ಪೀಠಿಕೆ: ಗಿರಿ-ಮುಗಿಲುಗಳು ಚುಂಬಿಸಿ ಮಳೆಯಾಗಿ,ಹರಿವ ಹೊಳೆಯಾಗಿ,ಚಿಗುರೊಡೆದು ಹಸಿರು ತುಂಬಿ ಗಿಡ ಮರಗಳಲ್ಲಿ ಜೀವ ಕಳೆ ನಲಿಯುತ್ತದೆ. ಪ್ರಕೃತಿಯ ಮಿಲನದಿಂದ ಭೂಮಿ ಸುಂದರವಾಗುವ ಹಾಗೆ, ಪರಸ್ಪರ ಕರುಣೆ, ಸಹನೆಗಳಿದ್ದಾಗ ಗಂಡು-ಹೆಣ್ಣುಗಳ ಮಿಲನದಿಂದ ಆದ ಸಂಸಾರಕ್ಕೆ ಒಂದು ಅರ್ಥವಿರುತ್ತದೆ, ಮನಸ್ಸುಗಳು ಹಗುರಾಗಿ ಜೀವನ ಸುಂದರವಾಗಿರುತ್ತದೆ ಎನ್ನುವ ಡಾ.ಶಿವ ಪ್ರಸಾದ್ ಅವರ ಈ ಕವನವು ‘ಕೆ.ಎಸ್.ಎಸ್.ವಿ.ವಿ’ (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ) ಹೊರತಂದಿರುವ ‘ಪ್ರೀತಿ ಎಂಬ ಚುಂಬಕ’ ಧ್ವನಿ ಮುದ್ರಿಕೆಯಲ್ಲಿ ಸುಶ್ರಾವ್ಯವಾಗಿ ಕೇಳಿಬಂದಿದೆ. ಈ ಕವನವನ್ನು ಓದಿ ಆನಂದಿಸಿ.
‘ಮಿಲನ’
ಸೇರಲಿ ಸೆಳೆಯುವ ಕಣ್ಣುಗಳು
ಒಲಿಯಲಿ ಕಾತರ ಮನಸುಗಳು
ಮಿಡಿಯಲಿ ಹೃದಯದ ತುಡಿತಗಳು
ಬಳಸಲಿ ಬಯಸುವ ತೋಳುಗಳು
ಮುತ್ತನಿಡಲಿ ಗಿರಿ ಮುಗಿಲುಗಳು
ಧರೆಗಿಳಿಯಲಿ ಮುತ್ತಿನ ಹನಿಗಳು
ತಣಿಯಲಿ ಉರಿಯುವ ಆಸೆಗಳು
ಬಳುಕಲಿ ಹಸುರಿನ ತೆನೆಗಳು
ಮೂಡಲಿ ಚೈತ್ರದ ಚಿಗುರುಗಳು
ಅರಳಲಿ ಮಿಲನದ ಮೊಗ್ಗುಗಳು
ಚಿಮ್ಮಲಿ ಪ್ರೀತಿಯ ಬುಗ್ಗೆಗಳು
ಹರಿಯಲಿ ಚೈತನ್ಯದ ಹೊಳೆಗಳು
ನನಸಾಗಲಿ ಪ್ರೇಮದ ಕನಸುಗಳು
ಕರುಣೆ ಸಹನೆ ಇರಲಿ ನಿಮ್ಮೆಡ ಬಲಗಳು
ಬರಲಿ ಶುಭ ಹಾರೈಕೆಗಳು
ಹಗುರಾಗಲಿ ನಿಮ್ಮಯ ಬದುಕುಗಳು
—————-ಡಾ. ಜಿ. ಎಸ್. ಶಿವಪ್ರಸಾದ್
(ಚಿತ್ರ ಕೃಪೆ: ಗೂಗಲ್)
ಪ್ರೇಮಿಗಳಿಗೆ ಶುಭವನ್ನರಸುವ ಈ ಕವನದಲ್ಲಿ ಸಕಾರಾತ್ಮಕ ಭಾವನೆಗಳು ಭರ ಪೂರವಾಗಿವೆ. ಇದೇ ನಿಮ್ಮ ಮೊದಲ ಪ್ರೇಮ ಕವನ ಅಂತ ಕೇಳಿಯೂ ಬಹಳ ಆಶ್ಚರ್ಯವಾಯಿತು. ಅಭಿನಂದನೆಗಳು.
LikeLike
ಈ ಕವನದಲ್ಲಿ ಪ್ರಕೃತಿ ಪುರುಷ ಒಂದಾಗಿ ಮೊಗ್ಗು ಅರಳಲಿ, ಚಿಗುರಲಿ, ತೆನೆ ತೊನೆಯಲಿ ಅಂತ ಹೇಳ್ತಾ ಕವಿ ಮಧುರ ದಾಂಪತ್ಯ ಗೀತೆ ಯನೊಂದ ಅಂದವಾಗಿ ಹೆಣೆದಿದ್ದಾರೆ.ಅರಿಯದೇ ಮನ ಅದರಲಿ ಮುಳುಗಿ ಗುನುಗುವಂತೆ ಮಾಡುವ ಕವನ ಅಂದ್ರೆ ತಪ್ಪಾಗಲಾರದು.ಮಧುರ ಭಾವಗಳ ಮಾಧುರ್ಯ ಭರಿತ ಕವನ ಡಾ.ಶಿವಪ್ರಸಾದ ಅವರೇ.ಅಭಿನಂದನೆಗಳು.ನಿಮ್ಮೆಲ್ಲರ ಈ ಕವನಗಳ ಗೊಂಚಲು ಮುಂದಿನ ವಾರ ಯಾವ ಕವನ ಅಂತ ಎದುರು ನೋಡುವಂತೆ ಮಾಡಿದೆ.ತುಂಬ ಅದ್ಭುತ ಸಾಹಿತ್ಯಿಕ ಸಾಧನೆ ಕನ್ನಡ ಬಳಗ ಯುಕೆ ದು.
ಸರೋಜಿನಿ ಪಡಸಲಗಿ
LikeLike
ಮದುಮಕ್ಕಳಿಗೆ ಹರಸಲು ಹೇಳಿಮಾಡಿಸಿದಂತಿದೆ ಈ ಹಾಡು.
..ಲಿ ಮತ್ತು ..ಗ಼ಳು ಪ್ರತಿ ಸಾಲಿನಲ್ಲೂ ಮೂಡಿ ಹಾಡಿಗೆ ಒಂದು ಸುಂದರ ರಂಗು ತುಂಬಿದೆ.
– ಕೇಶವ
LikeLiked by 1 person
ದ್ಯಾವಾ-ಪೃಥಿವಿಗಳ ಮಿಲನದ ಹಿನ್ನೆಲೆಯಲ್ಲಿ ಕೂಡುವ ಪ್ರೇಮಿಗಳ ಪ್ರಣಯದ ಸುಂದರ ಚಿತ್ರಣದೊಂದಿಗೆ ಶುಭಕಾಮನೆಗಳನ್ನು ಹೊತ್ತು ತಂದ ಸಲಲಿತವಾಗಿ ಹರಿಯುವ ಕವನ ಇದು. ಹಾಡಿನಲ್ಲಿ ಇನ್ನೂ ಉತ್ಕೃಷ್ಠವಾಗೆ ಧ್ವನಿಸಿದೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.
LikeLike