‘ಅನಿವಾಸಿ’ಗಳು ಇತ್ತೀಚೆಗೆ ಓದಿದ ಪುಸ್ತಕಗಳು: (ಭಾಗ-೧)

(ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ -ಕಸಾಸಾಂವಿವೇ-ವತಿಯಿಂದ ಲೇಖಕರಿಗೆ ತಾವು ಇತ್ತೀಚೆಗೆ ಓದಿದ ಯಾವುದೇ ಭಾಷೆಯ, ಯಾವುದೇ ಪುಸ್ತಕದ ಬಗ್ಗೆ ಒಂದಿಷ್ಟು ಬರೆಯಲು ಬಿನ್ನವಿಸಲಾಗಿತ್ತು.  ಅದಕ್ಕೆ ಉತ್ತರವಾಗಿ ಆರು ಜನ ಬರೆದು ಕಳಿಸಿದ್ದಾರೆ. ಮೂರನ್ನು ಈ ವಾರ ಇನ್ನುಳಿದ ಮೂರನ್ನು ಮುಂದಿನವಾರ ಓದಲಿದ್ದೀರಿ. ಎಷ್ಟೊಂದು ವೈವಿಧ್ಯತೆ ಅವುಗಳ ವಸ್ತುವಿನಲ್ಲಿ, ಅವರ ಆಯ್ಕೆಯಲ್ಲಿಯೂ, ಬರವಣಿಗೆಯಲ್ಲಿಯೂ ಇದೆ! ಪ್ರಾಚೀನ ಕಾಲದಿಂದ ಹಿಡಿದು ಇತ್ತೀಚಿನ ರಚನೆಯ ವರೆಗೆ ಅವುಗಳ ಹರಹು. ಓದಿ ನೀವೂ ಚಪ್ಪಾಳೆ ತಟ್ಟಿದರೆ, ಭೇಷ್ ಅನಿಸಲಿ, ಅನಿಸದಿದ್ದರೂ ಸಹ ಅವಶ್ಯ ನಿಮ್ಮ ಪ್ರತಿಕ್ರಿಯೆಯನ್ನು ಕೆಳಗೆ ಕಮೆಂಟ್ ಬರೆದು ತಿಳಿಸುವಿರಾ? -ಸಂ)

 

1) ನಾನು ಇತ್ತೀಚೆಗೆ (ಮತ್ತೊಮ್ಮೆ) ಓದಿದ ಪದ್ಯ ಸಂಕಲನ  – ವಿನತೆ ಶರ್ಮ

ತಟ್ಟು ಚಪ್ಪಾಳೆ ಪುಟ್ಟಮಗು – ಮಕ್ಕಳು ಆಯ್ದ ನೂರಾರು ಪದ್ಯಗಳು

ಸಂಗ್ರಹಣೆ ಮತ್ತು ಸಂಪಾದನೆ – ಬೊಳುವಾರು ಮಹಮದ್ ಕುಂಞಿ

ದಿವ್ಯಾ ಪ್ರಕಾಶನ, ಬೆಂಗಳೂರು; ಪ್ರಕಟಿತ ವರ್ಷ ೧೯೯೧; ೩೧೪ ಪುಟಗಳು.

ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಪದ್ಯಗಳ ಈ ಸಂಕಲನದ ಭಾಗಗಳನ್ನು ೧೯೯೧-ರಾಚೆ ಆಯ್ದುಕೊಂಡು ನಾನು ಹಲವಾರು ಬಾರಿ, ವಿಭಿನ್ನ ಕಾರಣಗಳಿಗಾಗೇ, ಓದಿದ್ದೀನಿ. ಕೆಲ ಪದ್ಯಗಳು ಬಹು ಮುಂಚೆಯೇ ಶಾಲೆಯ ಪಠ್ಯದಲ್ಲಿ ಇದ್ದವು. ಅವನ್ನು ಕಲಿತು, ರಾಗವಾಗಿ ಹಾಡುವುದನ್ನು ಶಾಲಾ ಶಿಕ್ಷಕರು ಹೇಳಿಕೊಟ್ಟಿದ್ದರು. ಮುಂದೆ ನಾನು ಅಕ್ಕನ ಮಗಳು ಪುಟ್ಟ ಕೂಸಾಗಿದ್ದಾಗ ಆಟವಾಡುತ್ತಾ ಕೆಲವನ್ನು ಅವಳಿಗೆಂದು ಹಾಡುತ್ತಿದ್ದೆ. ನಂತರ ಇದೇ ಪ್ರಕಟಿತ ಸಂಕಲನವನ್ನು ನನ್ನೊಡನೆ ಆಸ್ಟ್ರೇಲಿಯಾಗೆ ಕೊಂಡೊಯ್ದು ಅಲ್ಲಿಯೇ ಹುಟ್ಟಿದ ನನ್ನ ಮಕ್ಕಳಿಗೆಂದೇ ಕೆಲ ಪದ್ಯಗಳನ್ನು ಹಾಡಿದ್ದೆ. ಇದೀಗ ಈ ಸಂಕಲನದ ಬಗ್ಗೆ ಬರೆಯುತ್ತಿರುವುದು ಎಂತಹ ಸೌಭಾಗ್ಯ!!

