ಐತಿಹಾಸಿಕ ಬಸವನಗುಡಿ ಮತ್ತು ಗಾಂಧಿ ಬಜಾರ್: ರಾಮಮೂರ್ತಿ

Ramamurthy
ಲೇಖಕರು: ರಾಮಮೂರ್ತಿ
(ನೀವು ಬೆಂಗಳೂರಿನವರಾಗಿದ್ದರೆ ನಿಮಗೆ ಬಸವನಗುಡಿ ಮತ್ತು ಗಾಂಧಿಬಜಾರಿನ ಬಗ್ಗೆ ಎಷ್ಟು ಗೊತ್ತು ಎಂದು ಈ ಲೇಖನ ಓದಿದ ಮೇಲೆ ಕೇಳಿಕೊಳ್ಳಿ. ನೀವು ಬೆಂಗಳೂರಿನವರಾಗಿದ್ದರೂ ಆಗಿರದಿದ್ದರೂ ಬಸವನಗುಡಿ ಮತ್ತು ಗಾಂಧಿಬಜಾರಿನ ಬಗ್ಗೆ ಕೇಳದಿರುವ ಸಾಧ್ಯತೆ ತುಂಬ ಕಡಿಮೆ. ಈ ಲೇಖನ ಓದಿದ ಮೇಲೆ ನೀವು ಮತ್ತೊಮ್ಮೆ ಈ ಜಾಗಗಳಿಗೆ ಭೇಟಿಕೊಡಿ, ನೀವು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ನಮ್ಮ ಅನಿವಾಸಿ ಬಳಗದ ಹಿರಿಯ ಬರಹಗಾರ ರಾಮಮೂರ್ತಿ ತಮ್ಮ ನೆನಪಿನ ಕಣಜದಿಂದ ಒಂದು ಹಿಡಿ ಅನುಭವವನ್ನು ನಮ್ಮ ಮುಂದೆ ಹಾಸಿದ್ದಾರೆ. ಓದಿ, ಪ್ರತಿಕ್ರಿಯೆ ಬರೆಯಿರಿ, ಶೇರ್ ಮಾಡಿ – ಸಂ)

ನೀವು ಬೆಂಗಳೂರಿನಲ್ಲಿ ಬೆಳದೋ ಅಥವಾ ಹಿಂದೆ ವಾಸವಾಗಿದ್ದರೆ ಬಸವನಗುಡಿ ಗೊತ್ತಿರಬೇಕು, ಇಲ್ಲದೆ ಇದ್ದರೆ ನೀವು ಬೆಂಗಳೂರಿನವರಲ್ಲವೇ ಅಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲೆ.

ಹಿಂದಿನ ಕಾಲದಲ್ಲಿ ಇದು ಸುಕ್ಕೇನಹಳ್ಳಿ ಅಂತ ಒಂದು ಹಳ್ಳಿಯಾಗಿತ್ತು. ಒಂದು ದಂತಕಥೆಯ ಪ್ರಕಾರ ಇದು ಕಡಲೆಕಾಯಿ ಬೆಳೆಯುವ ಜಾಗವಾಗಿತ್ತಂತೆ. ಒಂದು ಗೂಳಿ ಬಂದು ರೈತರ ಬೆಳೆಯನ್ನು ಹಾಳುಮಾಡುತ್ತಿತ್ತಂತೆ. ಒಬ್ಬ ರೈತ ಕೋಪದಲ್ಲಿ ಕೋಲಿನಿಂದ ಹೊದೆದಾಗ, ಈ ಗೂಳಿ ಜ್ಞಾನ ತಪ್ಪಿ ಅಲ್ಲೇ ಬಿದ್ದಿದ್ದನ್ನು ನೋಡಿ ರೈತನಿಗೆ ತುಂಬಾ ನೋವಾಗಿ, ಹಳ್ಳಿಯಲ್ಲಿ ಅದರ ನೆನಪಿಗೆ ಒಂದು ಗುಡಿ ಕಟ್ಟಿದನಂತೆ. ಸುಕ್ಕೇನಹಳ್ಳಿ ಈಗ ಬಸವನಗುಡಿ; ಅಲ್ಲಿ ಪ್ರತಿವರ್ಷ ಕಡಲೆಕಾಯಿ ಪರಿಷ ಆಗುವುದು ಈ ಕಾರಣದಿಂದ.

