‘ಅಂತಃಪುರ ಗೀತೆ’- ಡಿ.ವಿ.ಜಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಒಂದು ಅಪೂರ್ವವಾದ ಕೊಡುಗೆ.
ಮೂಲತಃ ‘ಬೇಲೂರು ಶಿಲಾಬಾಲಿಕೆಯರು’ ಎಂಬ ಶೀರ್ಷಿಕೆಯಡಿ 1920ರಲ್ಲಿ ರಚಿಸಿದ್ದರೂ, ಅಧಿಕೃತವಾಗಿ 1950 ರಲ್ಲಿ ಮೊದಲ ಬಾರಿಗೆ ಮುದ್ರಣವಾಗಿ ಲೋಕಾರ್ಪಣೆಯಾಯಿತು.
ಬೇಲೂರ ಶಿಲಾ ಬಾಲಿಕೆಯರ ಸೌಂದರ್ಯದ ಅತೀಸೂಕ್ಷ್ಮತೆಯನ್ನು ಗಮನಿಸಿ ತಮ್ಮ ಅಗಾಧ ಪ್ರತಿಭೆಯಿಂದ ಗೀತೆಗಳನ್ನು ರಚಿಸಿ ಚನ್ನಕೇಶವನಿಗೆ ಅರ್ಪಿಸಿದ ದಿವ್ಯ ಸಂಕಲನ ಇದಾಗಿದೆ.
ಬೇಲೂರ ಶಿಲಾ ಬಾಲಿಕೆಯರ ಒಂದೊಂದು ಭಂಗಿಯ ಭಾವದ ನಾಡಿ ಹಿಡಿದು ಪ್ರತ್ಯೇಕ ರಾಗಗಳನ್ನೊಳಗೊಂಡ ಗೀತೆಗಳನ್ನು ಚಿತ್ರ ಸಹಿತವಾಗಿ ಈ ಸಂಕಲನದಲ್ಲಿ ಹಿಡಿದಿಟ್ಟಿದ್ದಾರೆ ಪೂಜ್ಯ ಡಿ.ವಿ.ಜಿ ಅವರು.
ಪ್ರತಿಯೊಂದು ಗೀತೆಗೂ ಡಿ.ವಿ.ಜಿ ಅವರೇ ಸ್ವತಃ ರಾಗಗಳನ್ನು ಸೂಚಿಸಿ ಅದಕ್ಕಾಗಿ ಸಂಗೀತ ವಿದ್ವಾನ್ ವೀಣೆ ರಾಜಾರಾವ್ ಅವರಿಂದ ಸಹಾಯವನ್ನು ಪಡೆದದ್ದನ್ನು ಸ್ಮರಿಸಿದ್ದಾರೆ.ಈ ಸಂಕಲನದಲ್ಲಿ ಗೀತೆಗಳ ಜೊತೆಗೆ ಬೇಲೂರು ದೇವಾಲಯಗಳು ಮತ್ತು ಸೌಂದರ್ಯೋಪಾಸನೆ ಎಂಬ ಟಿಪ್ಪಣಿಗಳನ್ನು ಕೂಡ ಬರೆದಿದ್ದಾರೆ.
ಎಲ್ಲಾ ಗೀತೆಗಳು ಮೂಲತಃ ಹಳಗನ್ನಡದಲ್ಲಿ ಇದ್ದರೂ ಸಹಿತ ಸಂಗೀತ ಸಾಧಕರಿಗೆ ಇದೊಂದು ಜ್ಞಾನ ಕೋಶವಾಗಿದೆ ಎಂದು ಬಲ್ಲವರು ಹೇಳುತ್ತಾರೆ.ಸಂಗೀತವಷ್ಟೇ ಏಕೆ ಸಾಂಪ್ರದಾಯಿಕ ನೃತ್ಯಗಾರರು ಈ ಗೀತೆಗಳಿಗೆ ನೃತ್ಯ ಸಂಯೋಜಿಸಿ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಹೀಗೆ ಸಂಗೀತ, ನಾಟ್ಯ ಗಳಿಂದ ಅಂತಃಪುರ ಗೀತೆಗಳು ಇಂದಿಗೂ ಬೆರಗು ಮೂಡಿಸುತ್ತಿವೆ ಮತ್ತು ಕನ್ನಡದ ಹೆಮ್ಮೆಯ ಹೊಯ್ಸಳ ಸಾಮ್ರಾಜ್ಯದ ಶಿಲ್ಪ ಕಲಾ ವೈಭವವನ್ನು ಜೀವಂತವಾಗಿರಿಸಿವೆ.
