ಸಾಹಸೀ ಓವರ್ ಲ್ಯಾಂಡರ್ – ನಿಧಿ ತಿವಾರಿ ಎಂಬ ಕನ್ನಡದ ಅಚ್ಚರಿ! – ವಿನತೆ ಶರ್ಮ ಮಾಡಿಸುವ ಪರಿಚಯ

ನಿಧಿ ತಿವಾರಿ

ಜೊತೆಗೊಂದಿಷ್ಟು ಗೆಳತಿಯರನ್ನು ಕಟ್ಟಿಕೊಂಡು ಮೊನ್ನೆಮೊನ್ನೆ ತಾನೇ ನಿಧಿ ಹಿಮಾಲಯದ ಛಾವಣಿಯಲ್ಲಿರುವ ಮಸ್ತಾಂಗ್ ಮತ್ತು ಲೋ ಮಂತಾನ್ಗ್ ಪ್ರದೇಶಕ್ಕೆ ಹೋಗಿಬಂದರು. ಅದಾದ ನಂತರ ಸಿಕ್ಕಿಂ ಕಡೆ ಇಣುಕಿ ನೋಡಿ ಬಂದರು. ಈಗ ಭಾರತದಿಂದ ಲಂಡನ್ ಕಡೆಗೆ ದೂರ ಪ್ರಯಾಣ ಆರಂಭಿಸಿದ್ದಾರೆ. ಏನಿದು ಈ ಪರಿ ಸುತ್ತಾಟ ಎಂದುಕೊಂಡಿರಾ? ವಿಮಾನದಲ್ಲೋ ಅಥವಾ …? ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರಾ? ಪ್ರಶ್ನೆಗಳ ಗಾಳಿಪಟದ ಬಾಲ ಉದ್ದವಾಗುತ್ತದೆ.

ಯಾರೀ ನಿಧಿ?  ಇಗೋ ಇಲ್ಲಿದೆ, ನಿಧಿ ಎಂಬ ಕನ್ನಡತಿಯ ಪರಿಚಯ, ಮತ್ತವರ ಸುತ್ತಾಟದ ಕಿರುನೋಟ.

ನಿಧಿ ತಿವಾರಿ ನಮ್ಮ ಕನ್ನಡತಿ. ಅವರ ಮುಂಚಿನ ಹೆಸರು ಲಕ್ಷ್ಮಿ ಸಾಲ್ಗಮೆ. ಧಾರವಾಡದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ನಿಧಿ ಬೆಳೆದದ್ದು. ಅವರ ತಾಯಿ ಮೈಕ್ರೋಬಯಾಲಾಜಿಸ್ಟ್, ತಂದೆ ಬಾಷ್ ಕಂಪನಿಯ ಎಂಜಿನಿಯರ್. ತಮ್ಮದು ಮಧ್ಯವರ್ಗದ ಕುಟುಂಬ ಎಂದು ಗುರುತಿಸಿಕೊಳ್ಳುವ ನಿಧಿ ಏಳು ವರ್ಷದ ಹುಡುಗಿಯಾಗಿದ್ದಾಗಲಿಂದ ಬೆಂಗಳೂರಿನ ಆಸುಪಾಸು ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಭೂತಾನ್ ಮತ್ತು ಹಿಮಾಲಯ ಪರ್ವತಗಳ ಚಾರಣಯಾತ್ರೆಯಲ್ಲಿ ಪಾಲ್ಗೊಂಡಾಗ ಹನ್ನೊಂದು ವರ್ಷದ ಹುಡುಗಿಗೆ ಹೊರಾಂಗಣ ಚಟುವಟಿಕೆಗಳ ಬಗ್ಗೆ ಆಳವಾದ ಆಸಕ್ತಿ ಮೊಳಕೆಯೊಡೆಯಿತು. ಕಾಲೇಜಿಗೆ ಬರುವಷ್ಟರಲ್ಲಿ ಪಶ್ಚಿಮ ಘಟ್ಟಗಳ ಚಾರಣಗಳನ್ನ ತನ್ನದೇ ನಾಯಕತ್ವದಲ್ಲಿ ನಡೆಸುವಷ್ಟು ಪಳಗಿದ್ದರು. ಹೊನ್ನೆಮರಡುವಿನ ದಿ ಅಡ್ವೆಂಚರ್ರ್ಸ್ (The Adventurers) ಸಂಸ್ಥೆಯಲ್ಲಿ ಅವರು ಕೆಲಸ ಮಾಡಿ ಮತ್ತಷ್ಟು ಅನುಭವದ ಪಕ್ವತೆಯನ್ನು ತಮ್ಮದಾಗಿಸಿಕೊಂಡರು. ಒಂದೊಮ್ಮೆ ಅಲ್ಲಿಗೆ ತಮ್ಮ ಬಟಾಲಿಯನ್ ಸೈನಿಕರಿಗೆ ಹೊರಾಂಗಣ ಚಟುವಟಿಕೆಗಳಲ್ಲಿ ತರಬೇತಿ ಕೊಡಿಸಲು ಕರೆದುಕೊಂಡು ಬಂದ ಭಾರತೀಯ ಸೇನೆಯ ಒಬ್ಬ ಕರ್ನಲ್ ರನ್ನ ಪ್ರೀತಿಸಿ ಮದುವೆಯಾದರು. ಕರ್ನಲ್ ಸಾಹೇಬರಿಗೂ ಕೂಡ ಹೊರಾಂಗಣ, ಸಾಹಸಗಳಲ್ಲಿ ಆಸಕ್ತಿಯಿದೆ, ನಾವಿಬ್ಬರೂ ಸಮಾನಮನಸ್ಕರು ಅನ್ನುವ ವಿಷಯ ವರವಾಯಿತು. ಒಬ್ಬರಿಗೊಬ್ಬರು ಜೊತೆಯಾಗಿ ಬೆಂಬಲ ಕೊಡುವ ದಿನನಿತ್ಯದ ಜೀವನ ಸುಲಭವಾಯಿತು. “ಜೊತೆಗೆ ನನ್ನ ತಂದೆತಾಯಿಯರ ಬೆಂಬಲವೂ ಸದಾ ಇದ್ದೆ ಇದೆ,” ಎಂದು ನಿಧಿ ನೆನಪಿಸಿಕೊಂಡರು. ಇಬ್ಬರು ಗಂಡುಮಕ್ಕಳ ತಾಯಿಯಾದ ನಿಧಿ ದೆಹಲಿಯಲ್ಲಿ ನೆಲಸಿದ್ದಾರೆ.

