ಕನ್ನಡಿಯಾತ…. ! ಪೀಟರ್ ಡೇಲ್ ವಿಂಬ್ರೌ ೧೯೩೪ರಲ್ಲಿ ಬರೆದ ‘The Man in the Glass’ ಕವನದ ಭಾವಾಂತರ ಮುರಳಿ ಹತ್ವಾರ ಅವರಿಂದ

ಪೀಠಿಕೆ: ಬಹುಮುಖ ಪ್ರತಿಭೆ ಪೀಟರ್ ಡೇಲ್ ವಿಂಬ್ರೊ ೧೯೩೪ರಲ್ಲಿ ಬರೆದ  ಒಂದು ಕವನ ‘ದಿ ಮ್ಯಾನ್ ಇನ್ ದಿ ಗ್ಲಾಸ್’
ಮನುಷ್ಯನ ಅಂತರಂಗ ಮತ್ತು ಬಹಿರಂಗದ ನೈಜ ಮುಖಗಳನ್ನು ತೆರೆದಿಡುತ್ತದೆ.
ಬಾಹ್ಯ ಪ್ರಪಂಚಕ್ಕೆ ನಮ್ಮ ವ್ಯಕ್ತಿತ್ವ ಬಹುಮುಖಿಯಾಗಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವ ನಾಟಕ ರಂಗವನ್ನು ಸೃಷ್ಟಿಸಿಕೊಳ್ಳುವ ಉದಾಹರಣಿಗಳಿವೆ.ಆದರೆ ಎಲ್ಲದಕ್ಕೂ ಮೀರಿ ಅಂತರಂಗದ ಮೂಲೆಯಲ್ಲಿ ಆತ್ಮಸಾಕ್ಷಿಯೊಂದು ನಮ್ಮೆಲ್ಲಾ ಕಾರ್ಯಗಳ ಉದ್ದೇಶ ಮತ್ತು ಅವುಗಳ ಫಲಿತಾಂಶದ ಸತ್ಯಾಸತ್ಯತೆಯನ್ನು ಹೇಳುತ್ತಿರುತ್ತದೆ.
ಎಷ್ಟೋ ಸಾರಿ ನಮ್ಮ ಆತ್ಮಸಾಕ್ಷಿಯ ಮಾತಿಗೆ ಜಾಣ ಕಿವುಡರಾಗಿಬಿಡುತ್ತೇವೆ ನಂತರ ಒಬ್ಬರೇ ಇರುವಾಗ ಆ ಮಾತು ನಮ್ಮನ್ನು ಅಂತರಂಗದ ನ್ಯಾಯಾಲಯಕ್ಕೆ ಕರೆದೊಯ್ದು ನಮ್ಮ ವಾದ ತಪ್ಪು ಎಂದು ಮನವರಿಕೆ ಮಾಡಿಸುತ್ತದೆ.

ಅಂತಹ ಭಾವವುಳ್ಳ ಮೂಲ ಕವನವನ್ನು ಮುರಳಿ ಹತ್ವಾರರು ಬಹಳ ಅರ್ಥಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ, ನೀವೂ ಓದಿ, ಮತ್ತೆ ಮತ್ತೆ ಓದಬೇಕೆನಿಸುವ ಕವನವಿದು.

The man in the glass

 

ಕನ್ನಡಿಯಾತ…. !

ನೀ ಸುರಿಸಿದ ಬೆವರೆಲ್ಲ ಸೇರಿ

ಬಯಕೆ ಬಟ್ಟಲು ತುಂಬಿ ಸೋರಿ

ತಲೆಯ ಮೇಲೇರೆ ಜಂಭದ ಗರಿ

ಕನ್ನಡಿಯಲಿ ಇಣುಕಿ ಒಂದು ಬಾರಿ

ಕೇಳವನ ನುಡಿ, ಅದು ನಿನ್ನ ಸಿರಿ!

ಹೆತ್ತಮ್ಮ, ಅಪ್ಪ, ಕೈ ಹಿಡಿದ ನಾರಿ

ಅಳೆಯುವ ದೂರವಲ್ಲ ಬದುಕಿನ ಗುರಿ

ಕನ್ನಡಿಯೊಳಗಿಂದ ಕಣ್ಣು ತೂರಿ

ಅವನು ತೋರಿದ್ದೇ ನಿನ್ನ  ಸರಿ ದಾರಿ.

