ಡಾ. ಪ್ರೇಮಲತ ಬಿ. ನೋಡಿದ `ಸಕಹಿಪ್ರಾಶಾ,ಕಾ,ಕೊ:ರಾರೈ` ಎನ್ನುವ ಸಿನೆಮಾ

premalata
ಲೇಖಕರು: ಡಾ ಪ್ರೇಮಲತ ಬಿ
(ಶೀರ್ಷಿಕೆ ನೋಡಿ ಏನಾದರೂ ತಪ್ಪಾಗಿದೆಯಾ ಅಂದುಕೊಂಡಿರಾ? ಖಂಡಿತ ಇಲ್ಲ. ಬರೆದುಕೊಡಿ ಎಂದು ಕೇಳಿದ ಕೆಲವೇ ಗಂಟೆಗಳಲ್ಲಿ ಬರೆದ ಪ್ರೇಮಲತ ಅವರಿಗೆ ತುಂಬ ಧನ್ಯವಾದಗಳು. `ಸಕಹಿಪ್ರಾಶಾ,ಕಾ,ಕೊ:ರಾರೈ` ಎನ್ನುವ ಸಿನೆಮಾ ಇಂಗ್ಲಂಡಿನ ಕೆಲವು ಊರುಗಳಲ್ಲಿ ಬಂದಿದೆ, ಬರುತ್ತಿದೆ. ನೋಡಿದವರೆಲ್ಲ `ಪರ್ವಾಗಿಲ್ಲ` ಎನ್ನುತ್ತಿದ್ದಾರೆ. ನನಗಿನ್ನೂ ನೋಡುವ ಭಾಗ್ಯ ಸಿಕ್ಕಿಲ್ಲ. ಆದರೆ ಪ್ರೇಮಲತ ಅವರು ಸೀದಾ ಸಿನೆಮಾ ಟಾಕೀಜಿಗೇ ಕರೆದುಕೊಂಡು ಹೋಗಿ ಸಿನೆಮಾ ತೋರಿಸುತ್ತಾರೆ. ತಡವೇಕೆ? ಓದಿ. ಕೆಳಗೆ ನಿಮ್ಮ ಪ್ರತಿಕ್ರಿಯೆ ಹಾಕುವುದನ್ನು ಮಾತ್ರ ಮರೆಯಬೇಡಿ – ಸಂ)

“ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು “ ಎಂದಳು ಭಾರತದ ನನ್ನ ಅಕ್ಕ.

“ ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೆ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ಸಿನಿಮಾಕ್ಕೆ ಹೋಗುವುದನ್ನು ನಿಲ್ಲಿಸಿ ಮನೆಗಳಲ್ಲೇ ಮನರಂಜನೆ ಕಂಡುಕೊಳ್ಳುತ್ತಿರುವ ಯುಗವಿದು. ಹಾಗಾಗಿ ನನ್ನ ‘ಟಿಕ್ ಲಿಸ್ಟಿ’ಗೆ ಬರಲು ಸಿನಿಮಾಗಳು ತಿಣುಕಾಡಿದವು.

ಕೊನೆಗೆ ಆಗಸ್ಟ್ ೨೪ನೇ ತಾರೀಖು ಬಿಡುಗಡೆಯಾಗಿದ್ದ “ಸರ್ಕಾರೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ :ರಾಮಣ್ಣ ರೈ” ಎನ್ನುವ ಉದ್ದ ಹೆಸರಿನ ಸಿನಿಮಾಕ್ಕೆ ಹೋಗೋಣ ಎಂದು ನಿರ್ಧರಿಸಿದೆವು. ಹೆಸರು ಕೇಳಿದ ಕೂಡಲೇ ಅರೆ-ಬರೆ ಅದರ ತಿರುಳನ್ನು ಬಿಟ್ಟು ಕೊಡುತ್ತಿದ್ದ ಈ ಸಿನಿಮಾಕ್ಕೆ ನಮ್ಮನ್ನು ಬಿಟ್ಟರೆ ಇನ್ಯಾರ್ಯಾದರೂ ಬರ್ತಾರಾ, ಇಲ್ಲವಾ ಎನ್ನುವ ಅನುಮಾನದಲ್ಲೇ ಗುಬ್ಬಿ ವೀರಣ್ಣನವರ ಸಂಸಾರಕ್ಕೆ ಸೇರಿದ ‘ಪ್ರಶಾಂತ್’ ಎನ್ನುವ ಹೆಸರಿನ ಸಿನಿಮಾ ಮಂದಿರ ತಲುಪಿದೆವು. ನಾನು ಬೇಕಂತಲೇ ಅಲ್ಲದಿದ್ದರೂ ಕಣ್ಣಿಗೆ ಬಿತ್ತು ಅಂತ ಈ ಸಿನಿಮಾದ ರಿವ್ಯೂ ಕೂಡ ಓದಿಬಿಟ್ಟಿದ್ದೆ. ಮೂರೂವರೆ ನಕ್ಷತ್ರ ಸಿಕ್ಕಿತ್ತೆಂಬ ಕಾರಣಕ್ಕೆ ಒಂದಷ್ಟು ನಿರಿಕ್ಷೆಯೂ ಗೊತ್ತಿಲ್ಲದಂತೆ ಸೇರಿ ಕೊಂಡು ಬಿಟ್ಟಿತ್ತು.