‘ಕಡಲತೀರದ ಭಾರ್ಗವ’ ಶಿವರಾಮ ಕಾರಂತರು ಸಂಕಲನಕ್ಕೆ ಬರೆದಿರುವ ಮುನ್ನುಡಿಯ ನಾಲ್ಕನೇ ವಾಕ್ಯಪರಿಚ್ಛೇದದಲ್ಲೇ ಹೇಳಿದ್ದಾರೆ – “ಈ ಸಂಕಲನದಲ್ಲಿ ಸೇರಿಕೊಳ್ಳಬೇಕಾದ ಸಾಹಿತ್ಯವಸ್ತು ಗೀತರೂಪದ್ದಿದೆ. ಅದು ಅವಶ್ಯವಾದುದು ಮತ್ತು ಆ ಕ್ಷೇತ್ರದಲ್ಲಿ ಕನ್ನಡಿಗರು ಸಾಧಿಸಿದ ಯಶಸ್ಸನ್ನು ಅಳೆಯಬಹುದಾದದ್ದು – ಮಕ್ಕಳ ಸಲುವಾಗಿ.” ಅವರ ಮಾತು ಎಷ್ಟು ಅರ್ಥಪೂರ್ಣ! ಅವರ ಒಳನೋಟ ಇಡೀ ಸಂಕಲನದ ತಿರುಳನ್ನು ಬಿಚ್ಚಿ ನಮ್ಮ ಮುಂದಿಡುತ್ತದೆ. ಸಂಕಲನದ ಪದ್ಯಗಳು ತೋರುವುದು ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾದದ್ದು, ಕನ್ನಡಿಗರು ಸಾಹಿತ್ಯ ಪ್ರಕಾರಗಳನ್ನು ಎಷ್ಟು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ ಮತ್ತು ಮಕ್ಕಳಿಗೆಂದೇ ರಚಿತವಾದ ಸಾಹಿತ್ಯ ಜಾನಪದ, ಕತೆಗಳು, ಗಾದೆಗಳು, ಆಡುಮಾತು, ಸಂಸ್ಕೃತಿಗಳ ವಿಭಿನ್ನತೆ, ಮತ್ತು ಜನಜೀವನವನ್ನು ಹೇಗೆ ಬಿಂಬಿಸುತ್ತವೆ.  

ಸಂಕಲನದಲ್ಲಿ ನೂರಕ್ಕೂ ಮಿಗಿಲಾದ ಸಂಖ್ಯೆಯ ಪದ್ಯಗಳಿವೆ. ೫ರಿಂದ ೭ ವರ್ಷಗಳ ಮಕ್ಕಳಿಗೆ, ೮ರಿಂದ ೧೦ ವರ್ಷಗಳ ಮಕ್ಕಳಿಗೆ, ೧೧ರಿಂದ ಮೇಲಿನ ಮಕ್ಕಳಿಗೆ ಎಂಬ ಮೂರು ಭಾಗಗಳಿವೆ. ಭಾಗಗಳನ್ನು ಮಾಡಿದವರು, ಪದ್ಯಗಳನ್ನು ಆಯ್ದವರು, ಪದ್ಯಗಳ ಬಗ್ಗೆ ತಮ್ಮ ಇಷ್ಟ, ನಕಾರಗಳನ್ನು ಸೂಚಿಸಿದವರು ಮಕ್ಕಳು ಎಂಬ ವಿಷಯವೇ ಎಷ್ಟು ಅಪ್ಯಾಯಮಾನ, ಅಪರೂಪ ಮತ್ತು ಅನನ್ಯ! ಸಂಕಲನದ ಹಿನ್ನೆಲೆ, ಅದರ ಗರ್ಭಾವಸ್ಥೆ ಮತ್ತು ಜನ್ಮದ ವಿವರಣೆಗಳನ್ನು ಕುಂಞಿ ರವರೆ ಓದುಗರಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ ಸಾಹಿತ್ಯದ ಬಗ್ಗೆ ಅವರದೇ ವಿಶಿಷ್ಟ ವ್ಯಾಖ್ಯಾನವೂ ಇದೆ.

ಎಲ್ಲರಿಗೂ ಪರಿಚಯವಿರುವ ಜಿ.ಪಿ.ರಾಜರತ್ನಂ, ಕುವೆಂಪು, ದಿನಾಂಕ ದೇಸಾಯಿ, ಶಿವರಾಮ ಕಾರಂತ, ದ. ರಾ. ಬೇಂದ್ರೆ, ಕೆ.ಎಸ್.ನ. ಅವರುಗಳಿಂದ ಹಿಡಿದು ಮಧುರ ಚೆನ್ನ, ಮುಪ್ಪಿನ ಷಡಕ್ಷರಿ, ಚೆನ್ನವೀರ ಕಣವಿ, ‘ಸಿಸು’ ಸಂಗಮೇಶ, ಪಂಜೆ ಮಂಗೇಶ ರಾವ್ ಮತ್ತಿತರ ಅನರ್ಘ್ಯ ರತ್ನಗಳು ಇಲ್ಲಿವೆ. ಅವರ ಪದ್ಯಗಳಿಗೆ ಅತ್ಯಂತ ಸೂಕ್ತವಾಗಿ ಚಿತ್ರಗಳನ್ನು ರಚಿಸಿಕೊಟ್ಟವರು ಬಹು ಹೆಸರಾಂತ ಕಲಾವಿದರು – ಉದಾ, ಗುಜ್ಜಾರಪ್ಪ, ನಾಡಿಗ್, ಮೋನಪ್ಪ, ಸೂರಿ, ಆಚಾರ್ಯ, ಹುಬ್ಳಿಕರ್, ಸತ್ಯ …   

