`#MeToo ಎಂಬ ಹ್ಯಾಶ್-ಟ್ಯಾಗ್` – ಮುರಳಿ ಹತ್ವಾರ್ ಮತ್ತು ಅಮಿತಾ ರವಿಕಿರಣ ಬರೆದಿರುವ ಎರಡು ಲೇಖನಗಳು

(ಸಮಾಜಿಕ ತಾಣಗಳಲ್ಲಿ ಶುರುವಾದ #MeToo ಎನ್ನುವ ಐದೇ ಆಂಗ್ಲ ಅಕ್ಷರಗಳ ಗುರುತುಪಟ್ಟಿ ಈಗೆರೆಡು ವರುಷಗಳಿಂದ ಮುಂದುವರಿದ ದೇಶಗಳಲ್ಲಿ ಸಾಮಾಜಿಕ ಕ್ರಾಂತಿಯನ್ನು ಹುಟ್ಟುಹಾಕಿದೆ. ಭಾರತಕ್ಕೆ ಇತ್ತೀಚಿಗಷ್ಟೇ ಬಂದಿದೆ. ಇನ್ನೂ ಪುರುಷ ಪ್ರಧಾನವಾಗಿರುವ ಸಮಾಜಗಳಲ್ಲಿ, ಪುರುಷರು #MeTooದ ಪ್ರಸಂಗಗಳನ್ನು ಎದುರಿಸುವ ಸಂಭವಗಳು ವಿರಳ ಎಂದೇ ಹೇಳಬಹುದು. ಆದರೆ #MeToo ಎದುರಿಸದಿರುವ ಮಹಿಳೆಯರು ವಿರಳ. ತನುಶ್ರೀ ದತ್ತಾ ಹಚ್ಚಿದ ಕಿಡಿ ಭಾರತದ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಜ್ವಾಲಾಮುಖಿಗಳನ್ನು ಎಬ್ಬಿಸಿದೆ. ಈ ಜ್ವಾಲಾಮುಖಿ ಭಾರತದಲ್ಲೂ ಸಾಮಾಜಿಕ ಕ್ರಾಂತಿಯನ್ನು ತರಲಿ, ಸಮಾಜ ಬದಲಾಗಲಿ, ಪುರುಷರು ಬದಲಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ. ಪುರುಷರ ದೃಷ್ಟಿಕೋನದಲ್ಲಿ ಮುರಲಿ ಹತ್ವಾರ್ ಮತ್ತು ಮಹಿಳೆಯರ ದೃಷ್ಟಿಕೋನದಲ್ಲಿ ಅಮಿತಾ ರವಿಕಿರಣ್ ಬರೆದಿರುವ ಎರಡು ಲೇಖನಗಳು ನಿಮ್ಮ ಮುಂದಿದೆ. ಇಲ್ಲಿರುವ ಎಲ್ಲ ವ್ಯಂಗ್ಯಚಿತ್ರಗಳನ್ನು ಬರೆದಿರುವ ಮತ್ತು ಪ್ರಕಟಿಸಲು ಅನುಮತಿ ಕೊಟ್ಟಿರುವ ಸತೀಶ್ ಆಚಾರ್ಯ ಅವರಿಗೆ ಅನಂತ ವಂದನೆಗಳು – ಸಂ)

ಸಮಾಜಕ್ಕೆ ಬೇಕಿರುವುದು ಲಕ್ಷ್ಮಣರೇಖೆಯಲ್ಲ, ರಾವಣರೇಖೆ –  ಮುರಳಿ ಹತ್ವಾರ್

Murali Hatwar
ಲೇಖಕರು: ಮುರಳಿ ಹತ್ವಾರ್

ತಾಜಾ ಸುದ್ದಿ! ‘ದ ಗ್ರೇಟ್’ ಪತ್ರಕರ್ತ-ಸಂಪಾದಕ-ಮಂತ್ರಿ ಅಕ್ಬರನ ಬಲಿ ಸಿಕ್ಕಿದೆ, ಬೆಳೆಯುತ್ತಿರುವ #MeToo ಬಲೆಗೆ. ಸಿನೆಮಾದ ನಾನಾ ಪಾಟೇಕರ್, ಅನು ಮಲ್ಲಿಕ್, ಸಾಜಿದ್, ಗಣೇಶ… ಇತ್ಯಾದಿ, ಇತ್ಯಾದಿಗಳು #MeToo ಬೆಳಕಲ್ಲಿ ಬತ್ತಲಾಗಿದ್ದಾರೆ, ಆಗುತ್ತಿದ್ದಾರೆ. ಅಲ್ಲಲ್ಲಿ ಪಾದ್ರಿಗಳು, ಮಠಾಧಿಪತಿಗಳು, ಮುಲ್ಲಾಗಳನ್ನೂ ಮುಲಾಜಿಲ್ಲದೆ #MeToo ಮೆತ್ತಿಕೊಂಡಿದೆ. ಈ ಮೊದಲೇ ಸತ್ತಿರುವ ಹಲವು ‘ಅಕ್ಬರರು’ ಬದುಕಿದೆವು ಎಂದು ಸಮಾಧಿಯಲ್ಲೇ ನಿಟ್ಟುಸಿರು ಬಿಟ್ಟಿರಬೇಕು. ಅಧಿಕಾರದ ಅಹಂಕಾರದಲ್ಲಿ ಶಿಷ್ಟತೆಯ ಎಲ್ಲೆ ಮೀರಿದ ‘ಗಣ್ಯ’ರನೇಕರ ಚಡ್ಡಿಯನ್ನು ಜಾಡಿಸುತ್ತಿರುವ #MeToo ಮೂಮೆಂಟಿನ ಅವಲೋಕನದ ಪ್ರಯತ್ನ ಈ ಲೇಖನ.

#MeToo ಹೊರಕೆಡವುತ್ತಿರುವ ಹೇಸಿಗೆಯ ಕೆಲಸ ತುಂಬಾ ಹಳೆಯದು.  White supremacy, slavery, ಸಿಂಹಾಸನ, ಜಮೀನ್ದಾರಿ… ಹೀಗೆ ನಾನಾ ರೂಪಗಳಲ್ಲಿ, ಗಂಡು ಹೆಣ್ಣೆನ್ನದೆ, ಶೋಷಿತರ ಶೀಲ ತಮ್ಮ ಹಕ್ಕೆಂದು ಹರಿದು, ಜರಿದು, ಕರಿದು, ಸುಟ್ಟು, ತಿಂದು ತೇಗಿದವರ ‘ಮಹಾಕಾರ್ಯ’ ಇತಿಹಾಸದುದ್ದಕ್ಕೂ ‘ಹೊಳೆಯುತ್ತಿದೆ’. ಅದೊಂದು ಕೊಳಕು ಸಾಗರ! ಬಗೆ ಬಗೆಯ ಸಂಶೋಧಕರು ತಮ್ಮ-ತಮ್ಮ ಬೊಗಸೆಗಳಲ್ಲಿ ಇದರ ಆಳ ಅಳೆಯಲು ಪ್ರಯತ್ನಿಸಿ ಸೋತರೂ, ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾರೆ.

ವಿಜ್ಞಾನಿಗಳು ಗಂಡು ಜೀವದಲ್ಲಿ ಮಾತ್ರ ಇರುವ Y ವಂಶವಾಹಿಯ ಜಾಡು ಹಿಡಿದು ದಾರಿ ಸಿಕ್ಕದೆ ಮುಂದೇನು ಎಂದು ಪ್ರಶ್ನಿಸುತ್ತಿದ್ದಾರೆ; Testosterone (ಟೆಸ್ಟೋಸ್ಟೆರೋನ್) ಹಾರ್ಮೋನ್ ಈ ‘ಗಂಡು’ತನದ ಅಡಿಯಿರಬಹುದೇ ಎಂದು ಹುಡುಕಿ ತಳ ಸಿಕ್ಕದೆ ತಳಮಳಿಸಿದ್ದಾರೆ. ಹೆಚ್ಚಿನ ಎಲ್ಲಾ ಪ್ರಾಣಿಗಲ್ಲಿರುವ ಗಂಡು-ಹೆಣ್ಣಿನ ಭೇದಕ್ಕಿಂತ ಮಾನವ ಜೀವ ಭಿನ್ನವಾಗಿಲ್ಲದಿದ್ದರೂ, ಬೇರಾವ ಪ್ರಾಣಿಗಳಲ್ಲೂ ಕಾಣದ ಹೆಣ್ಣಿನೆಡೆಗಿನ ಈ ಭೇದ-ಭಾವದ ಕಾರಣ ವಿಜ್ಞಾನದ ನಿಲುಕಿಗೆ ಇನ್ನೂ ಸಿಕ್ಕಿಲ್ಲ. ಎಲ್ಲಾ ಹಾರ್ಮೋನುಗಳ ಕಾರ್ಯ-ನಿಯಂತ್ರಕ ಮೆದುಳಿನ ಮಧ್ಯವಿರುವ ಹೈಪೊಥಲಮಸ್ಸಿನ ಹಲವು ನಿಯಂತ್ರಕ ಹಾರ್ಮೋನುಗಳ ಕೆಲಸದ ಬಗ್ಗೆ ಹೆಚ್ಚು ತಿಳಿದಾಗ ಗೊತ್ತಾಗಬಹುದೇನೋ. ಕಿಸ್ಪೆಪ್ಟಿನ್ (kisspeptin) ಹೆಸರಿನ ಒಂದು ಹಾರ್ಮೋನು ಮಾನವ ಜಾತಿಯ ಪ್ರೀತಿ, ಸೆಕ್ಸ್ ಮುಂತಾದ ಭಾವನೆಗಳಿಗೂ; ಲೈಂಗಿಕ ಉತ್ತೇಜನ, ಬಸಿರು ಇಂತಹ ಕಾರ್ಯಗಳಿಗೂ ಮೂಲ ಇರಬಹುದೇ ಎಂದು ಹುಡುಕಬಹುದು ಎನ್ನುವಷ್ಟು ಕುರುಹು ಸಿಕ್ಕಿದೆ.

metoo 6ಮನಶಾಸ್ತ್ರಜ್ನ್ಯರು (psychologists), ಮಾನವರಲ್ಲಿ ಗಂಡು ಹೆಣ್ಣನ್ನು ತನ್ನ ಸ್ವತ್ತೆಂದು ಭಾವಿಸಿರುವುದು ಕಾಲ, ಧಾರ್ಮ, ಅವಕಾಶಕ್ಕನುಗುಣವಾಗಿ ವ್ಯಕ್ತವಾಗುತ್ತಿದೆಯೆಂದು ಅರ್ಥೈಸಿದ್ದಾರೆ. ಕೆಲವೆಡೆ ಮೈ ತುಂಬಾ ಬಟ್ಟೆ ಹಾಕಿಕೊ೦ಡು ಮುಖ ಮುಚ್ಚಿಕೊಳ್ಳಿ ಎನ್ನುವದೂ, ಪರದೆಯ ಹಿಂದೆ ಅಡಗಿರಿ ಎನ್ನುವದೂ; ಕೆಲವೆಡೆ ಬಟ್ಟೆ ಬಿಚ್ಚಿ ಬೇಕಾದಹಾಗೆ ಬಳಸಿಕೊಳ್ಳುವದೂ; ಅಧಿಕಾರ, ಮತ, ಇನ್ನಿತರ ಹಕ್ಕುಗಳಿಂದ ಅವರನ್ನು ದೂರ ಇಡುವದೂ ಇವೆಲ್ಲವೂ ಒಂದೇ ಸ್ವಭಾವದ ವಿವಿಧ ರೂಪಗಳು ಎಂದು ಹೇಳಬಹುದು. ಅಲ್ಲದೆ, ಗಂಡು ತನ್ನ ಲೈಂಗಿಕ ಉತ್ತೇಜನಕ್ಕೂ ಹೆಣ್ಣನ್ನೇ ಅವಲಂಬಿಸಿರುವ ಕಾರಣ, ತನ್ನ ಬೇಕು-ಬೇಡಗಳ ಬಂಧನದಲ್ಲಿ ಹೆಣ್ಣನ್ನು ಕುಣಿಸುತ್ತಾ ಬಂದಿದ್ದಾನೆ. ತನ್ನ ‘ಸತ್ತ ನರ’ಕ್ಕೆ ಜೀವ ತುಂಬಲು ದಿನಕ್ಕೊಂದು ೧೮-೨೦ ಪ್ರಾಯದ ಯುವತಿಯರ ಮಾನಭಂಗಕ್ಕೆ ಯತ್ನಿಸುತ್ತಿದ್ದ ಲಿಬ್ಯಾದ ಹಳೆಯ ನಾಯಕ ಗಡ್ಡಾಫಿ ಇದರ ಒಂದು ವಿಪರೀತ ಉದಾಹರಣೆಯಾದರೆ ತನ್ನ ‘ಲಿಂಗ’ ಸಂಪೂರ್ಣ ಹತೋಟಿಯಲ್ಲಿದೆ ಎಂದು ತೋರಿಸುವ ಚಪಲದಲ್ಲಿ, ತನ್ನ ಇಳಿವಯಸ್ಸಿನಲ್ಲಿ, ತುಂಬು ಪ್ರಾಯದ ಇಬ್ಬರು ಯುವತಿಯರನ್ನ ಬತ್ತಲೆ ಮಲಗಿಸಿ ಅವರ ಮಧ್ಯದಲ್ಲಿ ಸಂಪೂರ್ಣ ಬತ್ತಲಾಗಿ ಮಲಗುತ್ತಿದ್ದ ಭಾರತದ ಸತ್ಯಾನ್ವೇಷಕ ಮಹಾಪುರುಷ ಗಾಂಧೀಜಿ ಇನ್ನೊಂದು ದಿಕ್ಕಿನ ವಿಪರೀತ ಉದಾಹರಣೆ. ಇವೆರಡರ ಮಧ್ಯದಲ್ಲೊಂದು ಸಣ್ಣ ಚುಕ್ಕೆಯಷ್ಟೇ ಈಗ ದೊಡ್ಡದಾಗಿ ಕಾಣುತ್ತಿರುವ #MeToo.