ಈ ಜೀಪ್ ನಡೆಸುವುದು, ಕಷ್ಟಕರ ಸನ್ನಿವೇಶಗಳಲ್ಲಿ, ಅಹಿತಕರ ವಾತಾವರಣದಲ್ಲಿ, ಹವಾಮಾನ ವ್ಯಪರೀತ್ಯದಿಂದ ಕೂಡಿದ ದುರ್ಗಮ ಪ್ರದೇಶಗಳಲ್ಲಿ ಸಾವಿರಾರು ಕಿಲೋಮೀಟರ್ ದೂರ ಡ್ರೈವ್ ಮಾಡುವ ಸಾಹಸ ಹೇಗೆ ಶುರುವಾಯಿತು ಎನ್ನುವ ಪ್ರಶ್ನೆಗೆ ನಿಧಿ ಕೊಡುವ ಉತ್ತರ ಭೇಷ್  ಅನಿಸುತ್ತದೆ. “ಮೊದಲ ಮಗ ಹುಟ್ಟಿದ ಮೇಲೆ ಮಗುವನ್ನ ಬೆನ್ನ ಮೇಲೆ ಹೊತ್ತು ನಾನು, ನನ್ನ ಪತಿ ಅನೇಕ ಚಾರಣಗಳು, ಪ್ರಕೃತಿಯಲ್ಲಿ ಕ್ಯಾಂಪ್ ಹಾಕುವುದು, ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಮಾಡುತ್ತಿದ್ದೆವು. ಎರಡನೆಯ ಮಗ ಹುಟ್ಟಿದ ಮೇಲೆ ಸ್ವಲ್ಪ ಕಷ್ಟವಾಯಿತು. ಆಗ ನನ್ನ ಆಸಕ್ತಿ ಈ ಜೀಪ್ (ಓವರ್ ಲ್ಯಾಂಡರ್) ಡ್ರೈವಿಂಗ್ ಕಡೆ ಹೊರಳಿತು. ಹೇಗೂ ಪಶ್ಚಿಮ ಘಟ್ಟಗಳಲ್ಲಿ ಜೀಪ್ ಓಡಿಸಿ ಪಳಗಿದ್ದೆ. ಅದು ಉಪಯೋಗಕ್ಕೆ ಬಂತು. ಮುಂದಿನ ೨೦೦೫-೦೬ರ ವರ್ಷ ನಿರ್ಣಾಯಕ ವರ್ಷವಾಯಿತು. ನಾಲ್ಕೈದು ತಿಂಗಳು ಬೆಂಗಳೂರಿನ ಲಾಲಬಾಗ್ ರಸ್ತೆಯ ಗ್ಯಾರೇಜಿನಲ್ಲಿ ಫೋರ್ ವೀಲ್ ಡ್ರೈವ್ ಗಳ ರಚನೆ, ಭಾಗಗಳು, ರಿಪೇರಿ ಮುಂತಾದುವುದರ ಬಗ್ಗೆ ತರಬೇತಿ ಪಡೆದೆ. ಆಗ ಸಾಕಷ್ಟು ಧೈರ್ಯ ಬಂತು,” ಎನ್ನುತ್ತಾರೆ ನಿಧಿ.

