(ಕಳೆದ ವಾರ ಅನಿವಾಸಿಗಳು ಓದಿದ ಮೂರು ಪುಸ್ತಕಗಳ ಪರಿಚಯ ಮಾಡಿಸಿಕೊಡಲಾಗಿತ್ತು. ಈ ಸಲ ಇನ್ನು ಮೂರರ ನಾಲ್ಕರ ವಿಮರ್ಶೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ – ಎರಡು ಮೂರು ಇಂಗ್ಲಿಷ್ ಮತ್ತು ಒಂದು ಕನ್ನಡ ಪುಸ್ತಕಗಳು. ಅವು ಎಲ್ಲರಿಗೂ ಪರಿಚಿತವಿರಲಿಕ್ಕಿಲ್ಲ, ಅಥವಾ ಓದಿ ಮರೆತಿರಲೂಬಹುದು. ಆದರೆ, ನಮ್ಮ ಕರೆಗೆ ಓಗೊಟ್ಟು ಕಳಿಸಿಕೊಟ್ಟ ಬರಹಗಾರರೆಲ್ಲರೂ ಮಾತ್ರ ”ಅನಿವಾಸಿ” ಓದುಗರಿಗೆ ಚಿರಪರಿಚಿತರು. ಚಿತ್ರಬಿಡಿಸುವ ’ಕುಂಚ’ದ ಬದಲು ಈ ಸಲ ಕೈಗೆ ’ಲೇಖನಿ’ಯನ್ನೆತ್ತಿಕೊಂಡಿದ್ದಾರೆ ಲಕ್ಷ್ಮಿನಾರಾಯಣ ಗುಡೂರ್ ಅವರು! ಓದುಗರು ಎಂದಿನಂತೆ ತಮ್ಮ ಪ್ರತಿಕ್ರಿಯೆಗಳನ್ನು ಕೆಳಗೆ ಕಮೆಂಟ್ಸ್ ನಲ್ಲಿ ಬರೆಯ ಬೇಕಾಗಿ ಬಿನ್ನಹ. -ಸಂ)
(ಈಗ ತಾನೆ ಕೈಸೇರಿದ ನಮ್ಮ ಹೊಸ ಬರಹಗಾರರಾದ ವಿಜಯನರಸಿಂಹ ಅವರ ಇನ್ನೊಂದು ಪುಸ್ತಕ ವಿಮರ್ಶೆಯನ್ನೂ ಕೆಳಗೆ ಸೇರಿಸಿದ್ದೇನೆ.-ಸಂ)
1)”ಅಮೆರಿಕಾನ” ( Americanah) – ಚಿಮಮ೦ಡ ಅಡಿಚಿಯವರ ಕಾದ೦ಬರಿ – ದಾಕ್ಷಾಯಿಣಿ
ಅಡಿಚಿಯವರು ಅಮೆರಿಕದಲ್ಲಿ ನೆಲೆಸಿದ್ದರೂ ಮೂಲತಃ ನೈಜೀರಿಯನ್. ಈಕೆಯ ” ಪರ್ಪಲ್ ಹಿಬಿಸ್ಕಸ್ (Purple Hibiscus)” ಮತ್ತು “ಹಾಫ಼ ಆಫ಼್ ಎ ಯೆಲ್ಲೊ ಸನ್( Half of a yellow sun)” ಪ್ರಶಸ್ತಿ ವಿಜೇತ ಮತ್ತು ಪ್ರಸಿದ್ಧ ಕೃತಿಗಳು. ಈ ಲೇಖಕಿಯ ಇವೆರಡು ಪುಸ್ತಕಗಳನ್ನು ನಾನೀಗ ೬-೭ ವರ್ಷಗಳ ಹಿ೦ದೆಯೆ ಓದಿದ್ದೆ. ಹೊರದೇಶದಲ್ಲಿದ್ದು ತಾಯ್ನಾಡಿನ ಬಗ್ಗೆ ಬರೆಯುವ ಈ ಲೇಖಕಿಯ ಬರಹಗಳು, ಅನಿವಾಸಿಯಾದ ನನ್ನನ್ನು ಬಹಳ ಪ್ರಭಾವಿತಗೊಳಿಸಿತೆ೦ದು ಹೇಳಬಹುದು. ಈ ಲೇಖಕಿಯ ಪುಸ್ತಕಗಳನ್ನು ಕೊ೦ಡು ಓದುವ೦ತೆ ಪ್ರೇರಿಪಿಸಿದ ನನ್ನ ಆಗಿನ ಹದಿಹರೆಯದ ಮಗಳು ಸಿರಿಗೆ ನನ್ನ ವ೦ದನೆಗಳನ್ನು ಹೇಳಬೇಕು. ಯಾಕೆ೦ದರೆ, ಯಾವ ಆ೦ಗ್ಲ ಭಾಷೆಯ ಪುಸ್ತಕವನ್ನು ಓದಲು ಆರಿಸಿಕೊಳ್ಳಬೇಕೆ೦ದು ಕೆಲವೊಮ್ಮೆ, ನನಗೆ ಸ್ವಲ್ಪ ಗೊ೦ದಲವೆ ಆಗುತ್ತದೆ೦ದು ಹೇಳಬಹುದು. ಈ ನಡುವೆ ನಾನು ಓದಿದ ಪುಸ್ತಕಗಳು ” ಕಾನೂರು ಹೆಗ್ಗಡತಿ” ಮತ್ತು ”ಅಮೆರಿಕಾನ”. ಕುವೆ೦ಪು ಅವರ ಕಾನೂರು ಹೆಗ್ಗಡತಿಯನ್ನು ನಾನು ಎರಡನೆಯ ಬಾರಿ ಓದಿದ್ದು ಮತ್ತು ಅದು ನೀವೆಲ್ಲರೂ ಈಗಾಗಲೆ ಓದಿರುವ ಪುಸ್ತಕವೆ೦ದು ನನ್ನ ಊಹೆ. ಲೇಖಕಿ ಅಡಿಚಿಯವರ ಕೃತಿಗಳನ್ನು ಸಹ ನಿಮ್ಮಲ್ಲಿ ಕೆಲವರು ಓದಿರಬಹುದು. ಈ ಲೇಖಕಿಯನ್ನು ಕೃತಿಗಳನ್ನು ಓದಲು ನೀವು ಆರಿಸಿಕೊಳ್ಳುವುದಾರೆ ಆಕೆಯ ಪ್ರಶಸ್ಥಿ ವಿಜೇತ ಪುಸ್ತಕಗಳನ್ನು ಮೊದಲು ಓದಿ ಆಕೆ ಬರೆಯುವ ಶೈಲಿಯನ್ನು ಅರಿವು ಮಾಡಿಕೊಳ್ಳುವುದು ತರವೆ೦ದು ನನಗನ್ನಿಸುತ್ತದೆ. ಈ ಲೇಖಕಿಯನ್ನು ಅನಿವಾಸಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.
