ಶಿಸ್ತು, ಸೌಜನ್ಯತೆ ಮತ್ತು ಚೆಲುವುಗಳ ಪ್ರತಿರೂಪವೆನಿಸಿದ ನಾಡು ಜಪಾನ್! ಡಾ.ಉಮಾ ವೆಂಕಟೇಶ್

ವಿನಂತಿ: ಉಮಾ ವೆಂಕಟೇಶ್ ಅವರ ಜಪಾನಿನ ಪ್ರವಾಸದ ಸುಂದರ ಬರಹ ಕೆಲವು ವರ್ಷಗಳ ಹಿಂದೆಯೇ ಬರೆದಿದ್ದರಾದರೂ ಅನಿವಾಸಿ ಜಾಲತಾಣದಲ್ಲಿ ಪ್ರಕಟವಾಗಲು ಇಷ್ಟು ಸಮಯ ತೆಗೆದುಕೊಂಡಿತೆಂದು ಹೇಳುತ್ತಾ ಅವರಲ್ಲಿ ಕ್ಷಮೆಯನ್ನು ಕೇಳುತ್ತೇವೆ.

ಪ್ರತಿಯೊಂದು ಪ್ರವಾಸವೂ ಒಂದು ವಿಶಿಷ್ಟ ಅನುಭವ ಕೊಡುತ್ತವೆ, ಅದು ಪಕ್ಕದ ಊರಿರಬಹದು, ದೂರದ ದೇಶವಿರಬಹುದು,ಅಪರಿಚಿತರಿಗೆ ಪ್ರತಿಯೊಂದು ಹೊಸ ಜಾಗವೂ ಪ್ರವಾಸವೇ ಸರಿ.ಪ್ರವಾಸ ಕೈಗೊಳ್ಳುವ ಮುನ್ನ ಅಲ್ಲಿಯ ಕಿರುಪರಿಚಯವನ್ನು, ಮಾಹಿತಿಯನ್ನು ಕಲೆಹಾಕಿ ನಿರೀಕ್ಷೆಗಳನ್ನು, ಕುತೂಹಲವನ್ನು ಹುಟ್ಟಿಸುವ ಅನುಭವ
ಬಹಳ ವಿಶೇಷವಾಗಿರುತ್ತದೆ.ಜಪಾನಿನ ಜನತೆ, ಅವರ ಶಿಸ್ತು, ಸಂಯಮ, ನಿರಂತರ ದುಡಿಮೆ, ದೇಶಾಭಿಮಾನ, ಪ್ರಕೃತಿಯ ಕಾಳಜಿ ಇವೆಲ್ಲವುಗಳನ್ನು ಸೊಗಸಾಗಿ ಕಣ್ಮುಂದೆ ಇಡುವ ಡಾ.ಉಮಾ ವೆಂಕಟೇಶ್ ಅವರ ಈ ಬರಹವನ್ನು ನೀವೂ ಓದಿ ಪ್ರತಿಕ್ರಿಯಿಸಿ.

(ನಾನು ಜಪಾನ್ ದೇಶಕ್ಕೆ ಭೇಟಿ ಇತ್ತು ೫ ವರ್ಷಗಳಾಗಿವೆ. ಏಷಿಯಾ ಖಂಡದ ದೇಶಗಳಲ್ಲೇ  ಅತ್ಯುತ್ತಮ ಪ್ರಗತಿಯನ್ನು ವಿವಿಧ ರಂಗಗಳಲ್ಲಿ ಸಾಧಿಸಿರುವ ಹೆಗ್ಗಳಿಕೆ ಪಡೆದ ಈ ಸುಂದರ ದ್ವೀಪಗುಚ್ಛಗಳ ಇತಿಹಾಸ ಮತ್ತು ಪರಂಪರೆಯನ್ನು ಬಲ್ಲವರು, ಈ ದೇಶವನ್ನೊಮ್ಮೆ ನೋಡಲೇಬೇಕೆನ್ನುವ ಹಂಬಲ ಹೊತ್ತಿರುತ್ತಾರೆ. ಮಹಾಯುದ್ಧಗಳ ಸಮಯದಲ್ಲಿ ಈ ದೇಶ ಸುದ್ದಿಯಲ್ಲಿದ್ದ ವಿಷಯ ಗೊತ್ತಿದೆ. ಆದರೆ ಎರಡನೆಯ ಮಹಾಯುದ್ಧದಲ್ಲಿ ಅಣುಬಾಂಬಿನ ಪ್ರಯೋಗವಾದನಂತರ ಇವರ ಮನೋಭಾವ ಬದಲಾಯಿತು. ತಮ್ಮ ಕಠಿಣ ಪರಿಶ್ರಮ ಮತ್ತು ಸಹನೆಯಿಂದ ಮುಂದುವರೆದು ತಮ್ಮ ದೇಶವನ್ನು ಉನ್ನತಿಗೆ ಒಯ್ದ ಜಪಾನಿಯರ ಮನೋಧರ್ಮವನ್ನು ಮೆಚ್ಚಬೇಕಾದ್ದೇ. ಪೆಸಿಫಿಕ್ ಅಗ್ನಿ ವರ್ತುಲದಲ್ಲಿರುವ ಈ ದೇಶದಲ್ಲಿ ಭೂಕಂಪ, ಅಗ್ನಿಪರ್ವತ ಸ್ಫೋಟ, ಸುನಾಮಿಗಳಂತಹ ಪ್ರಾಕೃತಿಕ ಅನಾಹುತಗಳು ಜರಗುತ್ತಲೇ ಇರುತ್ತವೆ.  ಆದರೆ ಇದನ್ನು ಕೆಚ್ಚೆದೆಯಿಂದ   ನಿಶ್ಯಬ್ದವಾಗಿ ಎದುರಿಸುತ್ತ ಮುಂದುವರೆಯುವ ಈ ಜನರ ತಾಳ್ಮೆಯನ್ನು ನಾವು ಕಲಿಯಬೇಕಿದೆ. –ಉಮಾ)

ಶಿಸ್ತು, ಸೌಜನ್ಯತೆ ಮತ್ತು ಚೆಲುವುಗಳ ಪ್ರತಿರೂಪವೆನಿಸಿದ ನಾಡು ಜಪಾನ್!

