‘ಮಾತೆಯರ ದಿನಕ್ಕೊಬ್ಬ ಮಮತಾಮಯಿಯ ಕಥನ’ – ವೈಶಾಲಿ ದಾಮ್ಲೆ ಬರೆದ ಲೇಖನ

ನೆನ್ನೆ ದೇಶವಿದೇಶಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮ. ನಾಡಿದ್ದು (೧೧-೩-೨೦೧೮) ಬ್ರಿಟನ್ ಮುಂತಾಗಿ ಹಲವು ದೇಶಗಳಲ್ಲಿ ಮಾತೆಯರ (Mother’s Day)ದಿನ. ಆ ದಿನದಲ್ಲಾದರೂ ’ಮಲ್ಟಿಟಾಸ್ಕಿಂಗ್’’ ಮಹಿಳೆಗೆ ಬಿಡುವು ಸಿಕ್ಕೀತೋ! ಎಲ್ಲೆಲ್ಲಿ ತಂದೆ ತಾಯಿಗಳಿಂದ ದೂರ ವಾಸಿಸಿಸುವ  ಗಂಡಹೆಂಡಿರಿಬ್ಬರೂ ಕೆಲಸ ಮಾಡುತ್ತಾರೋ ಅಲ್ಲಲ್ಲಿ ಈ ಕಾಲದಲ್ಲಿ ಮಕ್ಕಳನ್ನು ನೋಡಿಕೊಳ್ಳಲು (child care) ಬೇರೆಯವರನ್ನು ಅವಲಂಬಿಸಬೇಕಾದ ಪ್ರಸಂಗಗಳು ಬರುತ್ತವೆ. ಅದೂ ಒಂದು ಲಾಟರಿ, ಯಾರು ಸಿಗುತ್ತಾರೋ, ಅದು ಅವರವರ ಅದೃಷ್ಟದ ಪ್ರಕಾರ. ಅದರ ಅನುಭವ ನನಗೂ ಇದೆ. ಇಲ್ಲಿ ವಾಸಿಸುವ ಡಾಕ್ಟರ್ ದಂಪತಿಗಳು ಅನೇಕ. ಅವರಲ್ಲೊಬ್ಬರಾದ ಡಾ. ವೈಶಾಲಿಯವರು ತಮಗೆ ದೊರಕಿದ (a surrogate mother) ಅಸಾಧಾರಣ ಮಹಿಳೆ, (ಅವರ ’ನಾನ್ನಿ’)ಯ ಪರಿಚಯಮಾಡಿಸುತ್ತಿದ್ದಾರೆ. ಓದಿ ನೋಡಿ, ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ! (- ಸಂ)

”ಯತ್ರ ನಾರ್ಯಸ್ತು ಪೂಜ್ಯ೦ತೇ, ರಮಂತೇ ತತ್ರ ದೇವತಾಃ” (ಎಲ್ಲಿ ಸ್ತ್ರೀಯರನ್ನು ಪೂಜನೀಯರೆಂದು ಪರಿಗಣಿಸುತ್ತಾರೋ, ಅಂತಹ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ) ಇದು ಬಾಲ್ಯದಲ್ಲಿ ನನ್ನ ಮೇಲೆ ಬಹಳ ಪ್ರಭಾವ ಬೀರಿದ ಸಂಸ್ಕೃತ ಶ್ಲೋಕಗಳಲ್ಲೊಂದು. ಸಂಜೆಯ ಹೊತ್ತು ನಮ್ಮನ್ನುಇಕ್ಕೆಲಗಳಲ್ಲಿ ಕುಳ್ಳಿರಿಸಿಕೊಂಡು ನಮ್ಮ ತಂದೆ ಅಥವಾ ತಾಯಿ ಸೀತೆ, ದ್ರೌಪದಿ, ಮಂಡೋದರಿಯಂಥ ಪೌರಾಣಿಕ ಮಹಿಳೆಯರ ತ್ಯಾಗದ ಕಥೆಗಳನ್ನೂ, ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕನಂಥ ವೀರವನಿತೆಯರ ಐತಿಹಾಸಿಕ ಕಥೆಗಳನ್ನೂ ಮನಮುಟ್ಟುವಂತೆ ಹೇಳುವುದು ರೂಢಿಯಾಗಿತ್ತು. ಇವೆಲ್ಲವನ್ನೂ ಕೇಳಿ ಬೆಳೆಯುತ್ತಿದ್ದಂತೆ, ವೇದಗಳ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯನ್ನು ಯಾಕೆ ಪೂಜನೀಯಳೆಂದು ಪರಿಗಣಿಸಲಾಗುತ್ತದೆ ಎಂಬ ಅರಿವು ತನ್ನಿಂದ ತಾನೇ ಆಗಿತ್ತು. ಸ್ತ್ರೀಯು ತನ್ನ ತ್ಯಾಗ, ವೀರತೆ, ಪಾತಿವ್ರತ್ಯ, ರೂಪ, ಶೃಂಗಾರ, ಬುದ್ಧಿಮತ್ತೆ ಹೀಗೆ ಹತ್ತು- ಹಲವು ಗುಣಗಳಿಂದ ಗುರುತಿಸಿಕೊಳ್ಳುತ್ತಾಳಾದರೂ, ಇವೆಲ್ಲಕ್ಕಿಂತಲೂ ಶ್ರೇಷ್ಠವಾದ ಗುಣ ಆಕೆಯ ನಿರ್ವ್ಯಾಜ್ಯ ಅಂತಃಕರಣ. ತಮ್ಮ ಜೀವನವನ್ನು ಇನ್ನೊಬ್ಬರ ಉನ್ನತಿಗಾಗಿಯೇ ಮುಡಿಪಾಗಿಟ್ಟ, ತಮ್ಮ ಸೇವಾ ಮನೋಭಾವ ಹಾಗೂ ಸಮಾಜಕಲ್ಯಾಣದ ಕಾರ್ಯಗಳಿಂದ ಹೆಸರುವಾಸಿಯಾದ ಹಲವು ಅಸಾಮಾನ್ಯ ಮಹಿಳೆಯರನ್ನು ನಾವು-ನೀವೆಲ್ಲರೂ ಬಲ್ಲೆವು. ಅಂತೆಯೇ, ಸ್ತ್ರೀಸಹಜವಾದ ಕರುಣೆ, ಪ್ರೀತಿ, ಪ್ರೇಮಗಳನ್ನು ಇನ್ನೊಬ್ಬರಿಗೆ ಸದಾ ಹಂಚುತ್ತಾ, ನೊಂದವರ ಬಾಳಿಗೆ ಬೆಳಕಾಗುತ್ತಾ, ಜೀವನ ಎಸೆದ ಸವಾಲುಗಳಿಗೆ ಹೆದರದೆ ದಿಟ್ಟತನದಿಂದ ಮುನ್ನಡೆಯುತ್ತಾ ಇರುವ ‘ಸಾಮಾನ್ಯರಲ್ಲಿ ಅಸಾಮಾನ್ಯ’ ವ್ಯಕ್ತಿಗಳೂ ಹಲವರಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s day) ಹಾಗೂ ತಾಯಿಯರ ದಿನ (Mother’s Day)ದ ಸಂಭ್ರಮಾಚರಣೆಯ ಈ ಸಮಯದಲ್ಲಿ ಇಂತಹ ಒಬ್ಬ ಕರುಣಾಮಯಿ ನಾರಿಯ ವ್ಯಕ್ತಿ ಪರಿಚಯ ಇಲ್ಲಿದೆ.

