‘ಹಳದಿ ಹೂಗಳು’ ವಿಲಿಯಮ್ ವರ್ಡ್ಸ್ವರ್ತ್ ಕವಿಯ ‘Daffodils/ I wandered lonely as a cloud’ ಕವಿತೆಯ ಅನುವಾದ- ಮುರಳೀಧರ ಹತ್ವಾರ ಅವರಿಂದ

daffodils2daffodils

 

ಪೀಠಿಕೆ:‘ ಡ್ಯಾಫ್ಫೋಡಿಲ್ಸ್’ ಎನ್ನುವುದು ಇಂಗ್ಲಿಷಿನ ಒಂದು ವಿವಿಧಾರ್ಥಕ ಪದ. ಹೊಸತನ, ಸ್ಫೂರ್ತಿ ,ಸೃಜನಶೀಲ, ಕ್ಷಮೆ, ನೆನಪು,ಅಂತರಂಗ ದರ್ಶನ ಎನ್ನುವ ಅರ್ಥಗಳು ಈ ಪದಕ್ಕೆ ಇವೆ.ಇಂತಹ ಪದದ ಹೆಸರನ್ನು ಹೊತ್ತ ಹೂವು ಮೇಲಿನ ಎಲ್ಲ ಅರ್ಥಗಳ ದ್ಯೋತಕವಾಗಿದೆ, ನೋಡಿದ ಕೂಡಲೇ ಎಂತಹವರೂ ಸಹ ಮೋಡಿಗೊಳಗಾಗುತ್ತಾರೆ. ಹಳದಿ, ಹಳದಿ ಮಿಶ್ರಿತ ಕೇಸರಿ, ಬಿಳಿ ಮಿಶ್ರಿತ ಹಳದಿ ಬಣ್ಣಗಳಲ್ಲಿ ಕಾಣಸಿಗುವ ಈ ಹೂಗಳು ವಸಂತ ಮಾಸದ ಸಂತಸ ಸುಮಗಳು ಎಂದರೆ ತಪ್ಪಾಗಲಾರದು.ಇಂಗ್ಲಿಷಿನ ಪ್ರಸಿದ್ಧ ಕವಿಯಾದ ವಿಲಿಯಮ್ ವರ್ಡ್ಸ್ವರ್ತ್ ಬರೆದ ‘Daffodils/ I wandered lonely as a cloud’ ಕವಿತೆಯನ್ನು ಕನ್ನಡಕ್ಕೆ ಮುರಳೀಧರ ಹತ್ವಾರ ಅವರು ಬಹಳ ಸೊಗಸಾಗಿ ಅನುವಾದಿಸಿದ್ದಾರೆ, ನೀವೂ ಓದಿ ಆಸ್ವಾದಿಸಿ.

ಮುರಳೀಧರ ಅವರ ಮಾತುಗಳಲ್ಲಿ-

ವಿಲಿಯಂ ವರ್ಡ್ಸ್ವರ್ತ್ (William Wordsworth) (1770-1850) ಇಂಗ್ಲೆಂಡಿನ ಬಹು ಪ್ರಸಿದ್ಧ ಕವಿ. ಅವನ ಡ್ಯಾಫೊಡಿಲ್ ಕವಿತೆ ಹೆಚ್ಚಿನವರ ಮನದಲ್ಲಿ ಇ೦ದಿಗೂ ಅವನ ನೆನಪನ್ನ ಉಳಿಸಿರುವ, ಬಹು ಜನರು ಮೆಚ್ಚಿದ ಕವಿತೆ. ಈ ಕವಿತೆಯ ಕನ್ನಡ ಅನುವಾದದ ಒಂದು ಪ್ರಯತ್ನ. ಜೊತೆಗೆ ಅವನ ಮನೆಯ(ಎಡಬದಿಯ ಚಿತ್ರ) ಮತ್ತು ಬಲಬದಿಯಲ್ಲಿ ಅವನ ಈ ಕವಿತೆಗೆ   ಸ್ಫೂರ್ತಿಯಾದ ಉಲ್ಸವಾಟರ್ (Ullswater lake) ಕೆರೆಯ ಚಿತ್ರಗಳು ನಿಮಗಾಗಿ:

 

 

ಹಳದೀ ಹೂಗಳು……..


