ಸುಧಾ ಬರಗೂರ್ ಸಮ್ಮುಖದಲ್ಲಿ ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಚರ್ಚೆ – ಶ್ರೀನಿವಾಸ ಮಹೇಂದ್ರಕರ್ ಬರೆದ ವರದಿ

ಲೇಖಕರು: ಶ್ರೀನಿವಾಸ ಮಹೇಂದ್ರಕರ್

ಕಳೆದ ಹತ್ತು ವರುಷಳಿಂದ ನಾನು ಲಂಡನ್ನಿನಲ್ಲಿ ನೆಲೆಸಿ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದೇನೆ. ಈ ಹತ್ತು ವರುಷಗಳಲ್ಲಿ ಹಲವಾರು ಕನ್ನಡ ಕಾರ್ಯಕ್ರಮಗಳಿಗೆ ಹಾಜರಾಗಿದ್ದೇನೆ ಮತ್ತು ಕೆಲವು ಕಾರ್ಯಕ್ರಮಗಳಲ್ಲಿ ಸಣ್ಣ ಪುಟ್ಟ ಹಾಸ್ಯನಾಟಕಗಳಲ್ಲಿ ಭಾಗಿಯೂ ಆಗಿದ್ದೇನೆ. ಇದೇ ಸಮಯಾಂತರ್ಯದಲ್ಲಿ ಹಲವಾರು ಬಾರಿ ಕನ್ನಡ ಬಳಗ ಯು.ಕೆ ಬಗ್ಗೆ ಅನೇಕ ಸ್ನೇಹಿತರಿಂದ ಕೇಳಿದ್ದೆ. ಆದರೆ ಬೇರೆ ಕನ್ನಡ ಸಂಘಗಳಿಂದ ಕನ್ನಡ ಕಾರ್ಯಕ್ರಮಗಳು ಲಂಡನ್ನಿನಲ್ಲಿ ಆಯೋಜನೆಗೊಳ್ಳುತ್ತಿದುದರಿಂದ ಮತ್ತು ಕನ್ನಡ ಬಳಗವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಉತ್ತರ ಯು.ಕೆ ಅಥವಾ ಮಧ್ಯ ಯು.ಕೆಯಲ್ಲಿ ಆಯೋಜಿಸುತ್ತಿದ್ದುದ್ದರಿಂದ ನನಗೆ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.

ನನಗೆ ಕನ್ನಡ ಪುಸ್ತಕ ಓದುವದರಲ್ಲಿ ಅಲ್ಪ ಸ್ವಲ್ಪ ಆಸಕ್ತಿ ಇದೆ ಮತ್ತು ಆಗೊಮ್ಮೆ ಈಗೊಮ್ಮೆ ಕವನ ಗೀಚುವ ಗೀಳೂ ಕೂಡ ಇದೆ. ಇತ್ತೀಚೆಗಷ್ಟೇ ಗೆಳೆಯರಾದ ಡಾ. ವಿಶ್ವನಾಥ್ (ಆರ್ಪಿಂಗ್ಟಾನ್) ಅವರೊಡನೆ ಲೋಕಾಭಿರಾಮವಾಗಿ ಮಾತಾಡುತ್ತಿರುವಾಗ, ಅವರು ಕನ್ನಡ ಬಳಗದ ಸಾಹಿತ್ಯ ವೇದಿಕೆ (ಕೆ ಎಸ ಎಸ್ ವಿ ವಿ) ಬಗ್ಗೆ ಮತ್ತು ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ಸಮಾನಾಂತರವಾಗಿ ನಡೆಸುವ ವಿಚಾರಗೋಷ್ಟಿಗಳ ಬಗ್ಗೆ ಮಾಹಿತಿ ಕೊಟ್ಟಿದ್ದರು. ಅಷ್ಟರಲ್ಲೇ ಒಂದು ದಿನ ತಿಪ್ಪೇಸ್ವಾಮಿ ಬಿಲ್ಲಹಳ್ಳಿಯವರು ಕರೆ ಮಾಡಿ ಈ ಬಾರಿ ದೀಪಾವಳಿ ಕಾರ್ಯಕ್ರಮ ಕೇಂಬ್ರಿಡ್ಜಿನಲ್ಲಿ ನಡೆಯುತ್ತಿದ್ದು, ಹಾಜರಾಗಲು ನೋಂದಾಯಿಸುವಂತೆ ಕೋರಿದರು. ನಾನು ಅವರಿಗೆ ಈ ಬಾರಿಯೂ ಕೂಡಾ ಸಾಹಿತ್ಯ ವಿಚಾರ ಗೋಷ್ಟಿ ನಡೆಯುತ್ತಿದೆಯೇ ಎಂದು ಕೇಳಿದೆ. ಹೌದು ಎಂಬ ಉತ್ತರ ಬಂತು. ನನ್ನ ಆಸಕ್ತಿ ಅರಿತ ತಿಪ್ಪೇಸ್ವಾಮಿ ಅವರು ಶ್ರೀವತ್ಸ ದೇಸಾಯಿಯವರಿಗೆ ನನ್ನನ್ನು ಪರಿಚಯುಸಿದರು. ನಂತರ ಶ್ರೀವತ್ಸ ದೇಸಾಯಿಯವರು ಮತ್ತು ಕೇಶವ ಕುಲಕರ್ಣಿಯವರು ಅನಿವಾಸಿ ಇ-ತಾಣವನ್ನು ಪರಿಚಯಿಸಿ ನನ್ನ ಎರೆಡು ಕವನಗಳನ್ನು ಕೂಡಾ ಆ ತಾಣದಲ್ಲಿ ಪ್ರಕಟಿಸಿದರು.