ಇವರು ಸವಿತಾಜೀ.

ಬಹು ಕಾರ್ಯಕಾರಿ (multitasking) ಮಹಿಳೆ

ಕಳೆದ ಕೆಲವು ತಿಂಗಳುಗಳಿಂದ ನನ್ನ ೭ ವರ್ಷದ ಮಗಳು ಧಾತ್ರಿಯನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬರುತ್ತಾರೆ. ಅವಳನ್ನು ಸ್ವಿಮ್ಮಿಂಗ್, ಡ್ಯಾನ್ಸ್ ಮುಂತಾದ ತರಗತಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಸಮಯ ಉಳಿದರೆ ನಮಗೊಂದಿಷ್ಟು ಚಪಾತಿ, ಪಲ್ಯಗಳನ್ನು ಮಾಡಿಡುತ್ತಾರೆ. ನನ್ನ ಮಕ್ಕಳಿಗೆ ಇವರೆಂದರೆ ಬಹಳ ಇಷ್ಟ ಹಾಗೂ ಗೌರವ. ಕೇವಲ ದುಡ್ಡಿಗೆಂದು ಕೆಲಸ ಮಾಡುವ ಹೆಂಗಸು ಅವರಲ್ಲ. ನಾನು ಬರುವುದು ಸ್ವಲ್ಪ ತಡವಾದರೆ ಧಾತ್ರಿಗೆ ಹೋಮ್ ವರ್ಕ್ ಮಾಡಿಸಿ, ಊಟ ಮಾಡಿಸಿರುತ್ತಾರೆ. ಒಣಗಿದ ಬಟ್ಟೆಗಳಿದ್ದರೆ ಮಡಿಸಿ  ಇಡುತ್ತಾರೆ. ಅವರ ಮನೆಯಲ್ಲೇನಾದರೂ ತಿಂಡಿ ಮಾಡಿದಾಗ, ತಪ್ಪದೆ ನಮಗೂ ತಂದುಕೊಡುತ್ತಾರೆ. ಅವರು ಮಾಡಿದಷ್ಟು ರುಚಿಯಾದ ಈರುಳ್ಳಿ ಬೋಂಡಾ ನಾನು ಇನ್ನೆಲ್ಲಿಯೂ ತಿಂದಿಲ್ಲ. ಮಕ್ಕಳೆಂದರೆ ಇವರಿಗೆ ಬಹಳ ಪ್ರೀತಿ. ಸವಿತಾಜಿ ಎತ್ತಿ ಆಡಿಸುತ್ತಾರೆಂದರೆ ನನ್ನ ಎರಡು ವರ್ಷದ ಮಗಳು ಧೃತಿಗೆ ಹಿಗ್ಗೋ ಹಿಗ್ಗು. ಒಂದು ದಿನ ಅವರು ಬರದಿದ್ದರೆ ‘ವೇರ್ ಈಸ್ ಸವಿತಾ ಆಂಟಿ‘ ಎಂದು ಮನೆಯಿಡೀ ಹುಡುಕುತ್ತಾಳೆ. ಅವಳ ಆಟದ ಫೋನ್  ತೆಗೆದುಕೊಂಡು “ಆಂಟಿ ಪ್ಲೀಸ್ ಕಮ್ ಹೋಮ್” ಎಂದು ಫೋನ್ ಮಾಡುತ್ತಾಳೆ.