”ಅಮೆರಿಕಾನ” ಕಾದ೦ಬರಿ ನೈಜೀರಿಯ ದೇಶದ ಇಬ್ಬರು ಯುವ ಪ್ರೇಮಿಗಳಾದ ಇಫ಼ೆಮುಲು(Ifemelu)ಮತ್ತು ಓಬಿನೀಜಿ (obinze)ಯ ಕತೆ. ಈ ದೇಶದಲ್ಲಿದ್ದ ಬಹಳ ವರ್ಷಗಳ ಮಿಲಿಟರಿ ಆಡಳಿತದಿ೦ದಾದ ಪರಿಣಾಮ, ಯುವಜನತೆ ಎದುರಿಸುವ ಸಮಸ್ಯೆಗಳನ್ನು ಲೇಖಕಿ ನಮಗೆ ಪರಿಚಿಸುವುದಲ್ಲದೆ, ಇತ್ತೀಚಿನ ದಶಕಗಳಲ್ಲಿ ನೈಜೀರಿಯಾದಲ್ಲಾಗಿರುವ ಬದಲಾವಣೆ, ಭ್ರಷ್ಟಾಚಾರ, ವೇಗವಾದ ಆರ್ಥಿಕ ಬೆಳವಣಿಗೆ ಮತ್ತು ಈ ಅತಿವೇಗದ ಆರ್ಥಿಕ ಬೆಳವಣಿಗೆ ತರಬಹುದಾದ ಸಾಮಾಜಿಕ ಬದಲಾವಣೆಗಳು, ಸ೦ಸ್ಕೃತಿಯ ಮೇಲಾಗುವ ಪರಿಣಾಮ ಇವುಗಳನ್ನು, ತಾನು ಹೇಳಹೊರಟಿರುವ ಕತೆಯಲ್ಲಿ, ಓದುಗರ ಆಸಕ್ತಿಗೆ ಧಕ್ಕೆ ಬರದ ಹಾಗೆ ಅಳವಡಿಸಿಕೊ೦ಡಿದ್ದಾರೆ. ನೈಜೀರಿಯಾ ದೇಶದ ಬಗೆಗೆ ಈಕೆಗಿರುವ ಒಲವು, ಪ್ರೀತಿಯ ಅರಿವು ಸಹ ನಮಗೆ ಮನವರಿಕೆಯಾಗುತ್ತದೆ. ಕೆಲವೊ೦ದು ವಿಷಯಗಳು ಭಾರತೀಯಳಾದ ನನಗೆ ಅಪರಿಚಿತವೆ೦ದೆನ್ನಿಸುವುದಿಲ್ಲ.
ವಿಶ್ವವಿದ್ಯಾನಿಲಯದ ವ್ಯಾಸ೦ಗಕ್ಕೆ೦ದು ಯುವತಿ ಇಫ಼ೆಮುಲು ಅಮೆರಿಕಾ ದೇಶಕ್ಕೆ ಪಯಣಿಸುತ್ತಾಳೆ. ಅಲ್ಲಿ ಆಕೆ ಎದುರಿಸುವ ವರ್ಣಭೇಧ, ಹಣದ ಕೊರತೆ, ಮಾಡಬೇಕಾಗುವ ವಿಧವಿಧದ ಕೆಲಸಗಳು, ತನ್ನ ಪ್ರೇಮಿ ಓಬಿನೇಜಿ ನೆನಪು ಸದಾ ಕಾಡುತ್ತಿದ್ದರೂ ಅನಿವಾರ್ಯವಾಗಿ ಬೆಳಿಸಿಕೊಳ್ಳುವ ಸ೦ಬ೦ಧಗಳ ಬಗೆಗೆ ಓದುಗರಿಗೆ ಮನಮುಟ್ಟುವ೦ತೆ ಈ ಲೇಖಕಿ ಬರೆಯುತ್ತಾರೆ. ಇಫ಼ೆಮುಲು ತನ್ನದೇ ಆದ ಬ್ಲಾಗ್(blog) ಅನ್ನು ಅಮೆರಿಕಾಕ್ಕೆ ವಲಸೆ ಬ೦ದ ಆಫ಼್ರಿಕಾನ್ನ(Africans)ರಿಗೆ೦ದು ಶುರುಮಾಡಿ ಯಶಸ್ವಿಯಾಗುತ್ತಾಳೆ. ಈ ಬ್ಲಾಗ್ ನಲ್ಲಿ ಇಫ಼ೆಮುಲು ಬರೆಯುವ ಸ್ವಗತಗಳು ಈ ಕಾದ೦ಬರಿಯ ಮುಖ್ಯಾ೦ಶಗಳೆ೦ದು ಹೇಳಬಹುದು. ವಲಸೆ ಬ೦ದವರೆಲ್ಲರೂ ಅಮೆರಿಕಾದ ಸ೦ಸ್ಕೃತಿ, ಸೊಬಗಿಗೆ ಮರುಳಾಗಿದ್ದಾರೆ೦ಬ ಭಾವನೆ, ತಾವು ಮಾಡುವುದೆಲ್ಲ ಚೆನ್ನ ಎನ್ನುವ ಅಮೆರಿಕನ್ನರ ಆತ್ಮವಿಶ್ವಾಸವನ್ನು ಈ ಪುಸ್ತಕ ಮತ್ತೆ ಮತ್ತೆ ಪ್ರಶ್ನಿಸುತ್ತದೆ.
