆ ನಡೆದ ಯುದ್ಧಗಳ ಸಮಯದಲ್ಲಿ ಮತ್ತೆ ಮತ್ತೆ ಜಾಗೃತಗೊಳ್ಳುತ್ತಿತ್ತು. ಸಾಮೂಹಿಕ ನೆಲೆಯಲ್ಲಿ ನಮಗೆಲ್ಲ ನಮ್ಮ ಧರ್ಮ ಪ್ರಜ್ಞೆಗಿಂತ ನಮ್ಮ ರಾಷ್ಟ್ರಪ್ರಜ್ಞೆ ಪ್ರಸ್ತುತವಾಗಿತ್ತು.

ಕಳೆದ ಎರಡು ದಶಕಗಳಲ್ಲಿ ಭಾರತ ಆರ್ಥಿಕವಾಗಿ ಮತ್ತು ವೈಜ್ಞಾನಿಕ, ತಾಂತ್ರಿಕ, ಕೈಗಾರಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳ ಮನ್ನಣೆ ಪಡೆದು ಮುಂದುವರಿದಿದೆ. ಎಲ್ಲರಲ್ಲೂ ಆತ್ಮವಿಶ್ವಾಸ ಹೆಚ್ಚಾಗಿದ್ದು ನಮ್ಮ ಹೆಮ್ಮೆ ಸಂತಸಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಂತಹ ಯಶಸ್ಸಿನಲ್ಲಿ ನಾವು ನಮ್ಮ ರಾಷ್ಟ್ರಪ್ರಜ್ಞೆಯನ್ನು ಎತ್ತಿಹಿಡಿಯಬೇಕೆ ಹೊರತು ಧರ್ಮಪ್ರಜ್ಞೆಯನ್ನಲ್ಲ. ಈ ಒಂದು ಯಶಸ್ಸಿನಲ್ಲಿ ಸಮಾಜದ ಎಲ್ಲ ಮತಧರ್ಮದವರು ಮತ್ತು ವರ್ಗದವರು ಭಾಗಿಯಾಗಿದ್ದಾರೆ ಎಂಬ ವಿಚಾರ ಅರಿಯಬೇಕಾಗಿದೆ. ಹೆಮ್ಮೆ ಹೆಮ್ಮೆಯಾಗಿ ಉಳಿಯಬೇಕು ಏಕೆಂದರೆ ಹೆಮ್ಮೆಗೂ ಗರ್ವಕ್ಕೂ ನಡುವೆ ಇರುವ ಅಂತರ ಒಂದು ಸಣ್ಣ ರೇಖೆಯಷ್ಟೇ. ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ನೂರಾ ಇಪ್ಪತ್ತೈದು ವರ್ಷಗಳು ಕಳೆದಿವೆ. ಅದನ್ನು ನಾವು ನೆನೆಸಿಕೊಂಡು ವಿಜೃಂಭಿಸುತ್ತಿರುವುದು ಸರಿಯೆ. ಭಾಷಣದ ಶುರುವಿನಲ್ಲಿ ಸ್ವಾಮೀಜಿಯವರು “ಅಮೇರಿಕಾದ ನನ್ನ ಸೋದರ ಸೋದರಿಯರೇ” ಎಂದು ಹೇಳುವ ಮಾತಿನಲ್ಲಿ ಅದೆಷ್ಟು ಸಮನ್ವಯತೆ (Inclusiveness) ಇದೆ ಎಂಬುದನ್ನು ಗಮನಿಸಬಹುದು. “ಅನ್ಯ ಧರ್ಮಗಳ ಅಸ್ತಿತ್ವದ ಅಂಗೀಕರಣ ಮತ್ತು ಸಮನ್ವಯತೆಯನ್ನು ಪ್ರಪಂಚಕ್ಕೆ ಯಾವ ಧರ್ಮ ತೋರಿದೆಯೋ ಆ ಧರ್ಮಕ್ಕೆ ಸೇರಿರುವ ಹೆಮ್ಮೆ ನನಗಿದೆ” ಎಂಬ ಸ್ವಾಮೀಜಿಯವರ ಹೇಳಿಕೆ ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ. ಆಗಿನ ಕಾಲಕ್ಕೆ ಅಂದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆಗಳು ಒಂದೇ ಅಂಗಗಳಾಗಿದ್ದವು.

ಇತ್ತೀಚಿಗೆ ಜನಸಾಮಾನ್ಯರಲ್ಲಿ ತಮಗೆ ರಾಷ್ಟ್ರಪ್ರಜ್ಞೆ ಮುಖ್ಯವೋ ಅಥವಾ ಧರ್ಮಪ್ರಜ್ಞೆ ಮುಖ್ಯವೋ ಎಂಬ ವಿಚಾರದಲ್ಲಿ ಗೊಂದಲ ಅಥವಾ ಕನ್ಫ್ಯೂಷನ್ ಮೂಡಿದಂತಿದೆ. ನಮಗೆಲ್ಲಾ ಅಗತ್ಯವಾಗಿ ಬೇಕಾಗಿರುವುದು ರಾಷ್ಟ್ರಪ್ರಜ್ಞೆ. ಧರ್ಮದಲ್ಲಿ ನಂಬಿಕೆ ಮತ್ತು ಶ್ರದ್ಧೆ ಇರುವವರು ತಮ್ಮ ಧರ್ಮಪ್ರಜ್ಞೆಯನ್ನು ವೈಯುಕ್ತಿಕ ನೆಲೆಯಲ್ಲಿ ಉಳಿಸಿಕೊಂಡು ಬೆಳೆಸಿಕೊಳ್ಳುವುದು ಅವರವರ ಆಯ್ಕೆ. ಒಂದು ಬಹುಮುಖಿ ಸಂಸ್ಕೃತಿಯ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿಗೆ ಹಲವಾರು ಅಸ್ತಿತ್ವವುಂಟು; ಇವು ರಾಷ್ಟ್ರ ಪ್ರಜ್ಞೆ, ಧರ್ಮ ಪ್ರಜ್ಞೆ, ಭಾಷಾಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಜಾತಿಪ್ರಜ್ಞೆ. ಇಷ್ಟು ವಿಭಿನ್ನತೆಗಳಿದ್ದರೂ ನಮ್ಮನ್ನು ಒಂದುಗೂಡಿಸಿರುವ ಏಕೈಕ ಶಕ್ತಿ ನಮ್ಮ ರಾಷ್ಟ್ರಪ್ರಜ್ಞೆ ಎನ್ನಬಹುದು. ರಾಷ್ಟ್ರೀಯತೆ ಎಂಬ ಲಾಂಛನವನ್ನು ಹಿಡಿದು ನಮ್ಮ ನಿಜವಾದ ಸಮಸ್ಯೆಗಳಾದ ಸ್ವಾರ್ಥ, ಭ್ರಷ್ಟಾಚಾರ ಮತ್ತು ಪರಿಸರ ಮಾಲಿನ್ಯ ಇವುಗಳನ್ನು ಭಾರತೀಯರಾದ ನಾವೆಲ್ಲರೂ ಅದರಲ್ಲೂ ಮುಂದಿನ ಪೀಳಿಗೆಯಾದ ಯುವಕರು ಎದುರಿಸಬೇಕಾಗಿದೆ.

 

11 thoughts on “ರಾಷ್ಟ್ರ ಪ್ರಜ್ಞೆ ಮತ್ತು ಧರ್ಮಪ್ರಜ್ಞೆ

  1. ಶಿವಪ್ರಸಾದ್ಅವರ ಲೇಖನ ಚೆನ್ನಾಗಿಮೂಡಿಬಂದಿದೆ.ಸರಳವಾಗಿ ಓದಿಸಿಕೊಂಡು ಹೋದರೂ ಒಂದುಓದಿಗೆ ಸುಲಭವಾಗಿ ದಕ್ಕದಷ್ಟು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳುತ್ತಾ ಹೋಗುವ ಶೈಲಿ ಆಸಕ್ತಿಕರವಾಗಿದೆ.ನಾನು ಮೂರು-ನಾಲ್ಕು ಸಾರಿಯಾದರೂ ಓದಿದೆ ಎಂದೆನಿಸುತ್ತದೆ ಹಾಗೂ ಮನದಮೂಲೆಯಲ್ಲಿ ಅದರ ಬಗ್ಗೆ ಚಿಂತಿಸುತ್ತಲೇ ಇದ್ದೆ. ರೋಗ ಲಕ್ಷಣಗಳನ್ನು ಈಗಾಗಲೇ ವಿವರಿಸಿಯಾಗಿದೆ . ರೋಗನಿದಾನವನ್ನು ಸ್ವಲ್ಪ ಗಮನಿಸುವ ಪ್ರಯತ್ನ ಈ ನನ್ನ ಲೇಖನ.

