‘ದಂಡೆ ದಾಟುವಾಗ’ ಆಲ್ಫ್ರೆಡ್ ಲಾರ್ಡ್ ಟೆನಿಸನ್ ಕವಿಯ ‘ಕ್ರಾಸಿಂಗ್ ದಿ ಬಾರ್’ ಕವನದ ಭಾವಾಂತರ ಅನುವಾದಿಸಿದವರು ಡಾ:ಕೇಶವ ಕುಲಕರ್ಣಿ

ಇತ್ತೀಚಿಗಷ್ಟೇ ನೊಬೆಲ್ ಪುರಸ್ಕೃತ ಕವಿ ಸರ್ ವಿ.ಎಸ್.ನೈಪೌಲ್ ನಿಧನರಾದ ಸುದ್ದಿ ಬಹಳಷ್ಟು ಮಂದಿಗೆ ಗೊತ್ತಿದೆ.
ಶ್ರೇಷ್ಠ ಬರಹಗಾರರಾಗಿದ್ದ ನೈಪೌಲ್ ಅವರು ಷೇಕ್ಸ್ಪಿಯರ್ ಮತ್ತು ಲಾರ್ಡ್ ಟೆನಿಸನ್ ಅವರ ಬರಹಗಳಿಂದ ಪ್ರಭಾವಿತರಾಗಿದ್ದರು.
ತಮ್ಮ ಕೊನೆಯ ಕ್ಷಣದಲ್ಲಿ ಲಾರ್ಡ್ ಟೆನಿಸನ್ ನ ಜನಪ್ರಿಯ ಕವನವಾದ ‘ಕ್ರಾಸಿಂಗ್ ದಿ ಬಾರ್’ ಅನ್ನು ಓದಬೇಕು ಅದನ್ನು ಕೇಳುತ್ತಾ ನಾನು ಪ್ರಾಣ ಬಿಡಬೇಕು ಎಂದು ಬಯಸಿದ್ದ ಅಂತೆಯೇ ಅವರ ಆಸೆ ನೆರವೇರಿತ್ತು.

ಈ ಕವನ ಟೆನಿಸನ್ ಅವರ ಕೊನೆಯ ಕವಿತೆಯಾಗಿರದಿದ್ದರೂ ತಮ್ಮ ಕವನ ಸಂಕಲನದ ಕೊನೆಯಲ್ಲಿ ಅದನ್ನು  ಮುದ್ರಿಸಬೇಕೆಂದು ಕರಾರು ಹಾಕಿದ್ದರಂತೆ. ಅಂತಹ ಮಹತ್ತರವಾದ ಕವನವನ್ನು ಡಾ:ಕೇಶವ ಕುಲಕರ್ಣಿ ಅವರು ಕನ್ನಡಕ್ಕೆ ಭಾವಾಂತರಿಸಿದ್ದಾರೆ, ಓದಿ ಅನುಭವಿಸಿ.

ಈ ಕವನ ಓದುವಾಗ ಕನ್ನಡದ ಶ್ರೇಷ್ಠ ಕವಿಗಳಾದ ಡಾ:ಜಿ.ಎಸ್.ಎಸ್ ಅವರ ಜನಪ್ರಿಯ ಭಾವಗೀತೆ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ದ ಸಾಲುಗಳು ಕಾಡುತ್ತವೆ.

sand bar

ದಂಡೆ ದಾಟುವಾಗ

ಇಳಿಸಂಜೆ ಮತ್ತು ಬೆಳ್ಳಿಚುಕ್ಕೆ

ಸ್ಪಷ್ಟ ಕರೆಯೊಂದು ನನಗಾಗ!

ಮತ್ತಾಗ ನರಳಿಕೆ ಇರದಿರಲಿ ಮರಳುದಿಬ್ಬಕೆ,

ಕಡಲೊಳು ನಾನು ಹೊರಟಾಗ,

 

ಆದರಂಥ ತೆರೆಯೂ ಅಲೆದಿದೆ ನಿದ್ರೆವೊಲು,

ಮೊರೆ-ನೊರೆಯಲಾಗದಷ್ಟು ತುಂಬಿಕೊಂಡು,

ಅಪರಿಮಿತದಾಳದಿಂದ ಸೆಳೆದಾಗಲೂ

ಮನೆಗೆ ಹೊರಟಾಗ ತಿರುಗಿಕೊಂಡು.

