ಆ* ಹೆಸರಿನ ಸಿನಿಮಾದಲ್ಲಿ ಬರುವವನಂತೆ ನನ್ನೂರು ಮಂಗಳೂರು ಅಲ್ಲದಿದ್ದರೂ, ನನ್ನ ತಲೆಯನ್ನು ನೋಡಿ ಕೆಲವರು ಮೊಟ್ಟೆ ಅಂತ ಕರೆದರೆ, ನನ್ನೂರಾದ ಧಾರವಾಡದಲ್ಲಿ (ಅಲ್ಲಿ ಮರಾಠಿ ಮತ್ತು ಹಿಂದಿ ಬಳಕೆ ಸಹ ಉಂಟು) ಅರವತ್ತರ ಅರಳು-ಮರಳು ದಾಟಿದ ನನ್ನ ಹಳೆಯ ಮಿತ್ರರು ’ಟಕಲೂ’ ಎಂದು ಕರೆದದ್ದುಂಟು. ಆದರೆ ಈ ಲೇಖನ ನನ್ನ ಬಗ್ಗೆಯ ಕಥೆಯಲ್ಲ. ನಾನು ಬರೆಯುತ್ತಿರುವದು ರಷ್ಯಾದ ಸುಪ್ರಸಿದ್ಧ ಫ್ಯಾಬರ್ಜೆ(Faberge̕ ) ಮೊಟ್ಟೆಯ ಕಥೆ.
ಇತ್ತೀಚೆಗೆ ನಾನು ರಷ್ಯಾದ ಅತ್ಯಂತ ಆಕರ್ಷಕ ಮಹಾನಗರವಾದ ಸೇಂಟ್ ಪೀಟರ್ಸ್ ಬರ್ಗ್ ಗೆ ಭೆಟ್ಟಿಯಿತ್ತಾಗ ಫುಟ್ಬಾಲ್ ವಿಶ್ವಕಪ್ಪಿನ ಜ್ವರ ಇಳಿದಿತ್ತು. ಅಲ್ಲಿಯ ಸುಪ್ರಸಿದ್ಧ ಹರ್ಮಿಟೇಜ್ ಮ್ಯೂಜಿಯಂ. ಕ್ಯಾಥರಿನ್ ಪ್ಯಾಲೆಸ್, ಪೀಟರ್ಹಾಫ್ ಪ್ಯಾಲೇಸ್ ಇವೆಲ್ಲವನ್ನು ನೋಡಿಯಾಯಿತು. ಆದರೆ ಕಣ್ಣಿಗೆ ಒತ್ತಿದ್ದು, ಮನಸ್ಸನ್ನು ಸೆಳೆದದ್ದು ಮಾತ್ರ Faberge̕ Museum ನಲ್ಲಿಯ ಫ್ಯಾಬರ್ಜೆ ಮೊಟ್ಟೆಗಳು ಮತ್ತು ಅದರ ಇತಿಹಾಸ.
ಅವರ ಹೆಸರಿನ ಕೊನೆಯಲ್ಲಿಯ ಅಕ್ಸೆಂಟ್ accent (e̕ ) ಹೇಳುವಂತೆ ಫ್ಯಾಬರ್ಜೆ ಮನೆತನದ ಮೂಲ ಫ್ರಾನ್ಸ್. ಅವರು ಪ್ರೋಟೆಸ್ಟಂಟ್ ಕ್ರಿಶ್ಚಿಯನ್ನರು. ಅಂದರೆ ವಲಸೆ ಹೋದ ಹ್ಯೂಗೆನಾಟ್, (ಅಥವಾ ಹ್ಯೂಗೆನೋ) (Huguenots) ಪಂಗಡಕ್ಕೆ ಸೇರಿದವರು. ಹದಿನೇಳನೆಯ ಶತಮಾನದಲ್ಲಿಕ್ಯಾಥಲಿಕ್ ಫ್ರಾನ್ಸ್ ದಲ್ಲಿ ಅನ್ಯರ ಕಾಟ ಸಹಿಸಲಾರದೆ ಪ್ರೋಟೆಸ್ಟಂಟ್ ಕ್ರಿಶ್ಚಿಯನ್ನರು ಯೂರೋಪಿನ ಬೇರೆ ಬೇರೆ ದೇಶಕ್ಕೆ ಹೋಗಿ ಆಶ್ರಯ ಪಡೆದರು. ಕೆಲವರು ಬೇರೆ ಖಂಡಗಳಿಗೂ ಹೋದದ್ದುಂಟು. ಆಗಿನ ರಷ್ಯದಲ್ಲಿ ಫ್ರೆಂಚ್ ಸಂಬಂಧವಿದ್ದುದರಿಂದ ಫ್ಯಾಬರ್ಜೆ ರಷ್ಯಕ್ಕೆ ಬಂದರು. ಅವರಲ್ಲಿ ಗೂಸ್ಟಾವ್ ಫ್ಯಾಬರ್ಜೆ ಒಬ್ಬ ಅಕ್ಕಸಾಲಿಗ. ಆತ ಸೇಂಟ್ ಪೀಟರ್ಸ್ ಬರ್ಗ್ ದಲ್ಲಿ ಒಂದು ಅಂಗಡಿ ಸ್ಥಾಪಿಸಿದ. ಆತನ ಮಗನೇ ಮುಂದೆ ಪ್ರಸಿದ್ಧಿ ಪಡೆದ ಪೀಟರ್ ಕಾರ್ಲ್ ಫ್ಯಾಬರ್ಜೆ.