ಬಿಲ್ ಕ್ಲಿಂಟನ್ ತನ್ನ ಆಫೀಸಿನ ಮೋನಿಕೆಯ ಎದುರು ಬತ್ತಲಾಗಿ ಬಾ ಎಂದು ಕರೆದಾಗ, ಪ್ರಕೃತಿಯ ಪಸಂದಾಗಿಸುವ ಕಾರ್ಯದಲ್ಲಿ ಪರಮನಾಗಿದ್ದ ಪಚೌರಿ ತನ್ನ ಪಂಚೆ ಎಲ್ಲೆಲ್ಲೋ ಬಿಚ್ಚಿದಾಗ, ಸಂಪಾದಕ ತರುಣ ತೇಜಪಾಲ ಲಿಫ್ಟಿನಲ್ಲಿ ಯಾರದೋ ತುಟಿಯೆಡೆಗೆ ತನ್ನ ಆಸೆಯ ನಾಲಿಗೆ ಚಾಚಿದಾಗ…#MeToo ಎನ್ನುವ ಗುರುತು (label) ಸಿಕ್ಕಿರಲಿಲ್ಲ;  ವಿಶ್ವದ ಹಲವೆಡೆ, ಚರ್ಚುಗಳ ಶಿಲುಬೆಯಡಿ ಸಾವಿರಾರು ಬಾಲಕರ ಬಾಲ್ಯ ಅಪ್ಪಚ್ಚಿಯಾದಾಗಲೂ ಅಷ್ಟೇ; ಹತ್ತು-ಹನ್ನೆರಡರ ಹೆಣ್ಣುಮಕ್ಕಳನ್ನು ಅವರ ಅಪ್ಪ-ಅಜ್ಜರ ವಯಸ್ಸಿನ ಹೀರೋಗಳು ಮುತ್ತಿಕೊಂಡಾಗಲೂ ಅಷ್ಟೇ. ಆಗಾಗ ಅಲ್ಲಲ್ಲಿ ಕೆಲವು ಪ್ರಸಂಗಗಳು ಪಬ್ಲಿಕ್ ಆದರೂ, ಸಮಾಜ ಅದನ್ನು ಗಾಸಿಪ್ಪಿಗಷ್ಟೇ ಬಳಸಿಕೊಂಡಿತ್ತು. ಒಂದಿಷ್ಟು ನಟಿಯರ, ‘ಮಹಾನಟಿ’ಯರ ದುರಂತ ಕಥೆಗಳು ಸಿನೆಮಾಗಳಾಗಿ ಮತ್ತೆ ಕಥೆಗಳಾದವು – ಸಿಲ್ಕ್ ಸ್ಮಿತಾ, ಸಾವಿತ್ರಿ… ನಿಮ್ಮ ತಲೆಯಲ್ಲೂ ಒಂದಿಷ್ಟು ಹೆಸರು ಓಡುತ್ತಿರಬಹುದು. ಓಡಿಸಿ.

metoo 2
© and permission Satish Acharya

ಈ ಶತಮಾನದ ಆರಂಭದಲ್ಲಿ, ಸೋಶಿಯಲ್ ಮೀಡಿಯಾ ಬೆಳೆದಂತೆ ಹುಟ್ಟಿದ ಹೊಸ-ಹೊಸ ರೂಪಗಳಲ್ಲಿ #MeToo ಒಂದು. ಕೆಲಸದ ಜಾಗಗಳಲ್ಲಿ ಹೆಂಗಸರ ಮಾನಹಾನಿಯ ವಿರುದ್ಧ ಸಣ್ಣದಾಗಿ ಶುರುವಾದ #MeToo ದನಿಗೆ ಬಲ ಬಂದದ್ದು ಇತ್ತೀಚೆಗಷ್ಟೇ. ಹಾಲಿವುಡ್ಡಿನ ದೊಡ್ಡ ಪ್ರೊಡ್ಯೂಸರ್ ವೀನ್ಸ್-ಟೀನನ (Weinstein) ‘ಕರಾಮತ್ತುಗಳು’ ಒಂದಾದಮೇಲೊಂದು ಕಳೆದ ಎರಡು ವರ್ಷಗಳಲ್ಲಿ ಬಯಲಾಗುತ್ತಾ ಬಂದಂತೆ, ತಮಗಾದ ಅನ್ಯಾಯದ ಗೋಳಿನ ಕಥೆ ಹೇಳಿಕೊಳ್ಳುವರ ಸಂಖ್ಯೆಯೂ ಹೆಚ್ಚುತ್ತಾ ಬಂತು. ಕೆಲವು ಅಪರಾಧಿಗಳಿಗೆ ಶಿಕ್ಷೆಯಾದದ್ದೂ #MeTooಗೆ ಬಲ ಕೊಟ್ಟಿರಬಹುದು. ಹೀಗೆ ಅಮೆರಿಕೆಯಲ್ಲಿ ಬೆಳೆದ #MeToo, ಪ್ರಪಂಚದ ಹಲವೆಡೆ ಬಲಗೊಳ್ಳುತ್ತಿದೆ. ಸಿನಿಮಾದವರ ಜೊತೆಗೆ ಬೇರೆ-ಬೇರೆ ರಂಗದವರೂ ನಿಧಾನವಾಗಿ ದನಿ ಜೋಡಿಸುತ್ತಿದ್ದಾರೆ – ಒಂದೆರಡು ಕಂಪನಿಗಳ ದೊಡ್ಡ ತಲೆಗಳು ಇತ್ತೀಚಿಗೆ ಉರುಳಿವೆ.

ಎಲ್ಲೆಡೆಯಂತೆ, ಭಾರತದಲ್ಲೂ ಲೈಂಗಿಕ ಶೋಷಣೆ ಸರ್ವವ್ಯಾಪಿ. ಇದು ಮುಟ್ಟದ ರಂಗವಿಲ್ಲ – ಸರ್ಕಾರಿ, ಖಾಸಾಗಿ, ರಾಜಕೀಯ, ಕೋರ್ಟು, ಆಸ್ಪತ್ರೆ, ಶಾಲೆ, ಯೂನಿವರ್ಸಿಟಿ, ನಾಟಕ, ಸಿನೆಮಾ… ಮುಗಿಯದ ಪಟ್ಟಿ. ಸಿನೆಮಾದ ತನುಶ್ರೀ, ನಾನಾ ಪಾಟೇಕರನ ಹೆಸರು ಹೊರಗೆಳೆದು ಭಾರತಕ್ಕೆ ತಂದ  #MeTooವನ್ನ, ಮೀಡಿಯಾಗಳು ಕಿಟಕಿ ಮೇಲೆ ಕಿಟಕಿಯಿಟ್ಟು ಖುಷಿಯಿಂದ ಬೆಳೆಸಿವೆ. ನಾ ಮುಂದು-ತಾ ಮುಂದು ಅಂತ #MeToo ಬೋರ್ಡು ಹಿಡಿದು ಕೂಗುತ್ತಿರುವ ಜನ ಆ ‘ಕಿಟಕಿ’ಗಳನ್ನ ತುಂಬುತ್ತಿದ್ದಾರೆ. ಟಿವಿಯಾಚೆಗೂ ಹರಿದು, ಠಾಣೆ, ಕೋರ್ಟುಗಳಲ್ಲಿ ಡ್ರಾಮಾ ಮುಂದುವರೆದಿದೆ. ಎಲ್ಲಿಯವರಿಗೆ ಅನ್ನೋದನ್ನ ಕಾದು ನೋಡಬೇಕು.

ಟಿವಿ-ಸಿನೆಮಾದ ಡ್ರಾಮಾದಲ್ಲಿ, ಹೆಸರಿನಾಸೆಗೆ ಒಂದಿಷ್ಟು ಸುಳ್ಳು ಕಥೆಗಳೂ ಹುಟ್ಟಿರಬಹುದು, ಅಥವಾ ಮುಂದೆ ಹುಟ್ಟಬಹುದು. ಆ ಸುಳ್ಳುಗಳನ್ನ ತನ್ನಿಷ್ಟದಂತೆ ‘ಅಧಿಕಾರಿ’ ಸಮಾಜ  ಬಳಸಿಕೊಂಡು, ನಿಜ #MeToo ಸಂತ್ರಸ್ತರು ಹೊರಬಾರದಂತೆಯೂ, ಅವರಿಗೆ ನ್ಯಾಯ ಸಿಗದಂತೆಯೂ, ಮತ್ತೆ #MeToo ಮೂಮೆಂಟು ಕೊಟ್ಟಿರುವ ಸಾಮಾಜಿಕ ಬದಲಾವಣೆಯ ಅವಕಾಶವನ್ನ ಮಟ್ಟ ಹಾಕಲು ಹೊಂಚಿಸಬಹುದು. ಈಗಾಗಲೇ ವಾಟ್ಸಾಪ್ ಗಳಲ್ಲಿ ಗುಂಪಿನಿಂದ-ಗುಂಪಿಗೆ ಹಾರುತ್ತಿರುವ, #MeToo ಬಗ್ಗೆ ಕೇವಲವಾಗಿ ಮಾತಾಡುತ್ತ ಲೇವಡಿ ಮಾಡುತ್ತಿರುವ ಜೋಕುಗಳು, ಜೊತೆಯ ಕಮೆಂಟುಗಳು, ಚರ್ಚೆ ಎಲ್ಲೋ ಹಾದಿ ತಪ್ಪಿದೆ ಎನ್ನಿಸುವಂತೆ ಮಾಡಿವೆ. ‘ಆಗ ಮೀಟು, ಮೀಟು ಎಂದವಳು ಈಗ #MeToo’ ಎನ್ನುವ ಜೋಕುಗಳಲ್ಲಿ, ಸಿನೆಮಾದ ಹೊರಗೂ, ಹರೆಯ ಮುಟ್ಟದ ಮಕ್ಕಳಿಗೂ ಆಗುತ್ತಿರುವ ಅನ್ಯಾಯಗಳು ಕಳೆದುಹೋಗುತ್ತಿವೆ. ಅಮೆರಿಕೆಯ ಟ್ರಂಪ್, ಕವನ್ನ #MeToo ಹೊರತಾಗಿಯೂ ದೊಡ್ಡ-ದೊಡ್ಡ ಸ್ಥಾನ ಗಳಿಸಿರುವದೂ, ಉಳಿಸಿಕೊಂಡಿರುವದೂ #MeTooಬಗ್ಗೆ ಸ್ವಲ್ಪ ಉದಾಸೀನಕ್ಕೆ ಕಾರಣವಾಗಿದೆ.