ಆದರೆ ಹೊಸತರಲ್ಲಿ, ಮೊದಮೊದಲು ಹೆಣ್ಣು ಎಂಬ ಕಾರಣಕ್ಕಾಗಿ ಅವರ ಆತ್ಮವಿಶ್ವಾಸವನ್ನ ಪ್ರಶ್ನಿಸಿ, ಅವರು ಆಫ್ ರೋಡ್ ಡ್ರೈವಿಂಗ್ ಮಾಡುತ್ತಿದ್ದಾಗ ಅವರನ್ನ ಟೀಕೆ ಮಾಡಿದವರೇ ಹೆಚ್ಚು. ೨೦೦೭ರಲ್ಲಿ ಬೆಂಗಳೂರಿನಿಂದ ಲಡಾಖ್ ಗೆ ಫೋರ್ ವೀಲ್ ವಾಹನವನ್ನ ಡ್ರೈವ್ ಮಾಡಿದರು. ಆ ದಾರಿ ಮತ್ತು ವಾಹನ ಯಾತ್ರೆ ಹೊಸದಲ್ಲವಾದರೂ ಹೆಣ್ಣೊಬ್ಬಳು ಮಾಡಿದ ಸಾಧನೆಯನ್ನ ಆಫ್ ರೋಡ್ ಡ್ರೈವರ್-ಗಳ ಪ್ರಪಂಚ ಗುರುತಿಸಿತು. ಅದಾದ ಮೇಲೆ ಪ್ರತಿ ವರ್ಷವೂ ಒಂದಲ್ಲ ಒಂದು ಹೊಸ ದಾರಿಯನ್ನ ಹುಡುಕಿ ನಿಧಿ ಆಫ್ ರೋಡ್ ಡ್ರೈವಿಂಗ್ ಸಾಹಸವನ್ನ ಮಾಡುತ್ತಿದ್ದಾರೆ.