Sarkari-Hi-Pra-Shaale-Kasaragodu-1

ಏನಾಶ್ಚರ್ಯ! ಸಿನಮಾ ಮಂದಿರದ ಬಳಿ ಟಿಕೇಟು ಪಡೆಯಲು ಯುವಕ ಯುವತಿಯರ ತಂಡಗಳೇ ದಂಡು ಕಟ್ಟಿ ನಿಂತಿದ್ದರು. ಬಿಡುಗಡೆಯಾಗಿ ಎರಡೇ ದಿನಗಳಾಗಿದ್ದ ಕಾರಣ ಜೊತೆಗೆ ಭಾನುವಾರವಾದ್ದರಿಂದ ತುಮಕೂರು ನಗರದ ಕನ್ನಡ ಜನರು ಭಿನ್ನವೆಣಿಸದೆ ಬಂದಿದ್ದರು.

ಬಾಲ್ಕನಿಗೆ ನಮಗೆ ಟಿಕೇಟು ದೊರಕಿತು. ಅದೇ ಕಮಟು ವಾಸನೆಯ, ಪಾನ್ ಬೀಡಾ ತಿಂದು ಉಗುಳಿದ ಗೋಡೆಗಳ ಈ ಸಿನಿಮಾ ಮಂದಿರಗಳಿಗೆ ಭೇಟಿ ನೀಡುವುದೆಂದರೆ ನಿಮ್ಮ ಬಾಲ್ಯದ ಬಣ್ಣಗಳಿಗೂ, ಯೌವನದ ಮೆರುಗಗಳಿಗೂ ಒಂದು ಬಗೆಯ ಕೊಂಡಿಗಳನ್ನು ಜೋಡಿಸಿಕೊಳ್ಳುವ ಅನುಭೂತಿಯೂ ಹೌದಾಗುತ್ತದೆ. ಅದನ್ನೆಲ್ಲ ಅನುಭವಿಸುತ್ತ ಕುಳಿತಿದ್ದವಳಿಗೆ ಪಕ್ಕದ ಸೀಟಿನಲ್ಲಿ, ಹಿಂದೆ,ಮುಂದೆ ಮರ್ಯಾದಸ್ಥ ಜನರು ಬಂದು ಕೂತರೆ ನಿರಾಳವಾಗಿ ಚಿತ್ರ ನೋಡಬಹುದೆಂದು ಅನಿಸಿತು. ಹಾಗಂತ ಹೇಳಿಯೂ ಬಿಟ್ಟೆ.

ಜೊತೆಯಲ್ಲಿದ್ದ ಅಕ್ಕ “ ಈಗೆಲ್ಲ ಹುಡುಗರು ಚುಡಾಯಿಸುವುದು, ಕಿಚಾಯಿಸುವುದು ನಿಂತು ಹೋಗಿದೆ” ಎಂದಳು.

“ಹೌದಾ?” ಅಂತ ಅಚ್ಚರಿಯಿಂದ ಕೇಳಿದೆ.

“ಹೂಂ, ಯಾಕೆಂದ್ರೆ ಅದರ ಅಗತ್ಯವೇ ಇಲ್ವಲ್ಲಾ, ಈಗೆಲ್ಲ ಹುಡುಗ ಹುಡುಗಿಯರು ಪಟ್ಟಂತ ಫ್ರೆಂಡ್ಸ್ ಆಗಿಬಿಡ್ತಾರೆ. ಎಲ್ಲರಿಗೂ ದಂಡು ದಂಡೇ ಗೆಳೆಯ, ಗೆಳತಿಯರಿರ್ತಾರೆ “ ಅಂತ ನನ್ನ ನಾಲೆಡ್ಜ್ ಅನ್ನು ಅಪ್ಡೇಟ್ ಮಾಡಿದಳು.

ಅಷ್ಟರಲ್ಲಿ ತೆರೆಯ ಮೇಲೆ ಬೆಳಕು ಕಂಡಿತು. ವೀಕೋ ವಜ್ರದಂತಿ, ಕೋಲ್ಗೇಟ್, ರಿನ್ ಸೋಪು ಮತ್ತು ನಿರ್ಮಾ ವಾಷಿಂಗ್ ಪೌಡರಗಳ ಜಾಹೀರಾತುಗಳಿಗೆ ಕಾದು ಕುಳಿತಿದ್ದವಳಿಗೆ ನಿರಾಸೆಯಾಯ್ತು. ಯಾಕಪ್ಪಾ ಒಂದೂ ಬರಲಿಲ್ಲ ಅಂತ ಕಂಗಾಲಾದೆ. “ತಂಬಾಕು ಸೇದುವುದನ್ನು ಬಿಡಿ “, “ಶೌಚಾಲಯ ಬಳಸಿ” ಅನ್ನೋ ಅಕ್ಷಯ್ ಕುಮಾರ್ ನ ಒಂದೆರಡು ಸಂದೇಶ ನೀಡುವ ಜಾಹೀರಾತುಗಳು ಮಾತ್ರ ಕಾಣಿಸಿ ನಿರಾಸೆ ತಂದವು. “ ಹೀಗೂ ಉಂಟೆ?“ ಅನ್ನೋ ಕಸಿವಿಸಿಯಲ್ಲಿ ಕುಳಿತಿದ್ದೆ.

ಇದ್ದಕ್ಕಿದ್ದಂತೆ ಕುಳಿತಿದ್ದವರೆಲ್ಲ ದಡಕ್ಕನೆ ಎದ್ದು ನಿಂತರು. ಕಕ್ಕಾವಿಕ್ಕಿಯಾಗಿ ಅವರೆಡೆ ನೋಡುತ್ತ ನಾನೂ ಎದ್ದುನಿಂತೆ. ಯಾರಾದರೂ ಗಣ್ಯರು ಬಂದರೇನೋ ಎಂದು ಕತ್ತು ಉದ್ದ ಚಾಚಿ ನೋಡಿದೆ. ಈ ಕಸರತ್ತಿನಲ್ಲಿ ‘ ರಾಷ್ಟ್ರಗೀತೆ ಶುರುವಾಗಲಿದೆ’ ಎನ್ನುವ ಸಂದೇಶ ತೆರೆಯ ಮೇಲೆ ಬಂದಿದ್ದನ್ನು ನೋಡಿರಲೇ ಇಲ್ಲ!