ಬೇಕಿಲ್ಲ ಉಳಿದೋರ ಉಸಾಬರಿ

ಅವನಿರಲು ನಿನ್ನುಸಿರಿನಲಿ ಸೇರಿ

ಕಡುಕಷ್ಟದಾಪತ್ತುಗಳ ದಾಟುವೆ ಹಾರಿ

ಜೊತೆಯಿರೆ ಕನ್ನಡಿಯಾತನ ಸ್ನೇಹಸಿರಿ!

ಜಗಕೆಲ್ಲ ಊದುತ್ತ ಸುಳ್ಳಿನ ತುತ್ತೂರಿ

ಹತ್ತಿ ಕುಳಿತರೂ ಶಹಬ್ಬಾಸ್- ಗಿರಿ

ಕಡೆಗುಳಿವ ಗರಿ – ಕಣ್ಣೀರು, ಎದೆಯುರಿ

ಕಣ್ಕಟ್ಟಿ ನಿಲ್ಲೆ ನೀ ಕನ್ನಡಿಯಾತಗೆ ಬೆನ್ನುತೋರಿ!

                                                                -ಮುರಳಿ ಹತ್ವಾರ್ (ಜುಲೈ ೨೦೧೮)

(ಪೀಟರ್ ಡೇಲ್ ವಿಂಬ್ರೌ ೧೯೩೪ರಲ್ಲಿ ಬರೆದ The Man in the Glass ಕವನದ ಭಾವಾಂತರ)

ಚಿತ್ರ ಕೃಪೆ: ಗೂಗಲ್

 

The Man in The Glass

When you get what you want in your struggle for self
And the world makes you king for a day
Just go to the mirror and look at yourself
And see what that man has to say.

For it isn’t your father, or mother, or wife
Whose judgment upon you must pass
The fellow whose verdict counts most in your life
Is the one staring back from the glass.

He’s the fellow to please – never mind all the rest
For he’s with you, clear to the end
And you’ve passed your most difficult, dangerous test
If the man in the glass is your friend.

You may fool the whole world down the pathway of years
And get pats on the back as you pass
But your final reward will be heartache and tears
If you’ve cheated the man in the glass

-Peter Dale Wimbrow

6 thoughts on “ಕನ್ನಡಿಯಾತ…. ! ಪೀಟರ್ ಡೇಲ್ ವಿಂಬ್ರೌ ೧೯೩೪ರಲ್ಲಿ ಬರೆದ ‘The Man in the Glass’ ಕವನದ ಭಾವಾಂತರ ಮುರಳಿ ಹತ್ವಾರ ಅವರಿಂದ

  1. ‘ಕನ್ಮಡಿಯಲ್ಲಿ ಕಂಡಾತ’ ಮಬ ಕಾರಂತರ ಕಾದಂಬರಿ ಮತ್ತು ಚಿತ್ತಾಲರು ಯಾವುದೋ ಕತೆಯಲ್ಲಿ ಬರೆದ ‘ಕನ್ನಡಿಯಲ್ಲಿ ಕಂಡಾತ ಮನೆಗೂ ಬಂದು ಕದ ತಟ್ಟಿದ’ ಎಂಬ ಸಾಲು ನೆನಪಾದವು.