ನಿಧಿ ತಿವಾರಿ ನೇಪಾಳದ ಮಸ್ತಾಂಗ್ ಪ್ರದೇಶದಲ್ಲಿ

ಕ್ರಮೇಣ ತಮ್ಮನ್ನು ಅತಿಸಾಹಸ ಓವರ್ ಲ್ಯಾಂಡರ್ (extreme over lander)ಎಂದು ಗುರುತಿಸಿಕೊಂಡ ನಿಧಿ ಅಕ್ಟೊಬರ್ ೨೦೧೫ರಲ್ಲಿ ಇಬ್ಬರು ಗೆಳತಿಯರೊಡನೆ ದೆಹಲಿಯಿಂದ ಲಂಡನ್ ಗೆ ಹೊರಟೇಬಿಟ್ಟರು. ಎರಡು ಖಂಡಗಳನ್ನ, ೧೭ ದೇಶಗಳನ್ನ, ೨೩೮೦೦ ಕಿಮೀಗಳನ್ನ ಕ್ರಮಿಸಿ ದೂರದ ಲಂಡನ್ ನಗರವನ್ನ ತಲುಪಿಯೇಬಿಟ್ಟರು. ತಾವೊಬ್ಬರೇ ವಾಹನವನ್ನು ಡ್ರೈವ್ ಮಾಡಿದರೂ ಜೊತೆಗಿದ್ದವರು ಸೌಮ್ಯ ಗೋಯಲ್ ಮತ್ತು ರಶ್ಮಿ ಕೊಪ್ಪರ್. ಸಂಪೂರ್ಣ ಭಾರತೀಯ ಮಹಿಳಾ ತಂಡ. ಮಹಿಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಕಂಪನಿ ಅವರ ಮೊತ್ತಮೊದಲ ಪ್ರಾಯೋಜಕರಾಗಿ ಬಂದು ಮಹಿಂದ್ರಾ ಸ್ಕಾರ್ಪಿಯೋ ವಾಹನವನ್ನ ಆ ಸಾಹಸಕ್ಕೆ ಕೊಟ್ಟಿತು. ನಂತರ ಕೈಜೋಡಿಸಿದ್ದು ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ. ವಿವಿಧ ದೇಶಗಳ ವೀಸಾ, ರಸ್ತೆ ಪರವಾನಗಿ ಇತ್ಯಾದಿ ಕಾಗದಪತ್ರಗಳನ್ನ ಹೊಂದಿಸಿಕೊಳ್ಳುವ ಜವಾಬ್ದಾರಿಯೆಲ್ಲಾ ನಿಧಿಯವರದ್ದೇ! ಒಂದೇ ವಾಹನ, ಬ್ಯಾಕ್ ಅಪ್ ವಾಹನ ಕೂಡ ಇಲ್ಲ!  ಮಯನ್ಮಾರ್ ದೇಶದಿಂದ ಚೈನಾಗೆ ತಲುಪಿ ಅಲ್ಲಿಂದ ಕಿರ್ಗಿಸ್ತಾನ್, ಕಝಗಸ್ಥಾನ್ ಮೂಲಕ ಪ್ರಯಾಣ. ಶಾಲೆಯಲ್ಲಿ ಕುಶಾನರ ಬಗ್ಗೆ ಓದಿದ್ದು, ಬಾಬರನ ಬಗ್ಗೆ ಇದ್ದ ಕುತೂಹಲ ನಿಧಿಯನ್ನ ಉಜ್ಬೇಕಿಸ್ತಾನ್ ಕಡೆಗೆ ಕೂಡ ಎಳೆದೊಯ್ದಿತು! ರಷ್ಯಾ, ನಂತರ ಫಿನ್ಲ್ಯಾಂಡ್ ನಿಂದ ಯೂರೋಪ್ ಪ್ರವೇಶ. “ಲಂಡನ್ ತಲುಪಿದಾಗ ನನಗೇ ನಂಬುವುದು ಕಷ್ಟವಾಯಿತು,” ಎಂದು ನಿಧಿ ನಗುತ್ತಾರೆ.   ಅಲ್ಲಿಯತನಕ ಮೂರು ತಿಂಗಳು ಮೂವರು ಮಹಿಳೆಯರು ಒಂದು ಕಾರಿನಲ್ಲಿ ವಾಸ ಮಾಡಿದ್ದರು!!

ಅವರ ಹರ್ಷಕ್ಕೆ ಮತ್ತಷ್ಟು ಹೊಳಪು ಬಂದಿದ್ದು, ನಿಧಿ ದೇಶದ ಉದ್ದಗಲ ಮಹಿಳಾ ಆಫ್ ರೋಡ್ ಮತ್ತು ಓವರ್ ಲ್ಯಾಂಡರ್ ಸಾಹಸಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆ ದಿನಗಳಲ್ಲೇ ಹುಟ್ಟಿದ್ದು ನಿಧಿ ಮತ್ತು ಸ್ಮಿತಾ ರಾಜಾರಾಮ್ ಸ್ಥಾಪಿಸಿದ ‘ವಿಮೆನ್ ಬಿಯಾಂಡ್ ಬೌಂಡರೀಸ್’ ಸಂಸ್ಥೆ. ತಮ್ಮ ಸಂಸ್ಥೆಯ ಉದ್ದೇಶ ಮಹಿಳೆಯರಿಗೆ ಅಸಾಧ್ಯವಾದದ್ದು ಏನೂ ಇಲ್ಲ ಎಂಬುದನ್ನ ಮನದಟ್ಟು ಮಾಡುವುದು, ಅನ್ನುತ್ತಾರೆ ನಿಧಿ. ಅವರ ಸಾಹಸಗಳ ಬಗ್ಗೆ ಅನೇಕ ಲೇಖನಗಳು ಪ್ರಕಟವಾಗಿವೆ. ಅದಲ್ಲದೆ ಬಹುಮಾನ, ಸಮ್ಮಾನಗಳೂ ಸಂದಿವೆ. ದೆಹಲಿಯ ಶಾಲೆಗಳಲ್ಲಿ ಅವರು ನಡೆಸಿ ಕೊಡುವ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮಗಳು ಬಹು ಜನಪ್ರಿಯ. ಸಾಹಸವಷ್ಟೇ ಅಲ್ಲ, ಪರಿಸರ ಸಂರಕ್ಷಣೆ, ಸುರಕ್ಷತೆ, ಟೀಮ್ ಬಿಲ್ಡಿಂಗ್ ಕಲೆ, ಆತ್ಮವಿಶ್ವಾಸ ಮುಂತಾದ ಅನೇಕ ವಿಷಯಗಳನ್ನು ಶಾಲಾ ಮಕ್ಕಳಿಗೆ ಅವರು ತಲುಪಿಸುತ್ತಾರೆ.