“ಈಗೆಲ್ಲ ಸಿನಿಮಾ ಶುರುವಾಗುವ ಮುನ್ನ ರಾಷ್ಟ್ರಗೀತೆ ಹಾಕ್ತಾರೆ..” ಅಂತ ಅಕ್ಕ ಮತ್ತೆ ನನ್ನನ್ನು ತಿವಿದು,ತಿದ್ದಿದಳು. ಹತ್ತು ದಿನಗಳ ಹಿಂದೆ ಮನೆಯ ಬಳಿಯೇ ಇದ್ದ ಸ್ಟೇಡಿಯಂ ನಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯನ್ನು ಜೋರು ಮಳೆಯ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದೆ. ಈಗ ಹಠಾತ್ತನೆ ರಾಷ್ಟ್ರಗೀತೆಯನ್ನು ಎಲ್ಲರೊಡನೆ ಹಾಡುವ ಸುಸಲಿತ ಸಂದರ್ಭ ಸಿಕ್ಕಿ ಬಿಟ್ಟಿತ್ತು. ಜೋರಾಗಿಯೇ ಹಾಡಿ ಗೀತೆ ಇನ್ನೂ ನೆನಪಿನಲ್ಲಿದೆ ಎಂದು ಖಾತ್ರಿಪಡಿಸಿಕೊಂಡೆ.

“ಅಯ್ಯೋ.. ಏನೆಲ್ಲ ಬದಲಾವಣೆಗಳಾಗಿವೆ, ಇವನ್ನೆಲ್ಲ ತಿಳಿದುಕೊಳ್ಳದೆ ನಾನೆಷ್ಟು ಗಾಂಪಳಾಗಿ ಹಿಂದುಳಿದಿದ್ದೇನೆ ಎಂದು ಪರಿತಪಿಸುತ್ತಲೇ ಕುಳಿತುಕೊಂಡೆ. ಅನಿವಾಸಿಗಳ ಪಾಡೇ ಹೀಗೆ. ಎರಡೆರಡು ಪ್ರಪಂಚದಲ್ಲಿ ಸದಾ ಅಪ್ಡೇಟ್ ಆಗ್ತಾ ಇರ್ಬೇಕು. ಇಲ್ಲದಿದ್ದರೆ ಎಲ್ಲಾದರೂ ಒಂದು ಜಗತ್ತಿನಲ್ಲಿ ಗೊತ್ತಿಲ್ಲದೆಯೇ ಹಿಂದುಳಿದವರಾಗಿ ಬಿಟ್ಟಿರ್ತೀವಿ!

ಸಿನಿಮಾ ಶುರುವಾಯ್ತು. ಅಪ್ಪಟ ಬಯಲು ಸೀಮೆಯವಳಾದ ನನಗೆ ತಟ್ಟನೆ ಕಾಸರುಗೋಡಿನ ಕಚ್ಚಾ ಭಾಷೆಯಲ್ಲಿ ಶುರುವಾದ ಸಂಭಾಷಣೆ ಅರ್ಥವಾಗದೆ ಎಲ್ಲರೂ ನಕ್ಕ ಕಾರಣ ಬೆಪ್ಪಳಂತೆ ನಾನೂ ನಗುತ್ತ ಕೂತೆ.ಒಂದೆರಡು ಸಂಭಾಷಣೆ ಮತ್ತು ಒಂದು ಸಣ್ಣ ಹಾಡಿಗೆ ಜೋರು ಶಿಳ್ಳೆಗಳು ಬಿದ್ದವು. ಮೊದಲೆಲ್ಲ ಬರೀ ಗಾಂಧೀ ಕ್ಲಾಸಿನಲ್ಲಿ ಕೂತವರು ಮಾತ್ರ ಸಖತ್ತಾಗಿ ಶಿಳ್ಳೆ ಹೊಡೀತಿದ್ರು ಎನ್ನುವ ನೆನಪು. ಇದೀಗ ಬಾಲ್ಕನಿಯ ಬಾಲೆಯರೂ ಸಾರಾ ಸಗಟಾಗಿ ಶಿಳ್ಳೇ ಹೊಡೆದದ್ದನ್ನು ನೋಡಿದ್ದೆ.