ಫ್ಯಾಬರ್ಜೆ ಮೊಟ್ಟೆಗಳ ಖ್ಯಾತಿ ಶುರುವಾದದ್ದು ರಷ್ಯಾದ ಮೂರನೆಯ ಅಲೆಕ್ಸಾಂಡರ್ ಝಾರ್ ಚಕ್ರವರ್ತಿ 1885 ರಲ್ಲಿ ತನ್ನ ಪತ್ನಿ ಮರಿಯಾಗೆ ಪೀಟರ್ ಕಾರ್ಲ್ ಫ್ಯಾಬರ್ಜೆ (ಮುಂದೆ ಬರೀ ಕಾರ್ಲ್ ಎಂದೇ ಆತನನ್ನು ಕರೆದರು) ತನ್ನ ಕುಶಲತೆಯಿಂದ ರಚಿಸಿದ “ಹೆನ್ ಎಗ್” ( Hen egg ) ಎಂಬ ಫ್ಯಾಬರ್ಜೆ ಮೊಟ್ಟೆ ಕೊಟ್ಟಾಗ. ಝಾರನ ಕರಾರಿನ ಪ್ರಕಾರ ಅದರಲ್ಲಿ ಒಂದು “ಸರ್ಪ್ರೈಸ್” ಸಹ ಇತ್ತು. ನೋಡಲಿಕ್ಕೆ ಮೇಲೆ ಸಾದಾ ಎನಾಮಲ್ಲಿನ ಬಿಳಿ ಮೊಟ್ಟೆಯಂತಿದ್ದರೂ ಅದನ್ನು ಬಿಡಿಸಿದರೆ ಒಳಗೆ ಬಂಗಾರದ ಹಳದಿ ಯೋಕ್ (ಲೋಳೆ), ಅದು ಎರಡು ಹೋಳಾದಾಗ ಒಳಗೆ ಒಂದು ಪುಟ್ಟ ಬಂಗಾರದ ಕೋಳಿ, ಅತ್ಯಂತ ಕುಸುರಿನ ಕೆಲಸದ್ದು. ಡೇನಿಶ್ ರಾಜಕುಮಾರಿಯಾಗಿದ್ದ ಮರಿಯಾಗೆ, ಮತ್ತು ಅವಳ ಪತಿಗೆ ಆದ ಸಂತೋಷಕ್ಕೆ ಪಾರವೇ ಇಲ್ಲ. ಇದಾದ ನಂತರ ಕಾರ್ಲ್ ಅಧಿಕೃತವಾಗಿ ಅರಮನೆಯ ಕುಂದಣಗಾರನೆನಿಸಿಕೊಂಡ. ಅಂದು ಪ್ರಾರಂಭವಾದ ಪರಂಪರೆ 1917 ರ ವರೆಗೆ ಮುಂದುವರೆಯಿತು. ಪ್ರತಿವರ್ಷ ಈಸ್ಟರ್ ಸಮಯಕ್ಕೊಂದರಂತೆ 50 ’’ಇಂಪೀರಿಯಲ್ ಮೊಟ್ಟೆ”ಗಳು ಹುಟ್ಟಿದವು ‘ಹೌಸ್ ಆಫ್ ಫ್ಯಾಬರ್ಜೆ’ ಸಂಸ್ಥೆಯಿಂದ. ಝಾರ್ ಅಲೆಕ್ಸಾಂಡರ್ ನಂತರ ಪಟ್ಟಕ್ಕೆ ಬಂದ ಎರಡನೆಯ ನಿಕೋಲಸ್ ತನ್ನ ತಾಯಿಗೆ 30 ಮತ್ತು ಪತ್ನಿ (ಝರಿನ)ಗೆ 20 ಮೊಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟ ದಾಖಲೆಯಿದೆ. ದುರ್ದೈವವಶಾತ್ ಬೋಲ್ಶೆವಿಕ್ ಕ್ರಾಂತಿಯ ನಂತರ ಫ್ಯಾಬರ್ಜೆ ಕಾರ್ಯಾಗಾರವನ್ನು ರಾಷ್ಟ್ರೀಕರಣ ಮಾಡಲಾಯಿತು. 