ಕಾರಂತರು ಹೇಳಿರುವ ಹಾಗೆ ಮಕ್ಕಳಿಗೆ ಸಂತೋಷ ಕೊಡುವ ವಿಚಿತ್ರ, ಅಸಂಬದ್ಧ, ಅದ್ಭುತ ಏನೇ ಆದರೂ ಅವು ಪ್ರಾಸಬದ್ಧ ಗೀತೆಗಳಾಗಿ ಅವರಿಗೆ ಇಷ್ಟವಾಗುತ್ತವೆ. ಉದಾ, ಎ.ಕೆ. ರಾಮೇಶ್ವರ ಅವರ ಪದ್ಯ ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು?; ಹೊಯಿಸಳ ಅವರ ಪದ್ಯ ಕಲ್ಯಾಣ ಸೇವೆ ಜೇಬಿನ ಬುಡದಲಿ, ಪುಟ್ಟಾಣಿಯ ಪುರಿ ಮೇಲೊಂದಿಷ್ಟು … ; ಈಶ್ವರ ಕಮ್ಮಾರ ಅವರ ಪದ್ಯ ಕೊಕ್ಕಾ ಬತ್ತಿ ಕ್ವಾಡಾ ಬತ್ತಿ, ಊರಿಗೆಲ್ಲಾ ಒಂದೇ ಬತ್ತಿ, ಓಡಲೇ ಬತ್ತಿ …;  ಇಂತಹ ಪದ್ಯಗಳು  ಪ್ರಾಸಬದ್ಧ, ಮತ್ತು ಮಕ್ಕಳ ಪ್ರಪಂಚವನ್ನು ಒಳಗೊಂಡಿವೆ.

ಸಂಕಲನದ ಕಟ್ಟಕಡೆಯಲ್ಲಿ ಮುಪ್ಪಿನ ಷಡಕ್ಷರಿ ಅವರ ‘ತಿರುಕನ ಕನಸು’ ಮತ್ತು ಜಾನಪದದ ‘ಗೋವಿನ ಹಾಡು’ ಇವೆ. ಪ್ರತಿಯೊಬ್ಬ ಕನ್ನಡ ಕುಟುಂಬವೂ ಮತ್ತು ಪ್ರತಿಯೊಂದು ಶಾಲೆಯೂ ಈ ಸಂಕಲನವನ್ನು ಕೊಂಡು ಕಾಪಿಟ್ಟರೆ ಅದುವೇ ನಮ್ಮ ಕನ್ನಡತನ.  

(ಪರಿಷ್ಕೃತ ಆವೃತ್ತಿ)

2) `ಘಾಚರ್ ಘೋಚರ್` ಎಂಬ ನೀಳ್ಗತೆ – ಕೇಶವ ಕುಲಕರ್ಣಿ 

ವಿವೇಕ ಶಾನಭಾಗ

ಅಕ್ಷರ ಪ್ರಕಾಶನ (First Impression: 2013)

 ವಿವೇಕ ಶಾನಭಾಗ ಬರೆದಿರುವ `ಘಾಚರ್ ಘೋಚರ್` ಎನ್ನ್ನುವ ಕಥಾಸಂಕಲದ ಬಗ್ಗೆ ಈಗ ಎರಡು ವರ್ಷಗಳ ಹಿಂದೆಯೇ ಓದಿದ್ದೆ. ಕಳೆದ ವರ್ಷ ಈ ಕಥಾಸಂಕಲನದಲ್ಲಿರುವ ಅದೇ ಹೆಸರಿನ ನೀಳ್ಗತೆ ಅದೇ ಹೆಸರಿನಲ್ಲಿ ಇಂಗ್ಲೀಷ್ ಭಾಷೆಗೆ ಕಿರು-ಕಾದಂಬರಿಯಾಗಿ ಭಾಷಾಂತರಗೊಂಡು ಇಂಗ್ಲೀಷ್ ಭಾಷೆಯ ಪ್ರಸಿದ್ಧ ಸಾಹಿತ್ಯ ಸಂಬಂಧಿ ಮಾಸಿಕಗಳಲ್ಲಿ ಅಲ್ಲದೇ  ನ್ಯೂಯಾರ್ಕ್ ಟೈಮ್ಸ್, ಗಾರ್ಡಿಯನ್ ನಂಥಹ ಪತ್ರಿಕೆಗಳಲ್ಲೂ ಈ ಕಾದಂಬರಿಯ `ರಿವ್ಯೂ` Ghachar Gochar Englishಬಂದಾಗ ಇದನ್ನು ಓದುವ ಕುತೂಹಲ ಇನ್ನೂ ಜಾಸ್ತಿಯಾಯಿತು. ಇಂಗ್ಲೀಷ್ ವಿಮರ್ಶಕರು ವಿವೇಕರನ್ನು ಭಾರತದ ಅಂಟೋನಿ ಚಿಕೋಫ್ ಎಂದು ಕೂಡ ಬಣ್ಣಿಸಿದ್ದಾರೆ.  