ಸಿನಿಮಾ ನಿಜವಾಗಿ ಶುರುವಾದ ಮೇಲೆ ಕಾಸರುಗೋಡಿನ ಭಾಷೆ, ಕಥೆ ಎಲ್ಲ ತಿಳಿಯಾಗುತ್ತ ಹೋಯಿತು. ಅನಂತನಾಗ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ,ರಂಜನ್, ಸಪ್ತ ಪವೂರ್,ಸಂಪತ್,ಚಿರಾಗ್, ಪ್ರಕೃತಿ, ಮಹೇಂದ್ರ ಇತ್ಯಾದಿ ನಟರಿರುವ ಈ ಚಿತ್ರ ‘ರಂಗಿತರಂಗ ‘, ‘ಉಳಿದವರು ಕಂಡಂತೆ’ ಇತ್ಯಾದಿ ಚಿತ್ರಗಳಂತೆಯೇ ಪ್ರಾದೇಶಿಕ ಮತ್ತು ನೈಸರ್ಗಿಕ ಚೆಲುವನ್ನು, ಸಂಸ್ಕೃತಿಯನ್ನು ತೆರೆದಿಡುತ್ತದೆ. ತಿಳಿಹಾಸ್ಯ, ಅತಿಶಯೋಕ್ತಿಯ ಪ್ರಸಂಗಗಳು ಎಲ್ಲವೂ ಧಾರಾಳವಾಗಿರುವ ಸಿನಿಮಾ ಇದು. ಜೊತೆಗೆ ಹಲವು ಗ್ರಾಮ್ಯ ಪಾತ್ರಗಳು ಅವುಗಳ ನೈಜರೂಪದಲ್ಲಿ ತೆರೆದುಕೊಂಡಂತೆ ಸಿನಿಮಾವನ್ನು ಎಂಜಾಯ್ ಮಾಡಲು ಶುರುಮಾಡಿದೆ. ಮಮ್ಮೂಟ್ಟಿ ಎಂಬ ಹೆಸರಿನ ಸಾಬರ ಹುಡುಗನ ಪಾತ್ರ ನಿರ್ದೇಶಕ ರಿಶಬ್ ಶೆಟ್ಟಿಯ ಬಾಲ್ಯದ ವ್ಯಕ್ತಿತ್ವವನ್ನು ಪ್ರತಿಪಾದಿಸಿದರೆ, ದಡ್ಡನಾಗಿ, ಪದೇ ಪದೇ ಫೇಲಾಗುತ್ತ ಅದೇ ತರಗತಿಯಲ್ಲಿರುವ ಪ್ರವೀಣನ ಪಾತ್ರ ತನ್ನ ಸೋದರನ ವ್ಯಕ್ತಿತ್ವವನ್ನು ಬಿಂಬಿಸಿದೆ ಎಂದು ಸ್ವತಃ ನಿರ್ದೇಶಕನೇ ಹೇಳಿಕೊಂಡಿರುವುದು ಆಸಕ್ತಿದಾಯಕ. ವಯಸ್ಸಿಗೆ ಬರುವ ಹುಡುಗನ ಮೊದಲ ಪ್ರೀತಿ, ಹೇಳಿಕೊಳ್ಳಲಾಗದ ಧಾವಂತಗಳು, ಭುಜಂಗನ ಉತ್ತರಕುಮಾರನಂತ ವ್ಯಕ್ತಿತ್ವ, ಟೀಚರುಗಳ ಪಾಡು, ಮುಖ್ಯೋಪಧ್ಯಾಯನ ಪೀಕಲಾಟ ಎಲ್ಲವೂ ಮನಸ್ಸಿಗೆ ಹಿಡಿಸುವ, ನಗಿಸುವ ಪಾತ್ರಗಳೇ.

ಮರಗಳನ್ನು ಸುತ್ತುವ ಹಾಡುಗಳಿಲ್ಲದ, ಮಾರಾ ಮಾರಿಯಿಲ್ಲದ, ವಿಪರೀತ ಎನ್ನಿಸುವ ಕೃತಕ ಹಾಸ್ಯವಿಲ್ಲದೇ ಸಹಜವಾಗಿ ನಗಿಸುವ ಉತ್ತಮ ಚಿತ್ರ ಇದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಯೇ ಅವಶ್ಯಕತೆಯೇ ಇರದ ಹಲವು ಪಾತ್ರಗಳೂ ಈ ಚಿತ್ರಗಳಲ್ಲಿವೆ (ಅಯ್ಯಪ್ಪ ಸ್ವಾಮಿ ಪೋಲೀಸು ಸಬ್ ಇನ್ಸ್ಪೆಕ್ಟರ್ ಪಾತ್ರ, ರಮೇಶ್ ಭಟ್ ಮಾಡಿರುವ ನೆರೆಮನೆಯವನ ಪಾತ್ರ). ಆದರೆ ಹಾಗೊಂದಿಷ್ಟು ಪಾತ್ರ ಕಲ್ಪಿಸಿ ನಿಜ ಕತೆಗೆ ತಳುಕು ಹಾಕುವಲ್ಲಿ ಮಾತ್ರ ನಿರ್ದೇಶಕರು ಸಂಪೂರ್ಣ ಸೋತಿಲ್ಲ ಎನ್ನಬಹುದು. ಅದೇ ರೀತಿ ಯಾವ ಸಂದೇಶವನ್ನು ನೇರವಾಗಿ ಕೊಡದೆ ಒಂದು ಮನರಂಜನಾತ್ಮಕ ಕಾಲ್ಪನಿಕ ಕತೆಯಲ್ಲಿಯೇ ಕನ್ನಡ ಶಾಲೆಯನ್ನು ರಕ್ಷಿಸಲು ನಡೆಸಿದ ಹೋರಾಟವನ್ನು ಹಗೂರವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ತಮ್ಮ ಬಾಲ್ಯದಲ್ಲಿ ಕುಂದಾಪುರದ ಒಂದು ಕನ್ನಡ ಶಾಲೆಯನ್ನು ರಕ್ಷಿಸಿದ ಪ್ರಸಂಗದ ನೆನಪಲ್ಲಿ ಹೊಸ ಕಥೆಯೊಂದನ್ನು ಹೆಣೆದಿದ್ದಾರೆ.

ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿರುವ ಕನ್ನಡ ಶಾಲೆಗಳು ಕೇರಳಕ್ಕೆ ಸೇರಿದ ಕಾಸರುಗೋಡಿನಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ಇವೆ. ಈಗಾಗಲೇ ಮುಚ್ಚಿಯೂ ಹೋಗಿವೆ. ಮನರಂಜನೆಯ ಜೊತೆಗೇ ಈ ಬಗ್ಗೆ ಒಂದಿಷ್ಟು ಮಾಹಿತಿಭರಿತ ಸಂದೇಶಗಳನ್ನು, ಅದರಿಂದಾಗುತ್ತಿರುವ ಸಮಸ್ಯೆಗಳನ್ನು ಹೇಳಲು ನಿರ್ದೇಶಕರಿಗೆ ಅವಕಾಶವೂ, ಪಾತ್ರಗಳೂ ಈ ಚಿತ್ರದಲ್ಲಿ ಸಿಕ್ಕಿದ್ದರೂ ಮನರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ಕತೆಯನ್ನು ಸುಖಾಂತ್ಯ ನೀಡಿ ಮುಗಿಸಿದ್ದಾರೆ ಅನ್ನಿಸಿತು. ಆದರೆ, ಕನ್ನಡದ ಬಗೆಗಿನ ಒಂದೊಂದು ಡೈಲಾಗಿಗೂ ಕರತಾಡನ , ಕನ್ನಡದ ಬಗೆಗಿನ ಸಂಭಾಷಣೆಗಳಿಗೆ ಚಪ್ಪಾಳೆಗಳು ಬಿದ್ದಕಾರಣ ಕನ್ನಡತನವನ್ನು ಯುವ ಜನತೆಯ ಹೃದಯಕ್ಕೆ ಹಗುರವಾಗಿ ಈ ಚಿತ್ರದ ಮೂಲಕ ಸವರಿದ್ದಾರೆ ಅನ್ನಬಹುದು.

ಅನಂತನಾಗ್-ನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, “ನನ್ನ ತಮ್ಮ ಶಂಕರ” ಎನ್ನುವ ಪುಸ್ತಕವನ್ನು ನೋಡಿದ್ದೆ. ಆತ ಸ್ವತಃ ಹಾಡುವುದನ್ನೂ ಕೇಳಿದ್ದೇನೆ. “ಹೊಟ್ಟೆಗಾಗಿ ,ಗೇಣು ಬಟ್ಟೆಗಾಗಿ ಹಾಡನ್ನು ನಿಮಿಷಗಳಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿಕೊಟ್ಟ ವಿಸ್ಮಯಕಾರಿ ಜಾಣ್ಮೆಯನ್ನು ಕೇಳಿ ಬೆರಗಾಗಿದ್ದೇನೆ. ಈ ಸಿನಿಮಾದಲ್ಲಿ ಕೂಡ ಆತನ ವಿಶಿಷ್ಠವಾದ,ಸ್ಪಷ್ಟವಾದ ಕನ್ನಡದ ಉಚ್ಚಾರದಲ್ಲಿ ಇವತ್ತಿಗೂ ಒಂದು ತುಂಟತನವನ್ನು ಉಳಿಸಿಕೊಂಡಿರುವುದರಲ್ಲಿ ಕಾಲ ಯಾವ ವ್ಯತ್ಯಾಸವನ್ನೂ ಮಾಡಿಲ್ಲ ಎನ್ನಿಸಿತು. ಈ ಸಿನಿಮಾದಲ್ಲಿ ಆತನದು ಎಂದಿನ ವಿನೋದ ಭರಿತ ವಿಶೇಷ ಪಾತ್ರವೇ. ಅನಂತನ ಪ್ರತಿ ಹೆಜ್ಜೆಗೂ, ಮಾತಿಗೂ ಸಿನಿಮಾ ಮಂದಿರದಲ್ಲಿದ್ದ ಇಂದಿನ ಯುವ ಜನತೆ ಶಿಳ್ಳೆ ಹೊಡೆದು ಮೆಚ್ಚುಗೆ ನೀಡಿತು.

ಸಣ್ಣ ಬಂಡವಾಳದಲ್ಲಿ, ಗ್ರಾಮೀಣ ಪರಿಸರ, ಗಡಿನಾಡ ವಿಶಿಸ್ಟ್ಯ ಸಮಸ್ಯೆಗಳ ಒಂದು ಮುಖದ ಪರಿಚಯದೊಂದಿಗೆ, ಹೊಸಮುಖಗಳ ತಾಜಾತನ, ಪ್ರತಿಭೆಗಳಿಗೆ ಅವಕಾಶ ಮತ್ತು ಕರ್ನಾಟಕದ ಒಂದು ಮೇರು ಭಾಗವಾದ ಮಂಗಳೂರು ಭಾಷೆ, ಪರಿಸರ, ಪ್ರಕೃತಿ ಎಲ್ಲವನ್ನು ಹೊಸತನದೊಂದಿಗೆ ನಿರ್ದೇಶಕ ರಿಷಬ್ ಶೆಟ್ಟಿ ಸಮರ್ಥವಾಗಿ ಹಿಡಿದಿಟ್ಟು ತೋರಿಸಿ ನಿಭಾಯಿಸಿದ್ದಾರೆ. ‘ರಿಕಿ’, ‘ಕಿರಿಕ್ ಪಾರ್ಟಿ’ ಸಿನಿಮಾದ ನಂತರ ಮೂರನೆಯ ವಿಶಿಷ್ಟ ಸಿನಿಮಾ ಮಾಡಿ ಹೊಸ ಅಧ್ಯಾಯವನ್ನು ಶುರುಮಾಡಿದ್ದಾರೆ. ಯುವ ಜನತೆಯನ್ನು ಸೋಶಿಯಲ್ ಮೀಡಿಯಾಗಳ ಮೂಲಕ ತಲುಪಿ, ಈ ಚಿತ್ರವನ್ನು ನೋಡಲು ಹುರಿದುಂಬಿಸಿದ್ದಾರೆ. ಹಾಗಾಗಿ ಈ ಚಿತ್ರದ ವಾಸುಕಿ ವೈಭವ್ ರ ಹಾಡುಗಳು ಯೂ-ಟ್ಯೂಬಿನಲ್ಲಿ ಮಿಲಿಯನ್ ವ್ಯೂ ಗಳಿಸಿವೆ. ವೆಂಕಟೇಶ ಅಂಗುರಾಜ್ ರ ಛಾಯಾಗ್ರಹಣ ಕೂಡ ಕಣ್ಸೆಳೆಯುತ್ತದೆ.