ಪ್ರವಾಸ ಪೀಠಿಕೆ: “ಸಾಯೋನಾರಾ ಸಾಯೋನಾರಾ, ವಾದ ನಿಭಾವೋಂಗೆ ಸಾಯೋನಾರ” ಜನಪ್ರಿಯ ಹಿಂದಿ ಚಲನಚಿತ್ರ “Love in Tokyo”ದಲ್ಲಿ ಲತಾ ಮಂಗೇಶ್ಕರ್ ಮಧುರ ಕಂಠಸಿರಿಯಲ್ಲಿನ ಹಾಡನ್ನು ಕೇಳಿ ಆನಂದಿಸದವರ ಸಂಖ್ಯೆ ಬಹಳ ಕಡಿಮೆ. ೬೦ರ ದಶಕದಲ್ಲಿ ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ, ಬಂದ ಹಿಂದಿ ಚಲನ ಚಿತ್ರ “ಲವ್ ಇನ್ ಟೋಕಿಯೋ” ದಲ್ಲಿ ಜಪಾನ್ ದೇಶವನ್ನು ಸ್ವಲ್ಪಮಟ್ಟಿಗೆ ನೋಡಲು ಅವಕಾಶ ಸಿಕ್ಕಿದ್ದ ನನಗೆ, ಈಗ ೨ ವಾರಗಳ ಹಿಂದೆ ಆ ದೇಶವನ್ನು ಮುಖತವಾಗಿ ನೋಡುವ ಸುವರ್ಣಾವಕಾಶವೊಂದು ದೊರಕಿತು. ಯಂತ್ರ-ತಂತ್ರ ವಿಜ್ಞಾನದಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿ, ತನ್ನ ಶಿಸ್ತು ಮತ್ತು ಕಾರ್ಯದಕ್ಷತೆಗಳಿಗೆ ಪ್ರಪಂಚದಲ್ಲೇ ಹೆಸರಾದ ಈ ದೇಶವನ್ನು ನೋಡಲು ಮನ ಹಾತೊರೆಯುತ್ತಲೂ ಇತ್ತು. ಸಣ್ಣ ವಯಸ್ಸಿನಿಂದಲೂ, ಶಾಲೆ ಕಾಲೇಜಿನ ದಿನಗಳಲ್ಲಿ, ಜಪಾನ್ ಎಂದರೆ ಅಲ್ಲಿನ ಎಲೆಕ್ಟ್ರಾನಿಕ್ ಪದಾರ್ಥಗಳ ವರ್ಣನೆ ಎಲ್ಲರ ಬಾಯಿಯಲ್ಲೂ ನಲಿದಾಡುತ್ತಿತ್ತು. ಅಲ್ಲಿನ ರಿಸ್ಟ್ ವಾಚುಗಳು, ರೇಡಿಯೋ, ಟೇಪರೆಕಾರ್ಡರ್,ಟಿ.ವಿ, ಕಾರ್, ಹೀಗೆ ಹಲವು ಹತ್ತು ಆಧುನಿಕ ಉಪಕರಣಗಳ ಉತ್ಪಾದನೆಯಲ್ಲಿ ಜಗತ್ತಿನ ಜನಗಳ ಜೇಬಿಗೆ ಲಗ್ಗೆಯಿಡುವ ಈ ದೇಶದ ಹೆಸರೆತ್ತಿದೊಡನೆ ನೆನಪಾಗುವುದು ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಎರಡನೆಯ ಮಹಾಯುದ್ಧದ ಅಂತ್ಯದಲ್ಲಿ ನಡೆದ ಅಣು ಬಾಂಬಿನ ದಾಳಿ. ನನ್ನ ಮಗಳ ಶಾಲೆಯಲ್ಲಿ ಅವಳ ಸಹಪಾಠಿಯಾಗಿದ್ದ, ಮಯೋಂಕಿ ಎಂಬ ಸುಂದರ ಜಪಾನಿನ ಹುಡುಗಿ ನಮ್ಮ ಮನೆಗೆ ಆಗಾಗ ಇಲ್ಲಿ ಕಾರ್ಡಿಫ಼್ ನಗರದಲ್ಲಿ ಆಟವಾಡಲು ಬರುತ್ತಿದ್ದಳು. ಆಕೆಯ ಕುಟುಂಬವನ್ನು ಒಮ್ಮೆ ಭೇಟಿ ಮಾಡಿದ್ದ ನಮಗೆ, ಜಪಾನಿಯರ ಶಿಸ್ತು, ಭಾಷಾಭಿಮಾನ, ಸಭ್ಯತೆಗಳ ಲಘು ಪರಿಚಯವಾಗಿತ್ತು. ತಾನು ಜಪಾನಿಗೆ ವಾಪಸ್ ಹೋಗುವ ಮುನ್ನ ನನ್ನ ಮಗಳಿಗೆ ಸುಂದರವಾದ ಜಪಾನ್ ಹುಡುಗಿಯ ಬೊಂಬೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದ ಆ ನೆನಪು ಇನ್ನೂ ನಮ್ಮ ಮನಗಳಲ್ಲಿ ಹಸಿರಾಗೇ ಇದೆ. ನನ್ನ ಮಗಳಂತೂ ಈ ದೇಶದ ಚರಿತ್ರೆ, ಸಂಸ್ಕೃತಿ, ಸಂಗೀತ ಹೀಗೆ ಹಲವು ಹತ್ತು ವಿಷಯಗಳಿಗೆ ಮಾರು ಹೋಗಿ, ತನ್ನ ತಲೆಯಲ್ಲಿ ಅಲ್ಲಿನ ವಿಷಯದ ಬಗ್ಗೆ ಬೇಕಾದಷ್ಟನ್ನು ಓದಿ ಆ ದೇಶಕ್ಕೆ ಹೋಗಿ ನೆಲಸುವ ಆಸೆಯನ್ನೂ ತುಂಬಿಕೊಂಡಿದ್ದಾಳೆ.   ಭೌಗೋಳಿಕವಾಗಿ ೬,೮೫೨ ಸಣ್ಣ ದ್ವೀಪಗಳ ಗುಂಪಿನ ಈ ದೇಶ “ಪೆಸಫ಼ಿಕ್ ಅಗ್ನಿಯ ವರ್ತುಲದಲ್ಲಿ” ಉಪಸ್ಥಿತವಾಗಿದ್ದು, ಪ್ರಾಕೃತಿಕವಾಗಿ ಭೂಕಂಪ ಮತ್ತು ಸುನಾಮಿಗಳ ಹೊಡೆತದಿಂದ ಆಗಾಗ ತತ್ತರಿಸಬೇಕಾದ ಪರಿಸ್ಥಿತಿಯಲ್ಲಿದೆ. ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಇಲ್ಲಿನ ಜನತೆ ತನ್ನ ಕಷ್ಟಸಹಿಷ್ಣುತೆ ಮತ್ತು ಪರಿಶ್ರಮದಿಂದ ಸಾಧಿಸಿರುವ ಕಾರ್ಯಗಳು ಅಪಾರ. ಇಷ್ಟಲ್ಲದೇ, ಎರಡನೆಯ ಮಹಾಯುದ್ಧದ ಕೊನೆಯಲ್ಲಿ, ಅಮೆರಿಕೆಯ ಅಣುಬಾಂಬ್ ದಾಳಿಗೆ ತುತ್ತಾಗಿ, ತನ್ನ ಎರಡು ಮುಖ್ಯನಗರಗಳನ್ನು ಪೂರ್ಣವಾಗಿ ಕಳೆದುಕೊಂಡ ಈ ದೇಶದ ಜನತೆ, ಕೇವಲ ಒಂದು ದಶಕದಲ್ಲೇ ಮತ್ತೊಮ್ಮೆ ಪುಟಿದೆದ್ದು, ಯಂತ್ರ-ತಂತ್ರ ಜ್ಞಾನದಲ್ಲಿ ಅಗ್ರಗಣ್ಯರೆನಿಸಿಕೊಂಡು ಪಶ್ಚಿಮ ದೇಶಗಳಿಗೆ ತನ್ನ ಸವಾಲನ್ನು ಎಸೆದು, ಎಲಕ್ಟ್ರಾನಿಕ್ಸ್, ಆಟೋಮೊಬೈಲ್ ಮತ್ತು ಇನ್ನಿತರ ವೈಜ್ಞಾನಿಕ ಕ್ಷೇತ್ರಗಳಲ್ಲಿ ತನ್ನ ಶ್ರೇಷ್ಠತೆಯನ್ನು ಮೆರೆದಿರುವುದು ನಿಜಕ್ಕೂ ಪ್ರಶಂಸನೀಯವಾದ ಸಂಗತಿ.

