ಕನ್ನಡ ಬಳಗದ ೨೦೧೮ ಯುಗಾದಿ ಹಬ್ಬ ಮತ್ತು ಡಿ.ವಿ.ಜಿ ಸ್ಮರಣೆ ಒಂದು ವರದಿ

ಅವಿಸ್ಮರಣೀಯ ಯುಗಾದಿ 2018 (ವಿಜಯನರಸಿ೦ಹ ಅವರ ಲೇಖನ )

102317_9Q3A2902

 

‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ‘

ಅಜ್ಜಾರ  (ಬೇಂದ್ರೆಯವರ )ಈ ಹಾಡು ಯುಗಾದಿ ಹಬ್ಬದ ಸಂಭ್ರಮಕ್ಕಿಂತ ಒಂದು ಕೈ ಹೆಚ್ಚು ಸಿಹಿ ಉಣಿಸುತ್ತದೆ.

KBUK 2018 ಯುಗಾದಿ ಆಚರಣೆ ಕೂಡ ಅಷ್ಟೇ ಈ ಹಿಂದೆ ಆಚರಿಸಿದ ಎಲ್ಲಾ ಯುಗಾದಿಗಳಿಗಿ೦ತ ವಿಶೇಷವಾಗಿತ್ತು.ಇದಕ್ಕೆ ಪ್ರಮುಖ ಕಾರಣರು Prof.ಗುರುರಾಜ ಕರಜಗಿಯವರು ನಮ್ಮ ಮುಖ್ಯ ಅತಿಥಿಗಳಾಗಿ ಬಂದಿದ್ದು ಮತ್ತು ಡಿ.ವಿ.ಜಿ ಸ್ಮರಣೆಯ ಹೋಳಿಗೆ ಯೂಟ ಮಾಡಿಸಿದ್ದು .

ಮನೆಯ ಬಾಗಿಲಿನ ತೋರಣಕ್ಕೆ ಆಯ್ದು ತಂದ ವಸಂತ ಮಾಸದ ಅಚ್ಚ ಹಸಿರಿನ ಮಾವಿನ ಎಲೆಗಳಂತೆ  ಪುಟ್ಟ ಪುಟ್ಟ ಹೆಣ್ಣುಮಕ್ಕಳು ರೇಶಿಮೆಯ ದಿರಿಸಿನಲ್ಲಿ ಸಿಂಗರಿಸಿದ್ದರು.

122710_9Q3A3172

 

ನೃತ್ಯ,ಸಂಗೀತ, ಸಾಹಿತ್ಯ, ನಾಟಕ,ಸೇರಿದಂತೆ ಭಾರತೀಯ ಸಂಸ್ಕೃತಿಯ ಬಹುತೇಕ ಕಲೆಗಳು ವೇದಿಕೆಯಲ್ಲಿ  ಮೇಳೈಸಿದ್ದವು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ (KSSVV) ಬಹುದಿನಗಳ ಕನಸಿನ  ಹಂಬೊoದು ಕೊನರಿ ಘಮಘಮಿಸುವ  ಮಲ್ಲಿಗೆಗಳ ಹಡೆದು ಎಲ್ಲವನ್ನೂ ಪೋಣಿಸಿ ಮಾಡಿದ  ದಿಂಡಿನಂತೆ ಇತ್ತು ಕವಿಗಳು ಹೊರತಂದ ‘ಪ್ರೀತಿ ಎಂಬ ಚುಂಬಕ’ ಎನ್ನುವ ಪ್ರೇಮ ಕಾವ್ಯದ ಧ್ವನಿ ಮುದ್ರಿಕೆ.

121242_IMG_2915

 

ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಬದ್ರಿ ಪ್ರಸಾದ್ ಅವರು ನಡೆಸಿಕೊಟ್ಟ ಸಂಗೀತ ರಸಸಂಜೆಯಲ್ಲಿ ಹುಚ್ಚೆದ್ದು ಕುಣಿದರು ಕಲಾರಸಿಕರು ಹಿರಿಯ ಕಿರಿಯರೆನ್ನದೆ.

 

Coventry ಯಲ್ಲಿ April 21ರಂದು ನಡೆದ ಯುಗಾದಿ ಸಂಭ್ರಮದ ವೈವಿಧ್ಯಮಯ ಕಾರ್ಯಕ್ರಮಗಳ ಕಿರು ಪರಿಚಯ ಇದಾಗಿತ್ತು.