೧೯೫೬ರಲ್ಲಿಯೇ ಕೇರಳಕ್ಕೆ ಸೇರಿದ ಕಾಸರಗೋಡಿನ ಸೂಕ್ಷ್ಮ ಚರಿತ್ರೆಗೆ, ವಿವಾದಗಳಿಗೆ ಕೈಹಾಕದೆ, ಕೇವಲ ಗಡಿಪ್ರದೇಶಗಳಲ್ಲಿ ಕನ್ನಡ ಭಾಷಾ ಮಾಧ್ಯಮದ ಉಳಿವಿಗಾಗಿ ನಡೆವ ಹಾಸ್ಯಭರಿತ ಹೋರಾಟದ ಕಥೆಯ ಜಾಡನ್ನು ಹಿಡಿದು , ಸ್ಥಳೀಯರನ್ನೇ ಪ್ರಧಾನ ಪಾತ್ರಗಳಲ್ಲಿ ತೋರಿಸಿ, ಉತ್ತಮ ಚಿತ್ರ ಮಾಡುವಲ್ಲಿ ರಿಶಬ್ ಅಗತ್ಯವಾಗಿ ಗೆದ್ದಿದ್ದಾರೆ.

ಇದೇ ಮೂಡಿನಲ್ಲಿ, ‘ಸರ್ಕಾರೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ; ರಾಮಣ್ಣ ರೈ’ ಚಿತ್ರವನ್ನು ಜಾಡಿಸಿ ಕೊಡವಲೂ ಆಗದೆ, ಮೆಚ್ಚದೆ ಇರಲೂ ಆಗದೆ, ಬೇಜಾರಿಲ್ಲದ ಮನಸ್ಸಿನಿಂದ ಹೊರಬಿದ್ದೆವು. ಮಮ್ಮೂಟ್ಟಿ, ಭುಜಂಗ, ಉಪಾಧ್ಯಾಯನ ಪಾತ್ರಗಳು ಮನಸ್ಸಲ್ಲಿ ಅಚ್ಚು ಹಾಕಿಕೊಂಡಿದ್ದವು.

ಈ ಚಿತ್ರ ತಂಡಕ್ಕೆ ಶುಭ ಹಾರೈಸೋಣ.

11 thoughts on “ಡಾ. ಪ್ರೇಮಲತ ಬಿ. ನೋಡಿದ `ಸಕಹಿಪ್ರಾಶಾ,ಕಾ,ಕೊ:ರಾರೈ` ಎನ್ನುವ ಸಿನೆಮಾ

  1. ತುಂಬಾ ಒಳ್ಳೆಯ ಹಾಗೂ ಸರಳ ಅನಿಸಿಕೆ ಕನ್ನಡದ ಸರಳ ಸಿನಿಮಾ ಬಗ್ಗೆ ಪ್ರೇಮಲತಾ ಅವರೇ.ಜೊತೆಗೇ ಥಿಯೇಟರ್ ವರ್ಣನೆಯೂ ಮುದ ನೀಡಿ , ನಮ್ಮೂರ ಟೂರಿಂಗ್ ಟಾಕೀಸ್ ನಾ ಸವಿ ನೆನಪಿನಲ್ಲಿ ತೇಲಿಸಿತು.ಏನೇ ಹೇಳಿ ಇಂದಿನ ಈ ಮಲ್ಟಿ ಪ್ಲೆಕ್ಸ್, ಐನಾಕ್ಸ್ ,ಗಳಂಥ , ಹೈಫೈ , ಸೊಳ್ಳೆ ,ತಿಗಣೆಗಳಿಲ್ಲದ , ಡ್ರಿಂಕ್ಸ್, ಸ್ನಾಕ್ಸ್ ಗಳ ಸೌಲಭ್ಯ ಇರುವ ಥಿಯೇಟರ್ ಗಳಲ್ಲಿ ಆ ಮಜ ಇಲ್ಲ.ಅತ್ತು ಕರೆದು ಹಟ ಮಾಡಿ ಅಪ್ಪನ್ನ ಒಪ್ಪಿಸಿ , ಅಣ್ಣನೊಂದಿಗೆ ಸೈಕಲ್ಲ ಮೇಲೆ ಡಬಲ್ ರೈಡಿಂಗ್ ಹೋಗಿ, ನಿಂಬೆ ಹುಳಿ ಪೆಪ್ಪರ್ ಮಿಂಟ್, ಉಪ್ಪು ಹಚ್ಚಿದ ಶೇಂಗಾ ಕಡಲೆ ತಿನ್ನುತ್ತ ಮಧ್ಯೆ ಮಧ್ಯೆ ಅಣ್ಣನೊಂದಿಗೆ ಹರಟುತ್ತಾ ನೋಡಿದ ಸಿನಿಮಾ ಸವಿ ಇಲ್ಲಿಲ್ಲ.ಏನು ಮಾಡೋದು ನಮ್ಮೂರಲ್ಲೂ ಈಗ ಆ ಟಾಕೀಸ್ ಇಲ್ಲವಲ್ಲ.! ಸುಂದರ ವಿಮರ್ಶೆ ಯೊಂದಿಗೆ ಸವಿ ನೆನಪು ಗಳ ಮೆಲುಕು ಹಾಕುವ ಅವಕಾಶ ಮಾಡಿ ಕೊಟ್ಟ ಪ್ರೇಮ ಲತಾ ಅವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು
    ಸರೋಜಿನಿ ಪಡಸಲಗಿ