 

ಮಬ್ಬೆಳಕು ಮತ್ತೆ ಕೊನೆಗಂಟೆ,

ತದನಂತರ ಕಗ್ಗತ್ತಲಾದಾಗ!

ವಿದಾಯದ ವಿಷಾದವಿಲ್ಲದಿರಲಿ, ಒಂಟಿ

ನಾ ಯಾತ್ರೆಗೆ ಹತ್ತಿದಾಗ;

 

ನಮ್ಮ ಕಾಲದ ನೆಲೆಯ ಇತಿಮಿತಿಯೊಳಗೆ

ದೂರದವರೆಗೂ ಸೈರಿಸಲಿ ಪ್ರವಾಹವು ನನ್ನನು,

ನನ್ನ ನಾವಿಕನನ್ನು ನೋಡುವ ನಿರೀಕ್ಷೆಯೊಳಗೆ

ನಾನು ದಾಟಿದಾಗ ದಂಡೆಯನು.

                                                      -ಕೇಶವ ಕುಲಕರ್ಣಿ

ಓದುಗರ ಆಸಕ್ತಿಗಾಗಿ ಮೂಲ ಕವನ

 Crossing the bar

Alfred Lord Tennyson 1809 – 1892

Sunset and evening star,

And one clear call for me!

And may there be no moaning of the bar,

When I put out to sea,

 

But such a tide as moving seems asleep,

Too full for sound and foam,

When that which drew from out the boundless deep

Turns again home.

 

Twilight and evening bell,

And after that the dark!

And may there be no sadness of farewell,

When I embark;

 

For tho’ from out our bourne of Time and Place

The flood may bear me far,

I hope to see my Pilot face to face

When I have cross’d the bar

-Alfred Lord Tenyson

6 thoughts on “‘ದಂಡೆ ದಾಟುವಾಗ’ ಆಲ್ಫ್ರೆಡ್ ಲಾರ್ಡ್ ಟೆನಿಸನ್ ಕವಿಯ ‘ಕ್ರಾಸಿಂಗ್ ದಿ ಬಾರ್’ ಕವನದ ಭಾವಾಂತರ ಅನುವಾದಿಸಿದವರು ಡಾ:ಕೇಶವ ಕುಲಕರ್ಣಿ

  1. ಟೆನಿಸನ್ನ್ ರ ಅರ್ಥಗರ್ಭಿತವಾದ ಮೇಲಿನ ಕವನದ ನಾಲ್ಕು ಪಂಕ್ತಿ ಗಳಲ್ಲಿ ಬದುಕು ಮತ್ತು ಸಾವಿನ Interface ಬಹಳ ಚೆನ್ನಾಗಿ ಮೂಡಿಬಂದಿದೆ . ಟೆನಿಸನ್ನ್ ಮರಳುದಿಬ್ಬವನ್ನು ಸಂಜೆಗತ್ತಲಲ್ಲಿ ದಾಟಿ, ಸದ್ದು ಗದ್ದಲವಿಲ್ಲದ ದೊಡ್ಡ ಅಲೆಯೊಂದರ ಮೇಲೆ ತೇಲಿ ಕಾಣುವ ಕಡಲಲ್ಲಿ “ಕಾಣದ ನಾವಿಕನನ್ನು” ಭೇಟಿಯಾಗುವ ಆಧ್ಯಾತ್ಮ ಪರಿಕಲ್ಪನೆಯನ್ನು ಕಂಡರೆ ಜಿ.ಎಸ್ .ಎಸ್ ಅವರು “ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯಾಗಿ” ಕಾಣದ ಕಡಲನ್ನು ಸೇರುವ ಮೂಲಕ ಇದೇ ಆಧ್ಯಾತ್ಮ ಪರಿಕಲ್ಪನೆಯನ್ನು ತಮ್ಮ ಕವನದಲ್ಲಿ ತಂದಿದ್ದಾರೆ. ಈ ಎರಡು ಕವನದಲ್ಲಿ ಕಡಲನ್ನು ಸೇರುವುದು ಒಂದು ಆಧ್ಯಾತ್ಮಿಕ ತೃಷೆ (Spiritual Quest) ಹಾಗು ಅದರ ಅನ್ವೇಷಣೆ ಎನ್ನ ಬಹುದು. ಇಂತಹ ಕ್ಲಿಷ್ಟವಾದ, ಗಹನವಾದ ಕವಿತೆಯನ್ನು ಕೇಶವ್ ಅವರು Verbatim ಅನುವಾದದ ಉತ್ತಮ ಪ್ರಯತ್ನ ಮಾಡಿದ್ದರೆ ಸರೋಜಿನಿಯವರು ಇದರ ಭಾವಾನುವಾದವನ್ನು ( near translation) ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ. ಇಬ್ಬರಿಗೂ ಅಭಿನಂದನೆಗಳು. ಕವನದ ಆಯ್ಕೆ ಚೆನ್ನಾಗಿದೆ.