ಅವರ ಮುಂದಿನ ಓವರ್ ಲ್ಯಾಂಡ್ ಡ್ರೈವಿಂಗ್ ಸಾಹಸವಂತೂ ಮೈನವಿರೇಳಿಸುವಂಥಾ ಅತಿ ಸಾಹಸ. ೨೦೧೬ ಡಿಸೆಂಬರ್ ಮತ್ತು ೨೦೧೭ ಜನವರಿ ತಿಂಗಳಲ್ಲಿ ಸೈಬೀರಿಯಾದ ಊಹಿಸಲೂ ಅಸಾಧ್ಯವಾದ -೫೦ ಡಿಗ್ರಿ ತೀವ್ರ ಶೀತ ಪ್ರದೇಶದಲ್ಲಿ ಒಬ್ಬರೇ ಫೋರ್ ವೀಲ್ ಡ್ರೈವ್ ವಾಹನವನ್ನು “ಹೈವೆ ಆಫ್ ಬೋನ್ಸ್” ಹೆದ್ದಾರಿಯಲ್ಲಿ ಉದ್ದಗಲ ನಡೆಸಿ ಎರಡು ವಾರ ಕಳೆದಿದ್ದಾರೆ. ತಮ್ಮ ಏಕಾಂಗಿ ವಾಹನ ಯಾತ್ರೆಯಲ್ಲಿ ೫೦೦೦ ಕಿಲೋಮೀಟರ್ ಕ್ರಮಿಸಿ, ಕೊಲಿಮಾ ಹೈವೇ ಅಥವಾ ‘ಪೋಲ್ ಆಫ್ ಕೋಲ್ಡ್’ ಅನ್ನು ಮುಟ್ಟಿ ತಮ್ಮ ಕನಸನ್ನ ನಿಜವಾಗಿಸಿಕೊಂಡಿದ್ದಾರೆ. ಸೈಬೀರಿಯಾದ ಪಟ್ಟಣವಾದ ಒಯ್ಮ್ಯಾಕೊನ್ ವಸತಿ ಪ್ರದೇಶ ಈ ಭೂಮಿಯಲ್ಲೇ ಮನುಷ್ಯರು ವಾಸಿಸುವ ಅತ್ಯಂತ ಶೀತಲಪ್ರದೇಶ ಎಂದು ಹೆಸರಾಗಿದೆ. ಅಲ್ಲದೆ ನಿಧಿ ಪ್ರಯಾಣ ಮಾಡಿದ ಯಾಕಟ್ಸ್ಕ್ ನಿಂದ ಮಗದನಿಸ್ ವರೆಗಿನ ರಸ್ತೆ ನಮ್ಮ ಪ್ರಪಂಚದ ಅತ್ಯಂತ ಅಪಾಯಕಾರಿ ದಾರಿ ಎಂದು ಗುರುತಿಸಲ್ಪಟ್ಟಿದೆ. ಕಾರಣ ಆ ಹೆದ್ದಾರಿ ರಚಿತವಾಗಿರುವುದು ಶಾಶ್ವತವಾಗಿ ಹೆಪ್ಪುಗಟ್ಟಿ ಹಿಮವಾಗಿರುವ ನದಿಗಳ ಮೇಲೆ.

