ನೂರು ನಮನ (✍ವಿಜಯನರಸಿಂಹ ಅವರ ಪ್ರೇಮ ಕವನ )

(ಮಲ್ಲಿಗೆ ಹೂ ಅಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ, ಉದ್ದ ಜಡೆ ಇರುವವರು ಬೀಗು-ಜಂಭದಿಂದ ಮುಡಿಯುತ್ತಾರೆ.ಮೋಟ ಜಡೆಯವರು ಅದಕ್ಕೆ ತಕ್ಕಷ್ಟು ಸಣ್ಣದಾದ ಒಂದು ಮೊಳದಷ್ಡೋ ಅಥವಾ ಸ್ವಲ್ಪ ಜಾಸ್ತಿಯೋ ಮುಡಿದು ನಾವೇನೂ ಕಮ್ಮಿ ಇಲ್ಲ ಎಂದು ತೋರ್ಪಡಿಸುತ್ತಾರೆ. ಇದೆಲ್ಲವೂ ಹಬ್ಬದ ದಿನಗಳಂದೋ ಇಲ್ಲವೇ ಮದುವೆ ಸಮಾರಂಭದಂದೋ ನೋಡುವ ಸಾಮಾನ್ಯ ದೃಶ್ಯ.

ಅಂತಹ ಸ್ತ್ರೀ-ಜಟ  ಸೌಂದರ್ಯವರ್ಧಕ  ಮೇರುಸುಮವಾದ ಮಲ್ಲಿಗೆ  ದಂಪತಿಗಳ ಬಾಳಿನಲ್ಲಿ  ನವಿರು ಪ್ರೇಮ ಪರಿಮಳವನ್ನು ಸೂಸುವ ಸುರಸುಮವೂ ಹೌದು. ಇದಕ್ಕೆ ಸಾಕ್ಷಿ ನಮ್ಮೆಲ್ಲರ ಮೆಚ್ಚಿನ ಒಲವಿನ ಕವಿ ಎಂದೇ ಖ್ಯಾತರಾದ ಕೆ.ಎಸ್.ನರಸಿಂಹಸ್ವಾಮಿಯವರ ‘ಮೈಸುರು ಮಲ್ಲಿಗೆ’ ಕೃತಿ.

ಅಂತಹ ದಿವ್ಯ ಮಲ್ಲಿಗೆ ನಮ್ಮೆಲ್ಲರ ಬಾಳಲ್ಲೂ ಆನಂದವನ್ನು ತಂದಿರುತ್ತಾಳೆ. ಅಂತಹದೊಂದು ಪ್ರೇಮಾಂಕುರ ಸಂದರ್ಭದ ಕವಿತೆಯಿದು ‘ನೂರು ನಮನ’. ಇಲ್ಲಿ ಮಲ್ಲಿಗೆಯನ್ನು ಕಟ್ಟಿ ಮಾರವವಳಿಗೆ ನಮನ ಸಲ್ಲಿಸಲೇಬೇಕೆಂದು ಅನಿಸಿತು.)

Mallige_3

ನೂರು ನಮನ

ಮಾಗಿ ಚಳಿಯ ಸಂಜೆಗೊಂದು

ಸಣ್ಣಗೆ ಸುರಿದ ಸೋನೆಯೊಂದು

ರಮ್ಯ ಭಾವಗಳೇಳುತ ಮನದಿ

ಗಮ್ಯ ಗಾಲಿಗಳು ಪಾದ ತಳದಿ

ನಲ್ಲೆಯ ನೋಡುವ ಕಾತರದ ಕಾಟ

ಮಲ್ಲೆಯ ಮಾರುವವಳತ್ತ ಓಟ

 

ಎಲೆಯಡಿಕೆ ಜಿಗಿವ ಕೆಂಪು ಬಾಯಿ

ಸರಸರನೆ ಆಡುವ ಅಳತೆಯ ಕೈ

ಚಿನ್ನದ ಮಲ್ಲೆಯ ಚೆಂದದ ಮಾಲೆ

ತಣ್ಣನೆ ಬಟ್ಟೆಯ ಹೊದಿಸಿ ಮೇಲೆ

ಬರುವವರು ನಿನ್ನ ಮಾಲೀಕರದಾರೊ

ಕೊಂಡು ನಿನ್ನ ಮುಡಿವರು ಯಾರೊ

ನೀನು ನನ್ನ ಬಾಳ ದೊಡ್ಡ ಮಲ್ಲಿಗೆ

ಬೆಳಗು ಅಲ್ಲೂ ಕರೆದೊಯ್ಯುವಲ್ಲಿಗೆ

 