ಅಮೆರಿಕಾಗೆ ಹೋಗಲು ವಿಸಾ ಸಿಗದ ಕಾರಣ, ತನ್ನ ಪ್ರೇಯಸಿಯನ್ನ ಹೇಗಾದರೂ ಮಾಡಿ ಸೇರುವ ಹ೦ಬಲದಿ೦ದ ಓಬಿನೀಜಿ ಇ೦ಗ್ಲೆಡಿಗೆ ಬರುತ್ತಾನೆ. ವ್ಯಾಸ೦ಗಕ್ಕೆ೦ದು ಇಲ್ಲಿಗೆ ಬರುವ ಈ ಯುವಕನ ಅನುಭವಗಳು, ನಿಪುಣ (skilled workers) ಎ೦ದು ಇಲ್ಲಿಗೆ ಬ೦ದ ನಮ್ಮಗಳಿಗೆ ಸ೦ಪೂರ್ಣ ಅಪರಿಚಿತವೆ೦ದು ಹೇಳಬಹುದು. ಹೊರ ದೇಶಕ್ಕೆ ವಲಸೆ ಬರುವವರೆಲ್ಲರೂ, ಪಾಶ್ಚಿಮಾತ್ಯ ಅನುಭವವನ್ನು ಆನ೦ದಿಸಲು ಅಥವಾ ಹಣಗಳಿಸಲು ಬರುವರೆ೦ದು ಭಾವಿಸಿರುವ ಹಲಜನರ ಮೂಢತನವನ್ನು ಈ ಕಾದ೦ಬರಿ ಏತ್ತಿತೋರಿಸುತ್ತದೆ. ಕತೆ ಬಹಳ ಕಾಲ ಒಬ್ಬರಿದೊಬ್ಬರು ದೂರವಿದ್ದು, ಜೀವನದಲ್ಲಿ ಬೇರೆ ಬೇರೆ ಹಾದಿಯನ್ನು ಆರಿಸಿಕೊ೦ಡ ಈ ಬುದ್ದಿಜೀವಿಗಳನ್ನು ಮತ್ತೆ ನೈಜೀರಿಯಾಕ್ಕೆ ಕರೆತರುವ ಹೊಸ ಅಧ್ಯಾಯದೊ೦ದಿಗೆ ಮು೦ದುವರಿಯುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ನೆಲಸಿ, ತಾಯ್ನಾಡಿನ ಮೂಲವನ್ನು ಅಳವಡಿಸಿಕೊ೦ಡು ಪುಸ್ತಕಗಳನ್ನು ಬರೆಯುವ ಲೇಖಕ, ಲೇಖಕಿಯರ ಸ೦ಖ್ಯೆ ಹೆಚ್ಚಾಗುತ್ತಿರುವುದು ಸ೦ತೋಷದ ವಿಷಯ. ಅನಿವಾಸಿಯಾದ ನನಗೆ ಈ ಪುಸ್ತಕಗಳು ಬಹುಬೇಗ ಮನಮುಟ್ಟುವುದಲ್ಲದೆ ಹೊಸ ನಾಡಿನ ಪರಿಚಯವನ್ನು ಮಾಡಿಕೊಡುವುದರಲ್ಲಿ ಯಶಸ್ವಿಯಾಗಿವೆ. ನಿಮಗೂ ಸಹ ಈ ಕಾದ೦ಬರಿ ಮೆಚ್ಚುಗೆಯಾಗುತ್ತದೆ೦ದು ನನ್ನ ನ೦ಬಿಕೆ.