 

ಬೆಳಗ್ಗೆ ಹತ್ತು ಗಂಟೆಗೆ ತಿಂಡಿಯನ್ನು ತಿಂದು ನಾವೆಲ್ಲರೂ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೆವು.

ಮೊದಲಿಗೆ KBUK ಯ ಪದಾಧಿಕಾರಿಗಳು ಸಂಘದ ಪರಿಚಯ ಮಾಡಿಕೊಟ್ಟರು, ಅದರ ಹುಟ್ಟು, ಬೆಳೆದು ಬಂದ ಬಗೆ, ಇದಕ್ಕಾಗಿ ಶ್ರಮಿಸಿದ ಎಲ್ಲಾ ಹಿರಿಯ ಜೀವಿಗಳನ್ನು, ಕರೆದು ಸನ್ಮಾನಿಸಿದ್ದು ಅರ್ಥಪೂರ್ಣ ಆರಂಭಕ್ಕೆ ನಾಂದಿ ಹಾಡಿತ್ತು.ಸಂಘವು ಇತ್ತೀಚೆಗೆ ಮಾಡಿದ ಸಾಧನೆಗಳು ಸಮಾಜಕ್ಕೆ ಮರಳಿ ಕೊಡುವ ವಿವಿಧ ಕಾರ್ಯಕ್ರಮಗಳು ಎಲ್ಲರ ಕಿವಿ ಮನಗಳನ್ನು ಸೇರಿತ್ತು ಮತ್ತು ಕೆಲವು ಭಾವುಕ ಕ್ಷಣಗಳು ಸಂಘದ ಬಹುಮಂದಿಯ ಕಣ್ಣಾಲಿಗಳನ್ನು ತೇವವಾಗಿಸಿದ್ದುಸಂಘದ ನಿಸ್ವಾರ್ಥ ಸೇವೆ  ಮತ್ತು ನಿರಂತರ ಬೆಳವಣಿಗೆಯ ಸಾಕ್ಷಿಗೆ ಕನ್ನಡಿ ಹಿಡಿದಿತ್ತು.

 

ಮುಖ್ಯ ಅತಿಥಿಗಳ ಮಿತ ಭಾಷಣವೂ ಆಗಲೇ ನಮ್ಮೆಲ್ಲರನ್ನು ಸಂಜೆ ಅವರು ನಡೆಸಿಕೊಡಲಿದ್ದ ‘ಡಿ.ವಿ.ಜಿ ಸ್ಮರಣೆ’ ಯ ಕ್ಷಣಕ್ಕಾಗಿ ಕಾದು ಕೂರುವ ಕುತೂಹಲ ಕೆರಳಿಸಿತ್ತು.

 

 

ಮಧ್ಯಾಹ್ನದ ಹೊತ್ತಿಗೆ ಊಟದ ಕಡೆ ಹೊರಟ ಜನ ಮತ್ತೆ ನಡೆಯಲಿದ್ದ ವಿವಿಧ ಕಾರ್ಯಕ್ರಮಗಳ ಬಗ್ಗೆ   ಮಾತನಾಡಿಕೊಳ್ಳುತ್ತಿದ್ದುದು ಎಲ್ಲರ ಉತ್ಸಾಹವನ್ನು ಎತ್ತಿ ಹಿಡಿದಿತ್ತು .

ನಡುವೆ Prof. ಗುರುರಾಜ್ ಕರಜಗಿ ಅವರೊಂದಿಗೆ ಫೋಟೊ ತೆಗೆಸಿಕೊಂಡು ಮತ್ತು ಆಟೋಗ್ರಾಫ್ ಪಡೆದುಕೊಂಡು ಕೆಲವು ಜನರು ಪುನೀತ ಭಾವವನ್ನು ತಳೆದರು.ಇದರಲ್ಲಿ ನಾನು ಗಮನಿಸಿದ ಅಂಶವೆಂದರೆ ಎಲ್ಲ ಸೆಲೆಬ್ರಿಟಿಗಳಂತೆ ಅಭಿಮಾನಿಗಳೊಡನೆ ಫೋಟೊ ತೆಗೆಸಿಕೊಂಡು ಅವರನ್ನು ಬೀಳಕೊಡದೆ  ಎಲ್ಲರನ್ನೂ ನಗು ಮುಖದಿಂದ ಮಾತನಾಡಿಸಿ ಅವರ ಪರಿಚಯ ಮಾಡಿಕೊಂಡು  ‘ ಹೌದು ನಾನು ಅದೇ ಶಾಲೆಯಲ್ಲಿ ಓದಿದ್ದು, ಇದೇ ಕಾಲೇಜಿನಲ್ಲಿ ಓದಿದ್ದು ನಮ್ಮಿಬ್ಬರಿಗೂ ಒಬ್ಬರೇ ಗುರುಗಳು ಇದ್ದರಲ್ಲವೇ?’ ಎಂದು ಮನೆ ಮಂದಿಯವರಂತೆ ಎಲ್ಲರನ್ನೂ ಆಪ್ತರೆನ್ನುವಷ್ಟು ಮಾತನಾಡಿಸಿದ ಕರಜಗಿಯವರ ಸರಳತೆಯ ದಿವ್ಯ ದರ್ಶನ ಮಾಡಿಸಿತ್ತು.

