‘ನಿರ್ದಯಿ’- ಶ್ರೀವತ್ಸ ದೇಸಾಯಿಯವರ ಭಾವಗೀತೆ

ಪೀಠಿಕೆ:
ನವರಸಗಳಲ್ಲಿ ಒಂದು ಶೃಂಗಾರ. ಅದರ ಒಂದು ಪ್ರಕಾರ ವಿರಹ ಎನ್ನುತ್ತಾರೆ ಕೆಲವರು.
ಪ್ರೇಮ-ಪ್ರಣಯ ಇದ್ದಲ್ಲಿ ವಿರಹ ಇರಲೇ ಬೇಕಲ್ಲವೆ?
ಇಂಗ್ಲಿಷಿನಲ್ಲಿ ಒಂದು ಮಾತು ಇದೆ: Absence makes the heart grow fonder.
ಅಗಲುವಿಕೆಯಿಂದ ಎದೆ ಇನ್ನೂ ತುಂಬಿ ಬರುತ್ತದೆ, ಅಂತ.

ಈ ಹಾಡಿನ ಸನ್ನಿವೇಶ ಹೀಗಿದೆ:
ಇಲ್ಲಿ ಪ್ರೇಮಿಗಳು ಅಗಲಿದ್ದಾರೆ. ಆಕೆ ದೂರ ಸರಿದಿದ್ದಾಳೆ; ಬಲು ದೂರ. ಆಕೆ ಯಾವ ಊರಿಗೆ ಹೋಗಿರಬಹುದು?
ಆತ ದೂರುತ್ತ ಪ್ರಶ್ನಿಸುತ್ತಾನೆ: ನೀನಲ್ಲವೇ ನಿರ್ದಯಿ?

(ಕನ್ನಡ ಬಳಗ, ಯು.ಕೆ ದ ಯುಗಾದಿ ಸಂಭ್ರಮದಲ್ಲಿ ಬಿಡುಗಡೆಯಾದ ‘ಪ್ರೀತಿಯೆಂಬ ಚುಂಬಕ’ ಧ್ವನಿಮುದ್ರಿಕೆ (CD) ಯಲ್ಲಿ ಕೆಳಗಿನ ಕವನ ಸೇರ್ಪಡೆಯಾಗಿದೆ)

                               -ಶ್ರೀವತ್ಸ ದೇಸಾಯಿ

nirdayi-1

ನಿರ್ದಯಿ

ನಾನಲ್ಲ, ನೀನಲ್ಲವೆ ನಿರ್ದಯಿ?
ನನ್ನನ್ನೇ ನಿನಗಿತ್ತೆ ನನ್ನವಳೆಂದೆಣಿಸಿ
ನನ್ನಲ್ಲೀಗ ಬರೀ ನೆನಪುಗಳ ರಾಶಿ
ನನ್ನ ತಪ್ಪಿದ್ದರೆ ಮರಳಿ ಬಾ ಕ್ಷಮಿಸಿ

ನಿಮ್ಮೂರಲ್ಲಿ ಹುಟ್ಟು-ಸಾವಿಲ್ಲಂತೆ
ಎಲ್ಲೆಲ್ಲೂ ಹಸಿರಂತೆ, ಅದು ನಂದನವಂತೆ
ಅದಕ್ಕೆ ತಾನೆ ನೀನು ನನ್ನನ್ನು ಮರೆತೆ?
ನನ್ನ ಬಳಿಯಿಲ್ಲ ಸತ್ತ ಕನಸುಗಳಿಗೆ ಕೊರತೆ!

ಕೇಳುತಿದೆ ಇಡದ ಹೆಜ್ಜೆಗಳ ಸದ್ದು
ಕಾಡುತಿವೆ ಸತತ ನೆನಪುಗಳು ಎದ್ದು
ಕಳಿಸಿಲ್ವೆ ಹೋದಾಗ ಕೊಟ್ಟು ಮುತ್ತು
ನನ್ನನ್ನಳಿಸಿದ ನೀನಲ್ಲವೆ ನಿರ್ದಯಿ?

-ಶ್ರೀವತ್ಸ ದೇಸಾಯಿ

8 thoughts on “‘ನಿರ್ದಯಿ’- ಶ್ರೀವತ್ಸ ದೇಸಾಯಿಯವರ ಭಾವಗೀತೆ

  1. ವಿರಹವಿಲ್ಲದ ಪ್ರೀತಿಗೆ ಅರ್ಥವಿಲ್ಲ, ಅಲ್ಪವಿರಹದಲ್ಲಿ ಒಂದು ನಂಬಿಕೆಯಿದೆ ಅದು ತನ್ನ ಪ್ರೇಮಿ ಮರಳಿ ಬರುವಳೆನ್ನುವ ಅಗಾಧವಾದ ನಂಬಿಕೆ.
    ಪೂರ್ಣವಿರಹದಲ್ಲಿ ಒಂದು ಬೇಸರವಿದೆ, ಆರ್ದ್ರ ದನಿಯಿದೆ, ಬೇಗೆಯಿದೆ,ಕೋಪವಿದೆ, ಹತಾಶೆಯಿದೆ.
    ಅಲ್ಪವಿರಹದಲ್ಲಿ ಸುಖದ ಕನಸಿದೆ, ಪೂರ್ಣವಿರಹದಲ್ಲಿ ನೆನಪುಗಳೇ ಪೂರ್ಣ ಸುಖ.
    ದೇಸಾಯಿ ಸರ್ ಅವರ ಭಾವಪೂರ್ಣವಾದ ಈ ಕವನ ಮನಕಲಕುವಂತಹದ್ದು .
    ಧ್ವನಿಮುದ್ರಿಕೆಯಲ್ಲಿ ಮತ್ತೆ ಮತ್ತೆ ಕೇಳಿ ಭಾವುಕನಾಗಿದ್ದೇನೆ.

    Liked by 2 people

    • ಎಷ್ಟು ಚೆನ್ನಾಗಿದೆ ಈ ಅಭಿವ್ಯಕ್ತಿ! ಕವಿತೆಯಲ್ಲಿ, ಹಾಡಿನಲ್ಲಿ ಹುದುಗಿದ ಭಾವವನ್ನು ಹಿಡಿದಿಡುವ ಸಾಲು: ”ಅಲ್ಪವಿರಹದಲ್ಲಿ ಸುಖದ ಕನಸಿದೆ, ಪೂರ್ಣವಿರಹದಲ್ಲಿ ನೆನಪುಗಳೇ ಪೂರ್ಣ ಸುಖ.” ಬಹಳ ಹಿಡಿಸಿತು. ಕಲುಕಿದ ಹೃದಯಗಳಿಗೆಲ್ಲ ಮತ್ತೊಮ್ಮೆ ಧನ್ಯವಾದಗಳು. ಬರೆಯುವ ಶ್ರಮ ತಗೊಂಡು ನವಿರಾದ ಶಬ್ದಗಳಲ್ಲಿ ಮೂಡಿಸಿದ ಸಹೃದಯಿಗಳಿವರು!

      Like

  2. ಅಮರ ಪ್ರೇಮಕ್ಕೆ ಜಗತ್ತುಗಳ ಭೇದವಿಲ್ಲ ಎನ್ನುವಂತೆ ಪ್ರೀತಿಯನ್ನು ಸಂಗಾತಿಗೆ ಕಳಿಸುವಲ್ಲಿ, ತಿಳಿಸುವಲ್ಲಿ ಈ ಹಾಡು ಸಮರ್ಥವಾಗಿದೆ. ದೂಷಣೆಯಲ್ಲಿಯೇ ವ್ಯಕ್ತವಾಗುವ ಪ್ರೀತಿ, ಅಸಹಾಯಕತೆ ಮನಮಿಡಿಸುತ್ತದೆ.

