ಸುಮನ್ ನಗರ್ಕರ್ ಅವರೊಂದಿಗೆ ಆತ್ಮೀಯ ಸಂವಾದ- ಡಾ. ಪ್ರೇಮಲತ ಬಿ.

ಯುಗಾದಿ ಹಬ್ಬ  ಈ ವರ್ಷ  ಮಾರ್ಚ್  ತಿಂಗಳಲ್ಲೇ ಬಂದು ಹೋಯ್ತು. ಆದರೆ ಯು.ಕೆ.  ಕನ್ನಡಿಗರಿಗೆ ಇಡೀ ಏಪ್ರಿಲ್ ನ ವಾರಾಂತ್ಯಗಳೆಲ್ಲ ಯುಗಾದಿಯ ಕಂಪನ್ನು ಸೂಸುವ ದಿನಗಳಾಗಿವೆ. ಕನ್ನಡದ ಕುಹೂ… ಈ ತಿಂಗಳೆಲ್ಲ ಕಿವಿಯನ್ನು ತುಂಬುವ ಹರ್ಷ!  ಸಿನಿಮಾ, ಸಂಗೀತ, ಸಾಹಿತ್ಯ ,ಸಾಂಸ್ಕೃತಿಕ ಕಾರ್ಯಕ್ರಮಗಳ  ಹಸಿರು ತೋರಣ. ಹೊಸಬೇರು , ಹಳೆ ಚಿಗುರುಗಳೆಲ್ಲ  ತಾಜಾತನದಿಂದ ಮೈ ತುಂಬಿಕೊಳ್ಳುವ ಸಮಯವಿದು.  ಸ್ವಚ್ಛ, ಶುಭ್ರ ಚೈತನ್ಯದಲ್ಲಿ ನಳ ನಳಿಸುವ ಈ ಸಮಯ ಯು.ಕೆ. ಕನ್ನಡಿಗರ ಕಣ್ಮನಗಳನ್ನು ಸಡಗರದ ಕಲರವಗಳಿಂದ ತುಂಬುವ ಸಂಭ್ರಮದ ಸಮಯ.

ಏಪ್ರಿಲ 8 ರಂದು ಡಾನ್ಕ್ಯಾಸ್ಟರಿನ ಮತ್ತು ಸುತ್ತಲ ಕನ್ನಡಿಗರಿಗೆ ಹೊಚ್ಚ, ಹೊಸ ಕನ್ನಡ ಸಿನಿಮಾವನ್ನು ವೀಕ್ಷಿಸುವ ಅವಕಾಶ. ಹೊಚ್ಚ, ಹೊಸತೆಂದರೆ ಇನ್ನೂ ಕರುನಾಡಿನಲ್ಲೇ ವಾಣಿಜ್ಯ ಮಟ್ಟದಲ್ಲಿ ಬಿಡುಗಡೆಯಾಗಿರದ, ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡು  ಅಂತರ ರಾಷ್ಟ್ರೀಯ ಮಟ್ಟದ ಸಿನಿಮಾ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡಿರುವ ‘ಜೀರ್ಜಿಂಬೆ’ ಎನ್ನುವ ಕುತೂಹಲಕರ ಹೆಸರನ್ನು ಹೊತ್ತ ಸಿನಿಮಾ. ಹೊಸ ಭರವಸೆಗಳ  ಯುವ ಸರದಾರ ಕಾರ್ತಿಕ್ ಸರಗೂರು ಅವರ ನಿರ್ದೇಶನದ ಚಿತ್ರ.

ಕನ್ನಡ ಸಿನಿಮಾದಲ್ಲಿ ಹೊಸತನ್ನು ಬಯಸುವವರಿಗೆ, ಹೊಸತನ್ನು ಕೊಡುವ ಉತ್ಸಾಹೀ ಜನರಿದ್ದಾರೆ. ಈ ಬಾರಿ  ಅಂತಹ ಉತ್ಸಾಹದ ಮೂಟೆಯನ್ನೊತ್ತು  ಕ್ಯಾಲಿಫೋರ್ನಿಯಾದ ಫೋಲ್ಸಾಮ್ ನಿಂದ ಬಂದಿಳಿದವರು ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಮತ್ತು ಅವರ ಪತಿ ಗುರುದೇವ್ ನಾಗರಾಜ್.  ಏಪ್ರಿಲ್ 14 ರಂದು  ನಡೆಯುತ್ತಿರುವ ಕನ್ನಡಿಗರು ಯು.ಕೆ. (ಕೆ.ಯು.ಕೆ) ಆಯೋಜಿಸಿಕೊಂಡಿರೋ ಯುಗಾದಿ ಹಬ್ಬಕ್ಕೆ ಅತಿಥಿಗಳಾಗಿ ಬಂದಿರುವ ಅವರು ಇದೇ ಅವಕಾಶವನ್ನು ಸದುಪಯೋಗಿಸಿಕೊಂಡು ‘ಜೀರ್ಜಿಂಬೆ’ ಚಿತ್ರದ ಜೊತೆ ಯು.ಕೆ.ಯ ಹಲವೆಡೆ  ಪ್ರಯಾಣ  ಮಾಡಿ, ಈ ಸಿನಿಮಾದ ಪ್ರದರ್ಶನ ನೀಡಿ ಒಂದು ಉತ್ತಮ ಸಿನಿಮಾಕ್ಕೆ ರಾಯಭಾರಿಗಳಾಗಿ ಕೆಲಸಮಾಡುವ ಉತ್ಸಾಹ ತೋರಿದ್ದಾರೆ.

