ಧ್ರುವ -ನಕ್ಷತ್ರ ರಾಜ್ಯ ಅಲೈಸಿಕ ಉರ್ಫ಼್ ಅಲಾಸ್ಕ- ‘ಉಮಾ ವೆಂಕಟೇಶ್’ ಅವರ ಲೇಖನ

ಪೀಠಿಕೆ: ‘ದೇಶ ಸುತ್ತು ಕೋಶ ಓದು’ ಎನ್ನುವ ಗಾದೆ ನಮಗೆಲ್ಲ ನೆನಪಿರಬಹುದು. ಭೂಮಿಯ ಮೇಲೆ ಮಾನವನ ವಾಸಕ್ಕೆ ಸವಾಲೊಡ್ಡುವ ಅನೇಕ ಜಾಗಗಳು ಇವೆ ಮತ್ತು ಅಂತಹವು ಪ್ರಕೃತಿದತ್ತವಾಗಿ, ಜೀವವೈವಿಧ್ಯದಲ್ಲಿ,ನೈಸರ್ಗಿಕ ಚೆಲುವಲ್ಲಿ ಶ್ರೀಮಂತವಾಗಿವೆ.ಇಂತಹ ಅಪರೂಪದ ಅದ್ಭುತಗಳಲ್ಲಿ ಒಂದು ‘ಅಲಾಸ್ಕಾ’.
ಉಮಾ ವೆಂಕಟೇಶ್ ಅವರು ತಮ್ಮ ಅಲಾಸ್ಕಾ ಪ್ರವಾಸದ ಸುಂದರ ಅನುಭವವನ್ನು ನಮ್ಮೊಂದಿಗೆ ಸೊಗಸಾಗಿ ಹಂಚಿಕೊಂಡಿದ್ದಾರೆ, ನೀವೂ ಓದಿ, ನಿಮಗೂ ಪ್ರವಾಸದ ಅನುಭವವಾಗದೆ ಇರದು.

alaska-6

 

ಯೂಪಿಕ್ ಮೂಲನಿವಾಸಿ ಭಾಷೆಯಲ್ಲಿರುವ ಅಲೈಸಿಕ ಎನ್ನುವ ಪದದಿಂದ ತನ್ನ ಹೆಸರನ್ನು ಪಡೆದ ಅಲಾಸ್ಕ ರಾಜ್ಯ, ಉತ್ತರ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೇರ್ಪಡೆಯಾದ ೪೯ನೆಯ ರಾಜ್ಯ. ಮುಖ್ಯ ಭೂಭಾಗದ ಇತರ ೪೮ ರಾಜ್ಯಗಳಿಂದ ದೂರದಲ್ಲಿರುವ, ಈ ವಿಶಾಲ ರಾಜ್ಯವನ್ನು ಕೊನೆಯ ಗಡಿನಾಡೆಂದು ಕರೆಯುತ್ತಾರೆ. ಉನ್ನತ ಗಿರಿಶೃಂಗಗಳು, ಕಡಿದಾದ ಭೂಪ್ರದೇಶ, ಹಚ್ಚಹಸಿರಿನ ಅರಣ್ಯಗಳು, ವಿಪುಲವಾದ ಪ್ರಾಣಿಸಸ್ಯವರ್ಗಗಳನ್ನೊಳಗೊಂಡ ಈ ನಾಡನ್ನು, ಬೇಸಿಗೆಯಲ್ಲಿ ಸೂರ್ಯ ೨೪ ಗಂಟೆಗಳು ಬೆಳಗುತ್ತಾನೆ. ಈಗ ಸುಮಾರು ೫ ವರ್ಷಗಳ ಹಿಂದಿನ ಮಾತು. ಬಿಬಿಸಿ ದೂರದರ್ಶನದಲ್ಲಿ ಪ್ರಸಾರವಾದ, ಸರ್ ಅಟೆನ್ಬರೋ ಅವರ ಕಂಚಿನ ಕಂಠದ ನಿರೂಪಣೆಯನ್ನೊಳಗೊಂಡ ಒಂದು ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದೆ. ನಿಸರ್ಗದ ಅದ್ಭುತ ಸಂಗತಿಗಳು  ( Nature’s Greatest Events) ಎಂಬ ಶೀರ್ಷಿಕೆಯಲ್ಲಿ ತಯಾರಾದ ಈ ಸರಣಿಚಿತ್ರಗಳು, ಬಹುಶಃ ಸಾಕ್ಷ್ಯಚಿತ್ರಗಳ ಚರಿತ್ರೆಯಲ್ಲಿ ಮೈಲಿಗಲ್ಲೆನ್ನಬಹುದು. ಆ ಸರಣಿಯಲ್ಲಿ ತೋರಿಸಿದ ಒಂದು ಸಂಗತಿ ಈ ಅಲಾಸ್ಕಾ ರಾಜ್ಯದಲ್ಲಿ ಪ್ರತಿ ವರ್ಷವೂ ನಡೆಯುತ್ತದೆ. ಈ ಸಾಕ್ಷ್ಯಚಿತ್ರವನ್ನು ನೋಡಿ ಬೆರಗಾಗಿದ್ದ ನನಗೆ, ಒಂದು ದಿನ ಈ ಅದ್ಭುತ ಭೂಮಿಯ ಮೇಲೆ ಹೆಜ್ಜೆಯಿಡುವ ಅವಕಾಶ ಒದಗುತ್ತದೆ ಎಂದು ತಿಳಿದಿರಲಿಲ್ಲ.

 

ಜೀವನ ನಿಜಕ್ಕೂ ವಿಚಿತ್ರವೇ! “ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯ” ಎನ್ನುವ ವಚನವಾಣಿಯ ಸಾಲುಗಳು, ಈ ಅದ್ಭುತ ನಿಸರ್ಗ ಸಂಗತಿಯನ್ನೇ ಕುರಿತು ಬರೆದಂತಿದೆ. ಅಷ್ಟೇ ಅಲ್ಲಾ, ಮಾಮರದಲ್ಲಿ ಕುಳಿತು ಕೂಗುವ ಕೋಗಿಲೆಯ ಕರುನಾಡಿನಲ್ಲಿ ಜನ್ಮವೆತ್ತಿದ ನನ್ನಂತಹ ಪ್ರಜೆಗಳಿಗೆ, ಈ ಸುವರ್ಣವಕಾಶ ನಿಜಕ್ಕೂ ಜೀವನದಲ್ಲೊಂದು ಬಾರಿ ದೊರೆತದ್ದು ಸೌಭಾಗ್ಯವೇ! ಈಗ ೨ ವರ್ಷಗಳ ಹಿಂದೆ ಅಮೆರಿಕೆಗೆ ನಮ್ಮ ವಾಸ್ತವ್ಯವನ್ನು ಬದಲಾಯಿಸಿದ ನನಗೆ, ನನ್ನ ಪತಿಯೊಂದಿಗೆ ಕಳೆದ ವಾರ ಈ ರಾಜ್ಯವನ್ನು ಸಂದರ್ಶಿಸುವ ಅವಕಾಶ ಸಿಕ್ಕಿತು. ಪ್ರತಿ ಮೇ ತಿಂಗಳಲ್ಲಿ ನಡೆಯುವ    ಖಭೌತಶಾಸ್ತ್ರದ ಸಮ್ಮೇಳನಕ್ಕೆ ನನ್ನವರು ಹೋಗುವುದು ಸಾಧಾರಣ ವಿಷಯ. ಆದರೆ ಈ ಬಾರಿ ಅದು ಅಲಾಸ್ಕಾದಲ್ಲಿ ನಡೆದದ್ದು ನನ್ನ ಪಾಲಿಗೆ ವಿಶೇಷವಾದ ಸುದ್ದಿ. ಸುಮಾರು ೬ ತಿಂಗಳ ಹಿಂದೆ ಪ್ರವಾಸ ಬುಕ್ ಮಾಡಿ ಕಾಯುತ್ತಿದ್ದೆ.