ಕನ್ನಡ ಬಳಗ, ಯು.ಕೆ (KBUK) 2018 ಏಪ್ರಿಲ್ 21ರಂದು ಕೊವೆಂಟ್ರಿ(coventry)ಯಲ್ಲಿ ಆಚರಿಸಿದ ಯುಗಾದಿ ಸಂಭ್ರಮದಂದು ಡಿ.ವಿ.ಜಿ ಸ್ಮರಣೆಯ ಅಂಗವಾಗಿ ಖ್ಯಾತ ಭರತನಾಟ್ಯ ಕಲಾವಿದೆ Dr.ಸುಮನಾ ನಾರಾಯಣ್ ಅವರು ಅದ್ಭುತವಾದ ನೃತ್ಯ ಪ್ರದರ್ಶನ ಮಾಡಿದರು.
‘ನಟನ ವಾಡಿದಳ್ ತರುಣಿ’ ಮತ್ತು ‘ಏನೀ ಮಹಾನಂದವೇ ಓ ಭಾಮಿನಿ’ ಎನ್ನುವ ಗೀತೆಗಳು ಅತಿ ಜನಪ್ರಿಯವಾಗಿದ್ದು ಅವುಗಳನ್ನು ತಮ್ಮ ನೃತ್ಯಕ್ಕೆ ಆಯ್ದುಕೊಂಡಿದ್ದರು.
ಎರಡನೆಯ ಹಾಡಿನಲ್ಲಿ ಮುರಜಾ ಮೋದೆಯ ನೃತ್ಯ ಭಂಗಿಗಳು ನಯನ ಮನೋಹರವಾಗಿದ್ದವು.
ಈ ನೃತ್ಯ ಪ್ರದರ್ಶನಕ್ಕಾಗಿ ಸುಮಾರು ಮೂರು ತಿಂಗಳು ಸತತ ಅನ್ವೇಷಣೆ ಮತ್ತು ಅಭ್ಯಾಸ ಗಳೊಂದಿಗೆ ಪೂರ್ವ ತಯಾರಿ ನಡೆಸಿದ್ದನ್ನು Dr.ಸುಮನಾ ನಾರಾಯಣ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇದರಲ್ಲಿ ವಿಶೇಷವೆಂದರೆ ಸಂಪೂರ್ಣ ಸಾಂಪ್ರದಾಯಿಕ ನೃತ್ಯಕ್ಕೆ ಕಟ್ಟುಬೀಳದೆ ಹಾಡಿನ ಭಾವ, ರಾಗ, ತಾಳಗಳಿಗೆ ಅನುಗುಣವಾಗಿ ನೃತ್ಯ ಭಂಗಿಗಳನ್ನು ತಾವೇ ಸಂಯೋಜಿಸಿಕೊಂಡಿದ್ದನ್ನು ಪ್ರಸ್ತಾಪಿಸಿದರು.
Dr. ಸುಮನಾ ನಾರಾಯಣ್ ಅವರ ಕಿರು ಪರಿಚಯ-
ಭರತನಾಟ್ಯವನ್ನು ಗುರುಗಳಾದ ಶ್ರೀಮತಿ ಗೀತಾ ಅನಂತನಾರಾಯಣ್ ಅವರ ಗೀತಾಂಜಲಿ ನಾಟ್ಯ ಶಾಲೆಯಲ್ಲಿ ತಮ್ಮ ನಾಲ್ಕನೆ ವಯಸ್ಸಿಗೆ ಕಲಿಯಲು ಪ್ರಾರಂಭಿಸಿದರು. ಭಾರತ ಸರ್ಕಾರದ ವಿದ್ವತ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಪಡೆದು 1993-2002ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ಅನುದಾನಿತ ವಿದ್ಯಾರ್ಥಿವೇತನ ಮತ್ತು ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಬಹುತೇಕ ಸುಪ್ರಸಿದ್ಧ ವೇದಿಕೆಗಳಲ್ಲಿ ಇವರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ ಅವುಗಳಲ್ಲಿ Indian Institute of world culture, Milapfest, ‘ಬೆಂಗಳೂರು ಹಬ್ಬ’, ‘ಹಂಪಿ ಉತ್ಸವ’ ಪ್ರಮುಖವಾದವುಗಳು. ಇವರಿಗೆ ಸಂದ ಪ್ರಶಸ್ತಿಗಳು ಅನೇಕ.