    ಧರ್ಮ ಎಂಬುದರ ವ್ಯಾಖ್ಯಾನ – ‘’ಧಾರಯಾತ್ ಇತಿ ಧರ್ಮಃ’’ ಎನ್ನುತ್ತಾರೆ. ಇದು ಕೇವಲ ಮತಾಚರಣೆ, ದೈವಪೂಜೆ , ಭಕ್ತಿ ಶ್ರದ್ಧೆಗಳಿಗಷ್ಟೇ ಸೀಮಿತವಾಗಿಲ್ಲ. ಸಮಷ್ಟಿ ಹಿತದ, ಪ್ರಜಾಪಾಲನೆಯ ರಾಜ ಧರ್ಮದಿಂದ ಹಿಡಿದು ವ್ಯಷ್ಟಿ ಹಿತದ, ದೇಹಪೋಷಣೆಯ ಶರೀರ ಧರ್ಮದವರೆಗೂ ಜೀವನದ ಎಲ್ಲ ವಿಭಾಗಗಳಿಗೆ ಅನ್ವಯಿಸುವ ಕರ್ತವ್ಯ ಪ್ರಜ್ಞೆಯ ಜೀವನವಿಧಾನದ ಸೂತ್ರಗಳನ್ನು ಒಳಗೊಂಡಿದೆ. ಕಥೆ ಪುರಾಣಗಳ ಮೂಲಕ ಹಬ್ಬ-ಆಚರಣೆಗಳನ್ನು ಬೆಸೆದು ಜೀವನ ಧರ್ಮ ಪಾಲನೆಯನ್ನು ನೆನಪಿಸುವ ಹಾಗೂ ಆ ಮೂಲಕ ಸಮಾಜವನ್ನು ಸದಾ ಚಟುವಟಿಕೆ- ಕ್ರಿಯಾಶೀಲತೆಗಳಲ್ಲಿ ತೊಡಗಿರಲು ಅನುವು ಮಾಡಿಕೊಟ್ಟ ಸನಾತನ ಧರ್ಮವು ಬ್ರಹ್ಮಚರ್ಯ, ಗೃಹಸ್ತ, ವಾನಪ್ರಸ್ಥ ಸನ್ಯಾಸ ಎಂಬ ನಾಲ್ಕೂ ಆಶ್ರಮ ಎಂಬ “ಧರ್ಮ”ಗಳಲ್ಲಿ ತೊಡಗಿಕೊಂಡಿರುವ ಆಯಾ ಆಸಕ್ತಿಯ ಜನಗಳಿಗೆ ತಮ್ಮ ತಮ್ಮ ದಾರಿಗಳನ್ನು ಅರಸಿಕೊಂಡು ಹೋಗುವ ಅವಕಾಶವನ್ನೂ ಕಲ್ಪಿಸಿದೆ. ಯಾವುದೇ ವ್ಯಕ್ತಿಯು ತನ್ನ ಶ್ರದ್ಧೆ-ಭಕ್ತಿಗಳಿಗೆ ಅನುಸಾರವಾಗಿ ಖಾಸಗಿಯಾಗಿ, ತನ್ನ ಮನೆಯಲ್ಲಿ, ಯಾರಿಗೂ ತಿಳಿಯದಂತೆ ತನ್ನ ಇಷ್ಟ ದೇವತೆಯ ವ್ರತ ಇತ್ಯಾದಿಗಳನ್ನು ಆಚರಿಸಬಹುದು. ಸಣ್ಣ ಹಾಗು ದೊಡ್ಡ ಹಬ್ಬಗಳನ್ನು ಕೌಟುಂಬಿಕ ಹಾಗೂ ಸಾಮುದಾಯಿಕ ನೆಲೆಯಲ್ಲಿ ಆಚರಿಸಲು ಅವಕಾಶವಿದೆ. ದೊಡ್ಡ ಪ್ರಮಾಣದಲ್ಲಿ ಇಡೀ ಪ್ರಾಂತ್ಯ ಅಥವಾ ರಾಷ್ಟ್ರವೇ ಪಾಲ್ಗೊಳ್ಳುವ ಬೃಹತ್ ಮೇಳ, ಮಹೋತ್ಸವ, ಜಾತ್ರೆ, ಇತ್ಯಾದಿಗಳು ಭಾರತದ ಜನ ಜೀವನದ ಭಾಗಗಳಾಗಿವೆ. ಉತ್ತರದ ಕುಂಭ ಮೇಳಕ್ಕೆ ದಕ್ಷಿಣದ ಭಕ್ತರೂ ಹೋಗುತ್ತಾರೆ ಹಾಗು ದಕ್ಷಿಣದ ತಿರುಪತಿ ಬ್ಹ್ರಹ್ಮೋತ್ಸವಕ್ಕೆ ದೇಶದ ಎಲ್ಲ ಭಾಗಗಳಿಂದಲೂ ಜನ ಬರುತ್ತಾರೆ ; ಅಷ್ಟೇ ಏಕೆ, ಮೈಸೂರು ದಸರಾ ವಿಜಯ ದಶಮಿಗೆ ವಿಶ್ವದೆಲ್ಲೆಡೆಯಿಂದ ಜನ ಸೇರುತ್ತಾರೆ. ಹೀಗಾಗಿ ಭಾರತ ಎಂಬುದು ಉತ್ಸವ ಮಹೋತ್ಸವ ಹಬ್ಬಗಳ ದೇಶ. ಮುಸ್ಲಿಂ ಆಡಳಿತದಲ್ಲಿ ಉಸಿರುಕಟ್ಟುವ ವಾತಾವಾರಣ ಇದ್ದಾಗಲೂ ‘ಜೆಸ್ಸಿಯಾ’ ತಲೆಗಂದಾಯ ಎಂಬ ದಮನಕಾರೀ -ದ್ವೇಷಪೂರ್ವಕ ಕಾನೂನು ಇದ್ದಾಗಲೂ ಜನ ಆಚರಣೆಗಳನ್ನು ತೊರೆದಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕಿದೆ. “ಸೆಕ್ಯೂಲರ್” ಎಂಬ ಎರವಲು ಪಡೆದ ಪದವನ್ನು ಜಾತ್ಯಾತೀತತೆ ಎಂದು ಸಡಿಲವಾಗಿ ಅರ್ಥೈಸುವಾಗ ಅದು ಹಿಂದೂ ಧರ್ಮಕ್ಕೆ ,ಅದರ ಆಚರಣೆಗಳಿಗೆ, ಅವರನ್ನು ನಿಯಂತ್ರಿಸುವ ಪ್ರಕ್ರಿಯೆಗಳಿಗೆ ಮಾತ್ರ ಸೀಮಿತವಾದ ಸತ್ಯವನ್ನು ನಾವೆಲ್ಲರೂ ಕಾಣಬೇಕಿದೆ. ಜಾತ್ಯಾತೀತತೆ ಎಂದಿಟ್ಟುಕೊಂಡರೂ ನಿಜ ಅರ್ಥದಲ್ಲಿ ಅದು ಬಳಕೆಯಾಗಬೇಕಿರುವುದಾದರೂ ಹೇಗೆ? ಅವರವರ ಆಚರಣೆಗಳನ್ನು ಅವರವರಿಗೆ ಬಿಟ್ಟು ಪರಸ್ಪರ ಗೌರವಾದರಗಳೊಂದಿಗೆ ನಡೆದುಕೊಳ್ಳುವ ಸೌಜನ್ಯವನ್ನು ಸೆಮೆಟಿಕ್ ಮತಗಳು, ಅವರನ್ನು ಬೆಂಬಲಿಸುವ ಬುದ್ಧಿಜೀವಿಗಳು, ಓಲೈಕೆಯ ಸರಕಾರಗಳು, ವಿದೇಶೀ ಹಣದ ಬಲದಲ್ಲಿ ನಡೆಯುತ್ತಿರುವ NGOಗಳು, ಪಾಲಿಸದೆ ಕೆಣಕುವ ಕುಚೇಷ್ಟೆಯಲ್ಲಿ ಮಗ್ನವಾಗಿರುವುದಕ್ಕೆ ನಾವು ಕುರುಡರಾದರೆ ಸತ್ಯವನ್ನು ಕಡೆಗಣಿಸಿದ ಅವಿವೇಕಕ್ಕೆ ಪಕ್ಕಾಗುತ್ತೇವೆ. ಭಾರತದ ಅಂತಃಶಕ್ತಿಯಾದ ಈ ಸಾಮಾಜಿಕ, ಕೌಟುಂಬಿಕ ಮತ್ತು ವೈಯಕ್ತಿಕ ಆಚರಣೆಗಳು, ಪಾಶ್ಚಾತ್ಯ ಮತಗಳ ನಂಬಿಕೆ,ಜೀವನ ವಿಧಾನದ ರೀತಿಗೆ ವ್ಯತಿರಿಕ್ತವಾದ ವ್ಯವಸ್ಥೆ. ತಮ್ಮ ಧರ್ಮವನ್ನು ಪಾಲಿಸಿಕೊಂಡು ಇತರರ ಮತಪಾಲನೆಗೆ ಎಂದಿಗೂ ಅಡ್ಡಬರದ ಹಿಂದೂ ಸಮುದಾಯವನ್ನು ನಿರಂತರ ಪ್ರಚೋದನೆಗೆ ತಳ್ಳುತ್ತಾ ಅವರ ಮೇಲೆಯೇ ಗೊಬೆ ಕೂರಿಸುವ ಹುನ್ನಾರವಿಲ್ಲಿ ಉಲ್ಲೇಖ ಮಾಡಲೇ ಬೇಕಾಗುತ್ತದೆ. ನಮ್ಮನ್ನು ಸರಿ ಸುಮಾರು ೧೦೦೦ ವರ್ಷಗಳ ಆಳಿದ ಮುಸ್ಲಿಂ ಹಾಗು ಐರೋಪ್ಯ ಜನಗಳು ದಬ್ಬಾಳಿಕೆ, ಧ ರ್ಮಾಂಧತೆ, ಧರ್ಮ ದ್ವೇಷ,ಮತಾಂತರ ರಾಜಕೀಯ ಹಾಗೂ ಇನ್ನಿತರ ಕಾರಣಗಳಿಗೆ ಅಪವ್ಯಾಖ್ಯಾನ ಮಾಡಿದ್ದು ಅಲ್ಲದೆ ವೃತ್ತಿಯಾಧಾರವಾಗಿದ್ದ ಸಾಮಾಜಿಕ ಸ್ತರಗಳನ್ನು ಜಾತಿಯಾಧಾರಿತ ಎಂದು ಒಡೆದು ಹೋದದ್ದು ಅದನ್ನು ಮುಂದುವರಿಸಿದ ಸ್ವಾತಂತ್ರ್ಯೋತ್ತರ ರಾಜಕೀಯ ಸಮಸ್ಯೆಯನ್ನು ಇನ್ನಷ್ಟು ಜಟಿಲ ಮಾಡಿ ಇಟ್ಟಿದೆ.