ಚಿತ್ರ ಕೃಪೆ- ಗುರುದೇವ್ ನಾಗರಾಜ್                                                 

ಸುಮನ್ ನಗರ್ಕರ್  1993-2001 ರವರೆಗೆ ನಿಷ್ಕರ್ಷ, ನಮ್ಮೂರ ಮಂದಾರ ಹೂವು, ಬೆಳದಿಂಗಳ ಬಾಲೆ, ಅಮ್ಮಾವ್ರ ಗಂಡ, ದೋಣಿಸಾಗಲಿ, ಹೂ ಮಳೆ, ಮುಂಗಾರಿನ ಮಿಂಚು, ರೆ.., ಯಕ್ಷಪ್ರಶ್ನೆ, ಪ್ರೀತ್ಸು ತಪ್ಪೇನಿಲ್ಲ ಮುಂತಾದ ಚಿತ್ರಗಳಲ್ಲಿ ನಾಯಕ ನಟಿಯ ಪಾತ್ರದಿಂದ ಹಿಡಿದು, ನಾನಾ ಬಗೆಯ ಪಾತ್ರಗಳಲ್ಲಿ ನಟಿಸಿದ ಕಲಾವಿದೆ. ಸುನಿಲ್ ಕುಮಾರ್ ದೇಸಾಯಿ, ನಾಗತಿ ಹಳ್ಳಿ ಚಂದ್ರಶೇಖರ್ ಮುಂತಾದ ನಿರ್ದೇಶಕರ ಗರಡಿಯಲ್ಲಿ ಪಳಗಿದ ಪ್ರಬುದ್ದ ನಟಿ. ಆದರೂ ಈ ಎಂಟು ವರ್ಷಗಳ ಕಾಲದಲ್ಲಿ ಈ ನಟಿಗೆ ಸವಾಲೆಸೆಯುವ ಪಾತ್ರಗಳು ದೊರಕಿದ್ದು ಕಡಿಮೆಯೇ. ರಂಗಭೂಮಿಯಲ್ಲಿ ನಟಿಸಿದ ಅನುಭವದ ಗುರುದೇವ್ ರನ್ನು ಮದುವೆಯಾಗಿ ಅಮೆರಿಕಾಗೆ ಹೋಗಿ ಈ ನಟಿ 15 ವರ್ಷಗಳ ಕಾಲ ಸುದ್ದಿಯಿಲ್ಲದೆ ಕಣ್ಮರೆಯಾಗಿದ್ದವರು. ಈ ಕಾಲದಲ್ಲಿ ಬದುಕು ಕೊಟ್ಟ ಎಲ್ಲ ಬಗೆಯ ಅನುಭವಗಳ ಮೂಸೆಯಲ್ಲಿ ಪಳಗಿದ ಮೇಲೆ ಮತ್ತೆ ಯಾಕಾಗಬಾರದು ಅಂತ ನಾಗತಿಯವರು ಕೊಟ್ಟ ಕರೆಗೆ ಓಗೊಟ್ಟು 2016 ರಲ್ಲಿ ಮರಳಿ ಬಂದದ್ದು ‘ಇಷ್ಟಕಾಮ್ಯ’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಮದುವೆಯೆನ್ನುವ ದೇಗುಲದ ನೈಜ  ಮೌಲ್ಯಗಳನ್ನು ಪ್ರಶ್ನಿಸುವ, ಅದನ್ನು ಹೊರತುಪಡಿಸಿಯೂ ಇರಬಹುದಾದ ಗಂಡು-ಹೆಣ್ಣಿನ ಸಂಭಂದವನ್ನು ಪ್ರತಿಪಾದಿಸುವ ಪಾತ್ರ.  ಈ ಪಾತ್ರ ದೊರಕಿದ್ದು ಅಕಸ್ಮಿಕವೋ , ಮತ್ತೊಂದೋ ಒಟ್ಟಿನಲ್ಲಿ ಇವರ ಚಿತ್ರರಂಗದ ವೃತ್ತಿಯಲ್ಲಿ ಹೊಸ ತಿರುವುಗಳು ತೆರೆದುಕೊಂಡಿವೆ! ಈ ನಟಿ  ನಟನೆಯನ್ನು ಮೀರಿ ಬೆಳೆದು ನೆಟ್ವರ್ಕಿಂಗ್, ನಿರ್ದೇಶನ, ನಿರ್ಮಾಣ ಮತ್ತು ಹೊಸಬಗೆಯ ಚಿತ್ರ ನಿರ್ಮಾಣಗಳಿಗೆ ಯೋಜನೆ ಹಾಕಿದ್ದಾರೆ. ಈ ನಟಿಯ ಬೆಂಬಲಕ್ಕೆ ಗಂಡ ಗುರುದೇವ್ ಪೂರ್ಣ ಪ್ರಮಾಣದಲ್ಲಿ ನಿಂತಿದ್ದಾರೆ.

ಚಿತ್ರರಂಗದ ಬಗ್ಗೆ  ವಸ್ತುನಿಷ್ಠ ಅರಿವಿದ್ದು, ಸಿನಿಮಾದ ತಳುಕು-ಬಳುಕುಗಳಿಗೆ ಬಗ್ಗದ ಈ ಪ್ರತಿಭಾನ್ವಿತ ನಟಿ,  15 ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿ ಬಂದಿದ್ದಾದರೂ ಹೇಗೆ? ಯಾಕೆ? ಯಾವ ಭರವಸೆಯ ಮೇಲೆ? ಅವರ ಮುಂದಿನ ಯೋಜನೆಗಳೇನು? ಅನ್ನುವ ಕೂತೂಹಲ ನನ್ನನ್ನು ಕಾಡುತ್ತಿತ್ತು.