ಅಲಾಸ್ಕಾದ ದಕ್ಷಿಣ-ಮಧ್ಯ ಭಾಗದಲ್ಲಿರುವ ಆಂಖರೇಜ್ (Anchorage) ಪಟ್ಟಣಕ್ಕೆ ಸುಮಾರು ೩೫ ಮೈಲಿಗಳ ದೂರದಲ್ಲಿರುವ ಗಿರ್ವುಡ್ ಎನ್ನುವ ಸಣ್ಣ ಊರಿನಲ್ಲಿ ಅಲೈಸಿಕಾ ಎನ್ನುವ ಒಳ್ಳೆಯ ಹೋಟೆಲಿನಲ್ಲಿ ಈ ಸಮ್ಮೇಳನ ಏರ್ಪಾಡಾಗಿತ್ತು. ನಾವಿರುವುದು ಅಮೆರಿಕೆಯ ಪೂರ್ವದಲ್ಲಿರುವ ಪೆನ್ಸಿಲ್ವೇನಿಯಾದಲ್ಲಿ. ಅಲ್ಲಿಂದ ಆಂಖರೇಜ್ ಪಟ್ಟಣಕ್ಕೆ ೪,೫೦೦ ಮೈಲಿಗಳ ದೂರವಿದ್ದು, ಅಲ್ಲಿಗೆ ತಲುಪಲು ವಿಮಾನದಲ್ಲಿ ೯ ಗಂಟೆ, ೪೦ ನಿಮಿಷಗಳಷ್ಟು ಸಮಯವಾಗುತ್ತದೆ. ಸರಿ ನನ್ನ ಉತ್ಸಾಹದಲ್ಲಿ ಆ ಸಮಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಮೇ ೧೧ರ ರಾತ್ರಿ ಸುಮಾರು ೧೧ರ ವೇಳೆಗೆ ಆಂಖರೇಜ್ ತಲುಪಿದೆವು. ವಸಂತ ಋತುವಿನ ಆಗಮನದ ಸಮಯವಾದ್ದರಿಂದ, ಆ ರಾತ್ರಿಯಲ್ಲೂ ಅಲ್ಪಸ್ವಲ್ಪ ಬೆಳಕಿತ್ತು. ನಮ್ಮ ವಿಮಾನ ಕೆಳಗಿಳಿಯಲು ಪ್ರಾರಂಭಿಸುತ್ತಿದ್ದಂತೆಯೇ, ಪಟ್ಟಣದ ಸುತ್ತಲೂ ಇದ್ದ ಉನ್ನತ ಧವಳಗಿರಿಗಳನ್ನು ಕಿಟಕಿಯಿಂದ ನೋಡುತ್ತಿದ್ದ ನನ್ನ ಮೈರೋಮಗಳು ನಿಮಿರಿದ್ದವು! ಅಬ್ಬಾ ಎಂತಹ ದೃಶ್ಯವಿದು? ಹಿಮಾಲಯವನ್ನು ಕಂಡಿದ್ದ ನನಗೆ, ಮತ್ತೊಮ್ಮೆ ಅದೇ ಅನುಭವವಾಯಿತು. ಆದರೆ ಇಲ್ಲಿನ ಹಸಿರುಸಂಪತ್ತನ್ನು ನೋಡಿಯೇ ಆನಂದಿಸಬೇಕು. ಕಡಿದಾದ ಪರ್ವತಗಳ ಮಧ್ಯದಿಂದ ಹಿಮಕರಗಿ ಸುರಿಯುವ ನೂರಾರು ಜಲಪಾತಗಳು ಕಣ್ಣು ಕುಕ್ಕುವಂತಿದೆ. ಈ ದೃಶ್ಯವನ್ನು ಕಂಡಾಗ “ಉತ್ತುಂಗದ ಶಿಖರವೃಂದ ಮುತ್ತಿಡುತಿದೆ ಬಾನಿಗೆ, ಧುಮ್ಮಿಕ್ಕುವ ಅಮೃತಧಾರೆ ಪೊಡಮಡುತಿದೆ ತಾಯಿಗೆ” ಎನ್ನುವ ಕವನದ ಸಾಲುಗಳು ನೆನಪಾದವು. ಪರ್ವತಶ್ರೇಣಿಗಳು, ದಟ್ಟಹಸಿರಿನ ಪ್ರಕೃತಿಗೆ ಪ್ರವೇಶದ್ವಾರದಂತಿರುವ ಆಂಕರೇಜ್ ಪಟ್ಟಣದಿಂದ ಹೊರಟು, ಬಾಡಿಗೆ ಕಾರಿನಲ್ಲಿ, ಆ ಮಧ್ಯರಾತ್ರಿಯಲ್ಲಿ ಹೋಟೆಲ್ ಅಲೈಸಿಕಾ ಕಡೆಗೆ ಹೊರಟೆವು. ಕುಕ್ ಖಾರಿಯ ದಡದಲ್ಲಿರುವ ಈ ಪಟ್ಟಣದಿಂದ, ಗಿರ್ವುಡ್ಡ್ ೪೦ ಮೈಲಿಗಳ ದೂರದಲ್ಲಿದೆ. ಸರಿ ಸರ್ವಾಂತರ್ಯಾಮಿ ಗೂಗಲ್ ಮ್ಯಾಪ್ ನಿರ್ದೇಶನದಲ್ಲಿ ಪ್ರಯಾಣಿಸುತ್ತಿದ್ದ ನಮಗೆ, ಸುತ್ತಲೂ ವ್ಯಾಪಿಸುದ್ದ ಧವಳಗಿರಿಗಳ ನೆತ್ತಿಯಮೇಲೆ ಪ್ರಕಾಶಿಸುತ್ತಿದ್ದ ಶುಕ್ರಗ್ರಹದ ದರ್ಶನವಾಗಿ ಕಣ್ಣುಕೋರೈಸಿದವು! ಆ ಸ್ವಚ್ಛ ಆಗಸದಲ್ಲಿ ನೂರಾರು ತಾರೆಗಳ ನಡುವೆ ಪ್ರಕಾಶಿಸುತ್ತಿದ್ದ ಆ ಗ್ರಹದ ಬೆಳಕು ನಮ್ಮನ್ನು ಮೂಕವಾಗಿಸಿತ್ತು. ಕುಕ್ ಖಾರಿಯಿಂದಲೇ ಅಂತೆ, ಗೂನುಬೆನ್ನಿನ ತಿಮಿಂಗಲ, ಬೂದು ತಿಮಿಂಗಿಲ, ಬಲೂಗ ತಿಮಿಂಗಿಲಗಳು ದಕ್ಷಿಣ ಶಾಂತಸಾಗರದಿಂದ, ತಮ್ಮ ಮರಿಗಳ ಸಮೇತ, ಈ ಉತ್ತರದ ಗಡಿನಾಡು ರಾಜ್ಯಕ್ಕೆ ಬಂದು, ತಮ್ಮ ಬೇಸಿಗೆಯನ್ನು ಕಳೆಯುವುದು! ಇದನ್ನೇ ಅಟೆನ್ಬರೋ ತನ್ನ ಕಂಚಿನ ಕಂಠದಲ್ಲಿ ಬಿತ್ತರಿಸಿದ್ದು. ನನ್ನ ಕಣ್ಣುಗಳು ಕಾರಿನಲ್ಲೇ ಕುಳಿತು, ಕುಕ್ ಖಾರಿಯ ನೀರಿನಲ್ಲಿ ತಿಮಿಂಗಲಗಳ ಉಸಿರಿನಿಂದೇಳುವ ಬೃಹತ್ ಚಿಲುಮೆಗಳಿಗಾಗಿ ಹುಡುಕಾಟ ನಡೆಸಿದ್ದವು. ಆದರೆ, ಮೇ ತಿಂಗಳಿನಲ್ಲಿ ಈ ಬೃಹದ್ ಸಸ್ತನಿಗಳು ಇನ್ನೂ ಈ ಜಾಗವನ್ನು ತಲುಪಿರುವುದಿಲ್ಲ ಎನ್ನುವುದು ಅರಿವಾಗಿ ನಿರಾಶೆಯಾಯಿತು!