೧೮೯೬ರಲ್ಲಿ ಬೆಂಗಳೂರಿನ ಕೆಲವು ಜಾಗದಲ್ಲಿ ಭಯಂಕರ ಪ್ಲೇಗ್ ಬಂದು ೩೦೦೦ ಜನರ ಮರಣ, ಅಂದಿನ ಡೆಪ್ಯುಟಿ ಕಮ್ಮಿಷನರ್ ಆಗಿದ್ದ ಮಾಧವ ರಾವ್ ಅವರು ಪ್ಲೇಗ್ ಬಂದ ಚಾಮರಾಜ್ ಪೇಟೆ ಮತ್ತು ಫೋರ್ಟ್ ಪ್ರದೇಶದಲ್ಲಿ ಉಳಿದವರನ್ನು “ಸ್ವಲ್ಪ ದೂರದ” ಬಸವನಗುಡಿ ಮತ್ತು ಮಲ್ಲೇಶ್ವರ ಕಡೆ ವಾಸಮಾಡಲು ಏರ್ಪಾಡು ಮಾಡಿದರು. ಆಗಿನ ಸರ್ಕಾರಕ್ಕೆ ಇವರ ಸಲಹೆಗೆ ಬೆಂಬಲ ಕೊಟ್ಟು ಈ ಹೊಸ ಜಾಗಗಳ ಬೆಳವಣಿಗೆ ಆಯಿತು. Town Planning ಇಲ್ಲೇ ಶುರು ವಾಗಿದ್ದು, ಮರಗಳ ವಿಶಾಲ ರಸ್ತೆಗಳು ಮತ್ತು ಅಂಗಡಿ ಬೀದಿಗಳು ಮತ್ತು ಜನರಿಗೆ ತಕ್ಕಂತೆ ಬೇಕಾದ ಮನೆಗಳು ಮತ್ತು ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಮಾಡಿದವರು ಮಾಧವರಾಯರು. ಹತ್ತಿರದಲ್ಲೇ ಲಾಲ್-ಬಾಗ್ ಸಹ ಶ್ರೀ ಕ್ರುಮ್ಬೆಗೋಲ್ ಅವರ ನೇತೃತ್ವದಲ್ಲಿ ಚೆನ್ನಾಗಿ ಅಭಿವೃದ್ಧಿ ಆಗುತಿತ್ತು. ಇಲ್ಲಿ ತಲತಲಾಂತರಿಂದ ಇರುವ ಕುಟುಂಬಗಳು ಅನೇಕರು, ಎಲ್ಲಾ ಮಧ್ಯಮವರ್ಗದವರು. ಆದರೆ ಈಚೆಗೆ ಹಳೇ ಮನೆಗಳು ಹೋಗಿ ಮೂರು ನಾಲ್ಕು ಅಂತಸ್ತಿನ ಮನೆಗಳು ಬಂದಿವೆ. ಗೋವಿಂದಪ್ಪ, ಸರ್ವೇಯರ್, ಹೆಚ್ ಬಿ ಸಮಾಜ ರಸ್ತೆ ಗಳು ನಾಗಸಂದ್ರ ರಸ್ತೆಯಿಂದ ಶುರುವಾಗಿ ಲಾಲ್-ಬಾಗಿನವರೆಗೆ ಬಹಳ ಉತ್ತಮ ದರ್ಜೆಯ ವಸತಿ ಪ್ರದೇಶಗಳು.

Vidyarthi Bhavan 1943
ವಿದ್ಯಾರ್ಥಿಭವನ: ೧೯೪೩ಯಲ್ಲಿ

ಗಾಂಧಿಬಜಾರ್ ಬಸವನಗುಡಿಯ ಪ್ರಮುಖ ಬೀದಿ, ಇದು ರಾಮಕೃಷ್ಣ ಆಶ್ರಮದಿಂದ ಶುರುವಾಗಿ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆ. ಇಲ್ಲಿ ಅನೇಕ ಅಂಗಡಿಗಳು ಮತ್ತು ಜಾಗಗಳು ಬಹಳ ವರ್ಷದಿಂದ ಇವೆ. ಜಾಸ್ತಿ ಬದಲಾವಣಿಗೆ ಕಂಡಿಲ್ಲ. ಗರಿ ಗರಿ ಮಸಾಲೆ ದೋಸೆ ಬೇಕಾದರೆ ವಿದ್ಯಾರ್ಥಿಭವನಕ್ಕೆ ಹೋಗಿ. ಈ ಹೋಟೆಲ್ ಅಂದರೆ ಕೆಫೆ ಪ್ರಾರಂಭವಾದದ್ದು ೧೯೪೩ರಲ್ಲಿ. ಹತ್ತಿರ ಇರುವ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆರಂಭದೊಂಡಿತ್ತು. ಅಕ್ಟೋಬರ್ ೨೦೧೮ ರಲ್ಲಿ ೭೫ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಇದೆ. ಇದರ ವೈಶಿಷ್ಟವೇ ಬಹಳ. ಜಾಗ ಚಿಕ್ಕದು, ಒಳಗೆ ಸರಳವಾದ ವಾತಾವರಣ, ಗೋಡೆಗಳ ಮೇಲೆ