ಜೀರ್ಜಿಂಬೆಯ ಪ್ರದರ್ಶನವನ್ನು ಡಾನ್ಕ್ಯಾಸ್ಟರಿನಲ್ಲಿ ಆಯೋಜಿಸಿದವರು  ಸುಮನಾ  ಮತ್ತು  ಡಾ. ಗಿರೀಶ್ ವಶಿಷ್ಠ ದಂಪತಿಗಳು.  ಇವರ ಮನೆಯಲ್ಲಿಯೇ ಸುಮನ್ ನಗರ್ಕರ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು. ತಮ್ಮ ಮೂರು ದಿನದ ಹೊಸ ಕೂಸಾದ ಕ್ಯಾಮೆರಾವನ್ನು ಜೊತೆಗೆ ಹಳೆಯ ಕ್ಯಾಮರಾ ಮತ್ತು ಮೈಕ್ರೋಫೋನುಗಳನ್ನು ತಮ್ಮ ಎಂದಿನ ಉತ್ಸಾಹದಿಂದ ತಂದವರು  ಡಾ. ಶ್ರೀವತ್ಸ ದೇಸಾಯಿ .ಈ ಸಂದರ್ಭದಲ್ಲಿ ‘ಅನಿವಾಸಿ’ ತಂಡದ ಪರವಾಗಿ ಸುಮನ್ ನಗರ್ಕರ್ ಅವರೊಡನೆ ಭೇಟಿ ಮಾಡಿ ನನ್ನನ್ನು ಕಾಡಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ನಡೆಸಿದ ಸಂವಾದದ ಸಾರಾಂಶವಿದು.  ಇದೇ  ಸಂದರ್ಶನದ ತುಣುಕನ್ನು   ದೇಸಾಯಿಯವರ ವಿಡೀಯೋ ಮೂಲಕ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:  https://www.youtube.com/watch?v=xkp_uKZwqcQ

ಪ್ರ : ಯು. ಕೆ. ಕನ್ನಡಿಗರನ್ನು ಇದೇ ಮೊದಲ ಬಾರಿಗೆ  ಎಡಿನ್ಬರೋ, ಡಾನ್ಕ್ಯಾಸ್ಟರ್, ಲಂಡನ್, ಬ್ರಿಸ್ಟಲ್ ಮುಂತಾದ ನಗರಗಳಲ್ಲಿ  ಭೇಟಿ ಮಾಡ್ತಿದ್ದೀರಿ. ಈ ಬಗ್ಗೆ ಏನನ್ನಿಸ್ತಾ ಇದೆ?

ತುಂಬ ಸಂತೋಷ ಆಗ್ತಾ ಇದೆ. ನಾವು ಸ್ಕಾಟ್ಲ್ಯಾಂಡಿಗೆ ಈ ಮೊದ್ಲು ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ಗ್ಲಾಸ್ಗೋ, ಎಡಿನ್ಬರೋ ಕಡೆ ಹೋಗಿದ್ದು. ಅಲ್ಲಿ ಇಬ್ಬರು , ಮೂವರು ಕನ್ನಡಿಗರ ಮನೇಲಿ ಉಳಕೊಂಡಿದ್ವಿ. ಆಶ್ಚರ್ಯ ಅಂದರೆ ಹೊಸ ಪರಿಚಯ ಅಂತ ಅನ್ನಿಸ್ಲೇ ಇಲ್ಲ. ಕಾರ್ಯಕ್ರಮಾನು ಚೆನ್ನಾಗಿ ನಡೀತು. ಇವತ್ತು ಡಾನ್ಕ್ಯಾಸ್ಟರಿನ ಕನ್ನಡಿಗರನ್ನು, ನಿಮ್ಮನ್ನೆಲ್ಲ ಭೇಟಿ ಮಾಡ್ತಾ ಇದ್ದೀವಿ. ಜೀರ್ಜಿಂಬೆ ಚಿತ್ರದ ಪ್ರದರ್ಶನನೂ ನಡೀತಾ ಇದೆ. ಇದೇ ಸಿನಿಮಾ ಲಂಡನ್ ಮತ್ತೆ ಬ್ರಿಸ್ಟಲ್ ನಲ್ಲೂ ಪ್ರದರ್ಶನ  ಕಾಣುವುದಿದೆ.ಇದೆಲ್ಲ ಯು.ಕೆ ಕನ್ನಡಿಗರನ್ನು ಭೇಟಿ ಮಾಡೋ ಒಳ್ಳೇ ಅವಕಾಶ ಕೂಡ. ಇವೆಲ್ಲ ಆತ್ಮೀಯವಾದ ಭೀಟಿಗಳು ಅಂತ ಅನ್ನಿಸ್ತಾ ಇದೆ

ಪ್ರ:   ಈ ಓಡಾಟದ ಮೂಲಕ, ಯು.ಕೆ ಕನ್ನಡಿಗರನ್ನು ಭೇಟಿ ಮಾಡೋ ಮೂಲಕ ಏನನ್ನಾದರೂ ಸಾಧಿಸೋ ಉದ್ದೇಶ, ಹಂಬಲ ಇದೆಯಾ?