1918ರಲ್ಲಿ ಆ ಮನೆತನ ರಷ್ಯಾದಿಂದ ಹೊರಬಿದ್ದಿತು. ಕಾರ್ಲ್ನ ಮೊಮ್ಮಗ ಥಿಯೋ ಲಂಡನ್ನಿನಲ್ಲಿ ಹೌಸ್ ಆಫ್ ಪ್ಯಾಬರ್ಜೆ ಇಟ್ಟುಕೊಂಡಿರುವನೆಂದು ತಿಳಿದುಬರುತ್ತದೆ. ಇಂಗ್ಲೆಂಡಿನ ರಾಣಿಯ ಹತ್ತಿರ ಮೂರು ಇಂಪೀರಿಯಲ್ ಮೊಟ್ಟೆಗಳಿವೆ. ಇನ್ನುಳಿದ ದೊಡ್ಡ ಸಂಗ್ರಹ ಮಾಸ್ಕೋದಲ್ಲಿ (10), ಮತ್ತು ಅಮೇರಿಕ, ಯೂರೋಪಿನ ದೇಶಗಳಲ್ಲಿ ಒಂದೆರಡು ಕಾಣಲು ಸಿಗುತ್ತವೆಯಂತೆ.




ಒಂದೊಂದು ಮೊಟ್ಟೆಯೂ ಒಂದು ಗೇಣುದ್ದ, ಅಥವಾ ಒಂದು ಸಣ್ಣ ತೆಂಗಿನಕಾಯಿಯಷ್ಟು ದೊಡ್ಡದು. ಎರಡೂ ಕೈಜೋಡಿಸಿ ಬೊಗಸೆಯಲ್ಲಿ ಹಿಡಿದುಕೊಳ್ಳಬಹುದು, ಪರವಾನಗಿ ಸಿಕ್ಕರೆ! ಹೊರಗಡೆ ಎನಾಮಲ್ ಕವಚ, ಅದರ ಮೇಲೆ ಬಂಗಾರದ ಕುಸುರಿನ ಕೆಲಸ, ಹೊರಗೂ ಒಳಗೂ ರತ್ನಖಚಿತ ವಸ್ತುಗಳು, ಹೂ ಮೊಗ್ಗುಗಳು, ಚಲಿಸುವ ರಾಯಲ್ ಕೋಚ್, ಬಂಗಾರದ ಗಡಿಯಾರ, ಇತ್ಯಾದಿ. ಒಂದು ಕಾಲಕ್ಕೆ ಇಂಥ ಅನರ್ಘ್ಯ ರತ್ನಖಚಿತ ವಸ್ತುಗಳ ತಯಾರಿಕೆಗಾಗಿ ಕಾರ್ಲ್ ಫ್ಯಾಬರ್ಜೆ ಐದು ನೂರಕ್ಕೂ ಹೆಚ್ಚು ಕೆಲಸಗಾರರನ್ನಿಟ್ಟಿದ್ದನಂತೆ. ಒಂಬತ್ತು ಫ್ಯಾಬರ್ಜೆ ಮೊಟ್ಟೆಗಳು ಮತ್ತು ನೂರೆಂಬತ್ತರಷ್ಟು ಬೇರೆ ಕುಶಲ ಕೈಗಾರಿಕೆಯ ವಸ್ತುಗಳನ್ನು ಸೇಂಟ್ ಪೀಟರ್ಸ್ ಬರ್ಗ್ ನ ಮ್ಯೂಸಿಯಂನಲ್ಲಿ ನೋಡಿದಾಗ ಎರಡು ಕಣ್ಣು ಒಂದೆರಡು ಗಂಟೆಗಳ ಸಮಯ ಸಾಲಲಿಲ್ಲ. ರಷ್ಯದ ಲಕ್ಷಾಧೀಶ ವಿಕ್ಟರ್ ವೆಕ್ಸೆಲ್ ಬರ್ಗ್ 2013 ರಲ್ಲಿ ಈ ಫೋರ್ಬ್ಸ್ ಸಂಗ್ರಹವನ್ನು ನೂರು ಮಿಲಿಯ ಡಾಲರಿಗೆ ಕೊಂಡು ಈ ವಸ್ತುಸಂಗ್ರಹಾಲಯದಲ್ಲಿಟ್ಟಿದ್ದಾನೆ. ಜಗತ್ತಿನಲ್ಲಿ ಇವುಗಳಿಗಿಂತ ಉತ್ಕೃಷ್ಟ ಆಭರಣಗಳಿಲ್ಲವೆಂದು ನಂಬಿ ರಷ್ಯನ್ ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಕಾಯ್ದಿಡುವದಕ್ಕೋಸ್ಕರ ಮತ್ತು ಜನರಿಗೆ ಇದರ ಲಾಭವಾಗಲಿ ಎಂದುತೆರೆದಿಟ್ಟಿದ್ದಾನೆ. ಅವಕಾಶ ಸಿಕ್ಕರೆ ನೀವೂ ನೋಡಿಬನ್ನಿರಿ.
ಲೇಖನ ಮತ್ತು ಉಳಿದೆಲ್ಲ ಚಿತ್ರಗಳು ಮತ್ತು ವಿಡಿಯೋ: ಶ್ರೀವತ್ಸ ದೇಸಾಯಿ
Dear Shrivatsa,
Even though we visited St.Petersburgh few years back, I was unaware of these very interesting,amazing facts. Excellent article .
Aravind Kulkarni
LikeLike
ಈ ಚಿಕ್ಕ ಲೇಖನವನ್ನು ಬರೆಯುವಾಗ ಇಷ್ಟು ಕುತೂಹಲ ಕೆರಳಿಸೀತು ಎನಿಸಿರಲಿಲ್ಲ. ಕಮೆಂಟ ಮಾಡಿದವರಿಗೆಲ್ಲ ಧನ್ಯವಾದಗಳು.
LikeLike
(No subject)
Bellur Gadadhara
Today, 10:00
You
ಶ್ರೀ ವತ್ಸ ಅವರೆ , Faberge ಬಗ್ಗೆಯ ಒಂದು ಮೊಟ್ಟೆಯ ಚರಿತ್ರೆ ಬಹಳ ಸೊಗಸಾಗಿ ಚಿತ್ರಿಸಿದ್ದೀರ. ಧನ್ಯವಾದಗಳು,
ನಾನು ಮತ್ತು ನನ್ನ ಹೆಂಡತಿ ಲೀಲ ಇತ್ತೀಚೆಗೆ Saint Petersburg ನಲ್ಲಿ Faberge Museum ಗೆ ಹೋಗಿದ್ದೆವು. ಆದರೆ ಅಲ್ಲಿ ನಮ್ಮ ಅದರಲ್ಲೂ ನನ್ನ ಹೆಂಡತಿಯ ಗಮನ Faberge ಮೊಟ್ಟೆಯ ಇತಿಹಾಸಕ್ಕಿಂತಲೂ ಅಲ್ಲಿದ್ದ ಮೊಟ್ಟೆಗಳ ಮೇಲಿನ ವಿವಿಧ ಕೌಶಲ್ಯತೆಯ ಮೇಲೆಯೇ. ಕಾರಣ ಅವಳ ಒಂದು ಹವ್ಯಾಸ – ಕೆಲವರ ಜೊತೆಯಲ್ಲಿ ಕುಳಿತು ಬಾತುಕೋಳಿ, Ostrich ಮೊಟ್ಟೆಗಳನ್ನು ಉಪಯೋಗಿಸಿ Faberge ಮೊಟ್ಟೆಗಳನ್ನು ಸೃಷ್ಟಿಸುವುದು. ಅವಳು ಮಾಡಿರುವ ಮೊಟ್ಟೆಗಳ ಕೆಲವು ಫೋಟೋಗಳು ಕೆಳಗಿವೆ.
Egg Crafters Guild of Great Britain Web Site ನಲ್ಲಿ ಈ ಕೌಶಲ್ಯದ ಅದ್ಭುತೆಯನ್ನು ನೋಡಬಹುದು.