ಈ ಹೆದ್ದಾರಿಯಲ್ಲಿ ಸಾಗುವಾಗ ನಿಧಿಯವರಿಗೆ ನಾನಾ ಥರದ ಭಾವನೆಗಳು ಉಂಟಾದವಂತೆ. ಆರಂಭದಲ್ಲಿ ಸ್ವಲ್ಪ ಅಧೀರತೆಯಿದ್ದರೂ ಕ್ರಮೇಣ ತಾನೊಬ್ಬಳೇ ವಾಹನದಲ್ಲಿ ಇರುವುದು, ರಾತ್ರಿಯೆಲ್ಲ ಡ್ರೈವ್ ಮಾಡುವುದು ಅಭ್ಯಾಸವಾಯಿತು. ಕಡೆಗೆ ಪೋಲ್ ಆಫ್ ಕೋಲ್ಡ್ ತಲುಪಿದಾಗ ಬೆನ್ನಲ್ಲಿ ಚಳಿ ಹುಟ್ಟಿದ್ದು, ಚರ್ಮದ ಮೇಲೆ ರೋಮಾಂಚನದ ಗುಳ್ಳೆ ಎದ್ದಿದ್ದು ನೆನಪಿಸಿಕೊಳ್ಳುತ್ತಾರೆ. ತಾನು ಕಡೆಗೂ ಆ ತೀವ್ರ ಹವಾಮಾನದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬದುಕುಳಿದಿದ್ದು, ತನ್ನ ಅತಿ ಸಾಹಸದ ಡ್ರೈವಿಂಗ್ ಕಲೆಯನ್ನು ಸಾಬೀತುಪಡಿಸಿದ್ದು ಹೆಮ್ಮೆಯ ಕ್ಷಣಗಳಾದವು, ಎನ್ನುತ್ತಾರೆ. ಈ ಅನ್ವೇಷಕ ಪ್ರಯಾಣವನ್ನು ಏಕಾಂಗಿಯಾಗಿ ಮಾಡಿದ ಮೊದಲ ಭಾರತೀಯಳು ಎಂಬುದು ಅವರಿಗೆ ಹೆಗ್ಗಳಿಕೆಯ ವಿಷಯವಾಗಿತ್ತು.

ಪೋಲ್ ಆಫ್ ಕೋಲ್ಡ್ ನಲ್ಲಿ ನಿಂತಿರುವ ನಿಧಿ

ಇಂತಹ ಅತಿಸಾಹಸ ಪ್ರಯಾಣದ ಯೋಚನೆ ಹೇಗೆ ಬಂತು, ಅದೂ ಒಬ್ಬರೇ ಕಾರು ಚಲಾಯಿಸುತ್ತಾ ಸಾವಿರಾರು ಮೈಲಿಗಳನ್ನು ಆ ಹವಾಮಾನ ವೈಪರೀತ್ಯದಲ್ಲಿ ಕಳೆದಿದ್ದು, ಎಂದು ಕೇಳಿದರೆ ಅಂಥಾ ಒಂದು ಅತಿಸಾಹಸ ಅನುಭವಕ್ಕಾಗಿ ತಪಸ್ಸು ಮಾಡಿದ್ದೆ ಎಂದರು ನಿಧಿ! “ನನ್ನನ್ನು ನಾನು ಚಾಲೆಂಜ್ ಮಾಡಿಕೊಳ್ಳುವುದು ನನಗೆ ಅಭ್ಯಾಸವಾಗಿದೆ, ಇಲ್ಲವಾದರೆ ಜೀವನ ಬೋರ್ ಅನ್ನಿಸತ್ತೆ! ಮುಂಚಿನಿಂದಲೂ ನಾನು ಒಂಥರಾ ವೈಲ್ಡ್ ಸ್ವಭಾವದವಳು. ನನ್ನನ್ನು ನಾನು ಚಾಲೆಂಜ್ ಮಾಡಿಕೊಳ್ಳುವುದು ನನಗೆ ಅಭ್ಯಾಸವಾಗಿದೆ, ಇಲ್ಲವಾದರೆ ಜೀವನ ಬೋರ್ ಅನ್ನಿಸತ್ತೆ! ನನಗೇ ನಾನು ಸವಾಲೊಡ್ಡಿಕೊಳ್ಳುವುದು ಖಂಡಿತವಾಗಿಯೂ ನನ್ನತನದಲ್ಲಿರುವ ಸತ್ವ,” ಎಂದರು.