ಕರ್ನಾಟಕದ ಪ್ರಸಿದ್ಧ ಕವಿಗಳು ಮತ್ತು ಲೇಖಕರ ಭಾವ ಚಿತ್ರಗಳು (ಅನ್ಯಾಯ: ಇಬ್ಬರು ಮೂವರು ರಾಜಕಾರಣಿಗಳದ್ದು ಸಹ ಇವೆ!). ಇಲ್ಲಿ ಮಾಡುವುದು ಕೆಲವೇ ತಿಂಡಿಗಳು, ಊಟ ಇಲ್ಲ, ದೋಸೆ ಮತ್ತು ರವೇ ಇಡ್ಲಿ ಪ್ರಮುಖವಾದ ತಿಂಡಿಗಳು. ಪಂಚೆ ಉಟ್ಟ ಮಾಣಿಗಳು ಒಟ್ಟಿಗೆ ೨೦ ದೋಸೆ ತಟ್ಟೆಗಳನ್ನು ತರುತ್ತಾರೆ, ಚಟ್ನಿ ಒಂದು ಪಾತ್ರೆಯಲ್ಲಿ ತಂದು ಬಡಿಸುತ್ತಾರೆ. ಕೈ ಒರಿಸಿಕೊಳ್ಳಲು ಹಿಂದೆ ಕನ್ನಡ ದಿನಪತ್ರಿಕೆಗಳನ್ನ ಹರಿದು ಕೊಡುತ್ತಿದ್ದರು, ಆದರೆ ಈಗ ಪರವಾಗಿಲ್ಲ ಸರಿಯಾದ ಟಿಶ್ಯೂಗಳು ಇವೆ. ರುಚಿಯಾದ ಕಾಫಿ ಎರಡು ಬಟ್ಟಲಿನಲ್ಲಿ. ಹೊರಗೆ ಜನಗಳು ಮುತ್ತಿಗೆ ಹಾಕಿರುತ್ತಾರೆ. ಆದ್ದರಿಂದ ನಿಮಗೆ ಅಲ್ಲಿ ವಿರಾಮವಾಗಿ ಕೂರುವುದಕ್ಕೆ ಅವಕಾಶವಿಲ್ಲ. ಆದರೆ ಇಲ್ಲಿ ತಿನ್ನದೇ ಹೋದರೆ ಬೆಂಗಳೂರಿಗೆ ಬಂದಹಾಗಿಲ್ಲ.

ಬಸವನಗುಡಿ ಕೋ-ಆಪರೇಟಿವ್ ಬಹಳ ಹಳೆಯ ಸಂಸ್ಥೆ, ಸರ್ ಎಂವಿ ದಿವಾನರಾಗಿದ್ದಾಗ ಶುರು ಮಾಡಿದ್ದು, ಈಗ ಈ ಕಟ್ಟಡ ಇಲ್ಲ, ಆದರೆ ಸಂಸ್ಥೆ ಇದೆ. ಇದರ ಮುಂದೆ ಅನೇಕ ಹೂವಿನ ಮತ್ತು ಹಣ್ಣುಗಳ ಪೂಜೆ ಸಾಮಾನುಗಳ ಅಂಗಡಿಗಳು ಫುಟ್-ಪಾತಿನ ಮೇಲೆ. ಹಬ್ಬದ ದಿನಗಳ ಹಿಂದೆ ಇಲ್ಲಿ ಕಾಲು ಇಡೋಕ್ಕೂ ಜಾಗ ಇರುವುದಿಲ್ಲ, ಅಷ್ಟು ಜನ! ಈಚೆಗೆ ಇಲ್ಲಿ ಜನರು ಮನೆಯಲ್ಲಿ ಹಬ್ಬದ ದಿನ ಹೋಳಿಗೆ, ಲಾಡು ಇತ್ಯಾದಿ ಮನೆಯಲ್ಲಿ ಮಾಡುವುದಿಲ್ಲವಂತೆ, ಗಾಂಧಿಬಜಾರಿನಲ್ಲಿ ಎಲ್ಲ ಸಿಗುತ್ತೆ. ಸಂಕ್ರಾಂತಿ ಸಮಯದಲ್ಲಿ ನಿಮಗೆ ಎಳ್ಳು, ಸಕ್ಕರೆ ಅಚ್ಚು, ಕಬ್ಬು ಮುಂತಾದವು ಸಿಗುತ್ತವೆ. ಗಾಂಧಿ ಬಜಾರ್ one stop for all your needs.