Sorry I could not attach the photos. I shall send them on whatsapp.
LikeLiked by 1 person
ಲೀಲಾ ಅವರ ಕುಶಲ ಕಲೆಗಾರಿಕೆಯ ಚಿತ್ರಗಳನ್ನು ವಾಟ್ಸಪ್ಪಿನಲ್ಲಿ ನೋಡಿದೆ. ಅವರನ್ನು ಅಭಿನಂದಿಸಲೇ ಬೇಕು. ಬಹಳ ಸುಂದರವಾಗಿದೆ. ನಾನು ಇಂಥ ಮೊಟ್ಟೆಗಳನ್ನು 1980 ದಶಕದಲ್ಲಿ ನೋಡಿದಾಗ ಫ್ಯಾಬೆರ್ಜೆ ಹೆಸರೇ ಕೇಳಿರಲಿಲ್ಲ. ಇದು ಒಳ್ಳೆಯ ಹವ್ಯಾಸ ಮತ್ತು ಎಷ್ಟು ಜನರು ಅದರಲ್ಲಿ ತೊಡಗಿದ್ದಾರೆ ಎಂದು ಆ ವೆಬ್ ಸೈಟಿನಿಂದ ಗೊತ್ತಾಅಯಿತು. ಆದರೆ ಇತ್ತೀಚೆಗಿನ ಚಿತ್ರಗಳಿಲ್ಲ. ಮಿಲಿಯ ಪೌಂಡು ಗಟ್ಟಲೆ ಬೆಲೆಬಾಳುವ ಫ್ಯಾಬರ್ಜೆಗಳನ್ನು ಬರೀ ದೂರದಿಂದಲೇ ನೋಡ ಬೇಕು. ಅದಕ್ಕಿಂತ ಕೈಯಲ್ಲಿರುವ ಕ್ರಾಫ್ಟ್ ಮೊಟ್ಟೆಗಳೇ ಹೆಚ್ಚು ಸಂತೋಷ ಕೊಟ್ಟಿರಬೇಕು ಅವರಿಗೆ!
LikeLike
👌👌👌
LikeLike
ಒಂದು ಮೊಟ್ಟೆಯ ಒಳಗಡೆ ಇಷ್ಟು ದೊಡ್ಡ ಇತಿಹಾಸ ಇರುವುದು ನಿಮ್ಮಿಂದಲೇ! ನಿಮ್ಮ ದೃಷ್ಟಿಕೋನದಿಂದ ಪ್ರವಾಸ ಮಾಡಲು ತುಂಬ ವಿಷಯಗಳ ಜ್ನಾನವಿರಬೇಕು ಮತ್ತು ಆಸಕ್ತಿಗಳಿರಬೇಕು. ಮೊಟ್ಟೆಯ ಕತೆಯಂತೆಯೇ ಮುತ್ತಿನ (pearl) ಕತೆ, ಹವಳದ ಕತೆ, ವಜ್ರದ ಕತೆ ಇತ್ಯಾದಿಗಳೂ ಬರಲಿ. -ಕೇಶವ
LikeLiked by 1 person
ಫ್ಯಾಬರ್ಜೆ ಮೊಟ್ಟೆಯ ಇತಿಹಾಸ ನಿಮ್ಮ ಲೇಖನದಲ್ಲಿ ನಿಜಕ್ಕೂ ಸೊಗಸಾಗಿ ಮೂಡಿಬಂದಿದೆ. ಇದರ ಬಗ್ಗೆ ಇಂಗ್ಲಿಷ್ ಕಾದಂಬರಿಯಲ್ಲಿ ಓದಿದ್ದೆ. ಕಾದಂಬರಿಯ ನಾಯಕ ತನ್ನ ಪ್ರೇಯಸಿಗೆ ಈ ಮೊಟ್ಟೆಯನ್ನು ಉಡುಗೊರೆಯಾಗಿ ನೀಡಿರುತ್ತಾನೆ. ಅದಕ್ಕೆ ಬಹಳ ಬೆಲೆ ಎನ್ನುವ ವಿಷಯ ಅದರಲ್ಲಿ ತಿಳಿದು ಬಂದಿತ್ತು. ನಿಮ್ಮ ಲೇಖನದಲ್ಲಿ ಅದರ ತಯಾರಿಕೆ ಮತ್ತು ಸಂಸ್ಕೃತಿಯ ಬಗ್ಗೆ ಓದಿ ಬಹಳ ಖುಷಿ ಆಯಿತು. ನಿಮ್ಮ ಇತ್ತೀಚಿನ ಕ್ರೂಸ್ ಭರ್ಜರಿಯಾಗಿತ್ತು ಎನ್ನುವುದು ಲೇಖನದಲ್ಲಿ ವ್ಯಕ್ತವಾಗಿದೆ. ಮತ್ತೊಂದು ಆಸಕ್ತಿಪೂರ್ಣ ವಿಷಯವನ್ನು ತಿಳಿಸಿಕೊಟ್ಟಿದ್ದಿರಿ. ಧನ್ಯವಾದಗಳು.