2) ನನ್ನ ಮೆಚ್ಚಿನ ಪುಸ್ತಕ – ಲಕ್ಷ್ಮೀನಾರಾಯಣ ಗುಡೂರ್
ಇದು ನಾನು ಚಿಕ್ಕವನಾಗಿದ್ದಾಗಿನ ವಿಷಯಆಕರ್ಷಣೆ, ಓದುವ ಹುಚ್ಚು ಸಿಕ್ಕಾಪಟ್ಟೆ ಇತ್ತು. ನನಗಾಗ ೧೦ ವರ್ಷ, ಆಗಿನ್ನೂ ತಾತನ ಮನೆಗೆ ಗುಲ್ಬರ್ಗಾಕ್ಕೆ ಇರಲು ಬಂದಿದ್ದೆ, ಅಲ್ಲೇ ಶಾಲೆಗೆ ಸೇರಿದ್ದೆ ಕೂಡ. ತಾತನ ಮನೆಯಲ್ಲಿನ ದೊಡ್ಡ ಆಕರ್ಷಣೆಯೆಂದರೆ ಅಲ್ಲಿದ್ದ ಪುಸ್ತಕ ಭಂಡಾರ. ಅದರಲ್ಲೂ ರೀಡರ್ಸ್ ಡೈಜೆಸ್ಟ್ ಹಾಗೂ ಕಸ್ತೂರಿ ಸಂಚಿಕೆಗಳ ಪುಸ್ತಕ ವಿಭಾಗಗಳ ಹಾರ್ಡ್ ಬೌಂಡ್ ಸಂಗ್ರಹಗಳು. ಆ ಸಂಗ್ರಹದಲ್ಲಿದ್ದ ಕಥೆಗಳನ್ನು ನಾನು ಮತ್ತೆ ಮತ್ತೆ ಎಷ್ಟು ಬಾರಿ ಓದಿದ್ದೇನೋ ನನಗೇ ನೆನಪಿಲ್ಲ. ಅವುಗಳಲ್ಲಿ ನನ್ನ ಅತ್ಯಂತ ಮೆಚ್ಚಿನ ಪುಸ್ತಕ ಸರ್ ಎಚ್ ರೈಡರ್ ಹ್ಯಾಗಾರ್ಡ್ ಅವರ “ಸೋಲೊಮನ್ನನ ಗಣಿಗಳು” (King Solomon’s Mines), ಹದಿನೆಂಟನೆಯ ಶತಮಾನದ ಅಪರಿಚಿತ ಆಫ್ರಿಕಾದಲ್ಲಿ ನಡೆಯುವ ಸಾಹಸದ ಗಾಥೆ. ಅದನ್ನು ಕನ್ನಡಕ್ಕೆ ಭಾಷಾಂತರಿಸಿದವರ ಹೆಸರು ಮರೆತು ಹೋಗಿದ್ದರೂ, ಅದರಲ್ಲಿನ ಪ್ರತಿಯೊಂದು ಸನ್ನಿವೇಶ, ಪಾತ್ರ ಹಾಗೂ ವಿವರಣೆಯನ್ನು ಇನ್ನೂ ಕಣ್ಣಮುಂದೆ ತಂದುಕೊಳ್ಳಬಲ್ಲೆ. ಅಷ್ಟು ಪರಿಣಾಮಕಾರಿಯಾದ ಕಥೆ.
ಕಥೆಯ ಒಂದು ಪಾತ್ರವೇ ಆದ ಆನೆಗಳ ಬೇಟೆಗಾರ ಅಲನ್ ಕ್ವಾರ್ಟರ್ಮೇನ್ (Allen Quartermain) ಈ ಕಥೆಯ ನಿರೂಪಕ ಸಹ. ಮನೆ ಬಿಟ್ಟು ಬಂದು ಆಫ್ರಿಕಾಕ್ಕೆ ಹೋದ ತಮ್ಮನನ್ನು ಹುಡುಕಲು ಬಂದ ಶ್ರೀಮಂತ ಸರ್ ಹೆನ್ರಿ ಹಾಗೂ ಅವನ ಮಿತ್ರ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಗುಡ್, ಅಲನ್ ಕ್ವಾರ್ಟರ್ಮೇನನ ಸಹಾಯ ಯಾಚಿಸುವುದರೊಂದಿಗೆ ಆರಂಭವಾಗುವ ಕಥೆ, ಅತ್ಯಂತ ರೋಚಕ ಸನ್ನಿವೇಶಗಳ ಮೂಲಕ ಹಾಯ್ದು, ಅಕಾಸ್ಮಾತ್ತಾಗಿ ಸರ್ ಹೆನ್ರಿಯ ತಮ್ಮ ನೆವಿಲ್ ದೊರೆಯುವುದರೊಂದಿಗೆ ಮುಗಿಯುತ್ತದೆ. ಈ ಮಧ್ಯೆ ಬರುವ ಶೂರ ಕುಕುವಾನಾ ಯೋಧರ ಜನಾಂಗ, ಅವರ ರಕ್ತಪಿಪಾಸು ರಾಜ ಟ್ವಾಲಾ, ಅವನ ಕ್ರೂರಿ ಮಗ ಸ್ಕ್ರಾಗ್ಗಾ, ಬೀಭತ್ಸ ಭಾವನೆ ತರಿಸುವ ಮಾಟಗಾತಿ ಗಗೂಲ್ ಮತ್ತವಳ ಶಿಷ್ಯೆಯರು; ಸಿಂಹಾಸನಕ್ಕೆ ನಿಷ್ಠನಾಗಿರುವ ಶೂರ ಚಿಕ್ಕಪ್ಪ ಇನಫಾದೂಸ್; ತಾಯಿಯಿಂದ ಕಥೆ ಕೇಳಿ, ಕೊಲೆಯಾದ ತನ್ನ ತಂದೆಯ ಸಿಂಹಾಸನವನ್ನು ಬಿಳಿಯರ ಸಹಾಯದಿಂದ ಮರಳಿ ಪಡೆಯಲು ಯತ್ನಿಸುವ ರಾಜಕುಮಾರ ಅಂಬೊಪಾ; ಸ್ಕ್ರಾಗ್ಗಾನ ಭರ್ಚಿಯಿಂದ ತನ್ನನ್ನು ರಕ್ಷಿಸಿದ ಕ್ಯಾಪ್ಟನ್ ಗುಡ್ ಗೋಸ್ಕರ ತನ್ನ ಪ್ರಾಣವನ್ನೇ ತ್ಯಜಿಸಿದ ಕುಕುವಾನಾ ಸುಂದರಿ ಫುಲಾಟಾ ಈ ಎಲ್ಲ ಪಾತ್ರಗಳು ಮನದಲ್ಲಿ ಉಳಿಯುತ್ತವೆ. ಈ ಕಥೆಯ ಮೂಲ ಹಂದರವಾದ ಸೋಲೋಮನ್ನನ ವಜ್ರದ ಗಣಿಗಳನ್ನು ಹುಡುಕುವ ಸಾಹಸ, ಬಿಳಿಯರನ್ನು ಗಣಿಗಳ ಆಳದಲ್ಲಿ ಸಿಕ್ಕಿಹಾಕಿಸಿ ಅವರನ್ನು ಕೊಲ್ಲಲೆತ್ನಿಸುವ ಮಾಟಗಾತಿ ಗಗೂಲಳ ಕುತಂತ್ರ, ಅಲ್ಲಿಂದ ತಪ್ಪಿಸಿಕೊಂಡು ಬರುವ ರೀತಿ ಎಲ್ಲ ನನ್ನ ಮನದ ಕಣ್ಣ ಮುಂದೆ ಇನ್ನೂ ಜೀವಂತವಾಗಿದೆ.