ಕೆಲವು ತಿಂಗಳುಗಳ ಹಿಂದೆ ಇವರ ಪರಿಚಯವಾದಾಗ ”ಎಲ್ಲರಂತಲ್ಲ ಈಕೆ. ಇವರಲ್ಲೇನೋ ವಿಶೇಷ ಗುಣವಿದೆ. ಸಾತ್ವಿಕತೆಯ ಪ್ರತಿಮೆಯಂತಿದ್ದಾರೆ” ಎನ್ನಿಸಿತ್ತು.

ದಿನ ಕಳೆದಂತೆ ಅವರ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಕೇಳಿದಷ್ಟೂ ನನಗೆ ಅವರ ಮೇಲಿನ ಗೌರವ ಹೆಚ್ಚುತ್ತಾ ಹೋಗುತ್ತದೆ. ೬೦ ವರ್ಷ ವಯಸ್ಸಿನ ಅವರು ಚಳಿಯಿರಲಿ, ಹಿಮಪಾತವಿರಲಿ ತಿಂಗಳಿಗೆರಡು ಬಾರಿಯಾದರೂ ಇಲ್ಲಿಂದ ೨೦೦ ಮೈಲಿ ದೂರದಲ್ಲಿರುವ ಲಂಡನ್ ಗೆ ಒಬ್ಬರೇ ಕಾರಿನಲ್ಲಿ ಹೋಗಿ ಬರುತ್ತಾರೆ! ಅಲ್ಲಿರುವ ವೃದ್ಧ ತಂದೆ-ತಾಯಿಯರ ಹಾಗೂ ಮಕ್ಕಳು-ಮೊಮ್ಮಕ್ಕಳ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಾರೆ. ೨೫ ವರ್ಷಗಳ ಕಾಲ ಮಾಂಚೆಸ್ಟರ್ ನಲ್ಲಿ ದಿನಸಿ ಅಂಗಡಿ ನಡೆಸಿ, ಖರೀದಿಸಿದ ಮನೆಯ ಮೇಲಿನ ಸಾಲವನ್ನೆಲ್ಲಾ ತೀರಿಸಿದ್ದಾರೆ. ಮದುವೆಯಾಗಿ ಕೈಹಿಡಿದ ಗಂಡ ಕಷ್ಟ-ಸುಖ ಯಾವುದರಲ್ಲೂ ಭಾಗಿಯಾಗದವನೆಂದು ಅರಿವಾದಾಗ, ಧೃತಿಗೆಡದೆ ೫ ಜನ ಮಕ್ಕಳನ್ನು ಸ್ವಂತ ದುಡಿಮೆಯಿಂದ ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಹೆಣ್ಣುಮಕ್ಕಳ ಮದುವೆ ಮಾಡಿ, ಅಂಗಡಿಯನ್ನು ಇನ್ನೊಬ್ಬರಿಗೆ ವಹಿಸಿ ಕೊಟ್ಟ ಮೇಲೆ ಗಂಡನಿಂದ ವಿಚ್ಛೇದನ ಕೇಳುವ ದಿಟ್ಟ ನಿರ್ಧಾರ ತೆಗೆದು ಕೊಂಡಿದ್ದಾರೆ. ಆದರೆ ಗಂಡ, ಮನೆಯನ್ನು ಬಿಟ್ಟುಕೊಡುವುದಿಲ್ಲ ಎಂದಾಗ, ತಾನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಕೊಂಡ ಮನೆಯನ್ನು ಆತನಿಗೆ ಬಿಟ್ಟು ಹೊರನಡೆದ ಧೈರ್ಯವಂತೆ ಇವರು.

ವರ್ಷಗಳ ನಂತರ, ವಿವಾಹಿತನಾದ ಮಗನೂ ತಂದೆಯ ಹಾದಿಯನ್ನೇ ಹಿಡಿದಾಗ ಸೊಸೆಯ ಬೆನ್ನೆಲುಬಾಗಿ ನಿಂತವರು ಇವರು. ಮುಂದೊಂದು ದಿನ ಸೊಸೆ ತನ್ನ ಗಂಡನಿಂದ ಬೇರಾಗುವ ನಿರ್ಧಾರ ತೆಗೆದುಕೊಂಡಾಗ ಇಡೀ ಸಮಾಜವೇ ಆಕೆಯನ್ನು ನಿಂದಿಸಿದರೂ, ಅವಳಿಗೆ ಆಸರೆ ಕೊಟ್ಟು, ತಾನು ಹೆತ್ತ ಮಗನಿಂದಲೇ ದೂರಾಗಿದ್ದಾರೆ. ಕೆಲವು ತಿಂಗಳುಗಳ ನಂತರ ಒಳ್ಳೆಯ ಹುಡುಗನೊಬ್ಬನನ್ನು ಹುಡುಕಿ ತಾವೇ ಮುಂದೆ ನಿಂತು ಸೊಸೆಗೆ ಎರಡನೇ ಮದುವೆ ಮಾಡಿಸಿದ ಧೀಮಂತ ವ್ಯಕ್ತಿತ್ವ ಇವರದ್ದು. ಈಗಲೂ ಆ ಹುಡುಗಿಯನ್ನು ತನ್ನ ಮಗಳಂತೇ ನೋಡಿಕೊಳ್ಳುತ್ತಾರೆ. ಆಕೆ ಕೆಲಸದಿಂದ  ಬರುವಾಗ ತನ್ನ ಮನೆಯಲ್ಲಿ ಅವಳಿಗೂ ಸೇರಿಸಿ ಅಡಿಗೆ ಮಾಡಿಡುತ್ತಾರೆ. ಮೊಮ್ಮಗ ಸಣ್ಣವನಿದ್ದಾಗ ಅವನನ್ನು ಶಾಲೆಯಿಂದ ಕರೆದುಕೊಂಡು ಬರುವುದು, ಶಾಲಾನಂತರದ ತರಗತಿಗಳಿಗೆ ಕರೆದುಕೊಂಡು ಹೋಗುವುದು ಇತ್ಯಾದಿಗಳನ್ನು ಮಾಡುತ್ತಿದ್ದವರೂ ಅವರೇ.