ಲಂಡನ್ ಟು ಒಸಾಕ: ನನ್ನವರು ಈಗಾಗಲೇ ಸುಮಾರು ೫ ಬಾರಿ ಜಪಾನ್ ದ್ವೀಪಗಳಲ್ಲಿ ಹಲವಕ್ಕೆ ಭೇಟಿಯಿತ್ತಿದ್ದು, ಪ್ರತೀ ಬಾರಿಯೂ ಮಕ್ಕಳ ಶಾಲೆ ಕಾಲೇಜುಗಳ ಚಟುವಟಿಕೆಗಳ ಮಧ್ಯದಲ್ಲಿ ಸಿಲುಕಿದ್ದ ನನಗೆ, ಇತ್ತೀಚೆಗೆ ಈ ಹಾವಳಿಗಳಿಂದ ಮುಕ್ತಿ ದೊರೆತಿರುವ ಕಾರಣ, ಈ ಬಾರಿ ಈ ಪ್ರವಾಸದಲ್ಲಿ ನನ್ನವರ ಜೊತೆ ಪ್ರಯಾಣ ಮಾಡುವ ಅವಕಾಶ ದೊರೆಯಿತು. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳುವ ಮೂರ್ಖತನ ಮಾಡದೆ ಅವರ ಜೊತೆಯಲ್ಲಿ ನಡೆದೆ. ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದಿಂದ ಹೊರಟು, ಪ್ಯಾರಿಸ್ ಮಾರ್ಗವಾಗಿ ಸುಮಾರು ೧೨ ಗಂಟೆಗಳ ಪ್ರಯಾಣದ ನಂತರ, ಹಾನ್ಷು ಮುಖ್ಯ ದ್ವೀಪದಲ್ಲಿನ ನಗರಗಳಲ್ಲಿ ಒಂದಾದ ಒಸಾಕವನ್ನು ತಲುಪಿದೆವು. ವಿಮಾನ ನಿಲ್ದಾಣದಲ್ಲೇ ಅಲ್ಲಿನ ಜನರ ಸಭ್ಯ ಸಂಸ್ಕೃತಿಯ ಪರಿಚಯವಾಯಿತು. ನೋಡಿದೊಡನೆ ತಲೆಬಾಗಿಸಿ ಸ್ವಾಗತಿಸುವ ಇಲ್ಲಿನ ಜನತೆ, ಬಲು ಮೃದು ಭಾಷಿಗಳು. ಇಂಗ್ಲೀಷ್ ಭಾಷೆ ತಿಳಿದವರು ಬಹಳ ಕಡಿಮೆ ಮಂದಿ. ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ದೃಢವಾಗಿ ಹಿಡಿದು, ಪಶ್ಚಿಮದ ಸಂಸ್ಕೃತಿಯ ದಾಳಿಗೆ ಆದಷ್ಟೂ ಒಳಗಾಗದಂತೆ ನಿಂತಿರುವ ಜನತೆ, ಪ್ರವಾಸಿಗರಿಗೆ ಸಹಾಯ ತೋರುವುದರಲ್ಲಿ ಹಿಂಜರಿಯರು. ಆದರೆ, ಹೊರಗಿನವರನ್ನು ಇಲ್ಲೇ ನೆಲಸಲೂ ಬಿಟ್ಟಿಲ್ಲಾ ! ಇಲ್ಲಿನ ಜನಸಂಖ್ಯೆಯಲ್ಲಿ, ೯೮.೨% ಜಪಾನಿಯರೇ ಇದ್ದಾರೆ. ಉಳಿದವರು ಚೀನಿಯರು, ದಕ್ಷಿಣ ಕೊರಿಯಾದವರಾಗಿದ್ದು, ಕೇವಲ ೦.೨% ರಷ್ಟು ಮಾತ್ರಾ ಪ್ರಪಂಚದ ಉಳಿದ ದೇಶಗಳ ಜನರಾಗಿದ್ದಾರೆ. ಹೊರಗಿನವರನ್ನು ಆದಷ್ಟೂ ಹೊರಗೇ ಇಟ್ಟಿದ್ದಾರೆ ಎಂಬ ವಿಷಯ ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಸರಿ ಇಲ್ಲಿಂದ ಕಿಯೋಟೋ ನಗರಕ್ಕೆ ತೆರಳಲು ನಮಗಾಗಿ ಸೂಪರ್ ಡೀಲಕ್ಸ್ ಟ್ಯಾಕ್ಸಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಟ್ಯಾಕ್ಸಿಯ ಚಾಲಕ ಧರಿಸಿದ್ದ ಗರಿಮುರಿಯಾಗಿದ್ದ ಸಮವಸ್ತ್ರ, ಟೋಪಿ, ಕೈಯಲ್ಲಿನ ಶ್ವೇತ ವರ್ಣದ ಕೈಚೀಲ, ಬೂಟುಗಳು ಈ ದೇಶದ ಶಿಸ್ತಿನ ರೀತಿ-ರಿವಾಜನ್ನು ಇಲ್ಲಿಯೇ ನಮಗೆ ಪರಿಚಯಿಸಿತು. ತನ್ನ ಹತ್ತಿರದಲ್ಲಿನ, ದೂರನಿಯಂತ್ರಣದ ಗುಂಡಿಯನ್ನದುಮಿ, ಟ್ಯಾಕ್ಸಿಯ ಬಾಗಿಲನ್ನು ತೆಗೆದು ತಲೆಬಾಗಿಸಿ ನಮ್ಮ ಒಳಗೆ ಕುಳಿತುಕೊಳ್ಳುವಂತೆ ವಿನಯಪೂರ್ವಕವಾಗಿ ಆದೇಶಿಸಿ, ನಮ್ಮ ಸಾಮಾನುಗಳನ್ನೆಲ್ಲಾ ತಾನೇ ಒಳಗಿರಿಸಿದ. ಪ್ರಯಾಣಿಕರು ಕೂರುವ ಆಸನಗಳಿಗೆ ಹೊದಿಸಲಾಗಿದ್ದ ಬಿಳಿಯ ಬಣ್ಣದ ಹೊದಿಕೆಯನ್ನು ಕಂಡು, ಅಲ್ಲಿ ಯಾವ ರೀತಿಯ ಕೊಳಕನ್ನೂ ಮಾಡುವುದು ಅನುಚಿತವೆಂದು ಪ್ರಯಾಣಿಕರಿಗೆ ತಕ್ಷಣವೇ ಅರಿವಾಗುವಂತೆ ಮಾಡುವ ಇವರ ಜಾಣ್ಮೆಗೆ ಭೇಷ್ ಎನ್ನಲೇಬೇಕು. ನನ್ನ ಗೆಳೆಯರ ಕುಟುಂಬವೊಂದು, ಈಗ ಮೂರು ವರ್ಷಗಳ ಹಿಂದೆ ಜಪಾನಿಗೆ ಹೋದಾಗ, ವಿಮಾನನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರದ ಕ್ಯೂನಲ್ಲಿದ್ದಾಗ, ಅವರ ೧೫ ವರುಷದ ಬಾಲಕ, ತಾನು ತಿನ್ನುತ್ತಿದ್ದ ಆಲೂ ಚಿಪ್ಸಿನ ಚೂರೊಂದನ್ನು ನೆಲದ ಮೇಲೆ ಬೀಳಿಸಿದ ತಕ್ಷಣವೇ, ಅವನ ಹಿಂದಿದ್ದ ಜಪಾನೀ ತರುಣ ಒಡನೆಯೇ ಅದನ್ನೆತ್ತಿ ಅಲ್ಲಿದ್ದ ಕಸದ ಬುಟ್ಟಿಗೆ ಹಾಕಿದನಂತೆ. ಇದು ನಮ್ಮ ಗೆಳೆಯ ಕುಟುಂಬದವರು ನಾಚಿ ತಲೆತಗ್ಗಿಸುವಂತಾಯಿತು ಎಂದು ಅವರ ಬಾಯಿಂದಲೇ ಕೇಳಿದ್ದ ನಮಗೆ ಈ ದೇಶದ ಶಿಸ್ತಿನ ಅರಿವಿತ್ತು.