    Liked by 1 person

  2. ಟೆನಿಸನ್ ನcrossing the bar ಒಂದು ಅಮೂಲ್ಯ ಕವನ.ಅದರ ಸುಂದರ ಭಾಷಾಂತರ ನೀಡಿದ ಕೇಶವ ಕುಲಕರ್ಣಿಯವರಿಗೆ ಅಭಿನಂದನೆಗಳು.ನನ್ನ ಭಾವಾನುವಾದವನ್ನು ಇಲ್ಲಿ ಸೇರಿಸಿದ ಶ್ರೀವತ್ಸ ದೇಸಾಯಿಯವರಿಗೆ ನನ್ನ ಧನ್ಯವಾದಗಳು ,ಹಾಗೇ ತಮ್ಮ ಅಭಿಪ್ರಾಯ ತಿಳಿಸಿದ ವಿಜಯ ನಾರಸಿಂಹ ಅವರಿಗೂ .
    ಈ ಜೀವನ ನದಿಯಾದರೆ ಸಾವಿನ ಪಯಣ ಕಾಣದ ಕಡಲು ‌‌‌ಜೀವನಕ್ಕೂ ಸಾವಿಗೂ ಅಂತರ ತುಂಬಾ ಕಡಿಮೆ,ಬರೀ ಒಂದು ಮರಳು ಕಟ್ಟೆ.ನದಿ ದಡ ಮೀರಿ ಹರಿದರೆ ಮುಗಿಯಿತು,ಆ ಕಟ್ಟೆದಾಟಿ ಸಾಗರದ ಅರಿಯದ ದಾರಿಯಲ್ಲಿ ಅದರ ಹರಿವು.ತುಂಬ ಅನಿಶ್ಚಿತ ದಾರಿ.ಅಲೆಗಳು ಒಯ್ದತ್ತ.ಅದಕೇ ಏನೋ ಕವಿ ಇಲ್ಲಿ, ತನ್ನ ಹರಿಕಾರನ ಕಣ್ತುಂಬ ನೋಡೋ ಹಂಬಲದಲ್ಲಿ ಅಲೆಗಳು ತನ್ನ ಯಾವ ತೊಡರಿಲ್ಲದೇ ಆತನೆಡೆ ಕರೆದೊಯ್ಯಬಹುದು ತಾನು ಆ ಮರಳು ಕಟ್ಟೆ ದಾಟಿದ ಮೇಲೆ ಅಂತಾನೆ.ಪೌರ್ವಾತ್ಯ ಇರಲಿ ಪಾಶ್ಚಿಮಾತ್ಯ ಇರಲಿ ಎಲ್ಲೆಡೆಯೂ ಮಾನವ ಜೀವನದ ಅಂತ್ಯ ಅನ್ನಿ ಅಥವಾ ಒಂದು ಹಂತದಲ್ಲಿ ಒಂದು ಆತ್ಯಂತಿಕ ಶಾಂತಿ ಪ್ರಶಾಂತತೆಯ ಹುಡುಕುವಿಕೆ ಈ ಜೀವಕೆ.ಒಂದು ನಿರ್ಲಿಪ್ತತೆ, ಸಾವು ಎದುರಿಗೆ ಬಂದು ನಿಂತರೂ ಅದನ್ನೊಪ್ಪಿಕೊಳ್ಳುವ ಸ್ಥೈರ್ಯ ತುಂಬುವ ನಿರ್ಲಿಪ್ತತೆ ಆ ಶಾಂತಿ ಯಲ್ಲಿದೆ.ತನ್ನ ಸೃಷ್ಟಿ ಕರ್ತನ ನೋಡುವ ಹಂಬಲ.ಅದೇ ಪ್ರತಿ ಸಾಧಕನ ಗುರಿ . ಅಂತೆಯೇ ಇಲ್ಲಿ ಈ ಕವಿಗೂ.ಗುರಿ ಒಂದೇ, ದಾರಿ , ಹೇಳುವ ಶೈಲಿ ಶಬ್ದ ಬೇರೆ ಅನಬಹುದೋ ಏನೋ.ಇದೆ ಈ ಜೀವನದ ಅಂತಿಮ ಸತ್ಯ ಅಲ್ವಾ?
    ತನ್ನ ಪುಟ್ಟ ಕವನದಲ್ಲಿ ಈ ನಿಗೂಢತೆ ಯನ್ನ ತುಂಬಿಸಿದ ಕವಿ ಟೆನಿಸನ್ ಗೆ ನಮನ.
    ಮತ್ತೊಮ್ಮೆ ಅನಿವಾಸಿ ಬಳಗಕ್ಕೆ ನನ್ನ ಧನ್ಯವಾದಗಳು.
    ಸರೋಜಿನಿ ಪಡಸಲಗಿ