ಅವರು ನನಗೆ ಈ ಘಟನೆಗಳ ವಿವರಗಳನ್ನೆಲ್ಲಾ ಹೇಳಿದಾಗ “ನಿಜಕ್ಕೂ ನಿಮ್ಮ ವ್ಯಕ್ತಿತ್ವ ಬಹುದೊಡ್ಡದು ಸವಿತಾಜೀ. ಸೊಸೆಯಾಗಿದ್ದವಳನ್ನು ಈಗಲೂ ಇಷ್ಟೊಂದು ಪ್ರೀತ್ಯಾದರಗಳಿಂದ ನೋಡಿಕೊಳ್ಳುವ ನಿಮ್ಮ ಗುಣ ಎಲ್ಲರಿಗೂ ಆದರ್ಶಪ್ರಾಯವಾದದ್ದು” ಎಂದೆ. ಅದಕ್ಕವರು “ಮೈನೆ ಹಮೇಶಾ ಮೇರಿ ಬಹೂ ಕೋ ಬಹೂ ಕೀ ತರಹ್ ನಹೀ, ಬೇಟಿ ಕೀ ತರಹ್ ದೇಖಾ. ಕೋಯಿ ಭಲಾ ಅಪ್ನೆ ಬೇಟಿ ಕೀ ಬುರಾಯೀ ಚಾಹೇಗಾ ಕ್ಯಾ” (‘’ನಾನು ನನ್ನ ಸೊಸೆಯನ್ನು ಎಂದೂ ಸೊಸೆ ಎಂದು ಪರಿಗಣಿಸಲೇ ಇಲ್ಲ. ಅವಳನ್ನು ಮಗಳೆಂಬ ದೃಷ್ಟಿಯಿಂದಲೇ ನೋಡಿದ್ದೇನೆ. ಯಾರಾದರೂ ಅವರ ಸ್ವಂತ ಮಕ್ಕಳಿಗೆ ಕೆಟ್ಟದಾಗಲಿ ಎಂದು ಬಯಸುವುದುಂಟೇ?’’) ಅಂದರು. ಮುಂದುವರೆದು “ಮೈನ್ ಕಭೀ ಗಲತ್ ಇನ್ಸಾನ್ ಕಾ ಸಾಥ್ ನಹೀ ದೇ ಸಕ್ತಿ. ವೋ ಗಲತ್ ಇನ್ಸಾನ್ ಚಾಹೇ ಮೇರಾ ಪತಿ ಹೀ ಕ್ಯೋ ನ ಹೋ, ಯಾ ಫಿರ್ ಮೇರಾ ಬೇಟಾ” (”ನಾನು ಎಂದಿಗೂ ನೀಚ ವ್ಯಕ್ತಿಯ ಪಕ್ಷ ವಹಿಸಲಾರೆ. ಆ ಕೆಟ್ಟ ವ್ಯಕ್ತಿ ನನ್ನ ಪತಿಯಾದರೇನಂತೆ, ಅಥವಾ ಮಗನಾದರೇನಂತೆ”) ಎಂದರು!