ಇಷ್ಟೆಲ್ಲಾ ನಡೆಯುವಾಗ ನಾನು ಕೆ ಎಸ್ ಎಸ್ ವಿ ವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೀವ್ರ ಕುತೂಹಲದಿಂದ ಕಾಯುತ್ತಿದ್ದೆ. ಅಂದು ನವೆಂಬರ್ ೧೦, ಶನಿವಾರ ಬೆಳೆಗ್ಗೆ, ನನ್ನ ಕರಿ ಸುಂದರಿ ಲೆಕ್ಸಸ್- ನೊಳಗೆ ಕುಳಿತು, ಚುಕ್ಕಾಣಿ (ಸ್ಟೇರಿಂಗ್) ಹಿಡಿದು ಕೇಂಬ್ರಿಡ್ಜ್ ಕಡೆಗೆ ಪ್ರಯಾಣ ಹೊರಟೆ. ಕಾರಲ್ಲಿ ನಾನೊಬ್ಬನೇ ಇದ್ದೆ. ನನ್ನ ಹೆಂಡತಿ ಮತ್ತು ಮಕ್ಕಳು ಆರ್ಪಿಂಗ್ಟಾನ್-ನಲ್ಲೆ ನಡೆಯುತಿದ್ದ ಸ್ಥಳೀಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುತ್ತಿದ್ದುದರಿಂದ, ಅವರು ನನ್ನ ಜೊತೆ ಬರಲು ಸಾಧ್ಯವಾಗಿರಲಿಲ್ಲ. ಎಲ್ಲಾ ಅನಿವಾಸಿ ಭಾರತೀಯ ಗಂಡಂದಿರಂತೆ, ಪ್ರತೀ ಶನಿವಾರ ನನ್ನ ಮಗನನ್ನು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಕರೆದುಕೊಂಡು ಹೋಗಲು ಚಾಲಕನ ಕೆಲಸ ಮಾಡುತಿದ್ದ ನನಗೆ, ಇಂದು ಕೇಂಬ್ರಿಡ್ಜ್-ಗೆ ಒಬ್ಬನೇ ಹೋಗುತ್ತಿರುವುದು, ಗೊತ್ತಿಲ್ಲದಂತೆ ಯಜಮಾನನ ಗತ್ತನ್ನು ನನ್ನೊಳು ಹೊಕ್ಕಿಸಿತ್ತು. ರಾತ್ರಿಯಲ್ಲ ಅಭೋ ಎಂದು ಸುರಿದ ಮಳೆಯಿಂದಾಗಿ ತೋಯ್ದು ಹೋಗಿದ್ದ ರಸ್ತೆಗಳು, ಆ ಸೂರ್ಯನ ಕಿರಣಗಳ ಸೊಬಗಿನಿಂದ, ಟೂತ್-ಪೇಸ್ಟ್ ಜಾಹಿರಾತಿನಲ್ಲಿ ನಟಿಸುವ ಬೆಡಗಿಯ ಹಲ್ಲುಗಳಂತೆ ಫಳಫಳನೆ ಹೊಳೆಯುತ್ತಿದ್ದವು. ಅದು ನನ್ನೊಳಗಾವರಿಸಿದ್ದ ಗತ್ತಿನ ಪ್ರತಿಫಲನವೋ ಅಥವಾ ಕ್ಷಣಿಕವಾಗಿ ಬೀಗುತ್ತಿದ್ದ ನನ್ನನ್ನು ಅವಹೇಳಿಸುವ ಪರಿಯೋ ಗೊತ್ತಾಗಲಿಲ್ಲ.