    ರಾಷ್ಟ್ರ ಎಂಬ ಪರಿಕಲ್ಪನೆ ನಮಗೆ ಸ್ವಾತಂತ್ರ್ಯಾ ನಂತರ ಬಂದ ಬ್ರಿಟಿಷರ ಕೊಡುಗೆ ಎಂದು ನಂಬಿಸಿದ ಪುಸ್ತಕಗಳನ್ನು ಓದಿ ಬೆಳೆದ ಪೀಳಿಗೆ ಇಂದು ನಮ್ಮ ಮುಂದಿದೆ. ಭಾರತ ವೇದಕಾಲದ ಗಣತಂತ್ರಗಳಿಂದ ಹಿಡಿದು,ಸಣ್ಣ ಸಾಮ್ರಾಜ್ಯಗಳಾಗಿದ್ದ ಕಾಲಘಟ್ಟಗಲಳಿವೆ ;ಹಾಗೆಯೇ ಅಖಂಡ ಭಾರತ ಏಕ ಚಕ್ರಾಧಿಪತ್ಯಕ್ಕೆ ರಾಜಕೀಯವಾಗಿ ಒಳಪಟ್ಟ ಹಲವಾರು ಕಾಲ ಘಟ್ಟಗಳೂ ಇವೆ. ಭರತ ಚಕ್ರವರ್ತಿ, ಚಂದ್ರಗುಪ್ತ, ಅಶೋಕ, ಕಾಶ್ಮೀರದ ಲಲಿತಾದಿತ್ಯ ಹೀಗೆ ಕೆಲವರು. ಅದಕ್ಕಿಂತ ಹೆಚ್ಚಾಗಿ ಹಾಗೂ ಮುಖ್ಯವಾಗಿ ಭಾವನಾತ್ಮಕವಾಗಿ , ಧಾರ್ಮಿಕವಾಗಿ, ಸೈದ್ಧಾಂತಿಕವಾಗಿ ಅಖಂಡ ಭಾರತ ಇಂದಿನ ಅಫ್ಘಾನಿಸ್ತಾನದಿಂದ ಬರ್ಮಾ ದೇಶದವರೆಗೂ ಹಬ್ಬಿತ್ತು ಎಂಬುದಕ್ಕೆ ಐತಿಹಾಸಿಕ, ಪುರಾತತ್ವ ದಾಖಲೆಗಳೂ , ನಂಬುವವರಿಗೆ ವೇದ, ಪುರಾಣ, ಇತಿಹಾಸಗಳಾದ ರಾಮಾಯಣ ಮಹಾಭಾರತ ಹಾಗೂ ಇತರ ಆಕರಗಳಾದ ಗ್ರೀಕ್ ಮತ್ತು ಚೀನೀ ಯಾತ್ರಿಕರ ಉಲ್ಲೇಖಗಳಿಂದಲೂ ದೊರೆಯುತ್ತದೆ. ಶ್ರೀರಾಮ ವನವಾಸ ಮಾಡಿದ್ದು ಉತ್ತರದಿಂದ ದಕ್ಷಿಣದ ವರೆಗೂ! ದ್ವಾದಶ ಜ್ಯೋತಿರ್ಲಿಂಗಗಳು ದೇಶದ ಉದ್ದಗಲಕ್ಕೂ ಇವೆ. ಮುಂಜಾನೆಗೇ ಎದ್ದಾಗ ಭೂಮಿಯಮೇಲೆ ಕಾಲಿಡುವ ಮುಂಚೆ ಕ್ಷಮಾಪಣಾ ಸ್ತೋತ್ರವಾಗಿ ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ ವಿಷ್ಣುಪತ್ನೀ ನಮಸ್ತುಭ್ಯಮ್ ಪಾದಸ್ಪರ್ಶಮ್ ಕ್ಷಮಸ್ವಮೇ ಎಂದು ಸ್ತುತಿಸುವಲ್ಲಿಯೂ ಇಡೀ ಭಾರತದ ವರ್ಣನೆಯನ್ನು ಕಾಣಬಹುದು.
    ‘’ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ / ವರ್ಷಾಮ್ ತದ್ ಭಾರತಾಂ ನಾಮ ಭಾರತೀ ಯಾತ್ರಾ ಸಂತತಿಹಿ’’ ಎನ್ನುತ್ತದೆ ವಿಷ್ಣು ಪುರಾಣ..ಸ್ನಾನ ಮಾಡುವಾಗ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲೈಸ್ಮಿನ್ ಸನ್ನಿಧಿಮ್ ಕುರು ಎಂದು ಭಾರತದ ಪ್ರಮುಖ ನದಿಗಳೆಲ್ಲದರ ಹೆಸರನ್ನು ಜಪಿಸಿ ನೀರು ಸುರಿದುಕೊಳ್ಳುವಲ್ಲಿಯೂ ನಾವು ರಾಷ್ಟ್ರೀಯತೆಯನ್ನು ಕಾಣಬಹುದು. ಪ್ರತೀ ದಿನ ಸಂಧ್ಯಾವಂದನೆ ಮಾಡುವ ಸಮಯ್ದಲ್ಲಿ ಸಂಕಲ್ಪ ಎಂದು ಮಾಡುವುದಿದೆ. ತಾನು ಇರುವ ದೇಶ ಕಾಲ ಸ್ಥಳ ಇತ್ಯಾದಿಗಳನ್ನು ಉಲ್ಲೇಖಿಸುವ ಮಂತ್ರದಲ್ಲಿ ‘’ಭರತವರ್ಷೇ ಭರತಖಂಡೇ ದಂಡಕಾರಣ್ಯೇ ‘’ ಎಂದು ಹೇಳುವಲ್ಲಿ ಕೂಡಾ ನಾವು ಅಖಂಡ ಭಾರತ ದೇಶದವರು ಎಂಬ ಭಾವ ಬಿಂಬಿತವಾಗಿರುವುದನ್ನು ಕಾಣಬಹುದು ಹಾಗಾಗಿ ಭಾರತ ಎಂಬ ರಾಷ್ಟ್ರ ಕಲ್ಪನೆಯು ಭರತ ವರ್ಷದಷ್ಟೇ ಪುರಾತನವಾದದ್ದು. ಹಾಗಾಗಿ ಇದು ಬ್ರಿಟಿಷರ ಬಳುವಳಿ ಎಂದೇನೂ ಹೇಳಲಾಗದು.ಶ್ರೀಮಾನ್ ಪಟೇಲರು ಸ್ವಾತಂತ್ರ್ಯೋತ್ತರದಲ್ಲಿ ರಾಜಕೀಯವಾಗಿ ಒಂದು ಸತ್ತೆಯಡಿ ತಂದ ಮಹನೀಯರೆಂದು ಇಲ್ಲಿ ಸ್ಮರಿಸಬಹುದು.