ಈ ವರ್ಷದ (೨೦೧೮) ಆರಂಭದ ತಿಂಗಳುಗಳಲ್ಲಿ ಹಂಚಿಕೆ ಹಾಕಿ, ಯೋಜನೆಯನ್ನ ರೂಪಿಸಿ, ಐದು ಮಂದಿ ಮಹಿಳಾ ಚಾಲಕರ ಪಡೆಯನ್ನು ಒಟ್ಟುಗೂಡಿಸಿ, ಮಹೀಂದ್ರಾ ಸ್ಕಾರ್ಪಿಯೊ ವಾಹನಗಳಲ್ಲಿ ಹೊರಟು ನೇಪಾಳದ ಉತ್ತರ ಭಾಗದ (ಟಿಬೆಟ್ ಹತ್ತಿರದ) ಮಸ್ತಾಂಗ್ ಕಣಿವೆಯನ್ನು ಹೊಕ್ಕಿಯೇಬಿಟ್ಟರು. ಆ ಕಣಿವೆಯ ಹೊಟ್ಟೆಯೊಳಗೆ ಹೊಕ್ಕು ಬಂದ ಪ್ರಪಂಚದ ಮೊಟ್ಟಮೊದಲ ಚಾಲಕ ತಂಡ ಎಂಬ ಹೆಗ್ಗಳಿಕೆ ಅವರದ್ದಾಯಿತು. ಅವರ ಈ ಅತಿಸಾಹಸ ಚಾಲನೆಯ ವಿವರಗಳನ್ನು ಕೇಳಿದಾಗ, ಸಾಮಾನ್ಯರಿಗೆ ದಕ್ಕದ ಹಿಮಾಲಯದ ಅಪರೂಪದ ಭಾಗದ ಚಿತ್ರಗಳನ್ನು ನೋಡಿದಾಗ ಮೈನವಿರೇಳುತ್ತದೆ. “ಸುಮಾರು ೧೩,೦೦೦ ಅಡಿಗಳಿಗೂ ಹೆಚ್ಚು ಎತ್ತರದಲ್ಲಿ, ಅತ್ಯಂತ ಕಡಿದಾದ ದಾರಿಗಳಲ್ಲಿ (ಅಥವಾ ದಾರಿಯೇ ಇಲ್ಲದ ಕಡೆ) ನಾವು ವಾಹನಗಳನ್ನು ಚಲಾಯಿಸಿದ್ದು. ಒಂದು ಕಡೆ ಹಿಮಾಲಯದ ಉನ್ನತ ಶಿಖರಗಳ ಸೌಂದರ್ಯವನ್ನು ನೋಡುವುದೋ ಅಥವಾ ಪಕ್ಕದಲ್ಲಿರುವ ಆಳದ ಪ್ರಪಾತಗಳನ್ನು ನೋಡುವುದೋ ಎಂಬ ಇಬ್ಬಂದಿ. ಮೂರು ಸಾವಿರ ಕಿಲೋಮೀಟರ್ ಕ್ರಮಿಸಿದ ವಿಷಯಕ್ಕಿಂತಲೂ ವಾಹನ ಚಲಾಯಿಸಿದ ಜಾಣ್ಮೆ, ಕುಶಲತೆ, ಮತ್ತು ಏಕಾಗ್ರತೆಗಳು ನೆನಪಿನಲ್ಲಿ ಉಳಿಯುವುದು,” ಎಂದರು.

ಅವರು ಹೊರಟ ಸಿಕ್ಕಿಂ ಕಡೆಯ ಅವರ ಮುಂದಿನ ಪ್ರಯಾಣ ಉಲ್ಲಾಸಕರವಾಗಿತ್ತು. ವಸಂತದ ಹೂಹಣ್ಣು ಮತ್ತು ಎಳೆತನವನ್ನು ದಾರಿಯುದ್ದಕ್ಕೂ ಅನುಭವಿಸಿದ ಸುಖ.