ಕಥೆಯ ಕಾಲ ಹಳೆಯದಾದರೂ, ಅದರ ಎಲ್ಲೂ ತಡೆಯದ ಹಾಗೆ ಓದಿಸಿಕೊಂಡು ಹೋಗುವ ರೀತಿಯಿಂದಾಗಿ King Solomon’s Mines ಮೆಚ್ಚಿನ ಪುಸ್ತಕ. ಆಸಕ್ತರು ಇ-ಪುಸ್ತಕವನ್ನು http://www.gutenberg.org ವೆಬ್ಸೈಟಿನಲ್ಲೂ, ಆಡಿಯೋಬುಕ್ ರೂಪದಲ್ಲಿ librivox.org ವೆಬ್ಸೈಟಿನಲ್ಲೂ ಪಡೆದು ಓದಿ, ಕೇಳಿ ಆನಂದಿಸಬಹುದು.
3) ಮೋಹನಸ್ವಾಮಿ – ವಸುಧೇ೦ದ್ರ ಅವರ ಕಥಾ ಸಂಕಲನ
ಛಂದ ಪ್ರಕಾಶನ, ಬೆಂಗಳೂರು
ಇಂಜಿನಿಯರ್ ಪದವೀಧರ ವಸುಧೇ೦ದ್ರ, ಉದ್ಯೋಗ ಬಿಟ್ಟು, ಸಾಹಿತ್ಯ ಕೃಷಿ ಮಾಡುತ್ತಾ, ಛಂದ ಪ್ರಕಾಶನವನ್ನು ಕಟ್ಟಿ ಹೆಸರು ಮಾಡಿದ್ದಾರೆ. ಈ ಕಥಾ ಸಂಕಲನದಲ್ಲಿ ೧೨ ಕಥೆಗಳಿವೆ. ಇಲ್ಲಿನ ೫ ಕಥೆಗಳಲ್ಲಿ ಮೋಹನಸ್ವಾಮಿಯೇ ಪ್ರಮುಖ ಪಾತ್ರಧಾರಿ, ನಿರೂಪಕ. ಮೋಹನಸ್ವಾಮಿ ವೃತ್ತಿಯಲ್ಲಿ ಇಂಜಿನಿಯರ್. ಆತ ಸಲಿಂಗ ಪ್ರೇಮಿ. ಕನ್ನಡದಲ್ಲಿ ಸಲಿಂಗ ಪ್ರೇಮವನ್ನು ವಸ್ತುವಾಗಿಟ್ಟುಕೊಂಡು ಬರೆದಿರುವ ಪ್ರಥಮ ಕೃತಿ ಇದು. ಕೇವಲ ವಿಹಂಗಮಾವಲೋಕನವಾಗದೆ, ಆಳವಾಗಿ ನಮ್ಮನು ತಟ್ಟುವ ರೀತಿಯಲ್ಲಿ ಬರೆದಿದ್ದಾರೆ ವಸುಧೇ೦ದ್ರ. ಇದನ್ನು ಓದಿದಾಗ ಇದು ಲೇಖಕರ ಆತ್ಮಾವಲೋಕನವೇ ಆಗಿರಬಹುದು ಎಂದೆನಿಸಿದರೂ ಆಶ್ಚರ್ಯವಲ್ಲ. ಕೆಲವೊಮ್ಮೆ ಭಾಷೆ ಒರಟಾಗಿದೆ ಎನಿಸಿದರೂ ಸಂದರ್ಭಕ್ಕೆ ಉಚಿತವಾಗಿರುವುದು ಲೇಖಕರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಈಗಾಗಲೇ ಇಂಗ್ಲೀಷ್, ಸ್ಪ್ಯಾನಿಷ್ ಹಾಗೂ ಇನ್ನಿತರ ಭಾರತೀಯ ಭಾಷೆಗಳಿಗೆ ‘ಮೋಹನಾಸ್ವಾಮಿ’ ಅನುವಾದವಾಗಿದೆ, ಓದುಗರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡನೇ ಕಥೆಯಲ್ಲಿ ಮೋಹನಸ್ವಾಮಿ ಹಾಗು ಆತನ ಪ್ರೇಮಿ ಕಾರ್ತಿಕ್ ಅವರ ಸಂಬಂಧದ ವಿಶ್ಲೇಷಣೆ ಮನ ತಟ್ಟುತ್ತದೆ. ಕಾರ್ತಿಕ್ ನೊಟ್ಟಿಗೆ ತನ್ನ ಬದುಕನ್ನು ಕಳೆಯುವ ಗುಂಗಿನಲ್ಲಿರುವ ಮೋಹನಸ್ವಾಮಿಗೆ ಆತ ತನ್ನನ್ನು ಬಿಟ್ಟು ಹುಡುಗಿಯೊಬ್ಬಳ ಜೊತೆ ಮದುವೆಯಾಗುವ ವಿಚಾರ, ಕಾರ್ತಿಕನ ಫೋನ್ ಸಂಭಾಷಣೆಯನ್ನು ಕದ್ದಾಲಿಸಿ ತಿಳಿದಾಗ ಆಗುವ ತೊಳಲಾಟ, ಅಸಹಾಯಕತೆ ಕಣ್ಣಲ್ಲಿ ನೀರೂರಿಸುತ್ತದೆ. ತನ್ನ ನಿಷ್ಕಳಂಕ ಪ್ರೇಮವನ್ನು ಕಾರ್ತಿಕ್ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ನಮ್ಮ ಪೂರ್ವಾಗ್ರಹ ಪೀಡಿತ ಮನೋಭಾವನೆ, ಸಮಯ ಸಾಧಕತೆ ಇವೆಲ್ಲ ತೆರೆದಿಟ್ಟುಕೊಳ್ಳುತ್ತವೆ. ಸಲಿಂಗ ಪ್ರೇಮಿಗಳ ಬಗ್ಗೆ ನಮ್ಮಲ್ಲಿರುವ ಕೀಳು ದೃಷ್ಟಿಕೋನ, ದಬ್ಬಾಳಿಕೆ ಹಾಗೂ ದೌರ್ಜನ್ಯ ಮನೋಭಾವನೆ ಇಲ್ಲಿನ ಪ್ರತಿ ಕಥೆಗಳಲ್ಲೂ ಹಾಸು ಹೊಕ್ಕಿದೆ. ವಸುಧೇ೦ದ್ರರು ಅಂತರ್ಮತೀಯ ಮದುವೆಗಿರುವ ವಿರೋಧ, ಅದರ ಸುತ್ತ ಅಪ್ಪ-ಮಗಳ ನಡುವಿನ ಸಂಬಂಧದ ಚಿತ್ರಣವನ್ನು ಮನಮೋಹಕವಾಗಿ ವರ್ಣಿಸಿದ್ದಾರೆ.