ಚರ್ಚೆಯನ್ನು ಸರಿಹಾದಿಗೆ ತಂದೆಳೆಯುವ ಜವಾಬ್ದಾರಿ ದೊಡ್ಡ-ದೊಡ್ಡ ಮೀಡಿಯಾಗಳ ಮೇಲಿದೆ. ಹಾಗೆಯೇ, ರಾಜಕೀಯವನ್ನೆಲ್ಲ ಬದಿಗಿಟ್ಟು, ಈಗಾಗಲೇ ಇರುವ ಕಾನೂನುಗಳನ್ನ ಸರಿಯಾಗಿ ಆಚರಣೆಗೆ ತರುವ, ಆ ಕಾನೂನುಗಳ ಬಲವನ್ನ ಎಲ್ಲೆಡೆ ಪ್ರಚಾರಿಸುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗಬೇಕಿದೆ. ಕೋರ್ಟುಗಳೂ, ಹೆಂಗಸರನ್ನು-ಮಕ್ಕಳನ್ನು ಬಲಾತ್ಕಾರದ ಭಯದಿಂದ ಬಾಯಿಮುಚ್ಚಿಸುವ, ಹೊರಗಿಡುವ ಜಾಗಗಳಲ್ಲಿ, ಅವರಿಗೆ ಸಮಾನವಾಕಾಶ ಕೊಡಿಸುವಂತ, ಅವರು ಮುಕ್ತವಾಗಿ ಪ್ರವೇಶಿಸುವಂತಹ ನಿಯಮಗಳನ್ನ ಹಾಕಬೇಕಿದೆ.

metoo 1
© and permission Satish Acharya

ಟಿವಿ-ಪೇಪರ್-ಸೋಶಿಯಲ್ ಮೀಡಿಯಾಗಳಲ್ಲಿ #MeToo #MeToo ತುಂಬಿ ತುಳುಕುತ್ತಿದೆ. ಬಿಹಾರದ ಅನಾಥಾಶ್ರಮಗಳ ಬಾಲಿಕೆಯರ ಗೋಳಿನ ಕಥೆಗಳು ಪಬ್ಲಿಕ್ ಮೆಮೋರಿಯಿಂದ ಆಗಲೇ ಮರೆಯಾಗಿವೆ. ಪಾದ್ರಿಯೊಬ್ಬ ತನ್ನ ‘ಕೊಳಕು’ ಕೆಲಸವನ್ನು ದೇವರ ಕೆಲಸವೆಂದು ನಾಚಿಕೆಯಿಲ್ಲದೆ ಬೊಬ್ಬಿಡುತ್ತಿದ್ದಾನೆ. ಪೊಲೀಸು ಲಾಕಪ್ಪುಗಳ ಗೋಡೆಗಳ ಮೌನದಲ್ಲಿ ಎಷ್ಟೋ ರಹಸ್ಯಗಳು ಮುಚ್ಚಿಹೋಗಿವೆ. ವಿಧಿಯಿಲ್ಲದೇ ಮನೆ-ಮನೆ ಕೆಲಸ ಮಾಡುವ ಮಕ್ಕಳು, ಯುವತಿಯರು ಬಾಯಿ ಮುಚ್ಚಿಕೊಂಡು ಕಸ ಗುಡಿಸುತ್ತಿದ್ದಾರೆ. ಯಾವ #MeTooಗಳು ಅವರನ್ನ ಮುಟ್ಟುತ್ತಿಲ್ಲ, ಅವರಿಗೆ ಪರಿಹಾರ ಕೊಡುವುದಿಲ್ಲ.

ನ್ಯೂಜಿಲ್ಯಾಂಡ್ ತನ್ನ ಕ್ರಿಕೆಟಿಗರಿಗೆ ಇತ್ತೀಚಿಗೆ, ಅನುಮತಿ (consent)ಬಗ್ಗೆ ವಿವರವಾಗಿ ತಿಳಿಸಿ, good decision making in sexual relationships ಎನ್ನುವ ಟಾಪಿಕ್ಕಿನಡಿ ಒಂದಿಷ್ಟು ನಿಯಮಗಳನ್ನ ನಿರೂಪಿಸಿದೆ. ಇದೊಂದು ಎಲ್ಲಾ ರಂಗಗಳಲ್ಲೂ ಅಳವಡಿಸಿಕೊಳ್ಳಬಹುದಾದಂತ ಉತ್ತಮ ಉದಾಹರಣೆ. ಸಮಸ್ಯೆ ಇದೆ ಎನ್ನುವದನ್ನ ಒಪ್ಪಿಕೊಂಡಾದ ಮೇಲಷ್ಟೇ ಪರಿಹಾರ ಮತ್ತು ಸಮಾಧಾನ ಹುಡುಕಲು ಸಾಧ್ಯ, ಅಲ್ಲವೇ?

ಹಳೆಯ ಸೀತೆಯಂತೆ, ಆಧುನಿಕ ‘ಸೀತೆ*’ಯರು, ಮೋಹದಲ್ಲೋ, ಮೋಸದಲ್ಲೋ, ಮಾಯೆಯಲ್ಲೋ ತಮ್ಮೊಳಗಿನ ‘ರಾಮ’ನನ್ನು ದೂರ ಕಳಿಸಿ, ಬೇರಾರೋ ಬರೆದ ಎಚ್ಚರಿಕೆಯ ‘ಲಕ್ಷ್ಮಣ ರೇಖೆ’ಯನ್ನ ಅರಿವಿನಿಂದಲೋ, ಅರಿವಿಲ್ಲದೆಯೋ ದಾಟಬಹುದು. ಆದರೆ, ತಂಗಿಗಾದ ಅವಮಾನದ ಸೇಡಿಗೆ ಸೀತೆಯನ್ನ ಅಪಹರಿಸಿದರೂ, ಆಕೆಯನ್ನು ಮುಟ್ಟದ, ಆಕೆಯೆಡೆಗೆ ಕಣ್ಣೆತ್ತಿ ನೋಡದ ಇಪ್ಪತ್ತು ಕಣ್ಣುಗಳ, ಅಹಂಕಾರಿ, ಮಹಾ ಬಲಶಾಲಿ ಅಂದಿನ ಲಂಕಾಸುರ  ತನ್ನ ಸುತ್ತ ತಾನೇ ಹಾಕಿಕೊಂಡ ಸಭ್ಯತೆಯ  ‘ರಾವಣ ರೇಖೆ’ಯನ್ನು ದಾಟಲಿಲ್ಲ. ಆ ರಾವಣ ರೇಖೆಯನ್ನ ಹಾಕಿಕೊಳ್ಳುವ ಜನರ ಸಮಾಜ ಬೆಳೆಯುವವರೆಗೆ #MeToo ಮುಂದುವರಿಯುವ ಕಥೆ.

ನಮ್ಮ ಆಯಸ್ಸಿನ ನಾಳೆಯ ಆಚೆಯಲ್ಲಿ, ಕಂಪ್ಯೂಟರ್-ರೋಬೋಟುಗಳ ಹೊಸ ವಿಶ್ವದಲ್ಲಿ ಗಂಡು ಹೆಣ್ಣನ್ನು ಬಿಟ್ಟು ಅವುಗಳ ‘ಒಡೆತನ’ ಸಾಧಿಸಲು ಮೊದಲಾಗಬಹುದು; ಆ ಹೋರಾಟದಲ್ಲಿ ಹೆಣ್ಣು ಸಮಭಾಗಿಯಾಗದೆ ವಿಧಿಯಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲೂ ಬಹುದು. ಅಥವಾ ಕೃತಕ ಗರ್ಭಚೀಲದಲ್ಲಿ, ಕೃತಕ ಅಂಡ, ಕೃತಕ ವೀರ್ಯ ಕೂಡಿಸಿ ಗಂಡು-ಹೆಣ್ಣು ಬೇಧವಿಲ್ಲದ ಅರ್ಧನಾರೀಶ್ವರ ಜೀವಗಳ ಸೃಷ್ಟಿಯಾಗಬಹುದು. ಅಲ್ಲಿಯವರೆಗೆ ‘ರಾವಣ ರೇಖೆ’ ಅವಶ್ಯವಾಗಿ ಬೇಕಿದೆ.

* ‘ಸೀತೆ’ = ಇಲ್ಲಿ ಇದು ಎಲ್ಲಾ ಲಿಂಗಗಳಿಗೂ (ಗಂಡು, ಹೆಣ್ಣು, ಮತ್ತುಳಿದವರು) ಅನ್ವಯಿಸುವ ನೀರ್ಲಿಂಗ (ಫ್ಲೂಯಿಡ್ ಜೆಂಡರ್) ಪದ

———————————————————————–

#MeToo ಹ್ಯಾಶ್-ಟ್ಯಾಗಿನ ಹಿಂದಿರುವ ಕತೆಗಳು – ಅಮಿತಾ ರವಿಕಿರಣ

amita ravikiran
ಲೇಖಕರು: ಅಮಿತಾ ರವಿಕಿರಣ

#MeToo ಎಷ್ಟು ಸುಲಭದ ಕೆಲಸ ಒಂದು ಹ್ಯಾಶ್ಟಾಗ್ – ಎರಡು ಪದಗಳು, ಆದರೆ ಈ ಪದಗಳ ಹಿಂದಿರುವ ನೋವುಗಳು, ಕತೆಗಳು ಅದೆಷ್ಟೋ!

ಈ ಬರಹದ ಒಂದೊಂದು ಪದವೂ ನನ್ನ ಅಕ್ಕ ಪಕ್ಕ, ಅಕ್ಕತಂಗಿಯರೊಂದಿಗೆ ನಡೆದದ್ದು. ಪರಿಚಿತ ಹೆಣ್ಣು ಮಕ್ಕಳೊಂದಿಗೆ ಆಗಿದ್ದು, ಕೆಲವುಬಾರಿ ಹೇಳಿ ಕೊಂಡಿದ್ದು, ಬಹಳಷ್ಟು ಬಾರಿ ಅಡವುಗಚ್ಚಿ ಸಹಿಸಿ ಮನಸ್ಸಲ್ಲೇ ಹಿಡಿಶಾಪ ಹಾಕಿದ ಘಟನೆಗಳು ಒಂದೇ ಎರಡೇ? ಈ ಬರಹದ ಜಗತ್ತಿನಲ್ಲಿ ನಾ ಪುಟ್ಟ ಮಗುವೇ, ಅಸಹ್ಯ ಎನಿಸಿದ ಈ ಕೃತ್ಯಗಳನ್ನು ಸಹ್ಯ ಕನ್ನಡದಲ್ಲಿ ಹಿಡಿದಿಡಬೇಕೆ ಅಥವಾ ಯಥಾವತ್ ನಿರೂಪಿಸಬೇಕೆ ತಿಳಿಯುತ್ತಿಲ್ಲ. ನನ್ನಲ್ಲಿನ ಆ ಹೇವರಿಕೆ ಈ ಒಂದು ಕೆಟಗರಿಗೆ ಸೇರಿದ ಗಂಡಸರ ಬಗ್ಗೆ ನನಗಿರುವ ಆಕ್ರೋಶ ನನ್ನ ಪದಗಳಲ್ಲಿ ಕಂಡು ಬಂದರೆ ಅದರಲ್ಲಿ ಆಶ್ಚರ್ಯವಿಲ್ಲ. ಹಾಗೆ ಆ ಕೃತ್ಯಗಳನ್ನು ವಿವರಿಸಲು ನನಗೆ ಸಾಧ್ಯ ವಾಗದೆಯೂ ಇರಬಹುದು.