`ಘಾಚರ್ ಘೋಚರ್` ಎನ್ನುವ ಅಸಂಬದ್ಧ ಹೆಸರನ್ನು ಹೊತ್ತಿರುವ ಈ ನೀಳ್ಗತೆ, ಅದರ ಹೆಸರಿನಿಂದ ಎಷ್ಟು ಕುತೂಹಲ ಕೆರಳಿಸಿ ಅ ಶಬ್ದಗಳು ಕನ್ನಡದ್ದೋ ಇಲ್ಲ ಇನ್ನಾವುದೋ ಗೊತ್ತಿಲ್ಲದ ಭಾಷೆಯದೋ ಎಂದುಕೊಂಡು ಓದಲು ಶುರು ಮಾಡಿದರೆ, ಕತೆ ಇನ್ನಷ್ಟು ಕುತೂಹಲ ಹುಟ್ಟಿಸುತ್ತದೆ. ಕತೆ ಓದುತ್ತ ಓದುತ್ತ `ಘಾಚರ್ ಘೋಚರ್` ಎಂದರೆ ಏನು ಎನ್ನುವುದು ಗೊತ್ತಾಗುತ್ತದೆ ಮತ್ತು ಅದು ಕತೆಯ ಶೀರ್ಷಿಕೆ ಕೂಡ ಏಕೆ ಆಯಿತು ಎಂದು ಕೂಡ‌. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಈ ಕತೆ ಅಂತ್ಯವಲ್ಲದ ಅಂತ್ಯದಲ್ಲಿ ಅಂತ್ಯವಾದ ಮೇಲೆ `ಘಾಚರ್ ಘೋಚರ್` ಎಂದು ನಮ್ಮೊಳಗೇ ನಿಟ್ಟುಸಿರೊಂದು ಬರುತ್ತದೆ.

 

ಬೆಂಗಳೂರು ನಗರದ ಒಂದು ಕೆಳ-ಮಧ್ಯಮ ವರ್ಗದ ಕುಟುಂಬವೊಂದು ಕೆಳ-ಮೆಲ್ವರ್ಗಕ್ಕೆ ಏರುವ, ಅಲ್ಲಿ ಏರಿದ ಮೇಲೆ  ನಡೆಯುವ ಬದುಕೇ ಈ ಕತೆಯ ವಸ್ತು. ದಿನ ನಿತ್ಯ ನಡೆಯುವ ಮಾಮೂಲಿ ಚಿಕ್ಕ ಚಿಕ್ಕ ಘಟನೆಗಳನ್ನೇ ಬರೆಯುತ್ತ ಅವರ ಬದುಕಿನ ಹೊರ ಒಳಗನ್ನು ಬಹಳ ಸಂವೇದನಾತ್ಮಕವಾಗಿ ಬರೆಯುತ್ತಾರೆ. ಕತೆಯಲ್ಲಿ ಯಾವುದೇ `ಡ್ರಾಮಾ` ನಡೆಯುವುದಿಲ್ಲ, ಆದರೂ `ಡ್ರಾಮಾ`ಗಿಂತೆ ಹೆಚ್ಚು ತೀವ್ರವಾಗಿ ನಮ್ಮನ್ನು ಅಲುಗಾಡಿಸುತ್ತಾರೆ ವಿವೇಕ.   

 

ಆಧಿನಿಕ‌ ಜೀವನ ನಮ್ಮ ಬದುಕಿನಲ್ಲಿ ಹಾಕಿರುವ ಕಗ್ಗಂಟನ್ನು ಅದು ಇರುವ ಹಾಗೆ ಹೇಳುತ್ತಾ, ಒಂದೇ ಒಂದು ಗಂಟನ್ನೂ ಬಿಡಿಸದೇ ಆದರೆ ಪ್ರತಿ ಗಂಟನ್ನೂ ಸೂಕ್ಷ್ಮವಾಗಿ ತೋರಿಸುತ್ತ  ಭಾವುಕತೆಗೆ ಎಡೆ ಮಾಡಿಕೊಡದೇ, ಅದೇ ಕಾಲಕ್ಕೆ ನಿರ್ಭಾವುಕವೂ ಎನಿಸದಂತೆ, ಕಗ್ಗಂಟಿನ ವಿವಿಧ ಆಯಾಮಗಳನ್ನು ಪ್ರಥಮ ಪುರುಷದಲ್ಲಿ ನಮೂದಿಸುತ್ತ ಹೋಗುತ್ತಾರೆ, ವಿವೇಕ ಶಾನಭಾಗ. ಕತೆಯ (ಬದುಕಿನ) ಸೂಕ್ಷ್ಮತೆ ಮತ್ತು ಸಂಕೀರ್ಣತೆಯನ್ನು ಬಿಟ್ಟುಕೊಡದೇ,  ಅವ್ಯಕ್ತವನ್ನು ವ್ಯಕ್ತ ಮಾಡಲು ಎಷ್ಟು ಕಡಿಮೆ ಶಬ್ದಗಳು ಬೇಕೋ ಅದಕ್ಕಿಂತೆ ಕಡಿಮೆ ಶಬ್ದಗಳಲ್ಲಿ ಬರೆಯುತ್ತಾರೆ. ಕತೆಯಲ್ಲಿ ಬಿಚ್ಚಿಕೊಳ್ಳುವ  ಸತ್ಯಗಳು ನಮ್ಮವೇ ಅನಿಸುತ್ತವೆ. ಹೇಳುವುದಕ್ಕಿಂತ ಹೇಳದೇ ಉಳಿದಿರುವುದು ನಮ್ಮ ಭಾವ ಪಟಲದಲ್ಲಿ ಉಳಿಯುತ್ತದೆ. ಇತ್ತೀಚಿನ ಓದಿನಲ್ಲಿ ನಾನು ಅತಿ ಮೆಚ್ಚಿದ ಕತೆ ಇದು ಅಂದು ನಿಸ್ಸಂಶಯವಾಗಿ ಹೇಳಬಲ್ಲೆ.