ಈ ರಸ್ತೆ ಕೊನೆಯಲ್ಲಿ ಬಸವನಗುಡಿ ಕ್ಲಬ್. ಎರಡು ಕಡೆ ಸಾಲುಮರಗಳು. ಮಾಸ್ತಿ ಅವರು ಈ ಕ್ಲಬ್ಬಿಗೆ ಸಾಯಂಕಾಲ ಹೋಗುವಾಗ ಛತ್ರಿ ಹಿಡಿದು ಹೋಗುತ್ತಿದ್ದರಂತೆ, ಯಾಕೆ ಅಂತ ಗೊತ್ತಲ್ಲ? ಕಾಗೆಗಳ ಕಾಟ! ಈಗ ಕಾಗೆಗಳು ಪತ್ತೆ ಇಲ್ಲ, ಯಾವ ಹಕ್ಕಿಗಳೂ ಇಲ್ಲ.

Gandhibazaar flowers
ಹೂವಿನಂಗಡಿಗಳು

ದೊಡ್ಡ ಗಣೇಶನ ದೇವಸ್ಥಾನ ಹತ್ತಿರದಲ್ಲೇ ನಂದಿ ಗುಡಿ. ಇದು ೧೫೩೭ ಕೆಂಪೇಗೌಡರು ಕಟ್ಟಿಸ್ಸಿದ್ದು, ಇದರ ವಾಸ್ತುಶಿಲ್ಪಿ ವಿಜಯನಗರದ ಶೈಲಿ. ನಂದಿಯ ವಿಗ್ರಹ ೧೫ ಅಡಿ ಎತ್ತರ ಮತ್ತು ೨೦ ಅಡಿ ಅಗಲ. ಈ ಎರಡು ದೇವಸ್ಥಾನಗಳು ಬ್ಯುಗಲ್-ರಾಕ್ ಅನ್ನುವ ಬಂಡೆಗಳ ಮತ್ತು ಮರಗಳ ಮಧ್ಯ ಇದೆ. ಹಿಂದಿನ ಕಾಲದಲ್ಲಿ ಜನಗಳಿಗೆ ಎಚ್ಚರಿಕೆಯ ಸುದ್ದಿ ಕೊಡುವ ಮುಂಚೆ ಗುಡ್ದದ ಮೇಲಿಂದ ಕಹಳೆ ಊದತ್ತಿದ್ದರು, ಇದು ಈಗ ಬ್ಯುಗಲ್ ರಾಕ್.

ಬುಲ್ ಟೆಂಪಲ್ ರಸ್ತೆಯಲ್ಲಿ ಸ್ವಲ್ಪ ಮೇಲೆ ಹೋದರೆ ಡಿವಿಜಿ ಅವರು ಶುರುಮಾಡಿದ್ದ ಗೋಖಲೆ ಸಂಸ್ಥಾನ ಇದೆ. ೧೯೧೫ರಲ್ಲಿ ಮಹಾತ್ಮಾ ಗಾಂಧಿಯವರು ಇಲ್ಲಿಗೆ ಭೇಟಿ ಕೊಟ್ಟಿದ್ದರು, ಆಗ ಡಿವಿಜಿ ಇವರನ್ನು ಭೇಟಿ ಮಾಡಿದ್ದರು.

ಡಿವಿಜಿ ಅವರ ಮನೆ ಗಾಂಧಿಬಜಾರಿಗೆ ಹತ್ತಿರವಿತ್ತು, ಈಗ ಈ ರಸ್ತೆ ಡಿವಿಜಿ ರಸ್ತೆ. ಆದರೆ ಇವರ ಮನೆ ಈಗ ಇಲ್ಲ ಇದನ್ನು ಕೆಡವಿ ಅಂಗಡಿಗಳು ಬಂದಿವೆ. ನೋಡಿ , ಇಂಗ್ಲೆಂಡ್ ನಲ್ಲಿ ಇಂಥಹ ಹೆಸರಾಂತ ವ್ಯಕ್ತಿ ಗಳ ಮನೆಗಳನ್ನು ಸಂರಕ್ಷಿತ್ತಾರೆ. ಹೀಗೆ ಕೈಲಾಸಂ ಬೆಳೆದಿದ್ದ ಮನೆ White House ಕೂಡ ಈಗ ಇಲ್ಲ. ಸದ್ಯ ಮಾಸ್ತಿಯವರ ಮನೆ ಇಲ್ಲೇ ಹತ್ತಿರದಲ್ಲಿ ಈಗ ಒಂದು ಮ್ಯೂಸಿಯಂ, ಅವರ ಮೊಮ್ಮಗಳು ಇದಕ್ಕೆ ಕಾರಣ. .