ಆಗ ನಾನು ಐದನೇ ಕ್ಲಾಸಿನಲ್ಲಿದ್ದೆ ಪರಿಚಿತರೊಬ್ಬರ ಮದುವೆಗೆ ನಾನು ,ಪಪ್ಪಾ ಮತ್ತು ತಂಗಿ ಹೊರಟಿದ್ದೆವು, ಟೆಂಪೋ ತಪ್ಪಿಸಿಕೊಂಡ ಕಾರಣ ಜೀಪಿನಲ್ಲಿ ಪ್ರಯಾಣಿಸಬೇಕಿತ್ತು, ಪಪ್ಪಾ ತಂಗಿ ಒಂದೆಡೆ ನಾನು ಮತ್ತೊಂದೆಡೆ ಕುಳಿತೆವು. ನನ್ನ ಪಕ್ಕ ಒಬ್ಬ ಮನುಷ್ಯ ಕುಳಿತ ಜೀಪು ಚಲಿಸುತ್ತಲೇ ಆತ ಮೆತ್ತಗೆ ತನ್ನ ಕೈ ಸೀಟಿನ ಮೇಲೆ ಹಾಕಿ ನಿದ್ದೆ ಬರುತ್ತಿದ್ದಂತೆ ವರ್ತಿಸುತ್ತಿದ್ದ. ಅಷ್ಟೇ ಮೆತ್ತಗೆ ಅವನ ಕೈ ನನ್ನ ಎದೆಯ ಮೇಲೆ ಬಂದಿತ್ತು, ಚಿವುಟಲು ಶುರು ಮಾಡಿದ್ದ. ೯ ವರ್ಷ ನನಗಾಗ. ಏನೇನೂ ದೈಹಿಕ ಬದಲಾವಣೆಗಳಾಗದ ನನ್ನ ದೇಹ, ಮನಸ್ಸು ಎರಡು ನಲುಗಿ ಹೋಗಿತ್ತು. ಆ ದಿನ ಸುಮಾರು ಒಂದೂವರೆ ಘಂಟೆ ನಾನು ಅನುಭವಿಸಿದ ನೋವು ಹಿಂಸೆ ಹೇವರಿಕೆ ಅದನ್ನು ಹೇಗೆ ವಿವರಿಸಲಿ? ಅವನು ನನ್ನ ಜೊತೆ ಹೀಗ್ಯಾಕೆ ಮಾಡುತ್ತಿದ್ದಾನೆ? ಯಾರನ್ನು ಕೇಳಲಿ? ಏನು ಮಾಡಿದ ಅಂತ ಹೇಗೆ ಹೇಳಲಿ? ಆಗ ಯಾರಾದರೂ ಇವನನ್ನು ಗಮನಿಸಿ ಕಪಾಳಕ್ಕೆ ನಾಲ್ಕು ಬಾರಿಸಲಿ ಅನಿಸಿದ್ದು ಎಷ್ಟು ಬಾರಿಯೋ, ನಡುನಡುವೆ ದೀನವಾಗಿ ಅವನ ಮುಖ ನೋಡ್ತಿದ್ದೆ, ಅವನು ಧೀರ್ಘ ನಿದ್ದೆ ನಟಿಸುತ್ತ ಕುಂತಿದ್ದ. ಅವನನ್ನು ಇಂದಿಗೂ ಅಷ್ಟೇ ತೀವ್ರವಾಗಿ ದ್ವೇಷಿಸುವ ನನ್ನ ಒಳಮನಸ್ಸು ಮೊನ್ನೆ ಊರಿಗೆ ಹೋದಾಗ ಅವನು ಸತ್ತು ಹೋದ ಅಂತ ಕೇಳಿದಾಗ, ಅವನು ನರಕಕ್ಕೆ ಹೋಗಬೇಕು ಅಂತ ಮನಸು ಪುಟ್ಟ ಮಗುವಿನಂತೆ ಅತ್ತಿತ್ತು.

metoo 5
© and permission Satish Acharya

ಈ ಘಟನೆಯ ನಂತರ ನನ್ನ ಕಣ್ಣಿಗೆ ಎಲ್ಲ ಗಂಡಸರು ಒಂದೇ ಅನ್ನೋ ಭಾವ ಗಟ್ಟಿ ಆಗಿತ್ತು. ಯಾರೇ ಸಹಜವಾಗಿ ಮೈ ಮುಟ್ಟಿದರೂ ಆ ಸ್ಪರ್ಶದ ಹಿಂದಿನ ಭಾವ ಗುರುತಿಸುವ ಶಕ್ತಿ ದೇವರೇ ನಮಗೆ ಕೊಟ್ಟಿದ್ದಾನಲ್ಲ? ಮೇಲಿನ ಘಟನೆ ನನಗೆ ಹೇಳಿಕೊಟ್ಟ ಒಂದೇ ಒಂದು ಪಾಠ ಎಂದರೆ ತಿರುಗಿ ಬೀಳದಿದ್ದರೆ ನಾವು ಕಳಗೆ ಬಿದ್ದು ಹೋಗುತ್ತೇವೆ. ಅವರು ಆ ಪೈಶಾಚಿಕ ಆನಂದ ಅನುಭವಿಸಿ ಏನು ಆಗಲೇ ಇಲ್ಲ ಎನ್ನುವಂತೆ ನಡೆದು ಹೋಗುತ್ತಾರೆ. ಅಲ್ಲಿಂದ ಶುರು ಆಯ್ತು, ನನ್ನ ಪ್ರತಿಭಟನೆ.

ದಿನವು ೧೪೦ ಕಿಲೋಮಿಟರ ಪ್ರಯಾಣ ಮಾಡಿ ನಾನು ನನ್ನ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ಮುಗಿಸಿದ್ದು. ಬಸ್ಸು ಎಂದಮೇಲೆ ಕೇಳಬೇಕಾ? ಕೀಚಕರ ಸಂತೆ, ಮೊದಲ ಅನುಭವ ಅದೆಷ್ಟು ಗಾಢ ಪರಿಣಾಮ ಬೀರಿತ್ತೆಂದರೆ, ಸದಾ ಒಂದು ದುಗುಡ ಮತ್ತು ಅತಂಕ ತುಂಬಿರುತ್ತಿತ್ತು. ಬಸ್ಸಿನಲ್ಲಿ ತಪ್ಪಿಯೂ ತೂಕಡಿಕೆ ಬರುತ್ತಿರಲಿಲ್ಲ.

ಆ ದಿನ ಬಸ್ಸು ಹತ್ತಿದ ಕೂಡಲೇ ಕಾಣಸಿಗುವ ಸೀಟಿನಲ್ಲಿ ನಾನು ಕುಳಿತಿದ್ದೆ, ಕಿಟಕಿ ಪಕ್ಕದ ಸೀಟಿಗೆ ಆತುಕೊಂಡ ನನಗೆ ಕಂಕುಳದ ಹತ್ತಿರ ಏನೋ ತಾಗಿದಂತಾಗಿ ನೋಡಿದ್ರೆ, ಹಿಂದಿನ ಸೀಟಿನಲ್ಲಿ ಕೂತ ಸಭ್ಯನಂತೆ ಕಾಣುತಿದ್ದ ಒಬ್ಬ ಕಿಟಕಿಯಿಂದ ರಮ್ಯ ಪ್ರಕೃತಿಯನ್ನು ನೋಡುತ್ತಿರುವಂತೆ ನಟಿಸುತ್ತಿದ್ದ, ಕೈ ಮಾತ್ರ ಕಾಮದೇವನ ಆಶಿರ್ವಾದ ಪಡೆದಂತೆ ಕೆಲಸ ಮಾಡಲು ರೆಡಿ ಆಗಿತ್ತು. ಅಲ್ಲಿ ತನಕ ಆದ ಹಲವು ಚಿಕ್ಕ ಪುಟ್ಟ ಕಿರುಕುಳಗಳು ನನ್ನ ಕಾಲೇಜ್ ಬ್ಯಾಗ್ ನಲ್ಲಿ ಸುವಾರು ಆಯುಧಗಳನ್ನೂ ಪೇರಿಸಿಬಿಟ್ಟಿದ್ದವು. ಪುಟ್ಟ ಬ್ಲೇಡು, ಪಿನ್ನು, ಶಾಯಿ ಪೆನ್ನು, ಶಾರ್ಪ್ ಮಾಡಿದ ಪೆನ್ಸಿಲ್…ಇವೆಲ್ಲ ನನ್ನ ಬ್ಯಾಗಿನಲ್ಲಿ ಯಾವಾಗಲು ರೆಡಿ ನನ್ನ ರಕ್ಷಣೆಗಾಗಿ. ನಾನು ಏನು ಗೊತ್ತಿಲ್ಲದಂತೆ ನಟಿಸಿ ಮೆತ್ತಗೆ ಬ್ಲೆಡ್ ತೆಗೆದು ನನ್ನ ಕಂಕುಳದ ಹತ್ತಿರ ಬಂದ ಬೆರಳುಗಳಿಗೆ ಗೀರಿ ಬಿಟ್ಟೆ. ಆತ ಕೂಗಲೂ ಇಲ್ಲ ಜಗಳವನ್ನೂ ಮಾಡಲಿಲ್ಲ, ಸಗಣಿ ತಿಂದ ಬಾಯಿ, ಮಾತಾದರೂ ಹೇಗೆ ಆಡಿಯಾನು?

metoo 3
© and permission Satish Acharya

ಇನ್ನೊಬ್ಬ ಮುದುಕನಿದ್ದ, ಧಾರವಾಡದ ಸಿಬಿಟಿ ನಿಲ್ದಾಣದಿಂದ ಕೆಸಿಡಿ ನಿಲ್ದಾಣದವರೆಗೆ ಹೋಗುವತನಕ ಅದೆಷ್ಟು ಲೀಲೆ ತೋರಿಸ್ತಿದ್ದ, ಕೇಳಬೇಡಿ! ನಾಲ್ಕು ಅಡಿಯೂ ಇರಲಿಕ್ಕಿಲ್ಲ, ಹೆಣ್ಣುಮಕ್ಕಳ ಮಧ್ಯ ಸೇರಿಕೊಂಡು ಸಿಕ್ಕ ಸಿಕ್ಕವರಿಗೆ ತನ್ನ ಮರ್ಮಾಂಗ ತಾಗಿಸುತ್ತಾ ನಿಲ್ಲುತ್ತಿದ್ದ. ಎಲ್ಲರಿಗೂ ಕಿರಿಕಿರಿ, ಯಾರೂ ಮಾತಾಡರು, ಪ್ರತಿಭಟಿಸಿದರೂ ಏನು ಮಾಡಿದ ಅಂತ ಹೇಳೋದು? ಆ ದಿನ ನನ್ನ ಗೆಳತಿ ಧೈರ್ಯ ಮಾಡಿಯೇ ಬಿಟ್ಟಳು, ಆತ ನಮ್ಮ ನಡುವೆ ಸೇರಿಕೊಂಡ, ಅವನಿಗೆ ಎದುರುಬದುರಾಗಿ ನಿಂತು ಕೊಂಡಳು. ಜುಬಲಿ ಸರ್ಕಲ್ ಸಿಗಲ್ ಬ್ರೇಕ್ ಹಾಕಿದಾಗ, ಅವಳು ತನ್ನೆಲ್ಲ ಬಲ ಸೇರಿಸಿ ಮಂಡಿಯಿಂದ ಆತನ ಆ ವಿಕೃತ ಅಂಗಕ್ಕೆ ಒದ್ದು ಬಿಟ್ಟಳು. ಆತ ಅಯ್ಯೋ ಅಂದು ಅಲ್ಲೇ ಕುಳಿತು ಬಿಟ್ಟಿದ್ದ. `ಸಾರೀ, ನೀರ್ ಬೇಕಾ’, ಅಂತ ಕೇಳಿದ್ದೆವು. ಕಂಡೆಕ್ಟರ್ ಏನಾಯಿತು ಅಂತ ಕೇಳಿದ್ರೆ, ಅವನಿಗಾದ್ರು ಎಲ್ಲಿತ್ತು ಬಾಯಿ? ಇದು ನಮಗಂದು ಸಿಕ್ಕ ಚಿಕ್ಕ ಗೆಲುವು.