ಈಗ ನಿಧಿ ಮತ್ತವರ ಜೊತೆಗಾರರು ಭಾರತದ ರಾಜಧಾನಿ ದೆಹಲಿಯಿಂದ ಬ್ರಿಟನ್ – ಲಂಡನ್ ನಗರಕ್ಕೆ ಮತ್ತದೇ ಫೋರ್ ವೀಲ್ ಓವರ್ ಲ್ಯಾಂಡ್ ಡ್ರೈವಿಂಗ್ ಸಾಹಸವನ್ನು ಎರಡನೇ ಬಾರಿ ಕೈಗೊಂಡಿದ್ದಾರೆ. ಅವರ ಪ್ರಯಾಣದ ವಿವರಗಳನ್ನು ನನ್ನಂತಹ ಆಸಕ್ತರು ಹಿಂಬಾಲಿಸುತ್ತಿದ್ದೀವಿ. ಆ ಮಹಿಳಾಮಣಿಗಳಿಗೆ ಶುಭಹಾರೈಕೆಯನ್ನು ಆಗಾಗ ಕಳಿಸುತ್ತಿದ್ದೀವಿ. ಕಳೆದ ಬಾರಿ ಅವರು ಮೂವರು ಹೆಂಗಳೆಯರು ಲಂಡನ್ ನಗರವನ್ನು ತಲುಪಿದಾಗ ಅವರಿಗೆ ಯಾರೂ ಪರಿಚಯದವರು ಇರಲಿಲ್ಲವಂತೆ. ಈ ಬಾರಿ ನಮ್ಮ ಭಾರತೀಯ ನಾರಿಯರು ಲಂಡನ್ ಬಂದು ತಲುಪಿದಾಗ ನೀವು ಅವರನ್ನು ಭೇಟಿಯಾಗುವಿರಾ? ಕನ್ನಡ ಬಳಗದಿಂದಾಗಲೀ ಅಥವಾ ಕನ್ನಡಿಗರುಯುಕೆ-ವತಿಯಿಂದಾಗಲೀ ಅವರಿಗೆ ಸ್ವಾಗತವನ್ನು ಕೋರಿದರೆ ಹೇಗೆ?

3 thoughts on “ಸಾಹಸೀ ಓವರ್ ಲ್ಯಾಂಡರ್ – ನಿಧಿ ತಿವಾರಿ ಎಂಬ ಕನ್ನಡದ ಅಚ್ಚರಿ! – ವಿನತೆ ಶರ್ಮ ಮಾಡಿಸುವ ಪರಿಚಯ

  1. Shantha and Uma, Thank you for your very encouraging comments. Hopefully, the ladies will get to meet some Kannadigas this time when they arrive in London! Cheers, Vinathe

    Like

  2. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳನ್ನು ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರಿಸಿ ಅವರ ಪ್ರತಿಭೆ ಮತ್ತು ಬುದ್ಧಿ ಶಕ್ತಿಗಳಿಗೆ ತೆರೆ ಇಳಿಯುತ್ತಿದ್ದರಲ್ಲ! ಸಹಸ್ರಾರು ಹೆಣ್ಣುಗಳ ಪ್ರತಿಭೆಗಳು ಹೇಳಹೆಸರಿಲ್ಲದಂತೆ ನಷ್ಟವಾಗಿದೆ. ಕಡೆಗೊಮ್ಮೆ ನಿಧಿ ತಿವಾರಿಯಂತಹ ಸಾಹಸಿ ಮಹಿಳೆ, xx ಕ್ರೋಮೋಸೋಮ್ ಗಳ ಅಂತಸ್ಸತ್ವವನ್ನು ಎತ್ತಿ ಹಿಡಿದಿರುವ ಸಾಹಸಗಾಥೆಯನ್ನು ನಮಗೆ ಪರಿಚಯ ಮಾಡಿದ್ದಕ್ಕೆ ಬಹಳ ಧನ್ಯವಾದಗಳು ವಿನುತೆ. ಉತ್ತರ ದೃವದ ಅತ್ಯಂತ ಶೀತಲ ಪ್ರದೇಶಗಳಲ್ಲಿ ಸಂಚರಿಸಿದ ಈ ಮಹಿಳೆ ಲಂಡನ್ನಿಗೆ ಬಂದಾಗ, ಕನ್ನಡ ಬಳಗ ಈ ಸದವಕಾಶವನ್ನು ಬಳಸಿಕೊಂಡು, ಆಕೆಯನ್ನು ನಮ್ಮ ಬಳಗದ ಬಂಧುಗಳಿಗೆ ಪರಿಚಯಿಸಿ ಸನ್ಮಾನ ಮಾಡಿದರೆ ಚೆನ್ನ. ಕನ್ನಡ ಬಳಗದ ಅಧ್ಯಕ್ಷ ವಿವೇಕ್ ಅವರಿಗೆ ಈಕೆಯ ಬಗ್ಗೆ ಬರೆದು ತಿಳಿಸಿ!
    ಉಮಾ ವೆಂಕಟೇಶ್

    Like

  3. This is an amazingly inspiring real story . I thoroughly enjoyed reading Nidhis adventures and her courageous driving, travelling and exploring in difficult conditions . What a brave spirited woman ! I would be a great pleasure to meet her and listen to her adventure storie when she will be in London .

    Like

Leave a comment

This site uses Akismet to reduce spam. Learn how your comment data is processed.