ಕಿಯೋಟೋ: ಸುಮಾರು ೧ ಗಂಟೆ ೩೦ ನಿಮಿಷಗಳ ಸುಖಕರ ಪ್ರಯಾಣದ ನಂತರ ಜಪಾನಿನ ಮತ್ತೊಂದು ಮುಖ್ಯ ನಗರ ಕಿಯೋಟೋವನ್ನು ತಲುಪಿದೆವು. ಒಸಾಕಾ ನಗರದಿಂದ, ಕಿಯೋಟೋವರೆಗಿನ ಈ ಪೂರ್ಣ ಮಾರ್ಗದಲ್ಲಿ, ಸ್ವಲ್ಪವನ್ನೂ ಬಿಡದೆ, ಎಲ್ಲೆಡೆ ಕಟ್ಟಡಗಳನ್ನು ನಿರ್ಮಿಸಿರುವ ವ್ಯವಸ್ಥೆ ನೋಡಿದರೆ ತಿಳಿಯುತ್ತದೆ,   ಭೌಗೋಳಿಕವಾಗಿ ಬರಿ ಪರ್ವತಮಯವಾಗಿರುವ ಈ ದೇಶದಲ್ಲಿ, ಸಮತಟ್ಟಾದ ಪ್ರದೇಶ ಬಲು ಕಡಿಮೆ ಎನ್ನುವ ಅಂಶ. ಕ್ರಿ.ಶ.೭೯೪ ರಿಂದ ೧೮೬೮ರ ವರೆಗೆ ಜಪಾನಿನ ರಾಜಧಾನಿ ಮತ್ತು ಚಕ್ರವರ್ತಿಯ ನಿವಾಸ ಸ್ಥಾನವೆನಿಸಿದ್ದ ಈ ನಗರ ಬಲು ಸುಂದರ ಮತ್ತು ಜಪಾನಿನ ಚಾರಿತ್ರಿಕ, ಐತಿಹಾಸಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿದು ನಿಂತ ನಗರವೆನಿಸಿದೆ. ಇಲ್ಲಿರುವ ಅನೇಕ ದೇವಾಲಯಗಳು ಮತ್ತಿತರ ಪ್ರಾಚೀನ ಕಟ್ಟಡಗಳು ೨ನೆಯ ಮಹಾಯುದ್ಧದ ಸಮಯದಲ್ಲಿ ಅಮೇರಿಕನ್ನರು ಈ ನಗರಕ್ಕೆ ಅಣುಬಾಂಬಿನ ದಾಳಿಯನ್ನು ನಡೆಸದಂತೆ ಪ್ರೇರೇಪಿಸಿದ್ದು, ಈಗ ಯುನೆಸ್ಕೋ ವಿಶ್ವ ಸಂಸ್ಕೃತಿಯ ಸ್ಮಾರಕಗಳೆಂದು ಗುರುತಿಸಲ್ಪಟ್ಟಿವೆ. ಇಲ್ಲಿನ ನಗರಗಳು ಬಲು ಚೊಕ್ಕ ಮತ್ತು ಸ್ವಚ್ಛ. ಭೌಗೋಳಿಕವಾಗಿ ಬಹುತೇಕ ಪರ್ವತಗಳಿಂದಲೇ ಆವರಿಸಲ್ಪಟ್ಟಿರುವ ಈ ದೇಶದಲ್ಲಿ, ಸಮತಟ್ಟಾದ ಪ್ರದೇಶವೇ ಕಡಿಮೆ. ಆದ್ದರಿಂದಲೇ, ಈ ದ್ವೀಪಗಳ ಗುಂಪಿನಲ್ಲಿ ಹಿರಿಯದಾದ ಈ ಹಾನ್ಷು ದ್ವೀಪದಲ್ಲಿ ಎಲ್ಲೆಡೆಯಲ್ಲಿ ಜನಗಳು ವಾಸವಾಗಿದ್ದು, ನಗರಗಳು ತುಂಬಿವೆ. ಇಲ್ಲಿ ಜನಸಾಂದ್ರತೆ ಬಲು ದಟ್ಟವಾಗಿದ್ದು, ಜನಗಳು ವಾಸಿಸುವ ಮನೆಗಳು ಬಲು ಚಿಕ್ಕವು. ಕೇವಲ ಪೆಟ್ಟಿಗೆಯಂತೆ ಕಟ್ಟಲ್ಪಟ್ಟ ಈ ಮನೆಗಳನ್ನು, ಭೂಕಂಪದ ಹಾವಳಿಯ ಕಾರಣ, ಮರ ಮತ್ತು ರಟ್ಟಿನಂತಹ ಹಗುರಾದ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿದೆ. ರಸ್ತೆಯ ಎರಡು ಬದಿಯಲ್ಲೂ “ಜೀವಂತ ಪಳಿಯೊಳಕೆ” (Living fossil),ಎಂದೇ ಸಸ್ಯಪ್ರಪಂಚದಲ್ಲಿ ಪರಿಚಿತವಾಗಿರುವ “ಗಿಂಕೋ ಬೈಲೋಬ” (Ginkgo biloba)ವೃಕ್ಷಗಳಿಂದ ಕಂಗೊಳಿಸುತ್ತವೆ. ಈ ಮರಗಳು ಜಪಾನಿಯರಿಗೆ ಬಲು ಪವಿತ್ರವೆನಿಸಿದ್ದು, ಇಲ್ಲಿನ ದೇವಾಲಯಗಳಲ್ಲೂ ಇವನ್ನು ಕಾಣಬಹುದು. ಸರಿ ನಮಗಾಗಿ ವ್ಯವಸ್ಥೆ ಮಾಡಿದ್ದ ಸಣ್ಣ ಫ಼್ಲಾಟ್ ತಲುಪಿದೆವು. ಒಂದು ಕೋಣೆಯ ಈ ಪುಟ್ಟ ಮನೆಯಲ್ಲಿ ಎಲ್ಲವೂ ಚೊಕ್ಕ ಮತ್ತು ಸೌಕರ್ಯಗಳಿಂದ ವ್ಯವಸ್ಥಿತವಾಗಿದ್ದು ನಮ್ಮ ೧೮ ದಿನಗಳ ವಾಸಕ್ಕೆ ಅನುಕೂಲವಾಗಿತ್ತು. ಸರಿ ಸ್ವಲ್ಪ ವಿಶ್ರಮಿಸಿದ ನಂತರ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ಕೊಳ್ಳಲು ಅಂಗಡಿಯೆಡೆ ಹೊರಟೆವು. ಜಪಾನಿಯರ ಮುಖ್ಯ ಆಹಾರ ಅಕ್ಕಿ, ಮೀನು ಮತ್ತು ತರಕಾರಿ ಆದ್ದರಿಂದ ನಮಗೆ ಆಹಾರದ ವಿಷಯದಲ್ಲಿ ಅಷ್ಟೇನೂ ತೊಂದರೆಯೆನಿಸಲಿಲ್ಲ. ಹಾಗಲಕಾಯಿ, ಬೂದುಕುಂಬಳಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವೂ ದೊರೆತವು. ನಾವೇ ಸ್ವಯಂಪಾಕ ನಡೆಸುತ್ತಿದ್ದರಿಂದ, ನಮ್ಮ ಆಹಾರವನ್ನೇ ಸೇವಿಸಿದೆವು.

ಕಿಯೋಟೋ ಪ್ರವಾಸ: ಜಿಂಗು ಶ್ರೈನ್.

