ಪೀಠಿಕೆ: ನನ್ನವಳ ನಗು ಚೆನ್ನ, ನನ್ನವಳ ಮೊಗ ಚೆನ್ನ, ನನ್ನವಳ ಕಣ್ಣು ಚೆನ್ನ, ನನ್ನವಳ ಮನಸು ಚಿನ್ನ, ಎಂದೆಲ್ಲಾ ಹೊಗಳುವ ಪ್ರಿಯಕರನ ಉತ್ಪ್ರೇಕ್ಷೆಗಳನ್ನು ನೀವು ಓದಿರಬಹುದು, ಕೇಳಿರಬಹುದು, ನೋಡಿಯೂ ಇರಬಹುದು. ಅದು ಒಂದು ಗಂಡಿನ ಸಹಜ ಮನೋಭಾವ.
ಆದರೆ ಒಂದು ಹೆಣ್ಣು ಇನ್ನೊಂದು ಹೆಣ್ಣನ್ನು ಪ್ರೇಮಿಯಾಗಿ ಸ್ವೀಕರಿಸಬಹುದೇ? ಹೌದು ಏಕಾಗಬಾರದು ಎನ್ನುತ್ತಾರೆ
ಡಾ.ಪ್ರೇಮಲತಾ.
‘ಇಲ್ಲೆಲ್ಲಾ ಸಿಕ್ಕಳು’ ಎನ್ನುವ ಪದಗಳೇ ಕುತೂಹಲ ಕೆರಳಿಸುವ ಈ ಕವನ, ಒಳಗಣ್ಣಿನಿಂದ ನೋಡುವ, ನೋಡಿ ಸವಿಯುವ ಪ್ರೀತಿಯ ಮನಸಿಗಲ್ಲದೆ ಹಾಗೆ ಸುಮ್ಮನೆ ಎಲ್ಲರಿಗೂ ಸಿಗುವವಳಲ್ಲ.ಆ ಸಿಗದವಳ ಹೆಸರೇ ಪ್ರಕೃತಿ.
ಗುಲಾಬಿಯ ದಳಗಳಲ್ಲಿ,ಮಯೂರನ ಗರಿಯ ನೂರು ಬಣ್ಣಗಳಲ್ಲಿ,ಪಾರಿಜಾತ,ಸಂಪಿಗೆಗಳಲ್ಲಿನ ಕಾಣದ ಕಂಪು, ಹೀಗೆ ಸೂಕ್ಷ್ಮವಾದ ಪ್ರಕೃತಿಯ ದಿನ ನಿತ್ಯಯದ ಕ್ರಿಯೆಗಳಲ್ಲಿ ಅವಳು ಇದ್ದಾಳೆ, ನೋಡುವ ದಿವ್ಯವಾದ ಕಣ್ಣುಗಳಿರಬೇಕಷ್ಟೆ.
ಕೆ.ಎಸ್.ಎಸ್.ವಿ.ವಿ (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ) ಹೊರತಂದಿರುವ ‘ಪ್ರೀತಿ ಎಂಬ ಚುಂಬಕ’ ಧ್ವನಿ ಮುದ್ರಿಕೆಯಲ್ಲಿ ಮಧುರವಾಗಿ ಕೇಳಿಬಂದಿರುವ ಈ ಕವನವನ್ನು ಓದಿ ಆನಂದಿಸಿ.
ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….
ಇಂದಿರೆಯ ಹಸಿರು ಮುಡಿಯಲ್ಲಿ
ಚೆಂಗುಲಾಬಿ ದಳಗಳಲಿ
ಸವಿಯಾಗಿ ನಕ್ಕ ಸಂತೃಪ್ತಿ ನೀನು !
ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….
ಕಲ್ಪನೆಯ ದಟ್ಟ ಕಾಡಲ್ಲಿ
ಬಣ್ಣದ ನೂರು ಗರಿಕೆದರಿ
ನರ್ತಿಸಿ ನಲಿದ ಮಯೂರಿ ನೀನು!
ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….
ಕಾರ್ಯಮುಖಿ ಈ ಬದುಕಲ್ಲಿ
ಬರೆದು ಚಿತ್ತಾರದ ರಂಗೋಲಿ
ಕನಸ ಬಿತ್ತಿ ನಕ್ಕವಳು ನೀನು
ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….
ಪಾರಿಜಾತ, ಸಂಪಿಗೆಯಲಿ
ಕಾಣದಂತೆಯೆ ಸೇರಿ
ಕಂಪ ಸೂಸಿ ನಲಿದವಳು ನೀನು
ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….
ಲೋಕ ಚೇತನದಿ ಬೆಳಕಾಗಿ
ಹದವಾದ ಬಿಸಿಲಾಗಿ
ಬೆಳ್ಳನೆ ಬದುಕಲ್ಲಿ ಹೊಕ್ಕವಳು ನೀನು
ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….