    Liked by 1 person

  2. ನಾನು ಈ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಹೀಗಾಗಿ ಅದರ ಕಥೆ ವಿಮರ್ಶೆ ಬಗ್ಗೆ ನನಗೆ ಹೆಚ್ಚು ಆಸಕ್ತಿಯಿಲ್ಲ
    ಆದರೆ …. ಪ್ರೇಮಲತಾ ಒದಗಿಸಿರುವ ಆ ಬಿಲ್ಡ್ ಅಪ್ ನನ್ನ ಹಳೆ ನೆನಪುಗಳನ್ನು ಯಶಸ್ವಿಯಾಗಿ ಕೆದಕಿವೆ
    ೬೦ ರ ದಶಕದಲ್ಲಿ ನನ್ನ ತಾಯಿಯ ಕಡೆ ಅಜ್ಜ ತರೀಕೆರೆಯಲ್ಲಿ ಸಿನಿಮಾ ಟಾಕೀಸಿನ ಮಾಲೀಕರಾಗಿದ್ದ ಕಾಲ. ಆಗ ಬೇಸಿಗೆ ರಜೆಯಲ್ಲಿ ಹುಡುಗರಾದ ನಾವು ಪ್ರತಿ ದಿನ ಸಂಜೆ ಚಿತ್ರಮಂದಿರಕ್ಕೆ ಹೋಗಿ ಬರುತ್ತಿದ್ದೆವು. ಮಾಲಿಕರ ಮನೆಯವರಾಗಿದ್ದುದರಿಂದ ಪುಕಸಟ್ಟೆ ಎಂಟ್ರಿ ಎಕ್ಸಿಟ್ ಗಳು !!
    ಅದೇ ವಾಸನೆ, ಅದೇ ಸೊಳ್ಳೆಗಳು, ಕತ್ತಲಲ್ಲಿ ಖಾಲಿ ಸೀಟು ಹುಡುಕಾಟ, “ಬೇಗ ಕುತ್ಕೊಳ್ರಿ” ಎಂಬ ಕೂಗು , ಅದೇ ಕಪ್ಪು ಬಿಳಿಪು ಇಂಡಿಯನ್ ನ್ಯೂಸ್ ರಿವ್ಯೂ , ಅದಾದ ಮೇಲೆ “ಧೂಮ್ರಪಾನ ಆರೋಗ್ಯಕ್ಕೆ ಹಾನಿ” “ಮಕ್ಕಳ ನಡುವೆ ಅಂತರವಿರಲಿ” ಮುಂತಾದ ಸ್ಲೈಡ್ ಗಳ. ಸಿನಿಮಾ ಮಧ್ಯೆ ಶಿಳ್ಳೆ , ಇಂಟರ್ವಲ್ ನಲ್ಲಿ ಕಳ್ಳೆ ಪುರಿ, ಉಪ್ಪು ಕಾರ ಸವರಿದ ಮಾವಿನಕಾಯಿಗಳು, ಕೊನೆಗೆ ಜನಗಣಮನ, ತ್ರಿವರ್ಣ ಧ್ವಜ ಮತ್ತು ಮುಕ್ತಾಯ.
    ಈ “ಸವಿನೆನಪುಗಳು” ನೆನಪಿಗೆ ಬಂತು ಹಂಚಿ ಕೊಂಡಿದ್ದೇನೆ. ನೆನಪುಗಳನ್ನು ಕೆದಕಿದ ಪ್ರೇಮಲತಾ ಅವರಿಗೆ ಧನ್ಯವಾದಗಳು

    Like

  3. ಈ ಚಲನಚಿತ್ರದ ಬಗ್ಗೆ ಸಾಕಷ್ಟುವಿಮರ್ಶೆಗಳನ್ನು ಕೇಳಿದ್ದೆ ಹಾಗೂ ಓದಿದ್ದೆ. ಪತ್ರಿಕೆಗಳಲ್ಲಿ ಬರೆದಿದ್ದ ವಿಮರ್ಶೆ ಗಳಲ್ಲಿ ನನ್ನ ನಂಬಿಕೆ ಎಂದೋ ಹೋಗಿತ್ತು. ಶೀರ್ಷಿಕೆ ನೋಡಿ ಸಧ್ಯ ಈಗಲಾದರೂ ಒಂದು Genuine Review ಇರುತ್ತೆ ಅಂದು ಕೊಂಡೆ. ಪ್ರೇಮಲತಾ ಅವರ ಸೊಗಸಾದ ಬರವಣಿಗೆಯಲ್ಲಿ ವಿಮರ್ಶೆಯ ಜೊತೆಗೆ ಅವರು ಚಿತ್ರಿಸಿರುವ ಸಿನೆಮಾ ಅನುಭವ ಓದಿ ಸಂತೋಷವಾಯಿತು. ಪ್ರೇಮಲತಾ ಅವರಿಗೆ ಧನ್ಯವಾದಗಳು.
    ಅಂದಹಾಗೆ ನಾನು ಹೋಗಿರುವ ಕೆಲವು ಸಣ್ಣ ಸಿನೆಮಾಗಳಲ್ಲಿಇರುತಿದ್ದ ಸೊಳ್ಳೆ, ತಿಗಣೆಗಳು ನಿಮ್ಮ ಪ್ರಶಾಂತ್ ಸಿನಿಮಾದಲ್ಲಿ ಇರಲಿಲ್ಲವೇ?