ನನ್ನನಿಸಿಕೆಯಂತೆ ಕನ್ನಡ ಸಾಹಿತ್ಯಾಸಕ್ತರೆಲ್ಲ ಓದಲೇಬೇಕಾದ ಪುಸ್ತಕ.
— ರಾಂಶರಣ್ ಲಕ್ಷ್ಮಿನಾರಾಯಣ
ಪುಸ್ತಕ: The Monk as a Man
ಲೇಖಕರು:ಮಣಿ ಶಂಕರ್ ಮುಖರ್ಜಿ
ಮುದ್ರಣ: ಪೆಂಗ್ವಿನ್ ಪಬ್ಲಿಕೇಷನ್ಸ್
ಬಹುತೇಕ ಭಾರತೀಯರಿಗೆ ಸ್ವಲ್ಪ ಮಟ್ಟಿಗೆ ವಿದೇಶಿಯರಿಗೆ ಸ್ವಾಮಿ ವಿವೇಕಾನಂದರ ಹೆಸರು ಚಿರಪರಿಚಿತ.
ಭಾರತದ ಯುವಜನರ ನರನಾಡಿಗಳನ್ನು ಹುರಿಗೊಳಿಸಿದ ಅಪೂರ್ವ ಹುಮ್ಮಸ್ಸು ಎಂದರೆ ಅದು ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು.ಅವರ ‘ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎನ್ನುವ ಕೂಗು ಇಂದಿಗೂ ಅನೇಕರಿಗೆ ಸ್ಫೂರ್ತಿಯ ಒರತೆಯಾಗಿದೆ.
ನಮ್ಮ ಶಾಲಾ ಕಾಲೇಜುಗಳಲ್ಲಿ, ಅನೇಕ ಪುಸ್ತಕಗಳಲ್ಲಿ ಓದಿ ತಿಳಿದ ವಿವೇಕಾನಂದರು ಒಂದೆಡೆಯಾದರೆ
ಅವರ ಜೀವನದ ಇನ್ನೊಂದು ಅಧ್ಯಾಯವನ್ನು ಮಣಿಶಂಕರ್ ಈ ಪುಸ್ತಕದ ಮುಖೇನ ಓದುಗರಿಗೆ ತೆರೆದಿಡುತ್ತಾರೆ.
ಹೆಸರೇ ಹೇಳುವ ಹಾಗೆ ಈ ಪುಸ್ತಕದಲ್ಲಿ ವಿವೇಕಾನಂದರು ಒಬ್ಬ ಸಂನ್ಯಾಸಿಯಗಿದ್ದುಕೊಂಡೂ ಸಹ ಸಾಮಾನ್ಯ ಮನುಷ್ಯರಂತೆ ಸಂಸಾರದ ಜಂಜಾಟವನ್ನು ಅನುಭವಿಸಿದ ಎಷ್ಟೋ ಸಂಗತಿಗಳು ನಮಗೆ ತಿಳಿಯುತ್ತವೆ.
ವಿವೇಕಾನಂದರ ಪೂರ್ವಾಶ್ರಮದ ಬಗ್ಗೆ ಅನೇಕ ಸತ್ಯ ಸಂಗತಿಗಳನ್ನು ಸಂಶೋಧಿಸಿ ಇದುವರೆಗೂ ಎಲ್ಲಿಯೂ ಓದಿರದ ವಿರಳ ಮಾಹಿತಿಗಳನ್ನು ತಿಳಿಸುವಲ್ಲಿ ಮಣಿಶಂಕರ್ ಅವರ ಕಾರ್ಯ ಶ್ಲಾಘನೀಯ.
ಅನೇಕ ವಿಚಿತ್ರವೆನಿಸುವಂತಹ ಹಾಗೂ ನಂಬಲಸಾಧ್ಯವೆನಿಸುವ ಘಟನೆಗಳು ಓದುಗರ ಕುತೂಹಲ ಹೆಚ್ಚಿಸುತ್ತವೆ.