alaska-12

ಗಿರ್ವುಡ್ಡನ್ನು ತಲುಪಿ, ಹೋಟೆಲ್ ಅಲೈಸಿಕಾ ಪ್ರವೇಶಿಸಿದೆವು. ಭವ್ಯವಾದ ಈ ಹೋಟೆಲ್, ಹಿಮಜಾರುವಿಕೆಯ ಚಟುವಟಿಕೆಗೆ    ಕೇಂದ್ರವಂತೆ. ಈ ಹೋಟೆಲಿನ ಹಿಂಭಾಗದಲ್ಲಿರುವ ಪರ್ವತದ ಹಿಮಚ್ಚಾಧಿತ ಇಳಿಜಾರುಗಳಲ್ಲಿ, ಚಳಿಗಾಲದಲ್ಲಿ ನಡೆಯುವ ಈ ಚಟುವಟಿಕೆ ಆಗಷ್ಟೇ ಕೊನೆಗೊಂಡಂತಿತ್ತು. ದೂರದ ವಿಮಾನ ಪ್ರಯಾಣದ ಆಯಾಸದಿಂದ ನಿದ್ದೆಗಾಗಿ ಹಾತೊರೆಯುತ್ತಿದ್ದ ನಮ್ಮ ಕಣ್ಣುಗಳು ಹಾಸಿಗೆ ಕಂಡಕೂಡಲೇ ಹರ್ಷದಿಂದ ಸ್ವಾಗತಿಸಿದವು. ಮುಂಜಾನೆ ಬೇಗನೆ ಎಚ್ಚರವಾದ ನಾನು ಕಿಟಕಿ ಪರದೆ ಸರಿಸಿದರೆ, ೮ನೆಯ ಮಹಡಿಯ ಮೇಲಿಂದ ಕಂಡ ದೃಶ್ಯ ಅಮೋಘವಾದದ್ದು!  ಶ್ವೇತವರ್ಣದ ಶಿಖರಗಳ ಬುಡದಲ್ಲಿ ಹರಡಿದ್ದ ಹಚ್ಚಹಸುರಿನ ಗಿಡಮರಗಳು, ತೈಲವರ್ಣಚಿತ್ರದಲ್ಲಿರುವ ಒಂದು ಉತ್ತಮವಾದ ಕಲೆಯಂತಿತ್ತು. ತಕ್ಷಣವೇ ಬಟ್ಟೆಬದಲಾಯಿಸಿ, ಕ್ಯಾಮೆರಾ ಹಿಡಿದು ಹೊರನಡೆದೆ. ಎಲ್ಲಾದರೂ ಹರಿಣದ ಹಿಂಡು, ಕರಡಿಮರಿ ತನ್ನ ತಾಯಿಯೊಡಗೂಡಿ ನಡೆಯುವುದು ಕಣ್ಣಿಗೆ ಬೀಳಬಹುದೇನೋ ಎನ್ನುವ ಆಸೆಯಿಂದ ನನ್ನ ಕಾಲ್ಗಳು ವೇಗವಾಗಿ ಹೆಜ್ಜೆಹಾಕಿದವು. ಪಕ್ಷಿಗಳ ಕಲರವ ಕಿವಿಗಳನ್ನು ಇಂಪಾಗಿಸಿದ್ದವು. ವಿವಿಧ ಬಗೆಯ ಗುಬ್ಬಚ್ಚಿ, ಅಮೆರಿಕನ್ ರಾಬಿನ್, ಹದ್ದಿನ ಸಮೂಹ ಅಕಾಶವನ್ನು ಆವರಿಸಿದ್ದವು. ಸಸ್ಯಶಾಸ್ತ್ರದಲ್ಲಿ ಸಂಶೋಧನೆ ನಡೆಸುವ ನನ್ನ ಕಣ್ಗಳು, ಹಲವು ಬಗೆಯ ಅಪರೂಪದ ಪರಾವಲಂಬಿ ಸಸ್ಯಗಳ ಹುಡುಕಾಟ ನಡೆಸಿದ್ದವು. ಹಾವಸೆಗಳು, ಶಿಲಾವಲ್ಕಗಳಿಂದ ಆವೃತವಾದ ಆ ಬೃಹದ್ ದೇವದಾರು, ಪೈನ್ ಮತ್ತು ಇತರ ನಿತ್ಯಹರಿದ್ವರ್ಣ ಮರಗಳ ಗಾತ್ರವನ್ನು ಕಂಡು ಬೆಚ್ಚಿಬಿದ್ದೆ. ವರ್ಷದಲ್ಲಿ ೮ ತಿಂಗಳು ಮೂಳೆಕೊರೆಯುವ ಚಳಿ ಮತ್ತು ಹಿಮದಲ್ಲಿ ನಿಂತ ಈ ವೃಕ್ಷಗಳ ತಾಳ್ಮೆಗೆ ತಲೆತೂಗಲೇಬೇಕಲ್ಲವೇ! ಸುಮಾರು ೩,೦೦೦ ನದಿಗಳಿರುವ ಈ ರಾಜ್ಯದಲ್ಲಿ ನೀರಿಗೆ ಯಾವ ಬರವೂ ಇಲ್ಲಾ! ಪರ್ವತಗಳ ಹಿಮಕರಗಿ, ಸುರಿಯುವ ನೂರಾರು ಜಲಪಾತಗಳು ಸೃಷ್ಟಿಸುವ ಇಲ್ಲಿನ ಜಲಸಂಪತ್ತು ನಿಜಕ್ಕೂ ಅಪೂರ್ವವಾದ ನಿಸರ್ಗಸಂಪತ್ತು. ಇನ್ನೂ ಚಳಿಯ ಕಪಿಮುಷ್ಟಿಯಿಂದ ಹೊರಬರಲು ಯತ್ನಿಸುತ್ತಿರುವ ಸಸ್ಯಗಳು, ಈಗಾಗಲೇ ಚಿಗುರಲು ಪ್ರಯತ್ನಿಸುತ್ತಿದ್ದದ್ದು ಕಾಣಬಂತು. ಜನಸಂಖ್ಯೆ ಬಹಳ ಕಡಿಮೆ ಇರುವ ಈ ರಾಜ್ಯದಲ್ಲಿ ಶಾಂತಿಗೆ ಬರವಿಲ್ಲ. ಆ ನಿಶ್ಯಬ್ದದ ವಾತಾವರಣದಲ್ಲಿ, ಪ್ರಕೃತಿಯನ್ನು ಆಸ್ವಾದಿಸುವ ಆ ಅಪೂರ್ವ ಕ್ಷಣಗಳು ನಿಜಕ್ಕೂ ಅಮೋಘ. ಅಮೆರಿಕೆಯ ರಾಷ್ಟ್ರಪಕ್ಷಿ ಬೋಳತಲೆ ಗಿಡುಗಗಳು ಅಲ್ಲಿಯೇ ಮರಗಳಲ್ಲಿ ಕಟ್ಟಿದ ಗೂಡುಗಳಲ್ಲಿ ಮರಿಗಳು ಆಹಾರಕ್ಕಾಗಿ ಗಿಜಗುಟ್ಟುತ್ತಿದ್ದದ್ದು ಕೇಳಿಬರುತ್ತಿತ್ತು. ಆದರೆ ಅವುಗಳ ಫೋಟೊ ತೆಗೆಯಲು ಅವಕಾಶ ಸಿಗಲಿಲ್ಲ. ಆ ದೈತ್ಯಾಕಾರದ ಮರಗಳ ತುದಿಯಲ್ಲಿರುವ ಆ ಗೂಡುಗಳಿಗೆ, ಸಾಮಾನ್ಯ ಮನುಷ್ಯ ತಲುಪಲು ಸಾಧ್ಯವೇ?!