 

3) ಹೆಚ್ ಎಸ್ ವಿಯವರ ”ಋಗ್ವೇದ ಸ್ಫುರಣ’’ದ ಒಂದು ಝಲಕ್ಶ್ರೀವತ್ಸ ದೇಸಾಯಿ

ಈ ಸಣ್ಣ ಬರಹದಲ್ಲಿ ಮತ್ತೇನನ್ನೂ ಅಪೇಕ್ಷಿಸ ಕೂಡದು ಏಕೆಂದರೆ ವಿಮರ್ಶೆ ಬರೆಯುವ ಯೋಗ್ಯತೆಯಾಗಲಿ ಜ್ಞಾನವಾಗಲಿ ನನ್ನಲ್ಲಿಲ್ಲ. ಇದು ಒಂದು ಅನಿಸಿಕೆಯೆನ್ನ ಬಹುದು. ಕಳೆದ ಡಿಸೆಂಬರ್ ತಿಂಗಳು ಕ್ರಿಸ್ಮಸ್ ಸಮಯದಲ್ಲಿ ಭಾರತಕ್ಕೆ ಹೋದಾಗ ಈ ಪುಸ್ತಕ ನನ್ನ ಕೈಗೆ ಸಿಕ್ಕಾಗ ಸರ್ಪ್ರೈಸ್ ಕ್ರಿಸ್ಮಸ್ ಪ್ರೆಸೆಂಟ್ ಬಿಡಿಸುವ ಹಸುಳೆಯಂತೆ ಬೆರಗಿನಿಂದ ಬಿಚ್ಚಿದೆ. ಇದನ್ನು ಹೇಗೆ ’ನಡೆಸುವದು’ ಎಂದು ಓದ ತೊಡಗಿದೆ.

ಸುಮಾರು 157 ಪುಟಗಳ ಕಿರುಹೊತ್ತಿಗೆಯಲ್ಲಿ ಅತ್ಯಂತ ಪ್ರಾಚೀನವಾದ ವೇದದ ಎಲ್ಲ ಸಾರಾಂಶವನ್ನು ಎರಕ ಹೊಯ್ದಿರಲು ಸಾಧ್ಯವಿಲ್ಲ ಅಲ್ಲವೆ? ಋಗ್ವೇದದ ಹತ್ತು ಮಂಡಲಗಳ 1028ರ ಸೂಕ್ತಕಗಳಲ್ಲಿಯ ಸುಮಾರು 10,600 ಮೂಲ ಸಂಸ್ಕೃತದ ಋಕ್ಕುಗಳು (ಪದಗಳು) ಇರುವಾಗ ಎಲ್ಲವುಗಳ ಅನುವಾದವನ್ನು ಕೊಡುವದು ಅಸಾಧ್ಯವೆಂತಲೇ ಅದರ ’ಆಯ್ದ ಋಕ್ಕುಗಳ ತಿಳಿಗನ್ನಡ ಅವತರಣ’ ಎಂದು ಕರೆದಿದ್ದಾರೆ ಹೆಚ್ ಎಸ್ ವೆಂಕಟೇಶ್ವರಮೂರ್ತಿಯವರು ಈ ”ಸ್ಫುರಣಕ್ಕೆ.” ಋಗ್ವೇದ ಒಂದು ಅಪೌರುಷೇಯ ಕೃತಿ (ಮನುಷ್ಯರು ಬರೆದದ್ದಲ್ಲ.) ಮೂಲ ಋಗ್ವೇದದಲ್ಲಿ ಎರಡುನೂರಕ್ಕೂ ಮೇಲ್ಪಟ್ಟು ಋಷಿಗಳ, ಅದರಲ್ಲಿ 25ಕ್ಕೂ ಮೇಲ್ಪಟ್ಟು ಸ್ತ್ರೀ ಋಷಿಗಳು ತಮ್ಮ ದರ್ಶನದಿಂದ ”ಪಡೆದ” ಋಕ್ಕುಗಳಿವೆ. (ಮುನ್ನುಡಿಯಿಂದ)

ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದರಲ್ಲಿ ಇಂದ್ರ, ಸೋಮ, ಅಗ್ನಿ, ವರುಣ, ಅಶ್ವಿನಿ ದೇವತೆಗಳು ಮತ್ತು ದ್ಯಾವಾ-ಪೃತಿವೀಗಳನ್ನು ಸ್ತುತಿಸುವ 24 ಸೂಕ್ತಕಗಳ ಅನುವಾದವನ್ನು ಸರಳಗನ್ನಡದ ಪದ್ಯರೂಪದಲ್ಲಿ ಕೊಟ್ಟು ಅದರಡಿಯಲ್ಲಿ ಅದನ್ನೇ ಗದ್ಯದಲ್ಲಿ ಕೊಟ್ಟಿದೆ. (ಮೇಲೆಯೇ ಅಷ್ಟು ಸರಳವಾಗಿರುವಾಗ ಇದರ ಅವಶ್ಯಕತೆ ಇರಲಿಲ್ಲವೇನೋ!) ಎರಡನೆಯ ಭಾಗದಲ್ಲಿ 35 ಬಿಡಿ ಪದ್ಯಗಳಿವೆ. ಸಂಸ್ಕೃತ ಶ್ಲೋಕಗಳು ಒಂದೋ ಎರಡೋ ’ಲೇಖಕರ ಮಾತುಗಳೆಂಬ’ ಮುನ್ನುಡಿಯಲ್ಲಷ್ಟೇ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆ ವಜ್ಜೆ ಇಲ್ಲ. ಮುಕ್ತಕಂಠದ ಅಗ್ನಿಯ ಪ್ರಶಂಸೆ, ವಜ್ರಪಾಣಿ ಇಂದ್ರನ ಪೌರುಷ, (ಆತನ ಸಾಹಸಗಳು, ಒಂದೇ ಎರಡೆ ವರ್ಣಿಸಲು’ – ”ಮುಗಿಲ ಸೀಳಿದ; ಮಳೆಯ ಹಿಂಡಿದ, ನದಿಗೆ ತಕ್ಕ ಪಾತ್ರವ ಕೊರೆದ”) ಆತನಿಂದ ಅಸುರರ ಹತ್ಯೆ, ಆತನ ಸೋಮಪಾನದ ವರ್ಣನೆ, ಇವೆಲ್ಲ ಮೊದಲಭಾಗದಲ್ಲಿ ವಿಸ್ತಾರವಾಗಿ ಬಂದಿದೆ.

ಬಿಡಿಪದ್ಯಗಳಲ್ಲಿ ಶ್ರದ್ಧಾ ದೇವಿ, ಅದಿತಿ, ರೋಮಶಾ, ಶಶ್ವತಿ, ಸವತಿ ಸಂಬಂಧ ಇತ್ಯಾದಿ ಪದ್ಯಗಳಿವೆ. ಈ ಕೊನೆಯ ಎರಡರಲ್ಲಿ ನವಿರಾದ ಶೃಂಗಾರ ರಸವಿದೆ. ಪತಿಯನ್ನು ಕಳೆದುಕೊಂಡ ಪತ್ನಿಗೆ ಆ ಪ್ರಾಚೀನಕಾಲದಲ್ಲೂ ಸತಿಹೋಗದೆ ಮನೆಗೆ ಹಿಂದಿರುಗಲು ಹೇಳುವ ಸಲಹೆಯಲ್ಲಿ ಆಶಾವಾದವಿದೆ. ಇನ್ನು ”’ಮಳೆಗಾಲದ ಕಪ್ಪೆಗಳು’’ ಎನ್ನುವ ಕವಿತೆಯಂತೂ ನನಗೂ ಬಹಳ ಹಿಡಿಸಿತು. ಅದರ ರಚನೆ ಮತ್ತು ಅದರಲ್ಲಿ ಬರುವ ಉಪಮೆಗಳಲ್ಲಿಯ ನವ್ಯತೆಗೆ ಬೆರದೆ! (ಒಂದು ಮಂಡೂಕ ಹಸುವಿನ ಹಾಗೆ ಕೂಗುವುದು/ಇನ್ನೊಂದು ಕೂಗುವುದು ಆಡಿನಂತೆ). ಯುದ್ಧಭೂಮಿಯಲ್ಲಿ ಯೋಧನ ಚಿತ್ರ ಅತಿ ಸುಂದರವಾಗಿದೆ.(ಕದನದಲ್ಲಿ ಕಿವಿಯವರೆಗೆ ಹೆದೆಯ ಜಗ್ಗುತಿರಲು/ಕಿವಿಯ ಬಳಿಗೆ ಮೆಲ್ಲಗೆ ಬಿಲ್ತುದಿಯು ಬರುತ್ತಿರಲು/ಪ್ರಿಯನ ಬಾಚಿ ತಬ್ಬಿದವಳು ಕಿವಿಗೆ ತುಟಿಯ ತಂದು/ಮೆಲ್ಲಗೇನೋ ಹೇಳುತಿರುವ ಹಾಗೆ ಕಂಡಿತಂದು.)

ಪ್ರಾರಂಭದ ಹತ್ತು ಪುಟಗಳ ಮುನ್ನುಡಿಯಲ್ಲಿ ಋಗ್ವೇದದ ಬಗ್ಗೆ  ಮೌಲಿಕ ವಿಶ್ಲೇಷಣೆಯಿದೆ. ಮುಂದೆ ಬರುವ ಋಕ್ಕುಗಳನ್ನು ತಿಳಿದುಕೊಳ್ಲಲು ಸಹಾಯವಾಗುತ್ತದೆ. ಕೊನೆಯಲ್ಲಿಯ 3 ಅನುಬಂಧಗಳಲ್ಲಿ ಸಂದರ್ಭ ಸೂಚಿಸುವ ಐತಿಹ್ಯಗಳು, ಪಾತ್ರ ಪರಿಚಯ ಅರ್ಥಮಾಡಿಕೊಳ್ಳಲು ಸಹಾಯವಾಗುವಂಥ ವಿವರಣೆಗಳಿವೆ. ನಮ್ಮ ನೆಚ್ಚಿನ ಹೆಚ್ಚೆಸ್ವಿಯವರ ಈ ಪುಸ್ತಕ ಋಗ್ವೇದಕ್ಕೆ ನನಗೆ ಒಳ್ಳೆಯ ’ಪ್ರವೇಶ”ವೇ  ಸೈ!