ಇವರಿಗೆ ‘ನಾಟ್ಯ ವಿಶಾರದ’ ಎನ್ನುವ ಪ್ರತಿಷ್ಠಿತ ಬಿರುದನ್ನು ಕೊಟ್ಟು ಭಾರತ ಸರ್ಕಾರ ಗೌರವಿಸಿದೆ.
ಯು.ಕೆ (U.K)ಯಾದ್ಯಂತ ಅನೇಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ ಮಾಡಿರುವ ಇವರು ಪ್ರಸ್ತುತ ಇಂಗ್ಲೆಂಡ್ ನ ನಾಟ್ಟಿಂಗ್ಹ್ಯಾಮ್ ಅಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪ್ರಸೂತಿ ಶಾಸ್ತ್ರಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಲಾಸ್ಯ ಭರತನಾಟ್ಯ ಶಾಲೆ’ಯನ್ನು ಸ್ಥಾಪಿಸಿ ದೈವಿಕ ಕಲೆಯಾದ ಭರತನಾಟ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಒಬ್ಬ ಕನ್ನಡತಿ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ.
Nice to read about dr Sumana
LikeLike
ಭಾರತೀಯ ಶಾಸ್ತ್ರೀಯ ನೃತ್ಯಕಲೆಯನ್ನು ಸೂಕ್ತವಾಗಿ ಕನ್ನಡ ಕವನಗಳಿಗೆ ಅಳವಡಿಸಿ ಪ್ರದರ್ಶಿಸಿದ ಈ ಕನ್ನಡತಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ನಿಧಿ.
ವಿನತೆ ಶರ್ಮ
LikeLike
ಅನಂತ ಧನ್ಯವಾದಗಳು ವಿಜಯನರಸಿಂಹರವರಿಗೆ ಹಾಗು ನಿಮ್ಮೆಲ್ಲರ ವಿಶ್ವಾಸಕ್ಕೆ ನಾ ಆಭಾರಿ.
ಈ ಸಲದ ಕನ್ನಡ ಬಳಗದ ಕಾರ್ಯಕ್ರಮ,
ಒಬ್ಬ ಕಲಾವಿದೆಯಾಗಿ, ಹೆಮ್ಮೆಯ ಕನ್ನಡತಿಯಾಗಿ ನನಗೆ ಅತ್ಯಂತ ಆನಂದ, ಸಂೃತಪ್ತಿ ಹಾಗು ಸಾರ್ಥಕತೆ ತಂದುಕೊಟ್ಟಿತು. ಅತ್ಯತ್ದ್ಭುತವಾದ ಬೇಲೂರಿನ ಶಿಲ್ಪಕಲಾ ವೈಭವವನ್ನು, ಅಷ್ಟೇ ಅದ್ಭುತವಾದ ಡಿ.ವಿ.ಜಿಯವರ ಅಂತಃಪುರ ಗೀತೆಗಳ ಮೂಲಕ ಪ್ರಾಜ್ಞರೂ ಹಾಗು ಜ್ಞಾನಿಗಳಾದ ಡಾ. ಗುರುರಾಜ ಖರಜಗಿ, ನಮ್ಮ ತಂದೆತಾಯಿಗಳು, ಕನ್ನಡಬಳಗದ ಹಿರಿಯರು, ನಿಮ್ಮಂಥಹ ಸಹ್ೃದಯಿ ಕಲಾಭಿಮಾನಿಗಳ ಮುಂದೆ ನನ್ನ ಭಾಷೆಯಲ್ಲಿ ಪ್ರಸ್ತುತ ಪಡಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ.