ಪೋಣಿಸುವ ಕೈಗಳಿಗೆ ಜೀವನ

ಮುಡಿದ ಮುಡಿಯಲ್ಲಿ ಚೇತನ

ಸುಮವಯಸ್ಸು ನಿನಗೆರಡೇದಿನ

ಸಮಮನಸ್ಸು ನಿನ್ನದು ಅನುದಿನ

ಕೊಂಡವರೆದೆಗೆ ನೀನು ಸೇತುವೆ

ಪ್ರೀತಿ ಪರಿಮಳವೆರಡನೂ ಸೂಸುವೆ

ನನ್ನ ಮುದ್ದು ಮಲ್ಲಿಗೆ ಎಂದುದು

ಅವಳೆದೆಯ ಭಾವವಂತಹುದು

 

‘ಚೌಕಾಸಿಯೇನಮ್ಮ  ನಿನ್ನಲ್ಲಿ

ನನಗೆರಡು ಮೊಳ ತಾ ಇಲ್ಲಿ’

ಎನುತ ಒಯ್ದೆ ಮನೆಗೆ ಹರುಷದಿ

ಘಮವದೆಂತು ಓಡಿತು ಕ್ಷಣದಿ?

‘ಮಲ್ಲಿಗೆ ತಂದರೇನು ರಾಯರಿಂದು?’

ಎಂದವಳ ಮಾತೇ ಮತ್ತು ತಂದು

ಮಲ್ಲಿಗೆ ಕೊಟ್ಟವಳ ನೆನದು ಮನ

ಸಲ್ಲಿಸಿತು ಇಲ್ಲಿಂದಲೇ ನೂರು ನಮನ

 

✍ವಿಜಯನರಸಿಂಹ

 

(Picture credits to Google &  Dr.Srivatsa Desai)

 

9 thoughts on “ನೂರು ನಮನ (✍ವಿಜಯನರಸಿಂಹ ಅವರ ಪ್ರೇಮ ಕವನ )

  1. ಈ ಕವಿತೆ ಮನಸ್ಸಿನಲಿ ಓದಿದರೆ ಲಾಭವಿಲ್ಲ.ಜೋರಾಗಿ , ಲಯಭದ್ದವಾಗಿ ಓದಿ ಆಸ್ವಾದಿಸಬೇಕು. ಚೆನ್ನಾಗಿದೆ👏👏