    ಈಗ ಸಮಸ್ಯೆಗೆ ಬಂದರೆ, ಶ್ರೀ ಶಿವಪ್ರಸಾದರು ಹೇಳಿದಂತೆ ಇತ್ತೀಚಿಗೆ ಧಾರ್ಮಿಕತೆ ಹೆಚ್ಚಾಗಿದೆಯೆಂಬಂತೆ ಕಂಡು ಬರುತ್ತಿದೆ. ಇದರ ಜಾಡು ಹಿಡಿದು ಹೊರಟಾಟ ೮೦ರ ದಶಕಕ್ಕೆ ಹೋಗಬೇಕು. ಸಿಖ್ಖರ ನರಮೇಧ ನಡೆದಿದ್ದು ಮೊದಲ ಕಪ್ಪು ಚುಕ್ಕೆ, ಜಮ್ಮು ಕಾಶ್ಮೀರದ ಹಿಂದೂಗಳ ಮಾರಣಹೋಮ ಮತ್ತು ಅದಕ್ಕೆ ರಾಜಕೀಯವಾಗಿ ಅಂದಿನ ರಾಜೀವ್ ಘಂಡಿ ಸರಕಾರ ಸರಿಯಾದ ಸ್ಪಂದನೆ ತೋರಿಸದೆ ಇದ್ದದ್ದು ಎರಡನೇ ಕಪ್ಪು ಚುಕ್ಕೆ.. ಅಲ್ಪಸಂಖ್ಯಾತರು ಎಂಬ ಓಲೈಕೆ ಹೆಸರಿನ ಅಡಿಯಲ್ಲಿ ಸತತವಾಗಿ ಹಿಂದೂಗಳ ಹಿತವನ್ನು ಕಾಲ ಕಸ ಮಾಡಿ ಕಡೆಗಣಿಸತೊಡಗಿದ್ದು ಹಾಗೂ ಅದರ ಬಿಸಿಯನ್ನು ಸಮಾಜ ನಿಧಾನವಾಗಿ ಅರಿಯತೊಡಗಿದ್ದು ಮೂಲ ಕಾರಣಗಳನ್ನಾಗಿ ಗುರುತಿಸಬಹುದು. ಜಾತ್ಯಾತೀತತೆಯನ್ನು ಪ್ರತಿಪಾದಿಸಿದ ನೆಹರೂ ಜಾತೀಯತೆಯನ್ನು ರಾಜಕೀಯ ದಾಳವಾಗಿ ಬಳಸಿದ್ದು ಒಂದು ವಿಪರ್ಯಾಸ. ಇತಿಹಾಸದ ಪುಸ್ತಕಗಳನ್ನು ನೆಹರೂ ಪ್ರಣೀತ ವಿದ್ವಾಂಸರು ಪಕ್ಷಪಾತಿಯವಾಗಿ ಬರೆಸಿದ್ದನ್ನು ಭೈರಪ್ಪನವರು ವರ್ಷ, ತಿಂಗಳು ದಿನಾಂಕ ಸಹಿತ ಉಲ್ಲೇಖಿಸಿದ್ದಾರೆ. ಸತ್ಯವನ್ನು ಮರೆಮಾಚಿ ಅದರ ಮೇಲೆ ಸೌಧ ಕಟ್ಟ ಹೊರಟ ಅಪ್ರಾಮಾಣಿಕ ಕಟ್ಟಡ ಇಂದಲ್ಲಾ ನಾಳೆ ಬೀಳಲೇಬೇಕಿತ್ತು! ಅದರ ಫಲ ಇಂದಿನ ಪರಿಸ್ಥಿತಿ. ಜತೆಗೆ ಅದೇ ತಾನೇ ಹೊರಬಿದ್ದ ಪುರಾತತ್ವ ಇಲಾಖೆಯ ಸಂಶೋಧನಾವರದಿಗಳು ಬಾಬರಿ ಮಸೀದಿ ರಾಮ ಮಂದಿರದ ಮೇಲೆ ಕಟ್ಟಿದ್ದು ಎಂದು ಸಾಬೀತಾಗಿ, ಮುಸ್ಲಿಂ ಸಂಘಟನೆಗಳು ತಾವಾಗಿ ಮುಂದೆ ಬಂದು ಸೌಹಾರ್ದಯುತವಾಗಿ ಒಪ್ಪಿಸಲು ತಯಾರಾಗಿದ್ದರೂ ಅವರ ದಿಕ್ಕು ತಪ್ಪಿಸಿದ JNU ವಿನ ಕಮ್ಮುನಿಸ್ಟ್ ಅಧ್ಯಾಪಕರು ಅದಕ್ಕೆ ಕಲ್ಲು ಹಾಕಿದರು. ಮುಂದಿನ ಇತಿಹಾಸ ನಿಮಗೆ ಗೊತ್ತಿದೆ. ಹೀಗೆ ಸಮಾಜದಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿತು. ಜಾಗತಿಕವಾಗಿ ಭಾರತ ಹೊರ ಪ್ರಪಂಚಕ್ಕೆ ತೆರೆದ ನಂತರದಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ವಿದೇಶೀ ದೇಣಿಗೆ ಪಡೆದು ಸಮಾಜದಲ್ಲಿನ faultlines ಎಲ್ಲಿದೆಯೋ ಅಲ್ಲೆಲ್ಲಾ ಅವುಗಳನ್ನು ಹಿಗ್ಗಿಸತೊಡಗಿರುವುದು ನಿಮ್ಮಲ್ಲಿ ಕೆಲವರಿಗೆ ತಿಳಿದಿರಬಹುದು.
    ದೇವಾಲಯಗಳನ್ನು ಮುಜರಾಯಿಗೆ ಒಳಪಡಿಸಿ ಅಲ್ಲಿಂದ ಹಣ ದೋಚಿ ಹಾಳುಗೆಡವುವ ಸರಕಾರಗಳು ಅಲ್ಪಸಂಖ್ಯಾತರ ಪ್ರಾರ್ಥನಾಲಯಗಳಿಗೆ ಕೋಟಿಗಟ್ಟಲೆ ಅನುದಾನ ನೀಡುವುದು ಗುಟ್ಟಾಗಿ ಉಳಿದಿಲ್ಲ. ವಿಚಾರವಾದದ ಅಡಿಯಲ್ಲಿ ಇತರ ಮತಗಳನ್ನು ಯಾವುದೇ ರೀತಿಯಲ್ಲಿ ಪ್ರಶ್ನಿಸದ ಎಡಚರ ಪಟಾಲಂ, ನಾಗರ ಪಂಚಮಿಗೆ ಹಾಲೆರೆಯಬೇಡಿ, ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಕಂಬಳದಕೋಣಗಳಿಗೆ ಪ್ರಾಣಿಹಿಂಸೆ ಮಾಡಬೇಡಿ, ಜಲ್ಲಿಕಟ್ಟು ಅಸಾಂವಿಧಾನಿಕ, ಎಂಬ ಇತ್ಯಾದಿ ಕುಚೇಷ್ಟೆಗಳನ್ನು ಮಾಡಿದ ಪರಿಣಾಮ ಹಿಂದೂ ಸಮುದಾಯ ತಿರುಗಿ ಬಿದ್ದಿದೆ. ಮೊಹರ್ರಮ್ ಆಚರಣೆಗೆ ಇರದ ಪ್ರತಿಬಂಧಕಗಳು ಗಣೇಶನ ಮೆರವಣಿಗೆಗೆ, ದುರ್ಗಾ ಪೂಜೆಯ ಮೆರವಣಿಗೆಗೆ ಧುತ್ತೆಂದು ಎದ್ದು ನಿಂತರೆ, ಆಚರಣೆಗಳನ್ನು ಹೆಚ್ಚು ಹೆಚ್ಚಾಗಿ ಪ್ರತಿಭಟನೆಯ ಸ್ವರೂಪದಲ್ಲಿ ಮಾಡಲು ಪ್ರೇರೇಪಿಸುವ ಪರಿಸ್ಥಿತಿ ಇಂದು ಭಾರತದಲ್ಲಿದೆ ಎಂಬುದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು.ಇದು, ಧರ್ಮೀಯತೆ ಹೆಚ್ಚಾಗಿದೆ ಎಂಬ ಭಾವನೆ ಕೊಡಬಹುದು.
    ಜತೆಗೆ ಬುದ್ಧಿಜೀವಿಗಳೆನಿಸಿಕೊಂಡ ಸರಕಾರೀ ಕೃಪಾಪೋಷಿತ ಸಮುದಾಯ ರಾಮನನ್ನು, ಕೃಷ್ಣನನ್ನು ನಿಂದಿಸುವುದು ಇತ್ಯಾದಿಗಳನ್ನು ಮಾಡುವಾಗ ಆಕ್ರೋಶಗೊಳ್ಳುವ ಶ್ರಧ್ಢಾಲುಗಳು ಧಾರ್ಮಿಕತೆ ಹೆಚ್ಚಿದೆ ಎನ್ನುವ ಭಾವವನ್ನು ಕೊಡುತ್ತಿವೆ. ಮಧ್ಯಪ್ರಾಚ್ಯದ ಪೆಟ್ರೋಲ್ ಡಾಲರ್ಗಳು ವಹಾಬಿಸಂ,ಲವ್ ಜಿಹಾದ್ ಇತ್ಯಾದಿಗಳಿಗೆ ಇಂಬುಕೊಡಲು ಪ್ರಾರಂಭಿಸಿದ ಪಿಡುಗು ಒಂದೆಡೆಯಾದರೆ ,ಕ್ರೈಸ್ತ ಮತಾಂತರ ಇತ್ಯಾದಿಗಳು ಪರಸ್ಪರ ಸಂಶಯಗಳನ್ನು ಹೆಚ್ಚೇ ಮಾಡಿವೆ.
    