Subbammana angadi
ಸುಬ್ಬಮ್ಮನ ಅಂಗಡಿ

ಈ ರಸ್ತೆಯಲ್ಲಿ ಕೆಲವು ಅಂಗಡಿಗಳು ಬಹಳ ವರ್ಷದಿಂದ ಇದೆ. ಮಲ್ನಾಡ್ ಸ್ಟೋರ್ಸ್-ನಲ್ಲಿ ಒಳ್ಳೆ ಅಡಿಕೆ ಮತ್ತು ಇತರ ಮಲೆನಾಡಿನ ಪಧಾರ್ಥಗಳು, ಶ್ರೀನಿವಾಸ ಬ್ರಾಹ್ಮಣರ ಬೇಕರಿಯಲ್ಲಿ ಅನೇಕ ತಿಂಡಿಗಳು, ಕುರುಕುಲು ಮತ್ತು ಬ್ರೆಡ್ ಮಾರಾಟ. ಇಲ್ಲಿಯ “ಕಾಂಗ್ರೆಸ್ ಕಡ್ಲೆಬೀಜ” ಬಹಳ ಪ್ರಸಿದ್ಧ, ಈ ಹೆಸರು ಹೇಗೆ ಬಂತು ಅನ್ನುವುದು ಗೊತ್ತಿಲ್ಲ! ನ್ಯಾಷನಲ್ ಕಾಲೇಜವೃತ್ತದಲ್ಲಿ ಸುಮಾರು ವರ್ಷಗಳ ಹಿಂದೆ ಗೋಖಲೆ ಅನ್ನುವರು ಈ ಕಡ್ಲೇಬೀಜವನ್ನು ಮಾರುತಿದ್ದುದು ನನಗೆ ಜ್ಞಾಪಕ ಇದೆ, ಆ ವೃತ್ತಕ್ಕೆ ಕಾಂಗ್ರೆಸ್ ಅಂತ ನಾಮಕರಣ ಇತ್ತು. ಅಂದ ಹಾಗೆ ಈಗ ಈ ವೃತ್ತ ಇಲ್ಲ ಫ್ಲೈ ಓವರ್ ಕಟ್ಟಿ ಹಾಳುಮಾಡಿದ್ದಾರೆ. ಇಲ್ಲೇ ಹತ್ತಿರದಲ್ಲಿ ಸುಬ್ಬಮ್ಮನ ಅಂಗಡಿ, ಇದು ಇವತ್ತಿಗೂ ಸಣ್ಣ ಸ್ಥಳ. ಈಕೆ ಸುಮಾರು ೭೦ ವರ್ಷದ ಹಿಂದೆ ಬಾಲವಿಧವೆಯಾಗಿ ಬೆಂಗಳೂರಿನಲ್ಲಿ ಅಡಿಗೆ ಕೆಲಸ ಶುರು ಮಾಡಿ ಕೊನೆಗೆ ಒಂದು ಸಣ್ಣ ಅಂಗಡಿ ತೆರೆದರು. ಹಪ್ಪಳ ಸಂಡಿಗೆ ಹುರಿಗಾಳು ಇತ್ಯಾದಿ ಮಾರಾಟ. ಅವರ ಮನೆಯವರು ಅದೇ ಆಂಗಡಿಯಲ್ಲಿ ಇನ್ನೂ ವ್ಯಾಪಾರ ನಡೆಸುತ್ತಿದ್ದಾರೆ.

ಬಸವನಗುಡಿಯಲ್ಲಿ ನಾಷನಲ್ ಕಾಲೇಜ್ ಬಹಳ ಹಳೆ ಸಂಸ್ಥೆ. ೧೯೧೭ ರಲ್ಲಿ ಹೈಸ್ಕೂಲ್ ಶುರುವಾಗಿ ೧೯೪೫ರಲ್ಲಿ ಕಾಲೇಜ್ ಸಹ ಬಂತು. ಇದೇ ಶಾಲೆಯಲ್ಲಿ ಓದಿ ಅಲ್ಲೇ ವಾಸಮಾಡಿ ಕೊನೆಗೆ ಪ್ರಿನ್ಸಿಪಾಲ್ ಆಗಿದ್ದವರು ಡಾ ನರಸಿಮಯ್ಯ. ಪ್ರೀತಿ ಇಂದ ಎಲ್ಲಾರಿಗೂ ಎಚ್ಚೆನ್. ಇವರ ಸರಳತೆ ಮತ್ತು ಗಾಂಭೀರ್ಯ ಅಪಾರ. ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿ ಆಗಿದ್ದರೂ ಕಾಲೇಜ್ ಹಾಸ್ಟೇಲಿನಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ವಾಸವಾಗಿದ್ದರು, ಯಾವಾಗಲೂ ಖಾದಿ ಪಂಚೆ, ಜುಬ್ಬಾ ಮತ್ತು ಟೋಪಿ, ನಿಜವಾದ ಗಾಂಧಿ ಅಂದರೆ ಇವರೇ.