ಇಂದಿನ ಅನೇಕ ಯುವಕರಂತೆ ವಿವೇಕಾನಂದರೂ ಕೂಡ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಾರೆ,ಮತ್ತೊಂದು ಕಡೆ ತನ್ನ ತಮ್ಮ ತಂಗಿಯರ ಜವಾಬ್ದಾರಿ, ತಂದೆಯವರ ಸಾಲ, ತಾಯಿಯ ಕಣ್ಣೀರು, ತನ್ನ ದೇಹದ ಅನಾರೋಗ್ಯ ಹೀಗೆ ಕೊನೆವರೆಗೂ
ಒಬ್ಬ ಸಾಮಾನ್ಯ ಮಾನವನಂತೆ ಕಷ್ಟಗಳನ್ನು ಎದುರಿಸಿ ಬದುಕಿದ ಅನೇಕ ಸಂಗತಿಗಳು ಆಶ್ಚರ್ಯ ಮೂಡಿಸುತ್ತವೆ.
ಮತ್ತೆ ಹಲವು ಘಟನೆಗಳು ನಮಗೆ ವಿವೇಕಾನಂದರ ಮೇಲಿರುವ ಗೌರವವನ್ನು ಪ್ರಶ್ನಿಸುವಂತಹವಾಗಿವೆ.
ಇವೆಲ್ಲದರ ಹೊರತಾಗಿಯೂ ತಾವು ಸಂನ್ಯಾಸಿಯಾಗಿ ದೇಶಕ್ಕೆ ಕೊಟ್ಟ ಕೊಡುಗೆ, ವಿಶ್ವದ ಇತರ ರಾಷ್ಟ್ರಗಳಲ್ಲಿ ನಮ್ಮ ಧರ್ಮದ ಬಗ್ಗೆ
ಮೂಡಿಸಿದ ಸಕರಾತ್ಮಕ ಕಾರ್ಯಗಳನ್ನು ಸ್ಮರಿಸಿ ಅವರ ಮೇಲಿನ ಗೌರವ ನೂರ್ಮಡಿಯಾಗುವಷ್ಟು ಮಾಹಿತಿಗಳು ಈ ಪುಸ್ತಕದಲ್ಲಿ ಓದಸಿಗುತ್ತವೆ.
–ವಿಜಯನರಸಿಂಹ
ಧನ್ಯವಾದಗಳು ಎಲ್ಲರಿಗೂ. ಇಂಥಹ ಪುಸ್ತಕಗಳ ಪರಿಚಯ ಸೊಗಸು
LikeLike
ಚಿಮಮ೦ಡ ಅಡಿಚಿ ಹೆಸರು diaspora ವಲಯಗಳಲ್ಲಿ ಮತ್ತು ಆಲ್ಟರ್ನೇಟಿವ್ ರೈಟಿಂಗ್ ವಲಯಗಳಲ್ಲಿ ಕೇಳಿಬರುವ ಪ್ರಮುಖ ಹೆಸರು. ಆಸ್ಟ್ರೇಲಿಯಾದ ನನ್ನ ಸ್ನೇಹಿತರೊಬ್ಬರು ತಾವು ಪ್ರತಿ ವರ್ಷ ಹೋಗುವ ಸಿಡ್ನಿ ಬರಹಗಾರರ ಹಬ್ಬದ ಒಂದು ವರ್ಷ ಅಡಿಚಿಯವರ ಕೃತಿಗಳು ಬಹು ಚರ್ಚಿತವಾಯ್ತು ಎಂದು ನನಗೆ ಹೇಳಿದ್ದ ನೆನಪು. ಅಂದರೆ ಅವರ ಓದುಗರು ಆಗ ಹೆಚ್ಚುತ್ತಿದ್ದರು. ಆಫ್ರಿಕಾ ಖಂಡದ ಮೂಲಬೇರುಗಳುಳ್ಳ ಬರಹಗಾರರ ಪರಿಚಯ ಪ್ರಪಂಚದ ವಿವಿಧ ಭಾಗಗಳಲ್ಲಿ ಹೇಗೆ ಹೆಚ್ಚುತ್ತಿದೆಯೋ ಹಾಗೆಯೇ ಯುದ್ಧಗಳಿಂದ ಜರ್ಝರಿತವಾದ ದೇಶಗಳಿಂದ ಹೊರಬಂದಿರುವ ಬರಹಗಾರರ ಪರಿಚಯವೂ ನಿಧಾನವಾಗಿಯಾದರೂ ಈಗ ಆಗುತ್ತಿದೆ. ಅಡಿಚಿಯವರ Americanah ಕಾದಂಬರಿಯನ್ನು ಪರಿಚಯಿಸಿದ ದಾಕ್ಷಾಯಣಿಯವರಿಗೆ ವಂದನೆಗಳು.
ಆಹಾ! ಲಕ್ಷ್ಮೀನಾರಾಯಣ ಗುಡೂರ್ ಬರೆದಿರುವ King Solomon’s Mines ಪುಸ್ತಕದ ಬಗ್ಗೆ ಓದಿ ಮುದವಾಯಿತು; ಜೊತೆಗೆ ಸ್ವಲ್ಪ ಹೊಟ್ಟೆಕಿಚ್ಚಾಯಿತು. ಇದನ್ನು (ಸಾಹಸಗಳನ್ನು) ನಾನು ಬಹು ಹಿಂದೆಯೇ ಓದಿದ್ದರೆ ಎಷ್ಟು ರೋಮಾಂಚನಗೊಳ್ಳುತ್ತಿದ್ದೆ ಅನ್ನಿಸಿತು. ಈಗ ಅಂತಹ ಸಾಹಸಗಳನ್ನು ಬರೆದವರ ಬಗ್ಗೆ, ಅವರ ದೃಷ್ಟಿಕೋನಗಳ ಬಗ್ಗೆ (white man’s tales) ಪ್ರಶ್ನೆಗಳೇಳುತ್ತವೆ.