ಪುಸ್ತಕ: ಋಗ್ವೇದ ಸ್ಫುರಣ

ಲೇಖಕರು: ಹೆಚ್ ಎಸ್ ವೆಂಕಟೇಶಮೂರ್ತಿ

ಪ್ರಕಾಶನ: ಅಭಿನವ, ಬೆಂಗಳೂರು; August 2017

ಪುಟಗಳು: 157 ಬೆಲೆ: ರೂ 200

(ಮುಂದಿನ ವಾರ ಇನ್ನು ಬೇರೆ ಮೂರು ಪುಸ್ತಕಗಳ ಬಗ್ಗೆ)

 

 

3 thoughts on “‘ಅನಿವಾಸಿ’ಗಳು ಇತ್ತೀಚೆಗೆ ಓದಿದ ಪುಸ್ತಕಗಳು: (ಭಾಗ-೧)

  1. ತಟ್ಟು ಚಪ್ಪಾಳೆ ಪುಸ್ತಕ ಇನ್ನೂ ಸಿಗಬಹುದೇ?

    ಋಗ್ವೇದ ಸ್ಪುರಣ ಓದಲೇಬೇಕಲ್ಲ!

    – ಕೇಶವ

    Like

  2. ಅನಿವಾಸಿ ಬಳಗದ ಜಾಲತಾಣ ಹೊಸ ಹೊಸ ವಿಷಯಗಳ ಬಗ್ಗೆ, ಹೊಸ ಹೊಸ ರೀತಿಯಲ್ಲಿ ತನ್ನದೇ ರೀತಿಯಲ್ಲಿ ಪ್ರಸ್ತುತ ಪಡಿಸುವ ರೀತಿ ಸ್ತುತ್ಯಾರ್ಹ.ಈಸಲದ ಪುಸ್ತಕ ಪರಿಚಯ ತುಂಬಾ ಉಪಯುಕ್ತ ಮಾಹಿತಿ ಪೂರ್ಣ ಎಂಬುದರಲ್ಲಿ ಎರಡು ಮಾತಿಲ್ಲ.
    ವಿನತೆಯವರು ಬರೆದು “ತಟ್ಟು ಚಪ್ಪಾಳೆ ಪುಟ್ಟ ಮಗು” ಓದಲೇಬೇಕಾದ ಪುಸ್ತಕ, ಅವರು ಹೇಳುವಂತೆ ಮಕ್ಕಳಿದ್ದ ಮನೆಯಲ್ಲಿ ಇರಲೇಬೇಕು ಅದು.ಓದಿದ್ದರೂ ಮತ್ತೆ ಮತ್ತೆ ಓದಬೇಕೆನ್ನಿಸುವಂಥದು.ಅದರ ವಿಚಾರ ವಿಶೇಷ ವಾಗಿ ಬರೆದು ಓದದೇ ಇರುವ ವರಿಗೆ ಹೊಸ ಆಸಕ್ತಿ,ಓದಿದವರಿಗೆಲ್ಲರಿಗೂಮತ್ತೊಮ್ಮೆ ಓದಿ ಅದರ ರುಚಿ ಸವಿಯಲು ಪ್ರೇರಪಿಸುವಂಥದು . ಧನ್ಯವಾದಗಳು ವಿನತೆಯವರೆ.
    “ಘಾಚಾರ್ ಘೋಚರ್” ಬಗ್ಗೆ ಓದಿದ್ದೆ.ಆದರೆ ಅದು ಸಿಕ್ಕಿರಲಿಲ್ಲ.ಕೇಶವ ಕುಲಕರ್ಣಿ ಯವರ ಲೇಖನ ಓದಿ , ಮತ್ತೆ ಪುಸ್ತಕ ದಂಗಡಿಗೆ ಹೋದರೆ ಒಂದೇ ಒಂದು ಪ್ರತಿ ನನಗಾಗಿಯೇ ಎಂಬಂತಿತ್ತು.ಸುಂದರ ಪರಿಚಯ ಕ್ಕೆ ಧನ್ಯವಾದಗಳು ಕೇಶವ ಕುಲಕರ್ಣಿಯವರೇ.
    ಶ್ರೀವತ್ಸ ದೇಸಾಯಿ ಯವರು “ಋಗ್ವೇದ ಸ್ಫುರಣ”ಪರಿಚಯಿಸುವ ಪರಿ ತುಂಬಾ ಆಸಕ್ತಿ ಪೂರ್ಣ.ಋಗ್ವೇದದ ಋಕ್ಕುಗಳನ್ನ ಬಿಡದೇ ಓದಿ , ಅವುಗಳ ಚರ್ಚೆ ನನ್ನ ಸ್ನೇಹಿತೆ ಜೊತೆ . ವೆಂಕಟೇಶ್ ಮೂರ್ತಿ ಯವರ ತಿಳಿಗನ್ನಡದ ಭಾಷಾಂತರ ಅವನ್ನು ತಿಳಿಗೊಳಿಸಿ ತಿಳಿಯುವಂತೆ ಬರೆದಿರುವುದರಿಂದ ಸರಳವಾಗಿ ಓದಿಸಿಕೊಂಡು ಹೋಗುತ್ತದೆ.ಅದರ ವಿಸ್ತೃತ ವಿವರಣೆ ನೀಡಿದ್ದಕ್ಕೆ ಶ್ರೀವತ್ಸ ದೇಸಾಯಿ ಯವರಿಗೆ ಧನ್ಯವಾದಗಳು.
    ಇಂತಹ ಅರ್ಥಪೂರ್ಣ ಬರಹಗಳ ಪ್ರಕಟಣೆ ಆರಂಭಿಸಿದ ಅನಿವಾಸಿ ಜಾಲತಾಣ ಕ್ಕೆ ಅಭಿನಂದನೆ, ಧನ್ಯವಾದ ಹೇಳದಿರಲಾದೀತೆ?
    ಸರೋಜಿನಿ ಪಡಸಲಗಿ