ನಂತರ ಒಂದು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು ಮತ್ತೊಂದು ವೇದಿಕೆಯಲ್ಲಿ KSSVV ವತಿಯಿಂದ ಹಮ್ಮಿಕೊಳ್ಳಲಾದ ‘ಮಂಕುತಿಮ್ಮನ ಕಗ್ಗ’ ದ ವಿಚಾರಧಾರೆಯಲ್ಲಿ ಕರಜಗಿಯವರು ಅಧ್ಯಕ್ಷತೆ ವಹಿಸಿದ್ದರು.Dr. ಶ್ರೀವತ್ಸ ದೇಸಾಯಿಯವರು ಅಲ್ಲಿ ನೆರೆದಿದ್ದ ಎಲ್ಲ ಸಾಹಿತ್ಯಾಭಿಮಾನಿಗಳಿಗೆ ಅಧ್ಯಕ್ಷರ ಮಹತ್ವಪೂರ್ಣ ಪರಿಚಯ ಮಾಡಿಕೊಟ್ಟರು.

ನಂತರ ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತ ನನಗೆ ಸ್ವಲ್ಪ ನಡುಕವಿತ್ತು ಎಂದರೆ ಸುಳ್ಳಲ್ಲ.ಕಾರಣ ಮಹಾನ್ ಕವಿಗಳಾದ ಬೇಂದ್ರೆ, ಡಿವಿಜಿ,ಮಾಸ್ತಿ, ರಾಜರತ್ನಂ, ಕೆ.ಎಸ್. ನರಸಿಂಹ ಸ್ವಾಮಿ, ಮತ್ತು ಇನ್ನೂ ಅನೇಕ ಚಿಂತಕರ, ಸಾಹಿತಿಗಳ ಒಡನಾಟವಿದ್ದ ಹಾಗೂ ಸ್ವಯಂ ಲೇಖಕರೂ ಆಗಿರುವ ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ IIT, IIM ಗಳಲ್ಲಿ ಅನೇಕ ಶಿಕ್ಷಣ ಕಾರ್ಯಾಗಾರಗಳನ್ನು ಮಾಡುವ ಮತ್ತು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ (ACT)ಎನ್ನುವ ಪ್ರತಿಷ್ಠಿತ ಸಂಸ್ಥೆಯನ್ನು ಸ್ಥಾಪಿಸಿ ಅದರ ಉಪಯೋಗವನ್ನು ಪ್ರಪಂಚದ ಎಲ್ಲಾ ವಿದ್ಯಾ ಸಂಸ್ಥೆಗಳಿಗೂ  ಮುಟ್ಟಿಸುವ ಕೆಲಸವನ್ನು ಮಾಡುತ್ತಿರುವ ಹಿರಿಯ ಪ್ರತಿಭೆ ಅವರು.ಅವರೆದುರು ಸಿಂಧುವಿನ ಮುಂದೊಂದು ಬಿಂದುವಿನಂತೆ ನಾನು ಕಂಡದ್ದು ಸುಳ್ಳಲ್ಲ.ಆದರೆ ಅಷ್ಟೊತ್ತಿಗಾಗಲೇ ಅವರೊಡನೆ ಸಾಹಿತ್ಯದ ವಿಚಾರವಾಗಿ ಕೆಲವು ಮಾಹಿತಿಗಳು ನನಗಿದ್ದ ಪ್ರಶ್ನೆಗಳನ್ನು ಕೇಳಿ ತಿಳಿಯುವಾಗ ನನಗೆ ಆತ್ಮ ವಿಶ್ವಾಸ ಮೂಡಿತ್ತು.