Freedom of expression ಎಂಬ ಹೊಸ ಗುರಾಣಿಯಡಿಯಲಿ ತಾವು ಏನು ಬೇಕಾದರೂ ಮಾಡಬಹುದು , ಏನನ್ನು ಬೇಕಾದರೂ ಅನ್ನಬಹುದು, ಕೂಗಬಹುದು ಎಂಬ ಹೊಸ ವೈಖರಿಯೊಂದು ಶುರುವಾಗಿದೆ. ರಾಷ್ಟ್ರ ಭಕ್ತಿ , ರಾಷ್ಟ್ರೀಯತೆಗಳನ್ನು RSS ನೊಂದಿಗೆ ಜೋಡಿಸಲಾಗುತ್ತಿದೆ. ಹಾಗಾಗಿ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಹಾಡಿ , ಎದ್ದು ನಿಲ್ಲಿ ಎಂದರೆ ವಿರೋಧಿಸುವ ಹೊಸ ಸಂಪ್ರದಾಯ ಪ್ರಾರಂಭವಾಗಿದೆ. RSS ಎಂದರೆ ಬ್ರಾಹ್ಮಣರ ಕೂಟ ಎಂದು ಅರ್ಥೈಸಲಾಗುತ್ತದೆ. ಹಾಗಾಗಿ ದೇಶ ವಿರೋಧ ಮಾಡುವುದು RSS ಅನ್ನು ವಿರೋಧಿಸಿದಂತೆ ಎಂಬ ಕುತರ್ಕವು ತಲೆ ಎತ್ತಿದೆ. ಜತೆಗೆ ಆರ್ಯರು ಹೊರಗಿನಿಂದ ಬಂದವರು ಹಾಗೂ ಆರ್ಯರು ಎಂದರೆ ಬ್ರಾಹ್ಮಣರು ,ಹಾಗಾಗಿ ಈ ದೇಶವನ್ನು ವಿರೋಧಿಸಿದರೆ ವ್ಯವಸ್ಥೆಯನ್ನು ವಿರೋಧಿಸಿದಂತೆ, ಹಾಗಾಗಿ ಬ್ರಾಹ್ಮಣರನ್ನೂ ,ತನ್ಮೂಲಕ RSS ಅನ್ನು ವಿರೋಧಿಸುವುದು ಸಮರ್ಥನೀಯವೇ ಆಗಿದೆ ಎಂದೂ ವಾದಿಸುವ ವಿದ್ಯಾವಂತ ಸಮುದಾಯ ಇಂದಿದೆ. ಇನ್ನು ನರೇಂದ್ರ ಮೋದಿಯ ಹಿನ್ನೆಲೆ ರಾಷ್ಟ್ರೀಯ ಸ್ವಯಮ್ ಸೇವಕ ಸಂಘ ಆಗಿರುವುದರಿಂದ ದೇಶವಿರೋಧ ಎಂದರೆ ಬಲಪಂಥೀಯ ವಿರೋಧ ಎಂಬ Twisted Logic ಕೂಡಾ ಕಾಣಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಭಾರತದಲ್ಲೇ ಪಾಕಿಸ್ತಾನದ ಧ್ವಜ ಹಾರಿಸುವ ಉದ್ಧಟರೂ, ಮಸೀದಿಯ ಮುಂದೆ ಗಣರಾಜ್ಯದಂದು ಶಾಲಾ ಮಕ್ಕಳ ಪಾಠ ಸಂಚಲನ ತಡೆದು ಹಲ್ಲೆ ಮಾಡುವ ದುಷ್ಕರ್ಮಿಗಳೂ ಇಂದು ಹುಟ್ಟಿದ್ದಾರೆ; ಅದಕ್ಕೆ ಓಲೈಕೆಯ ಸರಕಾರಗಳು ಎಂದಿನಂತೆ ಕುರುಡಾಗಿವೆ.
    ಆರ್ಯ ದ್ರಾವಿಡ ಎಂಬ ಮಿಥ್ಯ ಇತಿಹಾಸ,ಭಾರತವೆಂದರೆ ನಿರ್ವೀರ್ಯ ರಾಜರ ಸಂಸ್ಥಾನಗಳು, ಸನಾತನ ಧರ್ಮವೆಂದರೆ ಜಾತೀಯತೆ, ಮುಘಲರೆಂದರೆ ಸಹಿಷ್ಣುಗಳು, ಟಿಪ್ಪೂ ಎಂದರೆ ಮಹಾನ್ ಹೋರಾಟಗಾರ ಎಂಬ ಹಸೀ ಸುಳ್ಳನ್ನು ಸರಕಾರವೇ ಪ್ರಾಯೋಜಿಸಲು ನಿಂತರೆ ಅದಕ್ಕೆ ವಿರೋಧಗಳು ಬರುತ್ತವಷ್ಟೇ. ಇವುಗಳಿಗೆಲ್ಲಾ ಆಯಕಟ್ಟಿನಲ್ಲಿ ಕುಳಿತ ಬುಧ್ಧ್ಧಿ ಜೀವಿಗಳ ಬೆಂಬಲ ಇದ್ದೇಇರುತ್ತದೆ. ಪರಿಣಾಮ ಪರಸ್ಪರ ವಿರೋಧಿ ಬಣಗಳ ಉದಯ ಹಾಗು ಒಂದು ಬಣ ಇನ್ನೊಂದನ್ನು ವಿರೋಧಿಸುವ ಭರದಲ್ಲಿ ತಾನೇ ರಾಷ್ಟ್ರದ್ವೇಷಿಯಾಗಿ ಬದಲಾಗುವ ವಿಪರ್ಯಾಸ!! ದೇಶವೊಂದರಲ್ಲಿ ಅದರದ್ದೇ ವಿರೋಧಿಗಳು ಇರುವ, ಕೂಗಾಡುವ, ರಾಜಕೀಯ ಪಕ್ಷಗಳ ಬೆಂಬಲವನ್ನು ಪಡೆಯುವ, ಆ ಮೂಲಕ ವಿಜೃಂಭಿಸುವ ಪರಿಪಾಠ ಭಾರತಕ್ಕೆ ತಗುಲಿದ ಒಂದು ವಿಶಿಷ್ಟವಾದ ಶಾಪಗ್ರಸ್ಥ ಬೆಳವಣಿಗೆ. ವಿಶ್ವದ ಬಹುತೇಕ ದೇಶಗಳಲ್ಲಿ ಇಂತಹ ಮನಸ್ಥಿತಿಯನ್ನು ಕಾಣುವುದು (ನಾಗರೀಕರಲ್ಲಿ) ಬಹಳ ಅಪರೂಪ. ಇದೇ ಕಾರಣಕ್ಕೆ ಇಲ್ಲಿ ತಮ್ಮ ರಾಷ್ಟ್ರಭಕ್ತಿಯನ್ನು ಬಹಿರಂಗವಾಗಿ ವ್ಯಕ್ತಗೊಳಿಸುವ, ಆ ಮೂಲಕ ತಾನು ಆ ದೇಶದ್ರೋಹಿಗಳ ಗುಂಪಿನಲ್ಲಿ ಇಲ್ಲ ಎಂದು ಪ್ರತಿಪಾದಿಸುವ ಅನಿವಾರ್ಯತೆಗೆ ಯಾವುದೇ ವ್ಯಕ್ತಿ ಪಕ್ಕಾಗುವ ಅನಿವಾರ್ಯತೆ ಇದೆ ಎಂದೆನಿಸುತ್ತದೆ. ಶ್ರೀ ಶಿವಪ್ರಸಾದ್ ಅವರ ಲೇಖನದ ಆಶಯಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸುವುದೊಳಿತು.
    ಇತರ ದೇಶಗಳ ಬಗ್ಗೆ ಪ್ರೌಢವಾಗಿ ಹೇಳಲಾಗದಿದ್ದರೂ ಭಾರತದ ಬಗ್ಗೆ ಕುರಿತು ಮಾತನಾಡಲು ಹೊರಟಾಗ ವಿಷಯ ಜಟಿಲವಾಗುತ್ತಾ ಹೋಗುತ್ತದೆ. ತನ್ನದೇ ವಿಶಿಷ್ಟ ವ್ಯವಸ್ಥೆಯನ್ನುಕಟ್ಟಿಕೊಂಡು ಬೆಳೆದು ಅವಿಚ್ಛಿನ್ನವಾಗಿ ಉಳಿದಿದ್ದ ಸಂಸ್ಕೃತಿಯೊಂದು ನಿರಂತರ ದಾಳಿ- ದೌರ್ಜನ್ಯ ಹಾಗೂ ಪರ ಆಡಳಿತಕ್ಕೆ ಒಳಗಾಗಿ ಹಲವಾರು ವಿಕೃತಿಗಳಿಗೆ ಸಿಲುಕಿದ ಪರಿಣಾಮವಾಗಿ ಹೊರಗಿನದನ್ನು ಪೂರ್ಣ ಮೈಗೂಡಿಸಿಕೊಳ್ಳಲಾಗದೆ, ತನ್ನತನದ ಹುಡುಕಾಟವನ್ನು ಸಮರ್ಥವಾಗಿ ಮಾಡಿಸಬಲ್ಲ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ತುಂಬಿಕೊಳ್ಳಲೂ ಆಗದೆ, ದಿಕ್ಕು ತಪ್ಪಿದ ಸಮಾಜದ ಭಾಗವೊಂದು ರಾಷ್ಟ್ರವಿರೋಧವನ್ನೇ ಉಸಿರಾಗಿಸಿಕೊಂಡ ಪರಿಸ್ಥಿತಿ ನಮ್ಮದಾಗಿದೆ;ಹಾಗಾಗಿ ಗೊಂದಲದಲ್ಲಿ ಸಿಲುಕಿರುವ ಸಮಾಜವಾಗಿದೆ. ಬಗೆಯುತ್ತಾ ಹೋದಂತೆ ಭೈರಪ್ಪನವರ ಪರ್ವ ಕಾದಂಬರಿಯ ಕಡೆಯಲ್ಲಿ ಬರುವ ಒಂದರ ಮೇಲೆ ಒಂದು ಆಕೃತಿಗಳು ಬೀಳುತ್ತಾ ಎಲ್ಲವೂ ಕಲಸು ಮೇಲೋಗರವಾಗುವ ಚಿತ್ರಣದಂತೆ ಕಂಡುಬರುತ್ತದೆ. “ಇತಿಹಾಸವನ್ನು ಅರಿಯದವ ಇತಿಹಾಸ ಸೃಷ್ಟಿಸಲಾರ” ಎಂಬ ಅಂಬೇಡ್ಕರ್ ಅವರ ಮಾತಿನಂತೆ ನಮ್ಮ ಅಸ್ಮಿತೆಯನ್ನು ನಾವು ಅರಿಯದೆ ಹೋದರೆ ಆ ರಾಷ್ಟ್ರಪ್ರಜ್ಞೆ ಮೂಡುವುದು ಸಾರ್ವತ್ರಿಕವಾಗಿ ಮೂಡುವದು ಅಸಾಧ್ಯ.ಭಾರತದಂತಹ ಸಂಕೀರ್ಣ ವ್ಯವಸ್ಥೆಯಲ್ಲಿ ಸಂವಿಧಾನ, ಕಾನೂನಿನ ಮೂಲಕವೇ ಎಲ್ಲವನ್ನೂ ಸರಿಮಾಡುತ್ತೇವೆ ಎಂಬುದು ಕುರುಡು ಹುಂಬತನ. ನೈತಿಕಪ್ರಜ್ಞೆಯ ಜತೆಯಲ್ಲಿ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡ ಯುವಪೀಳಿಗೆಯನ್ನು ತಯಾರುಮಾಡದೆ ಹೋದಲ್ಲಿ ರಾಷ್ಟ್ರಪ್ರಜ್ಞೆಯೆಂಬುದು ಹುಸಿಆಶಾವಾದ ಆಗುವ ಅಪಾಯವಿದೆ. ‘’ಅಸತೋಮಾ ಸದ್ಗಮಯ’’, ‘’ಸಹನಾವಾವತು ಸಹನೌಭುನಕ್ತು’’ ಎಂಬ ಸಾರ್ವಕಾಲಿಕ ಪ್ರಸ್ತುತತೆ ಇರುವ ಐಕ್ಯಮಂತ್ರವನ್ನುಕೋಮುವಾದೀ ಮಂತ್ರ ಅದು ಸಂಸ್ಕೃತವಾದ ಕಾರಣ “”ಸೆಕ್ಯೂಲರ್’’’’ ಅಲ್ಲ, ಹಾಗಾಗಿ ಅದನ್ನು ನಿಷೇಧಿಸಬೇಕು ಎಂಬಲ್ಲಿಗೆ ನಮ್ಮ ಸಮಾಜ ಬಂದು ನಿಂತಿರುವುದೊಂದು ಆಶಾವಾದಿಗಳನ್ನು ಅಪಹಾಸ್ಯ ಮಾಡುವ ಪ್ರತೀಕವಾಗಿ ನನಗೆ ಕಾಣುತ್ತದೆ.