ಮೊನ್ನೆ ಒಂದು ದಿನ ”ಏಪ್ರಿಲ್ ನಲ್ಲಿ ೨ ವಾರ ಭಾರತಕ್ಕೆ ಹೋಗಿಬರಬೇಕೆಂದಿದ್ದೇನೆ. ೨ ವಾರದ ಮಟ್ಟಿಗೆ ಧಾತ್ರಿಯನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಪರ್ಯಾಯ ವ್ಯವಸ್ಥೆ ಮಾಡಲು ನಿನಗೆ ಸಾಧ್ಯವಾ?” ಎಂದರು. ”ಖಂಡಿತಾ ಮಾಡುತೇನೆ ಸವಿತಾಜೀ. ನೀವು ಹೋಗಿ ಬನ್ನಿ” ಎಂದೆ. ಮೂಲತಃ ಭಾರತೀಯರಾದರೂ ಅವರು ಹುಟ್ಟಿ-ಬೆಳೆದದ್ದು ತಾಂಜಾನಿಯಾ ದೇಶದಲ್ಲಿ, ಕಳೆದ ಸುಮಾರು ೪೦ ವರ್ಷಗಳಿಂದ, ಅವರ ತಂದೆ-ತಾಯಿ, ಅಣ್ಣ-ತಂಗಿಯರೆಲ್ಲಾ ಇಂಗ್ಲೆಂಡಿನಲ್ಲೇ ಇದ್ದಾರೆ ಎನ್ನುವ ವಿವರಗಳನ್ನು ನನಗವರು ಈಗಾಗಲೇ ಹೇಳಿದ್ದರು. ಹಾಗಾಗಿ ಕುತೂಹಲ ತಡೆಯಲಾರದೆ ”ಭಾರತದಲ್ಲಿ ಯಾರನ್ನು ಭೇಟಿಯಾಗಲು ಹೋಗುತ್ತಿದ್ದೀರಿ? ದೂರದ ನೆಂಟರಿಷ್ಟರಿರಬೇಕಲ್ಲವೇ?” ಎಂದೆ. ಅದಕ್ಕವರು ”ಇಲ್ಲ. ನನ್ನ ಅತ್ತೆಯನ್ನು (ಗಂಡನ ತಾಯಿ) ಭೇಟಿಯಾಗಲು ಹೋಗುತ್ತಿದ್ದೇನೆ. ಆಕೆಗೆ ಇತ್ತೀಚೆಗೆ ಆರೋಗ್ಯ ಬಹಳ ಹದಗೆಟ್ಟಿದೆ. ಹಾಗಾಗಿ ಮನೆಯಲ್ಲೇ ಅವರ ಆರೋಗ್ಯ ನೋಡಿಕೊಳ್ಳವಂತಹ ನರ್ಸ್ ಒಬ್ಬಳನ್ನು ನೇಮಿಸಿ ಬರೋಣವೆಂದಿದ್ದೇನೆ. ನನ್ನ ಗಂಡ ಎಂದೂ ತಾಯಿಯ ಯೋಗಕ್ಷೇಮವನ್ನು ವಿಚಾರಿಸಕೊಂಡದ್ದೇ ಇಲ್ಲ. ಹಾಗಾಗಿ ಮದುವೆಯಾದಾಗಿನಿಂದಲೂ, ಆಕೆಯ ಜೀವನ ನಿರ್ವಹಣೆಯ ವೆಚ್ಚವನ್ನು ನಾನೇ ಇಲ್ಲಿಂದ ಕಳಿಸಿಕೊಡುತ್ತಿದ್ದೇನೆ. ಗಂಡನ ಸಂಬಂಧ ಕಡಿದುಕೊಂಡರೂ, ಆಕೆಯನ್ನು ದೂರಮಾಡುವುದು ನನಗೆ ಸಾಧ್ಯವಿಲ್ಲ. ನಡೆದುಹೋದುದರಲ್ಲಿ ಆಕೆಯ ತಪ್ಪೇನೂ ಇಲ್ಲವಲ್ಲ” ಎಂದರು. ಮತ್ತೊಮ್ಮೆ ಅವರ ಉನ್ನತ ವಿಚಾರಧಾಟಿಗೆ ಬೆರಗಾಗುವ ಸರದಿ ನನ್ನದು.