M25 ವರ್ತುಲ ಹೆದ್ದಾರಿಯನ್ನು ಸೇರುವ ದಾರಿಯಲ್ಲಿ ಶರತ್ಕಾಲದ ತಂಗಾಳಿಗೆ ಹಣ್ಣಾದ ಸಾಲು ಮರಗಳ ಮಂಜುಗೆಂಪು ಬಣ್ಣದ ಎಲೆಗಳು, ಸಿನೆಮಾಗಳಲ್ಲಿ ಕಾಣಸಿಗುವ ದೃಶ್ಯ ವೈಭವೀಕರಣ (visual effects) ದಂತೆ, ಸುತ್ತಲಿನ ದೃಶ್ಯಾವಳಿಗಳನ್ನು ಸಿಂಗರಿಸಿದ್ದವು. M25 ನಿಂದ M11 ಸೇರಿ, ಒಟ್ಟಾರೆ ಒಂದುವರೆ ಗಂಟೆ ಟ್ರಾಫಿಕ್ ಜಾಮ್ ಇಲ್ಲದ ನಿರಾಯಾಸ ಪ್ರಯಾಣದ ಬಳಿಕ ಸುಮಾರು ಹತ್ತು ಗಂಟೆಯ ಹೊತ್ತಿಗೆ ಕೇಂಬ್ರಿಡ್ಜ್-ನ ಕಂಬೇರ್-ಟೋನ್ ವಿಲೇಜ್ ಕಾಲೇಜ್ ತಲುಪಿದೆ. ಬಂದವರನ್ನು ಸ್ವಾಗತಿಸಿ, ಅವರ ನೋಂದಣಿಯನ್ನು ಪರಿಶೀಲಿಸುತ್ತಿದ್ದ ನಗುಮೊಗದ ವನಿತೆಯರಿಬ್ಬರು, ಉಪಹಾರವಿನ್ನೂ ಚಾಲ್ತಿಯಲ್ಲಿದೆ ಎಂದು ತಿಳಿಸಿದಾಗ, ತೆಳುವಾಗಿ ಮೂಗಿಗೆ ಬಡೆಯುತ್ತಿದ್ದ ತಿಂಡಿ ವಾಸನೆಯ ರಭಸ ಒಮ್ಮೆಲೇ ಜೋರಾಗಿ, ನನ್ನನ್ನು ಉಪಹಾರ ಕೋಣೆಯ ಕಡೆ ಸೆಳೆದೊಯ್ದಿತ್ತು. ತಡವಾಗಿ ಹೋದರೂ ನನ್ನ ಪಾಲಿನ ಬಿಸಿ ಬಿಸಿ ದೋಸೆ ಮತ್ತು ರುಚಿ ರುಚಿ ಪೊಂಗಲ್ ನನಗಾಗಿ ಕಾದಿತ್ತು. ಕಾರ್ಯಕ್ರಮ ಆಗಲೇ ಪ್ರಾರಂಭವಾಗಿರಬಹುದೇನೋ ಎಂದೆಣಿಸಿ, ಬೇಗ ಬೇಗನೆ ಉಪಹಾರ ಸೇವಿಸಿ, ಸ್ವಲ್ಪ ಕಾಫಿಗೂ ಕೂಡಾ ಪುರುಸೊತ್ತು ಮಾಡಿಕೊಂಡೆ.

ತರಾತುರಿಯಲ್ಲಿ ಕಾರ್ಯಕ್ರಮ ಜರುಗಬೇಕಾಗಿದ್ದ ಆಡಿಟೋರಿಯಂ ಕಡೆ ಧಾವಿಸಿದೆ. ಕಾರ್ಯಕ್ರಮ ಇನ್ನೂ ಪ್ರಾರಂಭವಾಗದಿರುವುದನ್ನು ಅರಿತು ಸಮಾಧಾನವಾದಾಗ, ಕಂಗಳು ವಿಶಾಲವಾದ, ಬಣ್ಣದ ಲಾಂಛನಗಳಿಂದ ಸಿಂಗಾರ ಗೊಂಡಿದ್ದ ವೇದಿಕೆಯ ಕಡೆ ಹರಿಯಿತು. ಕಡಿಮೆಯೆಂದರೂ ಅರುನೂರು ಜನರು ಕೂರಲು ಅವಕಾಶವಿದ್ದ ಆಡಿಟೋರಿಯಂ, ಮುಕ್ಕಾಲು ತುಂಬಿಹೋಗಿತ್ತು. ತಿಪ್ಪೇಸ್ವಾಮಿಯವರು ವೇದಿಕೆಗೆ ಆಗಮಿಸಿ, ಕಾರ್ಯಕ್ರಮದ ಕೇಂದ್ರಬಿಂದುಗಳಾಗಿದ್ದ ಸುಧಾ ಬರಗೂರ್ ಅವರನ್ನೂ, ಗಾಯಕ ಅಜಿತ್ ವಾರಿಯರ್ ಅವರನ್ನೂ, ಕನ್ನಡ ಬಳಗ ಯು.ಕೆಯ ಅಧ್ಯಕ್ಷರಾದ ವಿವೇಕ್ ತೋಂಟದಾರ್ಯ ಅವರನ್ನೂ ಹಾಗೂ ಉಪಾಧ್ಯಕ್ಷರಾದ ಪ್ರಜೋತಿ ಮಧುಸೂದನ್ ಅವರನ್ನೂ ವೇದಿಕೆಗೆ ಬರಮಾಡಿಕೊಂಡು, ಸಮಾರಂಭದ ಉದ್ಘಾಟನೆಗೆ ಚಾಲನೆ ನೀಡಿದರು. ಅಧ್ಯಕ್ಷರ ಭಾಷಣದ ನಂತರ, ಕನ್ನಡ ನಾಡಿನ ಹರಟೆಮಲ್ಲಿ ಸುಧಾ ಬರಗೂರ್ ಅವರು ತಮ್ಮ ಯು.ಕೆ ಪ್ರಯಾಣಕ್ಕೆ ಎದುರಾದ ತೊಡಕುಗಳನ್ನು ಅತ್ಯಂತ ಹಾಸ್ಯಮಯವಾಗಿ ನಿರೂಪಿಸುತ್ತ , ದೀಪಾವಳಿಯ ಮನೋರಂಜನೆಯನ್ನು ತಮ್ಮ ಹಾಸ್ಯ ಚಾಟಾಕಿಗೊಳಡನೆ ಪ್ರಾರಂಭಿಸಿಯೇ ಬಿಟ್ಟರು. ಅವರ ಭಾಷಣ ಕೇವಲ ಹತ್ತು ಹದಿನೈದು ನಿಮಿಷಗಳಿಗೆ ಸೀಮಿತವಾಗಿದ್ದು, ಸಂಜೆ ನಡೆಯಬೇಕಾಗಿದ್ದ ಹಾಸ್ಯವೋತ್ಸವದ ಒಂದು ಝಲಕ್ ನಂತಿತ್ತು.

 

ಸರಿಯಾಗಿ ಹನ್ನೊಂದುವರೆಗೆ, ಉಧ್ಘಾಟನಾ ಸಮಾರಂಭ ಸಂಪೂರ್ಣವಾಗಿ ಮುಗಿದು, ನಾನು ಎದುರು ನೋಡುತ್ತಿದ್ದ ಕೆ ಎಸ್ ಎಸ್ ವಿ ವಿ ಕಾರ್ಯಕ್ರಮ, ಸುಮಾರು ಮೂವತ್ತೈದು ಜನರು ಕೂರಬಲ್ಲ ಒಂದು ಕೋಣೆಯೊಳಗೆ ಆಯೋಜನೆ ಗೊಂಡಿತ್ತು. ಸುಧಾ ಬರಗೂರ್ ರವರು ಮತ್ತು ಡಾ|| ವತ್ಸಲಾ ರಾಮಮೂರ್ತಿಯವರು ಚಿಕ್ಕ ವೇದಿಕೆಯಲ್ಲಿ ಆಸೀನರಾಗಿದ್ದರು.

ವತ್ಸಲಾ ರಾಮಮೂರ್ತಿಯವರ ನೇತೃತ್ವದಲ್ಲಿ “ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಒಂದು ನೋಟ” ಎಂಬ ವಿಷಯವಾಗಿ ಸಭೆ ಚರ್ಚೆ ನಡೆಸಲು ಅಣಿಯಾಗಿತ್ತು. ಸುಧಾ ಬರಗೂರ್ ಅವರನ್ನು ಸ್ವಾಗತಿಸಿದ ವತ್ಸಲಾರವರು ಹಳೆಗನ್ನಡ, ನಡುಗನ್ನಡ ಮತ್ತು ಆಧುನಿಕ ಶತಮಾನಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಅನೇಕ ಮಹಿಳಾ ಲೇಖಕಿಯರ ಪರಿಚಯ ಮಾಡಿಕೊಡುವುದರ ಮೂಲಕ ಚರ್ಚೆಗೆ ಚಾಲನೆ ನೀಡಿದರು. ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಹೇಗೆ ಅನೇಕ ಲೇಖಕಿಯರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದರು ಹಾಗೂ ಆಯಾ ಕಾಲಘಟ್ಟಕ್ಕೆ ಹೊರಬಂದ ವಿಭಿನ್ನ ಕೃತಿಗಳು ಹಾಗು ಲೇಖಕಿಯರ ಬಗ್ಗೆ ವತ್ಸಲಾರವರು ತುಂಬಾ ಸೊಗಸಾಗಿ ಮನಮುಟ್ಟುವಂತೆ ವಿಶ್ಲೇಷಿಸಿದರು.

ನಂತರ ನಾನು ಸುಧಾ ಬರಗೂರ್ ಅವರನ್ನು ಪರಿಚಯಿಸುವ ಒಂದು ಪುಟ್ಟ ಕವನವನ್ನು ಸಭಿಕರೊಡನೆ ಹಂಚಿಕೊಂಡೆ.

ಹನ್ನೆರಡು ವರುಷದ ಹುಡುಗಿ ದೀಕ್ಷಾ ಬಿಲ್ಲಹಳ್ಳಿ, ತಾನೇ ಸೃಷ್ಟಿಸಿದ `ಸೃಷ್ಟಿ` ಎಂಬ ಕವನವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡಳು. ನಮ್ಮ ಮಕ್ಕಳು ಕನ್ನಡ ಮಾತನಾಡಿದರೆ ಸಾಕು ಎಂದೆಣಿಸುವ ಅನಿವಾಸಿ ತಂದೆ ತಾಯಂದಿರ ನಡುವೆ, ಕವನ ಬರೆಯಲು ಪ್ರೋತ್ಸಾಹಿಸಿದ ಅವಳ ತಂದೆ ತಾಯಿಯ ಬಗ್ಗೆ ಗೌರವವೆನಿಸಿತು. ನೆರೆದ ಸಹೃದಯರು ಚಪ್ಪಾಳೆಗಳೊಂದಿಗೆ ದೀಕ್ಷಾಳನ್ನು ಪ್ರೋತ್ಸಾಹಿಸಿದರು.

ಡಾ|| ಅರವಿಂದ ಕುಲಕರ್ಣಿಯವರು ಸುನಂದಾ ಬೆಳಗಾವಕರ್ ಅವರ ಬಗ್ಗೆ ಮಾತನಾಡುತ್ತಾ, ತಮ್ಮ ಕುಟುಂಬದವರಿಗೆ ಅವರೊಡನಿದ್ದ ಒಡನಾಟವನ್ನು ಬಿಚ್ಚಿಟ್ಟಾಗ, ಅಂಥವರ ಸಂಗ ದೊರೆತ ತಾವೇ ಧನ್ಯರು ಎಂದೆನಿಸುತ್ತಿತ್ತು.