ಮಂಕುತಿಮ್ಮನ ಕಗ್ಗದ ವಿಚಾರವಾಗಿ KSSVVಯ ಸಾಹಿತ್ಯಾಸಕ್ತರಿಗೆ ತಮಗೆ ಇಷ್ಟವಾದ ಎರಡು ಕಗ್ಗಗಳನ್ನು ಆರಿಸಿ ತಮ್ಮ ತಮ್ಮ ಅನುಭವಾನುಸಾರ ಮತ್ತು ಜ್ಞಾನಾನುಸಾರವಾಗಿ ಅರ್ಥೈಸಿಕೊಂಡು ಬರಹಗಳನ್ನು ಕಳುಹಿಸಿ ಎಂದು ಕೇಳಿಕೊಂಡಾಗ ಹತ್ತು ಮಂದಿ ಆಸಕ್ತಿಯನ್ನು ತೋರಿ ತಮ್ಮ ತಮ್ಮ ಬರಹಗಳನ್ನು ಕಳಿಸಿಕೊಟ್ಟಿದ್ದರು ಮತ್ತು ಅದನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು. Prof.ಕರಜಗಿಯವರು ನಾವು ಅರ್ಥೈಸಿದ  ಒಂದೊಂದು ಕಗ್ಗಕ್ಕೂ ಹೊಂದಿಕೊಂಡ  ಮತ್ತೊಂದು ಕಗ್ಗವನ್ನು ಹೇಳಿ ನಮ್ಮ ಗ್ರಹಿಕೆಗೂ ಮೀರಿದ ಅರ್ಥವನ್ನು ವಿವರಿಸುತ್ತಿದ್ದರೆ ಅವರು ನಮಗೆ ಅಭಿನವ ಡಿ.ವಿ.ಜಿ ಯಂತೆಯೇ ಕಾಣುತ್ತಿದ್ದರು.

ನಮಗೆ ಕೊಟ್ಟ ಒಂದು ಗಂಟೆಯ ಗಡಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದೆವು.ಸಭಿಕರೆಲ್ಲರೂ ‘ಕಾರ್ಯಕ್ರಮ ಇಷ್ಟು ಬೇಗ ಮುಗಿದು ಹೋಯಿತೇ?’  ಎಂದು ಮಾತನಾಡಿಕೊಳ್ಳುತ್ತಿದ್ದು ಕಗ್ಗದ ಜನಪ್ರಿಯತೆ  ಮತ್ತು ಕನ್ನಡ ಸಾಹಿತ್ಯದ ಮೇಲಿನ ಅಭಿಮಾನ ಎತ್ತಿ ತೋರುತ್ತಿತ್ತು.

 

Dr. ಸುಮನಾ ನಾರಾಯಣ್ ಅವರು ಡಿವಿಜಿ ಅವರ  ‘ಏನೀ ಮಹಾನಂದವೇ’ ಎಂಬ ಹಾಡಿಗೆ ಅದ್ಭುತವಾಗಿ ಭರತನಾಟ್ಯ ಪ್ರದರ್ಶಿಸಿದರು ಅವರ ನೃತ್ಯದ ಒಂದೊಂದು ಭಂಗಿಯೂ ಸಾಕ್ಷಾತ್ ನಾಟ್ಯ ಶಾರದೆಯ ಅವತಾರದಂತೆ ತೋರಿತ್ತು ಇದನ್ನು ಸ್ವತಃ ಪ್ರೊಫೆಸರ್ ಕರಜಗಿಯವರು ಪ್ರಶಂಸಿಸಿದರು.

KSSVV ವತಿಯಿಂದ ಪ್ರದರ್ಶಿಸಿದ ನಗೆನಾಟಕ ‘ಫೋನಾಯಣ’ ನೋಡುಗರ ಗಮನ ಸೆಳೆದಿತ್ತು.

ಮತ್ತೊಂದು ಯುವಕರ ತಂಡದಿಂದ ಮತ್ತೊಂದು ಯುವಕರ ತಂಡದಿಂದ ‘ಶ್ರೀಕೃಷ್ಣ ಸಂಧಾನ’ ಎಂಬ ನಗೆ ನಾಟಕವೂ ಕೂಡ  ನೋಡುಗರ ಗಮನ ಸೆಳೆದಿತ್ತು ಮತ್ತು ಕನ್ನಡ ಉಚ್ಚಾರಣೆಯ ತಪ್ಪಿದರೆ ಏನೆಲ್ಲ ಎಡವಟ್ಟಾಗಬಹುದು ಎನ್ನುವ ಸಂದೇಶವನ್ನು ಕೊಟ್ಟಿತ್ತು .