 

ಅಲಾಸ್ಕಾ ಎಂದೊಡನೆ ನೆನಪಾಗುವುದು ಅಲ್ಲಿರುವ ಅಸಂಖ್ಯಾತ ನೀರ್ಗಲ್ಲುಗಳು. ಈ ನೀರ್ಗಲ್ಲುಗಳನ್ನು ನೋಡುವ ಒಂದು ದೋಣಿಯ ಪ್ರವಾಸವನ್ನು ಮಾಡಬೇಕೆಂದು ಮೊದಲೇ ತೀರ್ಮಾನಿಸಿದ್ದೆವು. ಅದಕ್ಕೆ ಬೇಕಾದ ಟಿಕೆಟ್ಟುಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದೆವು. ನಮ್ಮ ಹೋಟೆಲಿನಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಾ, ಅಲ್ಲಿಂದ ಸುಮಾರು ೨೦ ಮೈಲಿಗಳಷ್ಟು ದೂರದಲ್ಲಿರುವ, ವಿಟ್ಟಿಯರ್ ಎನ್ನುವ ಬಂದರಿನಿಂದ ಹೊರಡುವ ಸಣ್ಣ ಹಡಗಿನ ಕಡಲಯಾನಕ್ಕೆ ನಡೆದೆವು. ಕೇವಲ ೨೧೫ ಜನಗಳ ಜನಸಂಖ್ಯೆಯಿರುವ ಈ ಸಣ್ಣ ಬಂದರು ಪಟ್ಟಣದಲ್ಲಿ, ಅವರೆಲ್ಲರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಾರೆ ಎಂದು ನಮ್ಮ ಪ್ರವಾಸದ ಮಾರ್ಗದರ್ಶಿ ಹೇಳುತ್ತಿದ್ದನ್ನು ಕೇಳಿ ಸ್ವಲ್ಪ ಆಶ್ಚರ್ಯವಾಗಿತ್ತು. ಆದರೆ ಪ್ರತ್ಯಕ್ಷವಾಗಿ ಆ ಕಟ್ಟಡದ ಮುಂದೆ ನಮ್ಮನ್ನು ನಿಲ್ಲಿಸಿದಾಗ, ನಂಬಲೇಬೇಕಾಯ್ತು. ಈ ಬಂದರನ್ನು ತಲುಪಲು ಇರುವ ಏಕೈಕ ಭೂಮಾರ್ಗ ಒಂದು ಸುರಂಗ. ಸುಮಾರು ೩ ಮೈಲುಗಳ ಈ ಸುರಂಗವನ್ನೇ ಆಶ್ರಯಿಸಿವೆ ಅಲ್ಲಿ ಓಡಾಡುವ ರೈಲು ಮತ್ತು ಇತರ ವಾಹನಗಳು. ಚುಘ ರಾಷ್ಟ್ರೀಯ ಉದ್ಯಾನವನದಲ್ಲಿರುವ ಈ ಪ್ರದೇಶದಲ್ಲಿ, ಸಬ್ ಆರ್ಟಿಕ್ ಹವಾಮಾನವಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಸುಮಾರು ೨೦೦ ಇಂಚುಗಳಷ್ಟು ಹಿಮ ಸುರಿಯುವ ಈ ಪಟ್ಟಣದಲ್ಲಿ ಬಂಧಿಯಾದ ಜನಗಳು, ಇಲ್ಲಿ ಹೇಗಿರುತ್ತಾರೋ ದೇವರೇ ಬಲ್ಲ!