ಅಫ್ಕೋರ್ಸ್. ಮುಖ್ಯವಾಗಿ ನೆಟ್ವರ್ಕಿಂಗ್. ನಮ್ಮ ಪರಿಚಯಾನಾ ಇನ್ನೂ ವಿಶಾಲಗೊಳಿಸ್ಕೊಳ್ಳೋ  ಉದ್ದೇಶ ಇದೆ. ಜೊತೆಗೆ ಜೀರ್ಜಿಂಬೆ ಸಿನಿಮಾವನ್ನು ಪ್ರದರ್ಶಿಸೋ ಅವಕಾಶ ಸಿಗ್ತಾ ಇದೆ.ಇದೊಂದು ಒಳ್ಳೆ ಚಿತ್ರ. ನಾಲ್ಕು ರಾಜ್ಯ ಪ್ರಶಸ್ತಿ ಪಡೆದಿರೋ ಚಿತ್ರ. ಸಾಮಾಜಿಕ ತಿಳಿವಳಿಕೇನ ಹೆಚ್ಚಿಸೋ ಅಂತ ಚಿತ್ರ. ಅದನ್ನೇ ಈ ಭೇಟಿ ಮೂಲಕ ಮಾಡ್ತಾ ಇದ್ದೀವಿ.

ಚಿತ್ರ ಕೃಪೆ- ಗುರುದೇವ್ ನಾಗರಾಜ್

ಪ್ರ: ಎಂಟು ವರ್ಷಗಳ ನಿಮ್ಮ ಮೊದಲ ಭಾಗದ ಸಿನಿಮಾ ವೃತ್ತಿಯಲ್ಲಿ ಬಹಳ ವಿರಳವಾಗಿ ಅಭಿನಯಿಸಿದ್ರಿ. ಯಾಕೆ? ಇದು ನಿಮ್ಮ ಆಯ್ಕೆ ಆಗಿತ್ತಾ ಅಥವಾ ಚಿತ್ರ ರಂಗ ನಿಮ್ಮ ಪ್ರತಿಭೆನಾ ಸರಿಯಾಗಿ ಉಪಯೋಗಿಸ್ಕೊಳ್ಳಲಿಲ್ಲವಾ?

(ನಗ್ತಾ) ಇದು ನಿಜ. ನಾನು ಬಹಳ ವಿರಳವಾಗಿ ನಟಿಸಿದ್ದು. ಸಂಖ್ಯೆ ದೃಷ್ಟಿಯಿಂದ ನೋಡಿದ್ರೆ ಇನ್ನೂ ತುಂಬಾ ಚಿತ್ರಗಳಲ್ಲಿ ಮಾಡಬಹುದಿತ್ತು. ಆದ್ರೆ ನಾನು ಪಾತ್ರಕ್ಕೆ ಪ್ರಾದಾನ್ಯತೆ ಕೊಡ್ತಾ ಇದ್ದೆ.  ಹೀರೋಯಿನ್ನೇ ಇರಬಹುದು, ನಮ್ಮೂರ ಮಂದಾರ ಹೂವಲ್ಲಿ ತಂಗಿ ರೋಲೇ ಇರಬಹುದು, ಮುಂಗಾರಿನ ಮಿಂಚಲ್ಲಿ ಸೆಕೆಂಡ್ ಹೀರೊಯಿನ್ ರೋಲು, ಅಮ್ಮಾವ್ರ ಗಂಡದಲ್ಲಿ ವಿಲನ್ನು ಹೀಗೆ ಬೇರೆ ಬೇರೆ ಪಾತ್ರದಲ್ಲಿ ಮಾಡಿದ್ದು. ಆದ್ರೆ ಪಾತ್ರಗಳು ಮನಸ್ಸಲ್ಲಿ ನಿಲ್ಲೋ ಅಂತವು. ಹಾಗಾಗಿ ತುಂಬಾ ಚೂಸಿಯಾಗಿದ್ದೆ ಅಂತ ಹೇಳಬಹುದು. ಜೊತೆಗೆ ಆಯ್ಕೆ ಮಾಡಿಕೊಳ್ಳೋಕೆ ಅವಕಾಶಗಳು ಹೆಚ್ಚು ಸಿಗಲಿಲ್ಲ. ಹಾಗಾಗಿ ಸಂಖ್ಯೆ ಕಡಿಮೇನೆ ಅಂತ ಹೇಳಬಹುದು.

ಪ್ರ: ಇಷ್ಟಕಾಮ್ಯದ ಮೂಲಕ ಸಿನಿಮಾ ರಂಗದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸಿದ್ದೀರಿ. 15 ವರ್ಷಗಳ ಬ್ರೇಕ್ ನಂತರ ಇದು ನಡೆದದ್ದು ಹೇಗೆ?

ನಾನು ಮದುವೆ ಆಗಿ ಅಮೆರಿಕಾಗೆ ಹೋದ ಮೇಲೆ ಬ್ರೇಕ್ ತಗೋತೀನಿ ಅಂತಲೇ ಗೊತ್ತಿರಲಿಲ್ಲ. ಇಂಟೆನ್ಷನಲ್ ಆಗಿ ಬ್ರೇಕ್ ತಗೊಳ್ಳಲಿಲ್ಲ. ಬಂದು –ಹೋಗಿ ಮಾಡ್ತಾ ಅಭಿನಯಿಸೋಣ ಅಂತಲೇ ಅಂದು ಕೊಂಡಿದ್ದು. ಆದ್ರೆ ಜನ ಇವರು ಅಮೆರಿಕಾಗೆ ಹೋದ ಮೇಲೆ ಇಲ್ಲಿ ಆಕ್ಟ್ ಮಾಡಲ್ಲ ಅಂತ ಅಸ್ಯೂಮ್ ಮಾಡ್ಕೊಂಬಿಟ್ಟರು. ಹಾಗೇ ವರ್ಷಗಳು ಕಳೆದು ಹೋದವು.

