‘ಮೆಲ್ಲ ಮೆಲ್ಲ’ ಡಾ.ಕೇಶವ ಕುಲಕರ್ಣಿ ಅವರ ಪ್ರಣಯ ಕವನ

ಪ್ರೀತಿ, ಪ್ರೇಮ, ಪ್ರಣಯ ಇವು ಒಲಿದ ಎರಡು ಜೀವಗಳು ಬಯಸಿ ಸೇರುವ, ಸೇರಿ ಆಗುವ ದಿವ್ಯ ಸಂಬಂಧವನ್ನು ಗಟ್ಟಿ ಗೊಳಿಸುವ ಕೊಂಡಿಗಳು. ಪ್ರಣಯಕ್ಕೆ ನಿಜವಾದ ಅರ್ಥಬರಬೇಕಾದರೆ ಮೊದಲು ಪ್ರೀತಿ, ಪ್ರೇಮಗಳು ಪರಾಕಾಷ್ಠೆ ಮೆರೆಯಬೇಕು, ಹೀಗೆ ಆದ ಮಿಲನ ಮಹೋತ್ಸವದಿಂದ ಅವರಿಬ್ಬರ ಸಂಭಂದದ ಪ್ರತೀಕವಾಗಿ ಇನ್ನೊಂದು ಜೀವ ಜನ್ಮ ತಾಳುತ್ತದೆ.

‘ಪ್ರಣಯ’ ಎನ್ನುವುದು ಕಾಳಿದಾಸನ ಕಾಲದಿಂದಲೂ ಕವಿಗಳಿಗೆ ಒಂದು ಕಾವ್ಯದ ವಸ್ತು-ವಿಷಯ. ನಲ್ಲ-ನಲ್ಲೆಯ ಪ್ರಣಯದಾಟದ ಪರಿಯನ್ನು ಅಮೋಘವಾಗಿ, ಉನ್ಮಾದದ ತುತ್ತ ತುದಿಯಲ್ಲಿ ಕೇಶವ ಕುಲಕರ್ಣಿ ಅವರು ಈ ಕವನದಲ್ಲಿ ಕಾವ್ಯ ರಸಿಕರಿಗೆ ಉಣಬಡಿಸಿದ್ದಾರೆ.
ಕೆ.ಎಸ್.ಎಸ್.ವಿ.ವಿ (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ) ಕಳೆದ ಯುಗಾದಿಯಂದು ಹೊರತಂದ ‘ಪ್ರೀತಿಎಂಬ ಚುಂಬಕ’ ಧ್ವನಿಮುದ್ರಿಕೆಯಲ್ಲಿ ಈ ಕವನವು ಹಾಡಾಗಿ ಹೊರಹೊಮ್ಮಿದ್ದು, ಕೇಳುಗರೆಲ್ಲರ ಮನಗೆದ್ದಿದೆ.ಅದ್ಭುತವಾದ ರಾಗ ಸಂಯೋಜನೆ ಮತ್ತು ಹಾಡುಗಾರಿಕೆ ಮತ್ತೆ ಮತ್ತೆ ಕೇಳಬೇಕೆನಿಸುವಂತೆ ಮತ್ತು ತರುತ್ತದೆ.

‘ಮೆಲ್ಲ ಮೆಲ್ಲ’

 

ಮೆಲ್ಲ ಮೃದುಹಾಸದಲಿ ಪೋಲಿನುಡಿಯುಲಿದ
ಕಿವಿಯ ಬಳಿ ಉಸುರುತ್ತ ಉಸಿರ ಬಿಸಿಯ|ಪ!

ಸರಿಸಿ ಮುಂಗುರುಳ ಕಿವಿಯೋಲೆಯಾಡುತ್ತ
ತುಟಿಯ ಒತ್ತಿದ ಹಣೆಗೆ ಹಚ್ಚಿ ಹಸಿಯ ।ಅ.ಪ!

ತುಂಬು ಖಂಡದ ತೋಳು ಬಿಗಿ ಬಾಹುಬಂಧ
ಮೊರದಗಲದೆದೆಯೊಳಗೆ ಹುದುಗಿ ದೇಹ
ಅಧರವರಳಿದ ಘಳಿಗೆ ಹಾಲ್ಜೇನ ಒಸಗೆ
ಬಿಸಿಬೆವರ ಬೆದರಿನಲಿ ಮಿಲನ ಮೋಹ ।೧।

ಧಮನಿ ಧಮನಿಗಳಲ್ಲಿ ದಾಹ ಧಗಧಗಿಸಿ
ನರನಾಡಿ ಕುಣಿ ಕುಣಿದು ಪುಟಿವ ಹರೆಯ
ರೋಮ ರೋಮಗಳಲ್ಲಿ ಸುಖದ ಚಿಗುರೊಡೆಯೆ
ಉನ್ಮತ್ತದಾಳದಲಿ ಜೀವದುದಯ ।೨।

 