ವಸುಧೇಂದ್ರರ ಮೋಹನಸ್ವಾಮಿ ಕೃತಿ-ಕತೆಗಳನ್ನ ಓದಬೇಕು; ಅದರ ಬಗ್ಗೆ ಬಹಳಾ ಕೇಳಿ, ವಿಮರ್ಶೆಗಳನ್ನ ಓದಿ, ಪುಸ್ತಕವನ್ನು ನೋಡಿ, ಕಣ್ಣಾಡಿಸಿ ಎಲ್ಲಾ ಆಗಿದೆ – ಎಲ್ಲವನ್ನೂ ಓದಬೇಕು. ವಿಜಯಸಿಂಹರು ಸ್ವಾಮಿ ವಿವೇಕಾನಂದರ ಬಗ್ಗೆ ಇರುವ ಮತ್ತೊಂದು ಓದಿನ ಬಗ್ಗೆ ತಿಳಿಸಿದ್ದಾರೆ. ಅವರಿಗೂ ವಂದನೆಗಳು.
– ವಿನತೆ ಶರ್ಮ
LikeLike
ತಮ್ಮ ವಿಶಿಷ್ಟವಾದ ಶೈಲಿ ಮತ್ತು ವಸ್ತುವಿಷಯದ ಸಾಹಿತ್ಯ ರಚನೆಯಿಂದ ಸಮಕಾಲೀನ ಕನ್ನಡ ಬರಹಗಾರರಲ್ಲಿ ವಸುಧೇಂದ್ರ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ವೃತ್ತಿಯಲ್ಲಿ ಸಾಫ್ಟ್-ವೇರ್ ಇಂಜಿನಿಯರ್ ಆಗಿದ್ದ ಇವರು, ಸಧ್ಯದಲ್ಲಿ ಪೂರ್ಣ ಪ್ರಮಾಣದ ಲೇಖಕರಾಗಿ ಕನ್ನಡ ಸಾಹಿತ್ಯದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ ಎನ್ನಬಹುದು. ಇತ್ತೀಚಿಗೆ ಇವರ ಸಣ್ಣ ಕಥೆಗಳನ್ನು ಇಂಗ್ಲೀಶಿಗೆ ತರ್ಜುಮೆ ಮಾಡುವ ಲೇಖಕರೊಬ್ಬರು, ತಮ್ಮ ಅನುವಾದದ ಪ್ರತಿಯನ್ನು ಓದಲು ನನಗೆ ನೀಡಿದ್ದರು. ವಸುಧೇಂದ್ರ ಅವರ ಸಣ್ಣಕಥೆಗಳನ್ನು ಓದುವ ಉತ್ತಮವಾದ ಅವಕಾಶ ನನಗೆ ಸಿಕ್ಕಿತು. ಇಂದಿನ ಬೆಂಗಳೂರು ನಗರದ ಜೀವನಶೈಲಿ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ, ಈ ನಗರದ ಬದಲಾದ ಸ್ಥಿತಿಗತಿಗಳನ್ನಾಧರಿಸಿ ಬರೆದ ವಸುಧೇಂದ್ರ ಅವರ ಕಥೆಗಳು ನಿಜಕ್ಕೂ ಮನಮುಟ್ಟುವಂತಹದು. ಈ ಕಥೆಗಳ ಪಾತ್ರಗಳು ನಮ್ಮ ಜೀವನಕ್ಕೆ ಹತ್ತಿರವಾದವರು. ದೇಶದಿಂದ ದೂರವಾಗಿ ವಿದೇಶಗಳಲ್ಲಿ ನೆಲಸಿದ ನಮ್ಮನೆಂತಹವರ ಪಾಲಿಗಂತೂ, ಬದಲಾದ ಭಾರತ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಉತ್ತಮವಾದ ಚಿತ್ರಣ ನೀಡುವಲ್ಲಿ, ವಸುಧೇಂದ್ರ ಅವರ ಕಥೆಗಳು ಯಶಸ್ವಿಯಾಗಿವೆ ಎನ್ನಬಹುದು. ಇತ್ತೀಚಿಗೆ ಪ್ರಕಟವಾದ ಕನ್ನಡದ ಮತ್ತೊಬ್ಬ ಸಮಕಾಲೀನ ಲೇಖಕ ವಿವೇಕ್ ಶಾನಭಾಗ್ ಅವರ ಗಚ್ಚಾರ್ – ಗೋಚರ ಪುಸ್ತಕದ ಬಗ್ಗೆ ನನ್ನ ಇಲ್ಲಿನ ಸ್ನೇಹಿತರು ಕೂಡ ಉತ್ತಮವಾದ ಹಿನ್ನುಣಿಕೆ ನೀಡಿ ಈ ಪುಸ್ತಕ ಓದಿ ಎಂದು ಶಿಫಾರಸು ಮಾಡಿದ್ದಾರೆ. ಸಧ್ಯದಲ್ಲೇ ಅದನ್ನು ಓದುವ ಇಚ್ಛೆಯಿದೆ. ರಾಮಶರಣ್ ಅವರು ವಸುಧೇಂದ್ರ ಅವರ ಮೋಹನಸ್ವಾಮಿ ಪುಸ್ತಕದ ಬಗ್ಗೆ ಬರೆದ ಉತ್ತಮವಾದ ವಿಶ್ಲೇಷಣೆಯಿಂದ ನನ್ನ ಈ ಇರಾದೆ ಇನ್ನೂ ಗಟ್ಟಿಯಾಗಿದೆ. ಧನ್ಯವಾದಗಳು.
ಉಮಾ ವೆಂಕಟೇಶ್
LikeLiked by 1 person