2-3 ವರ್ಷಗಳ ಕೆಳಗೆ ನಾಗತಿಹಳ್ಳಿಯವರು  ಎರಡ್ಮೂರು ಬಾರಿ ಅಮೆರಿಕಾಗೆ ಬಂದು, ನಮ್ಮನೇಲೆ ಉಳಕ್ಕೊಂಡಿದ್ದರು. ಯಾಕೆ ಅವರ ಸಿನಿಮಾದಲ್ಲಿ ಮಾಡಬಾರದು ಅಂತ ಕೇಳಿದ್ರು. ಆ ಟೈಂನಲ್ಲಿ ಅವರು ‘ಇಷ್ಟಕಾಮ್ಯ’ ಸಿನಿಮಾ ಮಾಡ್ತಿದ್ರು. ಅದರಲ್ಲೊಂದು ಪಾತ್ರ ಮಾಡಿ ಅಂದ್ರು. ಚಿಕ್ಕ ಪಾತ್ರ, ಆದ್ರೂ ಉತ್ತಮ ಪಾತ್ರ . ಹಾಗಾಗಿ ಮತ್ತೆ ಎಲ್ಲ ಶುರುವಾಯ್ತು.

ಚಿತ್ರ ಕೃಪೆ-ಡಾ. ಶ್ರೀವತ್ಸ ದೇಸಾಯಿ

ಪ್ರ: ಈ ಎರಡನೇ ಇನ್ನಿಂಗ್ಸ್ನಲ್ಲಿ ನಿಮ್ಮದು ಪ್ರಬುದ್ದವಾದ, ವಿಚಾರವಾದಿ ಪಾತ್ರಗಳು. ಒಂದು ಸಂದರ್ಶನದಲ್ಲಿ ವಯಸ್ಸಾದ ನಟ –ನಟಿಯರಿಗೆ (ಹೀರೋಗಳನ್ನು ಹೊರತುಪಡಿಸಿ)  ನಮ್ಮಲ್ಲಿ ಹೆಚ್ಚಿನ ಅವಕಾಶಗಳಿಲ್ಲ ಅಂತ  ನೀವು ಹೇಳಿದ್ದೀರಿ. ಈ ಬಗ್ಗೆ ಸ್ವಲ್ಪ ವಿಸ್ತಾರವಾಗಿ ಹೇಳಿ.

ಕನ್ನಡ ಚಿತ್ರರಂಗನೇ ಅಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲಿ  ನಟಿಗೆ 30 ರಿಂದ 40 ವರ್ಷ ಆಗಿಬಿಟ್ರೆ ಅಲ್ಲಿಗೆ ಮುಗಿದೇ ಹೋಯ್ತು.ಅವರಿಗೆ ಉತ್ತಮ ಪಾತ್ರ ಸಿಗೋದು ನಿಂತು ಹೊಗುತ್ತೆ. ಅದೇ ಇಂಗ್ಲೀಷ್ ಸಿನಿಮಾದಲ್ಲಿ ಒಳ್ಳೇ ಕಥೆ ಇದ್ರೆ,ಖಂಡಿತಾ ಪಾತ್ರ ಸಿಗತ್ತೆ. ನಮ್ಮಲ್ಲಿ ನಟಿ ಅಂದ್ರೆ ಬರೀ, ಹಾಡು,ಕುಣಿತ ,ಲವ್ ಬರೀ ಇಷ್ಟೇ ಅಗಿದೆ. ಹಾಗಾಗೇ ನಾನು ಮೊದಲಿಂದ ಪಾತ್ರಗಳ ಬಗ್ಗೆ ನಿಖರ ಆಯ್ಕೆ ಇಟ್ಕೊಂಡಿದ್ದೆ.

ಆದರೆ ಇತ್ತೀಚೆಗೆ ಕೆಲವು ಹೊಸ ನಿರ್ದೇಶಕರು ಹೊಸ ಕಾನ್ಸೆಪ್ಟುಗಳನ್ನು ಒಪ್ಕೋತಾ ಇದ್ದಾರೆ.ಹೊಸ ಹೊಸ ವಿಚಾರಧಾರೆಗಳಿವೆ. ಹೊಸ ಥರದ ಕಥೆಗಳನ್ನು ತರ್ತಾ ಇದ್ದಾರೆ.ಈ ಕಾರಣ ಬೇರೆ ಥರದ ಪಾತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಮಾಡಬಹುದು ಅನ್ನೋ ಆಶಯ ಹುಟ್ಟಿದೆ.  Hope it works out!

ಪ್ರ: ನೀವು ಮತ್ತೆ ಗುರುದೇವ್ ಅವರು ಸೇರಿ ‘ಸುಮನ್ ನಗರ್ಕರ್ ಪ್ರೊಡಕ್ಷನ್ ‘ ಶುರು ಮಾಡಿದ್ರಿ. ಇದರ ಹಿನ್ನಲೆ ಏನು? ಇದಕ್ಕೆ ಏನು ಸ್ಪೂರ್ತಿ?

ಅಮೆರಿಕಾದಲ್ಲೇ ಇರೋ ಕೆಲವ್ರು ಸ್ನೇಹಿತ್ರು  ಸೇರ್ಕೋಂಡು  ‘ಬಬ್ರೂ’ ಅನ್ನೋ ಸಿನಿಮಾ ಶುರು ಮಾಡೋಣ ಅಂದ್ಕೊಂಡ್ವಿ.   ಸಮಾನ ಆಸಕ್ತಿ ಇರೋ ಹಲವರು ಸ್ನೇಹಿತರು ಸೇರಿ ಈ ನಿರ್ಧಾರ ಮಾಡಿದ್ದು. ಇದು friend’s funded cinema. ಸುಮಾರು ಹತ್ತು ಜನ ಇದ್ದೀವಿ. ಹೀಗಾಗಿ ಎಲ್ರಿಗೂ ಒಂದು ಬ್ಯಾನರ್ರಿನ  ಅಗತ್ಯ ಇತ್ತು.. ಹಾಗಾಗಿ ನಮ್ಮದೇ  ಪ್ರೊಡಕ್ಷನ್ ಶುರುಮಾಡಿದ್ವಿ.