ಪ್ರಿನ್ಸ್ ವಿಲಿಯಮ್ ಸೌಂಡ್: ಅಲಾಸ್ಕಾ ಖಾರಿ ಪ್ರದೇಶದ ನೈರುತ್ಯ ದಿಕ್ಕಿನಲ್ಲಿರುವ ಈ ಜಲಪ್ರದೇಶದಲ್ಲಿ, ನೂರಾರು ದ್ವೀಪಗಳಿವೆ. ವಿಟ್ಟಿಯರ್ ಬಂದರನ್ನು ಅಲಾಸ್ಕ ಮರೀನ್ ರಾಷ್ಟ್ರೀಯ ಹೆದ್ದಾರಿಯಾಗಿ ಉಪಯೋಗಿಸುತ್ತಾರೆ. ಈ ವಿಟ್ಟಿಯರ್ ಬಂದರಿನಿಂದ ಹೊರಟ ನಮ್ಮ ಹಡಗು, ನಮ್ಮನ್ನು ಮಾನವನ ಕೈಗೆ ಸುಲಭವಾಗಿ ಎಟುಕದಂತಹ ಅರಣ್ಯಗಳ ಅಂಚುಗಳಲ್ಲಿ ಕರೆದೊಯ್ದಿತು. ಈ ಖಾರಿ ಪ್ರದೇಶದಲ್ಲಿ ವಿಜೃಂಭಿಸುತ್ತಿರುವ ಸುಮಾರು ೧೫೦ ನೀರ್ಗಲ್ಲುಗಳನ್ನು ನೋಡುತ್ತಾ ಸಾಗಿದ್ದು ನನ್ನ ಜೀವನದ ಅತ್ಯುತ್ತಮ ಘಳಿಗೆಗಳು. ವಿಲಿಯಮ್ ಸೌಂಡ್ ಖಾರಿ ಪ್ರದೇಶದ ಈ ನೀರ್ಗಲ್ಲುಗಳು ಸೃಷ್ಟಿಯಾಗಿರುವುದು ಸುಮಾರು ೧೫ ಮಿಲಿಯನ್ ವರ್ಷಗಳ ದೀರ್ಘಕಾಲದ ಹಿಮೀಕರಣದಿಂದಾಗಿ ಎನ್ನುವುದನ್ನು ಕೇಳಿದಾಗ ಮೈ ಜ಼ುಮ್ಮೆನ್ನಿತು! ಇಂತಹ ಅದ್ಭುತ ರಚನೆಗಳು ನಿಂತಿರುವ ಈ ನೀರಿನ ಸಂಪತ್ತು ಅತ್ಯಂತ ಸ್ವಚ್ಛ ನಿರ್ಮಲ ನೀರಿನ ರಾಶಿಯಲ್ಲಿ ಎನ್ನುವುದನ್ನು ಕಣ್ಣಾರೆ ಕಂಡು ಸಾರ್ಥಕವೆನಿಸಿತು. ಅಲ್ಲಲ್ಲೇ ಕುಸಿದು ನೀರಿನಲ್ಲಿ ಬೀಳುತ್ತಿದ್ದ ಆ ಹಿಮಗುಡ್ಡಗಳು, ಅವುಗಳಿಂದ ಹೊರಡುತ್ತಿದ್ದ ಕಿವಿಗಡಚಿಕ್ಕುವ ಸದ್ದು, ಅದರಿಂದೇಳುತ್ತಿದ್ದ ಬೃಹದಾಕಾರದ ಅಲೆಗಳು, ಅದನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು, ಆ ಕೊರೆಯುವ ಚಳಿಯಲ್ಲಿ ಓಡಿ ನಿಲ್ಲುತ್ತಿದ್ದ ನಮ್ಮ ಉತ್ಸಾಹ, ಎಲ್ಲವೂ ಈಗ ಕನಸಿನಂತೆ ಭಾಸವಾಗುತ್ತಿದೆ. ನಮ್ಮ ಹಡಗಿನ ಕ್ಯಾಪ್ಟನ್ ತನ್ನ ಕಂಚಿನ ಕಂಠದಲ್ಲಿ ನಿರರ್ಗಳವಾಗಿ ನೀಡುತ್ತಿದ್ದ ನಿರೂಪಣೆ ಎಲ್ಲವೂ ಮನದಲ್ಲಿ ಜೀವನಪರ್ಯಂತ ಹಸಿರಾಗಿ ನಿಲ್ಲುವ ನೆನಪುಗಳು. ಈ ಪ್ರಿನ್ಸ್ ವಿಲಿಯಮ್ ಸೌಂಡ್ ಖಾರಿಯನ್ನು ಸುತ್ತುವರೆದ ನಿತ್ಯಹರಿದ್ವರ್ಣದ ಅರಣ್ಯಗಳು, ಅಮೆರಿಕೆಯ ಅತ್ಯಂತ ಉತ್ತರದಲ್ಲಿರುವ ನಿತ್ಯಹರಿದ್ವರ್ಣದ ಕಾಡುಗಳಂತೆ. ಈ ಕೊರೆಯುವ ಚಳಿಯಲ್ಲೂ, ಹಸಿರಾಗಿ ಕೆಚ್ಚೆದೆಯಿಂದ ನಿಂತ ಈ ಸಸ್ಯವರ್ಗವನ್ನು ಕಂಡು, ಸಸ್ಯವಿಜ್ಞಾನಿಯಾದ ನನ್ನ ಮನ ಉಬ್ಬಿಹೋಯಿತು. ಸಾವಿರಾರು ವರ್ಷಗಳ ಹಿಂದೆ, ಹಿಮಯುಗದಲ್ಲಿ ರಷ್ಯಾ ದೇಶದ ಬೇರಿಂಗ್ ಜಲಸಂಧಿಯನ್ನು ಹಾಯ್ದು ಇಲ್ಲಿ ನೆಲಸಿದ ಮಂಗೋಲಿಯನ್ ಮೂಲದ ಇನುಯಿಟ್ ಮೂಲನಿವಾಸಿಗಳ ತವರೂರು ಇದೇ ಎನ್ನುವುದನ್ನು ಕೇವಲ ಪುಸ್ತಕ ಮತ್ತು ಸಾಕ್ಷ್ಯಚಿತ್ರಗಳಲ್ಲಿ ಕಂಡ ಮನ, ಒಂದು ರೀತಿಯ ಸಾರ್ಥಕತೆಯಿಂದ ಹಿಗ್ಗಿತು. ಹಡಗಿನ ಪ್ರಯಾಣದುದ್ದಕ್ಕೂ ಅಲ್ಲಿನ ನೀರಿನಲ್ಲಿ ಈಜುತ್ತಾ ತೇಲಾಡುತ್ತಾ ಆಟವಾಡುತ್ತಿದ್ದ ಸಮುದ್ರ ನೀರುನಾಯಿಗಳ ಚಿನ್ನಾಟವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ನಾವು ಪಡುತ್ತಿದ್ದ ಪ್ರಯಾಸವನ್ನು ನೆನೆಸಿಕೊಂಡರೆ ಈಗ ನಗು ಬರುವಂತಿದೆ. ಪಾದರಸದ ವೇಗದಲ್ಲಿ ಈಜುವ ಈ ಜಲಚರಗಳನ್ನು ಸೆರೆಹಿಡಿಯುವ ಕೆಲಸ ಕಷ್ಟಸಾಧ್ಯ. ನಮ್ಮ ಹಡಗಿನ ಕ್ಯಾಪ್ಟನ್ ಅಲ್ಲಿರುವ ಮೃಗ-ಪಕ್ಷಿಗಳ ಪಟ್ಟಿಯನ್ನೇ ಕೊಡುತ್ತಿದ್ದ. ನಮ್ಮ ಕಣ್ಣಿಗೆ ಬಿದ್ದದ್ದು ಹಲವು ಮಾತ್ರಾ! ನೀರುನಾಯಿ, ಸೀಲ್, ಕಿಟ್ಟಿವೇಕ್ ಹಕ್ಕಿ, ಬೋಳುತಲೆ ಗಿಡುಗ, ಸಮುದ್ರಹಂದಿ, ಪರ್ವತ ಟಗರು, ಕರಿ-ಕರಡಿ, ಗೂನುಬೆನ್ನು ತಿಮಿಂಗಿಲ ಹೀಗೆ ಹಲವು ಹತ್ತು ಜಲಚರ-ಮೃಗಗಳು ಇಲ್ಲಿವೆ. ಇಲ್ಲಿರುವ ಪ್ರತಿ ನೀರ್ಗಲ್ಲುಗಳನ್ನೂ ಬಹಳ ಆಸಕ್ತಿಪೂರ್ಣವಾಗಿ ನಾಮಕರಣಮಾಡಿದ್ದಾರೆ. Surprise Galcier, Harriman, Harvard, Barry Arm, Bryn-mawr, Roaring ಹೀಗೆ ಹಲವು ಹತ್ತು ಹೆಸರುಗಳ ನೀರ್ಗಲ್ಲುಗಳನ್ನು ಕಂಡು ಮೂಕವಿಸ್ಮಿತರಾದೆವು. ಸಹಸ್ರಾರು ವರ್ಷಗಳ ಹಿಮ ಹೆಪ್ಪುಗಟ್ಟಿ ಸೃಷ್ಟಿಯಾಗಿರುವ ಈ ನೀರ್ಗಲ್ಲುಗಳು, ಇದೀಗ ಮಾನವನ ಕೈಗಾರಿಕರಣ ಮತ್ತು ಆಧುನಿಕ ಜೀವನಶೈಲಿಯ ಕಾರಣದಿಂದಾಗಿ, ಕರಗಿ ನೀರಾಗುತ್ತಿದೆ. ಇದರಿಂದ ಮುಂದೆ ಹವಾಮಾನ ವೈಪರೀತ್ಯಗಳು ಸಂಭವಿಸಿ, ಮಾನವನ ಮುಂದಿನ ಪೀಳಿಗೆಗಳ ಅಸ್ತಿತ್ವ ವಿನಾಶದ ಅಂಚಿನಲ್ಲಿದೆ ಎನ್ನುವ ವಾಸ್ತವತೆಯ ಅರಿವಾಗಿ ನಮ್ಮ ಮನ ಗಾಬರಿಗೊಂಡಿತು. ಶುದ್ಧರೂಪದ, ನಿಷ್ಕಳಂಕ ನೀರ್ಗಲ್ಲುಗಳ ಭವಿಷ್ಯ, ಮಾನವನ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಅಣಕವೇ ಸರಿ! ಆದರೆ ನಿಸರ್ಗದ ರೌದ್ರಾವತಾರದ ಎದಿರು ಮಾನವನ ಆಟ ಸಾಗದು. ೧೯೬೭ರ ಗುಡ್ ಫ಼್ರೈಡೆಯಂದು, ಈ ಪ್ರದೇಶದಲ್ಲಿ ಸಂಭವಿಸಿದ ೯.೨ ರಿಕ್ಟರ್ ಭೂಕಂಪ, ಈ ಬಂದರು ಮತ್ತು ಇಲ್ಲಿನ ನಿವಾಸಿಗಳನ್ನು ನಿಷ್ಕರುಣವಾಗಿ ನಾಶಗೊಳಿಸಿತ್ತು ಎಂದು ನಮ್ಮ ಬಸ್ ಮಾರ್ಗದರ್ಶಿ ವಿವರಿಸಿದಾಗ, ನಾವು ಪ್ರಕೃತಿಯ ಪ್ರಕೋಪದೆದಿರು ಅತ್ಯಲ್ಪರು ಎನ್ನುವುದು ನೆನಪಾಯಿತು. ಅದೇನೇ ಇರಲಿ, ನಮ್ಮ ಕೈಯಲ್ಲಿ ಸೃಷ್ಟಿಮಾಡಲು ಸಾಧ್ಯವಿಲ್ಲದ ಈ ನಿಸರ್ಗಸಂಪತ್ತನ್ನು ನಾಶಗೊಳಿಸುವ ಹಕ್ಕು ನಮಗಿದೆಯೇ ಎನ್ನುವ ಪ್ರಶ್ನೆ ನಮ್ಮ ಮನದಲ್ಲಿ ಎದ್ದರೆ ಅದೇ ಸಾಕು!