    Like

    • ಮತ್ತೊಮ್ಮೆ ಕನ್ನಡಿಯಲ್ಲಿ ನೋಡಿದಾಗ…
      ಇನ್ನೆರಡು ಸತ್ಯಗಳು: ಅದರ ನಿಜವಾದ ಶೀರ್ಷಿಕೆ The Guy in the Glass ಆಗಬೇಕಂತೆ.( ತಪ್ಪಾಗಿ mirror ಅಂದವರೂ ಉಂಟು). 18 ವರ್ಷದ ಹುಡುಗನ ಪ್ರಶ್ನೆಗೆ ಉತ್ತರವಾಗಿ ಬರೆದ ಕವಿತೆಯ ( ಅದಕ್ಕೇ ಏನೋ ಎರಡನೆಯ ಚರಣದಲ್ಲಿ ತಾಯಿ ತಂದೆಯವರ ಉಲ್ಲೇಖ) ಮೊದಲ ಸಾಲಿನ ಕೊನೆಯ ಶಬ್ದವೂ ಸಾಮಾನ್ಯವಾಗಿ ತಪ್ಪಾಗಿ ಬರೆಯುತ್ತಾರೆ, ಅದು pelf ಎಂದಿರಬೇಕು -ಅರ್ಥ = ಹಣ, ಅದೂ ಪ್ರಾಮಾಣಿಕ ರೀತಿಯಿಂದ ಗಳಿಸಿದ್ದಲ್ಲ ಎಂದು ತಿಳಿದೆ. ಇನ್ನು, ಕೇಶವರ ಭಂಡಾರ ಸಹ ಅಷ್ಟೇನೂ ಸಣ್ಣದಲ್ಲ!

      Liked by 3 people

  2. ಹತ್ವಾರರ ಹತ್ಯಾರದಿಂದ ಮೂಡಿಬಂದ‌ ಸುಂದರ ಭಾವಾನುವಾದ. ಕನ್ನಡದ್ದೇ ಕವನ ಎನ್ನುವಷ್ಟು ಚೆನ್ನಾಗಿ ಮೂಡಿಬಂದಿದೆ.

    ದೇಸಾಯಿಯವರು ಈ ಕವನದ ಬಗ್ಗೆ ಅವರ ಅಪರಿಮಿತ ಭಂಡಾರದಿಂದ ಗೊತ್ತಿರದ ವಿಷಯವೊಂದನ್ನು ವಿವರಿಸಿ ಕವನದ ವ್ಯಾಪ್ತಿಯನ್ನು ಹೆಚ್ಚಿಸಿದ್ದಾರೆ.

    ನಮಗೆ ನಾವೇ ಮೋಸ ಮಾಡಿಕೊಳ್ಳುವುಷ್ಟು ನಾವು ಬೇರಾರಿಗೂ ಮೋಸ ಮಾಡುವುದಿಲ್ಲ. ಅದಕ್ಕೇ ಕನ್ನಡಿಯನ್ನು ಕಂಡರೆ ನಮಗೆಲ್ಲ ಭಯ.

    ಕೇಶವ

    Like

  3. ಪೀಟರ್ ಡೇಲ್ ವಿಂಬ್ರೌ ಅವರ ಕವನದ ಸುಂದರ ಭಾವಾಂತರ “ಕನ್ನಡಿಯಾತ”.ಜೀವನದ ಸತ್ಯವನ್ನು ಸಾರುವ ಕವನ.ಕನ್ನಡಿಯಲ್ಲಿ ಕಾಣುವ ನಮ್ಮ ಪ್ರತಿಬಿಂಬ ವನ್ನು ನಾವು ವಂಚಿಸಲು ಸಾಧ್ಯವಿಲ್ಲ.ನಮ್ಮ ಮನದ ಭಾವನೆ ಗಳನ್ನ ಬೇರೆಯವರಿಂದ ಬಚ್ಚಿಡಬಹುದು.ಆದರೆ ಮುಖ ನಮ್ಮ ಮನದ ಕನ್ನಡಿ, ಕಂಗಳಲ್ಲಿ ನಮ್ಮ ಅಂತ: ಸಾಕ್ಷಿಯ ಬಿಂಬ.ಕನ್ನಡಿಯಾತ ಇನ್ನಾರೂ ಅಲ್ಲ ನಮ್ಮ ಆತ್ಮಸಾಕ್ಷಿ ಯ ಪ್ರತಿರೂಪ.ಆ ಮುಖದ ಪ್ರತಿ ರೇಷೆಯೂ ನಮ್ಮ ಜೀವನದ ಅವಿಭಾಜ್ಯ ಸತ್ಯವನ್ನು, ನುಡಿಯುತ್ತದೆ, ಪ್ರತಿ ನಡೆಯ ಅಳತೆಗೋಲು ಅಲ್ಲಿದೆ.ಅದಕ್ಕೇ ಏನೋ ಕನ್ನಡಿ ನೋಡಲು ಗಟ್ಟಿ ಗುಂಡಿಗೆ ಬೇಕು.ಜೀವನದಲ್ಲಿ ಎಷ್ಟು ದೂರ ಬಂದಾಯ್ತು, ಬಂದ ದಾರಿ ಹೇಗೆ ಸವೆಸಿಯಾಯ್ತು ಎಂಬ ಪರಿಪೂರ್ಣ ಅರಿವು,ಲೆಕ್ಕ ಅಲ್ಲಿ ಸಿಗ್ತದೆ ಎಂಬನಿಸಿಕೆ.ಕನ್ನಡಿಯಾತನಂತಹ ಜೊತೆ ಇನ್ನೆಲ್ಲಿ ಸಿಕ್ಕೀತು ,? ಚಿಕ್ಕ ಕವನದಲ್ಲಿ ಬ್ರಹ್ಮಾಂಡ ದಂತಹ ಸತ್ಯ!!!! ಇಷ್ಟು ಸುಂದರ ಕವನದ ಭಾವಾಂತರ ನೀಡಿದ ಮುರಳಿ ಹತ್ವಾರ್ ಅವರಿಗೆ ಧನ್ಯವಾದಗಳು.ಮೂಲ ಇಂಗ್ಲಿಷ್ ಕವಿ ಪೀಟರ್ ಡೇಲ್ ವಿಂಬ್ರೌ ಅವರಿಗೆ ನೂರು ನಮನ.
    ಸರೋಜಿನಿ ಪಡಸಲಗಿ