LikeLiked by 1 person
ವಿಜಯನರಸಿಂಹ ಅವರು ಸಾಹಿತ್ಯ ಮತ್ತು ನಾಟ್ಯ ಕಲಾವಿದೆ ಸುಮನಾ ನಾರಾಯಣ್ ರ ಇಬ್ಬರ ಪರಿಚಯವನ್ನೂ ಈ ಲೇಖನದ ಮೂಲಕ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನ ಅಭಿನಂದನಾರ್ಹ. ಸುಮನಾ ಬಹುಮುಖ ಪ್ರತಿಭೆ. ಪ್ರತಿಬಾರಿಯೂ ಇವರ ನರ್ತನವನ್ನು ಆನಂದಿಸಿರುವ ನನಗೆ ಕಲೆಯ ಬಗ್ಗೆ ಇವರಿಗಿರುವ ನಿಜವಾದ ಅಭಿಮಾನದ ನೇರ ಪರಿಚಯವಿದೆ.
ಇಬ್ಬರಿಗೂ ಅಭಿನಂದನೆಗಳು.
LikeLike
ಡಿ ವಿ ಜಿಯವರ ಅಂತ:ಪುರಗೀತೆಗಳನ್ನು ಓದಿ, ಕೇಳಿ ಆನಂದಿಸಿದ್ದೇನೆ. ಆದರೆ ಅವುಗಳೆರಡನ್ನು ನೃತ್ಯದ ಮುಖಾಂತರ ನಮ್ಮೆದುರಿಗೆ ಪ್ರದರ್ಶಿಸಿ ಶಿಲಾಬಾಲಿಕೆಯರನ್ನು ಸಜೀವಗೊಳಿಸಿ ಆನಂದದ ಪರಾಕಾಷ್ಠೆಯತ್ತ ಒಯ್ದ ಡಾ ಸುಮನಾ ನಾರಾಯಣ್ ಅವರಿಗೆ ಅಭಿನಂದನೆಗಳು.ಸಾಹಿತ್ಯವನ್ನು ನೃತ್ಯಕ್ಕೆ ಅಳವಡಿಸಿಕೊಳ್ಳಲು ಅವರು ಪಟ್ಟ ಶ್ರಮ ಸಾರ್ಥಕವಾಯಿತು. ಮೊದಲು ಆ ಶಿಲ್ಪಗಳಲ್ಲೆ ಎಂಥ ಸೌಂದರ್ಯ, ಮೇಲೆ ಸುಂದರ ಕಲ್ಪನೆಯ ಸಾಹಿತ್ಯ ನಮ್ಮ ಅನುಭವವನ್ನು ಇನ್ನೊಂದು ಮಜಲಿಗೆ ಎಳೆದರೆ, ಜೊತೆಗೆ ನೃತ್ಯ ಅನುಭೂತಿಯ ಕೊನೆಯ ಮೆಟ್ಟಲಿಗೇ ಒಯ್ಯುವ ಶಕ್ತಿಯಿದೆಯೆಂದು ಆ ದಿನ ಪ್ರದರ್ಶಿಸಿದರು ಈ ಹೆಮ್ಮೆಯ ಕನ್ನಡ ಕಲಾವಿದೆ. ನಮನಗಳು!