alaska-7

“ಸಾಮನ್ ವಲಸೆ ಓಟ!” (Salmon Run): ಸಾಮನ್ ಮೀನುಗಳು ಸಾಗರದಿಂದ ಈಜುತ್ತಾ ಸಾಗಿ, ಅಲಾಸ್ಕಾದ ಖಾರಿಪ್ರದೇಶದಲ್ಲಿರುವ ಸಾವಿರಾರು ನದಿಗಳತ್ತ ಸಾಗುತ್ತವೆ. ಅಲ್ಲಿ ತಮ್ಮ ಅಂಡಾಣುಗಳು ಮತ್ತು ವೀರ್ಯಾಣುಗಳನ್ನು ವಿಸರ್ಜಿಸಿ, ಅಲ್ಲಿ ಕಾಯುತ್ತಿರುವ ಕರಡಿಗಳ ಬಾಯಿಗೆ ಆಹಾರವಾಗುತ್ತವೆ. ಈ ಮೀನುಗಳು ಉತ್ಪಾದಿಸಿದ ಮೊಟ್ಟೆಗಳು ಬೆಳೆದು ಮರಿಗಳಾಗಿ, ಮತ್ತೊಮ್ಮೆ ಈಜುತ್ತಾ ಸಾಗರವನ್ನು ತಲುಪುತ್ತವೆ. ಹಲವಾರು ವರ್ಷಗಳ ನಂತರ, ಈ ಮರಿಗಳು ಪ್ರೌಢಾವಸ್ಥೆ ತಲುಪಿದ ನಂತರ, ತಮ್ಮ ತಂದೆತಾಯಿಯರು ಸಾಗಿದ ಮಾರ್ಗದಲ್ಲೇ ಈಜುತ್ತಾ ಮತ್ತೊಮ್ಮೆ ತಮ್ಮ ಜನ್ಮಸ್ಥಾನಕ್ಕೆ ಆಗಮಿಸಿ, ಅಲ್ಲಿ ತಮ್ಮ ಸಂತಾನೋತ್ಪತ್ತಿ ಮಾಡಿ, ತಮ್ಮ ಜೀವನವನ್ನು ಅಂತ್ಯಗೊಳಿಸುತ್ತವೆ ಎನ್ನುವುದು ಪ್ರಕೃತಿಯಲ್ಲಿ ನಡೆಯುವ ಅದ್ಭುತ ಸಂಗತಿಗಳಲ್ಲಿ ಒಂದು. ಇದು ನಾನು ನೋಡಿದ ಬಿಬಿಸಿ ಸಾಕ್ಷ್ಯಚಿತ್ರದ ಮುಖ್ಯಾಂಶ. ಇದನ್ನು ನೋಡಿದಾಗ ಜೀವಜಾಲದ ವಿಚಿತ್ರ ವೈಖರಿಯ ಬಗ್ಗೆ ಯೋಚಿಸುವಂತಾಯಿತು. ಕೇವಲ ತಮ್ಮ ಜನ್ಮಸ್ಥಳದಲ್ಲಿ ಸಂತಾನೋತ್ಪತ್ತಿ ನಡೆಸುವ ಕಾರ್ಯಕ್ಕಾಗಿ ಸಾವಿರಾರು ಮೈಲಿಗಳನ್ನು ಕ್ರಮಿಸುವ ಸಾಮನ್ ಮೀನುಗಳ ಜೀವನ ಅದ್ಭುತವೇ! ಇಲ್ಲಾ, ಈ ಸಾಮನ್ ಮೀನುಗಳನ್ನು ಭುಜಿಸಲು ಕಾಯುವ ಕರಡಿಗಳ ಜೀವನಶೈಲಿ ಪ್ರಕೃತಿಯ ಒಂದು ವೈಪರೀತ್ಯವೇ? ಅಥವಾ ಪ್ರಕೃತಿಯ ಈ ಅದ್ಭುತವನ್ನು ನೋಡಲು ಅಲ್ಲಿ ನೆರೆಯುವ ಮಾನವನ ಕೌತುಕ ಸ್ವಭಾವ ನಿಸರ್ಗದ ಅಪೂರ್ವ ಸಂಗತಿಯೇ? ಮನ ಚಿಂತೆಯಲ್ಲಿ ತೊಡಗಿ ನಿಸರ್ಗದ ಈ ಕ್ಲಿಷ್ಟ ರೀತಿಯನ್ನು ಅರ್ಥಮಾಡಿಕೊಳ್ಳಲು ಹೆಣಗಾಡಿತು. ಈ ಅಪೂರ್ವ ದೃಶ್ಯವನ್ನು ನೋಡುವ ಇಚ್ಛೆ ನಮಗಿದ್ದರೂ, ಇದು ಸಂಭವಿಸುವ ಪ್ರಮುಖ ಸ್ಥಳ ನಾವು ಇದ್ದ ಊರಿನಿಂದ ಹಲವಾರು ಗಂಟೆಗಳ ಕಾಲದ ಪ್ರಯಾಣವೆಂದು ತಿಳಿದು ಬಂತು. ಜೊತೆಗೆ ಮೇ ತಿಂಗಳಲ್ಲಿ ಸಾಮನ್ ಮೀನುಗಳು ಇನ್ನೂ ಆ ಜಾಗವನ್ನು ತಲುಪಿರುವುದಿಲ್ಲ ಎನ್ನುವ ವಿಷಯ ನಮಗೆ ಗೊತ್ತಿತ್ತು. ಹಾಗಾಗಿ ಅಲಾಸ್ಕಾದ ಈ ಅದ್ಭುತ ಸಂಗತಿಯನ್ನು ನೋಡುವ ಅವಕಾಶ ಈ ಬಾರಿ ನಮಗೆ ಪ್ರಾಪ್ತಿಯಾಗಲಿಲ್ಲ. ಕಟಮಾಯಿ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬ್ರೂಕ್ ಜಲಪಾತದ ಬಳಿ ಈ ದೃಶ್ಯವನ್ನು ನೋಡಬಹುದಂತೆ! ಅಲಾಸ್ಕಾ ರಾಜ್ಯ ಬಹಳ ವಿಶಾಲವಾದ ಪ್ರದೇಶ. ಹಾಗಾಗಿ ಅಲ್ಲಿರುವ ಎಲ್ಲಾ ಸ್ಥಳಗಳನ್ನೂ ಒಂದೇ ಭೇಟಿಯಲ್ಲಿ ನೋಡುವುದು ಅಸಾಧ್ಯದ ಮಾತು.