    Liked by 1 person

  3. ಇಂಗ್ಲೆಂಡಿನ ರಾಷ್ಟ್ರಕವಿ (poet laureate) ಆಗಿದ್ದ ಟೆನಿಸನ್ನನ ಈ ಕವನ ಸಾಂದರ್ಭಿಕವಾಗಿ (topical) ಪ್ರಕಟವಾಗುತ್ತಿದೆಯಾದರೂ ಇದೊಂದು timeless ಕವನ ಎನ್ನಬಹುದು.ಈಗಾಗಲೆ ಓದುಗರೊಬ್ಬರು ಬರೆದಂತೆ, ಎಲ್ಲರೂ ಒಂದಿಲ್ಲೊಂದು ದಿನ ತಂತಮ್ಮ ಅವಸಾನದ ಕಾಲದಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅವರು ಭಾರತೀಯ/ಪೌರ್ವಾತ್ಯ ವಿಚಾರಸರಣಿ ಹೊಂದಿದವರೇ ಇರಲಿ, ಟೆನಿಸನ್ನನಂಥ ಕ್ರಿಶ್ಚಿಯನ್ ಮತದವನೇ ಇರಲಿ. ಎರಡೂ ಪಂಥದವರು ಸಾವನ್ನು ”ನೀಲ ಕಡಲ” ಪ್ರತಿಮೆಯಲ್ಲಿ ಕಾಣುತ್ತಾರೆ. ಟೆನಿಸನ್ ಅಂತೂ ಆತನ ಆಪ್ತ ಮಿತ್ರ ಹ್ಯಾಲಂ ಇಪ್ಪತ್ತೆರಡರ ಎಳೆವಯಸ್ಸಿನಲ್ಲಿ ಸಾವನ್ನಪ್ಪಿದ ಆಘಾತದಿಂದ ಚೇತರಿಕೊಳ್ಳಲಾಗದೆ ಒಂದು ಸುದೀರ್ಘ ಚರಮ ಗೀತೆಯಲ್ಲದೆ (“In memoriam AHH”) ಸಾವಿನ ಬಗ್ಗೆ ಅಲ್ಲಲ್ಲಿ ಕವನ ಕಟ್ಟಿದ್ದಾನೆ. ಅಲ್ಲೆಲ್ಲ ಸಮುದ್ರ ’ಹಾಯುತ್ತದೆ’. ಕೊನೆಯ ವರೆಗೆ ಅವನನ್ನು ಆ ಸಾವು ಕಾಡುತ್ತಿದ್ದಂತೆ ಕಾಣುತ್ತದೆ. ಪೀಠಿಕೆಯಲ್ಲಿ ಸಂಪಾದಕರು ಬರೆದಂತೆ ನಮ್ಮ ಕನ್ನಡದ ರಾಷ್ಟ್ರಕವಿಯ ’’ಮನಸೂ ಕಡಲ ನೀಲಿ”ಯೊಳಗೆ ಸೇರಲು ಹಂಬಲಿಸುತ್ತದೆ. ’ಕಡಲು’ ಎರಡೂ ಕವನದಲ್ಲೂ ಆಧ್ಯಾತ್ಮದತ್ತ ನಮ್ಮನ್ನೊಯ್ಯುತ್ತದೆ ಎಂದು ನನ್ನ ಎಣಿಕೆ. ಕೇಶವ ಕುಲಕರ್ಣಿಯವರ ಭಾವಾನುವಾದದಲ್ಲಿ ಮೂಲ ಕವಿಯ ಭಾವ ಅತ್ಯುತ್ತಮವಾಗಿ ಮೂಡಿ ಬಂದಿದೆ. ಜೊತೆಗೆ ಪ್ರಾಸ ಮತ್ತು ಲಯ ಉಳಿಸಿಕೊಂಡಿರುವದೂ ಸಾಹಸವೇ ಸರಿ. ಪ್ರಕಟಿಸಿದ ಚಿತ್ರ ಪೂರಕವಾಗಿದೆ. ಅದರಲ್ಲಿ ಕವಿ ವರ್ಣಿಸುವ, ಮತ್ತು ಆತ ದಾಟಬೇಕಾದ bar (ತಡೆ) – ಇಲ್ಲಿ sand bar- ಮತ್ತು ಆತ ಹತ್ತಲಿರುವ ನಾವೆ ಕಾಣಬಹುದು. ವಿದ್ಯಾಧರ ನೈಪಾಲನ ಪೂರ್ವಜರು ಭಾರತೀಯರಾಗಿದ್ದರೂ ಬಹು ಪಾಲು ಸಮಯ ಆತ ಪಶ್ಚಿಮದಲ್ಲೆ ಕಳೆದ. ಆತನಿಗೂ ಈ ಪ್ರಭಾವಿ ಕವನ ಕೊನೆಯ ಗೀತೆಯಾದದ್ದರಲ್ಲಿ ಆಶ್ಚರ್ಯವಿಲ್ಲ.
    ಅಪ್ಪಟ ಭಾರತೀಯ ಮಹಿಳೆ ಎಂದು ಕರೆದುಕೊಳ್ಳುವ ’ಅನಿವಾಸಿ’ಯ ಅಭಿಮಾನಿ ಓದುಗಳಾದ ಬೆಂಗಳೂರಿನ ಸರೋಜಿನಿ ಪಡಸಲಗಿಯವರೂ ಈ ಕವನದ ಸುಂದರವಾದ ಭಾವಾನುವಾದವನ್ನು ತಮ್ಮ ಶೈಲಿಯಲ್ಲಿ ಮಾಡಿ ಕಳಿಸಿದ್ದಾರೆ.(ಕೆಳಗೆ ಕೊಟ್ಟಿದೆ). ಅದರಲ್ಲಿ ಅವರು ನೋಡುವ ದೃಷ್ಟಿಯಲ್ಲಿ ಭಾರತೀಯತೆ ಬೆರೆತುಕೊಂಡಿದೆಯೇನೋ ಎಂದು ನನ್ನ ಅನಿಸಿಕೆ. ನೀವೇ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.
    ಈ ಮಹತ್ತರವಾದ ಕವನ ಪ್ರಕಟಿಸಿದ್ದಕ್ಕೆ ಮತ್ತದರ ಅನುವಾದ ಮಾಡಿದ ಕವಿಗಳಿಗೆ ಅಭಿನಂದನೆಗಳು! ಶ್ರಿವತ್ಸ ದೇಸಾಯಿ.

    ತಡೆ ಹಾಯು

    ಕವಿಯುತಿಹ ಮುಸ್ಸಂಜೆಯಲಿ ಕಂಡೆ ಮಂದ ತಾರಕೆಯ
    ಆ ಮಬ್ಬಿನಲಿ ಕೇಳುತಿಹೆ ದೂರ ತೀರದ ಒಂದು ಕರೆಯ
    ಈ ಬಾಳ ದಡದ ಮೇರೆ ಮೀರಿ ಹಾರಿ ಹೋಗಲೆಳೆಸಿದೆ ಜೀವ
    ಅರಿಯದ ಕಡಲಲಿ ಕಾಣದೇ ಯಾವ ನರಳಿಕೆ ಹೊರಳಿಕೆಯ