ಡಾ|| ಕೇಶವ ಕುಲಕರ್ಣಿಯವರು ಪ್ರತಿಭಾ ನಂದಕುಮಾರ್ ಅವರ ಕೆಲವು ಹಾಸ್ಯಭರಿತ ಕವನಗಳನ್ನು ಪ್ರಸ್ತುತ ಪಡಿಸುವುದರ ಜೊತೆಗೆ, ಆ ಕವನಗಳ ವಿಶ್ಲೇಷಣೆಯಲ್ಲಿ ಸಿಡಿಸಿದ ಕೆಲವು ಹಾಸ್ಯ ಚಟಾಕಿಗಳು ನಮ್ಮೆಲ್ಲರ ದಂತ ಪಂಕ್ತಿಗಳು ಮತ್ತು ಮುಖದ ಮಾಂಸಖಂಡಗಳು ಸಡಿಲಗೊಳ್ಳುವಂತೆ ಮಾಡಿದ್ದವು.

ನಂತರ ನಾನು ಹಿಂದಿಯ ಪ್ರಖ್ಯಾತ ಕವಯತ್ರಿ ಸುಭದ್ರಾ ಕುಮಾರಿ ಚೌಹಾನ್ ಅವರ “ಮೇರಾ ನಯಾ ಬಚಪನ್ ” ಎಂಬ ಕವಿತೆಯ ಭಾವಾನುವಾದ “ನಮ್ಮೆಲ್ಲರ ಬಾಲ್ಯ” ಎಂಬ ಕವನವನ್ನು ಪ್ರಸ್ತುತ ಪಡಿಸಿದೆ.

ಪ್ರೇಕ್ಷಕರು (ಕೃಪೆ: ಶ್ರೀವತ್ಸ ದೇಸಾಯಿ)

ಡಾ|| ಪ್ರೇಮಲತಾ ಅವರು ಇತ್ತೀಚೆಗಷ್ಟೇ ನಮ್ಮನ್ನಗಲಿದ ಗೌರಿ ಲಂಕೇಶ್ ಅವರ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಅವರು ಬರೆದ “ದ ವೇ ಐ ಸೀ ಇಟ್” ಎಂಬ ಕೃತಿಯ ಬಗ್ಗೆ ಮಾತನಾಡುತ್ತಾ, ಅವರ ಕೊನೆಯ ದಿನಗಳಲ್ಲಿನ ಆರ್ಥಿಕ ಪರಿಸ್ಥಿತಿ, ಗೌರಿ ಅವರ ವೈಚಾರಿಕ ಶುದ್ಧತೆಯನ್ನು ತೋರುತ್ತದೆ ಎಂದು ವಿಶ್ಲೇಷಿಸಿದರು.

ಡಾ|| ರಾಮಶರಣ ಲಕ್ಷ್ಮೀನಾರಾಯಣ ಅವರು ಅನುಪಮಾ ನಿರಂಜನ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ವೆಂಕಟಲಕ್ಷ್ಮಿಯವರ ಬಗ್ಗೆ ಮಾತನಾಡಿದರು. ಆಗಿನ ದಿನಗಳಲ್ಲಿ ಅವರಿಗಿದ್ದ ಧೈರ್ಯ ಮತ್ತು ಸಮಾಜದ ಕಟ್ಟುಪಾಡುಗಳನ್ನು ಕಿತ್ತೊಗೆದು, ತಮ್ಮದೇ ರೀತಿಯಲ್ಲಿ ಬದುಕುವ ಆತ್ಮಸ್ಥೈರ್ಯದ ಬಗ್ಗೆ ವಿಶ್ಲೇಷಿಸಿದರು.

ವಿಜಯನಾರಸಿಂಹ ಅವರು ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ಸುಧಾಮೂರ್ತಿಯವರ ಸಾಹಿತ್ಯ ಆಸಕ್ತಿ ಮತ್ತು ಅವರು ಹೊರತಂದಿರುವ ಅನೇಕ ಕೃತಿಗಳ ಬಗ್ಗೆ ಮಾತನಾಡಿದರು.

ಅನಿವಾಸಿ ತಂಡದ ವಿನುತೆ ಶರ್ಮ (ಈಗ ಅವರು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ) ಅವರ ಪರವಾಗಿ ರಾಮಶರಣ್ ಅವರು ಬ್ಯಾಟಿಂಗ್ ಮಾಡುತ್ತಾ, ನೇಮಿಚಂದ್ರರ ಬದುಕು ಮತ್ತು ಸಾಹಿತ್ಯದ ಬಗ್ಗೆ ಮಾತನಾಡಿದರು.

ಡಾ|| ವತ್ಸಲಾ ರಾಮಮೂರ್ತಿಯವರು ಭುವನೇಶ್ವರಿ ಹಗ್ಗಡೆಯವರ ಹಾಸ್ಯ ಬರಹಗಳು, ವಿಚಾರ ಧಾರೆಗಳು ಮತ್ತು ಹೊರತಂದ ಕೃತಿಗಳ ಬಗ್ಗೆ ಮಾತನಾಡಿದರು.

ಇಷ್ಟೆಲ್ಲಾ ನಡೆಯುತ್ತಿರುವಾಗ, ನನಗೆ ನಾನೆಲ್ಲೋ ಬೆಂಗಳೂರಿನ ಕನ್ನಡ ಭವನದಲ್ಲಿರುವೆನೇನೋ ಎಂಬಂತೆ ಭಾಸವಾಗುತ್ತಿತ್ತು. ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಟಿಕೆಟ್ ಇಲ್ಲದೇ ಬೆಂಗಳೂರಿಗೆ ಹೋಗಿ ಬಂದಂತಾಗುತಿತ್ತು.