ಇನ್ನೊಂದು ಅತಿ ಕೆಟ್ಟ ಅನುಭವ ನನ್ನ ತಂಗಿಯಂತಿದ್ದ ಗೆಳತಿಯದು. ಕಾಲೇಜಿನಿಂದ ಯಾವುದೊ ಕ್ಯಾಂಪಿಗೆ ಹೋದ ಹುಡುಗಿ, ನಮ್ಮ ಕಲಾತಂಡದ ಲೀಡ್ ಡ್ಯಾನ್ಸರ್ ಅವಳು, ಒಮ್ಮೆಲೇ ಆಕೆ ಎಲ್ಲದರಿಂದ ದೂರ ಆಗಿಬಿಟ್ಟಳು. ಮೂತ್ರಕೋಶದ ಕಲ್ಲು ಎಂದು ಅವಳಿಗೆ ಶತ್ರಚಿಕಿತ್ಸೆ ಮಾಡಬೇಕಾಗಿದೆ, ಅದಕ್ಕೆ ಅವಳು ಇನ್ನು ಮುಂದೆ ಎಲ್ಲಿಯೂ ಬರುವುದಿಲ್ಲ ಅಂತ ಅವರಮ್ಮ ನಮ್ಮ ಮುಖಕ್ಕೆ ಬಾಗಿಲು ಹಾಕಿದ್ದರು. ಅಪ್ಪನಿಲ್ಲದ ಹುಡುಗಿ, ನನ್ನ ಮನಸಿಗೆ ತುಂಬಾ ಹತ್ತಿರ. ನನ್ನ ಮದುವೆಗೂ ಬರಲಿಲ್ಲ ಅವಳು. ಆಮೇಲೆ ಅವರಿವರಿಂದ ಕೇಳಿ ಬಂದಿದ್ದು, ಕ್ಯಾಂಪಿನಲ್ಲಿ ಸಾಫ್ಟ್ ಡ್ರಿಂಕ್ಸ್-ನಲ್ಲಿ ಏನೋ ಹಾಕಿ, ಅವಳ ಬಲಾತ್ಕಾರ ಆಗಿತ್ತು, ಮತ್ತು ಆ ಹುಡುಗನ ಮನೆಯವರೇ ಆಕೆಯ ವಿದ್ಯಾಭ್ಯಾಸದ ಸಕಲ ಖರ್ಚನ್ನು ಭರಿಸಿ ಮದುವೆಯು ಆಗುವುದು ಅನ್ನೋದು ತೀರ್ಮಾನ ಆಗಿತ್ತಂತೆ. ಬಲಾತ್ಕಾರ ಮಾಡಿಸಿಕೊಂಡ ಹುಡುಗನೊಂದಿಗೆ ಸಂಸಾರ ಮಾಡುವ ಅವಳನ್ನು ನೋಡಿ ಬೇಸರ ಆಗಿದ್ದು ಒಂದೆಡೆ, ಪಾದರಸದ ಚುರುಕು ಹುಡುಗಿ ಏನು ಇಲ್ಲದೆ ಪರದೆಯ ಹಿಂದೆ ಉಳಿಯಬೇಕಾಯಿತಲ್ಲ ಅನ್ನೋದು ಇನ್ನೊಂದು ನೋವು, ಆ ಮದುವೆ ಆಕೆಗೆ ಮತ್ತೆರಡು ಮಕ್ಕಳು ಮತ್ತು ನಾಲ್ಕು ವರುಷಕ್ಕೆ ವಿಚ್ಛೇದನ ತಂದು ಕೊಟ್ಟಿದ್ದು ಇನ್ನೊಂದು ದುರಂತ.

ಇನ್ನು ಬೈಕ್ ಸವಾರಿಗರ ಚೇಷ್ಟೆ ಒಂದೆರಡಲ್ಲ, ನಡು ದಾರೀಲಿ ಹೋಗೋವಾಗ `ಬರ್ತೀಯ?` ಅನ್ನೋದು `ನಂಬರು ಕೊಡು’ ಅನ್ನೋದು, ಆಗ ನಮ್ಮದು ಸಿದ್ಧ ಉತ್ತರ, `ಚಪ್ಪಲಿದ?` ಅಂತ. ಕೆಲವೊಂದೆಡೆ ನಿರ್ಜನ ಪ್ರದೇಶದಲ್ಲಿ ತಮ್ಮ ಜನನಾಂಗ ತೋರಿಸಿ ಏನೋ ಸಾಧನೆ ಮಾಡಿದವರಂತೆ ಪೋಸ್ ಕೊಡುವುದು. ನಮ್ಮ ಮುಖದ ಮೇಲೆ ಕಸಿವಿಸಿ ಕಾಣಿಸಿತೋ, ನಾವು ತಲೆ ಕೆಳಗೆ ಹಾಕಿದ್ವೋ, ಅಷ್ಟರಮಟ್ಟಿಗೆ ಅವನ ಅತೃಪ್ತ ಆತ್ಮ ತೃಪ್ತ (ಈ ಥರದ ಘಟನೆಗಳನ್ನು ನಾನು-ನನ್ನಂತ ಹಲವಾರು ವಿದ್ಯಾರ್ಥಿನಿಯರು ಅನುಭವಿಸಿದ್ದು, ಧಾರವಾಡ ವಿಶ್ವವಿದ್ಯಾಲಯದ ಲೈಬ್ರರಿಗೆ ಹೋಗುವ ದಾರಿಯಲ್ಲಿ ಅಕ್ಕಪಕ್ಕ ಕಾಡಿರುವುದರಿಂದ ಇಂಥ ಚೇಷ್ಟೆಗಳನ್ನು ಆರಾಮಾಗಿ ನಡೆಸುತ್ತಿದ್ದರು). ವಿಶ್ವ ವಿದ್ಯಾಲಯದ ವರ್ಕಿಂಗ್ ವುಮೆನ್ ಹಾಸ್ಟೆಲ್, ಮತ್ತಿತರ ಮಹಿಳಾ ವಸತಿ ನಿಲಯದ ಬಾತ್-ರೂಂಗಳ ಕಿಡಕಿಯಲ್ಲಿ ಹಣಕುವುದು, ಇನ್ನು ಜಾರಿಯಲ್ಲಿದೆ ಅನ್ನುವುದನ್ನು ಕೇಳಿದ್ದೇನೆ. ಆದರೆ ಈ ಸಮಸ್ಯೆಗೆ ಪರಿಹಾರ ಎಂದೋ?

ಇಂಥಹುದೇ ಇನ್ನೊಂದು ಘಟನೆ ನಾನು ಯುವಜನ ಮೇಳಕ್ಕೆ ಹೋದಾಗ ನಡೆದಿತ್ತು. ಕಾರ್ಯಕ್ರಮದ ಮಧ್ಯ ನಮ್ಮ ಧಿರಿಸು ಬದಲಾವಣೆಗೆ ಶಾಲೆಯ ಕೊಠಡಿ ನೀಡಲಾಗಿತ್ತು. ಅದರ ಕಿಡಕಿಸಂದಿಯಿಂದ ಬಟ್ಟೆ ಬದಲಾಯಿಸುವುದನ್ನು ನೋಡುತ್ತಿದ್ದ ಇಬ್ಬರು ಯುವಕರು ಸಿಕ್ಕಿ ಬಿಳೋ ಸಮಯದಲ್ಲಿ ಅದೆಂಥ ಮಾಯಕದಲ್ಲಿ ಮಾಯವಾಗಿದ್ದರು.

ಆ ದಿನ ಸಂಜೆ ಕಾಲೇಜಿನಿಂದ ವಾಪಾಸ್ ಅಗೋ ಹೊತ್ತಿಗೆ ಕತ್ತಲಾಗಿತ್ತು. ಬಸ್ಸು ಅಷ್ಟೊಂದು ರಶ್ ಕೂಡ ಇರಲಿಲ್ಲ. ರೂಢಿಯಂತೆ ನಾನು ಕಿಡಕಿಯ ಪಕ್ಕ ಕುಳಿತೆ. ಅಲ್ಲೆಲ್ಲೋ ಹಿಂದಿನ ಸೀಟಿನಲ್ಲಿ ಕೂತಿದ್ದ ಒಬ್ಬ ಐನಾತಿ ನನ್ನ ಪಕ್ಕ ಬಂದು ಕುಳಿತ, ಅಷ್ಟಲ್ಲದೇ ಮಾತಾಡಲು ಪ್ರಯತ್ನಿಸುತ್ತಿದ್ದ, ತಿನ್ನಲು ಖರ್ಜೂರ ಕೊಟ್ಟ. ಅದೆಷ್ಟು ಬೇಡ ಅಂದರೂ ತಗೋಳಿ ತಗೋಳಿ ಅಂದು ಒತ್ತಾಯ ಮಾಡಿದ. ಅವನ ಕೈಯ್ಯಿಂದ ತಗೊಂಡು ಅವನೆದುರಿಗೆ ಹೊರಗೆ ಎಸೆದೆ. ಬಸ್ಸು ಚಲಿಸತೊಡಗಿತು. ಮತ್ತೆ ಅದೇ ನಿದ್ದೆಯ ನಾಟಕ. ಅವನ ಕೈ ಬಾಲವಾಡಿ ಮಕ್ಕಳು ಒಂದೋ ಎರಡೋ ಹೇಳುವಾಗ ಕೈ ಕಟ್ಟುವಂತೆ ಮಾಡಿ ಕುಳಿತ, ಅವನ ಎಡಗೈ ನನ್ನ ಮೈ ಮುಟ್ಟುತಿತ್ತು. ಎರಡು ಬಾರಿ ಎಚ್ಚರಿಸಿದೆ, ಅವನು ನಿದ್ದೆ ನಟಿಸಲು ಶುರು ಮಾಡಿದ. ಅವನನ್ನು ಎಬ್ಬಿಸಲು ಉಳಿದದ್ದು ಒಂದೇ ದಾರಿ. ಅವನ ಕೈಯನ್ನು ಜೋರಾಗಿ ಎಳೆದು ಎಡಗೈಯ್ಯಿಂದ ಅವನ ಕೆನ್ನೆಗೆ ಬಾರಿಸಿದೆ. ನಂತರ ಅಷ್ಟು ಓವರ್ ರಿಯಾಕ್ಟ್ ಮಾಡಬಾರದಿತ್ತು ಅನಿಸಿತ್ತಾದರೂ ನನಗೆ ಇಂಥವರ ಮೇಲಿದ್ದ ಆ ಅಸಹನೆ ಸಿಟ್ಟು ಎಲ್ಲ ಒಮ್ಮೆಲೇ ಹೊರ ಬಂದಿತ್ತು.

metoo 4
© and permission Satish Acharya

ಇವು ಕೆಲವು ಕಹಿ ನೆನಪುಗಳು, ಇವನ್ನು ನಾವು ನಿರ್ಲಕ್ಷ ಮಾಡಿಬಿಡುತ್ತೇವೆ. ಒಂದು ತಾಸಿನ ಪ್ರಯಾಣದಲ್ಲಿ ಅನುಭವಿಸಿದ ಆ ಅಸಹನೀಯ ಅನುಭವವನ್ನು ಮರೆತು ನಮ್ಮ ದಿನಚರಿಯಲ್ಲಿ ಮಗ್ನರಾಗುತ್ತೇವೆ. ಆದರೆ ಹಿಂಸೆಯ ಎಳೆ ಅದೆಲ್ಲೋ ಉಳಿದುಬಿಡುತ್ತದೆ, ಇಚ್ಛೆ ಇಲ್ಲದೆ ಕೈಹಿಡಿದ ಪತಿಗೆ ನಮ್ಮ ಮೈ ಮುಟ್ಟುವ ಹಕ್ಕು ಇಲ್ಲದಿರುವಾಗ, ಯಾರೋ ನಮ್ಮನ್ನು ಕಾಲೊರಸಿನಂತೆ ಬಳಸಿದರೆ ಅದನ್ನು ಸಹಿಸಿಕೊಳ್ಳಲು ನಾವು ಅವರ ಅಮ್ಮ ಅಕ್ಕ ತಂಗಿಯರಲ್ಲ. ಇಷ್ಟಕ್ಕೂ ಅವರ ಅಕ್ಕ ತಂಗಿ ತಾಯಿಯೊಂದಿಗೆ ಹೀಗೆ ಘಟಿಸಿದರೆ ಅವರು ಆನಂದ ಅನುಭವಿಸುತ್ತಾರೋ ಅಥವಾ ಕೋಪದಲ್ಲಿ ಪ್ರತಿಭಟಿಸುತ್ತರೋ?