 

150508_9Q3A3607

 

ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ಮುಗಿದ ಮೇಲೆ ಬಹು ನಿರೀಕ್ಷಿತವಾದ ಪ್ರೊಫೆಸರ್ ಕರಜಗಿಯವರ ಭಾಷಣಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದರು. ಪ್ರೊಫೆಸರ್ ಕರಜಗಿಯವರು ಅದ್ಭುತ ವಾಗ್ಮಿಗಳು ಮತ್ತು ಅಪಾರ ಜ್ಞಾನವುಳ್ಳವರು ಎಂಬುದನ್ನು ನಾವು ಅಂತರ್ಜಾಲಗಳಲ್ಲಿ ಅಥವಾ ಧ್ವನಿ ಮುದ್ರಿಕೆಗಳಲ್ಲಿ  ನೋಡಿ, ಕೇಳಿ ತಿಳಿದುಕೊಂಡಿದ್ದೆವು.ಆದರೆ ಪ್ರತ್ಯಕ್ಷವಾಗಿ ನೋಡಿದ ಅಂದು ನಮಗೆ ಡಿ.ವಿ.ಜಿ ಸ್ಮರಣೆಯ ಮೂಲಕ ಅವರ ವಿರಾಟ್ ದರ್ಶನವನ್ನು ನಮಗೆ ಮಾಡಿಸಿದರು.ಅವರ ಭಾಷಣ ಮುಗಿದ ಮೇಲೆ ಸುಮಾರು ಐದು ನಿಮಿಷಗಳ ಕಾಲ ಅವಿರತವಾಗಿ ಸಭೆಯಲ್ಲಿ ಚಪ್ಪಾಳೆಯ ಮೊರೆಯಲೆ ಕೇಳಿ ಬಂದಿದ್ದು ಯುಗಾದಿ ಸಂಭ್ರಮಾಚರಣೆಯ  ಯಶಸ್ಸನ್ನು ಸಾರಿತು.

173121_9Q3A4017

 

6 thoughts on “ಕನ್ನಡ ಬಳಗದ ೨೦೧೮ ಯುಗಾದಿ ಹಬ್ಬ ಮತ್ತು ಡಿ.ವಿ.ಜಿ ಸ್ಮರಣೆ ಒಂದು ವರದಿ

  1. ಚಿಕ್ಕ ಚೊಕ್ಕ ವರದಿ, ಸುಂದರ ಚಿತ್ರಗಳು.

    ಜಿಕೆ ಬಂದಿದ್ದು ನಮ್ಮ ಭಾಗ್ಯ.

    ಸಿಡಿ ಶ್ರೇಯ ಪ್ರೇಮ್ಮಲತಾ ಅವರದು.

    ಪುಷ್ಪಮಲಾ ಪ್ರಸಂಗೇನ ಎನ್ನುವಂತೆ ನನ್ನದೊಂದು ಹಾಡೂ ಸೇರಿತು.