 

ಪ್ರಕೃತಿಯ ಈ ಅಪೂರ್ವ ಸೌಂಧರ್ಯವನ್ನು ಸವಿದ ನಾವು, ಕಡೆಯ ದಿನ ಆಂಕರೇಜ್ ಪಟ್ಟಣದಲ್ಲಿರುವ ಪ್ರಖ್ಯಾತ ಸ್ಮಿಥ್ಸೊನಿಯನ್ ವಸ್ತುಸಂಗ್ರಹಾಲಯಕ್ಕೆ ಭೇಟಿ ಇತ್ತೆವು. ಅನನ್ಯವಾದ ವಸ್ತುಗಳ ಸಂಗ್ರಹಣೆಗೆ ಹೆಸರುವಾಸಿಯಾದ ಸ್ಮಿಥ್ಸೊನಿಯನ್ ಮ್ಯೂಸಿಯಮ್ಮಿನಲ್ಲಿ ಆರ್ಟಿಕ್ ಪ್ರದೇಶ ಸಂಶೋಧನೆಯ ಅತ್ಯುತ್ತಮ ಸಂಗ್ರಹಣೆಯಿದೆ. ಅದರಲ್ಲೂ ಇಲ್ಲಿನ ಹಲವಾರು ಮೂಲನಿವಾಸಿಗಳ ಕೈಯಲ್ಲಿ ತಯಾರಾದ ಅನೇಕ ವಿಧದ ಗೃಹೋಪಯೋಗಿ ವಸ್ತುಗಳು, ಯುದ್ಧಸಲಕರಣೆಗಳು, ಹಿಮದ ಇಳಿಜಾರು ಹಾವುಗೆಗಳು, ದೋಣಿಗಳು ಹೀಗೆ ಅನೇಕ ವಸ್ತುಗಳ ಅಪೂರ್ವ ಸಂಗ್ರಹವನ್ನು ನೋಡಿದೆವು. ಇಲ್ಲಿನ ವೈಪರೀತ್ಯ ಹವಾಮಾನದಲ್ಲಿ ಬದುಕಲು ಮೂಲನಿವಾಸಿಗಳು ನಿಸರ್ಗದಲ್ಲಿ ದೊರೆಯುವ ಪದಾರ್ಥಗಳನ್ನು ಬಳಸಿ ಮಾಡಿದ ಈ ವಸ್ತುಗಳನ್ನು ನೋಡಿ ನಿಜಕ್ಕೂ ಅಚ್ಚರಿಯೆನಿಸಿತು. ಯಾವುದೇ ಪರಿಸ್ಥಿತಿಯಲ್ಲೂ ಬದುಕಿ ಮುನ್ನಡೆಯುವ ಮಾನವನ ಸೃಜನಶೀಲ ಸ್ವಭಾವವನ್ನು ಮೆಚ್ಚಬೇಕಾದ್ದೇ! ಪ್ಲಾಸ್ಟಿಕ್ ಯುಗದಲ್ಲಿ ಹುಟ್ಟಿಬೆಳೆದ ಇಂದಿನ ಪೀಳಿಗೆ ಇದನ್ನು ನೋಡಿ ಕಲಿಯಬೇಕಾದ್ದು ಬಹಳವಿದೆ. ಮಾನವ ನಿರ್ಮಿತ ಪದಾರ್ಥಗಳು ನಮ್ಮ ಪರಿಸರವನ್ನು ಹಾಳುಗೆಡವುತ್ತಿರುವ ಇಂದಿನ ಸನ್ನಿವೇಶದಲ್ಲಿ, ಇನುಯಿಟ್ ಮೂಲನಿವಾಸಿಗಳ ಸೃಜನಶೀಲತೆ ನೋಡಿ, ಪರಿಸರದೊಂದಿಗೆ ಸ್ನೇಹಮಯಿ ಜೀವನವನ್ನು ನಡೆಸಿ, ಸಮತೋಲನ ಕಾಪಾಡುವ ರೀತಿಯನ್ನು ಇಲ್ಲಿ ನೋಡಿ ಕಲಿಯಬೇಕು!

alaska-10

ಒಟ್ಟಿನಲ್ಲಿ ಅಲಾಸ್ಕಾ ನೋಡುವ ಮನದಾಸೆ ನೆರವೇರಿತಲ್ಲ! ಇಲ್ಲಿರುವ ಸುಮಾರು ೧೦೦,೦೦೦ ನೀರ್ಗಲ್ಲುಗಳಲ್ಲಿ, ಕೇವಲ ೨೬ ರನ್ನು ನೋಡಿ ಮನ ತೃಪ್ತಿಹೊಂದಿತು. ಅಲಾಸ್ಕಾದ ಉತ್ತರದ ತುದಿಯಲ್ಲಿರುವ ಫ಼ೇರ್ಬ್ಯಾಂಕ್ ಪಟ್ಟಣದ ಸಮೀಪದಲ್ಲಿ ವರ್ಷದಲ್ಲಿ ೨೪೩ ದಿನಗಳು “Aurora Borealis” ಅಥವಾ ಉತ್ತರದ ಮುಂಬೆಳಗಿನ ಸೊಬಗನ್ನು ನೋಡಬಹುದಂತೆ. ಸುಮಾರು ೩೦೦೦ ನದಿಗಳು, ೩,೦೦೦,೦೦೦ ಸರೋವರಗಳಿರುವ ಉತ್ತರ ಅಮೆರಿಕೆಯ ಅತ್ಯಂತ ದೊಡ್ಡ ರಾಜ್ಯವಾದ ಅಲಾಸ್ಕಾದ ಎಲ್ಲಾ ವಿಶೇಷಗಳನ್ನೂ ನೋಡುವುದು ಸಾಧ್ಯವಿಲ್ಲದ ಮಾತು. ಇಷ್ಟೊಂದು ಹಿಮಸುರಿಯುವ, ನೀರ್ಗಲ್ಲುಗಳಿಂದ ತುಂಬಿದ ಈ ಅಪೂರ್ವ ರಾಜ್ಯದಲ್ಲಿರುವ ಅಗ್ನಿಪರ್ವತಗಳ ಸಂಖ್ಯೆ ೧೦೦! ಇದನ್ನು ನಂಬಲು ಸಾಧ್ಯವೇ!  