ಈ ಥರದ ವರ್ತನೆ ಮಾಡುವ ಗಂಡಸರಿಗೆ ಅಂಥ ಗಂಡಸರನ್ನು ಉತ್ಪತ್ತಿ ಮಾಡುವ ಸಮಾಜಕ್ಕೆ ಚಿಕಿತ್ಸೆಯ ಅಗತ್ಯವಿದೆ. ಜೊತೆಗೆ ಇಂಥ ಘಟನೆಗಳು ಮನೆ ಹೆಣ್ಣುಮಕ್ಕಳೊಂದಿಗೆ ಘಟಿಸಿದಾಗ ಅವರಿಗೆ ಧೈರ್ಯ ಹೇಳಿ, ಪ್ರತಿಭಟಿಸುವ ಗುಣ ಬೆಳೆಸಬೇಕಾದ ಜವಾಬ್ದಾರಿಯೂ ಇದೆ ಪೋಷಕರಿಗೆ ಮತ್ತು ಸಮಾಜಕ್ಕೆ.

ಇವೆಲ್ಲ ಘಟಿಸಿ ಹಲವು ವರುಷಗಳಾಗಿವೆ. ಇಂದಿಗೂ ನನ್ನನ್ನು ಸ್ನೇಹಿತರು `ಕಿತ್ತೂರ್ ಚನ್ನಮ್ಮ` ಎಂದು ತಮಾಷೆ ಮಾಡುವುದುಂಟು.

ಈ ಲೇಖನಕ್ಕೆ ಅಂತ್ಯ, ಉಪಸಂಹಾರ ಇಲ್ಲ. ಏಕೆಂದರೆ ಈ ಅನುಭವುಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ, ಮತ್ತೆ ಮತ್ತೆ ಇಂಥ ಪ್ರತಿಭಟನೆಗಳು ನಡೆಯುತ್ತವೆ. ಈ ಬಾರಿ ಹೊತ್ತಿದ #MeToo ಜಾಗೃತಿಯ ಕಿಡಿ ಮತ್ತಷ್ಟು ಪ್ರಜ್ವಲಿಸಿ ಇಂಥ ಘಟನೆಗಳು ಮತ್ತೆಂದೂ ಘಟಿಸದಿರಲಿ ಎಂಬ ಆಶಯದ ಹೊರತು ಹೇಳಲಿಕ್ಕೇನೂ ಇಲ್ಲ.

————————————————————————————————————–

 

19 thoughts on “`#MeToo ಎಂಬ ಹ್ಯಾಶ್-ಟ್ಯಾಗ್` – ಮುರಳಿ ಹತ್ವಾರ್ ಮತ್ತು ಅಮಿತಾ ರವಿಕಿರಣ ಬರೆದಿರುವ ಎರಡು ಲೇಖನಗಳು

  1. ಅಮಿತಾ ಹಾಗು ಮುರಳಿ ಅವರಿಗೆ,
    ಧನ್ಯವಾದಗಳು. ಇತ್ತೀಚಿಗೆ ಹೆಣ್ಣು ಮಕ್ಕಳು ,ಗೃಹಣಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಕುರಿತು ನೀವಿಬ್ಬರು ಬರೆದ ಸಮಂಜಸ ಲೇಖನಗಳು ತುಂಬಾ ಚೆನ್ನಾಗಿವೆ .ಪುರುಷರ ಮೇಲ್ಪಟ್ಟಿರುವ ( ಡೊಮಿನಿನ್ಸ್) ಈಗಿನ ಜಗತ್ತಿನಲ್ಲಿ ಹೆಣ್ಣುಮಕ್ಕಳು ತಾವು ಅನುಭವಿಸಿದ ಅತ್ಯಾಚಾರಗಳನ್ನು ಪ್ರತಿಭಟಿಸಿ ವಾರ್ತಾ ಪತ್ರಿಕೆಗಳಲ್ಲಿ ಬರೆಯುವದು ಕಠಿಣ
    ಕೆಲಸ. ಅವರೆಲ್ಲರ ಧ್ಯರ್ಯಕ್ಕೆ ನಾವು ತಲೆ ಬಾಗಬೇಕು. ಈ ರೀತಿ ತಪ್ಪು ಮಾಡಿದ ಗಂಡಸರಿಗೆ ಅರಬ ದೇಶಗಳಲ್ಲಿ ಮರಣ ದಂಡನ ಮಾಡುವದರಿಂದ ಅಲ್ಲಿ ಈ ಬಗೆಯ ಅತ್ಯಾಚಾರಗಳು ಕಡಿಮೆಯಾಗುತ್ತಿವೆ. ಕಠಿಣ ಶಿಕ್ಷೆ ಕೊಡುವದರಿಂದ ಯಿಂಥಾ ಅತ್ಯಾಚಾರಗಳು ಕಡಿಮೆಯಾಗುವದರಲ್ಲಿ ಸಂಶಯವಿಲ್ಲ.
    ಅರವಿಂದ ಕುಲ್ಕರ್ಣಿ

    Like

  2. ಮುರಳಿ ಹತ್ವಾರ ಮತ್ತು ಅಮಿತ ಅವರ ಮೊನಚಾದ ಲೇಖನಗಳನ್ನು ಓದಿ ನನ್ನ ಮನ ಶಾಲಾ ಕಾಲೇಜಿನ ದಿನಗಳತ್ತ ಓಡಿತು. ನಮ್ಮ ಭಾರತೀಯ ಸಮಾಜದಲ್ಲಿ ವಿಕೃತ ಮನದ ಗಂಡಸರು ಕೇವಲ ವಯಸ್ಸಿಗೆ ಬಂದ ಹೆಣ್ಣಿಮಕ್ಕಳನ್ನಷ್ಟೇ ಅಲ್ಲ, ಇನ್ನು ಪ್ರಾಥಮಿಕ ಶಾಲೆಯಲ್ಲಿ ಓದುವ ಹೆಣ್ಣು ಹಸುಳೆಗಳತ್ತಲೇ ತಮ್ಮ ಕಾಮುಕ ದೃಷ್ಟಿ ಹಾಯಿಸುತ್ತಿದ್ದ ದಿನಗಳ ನೆನಪಾಯಿತು. ವಿಕೃತ ಕಾಮುಕರಿಗೆ ಹೆಣ್ಣು ಅನ್ನುವುದಷ್ಟೇ ಸಾಕು. ಕಾಲೇಜಿಗೆ ನೆಡೆದು ಹೋಗುವ ಹುಡುಗಿಯರನ್ನು ಪಕ್ಕದಿಂದ ಬಂದು ಸೈಕಲ್ಲಿನಲ್ಲಿ ತಟ್ಟುವುದು, ಚಿವುಟುವುದು, ಹೀಗೆ ಹಲವು ಹತ್ತು ರೀತಿಯ ಅಸಹ್ಯವಾದ ಕೃತ್ಯಗಳನ್ನು ಎಸುಗುತ್ತಿದ್ದದ್ದು ಇನ್ನು ಮರೆತಿಲ್ಲ. ಕಡೆಗೆ ಇಂತಹ ತೊಂದರೆ ಅನುಭವಿಸಲಾಗದ ಹೆಣ್ಣುಮಕ್ಕಳು, ಕೈಯ್ಯಲ್ಲಿ ಪಿನ್ನುಗಳನ್ನಿಟ್ಟುಕೊಂಡು, ಅವರು ಹತ್ತಿರ ಬಂದಾಗ ಅದನ್ನು ಝಳಪಿಸಿ ತಮ್ಮ ರಕ್ಶಣೆಗೆ ಪ್ರಯತ್ನಿಸುತ್ತಿದ್ದ ಅಸಹಾಯಕ ಪರಿಸ್ಥಿತಿ ಕಣ್ಣಿಗೆ ಕಟ್ಟಿದಂತಿದೆ. ಇನ್ನು ದೊಡ್ಡ ಸಮಾರಂಭಗಳಲ್ಲಿ, ಉತ್ಸವ ಮೆರವಣಿಗೆ , ದಸರಾ ವಸ್ತುಪ್ರದರ್ಶನದ ನೂಕುನುಗ್ಗಲಲ್ಲಿ ಅನುಭವಿಸುತ್ತಿದ್ದ ಯಾತನೆ ಹೇಳಲು ಬಹಳ ತೊಂದರೆಯಾಗುತ್ತದೆ. ಏನೇ ಆಗಲಿ, ಕಡೆಗೊಮ್ಮೆ ಮಹಿಳೆಯರು ಇಂತಹ ಹೇಯಕರ ಕೃತ್ಯಗಳನ್ನು ಪ್ರತಿಭಟಿಸಿ ತಮ್ಮ ಧ್ವನಿ ಎತ್ತಿರುವುದು ನಿಜಕ್ಕೂ ಒಂದು ಉತ್ತಮವಾದ ಪ್ರಯತ್ನ. ನಮ್ಮ ದೇಶದ ಪ್ರತಿಯೊಂದು ಹೆಣ್ಣಿನ ಬಾಳ ಪುಟದಲ್ಲೂ ಒಂದಲ್ಲ ಒಂದು ಇಂತಹ ಅನುಭವ ಇದ್ದೆ ಇರುತ್ತದೆ. ಅದನ್ನು ಹಂಚಿಕೊಳ್ಳಲು ಇಂತಹ ವೇದಿಕೆಯ ಅವಶ್ಯಕತೆಯಿದೆ. ಅನಿವಾಸಿ ಇಂತಹ ಪ್ರಯತ್ನ ನಡೆಸಿರುವುದು ನಿಜಕ್ಕೂ ಶ್ಲಾಘನೀಯ.
    ಉಮಾ ವೆಂಕಟೇಶ್

    Liked by 1 person

  3. ಮುರಳಿ ಹತ್ವರ್ ರವರೆ , ನಿಮ್ಮ ಲೇಖನ ತುಂಬಾ ಅರ್ತ ಪೂರ್ಣವಾಗಿ ಮೂಡಿಬಂದಿದೆ. ವಿಶಯದ ಸರಾಗ ಚ್ಹಲನೆ ಮತ್ತು ಸಲುಗಳ ಸಂಯೋಜನೆ ರುತ್ತಿಪರ ಕುಶಲತೆ ಯನ್ನು ಬಿಂಬಿಸುತ್ತಿದೆ👏👏. ಅಮಿತ ರವರೆ ಸಾಹಿತ್ಯ ಕ್ಶೆತ್ರಕ್ಕೆ ತಾವು ಮಗು ಎನ್ನುವ ಮತನ್ನು ತಾವೇ ಸುಳ್ಳು ಮಾಡಿದ್ದೀರ. ಅಭಿನಂದನೆಗಳು.

    Like

  4. ಮುರಳಿ ಹತ್ಯಾರರು ಹೇಳಿರುವ ಹಾಗೆ ನಮ್ಮ ಸಮಾಜಕ್ಕೆ ಬೇಕಿರುವುದು ”ರಾವಣ ರೇಖೆ”.
    ಶತಮಾನಗಳ ಶೋಷಣೆಗೆ ವಿದಾಯ ಹೇಳುವ ಪ್ರಯತ್ನದ ಈ ” Me Too” ಗೆ ಹಾರ್ದಿಕ ಸುಸ್ವಾಗತ.
    ವಾಟ್ಸ್ ಅಪ್ ಗಳಲ್ಲಿ ಬಹಳ ರೀತಿಯಲ್ಲಿ ಇದನ್ನು ಅಣಕಿಸುವ ಪ್ರಯತ್ನ ನೆಡೆಯುತ್ತಿರುವುದು ವಿಷಾದನೀಯ.
    ಗಾoಧೀಜಿಯವರ ಬಗೆಗೆ ಬರೆದ ಟೀಕೆಗೆ ಪುರಾವೆ ಉoಟೆ?

    ಅಮಿತಾರವರ ಅನುಭವಗಳು ಸತ್ಯದ ಮಾತುಗಳೆoದು ಏಲ್ಲಾ ಭಾರತೀಯ ಮಹಿಳೆಯರು ಒಪ್ಪುತ್ತಾರೆ.
    ನನಗೆ ಅಥವಾ ನಮಗೆ, ಈ ಕೆಟ್ಟ ಗoಡಸರನ್ನು ನೇರವಾಗಿ ಎದುರಿಸುವ ಧೈರ್ಯ ಇರಲಿಲ್ಲವೆoದು ನೋವಾಗುತ್ತದೆ.
    very opt and well written article by both writers.