DSC_0017
ಜಿಂಗು ಶ್ರೈನ್ , ಕಿಯೋಟೋ

ನನ್ನವರು ಇಲ್ಲಿಗೆ ತಮ್ಮ ಅಕೆಡೆಮಿಕ್ ಕಾರ್ಯಕ್ಕಾಗಿ ಬಂದದ್ದರಿಂದ ಅವರ ಕೆಲಸ ಮರುದಿನವೇ ಪ್ರಾರಂಭವಾಯಿತು. ಸರಿ ನನಗೆ ಪೂರ್ಣ ವಿರಾಮವಾದ್ದರಿಂದ ಈ ಪಟ್ಟಣವನ್ನು ಸುತ್ತುವುದು ಸುಲಭವಾಯಿತು. ಅತ್ಯುತ್ತಮ ಸಾರಿಗೆ ಸಂಪರ್ಕ ಈ ದೇಶದಲ್ಲಿರುವುದರಿಂದ ಸುತ್ತುವ ಕಾರ್ಯ ಕಷ್ಟವೇನಲ್ಲ. ಮೊದಲ ದಿನ ನಮ್ಮ ಮನೆಯ ಹತ್ತಿರದಲ್ಲೇ ಕಾಲುನಡಿಗೆಯಲ್ಲೇ ಕ್ರಮಿಸಬಹುದಾದ ಅಂತರದಲ್ಲಿದ್ದ ಪ್ರಸಿದ್ಧ ಮಂದಿರ “ಹೈನ್ ಜಿಂಗು ಶ್ರೈನ್” ಕಡೆಗೆ ಧಾವಿಸಿದೆ. ೧೯೩೮ರಲ್ಲಿ ಹೈನ್ ರಾಜ್ಯದ ಚಕ್ರವರ್ತಿಗಳಾದ ಕಣ್ಮು ಮತ್ತು ಕೋಮೆ ನೆನಪಿನಲ್ಲಿ ಕಿಯೋಟೋ ನಗರದ ನಾಗರೀಕರು ಇವರೀರ್ವರು ಜಪಾನ್ ದೇಶದ ನಿರ್ಮಾಣದಲ್ಲಿ ಗೈದ ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಈ ದೇಗುಲವನ್ನು ಪುನರ್ನಿರ್ಮಿಸಿ, ೧೯೪೦ರಲ್ಲಿ ಅದನ್ನು ದೇಶಕ್ಕೆ ಸಮರ್ಪಿಸಿದರು. ಶಾಂತಿ ಸೌಂಧರ್ಯಗಳೇ ಮೈವೆತ್ತಂತಿರುವ ಈ ದೇಗುಲ ವಿಶಾಲವಾದ ಕೆಂಪು ಬಣ್ಣದ ದ್ವಾರವನ್ನೊಳಗೊಂಡಿದ್ದು, ಒಳಗಿನ ಚೌಕಾಕಾರದ ಪ್ರಾಂಗಣ, ಮೂಲದೇವರ ಸ್ಥಾನ ಮತ್ತು ವಿಶಾಲವಾದ ಸುಂದರ ಉದ್ಯಾನವನ್ನು ಹೊಂದಿದೆ. ಜಪಾನಿನ ಉದ್ಯಾನಗಳು ಕಣ್ಣಿಗೆ ಹಬ್ಬ. ನಡುವೆ ಕೊಳ, ಕೊಳದಲ್ಲಿನ ಕೆಂಪು ಮತ್ತು ಬಿಳಿಯ ತಾವರೆಗಳು, ಅದರಲ್ಲಿನ ಬಣ್ಣಬಣ್ಣದ ಮೀನುಗಳು, ಜಪಾನಿಯರ ಅಚ್ಚುಮೆಚ್ಚಿನ ಬೋನ್ಸಾಯಿ ರೀತಿಯಲ್ಲಿ ಬೆಳಸಿದ ಪೈನ್, ಮೇಪಲ್, ಓಕ್, ಬರ್ಚ್ ಜಾತಿಯ ವೃಕ್ಷಗಳು, ಅಲ್ಲಲ್ಲೇ ನಿರ್ಮಿಸಿದ ಚೆಲುವಾದ ಮಂಟಪಗಳು, ಚಿಲಿಪಿಲಿಗುಟ್ಟುವ ಪಕ್ಷಿಗಳು ಮತ್ತು ಇವೆಲ್ಲದಕ್ಕಿಂತ, ಶಾಂತತೆಯೇ ಮೈವೆತ್ತಂತಹ ವಾತಾವರಣ ನಮ್ಮ ಸುತ್ತಲಿನ ಪ್ರಪಂಚವನ್ನೇ ಮರೆಯುವಂತೆ ಮಾಡುತ್ತದೆ. ಹಕ್ಕಿಗಳ ಕಲರವ ನನ್ನ ಕಿವಿಗಳಿಗೆ ಬಿದ್ದರೂ, ಮನ ಈ ಸುಂದರ ವಾತಾವರಣದಲ್ಲಿ, ಕೋಗಿಲೆಯ ಗಾನವಿದ್ದರೆ ಇನ್ನೂ ಹೆಚ್ಚಿನ ಆನಂದ ಲಭಿಸುತ್ತಿತ್ತು ಎಂದು ಹೇಳುತ್ತಿತ್ತು. ಇದು ಹುಚ್ಚಲ್ಲವೇ?  ನಾನು ಜಪಾನ್ ದೇಶದಲ್ಲಿ ಕೋಗಿಲೆಯ ಗಾನವನ್ನರಸುವುದು “ಎತ್ತಣ ಮಾಮರ ಎತ್ತಣ ಕೋಗಿಲೆ” ಎಂಬಂತೆ, ಇಲ್ಲಿ ಬೋನ್ಸಾಯ್ ಮರಗಳಲ್ಲಿ ಕನ್ನಡದ ಕೋಗಿಲೆಯ ಗಾನಕ್ಕೆ ಹಂಬಲಿಸುವುದು ! ನನ್ನ ಕ್ಯಾಮೆರಾ ಸದ್ದಿಲ್ಲದೇ ತನ್ನ ಕೆಲಸ ಮಾಡುತ್ತಿತ್ತು. ಅಲ್ಲಿದ್ದ ಹಲವೇ ಪ್ರವಾಸಿಗಳಲ್ಲಿ ಹೆಚ್ಚಿನವರು ಅಮೆರಿಕನರು. ಅಲ್ಲೊಬ್ಬ ಇಲ್ಲೊಬ್ಬರು ಹಿರಿಯ ಜಪಾನಿ ಪ್ರಜೆಗಳು, ತಮ್ಮ ಕುಟುಂಬದ ಸದಸ್ಯರೊಡನೆ ದೇವಾಲಯಕ್ಕೆ ಭೇಟಿ ನೀಡಿದಂತಿದ್ದ ಆ ದಿನ ಬಲು ಶಾಂತಿಮಯವೆನಿಸತು ನನ್ನ ಪಾಲಿಗೆ. ಸೌಜನ್ಯತೆಯ ಪ್ರತಿರೂಪವೆನಿಸಿದ ಜಪಾನಿಯರು, ನಾನು ನನ್ನ ಛಾಯಾಚಿತ್ರವನ್ನು ತೆಗೆಯಲು ಕೋರಿದೊಡನೆ ನನ್ನ ಕೋರಿಕೆಯನ್ನು ಮನ್ನಿಸಿ ನನ್ನ ಹಲವು ಚಿತ್ರಗಳನ್ನು, ಆ ಸುಂದರ ದೃಶ್ಯದ ಹಿನ್ನೆಲೆಯಲ್ಲಿ ತೆಗೆದರು. ಇಲ್ಲಿ ನಾನು ಹೇಳಲೇ ಬೇಕಾದ ಮತ್ತೊಂದ ಅಂಶವೆಂದರೆ, ಜಪಾನಿಯರಿಗೆ ಕ್ಯಾಮೆರಾ ಮತ್ತು ಫೋಟೋ ತೆಗೆಯುವ ಬಗ್ಗೆ ಇರುವ ಹುಚ್ಚು. ರಸ್ತೆಗಳಲ್ಲಿ, ಎಲ್ಲಾ ಪ್ರವಾಸಿ ತಾಣಗಳಲ್ಲಿ, ಇಲ್ಲಿನ ತರುಣರು ಮತ್ತು ಹಿರಿಯರು ನಿರಂತರವಾಗಿ ತಮ್ಮ ಕ್ಯಾಮೆರಾಗಳನ್ನು ಕ್ಲಿಕ್ಕಿಸುತ್ತಲೇ ಇರುತ್ತಾರೆ. ಹಲವು ಹತ್ತು ಮಾದರಿಗಳ ಅತ್ಯುತ್ತಮ ಕ್ಯಾಮೆರಾ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ನಿರ್ಮಾಣದಲ್ಲಿ ತಮ್ಮ ಹಿರಿಮೆ ಗರಿಮೆಗಳನ್ನು ಮೆರೆದ ಈ ನಾಡಿನ ಜನರಿಗೆ, ಫೋಟೊ ತೆಗೆಯುವ ಹುಚ್ಚು ಇದ್ದರೆ ಆಶ್ಚರ್ಯವೇನು? ಮರುದಿನದ ಕಿಯೋಟೋ ಬೊಟಾನಿಕಲ್ ಗಾರ್ಡನ್ನಿನ ಭೇಟಿಯನ್ನು ನನ್ನ ಮನ ಆಗಲೇ ಎದಿರು ನೋಡುತ್ತಿತ್ತು.