ತಾವು ಒಂದಷ್ಟು ಓದಿಕೊಂಡ ತಕ್ಷಣ, ಒಂದು ನೌಕರಿ ಸಿಕ್ಕ ತಕ್ಷಣ, ಅಥವಾ ಒಂದಿಷ್ಟು ಹೆಸರು ಬಂದ ತಕ್ಷಣ, ಸಕಲ ಶಾಸ್ತ್ರ-ಪುರಾಣಗಳನ್ನೂ ಅರೆದು ಕುಡಿದವರಂತೆ ವರ್ತಿಸುವ, ಲೋಕಕ್ಕೆಲ್ಲಾ ಬುದ್ಧಿವಾದ ಹೇಳುತ್ತಾ, ಇನ್ನೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುತ್ತಾ, ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಇವಾವುದನ್ನೂ ಪಾಲಿಸದೆ, ‘ಹೇಳುವುದು ಶಾಸ್ತ್ರ, ತಿನ್ನುವುದು ಬದನೇಕಾಯಿ’ ಎಂಬಂತೆ ಬದುಕುವ ಆಷಾಢಭೂತಿಗಳೇ ಜಾಸ್ತಿಯಾಗಿರುವ ಈಗಿನ ಸಮಾಜದಲ್ಲಿ ಸವಿತಾಜೀ ಬಹು ಎತ್ತರದವರಾಗಿ ನಿಲ್ಲುತ್ತಾರೆ. ಸೊಸೆಯನ್ನು ಮಗಳಂತೆ ಬಿಡಿ, ಸ್ವಾಭಿಮಾನವಿರುವ ಒಬ್ಬ ಮನುಷ್ಯಳಂತೆ ಕೂಡಾ ಸ್ವೀಕರಿಸದ, ತಮ್ಮ ಮಕ್ಕಳೆಂದರೆ ಪ್ರಶ್ನಾತೀತರೆಂಬ ಧೋರಣೆಯಿರುವ ಅತ್ತೆ-ಮಾವ, ಅಪ್ಪ-ಅಮ್ಮಂದಿರ ನಡುವೆ ಇವರ ವ್ಯಕ್ತಿತ್ವ ಬಹು ಉದಾತ್ತವೆನಿಸುತ್ತದೆ. ಹಾಗೆಯೇ, ಪತಿಯ ತಂದೆ-ತಾಯಿಯರನ್ನು ಕಾಲ ಕಸಕ್ಕಿಂತಲೂ ಕೀಳಾಗಿ ಪರಿಗಣಿಸುವ ಸೋ ಕಾಲ್ಡ್ ವಿದ್ಯಾವಂತ ಸೊಸೆಯಂದಿರೂ ಕೂಡಾ ಇವರಿಂದ ಕಲಿಯುವುದು ಬಹಳಷ್ಟಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಕೆಲವು ಮೌಲ್ಯಗಳು ಹಾಗೂ ಸಿದ್ಧಾಂತಗಳಿರುತ್ತವೆ; ಈ ಸಿದ್ಧಾಂತಗಳನ್ನು ತಮಗೆ ಹೇಗೆ ಬೇಕೋ ಹಾಗೆ ತಿರುಚುವ, ಬೇಕೆಂದಾಗ ಹಿಡಿದುಕೊಳ್ಳುವ, ಬೇಡವೆಂದಾಗ ಗಾಳಿಗೆ ತೂರುವ ಅವಕಾಶವಾದಿಗಳೇ ಹೆಚ್ಚು. ಆದರೆ, ಪರಿಸ್ಥಿತಿ ತನ್ನ ವ್ಯತಿರಿಕ್ತವಾಗಿದ್ದರೂ, ತನ್ನ ಮೌಲ್ಯಗಳನ್ನು ಬಿಡದೆ ಒಬ್ಬಂಟಿಯಾಗಿ ಮುನ್ನಡೆದ, ತನ್ನ ನೊಂದ ಸೊಸೆಗೊಂದು ಹೊಸ ಬಾಳು ಸಿಗುವ ಅವಕಾಶ ಮಾಡಿಕೊಟ್ಟ, ಜೀವನದ ಸಂಧ್ಯಾಕಾಲದಲ್ಲಿರುವ ಹಿರಿ-ಜೀವಕ್ಕೆ ಆಸರೆಯಾಗಿ ನಿಂತಿರುವ ಸವಿತಾಜೀ ಒಬ್ಬ ಅಪರೂಪದ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ವೈಶಾಲಿ ದಾಮ್ಲೆ