———————————- ಡಾ.ಪ್ರೇಮಲತ ಬಿ.
ಸೃಷ್ಟಿ ಸಿರಿಯ ವರ್ಣಿಸಿ ಅದರಲೊಂದಾಗಿ ಅಲ್ಲೊಂದು ಮಧುರ ತರಂಗಗಳ ನೆಬ್ಬಿಸುವ ಕವನ.ರಮ್ಯವಾಗಿ ಮೂಡಿಬಂದಿದೆ.ಭುವಿಯಗಲಕೂ ಹಾಸಿರುವ ಹಸಿರಲಿ, ಹೂವಿನ ಸೌಗಂಧದಲಿ, ಮಯೂರಪಿಂಛದ ಬಣ್ಣಗಳಲ್ಲಿ, ನೇಸರ ನ ಕಿರಣದಲಿ ಎಲ್ಲೆಲ್ಲೂ ಪ್ರಕೃತಿಯ ರಮ್ಯತೆ !! ಕವಿಗಳಿಗೂ, ಪ್ರಕೃತಿ ಗೂ ಬಿಡಲಾರದ ನಂಟು.ಹಕ್ಕಿಗಾನದಲಿ, ತೂಗಾಡುವ ಗಿಡ ಮರಗಳ ಲಾಸ್ಯದಲಿ, ಕವಿದ ಮೋಡದಲಿ, ಸುಳಿವ ಸುಳಿಮಿಂಚಿನಲಿ ಎಲ್ಲೆಲ್ಲೂ ಸೌಂದರ್ಯ ವೇ.ಅದು ನನ್ನದೇ ಎಂದು ಆಸ್ವಾದಿಸುವ ದೊಂದು ಅಪೂರ್ವ ಅನುಭವ.ಅದನ ಸುಂದರ ವಾಗಿ ಚಿತ್ರಿಸಿ ತನ್ನ ಪ್ರಕೃತಿಯ ಬಿಡಲಾರದ ಗಂಟನ್ನು ಶಬ್ದಗಳಗ ಗೊಂಚಲಿನಲ್ಲಿ ಮನಸೆಳೆವಂತೆ ಬಂಧಿಸಿದ್ದೀರಿ ಪ್ರೇಮ ಲತಾ ಅವರೇ.ಅಭಿನಂದನೆಗಳು.
ಸರೋಜಿನಿ ಪಡಸಲಗಿ
LikeLiked by 1 person
ಸುಂದರ ಪದಲಾಲಿತ್ಯ, ಸುಮಧುರ ಭಾವನಾಲಹರಿ, ಅಷ್ಟೇ ಚಂದದ ಸ್ವರಸಂಯೋಜನೆ,
ಇಡೀ ಧ್ವನಿಸುರಳಿಯ ಕೇಂದ್ರಬಿಂದು ನೀವು. ನಿಮ್ಮ ಭಗೀರಥ ಪ್ರಯತ್ನವಿಲ್ಲದಿದ್ದರೆ ಇದೆ ಸಾಧ್ಯವಾಗುತ್ತಿರಲಿಲ್ಲ.
– ಕೇಶವ
LikeLike
ಮಾನವ-ಪ್ರಕೃತಿ ಪ್ರೇಮ ಸಂಬಂಧಕ್ಕೆ ಆದಿ-ಅಂತ್ಯವಿಲ್ಲ. ಮೇಲಿನ ಮೊದಲ ಚಿತ್ರದಲ್ಲಿ ಕಂಡಂತೆ ಸೃಷ್ಟಿಯಲ್ಲಿ ಸ್ತ್ರೀಯನ್ನುಅರಸುತ್ತ ’ಇಲ್ಲೆಲ್ಲ ಆಕೆಯನ್ನು ಕಂಡು’ ಪುಳಕಿತನ(ಳಾ)ದ ಕವಿಯ ಸುಂದರ ಅಭಿವ್ಯಕ್ತಿ ಇಲ್ಲಿದೆ.ಅವರಿಗೂ ಚಿತ್ರ-ವಿನ್ಯಾಸ ಜೋಡಿಸಿದವರಿಗೂ ಅಭಿನಂದನೆಗಳು. ಇನ್ನೊಂದು ಮಾತನ್ನು ಹೇಳಲೇಬೇಕು, (ಇತ್ತೀಚಿನ ಎಲ್ಲ ಕವಿತೆಗಳಿಗೂ ಅದು ಅನ್ವಯಿಸುತ್ತದೆ.). ಕೆ ಎಸ್ ಎಸ್ ವಿ ವಿ ಯ ಧ್ವನಿಮುದ್ರಿಕೆಯಲ್ಲಿ ಕೇಳಿದರೆ ಈ ಸಾಲುಗಳ ಸ್ವಾದ ಇಮ್ಮಡಿಯಾಗುತ್ತದೆ.
LikeLike