ಕಿಯೋಟೋ ಬೊಟಾನಿಕಲ್ ಗಾರ್ಡನ್:

ತಾವರೆಯ ಕೊಳ
ತಾವರೆಯ ಕೊಳ

 

ದೇಗುಲದ ಉದ್ಯಾನ ಮಂಟಪ
ದೇಗುಲದ ಉದ್ಯಾನ ಮಂಟಪ

ಜಿಂಗು ಶ್ರೈನ್

ಸಸ್ಯಶಾಸ್ತ್ರವನ್ನು ಅಭ್ಯಸಿಸಿದ ನನಗೆ ಈ ಜಾಗ ಬಲು ಪ್ರಿಯವಾದ ಸ್ಥಳ. ಕಿಯೋಟೋ ಪ್ರೆಫ಼ೆಕ್ಟುಯಲ್ ಗಾರ್ಡನ್ ಎಂದೂ ಹೆಸರಾಗಿರುವ, ಸುಮಾರು ೨೪೦,೦೦೦ ಚದುರ ಕಿಲೋಮೀಟರುಗಳ ವಿಶಾಲವಾದ ಪ್ರದೇಶವನ್ನು ಹೊಂದಿರುವ ಈ ಸಸ್ಯೋದ್ಯಾನ ಕಾಮೋ ನದಿಯ ದಡಲ್ಲಿದ್ದು ೧೨,೦೦೦ ಪ್ರಭೇಧಗಳನ್ನೊಳಗೊಂಡ ೧೨೦,೦೦೦ ಸಸ್ಯಗಳನ್ನು ಹೊಂದಿದೆ. ಈ ಪೂರ್ಣ ಸಸ್ಯೋದ್ಯಾನವನ್ನು ಬೊಂಬಿನ ಉದ್ಯಾನ, ಬೋನ್ಸಾಯಿ ಗಿಡಗಳ ಪ್ರದರ್ಶನ ವಿಭಾಗ, ಕಮೀಲಿಯಾ ಉದ್ಯಾನ, ಚೆರ್ರಿ ಮರಗಳ ವಿಭಾಗ, ಯೂರೋಪಿಯನ್ ಮಾದರಿ ಉದ್ಯಾನ, ಗುಲಾಬಿ, ಹೈಡ್ರಾಂಜಿಯ, ಐರಿಸ್, ಪಿಯೋನಿ, ಹಾಗೂ ಲೋಟಸ್ ಕೊಳ ಹೀಗೆ ಅನೇಕ ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ನೋಡುಗನ ಕಣ್ಣಿಗೆ ಹಬ್ಬದಂತಿರುವ ಈ ಉದ್ಯಾನವನ ನನ್ನನ್ನು ಮರುಳುಗೊಳಿಸಿತು. ಸುಮಾರು ೪ ಗಂಟೆಗಳ ಕಾಲ ಇಲ್ಲಿ ಸುತ್ತಾಡಿದ ನನಗೆ ಸ್ವಲ್ಪವೂ ದಣಿವೆನಿಸಲಿಲ್ಲ. ಗುಲಾಬಿಯ ವನದಲ್ಲಿನ ಬಣ್ಣದ ಪುಷ್ಪಗಳು ಅಲ್ಲಿದ್ದ ಎಲ್ಲರನ್ನೂ ತನ್ನ ವರ್ಣಗಳ ಓಕುಳಿಯಲ್ಲಿ ಮೀಯಿಸಿತ್ತು. ನೀಲಿ ಬಣ್ಣದ ಗುಲಾಬಿಗಳಂತೂ ತನ್ನ ಬಳಿಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದ್ದು ತೋಟಗಾರಿಕೆಯ ಕಲೆಯಲ್ಲಿನ ಉತ್ಕೃಷ್ಟತೆಯನ್ನು ಎತ್ತಿ ತೋರುತ್ತಿತ್ತು. ಉದ್ಯಾನವನದಲ್ಲಿ ಹೀಗೆ ಸುತ್ತಾಡುತ್ತಿದ್ದಾಗ, ಹಿರಿಯ ಜಪಾನಿ ಪ್ರಜೆಯೊಬ್ಬ ತನ್ನ ಗುಂಪಿನವರನ್ನು ಬಿಟ್ಟು ಅಲ್ಲೇ ಕುಳಿತಿದ್ದ ನನ್ನೆಡೆ ಬಂದು ಇಂಗ್ಲೀಷಿನಲ್ಲಿ “Where are you from?”  ಎಂದು ಪ್ರಶ್ನಿಸಿದಾಗ, ನಾನು ಇಂಗ್ಲೇಂಡಿನಲ್ಲಿರುವ ಲಂಡನ್ ನಗರದಿಂದ ಎಂದಾಗ, ಒಡನೆಯೇ ಅವನ ಮುಖ ಅರಳಿ  “Oh that’s where the queen lives, I love Europe”  ಎಂದು ಉದ್ಗರಿಸಿದ ಆತನನ್ನು ಕಂಡು ನನಗೆ ಖುಷಿಯೆನಿಸಿತು.

ನಲಿವ ಗುಲಾಬಿ ಹೂವು!
ನಲಿವ ಗುಲಾಬಿ ಹೂವು!

ಚೆಲುವಿನ ಹಳದಿ

ಕಿಯೋಟೋ ಮ್ಯೂಸಿಯಮ್: ಸರಿ ಮಾರನೆಯ ದಿನ ನನ್ನ ಗಮನ ಆ ನಗರದಲ್ಲಿದ್ದ ವಸ್ತುಸಂಗ್ರಹಾಲಯಗಳೆಡೆ ಹೊರಳಿತು. ಜಪಾನಿಯರು ಪಿಂಗಾಣಿ ಕಲೆ, ವಸ್ತ್ರವಿನ್ಯಾಸ, ಪುಷ್ಪ ಜೋಡನೆಯ ಕಲೆ “ಇಕೆಬಾನಾ”, ಪೇಪರಿನ ಮಾದರಿ ರಚನೆಯ “ಓರಿಗ್ಯಾಮಿ” ಹೀಗೆ ಹಲವು ಹತ್ತು ಕಲೆಗಳಲ್ಲಿ ಮಾಹೀರರರು ಎಂಬುದು ಜನವಿದಿತವಾದದ್ದು. ಹಾಗಾಗಿ ಅವರ ವಸ್ತುಸಂಗ್ರಹಾಲಯಗಳನ್ನು ನೋಡುವುದು ಬಲು ಆಸಕ್ತಿಯ ವಿಷಯವೆಂದು ಅನೇಕ ಕಡೆಯಲ್ಲಿ ಓದಿದ್ದೆ. ಕಡೆಗೆ ಹತ್ತಿರದಲ್ಲೇ ಇದ್ದ Kyoto National Museum of modern Art , Kyoto municipal museum of Artಗಳನ್ನು ನೋಡಲು ನಿರ್ಧರಿಸಿದೆ. ಜಪಾನಿನ ಸಮಕಾಲೀನ ಕಲಾವಸ್ತುಗಳನ್ನು ಪ್ರದರ್ಶಿಸಿರುವ ಈ ಸಂಗ್ರಹಾಲಯದಲ್ಲಿ, ಪ್ರಸಿದ್ಧ ಜಪಾನಿನ ಕಲಾಕಾರರಾದ ಕಾನ್ಜೀರೋ, ಕಿಯೋಶಿ, ಕೋಬಾಯಾಶಿ ಕೋಕೆ, ಯಸೂಯಿ ಸೊಟಾರೋ, ವಿರಚಿತ ಕಲಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಯೂರೋಪಿನ ಪ್ರಸಿದ್ಧ ವಸ್ತುಸಂಗ್ರಹಾಲಯಗಳನ್ನು ನೋಡಿದ ನಂತರ ಈ ಸಂಗ್ರಹಾಲಯ ಸ್ವಲ್ಪ ನೀರಸವೆಸುತ್ತದೆ. ಆದರೂ ಜಪಾನಿಯರ ನಾಜೂಕಿನ ಕಲಾವಂತಿಕೆಯ ವೈಶಿಷ್ಟ್ಯತೆ ಮನದಲ್ಲಂತೂ ಉಳಿಯುತ್ತದೆ. ಸೆರಾಮಿಕ್ಸ್ ಕಲೆಯಲ್ಲಿನ ಅವರ ಅಪರೂಪದ ಬಣ್ಣಗಳ ಆಯ್ಕೆ, ಚಿತ್ರಗಳ ರಚನೆ ನೋಡುಗರ ಮನಸೆಳೆಯುವಲ್ಲಿ ಯಶಸ್ವಿಯಾಗುವುದು. ಆದರೆ ಇಲ್ಲ್ರುವ ಪ್ರಸಿದ್ಧ ಜಪಾನಿಯರ ಕ್ಯಾಲಿಗ್ರಫಿ ಮ್ಯೂಸಿಯಮ್ ಬಲು ನಿರಾಶಾದಾಯಕವೆನಿಸಿತು. ಕಾರಣ ಅಲ್ಲಿದ್ದ ಪ್ರದರ್ಶಿತ ವಸ್ತುಅಗಳಲ್ಲ! ಅಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಯಾವ ಮಾಹಿತಿಯೂ ಇಲ್ಲದ್ದರಿಂದ, ಅಲ್ಲಿ ಏನಿದೆ ಎನ್ನುವುದೇ ನನಗೆ ತಿಳಿಯಲಿಲ್ಲ! ನಾನು ಅನೇಕ ಸ್ವಯಂಸೇವಕಿಯರನ್ನು ಹತ್ತು ಬಾರಿ ಕೇಳಿ ಸುಸ್ತಾದೆ. ಅವರಿಗೆ ನನಗೇನು ಬೇಕೂ ಎನ್ನುವುದೂ ತಿಳಿಯದಾಯಿತು. ಇಲ್ಲಿ ಇಂಗ್ಲೀಷ್ ಭಾಷಾ ಪರಿಣಿತಿಯ ಕೊರತೆ ಎದ್ದು ಕಾಣುತ್ತದೆ.