    Liked by 1 person

  2. ಮೈಸೂರಿನಲ್ಲಿ ಹುಟ್ಟಿ ಬೆಳೆದು ೨೫ ವರ್ಷಗಳ ಕಾಲ ಮೈಸೂರು ಮಲ್ಲಿಗೆಯನ್ನು ಮುಡಿದು ಸಂಭ್ರಮಿಸಿದ ನನ್ನ ಮನ ಇಂದು ಮತ್ತೊಮ್ಮೆ ಮೈಸೂರಿನ ಮಧುರತೆಯನ್ನು ನೆನಪಿಸಿತು. ದಿವಂಗತ ಕನ್ನಡ ಚಲನಚಿತ್ರ ಹಿನ್ನೆಲೆಗಾಯಕ ಕವಿ ಪಿ.ಬಿ. ಶ್ರೀನಿವಾಸ್ ಅವರ ಮಧುರ ಕಂಠದ ಅನೇಕ ಗೀತೆಗಳಲ್ಲಿ ಮೈಸೂರಿನ ಮಲ್ಲಿಗೆಯ ವೈಭವವನ್ನು ವರ್ಣಿಸಿದ್ದಾರೆ. ಇನ್ನು ಕೆ.ಎಸ ನರಸಿಂಹ ಸ್ವಾಮಿ ಅವರ ಮೈಸೂರು-ಮಲ್ಲಿಗೆಯಂತೂ ಚಿರನೂತನ. “ಮಲ್ಲಿಗೆ ಅರಳೆ ಮೈಸೂರಿನವಳೇ ಅಲ್ಲೇಕೆ ನಿಂದೆ ಬಾರೆ ನನ್ನವಳೇ ಮೀನಾ ಕಣ್ಣವಳೇ” ಎನ್ನುವ ಚಿತ್ರಗೀತೆ ನನ್ನ ಮನದಲ್ಲಿ ಇನ್ನು ಹಸಿರಾಗಿಯೇ ಇದೆ. ಮೈಸೂರು ಮಲ್ಲಿಗೆಯನ್ನು ಕವನಗಳಲ್ಲಿ, ಚಿತ್ರಗೀತೆಗಳಲ್ಲಿ ವರ್ಣಿಸಿ ಬರೆದಷ್ಟು ಇನ್ನಾವ ಹೂವನ್ನು ವರ್ಣಿಸಿಲ್ಲ ಎಂದು ನನ್ನ ಎಣಿಕೆ. ಬಹುಶಃ ಇದು ನನ್ನ ಜನ್ಮಸ್ಥಳದ ಬಗ್ಗೆ ನನಗಿರುವ ಕುರುಡು ಮೋಹವೂ ಇರಬಹುದು. ನನ್ನ ಕಾಲೇಜಿನ ದಿನಗಳಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನ ಹುಡುಗಿಯರು, ತಮ್ಮ ಮಾರುದ್ದದ ಜೆಡೆಗಳಲ್ಲಿ (ಆಗಿನ್ನೂ ಬಾಬ್ ಕಟ್) ಇಷ್ಟ್ಟೆಲ್ಲಾ ಜನಪ್ರಿಯವಾಗಿರಲಿಲ್ಲ., ಸಂಪ್ರದಾಯಸ್ಥ ಮೈಸೂರಿನ ಹುಡುಗಿಯರು, ತಮ್ಮ ಉದ್ದದ ನಾಗವೇಣಿಯನ್ನು ತೂಗುತ್ತ ಬಳುಕುತ್ತ ನಡೆಯುತ್ತಿದ್ದ ವೈಖರಿಯೇ ಅನೇಕ ಕವಿಗಳ ಪ್ರೇರಣೆಯಾಗಿತ್ತೇನೋ! ಅದೆಲ್ಲ ಏನೇ ಇರ್ಲಿ,ವಿಜಯನಾರಸಿಂಹ ಅವರೇ, ಮನೆ ಮುಂದೆ ಮಲ್ಲಿಗೆ ಮಾರಲು ಬರುತ್ತಿದ್ದ ಹೂವಾಡಗಿತ್ತಿಯ ಕೈಯಲ್ಲಿ ಚೌಕಾಸಿ ಮಾಡಿ ಕೊಳ್ಳುತ್ತಿದ್ದ ಮಲ್ಲಿಗೆ, ಮನೆಯ ಅಂಗಳದಲ್ಲಿ ಬಿಟ್ಟ ಮಲ್ಲಿಗೆ, ಹೀಗೆ ಅನೇಕ ರೀತಿಯಲ್ಲಿ ಮಲ್ಲಿಗೆಯನ್ನು ಮುಡಿಯಲ್ಲಿ ಹೊತ್ತು ಮೆರೆದ ದಿನಗಳು, ನಿಮ್ಮ ಕವನವನ್ನೋದಿ ನನ್ನ ಮನ ಮತ್ತೊಮ್ಮೆ ಆ ದಿನಗಳತ್ತ ಓಡಿತು. ಮೈಸೂರಿನ ಜನತೆಯ ರಸಿಕತನ ಈ ಕವನದಲ್ಲಿ ಹೊಮ್ಮಿದೆ. ಧನ್ಯವಾದಗಳು.
    ಉಮಾ ವೆಂಕಟೇಶ್

    Liked by 2 people

  3. ಹೂವಿನಿಂದ ನಾರು ಸ್ವರ್ಗಕ್ಕೆ ಕೇಳಿದ್ದೇವೆ. ನಾರು ಕಟ್ಟುವವಳನ್ನು ಏರಿಸಿ ವರ್ಣಿಸಿದ್ದೀರಿ. ಆ ಬೆರಳುಗಳಲ್ಲೆಷ್ಟು ಕಂಪೋ! All round beauty. ಎಂಥ ಸುಗಂಧವೆಬ್ಬಿಸಿ ಹರಡಿದೆ ಈ ಕವನ!