    Liked by 1 person

  3. 1) ವಿನತೆಯವರು”’ತಟ್ಟು ಚಪ್ಪಾಳೆ, ಪುಟ್ಟ ಮಗು” ವನ್ನು ಪರಿಚಯಿಸುತ್ತಾ ’’ಇದೀಗ ಈ ಸಂಕಲನದ ಬಗ್ಗೆ ಬರೆಯುತ್ತಿರುವುದು ಎಂತಹ ಸೌಭಾಗ್ಯ” ಎಂದು ಬರೆಯುತ್ತಾರೆ. ಆದನ್ನು ಓದುವದೂ ಸೌಭಾಗ್ಯ ನನ್ನ ಪಾಲಿಗೆ. ಬೇರೆಯೇ ಪರಿಸರದಲ್ಲಿ ಬೆಳೆದ ನನಗೆ ಇಂಥ ಅನರ್ಘ್ಯ ರತ್ನ ಇದ್ದುದೇ ಗೊತ್ತಿರಲಿಲ್ಲ. ಬೋಳುವಾರು ಅವರು ಎಷ್ಟೊಂದು ”ಮಕ್ಕಳ ಪದ್ಯ’’ಗಳನ್ನು ಸಂಗ್ರಹಿಸಿ ಮಹದುಪಕಾರ ಮಾಡಿದ್ದಾರೆ! ನನಗೆ ಅದರಲ್ಲಿಯ ಕೆಲವೇ ಪದ್ಯಗಳ ಪರಿಚವಿತ್ತು. ಈ ವಿಮರ್ಶೆ ಬಂದ ಮೇಲೆ ಲೇಖಕರು ಪ್ರಕಟಿಸಿದ ಇಂಟರ್ನೆಟ್ ತಾಣಕ್ಕೆ ಭೆಟ್ಟಿಕೊಟ್ಟು ( https://www.facebook.com/tattuchappaaleputtamagu/) ಗೊತ್ತಿದ್ದ ಮತ್ತು ಗೊತ್ತಿರದ ಎಷ್ಟೋ ಪದ್ಯ್ಗಳನ್ನು ಸವಿದೆ. ಎಷ್ಟೋ ಚಿತ್ರಗಳು ಸಹ ಇವೆ. ಮಕ್ಕಳಿದ್ದ ಮನೆಯಲ್ಲಿ ಈ ಪುಸ್ತಕ ಇರಬೇಕೆಂದು ನೆನಪಿಸಿದ ವಿನತೆಯವರಿಗೆ ವಂದನೆಗಳು.
    2)”ಘಾಚರ್ ಘೋಚರ್’’ ಎಂಬ enigmatic titleದ ತರವೇ ಕಥೆಯೂ ಸಾಗಿ ಕೊನೆಯ ಸಾಲಿನಲ್ಲಿಯೇ ಅದರ ಅಂತ್ಯ ಗೋಚರವಾಗುತ್ತದೆ, ಅಥವಾ ಮೇಲೆ ಕೇಶವ ಅವರು ಬರೆದಂತೆ ಹಾಗೆ ಕಂಡಂತಾಗುತ್ತದೆ! ಕೆಶವ ಅವರು ಅದರ ಗುಟ್ಟನ್ನು ಬಿಟ್ಟುಕೊಡದೆ ಅತಿ ಕಡಿಮೆ ಶಬ್ದಗಳಲ್ಲಿಯೇ ಸಮರ್ಥಕವಾಗಿ ಪರಿಚಯಿಸಿದ್ದಾರೆ, ಕಥೆಯನ್ನು ಓದದವರಿಗೆ ಓದುವ ಕುತೂಹಲ ಕೆರಳಿಸಿದ್ದಾರೆ. ಧನ್ಯವಾದಗಳು. ವಿವೇಕ ಶಾನಭಾಗ ಅವರಿಗೆ ”What a tangled web you weave (Scott),” ಎಂದು ನನ್ನ ಕೆಲವೇ ಶಬ್ದಗಳನ್ನು ಮುಗಿಸುವೆ.

    ಭಾಗವಹಿಸಲು ಅವಕಾಶ ಕೊಟ್ಟದ್ದಕ್ಕೆ ಋಣಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.