5 thoughts on “‘ಮಾತೆಯರ ದಿನಕ್ಕೊಬ್ಬ ಮಮತಾಮಯಿಯ ಕಥನ’ – ವೈಶಾಲಿ ದಾಮ್ಲೆ ಬರೆದ ಲೇಖನ

  1. ಲೇಖನ ಓದಿ ಮೈ ಝುಂ ಎಂದದ್ದು ಸುಳ್ಲಲ್ಲ. ತುಂಬ ಆಪ್ತವಾಗಿ ಯಾವುದೇ ಅತಿರೇಕವಿಲ್ಲದೇ ವ್ಯಕ್ತಿಚಿತ್ರವನ್ನು ಕೊಟ್ಟಿದ್ದೀರಿ. ನೀವೂ ಧನ್ಯ, ನಿಮ್ಮಂಥವರನ್ನ್ನು ಪಡೆದ ಸವಿತಾಜೀಯೂ ಧನ್ಯ. – ಕೇಶವ

    Like

  2. ವೈಶಾಲಿಯವರಿಗೆ ಸವಿತಾಜಿ ಹೇಗೋ ಹಾಗೆಯೇ ನಮಗೆ ದೊರೆಕಿದ್ದಳು ಮಿಸ್ಸೆಸ್ BB ಎಂದೇ ನಮ್ಮ ಮಕ್ಕಳು ಕರೆಯುತ್ತಿದ್ದ ಒಬ್ಬ ಇಂಗ್ಲಿಷ್ ಮಹಿಳೆ. ತನ್ನ ವಯಸ್ಸಿನ ನಲವತ್ತರಲ್ಲೇ ಗಂಡನನ್ನು ಕಳೆದುಕೊಡರೂ ಧೃತಿಗೆಡದೆ ಮನೆಯಲ್ಲಿ ತಮ್ಮ, ಮಗನೊಂದಿಗೆ ಸಂಸಾರ ಸಂಭಾಳಿಸುತ್ತಿದ್ದಳು . ನಾವಿಬ್ಬರೂ ಡಾಕ್ಟರ್ ದಂಪತಿಗಳು. ಸಣ್ಣ ಮಗಳನ್ನು ಶಾಲೆಯಿಂದ ಸಂಜೆ ಮನೆಗೆ ಕರೆದುಕೊಂಡು ಬರುವದು, ನಾವಿಬ್ಬರಲ್ಲೊಬ್ಬರು ಆಸ್ಪತ್ರೆಯಿಂದ ಮನೆಗೆ ಬರುವ ತನಕ ಆಕೆಯೆ, ಮಗನ ದೇಖರೇಖಿ ಅವಳಿಗೆ ವಹಿಸಿಕೊಟ್ಟಿದ್ದೆವು. ನಾವು ಈ ಊರಿಗೆ ಬಂದ ಮೊದಲ ವಾರದಲ್ಲೇ ನಮ್ಮ ಜಾಹಿರಾತಿಗೆ ಓಗೊಟ್ಟಿದ್ದಳು. ಅವಳದೂ ಮೊದಲ ಸಲ. ನಮ್ಮದೂ.. ನೋಡಿದ ತಕ್ಷಣವೇ ನಮ್ಮಿಬ್ಬರಲ್ಲಿ ಆದ ಹೊಂದಾಣಿಕೆ, ಬಾಂಧವ್ಯ ಮಕ್ಕಳು ದೊಡ್ಡವರಾಗಿ, ಮದುವೆಯಾಗಿ ಮೊಮ್ಮಕ್ಕಳಾಗುವವರೆಗೆ ಅದು ಬೆಳೆದು ಆಕೆ ಅಸು ನೀಗುವವರೆಗೂ ಉಳಿದಿತ್ತು. ನಮ್ಮ ಕುಟುಂಬದ ಸದಸ್ಯೆಯೇ ಆಗಿದ್ದಳು. ಪ್ರವಾಸಕ್ಕೆ ಹೋದಾಗಲೂ ನಮ್ಮೊಡನೆ ಬಂದು,ಬರ್ಥ್ ಡೆ, ಹಬ್ಬ, ಎಲ್ಲದರಲ್ಲಿ ಸಹಭಾಗಿಯಾಗುತ್ತಿದ್ದಳು. ತನ್ನ ಮನೆಯಲ್ಲಿ ಮೆದುಳಿನ ಬೆಳವಣಿಗೆಯಲ್ಲಿ ಸ್ವಲ್ಪ ಹಿಂದೆ ಇದ್ದ ಬೆಳೆದ ಮಗನನ್ನು ಬೇರೆ ನೋಡಿಕೊಳ್ಳಬೇಕಾಗಿತ್ತು. ನನ್ನ ಮಡದಿ ಆತನಿಗೂ ಆಕೆಗೂ ಭಾರತೀಯ ಊಟ ಕೊಟ್ಟು, ಕಲಿ/ಳಿಸಿ, ಕ್ರಿಸ್ಮಸ್ ಪ್ರೆಸೆಂಟ್ಸ್ ಕೊಟ್ಟು, ನಮ್ಮ ಮಕ್ಕಳ ಹುಟ್ಟಿದ ದಿನ, ಪರೀಕ್ಷೆ, ರಿಸಲ್ಟ್, ಕಾಲೇಜು ಕಟ್ಟೆ ಹತ್ತುವ ದಿನ, ಗ್ರಾಜುಏಷನ್. ಒಂದೇ ಎರಡೇ, ಬೀಬೀ ಇರದಿದ್ದರೆ ಭಣಭಣವಾಗುವಷ್ಟು ಅನ್ಯೋನ್ಯತೆ! ಇದೇ ಊರಲ್ಲೇ ಹುಟ್ಟಿ ಬೆಳೆದ ಆಕೆ ಸ್ಥಳೀಯ ಇತಿಹಾಸ-ಸ್ಥಳ ಪುರಾಣದ ಅಧಿಕೃತ ಚರಿತ್ರೆಕಾರಳಾಗಿದ್ದಳು ನನ್ನ ಪಾಲಿಗೆ್! ಇಂಟರ್ನೆಟ್ ಬರುವ ಮೊದಲೇ ಅವತರಿಸಿದ ಮಿಸೆಸ್ ಲೋಕಲ್ ಗೂಗಲ್ ಆಕೆ! ಮೇಲಿನ ಲೇಖನದಲ್ಲಿ, ಮತ್ತು ಕೆಳಗೆ ಕಮೆಂಟ್ ಮಾಡಿದ ಮಹಿಳೆಯರ ಅಭಿವ್ಯಕ್ತಿಯಲ್ಲಿದ್ದಂತೆ ಅಂತಃಕರಣ, ಪ್ರೀತಿ ಮತ್ತು ನಿಸ್ಪೃಹತೆಯ ಮೂರ್ತಿವೆತ್ತ ಜೀವ – ಬರೀ ”ಸ್ತ್ರೀ ಎಂದರಾಗದೇ?” IWD ದಿನದಲ್ಲಷ್ಟೇ ಅಲ್ಲ, ಯಾವಗಲೂ ನನ್ನ ಮಕ್ಕಳೂ ನಾನೂ ನೆನೆದು ನಮನಗಳನ್ನು ಸಲ್ಲಿಸದಿದ್ದರೆ ಅಪರಾಧವಾಗುತ್ತದೆ!
    ಈ ವಾರದ ಲೇಖನದಲ್ಲಿ ತಾವು ಕಂಡ ಇನ್ನೊಬ್ಬ ಇಂಥ ಮಹಿಳೆಯ ಬಗ್ಗೆ ಮನದಟ್ಟುವಂತೆ ಬರೆದು ನನಗೆ ಈ ಅವಕಾಶ ಕಲ್ಪಿಸಿ ಕೊಟ್ಟ ವೈಶಾಲಿಯವರಿಗೂ ಧನ್ಯವಾದಗಳು.