    Liked by 1 person

  4. ಮುದ್ದು ಮಲ್ಲಿಗೆಯ ಮುಗ್ಧ ಸೌಂದರ್ಯ ಕ್ಕೆ ಮನಸೋಲದ ರಸಿಕ ಉಂಟೇ? ಮಲ್ಲಿಗೆ ಇಲ್ಲದೇ ನಲ್ಲ ನಲ್ಲೆ ಸಲ್ಲಾಪ ಉಂಟೇ? ಅಂತೆಯೇ ಮಲ್ಲಿಗೆ ಯನೊಲ್ಲದ ಬಾಲೆ ಯುಂಟೆ?ಮಾಗಿಯ ಚಳಿಗೆ ಹೊಸ ಸೊಗಡು ನೀಡುವ, ಬಿರು ಬೇಸಿಗೆ ಗೆ ತಂಪೆರೆಯುವ ಸೊಂಪಿನ ಚೆಲುವೆ ಮಲ್ಲಿಗೆ, ಸುಂದರ, ಸುಕುಮಾರ ಮಲ್ಲಿಗೆ.ಈ ಮಲ್ಲಿಗೆ ಇಲ್ಲದೇ ಕೆ.ಎಸ್ಸ.ನರಸಿಂಹ ಸ್ವಾಮಿ ಗಳವರ ಕವನವೂ ಇದ್ದಂತಿಲ್ಲ.ಅವರು ಹೂವಾಡಗಿತ್ತಿಯ ಮೇಲೆ ಬರೆದಿದಾರೋ ಅಂತ ಒಂದು ಅನಿಸಿಕೆ. ನಾನು ಚಿಕ್ಕವಳಿದ್ದಾಗ ಹಾಡು ಹೇಳುತ್ತಿದ್ದ ನೆನಪು-ಹೂವನು ಮಾರುವ ಹೂವಾಡಗಿತ್ತಿಯು ಹಾಡುತ ಬರುತಿಹಳು.
    ತರತರದ ಹೂಗಳು ಬೇಕೆ ಚೆಲುವೆ ಎನ್ನುತ ಕೇಳುವಳು
    ಮಲ್ಲಿಗೆ ಜಾಜಿ ಮೊಲ್ಲೆ ಗುಲಾಬಿ
    ಮೊಗ್ಗನು ಸುರಿಯುವ ಳು…..
    ಬರೆದವರ್ಯಾರು ಗೊತ್ತಿಲ್ಲ.ವಿಜಯನಾರಸಿಂಹರ ಈ ರಸಮಯ ಕವನ ನೆನಪುಗಳನ್ನೆಲ್ಲೆಲ್ಲೋ ಕೊಂಡೊಯ್ದಿದೆ.ಸುಕುಮಾರ ಮಲ್ಲಿಗೆಯ ಸೌಗಂಧ ಹರಡುವ ಸುಂದರ ಕವನ.ಅಭಿನಂದನೆಗಳು ವಿಜಯನಾರಸಿಂಹ ಅವರೇ.
    ಸರೋಜಿನಿ ಪಡಸಲಗಿ

    Liked by 1 person

    • ನೀವು ಬರೆದ ಹಾಗೆ ಕೆ ಎಸ್ ಎನ್ ಅವರು ಹೂ ಮಾರುವವಳ ಬಗ್ಗೆ ಕವನ ಬರೆದಿದ್ದಾರೆ.

      ಕವನದ ಹೆಸರು ‘ಹೂವಾಡಗಿತ್ತಿ’. ‘ಮೈಸೂರು ಮಲ್ಲಿಗೆ’ ಕವಮ ಸಂಕಲನದಲ್ಲೇ ಇದೆ.

      ಕೇಶವ

      Like

  5. ಮಲ್ಲಿಗೆ ಕವನ! ಕಣಕಣದಲಿ ಘಮದ ಬನ!
    ನಮ್ಮ ಬ್ರಿಸ್ಬನ್ ಮನೆಯಲ್ಲಿ ಜಾಜಿ ಹೂ, ಮಲ್ಲಿಗೆ ಹೂ ಅರಳಿದಾಗಲೆಲ್ಲಾ ನನಗದೆಷ್ಟು ಸಂಭ್ರಮ!
    ಕವಿ ವಿಜಯನರಸಿಂಹರಿಗೆ ಅಭಿನಂದನೆಗಳು.
    ವಿನತೆ ಶರ್ಮ

    Like

  6. ಮಲ್ಲಿಗೆಯ ಕವಿ ಕೆ ಎಸ್ ಎನ್ ಅವರನ್ನು ನೆನಪಿಸುವ ಮಲ್ಲಿಗೆಯ ಕವನ‍!