ಸುಧಾ ಬರಗೂರ್ ಮಾತುಗಳ ತುಣುಕು (ಕೃಪೆ: ಶ್ರೀವತ್ಸ ದೇಸಾಯಿ)

ನಮ್ಮ ಪ್ರಮುಖ ಅತಿಥಿ ಸುಧಾ ಬರಗೂರ್ ಅವರು ಇದನ್ನೆಲ್ಲಾ ಆಲಿಸುತ್ತಾ, ಟಿಪ್ಪಣಿ ಮಾಡಿಕೊಳ್ಳುತ್ತ ಸಾವಧಾನವಾಗಿ ಕಾಯುತ್ತಾ ಕುಳಿತಿದ್ದರು. ಮಾತೇ ತಮ್ಮ ಬಂಡವಾಳ ಎಂದು ಹೇಳಿಕೊಳ್ಳುವ ಅವರ ಮೌನ, ಕೆ.ಎಸ್.ಎಸ್.ವಿ.ವಿ-ಯ ಈ ವಿಚಾರಗೋಷ್ಠಿಯ ವಿಚಾರಗಳ ಗಾಢತೆಗೆ ಕನ್ನಡಿ ಹಿಡಿದಂತಿತ್ತು. ಕೊನೆಗೂ ಮೈಕ್ ಹಿಡಿದ ಸುಧಾ ಬರಗೂರರು ತಮ್ಮ ಸಾಹಿತ್ಯ ಆಸಕ್ತಿ ಮತ್ತು ಕನ್ನಡ ಪುಸ್ತಕಗಳಿಂದ ಸಮೃದ್ಧವಾಗಿದ್ದ ತಮ್ಮ ಜೀವನದ ಬಗ್ಗೆ ಮಾತನಾಡಿದರು. ಇಂಗ್ಲೆಂಡಿನಲ್ಲಿ ನೆಲೆಯೂರಿ ಗರಿಗೆದರುತ್ತಿರುವ ಸಾಹಿತ್ಯಾಸಕ್ತಿಗೆ ಬೆರಗು ವ್ಯಕ್ತ ಪಡಿಸಿದರು. ಕೆ.ಎಸ್.ಎಸ್.ವಿ.ವಿ-ಯನ್ನು ಹುಟ್ಟು ಹಾಕಿ, ಪಾಲಿಸಿ ಪೋಷಿಸುತ್ತಿರುವ ಎಲ್ಲ ಹಿರಿಯರಿಗೂ ತಮ್ಮ ಧನ್ಯವಾದ ತಿಳಿಸಿದರು. ಹೀಗೆ ಸಾಹಿತ್ಯದ ಜಾತ್ರೆಗೆ ತೆರೆಬಿದ್ದು, ಮತ್ತೊಮ್ಮೆ ಹಬ್ಬದ ಊಟ ಮಾಡಲು ನಾವೆಲ್ಲರೂ ಭೋಜನ ಶಾಲೆಗೆ ತೆರಳಿದೆವು.

11 thoughts on “ಸುಧಾ ಬರಗೂರ್ ಸಮ್ಮುಖದಲ್ಲಿ ಕನ್ನಡದ ಮಹಿಳಾ ಲೇಖಕಿಯರ ಬಗ್ಗೆ ಚರ್ಚೆ – ಶ್ರೀನಿವಾಸ ಮಹೇಂದ್ರಕರ್ ಬರೆದ ವರದಿ

  1. ಶ್ರೀನಿವಾಸರೇ, ಕಸಾಸಾಂವಿವೇದಿಕೆ ವತಿಯಿಂದ ಆಯೋಜಿಸಲ್ಪಟ್ಟು ನಡೆಸಿದ ಸಾಹಿತ್ಯ ಕಲಾಪದ ವಿವರಗಳನ್ನ ಬಹಳ ಚೆನ್ನಾಗಿ ವಿವರಿಸಿದ್ದೀರ. ಆಸ್ಟ್ರೇಲಿಯಾದಲ್ಲಿ ಕೂತು ಓದಿದಾಗ ಕಣ್ಣಿಗೆ ಕಟ್ಟಿದ್ದು ನೀವು ಅನಿವಾಸಿ ಗುಂಪಿಗೆ ಸೇರಿದ ಪರಿ, ನಿಮ್ಮ ಸಾಹಿತ್ಯಾಸಕ್ತಿ, ನೀವು ವರ್ಣಿಸಿರುವ ಇಂಗ್ಲೆಂಡಿನ ಚಳಿ, ಮಳೆ, ಹೆದ್ದಾರಿ, ಮುಖ್ಯ ಕಾರ್ಯಕ್ರಮದ ಆರಂಭ ಮತ್ತು ಅನಿವಾಸಿ ತಂಡದ ಕಲಾಪ. ಅದನ್ನು ‘ವರದಿ’ ಅಂತ ಮಾಡದೆ ತರಕಾರಿ, ಮಸಾಲೆ, ಒಗ್ಗರಣೆಗಳನ್ನ ಕೂಡ ಒದಗಿಸಿ ಘಮ ಘಮ, ಸವಿರುಚಿ ಎನ್ನುವಂತೆ ಬರೆದಿದ್ದೀರ.
    ಧನ್ಯವಾದಗಳು.
    ವಿನತೆ ಶರ್ಮ