7 thoughts on “‘ಮೆಲ್ಲ ಮೆಲ್ಲ’ ಡಾ.ಕೇಶವ ಕುಲಕರ್ಣಿ ಅವರ ಪ್ರಣಯ ಕವನ

  1. ಆಹಾ ತುಂಬಾ ಸುಂದರವಾದ ಕವಿತೆ. ರಾಗ ಸಂಯೋಜನೆಯೂ ತುಂಬಾ ಸೊಗಸಾಗಿದೆ

    Like

  2. ಕಂಗಳಲ್ಲಿ ಪ್ರಣಯೋನ್ಮಾದದ ರಾಗ ರಂಗು ತುಂಬಿದ ಜೋಡಿ ಜೀವಗಳ ಶೃಂಗಾರದ ಮೋಹಕ ಕವನ.ಶೃಂಗಾರದ ಉನ್ಮತ್ತತೆಯಲ್ಲಿ ನವಜೀವದ ಉದಯ, ಸೃಷ್ಟಿ ತನ್ನ ಕಾರ್ಯ ಸಾಧಿಸುವ ಪರಿ ಎಷ್ಟು ಮೋಹಕ ಅಲ್ವಾ?ಮನ ಸೂರೆಗೊಳ್ಳುವ ರೀತಿಯಲ್ಲಿ ಸೃಷ್ಟಿ ಕಾರ್ಯ ಅರಿವಿಗೆ ಬಾರದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವ ಸೃಷ್ಟಿಯಜಾಣ್ಮೆ ಅಸೀಮ ಅನಿಸ್ತಿದೆ.ನವರಸಗಳಲ್ಲಿ ಶೃಂಗಾರ ರಸವೇ ಭಾವನಾಪ್ರಧಾನ ರಸವೋ ಏನೋ!! ಮಿಲನ ಇರಲಿ ,ವಿರಹ ಇರಲಿ ಭಾವಗಳ ಪ್ರಖರತೆ ಜೋರು.ನೂರೆಂಟು ವಿಚಾರ ಗಳ ಹುಟ್ಟು ಹಾಕುವ ಸುಕೋಮಲ ಭಾವನೆಗಳಪ್ರಣಯಕವನ ನೀಡಿದ ಕೇಶವ ಕುಲಕರ್ಣಿಯವರಿಗೆ ಅಭಿನಂದನೆಗಳು.ಧ್ವನಿಸುರುಳಿಯಲ್ಲಿ ಈ ಹಾಡು ಹೇಗೆ ಮೂಡಿ ಬಂದಿರಬಹುದು ಎಂಬ ಕುತೂಹಲ.
    ಸರೋಜಿನಿ ಪಡಸಲಗಿ

    Liked by 1 person

  3. ‘ಮೆಲ್ಲ’ ಶಬ್ದದಿಂದ ಶುರುವಾದ ಸುಂದರ ಪದ್ಯ 12 ಸಾಲುಗಳ ಮೆಟ್ಟಲುಗಳನ್ನು ಮೆಲ್ಲ ಮೆಲ್ಲನೆ ಏರುತ್ತ ಉನ್ಮಾದದ ತುತ್ತ ತುದಿಯನ್ನೇರಿ ಹೊಸ ಜೀವದ ಉದಯದತ್ತ ಒಯ್ಯುತ್ತದೆ. ಆ ಹಾಡಿನ ಕೊನೆಯಲ್ಲಿ ‘ಧಮನಿ ಧಮನಿಗಳಲ್ಲಿ’ ಪದಗಳು ಬರುವಾಗ ಅಮಿತಾ ಅವರ ಆ ಭಾವೋನ್ಮಾದ ತುಂಬಿದ ರೀತಿ ಬಹಳ ದಿನಗಳ ವರೆಗೆ *ನನ್ನ ಕಾಡಿದೆ! ಇಬ್ಬರಿಗೂ ಅಭಿನಂದನೆಗಳು.

    Liked by 1 person

  4. ಕವಿಯೋರ್ವ ತರುಣಿಯೊಬ್ಬಳ ಮನಸ್ಸಿನೊಳಗೆ ಪರಕಾಯ ಪ್ರವೇಶ ಮಾಡಿ ಪ್ರಣಯ ಘಟ್ಟದ ಉನ್ಮಾದಗಳನ್ನು ಈ ಕವನದ ಮೂಲಕ ಹೇಳಿರುವಂತ ಈ ಹಾಡು ಮೆಚ್ಚುಗೆಯಾಗುವಂತದ್ದು. ಕವೆಂಟ್ರಿಯಲ್ಲಿ ಕವಿಯೇ ನೀಡಿದ ಕವನದ ಪರಿಚಯವನ್ನು ದೇಸಾಯಿಯವರ ವಿಡೀಯೋದಲಲ್ಲಿ ನೋಡಿ, ಕೇಳಿದ ನಂತರ ಹಾಡಿಗೆ ಇನ್ನೂ ಹೆಚ್ಚಿನ ಆಯಾಮಗಳು ದೊರೆತವು. ಧ್ವನಿಸುರಳಿಯಲ್ಲಿರುವ ಅತ್ಯಂತ ಸುಂದರವಾದ ಕವನಗಳಲ್ಲಿ ಇದೂ ಒಂದು. ಭಾವ ತುಂಬಿ ಹಾಡಿರುವ ಅಮಿತಾ ಮತ್ತು ಬರೆದ ಕವಿ ಕೇಶವರಿಗೆ ಅಭಿನಂದನೆಗಳು.

    Liked by 2 people

Leave a comment

This site uses Akismet to reduce spam. Learn how your comment data is processed.