    Like

  2. ಹಿಂಸಾಚಾರಕ್ಕೆ ಎಡೆಗೊಡುತ್ತಿರುವ ಧರ್ಮಪ್ರಜ್ಞೆ ನಮ್ಮ ಸಮಾಜವನ್ನು ಆಳವಾಗಿ ಒಡೆಯುವುದರಲ್ಲಿ ಸಂಶಯವೇ ಇಲ್ಲ! ಇಂತಹ ಶಕ್ತಿಗಳು ಜಗತ್ತಿನಲ್ಲಿಂದು ತಲೆಯೆತ್ತಿ ಮೆರೆಯಲಾರಂಭಿಸಿರುವುದು ನಿಜಕ್ಕೂ ಕಳವಳದ ಸಂಗತಿ. ಎರಡು ಮಹಾಯುಧ್ಧಗಳಲ್ಲಿ ಅಪಾರವಾದ ಸಾವು-ನೋವನ್ನು ಕಂಡ ಮಾನವ ಜನಾಂಗ ಮತ್ತೊಮ್ಮೆ ತನ್ನ ಚಿಂತನೆಯ ದಿಕ್ಕನ್ನು ಧರ್ಮದ ಹೆಸರಿನಲ್ಲಿ ಹಿಂಸೆಯತ್ತ ಹರಿಸಿರುವುದು ದುರದೃಷ್ಟಕರ ಸಂಗತಿ. ಇಂತಹ ಸಮಯದಲ್ಲಿ ರಾಷ್ಟ್ರಪ್ರಜ್ಞೆ, ಹಾಗೂ ಮಾನವ ಧರ್ಮವನ್ನು ಬೆಂಬಲಿಸುವಂತಹ ಧರ್ಮಪ್ರಜ್ಞೆ ಜೊತೆಗೆ ಸಮಾಜವನ್ನು ಸುಧಾರಿಸುವುದು ಅತ್ಯಂತ ಅವಶ್ಯಕವಾಗಿದೆ. ಶಿವಪ್ರಸಾದ್ ಅವರೇ ನಿಮ್ಮ ಲೇಖನ ಸಮಯೋಚಿತವಾಗಿದೆ. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ನಾವೆಲ್ಲ “ಅವರವರ ಭಾವಕ್ಕೆ ಎನ್ನುವಂತಹ” ನಿಲುವನ್ನು ತಾಳುವುದೇ ಮೇಲು. ರಾಜಕೀಯ ಮುಖಂಡರ ಓಟಿನ ದುರಾಶೆಗೆ ಬಲಿಯಾಗದೆ, ನಮ್ಮ ನಿಲುವನ್ನು ದೃಢವಾಗಿಟ್ಟುಕೊಂಡು, ನಮ್ಮೊಳಗೇ ಒಡಕು ಬರದಂತಹ ಸನ್ನಿವೇಶವನ್ನು ಸೃಷ್ಟಿಸುವುದು ಮೇಲು!
    ಉಮಾ ವೆಂಕಟೇಶ್