    Like

  2. ಶ್ರೀನಿವಾಸ ಅವರ ಸಾಹಿತ್ಯ ಕಲಾಪದ ವರದಿ ಚೆನ್ನಾಗಿದೆ. ವಿವರಗಳು ಅತಿ ಹೆಚ್ಚು ಅಥವಾ ಕಡಿಮೆ ಎನಿಸದೆ ಆಪ್ತವಾಗುತ್ತವೆ. ವರುಷದಿಂದ ವರುಷಕ್ಕೆ ಬೆಳೆಯುತ್ತಿರುವ ಸಾಹಿತ್ಯ ವೇದಿಕೆಯ ಕಾರ್ಯವೈಖರಿ ಮತ್ತು ಜನಪ್ರಿಯತೆಯನ್ನು ಕಂಡು ಮತ್ತಷ್ಟು ಸಂತೋಷವಾಯಿತು. ಇದು ಹೀಗೆ ಬೆಳೆಯಲಿ ಎಂದು ಆಶಿಸುತ್ತೇನೆ.
    ಮಹಿಳಾ ಲೇಖಕರ ಬಗ್ಗೆ ಕಲಾಪ ನಡೆಸಿದ್ದು ಒಂದು ಉತ್ತಮ ಪ್ರಯೋಗ. ಲೇಖಕಿಯರ ಗುಂಪಿನಲ್ಲಿ ಗೌರಿ ಲಂಕೇಶಾಲಂಥವಳು ನುಸುಳಿದ್ದು ನನಗೆ ಅಚ್ಚರಿ ಹುಟ್ಟಿಸಿತು!! ಅತ್ತ ಕನ್ನಡವನ್ನೂ ಇತ್ತ ಇಂಗ್ಲಿಷನ್ನೂ ಸರಿಯಾದ ರೀತಿಯಲ್ಲಿ ಕೃಷಿ ಮಾಡದೆ, ಕೇವಲ ಚಡ್ಡಿ,ಲಂಗೋಟಿ, ಕಾಚಾ ಎಂಬ ಹಂತದಿಂದ ಮೇಲೆರದ ಪತ್ರಿಕೆಯನ್ನು, ಇನಿತರ ಬೂಸಾ ಬರವಣಿಗೆಗಳ ಸರಮಾಲೆಯನ್ನೂ ಬರೆದ ಗೌರಿಯನ್ನು ಬಲವಂತವಾಗಿ ಸಾಹಿತಿಯ ಮಟ್ಟಕ್ಕೆ ಏರಿಸುವ ಪ್ರಯತ್ನ ಓಂದು ಸಾಹಿತ್ಯ ವೇದಿಕೆಯ ವಿಡಂಬನೆಯಾಗಿ ನನಗೆ ಕಾಣುತ್ತದೆ.
    ಸಾಹಿತ್ಯ ಹೋಗಲಿ,ಸುಧಾ ಮೂರ್ತಿ, ಅನುಪಮಾ ನಿರಂಜನರಂಥ ಮಾದರಿ ವ್ಯಕ್ತಿತ್ವವೋ ಎಂದರೆ ಅದೂ ಇಲ್ಲ!! ಲಂಕೇಶನನ್ನು ಮುಂಬಯಿ ಪೊಲೀಸರು ಒದ್ದು ಎಳೆದುಕೊಂಡು ಹೋದಾಗ ಆತನನ್ನು ಬಿಡಿಸಿದ ಅನಂತಕುಮಾರ ಅವರನ್ನು ಇಲ್ಲಸಲ್ಲದ ಆರೋಪ ಮಾಡಿದ, ಡಿ.ಕೆ ರವಿಯ ಸಾವಿನ ಹಿಂದೆ ಆತನ ಚಾರಿತ್ರವಧೆಗೆ ನಿಂತು ನೈತಿಕವಾಗಿ ಭ್ರಷ್ಟಳಾದ, ಜಿಗಣೆಶ ಮೇವಾಣಿ, ಕನ್ಹಯ್ಯ ಕುಮಾರ,ಉಮ್ಮರ್ ಖಾಲೀದನಂಥ ಅಯೋಗ್ಯರನ್ನು ತನ್ನ ಮಕ್ಕಳೆಂದು ಘೋಷಿಸಿಕೊಂಡು ಬೌದ್ಧಿಕವಾಗಿ ದಿವಾಳಿಯಾದ, ನಕ್ಸಲರನ್ನು ಬೆಂಬಲಿಸಿ ತಾನು ಬೆಳೆದ ಸಮಾಜಕ್ಕೂ, ದೇಶದ ಮಣ್ಣಿಗೂ ದ್ರೋಹ ಎಸಗಿದ ವ್ಯಕ್ತಿ. ಶಿವ, ಗಂಗೆ, ಗೌರಿ, ಕೃಷ್ಣ ,ವಿಷ್ಣು ಇತ್ಯಾದಿ ದೇವತೆಗಳ ಮೇಲಿನ ನಂಬಿಕೆಯನ್ನು ಇಟ್ಟುಕೊಂಡು ಗೋಳಾಡದೆ, ಅದನ್ನು ಅಪ್ರತಿಮ ಕಲೆಯಾಗಿಸಿ ಬೃಹದೇಶ್ವರ, ಮಹಾಬಲಿಪುರಂ, ಹಂಪಿ, ಎಲ್ಲೋರಾ, ಅಜಂತಾ, ಬೇಳೂರು ಹಳೇಬೀಡು, ಐಹೊಳೆ , ಪಟ್ಟದಕಲ್ಲು ಇತ್ಯಾದಿಗಳಲ್ಲದೆ ದೂರದ ಥಾಯ್ಲ್ಯಾನ್ಡ್ ಕಾಂಬೋಡಿಯಾಗಳಲ್ಲಿಯೂ ವಾಸ್ತುಶಿಲ್ಪಗಳನ್ನು ಕೊಟ್ಟ ಸನಾತನಧರ್ಮವನ್ನು ಇನ್ನಲ್ಲದಂತೆ ದ್ವೇಷಿಸಿದ, ಎಲ್ಲಿಯೂ ಸಲ್ಲದ,ತನ್ನ ತಂದೆಯ ಹೆಸರಿನ ಮೇಲೂ ಪತ್ರಿಕೆಯನ್ನು ನಡೆಸಲಾಗದ, ಭೌತಿಕವಾಗಿ,ದೈಹಿಕವಾಗಿ,ಬದುಕನ್ನು ಹೇಗೆ ಬದುಕಬಾರದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲಬಲ್ಲ ಇಂತಹವಳ ಅಯೋಗ್ಯತೆಯನ್ನೇ ಯೋಗ್ಯತೆ ಎಂದು ಬಿಂಬಿಸುವದಾದರೆ ಅದಕ್ಕಿಂತ ದೊಡ್ಡ ವಿರೋಧಾಭಾಸ ಇರಲಾರದು!!
    ಅದರ ಹೊರತಾಗಿ, ಉಳಿದೆಲ್ಲವೂ ಸ್ತುತ್ಯಾರ್ಹ.
    ಇದನ್ನು ಪ್ರಕಟಿಸುವಲ್ಲಿ ಅಸಹಿಷ್ಣುತೆ ಇಣುಕದು ಎಂದುಕೊಂಡಿದ್ದೇನೆ