    Liked by 1 person

  3. ಡಾ. ಜಿ ಎಸ್ ಪ್ರಸಾದ್ ಬರೆಯುತ್ತಾರೆ: ಪ್ರಪಂಚದ ಯಾವುದೇ ಸಾಹಿತ್ಯದಲ್ಲಿ ಶೋಕ, ವಿರಹ, ನೋವು ಮತ್ತು ದುಃಖ ವನ್ನು ಒಳಗೊಂಡ ಬರವಣಿಗೆಯಲ್ಲಿ ಹೆಚ್ಚು ತೀಕ್ಷ್ಣವಾದ ಆಳವಾದ ಭಾವನೆಗಳು ಅಡಗಿರುತ್ತವೆ ಹಾಗೆ ಓದುಗರ ಮನಸ್ಸನು ಮತ್ತು ಹೃದಯವನ್ನು ತಟ್ಟುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ . ಹಾಗೆಯೇ ಈ ಮೇಲಿನ ಅಂಶಗಳನ್ನು ಒಳಗೊಂಡ ಸಂಗೀತದಲ್ಲಿ ಕೂಡ ಒಂದು ತೀವ್ರತೆಯನ್ನು ಕಾಣಬಹುದು. ಗ್ರೀಕ್ ದುರಂತ ಕಥೆಗಳು ಮತ್ತು ಇತ್ತೀಚಿನ ಅಡಿಲ್ ಗಾಯನ ಇದಕ್ಕೆ ಕೆಲವು ಉದಾಹರಣೆಗಳು. ಶ್ರೀವತ್ಸ ಅವರ ‘ನಿರ್ದಯಿ’ ಕವನ ಮತ್ತು ಭಾವಗೀತೆಯನ್ನು ಕೂಡ ಈ ಹಿನ್ನೆಲೆಯಲ್ಲಿ ನಾವು ನೋಡಬಹುದು. ನಾನು ಓದಿದ, ಕೇಳಿದ ಕವನಗಳಲ್ಲಿ ನನ್ನಲ್ಲಡಗಿದ ಭಾವುಕತೆಯನ್ನು ಹೆಚ್ಚಾಗಿ ಕೆರಳಿಸಿದ ಕವನ ‘ನಿರ್ದಯಿ’. (Copied here from elsewhere)

    Liked by 1 person

  4. ತುಂಬಾ ಮನೋಜ್ಞ ಕವನ.ವಿರಹವೇದನೆಯಲ್ಲಿಯ ನೋವಿನೆಳೆ ಮನ ಮಿಡಿದು ಅರಿಯದೇ ಕಣ್ಣು ಹನಿಯದೇ?ನಲಿವಿಗಿಂತ ನೋವಿನ ಭಾವಗಳ ಪ್ರಖರತೆ , ತೀಕ್ಷ್ಣ ತೆ ಜಾಸ್ತಿ.ಅದನ್ನ ವ್ಯಕ್ತಗೊಳಿಸಲು ಗದ್ಯಕ್ಕಿಂತ ಪದ್ಯವೇ ಹೃದ್ಯ , ಮನೋಜ್ಞವೆನೋ ಅನ್ನಿಸದಿರದು ಈ ಕವಿತೆ ಓದಿದಾಗ.ಓದಿದರೂ ಸರಿಯೇ, ಭಾವ ತುಂಬಿ ಹಾಡಿದರಂತೂ ಈ ಕವಿತೆ ಆತನನ್ನಷ್ಟೆ ಅಲ್ಲ ಎಲ್ಲರನ್ನೂ ಅಳಿಸದಿದ್ದೀತೆ? ಇಂತಹ ಸುಂದರ , ಮನಮಿಡಿಯುವ ಕವನ ನೀಡಿದ್ದಕ್ಕೆ ಶ್ರೀವತ್ಸ ದೇಸಾಯಿ ಯವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು.ವಾರ, ವಾರವೂ ಹೊಸ ಹೊಸ ಕವನಗಳ ರಸದೌತಣ ನೀಡುತ್ತಿರುವ ಅನಿವಾಸಿ ಗೆ ಧನ್ಯವಾದಗಳು.
    ಸರೋಜಿನಿ ಪಡಸಲಗಿ.

    Liked by 1 person

  5. ವಿರಹವೇದನೆ ಆ ಹಾಡಿನಲ್ಲಿ ತುಂಬ ಚೆನ್ನಾಗಿ ವ್ಯಕ್ತವಾಗಿದೆ. ರಾಗ ಸಂಯೋಜನೆಯೂ ಸೊಗಸಾಗಿದೆ. ಕೇಶವ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.