ಉಮಾ ವೆಂಕಟೇಶ್
LikeLiked by 1 person
ದೇಸಾಯಿಯವರೆ, ಓoದರೊಳಗೊoದು ಸೇರಿರುವ ರಶ್ಯಾದ ಗೊoಬೆಗಳನ್ನು ನೋಡಿದ್ದೆ ಮತ್ತು ಅವುಗಳ ಬಗ್ಗೆ ಕೇಳಿದ್ದೆ. ಈ ಮೊಟ್ಟೆಯ ಕಥೆ ತಿಳಿದಿರಲಿಲ್ಲ. ಉತ್ತಮವಾದ ಚಿತ್ರಗಳೊoದಿಗೆ, ಆಸಕ್ತಿಯನ್ನು ಬೆಳೆಸುವoತಹ ಲೇಖನ. ಧನ್ಯವಾದಗಳು.
LikeLike
ಫ್ಯಾಬರ್ಜೆ ಮೊಟ್ಟೆಯ ಹುಟ್ಟು , ಇತಿಹಾಸ ಗಳ ಸುಂದರ ವ್ಯಾಖ್ಯಾನ.ಇದನ್ನೋದಿದಾಗ ಕಲೆಯ ಹರಿವಿಗೆ, ಕಲಾಕಾರನ ಕ್ರಿಯಾತ್ಮಕ ತೆಗೆ ಒಂದು ಅಂತವಿಲ್ಲ ಅನ್ನಿಸೋದು ಸಹಜ.ಆ ಸಿರಿವಂತ ಕಲಾಕೃತಿಗಳನ್ನುಜೋಪಾನವಾಗಿ ಕಾಪಾಡಿಕೊಂಡು ಬಂದಿರುವುದು, ಪ್ರದರ್ಶನ ಕ್ಕೆ ಅವಕಾಶ ಕಲ್ಪಿಸಿ ರುವುದು ಶ್ಲಾಘನೀಯ.ಅದನ್ನು ಕಣ್ಣಿಗೆ ಕಟ್ಟುವಂತೆ ವಿಶದವಾಗಿ ವಿವರಿಸಿದ ಶ್ರೀವತ್ಸ ದೇಸಾಯಿ ಅವರಿಗೆ ಧನ್ಯವಾದಗಳು.ಈ ಲೇಖನ ಓದಿ ದ ಮೇಲೆ ಒಂದು ಕ್ಷಣ ಎಷ್ಟೊಂದು ತಿಳಿದುಕೊಳ್ಳುವುದು ಇದೆ ಎಂಬನಿಸಿಕೆ ಮೂಡಿದರೆ ಆಶ್ಚರ್ಯ ವೇನಿಲ್ಲ.ಶ್ರೀವತ್ಸ ದೇಸಾಯಿ ಯವರ ಭಂಡಾರ ದಿಂದ ಇನ್ನಷ್ಟು ವಿಷಯಗಳಮಾಹಿತಿಗಳು ಹೊರಬರುವ ನೀರೀಕ್ಷೆ.ಯಲ್ಲಿ.
ಸರೋಜಿನಿ ಪಡಸಲಗಿ
LikeLiked by 1 person
Dear Dr Desai,
It was interesting to read -Ondu Russian Mottte Kathe”(Faberge’)-full of information which
I never knew.
Look forward to more !
Shantha Rao
LikeLiked by 1 person
ಧನ್ಯ ವಾದಗಳು, ಶಾಂತಾ ಅವರೆ! ಶಾಲೆಯಲ್ಲಿ ಚಿಕ್ಕಂದಿನಲ್ಲಿ ಟೀಚರ ಕೊಟ್ಟಂತೆ ಮೊಟ್ಟೆ ಮಾರ್ಕ್ಸ ಕೊಡಲಿಲ್ಲವಲ್ಲ, ಸದ್ಯ!
LikeLike