ಪಿಂಗಾಣಿ ಶಾಪಿಂಗ್: ಈ ವಸ್ತುಸಂಗ್ರಹಾಲಯಗಳ ಬಳಿ ಇರುವ ಅಂಗಡಿಗಳಲ್ಲಿ ದೊರಕುವ ಅಪರೂಪದ ಜಪಾನಿ ಕಲಾವಂತಿಗೆಯ ನೆನಪಿನ ಕುರುಹುಗಳು ಗ್ರಾಹಕರನ್ನು ಮರುಳುಗೊಳಿಸುತ್ತದೆ. ಜಪಾನಿಯರ ಚಹಾ ಸಂಪ್ರದಾಯ ಪ್ರಪಂಚದಲ್ಲೇ ಹೆಸರಾದದ್ದು. ಚಹಾಪಾನೀಯಕ್ಕೆ ಸಂಬಂಧಪಟ್ಟ ಸಾಮಾನುಗಳ ಅಂಗಡಿಗಳನ್ನು ನೋಡಿ ನೋಡಿ ಮನಸೋತೆ. ನನ್ನ ಮಗಳು ಜಪಾನಿನ ಸಂಸ್ಕೃತಿಗೆ ಪೂರ್ಣವಾಗಿ ಮನಸೋತಿರುವ ಹುಡುಗಿ. ಅಲ್ಲಿನ ಭಾಷೆ, ಚರಿತ್ರೆ, ನಡೆನುಡಿಗಳ ಬಗ್ಗೆ ಓದಿ ನನ್ನ ತಲೆಗೂ ಬೇಕಾದಷ್ಟನ್ನು ತುಂಬಿದ್ದಾಳೆ. ಅವಳ ಕೋರಿಕೆಗಳು ಬಹಳಷ್ಟಿದ್ದವು. ಅವುಗಳಲ್ಲಿ ಒಂದು ಚಹಾ ಕುಡಿಕೆ. ಸರಿ ಅವಳ ಮನಸ್ಸನ್ನು ಸಂತೋಷಪಡಿಸಲು ಹುಡುಕಿಹೊರಟ ನನಗೆ ಯಾವುದನ್ನು ಕೊಳ್ಳಬೇಕೆಂಬುದು ಪೀಕಲಾಟವಾಯಿತು. ಹಲವು ಹತ್ತು ಮಾದರಿಯ ಚಹಾಕುಡುಕೆಗಳಿದ್ದವು ಅಲ್ಲಿ. ಪಿಂಗಾಣಿ, ಬೊಂಬಿನವು, ಲೋಹದಿಂದ ತಯಾರಿಸಿದ್ದು. ಸರಿ ಕಡೆಗೆ ಸಿಕ್ಕಿತು ನನ್ನ ಕೈಗೆಟಕುವ ಬೆಲೆಯಲ್ಲಿ ಅವಳಿಗಿಷ್ಟವಾಗುವ ಚಹಾ ಕುಡಿಕೆ.ಇನ್ನು ಜಪಾನಿಯರು ಊಟಮಾಡುವ ಅನ್ನದ ಬಟ್ಟಲುಗಳು. ಅವಂತೂ ಇನ್ನೂ ನೋಡಲು ಅಂದ. ಮೇಪಲ್, ಓಕ್, ಬರ್ಚ್ ಹೀಗೆ ಹಲವು ರೀತಿಯ ಮರಗಳಿಂದ ತಯಾರಿಸಿದ ವಿವಿಧ ಆಕಾರದ, ಗಾತ್ರದ ಈ ಬಟ್ಟಲುಗಳು, ಅವಕ್ಕೆ ಹೊಂದುವ ಚಮಚಗಳು, ಎಷ್ಟು ನೋಡಿದರೂ ಮನತಣಿಯದು. ಇದರ ಜೊತೆಗೆ ಜಪಾನಿಯರ ಬೊಂಬೆಗಳಂತೂ ಬಹಳ ಚಂದ. ಕೈಯಲ್ಲಿ ಬಣ್ಣ ಬಣ್ಣದ ಬೀಸಣಿಗೆ ಹಿಡಿದ ಹುಡುಗಿಯರು, ಒಂದುಕೈ ಎತ್ತಿ ಕುಳಿತ ಬೆಕ್ಕುಗಳು, ಬುದ್ಧನ ವಿವಿಧ ಭಂಗಿಗಳ ಮೂರ್ತಿಗಳು, ಬೊಂಬಿನ ಮತ್ತು ರಟ್ಟಿನಿಂದ ಮಾಡಿದ ಆಕರ್ಷಕ ಚಿತ್ರಗಳುಳ್ಳ ಜಪಾನೀ ಬೀಸಣಿಗೆಗಳು, ರಂಗುರಂಗಿನ ಕೊಡೆಗಳು, ತಲೆಗೆ ಹುಡುಗಿಯರು ಚುಚ್ಚಿಕೊಳ್ಳುವ ವಿವಿಧ ಬಗೆಯ ತಲೆ ಪಿನ್ನುಗಳು, ಒಂದೇ ಎರಡೇ ಅಬ್ಬಬ್ಬಾ ಹೇಳುತ್ತಾ ಹೋದರೆ ಕೊನೆಯೇ ಇಲ್ಲ! ಸರಿ ಕೊಳ್ಳುವುದನ್ನೆಲ್ಲಾ ಕೊಂಡಾಯಿತು.

ಚಿತ್ರ ಕೃಪೆ ಮತ್ತು ಬರಹ    -ಡಾ.ಉಮಾ ವೆಂಕಟೇಶ್

 

9 thoughts on “ಶಿಸ್ತು, ಸೌಜನ್ಯತೆ ಮತ್ತು ಚೆಲುವುಗಳ ಪ್ರತಿರೂಪವೆನಿಸಿದ ನಾಡು ಜಪಾನ್! ಡಾ.ಉಮಾ ವೆಂಕಟೇಶ್

  1. ನಿಮ್ಮ ಮಗಳಂತೇ, ನನಗೂ ಜಪಾನ್ ದೇಶವನ್ನು ನೋಡುವ ಹಂಬಲಕ್ಕೆ ನಿಮ್ಮ ಲೇಖನ ಒತ್ತು ಕೊಡುತ್ತಿದೆ. ನನ್ನ ಮಗನಿಗೆ “ಥಿಯಾ ಸಿಸ್ಟರ್ಸ್” ಎಂಬ ಪುಸ್ತಕ ತುಂಬಾ ಇಷ್ಟ. ಇದರಲ್ಲಿ ಐದು ಇಲಿಗಳು ಜಗತ್ತಿನ ವಿವಿಧ ಭಾಗಗಳಿಗೆ ಭೇಟಿ ನೀಡಿ ಸ್ಥಳೀಯರೊಡನೆ ಕಾಲ ಕಳೆಯುವ ಪ್ರಸಂಗಗಳ ಬಗ್ಗೆ ಬರೆಯುತ್ತಾರೆ. ಇದರಲ್ಲೊಂದು ಅವರ ಜಪಾನ್ ಪ್ರವಾಸದ ಪುಸ್ತಕವಿದೆ. ಅದರಂತೇ ನೀವೂ ಜಪಾನಿನ ಸಂಪ್ರದಾಯಗಳು, ಶಿಸ್ತು ಇವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದೀರಿ, ಧನ್ಯವಾದಗಳು.