ನಡೆದಿದ್ದೆ ನಾ ಒಂಟಿಯಾಗಿ, ಕಣಿವೆ-ಗುಡ್ಡಗಳ 
ಮೇಲೆ ಎತ್ತರದಲಿ ತೇಲುವ ಮೋಡವೊಂದರಂತೆ.
ಕಂಡೆನೊಮ್ಮೆಲೆ ಬಹುದೊಡ್ಡ, ಹೊಂಬಣ್ಣದ 
ಹಳದಿ-ಹೂಗಳ ಗುಂಪೊಂದ;
ಕೆರೆಯ ತಡಿಯಲಿ, ಮರಗಳಡಿಯಲಿ
ಪಟಪಟಿಸಿ ಕುಣಿಯುತಿದ್ದವವು ತಂಗಾಳಿಯಲಿ.

ಮಿಂಚುತ, ಹೊಳೆಯುವ ಆಕಾಶ ಗಂಗೆಯ
ನಿರಂತರ ನಕ್ಷತ್ರಗಳಂತೆ, ಹರಡಿದ್ದವವು
ಎಂದೂ ಮುಗಿಯದ ಸಾಲಿನಂತೆ, ಆ ದಡದಂಚಿನಲಿ:
ಹತ್ತು ಸಾವಿರವ ಕಂಡೆ ಒಂದೇ ನೋಟದಲಿ,
ನರ್ತಿಸುತ್ತಿದ್ದವವು ನಲಿವಿನಲಿ ತಲೆದೂಗಿ.

ಪಕ್ಕದ ನೀರ ಅಲೆಗಳೂ ಕುಣಿಯುತಿದ್ದವು; ಆದರೆ
ಹೂಗಳು ಹಿಂದಿಕ್ಕಿದ್ದವು ಮಿಂಚುವಲೆಗಳ ಹರ್ಷದಿಂದಲಿ:-
ಕವಿಯೊಬ್ಬಗೆ ಸಂತಸವಲ್ಲದೆ ಮತ್ತೇನು
ಉಲ್ಲಸಿತರ ಇಂತಹ ಸಂಗದಲ್ಲಿ:
ನೋಡಿದೆ—ನೋಡುತ್ತಲೇ ಇದ್ದೆ—ಒಂದಿಷ್ಟೂ ಯೋಚಿಸದೆ
ಏನು ಸಿರಿಯ ತಂದಿಹುದು ಹೂಗಳೀ ಆಟ ನನಗೆಂದು:

ಏಕೆಂದರೆ ಮಂಚದ ಮೇಲೆ ಸುಮ್ಮನೆಯೋ,
ಮನನ ಮಾಡುತ್ತಲೋ ಮಲಗಿದಾಗಲೆಲ್ಲ
ನನ್ನೊಳಗಣ್ಣ ಹೊಳಪಿಸುವವೀ ಹೂಗಳು
ಅದುವೇ ನನಗೆ ಏಕಾಂತದ ಪರಮಾನಂದ,
ಮತ್ತೆ ನನ್ನ ಹೃದಯ ಹರುಷದಿಂದ ತುಂಬಿ,
ಕುಣಿಯುವುದು ಹಳದೀ ಹೂಗಳೊಟ್ಟಿಗೆ.