ಪ್ರ: ಯುಗ ಪ್ರೊಡಕ್ಷನ್ ಮತ್ತು ನಿಮ್ಮದೇ ಬ್ಯಾನರಿನ ಕೆಳಗೆ ನೀವು ‘ಬಬ್ರೂ’ ಚಿತ್ರನ ನಿರ್ಮಿಸ್ತಿದ್ದೀರಿ? ಇದು ಬೇರೆ ಕನ್ನಡ ಚಿತ್ರಗಳಿಗಿಂತ ಯಾವ ರೀತಿ ಭಿನ್ನ?

ನಮಗೆ ಗೊತ್ತಿರೋ ಹಾಗೆ ಇದು ಸಂಪೂರ್ಣ ಅಮೆರಿಕಾಲ್ಲೇ ಚಿತ್ರೀಕರಣ ಆಗಿರೋ ಮೊದಲನೇ ಕನ್ನಡ ಚಿತ್ರ. ಅಂದ್ರೆ ಕೆಲವು ಕನ್ನಡ ಚಿತ್ರಗಳನ್ನು ಅರ್ಧ ಅಮೆರಿಕಾದಲ್ಲಿ  ಶೂಟ್ ಮಾಡಿರುತ್ತಾರೆ.  ಅಥವಾ ಹಾಡುಗಳ ಚಿತ್ರೀಕರಣ ಮಾತ್ರ ವಿದೇಶಗಳಲ್ಲಿ ಆಗಿರುತ್ತೆ. ಆದ್ರೆ ಬಬ್ರೂ ಕಥೆ ಪೂರ್ತಿ ಅಮೆರಿಕಾದಲ್ಲೇ ನಡೆಯುತ್ತೆ. ಹಾಗಾಗಿ ಇದು ಹೊಸತು.  ಕಥೆ ಶುರುವಾಗೋದು, ಮುಗಿಯೋದು ಎಲ್ಲ ಅಮೆರಿಕಾಲ್ಲಿನೇ.  ಕೆನಡಾ ಬಾರ್ಡರಿಂದ ಮೆಕ್ಸಿಕೋ ಬಾರ್ಡರ ವರೆಗೆ ವೆಸ್ಟರ್ನ್ ಅಮೆರಿಕಾ ಮೂಲಕ ಆಗೋ ಪ್ರಯಾಣ ಮತ್ತು ನಡುವೆ ನಡೆಯುವ ಹಲವು ಘಟನೆಗಳು ಮತ್ತು ತಿರುವುಗಳ ಕಥೆ ಇರೋ ಚಿತ್ರ.ಇದು ಪೂರ್ಣ ಪ್ರಮಾಣದ ಕನ್ನಡ ಚಲನ ಚಿತ್ರ.

First film completely made in US by people living in US.

ಸಂಗೀತ ಕೂಡ ಭಿನ್ನ. ಇದರಲ್ಲಿ ನಾವು ಹೊಸ ರೀತಿಯ ಸಂಗೀತ ಅಕಿಪಲ್ಲಿ ಮ್ಯೂಸಿಕ್ ಬಳಸ್ತಾ ಇದ್ದೀವಿ. ಜೊತೆಗೆ ಇದು cloud funded ಅಲ್ಲ .ಬದಲು   friends funded ಸಿನಿಮಾ.                                                           

ಪ್ರ: ಈ ಚಿತ್ರದ ಬಗ್ಗೆ ನಮಗೆಲ್ಲ ಭಾರೀ ನಿರೀಕ್ಷೆಯಿದೆ. ಯಾವಾಗ ಮತ್ತು ಎಲ್ಲೆಲ್ಲಿ ಈ ಚಿತ್ರವನ್ನು ರಿಲೀಸ್ ಮಾಡ್ತಾ ಇದ್ದೀರ?

ಈ ಚಿತ್ರದ ಶೂಟಿಂಗ್  ಮುಗಿದಿದೆ. ಕೊನೆಯ ಹಂತದ ಕಾರ್ಯಗಳು ನಡೀತಾ ಇವೆ. ಇದೇ ವರ್ಷ ಜುಲೈ ಅಥವಾ ಆಗಷ್ಟನಲ್ಲಿ ರಿಲೀಸ್ ಆಗ್ತಾ ಇದೆ.ಕರ್ನಾಟಕದಲ್ಲಿ ರಿಲೀಸ್ ಆಗೋಕಿನ್ನ ಮೊದಲು ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಎಲ್ಲ ಕಡೆ ಪ್ರೀಮಿಯರ್ ಗಳನ್ನು ನಡೆಸೋ ಉದ್ದೇಶ ಇದೆ.

ಪ್ರ: ನಮ್ಮಂತೆ ನೀವು ಕೂಡ ವಿದೇಶವಾಸಿಗಳು. ಇವತ್ತು ಕರ್ನಾಟಕದಲ್ಲೇ ಕನ್ನಡ ಕಾಣೆಯಾಗ್ತಿರೋ ಸಮಯ. ಇಷ್ಟೊಂದು ದೂರ ಇದ್ಕೊಂಡು ಜನಸಾಮಾನ್ಯರಾದ ನಮ್ಮಂತವರು ಕನ್ನಡ ಭಾಷೆಯನ್ನು ಹೇಗೆ ಉಳಿಸಬಹುದು ಅಂತ ನಿಮ್ಮ ಅಭಿಪ್ರಾಯ?