    Like

    • ಧನ್ಯವಾದಗಳು.
      ಖಂಡಿತಾ ಇಲ್ಲ. ಇದ್ದ ಯಾವ ನೆನಪುಗಳೂ ಇಲ್ಲ. ಸೀಟುಗಳಿಗೆ ಹೊಸ ರೆಕ್ಸಿನ್ ಮತ್ತು ಕುಷನ್ ಗಳು, ಜೊತೆಗೆ ಇಲ್ಲಿನಂತೆ ನಿಮ್ಮ ಡ್ರಿಂಕ್ಸ್ ಇಟ್ಟುಕೊಳ್ಳಲು ಜಾಗ ಎಲ್ಲವನ್ನು ಮಾಡಿದ್ದಾರೆ. ಪ್ರಶಾಂತ್ ಒಂದು ಹಳೆಯ ಚಿತ್ರಮಂದಿರ ಜೊತೆಗೆ ಯಾರು ಎನನ್ನೇ ಬದಲಾಯಿಸಿದರೂ ಜನರು ದುರಭ್ಯಾಸಗಳನ್ನು ನಿಲ್ಲಿಸದಿದ್ದರೆ ಅಲ್ಲಲ್ಲಿ ಪಾನ್ ಬೀಡ ಉಗಿದ ಗುರುತು, ವಾಸನೆ ಮತ್ತೆ ಮರಳಿ ಬಂದುಬಿಡುತ್ತದೆ.
      ಮತ್ತೊಂದು ಸಿನಿಮಾ ಮಂದಿರದಲ್ಲಿ ನಮ್ಮ ಜೊತೆ ಒಂದು ಬೆಕ್ಕು ಕೂಡ ಕೂತು ಸಿನಿಮಾ ನೋಡುತಿತ್ತು !!! ಅಲ್ಲಿರುವ ಇಲಿಗಳನ್ನು ಹಿಡಿಯಲು ಸಿನಿಮಾ ಮಂದಿರದವರೇ ಅದನ್ನು ಸಾಕಿ ಕೊಂಡಿದ್ದಾರೆ ಅಂತ ತಿಳಿದೆ. ಇಲ್ಲಿ ಹೊರಗಿನಿಂದ ಯಾವುದೇ ತಿಂಡಿ-ತೀರ್ಥಗಳಬ್ನು ಕೂಡ ಬಿಡುತ್ತಿರಲಿಲ್ಲ. ಪ್ರತಿಯೊಬ್ಬರ ಬ್ಯಾಗುಗಳನ್ನು ಚೆಕ್ ಮಾಡಿ ಬಿಡುತ್ತಿದ್ದರು. ಜೊತೆಗೆ ದುಪ್ಪಟ್ಟು ಬೆಲೆಗೆ ಸ್ನಾಕ್ಸ್ ಮಾರುತ್ತಿದ್ದರು ಎಂದು ಬೇರೆ ಹೇಳಬೇಕಿಲ್ಲವಲ್ಲ.

      Like

  4. ಈ ಸಿನಿಮಾ ಈಗ ಯು ಕೆ ನಲ್ಲಿ ನಡಿಯಿತು. ಚೆನ್ನಾಗಿದೆ ಅಂತ ಕೇಳಿದೆ. ಪರವಾಗಿಲ್ಲ ಈಚೆಗೆ ಒಳ್ಳೆ ಸಿನಿಮಾಗಳು ಬರುತ್ತಿದೆ. ಭಾರತ್ ಸ್ಟೋರ್ಸ್ ಅನ್ನುವ ಚಿತ್ರ ನೋಡಿದೆ ಚೆನ್ನಾಗಿತ್ತು

    Like

    • ಭಾರತ ಸ್ಟೋರ್ಸ್ – ತುಂಬ ಹಳೆಯ ಚಿತ್ರವಾಯಿತು. 🙂

      Like

  5. ಓಡಿಸಿಕೊಂಡು ಓದಿಸಿಕೊಳು್ಳವ ಅನುಭವ-ವಿಮರ್ಶೆ. ಒಳೆ್ಳಯದನೆ್ನಲ್ಲ ಸಾಕಷು್ಟ ಬಿಚಿ್ಚಟು್ಟ, ಒಟಾ್ಟರೆ ಅಭಿಪಾ್ರಯದಲಿ್ಲ ಮಾತ್ರ ಲೇಖಕಿ ಬಿ್ರಟಿಷತೆಯನು್ನ (not bad) ಇಣುಕಿಸಿದಾ್ದರೆ😊.

    ಮುರಳಿ ಹತಾ್ವರ

    Like

    • ನಕಾರಾತ್ಮಗಳನ್ನು ಕಾಣಲು ಬ್ರಿಟಿಷ್ ಟೋಪಿ ಹಾಕ್ಕೊಂಡೇ ಓದ್ಕೋಬೇಕು- ‘in between the lines’ 😄😄😄😄😄

      Like

  6. ಬರೀ ಸಿನೆಮಾದ ಬಗ್ಗೆ ಮಾತ್ರ ಅಲ್ಲ, ಸಿನೆಮಾ ಟಾಕೀಜಿನ ಬಗ್ಗೆಯೂ ಮುದ ನೀಡುವಂತೆ ಬರೆದಿದ್ದೀರಿ. ಹೊಸ ಪೀಳಿಗೆಯ ಹುಡುಗರು ಹೊಸ ಕೆಲಸ ಮಾಡುತ್ತಿದ್ದಾರೆ. ಕನ್ನಡ ಉಳಿಯಲಿ ಮಾತ್ರವಲ್ಲ ಬೆಳಯಲಿ.

    ಕೇಶವ

    Liked by 1 person

  7. A very interesting article which beautifully updated various facts of life in Karnataka -Kannada films , actors, producers ,etc. Particularly enjoyed the bit about writer’s enjoyment of singing “Janaganamana” in the theatre . I must see this film now … !

    Liked by 1 person

Leave a comment

This site uses Akismet to reduce spam. Learn how your comment data is processed.