(ವಿಲಿಯಂ ವರ್ಡ್ಸವರ್ತ, ೧೮೧೫)

ಅನುವಾದ: ಮುರಳಿ ಹತ್ವಾರ , ಚಿತ್ರ ಕೃಪೆ : ಗೂಗಲ್ ಮತ್ತು ಲೇಖಕರು

 

ಈ ಹಿಂದೆ ಶ್ರೀವತ್ಸ ದೇಸಾಯಿ ಮತ್ತು ವಿನತೆ ಶರ್ಮ ಅವರು ಇದೇ ಕವಿತೆಯ ಬಗ್ಗೆ ಬರೆದಿದ್ದು, ಹೆಚ್ಚು ಮಾಹಿತಿಗಳನ್ನು ಒಳಗೊಂಡಿವೆ. ಈ ಕೆಳಗಿನ ಸಂಪರ್ಕ ಕೊಂಡಿಯನ್ನು ಬಳಸಿ

https://wordpress.com/post/anivaasi.com/1357

https://wordpress.com/post/anivaasi.com/5573

 

 

 

8 thoughts on “‘ಹಳದಿ ಹೂಗಳು’ ವಿಲಿಯಮ್ ವರ್ಡ್ಸ್ವರ್ತ್ ಕವಿಯ ‘Daffodils/ I wandered lonely as a cloud’ ಕವಿತೆಯ ಅನುವಾದ- ಮುರಳೀಧರ ಹತ್ವಾರ ಅವರಿಂದ

 1. ಸೊಗಸಾದ ಅನುವಾದ.ಮುರಳಿಧರ ಅವರೇ! ಡಾಫಡಿಲ್ ಹೂಗಳೇ ಹಾಗೆ, ಎಂಥ ಕಾಲದಲ್ಲಿಯೂ. ಎಂಥೆಂಥವರಿಗೂ ಮುದಕೊಟ್ಟು, ಎಲ್ಲರಿಂದ ಅನುವಾದಿಸಿಕೊಂಡು ಕಂಗೊಳಿಸುತ್ತದ್ವೆ!

  Like

 2. ಮುರಳೀಧರ,
  ಸೊಗಸಾದ ಭಾವಾನುವಾದ. ಡಾಫೊಡಿಲ್ ಹೂಗಳ ಹಾಸು ನೆಲದ ಮೇಲೆ ಹರಡಿದ್ದಾಗ, ಆ ಹಳದಿ ಹೂಗಳ ಸೌಂದರ್ಯವನ್ನು ನೋಡಿಯೇ ಮೆಚ್ಚಬೇಕು, ಅಷ್ಟು ಅನನ್ಯ! ಒಂದಲ್ಲ, ಎರಡಲ್ಲ, ಹತ್ತು ಸಾವಿರ ಹಾಡುಗಳು ಹುಟ್ಟಲೇಬೇಕು ಎನ್ನುವಂತಹ ಸೂಜಿಗಲ್ಲು ಸೆಳೆತ! ನಿಮ್ಮ ಭಾವಾನುವಾದದ ಶೈಲಿ ಚೆನ್ನಾಗಿದೆ.
  ವಿನತೆ ಶರ್ಮ

  Liked by 1 person

 3. Congratulations Muralidhar.
  Excellent translation of Daffodils pen by Wordsworth.We read this poem when I was in High school at Dharwad.My favourite teacher late Nadgir Master taught us English with pride and dedication.Your translated poem brought me sweet memories. Thsnks for sharing in Anivaasi.
  I am so happy that we have so many very talented , interested Kannadigas in our Anivaasi Group.
  Please continue to share more of your poems, articles.
  Aravind
  07968125839

  Like

 4. ನಾನು ಮಾಡಿದ್ದ ಭಾವಾನುವಾದ, ಅದೇ ಕವಿತೆ. ಮುಂಚೆ ದೇಸಾಯಿ ಅವರ ಲೇಖನಕ್ಕೆ ಪೂರಕವಾಗಿ ಮಾಡಿದ ಕಮೆಂಟಿಗೆ…

  Daffodils-ನೆಲ ನೈದಿಲೆ!
  ಗಿರಿಶಿಖರ ಕಂದರಗಳಾ ಮೇಲೆ ನಾನೊಮ್ಮೆ
  ಒಂಟಿ ಮೋಡದ ತೆರದಿ ಅಲೆಯುತಿರುವಲ್ಲಿ
  ಸ್ವರ್ಣ ವರ್ಣದ ಹೂವ ಕಂಬಳಿಯ ಹಾಸನ್ನು
  ಕಂಡು ಅಚ್ಚರಿಗೊಂಡು ನಿಂದೆ ನಾನಲ್ಲಿ