    Like

  3. ಚೆನ್ನಾಗಿ ಬರೆದಿದ್ದೀರ. ನಮ್ಮ ಸಾಹಿತ್ಯ ಕಮ್ಮಟಗಳು ಪ್ರತಿ ಬಾರಿಯೂ ಅತ್ಯಂತ ಹಾರ್ದಿಕವಾಗಿ ನಡೆಯುತ್ತವೆ. ಈಗ ನಾಲ್ಕು ವರ್ಷಗಳಿಂದ ವರ್ಷಕ್ಕೆರಡು ಬಾರಿಯಂತೆ ನಡೆಸುತ್ತ ಬಂದಿದ್ದೀವಿ. ಮತ್ತೂ ಸೃಜನಾತ್ಮಕವಾಗಿ ನಡೆಸಲು ನಾವೆಲ್ಲರೂ ಯೋಜನೆಗಳನ್ನು ಹಾಕಬೇಕು. ಹೊಸ ಐಡಿಯಾಗಳನ್ನು ಎಲ್ಲರೂ ನೀಡಿದರೆ ಮತ್ತೂ ಚೆನ್ನಾಗಿ ನಡೆಸಬಹುದು.
    ನಿಮ್ಮ ವರದಿ ಓದಿದ ಮೇಲೆ ಸ್ವಲ್ಪ ತಡವಾಗಿ ಬಂದ ನನಗೆ ಇನ್ನೇನು ನಡೆಯಿತು ಎಂದಿ ತಿಳಿಯಿತು. ಮುಂದಿನ ವಾರಗಳಲ್ಲಿ ಇತರರ ಭಾಷಣ ಬರಹವನ್ನು ಓದಲು ಕಾತುರಳಾಗಿದ್ದೇನೆ.

    Like

  4. ಬಹಳ ಚೆನ್ನಾಗಿ ಬರೆದಿದ್ದೀರಿ ಶ್ರೀನಿವಾಸ್
    ನಿಮ್ಮ ಪರಿಚಯವಾದದ್ದು ಬಹಳ ಸಂತೋಷ ತಂದಿದೆ.

    Like

  5. Dear Shreenivasa,
    You have written an excellent report about KSSVV function.I learnt a great deal about you after meeting you for the first time at KB Deepavali function. Your dedication, enthusiasm , passion about Kannada Literature will enhance our KSSVV’s progress in future.
    Aravind Kulkarni
    07968125839

    Liked by 1 person

  6. ಕನ್ನಡಬಳಗದ ಕಸಾಸಾಂವಿವೇದಿಕೆಯ ತಮ್ಮ ಚೊಚ್ಚಲ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನೂ ನಡಾವಳಿಗಳ ವರ್ಣನೆಯನ್ನೂ ತಮ್ಮದೇ ಆದ ಆಪ್ತ ಶೈಲಿಯಲ್ಲಿ ಬರೆದಿದ್ದಾರೆ ಶ್ರೀನಿವಾಸ ಅವರು. ಅವರ ಆಸಕ್ತಿ ಮತ್ತು ಉತ್ಸಾಹಕ್ಕೆ ಸುಧಾ ಅವರ ಮಾತಿನಲ್ಲಿ ‘ಚಪ್ಪಾಳೆ ತಟ್ಟಬಹುದು!’. ಚೆನ್ನಾಗಿದೆ ಮಹೇಂದ್ರಸಕರ ಅವರೇ.

    Like

  7. Welcome to Kannada Balaga.Srinivasa Mahendrakar.

    It is a very well written report..Look forward to see you again with your family

    Like

Leave a reply to vijayanarasimhabs Cancel reply

This site uses Akismet to reduce spam. Learn how your comment data is processed.