    Like

  3. ತುಂಬಾ ಸುಂದರ ಹಾಗೂ ಸಕಾಲಿಕ ಲೇಖನ ವೈಶಾಲಿ ಯವರದು‌.ಪ್ರತಿಯೊಂದು ಹೆಣ್ಣಿನ ಹಿಂದೆ ಒಂದು ತ್ಯಾಗ, ಪ್ರೀತಿ,ಅಂತ:ಕರಣದ ಕತೆ ಇದೆ.ಅದನ್ನು ಗುರುತಿಸುವ ಕಂಗಳ ಕೊರತೆ.’ಯಾರಿಗೆ ಮಾಡೋದು ,ತನ್ನ ಸಂಸಾರಕ್ಕೆನೇ‌.ಅದೇನು ಹೆಚ್ಚು ಗಾರಿಕೆ’ಅನ್ನೋ ಮಾತು ಬಂದರೆ ಅಚ್ಚರಿಯಿಲ್ಲ ಒಂದು ಹಂತದಲ್ಲಿ.ತಾಯಿಯ ಅಂತ:ಕರಣ ಪ್ರೀತಿ ವಾತ್ಸಲ್ಯ ಅರಿಯದ , ಒಂಥರಾ ಅಸಹನೆ ಗೊಳಗಾಗುವ, ಅದು ಬೇಕಿಲ್ಲ ಅನ್ನೋಥರದ ವರ್ತನೆಯ ಮಕ್ಕಳಿಗೆನು ಕೊರತೆ ಇಲ್ಲ.ಇದು ಹೆಣ್ಣಿನ ಬಾಳಿನ ವಿಡಂಬನೆ, ದುರಂತ.ಇಂಥ ಈ ವಾತಾವರಣ ದಲ್ಲಿ ಈ ಮಹಿಳಾ ದಿನಾಚರಣೆ, ಮಾತೆಯರ ದಿನಾಚರಣೆ ಅರ್ಥವಿಹೀನ ಏನೋ ಎಂಬನಿಸಿಕೆ.
    “ತಾಯಿ ದೇವರು ಎಂಬರು,ಅವಳ ವಾಕ್ಯ ವೇದ ಎಂಬರು‌.ಕಂಡರಾರು ದೇವರ,ಬಲ್ಲರಾರು ವೇದ.ಈ ಹಿರಿಮೆ ಗರಿಮೆ ಒಲ್ಲಳವಳು, ಬೇಡಿಯಾಳು ಮಮತೆ ,ನೀಡಿಯಾಳು ಪ್ರೀತಿ.ಇದುವೆ ತಾಯಿ ಬಲ್ಲಿರಾ ” ಈ ಅರಿವು ಸಮಾಜದಲ್ಲಿ ಮೂಡಿದರೆ ಅದಕ್ಕಿಂತ ಹೆಚ್ಚಿನದೇನೂ ಬೇಕಿಲ್ಲವೇನೋ ಅಲ್ವೇ? ಇಂತಹ ಸಮಯದಲ್ಲಿ ಈ ಅರ್ಥಪೂರ್ಣ , ಹೆಣ್ಣಿನ ನಿಸ್ವಾರ್ಥ ಮಮತೆಯ ಸಾರುವ ಸುಂದರ ಬರಹಕ್ಕೆ ಡಾ. ವೈಶಾಲಿಯವರಿಗೆ ಅನೇಕ ಧನ್ಯವಾದಗಳು.
    ಸರೋಜಿನಿ ಪಡಸಲಗಿ.

    Liked by 1 person

  4. ಎಲೆ ಮರೆಯ ಕಾಯಿಯಂತೆ ಸದ್ದಿಲ್ಲದೇ ಸಮಾಜಕ್ಕೆ ಸೇವೆ ಸಲ್ಲಿಸುವ ಧೀಮಂತ ಮಹಿಳೆಯರು ಸುದ್ದಿಯಲ್ಲಿರುವುದಿಲ್ಲ. ಇಂತಹ ಅದ್ಭುತ ಮಹಿಳೆಯರ ಬಗ್ಗೆ ಅವರನ್ನು ಹತ್ತಿರದಿಂದ ಕಂಡವರಷ್ಟೇ ಬರೆದು ತಿಳಿಸಿದಾಗ ಅವರ ಬಗ್ಗೆ ನಮಗೆ ಮಾಹಿತಿ ಸಿಕ್ಕುವುದು. ವೈಶಾಲಿಯವರ ಲೇಖನದ ಕೇಂದ್ರ ವ್ಯಕ್ತಿಯೂ ಕೂಡ ಇಂತಹ ಒಬ್ಬ ನಾರೀಮಣಿ. ಅವರನ್ನು ನಮಗೆ ಪರಿಚಯಿಸಿದ ವೈಶಾಲಿಯವರಿಗೆ ಅಭಿನಂದನೆ ಸಲ್ಲಬೇಕಾದ್ದೇ.
    ಉಮಾ ವೆಂಕಟೇಶ್

    Like

  5. ವೈಶಾಲಿಯವರೆ
    ನಿಮ್ಮ ಲೇಖನ ಓದಿದ ಕೊಡಲೇ ನನಗೆ ಶಂಕರಾಚಾರ್ಯರ ನುಡಿ ನೆನಪಿಗೆ ಬಂತು
    ” ಕುಪುತ್ರೋ ಜಾಯೇತ ಕ್ವಚದಪಿ ಕುಮಾತಾನ ಭವತಿ”
    ಕೆಟ್ಟ ಪುತ್ರ ಹುಟ್ಟಿಕೊಳ್ಳಬಹುದು ಆದರೆ ಕೆಟ್ಟ ತಾಯಿಯ ಅಸ್ತಿತ್ವ ಅಸಂಭವ.
    ಸಹನೆ ಪ್ರೀತಿ ಕಾಳಜಿ ಮತ್ತು ತ್ಯಾಗ ಈ ಗುಣಗಳು ಹೆಂಗಸಿನ ವ್ಯಕ್ತಿತ್ವದಲ್ಲಿ ಸಹಜವಾಗಿ ಅಡಗಿವೆ. ಅದರ ಜೊತೆಗೆ ಸಾತ್ವಿಕತೆ ಮತ್ತು ಪ್ರಾಮಾಣಿಕತೆ ಬೆರೆತಾಗ ಸವಿತಾಜಿಯಂತಹ ವ್ಯಕ್ತಿಗಳು ರೂಪುಗೊಳ್ಳುತ್ತಾರೆ. ಇಂತಹ ಸ್ತ್ರೀಯರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಸ್ಮರಿಸಿರಿವುದು ನಾವು ಅವರಿಗೆ ನೀಡಬಹುದಾದ ಕಿರು ಕಾಣಿಕೆ.

    Like

Leave a comment

This site uses Akismet to reduce spam. Learn how your comment data is processed.