    – ಕೇಶವ

    Liked by 1 person

  2. ಅನಿವಾಸಿ ಕನ್ನಡ ಬಳಗ ಯುಕೆ .ಯವರ ಸಂಭ್ರಮದ ಯುಗಾದಿ ಆಚರಣೆಯ ಓದಿ ಮನ ಹಿಗ್ಗಿ ನಲಿಯಿತು.ಹಬ್ಬದ ಆಚರಣೆ ಬರೀ ಉಂಡು ತಿಂದು ನಲಿಯುವುದಲ್ಲ ಅದಕ್ಕೂ ಹೆಚ್ಚಿನ ದೇನೋ ಇದೆ ಎಂಬುದನ್ನು ತುಂಬಾ ಸುಂದರ ವಾಗಿ ತೋರಿಸಿ ಕೊಟ್ಟಿದೆ ಕನ್ನಡ ಬಳಗ ಯುಕೆ.” ಪ್ರೀತಿ ಎಂಬ ಚುಂಬಕ”-ಆ ಸಿ.ಡಿ.ಯ ಹಾಡುಗಳನ್ನು ಕೇಳುವ ಹುಚ್ಚು ಹಂಬಲ ನನಗೆ.ಯಾವಾಗ ಆ ಅವಕಾಶ ಸಿಕ್ಕೀತು ಅಂತ ಕಾಯ್ತಿದೀನಿ.ಎಲ್ಲ ಕವಿಗಳಿಗೂ ನನ್ನ ಹೃದಯದಾಳದ ಅಭಿನಂದನೆಗಳು.ಹಾಗೆಯೇ ಕತೆಗಾರರಿಗೂ.
    ಇದಕ್ಕೂ ಮಿಗಿಲಾಗಿ ಗುರುರಾಜ ಕರ್ಜಗಿ ಅವರಂಥ ಅಪ್ರತಿಮ ವಾಗ್ಮಿ ಯು, ಚಿಂತಕನ ಚಿಂತನಾ ಪೂರಿತ ಮಾತುಗಳಲ್ಲಿ ತೇಲಿ ಹೋಗುವ, ಅವರೊಂದಿಗೆ ಡಿವಿಜಿ ಯವರ ಸ್ಮರಣೆ ಯಲ್ಲಿ ಒಂದು ಸಂಜೆ ಕಳೆಯುವ ಅವಕಾಶ ಗಳಿಸಿದ ಕನ್ನಡ ಬಳಗ ಯುಕೆ.ಯ ಬಗ್ಗೆ ನನಗೆ ಹೆಮ್ಮೆ.ಎಷ್ಟೊಂದು ಸಾರ್ಥಕ್ಯದ ಪರಮಾವಧಿ ಈ ಯುಗಾದಿ ಆಚರಣೆ ಎಂಬ ಆಲೋಚನೆ ಹೊಳೆದು ಮನ ತುಂಬಿ ಬಂತು.ನಿಜಕ್ಕೂ ಇದು ಅವಿಸ್ಮರಣೀಯ ಯುಗಾದಿಯೇ ಸರಿ.ಈರೀತಿ ತಾಯ್ನಾಡಿನ ಸಂಭ್ರಮ, ಸಂಪ್ರದಾಯ ಗಳನ್ನ ಬಿಡದೇ ಸಡಗರದಿಂದ , ಅಪೂರ್ವ ವಾಗಿ ಆಚರಿಸಿಕೊಂಡು ಬರುತ್ತಿರುವ ಕನ್ನಡ ಬಳಗ ಕ್ಕೆ ನನ್ನ ಅಭಿನಂದನೆಗಳು ಮತ್ತು ಧನ್ಯವಾದಗಳು.ಪ್ರತಿಯುಗಾದಿಯೂ ಒಂದು ಹೊಸ ತನ ತರಲಿ, ಕನ್ನಡ ಬಳಗ ಯುಕೆ ‌‌ ಯ ಬಳ್ಳಿ ಯಾವಾಗಲೂ ಹಸಿರು ತುಂಬಿ ಕೊನರಲಿ ಎಂಬುದು ನನ್ನ ಆಶಯ.
    ಸರೋಜಿನಿ ಪಡಸಲಗಿ

    Liked by 2 people

  3. My Best Wishes to all the authors of the Collection of Poems & Short stories on ‘Anivasigala Angaladinda’ . Truly Admired all the poems and Short Stories published in the book . They are so simple and easy to relate to. Some of the stories take you down our Sweet Memory Lane. “A Home away from Home”. The Ugadi Event was truly a lovely experience.

    Liked by 1 person

    • ಶುಭಾ ಅವರೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.ಬರಹಗಾರರಿಗೆ ಇನ್ನೇನೂ ಬೇಡ, ಇಂಥ ಉತ್ತೇಜನ ಬಿಟ್ಟು. ನೀವೂ ಬರೆದು ಕಳಿಸಬಹುದಲ್ಲ, ಬರಹವೋ, ಕವನವೋ. ಯಾವಾಗಲೂ ಸ್ವಾಗತ! ನನಗಂತೂ ಯುಗಾದಿ ಕಾರ್ಯಕ್ರಮ ಬಹಳ ಸಂತಸ ತಂದಿತು. ತಪ್ಪದೆ ಬರುತ್ತಾ ಇರಿ!

      Liked by 1 person

  4. Sure, it was. Thank you for taking the trouble to comment, Arun ಅವರೆ! One wouldn’t have missed it for the world. Your own experience of those 3 days probably linger in your memory for years to come!

    Like

  5. I am a great fan of Gururaj Karajagi. Recently when he spoke about DVG’s “Baaligondu nambike” at dharwad, vidyavardhak Sangha Hall was overflowing. It must have been a memorable experience for all of you.

    Liked by 1 person

Leave a comment

This site uses Akismet to reduce spam. Learn how your comment data is processed.