    Liked by 1 person

  4. ಪ್ರತಿದಿನ ಮುಖಕ್ಷೌರ ಮಾಡುವಾಗಲೂ ಅವಸರದಿಂದಲೇ ಮುಗಿಸುವ ಧಾವಂತ. ಆಗ ಒಮ್ಮೆಯಾದರೂ ಕನ್ನಡಿಯಾತನನ್ನು ಸರಿ ದಾರಿ ಕೇಳಿಲ್ಲ, ಆತನ ಕಡೆ ಸರಿಯಾಗಿ ನೋಡುವದು ಸಹ ಇಲ್ಲ! ಸೋಪು ಹಚ್ಚಿದ ಮುಖದ ಹಿಂದೆ ಬಚ್ಚಿಟ್ಟುಕೊಂಡು, false personaವನ್ನೇ ನಂಬಿ, ಬರಿ ಉಳಿದೋರ ಉಸಾಬರಿ ಮಾಡುತ್ತ ಇರುವ ಜೀವಕ್ಕೆ ಎಚ್ಚರಿಕೆ ಕೊಟ್ಟ ಕವನವಿದು. ರಡ್ಯಾರ್ಡ್ ಕ್ಲಿಪ್ಪಿಂಗನ “If” ಕವನದಂತೆ ಪ್ರತಿದಿನದ ಪಾಠಕ್ಕೆ ಇಟ್ಟುಕೊಳ್ಳುವಂಥ ನೀಳವಾದ ಸುಭಾಷಿತದಂತೆ ಹರಿಯುವ ಈ ಕವನವನ್ನು ಬರೆದಾತ ಪೀಟರ್ ವಿಂಬ್ರೋ ಎನ್ನುವವನೇ ಎಂದು ಸಾಧಿಸಲೂ ಎಷ್ಟೋ ಸಮಯ ಬೇಕಾಯಿತು ಎಂದು ಓದಿದ ನೆನಪು. ಈ ಕವನವನ್ನು ಬರೆದ ಅವನಿಗೂ, ಚಂದವಾದ ಅನುವಾದ ಮಾಡಿದ ಮುರಳಿ ಹತ್ವಾರ್ ಅವರಿಗೂ ನಮನಗಳು. ಇನ್ನಷ್ಟು ಬರಹ ಬರಲಿ, ಹತ್ವಾರ್ ಅವರೇ, ನಿಮ್ಮ”ಲೇಖನಿ’ಯಿಂದ.

    Like

Leave a comment

This site uses Akismet to reduce spam. Learn how your comment data is processed.