ಇದೆ ರಸ್ತೆಯಲ್ಲಿ ಬಿಎಂಎಸ್ ಕಾಲೇಜು, ಪ್ರಸಿದ್ದವಾದ ಬಹಳ ಹಳೆಯ ಇಂಜಿನೀರಿಂಗ್ ಕಾಲೇಜು. ೧೯೪೬ರಲ್ಲಿ ಸ್ಥಾಪನೆಯದ ಭಾರತದ ಮೊದಲನೆಯ ಖಾಸಗಿ ಇಂಜನೀರಿಂಗ್ ಕಾಲೇಜು.

ಪ್ರೊ. ನಿಸಾರ್ ಅಹ್ಮದ್ ಅವರ ಪ್ರೀತಿಯ ರಸ್ತೆ ಗಾಂಧಿಬಜಾರ್. ೨೦೦೮ರಲ್ಲಿ ನಮ್ಮ ಕನ್ನಡ ಬಳಗದ ಮುಖ್ಯ ಅಥಿತಿಯಾಗಿ ಬಂದವರು ನಮ್ಮ ಮನೆಯಲ್ಲಿ ಮೂರು ವಾರ ಇದ್ದರು. ಒಂದು ಸಂಜೆ ಕೆಲವು ಮಿತ್ರರ ಜೊತೆ ಮಾತನಾಡಿದಾಗ ದಿವಂಗತ ಶ್ರೀರಾಜಾರಾಮ್ ಕಾವಳೆ ಅವರನ್ನು `ಮುಂದಿನ ಜನ್ಮದಲ್ಲಿ ಹುಟ್ಟಿದರೆ, ಅದು ಎಲ್ಲಿ ಸಾರ್?` ಅಂತ ಕೇಳಿದರು. ನಿಸಾರ್ ಅವರ ಉತ್ತರ ಹೀಗಿತ್ತು, “ನೋಡಿ, ನನಗೆ ಮುಂದಿನ ಜನ್ಮ ಬಗ್ಗೆ ನಂಬಿಕೆ ಇಲ್ಲ, ಆದರೆ ನಾನು ಪುನಃ ಹುಟ್ಟಿದರೆ ಅದು ಭಾರತದಲ್ಲೇ, ಕರ್ನಾಟಕದಲ್ಲೇ, ಬೆಂಗಳೂರಿನಲ್ಲೇ ಮತ್ತು ಗಾಂಧಿಬಜಾರ್ ಹತ್ತಿರ!” ಬಹುಷಃ ಮಾಸ್ತಿ ಮತ್ತು ಡಿವಿಜಿ ಅವರೂ ಇದೇ ಉತ್ತರ ಕೊಡುತ್ತಿದ್ದರು ಅಂತ ಕಾಣತ್ತೆ.

ಕೊನೆಯದಾಗಿ ಒಂದು ವಿಷಾದಕರ ಸಂಗತಿ: ಗಾಂಧಿಬಜಾರ್ ಅಷ್ಟು ಖ್ಯಾತವಾದ ಮತ್ತು ಐತಿಹಾಸಿಕ. ಆದರೆ ಈಚೆಗೆ ಎಲ್ಲೆಲ್ಲಿ ನೋಡಿದರು ಕಸ. ಫುಟ್ಪಾತ್ ಕೂಡ ಸರಿಯಾಗಿಲ್ಲ, ರಸ್ತೆ ತುಂಬಾ ತೂತುಗಳು. ನೋಡಿದರೆ ತುಂಬಾ ಬೇಜಾರಾಗುತ್ತೆ. ಇಲ್ಲಿ ಬಡತನ ಇಲ್ಲ, ಮಧ್ಯಮ ಮತ್ತು ಉತ್ತಮವರ್ಗದ ಜನರ ವಾಸ ಆದರೂ ಈ ಸ್ಥಿತಿ ಏಕೆ ಅನ್ನುವುದು ದೊಡ್ಡ ಸಂಶಯ.

ನೀವು ಬೆಂಗಳೂರಿಗೆ ಹೋದರೆ ಗಾಂಧಿಬಜಾರಿಗೂ ಹೋಗಿ, ಇತಿಹಾಸವನ್ನು ಮೆಲುಕು ಹಾಕಿ, ವಿದ್ಯಾರ್ಥಿಭವನಲ್ಲಿ ದೋಸೆ ತಿನ್ನಿ. ನಂತರ ಗಾಂಧಿ ಬಜಾರನ್ನು ಮತ್ತೆ ಹೊಟ್ಟೆ ಹಸಿಯುವವರೆಗೆ ಸುತ್ತಿ. ಆಮೇಲೆ ಕಾಮತ್ ಬ್ಯುಗಲ್-ರಾಕ್ ಹೋಟೆಲಿನಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿಯ ಸೊಗಸಾದ ಊಟ ಕಾದಿರುತ್ತೆ!