ತುಂಬಾ ನಿಜ. ಸೌತ್ ಬೆಂಗಳೂರಲ್ಲಿ ಸ್ವಲ್ಪ ಕನ್ನಡ ಇದೆ. ಆದರೆ ಅಲ್ಲೂ ಕನ್ನಡ ಇತ್ತೀಚೆಗೆ ಸಾಯ್ತಾ ಇದೆ.ಮಕ್ಕಳು  ಕೂಡ ಕನ್ನಡ ಮಾತಾಡಲ್ಲ. ನಾವು ಇಲ್ಲಿ ಬೆಳೀತಾ ಇರೋ ಮಕ್ಕಳಿಗೆ ಕನ್ನಡ ಕಲಿಸೋ ಪ್ರಯತ್ನ ಮಾಡ್ತಾ ಇದ್ದೀವಿ. ಅದ್ರೆ ಅಲ್ಲಿರೋ ಮಕ್ಕಳೇ ಇವತ್ತು ಕನ್ನಡ ಮಾತಾಡಲ್ಲ.

ಈ  ಕನ್ನಡದ ಹೋರಾಟ ಯಾವತ್ತೂ ನಡೀತಾನೆ ಇದೆ. ಇನ್ನೂ ಮುಂದುವರೆಯುತ್ತೆ ಅನ್ನಿಸುತ್ತೆ.ನಾನು ಅಂದ್ಕೊಂಡಿದ್ದೀನಿ ನಾವು ಕನ್ನಡಿಗರು ನಿರಭಿಮಾನಿಗಳು ಅಂತ. ಕೆಲವು ಭಾಷೆಯವರು ದುರಭಿಮಾನಿಗಳು ಅವ್ರು ಯಾವ ಭಾಷೆನೂ ಗೌರವಿಸಲ್ಲ, ಕಲಿಯೋದು ಇಲ್ಲ. ಬೇರೆ ಬೇರೆ ಭಾಷೆ ಕಲೀಬೇಕು ಆದ್ರೆ ನಮ್ಮ ಭಾಷೆನ ಉಳಿಸ್ಕೊಳ್ಳೋದು ಕೂಡ ತುಂಬ ಮುಖ್ಯ.

ನೀವು ನಿಮ್ಮ ಸಾಹಿತ್ಯಕ ಚಟುವಟಿಕೆಗಳ ಬಗ್ಗೆ ಹೇಳಿದ್ರಿ. ಅದನ್ನು ಕೇಳಿ ತುಂಬಾ ಸಂತೋಷ ಆಯ್ತು. ಇಂತಹ ಚಟುವಟಿಕೆಗಳು ಮುಂದುವರೀಬೇಕು. ಬೆಳೀಬೇಕು. ಎಷ್ಟೋ ಸಾರಿ ಹೊರದೇಶಗಳಲ್ಲಿನ ಕನ್ನಡಿಗರು ಮಾಡೋದನ್ನು ನಮ್ಮ ಜನ ಅನುಕರಿಸ್ತಾರೆ.ಹಾಗಾದ್ರೂ ಭಾಷೆ ಉಳಿಯುತ್ತೆ.

ಪ್ರ: ನೀವು 25 ವರ್ಷಗಳಿಂದ ನೀವು ಕನ್ನಡ ಚಿತ್ರರಂಗಾನ ಹತ್ತಿರದಿಂದ ನೋಡಿದ್ದೀರಿ.  ಪ್ರಪಂಚದ ಇತರೆ ಸಂಸ್ಕೃತಿ, ಸಮಾಜದಲ್ಲಿ ಇದ್ದು ಗೊತ್ತಿದೆ. ಇದನ್ನೆಲ್ಲ ಒತ್ತಟ್ಟಿಗಿಟ್ಟು ನಮ್ಮ ಸಿನಿಮಾರಂಗದ ಕಡೆ ಪಕ್ಷನೋಟ ಹರಿಸಿದ್ರೆ ನಿಮಗೇನಾದ್ರೂ ಬದಲಾವಣೆ ಕಾಣಿಸುತ್ತಾ?

ಇತ್ತೀಚೆ ಹೊಸ ತರದ ಚಿತ್ರಗಳು ಬರ್ತಾ ಇವೆ. ಹಿಂದೆಲ್ಲ  Art cinema and commercial cinema  ಅಂತ ಮಾತ್ರ ಇತ್ತು. ಆರ್ಟ್ ಸಿನೆಮಾ ಅಂದ್ರೆ  ಬೋರಿಂಗ್ ಅಥವಾ ಗೋಳಿನ ಚಿತ್ರ ಅಂತ ಮಾತ್ರ ಇತ್ತು. ಇವತ್ತು ಮಾಮೂಲಿ ಹಾಡು, ಫೈಟ್ ಇರೋ ಸಿನಿಮಾಗಳು ಒಂದ್ಕಡೆ ಬರ್ತಾನೆ ಇವೆ. ಜೊತೆಗೆ parallel ಆಗಿ  ಬೇರೆ ತರ ವಿಚಾರ ಇರೋ ಚಿತ್ರಗಳು ಕೂಡ ಬರ್ತಾ ಇವೆ. ಈಗಿನ ಟ್ರೆಂಡ್ ಹೇಗಿದೆ ಅಂದ್ರೆ ಸಾಫ್ಟ್ ವೇರ್ ಉದ್ಯಮಿಗಳು ಕೂಡ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಬರ್ತಿದ್ದಾರೆ.

