ಪೀಠಿಕೆ: ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕಥೆ, ಸಣ್ಣ ಕಥೆಗಳ ಪಾತ್ರ ಬಹಳ ದೊಡ್ಡದು . ಇತ್ತೀಚಿನ ದಿನಗಳಲ್ಲಿ ಕಥೆಗಳ ವಸ್ತು ವಿಷಯ ಬಹಳ ವೈವಿಧ್ಯಮಯವಾಗಿ ಓದುಗರ ಗಮನ ಸೆಳೆಯುತ್ತಿದೆ. ಇದು ಒಂದು ಉತ್ತಮವಾದ ಬೆಳವಣಿಗೆ.ವಸುಧೇಂದ್ರ ಅವರು ಬರೆದಿರುವ ‘ಮೋಹನಸ್ವಾಮಿ’ ಕಥಾ ಸಂಕಲನದ ವಿಮರ್ಶೆಯನ್ನು ಡಾ.ವೈಶಾಲಿ ದಾಮ್ಲೆಯವರು ಬಹಳ ಅರ್ಥಪೂರ್ಣವಾಗಿ ಮಾಡಿದ್ದಾರೆ, ನೀವೂ ಓದಿ.
ವಸುಧೇಂದ್ರರ ಸಣ್ಣ ಕಥೆಗಳ ಸಂಕಲನ ‘ಮೋಹನಸ್ವಾಮಿ’ ಯನ್ನು ಇತ್ತೀಚೆಗಷ್ಟೇ ಓದಿ ಮುಗಿಸಿದೆ. ವಸುಧೇಂದ್ರರ ಹಲವು ಸಣ್ಣಕಥೆ ಹಾಗೂ ಪ್ರಬಂಧಗಳ ಸಂಕಲಗಳನ್ನು ಈ ಹಿಂದೆಯೂ ಓದಿದ್ದೇನೆ, ಅವರ ಬರಹಗಳನ್ನು ಬಹಳ ಇಷ್ಟಪಟ್ಟಿದ್ದೇನೆ. ಸಣ್ಣಕಥೆಗಳನ್ನು ಬರೆಯುವ ಅವರ ಶೈಲಿ, ಅವುಗಳಲ್ಲಿರುವ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಜೀವನದ ಮನಮುಟ್ಟುವ ವಿವರಣೆ ಇತ್ಯಾದಿಗಳನ್ನು ಮೆಚ್ಚಿದ್ದೇನೆ. ಇಂತಹ ಪ್ರಬುದ್ಧ ಬರಹಗಾರರಾದ ವಸುಧೇಂದ್ರರು, ಕನ್ನಡ ಸಾಹಿತ್ಯದ ಓದುಗರಿಗೆ ಅಪರಿಚಿತವೇ ಎನ್ನಬಹುದಾದ ಪರಿಕಲ್ಪನೆ ‘ಗೇ ಲಿಟರೇಚರ್‘ ಅನ್ನು ಬರೆಯುವ ನಿರ್ಧಾರ ಮಾಡಿದುದು ಬಹಳ ಶ್ಲಾಘನೀಯ.
ಸಲಿಂಗಕಾಮಿಗಳ (ಗೇ) ಬಗ್ಗೆ, ಅವರ ಜೀವನಶೈಲಿಯ ಬಗ್ಗೆ, ನಮ್ಮ ಸಮಾಜದಲ್ಲಿ ಅರಿವಿನ ಕೊರತೆ ಹಾಗೂ ಪೂರ್ವಾಗ್ರಹಗಳು ಬಹಳಷ್ಟಿವೆ. ಇತ್ತೀಚೆಗೆ, ನನ್ನ ವೈದ್ಯ ಸ್ನೇಹಿತರೊಬ್ಬರು ‘ಸಲಿಂಗಕಾಮವೆಂಬುದು ಒಂದು ಮಾನಸಿಕ ಕಾಯಿಲೆ‘ ಎಂದು ಘೋಷಿಸಿದ್ದನ್ನು ನೋಡಿ ಹೌಹಾರಿದ್ದೆ, ಅವರ ಅಜ್ಞಾನವನ್ನು ಕಂಡು ಮರುಕಪಟ್ಟಿದ್ದೆ. ಸಮಾಜವು ನಿರ್ಧರಿಸಿದ ’ನಾರ್ಮಲ್’ ಎಂಬ ಪರಿಭಾಷೆಯಲ್ಲಿ, ಈ ‘ನಾರ್ಮಲ್‘ ನ ಪರಿಧಿಯಲ್ಲಿ ಯಾರು ಸೇರುವುದಿಲ್ಲವೋ ಅವರೆಲ್ಲರನ್ನೂ ತೀರ್ಮಾನದ ದೃಷ್ಟಿಯಿಂದ ನೋಡುವುದು ನಮಗೆಲ್ಲರಿಗೂ ಅಭ್ಯಾಸವಾಗಿ ಹೋಗಿದೆ. ಈ ಮಾತು ಮಾನಸಿಕ ರೋಗಿಗಳಿಗೆ, ದೈಹಿಕ ಅಂಗವೈಕಲ್ಯವನ್ನು ಹೊಂದಿದವರಿಗೆ, ವಿಚ್ಛೇದನಕ್ಕೊಳಗಾದವರಿಗೆ ಹೀಗೆ ಬಹಳಷ್ಟು ಜನರಿಗೆ ಅನ್ವಯವಾಗುತ್ತದೆ. ವಾಸ್ತವವೆಂದರೆ, ಈ ಜನರ ಪರಿಸ್ಥಿತಿಯ ಬಗ್ಗೆ, ಅಥವಾ ಈ ಕಾಯಿಲೆಗಳ ಬಗ್ಗೆ ಒಂದು ಸಾಸಿವೆ ಕಾಳಿನಷ್ಟು ಮಾಹಿತಿ ಕೂಡಾ ಇರದ ಜನರೂ ಕೂಡಾ, ತಾವು ಈ ವಿಷಯದಲ್ಲಿ ಪಿ ಎಚ್ ಡಿ ಮಾಡಿದವರೇನೋ ಎಂಬಂತೆ ಮಾತನಾಡುತ್ತಾರೆ!
ಗೇ ಗಳ ಬಗ್ಗೆ ನನ್ನ ವೈಯಕ್ತಿಕ ಅನುಭವವನ್ನು ಹೇಳುವುದಾದರೆ, ನನ್ನ ದೈನಂದಿನ ವೃತ್ತಿ ಜೀವನದಲ್ಲಿ ನಾನು ಹಲವಾರು ಗೇ ಜನರೊಂದಿಗೆ ಕೆಲಸ ಮಾಡಿದ್ದೇನೆ/ ಮಾಡುತ್ತಿದ್ದೇನೆ. ಅದು ಅವರ ವೈಯಕ್ತಿಕ ಜೀವನವೇ ಹೊರತು ಅದರ ಬಗ್ಗೆ ಕೆಟ್ಟ ಕುತೂಹಲವಾಗಲೀ, ಇನ್ನಿಲ್ಲದ ಆಸಕ್ತಿಯಾಗಲೀ ನನಗಿಲ್ಲ. ತಮ್ಮನ್ನು ತಾವು ‘straight‘ ಎಂದು ಕರೆದುಕೊಳ್ಳುವ ಜನ ಹೇಗೆ ತಮ್ಮ ವೈಯಕ್ತಿಕ ಜೀವನದ ಸಂಗತಿಗಳನ್ನು ಇದ್ದವರೊಂದಿಗೆಲ್ಲಾ ಹಂಚಿಕೊಳ್ಳುವ ಅಗತ್ಯವಿರುವುದಿಲ್ಲವೋ, ಹಾಗೆಯೇ ಗೇ ಗಳೂ ಕೂಡಾ ಈ ಮಾಹಿತಿಯನ್ನು ಅವರಿಗೆ ಸರಿಯೆನಿಸಿದಾಗ, ಬೇಕಾದವರಲ್ಲಿ ಮಾತ್ರ ಹೇಳಿಕೊಳ್ಳಬೇಕು, ಅಥವಾ ಹಾಗೆ ಮಾಡುವಂಥ ವಾತಾವರಣವನ್ನು ನಾವು ಸೃಷ್ಟಿಸಬೇಕು ಎಂಬುದು ನನ್ನ ಅನಿಸಿಕೆ. ನಾನು ಮನೋವೈದ್ಯಳಾಗಿ ವೃತ್ತಿ ಪ್ರಾರಂಭಿಸಿದಾಗಿನಿಂದ ನನ್ನ ಕ್ಲಿನಿಕ್ ನಲ್ಲಿ, ವಾರ್ಡ್ ಗಳಲ್ಲಿ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ನೋಡಿರುವ, ಚಿಕಿತ್ಸೆ ಕೊಟ್ಟಿರುವ, ಹಲವಾರು ಗೇ ರೋಗಿಗಳು ಅನುಭವಿಸುವ ಮಾನಸಿಕ ತುಮುಲಕ್ಕೆ ಕಾರಣ, ಅವರನ್ನು ಸಮಾಜ ಹಾಗೂ ಕುಟುಂಬದವರು ನಡೆಸಿಕೊಳ್ಳುವ ರೀತಿಯೇ ಹೊರತು, ತಾವು ಗೇ ಎಂಬುದಲ್ಲ.