10 thoughts on “ಐತಿಹಾಸಿಕ ಬಸವನಗುಡಿ ಮತ್ತು ಗಾಂಧಿ ಬಜಾರ್: ರಾಮಮೂರ್ತಿ

  1. I studied at Acharya Patha Shala college and NMKRV college. All those places that you have described in your article were my ‘beat’ points! Thank you for time-travelling …

    Like

  2. Vidhyarthi Bhavan comments received by email. I have pointed out that my remark on politicians was only a light hearted one and not to be taken seriously.

    Dear Murthy Sir,

    Thank you for sending the link. Was happy to read about Gandhi Bazaar and Basavanagudi.

    Would like to clarify a point where you have mentioned that injustice has been done by putting up a couple of photographs of politicians. Please note that we have put up pencil sketches of great personalities from various fields who have contributed for the growth of our state – Karnataka and who have made us (Kannadigas) proud. None of the politicians are featured here for your information.

    However, we have photographs of a couple of politicians who had visited VB during their tenure of leading the state in the position of CM. Here, irrespective of the party or whether we have any affinity towards them personally or not, we have to accept the fact that they have been democratically elected as a leader of our state and we need to respect the post and position. As a leader of the state, if they have visited our establishment, we naturally feel honoured to have them in our place. Hence we have their photographs and I dont think so that it is any injustice done to anybody. We have many other politicians (ex-CMs, other national leaders) who have visited our establishment, but do not have their photographs put up. Its only those who were active CMs and during that time who visited VB.

    I thought of clarifying this to you after reading that beautiful article.

    Thank you Sir,

    Warm Regards,
    Arun Adiga

    Like

  3. ಮೈಸೂರಿನಲ್ಲಿ ಹುಟ್ಟಿ ಬೆಳೆದ ನನಗೆ ಬೆಂಗಳೂರು ಪಟ್ಟಣ, ಕೇವಲ ಆಗಾಗ ನೆಂಟರು ಇಷ್ಟರನ್ನು ಭೇಟಿಯಾಗುವ ಮತ್ತು ಮದುವೆ ಮುಂಜಿ ಸಮಾರಂಭಗಳಲ್ಲಿ ಭಾಗಿಯಾಗಲು ಹೋಗಿಬರುತ್ತಿದ್ದ ನಗರವೆನಿಸಿತ್ತು. ೧೯೮೭ರಲ್ಲಿ ನನ್ನ ಅಕ್ಕ ಬೆಂಗಳೂರಿನ ಪ್ರಜೆಯನ್ನು ಮದುವೆಯಾದಾಗ ನನಗೆ ಬೆಂಗಳೂರಿನ ನೆಂಟು ಬೆಳೆಯಿತು. ಅಕ್ಕನ ಅತ್ತೆ ಮನೆ ಬಸವನಗುಡಿಯಲ್ಲಿರುವ ಪ್ರಸಿದ್ಧ ಗೋಖಲೆ ಸಾರ್ವಜನಿಕ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕುಟುಂಬದವರು. ಡಿವಿಜಿ ಜೊತೆ ಬಹಳ ಉತ್ತಮ ಸಂಬಂಧ ಹೊಂದಿದ್ದವರು. ಇಂದಿಗೂ ಅವರು ಈ ಸಂಸ್ಥೆಗೆ ದುಡಿಯುತ್ತಲೇ ಇದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಬಸವನಗುಡಿ, ಗಾಂಧಿ ಬಜಾರ್ ಮತ್ತು ಏನ್.ಅರ ಕಾಲೋನಿ ಜೊತೆ ಬಹಳ ನಿಕಟವಾದ ನೆಂಟು . ನನ್ನ ತಂದೆ ೫೦ರ ದಶಕದಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಮಲ್ಲೇಶ್ವರದಲ್ಲಿ ಇದ್ದರಂತೆ. ಹಾಗಾಗಿ ಅಲ್ಲಿಯ ಅನುಭವ ಮತ್ತು ವೈಭವಗಳನ್ನು ನಮಗೆ ಹೇಳುತ್ತಲೇ ಇರುತ್ತಾರೆ. ಇಂದು ನನ್ನ ಕುಟುಂಬದವರು, ಅತ್ತೆ ಮನೆಯವರೆಲ್ಲ ಬೆಂಗಳೂರಿನ ನಿವಾಸಿಗಳು. ಅದರಲ್ಲೂ ಬಸವನಗುಡಿ ಮತ್ತು ಗಾಂಧಿ ಬಜಾರಿಗೆ ಹತ್ತಿರವಾಗಿರುವವರು. ಅಲ್ಲಿ ಬಹಳಷ್ಟು ಓಡಾಡಿದ್ದೇನೆ. ಅಲ್ಲಿಯ ಇತಿಹಾಸ ಮತ್ತು ಸಂಸ್ಕೃತಿಗಳ ಬಗ್ಗೆ ಕೇಳಿದ್ದೇನೆ. ಹಾಗಾಗಿ ನಿಮ್ಮ ಲೇಖನ ಅದಕ್ಕೆ ಇಂಬು ಕೊಟ್ಟಂತಿದೆ. ಉತ್ತಮವಾದ ನಿರೂಪಣೆ. ಅಂದ ಹಾಗೆ ವಿದ್ಯಾರ್ಥಿ ಭವನದ ದೋಸೆಯನ್ನು ಸವಿದಿದ್ದೇನೆ. ದಕ್ಷಿಣ ಬೆಂಗಳೂರಿನ ಸಂಸ್ಕೃತಿಯ ರಾಜಧಾನಿಯಾದ ಬಸವನಗುಡಿ, ಗಾಂಧಿ ಬಜಾರಿನ ಬಗ್ಗೆ ತಿಳಿಯದ ಮಂದಿ ಬಹಳ ಕಡಿಮೆ. ನಿಮ್ಮ ಲೇಖನವನ್ನು ಓದಿದ ಮೇಲೆ ಈ ಜಾಗಗಳ ಮಹತ್ವ ಮತ್ತಷ್ಟು ಹೆಚ್ಚಿದೆ ಎನ್ನಬಹುದು. ಉತ್ತಮವಾದ ನಿರೂಪಣೆ. ಇಂತಹ ಲೇಖನ ಮತ್ತಷ್ಟು ಬರಲಿ.
    ಉಮಾ ವೆಂಕಟೇಶ್.