    Like

  5. ಇಬ್ಬರು ಬರಹಗಾರರಿಂದ ಒಟ್ಟಿಗೆ ಬರಹವನ್ನು ಬರೆಸಿ ಒತ್ತಟ್ಟಿಗೆ ಪೋಸ್ಟ್ ಮಾಡಿದ ಸಂಪಾದಕರಿಗೆ ಅಭಿನಂದನೆಗಳು. ಈ ಲೇಖನಗಳನ್ನು ಎರಡೆರಡು ಬಾರಿ ಓದಿದೆ.

    ಮುರಳಿಯವರ ಬರಹದ ಮೊನಚು ತುಂಬಾ ಸೊಗಸಾಗಿದೆ ಅಂತೆಯೇ ಅಮಿತಾರ ಪ್ರತಿಶತ ನಡೆಯುವ ಸತ್ಯದ ದಾಖಲೆಗಳು ಕೂಡ. ಮಿ ಟೂ ತೆರೆದಿಟ್ಟಿರುವುದು ಸಮುದ್ರೋಪಾದಿ ಜಗತ್ತನ್ನೆಲ್ಲ ಆವರಿಸಿರುವ ಸಮಸ್ಯೆಯನ್ನು.

    ಎಲ್ಲ ಹಾರ್ಮೋನುಗಳಿಗೂ ಒಂದಂತೂ ಅರ್ಥವಾಗುತ್ತದೆ. ಅದು ನೋವು, ಶಿಕ್ಷೆ, ಮಾನಹಾನಿ ಮತ್ತು ದಂಡ !! ಅದನ್ನು ಮಿ ಟೂ ಅಭಿಯಾನ ಕಾನೂನಿನ ರೂಪದಲ್ಲಿ ತರುವುದಾದರೆ ಬಹುತೇಕ ’ವೈ ’ ಸಮಸ್ಯೆಗಳು ಕಾಣೆಯಾಗುತ್ತವೆ !

    ಯಾಕೆಂದರೆ ಬೆಳಕಿಗೆ ಬಂದಿರುವ ಎಲ್ಲ ಸಮಸ್ಯೆಗಳಲ್ಲಿಯೂ ಒಂದು ಸಾಮಾನ್ಯ ಅಂಶವಿದೆ. ಅದೆಂದರೆ ಒಬ್ಬನೇ ಗಂಡಸು ಹಲವರು ಹೆಂಗಸರನ್ನು ಶೋಷಿಸಿರುವುದು ! ಒಬ್ಬನೇ ಬೀದಿ ಕಾಮಣ್ಣ ಸಾವಿರಾರು ಹೆಂಗಸರಿಗೆ ಕಿರುಕುಳ ಕೊಡುವುದನ್ನು ಅಮಿತಾರ ಬರಹ ಕೂಡ ಬೆಂಬಲಿಸುತ್ತದೆ. ಹಾಗಾಗಿ ಈ ದೌರ್ಬಲ್ಯವನ್ನು ಎಲ್ಲ ಗಂಡಸರಿಗೆ ಒಂದೇ ರೀತಿಯಲ್ಲಿ ಅನ್ವಯಿಸಲಾಗದು.

    ಹೆಚ್ಚು ಬಲವಿರುವ ಗಂಡಿಗೆ ಇರುವುದು ದೈಹಿಕ ದೌರ್ಬಲ್ಯ ಮಾತ್ರವಲ್ಲ ಹೆಣ್ಣಿನ ಮುಂದೆ ಆ ಬಲವನ್ನು ಪ್ರದರ್ಶಿಸುವ, ಮುರಳಿಯವರು ಹೇಳುವಂತೆ ಹೆಣ್ಣನ್ನು ಕಂಟ್ರೋಲ್ ಮಾಡುವ ಸ್ವಭಾವ. ಹಿಂಸೆ, ದ್ವೇಷ, ಕಳ್ಳತನ , ಕೊಲೆ ಮಾಡುವ ಮನುಜನ ಮೂಲಭೂತ ದೌರ್ಬಲ್ಯಗಳನ್ನು ಕಾನೂನು ಒಂದು ಹದ್ದು ಬಸ್ತಿನಲ್ಲಿಡಬಲ್ಲದಾದರೆ ಈ ’ವೈ” ದೌರ್ಬಲ್ಯ ವನ್ನು ಕೂಡ ಹತ್ತಿಡಬಹುದು. ಮಿ ಟೂ ಚಳುವಳಿಯಿಂದ ಹೊಸ ಕಾನೂನು ಗಳು ಹುಟ್ಟಲಿ. ಜಗತ್ತಿನಲ್ಲಿ ಇಬ್ಬರು ವ್ಯಕ್ತಿಗಳ ಸಮ್ಮತ ಸೆಕ್ಸ್ ಮಾತ್ರ ಉಳಿಯಲಿ.

    ಮುರಳಿಯವರೇ ಗಾಂಧೀಜಿಯವರ ಬಗ್ಗೆ ಬರೆದದ್ದು ದಾಖಲಿತ ಮಾಹಿತಿಯೋ ಅಥವಾ ಉತ್ಪ್ರೇಕ್ಷೆಯೋ? ನಡೆದಾಡಲು ಹೆಂಗಸರ ಹೆಗಲು ಕೇಳಿದ್ದು ಮಾತ್ರ ನನಗೆ ತಿಳಿದಿರುವ ವಿಚಾರ.

    Like

    • ಪ್ರೇಮಲತಾ ಅವರೇ,

      ಲೇಖನಗಳನ್ನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಗಾಂಧೀಜಿಯವರ ಬಗ್ಗೆ ಬರೆದ ಸಾಲುಗಳು ಈಗೀಗ ಹೊರಬರುತ್ತಿರುವ ಸತ್ಯ ವಿಚಾರಗಳು. ಇತ್ತೀಚಿಗೆ ಗಾರ್ಡಿಯನ್ ಪತ್ರಿಕೆಯಲ್ಲಿ ಪ್ರಕಟವಾದ ಗಾಂಧೀಜಿಯ ‘ನಗ್ನ ಸತ್ಯ’ದ ಲೇಖನದ ಲಿಂಕ್: https://www.theguardian.com/commentisfree/2018/oct/01/gandhi-celibacy-test-naked-women

      Like

      • ನಿಮ್ಮ ಲಿಂಕನ್ನು ಓದಿದೆ. ನೀವು ಗಾಂದೀಜಿಯ ಹೆಸರನು ತೆಗೆದುಕೊಂಡ ಕಾರಣ ಬೇರೆಯೆಂದು ಗೊತ್ತು. ಅದನ್ನು ಹೊರತು ಪಡಿಸಿ ಇದನ್ನು ಬರೆಯುತ್ತಿರುವೆ.
        ಇಬ್ಬರು ಹೆಂಡಿರ ಶಿವ, ನೂರಾರು ಗೋಪಿಯರಿದ್ದ ಕೃಷ್ಣ, ಹಲವು ಹೆಂಡತಿಯರಿದ್ದ ವಿಷ್ಣು-ಇವರನ್ನೆಲ್ಲ ದೇವರೆಂದು ನಂಬಿ ಗೋಳಾಡುವ ದೇಶ ನಮ್ಮದು. ಅವರದ್ದೆಲ್ಲ ಶೃಂಗಾರ ಲೀಲೆ !
        ಹೆಂಗಸು ಹೋದರೆ ಬ್ರಂಹಚಾರಿ ಅಯ್ಯಪ್ಪನ ಕೌಪೀನ ಬಿದ್ದು ಹೋಗುತ್ತದೆ ಎಂದು ಕೂಡ ನಂಬಿದ್ದ ಜನರ ಕಣ್ತೆರೆಸಲು ಸಂವಿಧಾನದ ಸಹಾಯ ಬೇಕಾಯ್ತು. ಕಾನೂನು ಬರಬೇಕಾಯ್ತು. ಯೇಸು ಹೆಂಗಸರನ್ನು ಮುಟ್ಟುತ್ತಿದ್ದುದೇ ಬೇರೆ ಅರ್ಥದಲ್ಲಿ ಎಂದು ಬರೆವವರ ಪಂಥವೂ ಮುಂದೆ ಹುಟ್ಟಬಹುದು.

        ಸಾಮಾನ್ಯ ಮನುಷ್ಯನಾಗಿ ಇಡೀ ದೇಶದಲ್ಲಿ ಯಾರೂ ಮಾಡಲಾಗದ ಪರಮೋಚ್ಛ ತ್ಯಾಗಗಳನ್ನು , ಕೆಲಸಗಳನ್ನು ಸಾಧಿಸಿದ ಗಾಂಧೀಜಿ ಸತ್ತ ಇಷ್ಟು ವರ್ಷಗಳ ನಂತರ, ಯಾವ ಹೆಣ್ಣನ್ನೂ ತನ್ನ ಗಂಡಸ್ತನದ ಅಥವಾ ಅಧಿಕಾರದಿಂದ ಸಂಭೋಗಿಸದ ಗಾಂಧೀಜಿ ತಪ್ಪು ,ಒಪ್ಪುಗಳ ಬಗ್ಗೆ ಬರೆವ, ಬರೆದು ತಮ್ಮ ಪ್ರಸಾರ, ಪ್ರಚಾರ, ಆದಾಯಗಳನ್ನು ಹೆಚ್ಚಿಸಿಕೊಳ್ಳುವವರ ಒಂದು ಪಂಥವೇ ಹುಟ್ಟಿಕೊಂಡಿದೆ! ಇಂತವರಿಗೆ ನಾಚಿಕೆಯಾಗಬೇಕು.

        ಇದು ಹೇಗೆಂದರೆ ಯಾವುದೋ ದರಿದ್ರವಾಗಿ ೨೪ ಗಂಟೆ ತಪ್ಪು ತಪ್ಪೇ ಮಾಹಿತಿ ನೀಡಿ, ತಪ್ಪು ತಪ್ಪು ಕನ್ನಡದಲ್ಲಿ ಬಡ ಬಡಾಯಿಸುವ ಟಿ.ವಿ. ಅಥವಾ ತಪ್ಪು ಮುದ್ರಿಸುವ ಪತ್ರಿಕೆಗಳು ಯಾವನ್ನೂ ತಿದ್ದದೆ, ೫೦ ವರ್ಷ ಉತ್ಕೃಷ್ಟವಾಗಿ ಬರೆದ ಭೈರಪ್ಪನವರು ತಮ್ಮ ಕೊನೆಯ ಕಾದಂಬರಿಯಲ್ಲಿ ಹೆಂಗಸಿಗೆ ಅವಮಾನ ಮಾಡಿದರು ಎಂದು ಧರಣಿ ಹೂಡಿದಂತೆ.
        ಬಲವಂತವಾಗಿ ಅತ್ಯಾಚಾರ ಮಾಡಿದ ಎಂದು ಹೆಂಗಸರು ನ್ಯಾಯ ಬೇಡುತ್ತಿರುವಾಗ, ಗಾಂಧೀಜಿಯವರ ಗಮನಕ್ಕಾಗಿ ಹೆಂಗಸರು ತಾವಾಗೇ ಮುಗಿಬೀಳುತ್ತಿದ್ದರು ಹಾಗಾಗಿ ಗಾಂಧೀಜಿಯವರ ನಡವಳಿಕೆ ಸರಿಯಿರಲಿಲ್ಲ ಎಂದು ದೂರು ಸಲ್ಲಿಸಿದ ಹಾಗೆ !!