    Like

  2. ಉಮಾ ಅವರೇ
    ನಿಮ್ಮ ಲೇಖನ ಕಣ್ಣಿಗೆ ಕಟ್ಟುವಂತೆ ಜಪಾನಿನ ಚಿತ್ರಣ ಕೊಟ್ಟದೆ. ಜೊತೆಗೆ ಅಂದವಾದ ಚಿತ್ರಗಳು ಮತ್ತು ಎಂದಿನಂತೆ. botanist ದೃಷ್ಟಿಯ ವರ್ಣನೆ. ಒಮ್ಮೆ ನೋಡಲೇ ಬೇಕಾದ ನಾಡು. ಸ್ವಲ್ಪ ಚೇತರಿಸಿಕೊಳ್ಳಲಿ!

    Like

  3. ಶಾಂತಾ ಅವರೇ ಖಂಡಿತ ಒಮ್ಮೆ ನೋಡಿ ಬನ್ನಿ ಈ ದೇಶದ ಚೆಲುವು, ಶಿಸ್ತು ಮತ್ತು ಸೌಜನ್ಯಕೆಯನ್ನು.
    ಉಮಾ ವೆಂಕಟೇಶ್

    Like

  4. Very informative Uma. My last visit was about ten years back on business. Finding veg. Food was rather tricky. However the care taken by my hosts was outstanding. Would like to go back as a tourist. What is impressive is the decipline in all areas and the work ethics.
    A recent “strike” by bus drivers was unique.the busses ran exactly on time as before but the drivers refused to collect fares!

    Liked by 1 person

    • ರಾಮಮೂರ್ತಿ ಅವರೇ, ನಿಮ್ಮ ಮಾತು ನಿಜ. ಅಲ್ಲಿ ಸಸ್ಯಾಹಾರಿಗಳಿಗೆ ಸ್ವಲ್ಪ ತೊಂದರೆ ಆಗುತ್ತದೆ. ಸತ್ಯ ಅವರಿಗೆ ಅಲ್ಲಿಯ ಇನ್ಸ್ಟಿಟ್ಯೂಟಿನವರು ಫ್ಲಾಟ್ ಒಂದನ್ನು ನಮ್ಮ ತಂಗುವಿಕೆಗೆ ಏರ್ಪಡಿಸಿದ್ದರು. ಅದು ಒಂದು ಫರ್ನಿಶ್ ಆಗಿದ್ದ ಫ್ಲಾಟ್. ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದೆವು. ಹಾಗಾಗಿ ಊಟ-ತಿಂಡಿಯ ಸಮಸ್ಯೆ ಎದುರಾಗಲಿಲ್ಲ. ಅಲ್ಲಿಯವರ ಶಿಸ್ತು-ಸೌಜನ್ಯಗಳನ್ನು ನೋಡಿ ಕಲಿಯಬೇಕು. ಅವರ ಕಷ್ಟ ಪಟ್ಟು ದುಡಿಯುವ ಮನೋಭಾವನೆಯಂತೂ ನೀವೇ ನೋಡಿದ್ದೀರಿ. ಅಲ್ಲಿ ಯಾವ ವರ್ಗದ ಜನಗಳು ಟಿಪ್ಸ್ ತೆಗೆದುಕೊಳ್ಳುವುದಿಲ್ಲ. ಅದು ನಿಜಕ್ಕೂ ಅತ್ಯಾಶ್ಚರ್ಯವಾದ ಸಂಗತಿ.
      ಉಮಾ ವೆಂಕಟೇಶ್

      Like

  5. ಉಮಾ ಅವರೇ
    ಜಪಾನ್ ವೀಕ್ಷಿಸುವ ನಿಮ್ಮ ಹಂಬಲ ನನಸಾಗಿದ್ದು ವೈಯುಕ್ತಿಕವಾಗಿ ನಿಮಗೆ ತೃಪ್ತಿಯನ್ನು ತರುವುದರ ಜೊತೆಗೆ ನಿಮ್ಮ ಈ ಲೇಖನ ಇನ್ನೂ ಜಪಾನಿಗೆ ಭೇಟಿ ನೀಡಿದ ನಮ್ಮಂಥ ಓದುಗರಿಗೆ ಆ ಸುಂದರ ದೇಶದ ಒಂದು ಕಲ್ಪನೆಯನ್ನು ಸಾಕಾರಗೊಳಿಸಿದೆ. ಕಳೆದ ವಾರವಷ್ಟೇ ಜಪಾನಿನ ಒಸಾಕಾ ಸುತ್ತುಮುತ್ತಲಿನ ಪ್ರದೇಶ ‘ಜೆಬಿ’ ಚಂಡ ಮಾರುತದಿಂದ ಹಾನಿಗೊಳಗಾದ ಸುದ್ದಿಯನ್ನು ನೋಡಿದಾಗ ಅಲ್ಲಿಯ ಜನ ಈ ಕಷ್ಟ ನಷ್ಟಗಳನ್ನು ಹೇಗೆ ನಿಭಾಯಿಸಬಲ್ಲರು ಎಂಬ ಬಗ್ಗೆ ಆಲೋಚಿಸಿದೆ. ಅಣು ಬಾಂಬ್ ಧಾಳಿಯನ್ನು ಎದುರಿಸಿದ ಈ ಧೀಮಂತ ಜಪಾನಿಗಳಿಗೆ ‘ಜೆಬಿ’ ಯಿಂದ ಚೇತರಿಸಿಕೊಳ್ಳುವುದು ಬಹುಶ ಅಷ್ಟು ಕಷ್ಟದ ಕಾರ್ಯವಲ್ಲ ಎಂಬ ಸಮಾಧಾನ ನನಗಿದೆ. ಪ್ರಕೃತಿಯ ವಿಕೋಪಗಳನ್ನು ತಲತಲಾಂತರದಿಂದ ಎದುರಿಸುತ್ತ ಬದುಕುವ ಈ ಜನಕ್ಕೆ ಕಷ್ಟ ಪಟ್ಟು ಕೆಲಸ ಮಾಡುವ ಛಲ ಹುಟ್ಟಿನಿಂದಲೇ ಬಂದಿರಬಹುದು. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ನಿಮ್ಮ ಜಪಾನ್ ಪ್ರವಾಸದ ಎರಡನೇ ಭಾಗವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ.

    Liked by 1 person

    • ನಮಸ್ಕಾರ ಪ್ರಸಾದ್ ಅವರೇ. ಜಪಾನಿನ ಭೇಟಿ ನಿಜಕ್ಕೂ ಅನನ್ಯ. ಮುಂದಿನ ಭಾಗ ಬರೆದಿಲ್ಲ. ಟೋಕಿಯೋ ಭೇಟಿಯು ಅಷ್ಟೇ ಸುಂದರ ಅನುಭವ. ಬರೆಯಲು ಪ್ರಯತ್ನಿಸುತ್ತೇನೆ. ನನ್ನ ಮಗಳು ಚೈತ್ರ ಬುಧವಾರ ಜಪಾನಿಗೆ ಎರಡು ವಾರ ಹೋಗ್ತಾ ಇದ್ದಾಳೆ. ಅವಳಿಗೆ ಈ ದೇಶದ ಬಗ್ಗೆ ಬಹಳ ಹುಚ್ಚಿದೆ. ಅಲ್ಲಿಯ ಸಂಸ್ಕೃತಿ ಮತ್ತು ಇತಿಹಾಸಗಳ ಬಗ್ಗೆಯೂ ಬಹಳ ಓದಿ ತಿಳಿದುಕೊಂಡಿದ್ದಾಳೆ. ಅವಳ ಅನುಭವ ಹೇಗಿರುವುದೋ ಕೇಳಲು ಕುತೂಹಲದಿಂದ ಎದಿರುನೋಡುತ್ತಿದ್ದೇನೆ.
      ಉಮಾ ವೆಂಕಟೇಶ್

      Like

  6. Reading a travel experience written in Kannada by Kannadiga has a special resonance.
    I am really tempted to go to Japan and see all these places now !
    Shantha Rao

    Liked by 1 person

Leave a comment

This site uses Akismet to reduce spam. Learn how your comment data is processed.