  ಕೊಳದ ಬದಿಯಲಿ ನಿಂತ ಸಾಲುಮರಗಳ ಕೆಳಗೆ
  ನಲಿವ ಹೂಗಳು ಕರೆಯೆ ಕೈಬೀಸಿ ಬಳಿಗೆ
  ಕ್ಷಣವೊಮ್ಮೆ ನಾನಿಂತು ಹರಿಸಿದೆನು ಚಿತ್ತ
  ನೋಡುತಲಿ ಕಣಿವೆಯಾ ಸುತ್ತ ಮುತ್ತ.

  ಆಕಾಶಗಂಗೆಯಲಿ ರಾತ್ರಿಯಾಗಸದಲ್ಲಿ
  ಎಣೆಯಿರದೆ ಮಿನುಗುವಾ ತಾರೆಗಳ ತೆರದಿ
  ಕೊಳದ ದಂಡೆಯ ಉದ್ದ ಅಗಲಕ್ಕೂ ಮೈಚಾಚಿ
  ಕಣ್ಣ ತುಂಬಿವೆ ಇಲ್ಲಿ ಕಾಣಿಸದೆ, ಪರಿಧಿ.

  ಹತ್ತಲ್ಲ ನೂರಲ್ಲ ಹತ್ತು ಸಾವಿರವಲ್ಲ
  ಲಕ್ಷಕ್ಕೂ ಮಿಗಿಲಾಗಿ ನಗುತಿರುವುವಲ್ಲಿ
  ಬಳುಬಳುಕಿ ನಸುನಗುತ ತಲೆದೂಗಿ ಆಡಿಹವು
  ತಂಗಾಳಿ ಮೃದುವಾಗಿ ಬೀಸುತಿರುವಲ್ಲಿ

  ಕೊಳದೊಳಗೆ ಜಲದಲೆಯು ಎದ್ದು ಕುಣಿದಿರಲೇನು
  ನಮ್ಮ ನಾಟ್ಯದ ಸಮಕೆ ಅವುಗಳಿಲ್ಲೆಂದು
  ಹೆಮ್ಮೆ -ಬಿಮ್ಮುಗಳಿಂದ ಹರುಷದೊನ್ನಲಿವಿಂದ
  ಸುಮರಾಜಿ ನರ್ತಿಸಿವೆ ನೋಡು ನೀಬಂದು

  ಪುಷ್ಪಹಾಸಿನ ಚೆಲುವು ನನ್ನ ಮನ ತುಂಬಿರಲು
  ನನ್ನ ಮೇಲೆಯೇ ನಾನು ಮೋಹಗೊಂಡು
  ಕಣ್ಣು ಮನ ತುಂಬಿರುವ ಈ ಸಿರಿಯ ಭಾಗ್ಯವನು
  ನಂಬಲಾರದೆ ನಂಬಿ ನಿಂದೆನಿಂದು

  ಮನೆಗೆ ಮರಳುತ ಒಂಟಿ ಭಾವದಲಿ ಪವಡಿಸಿದೆ
  ನಾ ಎನ್ನ ತಲ್ಪದಾ ಮೇಲೆ ತಲೆಯಿಟ್ಟು
  ಏಕಾಂತ ನೀಡಿದಾ ಸುಖದ ಸ್ಪರ್ಶಕೆ ಚೆಲುವ
  ಹೂವುಗಳ ಸಾಂಗತ್ಯ ಮನದೊಳಿಟ್ಟು

  ಹೃ-ನ್ಮನ ತುಂಬಿದಾ ಹೂವೆ ನಿನ್ನ ಹೆಸರೇನೆ?
  ‘ಡಾಫುಡಿಲ್ಸ್’ ಎಂಬ ನೆಲ ನೈದಿಲೆಯು ತಾನೆ!!

  Liked by 2 people

  • Like the rhythm of your bhavaanuvaada.

   I was only trying to see how would it look if we borrowed the style of writing too. It is an humble attempt and the reason for sharing is to get some valuable feedback.

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.