    ಮನದ ಭಾವದ ಏರಿಳಿತವೂ ಮುಳುಗಿ ಹೋಗಿದೆ ಶಾಂತತೆ ಯಲಿ
    ಆವರಿಸಿದೆ ಪರಿಪೂರ್ಣ ನಿರ್ಲಿಪ್ತತೆ ಬೇಕಿಲ್ಲ ಅದಕೆ ಯಾವ ಗೊಂದಲದ ಗೋಜು
    ಸಾಗರದ ಅಲೆಗಳ ತಿಳಿಯದ ಆಳದ ತಳದ
    ತನ್ನ ಠಾವಿಗೆ ಮರಳಲೊಂದು ಹಾರೈಕೆ ಈ ಮರುಳು ಜೀವಕೆ

    ಬಾಳಿನಿಳಿಸಂಜೆಯ ಮುಸುಕಿನಲಿ ರಿಂಗಣಿಸಿದೆ ಆ ಕರೆಯ ನಾದ
    ಮುತ್ತಿಹುದು ಪ್ರಶಾಂತ ಘನ ಸಾಂದ್ರ ಕಡು ಕಪ್ಪು ಛಾಯೆಯೊಂದಾಗ
    ಯಾವ ಅಳಲು ನೋವು ಯಾಕೆ ಇರದಿರಲಿ ಯಾವ ಮರುಗು ಆಕ್ರಂದನ
    ಏಕತಾನದಿ ಹೊರಟಾಗ ದೂರ ತೀರಕೆ ನಿತಾಂತತೆಯಲಿ

    ಆ ನನ್ನ ಪಯಣದ ಗೊತ್ತು ಗುರಿ ಮೀರಿಹುದು ನನ್ನಳವಿನ ಮಿತಿಯ
    ಆದರೂ ಬಲ್ಲೆ ನಾ ಈ ಕಾಣದ ಕಡಲ ಅಲೆ ಕರೆದೊಯ್ಯಲಹುದು ಎಲ್ಲು ತೊಡರದಲೆ
    ಕಾಣಬಹುದು ನಾನಲ್ಲಿ ನನ್ನ ದೂರದ ಬಲು ನಿಗೂಢ ಪಯಣದ ಹರಿಕಾರನ ಕಣ್ತುಂಬ
    ನಾ ಸಾಗಿ ಹೋದಾಗ ಈ ಜೀವ ಜಗದ ಮೇರೆಯ ತಡೆಯೊಂದನ ದಾಟಿ ನಡೆದಾಗ

    ಸರೋಜಿನಿ ಪಡಸಲಗಿ

    Liked by 1 person

    • ಅರ್ಥವತ್ತಾದ ಅನುವಾದ , ಮೂಲ ಕವನದ ಭಾವಕ್ಕೆ ಎಲ್ಲೂ ವ್ಯತ್ಯಾಸವಾಗದ ಹಾಗೆ ನಿಭಾಯಿಸಿದ್ದಾರೆ ಕೇಶವ ಕುಲಕರ್ಣಿ ಅವರು.

      ಸರೋಜಿನಿ ಅವರ ಅನುವಾದ ಕೊಂಚ ವಿಭಿನ್ನವಾಗಿದೆಯಾದರೂ , ಭಾರತೀಯ ಸಂಸ್ಕೃತಿಯ ಹಾಗೂ ಮನಸ್ಥಿತಿಯ ಬೇರು ಇದೆ ಎನ್ನುವ ದೇಸಾಯಿಯವರ ಮಾತಿಗೆ ನನ್ನ ಸಮ್ಮತಿ ಇದೆ.

      ಇಬ್ಬರೂ ಬರಹಗಾರರಿಗೆ ಧನ್ಯವಾದಗಳು.

      -ವಿಜಯನರಸಿಂಹ

      Liked by 1 person

  4. Like all great poems this poem made me think again of the mystery and transience
    of our existence in this universe, the purpose of our lives and accepting the natural ending of it all bravely. It reinforced the need to develop a certain tranquillity within our minds to face the inevitable.
    Tennyson ‘s perspective reflects his confidence in a life which is well lived and shows his maturity and intelligence in mentally preparing himself to face this unknown journey as an adventure .
    The poem is full of positivity and metaphors and the translation in Kannada (not easy to do) made me think about it all in Kannada as an adult and so thanks Keshav Kulakarni for taking time to do that .

    Liked by 1 person

Leave a comment

This site uses Akismet to reduce spam. Learn how your comment data is processed.