    Liked by 1 person

  3. ರಾಷ್ಟ್ರಪ್ರಜ್ಞೆ ಮತ್ತು ಧರ್ಮ ಪ್ರಜ್ಞೆ – ಈ ಎರಡೂ ವಿಷಯಗಳು ಅತ್ಯಂತ ಸಂಕೀರ್ಣವಾದವು. ಅವನ್ನು ಕುರಿತು ಬರೆದಿರುವ ಲೇಖಕರ subtle ಸ್ಟೈಲ್ ಹಿಡಿಸಿತು. ಅಭಿನಂದನೆಗಳು. ನಾವು ನೋಡ ನೋಡುತ್ತಿರುವಂತೆಯೇ ಪ್ರಪಂಚದ ಹಲವಾರು ದೇಶಗಳಲ್ಲಿ ಈ ಎರಡಕ್ಕೆ ಸಂಬಂಧಿಸಿದಂತೆಯೇ ಅಥವಾ ಅವನ್ನು ಆಧರಿಸಿಯೇ ಬಹು ಮುಖ್ಯ ಬದಲಾವಣೆಗಳಾಗಿವೆ, ಆಗುತ್ತಿವೆ. ಆದರೆ ಅವು ಹೊಸ ವಿಷಯಗಳಲ್ಲ. ಮತ್ತು ವಿವಿಧ ಕಾಲಘಟ್ಟಗಳಲ್ಲಿ ರೂಪಾಂತರ ಹೊಂದುತ್ತಿವೆ, ಹೊಸ ಅರ್ಥಗಳನ್ನು ಪಡೆಯುತ್ತಿವೆ. ವಿಭಜನೆಯನ್ನು ಇಷ್ಟಪಡುವ ತಂತ್ರಗಾರರ ಕೈಯಲ್ಲಿ ಸಿಕ್ಕಿಕೊಂಡರೆ ಈ ಎರಡು concept ಗಳು ಯಾವತ್ತೂ ಆಯುಧಗಳೇ. ಧರ್ಮವನ್ನು ವೈಯಕ್ತಿಕವಾಗಿಟ್ಟುಕೊಂಡು ರಾಷ್ಟ್ರಪ್ರಜ್ಞೆಯನ್ನು ಬಹಿರಂಗವಾಗಿ ಆಚರಿಸುವ ಸಮಾಜಗಳಲ್ಲಿ ಕೂಡ ಅನೇಕ ಪ್ರಶ್ನೆಗಳು ಚಾಲ್ತಿಯಲ್ಲಿವೆ. ಉದಾಹರಣೆಗೆ postcolonial ದೇಶಗಳಲ್ಲಿ ಅಲ್ಲಿನ ಮೂಲನಿವಾಸಿಗಳಲ್ಲಿ ರಾಷ್ಟಪ್ರಜ್ಞೆ ವಿಭಿನ್ನವಾಗಿದೆ. ಬ್ರಿಟನ್ನಿನಲ್ಲೇ Wales, Scotland, ಇಂಗ್ಲೆಂಡ್, ಉತ್ತರ ಐರ್ಲೆಂಡ್ ಎಂದು ಭಾಗಗಳಿವೆಯಲ್ಲಾ. ಆಸ್ಟ್ರೇಲಿಯಾದಲ್ಲಂತೂ ATSI ಜನರಲ್ಲಿ ಇರುವ ರಾಷ್ಟ್ರಪ್ರಜ್ಞೆ ಬೇರೆಯದ್ದೇ. ಮಹಾಶ್ವೇತ ದೇವಿಯವರ ಕತೆಗಳನ್ನು ಓದಿದರೆ ಭಾರತೀಯತೆಯ ಬಗ್ಗೆ ಹೊಸ ಯೋಚನೆಗಳು ಮೂಡುತ್ತವೆ. ಹಾಗೆಯೇ, ಲೋಹಿಯಾರ ವಾದಗಳನ್ನು ಓದಿದರೆ ಚಿಂತನೆಗೆ ಮತ್ತಷ್ಟು ಮೇವು ಸಿಕ್ಕುತ್ತದೆ. ಭಕ್ತಿಪಂಥ ದ ಭಜನೆಗಳಲ್ಲಿ ಧರ್ಮವಿದ್ದರೂ ಅದು ಮಸುಕಾಗಿ, ಮಾಯವಾಗಿ ಕೊನೆಗೆ ಉಳಿಯುವ ಭಕ್ತಿಯ ಅಗಾಧತೆ ನಮ್ಮನ್ನು ಆವರಿಸುತ್ತದೆ. ಆಗ ಎಲ್ಲರೂ ನಮ್ಮವರು, ನಾವೇ ಆಗುತ್ತೇವೆ. ಇವೆಲ್ಲವನ್ನೂ ಮೀರಿ ಪ್ರಕೃತಿಗೇ ಶರಣಾದರೆ ಅದರ ಪ್ರಭಾವವೇ ಬೇರೆ. ಅಲ್ಲಿ ರಾಷ್ಟ್ರೀಯತೆ, ಪ್ರತ್ಯೇಕ ಧರ್ಮಗಳು ಎಳೆಯುವ ವಿಭಜನೆಯ ಗೆರೆಗಳು ಇಲ್ಲವಾಗುತ್ತವೆ. ಈ ಎಲ್ಲಾ ಹಳತು ಹೊಸತು ಯೋಚನೆಗಳು ಎಲ್ಲರನ್ನೂ ಕಾಡಬೇಕಿದೆ.
    ವಿನತೆ ಶರ್ಮ

    Liked by 1 person

  4. A very thought provoking article. Unfortunately in the real world politicians have used and abused both Rashtrapragne and Dharmapragne for their own ends. Trump and the Indian politicians are proof of that. I recall that modern Turkey was founded on the principle of country first while citizens were free to practice their religions inside their homes, mosques and churches but not outside. For me that was true secularism. Sadly recently Turkey has moved away from that.

    Liked by 1 person

  5. ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಎಲ್ಲರಿಗೂ ಧನ್ಯವಾದಗಳು Sorry I was not able to get the reference for “ಅವರವರ ಭಾವಕ್ಕೆ” I have tried to google and always get Prakash Rai and Prajavani references! Many people have used it as title for their article . As Srivathsa and Sarojini have implied it may be Muppina Shadakshari.

    Like

  6. ಕ್ಷಮಿಸಿ.ಇಲ್ಲಿ ನಾ ಹೇಳಿದ ,
    “ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ”
    ಇದು ನಿಜಗುಣ ಶಿವಯೋಗಿಗಳು ಬರೆದದ್ದು.ಎಷ್ಟು ಸರಳ ಸುಂದರ ನಿರೂಪಣೆ ಧರ್ಮದ ಬಗ್ಗೆ! ಅದನರಿತು ನಡೆದರೆ ಈ ಧರ್ಮಾಂಧತೆ ಗೆ ಒಂದು ಹೊಸ ಬೆಳಕು.
    ಸರೋಜಿನಿ ಪಡಸಲಗಿ

    Liked by 1 person

  7. ಡಾ. ಪ್ರಸಾದ್ ಅವರದು ತುಂಬ ಚಿಂತನಶೀಲ, ವಿಚಾರ ಪ್ರಚೋದಕ ಲೇಖನ.ಧರ್ಮದ ವ್ಯಾಖ್ಯೆ ತುಂಬಾ ವಿಶಿಷ್ಟವಾದುದು, ವಿಶಾಲವಾದದ್ದು.ಮಾನವನಲ್ಲಿಯ ಪಶುತ್ವ ದಮನಿಸಿ , ಮಾನವತೆ ಬೆಳೆದು, ಸರಳ , ಸುಂದರ ಸಂಬಂಧ ಗಳು ಬೆಳೆದು, ಒಂದು ಶಾಂತ ಸೌಹಾರ್ದಮಯ ಜೀವನ ಸಾಗಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಬಲ್ಲವರು, ದಾರ್ಶನಿಕರು ನಿರ್ಮಿಸಿದ ಕಟ್ಟಳೆಗಳು, ತೋರುವ ಬೆಳಕು ಈ ಧರ್ಮ ಅನಬಹುದು.ಎಲ್ಲ ಧರ್ಮಗಳ ಆಶಯವೂ ಇದೇ ಇದನ್ನು ಮನ್ನಿಸುವುದೇ ನಿಜವಾದ ಧರ್ಮ.ಅದಕ್ಕೇ ಮುಪ್ಪಿನ ಷಡಕ್ಷರಿ ಶಿವಯೋಗಿ ಗಳ ,
    “ಅವರವರ ಭಾವಕ್ಕೆ ಅವರವರ
    ಭಕುತಿಗೆ ಅವರವರ ತೆರನಾಗಿ
    ಇರುತಿಹನು ಶಿವಯೋಗಿ”
    ಎಂಬುದು ಸರ್ವಕಾಲಿಕ ಸತ್ಯ, ಪ್ರಸ್ತುತ ಯೋಗ್ಯ.ರಾಷ್ಟ್ರಪ್ರಜ್ಞೆಯ ಹುಟ್ಟು ಈ ಧರ್ಮ ಪ್ರಜ್ಞೆ ಯ ತಳಗಟ್ಟಿನ ಮೇಲೆ , ಎಲ್ಲಿರಾಷ್ಟ್ರಪ್ರಜ್ಞೆಯ ಅರ್ಥ ವೇ ಗೊತ್ತಿಲ್ಲದ ಜನರೂ ಉಂಟೋ ಅಲ್ಲಿ.ಆಗ ಈ ಧರ್ಮಾಂಧತೆ, ಮತಾಂಧತೆಯ ಆಸರೆ ಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳ ದಾಂಗುಡಿ.ಈಗ ನಡೆಯುತ್ತಿರುವುದೀದೇ ಅಲ್ವಾ? ನಿಜವಾಗಲೂ ಇದೊಂದು ಸವಾಲು ಈಗ.ಯಾವಾಗ ರಾಷ್ಟ್ರಪ್ರಜ್ಞೆಯ ಮಹತ್ವದ ಅರಿವು ಮೂಡೀತೋ ಎಂದು ಕಾಯಬೇಕಿದೆ. ಸುಂದರ , ವೈಚಾರಿಕ ಲೇಖನ ನೀಡಿದ ಡಾ.ಪ್ರಸಾದ ಅವರಿಗೆ ಧನ್ಯವಾದಗಳು, ಅಭಿನಂದನೆಗಳು.
    ಸರೋಜಿನಿ ಪಡಸಲಗಿ.