    ಮಲ್ಲಿಗೆಯ ಉಪಮೆಯನ್ನು ಕೆ ಎಸ್ ಎನ್ ರಷ್ಟು ಬಹುಷಃ ಯಾರೂ ಉಪಯೋಗಿಸಿರಲು ಸಾಧ್ಯವಿಲ್ಲ. ಭಾರತದ ಬೇರೆ ಭಾಷೆಗಳಲ್ಲಿ ಮಲ್ಲಿಗೆ ಕವಿಗಳ ಬತ್ತಳಿಕೆಯಲ್ಲಿ ಯಾವ ಸ್ಥಾನ ಪಡೆದಿದೆ ಎಂದು ನನಗೆ ಅರಿವಿಲ್ಲ, ಆದರೆ ಇಂಗ್ಲೀಷ್ ಭಾಷೆಯಲ್ಲಿ ಜಾಸ್ಮಿನ್ ಜೊತೆ ಹೋಲಿಸಿ ಮಾಡಿದ ಕವನದ ಸಾಲುಗಳು ತುಂಬ ಕಡಿಮೆಯೆಂದೇ ಹೇಳಬೇಕು. ದೇಸಾಯಿಯವರು ಇದರ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು.

    ಕೆ ಎಸ್ ಎನ್ ಮಲ್ಲಿಗೆಯ ಉಪಮೆ ರೂಪಕಗಳನ್ನು ಅಷ್ಟೊಂದು ಕವನಗಳನ್ನು ಬಳಿಸಿದ್ದಾರೆ, ಆದರೆ ಅವರು ಮಲ್ಲಿಗೆ ಮಾರುವವಳ ಬಗ್ಗೆ ಕವನ ಬಾರೆದಿದ್ದಾರೆಯೇ? ನನಗಂತೂ ಸಿಕ್ಕಿಲ್ಲ. ಯಾರಾದರೂ ಇದರ ಬಗ್ಗೆ ಬೆಳಕು ಚೆಲ್ಲಬಹುದು.

    ನವೋದಯ ಶೈಲಿಯ ಸುಂದರ ಕವನ ವಿಜಯ.

    ಕೇಶವ

    Liked by 2 people

    • ನನ್ನ comment ಗೆ ನನ್ನದೇ comment!

      ಕೆ ಎಸ್ ಎನ್ ಅವರು ಹೂ ಮಾರುವವಳ ಬಗ್ಗೆ ಕವನ ಬರೆದಿದ್ದಾರೆ ಮತ್ತು ಅದು ನನಗೆ ಸಿಕ್ಕಿತು!

      ಕವನದ ಹೆಸರು ‘ಹೂವಾಡಗಿತ್ತಿ’. ‘ಮೈಸೂರು ಮಲ್ಲಿಗೆ’ ಕವಮ ಸಂಕಲನದಲ್ಲೇ ಇದೆ.

      Like

  7. ರಸಿಕತೆಯ ರಸ ಉಕ್ಕಿ ಹೊರಬoದ ಕವನ‌
    ಬಾಬ್ ಕಟ್ಟಿನ ಬಾಲೆಯರ ಸoಖ್ಯೆ ಜಾಸ್ತಿಯಾಗಿ, ಮಲ್ಲಿಗೆಯ ಮುಡಿಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ,
    ಕನ್ನಡನಾಡಿನ ಕoಪುಸೂಸುವ ನಿಮ್ಮ ಕವನ ಬಾಲ್ಯದ ಸವಿ ನೆನಪುಗಳನ್ನು ಹೊರತoದಿತು.
    ಬಹಳ ಸುoದರವಾಗಿದೆ.

    ದಾಕ್ಷಾಯಿನಿ

    Liked by 1 person

Leave a comment

This site uses Akismet to reduce spam. Learn how your comment data is processed.