LikeLike
ಡಿವಿಜಿ ಯವರ ಒಂದೊಂದು ಅಂತ:ಪುರ ಗೀತೆಯನ್ನು ಓದಿದಾಗಲೂ ಶಿಲಾಬಾಲಿಕೆ ಕಣ್ಮುಂದೆ ಜೀವ ತಳೆದು ಕುಣಿದಂತಿರುತ್ತದೆ.ಅವಳ ಪ್ರತಿಯೋಂದು ಹಾವಭಾವ ಕಣ್ಮುಂದೆ ಸುಳಿಯದಿರದು.ಅತೀ ಸುಂದರ ವರ್ಣನಾತ್ಮಕ ಗೀತೆ ಗಳವು.ಅವಕ್ಕೆ ಜೀವ ತುಂಬಿ ಭಾವನಾತ್ಮಕ ವಾಗಿ ಒಬ್ಬ ನಾಟ್ಯವಿಶಾರದೆ ನರ್ತಿಸಿದರೆ ಹೇಗಿದ್ದೀತು?ಯೋಚಿಸಿದರೇನೇ ಮನ ನರ್ತಿಸದಿರದು.ಅಂತೇಯೇ ಕಣ್ಣಿಗೆ ಕಟ್ಟುವಂತೆ ಬರೆದ ಲೇಖನ, ಪೂರಕವಾಗಿ ಚಿತ್ರ ಗಳು ಕಣ್ಣಿಗೆ ಹಬ್ಬ.ಡಾ.ಸುಮನಾ ಅವರಿಗೆ ಅಭಿನಂದನೆಗಳು ಹಾಗೂ ಲೇಖಕರಿಗೆ ಧನ್ಯವಾದಗಳು.ನಿಜಕ್ಕೂ ಕನ್ನಡ ಬಳಗ ಯುಕೆ ಯ ಈ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳು ಸ್ತುತ್ಯಾರ್ಹ ಎನ್ನದಿರಲಾರೆ ನಾ.
ಸರೋಜಿನಿ ಪಡಸಲಗಿ
LikeLiked by 1 person
ನಮ್ಮೆಲ್ಲರ ಪರಿಚಿತರಾದ ಡಾ.ಸುಮನಾ ನಾರಾಯಣ್ ಸಾಂಪ್ರದಾಯಕ ಭರತನಾಟ್ಯದಲ್ಲಿ ಪರಿಣತಿಯನ್ನು ಪಡೆಯುವುದರ ಜೊತೆಗೆ ಸಾಹಿತ್ಯದಲ್ಲಿ ಅಭಿರುಚಿ ಉಳಿಸಿಕೊಂಡಿರುವ ಅಪೂರ್ವ ಕಲಾವಿದೆ. ಕನ್ನಡ ಕವಿಗಳ ಕಾವ್ಯವನ್ನು ಚನ್ನಾಗಿ ಗ್ರಹಿಸಿ ಅದನ್ನು ಭರತನಾಟ್ಯಕ್ಕೆ ಅಳವಡಿಸಿ ಕಾವ್ಯ- ನಾಟ್ಯ ಸಮಾಗಮವೆಂಬ ಉನ್ನತ ಆಯಾಮದಲ್ಲಿ ಕಲೆಯನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯ ಅವರಿಗಿದೆ. ಹಳೆಗನ್ನಡದ ಡಿ.ವಿ.ಜಿ ಅವರ ಅಂತಃಪುರ ಗೀತೆಗಳಿರಬಹುದು ಅಥವಾ ನವೋದಯ ಕಾವ್ಯವಿರಬಹುದು ಅದಕ್ಕೆ ತಕ್ಕ ನಾಟ್ಯ ವಿನ್ಯಾಸವನ್ನು ರೂಪಿಸಿ ಕಲೆಯನ್ನು ಶ್ರೀಮಂತ ಗೊಳಿಸುವ ಹಂಬಲ ಅವರಿಗಿದೆ. ಈ ರೀತಿಯ ಇನ್ನು ಹೆಚ್ಚಿನ ಹೊಸ ಪ್ರಯೋಗಗಳನ್ನು ಸುಮನಾ ಅವರು ಕನ್ನಡ ಬಳಗದ ಕಾರ್ಯಕ್ರಮದಲ್ಲಿ ನೀಡಲಿ ಎಂದು ಹಾರೈಸುತ್ತೇನೆ.
LikeLiked by 1 person
ಏನೀ ಮಹಾನಂದವೇ!
ಕನ್ನಡಬಳಗದ ಈ ಕಾರ್ಯಕ್ರಮ ಮನೋಹರವಾಗಿತ್ತು. ಡಿವಿಜಿ ಮತ್ತು ಸುಮನಾ ಅವರಿಗೂ ವಂದನೆಗಳು.
ಕವನಸಂಕಲನದಾಲ್ಲಿ ಅನ್ತಃಪುರ ಎನ್ನುವ ಕಾಗುಣಿತವನ್ನು ಉಪಯೋಗಿಸಿರುವುದು ಸ್ವಾರಸ್ಯಕರವಾಗಿದೆ.
ಕೇಶವ
LikeLike