ಇವತ್ತಿನ ತಲೆಮಾರಿನವರು ಹಳೇ ಫಾರ್ಮುಲಾ ಬಿಟ್ಟು ಬೇರೆ ತರ ಚಿತ್ರ ಮಾಡಬಹುದು ಅಂತ ತೋರಿಸ್ತಿದ್ದಾರೆ. ಇದು ನಿಜಕ್ಕೂ ಒಳ್ಳೇದು.

ಪ್ರ: ನಿಮ್ಮ ಹೊಸಚಿತ್ರ ‘ಬಬ್ರೂ’ ಗೆ ನಮ್ಮ ಶುಭಾಶಯಗಳು. ನಿಮ್ಮ ಮುಂದಿನ ಯೋಜನೆಗಳೇನು?

ವಿಭಿನ್ನ ರೀತಿ ಚಿತ್ರ ಮಾಡ್ಬೇಕು ಅನ್ನೋದೇ ಮುಂದಿನ ಯೋಜನೆ. ಒಂದೆರಡು  ಕಥೆಗಳ ಬಗ್ಗೆ ವಿಚಾರ ನಡೀತಾ ಇದೆ. ಈ ವರ್ಷ ಅಂತ ಒಂದೆರಡು ಪ್ರಾಜೆಕ್ಟ್ ಬರ್ತಾ ಇದೆ. ಈ ಬಗ್ಗೆ  ಈಗ್ಲೇ ಏನೂ ಹೇಳಕ್ಕಾಗಲ್ಲ.

ಸದ್ಯದಲ್ಲೇ ಈ ಬಗ್ಗೆ ತಿಳಿಸ್ತೀವಿ.

——————-

ಈ  ನಟಿಯ  ಅವಲೋಕನದಂತೆ ಕನ್ನಡ ಚಿತ್ರರಂಗದಲ್ಲಿ ಹೊಸತು ಬರುತ್ತಿದೆ. ಈ  ಹೊಸದಿಕ್ಕಿನಲ್ಲಿ ಇನ್ನಷ್ಟು ಬೆಳವಣಿಗೆ ಕಾಣಲಿ ಎಂದು ಆಶಿಸೋಣ.

ಡಾ. ಪ್ರೇಮಲತ ಬಿ.

[https://www.youtube.com/watch?v=xkp_uKZwqcQ&w=560&h=315]

 

3 thoughts on “ಸುಮನ್ ನಗರ್ಕರ್ ಅವರೊಂದಿಗೆ ಆತ್ಮೀಯ ಸಂವಾದ- ಡಾ. ಪ್ರೇಮಲತ ಬಿ.

  1. TImely interview, well done Premalata and Desai.

    Lovely to hear Suman Nagarkar. Missed watching the movie though. Hope it will be available on Netflix or Amazon Prime soon.

    Keshav

    Like

  2. ಕೇವಲ ಕುಣಿತ, ಹಾಡು, ಸವಕಲು ಕಥಾವಸ್ತುಗಳನ್ನೊಳಗೊಂಡ ಸಿನಿಮಾಗಳನ್ನು ನಿರ್ಮಿಸಿ ಪ್ರದರ್ಶಿಸುವ ಸಮಯದಲ್ಲಿ, ವಿಭಿನ್ನ ರೀತಿಯ, ಸಾಮಾಜಿಕ ಸಮಸ್ಯೆಗಳನ್ನೊಳಗೊಂಡ ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸುವ ವ್ಯಕ್ತಿಗಳು ಬೆರಳೆಣಿಸುವಷ್ಟು ಮಂದಿ. ಇಂತಹ ಸಮಯದಲ್ಲಿ ಸುಮನ್ ನಗರ್ಕರ್ ಅಂತಹ ಪ್ರತಿಭಾವಂತೆ ಮತ್ತು ಆಲೋಚನಾಪರ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕರ ಅವಶ್ಯಕತೆ ಇಂದು ಕನ್ನಡ ಚಿತ್ರರಂಗಕ್ಕಿದೆ. ಅವರನ್ನು ಸಂದರ್ಶಿಸಿ ಅನಿವಾಸಿ ಮತ್ತು ಯುಕೆ ಕನ್ನಡಿಗರಿಗೆ ಪರಿಚಯಿಸಿರುವುದು ಉತ್ತಮ ಪ್ರಯತ್ನ. ಪ್ರೇಮಲತಾ ಮತ್ತು ಸುಮನಾ ಗಿರೀಶ್ ಇಬ್ಬರಿಗೂ ಅಭಿನಂದನೆಗಳು. ಅವರ ನೂತನ ಚಿತ್ರವನ್ನು ನೋಡುವ ಅವಕಾಶ ಸಿಕ್ಕರೆ ಖಂಡಿತಾ ನೋಡುತ್ತೇನೆ.
    ಉಮಾ ವೆಂಕಟೇಶ್

    Liked by 1 person

  3. ಕನ್ನಡ ಸಿನಿರಂಗಕ್ಕೆ ಮತ್ತಷ್ಟು ಹೊಸತನವನ್ನು ಸೇರಿಸುವ ಸುಮನ್ ಅವರ ಯೋಜನೆಗಳನ್ನು ತಿಳಿದು ಖುಷಿಯಾಯ್ತು. ಅವರ ನಿರ್ಮಾಣ ಸಂಸ್ಥೆಯ ಪ್ರಯತ್ನಗಳಿಗೆ ಶುಭ ಹಾರೈಕೆಗಳು.
    ವಿನತೆ ಶರ್ಮ

    Liked by 2 people

Leave a comment

This site uses Akismet to reduce spam. Learn how your comment data is processed.