    Like

  4. Though I’m not basically from Bangalore I love the places like Basavanagudi, Malleshwaram, Chamarajapete, Rajaji Nagar.
    Very good writing Ramamurthy Sir

    Like

  5. Enjoyed reading your article. Brought back memories of my days travelling from Malleshwaram to Gandhi Bazar. Every year atleast three trips to Gandhi Bazar during our stay in Bangalore is a must for us. Would have loved to see some photos of the place as it was some half a century ago.

    Like

  6. Since my 4th year am around Basavanagudi….We played cricket converting the rocks of Bugle rock as wickets… It’s known as cultural capital of. Karnataka….Am still here in Basavanagudi….I love the place forever…

    Like

  7. ಸೊಗಸಾಗಿ ಮೂಡಿ ಬಂದಿದೆ. ತುಂಬಾನೆ ವಿಷಯಗಳನ್ನು ಸಂಗ್ರಹಿಸಿದ್ದೀರಿ. ಬಹಳ ಐತಿಹಾಸಿಕ ವಿಷಯಗಳು ಸಾಮಾನ್ಯರಿಗೆ ತಿಳಿದಿರುವುದೇ ಇಲ್ಲ. ಅಭಿನಂದನೆಗಳು.
    ಬರೆಯುತ್ತಲೇ ಇರಿ.
    ಗುರುನಾಥ್.

    Like

  8. ಉತ್ತಮವಾದ ಲೇಖನ. ಬೆಂಗಳೂರಿನಲ್ಲಿ ಬದುಕಿದ
    ವರ್ಷಗಳಲ್ಲಿ ನಾವು ಲೇಖನದಲ್ಲಿ ಹೇಳಿದ ಎಲ್ಲ ಕಡೆ ಸುತ್ತುತ್ತಿದ್ದೆವು. ಇವತ್ತು ಕೂಡ ಅಲ್ಲೆಲ್ಲ ಹೋಗದೆ ಹಿಂತಿರುಗುವುದಿಲ್ಲ. ಬೆಂಗಳೂರಲ್ಲಿ. ಕನ್ನಡ ಭಾಷೆ ಮತ್ತು ಸಂಸ್ಕೃತಿಗಳು ಗಾಡವಾಗಿ ಉಳಿದಿರುವ ಜಾಗಗಳಿವು .
    ಹಿಂತಿರುಗಿದರೆ ಅಲ್ಲಿಯೇ ಬದುಕಬೇಕು ಅಥವಾ ಹಾಲಿಡೇ ಹೋಂ ಖರೀದಿಸಬೇಕೆಂಬ ಯೋಚನೆಗಳಿವೆ!

    Like

  9. ರಾಮಮೂರ್ತಿಯವರೇ,
    ಬೆಂಗಳೂರು ಬಲ್ಲದ ನನ್ನಂಥವನಿಗೂ ಹಿಡಿಸುವಂಥ ಸ್ವಾರಸ್ಯಕರವಾದ ಲೇಖನ ನಿಮ್ಮದೇ ಎಂದಿನ ಸಹಜ ಶೈಲಿಯಲ್ಲಿ, ಓದಿಸಿಕೊಂಡು ಹೋಗುತ್ತದೆ! A ‘potted history’ of the area full of potholes, it seems but no holes in your argument! ಅಭಿನಂದನೆಗಳು!

    Like

Leave a comment

This site uses Akismet to reduce spam. Learn how your comment data is processed.