 

ಉಮಾ ವೆಂಕಟೇಶ್

 

6 thoughts on “ಧ್ರುವ -ನಕ್ಷತ್ರ ರಾಜ್ಯ ಅಲೈಸಿಕ ಉರ್ಫ಼್ ಅಲಾಸ್ಕ- ‘ಉಮಾ ವೆಂಕಟೇಶ್’ ಅವರ ಲೇಖನ

 1. ನಮಸ್ಕಾರ ದೇಸಾಯಿ ಅವರೇ. ನೀವು ಮನಸ್ಸು ಮಾಡಿದರೆ ಅಲಾಸ್ಕಾ ಪ್ರವಾಸ ಮಾಡುವುದು ಕಷ್ಟವೇನಿಲ್ಲ. ನಿಮ್ಮ ಲ್ಯಾಪ್-ಟಾಪ್ ಮುಂದೆ ಕುಳಿತು, ಕೀಲಿ ಮಣೆಯ ಗುಂಡಿಗಳನ್ನೊತ್ತಿ, ಪ್ರವಾಸ ಬುಕ್ ಮಾಡಿದರಾಯ್ತು! ಇಲ್ಲಿಯ ಪ್ರಕೃತಿ ಸೌಂಧರ್ಯ ನಿಮ್ಮ ಕವಿ ಹೃದಯ ತಟ್ಟುವುದರಲ್ಲಿ ಸಂದೇಹವೇ ಇಲ್ಲ.
  ಉಮಾ ವೆಂಕಟೇಶ್

  Like

 2. ನಮಸ್ಕಾರ ವಿನುತೆ. ಅಲಾಸ್ಕಾ ನಿಜಕ್ಕೂ ಪ್ರಕೃತಿ ವೈವಿಧ್ಯತೆಯ ಒಂದು ಸುಂದರವಾದ ಚಿತ್ರ. ನಿಸರ್ಗದ ಅಚ್ಚರಿಗಳ ಒಂದು ಪರಮಾವಧಿ ಎನ್ನುವಂತಿದೆ. ನಿಮಗೆ ಅವಕಾಶ ಸಿಕ್ಕಾಗ ಖಂಡಿತ ಹೋಗಿ ಬನ್ನಿ. ಹೊರಾಂಗಣ ಚಟುವಟಿಕೆಗಳಲ್ಲಿ ಆದಷ್ಟೂ ನಿಮ್ಮ ಬಿಡುವಿನ ಸಮಯ ಕಳೆಯಲು ಇಚ್ಚಿಸುವ ನಿಮಗೆ, ಅಲಾಸ್ಕಾ ಬಹಳ ಹಿಡಿಸುತ್ತದೆ ಎಂದು ನನ್ನ ನಂಬಿಕೆ.
  ಉಮಾ ವೆಂಕಟೇಶ್

  Like

 3. ಉಮಾ,
  ಈ ನನ್ನ ಪ್ರತಿಕ್ರಿಯೆ ತಡವಾಗಿದೆ! ಆದರೇನು, ನಿಮ್ಮ ಲೇಖನದ ರುಚಿ ಇನ್ನೂ ನನ್ನನ್ನು ಆವರಿಸಿದೆ. ಎಂದಿನಂತೆ ನೀವು ಬಹು ಸುಂದರವಾಗಿ ನಿರೂಪಿಸಿದ್ದೀರಾ. ಅಲೈಸಿಕ ಎಂಬ ಮಾಯಾಲೋಕವನ್ನು, ಅದರ ವಿವಿಧತೆಗಳನ್ನು ಪರಿಚಯಿಸುತ್ತಾ ನಿಮ್ಮದೇ ಆದ ಒಳನೋಟಗಳನ್ನು ಒದಗಿಸಿ ಹೊಸ ಆಯಾಮವನ್ನು ಕೊಟ್ಟಿದ್ದೀರ.ಧನ್ಯವಾದಗಳು.
  ವಿನತೆ

  Liked by 1 person

  • ರಾಮಮೂರ್ತಿ ಅವರೇ, ನಿಮಗೆ ಅಲಾಸ್ಕಾ ಬಹಳ ಹಿಡಿಸುತ್ತದೆ. ಆದರೆ ಇಲ್ಲಿ ಸಸ್ಯಾಹಾರಿಗಳಿಗೆ ಸ್ವಲ್ಪ ಕಷ್ಟ. ನೀವು ಏರ್ – ಬಿ&ಬಿ ಅಂತಹ ಅಡುಗೆ ಮಾಡುವ ಸೌಕರ್ಯ ಇರುವ ಜಾಗದಲ್ಲಿ ತಂಗುವ ವ್ಯವಸ್ಥೆ ಮಾಡಿಕೊಂಡರೆ ಅಡ್ಡಿಯಿಲ್ಲ.
   ಉಮಾ ವೆಂಕಟೇಶ್

   Like

 4. ನನ್ನ ನೋಡಲೇಬೇಕಾದ ಪ್ರೇಕ್ಷಣಿಯ ಸ್ಠಳಗಳ,ಮತ್ತು ಮಾಡಲೇಬೇಕಾದ ಪ್ರವಾಸಗಳ ‘ಬಕೆಟ್ ಲಿಸ್ಟ್‘ನಲ್ಲಿ ಅಲಾಸ್ಕಾ ಸಹ ಇದೆ್! ಅದನ್ನು ಮಾಡುವ ಅವಕಾಶ ಸಿಗುತ್ತದೆಯೋ ಇಲ್ಲವೋ! ಆದರೆ ಉಮಾ ಅವರು ತಮ್ಮದೇ ಆದ ವಿಶಿಷ್ಠ ಶೈಲಿಯಲ್ಲಿ ಬರೆದ ಈ ಲೇಖನದಲ್ಲಿ ಅದನ್ನೆಲ್ಲ ಕಣ್ಣಾರೆ ಕಂಡಂತೆ ಭಾಸವಾಯಿತು. ನಿಸರ್ಗ ಒಂದೇ ಅಲ್ಲ, ಅಲ್ಲಿಯ ಪ್ರಾಣಿಗಳ ಜೊತೆಗೆ ಮೂಲನಿವಾಸಿಗಳ ಬಗ್ಗೆ ಸಹ ಪರಿಚಯ ಮಾಡಿಸಿದಾರೆ. ಲೇಖನ ಉದ್ದವಾದರೂ ಎಲ್ಲ ಓದಿ, ಮುಂದೆ ನನ್ನ ಪ್ರವಾಸದ ಸರತಿ ಬಂದಾಗ ಮತ್ತೊಮ್ಮೆ ಇದಕ್ಕೆ ಭೆಟ್ಟಿ ಕೊಡುತ್ತೇನೆ> ಧನ್ಯವಾದಗಳ ಜೊತೆಗೆ ಅಂಥ ಅದ್ಭುತ ದೃಶ್ಯಗಳನ್ನು ಕಂಡವರ ಬಗ್ಗೆ ಅಸೂಯೆಯನ್ನೂ ವ್ಯಕ್ತ ಪಡಿಸುವೆ! ,

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.