    Liked by 1 person

  8. ಧರ್ಮಪ್ರಜ್ಞೆ ಎನ್ನುವುದು ರಾಷ್ಟ್ರಪ್ರಜ್ಞೆಗಿಂತ ಪುರಾತನವಾದುದು, ಆದರೆ ಅದಕ್ಕೆ ಅಪವಾದ ಎನ್ನುವಂತೆ ಹಿಂದುಧರ್ಮಪ್ರಜ್ಞೆ ಎನ್ನುವುದು ಭಾರತದ ರಾಷ್ಟ್ರಪ್ರಜ್ಞೆ ರೂಪುಗೊಳ್ಳುವ ವೇಳೆಗೇ ಶುರುವಾದುದು ಎಂದು ನನ್ನ ಅಭಿಪ್ರಾಯ.

    ಸಾವಿರಾರು ಜಾತಿ-ಮತ-ಭಾಷೆ-ಆಚರಣೆಗಳಲ್ಲಿ ಚದುರಿ ಹೋಗಿದ್ದ ಜನರನ್ನು ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆಯ ಮೂಲಕ ಒಂದುಗೂಡಿಸುವಲ್ಲಿ ೧೯ ಮತ್ತು ೨೦ನೇ ಶತಮಾನದಲ್ಲಿ ಭಾರತದುಪಖಂಡದಲ್ಲಿ ನೂರಾರು ನಾಯಕರು ದುಡಿದಿದ್ದಾರೆ.

    ಧರ್ಮದ ಕಾರಣ ಹೇಳಿ ಎರಡು ರಾಷ್ಟ್ರಗಳನ್ನು ಸೃಷ್ಟಿಸಿ, ಸ್ವಜನರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿ, ಬ್ರಿಟೀಷರು ಹೊರಟು ಹೋದಾಗ, ಭಾರತವು ಜಾತ್ಯತೀತವಾಗಿ ಉಳಿಯುವ ನಿರ್ಣಯ ತೆಗೆದುಕೊಳ್ಳುತ್ತದೆ.

    ಧರ್ಮಪ್ರಜ್ಞೆಗಿಂತ ರಾಷ್ಟ್ರಪ್ರಜ್ಞೆ ದೊಡ್ಡದು ಎನ್ನುವುದು ಹತ್ತೊಂಬತ್ತನೇ ಶತಮಾನದಿಂದೀಚೆ ಆರಂಭವಾದ ಮತ್ತು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಿದ ವಿಚಾರ; ಭಾರತವೂ ಇದಕ್ಕೆ ಹೊರತಾಗಲಿಲ್ಲ.

    ಆದರೆ ಧರ್ಮಪ್ರಜ್ಞೆಯಿಂದಾಗಿ ಜಾಗತಿಕ ರಾಜಕೀಯ ಧೃವೀಕರಣ ಆರಂಭವಾದಾಗ ಸಹಜವಾಗಿಯೇ ಗೊಂದಲ ಮೂಡುತ್ತದೆ. ರಾಷ್ಟ್ರಪ್ರಜ್ಞೆ ಮತ್ತು ಧರ್ಮರಪ್ರಜ್ಞೆಯ ನಡುವಿನ ಸೂಕ್ಷ್ಮ ಪರದೆ ಹರಿದು ಬೀಳುತ್ತದೆ. ನಿಮ್ಮ ಲೇಖನ ಇಂಥ ಸಂದರ್ಭದಲ್ಲಿ ಸಮಯೋಚಿತವಾಗಿದೆ.

    – ಕೇಶವ

    Liked by 2 people

  9. The article is thought provoking. Rastrapragne is vital in terms preserving our identity.It promotes self esteem and sense belonging and helps to build the nation. But it can be a disadvantage as many many politics abuse the Rastrapragne to create conflict to their own advantage. Eg Trump in US is dividing the US by promoting racism in the name of protection
    Of the national interests. This is narrow minded approach. It distroy S the harmony created by NATO fallowing 2nd Worldwar.
    One wonders the future of our world with increasing intolerance of other people,s values and beliefs.
    Enjoyed reading.
    Vathsala

    Liked by 1 person

  10. ಅತ್ಯುತ್ತಮ ವೈಚಾರಿಕ ಲೇಖನ. ಸಮಯೋಚಿತ ಕೂಡ. ಸರಳವಾದ ಸತ್ಯಗಳನ್ನು ಒಪ್ಪಿಕೊಳ್ಳಲು ಅದೆಷ್ಟು ಕಾಲ ಬೇಕೋ ಗೊತ್ತಿಲ್ಲ. ರಾಷ್ಟ್ರಪ್ರ ಜ್ಞೆ ರಾಜಕೀಯ ಮತ್ತು ನಂಜಿಲ್ಲದ ಸರಳತೆಯನ್ನು ಹೊಂದಿದ್ದರೆ ಮತ್ತೆ ಆಶಾಕಿರಣವಾಗಬಲ್ಲದು.
    ಮಾನಸಿಕವಾಗಿ ಬಹಳಷ್ಟು ಕಾಲ ಜನರು ಸುಖವಾಗಿದ್ದಲ್ಲಿ ಒಂದಷ್ಟು ಜನರಲ್ಲಿ ಸತ್ಯಾಸತ್ಯತೆಗಳ ಅರಿವು ಮಾಸಲು ತೊಡಗುತ್ತದೇನೋ? ಅಂತಹ ಖಾಲಿ ಮನಸ್ಸುಗಳು ಬೇಜವಾಬ್ದಾರಿ ಮತ್ತು ಸ್ವಾರ್ಥಭರಿತ ಜನರ ಹೊಸ ಬರಹಗಳಿಗೆ ಕ್ಯಾನ್ವಾಸ್ ಆಗಿ ಘರ್ಷಣೆಗಳು ಶುರುವಾಗುತ್ತವೆನಿಸುತ್ತದೆ. ಸರಳ ಮನಸ್ಸಿನ ಜನಸಾಮಾನ್ಯರು ನಿರಾಳವಾಗಿ ಬದುಕಲು ಇಂತಹ ವೈಚಾರಿಕತೆಯ ತಳಹದಿ ಬೇಕಿದೆ. ಅಭಿನಂದನೆಗಳು.

    Liked by 1 person

  11. ಪ್ರಸಾದ ಅವರ ವೈಚಾರಿಕ ಲೇಖನ ಸೊಗಸಾಗಿದೆ. ಈಗ ಧರ್ಮ ಪ್ರಜ್ಞೆ- ರಾಷ್ಟ್ರ ಪ್ರಜ್ಞೆಗಳ ಗೊಂದಲ ನಡೆಯುತ್ತಿರುವಾಗ ರಾಷ್ಟ್ರ ಪ್ರಜ್ಞೆಯ ಮಹತ್ವವನ್ನು ಚರ್ಚಿಸಿದ್ದಾರೆ. ಅಭಿನಂದನೆಗಳು. ‘ಅವರವರ ದರುಶನಕೆ ಅವರವರ ದೇಶದಲಿ’ ಇದು ‘ಮುಪ್ಪಿನ’ ಷಡಕ್ಬರಿ ಬರೆದ ಸಾಲು ಎಂದು ಓದಿದ ನನ್ನ ನೆನಪು.- ಶ್ರೀವತ್ಸ

    Liked by 1 person

Leave a comment

This site uses Akismet to reduce spam. Learn how your comment data is processed.