ಹೀಗಾಗಿ, ಗೇ ಜನರ ಬಗ್ಗೆ ಸಮಾಜದ ಪೂರ್ವಾಗ್ರಹವನ್ನು ಕಡಿಮೆ ಮಾಡಲು ಕನ್ನಡದಲ್ಲಿ ‘ಮೋಹನಸ್ವಾಮಿ‘ ಯಂಥ ಪುಸ್ತಕದ ಅವಶ್ಯಕತೆ ಬಹಳ ಇತ್ತು ಎಂದು ನನಗೆ ಹಲವು ಬಾರಿ ಅನಿಸಿದ್ದಿದೆ. ವಸುಧೇಂದ್ರರ ಇನ್ನೊಂದು ಕಥಾಸಂಕಲನ ‘ವಿಷಮ ಭಿನ್ನರಾಶಿ’ ಯಲ್ಲಿಯೂ ಗೇ ಗಳ ಜೀವನಕ್ಕೆ ಸಂಬಂಧಿಸಿದ, ‘ಮೋಹನಸ್ವಾಮಿ’ ಯೇ ಪ್ರಧಾನ ಪಾತ್ರವಾಗಿರುವ ಮೂರು ಕಥೆಗಳಿವೆ. ತನ್ನ ಸ್ಥಿತಿ ಏನೆಂದು ಅರ್ಥವಾಗದೆ ಮೋಹನಸ್ವಾಮಿಯು ಪಡುವ ಮಾನಸಿಕ ಗೊಂದಲ, ತಾನು ಗೇ ಎಂಬ ಅರಿವಾದಾಗ ಆತ ಅನುಭವಿಸುವ ಅಪರಾಧೀ ಪ್ರಜ್ಞೆ, ಅವನ ವಿವಶತೆಯನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶವಾದಿ ಸಮಾಜ ಇವೆಲ್ಲವುಗಳ ಚಿತ್ರಣ ಮನಮುಟ್ಟುವಂತೆ ಬಿಂಬಿತವಾಗಿದೆ.
ಆದರೆ, ಬಹಳಷ್ಟು ಕಥೆಗಳಲ್ಲಿ ಚಿತ್ರಿಸಲಾಗಿರುವ ಗೇ ವ್ಯಕ್ತಿಗಳ ನಡುವಿನ ದೈಹಿಕ ಸಂಬಂಧದ ವಿವರಣೆ ಬಹಳ ಮುಜುಗರ ತರಿಸುವಂತಿದೆ. ಮೋಹನಸ್ವಾಮಿ ಹಾಗೂ ಕಾರ್ತಿಕ್ ಎಂಬ ಹುಡುಗನ ಮಧ್ಯದ ಸಂಬಂಧವನ್ನೊಂದು ಬಿಟ್ಟರೆ, ಇನ್ನೆಲ್ಲಾ ಕಥೆಗಳಲ್ಲಿಯೂ ದೈಹಿಕ ಸಂಬಂಧವೊಂದೇ ಗೇ ಗಳ ಸಂಬಂಧದ ಬುನಾದಿ ಎನ್ನುವ ಅಭಿಪ್ರಾಯ ಓದುಗರಿಗೆ ಬರುವಂತಿದೆ. ಕೇವಲ ದೈಹಿಕ ಆಕರ್ಷಣೆಯೊಂದರ ತಳಹದಿಯ ಮೇಲೆ ನಿಂತ ಯಾವ ಸಂಬಂಧವೂ ವರ್ಷಗಳ ತನಕ ಬಾಳಲಾರದು, ಹಾಗೂ ಅದು ಯಾವ ರೀತಿಯಲ್ಲಿಯೂ ವ್ಯಕ್ತಿಯೊಬ್ಬನಿಗೆ ನೆಮ್ಮದಿಯನ್ನು ತರಲಾರದು ಎಂದು ದೃಢವಾಗಿ ನಂಬಿರುವ ನನಗೆ, ವಿವಾಹಿತ ಗಂಡಸಿನೊಂದಿಗೆ, ಏಡ್ಸ್ ಇರುವ ವ್ಯಕ್ತಿಯೊಂದಿಗೆ, ಒಟ್ಟಿನಲ್ಲಿ ಕಂಡವರೊಂದಿಗೆ, ಶಾರೀರಿಕ ಆಕರ್ಷಣೆಗೊಳಗಾಗುವ ಮೋಹನಸ್ವಾಮಿಯ ವ್ಯಕ್ತಿತ್ವ ಬಹಳ ಆಶ್ಚರ್ಯವನ್ನುಂಟುಮಾಡಿತು. ನಾನು ಕಂಡಂತೆ, ಗೇ ವ್ಯಕ್ತಿಗಳೆಲ್ಲಾ ಇಂಥವರು ಎಂದು ನನಗೆಂದೂ ಅನಿಸಿಲ್ಲ. ಒಂದೆರಡು ಕಥೆಗಳಲ್ಲಿ ಬಳಸಿರುವ ಭಾಷೆಯನ್ನು ನೋಡಿದಾಗ, ಈ ಪುಸ್ತಕ ಕನ್ನಡ ಸಾಹಿತ್ಯದ ಮುಖ್ಯ ವಾಹಿನಿಯಲ್ಲಿ ಇರಬೇಕೇ ಬೇಡವೇ ಎಂಬ ಅನುಮಾನ ಹುಟ್ಟಿತು. ಗೇ ವ್ಯಕ್ತಿಗಳ ಬಗ್ಗೆ ಕರ್ನಾಟಕದ ಸಮಾಜದಲ್ಲಿರುವ ಪೂರ್ವಾಗ್ರಹಗಳನ್ನು ಕಡಿಮೆ ಮಾಡುವ, ಗೇ ಗಳೂ ಕೂಡಾ ನಮ್ಮ ನಿಮ್ಮಂತೆಯೇ ಸಾಮಾನ್ಯ ಮನುಷ್ಯರು ಎಂಬ ಅರಿವನ್ನು ಹುಟ್ಟಿಸುವ ಉದ್ದೇಶದಿಂದ ಬರೆದ ಪುಸ್ತಕ ಇದು. ಆದರೆ, ಈ ಕಥೆಗಳಲ್ಲಿರುವ ಗೇ ಗಳ ಚಿತ್ರಣದಿಂದಾಗಿ, ಬಳಸಿರುವ ಭಾಷೆಯಿಂದಾಗಿ, ಈ ಪೂರ್ವಾಗ್ರಹಗಳು ಕಡಿಮೆಯಾಗುವ ಬದಲು ಇನ್ನೂ ವೃದ್ಧಿಸಿಯಾವೇ ಎಂಬ ಶಂಕೆಯಾಯಿತು.
ಒಟ್ಟಿನಲ್ಲಿ, ಪುಸ್ತಕದ ಉದ್ದೇಶ ಹಾಗೂ ಇಂತಹ ಸೂಕ್ಷ್ಮ ವಿಷಯವೊಂದನ್ನು ಕನ್ನಡದ ಓದುಗರಿಗೆ ಪರಿಚಯಿಸುವ ವಸುಧೇಂದ್ರರ ನಡೆ ಸ್ವಾಗತಾರ್ಹ. ಆದರೆ ಕೆಲವೊಂದು ಕಥೆಗಳ ಭಾಷೆ ಹಾಗೂ ಚಿತ್ರಣ ಸ್ವಲ್ಪ ಬದಲಾಗಿದ್ದರೆ ಚೆನ್ನಾಗಿತ್ತು ಎಂಬುದು ನನ್ನ ಅನಿಸಿಕೆ.