        Like

        • ಆದರೂ ತಮಗಿಂತ ೬೦ವರ್ಷ ಸಣ್ಣ ಪ್ರಾಯದ ಹೆಣ್ಣು ಮಕ್ಕಳ ಭಾವನೆಗಳ ಲೆಕ್ಕವಿಡದೆ, ಅದರಲ್ಲೂ ತನ್ನ ಸಂಬಂಧಿಗಳನ್ನ, ತನ್ನ ಹೆಸರಿನ ಅಧಿಕಾರದಿಂದ ಉಪಯೋಗಿಸಿಕೊಂಡದ್ದನ್ನ ಎಂದಾದರೂ ಪ್ರಶ್ನಿಸಬೇಕಲ್ಲವೇ? ಹತ್ತು-ಹದಿನೈದು ವರ್ಷಗಳ ಹಿಂದೆ ನಡೆದದ್ದನ್ನ ಇಂದು #meetoo ಎನ್ನಬಹುದಾದರೆ, ೫೦ ವರ್ಷಗಳ ಅಂಕೆ ಏಕೆ? ೮೦೦ ವರ್ಷಕ್ಕೂ ಹಳೆಯ ಅಯ್ಯಪ್ಪ ತನ್ನ ಬ್ರಹ್ಮಚರ್ಯಕ್ಕೆ ಧಕ್ಕೆ ಎಂದು ಹೆಂಗಸರನ್ನು ದೂರ ಇಟ್ಟಿದ್ದು ತಪ್ಪೆನ್ನುವದಾದರೆ, ತಾನೊಬ್ಬ ದೊಡ್ಡ ಸನ್ಯಾಸಿ ಎಂದು ತೋರಿಸಿಕೊಳ್ಳಲು ಹರೆಯದ ಹೆಣ್ಣುಗಳ ಬತ್ತಲಾಗಿಸಿದ ಗಾಂದೀಜಿಯನ್ನ ಪ್ರಶ್ನಿಸಬಾರದೇಕೆ? – ಸುಲಭವಾಗಿ ಸಿಗುವ ಸಂಭಂದಿಗಳೇ ಹೊಂಚು ಹಾಕುವ ಹಸುಮುಖದ ಹೆಬ್ಬುಲಿಗಳ ‘ಹಸಿವಿ’ನ ಆಹಾರ. ಗಾಂಧೀಜಿಯ ಮನಸ್ಥಿತಿಯಲ್ಲೂ, ಗಡ್ಡಾಫಿಯ, weinstein ಮತ್ತಿತರರ ಮನಸ್ಥಿತಿಯಲ್ಲೂ ವ್ಯತ್ಯಾಸವೇನಿಲ್ಲ – ಈ ವಿಚಾರದಲ್ಲಿ – ಎಂದು ನನ್ನ ಭಾವನೆ.

          ಇಂಗ್ಲೆಂಡಿನ ಜಿಮ್ಮಿ ಸವಿಲ್ಲ್ ಇತ್ಯಾದಿ ಇತ್ಯಾದಿಗಳ ಕರಾಮತ್ತುಗಳನ್ನ ಅವರು ಸಾಯುವವರೆಗೆ ಮುಚ್ಚಿಟ್ಟು ನಂತರ ಮೊಸಳೆ ಕಣ್ಣೀರು ಸುರಿಸಿದ ಕಥೆ ನಿಮಗೆ ಗೊತ್ತಿರಬಹುದು. ಹಾಗೆಯೇ, ಐರ್ಲ್ಯಾಂಡಿನ ಚರ್ಚುಗಳಲ್ಲಿ ೪೦-೫೦ ವರ್ಷಗಳ ಹಿಂದೆ ನಡೆದ ಘೋರ ದೌರ್ಜನ್ಯಗಳ ಕಥೆಗಳನ್ನು ಈಗೀಗ ಜನ ಧೈರ್ಯವಾಗಿ ಮಾತಾಡುತ್ತಿದ್ದಾರೆ – ಸಮಾಜವೂ ಅದನ್ನು ಸ್ವೀಕರಿಸುವ, ನಂಬುವ ಸ್ಥಿತಿಗೆ ಇನ್ನೂ ತುಂಬು ಮನಸ್ಸಿನಿಂದ ಬರಬೇಕಿದೆ.

          Like

  6. ಅಮಿತಾ ಮತ್ತು ಮುರಳಿ ಇಬ್ಬರಿಗೂ ತುಂಬು ಮನಸ್ಸಿನ ಧನ್ಯವಾದಗಳು. ಬರಹಗಳಯ ರಾಮಬಾಣದಂತಿವೆ.

    ಅಮಿತಾ ಅವರಿಗಾದ ಅನುಭವಗಳನ್ನು ತಾವೇ ಖುದ್ದಾಗಿ ಬರೆಯುವಾಗ ಅದನ್ನು ಮತ್ತೊಮ್ಮೆ ಅನುಭವಿಸಿದಂತೆ ಅನಿಸಿ ಹೇಸಿಗೆ ಅನಿಸಿ ಎಲ್ಲವನ್ನೂ ಬರೆಯಲಾಗದೇ ಬಿಟ್ಟಿದ್ದಾರೆ ಅನಿಸುವಂತಿದೆ. ಇದೇ ತರಹದ ಅನುಭವಗಳನ್ನು ನನ್ನ ಕಸಿನ್ಸ್-ಗಳಿಂದ ಕೇಳಿ ಬಲ್ಲೆ.

    ವಿಕ್ರಮ್ ಅವರ ಹತ್ಯಾರದಿಂದ ಝಳಪಿಸಿದ ಈ ಲೇಖನ ಸುಮಾರು ಆಯಾಮಗಳನ್ನು ಒಳಗೊಂಡಿದೆ.

    ಕೇಶವ

    Like

    • ಧನ್ಯವಾದ, ಕೇಶವ್. ನನಗೆ ಹೊಸ ಹೆಸರು ಕೊಡುವಷ್ಟು ನಿಮ್ಮನ್ನು ಈ #MeToo ಲೇಖನಗಳು ಆವರಿಸಿಕೊಂಡಿದ್ದು ಖುಷಿಯ ವಿಚಾರ!!!! ☺

      Liked by 1 person

  7. #Me too ಒಂದು ಸಮರೋಪಾದಿಯಲ್ಲಿ ಎಲ್ಲೆಡೆ ಒಂದು ಸಂಚಲನೆ ಯನ್ನುಂಟು ಮಾಡ್ತಿದೆ.ಇದು ಎಷ್ಟರಮಟ್ಟಿಗೆ ಸಹಾಯಕ ವೋ ದೇವರೇ ಬಲ್ಲ.ನನಗನಿಸೋಮಟ್ಟಿಗೆ ಬುದ್ಧೀಹೀನ, ವಿವೇಚನಾ ಹೀನ ಪಶುತ್ವ, ಮತ್ತು ವಿವೇಕವುಳ್ಳ , ವಿಶ್ಲೇಷಣಾತ್ಮಕ ದೃಷ್ಟಿಗಳ ಸಮ್ಮೇಳನ ಈ ಮಾನವ.ಯಾವಾಗ ವಿವೇಚನಾ ಹೀನ ತೆಯ ಕೈ ಮೇಲಾಗ್ತದೋ, ಈ ರೀತಿಯ ಪಶುತ್ವ ರಾರಾಜಿಸ್ತದೆ , ಸಾಮಾಜಿಕ ಆರೋಗ್ಯ ಹದಗೆಟ್ಟು ಹೋಗ್ತದೆ.ಮುರಳಿ ಹತ್ವಾರ್ ಅವರು ಮಾನಸಿಕ ನೆಲೆಗಟ್ಟಿನ ಮೇಲೆ ಈ ಕೃತಿ ವಿಶ್ಲೇಷಿಸಿದರೆ ಅಮಿತಾ ರವಿಕಿರಣ್ ಅವರು ಅನುಭವ ಗಳ ಬಿಚ್ಚಿಟ್ಟು ಎಲ್ಲ ಹೆಣ್ಣುಮಕ್ಕಳ ಅಳಲಿಗೆ ಧ್ವನಿಯಾಗಿದ್ದಾರೆ.ಪ್ರತಿ ಹೆಣ್ಣು ಇಂಥ ಪರಿಸ್ಥಿತಿ ಎದುರಿಸಿಯೇ ಇರ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.ಯಾವ ಕಾನೂನು, ವೇದಿಕೆ ಇದನ್ನು ಬದಲಿಸಲು ಎಷ್ಟು ಸಹಾಯಕ ಅಂದಾಜಿಲ್ಲ. ಆ ಮನಸ್ಸಿನ ಸ್ಥಿತಿ ಅವರೇ ಹತೋಟಿಗೆ ತರಕೋಬೇಕು.ಯಾವಾಗ ವಿಕೃತ ಮನಸ್ಸಿನ ಗಂಡು , ತಾನಾಗಿ ತನಗೇ ಒಂದು ಮಿತಿ ಹಾಕಿಕೊಳ್ಳೋದಿಲ್ಲವೋ ಅಲ್ಲಿ ವರೆಗೆ ಇದು ಮುಂದುವರೀತಾನೇ ಇರ್ತದೆ.ಮುರಳಿಯವರು ಹೇಳುವಂತೆ ” ರಾವಣರೇಖೆ”ಯ ದಾರಿ ಕಾಯೋಣ ಅಮಿತಾ ಅವರ ಆಶಯದ ಬೆಳಕಿನಲ್ಲಿ. ಈ ಸಾಮಾಜಿಕ ಪಿಡುಗಿನ ಬಗ್ಗೆ ಬೆಳಕು ಚೆಲ್ಲುವ ಬರಹಗಳ ಇಬ್ಬರೂ ಬರಹಗಾರರಿಗೆ ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Like

  8. ಅಮಿತಾ ರವಿಕಿರಣ್ ಅವರೇ,

    ನಿಮ್ಮ ಮನದ ಮಾತುಗಳು, ತುಂಬಾ ಜನ ಇದೂ ನಮ್ಮ ಅನುಭವವೇ ಎನ್ನುವ ಹಾಗಿದೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ಮುರಳಿ ಹತ್ವಾರ್

    Like

  9. ಈ ಹಾಶ್ ಟ್ಯಾಗ ಬಂದು ಮಹಿಳೆಯರಿಗೆ ಧೈರ್ಯ ಇನ್ನೂ ಹೆಚ್ಚಾದದ್ದನ್ನು ಎಲ್ಲರೂ ಸ್ವಾಗತಿಸುವವರೇ. ಕಹಿಯಷ್ಟೇ ಅಲ್ಲ ಬದುಕಿನ ಗತಿಯನ್ನೇ ಬದಲಿಸಿದ, ಬದುಕನ್ನೇ ಹಾಳುಮಾಡಿದ ಮನಕಲುಕುವ ಘಟನೆಗಳನ್ನು ಹಂಚಿಕೊಂಡ ತಂಗಿಗೆ ಅಭಿನಂದನೆಗಳು. ಅವನ್ನ ಬರೆಯುವದೂ ಸುಲಭದ ಕೆಲಸವಾಗಿರಲಿಕ್ಕಿಲ್ಲ. ಒಬ್ಬ ನಟಿ ಹೇಳಿದಂತೆ ಪ್ರತಿಯೊಂದು ಕುಟುಂಬದ ಹೆಣ್ಣುಮಕ್ಕಳಲ್ಲಿ ಒಬ್ಬರಲ್ಲೊಬ್ಬರಿಗೆ ಆದಂಥ ಅನುಭವಗಳೇ, ಇವೆಲ್ಲ. ಓದಿ ಬರೆದ ರಶ್ಮಿ, ಲತಾ ಹೇಳುವಂತೆ. ಇದು ಇಂದು ನೆನ್ನೆಯದಲ್ಲ. ಕೊನೆಯಲ್ಲಿ ಅಮಿತಾ ಅವರು ಹೇಳಿದಂತೆ ಆಶಯ ಒಂದೇ ಉಳಿದಿದೆ.

    Like

  10. Prathiyobba hennina jeevanadalli e tharahada kahi anubhavagalu khadita aagirutve. adanna edri nillo Chaitanya kelvrge matra irutte. antha ghatane galnna ellaredru bichidva prayathna beralenke janakke matra. ellaru nin tara kittur chennamma aagli anno ashaya.

    Like

  11. ಮನ ಕಲುಕುವ ಲೇಖನಗಳು.ನಾನು ಅನುಭವಿಸಿದ ಬಹಳಷ್ಟು ಸಂದರ್ಭಗಳು ಹಾಗೇ ಕಣ್ಣೆದುರು ಬಂದು ಹೋದವು.
    Main thing is we should be bold enough to speak about these .

    Thanks.

    Like

Leave a comment

This site uses Akismet to reduce spam. Learn how your comment data is processed.