ವಿ.ಸೂ. ನಾನು ಒಂದು ಬಾರಿಯಷ್ಟೇ, ಎಲ್ಲರಿಗೂ ಅರ್ಥವಾಗಲೆಂದು, ‘ಸಲಿಂಗಕಾಮಿಗಳು’ ಎಂಬ ಪದ ಉಪಯೋಗಿಸಿದ್ದೇನೆ. ಗೇ ಎಂಬ ಪದಕ್ಕೆ ಸಮಾನಾರ್ಥಕವಾದ ಇನ್ನೊಂದು ಕನ್ನಡ ಪದ ಇದೆಯೇ ನನಗೆ ಗೊತ್ತಿಲ್ಲ. ‘ಸಲಿಂಗಕಾಮಿ’ ಎಂಬ ಪದದ ಬಳಕೆ ನನಗೆ ಸರಿ ಅನಿಸುವುದಿಲ್ಲ. ನಾನು ಮೇಲೆ ಹೇಳಿದಂತೆ ‘ಕಾಮ‘ ವೊಂದೇ ಈ ಸಂಬಂಧದ ಬುನಾದಿ ಎಂಬ ಅರ್ಥ ಬರುವ ಪದ ಇದಾಗುತ್ತದೆ. ಇಂಗ್ಲಿಷ್ ನಲ್ಲಿ ‘ಗೇ‘ ಹಾಗೂ ‘ಸ್ಟ್ರೈಟ್‘ ಎನ್ನುವ ಶಬ್ದಗಳಿರುವಂತೆ, ಕನ್ನಡದಲ್ಲಿಯೂ ಇಂತಹ ಅರ್ಥ ಬರುವ, ‘ಸಲಿಂಗಕಾಮಿ’ ಎನ್ನುವಂತೆ ಅವಹೇಳನಕಾರಿಯಲ್ಲದ ಶಬ್ದಗಳು ಬೇಕಾಗಿವೆ ಎಂದು ನನಗನ್ನಿಸುತ್ತದೆ.
ಡಾ. ವೈಶಾಲಿ ದಾಮ್ಲೆ
ನಿಮ್ಮ ಅನಿಸಿಕೆಗಳು ಸುಂದರವಾಗಿ ಮೂಡಿ ಬಂದಿವೆ. ನೀವು ಹೇಳಿದಂತೆ ಪ್ರೇಮ ಇಬ್ಬರ ನಡುವಿನ ಸಂಬಂಧಕ್ಕೆ ಭದ್ರ ಬುನಾದಿ, ಕಾಮ ಆ ಸೌಧದ ಒಂದು ಭಾಗವಷ್ಟೇ. ಹಾಗಾಗೇ ನಾನು ಸಲಿಂಗ ಪ್ರೇಮ ಎಂಬ ಶಬ್ದವನ್ನು ನನ್ನ ‘ಮೊeಹನಸ್ವಾಮಿ’ ಪುಸ್ತಕ ಪರಿಚಯ ಲೇಖನದಲ್ಲಿ ಬಳಸಿದ್ದೆ (ಅನಿವಾಸಿಯ ಹಳೆಯ ಸಂಚಿಕೆ).
ದೀರ್ಫಾವದಿಯ ಸಂಬಂಧಕ್ಕೆ ಪ್ರೇಮ ಆಧಾರವಾದರೂ ಮೊಳಕೆ ಒಡೆಯಲು ಎಷ್ಟೋ ಸಲ ಕಾಮದ ಬಿಸಿ ಅವಶ್ಯ. ತಾವೇ ಹುಡುಕಿ ಜೊತೆಯಾಗುವ ಪದ್ಧಧತಿಗಳಲ್ಲಿ ಇದು ಬಾಹ್ಯದಲ್ಲಿ ಕಂಡು ಬರುವುದು ಸಹಜ. Arranged ಮದುವೆ ಸಾಮಾನ್ಯವಾಗಿರುವ ನಮ್ಮಲ್ಲಿ ಕಾಮವಿಲ್ಲದ ವಿವಾಹ ನೀರ ಮೇಲಿನ ಗುಳ್ಳೆ’, ಪ್ರೇಮವಿಲ್ಲದೇ ಕಾಮದ ಮೇಲೆಯೇ ನಿಂತ ಸಂಬಂಧಗಳಿಗೇನೂ ಕೊರತೆಯಿಲ್ಲ. ವಸುಧೇ೦ದ್ರ ಈ ಸಂಕಲನದಲ್ಲಿ ಸಲಿಂಗ ಪ್ರೇಮಿಗಳ ತೊಳಲಾಟ, ಅವರು ಸಮಾಜದಲ್ಲಿ ಪ್ರತಿ ಕ್ಷಣವೂ ಎದುರಿಸುವ ಕುಹಕತೆ, ಹಿ೦ಸೆಗಳನ್ನು ಎತ್ತಿ ತೋರಿಸಿದ್ದಾರೆಂದು ನನ್ನ ಅನಿಸಿಕೆ. ಅವರ ಭಾಷೆ ಸಮಾಜದ ಕ್ರೂರತೆಯನ್ನು ಪ್ರತಿಫಲಿಸುವಲ್ಲಿ ಸಫಲವಾಗಿದೆ; ಇಂದಿನ ಚರ್ಚೆಯ ವಿಷಯವಾಗಿದೆ.
LikeLike